Previous ಜೀವಾತ್ಮ - ನಾನು ಯಾರು? ಬಂಧ ಮತ್ತು ಮೋಕ್ಷ Next

ದೇವನಿಗೂ ಸೃಷ್ಟಿಗೂ ಇರುವ ಸಂಬಂಧ

*

ದೇವನಿಗೂ ಸೃಷ್ಟಿಗೂ ಇರುವ ಸಂಬಂಧ

'ಕುಂಬಾರ ಮಡಕೆಯನ್ನು ಸೃಷ್ಟಿಸಿದಂತೆ ಪರಶಿವ ಜಗತ್ತನ್ನು ಸೃಷ್ಟಿಸಿದ್ದರೆ, ಆಗ ಅವನು ಜಗತ್ತಿನಿಂದ ಹೊರಗೆ ಅಥವಾ ವಿಶ್ವಾತೀತನಾಗಿದ್ದಾನೆಯೆ?' ಎಂಬ ಪ್ರಶ್ನೆ ಸಹಜವಾಗಿ ಏಳುತ್ತಿತ್ತು. ಆದರೆ ವಚನಕಾರರ ಪ್ರಕಾರ, ಶಿವನು ತಾನೇ ಜಗತ್ತಾಗಿ ರೂಪಾಂತರ ಹೊಂದುತ್ತಾನೆ ಅಥವಾ ಶಿವನ ಅಂಗವಾದ ಶಕ್ತಿಯೇ ಜಗತ್ತಾಗುತ್ತದೆ; ಅಂದಮೇಲೆ, ಸೃಷ್ಟಿಯ ನಂತರವೂ ಜಗತ್ತು ಅವನ ಅಂಗ(ಶರೀರ)ವಾಗೇ ಇರುತ್ತದೆ. ಅಥವಾ ಜಗತ್ತೆಲ್ಲಾ ಪರಶಿವನೇ.

ಸಮುದ್ರದೊಳಗೆ ನೊರೆ ತೆರೆಗಳು ನೆಗಳ್ದವೆಂದಡೆ
ತಾ ಸಮುದ್ರದಿಂದ ಅನ್ಯವಪ್ಪವೆ?
ನಿರ್ವಿಕಾರ ನಿತ್ಯ ನಿರಂಜನ ನಿರ್ಗುಣ ಪರಿಪೂರ್ಣ ನಿರ್ವಿಕಲ್ಪ
ಪರಬ್ರಹ್ಮಶಿವನಿಂದ ಜಗತ್ತು ಉದಯಿಸಿತ್ತು ಎಂದಡೆ
ಶಿವನಿಂದ ಅನ್ಯವೆನಬಹುದೆ?
ಇಂತಪ್ಪ ಅರಿವು, ನೀವು ಕೊಟ್ಟ ಸಮ್ಯಕ್ ಜ್ಞಾನಕ್ಕೆ
ಅರಿದಪ್ಪುದಯ್ಯಾ ಗುಹೇಶ್ವರಾ. (೨: ೧೫೭೩)

ಮೃತ್ತಿಕೆಯೊಂದರಲ್ಲಿ ಮಡಕೆಗಳು ನೂರಾರು,
ಮನವೊಂದರಲ್ಲಿ ಕ್ರಿಯಾದಿಗಳು ನೂರಾರು.
ಜನಕನೊಬ್ಬನಲ್ಲಿ ಸಂತತಿಗಳು ನೂರಾರು.
ಘನಕ್ಕೆ ಘನವಾದ ಚಿನ್ಮಯ ಕಪಿಲಸಿದ್ಧ ಮಲ್ಲಿಕಾರ್ಜುನನಲ್ಲಿ
ಜಗತ್ತುಗಳು ನೂರಾರು. (೪: ೧೯೫೩)

ಹೀಗೆ ಜಗತ್ತೆಲ್ಲಾ ಶಿಮಯವಾಗಿರುವುದರಿಂದ ಜಗತ್ತಿನ ಯಾವುದೇ ಭಾಗವನ್ನು ನೋಡಿದರೂ ಅಲ್ಲಿ ಶಿವನ ಯಾವುದಾದರೊಂದು ಅಂಶವನ್ನು ಕಾಣದಿರಲಾರೆವು.

ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲವಿಸ್ತಾರದ ರೂಹು ನೀನೇ ದೇವಾ,
'ವಿಶ್ವತಶ್ಚಕ್ಷು' ನೀನೆ ದೇವಾ,
'ವಿಶ್ವತೋಮುಖ' ನೀನೆ ದೇವಾ,
'ವಿಶ್ವತೋಬಾಹು' ನೀನೇ ದೇವಾ,
ವಿಶ್ವತಃಪಾದ' ನೀನೆ ದೇವಾ,
ಕೂಡಲಸಂಗಮದೇವಾ. (೧: ೫೩೩)


ಪರಶಿವನೇ ಜಗತ್ತಾಗಿ ಪರಿವರ್ತಿತವಾಗಿದ್ದರೂ, ಜಗತ್ತನ್ನು ನೋಡಿದಾಗ ಅದರಲ್ಲಿರುವ ಶಿವನೇಕೆ ನಮಗೆ ಗೋಚರಿಸುವುದಿಲ್ಲ? ಅಥವಾ ಜಗತ್ತಿನ ಭಾಗಗಳು ಶಿವನ ಕಣ್ಣು, ಕೈ, ಕಾಲು ಎಂಬುದು ನಮಗೇಕೆ ಗೊತ್ತಾಗುವುದಿಲ್ಲ? ಅದಕ್ಕೆ ಶರಣರ ಉತ್ತರ ಹೀಗಿದೆ: ಭೌತವಸ್ತುಗಳಲ್ಲಿ ಅವ್ಯಕ್ತವಾಗಿರುವ ಅದರ ಗುಣಗಳೇ ನಮಗೆ ಗೋಚರವಾಗುವದಿಲ್ಲ. ಅಂದಮೇಲೆ, ಭೌತವಸ್ತುವಲ್ಲದ, ಚಿನ್ಮಯನಾದ ಪರಶಿವನ ಗುಣಗಳು ಇಂದ್ರಿಯಗಳಿಗೆ ಗೋಚರಿಸಲು ಹೇಗೆ ಸಾಧ್ಯ?

ಕಲ್ಲೊಣಗಣ ಕಿಚ್ಚು ಉರಿಯದಂತೆ,
ಬೀಜದೊಳಗಣ ವೃಕ್ಷ ಉಲಿಯದಂತೆ,
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು,
ಗುಹೇಶ್ವರ ನಿಂದ ನಿಲವ ಅನುಭಾವ ಸುಖ ಬಲ್ಲ. (೨: ೨)

ಅಡಗಿನೊಳಗಣ ಹಾಲು ಅಡಗಿಪ್ಪ ಭೇದವನು
ಬೆಡಗಪ್ಪ ತುಪ್ಪದ ಕಂಪಿನ ಪರಿಯಂತೆ.
ಎಲೆ ಮೃಡನೆ! ನೀನು ಪ್ರಾಣ ಪ್ರಕೃತಿಗಳೊಳಗೆ
ಅಡಗಿಹ ಭೇದವ ಲೋಕದ ಜಡರೆತ್ತ ಬಲ್ಲರೈ! ರಾಮನಾಥ. (೭: ೭೧೬)

ಹಾಲು ಕೊಡುವ ಪ್ರಾಣಿಗಳಲ್ಲಿ ನಮಗೆ ಕಾಣುವುದು ಹಾಲು ತುಂಬಿದ ಮಾಂಸಖಂಡಗಳು (ಕೆಚ್ಚಲು) ಮಾತ್ರ, ಅದರಲ್ಲಿರುವ ಹಾಲು ಕಾಣುವದಿಲ್ಲ. ಆ ಕೆಚ್ಚಲನ್ನು ನೋಡಿದ ಸಣ್ಣ ಮಕ್ಕಳಗೆ ಅದರಲ್ಲಿ ಹಾಲಿದೆ ಎಂಬುದು ಗೊತ್ತಾಗುವದಿಲ್ಲ. ಆದರೆ ಆ ಕೆಚ್ಚಲನ್ನು ನೋಡಿದ ಮಾತ್ರಕ್ಕೆ ದೊಡ್ಡವರಿಗೆ ಅದರಲ್ಲಿ ಹಾಲಿರುವುದು ಗೊತ್ತಾಗುತ್ತದೆ. ಹಾಲನ್ನು ಕಾಯಿಸಿ, ಕೆನೆ ತೆಗೆದು, ಮೊಸರು ಮಾಡಿ, ಕಡೆಯುವರಿಗಷ್ಟೇ ಗೊತ್ತು - ತುಪ್ಪ ಹಾಲಿನಲ್ಲಿ ಅವ್ಯಕ್ತವಾಗಿ ಅಡಗಿದೆ, ಎಂದು. ಹಾಗೆಯೇ ಶಿವಯೋಗಿಗೆ ಮಾತ್ರ ಗೊತ್ತು, ಶಿವನೇ ಜಗತ್ತಾಗಿದ್ದಾನೆ, ಅಥವಾ ಶಿವ ಎಲ್ಲ ಕಡೆಯೂ ಇದ್ದಾನೆ, ಎಂದು.

ಪ್ರಪಂಚದ ವಿವಿಧ ವಸ್ತುಗಳು ನಮಗೆ ಪರಸ್ಪರ ಸಂಬಂಧವಿಲ್ಲದ, ಬಿಡಿ ಬಿಡಿ ವಸ್ತುಗಳಂತೆ ಕಾಣುತ್ತವೆ. ಆದರೆ ಶಿವಯೋಗಿಗೆ ಜಗತ್ತಿನ ಎಲ್ಲ ವಸ್ತುಗಳೂ ಶಿವಮಯವಾಗಿ ಕಾಣುವುದರಿಂದ ಅವುಗಳಲ್ಲಿ ಏಕತೆ ಕಾಣುತ್ತದೆ. ವಿವಿಧ ಜಾತಿಯ ಹೂಗಳು, ಅನೇಕ ಮಣಿಗಳು ಒಂದು ಮಾಲೆಯಾದಾಗ ಅವುಗಳಲ್ಲಿ ವೈವಿಧ್ಯವೂ ಇರುತ್ತದೆ, ದಾರದಿಂದಾಗಿ ಏಕತೆಯೂ ಇರುತ್ತದೆ. ಅದೇ ರೀತಿ, ವೈವಿಧ್ಯಮಯ ವಸ್ತುಗಳು ಅವುಗಳಲ್ಲಿರುವ ಶಿವನಿಂದಾಗಿ ಏಕವೆಂದೂ, ಅವೆಲ್ಲ ಶಿವನ ಅಂಗಗಳೆಂದೂ ಶಿವಯೋಗಿಯು ತಿಳಿಯುತ್ತಾನೆ.

ಮಣಿಗಳ ಸೂತ್ರದಂತೆ ತ್ರಿಣಯನ ನೀನಿಪ್ಪೆಯಯ್ಯ
ಎಣಿಸುವಡೆ ತನು ಭಿನ್ನ ಆತ್ಮನೊಬ್ಬನೆ.
ಅಣುರೇಣು ಮಧ್ಯದಲ್ಲಿ ಗುಣಭರಿತ ನೀನೆಂದು
ಮಣಿಯುತಿರ್ಪೆನಯ್ಯಾ, ರಾಮನಾಥ, (೭: ೮೩೪)

ಶಿವ-ಜೀವ ಸಂಬಂಧ

ಸಕಲ ಚರಾಚರವಸ್ತುಗಳಾಗಿ ರೂಪಾಂತರಗೊಂಡ ಪರಶಿವನು ವಸ್ತುಭೇದವಿಲ್ಲದೆ ಎಲ್ಲ ಕಡೆಯೂ ವ್ಯಾಪಿಸಿಕೊಂಡಿದ್ದಾನೆ. ಆದರೆ ಅವನು ಸಾಧಾರಣ ಜನರಿಗೆ ಗೋಚರಿಸುವುದಿಲ್ಲ. ಅವನು ಗೋಚರಿಸದಿರುವುದಕ್ಕೆ ಅವನು ಚಿತ್‌ಸ್ವರೂಪನಾಗಿರುವುದೇ ಕಾರಣ. ಆದರೆ, ಅವನ ಶಕ್ತಿಯ ವಿವಿಧ ರೂಪಗಳಾದ ವಸ್ತುಗಳು ಎಲ್ಲರಿಗೂ ಕಾಣುತ್ತವೆ. ಅದರೊಳಗಿರುವ ಚಿತ್‌ಸ್ವರೂಪನಾದ ಶಿವನೂ ನಮಗೆ ಕಾಣಬೇಕು ಎಂದು ಅಪೇಕ್ಷಿಸುವುದು ತಪ್ಪಾಗುತ್ತದೆ. ಬಾಹ್ಯ ಜಗತ್ತಿನಲ್ಲಷ್ಟೇ ಅಲ್ಲ, ಸ್ವತಃ ನಮ್ಮಲ್ಲಿಯೇ ಇರುವ ಚಿತ್‌ಸ್ವರೂಪನಾದ ಆತ್ಮವೂ ಸಹ ಇಂದ್ರಿಯಗೋಚರವಲ್ಲ.

ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ,
ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಯಬ್ದದಂತೆ,
ಗುಹೇಶ್ವರಾ ನಿಮ್ಮ ಶರಣಸಂಬಂಧ. (೨: ೧)

ಘಟದೊಳಗೆ ತೋರುವ ಸೂರ್ಯನಂತೆ
ಸರ್ವರಲ್ಲಿ ಶಿವನ ಚೈತನ್ಯವಿಪ್ಪುದು.
ಇದ್ದರೇನು? ಅದ ಕೂಡುವರೆ
ಗುರುವಿನಿಂದಲ್ಲದಾಗದು ಕಾಣಾ! ರಾಮನಾಥ, (೭: ೭೯೦)

ಜಗತ್ತಿನ ಪ್ರತಿ ಕಣದಲ್ಲೂ ಹೇಗೆ ಪರಶಿವ ಅಗೋಚರನಾಗಿ ನೆಲೆಸಿದ್ದಾನೋ, ಹಾಗೆ ನಮ್ಮ ದೇಹ, ಇಂದ್ರಿಯ, ಅಂತಃಕರಣಗಳಲ್ಲೂ ಅವನು ಅಗೋಚರನಾಗಿ ನೆಲೆಸಿದ್ದಾನೆ. ಅವನು ಜಗತ್ತಿನ ಎಲ್ಲೆಡೆಯಲ್ಲಿರುವುದು ಹೇಗೆ ಶಿವಾನುಭವಿಗೆ ಗೊತ್ತಾಗುತ್ತದೆಯೇ ಹಾಗೆ ಭಕ್ತನ ಇಡೀ ದೇಹವೇ ಪರಶಿವನ ದೇಹ, ಪರಶಿವನ ದೇಹವೇ ಭಕ್ತನ ದೇಹ (ಭಕ್ತದೇಹಿಕದೇವ, ದೇವದೇಹಿಕ ಭಕ್ತ) ಎಂಬುದೂ ಸಹ ಶಿವಾನುಭವಿಗೆ ವೇದ್ಯವಾಗುತ್ತದೆ.

[1] ಈ ತರಹದ ಸಂಖ್ಯೆಯ ವಿವರ: ಸವಸ-1/241 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-241 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
*
Previous ಜೀವಾತ್ಮ - ನಾನು ಯಾರು? ಬಂಧ ಮತ್ತು ಮೋಕ್ಷ Next