Previous ಶರಣರ ವಚನಗಳಲ್ಲಿ *ಲಿಂಗ*ದ ಸ್ವರೂಪ ವಚನ ಸಾಹಿತ್ಯದಲ್ಲಿ ಮಾನವ ಸಮಾನತೆ Next

ಗುರು ಬಸವಣ್ಣನವರ ವಚನಗಳು

*

ಗುರುವಚನವಲ್ಲದೆ ಲಿಂಗವೆನಿಸದು, ಗುರುವಚನವಲ್ಲದೆ ನಿತ್ಯವೆಂದೆನಿಸದು

ಗುರುಕಾರುಣ್ಯವೇ ಸದಾಚಾರ, ಶಿವಾಚಾರ, ಪ್ರಸಾದ ಸಂತೃಪ್ತಿ, ಗುರು ಇದ್ದರೆ ತಾನೆ ದೀಕ್ಷೆ, ಪರಮಾತನ ಕೃಪೆ, ಸಾಧನೆ ಎಲ್ಲವೂ.

ಗುರುವಚನವಲ್ಲದೆ ಲಿಂಗವೆನಿಸದು
ಗುರುವಚನವಲ್ಲದೆ ನಿತ್ಯವೆಂದೆನಿಸದು
ಗುರುವಚನವಲ್ಲದೆನೇಮವೆಂದೆನಿಸದು
ತಲೆಯಿಲ್ಲದ ಅಟ್ಟಗೆ ಪಟ್ಟವ ಕಟ್ಟುವ ಉಭಯ ಭೃಷ್ಟರ
ಮೆಚ್ಚುವನೆ ನಮ್ಮ ಕೂಡಲ ಸಂಗಮದೇವ ?

ಗುರುವಿನ ಮೂಲಕ ಅನುಗ್ರಹಿತವಾಗಿ ಬರದ ಕುರುಹು ಎಷ್ಟಲಿಂಗವೆಂದೆನಿಸದು. ಲಿಂಗಪೂಜೆಯು ನಿತ್ಯ ಲಿಂಗಾರ್ಚನೆ ಎನ್ನಿಸದು. ಆಚರಣೆ ನೇಮವೆಂದೆನಿಸದು. ತಲೆಯಿಲ್ಲದ ಮುಂಡಕ್ಕೆ ಯಾರಾದರೂ ಪಟ್ಟ ಕಟ್ಟುವರೇ ?

ಉಂಬಲ್ಲಿ ಊಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವರಸುವರು,
ಎಂತಯ್ಯಾ ಅವರ ಭಕ್ತರೆಂತೆಂಬೆ?
ಎಂತಯ್ಯಾ ಅವರ ಯುಕ್ತರೆಂತೆಂಬೆ?
ಕೂಡಲಸಂಗದೇವಾ ಕೇಳಯ್ಯಾ,
ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ -ಸವಸ-೧/೬೨೮[1]

ಗಿರಿಯ ಶಿಖರದ ಮೇಲೆ ಕುಳಿತುಕೊಂಡು, ಜಡೆಯನೇರಿಸಿಕೊಂಡು
ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ?
ಕೃತಯುಗ್ ತ್ರೇತಾಯುಗ ದ್ವಾಪರ ಕಲಿಯುಗದೊಡನೊಡನೆ
ಸವೆದ ಪಾಷಾಣ!
ನಮ್ಮ ಕೂಡಲಸಂಗನ ಶರಣರ ಪ್ರಸಾದ ಜೀವಿಗಳಲ್ಲದವರು
ಏಸು ಕಾಲವಿರ್ದಡೆನು, ಅದರಂತು ಕಾಣಿರಣ್ಣಾ. -- ಸವಸ ವಚನ ಸಂಖ್ಯೆ: ೧೧೭೪[1]

ಮಹಂತಿನ ಕೂಡಲದೇವರೆಂಬ ಪಾಷಂಡಿ, ವೇಷಧಾರಿ!
ಇವರ, ಘಾತಕ ಮೂಳ ಮೂಳ ಹೊಲೆಯರನೇನೆಂಬೆನಯ್ಯಾ,
ಮಹಂತಿನ ಪರಿವ್ರತವೆಂತೆಂದರಿಯರು,
ಆ ಮಹಂತಿನ ಘನವನೆಂತೆಂದಡೆ:
ಅಂತ:ಪರಂಜ್ಯೋತಿಸ್ವರೂಪನು,
ನಿತ್ಯ ನಿರಂಜನನು,
ನಿ:ಕಳಂಕನು, ನಿರ್ದೇಹನು, ನಿರಾಮಯನು, ನಿಶ್ಯೂನ್ಯನು,
ಅನಂತಬ್ರಹ್ಮಾಂಡಗಳ ನೆನಹು ಮಾತ್ರದಲ್ಲಿ ನಿರ್ಮಿಸಿದ, ಕರ್ತೃ,
ಪಾದದಲ್ಲಿ ಪಾತಾಳಲೋಕ, ನೆತ್ತಿಯಲ್ಲಿ ಸತ್ಯಲೋಕ,
ಕುಕ್ಷಿಯಲ್ಲಿ ಹದಿನಾಲ್ಕು ಲೋಕವ ತಾಳಿಹ, ವಿಶ್ವಪರಿಪೂರ್ಣನು.
ಇಂತಪ್ಪ ಪರಂಜ್ಯೋತಿಮಹನು
ಇಂತಿವರೆಲ್ಲ ತನ್ನ ಸರ್ವಾಂಗದಲ್ಲಿ ಮಡುಗಿಸಿಕೊಂಡು,
ನಿಬ್ಬೆರಗಿಯಾಗಿ, ಶಬ್ದ ಶೂನ್ಯನಾಗಿರಬಲ್ಲಡೆ
ಮಹಂತಿನ ಕೂಡಲದೇವರೆಂಬೆನಯ್ಯಾ.
ಇದನರಿಯದ ವೇಷಧಾರಿ ಲಾಂಛನಿ ಗರ್ವಿಗಳನೇನೆಂಬೆನಯ್ಯಾ?
ಕೂಡಲಸಂಗಮದೇವರಲ್ಲಿ ಸಲ್ಲದ ನರಕಿಗಳು. -- ಸಮಗ್ರ ವಚನ ಸಂಪುಟ ವಚನ ಸಂಖ್ಯೆ: ೧೩೧೯[1]

ಉದಕದೊಳಗೆ ಬೈಚಿಟ್ಟ ಬಯಕೆಯ ಕಿಚ್ಚಿನಂತೆ ಇದ್ದಿತ್ತು;
ಸಸಿಯೊಳಗಣ ರಸದ ರುಚಿಯಂತೆ ಇದ್ದಿತ್ತು;
ನನೆಯೊಳಗಣ ಪರಿಮಳದಂತೆ ಇದ್ದಿತ್ತು;
ಕೂಡಲಸಂಗಮದೇವರ ನಿಲವು ಕನ್ನೆಯ ಸ್ನೇಹದಂತೆ ಇದ್ದಿತ್ತು.

ಜ್ಙಾನದ ಬಲದಿಂದ ಅಜ್ಙಾನದ ಕೇಡು ನೋಡಯ್ಯ
ಜ್ಯೋತೀಯ ಬಲದಿಂದ ತಮಂಧದ ಕೇಡು ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
ನಮ್ಮ ಕೂಡಲ ಸಂಗನ ಶರಣರ ಅನುಭಾವದಿಂದ ಭವದ ಕೇಡು ನೋಡಯ್ಯಾ

ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ,
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ,
ಬೇಡಿತ್ತನೀವನು ಕೂಡಲಸಂಗಮದೇವ. - ಬಸವಣ್ಣ ಸವಸ1/234[1]

ಭವಭಂಧನ ಭವಪಾಶವಾದ ಕಾರಣವೇನಯ್ಯಾ?
ಹಿಂದಣ ಜನ್ಮದಲ್ಲಿ ಲಿಂಗವ ಮರೆದೆನಾಗಿ,
ಹಿಂದಣ ಸಿರಿಯಲ್ಲಿ ಜಂಗಮವ ಜರಿದೆನಾಗಿ,
ಅರಿದಡೀ ಸಂಸಾರವ ಹೋದ್ದಲೀವನೆ,
ಕೂಡಲಸಂಮದೇವಾ? - *ಬಸವಣ್ಣ ಸವಸ1/7[1]

ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗ ಜಂಗಮವನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ. - *ಬಸವಣ್ಣ ಸವಸ1/677[1]

ಎನಿಸೆನಿಸೆಂದಡೆ ನಾ ಧೃತಿಗೆಡೆನಯ್ಯಾ.
ಎಲುದೋರಿದಡೆ, ನರ ಹರಿದಡೆ, ಕರುಳು ಕಯಪ್ಪಳಿಸಿದಡೆ
ನಾ ಧೃತಿಗೆಡೆನಯ್ಯಾ,
ಶಿರಹರಿದು ಅಟ್ಟೆ ನೆಲಕ್ಕೆ ಬಿದ್ದಡೆ
ನಾಲಗೆ ಕೂಡಲಸಂಗಾ ಶರಣೆನುತ್ತಿದ್ದಿತ್ತಯ್ಯಾ. - ಬಸವಣ್ಣ ಸವಸ1/692[1]

ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ,
ಕೂಡಲಸಂಗಮದೇವಾ, ಎನಗಿದೇ ದಿಬ್ಯ. - *ಬಸವಣ್ಣ ಸವಸ1/335[1]

ಪುಣ್ಯ ಪಾಪವೆಂಬ ಉಭಯಕರ್ಮವನಾರು ಬಲ್ಲರಯ್ಯ?
ಇವನಾರುಂಬರು?
ಕಾಯ ತಾನುಂಬಡೆ ಕಾಯ ತಾ ಮಣ್ಣು,
ಜೀವ ತಾನುಂಬದೆ ಜೀವ ತಾ ಬಯಲು,
ಈ ಉಭಯನಿರ್ಣಯವ ಕೂಡಲಸಂಗಮದೇವಾ,
ನಿಮ್ಮ ಶರಣ ಬಲ್ಲ. - ಬಸವಣ್ಣ ಸವಸ1/862[1]

ಪಾದಾರ್ಚನೆ ಮಾಡುವೆನಯ್ಯಾ, ಪಾದೋದಕದ ಹಂಗಿಗೆ,
ಶರಣಾರ್ಥಿಯೆಂಬೆನಯ್ಯಾ ಒಕ್ಕುದ ಕೊಂಬ ಹಂಗಿಗೆ,
ಎಡೆೆಯಾಟ ಕಡಬಡ್ಡಿಯ ಕೊಟ್ಟು ಕೆಟ್ಟಿತ್ತು ನೋಡಾ ಭಕ್ತಿ,
ಕೂಡಲಸಂಗನ ಶರಣರ ನಿಲವನರಿಯದೆ,
ಮುಯ್ಯಿಗೆ ಮುಯ್ಯಾಗಿ ಕೆಟ್ಟಿತಯ್ಯಾ ಎನ್ನ ಭಕ್ತಿ. - ಬಸವಣ್ಣ ಸವಸ1/888[1]

'ನಾನು ಭಕ್ತ, ನಾನು ಪ್ರಸಾದಿ' ಎಂದು
ವಿಪ್ರಕರ್ಮವ ಮಾಡುವ ಕರ್ಮಿ
ಲಿಂಗದೇವನ ಮುಟ್ಟಿ ಮಜ್ಜನಕ್ಕೆರೆವ ಕೈಯಲು
ವಿಪ್ರನ ಕಾಲ ತೊಳೆವಡೆ
ಲಿಂಗೋದಕ ಹೃದಯದಲ್ಲಿ,
ವಿಪ್ರನ ಕಾಲ ತೊಳೆದ ನೀರು ಮಂಡೆಯ ಮೇಲೆ!
ಶ್ರುತ್ಯತ್ಕಟದುರಾಚಾರೀ ಯಜ್ಞಕೂಪಸಘಾತಕ:
ಉದ್ರೇಕೇಣ ಕೃತೇ ಶಾಂತೇ ವಿಪ್ರರೂಪೇಣ ರಾಕ್ಷಸ:
ಇದು ಕಾರಣ ಕೂಡಲಸಂಗಮದೇವಾ,
ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು. - *ಬಸವಣ್ಣ ಸವಸ1/593[1]

ನೀರ ಕಂಡಲ್ಲಿ ಮುಳುಗುವರಯ್ಯಾ,
ಮರನ ಕಂಡಲ್ಲಿ ಸುತ್ತುವರಯ್ಯಾ,
ಬತ್ತುವ ಜಲವ,ಒಣಗುವ ಮರನ
ಮಚ್ಚಿದವರು ನಿಮ್ಮನೆತ್ತ ಬಲ್ಲರು?
ಕೂಡಲಸಂಗಮದೇವಾ. - *ಬಸವಣ್ಣ ಸವಸ1/580[1]

ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೆಯೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯಸುಡದು, ಕೂಡಲಸಂಗಮದೇವಾ. - *ಬಸವಣ್ಣ ಸವಸ1/248[1]

ಪಂಡಿತನಾಗಲಿ,ಮುರ್ಖನಾಗಲಿ ಸಂಚಿತಕರ್ಮ ಉಂಡಲ್ಲದೆ ಮಾಣದು,
ಪ್ರಾರಬ್ದಕರ್ಮ ಭೋಗಿಸಿದಲ್ಲದೆ ಹೋಗದೆಂದು
ಶ್ರುತಿ ಸಾರುತ್ತೈದಾವೆ ನೋಡಾ.
ತಾನಾವಾವ ಲೋಕದೊಳಗಿದ್ದಡೆಯೂ ಬಿಡದು,
ಕರ್ಮಫಲಗೂಡಿ ಕೂಡಲಸಂಗಮದೇವಂಗೆ
ಆತ್ಮನೈವೆದ್ಯವ ಮಾಡಿದವನೆ ಧನ್ಯ. - *ಬಸವಣ್ಣ ಸವಸ1/773[1]

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದೊದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ. - *ಬಸವಣ್ಣ ಸವಸ1/744[1]

ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ,
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ,
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. - *ಬಸವಣ್ಣ ಸವಸ1/821[1]

ಊಡುವ ಉಡಿಸುವ ಗಂಡನಿದ್ದಂತೆ
ಜೊಡೆ, ಮಿಂಡಂಗೆ ಕಣ್ಣ ಚೆಲ್ಲುವಳ
ಕೇಡಿಂಗೆ ಬೆರಗಾದೆ ನಾನು,.
ಕೂಡಲಸಂಗಮದೇವನು
ಸಿಂಗಾರದ ಮೂಗ ಬಣ್ಣಿಸಿ, ಹಲುದೋರೆ ಕೊಯ್ವ.- *ಬಸವಣ್ಣ ಸವಸ1/618[1]

ಭಕ್ತ ಭಕ್ತನ ಮನೆಗೆ ಬಂದಡೆ, ಭೃತ್ಯಾಚಾರವ ಮಾಡಬೇಕು.
ಕರ್ತನಾಗಿ ಕಾಲ ತೊಳೆಸಿಕೊಂಡಡೆ
ಹಿಂದೆ ಮಾಡಿದ ಭಕ್ತಿಗೆ ಹಾನಿ.
ಲಕ್ಕ ಗಾವುದ ದಾರಿಯ ಹೋಗಿ
ಭಕ್ತನು ಭಕ್ತನ ಕಾಂಬುದು ಸದಾಚಾರ.
ಅಲ್ಲಿ ಕೂಡಿ ದಾಸೋಹವ ಮಾಡಿದಡೆ
ಕೂಡಿಕೊಂಬನು ನಮ್ಮ ಕೂಡಲಸಂಗಯ್ಯ. - *ಬಸವಣ್ಣ ಸವಸ1/246[1]

ಜನ್ಮ ಜನ್ಮಕ್ಕೆ ಹೋಗಲೀಯದೆ,
'ಸೋ ಹಂ' ಎಂದೆನಿಸದೆ 'ದಾಸೋ ಹಂ ಎಂದೆನಿಸಯ್ಯಾ.
ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯಾ,
ಕೂಡಲಸಂಗಮದೇವಾ, ನಿಮ್ಮ. ಧರ್ಮ. - *ಬಸವಣ್ಣ ಸವಸ1/834[1]

ಅಯ್ಯಾ, ನಿಮ್ಮ ಶರಣರ ದಾಸೋಹಕ್ಕೆ
ತನುಮನಧನವಲಸದಂತೆ ಮಾಡಯ್ಯಾ,
ತನು ದಾಸೋಹಕ್ಕೆ ಉಬ್ಬುವಂತೆ ಮಾಡಯ್ಯಾ,
ಮನ ದಾಸೋಹಕ್ಕೆ ಲೀಯುವಂತೆ ಮಾಡಯ್ಯಾ,
ಧನ ದಾಸೋಹಕ್ಕೆ ಸವೆದು ನಿಮ್ಮ ಶರಣರ ಪ್ರಸಾದದಲ್ಲಿ
ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ ಸುಖಿಸಿ,
ಪರಿಣಾಮಿಸುವಂತೆ ಮಾಡು ಕೂಡಲಸಂಗಮದೇವಾ - *ಬಸವಣ್ಣ ಸವಸ1/459[1]

ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ,
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ,
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ,
ಕೂಡಲಸಂಗಮದೇವ ಶ್ವಪಚನ ಮೆರೆದಡೆ
ಜಾತಿಭೇದವ ಮಾಡಲಮ್ಮವು. - ಬಸವಣ್ಣ ಸವಸ1/81[1]

ಎಲ್ಲಿ ನೋಡಿದಡಲ್ಲಿ ಮನವೆಳಸಿದಡೆ
ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ,
ಪರವಧುವನು ಮಹಾದೇವಿಯೆಂಬೆ
ಕೂಡಲಸಂಗಮದೇವಾ. - ಬಸವಣ್ಣ ಸವಸ1/446

ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆ ಮಳಲು,
ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು,
ಬೆರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ
ಆಯಿತ್ತೆನ್ನ ಮತಿ, ಕೂಡಲಸಂಗಮದೇವಾ. - ಬಸವಣ್ಣ ಸವಸ1/291[1]

ಎಲವೋ, ಎಲವೋ ಪಾಕರ್ಮವ ಮಾಡಿದವನೇ,
ಎಲವೋ, ಎಲವೋಬ್ರಹ್ಮೇತಿಯ ಮಾಡಿದವನೇ,
ಒಮ್ಮೆ ಶರಣೆನ್ನೆಲವೋ,
ಒಮ್ಮೆ ಶರಣೆಂದಡೆ ಪಾಪಕರ್ಮಓಡುವವು,
ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು,
ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ. - *ಬಸವಣ್ಣ ಸವಸ1/620[1]

ಬ್ರಾಹ್ಮ ಣನೆ ದೈವವೆಂದು ನಂಬಿದ ಕಾರಣ
ಗೌತಮ ಮುನಿಗೆ ಗೋವಧೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಬಲಿಗೆ ಬಂಧನವಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
.ಕರ್ಣನ ಕವಚ ಹೋಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ದಕ್ಷಂಗೆ ಕುರಿದಲೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಪರುಶುರಾಮ ಸಮುದ್ರಕ್ಕೆ ಗುರಿಯಾದನು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ನಾಗರ್ಜುನನ ತಲೆ ಹೋಯಿತ್ತು.
ದೇವಾ, ಭಕ್ರನೆಂದು ನಂಬಿದ ಕಾರಣ
ನಮ್ಮ ಕೂಡಲಸಂಗನ ಶರಣರು ಕೈಲಾಸವಾಸಿಗಳಾದರು.

ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು,
ಎಮ್ಮಯ್ಯ ಚೆನ್ನಯ್ಯ ರಾಯಕಂಪಣವ ಹೇರುವ.
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು.
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮ ಅಜ್ಜರ ಅಜ್ಜರು ಹಡೆದ ಭಕ್ತಿಯ ನಿಮ್ಮ ಕೈಯಲು ಕೊಂಬೆ,
ಕೂಡಲಸಂಗಮದೇವಾ. -1/352 [1]

[1] ಈ ತರಹದ ಸಂಖ್ಯೆಯ ವಿವರ: ಸವಸ-1/628 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-628 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಶರಣರ ವಚನಗಳಲ್ಲಿ *ಲಿಂಗ*ದ ಸ್ವರೂಪ ವಚನ ಸಾಹಿತ್ಯದಲ್ಲಿ ಮಾನವ ಸಮಾನತೆ Next