Previous ಕಡಲೊಳಗಣ ವಡಬ ಹೊದ್ದಿಯೂ ಹೊದ್ದದಂತೆ ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ Next

ಬ್ರಹ್ಮ, ವಿಷ್ಣು, ಮಹೇಶ್ವರರ ಬಗ್ಗೆ

*

ಗಂಗಾಧರ ಗೌರೀಶ ದೇವರಲ್ಲ, ಶಂಕರ ಶಶಿಧರ ದೇವರಲ್ಲ,
ಪಂಚಮುಖ, ದಶಭುಜವನುಳ್ಳ ನಂದಿವಾಹನರು ದೇವರಲ್ಲ,
ತ್ರಿಶೂಲ ಖಟ್ವಾಂಗಧರರು ದೇವರಲ್ಲ,
ಬ್ರಹ್ಮಕಪಾಲ ವಿಷ್ಣುಕಂಕಾಳ ದಂಡವ ಹಿಡಿದ ಪ್ರಳಯಕಾಲರುದ್ರ ದೇವರಲ್ಲ,
ನಿರಾಳಸ್ವಯಂಭುಲಿಂಗವ ತಾನೆಂದರಿದಡೆ ತಾನೆ ದೇವ ನೋಡಾ
ಅಪ್ರಮಾಣಕೂಡಲಸಂಗಮದೇವ. -- ಬಾಲಸಂಗಯ್ಯ ಅಪ್ರಮಾಣ ದೇವ /599 [1]

ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು ನೋಡಾ,
ಬ್ರಹ್ಮ ತನ್ನ ಶಿರವನೇತಕ್ಕೆ ಹುಟ್ಟಿಸಲಾರ
ವಿಷ್ಣು ತನ್ನ ಮಗನನೇತಕ್ಕೆ ರಕ್ಷಿಸಲಾರ
ದುಷ್ಟನಿಗ್ರಹ ಶಿಷ್ಟಪ್ರತಿಪಾಲಕ ನಮ್ಮ ಕೂಡಲಸಂಗಮದೇವ. 1/547 [1]

ಬ್ರಹ್ಮ ಅವ್ವೆಯ ಗಂಡನಾದ,
ವಿಷ್ಣು ಅಕ್ಕನ ಗಂಡನಾದ.
ರುದ್ರ ಕಿರುತಂಗಿಯ ಗಂಡನಾದ.
ಈ ಮೂವರ ಹೋಬಳಿ ಇದೇನು ಚೋದ್ಯ!
ಇಂತಿವು ಮಾಯಾಮಲಯೋನಿ ಸಂಭಂಧ,
ಏಕಗುಣಭಾವ, ತರುಕೊಂಬು ಫಲದಂತೆ.
ಸಾಕು ಸಂಸರ್ಗ,ಆತುರವೈರಿ ಮಾರೇಶ್ವರಾ --ನಗೆಯ ಮಾರಿತಂದೆ ಸವಸ7/1228 [1]

ದೇವಂಗೆ ಲೀಲೆ ಇಲ್ಲ, ದೇವನು ಸ್ವಯಂಭು

ರುದ್ರ ದೇವರೆಂದು ಆರಾಧಿಸಿ
ಶಿಲೆಯೊಳಗೆ ಹೋರಟೆಗೊಂಡು ಕೆಟ್ಟರಲ್ಲಾ ಭಕ್ತ ಜನಂಗಳು.
……..
ಗಂಗೆವಾಳಕಸಮಾರುದ್ರರೊಳಗಾದ ಬಂಧನವಿರಹಿತ
ಲೀಲೆಗೆ ಹೊರಗಾದ ಸ್ವಯಂಭೂವಯ್ಯಾ ಎನ್ನ ದೇವ. --ಮೋಳಿಗೆ ಮಾರಯ್ಯ

ರುದ್ರ ದೈವವಾದಡೆ ಕಪಾಲವ ಹೊತ್ತು ತಿರುಗಲೇಕೆ?
ವಿಷ್ಣು ದೈವವಾದಡೆ ದಶಾವತಾರಕ್ಕೊಳಗಾಗಲೇಕೆ?
ಬ್ರಹ್ಮ ದೈವವಾದಡೆ ಶಿರವ ಹೋಗಾಡಲೇಕೆ?
ಇಂತೀ ಮೂರು ಅಳಿವಿಂಗೊಳಗು. --ಗುಪ್ತಭಕ್ತಿಯ ಮಂಚಣ್ಣ

ದೇವರು ಸಮಯ ಕುಲಕ್ಕೆ ಹೊರುಗು

ವಿಷ್ಣು ದೈವವಾದಡೆ ಪಾಂಡವರ ಬಂಡಿಯ ಬೋವನಾದ;
ಬ್ರಹ್ಮ ದೈವವೆಂದಡೆ ಆ ಬೋವಂಗೆ ಕಂದನಾದ.
………
ರುದ್ರ ದೈವವೆಂದಡೆ ಅರ್ಧ ನಾರಿಗೆ ಸಿಕ್ಕಿದ.
ಇಂತೀ ಸಮಯ ಕುಲಕ್ಕೆ ಹೊರಗಾಗಿ, ಶಕ್ತಿಸಮಯ
ನಿರಸನನಾಗಿ ನಿಂದುದು
ಸದಾಶಿವಮೂರ್ತಿ ಲಿಂಗಮೊಂದಲ್ಲದಿಲ್ಲಾ ಎಂದೆ. --ಅರಿವಿನ ಮಾರಿತಂದೆ

ತ್ರಿಪುರವನುರುಹಿದ ತ್ರೀನೇತ್ರನಲ್ಲ;
ಅಂಧಕಾಸುರನ ಮೆಟ್ಟಿ ನಾಟ್ಯವನಾಡಿದಾತನಲ್ಲ;
ಖಂಡ ಕಪಾಲಿಯಲ್ಲ, ಮುಂಡಧಾರಿ ತಾನಲ್ಲ;
ಭೂ ಮಂಡಳದೊಳಗೆ ಬಂದು ಸುಳಿವಾತನಲ್ಲ;
ಈಶ್ವರನಲ್ಲ, ಮಹೇಶ್ವರನಲ್ಲ,
ಗುಹೇಶ್ವರನೆಂಬ ಲಿಂಗ ಅಪಾರಮಹಿಮನು! --ಅಲ್ಲಮಪ್ರಭುಗಳು

ಎಲ್ಲರು ನಮ್ಮ ದೇವರಲ್ಲಿ ಅಡಗಿಪ್ಪರು

ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು;
ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು;
ಪೃಥ್ವಿಯೆ ಪೀಠ, ಆಕಾಶವೇ ಲಿಂಗ- ಅಂತಹನೊಬ್ಬ ಗಣೇಶ್ವರನು;
ಸಿರಿಯಾಳನ ಮಗನ ಬೇಡಿದಾತನೊಬ್ಬ ಗಣೇಶ್ವರನು;
ಕಾಮದಹನವ ಮಾಡಿದಾತನೊಬ್ಬ ಗಣೇಶ್ವರನು;
ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕಿ ಆಡುವಲ್ಲಿ
ನೀಲಕಂಠನೆಂಬಾತನೊಬ್ಬ ಗಣೇಶ್ವರನು.
ಇವರೆಲ್ಲರು ನಮ್ಮ ಗುಹೇಶ್ವರ ಲಿಂಗದಲ್ಲಿ ಅಡಗಿಪ್ಪರು. --ಅಲ್ಲಮಪ್ರಭುಗಳು

ದೇವರಿಗೆ ಹುಟ್ಟು, ಸಾವು ಇಲ್ಲ

ಅಮೃತವತಿ ಸೋಮಶಂಭುವಿಂಗೆ ಹುಟ್ಟಿದಾತ ಇಂದ್ರ;
ಸತ್ಯ ಋಷಿ ಜ್ಯೇಷ್ಠಾದೇವಿಗೆ ಹುಟ್ಟಿದಾಗ ಬ್ರಹ್ಮ
ವಸುದೇವ ದೇವಕಿಗೆ ಹುಟ್ಟಿದಾತ ವಿಷ್ಣು
ನಾಭಿರಾಜ ಮರುತಾದೇವಿಗೆ ಹುಟ್ಟಿದಾತ ಅರುಹ
ಇವರೆಲ್ಲರೂ ಯೋನಿಜರೆಂಬುದ ತ್ರೈಜಗ ಬಲ್ಲುದು
ಉತ್ಪತ್ತಿ ಸ್ಥಿತಿ ಪ್ರಳಯಕ್ಕೆ ಹೊರಗಾದ ಕೂಡಲಸಂಗಮದೇವಂಗೆ
ಮಾತಾಪಿತರುಳ್ಳಡೆ ಹೇಳಿರೋ. --ಬಸವಣ್ಣನವರು

ಆಗ ಹುಟ್ಟಿ ಬೇಗ ಸಾವ ಕಾಯಗೊಂಡ ಮಾನವಾ,
ನೀ ದೇವರೆನಿಸಿಕೊಂಬುದೊಂದು ಆವುದಂತರ ಹೇಳಾ?
ದೇವರು ಸಾವಡೆ, ದೇವರಿಗೂ ಸಾವರಿಗೂ ಆವುದಂತರ ಹೇಳಾ?
ದೇವರಿಗೆ ದೇವಲೋಕ, ಮಾನವರಿಗೆ ಮತ್ರ್ಯಲೋಕ,
ಗುಹೇಶ್ವರ ಅಲ್ಲಯ್ಯಂಗೆ ಇನ್ನಾವ ಲೋಕವೂ ಇಲ್ಲ.
---ಅಲ್ಲಮಪ್ರಭುದೇವರ ವಚನ ಸವಸ2/503 [1]

ಮಾಯೆಯ ಬಸುರಲ್ಲಿ ಬಂದಾತ ಮಹೇಶ;
ದೇವಕಿಯ ಬಸುರಲ್ಲಿ ಬಂದಾತ ವಿಷ್ಣು;
ಹೂವಿನ ಬಸುರಲ್ಲಿ ಬಂದಾತ ಬ್ರಹ್ಮ;
ಮರುತದೇವಿಯ ಬಸುರಲ್ಲಿ ಬಂದಾತ ಅರುಹ;
ಇವರು ದೇವರೆಂದು ನಂಬಿ ಪೂಜಿಸಿದಡೆ ಭವ ಅಳಿಯದು;
ಮುಕ್ತಿಯಾಗದೆಂದಾತನಂಬಿಗ ಚೌಡಯ್ಯ. --ಅಂಬಿಗರ ಚೌಡಯ್ಯ

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ವಾಙ್ಮನಗೋಚರವೆಂದು ಹೇಳುತ್ತೈದಾವೆ ವಾಕ್ಯಂಗಳು.
ಅದಂತಿರಲಿ,
ಐತಿಹಾಸಿಕರು ಪೌರಾಣಿಕರು ಆಗಮಿಕರು ಅರಿದರಾದಡೆ
ದೃಶ್ಯನೆಂಬರೆ ಶಿವನನು? ಅದೃಶ್ಯನೆಂಬರೆ ಶಿವನನು?
ವಾಙ್ಮಾನಗೋಚರನೆಂಬರೆ ಶಿವನನು?
`ಅತ್ಯತಿಷ್ಠದ್ದಶಾಂಗುಲಂ `ಏಕ ಏವ ಪುರುಷಃ
ಎಂಬ ಶ್ರುತಿಯಿರಲು ಮತಚಿತ್ತನೆ ಶರಣನು?
ಅಣುವಿನೊಳಗಣುವಾಗಿ, ಮಹತ್ತಿನೊಳಗೆ ಮಹತ್ತಾಗಿ,
ಇಹಪರವೆಂಬ ಸಂದ ಹರಿದು, ಅಧ್ಯಕ್ಷತನಕ್ಕೆ ಕಾರಣಿಕನಾಗಿ
ಇಹಲೋಕವೆ ಪರ, ಪರವೆ ಇಹಲೋಕ.
ಅದು ಹೇಗೆಂದಡೆ:
ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ
ನಿತ್ಯಂ ಗುರುಪದಧ್ಯಾನಂ ನಿತ್ಯಂ [ನಿತ್ಯಂ]ನ ಸಂಶಯಃ
ಎಂಬ ಆಗಮವಾಕ್ಯವನರಿದು,
ಗುರುವಿಂಗೆ ತನುಮುಟ್ಟಿ, ತ್ರಿವಿಧಲಿಂಗಕ್ಕೆ ಮನಮುಟ್ಟಿ,
ತ್ರಿವಿಧಜಂಗಮಕ್ಕೆ ಧನಮುಟ್ಟಿ, ತ್ರಿವಿಧ ನಿವೇದಿಸಿ,
ಆ ಗುರುವಿಂ ಶುದ್ಧ[ಪ್ರಸಾದವ] ಆ ಲಿಂಗದಿಂ ಸಿದ್ಧನಪ್ರಸಾದವಫ
ಅ ಜಂಗಮದಿಂ ಪ್ರಸಿದ್ಧ[ಪ್ರಸಾದವ]ನವಗ್ರಹಿಸಿ
ಈ ಲಿಂಗಾರ್ಚನೆಯ ಸ್ವಾನುಭಾವದಿಂದೇಕವ ಮಾಡಿ ಅರ್ಚಿಸಲಲ್ಲಿ
ಶರಣರು ಸ್ವತಂತ್ರರು.
ಅಂಗದಾಸೆಯಲ್ಲಿ ಹರಿವುದ ಬಿಟ್ಟ ನಿಸ್ಸಂಗಿಗಳು.
ಶ್ರೋತ್ರ ನೇತ್ರ ತ್ವಕ್ಕು ಜಿಹ್ವೆ ಘ್ರಾಣ ಪಂಚೇಂದ್ರಿಯಂಗಳ
ಶಿವನ ಮುಖವೆಂದರಿದು ಅನ್ಯಸಂಗಗಳಿಗೆ
ಎಳಸಿ ಬಳಸಿ ಬಣ್ಣಕರಪ್ಪರೆ ಶರಣರು?
ಲಿಂಗಾರ್ಚನವಿಹೀನಸ್ತು ದ್ವಿಜೋಪಿ ಶ್ವಪಚಾಧಮಃ
ಲಿಂಗಾರ್ಚನಪರೋ ನಿತ್ಯಂ ಶ್ವಪಚೋಪಿ ದ್ವಿಜೋತ್ತಮಃ
ಎಂದುದಾಗಿ,
ಅಮ್ಮ ಶರಣರಿಗೆ ಸರಿ ಉಂಟೆ ಲೋಕದೊಳಗೆ?
ಶೂನ್ಯವೆನಿಸುವ ವಸ್ತುವ ರೂಹಿಂಗೆ ತಂದು
ನೆರೆದು ತಾನೆ ರೂಪಾಗಬಲ್ಲ ಶರಣನು.
ಆತನ ಮಹಾಮಹಿಮೆಗೆ ನಮೋ ನಮೋ ಎಂಬೆನು ಕಾಣಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ./1379 [1]

[1] ಈ ತರಹದ ಸಂಖ್ಯೆಯ ವಿವರ: ಸವಸ-1/547 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-547 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಕಡಲೊಳಗಣ ವಡಬ ಹೊದ್ದಿಯೂ ಹೊದ್ದದಂತೆ ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ Next