Previous ವೇದಶಾಸ್ತ್ರ ಪುರಾಣಕ್ಕಿಂತ ಶರಣರ ವಚನ ಶ್ರೇಷ್ಠ ಲಿಂಗಾಯತರಲ್ಲಿ ಪ್ರತಿಯೊಬ್ಬರು ಲಿಂಗಪೂಜೆ ಮಾಡಬೇಕು Next

ವಚನ ಸಾಹಿತ್ಯದಲ್ಲಿ ದೇವರು ಒಬ್ಬನೆ - ಏಕ ದೇವೋಪಾಸನೆ (Monotheism)

*

ದೇವನೊಬ್ಬ ನಾಮ ಹಲವು

ದೇವನೊಬ್ಬ ನಾಮ ಹಲವು
ಪರಮ ಪತಿವ್ರತೆಗೆ ಗಂಡನೊಬ್ಬ
ಮತ್ತೊಂದಕ್ಕೆರಗಿದಡೆ ಕಿವಿ ಮೂಗ ಕೊಯ್ವನು
ಹಲವುದೈವದ ಎಂಜಲ ತಿಂಬುವರನೇನೆಂಬೆ
ಕೂಡಲಸಂಗಮದೇವಾ. - ಬಸವಣ್ಣ ಸವಸ-1/615 [1]

ಭಕ್ತರ ಕಂಡಡೆ ಬೋಳರಪ್ಪಿರಯ್ಯಾ,
ಸವಣರ ಕಂಡಡೆ ಬತ್ತಲೆಯಪ್ಪಿರಯ್ಯಾ,
ಹಾರುವರ ಕಂಡಡೆ ಹರಿನಾಮವೆಂಬಿರಯ್ಯಾ,
ಅವರವರ ಕಂಡಡೆ ಅವರವರಂತೆ
ಸೂಳೆಗೆ ಹುಟ್ಟಿದವರ ತೋರದಿರಯ್ಯಾ.
ಕೂಡಲಸಂಗಯ್ಯನ ಪೂಜಿಸಿ, ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ. 103

ಶಿವಜನ್ಮದಲ್ಲಿ ಹುಟ್ಟಿ, ಲಿಂಗೈಕ್ಯರಾಗಿ,
ತನ್ನ ಅಂಗದ ಮೇಲೆ ಲಿಂಗವಿರುತಿರಲು,
ಅನ್ಯರನೆ ಹಾಡಿ, ಅನ್ಯರನೆ ಹೊಗಳಿ,
ಅನ್ಯರ ವಚನವ ಕೊಂಡಾಡಲು, ಕರ್ಮ ಬಿಡದು, ಭವಬಂಧನ !
ಶ್ವಾನಯೋನಿಯಲ್ಲಿ ಬಪ್ಪುದು ತಪ್ಪದು !
ಇದು ಕಾರಣ, ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಬಕರಿಗೆ
ಮಳಲ ಗೋಡೆಯನಿಕ್ಕಿ, ನೀರಲ್ಲಿ ತೊಳೆದಂತಾಯಿತ್ತಯ್ಯಾ. 107

ಅಮೃತಮತಿ ಸೋಮಶಂಭುವಿಂಗೆ ಹುಟ್ಟಿದಾತನಿಂದ್ರ
ಸತ್ಯೆಋಷಿ ಜೇಷ್ಠಾದೇವಿಗೆ ಹುಟ್ಟಿದಾತ ಬ್ರಹ್ಮ.
ವಸುದೇವ ದೇವಕಿಗೆ ಹುಟ್ಟಿದಾತ ವಿಷ್ಣು.
ನಾಭಿರಾಜ ಮರುತಾದೇವಿಗೆ ಹುಟ್ಟಿದಾತ ನುರುಹ
ಇವರೆಲ್ಲರೂ ಯೋನಿಜರೆಂಬುದ ತ್ರೈಜಗ ಬಲ್ಲುದು.
ಉತ್ಪತ್ತಿ ಸ್ಥಿತಿ ಪ್ರಳಯಕ್ಕೆ ಹೊರಗಾದ ಕೂಡಲಸಂಗಮದೇವಂಗೆ
ಮಾತಾಪಿತರುಗಳುಳ್ಳಡೆ ಹೇಳಿರೋ! - ಬಸವಣ್ಣ ಸವಸ-1/545[1]

ಪತಿವ್ರತಿಯಾದಡೆ ಪರಪುರುಷರ ಸಂಗವೇತಕೆ?
ಲಿಂಗಸಂಗಿಯಾದಡೆ ಅನಂಗಸಂಗವೇತಕೆ?(ಸ್ಥಾವರಲಿಂಗಸಂಗವೇತಕೆ)
ಕಂಡ ಕಂಡವರ ಹಿಂದೆ ಹರಿವ ಚಾಂಡಾಳಗಿತ್ತಿಯಂತೆ:
ಒಬ್ಬರ ಕೈವಿಡಿದು, ಒಬ್ಬರಿಗೆ ಮಾತುಕೊಟ್ಟು,
ಒಬ್ಬರಿಗೆ ಸನ್ನೆಗೆಯ್ವ ಬೋಸರಿಗಿತ್ತಿಯಂತೆ
ಪ್ರಾಣಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಹರಸಿ ಹೊಡವಡಲೇಕೆ?
ಪಾದೋದಕ ಪ್ರಸಾದ ಜೀವಿಯಾದ ಬಳಿಕ ಅನ್ಯರಿಗೆ ಕೈಯಾನಲೇಕೆ?
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಇಂತಪ್ಪ ಪಾಪಿಗಳನೆನಗೆ ತೋರದಿರಯ್ಯಾ. - ಚನ್ನಬಸವಣ್ಣ ಸವಸ-3/190[1]

ವಿಷ್ಣು ವರಾಹವತಾರದಲ್ಲಿ ಹಂದಿಯಂ ತಿಂಬುದಾವಾಚಾರವೋ?
ವಿಷ್ಣು ಮತ್ಸ್ಯಾವತಾರದಲ್ಲಿ ಮೀನಂ ತಿಂಬುದಾವಾಚಾರವೋ?
ವಿಷ್ಣು ಕೂರ್ಮಾವತಾರದಲ್ಲಿ ಆಮೆಯ ತಿಂಬುದಾವಾಚಾರವೋ?
ವಿಷ್ಣು ಹರಿಣಾವತಾರದಲ್ಲಿ ಎರಳೆಯ ತಿಂಬುದಾವಾಚಾರವೋ?
ಇಂತಿವನೆಲ್ಲ ಅರಿಯದೆ ತಿಂದರು.
ಅರಿದರಿದು ನಾಲ್ಕು ವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟಾಗಮ
ಇಂತಿವೆಲ್ಲನೋದಿ, ಕೇಳಿ, ಹೋಮವನಿಕ್ಕಿ ಹೋತನ ಕೊಂದು ತಿಂಬುದಾವಾಚಾರದೊಳಗೋ?
ಇಂತೀ ಶ್ರತಿಗಳ ವಿಧಿಯ ಜಗವೆಲ್ಲ ನೋಡಿರೆ.
ನಮ್ಮ ಕೂಡಲಸಂಗಮದೇವಂಗೆ
ಅಧಿದೇವತೆಗಳ ಸರಿಯೆಂಬವರ ಬಾಯಲ್ಲಿ ಸುರಿಯವೆ ಬಾಲಹುಳುಗಳು? - ಬಸವಣ್ಣ ಸವಸ-1/1353[1]

ಇಬ್ಬರು ಮೂವರು ದೇವರೆಂದು ಉಬ್ಬುಬ್ಬಿ ಮಾತಾನಾಡಬೇಡ
ಒಬ್ಬನೇ ಕಾಣಿರೋ, ಇಬ್ಬರೆಂಬುದು ಹುಸಿ ನೋಡಾ !
ಕೂಡಲಸಂಗಮದೇವನಲ್ಲದೇ ಇಲ್ಲವೆಂದಿತ್ತು ವೇದ. --ಬಸವಣ್ಣನವರು

ಹರಿ-ಹರ ಇಬ್ಬರು ದೇವರು ಬ್ರಹ್ಮ-ವಿಷ್ಣು-ಮಹೇಶ್ವರ ಮೂವರುದೇವರು ಈ ರೀತಿ ಏನೋ ಸಮನ್ವಯತೆ ಸಾಧಿಸುತ್ತೇನೆ ಎಂದು ಉಬ್ಬಿ ಉಬ್ಬಿ ಮಾತಾಡಬೇಡ. ಇರುವುದು ಒಬ್ಬನೇ ದೇವರು. ನೀವು ವೇದಗಳನ್ನಾದರೂ ಸರಿಯಾಗಿ ತಿಳಿದು ನೋಡಿರಿ. ವೇದವೂ ಸಹ ಒಬ್ಬನೇ ದೇವ ಎನ್ನುತ್ತದೆ.

ಅರಗು ತಿಂದು ಕರಗುವ ದೈವವ
ಉರಿಯ ಕಂಡರೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ ?
ಅವಸರ ಬಂದರೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ ?
ಅಂಜಿಕೆ ಯಾದರೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ ?
ಸಹಜಭಾವ ನಿಜೈಕ್ಯ ಕೂಡಲ ಸಂಗಮದೇವ ನೋಬ್ಬನೇ ದೇವ. --ಬಸವಣ್ಣನವರು

ಇದೇನು ವಿಚಿತ್ರ ! ಬೆಂಕಿ ಬಡಿದರೆ ಕರಗಿ ಹೋಗುವ ಅರಗಿನ ದೈವ. ಶಾಖ ಬಡಿದರೂ ಮುರುಟಿ ಬಿಡುವ ಗಿಡುವೂ ದೈವ. ಏನಾದರೂ ಅವಸರ ಬಂದರೆ ಮಾರಿಬಿಡುವ ಬೆಳ್ಳಿಬಂಗಾರದ ಗೊಂಬೆಗಳೂ ದೈವ, ಭಯಪಡಿಸುತಾವೆಂದು ಕಂಡರೆ ಭೂಮಿಯಲ್ಲಿ ಹೂಳಿಬಿಡುವ ದೈವ. ಎಲ್ಲವೂ ದೇವರೆ? ಸಹಜ ಸ್ಥಿತಿಯ, ಹುಟ್ಟದ, ಕೆಡದ, ಮುರುಟದ ಪರಮಾತ್ಮನೊಬ್ಬನೇ ದೇವ !

ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ
ಕೆರೆ ಬಾವಿ ಹೂಗಿಡ ಮರಂಗಳಲ್ಲಿ
ಗ್ರಾಮ ಮಧ್ಯಂಗಳಲ್ಲಿ ಜಲಪಥ ಪಟ್ಟಣ ಪ್ರವೇಶದಲ್ಲಿ
ಹಿರಿಯಾಲದ ಮರದಲ್ಲಿ ಮನೆಯ ಮಾಡಿ,
ಕರೆವೆಮ್ಮೆಯ ಹಸುಗೂಸು ಬಸುರಿ ಬಾಣಂತಿ
ಕುಮಾರಿ ಕೊಡಗೂಸು ಎಂಬವರ ಹಿಡಿದುಂಬ ತಿರಿದುಂಬ
ಮಾರಯ್ಯ ಬೀರಯ್ಯ ಕೇಚರಗಾವಿಲ ಅಂತರ ಬೆಂತರ
ಕಾಳಯ್ಯ ಮಾರಯ್ಯ ಮಾಳಯ್ಯ ಕೇತಯ್ಯಗಳೆಂಬ ನೂರು ಮಡಕೆಗೆ
ನಮ್ಮ ಕೂಡಲಸಂಗಮದೇವ ಶರಣೆಂಬುದೊಂದೆ ದಡಿ ಸಾಲದೆ? - ೧/೫೫೬[1]

ಮಡಿಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೋ!
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೋ!
ದೈವ ದೈವವೆಂದು ಕಾಲಿಡಲಿಂಬಿಲ್ಲ,
ದೈವನೊಬ್ಬನೆ ಕೂಡಲಸಂಗಮದೇವ - ೧/೫೬೨[1]

ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವ
ಭಂಗಿತರ ಮುಖವ ನೋಡಲಾಗದು.
ಅದೆಂತೆಂದಡೆ;
ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವ
ಹಾದರಗಿತ್ತಿಯಂತೆ ಅವಂದಿರ ಭಕ್ತಿ.
ಅಂತಪ್ಪ ಪಂಚಮಹಾಪಾತಕರ
ಮುಖದತ್ತ ತೋರದಿರಾ ಗುಹೇಶ್ವರಾ -೨/೭೦೪[1]

ಜಗದಗಲ ಮುಗಿಲಗಲ ಪಾದ ಪಾತಾಳದಿಂದತ್ತತ್ತ ಪಾದ.
ಬ್ರಹ್ಮಾಂಡದಿಂದತ್ತತ್ತ ಮಕುಟ
ವಿಶ್ವ ಬ್ರಹ್ಮಾಂಡವನು, ತನ್ನ ಕುಕ್ಷಿಯೊಳು
ನಿಕ್ಷೇಪವ ಮಾಡಿಕೊಂಡಿಪ್ಪ ದೇವನೀಗ ಎನ್ನದೇವ.
ಆ ದೇವನೊಳಗೆ ನಾನಡಕ, ನನ್ನೊಳಗೆ ಆ ದೇವನಡಕ.
ಇಂತಪ್ಪ ದೇವನ ನಂಬಿ, ನಾ ಕೆಟ್ಟು ಬಟ್ಟಬಯಲಾದೆ.
ಈ ದೇವನರಿಯದೆ ಜಗವೆಲ್ಲ ಕಲ್ಲದೇವರು, ಮಣ್ಣದೇವರು,
ಮರದೇವರು ಎಂದು ಇವನಾರಾಧಿಸಿ, ಕೆಟ್ಟರಲ್ಲಿ.
ಸ್ವರ್ಗ ಮರ್ತ್ಯ ಪಾತಾಳದವರೆಲ್ಲರು
ಎನ್ನ ದೇವನನರದು ಅರ್ಚಿಸಲಿಲ್ಲ, ಪೂಜಿಸಲಿಲ್ಲ, ಭಾವಿಸಲಿಲ್ಲ.
ಇದು ಕಾರಣ, ಆವ ಲೋಕದವರಾದರೂ ಆಗಲಿ,
ಎನ್ನ ದೇವನನರಿದರೆ, ಭವವಿಲ್ಲ ಬಂಧನವಿಲ್ಲ.
ನೆರೆ ನಂಬಿರೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ.-೩/೯೪೯[1]

ನಿರಾಳ ನಿಶ್ಶೂನ್ಯ ಪರಮಜಂಗಮದರಿವು ತಾನಾಗದೆ,
ಬರಿದೆ ಅಹಂಕಾರದಿಂದ ಮೂರು ಮಲಂಗಳ ಸ್ವೀಕರಿಸುತ್ತ
ನಾವೆ ಜಂಗಮವೆಂದು ನುಡಿವ ಕರ್ಮ ಪಾಷಂಡಿಗಳು_
ಕಾಶಿ ಕೇದಾರ ಶ್ರೀಶೈಲ ವಿರೂಪಾಕ್ಷನೆಂದು,
ಮತ್ತೆ ಈರಣ್ಣ ಮಲ್ಲಣ್ಣ ಬಸವಣ್ಣ ಇವರೇ ದೇವರೆಂದು
ಆ ಕಲ್ಲುಗಳ ತಮ್ಮ ಮನೆಯೊಳಗೊಂದು ಮೂಲೆ
ಸಂದಿ ಗೊಂದಿ ಗೊತ್ತಿನೊಳಗಿಟ್ಟು
ಅದರ ಬಳಿದ ತೊಳೆದ ನೀರು, ಅವರೆಂಜಲ ತಿಂಬುವ ಪಶುಗಳಿಗೆ
ದೇವಭಕ್ತರೆನಬಹುದೇನಯ್ಯಾ ? ಎನಲಾಗದು.
ಇಂತಪ್ಪ ಅನಾಚಾರಿ ಅಪಸ್ಮಾರಿ ಶ್ವಪಚರ
ಜಂಗಮವೆಂದು ಪೂಜಿಸಲಾಗದು ಕಾಣಿರೊ.
ವೀರಶೈವ ಆಚಾರವುಳ್ಳ ಭಕ್ತನು ಇದ ಮೀರಿ ಪೂಜಿಸಿದಡೆ
ಅವರಿಬ್ಬರಿಗೆಯೂ ಭವಕರ್ಮಂಗಳು ತಪ್ಪವು ಕಾಣಾ ಗುಹೇಶ್ವರಾ -ಅಲ್ಲಮಪ್ರಭುದೇವರು/ ೨/೧೩೦೮[1]

ಲಿಂಗಭಕ್ತನಾದ ಬಳಿಕ ತನ್ನಂಗದಲ್ಲಿ ಧರಿಸಿರ್ಪ ಲಿಂಗ ಒಂದಲ್ಲದೆ ಅನ್ಯವನರಿಯದಿರಬೇಕು.
ಆ ಲಿಂಗದ ನೈಷ್ಠಿಕಾ ಭಾವನೆಯಿಂಬುಗೊಂಡಿರಬೇಕು.
ಆ ಲಿಂಗವೇ ಪತಿ ತಾನೆ ಸತಿಯೆಂಬುವ ದೃಢಬುದ್ಧಿ ನಿಶ್ಚಲವಾಗಿರಬೇಕು.
ಹಿಂಗಲ್ಲದೆ ತನ್ನ ದೇಹದ ಮೇಲಿರ್ಪ ಲಿಂಗವ ಸಾಮಾನ್ಯವ ಮಾಡಿ
ಕಂಡ ದೇಗುಲದೊಳಗಣ ಕಲ್ಲ ದೇವರೆಂದು ಭಾವಿಸಿ
ಪೂಜಿಸುವ ಗಾವಿಲ ಮೂಳ ಹೊಲೆಯರ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.

ಶ್ರೀ ಗುರುಸ್ವಾಮಿ ಕರುಣಿಸಿ ಕೊಟ್ಟ ಇಷ್ಟಲಿಂಗವನು
ಉರದಲ್ಲಿ ಧರಿಸಿಕೊಂಡು ಅದು ದೇವರೆಂದು ನಂಬದೆ
ಧರೆಯ ಮೇಲಣ ಕಂಡ ಕಂಡ ಕಲ್ಲು ದೇವರೆಂದು ಕಲ್ಪಿಸಿ
ಹರದಾಡುವ ಭಂಡ ಮಾದಿಗರ ಬಕ್ತರೆಂದಡೆ
ಅಘೋರ ನರಕ ತಪ್ಪದಯ್ಯ ಅಖಂಡೇಶ್ವರಾ.

ಜಲದೈವವೆಂದಡೆ ಶೌಚವ ಮಾಡಲಿಲ್ಲ.
ನೆಲದೈವವೆಂದಡೆ ಕಾಲೂರಿ ನಡೆಯಲಿಲ್ಲ.
ಅಗ್ನಿದೈವವೆಂದಡೆ ತರಿದು ಮೆಲಲಿಲ್ಲ.
ಅಗ್ನಿದೈವವೆಂದಡೆ ಮನೆಗಳು, ತೃಣಾದಿಗಳು ಬೆಂದು ಕೆಟ್ಟೆವೆನಲಿಲ್ಲ.
ವಾಯುದೈವವೆಂದಡೆ ಕೆಟ್ಟಗಾಳಿ
ಮನೆಗೆ ಬಂದಿತ್ತು, ಬಾಗಿಲಿಕ್ಕಿ ಎನಲಿಲ್ಲ.
ಆಕಾಶದೈವವೆಂದಡೆ ಆಕಾಶವ ಹೊರಗುಮಾಡಿ,
ಒಳಗೆ ಮನೆಯ ಕಟ್ಟಲಿಲ್ಲ.
ಚಂದ್ರದೈವವೆಂದಡೆ ಶೀತಗೊಂಡು ಕೆಟ್ಟೆವೆನಲಿಲ್ಲ.
ಸೂರ್ಯದೈವವೆಂದಡೆ ಉಷ್ಣಗೊಂಡು ಕೆಟ್ಟೆವೆನಲಿಲ್ಲ.
ಆತ್ಮದೈವವೆಂದಡೆ ಸಾವು ಕೇಡು ಇಲ್ಲದಿರಬೇಕು.
ಇದು ಕಾರಣ, ನೆಲದೈವವಲ್ಲ, ಜಲದೈವವಲ್ಲ,
ಅಗ್ನಿದೈವವಲ್ಲ, ವಾಯುದೈವವಲ್ಲ,
ಆಕಾಶದೈವವಲ್ಲ, ಚಂದ್ರಸೂರ್ಯ ಆತ್ಮರು ದೈವವಲ್ಲ.
ಕಲಿದೇವಾ, ನಿಮ್ಮ ಶರಣ ಬಸವಣ್ಣ ನೊಬ್ಬನೆ ದೈವವೆಂದ, ಮಡಿವಾಳನು. - ವೀರಗಣಾಚಾರಿ ಮಡಿವಾಳ ಮಾಚಿತಂದೆ

[1] ಈ ತರಹದ ಸಂಖ್ಯೆಯ ವಿವರ: ಸವಸ-1/615 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-615 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ವೇದಶಾಸ್ತ್ರ ಪುರಾಣಕ್ಕಿಂತ ಶರಣರ ವಚನ ಶ್ರೇಷ್ಠ ಲಿಂಗಾಯತರಲ್ಲಿ ಪ್ರತಿಯೊಬ್ಬರು ಲಿಂಗಪೂಜೆ ಮಾಡಬೇಕು Next