Previous ಇಷ್ಟಲಿಂಗ ಮತ್ತು ಸಾಲಿಗ್ರಾಮ ಕಿರುಕುಳ ದೈವಂಗಳ ಆರಾಧನೆ Next

ಲಿಂಗಾಚಾರ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಲಿಂಗಾಚಾರ - ಏಕದೇವ ನಿಷ್ಠೆ

ಸಾಮಾನ್ಯವಾಗಿ ಜಗತ್ತಿನ ಎಲ್ಲ ಆಸ್ತಿಕ ಧರ್ಮಗಳು ದೇವನೊಬ್ಬನೇ ಇದ್ದಾನೆಂದು ಒಪ್ಪಿಕೊಂಡಿವೆ. ವೈದಿಕ ಧರ್ಮವೂ ಸಹ ದೇವನೊಬ್ಬನೇ ಇದ್ದಾನೆಂದು ವೇದಗಳ ಮುಖಾಂತರ ಸಾರಿ ಹೇಳುತ್ತಿದೆ. ಆದರೆ ಆ ಧರ್ಮದ ಸಾಧನೆಯಲ್ಲಿ ಏಕದೇವ ನಿಷ್ಠೆ ಕಂಡುಬರುವುದಿಲ್ಲ. ಮತ್ತು ಉಪಾಸನೆಗಳಲ್ಲಿ ಹಲವಾರು ದೇವತೆಗಳ ಕಲ್ಪನೆ ಬಳಕೆಯಲ್ಲಿ ಇರುವುದು ಐತಿಹಾಸಿಕ ಸತ್ಯವಾಗಿದೆ. ಇಸ್ಲಾಂ ಧರ್ಮದಲ್ಲಿಯಾಗಲಿ, ಕ್ರಿಶ್ಚಿಯನ್ ಧರ್ಮದಲ್ಲಾಗಲಿ, ಉಪಾಸನೆಗಾಗಿ ಹಲವಾರು ದೇವತೆಗಳನ್ನು ಕಲ್ಪಿಸಿಕೊಂಡಂತಿಲ್ಲ. ಪ್ರಾಯಶಃ ಈ ಧರ್ಮಗಳಲ್ಲಿ ಇರುವ ಏಕದೇವ ನಿಷ್ಠೆಯು ಆ ಧರ್ಮಗಳು ಪ್ರಪಂಚದಲ್ಲಿ ಬೆಳೆಯಲು ಸಹಾಯಕವಾಗಿವೆ ಎಂದು ಸ್ಪಷ್ಟವಾಗಿ ಹೇಳಬಹುದು. ಈ ಏಕರೂಪತೆಯಿಂದಾಗಿ ಕ್ರಿಶ್ಚಿಯನ್ ಸಮಾಜದಲ್ಲಾಗಲೀ, ಇಸ್ಲಾಂ ಸಮಾಜದಲ್ಲಿಯಾಗಲಿ ವಿಶೇಷವಾಗಿ ಜಾತಿವಿಜಾತಿಗಳ ಭೇದಭಾವನೆ ಕಂಡುಬರುವುದಿಲ್ಲ, ಅಲ್ಲಿ ಪರಸ್ಪರರಲ್ಲಿ ಸಹೋದರ ಭಾವನೆ, ಸಾಮಾಜಿಕ ಸಮತೆ ಇದ್ದುದು ಕಂಡು ಬರುತ್ತದೆ. ಕ್ರಿಶ್ಚಿಯನ್‌ರೆಲ್ಲರಿಗೂ [ಕ್ಯಾಥೋಲಿಕ್ಸ್ ಮತ್ತು ಪೊಟೆಸ್ಟಂಟ್ ಉಭಯತರಿಗೂ] ಏಸುವು ಪೂಜ್ಯನಾದ ಆರಾಧ್ಯ ಗುರುವು; ಬೈಬಲ್ ಅವರ ಧರ್ಮಗ್ರಂಥ; ಮತ್ತು ಜೆರುಸಲೇಮ ಅವರ ದರ್ಮ ಕ್ಷೇತ್ರ. ಅದರಂತೆ ಮಹಮ್ಮದೀಯರಿಗೆ ಅಲ್ಲಾಹ ಆರಾಧ್ಯ ದೇವ; ಮಹಮ್ಮದ ಪೈಗಂಬರ ಧರ್ಮಗುರು. ಕುರಾನ್ ಧರ್ಮಗ್ರಂಥ, ಮೆಕ್ಕಾ ಧರ್ಮ ಕ್ಷೇತ್ರ. ಎಲ್ಲ ಧರ್ಮಾನುಯಾಯಿಗಳಲ್ಲೂ ಇದೇ ನಂಬಿಗೆ ಇರುವುದರಿಂದ ಈ ಸಮಾಜಗಳಲ್ಲಿ ಒಕ್ಕಟ್ಟು-ಶಿಸ್ತು-ಐಕ್ಯತೆ -ಸಹೋದರತೆ ಇತ್ಯಾದಿ ಲಕ್ಷಣಗಳನ್ನು ಕಾಣಬಹುದು. ಆದರೆ ಆ ಧರ್ಮದ ಅನುಯಾಯಿಗಳು ತಮ್ಮ ಧರ್ಮಗ್ರಂಥವೇ ಬಲು ಶ್ರೇಷ್ಠ ಪ್ರಮಾಣ ಎಂದು ಅತಿಯಾಗಿ ನಂಬಿರುವುದರ ಫಲವಾಗಿ ಮತೀಯ ದುರಭಿಮಾನವು [Fanaticism] ಬೆಳೆದು ಆಧ್ಯಾತ್ಮದಲ್ಲಿ ಸಾಕಷ್ಟು ಪ್ರಗತಿಯಾದಂತೆ ಕಾಣುವುದಿಲ್ಲ. ಹಿಂದುಗಳಲ್ಲಿರುವಷ್ಟು ಅನುಭಾವ (Mysticism) ಸಂಪತ್ತು ಆ ಧರ್ಮಗಳಲ್ಲಿ ರೂಪುಗೊಂಡಿಲ್ಲ. ಅದರಲ್ಲಿಯೂ ಇಸ್ಲಾಂ ಧರ್ಮದಲ್ಲಿ ಅನುಭವ ಸಾಹಿತ್ಯವೇ ಕಂಡು ಬರುವುದಿಲ್ಲ. ಹಿಂದುಗಳು ಒಂದೇ ದೇವರನ್ನು ಉಪಾಸನೆ ಮಾಡದ ದುಷ್ಪರಿಣಾಮದಿಂದ ಎಲ್ಲಾ ಹಿಂದುಗಳು ಸಮಾನವಾದ ಧರ್ಮ ಸಂಸ್ಕಾರ, ಸಮಾನ ಧರ್ಮ ಸಂಹಿತೆ ಹೊಂದಿರದ್ದರಿಂದ ಹಿಂದು ಸಮಾಜ ಅನೇಕ ಜಾತಿ ಪಂಗಡಗಳಿಂದ ಒಡೆದು ಹೋಗಿ ನಿರ್ವಿಲ್ಯವಾಗಿ ಪರಕೀಯರ ಆಕ್ರಮಣಕ್ಕೆ ಒಳಗಾಗಿ ದಾಸ್ಯ ಶೃಂಖಲೆಯಲ್ಲಿ ನೂರಾರು ವರುಷಗಳ ವರೆಗೆ ಸಿಕ್ಕು ಕೊರಗಿ ಸೊರಗಿ ಸಣ್ಣಾಗಿದೆ, ಕ್ಷೀಣವಾಗಿದೆ. ಅದಕ್ಕೆ ಇತಿಹಾಸವೇ ಸಾಕ್ಷಿ. ಆದರೆ ಒಂದೇ ಧರ್ಮ ಶಾಸ್ತ್ರದ ಕಟ್ಟಿಗೆ ಹಿಂದುಗಳು ಒಳಗಾಗದೆ ಇರುವುದರಿಂದ ಅನುಭಾವಿಗಳು ಸ್ವತಂತ್ರವಾಗಿ ಆಧ್ಯಾತ್ಮ ಆಗಸದಲ್ಲಿ ಹಾರಾಡಿ ವಿಪುಲವಾದ ಸ್ವಾನುಭವ ಸಾಹಿತ್ಯ (Mystic literature) ವನ್ನು ಪ್ರಪಂಚಕ್ಕೆ ನೀಡಿದ್ದಾರೆ. ಈ ದೃಷ್ಟಿಯಿಂದ ಭಾರತೀಯರಿಗೆ ಸರಿಸಾಟಿಯಾಗಿ ಬೇರೆ ಯಾವ ದೇಶಗಳೂ ನಿಲ್ಲಲಾರವು. ಭಾರತದ ಕೊಡುಗೆ ಜಗತ್ತಿಗೆ ಏನಾದರೂ ಇದ್ದರೆ ಅಪಾರವಾದ ಆಧ್ಯಾತ್ಮ ಸಾಹಿತ್ಯವೆಂದು ಅಭಿಮಾನದಿಂದ ಹೇಳಬಹುದು. ಆದರೆ ನಮ್ಮ ಸಿದ್ಧಾಂತಕ್ಕೂ ಸಾಧನೆಗೂ, ವಿಚಾರಕ್ಕೂ ಆಚಾರಕ್ಕೂ ಅಜಗಜಾಂತರ ವ್ಯತ್ಯಾಸ ಇದೆಯೆಂದರೆ ಅತಿಶಯಾಸ್ತಿ ಆಗಲಾರದು. ದೇವನೊಬ್ಬನೆ ಎಂದು ಹೇಳಿದರೂ ಅನೇಕ ದೇವತೆಗಳನ್ನು ಕಲ್ಪಿಸಿ ಪೂಜಿಸುತ್ತಿದ್ದಾರೆ. "ಸರ್ವಜನಾಃ ಸುಖಿನೋಭವಂತು' ಎಂದು ಹೇಳಿದರೂ, ಶೂದ್ರರು, ಅಸ್ಪೃಶ್ಯರು ಎಂಬ ದೊಡ್ಡ ಸಮಾಜವನ್ನು ನಿರ್ಮಿಸಿ, ಅವರನ್ನು ಕೀಳು ಭಾವನೆಯಿಂದ ಕಂಡಿದ್ದಾರೆ. ಬಾಯಿಯಲ್ಲಿ ಅದೈತ ನುಡಿದು ಎಲ್ಲವೂ ಬ್ರಹ್ಮವೆಂದರೂ ಮಾನವರಲ್ಲಿ ಅನಂತ ಭೇದಗಳನ್ನು ಕಲ್ಪಿಸಿರುವುದು ಕಂಡು ಬರುತ್ತದೆ. ಈ ಹಿಂದು ಸಂಸ್ಕೃತಿಯ ನುಡಿ-ನಡೆ, ಮಾತು-ಕೃತಿ, ಸಿದ್ದಾಂತಸಾಧನೆಗಳ ಮಧ್ಯೆ ಇರುವ ಅಪಾರವಾದ ಕೊಳ್ಳಕ್ಕೆ ಸೇತುವೆಯನ್ನು ಕಟ್ಟಿ, ವಿಚಾರ ಆಚಾರದಲ್ಲಿರುವ ಅಂತರವನ್ನು ಶಿವಾಚಾರದಿಂದ ಪರಿಹರಿಸಿ, ನುಡಿನಡೆಗಳಲ್ಲಿ ಸಮರಸ ತರಲು ಪ್ರಯತ್ನ ಪಟ್ಟ ಮೊಟ್ಟ ಮೊದಲಿನ ಮಹಂತರೆಂದರೆ ಬಸವಣ್ಣನವರೆಂದು ನಿರ್ವಿವಾದವಾಗಿ ಹೇಳಬಹುದು. "ನುಡಿದಂತೆ ನಡೆದರೆ ಈ ಜನ್ಮವೇ ಕಡೆ" ಎಂದು ಸಾರಿ ಹೇಳಿದ ಬಸವಣ್ಣನವರು ನುಡಿದಂತೆಯೇ ನಡೆದು ಭಾರತೀಯರಿಗೆ ಅನುಕರಣೀಯರಾಗಿದ್ದಾರೆ. ಅಲ್ಲದೆ ಭಾರತೀಯರ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಒಂದೇ ದೇವರ ಕಲ್ಪನೆಯನ್ನು ಕಡ್ಡಾಯವಾಗಿ ಕೃತಿಯಲ್ಲಿ ತರಲು ಬಸವಾದಿ ಪ್ರಮಥರು ಹೆಣಗಾಡಿದ್ದಾರೆ. ಜಾತ್ಯತೀತ ಸಮಾಜವನ್ನು ಏಕ ದೇವೋಪಾಸನೆಯ ಅಡಿಗಲ್ಲ ಮೇಲೆ ಕಟ್ಟಲು ಪ್ರಯತ್ನಿಸಿದ್ದಾರೆ. ಆದರೆ ಬಸವಣ್ಣನವರ ಸಮಾಜ ರಚನೆ ಕಲ್ಯಾಣ ರಾಜ್ಯದ ಕಲ್ಪನೆ, ಭಾರತೀಯರಿಗೆ ತಿಳಿಯದೆ ಇದ್ದುದು ದುರ್ದೈವದ ಸಂಗತಿ !

ಇಬ್ಬರು ಮೂವರು ದೇವರೆಂದು
ಉಬ್ಬಿ ಮಾತನಾಡಬೇಡ, ದೇವನೊಬ್ಬನೇ ಕಾಣಿರೋ,
ಇಬ್ಬರೆಂಬುದು ಹುಸಿ ನೋಡಾ !
ಕೂಡಲಸಂಗಮದೇವನಲ್ಲದೆ ಇಲ್ಲವೆಂದಿತ್ತು ವೇದ.
-ಬ.ಷ.ವ. ೫೪೫

ಈ ವಚನದಲ್ಲಿ ಮಹಾತ್ಮ ಬಸವಣ್ಣನವರು ಆಗಿನ ಸಮಾಜದಲ್ಲಿ ಬಳಕೆಯಲ್ಲಿದ್ದ ಅನೇಕ ದೇವತಾ ತತ್ವ (Polytheism) ವನ್ನು ಖಂಡಿಸಿ ಏಕದೇವವಾದ [Monotheism] ವನ್ನು ಎತ್ತಿ ಹಿಡಿದಿದ್ದಾರೆ. ವೇದದ ಪ್ರಮಾಣವನ್ನು ತೆಗೆದುಕೊಂಡೇ ದೇವನೊಬ್ಬನೇ ಇದ್ದಾನೆಂದು ಸಾರಿ ಹೇಳಿದ್ದಾರೆ. ಅನೇಕರು ತಿಳಿದಂತೆ ಬಸವಣ್ಣನವರು ವೇದ ವಿರೋಧಿಗಳಲ್ಲ. ಅವರು ವೇದಗಳು ಹೇಳಿದ್ದೆಲ್ಲವನ್ನು ಅಕ್ಷರಶಃ ಪಾಲಿಸುವ ಕರ್ಮಠ ಸನಾತನಿಗಳೂ ಅಲ್ಲ. "ವೇದಕ್ಕೆ ಒರೆಯನಿಕ್ಕಿ" ಪರೀಕ್ಷಿಸಿ, ವಿವೇಕ ಒಪ್ಪಿದ್ದನ್ನು ಮಾತ್ರ ಸ್ವೀಕರಿಸಿದವರು. ಅವರಿಗೆ ಯಾವ ವೇದೋಪನಿಷತ್ತುಗಳೂ, ಆಗಮಗಳೂ, ಪುರಾಣಗಳೂ, ಕಡ್ಡಾಯವಾಗಿ ಪ್ರಮಾಣ ಗ್ರಂಥಗಳಲ್ಲ. ಅವರಿಗೆ ಪ್ರಮುಖ ಪ್ರಮಾಣಗಳು ಸ್ವಾನುಭವ [Intuition] ಮತ್ತು ಅಂತರಾತ್ಮ (conscience) ವೇ ಆಗಿವೆ. ಆದುದರಿಂದ ವೇದಾದಿ ವಾಕ್ಯಗಳನ್ನೆಲ್ಲ ಶಿವಶರಣರು ತಮ್ಮ ಸ್ವಾನುಭಾವ ಜರಡಿಯಲ್ಲಿ ಹಾಕಿ ಜಲ್ಲಿಸಿ, ಗೊಳ್ಳು-ಪೊಳ್ಳು ಸುಳ್ಳು ಸಂಗತಿಗಳನ್ನೆಲ್ಲ ಬಿಸಾಕಿ ನಿತ್ಯ-ಸತ್ಯ-ತತ್ವಗಳನ್ನು ಮಾತ್ರ ತೆಗೆದು ಕೊಂಡವರಾಗಿದ್ದಾರೆ. ಉಪನಿಷತ್ತಿನ ಜ್ಞಾನ, ಶೈವರ ಭಕ್ತಿ, ಸಿದ್ದಾಂತಿಗಳ ಕರ್ಮ, ಜೈನರ ಅಹಿಂಸೆ, ಬೌದ್ದರ ಸಮತಾ ಇತ್ಯಾದಿ ತತ್ವಗಳೆಲ್ಲ ಶರಣರ ಅನುಭವ ಮಂಟಪವೆಂಬ ಕಮ್ಮಟದಲ್ಲಿ ಸ್ವಾನುಭಾವದ ಮೂಸೆಯಲ್ಲಿ ಕರಗಿ ಕಳೆಗೊಂಡು ಚಂದವಾದ ಚಿನ್ನಾಭರಣಗಳಾಗಿ ವಚನಗಳು ಮೂಡಿ ಬಂದಿವೆ.

ಶರಣಧರ್ಮವು ಏಕದೇವೋಪಾಸನೆಯನ್ನು ಕಡ್ಡಾಯವಾಗಿ ಪ್ರತಿಪಾದಿಸುವಲ್ಲಿ ಹಲವಾರು ದೇವತೆಗಳನ್ನು ದೇವರೆಂದು ನಂಬುವ ಬಗ್ಗೆ ತೀವ್ರವಾಗಿ ಖಂಡಿಸುತ್ತದೆ.

ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು
ಬ್ರಹ್ಮನು ತನ್ನ ಶಿರವನೇಕೆ ಹುಟ್ಟಿಸಿಕೊಳ್ಳಲಾರದೆ ಹೋದ ?
ವಿಷ್ಣು ತನ್ನ ಮಗನನೇಕೆ ರಕ್ಷಿಸಿಕೊಳ್ಳಲಾರದೆ ಹೋದ ?
ದುಷ್ಟನಿಗ್ರಹ ಶಿಷ್ಟಪರಿಪಾಲಕ
ನಮ್ಮ ಕೂಡಲ ಸಂಗಮದೇವಯ್ಯ. -ಬ.ಷ.ವ. ೫೪೬

ರುದ್ರನೇ ದೇವರೆಂದು ಆರಾಧಿಸಿ
ಶಿಲೆಯಾಳಗೆ ಹೊರಟೆಗೊಂಡು ಕೆಟ್ಟರಲ್ಲ ಭಕ್ತಜನಂಗಳು,
ವಿಷ್ಣುವೇ ದೇವರೆಂದು ಆರಾಧಿಸಿ ಮರನ ಸುತ್ತಿ ಕೆಟ್ಟರಲ್ಲ
ಭೂಸುರಾದಿಗಳು, ಬ್ರಹ್ಮನೇ ದೇವನೆಂದಾರಾಧಿಸಿ
ಬೆಂಕಿಯೊಳಗೆ ಬೆಂದರಲ್ಲ ಮರ್ತಲೋಕದ ಮಹಾಜನಂಗಳು
ಧಾರುಣಿಯೊಳಗೆ ಹೇರನಿಕ್ಕಿ, ಲಳಿಗೆ ಎಣ್ಣೆ, ಕಾಯಿ, ಹಣ್ಣು,
ಮೊದಲಾದುವನು ತಪ್ಪ ಸಾಧಿಸಿ, ತರಿಸಿಕೊಂಡುಂಬ
ಇವುಗಳಿಗೆಲ್ಲಿದೆಯೋ ನೆಟ್ಟನೆ ದೇವತ್ವ ?
ಎನ್ನ ದೇವಂಗೆ ಇಂಥವರಂದ ಒಂದೂ ಇಲ್ಲ......

ಮೇಲಿನ ಶರಣರ ವಚನಗಳಲ್ಲಿ ಬ್ರಹ್ಮ, ವಿಷ್ಣು, ರುದ್ರ, ಇತ್ಯಾದಿ ದೇವತೆಗಳು ದೇವರಲ್ಲವೆಂದು ಸಾರಿದ್ದಾರೆ. ಈ ಹೆಸರುಗಳು ಒಬ್ಬನೇ ದೇವನಿಗೆ ಅನ್ವಯಿಸಬಲ್ಲುವು. ಆಗ ಬ್ರಹ್ಮ, ವಿಷ್ಣು, ಮಹೇಶ್ವರರು ಮೂರು ಬೇರೆ ಬೇರೆ ದೇವತೆಗಳಾಗಿರದೆ ಒಂದೇ ಪರವಸ್ತುವಿನ ಬೇರೆ ಬೇರೆ ಶಕ್ತಿಗಳೆಂದಾಗಲಿ, ಮುಖಗಳೆಂದಾಗಲಿ ಹೇಳಬಹುದು. ಒಬ್ಬನೇ ವ್ಯಕ್ತಿ ತಂದೆತಾಯಿಗಳಿಗೆ 'ಮಗ'ನಾಗುತ್ತಾನೆ; ಹೆಂಡತಿಗೆ 'ಗಂಡ'ನಾಗುತ್ತಾನೆ; ತಮ್ಮಂದಿರಿಗೆ 'ಅಣ್ಣ'ನಾಗುತ್ತಾನೆ; ಮಕ್ಕಳಿಗೆ 'ತಂದೆ'ಯಾಗುತ್ತಾನೆ; ಮಗ, ಗಂಡ, ಅಣ್ಣ, ತಂದೆ ಈ ಶಬ್ದಗಳು ನಾಲ್ಕು ಬೇರೆ ಬೇರೆ ವ್ಯಕ್ತಿಗಳೆಂದು ಹೇಳದೆ ಒಂದೇ ವ್ಯಕ್ತಿಗೆ ಬೇರೆ ಬೇರೆ ಸನ್ನಿವೇಶದಲ್ಲಿ ಬಂದಿರುವ ಹೆಸರುಗಳಷ್ಟೆ ! ಅದರಂತೆ ಆ ಪರವಸ್ತುವಿಗೆ ಸೃಷ್ಟಿಯನ್ನು ರಚಿಸಿದಾಗ ಬ್ರಹ್ಮನೆಂಬ ಹೆಸರು ಬಂದಿತು; ಅದನ್ನು ರಕ್ಷಿಸುವಾಗ ವಿಷ್ಣುವೆಂಬ ಹೆಸರು ಬಂದಿತು; ಅದನ್ನು ಲಯ ಮಾಡುವಾಗ ರುದ್ರನೆಂಬ ನಾಮವು ಪ್ರಾಪ್ತವಾಯಿತು. ಆದರೆ ಇವರು ಮೂವರು ಭಿನ್ನ ಭಿನ್ನ ದೇವತೆಗಳಾಗಿರದೆ ಒಬ್ಬನೇ ದೇವರ ಕಾರ್ಯಾನ್ಮುಖ ಹೆಸರುಗಳು ಎಂದು ಹೇಳಬಹುದು.

ಅಷ್ಟಮೂರ್ತಿಗಳು ದೇವರೆಂಬ ಭ್ರಷ್ಟ ಭವಿಗಳ ಮಾತ ಕೇಳಲಾಗದು
ಅದೇನು ಕಾರಣವೆಂದಡೆ
ಪೃಥ್ವಿದೇವರಾದಡೆ ಅಪ್ಪುವಿನ ಪ್ರಳಯದಲ್ಲಿ ಕರಗುವದೆ ?
ಅಪ್ಪು ದೇವರಾದಡೆ ಅಗ್ನಿಯ ಪ್ರಳಯದಲ್ಲಿ ಅರತುಹೋಗುವದೆ ?
ಅಗ್ನಿ ದೇವರಾದಡೆ ವಾಯುವಿನ ಪ್ರಳಯದಲ್ಲಿ ಆರಿಹೋಗುವದೆ ?
ವಾಯುದೇವರಾದಡೆ ಆಕಾಶದ ಪ್ರಳಯದಲ್ಲಿ ಲಯವಪ್ಪುದೆ ?
ಆಕಾಶದೇವರಾದಡೆ ಆತ್ಮನಲ್ಲಿ ಅಡಗಿಹೋಗುವದೆ ?
ಆತ್ಮದೇವರಾದಡೆ ದ್ವಂದ್ವ ಕರ್ಮಗಳನುಂಡು
ಜನನ ಮರಣಂಗಳಲ್ಲಿ ಬಂಧನ ಪಡೆವನೆ ?
ಚಂದ್ರ ಸೂರ್ಯರು ದೇವರಾದಡೆ
ಭವಬಂಧನದಲ್ಲಿ ಸಿಲ್ಕಿ ತೋಳಲಿ ಬಳಲುವರೆ ?
ಇದು ಕಾರಣ ಇಂತೀ ಅಷ್ಟ ತನುಗಳು ಎಂತು ದೇವರೆಂಬೆನು ?
ದೇವರದೇವ ಮಹಾದೇವ ಮಹಾಮಹಿಮ ಎನ್ನೊಡೆಯ
ಅಖಂಡೇಶ್ವರ ಒಬ್ಬನೇ ದೇವನಲ್ಲದೆ ಉಳಿದವರೆಲ್ಲ
ಹುಸಿ ಹುಸಿ ಎಂಬೆನು ನೋಡಾ. -.ಷ.ವ, ೨೬೬

ಸಾಂಪ್ರದಾಯಿಕವಾದ ಅಷ್ಟಮೂರ್ತಿಗಳು ಅಷ್ಟದೇವತೆಗಳೆಂಬ ಮೂಢ ಕಲ್ಪನೆಯನ್ನು ಶ್ರೀ ಷಣ್ಮುಖಸ್ವಾಮಿಗಳು ಈ ವಚನದಲ್ಲಿ ತೊಡೆದು ಹಾಕಿದ್ದಾರೆ. ಅವೆಲ್ಲವೂ ಪ್ರಳಯಕ್ಕೆ ಸಿಗುವವಾದ ಕಾರಣ ದೇವರಲ್ಲವೆಂದು ಪ್ರತಿಪಾದಿಸಿದ್ದಾರೆ.

ದೇವನೊಬ್ಬ ನಾಮ ಹಲವು:
ಪರಮ ಪತಿವ್ರತೆಗೆ ಗಂಡನೊಬ್ಬ;
ಮತ್ತೊಂದಕ್ಕೆರಗಿದರೆ ಕಿವಿ ಮೂಗ ಕೊಯ್ಯನು!
ಹಲವು ದೈವದ ಎಂಜಲ ತಿಂಬುವವರನೇನೆಂಬೆ,
ಕೂಡಲ ಸಂಗಮದೇವಾ.
-ಬ.ಷ.ವ. ೬೧೩

ನಂಬಿದ ಹೆಂಡತಿಗೆ ಗಂಡನೊಬ್ಬನೇ ಕಾಣಿರೊ
ನಂಬಬಲ್ಲ ಭಕ್ತಂಗೆ ದೇವನೊಬ್ಬನೇ ಕಾಣಿರೋ.
ಬೇಡ ಬೇಡ ಅನ್ಯ ದೈವದ ಸಂಗ ಹೊಲ್ಲ.
ಅನ್ಯದೈವವೆಂಬುದು ಹಾದರ ಕಾಣಿರೋ
ಕೂಡಲ ಸಂಗಮದೇವರು ಕಂಡರೆ, ಮೂಗಕೊಯ್ಯುವ ಕಾಣಿರೋ !
-ಬ.ಷ.ವ. ೬೧೬

ಮಹಾತ್ಮಾ ಬಸವಣ್ಣನವರ ಮೇಲಿನ ವಚನಗಳಲ್ಲಿ ಉದಾತ್ತವಾದ ತತ್ವಗಳು ಹುದುಗಿಕೊಂಡಿವೆ. "ಏಕಂ ಸತ್ವಿಪ್ರಾ ಬಹುಧಾ ವದಂತಿ" ಎಂಬ ಶೃತಿಯ ಮಾತು ಬಸವಣ್ಣನವರ ಸ್ವಾನುಭವದ ಪಡಿಯಚ್ಚಿನಲ್ಲಿ "ದೇವನೊಬ್ಬ ನಾಮ ಹಲವು' ಎಂಬ ಜ್ಯೋತಿರ್ಲಿಂಗವಾಗಿದೆ. ಈ ನುಡಿ ಕೇವಲ ನುಡಿಯಾಗದೆ ನಡೆಯಾಯಿತು. ಕೇವಲ ಮಾತಿನಲ್ಲಷ್ಟೇ ದೇವನೊಬ್ಬ ಎಂದು ಹೇಳಿ ಸುಮ್ಮನಾಗದೆ ಶರಣರು ದೃಢನಂಬಿಕೆಯಿಂದ ಒಬ್ಬನೇ ದೇವನನ್ನು ಒಂದೇ ರೂಪದಲ್ಲಿ ಆರಾಧಿಸಿದರೆಂಬುದನ್ನು ಮರೆಯಬಾರದು ಅದುವೇ ಶರಣರ ಏಕದೇವೋಪಾಸನೆಯು. ಏಕದೇವೋಪಾಸನೆಯನ್ನು ಕಡ್ಡಾಯವಾಗಿ ಆಚರಿಸುವ ಲಿಂಗ ನಿಷ್ಠೆಯ ಲಿಂಗಾಚಾರವು. ದೇವನೊಬ್ಬ ನಾಮ ಹಲವು ಎಂಬ ಈ ಸೂತ್ರವನ್ನು ಒಪ್ಪಿಕೊಂಡರೆ ಪ್ರಾಯಶಃ ಈ ಜಗತ್ತಿನಲ್ಲಿರುವ ಜಾತೀಯ ಜಗಳ ಮಾಯವಾದೀತು ! ದೇವನಿಗೆ ನಿಜವಾಗಿಯೂ ನಾಮ ರೂಪಗಳೇ ಇಲ್ಲವಾದ್ದರಿಂದ, ಅನೇಕ ನಾಮಗಳಿಂದ ಅನೇಕ ರೂಪಗಳಿಂದ ದೇವರನ್ನು ಪೂಜಿಸುವುದು ಕಂಡುಬರುತ್ತದೆ. ಯಾವ ಒಂದು ವಸ್ತುವಿಗೆ ವಿಶಿಷ್ಟವಾದ ಒಂದೇ ಹೆಸರು, ಒಂದೇ ರೂಪವಿದ್ದರೆ, ಅದಕ್ಕೆ ಅನೇಕ ಹೆಸರುಗಳು ಮತ್ತು ಅನೇಕ ರೂಪಗಳಿರುವುದನ್ನು ನಾವು ಕಾಣಲಾರೆವು. ಆದ್ದರಿಂದ ನಾಮರಹಿತ ಪರವಸ್ತುವಿಗೆ ಬೇರೆ ಬೇರೆ ಮತೀಯರು ಬೇರೆ ಬೇರೆ ಹೆಸರುಗಳನ್ನು ಇಟ್ಟಿರುವರು. ಒಂದೇ ಪರವಸ್ತುವನ್ನು ಪರಶಿವ, ಶಿವ; ಲಿಂಗ, ವಿಷ್ಣು, ಈಶ್ವರ, ಸದಾಶಿವ, ಶಂಕರ, ರಾಮ, ಕೃಷ್ಣ, ಅಲ್ಲಾ, ಏಸು ಇತ್ಯಾದಿ ಹೆಸರುಗಳಿಂದ ಕರೆಯುವುದನ್ನು ಕಾಣಬಹುದು. ಆದರೆ ಒಂದು ವಿಷಯ ಇಲ್ಲಿ ಬಹು ಗಮನಾರ್ಹ. ನಾಮ, ರೂಪಗಳಿಲ್ಲದ ದೇವನನ್ನು ಯಾವುದೇ ಹೆಸರಿನಿಂದ ಕರೆದರೂ ಅದು ತಪ್ಪಲ್ಲ: ಆದರೆ ಆ ಹೆಸರಿನ ವ್ಯಕ್ತಿಗಳನ್ನೇ ದೇವರೆಂದು ಕರೆದು, ಅವರ ಹೆಸರಿನಲ್ಲಿ ಪಂಥಉಪಪಂಥಗಳನ್ನು ಸೃಷ್ಟಿಸಿ, ನಮ್ಮ ದೇವರು ಶ್ರೇಷ್ಠ, ನಿಮ್ಮ ದೇವರು ಕೀಳು ಎಂದು ಹೋರಾಡುವುದು ತಪ್ಪು. ಶೈವರು ಶಿವನೆಂಬ ಹೆಸರಿನಿಂದ ಪೂಜಿಸಿ ವಿಷ್ಣುವನ್ನು ಹಿಯಾಳಿಸುವುದು, ವೈಷ್ಣವರು 'ರಾಮ'ನೆಂಬ ಹೆಸರಿನಿಂದ ಪೂಜಿಸಿ, ಶಿವನನ್ನು ನಿಂದಿಸುವುದು, ಮೂರ್ಖತನದ ಪರಮಾವಧಿ. ಹೀಗೆ ದ್ವೇಷ ಮಾಡುವವರಿಬ್ಬರಿಗೂ ದೇವರು ಒಲಿಯಲಾರ. ಒಂದು ಚಿಕ್ಕ ದೃಷ್ಟಾಂತವಿದೆ : ಒಬ್ಬ ಗುರುವಿಗೆ ಇಬ್ಬರು ಶಿಷ್ಯರಿದ್ದರು. ದಿನಾಲು ಗುರುಗಳು ಮಲಗುವಾಗ ಒಬ್ಬನು ಬಲಗಾಲನ್ನು ಉಪಚರಿಸಿ, ಸೇವೆ ಮಾಡುತ್ತಿದ್ದನು. ಇನ್ನೊಬ್ಬನು ಎಡಗಾಲಿನ ಸೇವೆ ಮಾಡುತ್ತಿದ್ದನು. ಒಂದು ದಿನ ಗುರುಗಳು ಬಲಭುಜ ಮೇಲು ಮಾಡಿ ಮಲಗಿದಾಗ, ಬಲಗಾಲು ಎಡಗಾಲಿನ ಮೇಲೆ ಬಿದ್ದಿರುವುದನ್ನು ಕಂಡು, ಎಡಗಾಲಿನ ಸೇವೆ ಮಾಡುವವನು ಬಲಗಾಲಿಗೆ ಕೋಲಿನಿಂದ ಹೊಡೆದನಂತೆ. ಇನ್ನೊಂದು ದಿನ ಎಡಭುಜ ಮೇಲೆ ಮಾಡಿ ಮಲಗಿದಾಗ ಬಲಗಾಲಿನ ಮೇಲೆ ಎಡಗಾಲು ಬಿದ್ದಿತು. ಆಗ ಬಲಗಾಲಿನ ಸೇವೆ ಮಾಡುವವನು ಎಡಗಾಲಿಗೆ ಬೆತ್ತದಿಂದ ಹೊಡೆದನಂತೆ. ಆಗ ಗುರುಗಳು 'ಏ ಮೂರ್ಖರಿರಾ, ನೀವಿಬ್ಬರೂ ನನ್ನ ಕಾಲು, ನನ್ನ ಕಾಲು ಎಂದು ಜಗಳವಾಡುತ್ತ ನಿಜವಾಗಿಯೂ ನನ್ನನ್ನೇ ಹೊಡೆಯುತ್ತಿರಲ್ಲೋ' ಎಂದು ಬುದ್ದಿ ಹೇಳಿ ಅವರ ಮೂರ್ಖತನವನ್ನು ಹೋಗಲಾಡಿಸಿದರಂತೆ. ಹಾಗೆ ಶಿವನನ್ನು ವೈಷ್ಣವರು, ವಿಷ್ಣುವನ್ನು ಶೈವರು ನಿಂದಿಸಿದರೆ ಇಬ್ಬರೂ ನಿಜವಾದ ಪರಮಾತ್ಮನನ್ನು ನಿಂದಿಸಿದಂತಾಗಿ ಇವರಿಬ್ಬರಿಗೂ ದೇವನು ಒಲಿಯಲಾರನು.

ದೇವರು ಶಿವನೆಂದು, ರಾಮನೆಂದು, ಅಲ್ಲಾನೆಂದು ಕೂಗಿದರೆ ಒಲಿಯದೆ, ಅಂದರೆ ಕೇವಲ ನಾಮಸ್ಮರಣಿ ಮಾಡುವವರ ಶಬ್ದ ಕ್ಕೆ ದೇವನು ಒಲಿಯದೆ - ಅವರ ಅಂತರಂಗದ ಸದ್ಭಾವಕ್ಕೆ ಒಲಿಯುತ್ತಾನೆ. ದೇವರಿಗೆ ಈ ಮಾನವ ನಿರ್ಮಿತ ಭಾಷೆಗಳು ತಿಳಿಯಲಾರವು. ಈ ಎಲ್ಲ ಭಾಷೆಗಳು ಒಂದೇ ಹೃದಯದ ಭಾವದ ಭಾಷೆಯ ಭಾಷಾಂತರಗಳಷ್ಟೆ. ದೇವರು ಆ ಹೃದಯದ ಭಾಷೆ ತಿಳಿಯಬಲ್ಲ. ಈ ಮಾನವ ನಿರ್ಮಿತ ಭಾಷಾಂತರದ ಭಾಷೆಗಳನ್ನು ತಿಳಿಯುವ ಅವಶ್ಯಕತೆ ಅವನಿಗಿಲ್ಲ. ಮೂಲಭಾಷೆ ಬಲ್ಲಾತನಿಗೆ ಅನುವಾದಿತ ಭಾಷೆಗಳನ್ನು ಅರಿಯುವ ಹಂಗಿಲ್ಲ. ಆದ್ದರಿಂದ ದೇವರು ಭಕ್ತರ ಮುಖದಿಂದ ಬರುವ ದೇವರ ಹೆಸರುಗಳೆಂಬ ಶಬ್ದಕ್ಕೆ ಒಲಿಯದೆ, ಅವರು ಉಚ್ಚರಿಸುವ ಆ ಶಬ್ದದ ಹಿಂದಿನ ಸದ್ಭಾವಕ್ಕೆ, ಅಂತರಂಗ ಶುದ್ದಿಗೆ ಒಲಿಯುತ್ತಾನೆಂದು ತಿಳಿದರೆ ಸಾಕು.

ಅನೇಕ ಹೆಸರುಗಳಿರುವ ಒಬ್ಬನೇ ದೇವರನ್ನು ಒಂದೇ ರೂಪದಲ್ಲಿ ಆರಾಧಿಸಬೇಕೆಂದು ಬಸವಣ್ಣನವರು ಒತ್ತಿ ಒತ್ತಿ ಹೇಳುತ್ತಾರೆ. ಗುರು ಕೊಟ್ಟ ಇಷ್ಟಲಿಂಗವು ಲಿಂಗಪತಿಯಾಗಿರುವುದರಿಂದ ಲಿಂಗಪತಿಯನ್ನು ಬಿಟ್ಟು ಅನ್ಯದೈವಗಳನ್ನು ಪೂಜಿಸಕೂಡದು. ಪತಿವ್ರತೆ ತನ್ನ ನೆಚ್ಚಿನ ಗಂಡನನ್ನು ಬಿಟ್ಟು ಮತ್ತೊಬ್ಬ ಪುರುಷನೊಡನಾಟ ಮಾಡಿದರೆ ಹೇಗೆ ಅಪರಾಧವೋ ಹಾಗೆಯೇ ಶರಣಸತಿಯಾದ ಲಿಂಗಪೂಜಕನು ಇನ್ನೊಂದು ದೈವವನ್ನು ಪೂಜಿಸುವುದು ಅಪರಾಧವು. ಶರಣಸತಿ-ಲಿಂಗಪತಿ ಎಂಬ ಲಿಂಗಾಯತ ಧರ್ಮದ ಸಿದ್ದಾಂತವನ್ನು ಒಪ್ಪಿ ಇಷ್ಟಲಿಂಗವನ್ನು ಕಟ್ಟಿಕೊಂಡು, ಇತರ ಯಾವುದೇ ದೈವಂಗಳನ್ನು ಆರಾಧಿಸುವುದು - ಹಾದರವಾಗುವುದೆಂದು ಕಠೋರವಾದ ಮಾತಿನಲ್ಲಿ ಬಸವಣ್ಣನವರು ಹೇಳಿ, ಲಿಂಗಾಚಾರದಏಕದೇವೋಪಾಸನೆಯ ನಿಷ್ಠೆಯನ್ನು ನೆಲೆಗೊಳಿಸಿದ್ದಾರೆ.

ಸದಮಲಾತ್ಮಕ ಶರಣ-ಲಿಂಗ ದಂಪತಿಗಳಿಗೆ
ಮುದದಿಂದ ಗುರುಚರ ಸುಭಕ್ತಗಣ ಮಧ್ಯದೊಳು
ಮದುವೆಯಾದಿಷ್ಟ ಲಿಂಗವನಗಲದನವರತವಂಗದಲಿ ಧರಿಸಿ ಬಳಿಕ
ಮದಡ ಮಾನವರಂತೆ ಭೂಮಿಯಾಳು ನೆಲೆ ಸಿರ್ಪ
ಅಧಮ ಭವಿಶೈವ ದೈವಕ್ಕೆರಗಿ ವಂದಿಸದೆ
ಹೃದಯದೊಳು ದೃಢನಿಷ್ಠೆ ಕರಿಗೊಂಡ ಸದ್ಭಕ್ತಗಿಷ್ಟ ಲಿಂಗಾಚಾರವು.

ಗುರು-ಜಂಗಮ ಭಕ್ತಗಣ ಸಾಕ್ಷಿಯಾಗಿ ಸದಮಲಾತ್ಮಕರಾದ ಶರಣ ಮತ್ತು ಲಿಂಗ ದಂಪತಿಗಳಿಗೆ ಲಗ್ನವ ಮಾಡಿ, ಶರಣ ಸತಿಗೆ ಇಷ್ಟಲಿಂಗವೆಂಬ ಪತಿಯನ್ನು ಯಾವಾಗಲೂ ದೇಹದಲ್ಲಿ ಧರಿಸಲು ಕೊಟ್ಟನಂತರ, ಮೂರ್ಖ ಮಾನವರಂತೆ ಭೂಮಿಯಲ್ಲಿ ಸ್ಥಾಪಿಸಿದ ಅಧಮ ದೈವಂಗಳಿಗೆ ವಂದಿಸದೆ ತನ್ನ ಲಿಂಗಪತಿಯಲ್ಲಿ ನಿಷ್ಟೆ ಕರಿಗೊಂಡರೆ ಅದುವೇ ಸದ್ಭಕ್ತಂಗೆ ಲಿಂಗಾಚಾರವು ಎಂದು ಮೈಲಾರದ ಶ್ರೀಬಸವಲಿಂಗ ಶರಣರು ಶರಣಸತಿ ಲಿಂಗಪತಿ ತತ್ವವನ್ನು ಸುಲಭವಾಗಿ ಸಾರಿ ಹೇಳಿದ್ದಾರೆ.

ಲಿಂಗಭಕ್ತನಾದ ಬಳಿಕ ತನ್ನಂಗದಲ್ಲಿ ಧರಿಸಿರ್ಪ
ಲಿಂಗಪುಜೆ ಒಂದನಲ್ಲದೆ ಅನ್ಯವನರಿಯದಿರಬೇಕು.
ಆ ಲಿಂಗದಲ್ಲಿ ನೈಷ್ಠಿಕಭಾವ ಇಂಬುಗೊಂಡಿರಬೇಕು
ಆ ಲಿಂಗವೆ ಪತಿ ತಾನೆ ಸತಿಯೆಂಬ ದೃಢ ಬುದ್ದಿ ನಿಶ್ಚಯವಾಗಿರಬೇಕು.
ಹೀಗಲ್ಲದೆ ತನ್ನ ದೇಹದ ಮೇಲೆ ಇರುತಿರ್ಪ ಲಿಂಗವ
ಸಾಮಾನ್ಯವ ಮಾಡಿ ಕಂಡಕಂಡ ದೇಗುಲದೊಳಗಣ
ಕಲ್ಲ ದೇವರೆಂದು ಭಾವಿಸಿ ಪೂಜಿಸುವ
ಗಾವಿಲ ಮೂಳ ಹೊಲೆಯರ ಮುಖವ ನೋಡಲಾಗದಯ್ಯ ಅಖಂಡೇಶ್ವರಾ. -ಷ.ವ. ೨೯೪

ಈ ವಚನದಲ್ಲಿ ಅನೇಕ ದೇವತಾ ಪೂಜೆ (Polytheism) ಮಾಡುವದನ್ನು ಖಂಡಿಸಿ ಶರಣಸತಿಯರಾದವರು ಲಿಂಗಪತಿಯಾದ ಇಷ್ಟಲಿಂಗವನ್ನು ಮಾತ್ರ ಪೂಜಿಸಬೇಕೆಂದು ಒತ್ತಿ ಹೇಳಿ ಏಕದೇವೋಪಾಸನೆ (Monotheism) ಯ - ತತ್ವವನ್ನು ಎತ್ತಿ ಹಿಡಿದಿದ್ದಾರೆ, ಷಣ್ಮುಖ ಶಿವಯೋಗಿಗಳು.

ಅಂಗದ ಮೇಲಣ ಲಿಂಗವ ಹಿಂಗಿ
ಸ್ಥಾವರ ಲಿಂಗಕ್ಕೆರಗುವ ಭಂಗಿತರ ಮುಖವ ನೋಡಲಾಗದು.
ಅದೆಂತೆಂದೊಡೆ, ತನ್ನ ಗಂಡನ ಬಿಟ್ಟು ಅನ್ಯಗಂಡರಿಗೆರಗುವ
ಹಾದರಗಿತ್ತಿಯಂತೆ ಅವಂದಿರ ಭಕ್ತಿ,
ಅಂತಪ್ಪ ಪಂಚಮಹಾಪಾತಕರ
ತೋರದಿರಾ ಗುಹೇಶ್ವರಾ.
-ಅ .ವ. ೯೯೨

ಅಂಗದ ಮೇಲೆ ಧರಿಸಿದ ಇಷ್ಟಲಿಂಗವನ್ನು ಹಿಂಗಿ, ಸ್ಥಾವರಲಿಂಗಕ್ಕೆ ಎರಗುವುದು ಅಧ್ಯಾತ್ಮಿಕ ಹಾದರವೆಂದೂ, ಪಂಚಮಹಾ ಪಾತಕವೆಂದೂ ಹೇಳಿ ಸ್ಥಾವರಲಿಂಗ ಪೂಜೆಯನ್ನು ಖಂಡಿಸಿದ್ದಾರೆ ಅಲ್ಲಮ ಪ್ರಭುದೇವರು.

ಕಟ್ಟಿದ ಲಿಂಗವ ಬಿಟ್ಟು, ಬೆಟ್ಟದ ಲಿಂಗಕ್ಕೆ ಹೋಗಿ,
ಹೊಟ್ಟಡಿಯಾಗಿ ಬೀಳುವ ಲೋಟ್ಟಿ ಮೂಳನ ಕಂಡಡೆ,
ಮೆಟ್ಟಿದ್ದ ಎಡಪಾದರಕ್ಷೆಯ ತಗೊಂಡು, ಲಟಪಟನೆ
ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯನು.


ಮೇಲಿನ ವಚನದ ಮಥಿತಾರ್ಥವನ್ನೇ ಅಂಬಿಗರ ಚೌಡಯ್ಯನವರು ಕಠೋರ ಶಬ್ದಗಳಿಂದ ಹೇಳಿದ್ದಾರೆ. ಇಷ್ಟಲಿಂಗ ಬಿಟ್ಟು ಸ್ಥಾವರಲಿಂಗವನ್ನು ಪೂಜಿಸುವುವವರನ್ನು ಖಂಡಿಸಿದ್ದಾರೆ.

ಮೆಟ್ಟಿದಾ ಕಲ್ಲಿಗೆ ಬುಟ್ಟಿ ಪತ್ರೆಯ ಹಾಕಿ
ಕಟ್ಟಿದಾಲಿಂಗವಡಿಮಾಡಿ ಶರಣೆಂಬ
ಭ್ರಷ್ಟನವ ಕಾಣೋ ಸರ್ವಜ್ಞ ||

ಸರ್ವಜ್ಞ ಕವಿಯು ಸಹ ಇಷ್ಟಲಿಂಗವಿರುವಾಗ ಸ್ಥಾವರಲಿಂಗಕ್ಕೆ ಶರಣೆಂದು ಪೂಜಿಸುವಾತನು ಭ್ರಷ್ಟನೆಂದು ಹೇಳಿದ್ದಾನೆ. ಇದೇ ವಿಚಾರ ಸರಣಿಯನ್ನು ಆಂಧ್ರ ಪ್ರದೇಶದಲ್ಲಿ ಸರ್ವಜ್ಞನಂತೆ ಜನಪ್ರಿಯವಾದ ಕವಿ ವೇಮಣ್ಣನ ಒಂದು ವಚನದಲ್ಲಿ ನಾವು ಕಾಣಬಹುದಾಗಿದೆ.

ಅರತು ಲಿಂಗಮು ಗಟ್ಟಿ, ಅದಿ ನಮ್ಮ ಗಾಲೋಕ |
ಪರ್ವತಂಬುಲ ಬೋವು ಪಾಮರುಂಡು ||
ಚೇತವೆನ್ನ ಬಟ್ಟನೇತಿ ಕೇಡಿನಯಟ್ಟು ವಿಶ್ವತಾಭಿರಾಮ ವಿನುರವೇಮ.

ಲಿಂಗವನ್ನು ಕಟ್ಟಿ ಅದರಲ್ಲಿ ನಂಬುಗೆ ಇಲ್ಲದೆ, ಪರ್ವತಕ್ಕೆ ಹೋಗುವ ಪಾಮರನು, ಕೈಯಲ್ಲಿ ಬೆಣ್ಣೆಯನ್ನು ಹಿಡಿದು ತುಪ್ಪಕ್ಕೆ ಅತ್ತಂತೆ."

ಶೈವರು ಕಟ್ಟಿದ ಗುಡಿಯ ಹೋಗಲೇಕೆ ?
ಶೈವರು ನಟ್ಟಲಿಂಗವ ಮುಟ್ಟಿ ಪೂಜಿಸಲೇಕೆ ?
ತನ್ನ ಗುರುಕೊಟ್ಟ ಇಷ್ಟಲಿಂಗ ಕೊಡಲರಿಯದೆಂದು
ನಟ್ಟಿದ್ದಲಿಂಗ ಕೊಟ್ಟಿತೆಂಬ ಬೊಟ್ಟಿಗಳ ನೋಡಿ
ಹೊಟ್ಟೆ ಹುಣ್ಣಾದಂತೆ ನಗುತಿದ್ದೆನಯ್ಯಾ..
ಕಯ್ಯಲ್ಲಿ ಹಣ್ಣಿದ್ದಂತೆ ಮರವನೇರಿ ಕೊಂಬೆಯ ಬಾಗಿಸಿ
ಕಾಯ ಕೊಯ್ಯ, ಅರೆ ಮರುಳನಂತೆ, ಅನಾದಿ ಮೂಲದೊಡೆಯ
ತನ್ನ ಕರಸ್ಥಲದ ಮನಸ್ಥಲದಲ್ಲಿಪ್ಪುದ ತಾನರಿಯದೆ
ಬೇರೆ ಲಿಂಗ ಉಂಟು, ಬೇರೆ ಕ್ಷೇತ್ರ ಉಂಟು, ಎಂದು
ಹಲವು ಲಿಂಗಕ್ಕೆ ಹರಿದು ಹಂಬಲಿಸುವ ಮೂರ್ಖರಿಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲ.
ಮುಕ್ತಿ ಎಂಬುದು ಎಂದೆಂದಿಗೂ ಇಲ್ಲ ಕಾಣಾ, ಮಹಾಲಿಂಗ
ಗುರು ಶಿವ ಸಿದ್ದೇಶ್ವರ ಪ್ರಭುವೆ ? - ತೋ.ಸಿ. ೨೬೭

ಶೈವರು ಕಟ್ಟಿದ ಗುಡಿ ಗುಂಡಾರಗಳಿಗೆ ಹೋಗಿ ಸ್ಥಾವರಲಿಂಗವನ್ನು ಲಿಂಗವಂತರು ಪೂಜಿಸಬಾರದೆಂದು ತೋಂಟದ ಸಿದ್ಧಲಿಂಗ ಶಿವಯೋಗಿಗಳು ಎಚ್ಚರಿಕೆಯನ್ನಿತ್ತಿದ್ದಾರೆ. ಕೈಯಲ್ಲಿ ಅಮೃತಫಲವಿರುವಾಗ ಮರದ ಕೊಂಬೆಯ ಕಾಯ ಕೊಯ್ಯುವ ಮೂರ್ಖನಂತೆ, ಕರಸ್ಥಲದಲ್ಲಿ ಇಷ್ಟಲಿಂಗವೆಂಬ ಪರಶಿವನಿರುವಾಗ, ಬೇರೆ ಕ್ಷೇತ್ರಲಿಂಗಗಳಿಗೆ ಹಂಬಲಿಸುವ ಮೂಢರಿಗೆ ಗುರು ಲಿಂಗ ಜಂಗಮ ಪ್ರಸಾದಗಳು ಸಿಗಲಾರವೆಂದೂ, ಅಲ್ಲದೆ ಮುಕ್ತಿಯಂತೂ ಎಂದೆಂದಿಗೂ ಲಭಿಸದೆಂದು ಸ್ಪಷ್ಟವಾಗಿ ಹೇಳಿದ್ದಾರೆ.

ಬಸವ ಪ್ರಣೀತ ಲಿಂಗಾಯತ ಧರ್ಮವು ತೀರ್ಥಕ್ಷೇತ್ರ ಯಾತ್ರೆಯನ್ನು ಮನ್ನಿಸುವುದಿಲ್ಲ. ಅಂದರೆ ಅದರರ್ಥ ಹೋಗಲೇಬಾರದೆಂದೇನೂ ಅಲ್ಲ; ಹೋಗುವ ಹಿಂದಿನ ಉದ್ದೇಶ ಬಹು ಮುಖ್ಯ. ಐತಿಹಾಸಿಕ ಸ್ಥಳಗಳನ್ನು ನೋಡಲು, ಶರಣರು ಮಹಾತ್ಮರು ಬದುಕಿ ಬಾಳಿದ ಕ್ಷೇತ್ರಗಳನ್ನು ಸಂದರ್ಶಿಸಲು, ಅಥವಾ ಅಲ್ಲಿ ಕೆಲಸಮಯ ಕಳೆದು ಧ್ಯಾನ, ಜಪಮಾಡಿ ಸ್ಫೂರ್ತಿಯನ್ನು ಪಡೆಯಲು ಬೇಡವೆನ್ನರು. ಹಾಗೆ ತಿಳಿಯದೆ, ತೀರ್ಥ ಕ್ಷೇತ್ರಗಳಿಗೆ ಹೋಗಿ ಪಾಪ ಪರಿಹಾರ ಮಾಡಿಕೊಂಡು, ಪುಣ್ಯಾರ್ಜನೆ ಗೆದುಕೊಂಡು ಬರುತ್ತೇವೆ ಎಂಬ ನಂಬಿಕೆಯನ್ನು ವಿರೋಧಿಸಿದರು. ಗಂಗಾ ನದಿಯ ನೀರಿನಲ್ಲಿ ಮಿಂದ ಮಾತ್ರಕ್ಕೆ ಮಾಡಿದ ಪಾಪವೆಲ್ಲ ಪರಿಹಾರ ಎಂಬ ನಂಬಿಕೆಯನ್ನೂ ಅವರು ಟೀಕಿಸಿದರು.

ತೊರೆಯ ಮೀವ ಅಣ್ಣಗಳಿರಾ
ತೊರೆಯ ಮೀವ ಸ್ವಾಮಿಗಳಿರಾ
ತೊರೆಯಿಂ ಬೋ, ತೊರೆಯಿಂ ಬೋ,
ಪರನಾರಿಯರ ಸಂಗವ ತೊರೆಯಿಂ ಭೋ !
ಪರಧನದಾಮಿಷವ ತೊರೆಯಿಂ ಬೋ
ಇವ ತೊರೆಯದೆ ಹೋಗಿ ತೊರೆಯ ಮಿಂದಡೆ
ಬರುದೊರೆ ಹೋಹುದು, ಕೂಡಲ ಸಂಗಮದೇವಾ. -ಬ.ಷ.ವ. ೬೪೨

ಪರಧನದಾಸೆ, ಪರಸ್ತ್ರೀಯ ಮೋಹ, ಘಾತುಕತನ ಇವುಗಳನ್ನು ತೊರೆಯದೆ. ಹೋಗಿ ತೊರೆಯ ಮಿಂದರೆ ಅದೇನೂ ಪ್ರಯೋಜನಕಾರಿಯಲ್ಲ.

ತೀರ್ಥಕ್ಷೇತ್ರ ದರ್ಶನ ಮತ್ತು ಸ್ಥಾವರಲಿಂಗ ಪೂಜೆ ಮಾಡುವುದನ್ನು ವಿರೋಧಿಸಲು ಹಲವಾರು ಕಾರಣಗಳನ್ನು ಶರಣರು ಕಂಡಿರಲು ಸಾಕು. ದೊಡ್ಡ ದೊಡ್ಡ ಕ್ಷೇತ್ರಗಳಲ್ಲಿ ಹಿಂದೆ ಏಕೆ, ಇಂದಿಗೂ ಎಂಥ ಅನ್ಯಾಯಗಳು ನಡೆಯುತ್ತವೆಂಬುದನ್ನು ತಿಳಿಯಬೇಕಾದರೆ ಶ್ರೀ ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶವನ್ನು ಓದಿ ತಿಳಿಯಬೇಕು. ಇಲ್ಲವೇ ಪ್ರತ್ಯಕ್ಷವಾಗಿ ಅಂಥ ದೊಡ್ಡ ಕ್ಷೇತ್ರಗಳಲ್ಲಿ ಕೆಲವು ದಿನ ಇದ್ದು ಸೂಕ್ಷ್ಮವಾಗಿ ಅಲ್ಲಿ ನಡೆಯುವ ವ್ಯವಹಾರಗಳನ್ನು ನಿರೀಕ್ಷಿಸಬೇಕು. ಪೂಜಾರಿಗಳ ಕಪಿ ಮುಷ್ಠಿಯಲ್ಲಿ ಸಿಕ್ಕಿ ಒದ್ದಾಡುವ ಭಕ್ತರನ್ನು ಕಂಡು ಬಸವಣ್ಣನವರು ಗುಡಿ ಗುಂಡಾರಗಳಿಗೆ ಹೋಗದೆ ಸರಳವಾಗಿ ಆಧ್ಯಾತ್ಮ ಜೀವಿಗಳಾಗಿ ದೇವನನ್ನು ಕೂಡುವ ಮಾರ್ಗವನ್ನು ಕಂಡು ಹಿಡಿದು ಪ್ರತಿಯಾಬ್ಬರಿಗೆ ಇಷ್ಟಲಿಂಗವನ್ನು ಪೂಜಿಸಲು ಕೊಟ್ಟರು. ಶ್ರೀ ದಯಾನಂದ ಸರಸ್ವತಿಗಳು ಭಾರತದಲ್ಲಿರುವ ಉಪಾಸನಾ ಕ್ರಮಗಳನ್ನೆಲ್ಲಾ ಕಟುವಾಗಿ ಖಂಡಿಸಿದ್ದಾರೆ. ಆದರೆ ಬೇರೆ ಪ್ರತಿಯಾಗಿ (Substitute) ಒಂದು ಉಪಾಸನಾ ಮಾರ್ಗವನ್ನು ತೋರಿಸುವುದರಲ್ಲಿ ಅವರು ಯಶಸ್ವಿಯಾಗಿಲ್ಲ; ಮತ್ತು ಅವರ ಟೀಕೆಯೆಲ್ಲವನ್ನೂ ಒಪ್ಪುವಂತಿಲ್ಲ. ಬಸವಣ್ಣನವರು ತೀರ್ಥಕ್ಷೇತ್ರಗಳನ್ನು ಖಂಡಿಸಿದರೂ ಪ್ರತಿಯಾಗಿ ಒಂದು ಸುಲಭವಾದ ಮತ್ತು ವೈಜ್ಞಾನಿಕ ಹಿನ್ನೆಲೆಯುಳ್ಳ ಇಷ್ಟಲಿಂಗವೆಂಬ ಉಪಾಸನಾ ವಸ್ತುವನ್ನು ಬಳಕೆಗೆ ತಂದು ಸಾಧಕರು ಅತ್ಯುನ್ನತ ನಿಲುವಿನ ಶಿವಾನುಭವಿಗಳಾಗಲು ಅವಕಾಶ ಕಲ್ಪಿಸಿಕೊಟ್ಟರು. ಆದ್ದರಿಂದ ಇವರ ಕ್ರಾಂತಿಯು ವಿಧಾಯಕವಾಗಿದೆ, ಮುಮುಕ್ಷುಗಳಿಗೆ ಹೆಚ್ಚು ಸಹಾಯಕವಾಗಿದೆ. ಶರಣರ ವಚನಗಳಿಗೆ ಶಬ್ದಶಃ ಅರ್ಥವನ್ನು ಮಾಡಬಾರದು. ಅವರ ವಚನಗಳು ಒಮ್ಮೊಮ್ಮೆ ಅಧರಕ್ಕೆ ಕಹಿ, ಉದರಕ್ಕೆ ಸಿಹಿಯಾಗಿರುತ್ತವೆ. ಅವರ ವಚನಗಳ ಹಿಂದಿರುವ ಭಾವವನ್ನೂ, ಕಳಕಳಿಯನ್ನೂ ಅರಿಯಬೇಕು. ಕೈಯಲ್ಲಿ ಪ್ರತಿಯಾಬ್ಬರಿಗೂ ಕೈಗಡಿಯಾರವನ್ನು ಕೊಟ್ಟಿರುವಾಗ, ಅದನ್ನು ನೋಡಿ ಸಮಯವರಿಯುವದನ್ನು ಬಿಟ್ಟು ಸೂರ್ಯನನ್ನು ನೋಡಿ ಸಮಯವನ್ನು ತಿಳಿದುಕೊಳ್ಳುವುದಾಗಲಿ, ಕೋಳಿ ಕೂಗುವುದರ ಮೇಲೆ ಅಥವಾ ಗೋಪುರ ಗಡಿಯಾರ ನೋಡಿ ಸಮಯ ತಿಳಿಯುವ ಹುಚ್ಚು ಪ್ರಯತ್ನವನ್ನು ಮಾಡಬಾರದೆಂದು ಬೈದು ಬುದ್ದಿ ಹೇಳಿದ್ದಾರೆ. ಅಂದರೆ ಇಷ್ಟಲಿಂಗವೆಂಬ ಕೈಗಡಿಯಾರವಿರುವಾಗ ಸ್ಥಾವರಲಿಂಗವೆಂಬ ಗೋಪುರ ಗಡಿಯಾರವನ್ನು ನೋಡುವ ಅವಶ್ಯಕತೆಯಿಲ್ಲವೆಂಬುದು ಅವರ ಅಭಿಮತವಾಗಿದೆ.

ಹಾಲು ಹಿಡಿದು ಬೆಣ್ಣೆಯನರಸಲುಂಟೆ ?
ಆ ಲಿಂಗವ ಹಿಡಿದು ಪುಣ್ಯ ತೀರ್ಥಕ್ಕೆ ಹೋಗಲುಂಟೆ ?
ಲಿಂಗದ ಪಾದತೀರ್ಥ ಪ್ರಸಾದವ ಕೊಂಡು
ಅನ್ಯ ಬೋಧೆ ಅನ್ಯ ಶಾಸ್ತ್ರಕ್ಕೆ ಹಾರೈಸಲೇತಕ್ಕೆ ?
ಇಷ್ಟಲಿಂಗವಿದ್ದಂತೆ ಸ್ಥಾವರ ಲಿಂಗಕ್ಕೆ ಶರಣೆಂದೊಡೆ
ತಡೆಯದೆ ಹುಟ್ಟಿಸುವ ಶ್ಯಾನನ ಗರ್ಭದಲ್ಲಿ
ಗುರುಕೊಟ್ಟ ಲಿಂಗದಲ್ಲಿಯೇ ಎಲ್ಲ ತೀರ್ಥಂಗಳು ಎಲ್ಲ ಕ್ಷೇತ್ರಗಳು
ಇಹವೆಂದು ಭಾವಿಸಿ ಮುಕ್ತರಪ್ಪುದಯ್ಯಾ, ಇಂತಲ್ಲದೆ
ಗುರುಕೊಟ್ಟ ಲಿಂಗವ ಕಿರಿದು ಮಾಡಿ ತೀರ್ಥಲಿಂಗವ ಹಿರಿದು ಮಾಡಿ
ಹೋದಾತಂಗೆ ಅಘೋರ ನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನಾ -ಮ.ಅ.ವ. ೧೫೭

ಮನೆಯಲ್ಲಿ ವಿಪುಲವಾಗಿ ಆಕಳ ಹಾಲು ಇರುವಾಗ, ಊರೆಲ್ಲ ತಿರುಗಾಡಿ ಬೆಣ್ಣಿ ತರಲು ಹೋಗಿ, ಮೋಸಬಿದ್ದು ಡಾಲ ತೆಗೆದುಕೊಂಡು ಬಂದಂತೆ ಲಿಂಗವಿರುವಾಗ ಹೊರಗಿನ ತೀರ್ಥಕ್ಕೆ ಹೋಗುವುದು ಹುಚ್ಚುತನವಲ್ಲವೆ ? ಇಷ್ಟಲಿಂಗವನ್ನು ಕಟ್ಟಿಕೊಂಡು ಸ್ಥಾವರ ಲಿಂಗಕ್ಕೆ ನಮಸ್ಕರಿಸಿದರೆ ನಾಯಿಯ ಜನ್ಮ ಬರುವುದೆಂದು ಮಹಾ ಶಿವಶರಣೆ ಅಕ್ಕಮಹಾದೇವಿ ಹೇಳುತ್ತಾಳೆ. ಮತ್ತು ಗುರು ಕೊಟ್ಟ ಇಷ್ಟಲಿಂಗದಲ್ಲಿ ಸಕಲ ತೀರ್ಥಗಳಿರುವಾಗ ಬೇರೆ ತೀರ್ಥಗಳಿಗೆ ಹೋಗುವುದು ನರಕ ಪ್ರಾಯವೆಂದು ನಿವೇದಿಸಿದ್ದಾಳೆ.

ಶಿವ ಸಂವಿಷ್ಕರಣಾಬ್ಬ ರೇಣುಪತನಂ ಕ್ಷೇತ್ರಂ ತದೀಯಾಂಘಿಕಂ ||
ಭವಸಂಕ್ಷಾಲಿತ ತೋಯಮೇ ವಿಮಲತೀರ್ಥ೦ ತತ್ವದಾಂ ಭೋಜಯು ||
ಗ್ರವೆದೈವಂ ಜಡಭೌತಿಕ ಪ್ರಕೃತಿ ತೀರ್ಥಕ್ಷೇತ್ರ ದೈವಂಗಳೆಂ |
ಬಿವು ಮಿಕ್ಕಜ್ಞರಿಗೈಸೆ ನಿಮ್ಮ ವರಿವಂ ಪೊರ್ದ್ದರ್ ಶಿವಾವಲ್ಲಭಾ ||

ಪ್ರಾಜ್ಞರಾದವರಿಗೆ ಶಿವಜ್ಞಾನಿಯಾದ ಶರಣನ ಪಾದಧೂಳಿಯು ಬಿದ್ದಿರುವ ಸ್ಥಲವೇ ಪುಣ್ಯಕ್ಷೇತ್ರವು. ಆ ಶರಣನ ಪಾದವನ್ನು ತೊಳೆದ ಜಲವೇ ನಿರ್ಮಲವಾದ ತೀರ್ಥವು. ಅವನ ಪಾದ ಕಮಲಗಳೇ ದೈವವು, ಅಚೇತನವೂ ಭೂತ ಸಂಬಂಧವೂ ಮಾಯಾತ್ಮಕವೂ ಆಗಿರುವ ತೀರ್ಥಕ್ಷೇತ್ರ-ದೈವ ಎಂಬವುಗಳೆಲ್ಲಾ ಉಳಿದ ಪ್ರಾಕೃತರಾದ ಅಜ್ಜ ಜನರ ಸೇವೆಗೆ ಅರ್ಹವಾದವುಗಳಲ್ಲವೆ ? ಆದ್ದರಿಂದ ನಿಮ್ಮ ಶರಣರು ಈ ಪ್ರಾಕೃತ ಕ್ಷೇತ್ರ ಯಾತಾದಿಗಳ ಸೇವೆ ಹಂಬಲವ ಹಾರೈಸರು, ಎಂದು ಮಗ್ಗೆಯ ಮಾಯಿದೇವರು ಮಾರ್ಮಿಕವಾಗಿ ಹೇಳಿದ್ದಾರೆ. ತೀರ್ಥಕ್ಷೇತ್ರಗಳಲ್ಲಿ ವಿಶೇಷವಾದ ಜಾತ್ರೆಯ ಸಂದರ್ಭಗಳಲ್ಲಿಯಂತೂ ನೋಡಲಾಗಲ್ಲ. ಪುಣ್ಯಸ್ಥಾನವೆಂದು ಹೋದ ಜನಗಳೇ ಅನಾಗರಿಕರಂತೆ ಎಲ್ಲಿ ಬೇಕಾದರಲ್ಲಿ ಮಲಮೂತ್ರಗಳನ್ನು ಮಾಡಿ ಆ 'ತೀರ್ಥ' `ಜಲದಲ್ಲಿಯೇ ಕೈಕಾಲು ಮುಖಗಳನ್ನೆಲ್ಲಾ ತೊಳೆದುಕೊಂಡು, ಅದೇ ಪವಿತ್ರ ತೀರ್ಥವೆಂದು ಸೇವಿಸುವ ಸನ್ನಿವೇಶವನ್ನು ನೋಡಿದರೆ, ಎಂದೂ ತೀರ್ಥಯಾತ್ರೆ ಮಾಡಬಾರದೆಂದು ಯಾವ ನಾಗರಿಕ ಮಾನವನಿಗೂ ಅನ್ನಿಸದೆ ಇರದು ಮತ್ತು ಕ್ಷೇತ್ರಸ್ಥಳವು ಅನಾರೋಗ್ಯಕರವಾಗಿರುವುದೆಂಬುದನ್ನು ಬೇರೆ ಹೇಳ ಬೇಕಾಗಿಲ್ಲ. ಭಾರತದ ದಾರಿದ್ರದ ಪ್ರತಿನಿಧಿಗಳಾಗಿ ನೂರಾರು ಭಿಕ್ಷುಕರು ಮಾರ್ಗದ ಅಕ್ಕಪಕ್ಕದಲ್ಲಿ ಕುಳಿತಿರುವುದನ್ನು ನೋಡಿದರೆ ಮನಸ್ಸಿಗೆ ತುಂಬ ವೇದನೆಯಾಗದೆ ಇರಲಾರದು. ಅಲ್ಲದೆ ಅನೇಕ ಕಳವು-ವ್ಯಭಿಚಾರ-ಮೋಸ ಇತ್ಯಾದಿ ಅನ್ಯಾಯ ಅನಿಷ್ಟಗಳನ್ನು ತೀರ್ಥಕ್ಷೇತ್ರಗಳಲ್ಲಿ ಸಹಜವಾಗಿ ನೋಡಬಹುದು. ಇದೆಲ್ಲವನ್ನು ಕಣ್ಣಾರೆ ಕಂಡ ಬಸವಣ್ಣನವರು ಮತ್ತು ಶರಣರು ಈ ಸಾಮಾಜಿಕ ಅನ್ಯಾಯವು ದೇವರು, ಧರ್ಮದ ಹೆಸರಿನಲ್ಲಿ ನಡೆಯುವುದನ್ನು ತಪ್ಪಿಸುವುದರ ಸಲುವಾಗಿ, ತೀರ್ಥಕ್ಷೇತ್ರಕ್ಕೆ ಹೋಗಕೂಡದೆಂದು ಆ ದೇವನನ್ನು ತನ್ನಲ್ಲಿಯೆ ಕಾಣಬೇಕೆಂದು ಸಾರಿ ಸಾರಿ ಹೇಳಿದ್ದಾರೆ.

ಒಬ್ಬರ ಮನವ ನೋಯಿಸಿ, ಒಬ್ಬರ ಮನೆಯ ಘಾತವ ಮಾಡಿ,
ಗಂಗೆಯಲಿ ಮುಳುಗಿದಡೇನಾಗುವದಯ್ಯಾ ?
ಚಂದ್ರನು ಗಂಗೆಯ ತಡೆಯಲ್ಲಿದ್ದರೂ ಕಲಂಕ ಬಿಡದಾಯಿತ್ತು
ಅದು ಕಾರಣ, ಮನವ ನೋಯಿಸದವನೇ ಘಾತವ ಮಾಡದವನೇ
ಪರಮಪಾವನ ನೋಡಾ ಕಪಿಲಸಿದ್ಧ ಮಲ್ಲಿಕಾರ್ಜುನಾ -ಸಿ.ವ. ೨೯೦

ಸಿದ್ದರಾಮೇಶ್ವರರು ಈ ವಚನದಲ್ಲಿ ಬಹಳ ಒಳ್ಳೆಯ ವಿಚಾರವನ್ನು ಪ್ರತಿಪಾದಿಸಿದ್ದಾರೆ. ತಾವು ಮಾಡಿದ ಪಾಪಗಳೆಲ್ಲ ಪುಣ್ಯತೀರ್ಥಗಳಲ್ಲಿ ಸ್ನಾನ ಮಾಡಿದರೆ ಪರಿಹಾರವಾಗುತ್ತವೆಂಬ ಕಲ್ಪನೆಯಿಂದ ಸಾವಿರಾರು ಜನಗಳು ತೀರ್ಥಕ್ಷೇತ್ರಗಳಿಗೆ ಹೋಗುತ್ತಾರೆ. ಅಲ್ಲಿ ಸ್ನಾನ ಮಾಡಿ 'ನಾವು ಪಾವನವಾದೆವು' ಎಂದು ತಿಳಿದುಬಿಡುತ್ತಾರೆ. ಮತ್ತೆ ಅನೇಕ ಪಾಪ ಕರ್ಮಗಳನ್ನು ಮಾಡಿ ಗಂಗೆಯಲ್ಲಿ ಮುಳುಗುವ ಅನೇಕ ಮಹಾಶಯರಿದ್ದಾರೆ... ಗಂಗೆಯಲ್ಲಿ ಸ್ನಾನ ಮಾಡಿದರೆ ಪಾಪವು ಪರಿಹಾರವಾಗುತ್ತದೆಂದು ನಂಬುವುದು ಸಾಹಸದ ಮಾತೇ ಸರಿ ! ಭೌತಿಕ ಜಲದಿಂದ ಭೌತಿಕ ಶರೀರವು ಸ್ವಚ್ಛವಾಗಬಹುದೇ ವಿನಾ ಪಾವನವಾಗಲಾರದು. ಭಕ್ತಿ ಜಲದಿಂದ, ದಯಾರಸದಿಂದ, ಪಶ್ಚಾತ್ತಾಪದ ಕಣ್ಣೀರಿನಿಂದ ತಾವು ಮಾಡಿದ ಪಾಪಗಳನ್ನು ತೊಳೆದುಕೊಳ್ಳಬೇಕಲ್ಲದೆ ತೀರ್ಥ ಸ್ನಾನದಿಂದಲ್ಲವೆಂದು ಶರಣರು ಹೇಳುತ್ತಾರೆ. ಇನ್ನೊಬ್ಬರಿಗೆ ನೋವನ್ನುಂಟು ಮಾಡದಂತೆ ಸದಾಚಾರ ಸಜ್ಜನತ್ವ ಸಹಿತರಾಗಿ, ಸದ್ಯಾವ ಸುಜಲದಿಂದ ಮಜ್ಜನಗೈದರೆ ಪಾವನರಾಗುವರೆಂದು ಶರಣರು ಸಾರಿ ಹೇಳಿದ್ದಾರೆ. ಇದಕ್ಕೊಂದು ಸುಂದರ ದೃಷ್ಟಾಂತವಿದೆ. ಒಮ್ಮೆ ಗುರು ನಾನಕರು ಒಂದು ಊರಲ್ಲಿ ವಸತಿ ಮಾಡಿ, ಪ್ರವಚನ ನಡೆಸುತ್ತಿದ್ದರು. ಆ ಊರಲ್ಲಿ ಇಬ್ಬರು ಪುಡಾರಿಗಳು ಪರಸ್ಪರ ದ್ವೇಷಿಗಳಿದ್ದು, ಒಬ್ಬರ ಮೇಲೊಬ್ಬರು ಶತ್ರುತ್ವ ಸಾಧಿಸುತ್ತಿದ್ದರು. ಒಬ್ಬನು ದಕ್ಷಿಣಭಾರತದ ಯಾತ್ರೆ ಹೊರಟ. ಮತ್ತೊಬ್ಬನು ಅದನ್ನು ತಿಳಿದು ಉತ್ತರಭಾರತದ ಯಾತ್ರೆ ಕೈಗೊಂಡ. ಅವರು ತಮ್ಮ ಕೀರ್ತಿಯನ್ನು ಮೆರೆಸಿಕೊಳ್ಳಬೇಕೆಂದು ಗುರುನಾನಕರನ್ನು ಆಹ್ವಾನಿಸಿದರು. ಅವರು ಹೇಳಿದರು, “ನನಗೆ ಎಲ್ಲಿಯೂ ಬರಲು ಇಷ್ಟವಿಲ್ಲ. ನನ್ನ ಪರವಾಗಿ ಈ ವಸ್ತುಗಳನ್ನು ಕೊಡುತ್ತೇನೆ. ಒಯ್ದು, ನೀವು ಮುಳುಗಿದಲ್ಲೆಲ್ಲ ಇವನ್ನು ಮುಳುಗಿಸಿ ತೀರ್ಥಸ್ನಾನ ಮಾಡಿಸಿಕೊಂಡು ಬನ್ನಿರಿ" ಎಂದು ಹೇಳಿ ಒಬ್ಬನಿಗೆ ಕಹಿ ಸೋರೆಕಾಯಿ, ಇನ್ನೊಬ್ಬನಿಗೆ ಹಾಗಲಕಾಯಿ ಕೊಟ್ಟರು. ಅವರು ಅದರಂತೆ ತೀರ್ಥಸ್ನಾನ ಮಾಡಿಸಿಕೊಂಡು ಬಂದರು. ಅವೆರಡನ್ನೂ ಪಲ್ಯ ಮಾಡಿ ಪ್ರಸಾದವೆಂದು ನಾನಕರು ಕೊಟ್ಟರು. ಶ್ರೀಮಂತರು ತಿಂದು ಮುಖ ಕಹಿ ಮಾಡಿಕೊಂಡರು. "ಇಷ್ಟೆಲ್ಲ ತೀರ್ಥಕ್ಷೇತ್ರ ಸ್ನಾನ ಮಾಡಿ ಬಂದರೂ ಇವುಗಳ ಕಹಿಯೇ ಹೋಗಿಲ್ಲವಲ್ಲ !" ಎಂದು ಗುರುನಾನಕರು ಉದ್ಘಾರ ತೆಗೆದರು.

"ಅದೇ ರೀತಿ ನೀವು ಎಷ್ಟು ಜಡ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದರೇನು, ನಿಮ್ಮ ಸ್ವಭಾವಜನ್ಯ ದ್ವೇಷ-ಮಾತ್ಸರ್ಯಗಳನ್ನು ಗೆಲ್ಲದಿದ್ದರೆ ?" ಎಂದರು. ಆ ಶ್ರೀಮಂತರು ನಾಚಿ ನೀರಾದರು, ಮತ್ತು ಪರಸ್ಪರ ದ್ವೇಷಿಸುವುದನ್ನು ಬಿಟ್ಟರು..

ಭಕ್ತರ ಮನೆಯ ಅಂಗಣ ವಾರಣಾಸಿ ಎಂಬುದು ಹುಸಿಯೇ ?
ಭಕ್ತರ ಮನೆಯ ಅಂಗಣದಲ್ಲಿ ಅಷ್ಟಾಷಷ್ಟಿ ತೀರ್ಥಂಗಳು
ನೆಲಸಿಪ್ಪವಾಗಿ ಸುತ್ತಿದಡೆ ಶ್ರೀಶೈಲ, ಕೆಲಬಲದಲ್ಲಿ ಕೇದಾರ.
ಅಲ್ಲಿಂದ ಹೊರಗೆ ಶ್ರೀ ವಾರಣಾಸಿ, ವಿರಕ್ತಿ ಬೀಡಾಗಿ,
ಭಕ್ತಿ ಮೊಳೆಯಾಗಿ, ಎನ್ನ ದೇವ ಚನ್ನ ಮಲ್ಲಿಕಾರ್ಜುನಯ್ಯ,
ನಿಮ್ಮ ಭಕ್ತರ ಮನೆಯ ಅಂಗಣ ಪ್ರಯಾಗದಿಂದ
ಗುರುಗಂಜಿಯಧಿಕ ನೋಡಾ ! -ಮ.ಅ.ವ, ೮೨

ಮಹಾಶಿವಶರಣಿ ಅಕ್ಕಮಹಾದೇವಿ ಭಕ್ತರ ಅಂಗಣವು ವಾರಣಾಸಿಗಿಂತ ಅಧಿಕವೆಂದೂ, ಅವರ ಅಂಗಣದಲ್ಲಿ ಎಲ್ಲಾ ತೀರ್ಥಕ್ಷೇತ್ರಗಳು ನೆಲೆಸಿವೆಯೆಂದು ಹೇಳಿದ್ದಾಳೆ. ಹೌದು; ಶರಣರು ಮೆಟ್ಟಿದ ಧರೆ ಪಾವನ, ಶರಣರು ನಿಂದುದೇ ನಿಜಕೈಲಾಸವು, ಶರಣರಿದ್ದುದೇ ಕ್ಷೇತ್ರವು-ಅವಿಮುಕ್ತ ಕ್ಷೇತ್ರವು. ಅಂದ ಮೇಲೆ ಈ ತೀರ್ಥಕ್ಷೇತ್ರಗಳಿಗೆ ಹೋಗುವ ಅವಶ್ಯಕತೆ ಅವರಿಗಿಲ್ಲವೆಂದು ಶರಣರ ಅಭಿಮತವಾಗಿದೆ. ಮತ್ತು ಹೊರಗೆ ದೇವನನ್ನು ಹುಡುಕುತ್ತ ಹೋಗುವುದು ಹುಚ್ಚುತನವೆಂದು ಅವರು ಹೇಳುತ್ತಾರೆ.

ಕಲ್ಲದೇವರು ದೇವರಲ್ಲ ಮಣ್ಣ ದೇವರು ದೇವರಲ್ಲ,
ಮರದೇವರು ದೇವರಲ್ಲ, ಪಂಚಲೋಹದಲ್ಲಿ
ಮಾಡುವ ದೇವರು ದೇವರಲ್ಲ; ಸೇತುಬಂಧ,
ರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ
ಮೊದಲಾದ ಅಷ್ಟಾಷಷ್ಟಿ ಪುಣ್ಯತೀರ್ಥಂಗಳು
ಪುಣ್ಯಕ್ಷೇತ್ರಗಳಲ್ಲಿಹ ದೇವರು ದೇವರಲ್ಲ.
ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ
ದೇವನೋಡಾ ಅಪ್ರಮಾಣ ಕೂಡಲಸಂಗಮದೇವಾ.

ಕಲ್ಲು-ಮಣ್ಣು -ಮರ-ಪಂಚಲೋಹಗಳಿಂದ ಮಾಡಿದ ಮೂರ್ತಿಗಳೇ ದೇವರಲ್ಲ. ತಿರುಪತಿ, ಕಾಶೀ-ಕೇದಾರ-ರಾಮೇಶ್ವರ, ಮಂತ್ರಾಲಯ, ಗೋಕರ್ಣ ಮುಂತಾದ ಕ್ಷೇತ್ರಗಳಲ್ಲಿ ಮತ್ತು ಮಂದಿರಗಳಲ್ಲಿ ದೇವನಿಲ್ಲ, ದೇವನು ಹೊರಗಿರದೆ ಒಳಗೆ ತನ್ನಲ್ಲಿಯೇ ಇದ್ದಾನೆ, 'ಮಣ್ಣು ಬಿಟ್ಟು ಮಡಿಕೆ ಇಲ್ಲ; ತನ್ನ ಬಿಟ್ಟು ದೇವರಿಲ್ಲವೆಂಬ ಭಾವನೆಯು ಈ ವಚನದಲ್ಲಿ ವ್ಯಕ್ತವಾಗಿದೆ. ಹೊರಗೆ ದೇವನನ್ನು ಹುಡುಕದೆ ತನ್ನಂತರಂಗದಲ್ಲಿ ದೇವನನ್ನು ಹುಡುಕಬೇಕೆಂದು ಶರಣನು ಈ ವಚನದಲ್ಲಿ ಹೇಳಿದ್ದಾನಷ್ಟೆ. ಬ್ರಹ್ಮಾಂಡದಲ್ಲಿ ಇರುವ ವಿಶ್ವಚೈತನ್ಯವು ಪಿಂಡಾಂಡದಲ್ಲಿ ಇದೆ ಎಂದು ನಿಶ್ಚಯಿಸಿ, ಅದರ ಸಂಶೋಧನೆಗಾಗಿ ಯತ್ನಿಸುವುದೇ ಅಧ್ಯಾತ್ಮ, ಈ ಅಧ್ಯಾತ್ಮದ ಉದಾತ್ತ ಕಲ್ಪನೆಯ ಬೆಂಬಳಿವಿಡಿದು, ಹೊರಗೆ ತೀರ್ಥಕ್ಷೇತ್ರಗಳಲ್ಲಿ ದೇವನನ್ನು ಹುಡುಕದೆ ತನ್ನಲ್ಲಿಯೇ ದೇವನನ್ನು ಹುಡುಕಬೇಕೆಂಬುದು ಶರಣರ ಅಭಿಮತವಾಗಿದೆ. ದೇಹದಲ್ಲಿಯೇ ದೇಹಿಯನ್ನು, ದೇವರನ್ನು ಕಾಣಬೇಕೆಂದು ಶರಣರು ಸಾರಿ ಹೇಳಿದ್ದಾರೆ. ಹೊರಗೆ ದೇವನನ್ನು ಹುಡುಕುವುದು ಹುಚ್ಚುತನವಲ್ಲವೇ ? ಅದಕ್ಕೆ ಒಂದು ದೃಷ್ಟಾಂತವಿದೆ : ಒಂದು ಊರಲ್ಲಿ ಒಬ್ಬ ಮುದುಕಿ ಇದ್ದಳು. ಅವಳು ಒಂದು ದಿನ ಒಂದು ಸೂಜಿಯನ್ನು ಗುಡಿಸಲ ಮನೆಯಲ್ಲಿ ಕಳೆದುಕೊಂಡು ಓಣಿಯಲ್ಲಿ ರಾತ್ರಿಯೆಲ್ಲಾ ಹುಡುಕಾಡುತ್ತ ಆಯಾಸಗೊಂಡಿದ್ದಳು. ಅಷ್ಟರಲ್ಲಿ ಒಬ್ಬ ಸನ್ಯಾಸಿ ಬೆಳಗಿನ ಜಾವದಲ್ಲಿ ತಿರುಗಾಡಲು ಹೋಗುವಾಗ ಈ ಮುದುಕಿ, ಏನೋ ಕಳೆದುಕೊಂಡು ಹುಡುಕಾಡುವಂತಿದೆಯೆಂದು ಭಾವಿಸಿ ಅವಳ ಹತ್ತಿರ ಬಂದನು. "ಏನಮ್ಮಾ ! ಏನು ಕಳೆದಿದೆ, ಏನೋ ಹುಡುಕಾಡುತ್ತಿರುವಿರಲ್ಲಾ ? ಎಂದು ಸನ್ಯಾಸಿ ಪ್ರಶ್ನಿಸಿದನು. ಆ ಮುದುಕಿ, "ಸೂಜಿ ಕಳಕೊಂಡು ಹುಡುಕುತ್ತಿದ್ದೇನೆ' ಎಂದು ಹೇಳಿದಳು. "ಎಲ್ಲಿ ಕಳಕೊಂಡಿರುವಿಯಮ್ಮಾ ?" ಎಂದು ಸನ್ಯಾಸಿ ಪ್ರಶ್ನಿಸಿದನು. "ಮನೆಯಲ್ಲಿ ಕಳೆಯಿತು ಬುದ್ದೀ ಎಂದು ಮುದುಕಿ ಉತ್ತರಿಸಿದಳು. "ಮನೆಯಲ್ಲಿ ಕಳೆದುಕೊಂಡು ಓಣಿಯಲ್ಲೇಕೆ ಹುಡುಕಾಡುತ್ತಿರುವಿ. ಕಳೆದಲ್ಲಿ ಹುಡುಕಾಡಬೇಕು. ಅಲ್ವೇನಮ್ಮಾ ?" ಎಂದು ಸನ್ಯಾಸಿ ಅವಳ ಅಜ್ಞಾನಕ್ಕೆ ಮರುಕದಿಂದ ನುಡಿದ. ನಂತರ ಮುದುಕಿ, "ಏನು ಮಾಡಲಿ ಸ್ವಾಮಿ ? ಮನೆಯಲ್ಲಿ ಕತ್ತಲೆಯಿದೆ, ಇಲ್ಲಿ ಓಣಿಯಲ್ಲಿ ಮುನಸಿಪಾಲಿಟಿ ದೀಪವಿದೆ. ಅದಕ್ಕೆ ಮನೆಯ ಹೊರಗೆ ಹುಡುಕಾಡುತ್ತಿದ್ದೇನೆ." ಎಂದು ತನ್ನ ಅಜ್ಞಾನ ಪ್ರದರ್ಶನ ಮಾಡಲು, ಸನ್ಯಾಸಿ ಅವಳ ಅಜ್ಞಾನಕ್ಕೆ ನಕ್ಕು "ಅಮ್ಮಾ, ಎಲ್ಲಿ ಕಳೆದು ಕೊಂಡಿರುವಿಯಾ ಅಲ್ಲೇ... ಒಳಗೆ ದೀಪ ಹಚ್ಚಿ ಹುಡುಕಮ್ಮಾ." ಎಂದು ಹೇಳಿ ಹೊರಟು ಹೋದನು. ಜಡ ತೀರ್ಥಕ್ಷೇತ್ರಗಳ ಯಾತ್ರಿಕರು ಆ ಮೂಢ ಮುದುಕಿಯಂತೆಯೇ. ಆ ಮುದುಕಿ ತನ್ನ ಮನೆಯಲ್ಲಿ ಸೂಜಿಯನ್ನು ಕಳೆದುಕೊಂಡು ಅಲ್ಲಿ ಕತ್ತಲೆಯಿದೆಯೆಂದು ಹೊರಗೆ ಓಣಿಯಲ್ಲಿ ಮುನಸಿಪಾಲಿಟಿಯ ಬೆಳಕಿನಲ್ಲಿ ಸೂಜಿಯನ್ನು ಹುಡುಕಾಡುವಂತೆ, ಯಾತ್ರಿಕನು ತನ್ನೊಳಗೆ ಆತ್ಮತತ್ವವೆಂಬ ಸೂಜಿಯನ್ನು ಕಳೆದುಕೊಂಡು ಒಳಗೆ ಅಜ್ಞಾನವೆಂಬ ಅಂಧಕಾರವಿದೆಯೆಂದು ಬಗೆದು ಹೊರಗೆ ತೀರ್ಥಕ್ಷೇತ್ರವೆಂಬ ಓಣಿಯಲ್ಲಿ ಸ್ನಾನಮಹಿಮೆಯ ಬೆಳಕಿನಲ್ಲಿ ದೇವರೆಂಬ ಸೂಜಿಯನ್ನು ಹುಡುಕಾಡುತ್ತಿದ್ದಾನೆ. ಅಲ್ಲಿ ಅದು ಹೇಗೆ ಸಿಗಬಹುದು ? ಕಳೆದ ಸ್ಥಾನದಲ್ಲಿಯೇ ಹುಡುಕಬೇಕಷ್ಟೆ. ಆದ್ದರಿಂದಲೇ ಶರಣರು, ಆ ಸನ್ಯಾಸಿಯು ಮುದುಕಿಯ ಅಜ್ಞಾನಕ್ಕಾಗಿ ಮರುಕಪಟ್ಟಂತೆ, ಯಾತ್ರಿಕರ ಮೂಢಭಕ್ತಿಗಾಗಿ ಕನಿಕರಪಟ್ಟು ತನ್ನಲ್ಲಿಯೇ ದೇವನನ್ನು ಹುಡುಕಾಡಲು ಬೋಧಿಸಿದರು. ಅಷ್ಟೇ ಅಲ್ಲ. ಒಳಗೆ ದೇವನನ್ನು ಕಾಣುವ ವಿಧಾನವನ್ನು ಹುಡುಕಿಕೊಟ್ಟರು. ಒಳಗೆ ಪಿಂಡಾಂಡದಲ್ಲಿ ಅಜ್ಞಾನವೆಂಬ ಅಂಧಕಾರವಿದೆಯೆಂದ ಮೇಲೆ ಅದರಲ್ಲಿ ಜ್ಞಾನ ಜ್ಯೋತಿಯನ್ನು ಒಯು ತನ್ನ ಸ್ವರೂಪ ಸಾಕ್ಷಾತ್ಕಾರ ಮಾಡಿಕೊಳ್ಳಬೇಕಷ್ಟೇ. ಇಲ್ಲಿ ಒಂದು ಸಂಶಯ ಬರಬಹುದು. ಲಿಂಗವಂತರೂ ಸಹ ಇಷ್ಟಲಿಂಗವೆಂಬ ಬಾಹ್ಯವಸ್ತುವನ್ನು ಪೂಜಿಸುವರೆಂದ ಮೇಲೆ, ಇವರೂ ಆ ಯಾತ್ರಿಕ (ಮುದುಕಿ) ರಂತೆ ಏಕೆ ಮೂಢರಲ್ಲ ? ಎಂದು ಪ್ರಶ್ನಿಸಬಹುದು. ಸರಿ; ಲಿಂಗವಂತ ಶರಣರು ಇಷ್ಟಲಿಂಗದಲ್ಲಿಯೇ ದೇವರನ್ನು ಹುಡುಕಾಡುತ್ತ ಕಾಲಕಳೆದಿದ್ದರೆ ಅವರೂ ಮೂಢರಾಗಬಹುದಿತ್ತು. ಆದರೆ ಅವರು ಅಲ್ಲಿ ಹುಡುಕಾಡದೆ ಕರಸ್ಥಲದ ಜ್ಯೋತಿಯನ್ನು -- ಗುರು ಕರುಣಿಸಿದ ಇಷ್ಟಲಿಂಗದ ಚಿತ್ಕಳೆಯೆಂಬ ಜ್ಞಾನಜ್ಯೋತಿಯನ್ನು ಪಡೆದುಕೊಂಡು ಒಳಗೆ ಪಿಂಡಾಂಡದಲ್ಲಿರುವ ಅಜ್ಞಾನ ಅಂಧಕಾರವನ್ನು ತೊಡೆದು ಹಾಕಿ, ಒಳಗಿನ ಅಂತಃಕರಣಗಳೆಲ್ಲ ಲಿಂಗಕಿರಣಗಳಾಗಿ ಥಳಥಳನೆ ಬೆಳಗಿ ಹೊಳೆವುತ್ತಲಿರುವ ಚಿದಂಶಿಕವೆಂಬ ಪ್ರಾಣಲಿಂಗ (ಆತ್ಮಲಿಂಗ) ವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ. ರಶ್ಮಿವಿಡಿದು ರವಿಯ ಕಾಂಬಂತೆ, ಚಿದಂಶಿಕ (ಅಂತರಾತ್ಮ) ವೆಂಬ ರಶ್ಮಿವಿಡಿದು ಮೂಲ ಚೈತನ್ಯ (ದೇವರು) ವೆಂಬ ರವಿಯನ್ನು ಕಾಣುತ್ತಾನೆ ಶರಣನು. ಅಂತರಾತ್ಮನಿಂದ ಪರಮಾತ್ಮನನ್ನು ಕಾಣುತ್ತಾನೆ. ಕಂಡು ತಾನೇ ತಾನಾಗುತ್ತಾನೆ. ಅದಕ್ಕಾಗಿಯೇ ಮೇಲಿನ ವಚನದಲ್ಲಿ ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವನೋಡಾ ಅಪ್ರಮಾಣ ಕೂಡಲಸಂಗಮದೇವಾ, ಎಂದು ಅಪಾರವಾದ ಅನುಭವವನ್ನು ಹೊರಸೂಸಿದ್ದಾರೆ. ಆದ್ದರಿಂದ ಶರಣರು ದೇವರನ್ನು ಹೊರಗೆ ಹುಡುಕದ ಉನ್ನತ ನಿಲುವಿನ ಅಧ್ಯಾತ್ಮ ಜೀವಿಗಳೆಂಬುದನ್ನು ಮರೆಯಬಾರದು,
ಇಷ್ಟಲಿಂಗವೆಂದರೆ ಜ್ಯೋತಿಯೆಂಬ ಅನೇಕ ಆಧಾರಗಳನ್ನು ಕೊಡಬಹುದು.

"ಸ್ವಯಂಜ್ಯೋತಿ ಪ್ರಕಾಶ ಲಿಂಗದಲ್ಲಿ
ಸದಾ ಸನ್ನಿಹಿತ ಕೂಡಲ ಚನ್ನ ಸಂಗಾ, ನಿಮ್ಮ ಶರಣ"
-ಚನ್ನಬಸವಣ್ಣ

“ಕರಸ್ಥಲದ ಜ್ಯೋತಿಯಿದು, ಕುರುಹವಿದು" -ಜೇ, ದಾಸಿಮಯ್ಯ

ಆದ್ದರಿಂದ ಶಿವಶರಣರು ಕರಸ್ಥಲದ ಜ್ಯೋತಿಯನ್ನು ಹಿಡಿದುಕೊಂಡು ದೇಹವೆಂಬ ಗಂಜ್ವರವ ಪ್ರವೇಶಿಸಿ ಪ್ರಾಣಲಿಂಗವೆಂಬ ದೇಹಿಯನ್ನು ಕಾಣುವವರಾದರು. ಅವರ ದೇಹವೇ ದೇವಾಲಯವಾಯಿತು. ಇಂಥ ದೇವ ನಿರ್ಮಿತ, ಚೈತನ್ಯಮಯ ದೇಹ ದೇವಾಲಯವನ್ನು ಬಿಟ್ಟು ಮಾನವ ನಿರ್ಮಿತ ಜಡವಾದ ಕ್ಷೇತ್ರ ದೇವಾಲಯಕ್ಕೆ ಹೋಗುವ ಹಂಗು ಅವರಿಗಿಲ್ಲವಾಯಿತು. ದೇಹ ದೇಗುಲದಲ್ಲಿ ಭಾವ ಸಿಂಹಾಸನವ ಮಾಡಿ ಜೀವದೊಡೆಯನ ಪೂಜಿಸಬೇಕೆಂದು ಶರಣರು ಆಚರಿಸಿ ತೋರಿದರು.

ದೇಹವೇ ದೇಗುಲವಾಗಿರಲು, ಬೇರೆ ಮತ್ತೆ ದೇಗುಲವೇಕಯ್ಯಾ ?
ಪ್ರಾಣವೇ ಲಿಂಗವಾಗಿರಲು, ಬೇರೆ ಮತ್ತೆ ಲಿಂಗವೇಕಯ್ಯಾ ?
ಹೇಳಲಿಲ್ಲ, ಕೇಳಲಿಲ್ಲ, ಗುಹೇಶ್ವರಾ, ನೀನು ಕಲ್ಲಾದರೆ,
ನಾನೇನಪ್ಪೆನಯ್ಯಾ ?
- ಅ.ನ. ೨೧೩

ದೇವಾಲಯಗಳಿಂದ ಆಗುವ ಅನಿಷ್ಟಗಳನ್ನು ಕಂಡು ದೇಗುಲದಲ್ಲಿಟ್ಟು, ಅದನ್ನೇ ದೇವನೆಂದು ಆರಾಧಿಸುವ ಈ ಪದ್ದತಿಯನ್ನೇ (Temple Craft) ಶರಣರು ವಿರೋಧಿಸಿ, ದೇಹವನ್ನೇ ದೇಗುಲವಾಗಿ ಮಾಡಿಕೊಂಡು, ಅಂತರಂಗದಲ್ಲೇ ದೇವನನ್ನು ಆರಾಧಿಸಿದ ಅಧ್ಯಾತ್ಮ ಜೀವಿಗಳಾದರು. ಇದನ್ನು ಅತ್ಯಂತ ಸುಂದರ ಮತ್ತು ಮಾರ್ಮಿಕವಾಗಿ ಹೇಳುವ ಮುಪ್ಪಿನ ಷಡಕ್ಷರಿಗಳ ಈ ಭಾವಗೀತೆ ನೋಡಿರಿ.

ಇನ್ನೆನಗೆ ಭಯ ಉಂಟೆ ?

ಎನ್ನ ಕಾಯವು ನಿನಗೆ ಉನ್ನತಾಲಯವಾಯಿತಿನ್ನಿನಗೆ
ಭಯವುಂಟೆ ಎಲೆ ಲಿಂಗವೇ || ಪ ||

ಎನ್ನ ಕಾಲುಗಳೆರಡು ಉನ್ನತದ ಕಂಭವೈ
ಎನ್ನ ಒಡಲೇ ನಿಮಗೆ ದೇವಾಲಯ
ಎನ್ನ ತೋಳುಗಳೆರಡು ಉನ್ನತದ ಮದನ ಕೈ
ಎನ್ನ ಶಿರ ಸೌವರ್ಣ ಕಲಶವಯ್ಯ || ೧ ||

ಎನ್ನ ಕಿವಿ ಕೀರ್ತಿಮುಖ ಎನ್ನ ನಾಲಿಗೆ ಘಂಟೆ
ಎನ್ನ ನಯನಗಳೆರಡು ಜ್ಯೋತಿ ನಿಮಗೆ ಎನ್ನ
ಮುಖವೇ ದ್ವಾರ ಎನ್ನ ದಂತವೆ ಅದಕೆ
ಮಿನ್ನುತಿಹ ಮೌಕ್ತಿಕದ ಸೂಸಕಗಳು || ೨ ||

ಎನ್ನಧರ ಜವಳಿಗದ ಎನ್ನ ನಾಸಾಪುಟವು
ನನ್ನಿಯಿಂ ಸೌರಭ್ಯರಸಘಟಿತವು
ಚೆನ್ನಾಗಿ ಬೀಸುವ ಹೊನ್ನ ಜಾಜೇಂದ್ರವೈ
ಇನ್ನುಳ್ಳ ಉಪಕರಣವೆಂತೆಂದೆನೆ || ೩ ||

ಎನ್ನ ಸಮತೆಯೆ ಜಲವು ಎನ್ನ ಸದ್ಗುಣ ಗಂಧ
ಎನ್ನ ನಿತ್ಯತ್ವವೇ ಅಕ್ಷತೆಗಳು
ಎನ್ನ ಜ್ಞಾನವೆ ಪುಷ್ಟ ಎನ್ನ ಭಕ್ತಿಯ ಬೋನ
ಎನ್ನ ಮನವೇ ನಿಮಗೆ ಪೂಜಾರಿಯು ||೪||

ಇಂತಪ್ಪ ಪೂಜೆಯನು ಸಂತಸದಿ ಕೈಕೊಳುತ
ಕಂತುಹರ ಶಿವಷಡಕ್ಷರಿ ಲಿಂಗವು
ಮುಂತೆ ಎನ್ನೊಳಗೆ ನಿಶ್ಚಿಂತನಾಗಿರುತಿರಲು
ಚಿಂತೆಯುಂಟೇ ಹಲವು ಭವಭೀತಿಯ || ೫ ||

ಶ್ರೀ ಮುಪ್ಪಿನ ಷಡಕ್ಷರಿದೇವರು ಬಹು ಮಾರ್ಮಿಕವಾಗಿ ದೇಹ ದೇಗುಲವ ಮಾಡಿಕೊಂಡು ದೇಹಿಯನ್ನು ಮನವೆಂಬ ಪೂಜಾರಿಯ ಮೂಲಕ ಪೂಜಿಸಿದುದನ್ನು ಈ ಪದ್ಯದಲ್ಲಿ ಕಾಣಬಹುದು.
ಕಾಲೇ ಕಂಭಗಳಾದವೆನ್ನ,
ದೇಹವೇ ದೇಗುಲವಾಯಿತಯ್ಯಾ !
ಎನ್ನ ನಾಲಗೆಯೇ ಘಂಟೆ, ಶಿರ ಸುವರ್ಣದ ಕಳಶ,
ಇದೇನಯ್ಯಾ ? ಸ್ವರವೇ ಲಿಂಗಕ್ಕೆ ಸಿಂಹಾಸನವಾಗಿರ್ದಿತ್ತಯ್ಯಾ !
ಗುಹೇಶ್ವರಾ, ನಿಮ್ಮ ಪ್ರಾಣಲಿಂಗ ಪ್ರತಿಷ್ಠೆ
ಪಲ್ಲಟವಾಗದಂತಿಪ್ಪೆನಯ್ಯಾ ! -ಅ.ವ. ೧೯೫

ಲಿಂಗಾಂಗ ಸಂಬಂಧಿಯಾದ ಶರಣನ ಪ್ರಾಣವೇ ಲಿಂಗವಾಯಿತ್ತಾಗಿ, ಆ ಪ್ರಾಣಲಿಂಗಕ್ಕೆ ವಾಯುವೆಂಬ ಮನಸ್ಸೇ ಪೀಠವಾಗಿ, ಕಾಲೇ ಕಂಭಗಳಾಗಿ, ದೇಹವೇ ದೇಗುಲವಾಗಿ, ಶಿರವೇ ಸುವರ್ಣದ ಕಳಶವಾಗಿ, ಕರಣೀಂದ್ರಿಯಂಗಳೆಲ್ಲ ಸೇವಕರಾಗಿ ಆ ಪ್ರಾಣಲಿಂಗಾರ್ಚನೆಯನೀ ಪರಿಯಲಿ ಮಾಡುತಿರ್ಪನು ಶರಣನು. ಅಂತು ತನ್ನ ಪ್ರಾಣವೇ ಲಿಂಗವಾಗಿರ್ದ ಶರಣನು ಮರಳಿ ಜೀವನಾಗಲಾರನೆಂದು ಈ ವಚನದಲ್ಲಿ ಪ್ರಭುದೇವರು ಅಭಿಪ್ರಾಯ ಪಟ್ಟಿದ್ದಾರೆ.

ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡಲಿ ಬಡವನಯ್ಯಾ ?
ಎನ್ನ ಕಾಲೇ ಕಂಭ ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯಾ, ಕೂಡಲಸಂಗಮದೇವ ಕೇಳಯ್ಯ
ಸ್ಥಾವರಕ್ಕಳಿವುಂಟು; ಜಂಗಮಕ್ಕಳಿವಿಲ್ಲ. -ಬ.ಷ.ವ, ೮೨೦.

ದೇಹವನ್ನೇ ದೇಗುಲವನ್ನಾಗಿ ಮಾಡಿಕೊಂಡು ತಮ್ಮ ಹೃದಯದಲ್ಲಿಯೇ ವಾಸವಾಗಿರುವ ಹೃದಯಸ್ಥನಾದ ಪಿಂಡಾಂಡದಲ್ಲಿರುವ ನಗಿ ಪಿಂಡನಾದ, ದೇಹದಲ್ಲಿರುವ ದೇಹಿಯಾದ ದೇವರನ್ನು ಪೂಜಿಸಲು ಶರಣರು ಹೇಳಿ, ವಿಶ್ವ ಧರ್ಮದ ಮೂಲ ತತ್ವವನ್ನು ಪ್ರಚುರ ಪಡಿಸಿದ್ದಾರೆ. ಏಸು ಎಲ್ಲ ಮಾನವರಿಗೆ ಸಾಮಾನ್ಯ (Common) ನಲ್ಲ: ಬುದ್ದ ಎಲ್ಲ ಮಾನವರಿಗೆ ಸಾಮಾನ್ಯನಲ್ಲ, ಬಸವಣ್ಣ ಎಲ್ಲ ಮಾನವರಿಗೆ ಸಾಮಾನ್ಯನಲ್ಲ: ರಾಮಕೃಷ್ಣರು ಜಗತ್ತಿನ ಎಲ್ಲ ಮಾನವರಿಗೆ ಸಾಮಾನ್ಯರಲ್ಲ, ಅಂದರೆ ಇವರು ಜಗತ್ತಿನ ಪ್ರತಿಯಾಬ್ಬ ಮಾನವನಿಗೆ ಪೂಜ್ಯರಲ್ಲ; ಅವರವರ ಅನುಯಾಯಿಗಳಿಗೆ ಮಾತ್ರ ಪೂಜ್ಯರು. ಜಗತ್ತಿನ ಎಲ್ಲ ಮಾನವರಿಗೂ ಇವರು ಸಾಮಾನ್ಯ (Common) ರಲ್ಲ. ಹಾಗಾದರೆ ಜಗತ್ತಿನ ಎಲ್ಲ ಮಾನವರಿಗೂ ಸಾಮಾನ್ಯವಾದ ವಸ್ತುವಿದೆಯೆ ? ಅದು ಎಲ್ಲರಿಗೂ ಪ್ರಿಯವಾದ ವಸ್ತುವಾಗಿದೆಯೆ ? ಇದೆ. ಅದು ಹೃದಯ. ಇದು ಎಲ್ಲರಿಗೂ ಸಾಮಾನ್ಯವಾದುದು. ಹೃದಯವಿಲ್ಲದೆ ಯಾರೂ ಇರಲಾರರು. ಇದು ನಿಸರ್ಗದ ನಿಯಮ. ಅಂಥ ಎಲ್ಲ ಮಾನವಕೋಟಿಗೂ ಸಾಮಾನ್ಯವಾಗಿ ಇರುವ ಹೃದಯದಲ್ಲಿ ಹೃದಯಸ್ಥೆ (ಪಿಂಡಗತ) ನಾಗಿರುವ ದೇವನು ಎಲ್ಲರಲ್ಲಿಯೂ ಒಬ್ಬನೇಯಾಗಿದ್ದಾನೆ. ಅವನು ಮಾನವಕೋಟಿಗೆಲ್ಲರಿಗೂ ಸಾಮಾನ್ಯನೂ, ಪೂಜ್ಯನೂ ಆಗಿದ್ದಾನೆ. ಅಂಥ ಸಾಮಾನ್ಯನೂ, ಪೂಜ್ಯನೂ ಆದ ಹೃದಯಸ್ಥ ದೇವನನ್ನು ಆರಾಧಿಸಲು ಹೇಳಿದ್ದಾರೆ ಶರಣರು. ಆದ್ದರಿಂದ ಶರಣರ ಧರ್ಮ ಮಾನವಧರ್ಮ-ವಿಶ್ವಧರ್ಮವೆಂದು ಬೇರೆ ಹೇಳಬೇಕೆ ? ಏಸುವನ್ನು ಪೂಜಿಸಿರೆಂದು ಏಸುವಿನ ಅನುಯಾಯಿಗಳು ಹೇಳಿದರೆ, ಬುದ್ಧನನ್ನು ಪೂಜಿಸಿರೆಂದು ಬೌದ್ಧರು ಹೇಳಿದರೆ, ಶಿವನನ್ನು ಪೂಜಿಸಿರೆಂದು ಶೈವರು ಹೇಳಿದರೆ, ರಾಮನನ್ನು ಪೂಜಿಸಿರೆಂದು ವೈಷ್ಣವರು ಹೇಳಿದರೆ, ಅವರು ವಿಶ್ವಧರ್ಮಿಗಳಾಗಲಾರರು. ಆದರೆ ಬಸವಾದಿ ಪ್ರಮಥರು ಯಾವ ವ್ಯಕ್ತಿಯನ್ನೂ ಪೂಜಿಸೆಂದು ಬೋಧಿಸದೆ ನಿಮ್ಮ ನಿಮ್ಮಲ್ಲಿರುವ ಹೃದಯಸ್ಸ ಚೈತನ್ಯವನ್ನು ಪೂಜಿಸಿರೆಂದು, ಏಕದೇವೋಪಾಸನೆಯನ್ನು ಪ್ರತಿಪಾದಿಸಿದ್ದಾರೆ. ನಿಮ್ಮ ದೇಹವನ್ನೇ ದೇಗುಲವನ್ನಾಗಿ ಮಾರ್ಪಡಿಸಿರೆಂದು ಹೇಳಿದ ವಿಶ್ವಧರ್ಮ ಸಂದೇಶವನ್ನು ಇಂದು ಜಗತ್ತಿನ ಬುದ್ದಿ ಜೀವಿಗಳು ನಿಷ್ಕಲ್ಮಷ ಮನಸ್ಸು ಮತ್ತು ಪ್ರಾಂಜಲ ಹೃದಯದಿಂದ ಚಿಂತಿಸಬೇಕು. ಹಾಗೆ ಆಲೋಚಿಸುವ ಬೌದ್ದಿಕ ಪ್ರಾಮಾಣಿಕತೆ ಎಂದು ಜನತೆಗೆ ಬರುವುದೋ ಅಂದು ಬಸವಧರ್ಮ ಲಿಂಗಾಯತ ಧರ್ಮ ವಿಶ್ವಧರ್ಮವಾದೀತು !

ದೇಹವನ್ನೇ ದೇಗುಲ ಮಾಡಿಕೊಂಡು, ಹೊರಗಿನ ದೇವಾಲಯಗಳನ್ನು ಶರಣರು ಮನ್ನಿಸಲಾರದುದರಿಂದ ಆ ದೇವಾಲಯದಲ್ಲಿರುವ ಪರೋಪ ಜೀವಿಗಳಾದ ಪೂಜಾರಿಗಳನ್ನು ಪೂಜಾರಿ ಪದ್ದತಿ (Priest Craft) ಯನ್ನು ಅವರು ಒಪ್ಪಲಾರರು. ದೊಡ್ಡ ದೊಡ್ಡ ಕ್ಷೇತ್ರಗಳಲ್ಲಿ ಪೂಜಾರಿಗಳ ಸೈರ ಜೀವನವನ್ನು ನಾವು ಸೂಕ್ಷ್ಮವಾಗಿ ವಿಚಾರಿಸಿದರೆ ವಿಷಾದವೆನಿಸದಿರಲಾರದು. ಅಂಥವರಿಂದ ಪೂಜೆ ಮಾಡಿಸಿಕೊಳ್ಳದೆ ದೇವನು ಎಂದೊ ಆ ದೇವಾಲಯದಿಂದ ಓಡಿಹೋಗಿರಬೇಕೆಂದು ಅನಿಸದಿರದು. ಅಂಥ ನೀತಿವಂತ. ಪೂಜಾರಿಗಳಿಂದ ತೀರ್ಥ ತಕ್ಕೊಂಡ ಭಕ್ತನಿಗೆ ಅದೆಂಥ ಸಮ್ಮತಿಯಾದೀತು ? ಎಲ್ಲ ಪೂಜಾರಿಗಳೂ ಹಾಗಿರುತ್ತಾರೆಂದು ನಮ್ಮ ಅಭಿಪ್ರಾಯವಲ್ಲ. ಆದರೂ ಹೆಚ್ಚಾಗಿ ಅನೇಕ ದೇವಾಲಯಗಳಲ್ಲಿ ಕೊಲೆ, ಸುಲಿಗೆ, ವ್ಯಭಿಚಾರ, ಅನ್ಯಾಯ, ಭಕ್ತರಿಂದ ದುಡ್ಡು ಕಿತ್ತುಕೊಳ್ಳುವ ಕುಯುಕ್ತಿಗಳನ್ನು ಕಾಣಬಹುದು. ಆದ್ದರಿಂದ ಶರಣರು ಇನ್ನೊಬ್ಬರ ಕಡೆಯಿಂದ ಪೂಜೆ ಮಾಡಿಸಿ ಪುಣ್ಯ ಪಡೆದುಕೊಳ್ಳುವ ಮೂಢತನಕ್ಕೆ ಹೋಗದೆ, ನೆಟ್ಟನೆ ಪೂಜಿಸಿ ಭವಗೆಟ್ಟರು.

ತನ್ನಾಶ್ರಯದ ರತಿಸುಖವನು ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?
ತನ್ನ ಲಿಂಗಕ್ಕೆ ಮಾಡುವ ನಿತ್ಯ ನೇಮವನು
ತಾ ಮಾಡಬೇಕಲ್ಲದೆ, ಬೇರೆ ಮತ್ತೊಬ್ಬರ ಕೈಯಲ್ಲಿ
ಮಾಡಿಸಬಹುದೆ ? ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮ ನೆತ್ತ ಬಲ್ಲರು ಕೂಡಲಸಂಗಮದೇವಾ ?
-ಬ.ಷ.ವ. ೧೮೩

ಬಸವಣ್ಣನವರ ಈ ವಚನದಲ್ಲಿ ದೇವರನ್ನು ನೇರವಾಗಿ ಪೂಜಿಸುವ ಬಗ್ಗೆ ಕಟುವಾದ ಮಾತುಗಳನ್ನು ಹೇಳಿದ್ದಾರೆ. ತನ್ನ ಆಶ್ರಯದ ಹೆಂಡತಿಯ ರತಿ ಸುಖವನ್ನು ತಾನು ಭೋಗಿಸಬೇಕಲ್ಲದೆ ಇನ್ನೊಬ್ಬರ ಕಡೆಯಿಂದ ಮಾಡಿಸಲಾದೀತೆ ? ತನ್ನ ಹಸಿವೆಯನ್ನು ತೃಪ್ತಿಪಡಿಸಲೋಸುಗ ಇನ್ನೊಬ್ಬರು ಉಂಡರೆ ನಡೆದೀತೆ ? ಛೇ ಆಗದು. ಅದರಂತೆ ನಿನ್ನ ಆಧ್ಯಾತ್ಮಿಕ ಹಸಿವೆಯನ್ನು ತೀರಿಸಲೋಸುಗ ನೀನೇ ದೇವನನ್ನು ಪೂಜಿಸಿ ತೃಪ್ತಿ ಹೊಂದಬೇಕಲ್ಲದೆ ಇನ್ನೊಬ್ಬರ (ಪೂಜಾರಿಗಳ) ಕಡೆಯಿಂದ ಪೂಜೆ ಮಾಡಿಸಿ ಆತ್ಮದ ಹಸಿವನ್ನು ತೀರಿಸಿಕೊಳ್ಳುತ್ತೇನೆಂಬುದು ಹಾಸ್ಯಾಸ್ಪದವಲ್ಲದೆ ಮತ್ತೇನು ? ಆದ್ದರಿಂದ ದೇವರ ಪೂಜೆಯನ್ನು ನೀನೇ ಮಾಡಿ ಲಿಂಗಾನಂದ ಸುಖದೊಳಗೆ ಲೋಲಾಡಬೇಕು. ಪೂಜಾರಿಗಳ ಕಡೆಯಿಂದ ಪೂಜೆ ಮಾಡಿಸಿದರೆ ಪುಣ್ಯವು ನಿನಗೆಂತು ಬಂದೀತು ? ಅವರು ಕೇವಲ ಉಪಚಾರಕ್ಕೆ, ದುಡ್ಡಿನಾಸೆಗಾಗಿ ಮಾಡಿಯಾರು. ದೇವನನ್ನು ಪೂಜಾರಿಗಳೆಂಬ ದಲ್ಲಾಳಿಗಳ ಮೂಲಕ ಕೊಳ್ಳಲು ಬಂದೀತೆ ? ದಲ್ಲಾಳಿಗಳಿಂದ ದೇವನನ್ನು ಒಲಿಸುವ ಹುಚ್ಚು ಹರಿದಾಟ ಶರಣರಿಗೆ ಸಮ್ಮತವಲ್ಲ. ಒಂದು ವೇಳೆ ಪೂಜಾರಿ ಭಕ್ತಿಯಿಂದಲೇ ಪೂಜೆ ಮಾಡಿದರೂ ಸಹ ಆ ಲಾಭ ಅವನಿಗೇ ಬಂದೀತೇ ವಿನಾ ಬೇರೆಯವರಿಗೆ ಬರಲಾರದು. ಪಾಪ-ಪುಣ್ಯಗಳನ್ನು ಒಬ್ಬರಿಗೊಬ್ಬರು ಹಂಚಲಿಕ್ಕೆ, ವಿನಿಮಯ ಮಾಡಲಿಕ್ಕೆ, ಮಾರಾಟ ಮಾಡಲಿಕ್ಕೆ ಬರಲಾರದು. ಸತ್ಕಾರ್ಯಪರೋಪಕಾರಗಳನ್ನು ಮಾಡಿ ಪುಣ್ಯವ ಗಳಿಸಬೇಕು. ಆರಾಧನೆಯನ್ನು ಮಾಡುವುದು ಪುಣ್ಯದ ಫಲಕ್ಕಾಗಿ ಅಲ್ಲ; ಆತ್ಮನೆ ನಿಃಶ್ರೇಯಸ್ಸು ಭವ ಬಂಧನದ ಬಿಡುಗಡೆಗಾಗಿ, ಮುಕ್ತಿಯ ಸಂಪಾದನೆಗಾಗಿ ಮತ್ತು ದಿವ್ಯವಾದ ಅನುಭವಗಳನ್ನು ಪಡೆಯಲಿಕ್ಕೊಸ್ಕರವಾಗಿ, ಕಲ್ಯಾಣ ಸಾಧಿಸುವುದಕ್ಕಾಗಿ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಇಷ್ಟಲಿಂಗ ಮತ್ತು ಸಾಲಿಗ್ರಾಮ ಕಿರುಕುಳ ದೈವಂಗಳ ಆರಾಧನೆ Next