ಲಿಂಗಾಚಾರ-ಏಕದೇವನಿಷ್ಠೆ | ಶಿವಾಚಾರ-(ಸಾಮಾಜಿಕ ಸಮಾನತೆ) |
ಸದಾಚಾರ |
ಲಿಂಗಾಚಾರ ಧಾರ್ಮಿಕ ಆಚಾರವಾದರೆ, ಸದಾಚಾರ ನೈತಿಕ ಆಚಾರ. ಸಾಧಕ ಕೇವಲ ಲಿಂಗಾಚಾರದಲ್ಲಿ ತೊಡಗಿದ್ದರೆ ಸಾಲದು, ಅವನು ಸದಾಚಾರದಲ್ಲೂ ತೊಡಗಬೇಕು. ಸಾಧಕನು ನೀತಿಗೆ ಮಹತ್ವ ಕೊಡದೆ ಎಷ್ಟು ವರ್ಷಗಳ ಕಾಲ ಲಿಂಗಾಚಾರ ಮಾಡಿದರೂ ಅವನು ತನ್ನ ಗುರಿಯನ್ನು ಮುಟ್ಟಲಾರ. ಸದಾಚಾರವು ಸ್ವಾರ್ಥಭಾವವನ್ನು ಕಳೆದು ಕೊಳ್ಳುವ ನೇರ ಮಾರ್ಗವಾದುದರಿಂದ, ನಿಜವಾದ ಭಕ್ತಿಗೆ ಅದು ಬಹಳ ಅಗತ್ಯ ಎಂಬುದನ್ನು ಶರಣರು ಒತ್ತಿ ಹೇಳಿದ್ದಾರೆ.
ಸದಾಚಾರ ಸದ್ಭಕ್ತಿಯಿಲ್ಲದವರನೊಲ್ಲನಯ್ಯಾ,
ಅವರಾರಾಧನೆ ದಂಡ.
ನಿಚ್ಚ ನಿಚ್ಚ ಪ್ರಾಯಶ್ಚಿತ್ತರನು ಒಲ್ಲ
ಕೂಡಲಸಂಗಮದೇವ, ಭೂಮಿಭಾರಕರ. (೧: ೬೫೧)
ಕೋಪಿ ಮಜ್ಜನಕ್ಕೆರೆದಡೆ ರಕ್ತದ ಧಾರೆ,
ಪಾಪಿ ಹೂವನೇರಿಸಿದಡೆ ಮಸೆದಾಯುಧದ ಗಾಯ.
ಕೂಪವರನಾರನೂ ಕಾಣೆನು ಮಾದಾರ ಚೆನ್ನಯ್ಯನಲ್ಲದೆ.
ಕೂಪವರನಾರನೂ ಕಾಣೆನು ಡೋಹರ ಕಕ್ಕಯ್ಯನಲ್ಲದೆ.
ವ್ಯಾಪತ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ,
ನಿನ್ನಾಪತ್ತಿಗರಿವರಯ್ಯಾ, ಕೂಡಲಸಂಗಯ್ಯಾ. (೧: ೬೫೦)
[ಕೂಪ = ಪ್ರಿಯ, ಪ್ರೀತಿಯವ]
ಸಜ್ಜನೆಯಾಗಿ ಮಜ್ಜನಕ್ಕೆರೆವೆ, ಶಾಂತಳಾಗಿ ಪೂಜೆ ಮಾಡುವೆ,
ಸಮರತಿಯಿಂದ ನಿಮ್ಮ ಹಾಡುವೆ,
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ. (೫: ೩೮೬)
ಸದಾಚಾರವಿಲ್ಲದೆ ಪರಶಿವನನ್ನು ಒಲಿಸಲಾಗದು; ಶಿವಾನುಗ್ರಹವಿಲ್ಲದೆ ಮೋಕ್ಷವಿಲ್ಲ. ಈ ಅರ್ಥದಲ್ಲಿ ಸದಾಚಾರವು ಶಿವಾಚಾರದ ಅವಿಭಾಜ್ಯ ಅಂಗ.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. (೧: ೨೩೫)
ಸದಾಚಾರದಲ್ಲಿ ಎರಡು ಗಮನಾರ್ಹ ಅಂಶಗಳಿವೆ. ಮೊದಲನೆಯದಾಗಿ, ನಮ್ಮ ಕೆಲಸಗಳು ಮತ್ತು ಮಾತುಗಳು ಇತರರಿಗೆ ಹಿಂಸೆಯನ್ನುಂಟು ಮಾಡಬಾರದು. ನಮ್ಮ ಹೊಡೆತ ಅಥವಾ ಇರಿತದಿಂದಾಗಿ ಇತರರಿಗೆ ಹಿಂಸೆಯಾಗುವಂತೆ ನಮ್ಮ ಕಳ್ಳತನ, ಸುಳ್ಳು, ವಂಚನೆ, ವ್ಯಭಿಚಾರ ಮತ್ತು ಭ್ರಷ್ಟಾಚಾರದಿಂದಲೂ ಇತರರಿಗೆ ಹಿಂಸೆಯಾಗುತ್ತದೆ. ಆದುದರಿಂದ ನಾವು ಎಲ್ಲ ವಿಷಯಗಳಲ್ಲಿಯೂ ಅಹಿಂಸಾವ್ರತಿಗಳಾಗಿರಬೇಕು. ಎರಡನೆಯದಾಗಿ, ನಮ್ಮ ಸತತ ಸದಾಚಾರದಿಂದಾಗಿ, ನಾವು ನಿಸ್ವಾರ್ಥಿಗಳಾಗುತ್ತೇವೆ. ನಿಸ್ವಾರ್ಥಿಗಳಾಗದೆ ಪೂರ್ಣ ಭಕ್ತಿ ಸಾಧ್ಯವಿಲ್ಲ. ಹೀಗಾಗಿ, ಸದಾಚಾರಕ್ಕೆ ಲಿಂಗಾಚಾರದಷ್ಟೆ ಮಹತ್ವವಿದೆ.
ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ
ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ.
ನುಡಿಯಲೂ ಬಾರದು ನಡೆಯಲೂ ಬಾರದು.
ಲಿಂಗದೇವನೆ ದಿಬ್ಬವೊ ಅಯ್ಯಾ,
ಬಡವನ ಕೋಪವು ಅವುಡಿಗೆ ಮೃತ್ಯುವಾದಂತೆ
ಕಡೆಗೆ ದಾಂಟದು ಕಾಣಾ, ಕೂಡಲಸಂಗಮದೇವಾ. (೧: ೬೪೬)
[ಅವುಡಿ = ದವಡೆ]
ದಿಟವ ನುಡಿವುದು, ನುಡಿದಂತೆ ನಡೆವುದು.
ಹುಸಿಯ ನಡೆದು ತಪ್ಪುವ ಪ್ರಪಂಚಯನೊಲ್ಲ
ಕೂಡಲಸಂಗಮದೇವಾ. (೧: ೧೨೧೬)
ಕಂಡ ಭಕ್ತರಿಗೆ ಕೈಮುಗಿವಾತನೆ ಭಕ್ತ,
ಮೃದು ವಚನವೆ ಸಕಲ ಜಪಂಗಳಯ್ಯಾ,
ಮೃದು ವಚನವೆ ಸಕಲ ತಪಂಗಳಯ್ಯಾ,
ಸದುವಿನಯವೆ ಸದಾಶಿವನ ಒಲುಮೆಯಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. (೧: ೨೪೪)
ಏನಿ ಬಂದಿರಿ, ಹದುಳವಿದ್ದಿರೆ ಎಂದಡೆ ನಿಮ್ಮೆಸಿರಿ ಹಾರಿ ಹೋಹುದೆ?
ಕುಳ್ಳಿರೆಂದಡೆ ನೆಲ ಕುಳಿಹೋಹುದೆ?
ಒಡನೆ ನುಡಿದಡೆ ಸಿರ, ಹೊಟ್ಟೆವೊಡೆವುದೆ?
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ, ಕೆಡಹಿ
ಮೂಗ ಕೊಯ್ಯದೆ ಮಾಣ್ಬನೆ ಕೊಡಲಸಂಗಮದೇವರು? (೧: ೨೪೧)
ಪುಣ್ಯ ಪಾಪಂಗಳೆಂಬವು ತಮ್ಮ ಇಷ್ಟ ಕಂಡಿರೆ,
“ಅಯ್ಯಾ” ಎಂದಡೆ ಸ್ವರ್ಗ, “ಎಲವೋ” ಎಂದಡೆ ನರಕ.
ದೇವಾ, ಭಕ್ತ, ಜೀಯಾ, ಜೀಯಾ, ಎಂಬ ನುಡಿಯೊಳಗೆ
ಕೈಲಾಸವೈದುವುದೆ ಕೂಡಲಸಂಗಮದೇವಾ. (೧: ೨೪೦)
ಸಕಲ ಪ್ರಾಣಿಗಳೂ ಪರಶಿವನ ರೂಪವೇ ಆಗಿರುವುದರಿಂದ, ಅವಕ್ಕೆ ದಯೆ ತೋರಿಸುವುದೂ ಸದಾಚಾರವೇ. ವಾಸ್ತವವಾಗಿ, ದಯೆ ತೋರಿಸುವುದೇ ಧರ್ಮದ ಅವಿಭಾಜ್ಯ ಅಂಗ. ಧರ್ಮದ ಹೆಸರಿನಲ್ಲಿ ಪ್ರಾಣಿಬಲಿ ಕೊಡುವುದು ಅನೈತಿಕವೂ ಹೌದು, ಧರ್ಮಕ್ಕೆ ಮಾಡುವ ಅಪಚಾರವೂ ಹೌದು.
ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸಕಲಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. (೧: ೨೪೭)
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು ಎಲೆ ಹೋತೇ ಅಳು, ಕಂಡಾ!
ವೇದವನೋದಿದವರ ಮುಂದೆ ಅಳು, ಕಂಡಾ!
ಶಾಸ್ತ್ರವ ಕೇಳಿದವರ ಮುಂದೆ ಅಳು, ಕಂಡಾ!
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವಾ. (೧: ೭೩)
ಇರಿವುದು ಕಡಿವುದು ಕೊಲುವುದು
ಮಲದೇಹಿಗಳಿಗಲ್ಲದೆ ನಿರ್ಮಲದೇಹಿಗಳಿಗುಂಟೆ?
ಸಮಯ ಸಮುದ್ರದಂತಿರಬೇಕು.
ತಪ್ಪನರಸಿ ಶಿಕ್ಷಿಸುವನ್ನಬರ
ನರದೂತ ಕುಲಕ್ಕೆ ಪರಶಿವ ರೂಪುಂಟೆ?
ಆ ಹರಹರಿಯ ನುಡಿದಡೆನಗೇನು?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ. (೭: ೪೨೬)
ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ
ಹೊತ್ತು ಹೋಗಿ ಭೂಮಿಯ ಅಗೆವಲ್ಲಿ
ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ
ಮಾಡುವ ಮಾಟ ನಷ್ಟ
ಇದನರಿತು ವಿರಕ್ತರಾಗಿ ಹೋದಲ್ಲಿ,
ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಚಿತ್ತ ಕಲಕುವದು ಕಷ್ಟ.
ಈ ಹೊತ್ತ ದೇಹಕ್ಕೆ ನಗೆಯ ಚಿತ್ರದ ಕಾಯಕ, ಇದನೊಪ್ಪುಗೊ,
ಆತುರವೈರಿ ಮಾರೇಶ್ವರಾ. (೭: ೧೨೩೬)
ಕಳ್ಳತನ ಮಾಡುವುದೆಂದರೆ ಇತರರಿಗೆ ಹಿಂಸೆ ಮಾಡಿದಂತೆ. ಅದೇ ರೀತಿ, ಇತರರು ಕಳೆದುಕೊಂಡ ವಸ್ತುಗಳನ್ನು ತೆಗೆದುಕೊಳ್ಳುವುದು, ಪರರನ್ನು ಕೇಳಿ ಪಡೆಯುವುದು ಅಥವಾ ಅವರಿಂದ ಏನನ್ನಾದರೂ ನಿರೀಕ್ಷಿಸುವುದೂ ಸಹ ಇತರರಿಗೆ ಹಿಂಸೆ ಮಾಡಿದಂತೆಯೇ. ಆದುದರಿಂದ ಆ ಅನೈತಿಕತೆಯನ್ನೂ ಸಾಧಕರು ದೂರವಿಡಬೇಕು.
ಲಂಚವಂಚನಕ್ಕೆ ಕೈಯಾನದ ಭಾಷೆ.
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷದಲ್ಲಿಪ್ಪನಾಗಿ,
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ
ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ. (೫: ೧೨೨೯)
[ಬಟ್ಟೆ = ದಾರಿ, ರಸ್ತೆ]
ಪರಸತಿಯೊಡನೆ ವ್ಯಭಿಚಾರ ಮಾಡುವುದು ಆಕೆಯ ಗಂಡನಿಗೂ, ಮಾಡಿದವನ ಹೆಂಡತಿಗೂ ಹಿಂಸೆಯನ್ನುಂಟು ಮಾಡುತ್ತದೆ. ಶರಣರು ಪರದಾರಗಮನವನ್ನು ಒಕ್ಕೊರಲಿನಿಂದ ಖಂಡಿಸಿದ್ದಾರೆ.
ಹರಿವ ಹಾವಿಂಗಂಜೆ, ಉರಿಯ ನಾಲಗೆಗಂಜೆ,
ಸುರಗಿಯ ಮೊನೆಗಂಜೆ,
ಒಂದಕ್ಕಂಜುವೆ, ಒಂದಕ್ಕಳುಕುವೆ;
ಪರಸ್ತ್ರೀ ಪರಧನವೆಂಬ ಜೂಬಿಂಗಜುವೆ.
ಮುನ್ನಂಜದ ರಾವಣನೇ ವಿಧಿಯಾದ!
ಅಂಜುವೆನಯ್ಯಾ, ಕೂಡಲಸಂಗಮದೇವಾ. (೧: ೪೪೭)
ಪರವಧುವ ನೆರೆಯದೆ, ಪರಧನವ ತುಡುಕದೆ,
ಪರದೈವದಿಚ್ಚೆವಡೆಯದೆ
ಗುರು ಲಿಂಗ ಜಂಗಮಕ್ಕೆ ವರದಾಸನಾದಾತನೆ
ಧರೆ ಮೂರಕ್ಕೆ ಗುರುವಾಗಿಪ್ಪನೈ, ರಾಮನಾಥ, (೭: ೮೧೯)
ಲೋಭಾದಿಗಳೂ ಸಹ ಧರ್ಮಕ್ಕೆ ವಿರುದ್ಧವೇ. ಏಕೆಂದರೆ, ಅವೂ ಸಹ ಇತರರಿಗೆ ಹಿಂಸೆಯನ್ನುಂಟು ಮಾಡುತ್ತವೆ. ಆದುದರಿಂದ ಸದಾಚಾರಿಯಾದವನು ಅವನ್ನೂ ವರ್ಜಿಸಬೇಕು.
ಪಾಪಿಗೆ ಕೋಪಿಗೆ ಭಕ್ತಿಯಾಗೆಂದಡಪ್ಪುದೆ?
ನಾರಿವಾಣವಕ್ಕುದೆ ನಾಯಿಗೆ?
ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಭಕರಿಗೆ. (೧: ೬೩೯)
ಎಲೆ ಎಲೆ ಮಾನವಾ, ಅಳಿಯಾಸೆ ಬೇಡವೋ,
ಕಾಳ, ಬೆಳದಿಂಗಳು, ಸಿರಿ ಸ್ಥಿರವಲ್ಲ.
ಕೇಡಿಲ್ಲದ ಪದವಿಯನೀವ
ಕೂಡಲಸಂಗಮದೇವಯ್ಯನ ಮರೆಯದೆ ಪೂಜಿಸು. (೧: ೧೬೫)
[ಕಾಳ = ಕತ್ತಲೆ, ರಾತ್ರಿ]
ಇತರರು ನಮ್ಮ ಮೇಲೆ ಕೋಪಿಸಿಕೊಂಡರೆ, ನಮ್ಮನ್ನು ಅವಹೇಳನ ಮಾಡಿದರೆ, ಅಪಹಾಸ್ಯ ಮಾಡಿದರೆ, ಆಗಲೂ ನಾವು ಸಹನೆಯಿಂದಿರಬೇಕೇ ಹೊರತು, ಬಿರುನುಡಿಗಳನ್ನಾಡಬಾರದು, ಮುನಿಯಬಾರದು. ಯಾವಾಗಲೂ ಲಿಂಗಧ್ಯಾನ ಮಾಡುತ್ತಾ ಸಮಾಧಾನಿಯಾಗಿರಬೇಕು.
ಇರಿಸಿಕೊಂಡು ಭಕ್ತರಾದರೆಮ್ಮವರು,
ತರಿಸಿಕೊಂಡು ಭಕ್ತರಾದರೆಮ್ಮವರು,
ಕೊರೆಸಿಕೊಂಡು ಭಕ್ತರಾದರೆಮ್ಮವರು,
ಜರಿಸಿಕೊಂಡು ಭಕ್ತರಾದರೆಮ್ಮವರು.
ಕೂಡಲಸಂಗನ ಶರಣರಿಗೆ ಮುಳಿಸ ತಾಳಿ
ಎನ್ನ ಭಕ್ತಿ ಅರೆಯಾಯಿತ್ತು. (೧: ೨೫೫)
ಆರೇನೆಂದಡೂ ಓರಂತಿಪ್ಪುದೆ ಸಮತೆ.
ಆರು ಜರಿದವರೆನ್ನ ಮನದ ಕಾಳಿಕೆಯ ಕಳೆದರೆಂಬುದೆ ಸಮತೆ.
ಆರು ಸ್ತೌತ್ಯವ ಮಾಡಿಹರನ್ನ ಜನ್ಮಜನ್ಮದ ಹಗೆಗಳೆಂಬುದೆ ಸಮತೆ.
ಇಂತು ಗುರುಕಾರುಣ್ಯ.
ಮನವಚನಕಾಯದಲ್ಲಿ ಅವಿರತವಿಲ್ಲದಿರ್ದಡೆ,
ಕಪಿಲಸಿದ್ಧಮಲ್ಲಿಕಾರ್ಜುನಾ, ನಿನ್ನವರ ನೀನೆಂಬುದೆ ಸಮತೆ. (೪: ೨೧೫)
ಇದಿರೆನ್ನ ಹಳಿವವರು ಮತಿಯ ಬೆಳಗುವರು.
ಮನದ ಕಾಳಕೆಯ ಕಳೆವವರೆನ್ನ ನಂಟರು.
ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ,
ಹೇಯೋಪಾದಿಯ ತೋರುವವರು.
ಇದು ಕಾರಣ, ನಾನನ್ಯ ದೇಶಕ್ಕೆ ಹೋಗೆನು.
ಸಕಳೇಶ್ವರದೇವರ ತೋರುವರೊಳರಿಲ್ಲಿಯೆ. (೯: ೩೮೭)
ಜ್ಞಾನಿಗಳನ್ನೂ ಶರಣರನ್ನೂ ಅಪಹಾಸ್ಯ ಮಾಡದೆ, ಅವರನ್ನು ಗೌರವದಿಂದ ಕಾಣುವುದು ಸದಾಚಾರದ ಅಂಗಗಳಲ್ಲೊಂದು.
ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು
ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ,
ರಂಗವಾಲಿಯಕ್ಕಿ 'ಉಫ್, ಚಾಂಗು ಭಲಾ' ಎಂದೆಂಬೆ.
ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ, (೧: ೩೭೭)
ಉರಿವ ಕೊಳ್ಳಿಯ ಮಂಡೆಯಲಿಕ್ಕಿದಡುರಿವುದು (ಮಂಡೆಯಲ್ಲಿಕ್ಕಿ+ಕದಡು +ಉರಿವುದು) ಮಾಬುದೆ?
ಕಲ್ಲು ಗುಗ್ಗರಿಯ ಮೆಲಿದಡೆ ಹಲ್ಲು ಹೋಹುದು ಮಾಬುದೆ?
ಶರಣರೊಡನೆ ಸರಸವಾಡಿದಡೆ ನರಕ ತಪ್ಪದು ಕಾಣಾ
ಕೂಡಲಸಂಗಮದೇವಾ. (೧: ೬೬೩)
[ಮಂಡೆ = ತಲೆ; ಕದಡು = ಕಲಕು, ಕಳವಳ]
ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ.
ತನುವಿಕಾರ ಮನವಿಕಾರ ಇಂದ್ರಿಯವಿಕಾರದ ಹಿರಿಯರ ನೋಡಾ.
ಶಿವಚಿಂತೆ ಶಿವಜ್ಞಾನಿಗಳ ಕಂಡಡೆ, ಅಳವಾಡಿ ನುಡಿವರು,
ಗುಹೇಶ್ವರನರಿಯದ ಕರ್ಮಿಗಳು. (೨: ೧೨೯)
ದಯೆಯಿಂದ ದಾನ ನೀಡುವುದೂ ಸದಾಚಾರದ ಅವಿಭಾಜ್ಯ ಅಂಗವಾಗುತ್ತದೆ. ಆದರೆ, ದಾನವು ಅಹಂ ಭಾವದಿಂದ ಕೂಡಿರದೆ ದಾಸೋಹಂ (ನಾನು ದಾಸ' ಎಂಬ) ಭಾವದಿಂದ ಕೂಡಿರಬೇಕು. ಅರ್ಥಾತ್, ದಾನವು ದಾಸೋಹವಾಗಿರಬೇಕು.
ಭಕ್ತರು ದ್ರವ್ಯವ ಗಳಿಸಿದಲ್ಲಿ
ತಮ್ಮ ತನುವಿದ್ದಲ್ಲಿಯೆ ಗುರು ಲಿಂಗ ಜಂಗಮಕ್ಕರ್ಪಿಸುವುದು.
ಇದೇ ಸದ್ಭಕ್ತಿಯ ಹೊಲಬು.
ತಾನಳಿದ ಮತ್ತೆ ಮನೆಮಕ್ಕಳಿಗೆಂದಡೆ
ಅದೆ ಆಚಾರಕ್ಕೆ ಭಂಗ.
ಆತ ಸ್ವಾಮಿಗೆ ಸ್ವಾಮಿದ್ರೋಹಿ.
ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ಕೇಳಿ ಎಲ್ಲರೂ ಸತ್ಯವೆನ್ನಿರಣ್ಣಾ. (೧: ೪೩೮)
ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು
ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು
ನಾನು ಪರಸೇವೆಯ ಮಾಡುವೆನಯ್ಯಾ ಜಂಗಮದಾಸೋಹಕ್ಕೆಂದು
ನಾನಾವಾವ ಕರ್ಮಂಗಳ ಮಾಡಿದಡೆಯೂ
ಆ ಕರ್ಮ ಫಲಭೋಗವ ನೀಕೊಡುವೆಯೆಂಬುದ ನಾ ಬಲ್ಲೆನು
ನೀ ಕೊಟ್ಟ ದ್ರವ್ಯವ ನಿಗಲ್ಲದೆ ಮತ್ತೊಂದು ಕ್ರೀಯ ಮಾಡೆನು
ನಿಮ್ಮ ಸೊಮ್ಮಿಂಗೆ ಸಲ್ಲಿಸುವೆನು ನಿಮ್ಮಾಣೆ, ಕೂಡಲ ಸಂಗಮ ದೇವಾ.
--ಬಸವಣ್ಣನವರು
ನಾನು ಒಕ್ಕುಲತನ ಮಾಡುವೆ ; ಅದರ ಆದಾಯ ಗುರುಪೂಜೆಗೆ ಸಲ್ಲುವುದೆಂದು, ವ್ಯಾಪಾರವನ್ನು ಮಾಡುವೆ ; ಅದರ ಸಂಪಾದನೆ ಲಿಂಗಪೂಜೆಗೆ ಅನುವು ಮಾಡಿ ಕೊಡುವುದೆಂದು. ಬೇರೆಯವರ ಬಳಿ ಉದ್ಯೋಗವ ಮಾಡುವೆ, ಬರುವ ಆದಾಯವನ್ನು ಜಂಗಮ ಸೇವೆಗೆ ವಿನಿಯೋಗ ಮಾಡಬಹುದೆಂದು. ಯಾವ ಉದ್ಯೋಗ ಮಾಡಿದರೆ ಏನಂತೆ ಅದರ ಆದಾಯವನ್ನು ನಾನು ನಿಮ್ಮ ಕೆಲಸಗಳಿಗೆ ಬಳಸುವನೇ ವಿನಾ ದೈವೀ ಜೀವನಕ್ಕೆ ಹೊರತಾದ ಕೆಲಸಗಳಿಗೆ ಬಳಸುವುದಿಲ್ಲ.
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ
ಆಸೆಯಂಬುದು ಭವದ ಬೀಜ, ನಿರಾಶೆಯೆಂಬುದು
ನಿತ್ಯ ಮುಕ್ತಿ, ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವ !
ಯಾವುದಾದರೊಂದು ಉದ್ಯೋಗವನ್ನು ಅವಲಂಬಿಸದವರು ಭಕ್ತರೇ ಅಲ್ಲ ; ಆ ಉದೋಗದಲ್ಲಿ ಸತ್ಯತೆ, ಶುದ್ದತೆ ಇಲ್ಲದಿದ್ದರೆ ಅದು ಕಾಯಕವೇ ಅಲ್ಲ. ಆಸೆಯಿಂದ ಮಾಡಿದುದು ಭವಕ್ಕೆ ಬೀಜವಾದರೆ ಆಶಾರಹಿತವಾಗಿ ಮಾಡಿದುದು ನಿಜ ಮುಕ್ತಿಗೆ ಸೋಪಾನ.
ಮಾಡಿ ನೀಡಿ ಹೋದೆಹೆನೆಂಬಾಗ ಕೈಲಾಸವೇನು ಕೈಕೂಲಿಯೆ ?
ಮುಂದೊಂದ ಕಲ್ಪಿಸದೆ ಹಿಂದೊಂದ ಭಾವಿಸದೆ, ಸಲೆಸಂದಿದ್ದಾಗವೆ,
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವಿದ್ದ ಠಾವೇ ಕೈಲಾಸ.
--ಆಯ್ದಕ್ಕಿ ಲಕ್ಕಮ್ಮ
ಈ ಲೋಕದಲ್ಲಿ ಉದ್ಯೋಗಮಾಡಿ, ಹಣಗಳಿಸಿ,ದಾನ ಮಾಡಿ ಸತ್ತನಂತರ ಕೈಲಾಸವನ್ನು ಪಡೆಯುವೆ ಎಂದರೆ ಕೈಲಾಸವೇನು ಕೂಲಿಯೆ ? ಮುಂದೆ ಯಾವುದನ್ನೂ ಕಲ್ಪಿಸದೆ, ಹಿಂದೆ ಎನೋ ಇತ್ತೆಂದು ಭಾವಿಸದೆ, ಮತ್ರ್ಯದಲ್ಲಿರುವಾಗಲೇ ಉತ್ತಮವಾದ ಬಾಳನ್ನು ಬಾಳಬೇಕು. ಆಗ ಆಗ ಜೀವನವೇ ಕೈಲಾಸ.
ವ್ರತ ತಪ್ಪಲು ಸೈರಿಸಬಹುದು
ಕಾಯಕ ತಪ್ಪಲು ಎಂದೂ ಸೈರಿಸ ಬಾರದು
ಕರ್ಮಹರ ಕಾಳೇಶ್ವರ
--ಬಾಚಿಕಾಯಕದ ಬಸವಯ್ಯಗಳ ಧರ್ಮ ಪತ್ನಿ ಕಾಳವ್ವ
ಪೂಜೆ,ಧ್ಯಾನ, ಜಪ, ತಪ ಮುಂತಾದ ವ್ರತ ತಪ್ಪಿದರೆ ಸ್ವಲ್ಪ ಕ್ಷಮಿಸಬಹುದು. ಕಾಯಕ ತಪ್ಪಲು ಎಂದೂ ಸೈರಿಸಬಾರದು. ಏಕೆಂದರೆ ಕಾಯಕದಲ್ಲಿ ದೋಷ ಉಂಟಾದಾಗ ಅದರ ಪರಿಣಾಮ ಸಮಷ್ಟಿಯ ಮೇಲೆ ಆಗುವುದು.
ಕಾಯಕವಳಿದ ಠಾವಿನಲ್ಲಿ ಜೀವನ ಸುಳಿವುಂಟೆ ?
ದಾಸೋಹವಳಿದ ಠಾವಿನಲ್ಲಿ ದೇವರ ಕೃಪೆಯುಂಟೆ ?
ಕಾಯಕ ದಾಸೋಹವಳಿದ ಠಾವಿನಲ್ಲಿ ದೇವರಕೃಪೆಯುಂಟೇ
ಕಾಯಕ ದಾಸೋಹಗಳುಕೂಡಿದಲ್ಲಿ ಅದೇ
ಶಿವ ಜೀವೈಕ್ಯವು ; ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದಲ್ಲಿ
--ಆಯ್ದಕ್ಕಿ ಲಕ್ಕಮ್ಮ
ಕಾಯಕವು ಎಲ್ಲಿ ಇಲ್ಲವೋ ಅಲ್ಲಿ ಜೀವನಕ್ಕೆ ಅರ್ಥವಿಲ್ಲ ; ದಾಸೋಹ ಇಲ್ಲದಿದ್ದಲ್ಲಿ ದೇವರ ಕೃಪೆ ಇಲ್ಲ. ಕಾಯಕ-ದಾಸೋಹಗಳು ಎಲ್ಲಿ ಇರುತ್ತವೋ ಅಲ್ಲಿ ಪರಮಾತ್ಮನ ಕೃಪೆ, ಸಾಮರಸ್ಯ ಒದಗುತ್ತದೆ.
ಮನಶುದ್ದವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ದದಲ್ಲಿ ಕಾಯಕವ ಮಾಡುವಲ್ಲಿ
ಸದ್ ಭಕ್ತರಿಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕ !
--ಆಯ್ದಕ್ಕಿ ಲಕ್ಕಮ್ಮ
ಮನಸ್ಸು ಶುದ್ದವಿಲ್ಲದವನಿಗೆ ಯಾವಾಗಲೂ ಹಣದ ಕೊರತೆಯೆ. ಚಿತ್ತಶುದ್ದತೆ ಸಾದಿಸಿ, ಕಾಯಕವನ್ನು ಮಾಡುವವನಿಗೆ ಎಲ್ಲಿ ನೋಡಿದರೂ ಸಂಪತ್ತು ಮತ್ತು ಪರಮತೃಪ್ತಿ. ಕಾಯಕವನ್ನು ದೇವರ ಸೇವೆ ಎಂದು ಭಾವಿಸುವನಾದ ಕಾರಣ ಶರಣನಿಗೆ ದೊರೆಯುವ ಆದಾರಯವು ಪ್ರಸಾದ ಎಂಬ ಸಂತೃಪ್ತಿ ಇರುವುದು.
ಕಾಯಕದಲ್ಲಿ ನಿರತನಾದರೆ,
ಗುರುಗರ್ಶನವಾದರೂ ಮರೆಯಬೇಕು
ಲಿಂಗಪೂಜೆಯಾದರೂ ಮರೆಯಬೇಕು
ಜಂಗಮ ಮುಂದಿದ್ದರೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ, ಅಮರೇಶ್ವರ
ಲಿಂಗವಾಯಿತ್ತಾದರೂ ಕಾಯಕದೊಳಗು.
--ಆಯ್ದಕ್ಕಿ ಮಾರಯ್ಯ
ಕಾಯಕದಲ್ಲಿ ತೊಡಗಿದಾಗ ಗುರುದರ್ಶನ, ಲಿಂಗ ಪೂಜೆಗಳನ್ನಾದರೂ ಮರೆಯಬೇಕು. ಜಂಗಮ ಮುಂದಿದ್ದರೂ ಹಂಗಿಲ್ಲದೆ ಇರಬೇಕು. ಪರಮ್ಮಾತ್ಮನಾದರೂ ಕಾಯಕ ಮಾಡಲೇಬೇಕು. ಏಕೆಂದರೆ ಕಾಯಕವೇ ಕೈಲಾಸ.
ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು
ದಾಸೋಹವ ಮಾಡಬಹುದೇ ?
ಒಮ್ಮನವ ತಂದು ಒಮ್ಮನದಲ್ಲಿಯೇ ಮಾಡಿ
ಇಮ್ಮನವಾಗದ ಮುನ್ನವೇ ಮಾರಯ್ಯ
ಪ್ರಿಯ ಅಮರೇಶ್ವರ ಲಿಂಗಕ್ಕೆ ಸಲ್ಲಬೇಕು.
--ಆಯ್ದಕ್ಕಿ ಲಕ್ಕಮ್ಮ
ಭಕ್ತರು ಕಾಯಕದಿಂದ ಬಂದುದು ತಾನೇ ಎಂದು ಮನಸ್ಸಿಗೆ ಬಂದಂತೆ ಗಳಸಿ, ಮನಸ್ವೇಚ್ಚೆ ದಾಸೋಹಕ್ಕೆ ಖಚರ್ು ಮಾಡಬಾರದು. ಒಂದೇ ಮನಸ್ಸಿನಿಂದ ಕಾಯಕ ಮಾಡಿ ತರಬೇಕು. ಒಂದೇ ಮನದಿಂದ ದಾಸೋಹ ಮಾಡಬೇಕು. ತತ್ತ್ವಭ್ರಷ್ಟತೆಗೆ ಅವಕಾಶ ನೀಡಬಾರದು.
ಲಿಂಗಾಚಾರ-ಏಕದೇವನಿಷ್ಠೆ | ಶಿವಾಚಾರ-(ಸಾಮಾಜಿಕ ಸಮಾನತೆ) |