Previous ಲಿಂಗಾಯತ ಧರ್ಮ ಮತ್ತು ಇಷ್ಟಲಿಂಗಪೂಜೆ ಲಿಂಗಾಯತ ಸಾಧಕನ ದಿನಚರಿ Next

ಲಿಂಗಯೋಗ-ಸರ್ವಾಂಗ ಪರಿಪೂರ್ಣ ಯೋಗ

✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

'ಬಸವ ಯೋಗ'

ಮಾನವನಲ್ಲಿ ಸುಪ್ತವಾಗಿರುವ ಶಕ್ತಿಗಳನ್ನು ಜಾಗೃತೀಕರಿಸುವುದೇ ಯೋಗ.ಆತ್ಮನಾಶ್ರಯದಲ್ಲಿ ಕಾರ್ಯಮಾಡುವ ತತ್ತಗಳು ಐದು ಕಾಯ, ಪ್ರಾಣ, ಮನ, ಬುದ್ಧಿ, ಹೃದಯ, ಇವುಗಳ ಶಕ್ತಿಗಳು ಐದು. ಕ್ರಿಯಾಶಕ್ತಿ, ಪ್ರಾಣಶಕ್ತಿ, ಚಿಂತನಾಶಕ್ತಿ, ವಿಚಾರಶಕ್ತಿ ಮತ್ತು ಭಾವನಾಶಕ್ತಿ, ಈ ಐದು ತತ್ತ್ವಗಳ ಆಧಾರದಲ್ಲಿ ಸುಳಿವ ಐದು ಶಕ್ತಿಗಳನ್ನು ಅವಲಂಬಿಸಿ ಕರ್ಮಯೋಗ, ಹಠಯೋಗ, ಧ್ಯಾನಯೋಗ,ಜ್ಞಾನಯೋಗ, ಭಕ್ತಿಯೋಗ ಎಂಬ ಐದು ಯೋಗಗಳನ್ನು ಸಂಯೋಜಿಸಲಾಗಿದೆ.ಈ ಯೋಗಗಳಲ್ಲಿ ಒಂದೊಂದನ್ನೇ ಆಳವಡಿಸಿಕೊಂಡಾಗ ಅವು ಏಕಮುಖ ಬೆಳವಣಿಗೆಗೆ ಕಾರಣವಾಗುವುವು. ಕರ್ಮಯೋಗದಿಂದ ಅನ್ನಮಯಕೋಶವಾದ ಶರೀರಕ್ಕೆ, ಹಠಯೋಗದಿಂದ ಪ್ರಾಣಮಯ ಕೋಶಕ್ಕೆ, ಧ್ಯಾನಯೋಗದಿಂದ ಮನೋಮಯ ಕೋಶಕ್ಕೆ, ಜ್ಞಾನಯೋಗದಿಂದ ವಿಜ್ಞಾನಮಯ ಕೋಶವಾದ ಬುದ್ಧಿಗೆ, ಭಕ್ತಿಯೋಗದಿಂದ ಆನಂದಮಯ ಕೋಶವಾದ ಹೃದಯಕ್ಕೆ-ಹೀಗೆ ಸಂಸ್ಕಾರ ದೊರೆಯುತ್ತದೆ. ಇದನ್ನರಿತು ಬಸವಣ್ಣನವರು ಈ ಐದೂ ತತ್ತ್ವಗಳನ್ನು ಸಂಯೋಜಿಸಿ ಸರ್ವಾಂಗೀಣ ಸಂಸ್ಕರಣಗೈಯುವ ಲಿಂಗಯೋಗಕ್ಕೆ ರೂಪುರೇಷೆ ಹಾಕಿದ್ದಾರೆ.

ಬಸವನ ಯೋಗದಿಂ ಹಸನಾಯಿತೈ ಲೋಕ
ಚಂದದಿಂ ಬಸವ ಗತಿಯೆನಲು ಭವವು
ಹಿಂಗುವುದು ಬಸವಯ್ಯ ಬಸವಣ್ಣ ಶರಣಾರ್ಥಿಯೆಂದೆನುತ
ನಾನು ಬದುಕಿದೆನಯ್ಯ ಯೋಗಿನಾಥ
- ಸಿದ್ದರಾಮೇಶ್ವರ

ಇಷ್ಟಲಿಂಗ ಪೂಜೆಯನ್ನು ಜೀವಾಳವಾಗಿರಿಸಿಕೊಂಡ ಬಸವಯೋಗವು ಭಾರತೀಯ ವಿವಿಧ ಯೋಗಗಳ ಶ್ರೇಷ್ಠಾಂಶಗಳನ್ನು ಒಳಗೊಂಡ ಪರಿಪೂರ್ಣ ಯೋಗವಾಗಿದೆ. ಆ ಯೋಗಗಳು ವಿವಿಧ ಕುದುರೆಗಳಂತಿದ್ದರೆ ಇದು ಆ ಐದೂ ಕುದುರೆಗಳನ್ನು ಕಟ್ಟಿದ ರಥದಂತಿದೆ. ಸಾಧನಾಮಗ್ನನಾದ ಜೀವಾತ್ಮನೇ ರಥಿಕ; ದೇವರಲ್ಲಿ ನಂಬುಗೆಯೇ ಈ ರಥದ ಸಾರಥಿ.

ಈ ನೂತನ ಯೋಗವನ್ನು 'ಬಸವನ ಯೋಗ' ಎಂದು ಸಿದ್ಧರಾಮೇಶ್ವರರು ಸಂಬೋಧಿಸಿದ್ದಾರೆ. ನೂತನವಾದ, ಆಧುನಿಕವಾದ ಈ ಯೋಗವು ಹಿಂದಿನ ಪ್ರಚಲಿತ ಯೋಗಗಳ ಸಮನ್ವಯ ರೂಪವೇ ಆಗಿದ್ದರೂ, ಎಲ್ಲವುಗಳಿಂದ ವಿಶೇಷವಾಗಿ ಭಿನ್ನವಾಗಿ ಇದೆ. ಶೈವ ಪರಂಪರೆಯಲ್ಲಿ ಬರುವ ಶಿವ ಯೋಗದಿಂದ ಇದನ್ನು ಬೇರ್ಪಡಿಸಲು ವಿಚಾರ ಸ್ಪಷ್ಟತೆಗಾಗಿ ಈ ಯೋಗವನ್ನು 'ಬಸವ ಯೋಗ' ಎಂದು ಸಂಬೋಧಿಸೋಣ. ಷಟಸ್ಥಲ ದರ್ಶನವನ್ನು ನೆಲೆಗಟ್ಟಾಗಿರಿಸಿಕೊಂಡು ಇಷ್ಟಲಿಂಗ ಪೂಜೆಯನ್ನೇ ಜೀವಾಳವಾಗಿ ಆಚರಿಸುವ ಈ ಯೋಗದಲ್ಲಿ ಇತರ ಯೋಗಗಳ ಪ್ರಮುಖ ಆಂಶಗಳು ಹೇಗೆ ಸಮಾವೇಶವಾಗಿರುವುವೆಂಬುದನ್ನು ಗಮನಿಸೋಣ. ಆರಾಧ್ಯವಸ್ತುವಾದ ಇಷ್ಟಲಿಂಗವನ್ನಿರಿಸಿಕೊಂಡು ಪೂಜೆಗೆ ಕುಳಿತುಕೊಂಬ ಸಾಧಕನಿಗೆ ಪದ್ಮಾಸನ, ಸಿದ್ಧಾಸನ, ಸ್ವಸ್ತಿಕಾಸನ, ಸುಖಾಸನ ಇವುಗಲ್ಲಿ ಒಂದರ ಸಿದ್ದಿ ಅವಶ್ಯಕ. ಇದು ಹಠಯೋಗದ ಒಂದಂಶ, ನಂತರ ಅಷ್ಟ ವಿಧಾರ್ಚನೆಯನ್ನು ಹೃದಯ ತುಂಬಿ ಮಾಡುವಾಗ ಭಕ್ತಿಯೋಗದ ಸಾರವನ್ನು ನೋಡಬಹುದು.

ಅಷ್ಟವಿಧಾರ್ಚನೆಯ ಮಾಡುವುದು (ಭಕ್ತಿಯೋಗ)
ಮಾಡಿದ ಪೂಜೆಯ ನೋಡುವುದು (ತ್ರಾಟಕಯೋಗ-ಧ್ಯಾನಯೋಗ)
ಶಿವತತ್ತ್ವ ಗೀತವ ಹಾಡುವುದು (ಜ್ಞಾನ ಯೋಗ)

ಶಿವನ ಮುಂದೆ ನಲಿದಾಡುವುದು
ಭಕ್ತಿ ಸಂಭಾಷಣೆಯ ಮಾಡುವುದು
ನಮ್ಮ ಕೂಡಲಸಂಗಮದೇವನ ಕೂಡುವುದು(ಲಿಂಗಾಂಗಯೋಗ)

ಎರಡನೆಯ ಹಂತದ ಲಿಂಗಸ್ತವನದಲ್ಲಿ ದೇವರ, ಅವನ ಕಾರುಣ್ಯದ ಸ್ವರೂಪವನ್ನು ವಿವೇಚಿಸುವಾಗ ಅದು ಜ್ಞಾನಯೋಗದ ಅರಿವನ್ನು ಅಳವಡಿಸುವುದು. ಮೂರನೆಯ ಹಂತದ ಲಿಂಗಾನುಸಂಧಾನದಲ್ಲಿ ಪ್ರಾಣಚಲನೆಯ ನಿಯಂತ್ರಣ, ದೃಷ್ಟಿಯೋಗ- ಉಭಯವೂ ಸೇರಿ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸುವವು; ನಾಲ್ಕನೆಯದಾದ ಲಿಂಗಧ್ಯಾನದಲ್ಲಿ ಅಂತರ್‌ ತ್ರಾಟಕ-ಮಂತ್ರಧ್ಯಾನ– ಮನೋರ್ಲಯ-ಈ ಮೂರೂ ಸೇರಿ ಸಂಪೂರ್ಣ ಧ್ಯಾನಯೋಗಕ್ಕೆ ನಾಂದಿ ಹಾಡುವವು. ಐದನೇ ಹಂತದಲ್ಲಿ ಲಿಂಗೋದಕ-ಲಿಂಗಪ್ರಸಾದಗಳು ಪರಮಾತ್ಮ ಕರುಣೆಯ ಪ್ರತೀಕವಾಗಿ ಸ್ವೀಕರಿಸಲ್ಪಡುವವು. ಹೀಗೆ ಲಿಂಗಾಂಗಯೋಗದಲ್ಲಿ ಭಕ್ತಿ-ಜ್ಞಾನ-ಸಾಧನೆ-ಯೋಗಗಳಿಗೆ ಪೂರ್ಣ ಅವಕಾಶವಿದೆ.

ಗ್ರಂಥ ಋಣ:
೧) ದೇವ ಪೂಜಾ ವಿಧಾನ, ಲೇಖಕರು: ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಲಿಂಗಾಯತ ಧರ್ಮ ಮತ್ತು ಇಷ್ಟಲಿಂಗಪೂಜೆ ಲಿಂಗಾಯತ ಸಾಧಕನ ದಿನಚರಿ Next