Previous ಕೌಟುಂಬಿಕ ಹಿತಕ್ಕೆ ಬೇಕಾದ ನೀತಿಗಳು ಜಾತಿತಾರತಮ್ಯ ಮಾಡಲಾಗದು Next

ಸಾಮಾಜಿಕ ನೆಮ್ಮದಿಗೆ ಅಗತ್ಯವಾದ ಲಿಂಗಾಯತ ನೀತಿಗಳು

*

ಸಾಮಾಜಿಕ ನೆಮ್ಮದಿಗೆ ಅಗತ್ಯವಾದ ಲಿಂಗಾಯತ ನೀತಿಗಳು

ಸಮಾಜದಲ್ಲಿ ಒಗ್ಗಟ್ಟಿರಬೇಕಾದರೆ, ಅದರಲ್ಲಿರುವ ಸದಸ್ಯರು ನೆಮ್ಮದಿಯಿಂದಿರಬೇಕು. ಅವರಲ್ಲಿ ನೆಮ್ಮದಿ ಇರಬೇಕಾದರೆ ಅವರೆಲ್ಲರೂ ಕೆಲವೊಂದು ನೈತಿಕ ಕಟ್ಟಳೆಗಳಿಗೆ (ಉದಾ; ಕಳ್ಳತನ ಮಾಡಬಾರದು, ಸುಳ್ಳು ಹೇಳಬಾರದು, ವಂಚಿಸಬಾರದು, ಕೊಲೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಇತ್ಯಾದಿ ನಿಯಮಗಳಿಗೆ) ಬದ್ಧರಾಗಿರಬೇಕು. ಕೊಲೆಗಾರರು ಅಥವಾ ಕಳ್ಳರು ಕೆಲವರೇ ಆದರೂ ಸಹ, ಅವರು ಇತರರೆಲ್ಲರ ನೆಮ್ಮದಿಯನ್ನು ಹಾಳು ಮಾಡುವುದೂ ಅಲ್ಲದೆ, ತಮ್ಮನ್ನು ಯಾರು ದಂಡಿಸುತ್ತಾರೋ ಎಂಬ ಭಯದಿಂದ ತಾವೂ ನೆಮ್ಮದಿ ಕಳೆದುಕೊಳ್ಳುತ್ತಾರೆ. ಆದುದರಿಂದ, ಸಾಮಾಜಿಕ ನೆಮ್ಮದಿ ಇರಬೇಕೆಂದರೆ, ಎಲ್ಲರೂ ನೀತಿ ಮಾರ್ಗವನ್ನು ಅನುಸರಿಸಬೇಕು.

ಎರಡನೆಯದಾಗಿ, ನೀತಿಯು ಧರ್ಮದ ಅವಿಭಾಜ್ಯ ಅಂಗ. ಅಂದರೆ, ಮೋಕ್ಷ ಪಡೆಯಬೇಕೆನ್ನುವವನು ಮೊದಲು ದೈವಾನುಗ್ರಹಕ್ಕೆ ಪಾತ್ರನಾಗಬೇಕು; ದೈವಾನುಗ್ರಹಕ್ಕೆ ಪಾತ್ರನಾಗಬೇಕೆಂದರೆ ನೈತಿಕ ನಡೆವಳಿಕೆಯ ಮೂಲಕ ಲಿಂಗವನ್ನು ಮೆಚ್ಚಿಸಬೇಕು. ಅಂಥ ನೈತಿಕ ನಡೆವಳಿಕೆಗಳಲ್ಲಿ ಇವು ಕೆಲವು;

ಸುಳ್ಳು ಹೇಳಬಾರದು, ಸತ್ಯ ಹೇಳಬೇಕು

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ!
ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ.
ಆಚಾರವೆ ಸ್ವರ್ಗ, ಅನಾಚಾರವೆ ನರಕ.
ಕೂಡಲಸಂಗಮದೇವಾ, ನೀವೆ ಪ್ರಮಾಣು. (೧: ೨೩೯)

ಮೃದುವಚನ

ಕಂಡ ಭಕ್ತರಿಗೆ ಕೈಮುಗಿಯುವಾತನೆ ಭಕ್ತ,
ಮೃದುವಚನವೆ ಸಕಲ ಜಪಂಗಳಯ್ಯಾ,
ಮೃದುವಚನವೆ ಸಕಲ ತಪಂಗಳಯ್ಯಾ,
ಸದುವಿನಯವೆ ಸದಾಶಿವನ ಒಲುಮೆಯಯ್ಯಾ.
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. (೧: ೨೪೪)

ವಿನಯ

ಏನಿ ಬಂದಿರಿ, ಹದುಳವಿದ್ದಿರೆ ಎಂದಡೆ ನಿಮೈಸಿರಿ ಹಾರಿ ಹೋಹುದೆ?
ಕುಳ್ಳಿರೆಂದಡೆ ನೆಲ ಕುಳಿಹೋಹುದೆ?
ಒಡನೆ ನುಡಿದಡೆ ಸಿರ, ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಮೂಗ ಕೊಯ್ದುದ ಮಾಬನೆ ಕೂಡಲಸಂಗಮದೇವಯ್ಯ? (೧: ೨೪೧)

ನುಡಿದಂತೆ ನಡೆ

ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ,
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ. ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ. (೧:೩೦)

ಕಳ್ಳತನ ಮಾಡಬಾರದು, ಲಂಚ ಸ್ವೀಕರಿಸಬಾರದು, ಇತರರಿಗೆ ಸೇರಿದ ವಸ್ತುಗಳು ಸಿಕ್ಕಿದರೆ ಅವನ್ನು ತೆಗೆದುಕೊಳ್ಳಬಾರದು.

ಲಂಚವಂಚನಕ್ಕೆ ಕೈಯಾನದಭಾಷೆ.
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷದಲ್ಲಿಪ್ಪನಾಗಿ,
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ
ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ. (೫: ೧೨೨೯)

ಹಿಂಸೆ ಬೇಡ, ದಯೆ ಬೇಕು.

ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಚೆಗೆ,
ಒಲ್ಲೆನಯ್ಯಾ ಪರಸತಿಯರ ಸಂಗವ,
ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ.
ಬಳ್ಳದ ಬಾಯಂತೆ ಒಂದೆ ಮನ ಮಾಡಿ
ನಿಲ್ಲೆಂದು ನಿಲಿಸಯ್ಯಾ, ಕೂಡಲಸಂಗಮದೇವಾ. (೧: ೭೩೬)

ಬೆಟ್ಟದ ಮೇಲಣ ಗಿಡಗಳು ಬೆಟ್ಟವ ಮುಟ್ಟದಂತಿಪ್ಪವೆ?
ವಿವರಿಸಿ ನೋಡಿದಡೆ,
ಸೃಷ್ಟಿಯೊಳಗಣ ಪ್ರಾಣಿಗಳು ಪರಮನ ಮುಟ್ಟದಿಪ್ಪವೆ?
ಕಷ್ಟರು ಬೇಡವೆಂದು ಬಿಟ್ಟೋಡುತ್ತಿಪ್ಪ
ಪ್ರಾಣಿಗಳನಟ್ಟಿ, ಹಿಡಿದು ಕೊಂದಡೆ,
ಸೃಷ್ಟಿಗೀಶ್ವರನಿಕ್ಕದಿಪ್ಪನೆ ನರಕದಲ್ಲಿ?
ಒಡೆಯರಿಲ್ಲೆಂದು ಹಲವು ಪ್ರಾಣಿಗಳ ಹರಿಹರಿದು ಕೊಂದಡೆ,
ಹರನಿಕ್ಕದಿಪ್ಪನೆ ಅಘೋರನರಕದಲ್ಲಿ?
ಸಕಲಪ್ರಾಣಿಗಳಿಗೆ ಮೇಲಾರೈಕೆ,
ನಮ್ಮ ಸಕಳೇಶ್ವರದೇವನಲ್ಲದೆ ಮತ್ತೊಬ್ಬರುಂಟೆ? (೯: ೪೫೭)

ಧರ್ಮ ಮತ್ತು ಲೈಂಗಿಕ ಜೀವನ:

ಕಾಮವು ಜೀವಿಯ ಅತ್ಯುತ್ಕಟ ಮೂಲಪ್ರವೃತ್ತಿ(instinct)ಗಳಲ್ಲೊಂದು. ಅದು ಸ್ವಾಭಾವಿಕವೇ ಆದರೂ ಅದನ್ನು ನೈತಿಕವಾಗೇ (ದಾಂಪತ್ಯದ ಮೂಲಕ ಮಾತ್ರ) ತೃಪ್ತಿಪಡಿಸಿಕೊಳ್ಳಬೇಕು. ಅಷ್ಟೇ ಹೊರತು ಪರಸ್ತ್ರೀ ವ್ಯಾಮೋಹ ಒಳ್ಳೆಯದಲ್ಲ. ಏಕೆಂದರೆ
(ಅ) ಗಂಡನು ತನ್ನ ಹೆಂಡತಿಗೆ ದ್ರೋಹ ಬಗೆದಂತಾಗುತ್ತದೆ;
(ಆ) ಪರಶಿವ ಅದನ್ನು ಮೆಚ್ಚುವುದಿಲ್ಲ ಮತ್ತು
(ಇ) ಕೌಟುಂಬಿಕ ನೆಮ್ಮದಿ ಹಾಳಾಗುತ್ತದೆ.
ಆದರೆ ಕಾಮತೃಪ್ತಿಯನ್ನು ನಾವು ನೈತಿಕವಾಗಿ ಪಡೆದರೂ ಸಹ, ಅದು ನಮ್ಮ ಆಧ್ಯಾತ್ಮಿಕ ಧ್ಯೇಯವನ್ನು ಮರೆಸುವಷ್ಟು ನಾವು ಅದರಲ್ಲಿ ಆಸಕ್ತರಾಗಿರಬಾರದು.

ಭಕ್ತನ ಮನ ಹೆಣ್ಣಿನೊಳಗಾದಡೆ, ವಿವಾಹವಾಗಿ ಕೂಡುವುದು.
ಭಕ್ತನ ಮನ ಮಣ್ಣಿನೊಳಗಾದಡೆ, ಕೊಂಡು ಆಲಯವ ಮಾಡುವುದು.
ಭಕ್ತನ ಮನ ಹೊನ್ನಿನೊಳಗಾದಡೆ, ಬಳಲಿ ದೊರಕಿಸುವುದು
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ. (೪: ೮೩೬)

ಪರಸತಿಯರನ್ನು ಕಾಮುಕ ದೃಷ್ಟಿಯಿಂದ ನೋಡದೆ ಮಾತೃದೃಷ್ಟಿಯಿಂದ ನೋಡಬೇಕು.

ಗಂಡನುಳ್ಳಮ್ಮನ ಗೌರಿಯೆಂದು ಕಂಡಡೆ
ಭೂಮಂಡಳಕ್ಕೆ ಅರಸಾಗಿ ಹುಟ್ಟುವನಾತನು.
ಗಂಡನುಳ್ಳಮ್ಮನ ಕಂಡು ಒಡವೆರದಾತ
ನರಕದಲ್ಲಿ ದಿಂಡುಗೆಡದಿಪ್ಪನ್ನೆ, ರಾಮನಾಥ. (೭: ೭೮೩)

ವಂಚನೆ ಮಾಡಬಾರದು.

ನಾವು ಇತರರನ್ನು ವಂಚಿಸುವುದು ನಮ್ಮ ಲಾಭಕ್ಕಾಗಿ, ಆದರೆ ನಿಜವಾದ ಶರಣರು ಪರಹಿತದೃಷ್ಟಿಯಿಂದ ತಾವೇ ಏನನ್ನಾದರೂ ಕಳೆದುಕೊಳ್ಳುತ್ತಾರೆಯೇ ಹೊರತು, ತಾವೆಂದೂ ಇತರರನ್ನು ವಂಚಿಸಿ ಗೆಲ್ಲುವುದಿಲ್ಲ.

ಸೋಲಬಲ್ಲರು ಅವರು, ಗೆಲಲರಿಯರಯ್ಯಾ
ತನು ಮನ ಧನದಲ್ಲಿ ವಂಚನೆಯನರಿಯರಯ್ಯಾ, ದಾಸ ಸಿರಿಯಾಳನವರು.
ಕೂಡಲಸಂಗನ ಶರಣರು ಉಪಚಾರವನರಿಯರಯ್ಯಾ. (೧: ೩೧೮)

ಮದಬೇಡ:
>
ಕೆಲವರು ತಮ್ಮ ಕುಲ, ಜಾತಿ, ಧನ, ಯೌವನ, ರೂಪ, ವಿದ್ಯೆ ಮುಂತಾದ ವಿಷಯಗಳ ಬಗ್ಗೆ ಬಹಳ ಗರ್ವದಿಂದಿರುತ್ತಾರೆ. ಇಂಥ ಯಾವುದೇ ಮದವು ಆಧ್ಯಾತ್ಮಿಕ ವೈರಿಗಳಲ್ಲೊಂದು ಎಂಬುದನ್ನು ವಚನಕಾರರು ಮರೆಯುವುದಿಲ್ಲ. ಅನಾವಶ್ಯಕವಾಗಿ ತಮ್ಮ ಮದವನ್ನು ಪ್ರದರ್ಶಿಸುವುದರ ಬದಲು ವಿನೀತರಾಗಿರುವುದು ಒಳ್ಳೆಯದು. ನಿಜವಾದ ಭಕ್ತನ ವಿನಯ ಹೀಗೆ ವ್ಯಕ್ತವಾಗುತ್ತದೆ.

ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ?
ಹಿರಿದು ಕಿರಿದೆಂದಲ್ಲಿ ಏನಾಯಿತ್ತು?
ಹಿರಿದು ಕಿರಿದೆಂಬ ಶಬ್ದವಡಗಿದರೆ,
ಆತನೆ ಶರಣ ಗುಹೇಶ್ವರಾ. (೨: ೩೩೫)

ನಿನ್ನ ಹರೆಯದ ರೂಹಿನ ಚೆಲುವಿನ, ನುಡಿಯ ಜಾಣಿನ,
ಸಿರಿಯ ಸಂತೋಷದ ಕುರಿತು ತುರಗರಥಪದಾತಿಯ ನೆರವಿಯ,
ಸತಿಸುತರ ಬಂಧುಗಳ ಸಮೂಹದ
ನಿನ್ನ ಕುಲದಭಿಮಾನದ ಗರ್ವವ ಬಿಡು;
ಮರುಳಾಗದಿರು. ಅಕಟಕಟಾ, ರೋಮಜನಿಂದ ಹಿರಿಯನೆ?
ಮಾರನಿಂದ ಚೆಲುವನೆ? ಸುರಪತಿಯಿಂದ ಸಂಪನ್ನನೆ?

ಕಿಂಕರಭಾವ

ಕಿಂಕರಭಾವದ ಮೂಲಕ ಬಸವಣ್ಣನಂಥವರು ತಮ್ಮ ಜಾತಿಮದವನ್ನು ನಿರ್ಮೂಲನೆ ಮಾಡಿಕೊಂಡಿರುತ್ತಾರೆ. ಅಲ್ಲದೆ, ತಾವು ಶ್ವಪಚ ಭಕ್ತರ ತೊತ್ತು ಎಂದು ಹೇಳಿಕೊಳ್ಳುವಲ್ಲಿ ಅವರಿಗೆ ಒಂದಿನಿತೂ ಸಂಕೋಚವಿಲ್ಲ.

ಸೆಟ್ಟಿಯೆಂಬೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದಡೆ
ಕೂಡಲಸಂಗಯ್ಯ ನಗುವನಯ್ಯಾ. (೧: ೩೪೫)

ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ.
ಕೂಡಲಸಂಗಮದೇವಾ, ಎನಗಿದೇ ದಿಬ್ಯ. (೧: ೩೩೫)

ವ್ಯಕ್ತಿ ವಿಕಾಸ

ನಾನು ಅನೀತಿವಂತನಾಗಬೇಕಾದರೆ ಮತ್ತೊಂದು ಜೀವಿಯನ್ನು ಯಾವುದೋ ಒಂದು ರೀತಿಯಲ್ಲಿ, ಯಾವುದೋ ಒಂದು ಪ್ರಮಾಣದಲ್ಲಿ ಹಿಂಸಿಸಬೇಕಾಗುತ್ತದೆ. ನಾನು ನೀತಿವಂತನಾಗಬೇಕಾದರೆ ಮತ್ತೊಂದು ಜೀವಿಗೆ ಯಾವುದೋ ಒಂದು ರೀತಿಯಲ್ಲಿ ಒಳ್ಳೆಯದನ್ನು ಮಾಡಬೇಕಾಗುತ್ತದೆ. ಆದರೆ ಪ್ರಪಂಚದಲ್ಲಿ ನನ್ನನ್ನು ಬಿಟ್ಟು ಮತ್ತಾವ ಜೀವಿಯೂ ಇಲ್ಲವಾದರೆ, ಆಗ ನನಗೆ ಅನೀತಿವಂತನಾಗಲಿ ನೀತಿವಂತನಾಗಲಿ ಆಗಲು ಸಾಧ್ಯವಿಲ್ಲ.

ಸಮಾಜದಲ್ಲಿದ್ದೂ ನಾವು ಕೆಲವು ವೇಳೆ ಏಕಾಂತದಲ್ಲಿರುವ ಪ್ರಸಂಗಗಳು ಉಂಟಾಗುತ್ತವೆ. ಅಂಥ ಸಂದರ್ಭಗಳಲ್ಲಿ ನಾವು ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಲು ಸಾಧ್ಯವಿದೆ. ಉದಾಹರಣೆಗೆ, ನಾವು ಯೋಗಾಸನ, ಪ್ರಾಣಾಯಾಮ, ಧ್ಯಾನ, ಮಿತಾಹಾರಗಳ ಮೂಲಕ ಸಮಾಧಾನ, ಧೈರ್ಯ, ಸ್ಥೈರ್ಯ, ನಿಷ್ಠೆ, ಕಾಮಕ್ರೋಧ ನಿಯಂತ್ರಣ ಮುಂತಾದವುಗಳನ್ನು ಬೆಳೆಸಿಕೊಳ್ಳಬಹುದು. ಅಂತರ್‌ಪರೀಕ್ಷೆಯ ಮೂಲಕ ನಮ್ಮ ಆಧ್ಯಾತ್ಮಿಕ ಸಾಧನೆ ವಿಗತಿಯಾಗಿದೆಯೋ ಪ್ರಗತಿಯಾಗಿದೆಯೋ ಅಥವಾ ಸ್ಥಗಿತವಾಗಿದೆಯೋ ಎಂಬುದನ್ನು ನಿರ್ಣಯಿಸಿ, ಆಧ್ಯಾತ್ಮಿಕ ಪ್ರಗತಿ ಸಾಧಿಸಲು ಏನು ಮಾಡಬೇಕೆಂಬುದನ್ನು ಕುರಿತು ನಿರ್ಧರಿಸಬಹುದು. ಇದು ನೈತಿಕ ಆಚಾರಗಳಿಗೆ ಖಂಡಿತ ಪೂರಕ. ಉದಾ: ನಾವು ಅನ್ಯರೊಡನೆ ಮುನಿದು ಅವರ ಮನ ನೋಯಿಸುವಂಥ ಮಾತನಾಡುವುದು ಅನೈತಿಕ; ಇದನ್ನು ತಪ್ಪಿಸುವುದು ಹೇಗೆಂದು ಏಕಾಂತದಲ್ಲಿದ್ದಾಗ ಅಂತರ್‌ಪರೀಕ್ಷೆ ಮಾಡಿಕೊಳ್ಳುವದು ಅನೈತಿಕತೆಯನ್ನು ಗೆಲ್ಲಲು ಸಹಾಯಕವಾಗುತ್ತದೆ. ವಚನಕಾರರಲ್ಲೇ ಅಂತ‌ ಪರೀಕ್ಷೆಗೆ ಹೆಸರಾದವರೆಂದರೆ ಬಸವಣ್ಣ. ಅವರೂ ಇತರರೂ ಅಂತರ್‌ಪರೀಕ್ಷೆಯ ಮೂಲಕ ಆಧ್ಯಾತ್ಮಿಕ ವಿಕಾಸಕ್ಕೆ ಬೇಕಾದ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ.

ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ,
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ. (೧: ೩೦)

ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು,
ನಿಂದಲ್ಲಿ ನಿಲಲೀಯದೆನ್ನ ಮನವು,
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ
ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು, ನಿಮ್ಮ ಧರ್ಮ. (೧: ೩೨)

ಅರ್ಥಕ್ಕೆ ತಪ್ಪಿದಡೇನು, ಪ್ರಾಣಕ್ಕೆ ತಪ್ಪಿದಡೇನು,
ಅಭಿಮಾನಕ್ಕೆ ತಪ್ಪಿದಡೇನು?
ಶರಣರು ಶರಣರಲ್ಲಿ ಗುಣವನರಸುವರೆ?
ಕೂಡಲಸಂಗನ ಶರಣರು ನೊಂದು ಸೈರಿಸಬೇಕು. (೧: ೨೪೯)

ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ
ಹಾವಿನ ಸಂಗವೆ ಲೇಸು ಕಂಡಯ್ಯಾ,
ಕಾಯದ ಸಂಗವ ವಿವರಿಸಬಲ್ಲಡೆ
ಕಾಯದ ಸಂಗವೆ ಲೇಸು ಕಂಡಯ್ಯಾ,
ತಾಯಿ ರಕ್ಕಸಿಯಾದಂತೆ ಕಾಯವಿಕಾರವು.
ಚೆನ್ನಮಲ್ಲಿಕಾರ್ಜುನಯ್ಯಾ,
ನೀನೊಲಿದವರು ಕಾಯಗೊಂಡಿದ್ದರೆನಬೇಡ. (೫: ೪೧೯)

[1] ಈ ತರಹದ ಸಂಖ್ಯೆಯ ವಿವರ: ಸವಸ-1/124 :- ಸಮಗ್ರ ವಚನ ಸಂಪುಟ-1, ವಚನ ಸಂಖ್ಯೆ-124 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
*
Previous ಕೌಟುಂಬಿಕ ಹಿತಕ್ಕೆ ಬೇಕಾದ ನೀತಿಗಳು ಜಾತಿತಾರತಮ್ಯ ಮಾಡಲಾಗದು Next