Previous ಲಿಂಗ ವಿಭೂತಿ, Vibhooti Next

ಜಂಗಮ

*

ಜಂಗಮ

ಜಂಗಮ ಎಂದರೆ 'ಚಲಿಸುವುದು. ಈ ಅರ್ಥದಲ್ಲಿ ಚಲಿಸುವ ಪ್ರಾಣಿಗಳೆಲ್ಲ ಜಂಗಮವೇ. ಮತ್ತೊಂದರ್ಥದಲ್ಲಿ ಜಂಗಮ ಎಂದರೆ, ಒಂದೇ ಕಡೆ ನೆಲೆ ನಿಲ್ಲದೆ ಧರ್ಮ ಮತ್ತು ಜ್ಞಾನ ಪ್ರಚಾರ ಮಾಡುವ ವ್ಯಕ್ತಿ.

ಶರಣಧರ್ಮದ ಜ್ಞಾನವನ್ನು ಭಕ್ತರಿಗೆ ತಿಳಿಸಿಕೊಡುವುದು ಮತ್ತು ಶರಣಧರ್ಮವನ್ನು ಅಲಕ್ಷಿಸಿದವರನ್ನು ಮತ್ತೆ ಸನ್ಮಾರ್ಗಿಗಳನ್ನಾಗಿ ಮಾಡುವುದು ಜಂಗಮನ ಕಾಯಕ. ಹಾಗೆ ಮಾಡುವುವನು ಜ್ಞಾನಿಯೂ, ವಿರಕ್ತನೂ ಆಗಿರಬೇಕು.

ಲಿಂಗಸಾಕ್ಷಾತ್ಕಾರ ಮಾಡಿಕೊಂಡವನೇ ಜಂಗಮ; ಅವನು ಚಲಿಸುವ ಲಿಂಗ (ಅಖಂಡ, ಅವಿರಳ ಅನಂತ ಪರಶಿವ ಚಲಿಸದ ಲಿಂಗ), ಆದುದರಿಂದ ಅವನನ್ನು ಕೆಲವು ವೇಳೆ ಜಂಗಮಲಿಂಗವೆಂದೂ, ಚರಮೂರ್ತಿಯೆಂದೂ ಕರೆಯಲಾಗುತ್ತದೆ. ಅಷ್ಟೇ ಅಲ್ಲ. ಅವನು ಗುರು ಮತ್ತು ಲಿಂಗಗಳಿಗೆ ಸಮ, ಎಂದೂ ಪರಿಗಣಿಸಲಾಗಿದೆ.

ಮರಕ್ಕೆ ಬೇರು ಬಾಯಿಯೆಂದು ತಳಕ್ಕೆ ನೀರನೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ.
ಲಿಂಗದ ಬಾಯಿ ಜಂಗಮವೆಂದು ಪಡಿಪದಾರ್ಥವ ನೀಡಿದಡೆ
ಮುಂದೆ ಸಕಲ ಪಡಿಪದಾರ್ಥವನೀವನು.
ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ
ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ. (೧: ೪೨೧)

ಚರಿಸಿ ಜಂಗಮವೆನಿಸಿತ್ತಯ್ಯಾ ಲಿಂಗವು.
ನೆಲಸಿ ಲಿಂಗವೆನಿಸಿತ್ತಯ್ಯಾ ಲಿಂಗವು.
ಇದರಿರವ ಅರುಹಿದಲ್ಲಿ ಗುರುವೆನಿಸಿತ್ತಯ್ಯಾ ಲಿಂಗವು.
ಗುರು ಲಿಂಗ-ಜಂಗಮಕ್ಕೆ ತಿಲಾಂಶ ಭೇದವಿಲ್ಲ ನೋಡಾ,
ಎಲೆ ದೇವಾ. ಭೇದಿಸದವಗೆ ಭವಬಾಧೆ ತಪ್ಪುವದೆ,
ದೇವರ ದೇವ ಕಪಿಲಸಿದ್ಧಮಲ್ಲಿಕಾರ್ಜುನದೇವಾ? (೪: ೧೭೭೪)

ಜಂಗಮನು ವಿರಕ್ತನಾದುದರಿಂದ, ಅವನು ಸಾಧಾರಣ ಜನರಿಗಿರುವ ಕೋಪ-ತಾಪ, ಸ್ವಾರ್ಥ ಆಸೆ, ಜಾತಿಭೇದ ಭಾವನೆ ಮುಂತಾದವುಗಳನ್ನು ಗೆದ್ದಿದ್ದಾನೆ.

ಕೋಪ-ತಾಪವ ಬಿಟ್ಟು ಭ್ರಾಂತಿಭ್ರಮೆಯಂ ಬಿಟ್ಟು
ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ
ಇಂತೀ ಕಡುಲೋಭದ ರುಚಿ ಹಿಂಗಿ
ಜಂಗಮವಾದಲ್ಲದೆ, ಭವ ಹಿಂಗದು ಕಾಣಾ ಗುಹೇಶ್ವರ. (೨: ೧೧೪೫)

ನಾವು ಮೀರಿದ ಸ್ಥಲದ ವಿರಕ್ತರೆಂದು ಹೇಳುವ ಅಣ್ಣಗಳಿರಾ
ನೀವು ಮೀರಿದ ಸ್ಥಲದ ವಿರಕ್ತರಾದ ಬಗೆಯ ಹೇಳಿರಣ್ಣ.
ಅರಿಯದಿರ್ದಡೆ ಹೇಳಿಹೆ ಕೇಳಿರಣ್ಣ,
ಮೀರಿನಿಂದ ವಿರಕ್ತನ ವಿಚಾರದ ಭೇದವ.
ಅನಾದಿ ಚಿದ್ಬಿಂದುವ ಅಧೋದ್ವಾರದಲ್ಲಿ ಬೀಳಗೊಡದೆ,
ಸದ್ಗುರು ಕರುಣಕಟಾಕ್ಷೆಯಿಂದ ಮಹಾಮಂತ್ರವ ಪಡೆದು,
ಆ ಚಿನ್ಮಂತ್ರ ಬಲದಿಂದ ಊರ್ಧ್ವಕ್ಕೆ ಮುಖವ ಮಾಡಿ,
ಮೇಲುಗಿರಿ ಸಿಂಹಾಸನದಲ್ಲಿ ಮೂರ್ತಗೊಂಡಿರುವ
ಪರಶಿವಲಿಂಗದ ಮಹಾಬೆಳಗಿನೊಳಗೆ ಏಕಾರ್ಥವ ಮಾಡಬೇಕು.
ಜಿಹ್ವೆಯ ತುದಿಯ ಅಜ್ಞಾನದ ಹುಸಿ ಕುಶಬ್ದ ಕುರುಚಿಯ ನೀಗಬೇಕು.
ಸದ್ಗುರುಮುಖದಿಂದ ನಿಜನುಡಿ, ಘನಪಾದೋದಕ,
ಪ್ರಸಾದಮಂತ್ರವ ಪಡೆದು, ಸದ್ದರ್ಮರೂಪದಿಂದಿರಬೇಕು.
ಸರ್ವಾಚಾರಸಂಯುಕ್ತವಾದ ಭಕ್ತನೆ ನಿಜಮುಕ್ತಿಮಂದಿರವೆಂದು,
ಭಾವ ಮನ ಕಾಯ ತುಂಬಿ, ಪರಿಪೂರ್ಣ ತೃಪ್ತನಾದಾತನೆ
ಮೀರಿದ ಸ್ಥಲದ ವಿರಕ್ತ ನೋಡಾ, ಕಲಿದೇವರದೇವ. (೮: ೬೪೧)

ನಿಂದಿಸಿದಲ್ಲಿ ಕುಂದುವನಲ್ಲ ಜಂಗಮನು.
ವಂದಿಸಿದಲ್ಲಿ ಆನಂದಮಯನಲ್ಲ ಜಂಗಮನು.
ಬಂದುಪಚಾರದಲ್ಲಿ ಸಂದುಗೊಳ್ಳುವನಲ್ಲ ಜಂಗಮನು.
ಬಂದಲ್ಲಿ ನೀಡದಿರೆ ಕ್ರೋಧಿಯಲ್ಲ ಜಂಗಮನು.
ಇಂದುಧರ ಕಪಿಲಸಿದ್ಧಮಲ್ಲನೆಂಬೆ ಇಂತಪ್ಪ ಜಂಗಮನು. (೪: ೧೪೮೬)

ಕಾವಿಬಟ್ಟೆ, ವಿಭೂತಿ, ಬೋಳಾದ ಮಂಡೆ, ರುದ್ರಾಕ್ಷಿಮಾಲೆ ಅವನ ಬಾಹ್ಯ ಲಕ್ಷಣಗಳಾಗಿರುತ್ತವೆ. ಆದರೆ, ಆ ಬಾಹ್ಯಲಕ್ಷಣಗಳು ಆಂತರಿಕ ಭಾವನೆಗಳನ್ನು ತೋರಿಸಬೇಕು; ಅಲ್ಲದಿದ್ದರೆ ಅವನು ಭಕ್ತರ ದೃಷ್ಟಿಯಲ್ಲಿ ಕಪಟ ವೇಷಧಾರಿಯಾಗುತ್ತಾನೆ.

ಆಪ್ಯಾಯನಕ್ಕೆ ನೀಡುವೆ, ಲಾಂಛನಕ್ಕೆ ಶರಣೆಂಬೆ
ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದಡೆ
ಕೂಡಲಸಂಗಮದೇವಾ,
ನೀ ಸಾಕ್ಷಿಯಾಗಿ ಛೇ ಎಂಬೆನು. (೧: ೭೫೮)

ಪರರಾಣಿಯರ ನೋಡುವಲ್ಲಿ, ಅಂಧನಾಗಿಪ್ಪ ನೋಡಾ ಜಂಗಮನು.
ಪರಧನವ ಕಂಡಲ್ಲಿ, ಹುಲಿಯ ಕಂಡ ಹುಲ್ಲೆಯಂತೆ
ಭೀತಿಬಡುವ ನೋಡಾ ಜಂಗಮನು.
ದುರ್ನರರ ಸಂಭಾಷಣೆಯ ಕೇಳುವಲ್ಲಿ
ಅತಿಮೂರ್ಖನಾಗಿಪ್ಪ ನೋಡಾ ಜಂಗಮನು.
ದುಷ್ಕರ್ಮ ಪಥದೊಳರಸುವಲ್ಲಿ, ಕಡು ಜಡ ಹೆಳವ ನೋಡಾ ಜಂಗಮನು.
ಅಕ್ಷಾಂಗ ವಿಷಯಗಳೊಳು ನಿಷ್ಕರುಣಿಯಾಗಿಪ್ಪ ನೋಡಾ ಜಂಗಮನು.
ಶಿವನಿಂದಕರ ಸ್ವರಗೇಳುವಲ್ಲಿ, ಬಧಿರನಾಗಿಪ್ಪನೋಡಾ ಜಂಗಮನು.
ದುರಾತ್ಮರಿಗೆ ಜ್ಞಾನದ್ರವ್ಯ ಕೊಡುವಲ್ಲಿ ಲೋಭಿಯಾಗಿಪ್ಪ ನೋಡಾ ಜಂಗಮನು,
ಕಪಿಲಸಿದ್ಧಮಲ್ಲಿಕಾರ್ಜುನನು. (೪: ೧೭೬೪)

ಮಂಡೆ ಬೋಳಾದಡೇನೊ, ಹುಟ್ಟು ಬೋಳಾಗದನ್ನಕ್ಕರ?
ತನು ನಿರ್ವಾಣವಾದಡೇನೊ, ಆಸೆ ನಿರ್ಮಾಣವಾಗದನ್ನಕ್ಕರ?
ಇಂದ್ರಿಯ ನಿಗ್ರಹಿಯಾದಡೇನೊ; ಷಟ್‌ ಸ್ಥಲಾನುಗ್ರಹವಾಗದನ್ನಕ್ಕರ?
ಸೌರಾಷ್ಟ್ರ ಸೋಮೇಶ್ವರಲಿಂಗವು ಬರಿದೆ ಒಲಿವನೆ? (೬: ೧೦೫೬)

ಜಂಗಮನು ವಿರಕ್ತನಾದುದರಿಂದ ಅವನಿಗೆ ಸಮಾಜವೇ ಕುಟುಂಬ. ಸಮಾಜದ ಹಿತಕ್ಕೆ ಓಡಾಡುವ ಅವನ ಹಿತವನ್ನು ಸಮಾಜವೇ ನೋಡಿಕೊಳ್ಳಬೇಕು. ಆದರೆ ಬರೀ ಬೇಡುವುದೇ ಅವನ ಕಾಯಕವಾಗಬಾರದು.

ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು
ಮನೆಮನೆ ತಪ್ಪದೆ ತಿರುಗುವ ತುಡುಗುಣಿಯಂತೆ
ಕಾಡಲಾಗದು ಭಕ್ತನ, ಬೇಡಲಾಗದು ಭವಿಯ.
ಕಾಡಿ ಬೇಡಿ ನೀವು ಒಲಿಸಿಕೊಂಡಡೆ,
ಬೇಂಟೆಯ ಶ್ವಾನ ಮೊಲಕ್ಕೆ ಬಾಯಿದೆರೆದಂತೆ ಗುಹೇಶ್ವರಾ. (೨: ೪೬೮)

ಜಗದ ಕರ್ತನ ಕೈಯಲ್ಲಿ
ಬೇಡುವಾತ ಜಂಗಮನಲ್ಲ, ಬೇಡಿಸಿಕೊಂಬಾತ ಭಕ್ತನಲ್ಲ,
ಬೇಡದೆ ಆ ಭಕ್ತ ಮಾಡಿದ ಮಾಟವ ಪರಿಣಾಮಿಸಬಲ್ಲಡೆ ಜಂಗಮ.
ಬೇಡಿಸಿಕೊಳ್ಳದೆ ಆ ಜಂಗಮ ಇಂಗಿತವನರಿದು
ಅವನ ಮನದಿಚ್ಛೆಯ ಸಲಿಸಬಲ್ಲಡೆ ಆತನೆ ಪರಮಭಕ್ತ.
ಆ ಭಕ್ತ ನನ್ನದು ನಾನೆಂದು ನುಡಿದಡೆ
ನಾಯ ಮಾಂಸ, ಸತ್ತ ಹೆಣನ ಮಲವು!
ಇದು ಕಾರಣ-ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ
ಬೇಡಿಸಿಕೊಳ್ಳದೆ ಮಾಡುವ ಭಕ್ತನುಂಟಾದಡೆಯೂ
ಬೇಡದೆ ಮಾಡಿಸಿಕೊಂಬುವ ಜಂಗಮಪೂರ್ವವಯ್ಯಾ. (೩: ೧೩೯೭)

ಗುರು ಉಪದೇಶ ಮಂತ್ರವೈದ್ಯ,
ಜಂಗಮ ಉಪದೇಶ ಶಸ್ತ್ರವೈದ್ಯ ನೋಡಾ,
ಭವರೋಗವ ಕಳೆವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ. (೧: ೬೫೪)

ಯಾರು ಬೇಕಾದರೂ ಜಂಗಮ(ವಿರಕ್ತ)ರಾಗಬಹುದು. ಯಾರು ಭವಿತನಕ್ಕೆ ಹೇಸಿ ಭಕ್ತರಾಗಿ, ಶಿವಸಾಕ್ಷಾತ್ಕಾರ ಪಡೆದು, ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾರೋ ಅವರೆಲ್ಲರೂ ಜಂಗಮರೆ; ಅಷ್ಟೇ ಹೊರತು, ಜಾತಿಯಿಂದ ಜಂಗಮರಲ್ಲ.

ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೋ;
ಜಾತಿ ಘನವೊ ಗುರುದೀಕ್ಷೆ ಘನವೊ?
ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ
ಗುರುದೀಕ್ಷೆ ಪಡೆದು, ಗುರುಕರಜಾತರಾಗಿ
ಜಾತಕವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ?
ಜಾತಿವಿಡಿದು ಕಳೆಯಿತ್ತೆ ಜಾತಿತಮವು? ಅಜಾತಂಗೆ ಆವುದು ಕುಲ?
ಆವ ಕುಲವಾದಡೇನು ದೇವನೊಲಿದಾತನೆ ಕುಲಜ.
---
ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು
ಅವನೊಡಗೂಡಿಕೊಂಡು ನಡೆದು ಜಾತಿ ಎಂಜಲುಗಳ್ಳರಾಗಿ
ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು
ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ
ಹಂದಿ-ನಾಯಂತೆ ಒಡಲ ಹೊರೆವ ದರುಶನ ಜಂಗುಳಿಗಳು
ಜಂಗಮಪಥಕ್ಕೆ ಸಲ್ಲರಾಗಿ,
ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ,
ಜಂಗಮವಿಲ್ಲ ಜಂಗಮಪ್ರಸಾದವಿಲ್ಲ.
ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗಳ
ಸ್ವಯ-ಚರ-ಪರವೆಂದಾರಾಧಿಸಿ ಪ್ರಸಾದವ ಕೊಳಸಲ್ಲದು
ಕಾಣಾ ಕೂಡಲಚೆನ್ನಸಂಗಮದೇವಾ. (೩: ೧೨೩೦)

ಶ್ರೀಗುರು ಶಿಷ್ಯನ ಭವಿಪೂರ್ವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ
ಆ ಭಕ್ತ ಹೋಗಿ ಜಂಗಮವಾಗಿ, ಗುರುವಿನ ಮಠಕ್ಕೆ ಬಂದಡೆ
ಆ ಜಂಗಮವೆನ್ನ ಶಿಷ್ಯನೆಂದು ಗುರುವಿನ ಮನದಲ್ಲಿ ಹೊಳೆದಡೆ
ಪಂಚಮಹಾಪಾತಕ,
ಆ ಜಂಗಮಕ್ಕೆ ಎನ್ನ ಗುರುವೆಂದು ಮನದಲ್ಲಿ ಭಯಭೀತಿ ಹೊಳೆದಡೆ ರೌರವನರಕ.
ಇಂತೀ ಭೇದವ ಕೂಡಲಚೆನ್ನಸಂಗಯ್ಯನಲ್ಲಿ ಶರಣರೆ ಬಲ್ಲರು. (೩: ೧೬೨೪)

ಜನನ ಮರಣ ದೇಹ ಧರ್ಮವಲ್ಲದೆ ಜಂಗಮಕ್ಕೆಲ್ಲಿಯದೋ !
ಕ್ಷುದಾ ತೃಷೆ ಪ್ರಾಣ ಧರ್ಮವಲ್ಲದೆ ಜಂಗಮಕ್ಕೆಲ್ಲಿಯದೋ !
ಸುಖ ದುಃಖ ಮನೋಧರ್ಮವಲ್ಲದೆ ಜಂಗಮಕ್ಕೆಲ್ಲಿಯದೋ !
ಜ್ಞಾನ ಅಜ್ಞಾನಂಗಳು ಮುಮುಕ್ಷುವಿಗಲ್ಲದೆ ನಿಮ್ಮಲ್ಲಿ ಸಮರಸನಾದ
ಸಚ್ಚಿದಾನಂದ ಶಿವಯೋಗಿ ಜಂಗಮಕ್ಕೆಲ್ಲಿಯದೋ !
ಕಪಿಲಸಿದ್ದ ಮಲ್ಲಿಕಾರ್ಜುನ -ಶಿವಯೋಗಿ ಸಿದ್ಧರಾಮೇಶ್ವರ.

ಜನನ ಮರಣ ದೇಹ ಧರ್ಮಗಳು ; ಜಂಗಮನು ಇವಕ್ಕೆ ಅತೀತನಾಗಿ ಇರುವನು. ಹಸಿವು ನೀರಡಿಕೆ ಪ್ರಾಣನ ಧರ್ಮಗಳು ; ಜ್ಞಾನ ಅಜ್ಞಾನಗಳು ಇನ್ನೂ ಸಾಧಕಾವಸ್ಥೆ ಯಲ್ಲಿರುವವನ ಲಕ್ಷಣಗಳು ನಿಜಜ್ಞಾನಿಯೂ ಸಿದ್ಧಪುರುಷನೂ ಆದ ಜಂಗಮನಿಗೆ ದೇಹ, ಪ್ರಾಣ, ಮನೋಧರ್ಮಗಳು ಕಾಡವು.

ಬಯಲ ರೂಪ ಮಾಡಬಲ್ಲಾತನೆ ಶರಣನು ;
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನೆಂಬೆ
ಆ ರೂಪ ಬಯಲ ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿಯೆಂಬೆ ?
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೆ ಕೂಡಲ ಸಂಗಮದೇವಾ ? -ಬಸವಣ್ಣನವರು

ನಿರಾಕಾರವಾದ ಬಯಲನ್ನು ಸಾಕಾರಗೊಳಿಸುವುದೊಂದು ಸಾಧನೆ. ಸಾಕಾರವನ್ನು ಅರ್ಚಿಸುತ್ತ ನಿರಾಕಾರಕ್ಕೆ ಹೋಗುವುದು ಮತ್ತೊಂದು ಸಾಧನೆ. ಇದನ್ನರಿತವನೇ ನಿಜ ಶರಣ, ನಿಜ ಲಿಂಗಾನುಭಾವಿ.

ತಿರುಕರೆನ್ನದಿರಿ ಭೋ ಎನ್ನ ತಂದೆಗಳನ್ನು
ತಿರುಕರೆನ್ನದಿರಿ ಭೋ ಎನ್ನ ಬಂಧುಗಳನ್ನು
ತಿರುಕರೆನ್ನದಿರಿ ಭೋ ಎನ್ನ ದೇವರನು
ತಿರುಕರೆನ್ನದಿರಿ ಭೋ ಎನ್ನ ಒಡೆಯರನು
ದೇಹಿ ಎಂದಡೆ ನಾಸ್ತಿ ಎಂಬುದರ ಬೇಹು
ನೋಡಬಂದ ಕಾಣಾ, ಕೂಡಲ ಸಂಗಮದೇವಾ. -ಬಸವಣ್ಣನವರು

ಜಂಗಮ ರೆಂದರೆ ತ್ಯಾಗುಗಳು, ನಿಸ್ವಾರ್ಥ ಸಮಾಜ ಸೇವಕರು, ಅವರು ತಾನು-ತನ್ನದು ಎಂಬ ಸೀಮಿತ ಬಂಧನ ಹರಿದುಕೊಂಡು ಧರ್ಮ-ಸಮಾಜಕ್ಕಾಗಿ ತಾಗಿಗಳಾಗಿ ನಿಂತವರು. ಅವರನ್ನು ತಿರುಕರು ಎನ್ನಬೇಡಿರಿ. 'ಸಮಾಜ-ಧರ್ಮಗಳಿಗಾಗಿ ನೀಡು' ಎಂದು ಕೇಳಿದಾಗ 'ಇಲ್ಲ' ಎನ್ನುವವರನ್ನು ಪರೀಕ್ಷಸಲಿಕ್ಕೆ ಬಂದವರು ಅವರು.

ಶ್ರೀ ಗುರು ಶಿಷ್ಯನ ಭವಿಪೂರ್ವಾಶ್ರಯವ ಕಳೆದು
ಭಕ್ತನ ಮಾಡಿದ ಬಳಿಕ
ಆ ಭಕ್ತ ಹೋಗಿ ಕಂಗಮವಾಗಿ ಗುರುವಿನ ಮಠಕ್ಕೆ ಬಂದಡೆ
ಜಂಗಮವೆನ್ನ ಶಿಷ್ಯನೆಂದು
ಗುರುವಿನ ಮನದಲ್ಲಿ ಹೊಳೆದಡೆ ಪಂಚಮಹಾಪಾತಕ
ಕೂಡಲ ಚನ್ನ ಸಂಗಮದೇವ. -ಚನ್ನಬಸವಣ್ಣನವರು

ಶ್ರೀ ಗುರು ವಿವಿಧ ಜಾತಿಗಳಿಂದ ಬಂದ ಜನರ ಪೂರ್ವಾಶ್ರಯ ಕಳೆದು ಭಕ್ತನನ್ನಾಗಿ ಮಾಡುವನು. ಆ ಭಕ್ತನು ಆಚಾರ ಸಂಪನ್ನನಾಗಿ ಅರವು-ಅನುಭಾವಗಳಿಂದ ಜಂಗಮ ಆಗುವನು. ದೀಕ್ಷೆ ನೀಡಿದ ಗುರುವನ್ನು ಮೀರಿಸುವಂತಹನಾಗಬಹುದು; ಆಗ ಗುರು 'ಇವನು ನನ್ನ ಶಿಷ್ಯ ತಾನೆ' ಎಂಬ ಉದಾಸೀನತೆಯಿಂದಾಗಲಿ, ನನ್ನನ್ನು ಮೀರಿಸಿದನಲ್ಲಾ ಎಂಬ ಮತ್ಸರದಿದಾಗಲೀ ಕಾಣಬಾರದು. ಹಾಗೆ ಕಂಡರೆ ಅದು ಮಹಾಪಾಪ.

ಜಂಗಮಕ್ಕೆ ಮಾತಾಪಿತರಿಲ್ಲ.
ಜಂಗಮಕ್ಕೆ ಮಾತಾಪಿತರಿಲ್ಲ.
ಜಂಗಮಕ್ಕೆ ಜಾತಿ ಬಂಧುಗಳಿಲ್ಲ
ಜಂಗಮಕ್ಕೆ ನಾಮ ರೂಪುಗಳಿಲ್ಲ
ಜಂಗಮಕ್ಕೆ ಸೀಮೆ ಸಂಗಗಳಿಲ್ಲ
ಜಂಗಮಕ್ಕೆ ಕುಲಗೋತ್ರಗಳಿಲ್ಲ
ಜಂಗಮಕ್ಕೆ ಮಲಮಾಯೆಗಳಿಲ್ಲ
ನೋಡಾ ಅಖಂಡೇಶ್ವರಾ.

ಸ್ಥಾವರವು ಜಂಗಮವು ಒಂದೆ ಎಂಬಿರಿ
ಮಂದಮತಿ ಮಾನವರಿರಾ ನೀವು ಕೇಳಿರೋ,
ಸ್ಥಾವರವು ಅಚೇತನವು. ಜಂಗಮವು ಚೇತನ ಸ್ವರೂಪವು.
ಎಂದು ಮಾಡಿದ ಭಕ್ತಂಗೊಲಿದು ನೀಡಿದ ಪದಾರ್ಥವ ಕೈಕೊಂಡು
ಮುಕ್ತಿಯ ಕೊಡುವ ಮಹಾಘನ ಜಂಗಮವೆ ಅಧಿಕವೆಂದರಿಯದೆ
ಬರಿದೆ ಸ್ಥಾವರ ಘನವೆಂಬ ಬಿನುಗು ಜೀವನನೇನೆಂಬೆನಯ್ಯ ಅಖಂಡೇಶ್ವರಾ.

[1] ಈ ತರಹದ ಸಂಖ್ಯೆಯ ವಿವರ: ಸವಸ-1/241 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-241 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
*
Previous ಲಿಂಗ ವಿಭೂತಿ, Vibhooti Next