ಭಕ್ತನಂಗಳವೆ ವಾರಣಾಸಿ, ಕಾಯವೆ(ದೇಹವೆ) ಕೈಲಾಸ,
ಪ್ರತಿಯೊಬ್ಬ ಶರಣನೂ ಲಿಂಗವುಳ್ಳವನಾದುದರಿಂದ, ಅವನೇ ಲಿಂಗಕ್ಷೇತ್ರ. ಆದುದರಿಂದ, ಶರಣರು ತೀರ್ಥಯಾತ್ರೆ ಮಾಡುವುದು ಅನಾವಶ್ಯಕ.
ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ?
ಈ ಲೋಕದೊಳಗೆ ಮತ್ತೆ ಅನಂತಲೋಕ?
ಶಿವಲೋಕ, ಶಿವಾಚಾರವಯ್ಯಾ,
ಶಿವಭಕ್ತನಿದ್ದ ಠಾವೆ ದೇವಲೋಕ,
ಭಕ್ತನಂಗಳವೆ ವಾರಣಾಸಿ, ಕಾಯವೆ ಕೈಲಾಸ,
ಇದು ಸತ್ಯ ಕೂಡಲಸಂಗಮದೇವಾ - ೧/೧೩೯
#
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಕ್ಷೇತ್ರತೀರ್ಥಕ್ಕೆ ಹೋಗಲೇಕಯ್ಯ!
ಅಂಗದ ಮೇಲಣ ಲಿಂಗ [ರಂಗದ] ಕಲ್ಲ ತಾಗಿದರೆ
ಆವುದ ಘನವೆಂಬೆದಾವುದ ಕಿರಿದೆಂಬೆ?
ತಾಳ ಸಂಪುಟಕ್ಕೆ ಬಾರದ ಘನವನರಿಯದೆ ಕೆಟ್ಟರು.
ಜಂಗಮ ದರ್ಶನ ಶಿರಮುಟ್ಟಿ ಪಾವನ, ಲಿಂಗದರ್ಶನ ಕರ ಮುಟ್ಟಿ ಪಾವನ.
ಹತ್ತರಿದ್ದ ಲಿಂಗವ ಹುಸಿಮಾಡಿ, ದೂರಲಿದ್ದ ಲಿಂಗಕ್ಕೆ ನಮಸ್ಕರಿಸುವ
ವ್ರತಗೇಡಿಯ ತೋರದಿರಯ್ಯಾ! ಕೂಡಲಚೆನ್ನಸಂಗಯ್ಯಾ. ೩/೭೭
#
ವಾರಣಾಸಿ, ಅವಿಮುಕ್ತಿ ಇಲ್ಲಿಯೇ ಇದ್ದಾನೆ.
ಹಿಮದ ಕೇತಾರ, ವಿರೂಪಾಕ್ಷ ಇಲ್ಲಿಯೇ ಇದ್ದಾನೆ.
ಗೋಕರ್ಣ, ಸೇತುರಾಮೇಶ್ವರ ಇಲ್ಲಿಯೇ ಇದ್ದಾನೆ.
ಶ್ರೀಶೈಲ ಮಲ್ಲಿನಾಥ ಇಲ್ಲಿಯೇ ಇದ್ದಾನೆ.
ಸಕಲಲೋಕಪುಣ್ಯಕ್ಷೇತ್ರ ಇಲ್ಲಿಯೇ ಇದ್ದಾನೆ,
ಸಕಳಲಿಂಗ ಉಳಿಯುಮೇಶ್ವರ ತನ್ನಲ್ಲಿ ಇದ್ದಾನೆ. -- ಉಳಿಯುಮೇಶ್ವರ ಚಿಕ್ಕಣ್ಣ
ಗಂಗೆಯಲ್ಲಿ ಮುಳುಗಿದರೆ ಪುಣ್ಯಬರುವುದಿಲ್ಲ ಮನಸ್ಸನ್ನು ಶುದ್ಧಮಾಡಬೇಕು
ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ.
ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ.
ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.
ನಿಚ್ಚಕ್ಕಿನ ಗಮನವಂದಂದಿಗೆ;
ಅತ್ತಲಿತ್ತ ಹರಿವ ಮನವ ಚಿತ್ರದಲ್ಲಿ ನಿಲಿಸಬಲ್ಲಡೆ
ಬಚ್ಚ ಬರಿಯ ಗುಹೇಶ್ವರನೆಂಬ ಲಿಂಗವು - ೨/೩೪೪
ಗಂಗೆಯೆ ಘನ ಮುಟ್ಟಿದ ಪ್ರಾಣಿಗಳೆಲ್ಲಾ ದೇವತೆಗಳೆಂದಡೆ,
ಗಂಗೆಯ ಸಂಚಾರ ಸಾವಿರಾರು ಗಾವುದ.
ಅದರಲ್ಲಿಯ ಪ್ರಾಣಿಗಳು ಅನಂತಾನಂತ.
ಇಷ್ಟು ಜೀವಿಗಳೆಲ್ಲಾ ದೇವರಾದಡೆ,
ಸ್ವರ್ಗದಲ್ಲಿ ನಿಯಮಿತ ದೇವತೆಗಳೆಂಬುದು
ಅಪ್ರಸಿದ್ಧ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನ - ೪/೪೮೩
#
ಕಾಶಿಯಾತ್ರೆಗೆ ಹೋದೆನೆಂಬ ಹೇಸಿಮೂಳರ ಮಾತ ಕೇಳಲಾಗದು!
ಕೇತಾರಕ್ಕೆ ಹೋದೆನೆಂಬ ಹೇಸಿಹೀನರ ನುಡಿಯ ಲಾಲಿಸಲಾಗದು!
ಸೇತುಬಂಧ ರಾಮೇಶ್ವರಕ್ಕೆ ಹೋದೆನೆಂಬ ಸರ್ವಹೀನರ ಮುಖವ ನೋಡಲಾಗದು!
ಪರ್ವತಕ್ಕೆ ಹೋದೆನೆಂಬ ಪಂಚಮಹಾಪಾತಕರ ಮುಖವ ನೋಡಲಾಗದು!
ಅದೆಂತೆಂದಡೆ: ಕಾಯವೆ ಕಾಶಿ, ಒಡಲೆ ಕೇತಾರ,
ಮಾಡಿನೀಡುವ ಹಸ್ತವೆ ಸೇತುಬಂಧರಾಮೇಶ್ವರ,
ಮಹಾಲಿಂಗವ ಹೊತ್ತಿರುವ ಶಿರಸ್ಸೆ ಶ್ರೀಶೈಲಪರ್ವತ ನೋಡಾ.
ಇಂತಿವನರಿಯದೆ ಪರ್ವತಕ್ಕೆ ಹೋಗಿ, ಪಾತಾಳಗಂಗೆಯ ಮುಳುಗಿ,
ತಲೆಯ ಬೋಳಿಸಿಕೊಂಡು, ಗಡ್ಡವ ಕೆರೆಸಿಕೊಂಡು, ಮೀಸೆಯ ತರಿಸಿಕೊಂಡು,
ಗಂಗೆಯೊಳು ಕೋಣನ ಹಾಂಗೆ ಮೈಗೆಟ್ಟು ಫಕ್ಕನೆ ಮುಳುಗಿ,
ಅಲ್ಲಿಂದ ಬಂದು ಅನ್ನವಸ್ತ್ರವಂ ಕಾಸುವೀಸವಂ ಕೊಟ್ಟು,
ಪಾಪ ಹೋಯಿತ್ತೆಂದು
ಅಲ್ಲಿಂದ ಬಂದು ಲಿಂಗವಡಿಗಡಿಗೆ ಹಾಯ್ದು,
ಬಾರದ ಪಾಪವ ತಾವಾಗ ಬರಸಿಕೊಂಡು, ತಗರ ಜನ್ಮದಲ್ಲಿ ಹುಟ್ಟುವರಯ್ಯ.
ಕೋಲು ಪುಟ್ಟಿಯಂ ಕೊಟ್ಟು ಅಟ್ಟಿಸಿ ಬಿಟ್ಟ ಬಳಿಕ,
ಅಲ್ಲಿಂದ ಬಂದವರಿಗೆ ಇಲ್ಲಿದ್ದವರು ಹೋಗಿ,
ಇದಿರುಗೊಂಡು ಕರತರುವುದಕ್ಕೆ!
ಕತ್ತೆ ಮೂಳಹೊಲೆಯರಿರ, ನೀವು ಕೇಳಿರೋ, ಅದಂತೆಂದಡೆ: ಶ್ರೀಮಹಾಪರ್ವತಕ್ಕೆ ಹೋದವರು ತಿರಿಗಿಬಪ್ಪರೆ ?
ಶ್ರೀಮಹಾಮೇರುವಿಗೆ ಹೋದವರು ಮರಳಿಬಪ್ಪರೆ ?
ಛೀ! ಛೀ! ನೀಚ ಮೂಳ ದಿಂಡೆಯ ನೀಳ ಹೊಲೆಯರೆಂದಾತ ನಮ್ಮ ದಿಟ್ಟ ವೀರಾಧಿವೀರನಂಬಿಗರ ಚೌಡಯ್ಯನು. -೬/೧೧೧
#
ತಗರ = ಮೇಷ, ಗಂಡುಕುರಿ, ಟಗರು
ದಿಂಡೆಯ = ಸೊಕ್ಕಿದವ; ಒರಟು ಹೆಂಗಸು; ಸ್ವಾಮಿಗಳ ಎಡಬಲ ಸೇವಕ
ಕೇಳಿರಯ್ಯಾ ಮಾನವರೆ,
ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ
ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ.
ಗಂಡ ಹೆಂಡಿರ ಮನಸ್ಸು ಬೇರಾದರೆ
ಗಂಜಳದೊಳಗೆ ಹಂದಿ ಹೊರಳಾಡಿ
ಒಂದರ ಮೇಲೆ ಒಂದು ಬಂದು ಮೂಸಿದ ಹಾಗೆ.
ಛೇ, ಛೇ, ಇದು ಭಕ್ತಿಯಲ್ಲಣ್ಣ.
ಅದೇನು ಕಾರಣವೆಂದೊಡೆ,
ಕಾಶಿಗೆ ಹೋದೆನೆಂಬವರು ಹೇಸಿ ತೊತ್ತಿನ ಮಕ್ಕಳಯ್ಯ.
ಮೈಲಾರಕ್ಕೆ ಹೋದೆನೆಂಬವರು ಮಾದಗಿತ್ತಿಯ ಮಕ್ಕಳಯ್ಯ.
ಪರ್ವತಕ್ಕೆ ಹೋದೆನೆಂಬವರು ಹಾದರಗಿತ್ತಿಯ ಮಕ್ಕಳಯ್ಯ.
ರಾಚೋಟಿಗೆ ಹೋದೆನೆಂಬವರು ಲಜ್ಜೆಮಾರಿ ತೊತ್ತಿನ ಮಕ್ಕಳಯ್ಯ.
ಛೇ, ಛೇ, ಇದು ಭಕ್ತಿಯಲ್ಲವಯ್ಯ.
ಅದೆಂತೆಂದೊಡೆ;
ಪರಬ್ರಹ್ಮ ಮೂರುತಿಯಾದ ಪರಶಿವನೆ ಗುರುನಾಮದಿಂ ಬಂದು
ಇಷ್ಟಲಿಂಗವ ಧರಿಸಿ, ಪಂಚಾಕ್ಷರಿಯ ಬೋಧಿಸಿದ ಮೇಲೆ
ಆ ಭಕ್ತನ ಕಾಯವೇ ಕೈಲಾಸ.
ಅವನ ಒಡಲೆ ಸೇತುಬಂಧ ರಾಮೇಶ್ವರ.
ಅವನ ಶಿರವೆ ಶ್ರೀಶೈಲ.
ಆತ ಮಾಡುವ ಆಚಾರವೆ ಪಂಚಪರುಷ.
ಇದು ತಿಳಿಯದೆ ಶಾಸ್ತ್ರದಿಂದ ಕೇಳಿ, ಅರಿಯದೆ
ಮಂದಬುದ್ಧಿಯಿಂದ ಪರ್ವತಕ್ಕೆ ಹೋಗಿ
ಪಾತಾಳಗಂಗೆಯಲ್ಲಿ ಮುಳುಮುಳುಗೆದ್ದರೆ,
ಛೇ, ಛೇ, ನಿನ್ನ ದೇಹದ ಮೇಲಣ ಮಣ್ಣು ಹೋಯಿತಲ್ಲದೆ,
ನಿನ್ನ ಪಾಪವು ಹೋಗಲಿಲ್ಲವು.
ಅಲ್ಲಿಂದ ಕಡೆಗೆ ಬಂದು, ಕೆಟ್ಟ ಕತ್ತಿಯ ಕೊಂಡು
ಕೆರವಿನಟ್ಟೆಯ ಮೇಲೆ ಮಸೆದು
ಮಸ್ತಕವ ತೋಯಿಸಿ ತಲೆಯ ಬೋಳಿಸಿಕೊಂಡರೆ,
ನಿನ್ನ ತಲೆಯ ತಿಂಡಿ ಹೋಯಿತಲ್ಲದೆ ನಿನ್ನ ಪಾಪವು ಬಿಡಲಿಲ್ಲವಯ್ಯ !
ಅಲ್ಲಿಂದ ಕೋಲು ಬುಟ್ಟಿಯ ತೆಗೆದುಕೊಂಡು ಬರುವಂತಹ
ದಿಂಡೆತೊತ್ತಿನ ಮಕ್ಕಳ ಕಣ್ಣಲಿ ಕಂಡು,
ಪಡಿಹಾರಿ ಉತ್ತಣ್ಣನ ಎಡದ ಪಾದ ಎಕ್ಕಡದಿಂದೆ
ಪಟಪಟನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. -೬/೧೨೪
#