ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ಗುರು ಬಸವಣ್ಣ
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ.
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ. -1/717
[1]
ಒರೆ = ಖಡ್ಗವಿಡುವ ಕೋಶ (ಕತ್ತಿ/ಖಡ್ಗವನ್ನು ಕಟ್ಟು); ನಿಗಳ = ಬೇಡಿ, ಬಂಧನ; ಬಾರನೆತ್ತು = ಚರ್ಮಸುಲಿ;
ಓದಿದಡೇನು, ಕೇಳಿದಡೇನು, ಶಿವಪಥವನರಿಯದನ್ನಕ್ಕ
ಓದಿತ್ತು ಕಾಣಿರೋ ಶುಕನು, ಶಿವಜ್ಞಾನವನರಿಯದನ್ನಕ್ಕ.
ಓದಿದ ಫಲವು ಮಾದಾರ ಚೆನ್ನಯ್ಯಂಗಾಯಿತ್ತು
ಕೂಡಲಸಂಗಮದೇವಾ. -1/143
[1]
ಶುಕ = ಗಿಳಿ
ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ,
ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ,
ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ.
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ,
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ,
ಕೂಡಲಸಂಗಮದೇವ ಶ್ವಪಚನ ಮೆರೆದಡೆ
ಜಾತಿಭೇದವ ಮಾಡಲಮ್ಮವು. -1/81
[1]
ಮಡಿವಾಳ ಮಾಚಿದೇವ
ವೇದವನೋದಿದಡೇನು? ಶಾಸ್ತ್ರವ ಕಲಿತಡೇನು?
ಮಾಘವ ಮಿಂದಡೇನು? ಮೂಗ ಹಿಡಿದಡೇನು?
ಹಲ್ಲ ಕಿರಿದಡೇನು? ಬಾಯ ಹುಯ್ದುಕೊಂಡಡೇನು?
ಉಟ್ಟುದನೊಗೆದಡೇನು? ಮಟ್ಟಿಯನಿಟ್ಟಡೇನು?
ಮಂಡೆಯ ಬಿಟ್ಟಡೇನು? ತಿಟ್ಟನೆ ತಿರುಗಿದಡೇನು?
ಕಣ್ಣು ಮುಚ್ಚಿದಡೇನು? ಕೈಗಳ ಮುಗಿದಡೇನು?
ಬೊಟ್ಟನಿಟ್ಟಡೇನು? ಬಯಲಿಂಗೆ ನೆನೆದಡೇನು?
ಮುಸುಡ ಹಿಡಿದಡೇನು? ಮೌನದಲ್ಲಿರ್ದಡೇನು?
ಅವಕ್ಕೆ ಶಿವಗತಿ ಸಿಕ್ಕದು.
ಕುಲವಳಿದು ಛಲವಳಿದು ಮದವಳಿದು ಮತ್ಸರವಳಿದು,
ಗುರುಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ,
ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬಲ್ಲಡೆ,
ಶಿವಗತಿ ಸಿಕ್ಕುವುದು.
ಶಿವಭಕ್ತನಾಗಿ ಸತ್ಯ ಸದಾಚಾರ ಭಕ್ತಿವಿಡಿದು ನಡೆಯಬಲ್ಲಡೆ,
ಕೈಲಾಸದ ಬಟ್ಟೆ ಬೇರಿಲ್ಲವೆಂದ, ಕಲಿದೇವಯ್ಯ. -8/732
[1]
ಎಂಜಲ ತಿಂಬ ಜಡದೊಳಗೆ ಹದಿನೆಂಟುಜಾತಿಯ
ಎಂಜಲು ಭುಂಜಿಸಿ, ಉತ್ತಮರೆನಿಸಿಕೊಂಬ ಭವಜೀವಿಗಳು ಕೇಳಿರೊ.
ಕುಂಜರನಾಗಿ ನಡೆದು ಸುಜಾತರೆನಿಸಿಕೊಂಬಿರಿ.
ಅಜವಧೆ ಗೋವಧೆ ಮಾಡುವ ಅನಾಚಾರಿಗಳು ನೀವು ಕೇಳಿರೊ.
ಬ್ರಾಹ್ಮಣ ವಾಕ್ಯವ ಕಲಿತು ಬ್ರಾಹ್ಮಣರೆನಿಸಿಕೊಂಬಿರಿ.
ವರ್ಮವಿಡಿದು ನೋಡಹೋದಡೆ ನಿಮ್ಮಿಂದ ಕರ್ಮಿಗಳಿಲ್ಲ.
ನಿಮ್ಮ ಧರ್ಮದ ಬಟ್ಟೆಯ ನೀವರಿಯದೆ ಹೋದಿರಿ.
ಚಿತ್ತವಲ್ಲದೆ ಶಿವಭಕ್ತರ ಬುದ್ಧಿಯವಿಡಿದು
ನಡೆಯಲೊಲ್ಲದೆ ಕೆಟ್ಟುಹೋದಿರಿ.
ಸುಧೆಹೀನ ಶುದ್ಧವೆಂದು ಕೊಂಬಿರಿ.
ಸುರೆಯ ಸೇವಿಸುವ ಬೋವರೆಂಜಲು ಎಣ್ಣೆ ಶುದ್ಧವೆಂದು ಕೊಂಬಿರಿ.
ಬುದ್ದಲೆಯ ಎಂಜಲು ಹಾಲು ಮೊಸರು ಮಜ್ಜಿಗೆ ಶುದ್ಧವೆಂಬಿರಿ.
ಶೂದ್ರರೆಂಜಲು ಹಾಲು ಮೊಸರು ತುಪ್ಪ
ಆವ ಜಾತಿಯ ಮನೆಯಲ್ಲಿರ್ದಡೆ ಶುದ್ಧವೆಂದು ಕೊಂಬಿರಿ.
ಹೊಲೆಯ ಭಕ್ಷಿಸಿ ಮಿಕ್ಕ ತೊಗಲಲ್ಲಿ
ಬುದ್ದಲೆಯೊಳಗೆ ತುಪ್ಪವ ತುಂಬಿಹುದೊ
ಆ ಹೊಲೆಯರ ಎಂಜಲು ತೊಗಲ ಸಗ್ಗಳೆಯಲ್ಲಿ ಉದಕವ ಕೊಂಬಿರಿ.
ಹದಿನೆಂಟುಜಾತಿಗೆ ಅಧಿಕವೆನಿಸಿಕೊಂಬಿರಿ.
ದ್ವಿಜರೆಲ್ಲರಿಗೆ ಲೆಕ್ಕವಿಲ್ಲದ ನರಕವೆಂದ, ಕಲಿದೇವರದೇವಯ್ಯ. -8/523
[1]
ವೇದದಿಂದ ವೆಗ್ಗಳವಿಲ್ಲವೆಂಬಿರಿ, ವೇದ ಶಿವನ ಕಂಡುದಿಲ್ಲ.
ಶಾಸ್ತ್ರದಿಂದ ವೆಗ್ಗಳವಿಲ್ಲವೆಂಬಿರಿ, ಶಾಸ್ತ್ರ ಶಿವನ ಕಂಡುದಿಲ್ಲ.
ವೇದವೆಂಬುದು ವಿಪ್ರರ ಬೋಧೆ.
ಶಾಸ್ತ್ರವೆಂಬುದು ಸಂತೆಯ ಗೋಷ್ಠಿ.
ಅನುಭಾವದಿಂದ ತನ್ನೊಳಗಣ ತನುವ,
ತಾನರಿತಂಥ ಭಕ್ತರಿಂದ ವೆಗ್ಗಳವಿಲ್ಲವೆಂದ, ಕಲಿದೇವರದೇವಯ್ಯ. -8/731
[1]
ವೇದ ವಿಪ್ರರ ಬೋಧೆ, ಶಾಸ್ತ್ರ ಸಂತೆಯ ಮಾತು.
ಪುರಾಣ ಪುಂಡರ ಗೋಷ್ಠಿ, ಆಗಮ ಅನೃತದ ನುಡಿ.
ತರ್ಕ ವ್ಯಾಕರಣ ಕವಿತ್ವ ಪ್ರೌಡಿ
ಇಂತಿವರಂಗದ ಮೇಲೆ ಲಿಂಗವಿಲ್ಲದ ಭಾಷೆ.
ಇದು ಕಾರಣ, ತನ್ನೊಳಗನರಿದ
ಅನುಭಾವಿಯಿಂದ ಘನವಿಲ್ಲೆಂದ, ಕಲಿದೇವ. -8/733
[1]
ಮಾದಾರ ಚೆನ್ನಯ್ಯ
ವೇದ ಶಾಸ್ತ್ರಕ್ಕೆ ಹಾರುವನಾಗಿ,
ವೀರ ವಿತರಣಕ್ಕೆ ಕ್ಷತ್ರಿಯನಾಗಿ,
ಸರ್ವವನಾರೈದು ನೋಡುವಲ್ಲಿ,
ವೈಶ್ಯನಾಗಿ ವ್ಯಾಪಾರದೊಳಗಾಗಿ,
ಕೃಷಿಯ ಮಾಡುವುದಕ್ಕೆ ಶೂದ್ರನಾಗಿ.
ಇಂತೀ ಜಾತಿಗೋತ್ರದೊಳಗಾದ ನೀಚ ಶ್ರೇಷ್ಠವೆಂಬ
ಎರಡು ಕುಲವಲ್ಲದೆ,
ಹೊಲೆ ಹದಿನೆಂಟುಜಾತಿಯೆಂಬ ಕುಲವಿಲ್ಲ.
ಬ್ರಹ್ಮವನರಿದಲ್ಲಿ ಬ್ರಾಹ್ಮಣ.
ಸರ್ವಜೀವಹತ ಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ.
ಈ ಉಭಯವನರಿದು ಮರೆಯಲಿಲ್ಲ.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ. -8/1161
[1]
ನಗೆಯ ಮಾರಿತಂದೆ
ವೇದ ಯೋನಿಯ ಹಂಗು.
ಶಾಸ್ತ್ರ ಯೋನಿಯ ಹಂಗು.
ಪುರಾಣ ಯೋನಿಯ ಹಂಗು.
ಆಗಮ ಯೋನಿಯ ಹಂಗು.
ನಾದದಿಂದ ಉದಿಸಿದವು ಶ್ರೋತ್ರದ ಹಂಗು.
ಹೇಳುವುದು ವೆಜ್ಜ, ಕೇಳುವುದು ವೆಜ್ಜ,
ತಾ ಹಿಂದೆ ಬಂದುದು ವೆಜ್ಜ, ಈಗ ನಿಂದು ಮಾಡುವುದು ವೆಜ್ಜ.
ಇಂತೀ ವೆಜ್ಜದಜ್ಜೆಯ ಗುದ್ದಿನಲ್ಲಿ ಬಿದ್ದವರಿಗೆ ನಿರ್ಧರವಿಲ್ಲ
ಆತುರವೈರಿ ಮಾರೇಶ್ವರಾ. -7/1252
[1]
ಕೋಲ ಶಾಂತಯ್ಯ
ಬ್ರಹ್ಮನ ಬಾಯ ಓಗರವನುಂಡು,
ವಿಷ್ಣುವಿನ ಕೈಯ ಸೀರೆಯ ಹೊದ್ದು,
ರುದ್ರನ ಮನೆಯಲ್ಲಿ ತಿರುಗಾಡುತ್ತಿಪ್ಪ ಭದ್ರಾಂಗಿಗಳು ಕೇಳಿರೋ.
ಬ್ರಹ್ಮನ ಬಾಯ ಮುಚ್ಚಿ,
ವಿಷ್ಣುವಿನ ಕೈಯ ಮುರಿದು,
ರುದ್ರನ ಮನೆಯ ಸುಟ್ಟು ಬುದ್ಧಿವಂತರಾಗಿ.
ಬುದ್ಧಿವಂತರಾದವರ ಅರಿದವರನರಿ.
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ. -7/167
[1]
ಅರಿವಿನ ಮಾರಿತಂದೆ
ವೇದವ ನುಡಿವಲ್ಲಿ ವಿಪ್ರರು
ಮತ್ತಾರೂ ಶೂದ್ರಜಾತಿ ಕೇಳದಂತೆ ನುಡಿವರದೇತಕ್ಕೆ ?
ಅದು ಈಚೆಯ ಮಾತು.
ಕಂಡಕಂಡವರೊಡನೆ ಹೇಳಿಕೊಂಡಾಡುತ್ತಿಪ್ಪ
ದಿವ್ಯಜ್ಞಾನ ಪರಮಪ್ರಕಾಶವ
ಭಂಡರಿಗೇಕೆ ಸದಾಶಿವಮೂರ್ತಿಲಿಂಗದ ಅರಿವು ? -6/482
[1]
ಅಂಬಿಗರ ಚೌಡಯ್ಯ
ವೇದಂಗಳೆಲ್ಲ ಬ್ರಹ್ಮನೆಂಜಲು,
ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು,
ಆಗಮಂಗಳೆಲ್ಲ ರುದ್ರನೆಂಜಲು,
ಪುರಾಣಂಗಳೆಲ್ಲ ವಿಷ್ಣುವಿನೆಂಜಲು,
ನಾದಬಿಂದುಕಳೆಗಳೆಂಬವು ಅಕ್ಷರತ್ರಯದೆಂಜಲು,
ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು.
ಇಂತಿವೆಲ್ಲವ ಹೇಳುವರು ಕೇಳುವರು
ಪುಣ್ಯಪಾಪಂಗಳೆಂಜಲೆಂದಾತನಂಬಿಗರ ಚೌಡಯ್ಯ. -6/251
[1]
ನಾಲ್ಕೈದು ಹದಿನೆಂಟು ಪುರಾಣ
ಇಪ್ಪತ್ತೆಂಟು ದೇವತಾಗಮಂಗಳು
ಚಾಷಷ್ಟಿ ಅಖಿಳ ವಿದ್ಯಂಗಳ ಸಾಧಿಸಿ
ನನಗಾರು ಸರಿ ಎಂಬ ಹೊಲೆಮಾದಿಗರ ಎನಗೊಮ್ಮೆ ತೋರದಿರಯ್ಯಾ.
ಅದೇನು ಕಾರಣವೆಂದಡೆ: ಸಕಲಶಾಸ್ತ್ರಂಗಳಿಗೆ ಚಾಷಷ್ಟಿ ಕಳಾವಿದ್ಯಕ್ಕೆ ನಿಲುಕದ ಪರಶಿವನ
ಕಾಯ ಜೀವ ಪ್ರಸಾದದಲ್ಲಿ ನೆಲೆಗೊಳಿಸಲರಿಯದೆ
ಒಡಲ ಹೊರೆವ ಹೊಲೆ ಮಾದಿಗರಾದಂತಾಯಿತ್ತೆಂದಡೆ
ಶುಕನುಡಿದಂತಾಯಿತ್ತೆಂದಾತ ನಮ್ಮ ಅಂಬಿಗರ ಚೌಡಯ್ಯ. -6/176
[1]
ಶುಕ = ಗಿಳಿ, ಚಾಷಷ್ಟಿ = ೬೪, ಅರವತ್ತು ನಾಲ್ಕು
ಕಷ್ಟನ ಮನೆಯಲ್ಲಿ ಸೃಷ್ಟಿಗೀಶ್ವರನುಂಬಾಗ
ಎತ್ತ ಹೋದವು ನಿಮ್ಮ ಶಾಸ್ತ್ರಂಗಳು?
ಕೆತ್ತ ಮುಚ್ಚುಳು [ಬೆ]ಡಗಚ್ಚರಿದೆರೆವಾಗ
ಇಕ್ಕಿದ ಜನ್ನಿವಾರ ಭಿನ್ನವಾದವು.
ಮುಕ್ಕುಳಿಸಿದುದಕವ ತಂದೆರೆದಡೆ
ಎತ್ತಲಿದ್ದವು ನಿಮ್ಮ ವೇದಂಗಳು?
ನಿಮ್ಮ ವೇದದ ದುಃಖ ಬೇಡೆಂದಾತನಂಬಿಗ ಚೌಡಯ್ಯ. -6/103
[1]
ಕೆತ್ತ ಮುಚ್ಚುಳು [ಬೆ]ಡಗಚ್ಚರಿದೆರೆವಾಗ = ಮುಚ್ಚಿದ ಬಾಗಿಲು ಸ್ವಯಂ ಆಗಿ ತೆರೆದುಕೊಳ್ಳುವುದು (locked door opened automatically)
ಅಕ್ಕಮಹಾದೇವಿ
ವೇದಶಾಸ್ತ್ರ ಆಗಮ ಪುರಾಣಂಗಳೆಲ್ಲವು
ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿ ಭೋ!
ಅವ ಕುಟ್ಟಲೇಕೆ ಕುಸುಕಲೇಕೆ?
ಅತ್ತಲಿತ್ತ ಹರಿವ ಮನದ ಶಿರವನರಿದಡೆ
ಬಚ್ಚ ಬರಿಯ ಬಯಲು ಚೆನ್ನಮಲ್ಲಿಕಾರ್ಜುನ -5/305
[1]
ಕೊಟ್ಟಣ = ಭತ್ತ , ಕುಸುಕು = ಹಗುರಾಗಿ ತಳಿಸು, ಮೆಲ್ಲಗೆ ಕುಟ್ಟು
ಓದಿ ಓದಿ ವೇದ ವಾದಕ್ಕಿಕ್ಕಿತ್ತು.
ಕೇಳಿ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು.
ಅರಿದೆಹೆ ಅರಿದೆಹೆನೆಂದು ಆಗಮ ಅರೆಯಾಗಿ ಹೋಯಿತ್ತು.
ಪೂರೈಸಿಹೆ ಪೂರೈಸಿಹೆನೆಂದು
ಪುರಾಣ ಪೂರ್ವದ ಬಟ್ಟೆಗೆ ಹೋಯಿತ್ತು.
ನಾನೆತ್ತ ತಾನೆತ್ತ ? ಬೊಮ್ಮ ಬಟ್ಟಬಯಲು
ಚೆನ್ನಮಲ್ಲಿಕಾರ್ಜುನಾ. -5/134
[1]
ಸಿದ್ಧರಾಮೇಶ್ವರ
ಶಾಸ್ತ್ರವೆಂಬುದು ಮನ್ಮಥಶಸ್ತ್ರವಯ್ಯಾ.
ವೇದಾಂತವೆಂಬುದು ಮೂಲ ಮನೋವ್ಯಾಧಿಯಯ್ಯಾ.
ಪುರಾಣವೆಂಬುದು ಮೃತವಾದವರ ಗಿರಾಣವಯ್ಯಾ.
ತರ್ಕವೆಂಬುದು ಮರ್ಕಟಾಟವಯ್ಯಾ.
ಆಗಮವೆಂಬುದು ಯೋಗದ ಘೋರವಯ್ಯಾ.
ಇತಿಹಾಸವೆಂಬುದು ರಾಜರ ಕಥಾಭಾಗವಯ್ಯಾ.
ಸ್ಮೃತಿಯೆಂಬುದು ಪಾಪಪುಣ್ಯವಿಚಾರವಯ್ಯಾ.
ಆದ್ಯರ ವಚನವೆಂಬುದು ಬಹುವೇದ್ಯವಯ್ಯಾ,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ತಿಳಿಯಕ್ಕೆ. -4/1542
[1]
ತಪವ ಮಾಡಿ ಸ್ವರ್ಗವ ಪಡೆದೆಹೆನೆಂಬವನ ಮುಖವ ನೋಡಲಾಗದು.
ಮಾದಿಗ ಡೋಹರ ಶ್ವಪಚ ನೀಚಗುಣವುಳ್ಳವರು ಹೋಹುದೆಲ್ಲ ಸ್ವರ್ಗವೇನಯ್ಯಾ?
ಲಿಂಗದ ಕುರುಹ ಕಳಿದು, ಅಂಗಗುಣಂಗಳನ್ನಗಳೆದು ಲಿಂಗವಾದುದೆ ಸ್ವರ್ಗ ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ. -4/1491
[1]
ಚೆನ್ನಬಸವಣ್ಣ
ನಿಮಗೆಲ್ಲಾ ಬಲ್ಲೆವೆಂದೆಂಬಿರಿ.
ಹರಿ ಹತ್ತು ಭವಕ್ಕೆ ಬಂದಲ್ಲಿ, ಅಜನ ಶಿರವರಿದಲ್ಲಿ
ಅಂದೆಲ್ಲಿಗೆ ಹೋದವೋ ನಿಮ್ಮ ವೇದಶಾಸ್ತ್ರಾಗಮ ಪುರಾಣಂಗಳೆಲ್ಲಾ.
ಚೆನ್ನಯ್ಯನ ಕೈಯಲ್ಲಿ ಹಾಗವನೆ ಕೊಟ್ಟು
ಕಂಕಣದ ಕೈಯ ಕಂಡು ಧನ್ಯರಾಗಿರೆ ನೀವು
ಮಾತಂಗಿಯ ಮಕ್ಕಳೆಂದು, ಗಗನದಲ್ಲಿ ಸ್ನಾನವ ಮಾಡೆ
ಆಕಾಶದಲ್ಲಿ ಧೋತ್ರಂಗಳು ಹಾರಿ ಹೋಗಲಾಗಿ
ನಮ್ಮ ಶ್ವಪಚಯ್ಯಗಳ ಕೈಯಲ್ಲಿ ಒಕ್ಕುದ ಕೊಂಡು
ಧನ್ಯರಾಗರೆ ಸಾಮವೇದಿಗಳಂದು ?
ನಿಮ್ಮ ನಾಲ್ಕು ವೇದವನೋದದೆ ನಮ್ಮ ಭಕ್ತರ ಮನೆಯ `ಕಾಳನು?
ಇದು ಕಾರಣ ನಮ್ಮ ಕೂಡಲಚೆನ್ನಸಂಗನ ಶರಣರ ಮುಂದೆ
ಈ ಒಡ್ಡುಗಳ ಮಾತ ಪ್ರತಿ ಮಾಡಬೇಡ. -3/1309
[1]
ಅಲ್ಲಮಪ್ರಭು
ವೇದಂಗಳೆಂಬವು ಬ್ರಹ್ಮನ ಬೂತಾಟ.
ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ.
ಆಗಮಗಳೆಂಬವು ಋಷಿಯ ಮರುಳಾಟ.
ಪುರಾಣಗಳೆಂಬವು ಪೂರ್ವದವರ ಗೊಡ್ಡಾಟ (ಒದ್ದಾಟ?)
ಇಂತು ಇವನು ಅರಿದವರ ನೇತಿಗಳೆದು
ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು ! -2/1529
[1]
ವೇದವೆಂಬುದು ಓದಿನ ಮಾತು;
ಶಾಸ್ತ್ರವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರ ಗೋಷ್ಠಿ,
ತರ್ಕವೆಂಬುದು ತಗರ ಹೋರಟೆ
ಭಕ್ತಿ ಎಂಬುದು ತೋರಿ ಉಂಬ ಲಾಭ
ಗುಹೇಶ್ವರನೆಂಬುದು ಮೀರಿದ ಘನವು -2/465
[1]
[1] ಈ ತರಹದ ಸಂಖ್ಯೆಯ ವಿವರ: ಸವಸ-೧/೭೧೭ :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-೭೧೭ (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)