ಶಿವಜನ್ಮದಲ್ಲಿ ಹುಟ್ಟಿ, ಲಿಂಗೈಕ್ಯರಾಗಿ,
ತನ್ನ ಅಂಗದ ಮೇಲೆ ಲಿಂಗವಿರುತಿರಲು,
ಅನ್ಯರನೆ ಹಾಡಿ, ಅನ್ಯರನೆ ಹೊಗಳಿ,
ಅನ್ಯರ ವಚನವ ಕೊಂಡಾಡಲು, ಕರ್ಮ ಬಿಡದು, ಭವಬಂಧನ !
ಶ್ವಾನಯೋನಿಯಲ್ಲಿ ಬಪ್ಪುದು ತಪ್ಪದು !
ಇದು ಕಾರಣ, ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಬಕರಿಗೆ
ಮಳಲ ಗೋಡೆಯನಿಕ್ಕಿ, ನೀರಲ್ಲಿ ತೊಳೆದಂತಾುತ್ತಯ್ಯಾ. -೧/೧೦೭ [1]
ಶ್ರೀ ಗುರುಸ್ವಾಮಿ ಕರುಣಿಸಿ ಕೊಟ್ಟ ಇಷ್ಟಲಿಂಗವನು
ಉರದಲ್ಲಿ ಧರಿಸಿಕೊಂಡು ಅದು ದೇವರೆಂದು ನಂಬದೆ
ಧರೆಯ ಮೇಲಣ ಕಂಡ ಕಂಡ ಕಲ್ಲು ದೇವರೆಂದು ಕಲ್ಪಿಸಿ
ಹರದಾಡುವ ಭಂಡ ಮಾದಿಗರ ಬಕ್ತರೆಂದಡೆ
ಅಘೋರ ನರಕ ತಪ್ಪದಯ್ಯ ಅಖಂಡೇಶ್ವರಾ.
ಪತಿವ್ರತಿಯಾದಡೆ ಪರಪುರುಷರ ಸಂಗವೇತಕೆ?
ಲಿಂಗಸಂಗಿಯಾದಡೆ ಅನಂಗಸಂಗವೇತಕೆ?(ಸ್ಥಾವರಲಿಂಗಸಂಗವೇತಕೆ)
ಕಂಡ ಕಂಡವರ ಹಿಂದೆ ಹರಿವ ಚಾಂಡಾಳಗಿತ್ತಿಯಂತೆ:
ಒಬ್ಬರ ಕೈವಿಡಿದು, ಒಬ್ಬರಿಗೆ ಮಾತುಕೊಟ್ಟು,
ಒಬ್ಬರಿಗೆ ಸನ್ನೆಗೆಯ್ವ ಬೋಸರಿಗಿತ್ತಿಯಂತೆ
ಪ್ರಾಣಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಹರಸಿ ಹೊಡವಡಲೇಕೆ?
ಪಾದೋದಕ ಪ್ರಸಾದ ಜೀವಿಯಾದ ಬಳಿಕ ಅನ್ಯರಿಗೆ ಕೈಯಾನಲೇಕೆ?
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಇಂತಪ್ಪ ಪಾಪಿಗಳನೆನಗೆ ತೋರದಿರಯ್ಯಾ. - ಚನ್ನಬಸವಣ್ಣ ಸವಸ-3/190[1]
ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವ
ಭಂಗಿತರ ಮುಖವ ನೋಡಲಾಗದು.
ಅದೆಂತೆಂದಡೆ;
ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವ
ಹಾದರಗಿತ್ತಿಯಂತೆ ಅವಂದಿರ ಭಕ್ತಿ.
ಅಂತಪ್ಪ ಪಂಚಮಹಾಪಾತಕರ
ಮುಖದತ್ತ ತೋರದಿರಾ ಗುಹೇಶ್ವರಾ -೨/೭೦೪[1]
ಜಗದಗಲ ಮುಗಿಲಗಲ ಪಾದ ಪಾತಾಳದಿಂದತ್ತತ್ತ ಪಾದ.
ಬ್ರಹ್ಮಾಂಡದಿಂದತ್ತತ್ತ ಮಕುಟ
ವಿಶ್ವ ಬ್ರಹ್ಮಾಂಡವನು, ತನ್ನ ಕುಕ್ಷಿಯೊಳು
ನಿಕ್ಷೇಪವ ಮಾಡಿಕೊಂಡಿಪ್ಪ ದೇವನೀಗ ಎನ್ನದೇವ.
ಆ ದೇವನೊಳಗೆ ನಾನಡಕ, ನನ್ನೊಳಗೆ ಆ ದೇವನಡಕ.
ಇಂತಪ್ಪ ದೇವನ ನಂಬಿ, ನಾ ಕೆಟ್ಟು ಬಟ್ಟಬಯಲಾದೆ.
ಈ ದೇವನರಿಯದೆ ಜಗವೆಲ್ಲ ಕಲ್ಲದೇವರು, ಮಣ್ಣದೇವರು,
ಮರದೇವರು ಎಂದು ಇವನಾರಾಧಿಸಿ, ಕೆಟ್ಟರಲ್ಲಿ.
ಸ್ವರ್ಗ ಮರ್ತ್ಯ ಪಾತಾಳದವರೆಲ್ಲರು
ಎನ್ನ ದೇವನನರದು ಅರ್ಚಿಸಲಿಲ್ಲ, ಪೂಜಿಸಲಿಲ್ಲ, ಭಾವಿಸಲಿಲ್ಲ.
ಇದು ಕಾರಣ, ಆವ ಲೋಕದವರಾದರೂ ಆಗಲಿ,
ಎನ್ನ ದೇವನನರಿದರೆ, ಭವವಿಲ್ಲ ಬಂಧನವಿಲ್ಲ.
ನೆರೆ ನಂಬಿರೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ.-೩/೯೪೯[1]
ನಿರಾಳ ನಿಶ್ಶೂನ್ಯ ಪರಮಜಂಗಮದರಿವು ತಾನಾಗದೆ,
ಬರಿದೆ ಅಹಂಕಾರದಿಂದ ಮೂರು ಮಲಂಗಳ ಸ್ವೀಕರಿಸುತ್ತ
ನಾವೆ ಜಂಗಮವೆಂದು ನುಡಿವ ಕರ್ಮ ಪಾಷಂಡಿಗಳು_
ಕಾಶಿ ಕೇದಾರ ಶ್ರೀಶೈಲ ವಿರೂಪಾಕ್ಷನೆಂದು,
ಮತ್ತೆ ಈರಣ್ಣ ಮಲ್ಲಣ್ಣ ಬಸವಣ್ಣ ಇವರೇ ದೇವರೆಂದು
ಆ ಕಲ್ಲುಗಳ ತಮ್ಮ ಮನೆಯೊಳಗೊಂದು ಮೂಲೆ
ಸಂದಿ ಗೊಂದಿ ಗೊತ್ತಿನೊಳಗಿಟ್ಟು
ಅದರ ಬಳಿದ ತೊಳೆದ ನೀರು, ಅವರೆಂಜಲ ತಿಂಬುವ ಪಶುಗಳಿಗೆ
ದೇವಭಕ್ತರೆನಬಹುದೇನಯ್ಯಾ ? ಎನಲಾಗದು.
ಇಂತಪ್ಪ ಅನಾಚಾರಿ ಅಪಸ್ಮಾರಿ ಶ್ವಪಚರ
ಜಂಗಮವೆಂದು ಪೂಜಿಸಲಾಗದು ಕಾಣಿರೊ.
ವೀರಶೈವ ಆಚಾರವುಳ್ಳ ಭಕ್ತನು ಇದ ಮೀರಿ ಪೂಜಿಸಿದಡೆ
ಅವರಿಬ್ಬರಿಗೆಯೂ ಭವಕರ್ಮಂಗಳು ತಪ್ಪವು ಕಾಣಾ ಗುಹೇಶ್ವರಾ -ಅಲ್ಲಮಪ್ರಭುದೇವರು/ ೨/೧೩೦೮ [1]
ಲಿಂಗಭಕ್ತನಾದ ಬಳಿಕ ತನ್ನಂಗದಲ್ಲಿ ಧರಿಸಿರ್ಪ ಲಿಂಗ ಒಂದಲ್ಲದೆ ಅನ್ಯವನರಿಯದಿರಬೇಕು.
ಆ ಲಿಂಗದ ನೈಷ್ಠಿಕಾ ಭಾವನೆಯಿಂಬುಗೊಂಡಿರಬೇಕು.
ಆ ಲಿಂಗವೇ ಪತಿ ತಾನೆ ಸತಿಯೆಂಬುವ ದೃಢಬುದ್ಧಿ ನಿಶ್ಚಲವಾಗಿರಬೇಕು.
ಹಿಂಗಲ್ಲದೆ ತನ್ನ ದೇಹದ ಮೇಲಿರ್ಪ ಲಿಂಗವ ಸಾಮಾನ್ಯವ ಮಾಡಿ
ಕಂಡ ದೇಗುಲದೊಳಗಣ ಕಲ್ಲ ದೇವರೆಂದು ಭಾವಿಸಿ
ಪೂಜಿಸುವ ಗಾವಿಲ ಮೂಳ ಹೊಲೆಯರ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.
ಕೈಯಲ್ಲಿ ಹಣ್ಣಿದ್ದಂತೆ ಮರನನೇರಿ, ಕೊಂಬ ಬಾಗಿಸಿ
ಕಾಯ ಕೊಯಿವ ಅರೆಮರುಳನಂತೆ
ಅನಾದಿಮೂಲದೊಡೆಯ
ತನ್ನ ಕರಸ್ಥಲ ಮನಸ್ಥಲದಲ್ಲಿಪ್ಪುದ ತಾನರಿಯದೆ
ಬೇರೆ ಲಿಂಗವುಂಟು, ಬೇರೆ ಕ್ಷೇತ್ರವುಂಟು ಎಂದು
ಹಲವು ಲಿಂಗಕ್ಕೆ ಹರಿದು ಹಂಬಲಿಸುವ
ಈ ಸೂಳೆಗೆ ಹುಟ್ಟಿದವರಿಗೆ
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪ್ರಸಾದವಿಲ್ಲ
ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. /೨೬೮ [1]
ಸತ್ತಡೆ ಸಂಗಡ ಹೊಳಿಸಿಕೊಂಬ ಲಿಂಗವು
ತನ್ನ ಕೊರಳಲ್ಲಿ ಹತ್ತೆಯಾಗಿ ಕಟ್ಟಿರಲು,
ನಾನು ಸತ್ಯಶುದ್ಧಶಿವಭಕ್ತನೆಂದರಿಯದೆ
ಮತ್ತೆ ಅನ್ಯದೈವಕ್ಕೆರಗುವ ಕತ್ತೆಮೂಳರು ನೀವು ಕೇಳಿರೊ!
ಗಂಡನ ಕೂಡೆ ಸಮಾಧಿಯ ಕೊಂಬ ಹೆಂಡತಿ ಅಪೂರ್ವ!
ಹೆಂಡಿರ ಕೂಡೆ ಸಮಾಧಿಯ ಕೊಂಬ ಗಂಡರುಂಟೆ ಲೋಕದೊಳು ?
ಛೀ ಛೀ ಹಂದಿಮೂಳರಿರ! ಈ ದೃಷ್ಟವ ಕಂಡಾದರೂ ನಾಚಲಿಲ್ಲವೆ ?
ಭವಬಂಧನಂಗಳನಳಿಯಬೇಕೆಂದು ಬಹುದೈವಕ್ಕೆರಗಿದಡೆ,
ಅವು ನಿಮ್ಮ ಸಂಗಡ ಒಂದಾದಡೂ ಹೂಳಿಸಿಕೊಂಬವೆ ?
ನೀವು ಗಳಿಸಿದ ಅರ್ಥವನುಂಡುಂಡು, ನಿಮ್ಮ ಭವದೊಳಗೆ ನೂಂಕಿದ
ಪಿಶಾಚಿಗಳ ನೋಡಿಕೊಂಡು ಪ್ರಮಾಣಿಸಿ,
ಮರಳಿ ಲಿಂಗಭಕ್ತಿಯನರಿಯದೆ,
ಬರಿದೆ ಶಿವಭಕ್ತರೆಂದು ಬೊಗಳುವ ಕುನ್ನಿಗಳು ಪರಿಭವಕ್ಕೆ ಒಳಗಾಗುವರೆಂದಾತನಂಬಿಗರ ಚೌಡಯ್ಯನು. /೨೬೭ [1]
ಸತ್ತರೆ ಸಂಗಾತ ಹೂಳಿಸಿಕೊಂಬ ಇಷ್ಟಲಿಂಗವ ಸಟೆಮಾಡಿ,
ಮತ್ತೆ ಅನ್ಯದೈವಕ್ಕೆರಗುವ ಕತ್ತೆ ಹೊಲೆಯರು ನೀವು ಕೇಳಿರೊ,
ತನ್ನ ಪುರುಷನಿರಲು ಅನ್ಯಪುರುಷನ ಕೂಡಿಹ ಸ್ತ್ರೀಗೆ ನರಕವಲ್ಲವೆ ?
ಮೋಕ್ಷಾ[ರ್ಥ] ಎಂದು ಗುರುವು ಕೊಟ್ಟ ಇಷ್ಟಲಿಂಗವು
ಅಂಗಕ್ಕೆ ಸಂಬಂಧಿಸಿದ ಬಳಿಕ
ಹಲವು ದೇವರೆಂದು ಭಾವಿಸಿ ಪೂಜೆಯ ಮಾಡುವ ಭ್ರಷ್ಟರು ನೀವು ಕೇಳಿರೊ.
ನೀವು ಮಾಡಿದ ಪೂಜೆಯು ಹಾದರಿಯ ಸ್ತ್ರೀಯಳಂತೆ ಕಾಣಿರೊ.
ಕಡೆಗೆ ಅದೇ ಲಿಂಗವೆ ಮುಂದೆ ಮಾರಿಯಾಗಿ
ಮೋಕ್ಷಕ್ಕೆ ದೂರಮಾಡುವದೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. /೨೬೮ [1]
ಸಟೆ = ಸುಳ್ಳು;
ಹಾಲಹಿಡಿದು ಬೆಣ್ಣೆಯನರಸಲುಂಟೆ ?
ಲಿಂಗವಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ?
ಲಿಂಗದ ಪಾದತೀರ್ಥ ಪ್ರಸಾದವ ಕೊಂಡು
ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ
ತಡೆಯದೆ ಹುಟ್ಟಿಸುವನು ಶ್ವಾನನ ಗರ್ಭದಲ್ಲಿ.
ಇದನರಿದು ಗುರು ಕೊಟ್ಟ ಲಿಂಗದಲ್ಲಿಯೆ ಎಲ್ಲಾ ತೀರ್ಥಂಗಳೂ
ಎಲ್ಲಾ ಕ್ಷೇತ್ರಂಗಳೂ ಇದ್ದಾವೆಂದು ಭಾವಿಸಿ ಮುಕ್ತರಪ್ಪುದಯ್ಯಾ.
ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದುಮಾಡಿ,
ತೀರ್ಥಲಿಂಗವ ಹಿರಿದುಮಾಡಿ ಹೋದಾತಂಗೆ ಅಘೋರ ನರಕ ತಪ್ಪದು
ಕಾಣಾ ಚೆನ್ನಮಲ್ಲಿಕಾರ್ಜುನಾ.
ಶ್ವಾನ = ನಾಯಿ
ನಂಬಿದ ಹೆಂಡತಿಗೆ ಗಂಡನೊಬ್ಬನೆ ಕಾಣಿರೋ,
ನಂಬಬಲ್ಲ ಭಕ್ತಂಗೆ ದೇವನೊಬ್ಬನೆ ಕಾಣಿರೋ.
ಬೇಡ ಬೇಡ, ಅನ್ಯ ದೈವದ ಸಂಗ ಹೊಲ್ಲ !
ಬೇಡ ಬೇಡ, ಪರದೈವದ ಸಂಗ ಹೊಲ್ಲ !
ಬೇಡ ಬೇಡ, ಅನ್ಯ ದೈವವೆಂಬುದು ಹಾದರ ಕಾಣಿರೋ,
ಕೂಡಲಸಂಗಮದೇವ ಕಂಡಡೆ ಮೂಗ ಕೊಯ್ವ ಕಾಣಿರೊ. -೧/೬೧೭ [1]
ಕಟ್ಟಿದ ಲಿಂಗವ ಕಿರಿದು ಮಾಡಿ,
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!
ಇಂತಪ್ಪ ಲೊಟ್ಟಿಮೂಳರ ಕಂಡರೆ
ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ. /೯೩ [1]
ನಿಜಗಂಡನ ಸಂಗವನೊಲ್ಲದೆ ಬೊಜಗರ ಸಂಗ ಮಾಡುವ
[ಬೋಸ]ರಿತೊತ್ತಿಗೆಲ್ಲಿಯದೊ ನಿಜಮುತ್ತೈದೆತನ?
ತ್ರಿಜಗ ವಂದಿತ ಲಿಂಗವ ಕರಕಮಲದಲ್ಲಿ ಹಿಡಿದುಕೊಂಡಿರ್ದ ಬಳಿಕ
ಅಲ್ಲಿ ನಂಬಿ ಪೂಜಿಸಿ ಮುಕ್ತಿಯ ಪಡೆಯಲರಿಯದೆ
ಲೋಕದ ಗಜಿಬಿಜಿ ದೈವಂಗಳಿಗೆರಗುವ
ಕುನ್ನಿ ಮಾನವರ ಕಂಡರೆ ಯಮನು ಜಿಗಿದೆಳೆದೊಯ್ದು ಕೊಲ್ಲದಿಪ್ಪನೆ?
ಹಾಗೆ ಸಾಯಲೆಂದಾತ ನಮ್ಮ ಅಂಬಿಗರ ಚೌಡಯ್ಯ. /೧೭೭ [1]
ಬೊಜಗರ = ಜಾರ, ವಿಟಪುರುಷ,
[ಬೋಸ]ರಿ = ಕಪಟಿ, ಜಾರೆ, ಹಾದರಗಿತ್ತಿ
ಬೆಟ್ಟದ ಲಿಂಗವ ಹಿರಿದು ಮಾಡಿ[ಕೊಂ]ಡು ಪರಿವ ಕೊಟ್ಟಿ ಮೂಳರಿರಾ,
ಬಿಟ್ಟುಕೊಡಿ ನಿಮ್ಮ ಇಷ್ಟಲಿಂಗವ.
ನಮ್ಮ ಕೈಗೆ ಕೊಡದಿದ್ದಡೆ, ನಟ್ಟನಡುನೀರೊಳಗೊಯ್ದಿ,
ಕಟ್ಟಿ ಮುಳುಗಿಸಿ
ನಿಮ್ಮನು ಲಿಂಗೈಕ್ಯರ ಮಾಡುವೆನೆಂದಾತ ನಮ್ಮಂಬಿಗ ಚೌಡಯ್ಯ. /೨೦೦ [1]
ಕೊಟ್ಟಿ = ಕೆಟ್ಟ ವ್ಯಕ್ತಿ, ನಾಚಿಕೆಗೇಡಿ, ಸಲ್ಲದುದು, ನಿಜವಲ್ಲದುದು
ಬೆಟ್ಟದ ಲಿಂಗವ ಹಿರಿದುಮಾಡಿ,
ತನ್ನ ಇಷ್ಟಲಿಂಗವ ಕಿರಿದುಮಾಡುವ ಮೂಳಹೊಲೆಯರಿರಾ,
ಅಣುರೇಣುತೃಣಕಾಷ್ಠ ಮೊದಲಾದ
ಬ್ರಹ್ಮಾಂಡ ಪರಿಪೂರ್ಣವಾದ
ಮಹಾಲಿಂಗವೆ ಅಂಗಕ್ಕೆ ಗುರುವು ಎಂದು ಸಂಬಂಧಿಸಿ
ಸರ್ವಸಂ[ಕು]ಲವ ತೋರಿದ ಬಳಿಕ,
ಇಂತಪ್ಪ ಮೋಕ್ಷಕ್ಕೆ ಕಾರಣವಾದ ಲಿಂಗವನು ಅಡಿಮಾಡಿ
ನೆಟ್ಟ ಕಲ್ಲಿಂಗೆ ಅಡ್ಡಬೀಳುವ
ಹೊಲೆಯರಿಗೆ ಲಿಂಗ ಕಟ್ಟುವುದು ಕಿರಿದು,
ಗೊಡ್ಡೆಮ್ಮೆಗೆ ಲಿಂಗವದು ಕರ ಲೇಸು.
ಇಂಥ ಮೂಳ ಹೊಲೆಯರು ಶಿವಭಕ್ತರೆಂದು ನುಡಿವ ಭ್ರಷ್ಟರನು
ಕತ್ತೆಯನೇರಿಸಿ ಕೆರಹಿನಟ್ಟೆಯಲಿ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯನೆಂಬ ನಿಜಶರಣನು. /೨೦೧ [1]
ಕೆರ = ಮೆಟ್ಟು, ಎಕ್ಕಡ, ಪಾದರಕ್ಷೆ
ಗಂಡನೆಂಜಲಿಗೆ ಹೇಸುವಳು ಮಿಂಡನ ತಂಬುಲವ ತಿಂಬುವ ತೆರನಂತೆ,
ಗುರುವಿನುಪದೇಶವ ಕೊಂಡು,
ಅನೀತಿ ದೇವರುಗಳ ಎಡೆಯ ತಿನ್ನುವಂತಹ ಮಾದಿಗರು
ನೀವು ಕೇಳಿರೊ.
ಅಂಡಜ ಉತ್ಪತ್ತಿ ಎಲ್ಲ ದೇವರಿಂದಾಯಿತ್ತು.
ಮೈಲಾರ, ಬೀರ, ಭೈರವ, ಧೂಳ, ಕೇತನೆಂಬ
ಕಿರಿ ದೈವಕ್ಕೆರಗಿ, ಭಕ್ತರೆನಿಸಿಕೊಂಬುವ
ಚಂಡಿನಾಯಿಗಳ ಕಂಡು ಮನ ಹೇಸಿತ್ತೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. /೧೩೦ [1]
ಆಡಿಂಗೆ ದಾಯಾದ್ಯರಾದಿರಲ್ಲಾ.
ಕಾಡ ಗಿಡುವಿಂಗೆ ಮ್ಯತ್ಯುವಾದಿರಲ್ಲಾ.
ಅರಿವನರಿಯ ಹೇಳಿ,
ಶ್ರೀಗುರು ಕುರುಹ ಕೈಯಲ್ಲಿ ಕೊಟ್ಟಡೆ
ಅರಿವನೆ ಮರೆದು ಕುರುಹ ಪೂಜಿಸುವ
ಕುರಿಗಳ ನೋಡಾ ಗುಹೇಶ್ವರಾ /೮೭೨[1]
[1] ಈ ತರಹದ ಸಂಖ್ಯೆಯ ವಿವರ: ಸವಸ-1/107 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-107 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)