![]() | ಶ್ರೀ ಬಸವೇಶ್ವರ ಪೂಜಾವ್ರತ | ಬಸವೇಶ್ವರ ಪೂಜಾವ್ರತ ಅಧ್ಯಾಯ -೨ | ![]() |
ಬಸವೇಶ್ವರ ಪೂಜಾವ್ರತ ಅಧ್ಯಾಯ -೧ |
✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
ಪೂಜಾ ಸಾಮಗ್ರಿಗಳಾದ ಶುದ್ಧ ನೀರು, ವಿಭೂತಿ, ಪುಷ್ಪ-ಪತ್ರೆ, ಊದಿನಕಡ್ಡಿ, ಕರ್ಪೂರ, ತೆಂಗಿನಕಾಯಿ, ಬಾಳೆಹಣ್ಣು, ಹೂಮಾಲೆ ಮುಂತಾದುವನ್ನು ಜೋಡಿಸಿಕೊಳ್ಳಬೇಕು. ಸ್ನಾನ ಮಾಡಿ, ಒಗೆದು ಶುಚಿ ಮಾಡಿದ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಮಡಿಯುಟ್ಟು ಬಂದು ಪೂಜಿಸುವ ಜಾಗದಲ್ಲಿ ಕುಳಿತು ಹೀಗೆ ಹೇಳಬೇಕು.
ಕಲ್ಯಾಣವೆಂಬುದು ಇನ್ನಾರಿಗೂ ಹೋಗಬಾರದು ಅಸಾಧ್ಯವಯ್ಯಾ!
ಆಸೆ ಆಮಿಷಗಳನಳಿದವರಿಗಲ್ಲದೆ ಕಲ್ಯಾಣದತ್ತ ಅಡಿ ಇಡಬಾರದು,
ಒಳಹೊರಗು ಶುದ್ಧವಾದವರಿಗಲ್ಲದೆ ಕಲ್ಯಾಣವ ಹೊಗಬಾರದು
ನಾನೆಂಬುದ ಹರಿದವರಿಗಲ್ಲದೆ ಕಲ್ಯಾಣವ ಹೊಗಬಾರದು,
ಒಳಗೆ ತಿಳಿದು ಚನ್ನಮಲ್ಲಿಕಾರ್ಜುನಂಗೊಲಿದು
ಉಭಯ ಲಜ್ಜೆಯಳಿದೆನಾಗಿ ಅನು
ಕಲ್ಯಾಣವ ಕಂಡು ನಮೋ ನಮೋ ಎನುತಿರ್ದೆನು. -ಜಗನ್ಮಾತಾ ಅಕ್ಕಮಹಾದೇವಿ
ಸಂಕಲ್ಪ :
ಶ್ರೀ ಬಸವೇಶ್ವರ ಪೂಜಾವ್ರತವನ್ನು ಮಾಡುವ ಸಂಕಲ್ಪದೊಡನೆ ಹೀಗೆ ಹೇಳಬೇಕು :
ಅರಸಿ ತೊಳಲಿದರಿಲ್ಲ, ಬಯಸಿ ಹೊಕ್ಕರಿಲ್ಲ
ತಪಸ್ಸು ಮಾಡಿದರಿಲ್ಲ ;
ಅದು ತಾನು ಬಹ ಕಾಲಕ್ಕಲ್ಲದೆ ಸಾಧ್ಯವಾಗದು ;
ಶಿವನೊಲಿದಲ್ಲದೆ ಕೈಗೂಡದು
ಚನ್ನಮಲ್ಲಿಕಾರ್ಜುನನೆನಗೊಲಿದನಾಗಿ
ನಾನು ಸಂಗನ ಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು -ಜಗನ್ಮಾತಾ ಅಕ್ಕಮಹಾದೇವಿ.
ಪ್ರತಿಷ್ಠಾಪನೆ :
ಯಾವ ಜಾಗದಲ್ಲಿ ಬಸವೇಶ್ವರರ ಭಾವಚಿತ್ರ ಇಡುವಿರೋ ಆ ಜಾಗದಲ್ಲಿ ಷಟ್‌ಕೋನದಲ್ಲಿ ಲಾಂಛನ-ಬಸವಲಿಂಗ ಮುದ್ರೆಯನ್ನು ರಂಗೋಲೆ ಅಥವಾ ಅಕ್ಕಿಹಿಟ್ಟು ಅಥವಾ ಸೀಮೆಸುಣ್ಣದಲ್ಲಿ ಬರೆದು, “ಓಂ ಶ್ರೀ ಗುರುಬಸವ” ಎಂದು ಕೋನಗಳಲ್ಲಿ ಅಕ್ಷರ ಬರೆದು, ಅದರ ಮೇಲೆ ಭಾವಚಿತ್ರವನ್ನು ಪ್ರತಿಷ್ಠಾಪಸಿಬೇಕು. ಈ ಎಲ್ಲ ಕ್ರಿಯೆ ಮಾಡುವಾಗ ಈ ವಚನಗಳನ್ನು ಹೇಳುತ್ತಿರಬೇಕು.
'ಬ' ಎಂಬಲ್ಲಿ ಎನ್ನ ಭವವು ಹರಿಯಿತ್ತು.
'ಸ' ಎಂಬಲ್ಲಿ ಸರ್ವಜ್ಞಾನಿಯಾದೆನು.
'ವ' ಎಂದು ವಚಿಸುವರೆ ವಸ್ತು ಚೈತನ್ಮಾತ್ಮಕನಾದೆನು.
ಇಂತೀ ಬಸವಾಕ್ಷರ ತ್ರಯವೆನ್ನ
ಸರ್ವಾಂಗದಲ್ಲಿ ತೊಳಗಿ ಬೆಳಗುವುದನ್ನು ಕಂಡು
ಆನು, ನೀನು 'ಬಸವಾ ಬಸವಾ ಎನುತಿರ್ದೆವಯ್ಯಾ ಗುಹೇಶ್ವರಾ. - ಅಲ್ಲಮಪ್ರಭು
ಅಯ್ಯಾ, ನಿಮ್ಮ ಸಜ್ಜನ ಸದ್ಭಕ್ತರ ಕಂಡೆನಾಗಿ,
ಎನ್ನ ಕಂಗಳ ಪಟಲ ಹರಿಯಿತ್ತಿಂದು.
ಅಯ್ಯಾ, ನಿಮ್ಮ ಸಜ್ಜನಸದ್ಭಕ್ತರ ಶ್ರೀಚರಣಕ್ಕೆರಗಿದೆನಾಗಿ,
ಎನ್ನ ಹಣೆಯ ಲಿಖಿತ ತೊಡೆಯಿತ್ತಿಂದು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಸಂಗನಬಸವಣ್ಣನ ಪಾದವ ಕಂಡು
ಮಿಗೆ ಮಿಗೆ ನಮೋ ನಮೋ ಎನುತಿರ್ದೆನಯ್ಯಾ ! - ಅಕ್ಕಮಹಾದೇವಿ
ಈಗ ದೀಪವನ್ನು ಹೊತ್ತಿಸಿಕೊಳ್ಳಬೇಕು ಮತ್ತು ಆ ಭಾವಚಿತ್ರಕ್ಕೆ ಸುಂದರ ಹೂಮಾಲೆಯನ್ನು ಹಾಕಬೇಕು. ಚೆನ್ನಾಗಿ ಕೈತೊಳೆದುಕೊಂಡು, ಒರೆಸಿಕೊಂಡು ಪೂಜೆಗೆ ಕೂಡಬೇಕು. ಬರೀ ನೆಲದ ಮೇಲೆ ಕುಳಿತುಕೊಳ್ಳದೆ ಚಾಪೆ, ರತ್ನಗಂಬಳಿ, ಮಣೆ, ಯಾವುದನ್ನಾದರೂ ಹಾಕಿಕೊಂಡು ಕುಳಿತುಕೊಳ್ಳಬೇಕು.
ವಿಭೂತಿ ಶುದ್ಧಿ ಮತ್ತು ವಿಭೂತಿ ಧಾರಣ :
ಎಡಗೈಯಲ್ಲಿ ವಿಭೂತಿ ಇರಿಸಿಕೊಂಡು ಬಲಗೈಯ ಐದು ಬೆರಳಿಗೆ ಸವರಿಕೊಳ್ಳಬೇಕು. ಬಲಗೈಯಲ್ಲಿರುವ 12 ಗಣ್ಣಿನ ಗುರುತುಗಳಿಗೆ ಅನುಸಾರವಾಗಿ 12 ಬಾರಿ “ಓಂ ಲಿಂಗಾಯ ನಮಃ” ಎಂದು ಪಠಿಸಿ, ಬಲಗೈಯ ಮಧ್ಯದ ಬೆರಳಿನಿಂದ ವಿಭೂತಿ ಗಟ್ಟಿ ಮೇಲೆ ಪಂಚಕೋನದ ಲಾಂಛನ ಬರೆದು, ಎರಡೂ ಕೈಗಳಿಗೆ ವಿಭೂತಿ ಸವರಿಕೊಂಡು ಮೊದಲು ವಿಭೂತಿ ಸ್ನಾನ ಮಾಡಿ, ನಂತರ ಮಧ್ಯದ ಮೂರು ಬೆರಳುಗಳಿಂದ ವಿಭೂತಿ ಧಾರಣ ಮಾಡಬೇಕು. ಹೀಗೆ ವಿಭೂತಿ ಧರಿಸುವಾಗ ಕೆಳಕಂಡ ಪದ್ಯ ಹೇಳಬೇಕು.
ಬಸವಾ ಬಸವಾ ಎಂದು ಭಸಿತಮಂ ಧರಿಸಿದರೆ
ಬಸವಾದಿ ಪ್ರಮಥರಿಗೆ ಪ್ರೀತಿಯಯ್ಯ!
ಬಸವ ಷಟ್‌ಸ್ಥಲ ಚನ್ನಬಸವ ಪ್ರಭು ಮುಖ್ಯರು
ಭಸಿತಮಂ ಧರಿಸಿ ಬಯಲಾದರಯ್ಯ || ೧ ||
ಎಸೆವ ಅಂಗುಲಿತ್ರಯವು ಭಸಿತರೇಖೆಗಳೆಲ್ಲ
ಬಸವಾಕ್ಷರ ತ್ರಯಗಳೆಂದು ಮುದದಿ|
ಭಸಿತದಿಂ ನವ ಪ್ರಣವ ಹಸನಾಗಿ ಅಂಗದಲಿ
ಬಸವ ಬಸವಾ ಎಂದು ಸಂಬಂಧಿಸುವೆನು || ೨ ||
ದುರುಳ ಕರಣಂಗಳೆಂಬ ಬೆರಣಿಗಳನುರುಹಿದ
ಪರಮ ಚಿದ್ಭಸಿತವೆಂದರಿದು ನಾನು
ಹರ ಬಸವ ಗುರುಬಸವ ಚರಬಸವ ಎಂದೆನುತ
ಶಿರವಾದಿ ಚರಣಾಂತ್ಯದೊಳು ಧರಿಸುವೆ || ೩ ||
ನೀನು ಧರಿಸಿದೆಯಾಗಿ ಅನು ಧರಿಸುವೆನಯ್ಯಾ
ಸ್ನಾನ ಧೂಳನ ಚಿದ್ಧಾರಣಗಳಿಂದೆ |
ಹೀನ ಮಾನವರಿದರ | ಜ್ಞಾನವಿಲ್ಲದೆ ಭವದ
ಕಾನನದೊಳಗೆ ತಾವ್ ಬೀಳುತಿಹರು || ೪ ||
ತ್ರಿನಯನ ಮಹಂತೇಶ ಧಣಿ ಬಸವರಾಜನ
ಅಣಿಯರದಿ ಸ್ಮರಿಸುತ್ತ ಭಜಿಸುತ್ತಲಿ |
ಅಣು ಮಾತ್ರ ಭಸಿತವಂ ಹಣೆಯೊಳಿಟ್ಟಾಕ್ಷಣವೆ
ಒಣಗುವುವು ದುರಿತಂಗಳೆಂಬ ಕುಜವು || ೫ ||
ರುದ್ರಾಕ್ಷಿಧಾರಣ :
ಕೊರಳಿನಲ್ಲಿ 32 ಮಣಿ ಮತ್ತು ಒಂದು ಶಿಖಾಮಣಿಯುಳ್ಳ ರುದ್ರಾಕ್ಷಿಯ ಕಂಠಮಾಲೆಯನ್ನು ಧರಿಸಬೇಕು, ಈ ಕಂಠಮಾಲೆ ಧರಿಸುವಾಗ ಹೀಗೆ ಹೇಳಬೇಕು:
ಅಯ್ಯಾ, ರುದ್ರಾಕ್ಷಿಯಿಂದ ಹರಿದೆನು ಭವಪಾಶಂಗಳ
ಅಯ್ಯಾ, ರುದ್ರಾಕ್ಷಿಯಿಂದ ಮುರಿದೆನು ತನುಗುಣಾದಿಗಳ
ಅಯ್ಯಾ, ರುದ್ರಾಕ್ಷಿಯಿಂದ ಒರೆಸಿದನು ಮಹಾ ಮಾಯೆಯ
ಅಯ್ಯಾ, ರುದ್ರಾಕ್ಷಿಯಿಂದ ಕಳೆದನು ಪಂಚ ಮಹಾಪಾತಕವ
ಅಯ್ಯಾ, ಕೂಡಲಸಂಗಮದೇವಾ
ಶ್ರೀ ಮಹಾ ರುದ್ರಾಕ್ಷಿಯಿಂದ ಗೆಲಿದೆನಯ್ಯಾ ಸಕಲ ದುರಿತಂಗಳನು.
ಜಲಶುದ್ದಿ :
ಒಂದು ಲೋಟ ಅಥವಾ ಪಂಚಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು, ಬೆರಳುಗಳಿಗೆ ವಿಭೂತಿ ಧರಿಸಿ, ಒಂದೊಂದು ಗಣ್ಣಿಗೆ ಒಂದು ಅಕ್ಷರದಂತೆ “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂದು ಪಠಿಸಿ ಆ ಬೆರಳುಗಳಿಂದ ನೀರಿನಲ್ಲಿ ಷಟ್ ಕೋನವನ್ನು ಬರೆದು ಬೆರಳುಗಳನ್ನು ಅದ್ದಿ ಜಲಶುದ್ಧಿ ಮಾಡಬೇಕು. ಆಗ ಹೀಗೆ ಹೇಳಬೇಕು.
ಬಸವಂ ಪ್ರಣವಾಕಾರಂ
ಬಸವಂ ಶರಣಾಗತ ರಕ್ಷಕ ವರಲೋಲಂ
ಬಸವಂ ಜನ್ಮ ಕುಠಾರಂ
ಬಸವಂ ನಮಾಮಿ ಶ್ರೀ ಗುರು ಬಸವೇಶಂ
||
ಶುದ್ಧವಾದ ಜಲವನ್ನು ಸಿಂಪಡಿಸಿ, ಮಡಿ ವಸ್ತ್ರದಿಂದ ಒರೆಸಬೇಕು. ಮೂರು ಬೆರಳಿನಿಂದ ವಿಭೂತಿ ಧರಿಸಿ ಗಂಧಾಕ್ಷತೆಗಳನ್ನು ಇಡಬೇಕು. ಪುಷ್ಪಪತ್ರೆಗಳಿಂದ ಅಲಂಕರಿಸಬೇಕು. ಊದಿನಕಡ್ಡಿ ಬೆಳಗಬೇಕು. ಕರ್ಪೂರದ ಆರತಿ ಬೆಳಗಬೇಕು. ಘಂಟಾನಾದವನ್ನು ಮಾಡಬೇಕು, ನೈವೇದ್ಯವನ್ನು ಮಾಡಬೇಕು. ಬಾಳೇಹಣ್ಣನ್ನು ಸಹ ತುದಿ ಚಿವುಟದೆ ಹಾಗೆಯೇ ಮುಂದಿಟ್ಟು ತೆಂಗಿನಕಾಯಿ ಒಡೆಯುವುದರ ಹಿಂದೆ ಸೂಕ್ಷ್ಮವಾಗಿ ಬಲಿಯ ಸಂಕೇತವಿದೆ. ಅನಾಗರಿಕ ಮಾನವನು ನರಬಲಿ ಕೊಡುತ್ತಿದ್ದ, ನಂತರ ಪ್ರಾಣಿಯ ಶಿರಚ್ಛೇದ ರೂಢಿಗೆ ಬಂದಿತು. ಅಹಿಂಸಾತ್ಮಕ ಧರ್ಮಾಚರಣೆ ರೂಢಿಗೊಂಡಾಗ ತೆಂಗಿನ ಕಾಯನ್ನು ಛೇದಿಸುವ ರೂಢಿ ಬಂದಿತು.
ಆರೋಗ್ಯದ ದೃಷ್ಟಿಯಿಂದ ನೋಡಿದರೆ ತೆಂಗಿನಕಾಯಿ ಒಡೆದು ಇಟ್ಟು ನಂತರ ಯಾವಾಗಲೋ ಉಪಯೋಗಿಸುವುದು ಸರಿಯಲ್ಲ. ನೊಣ ಕುಳಿತುಕೊಳ್ಳುತ್ತದೆ. ಇರುವೆ, ಕೀಡೆ ಹರಿದಾಡುತ್ತವೆ. ಕೆಲವೊಮ್ಮೆ ಕಾಯಿಯಲ್ಲಿ ಬೂಜು ಬಂದಿರುತ್ತದೆ. ಗುಡಿಗಳಲ್ಲಿ ಕಾಯಿ ಒಡೆಸಿಕೊಂಡು ಊರಿಗೆ ಒಯ್ಯುವುದು ಸಮಸ್ಯೆ, ಗುಡಿಗಳಲ್ಲಿ ಕಾಯಿ ಒಡೆಯುವ ಅಭ್ಯಾಸವಿದ್ದಲ್ಲಿ ನೆಲ ರೊಜ್ಜಾಗಿ, ನೊಣಗಳು ಸಿಕ್ಕಾಪಟ್ಟೆ ಸೇರುತ್ತವೆ. ಅದಕ್ಕಾಗಿ ಇಡಿಯ ಕಾಯಿಯನ್ನೇ ನೈವೇದ್ಯ ಮಾಡಿ, ನಂತರ ಉಪಯೋಗಿಸಬೇಕಾದಾಗ ಒಡೆದರೆ ಸಾಕು. ಬಾಳೆಹಣ್ಣು ಸಹ ಅಷ್ಟೇ ಚಿವುಟಿದರೇ ನೈವೇದ್ಯವೇನಲ್ಲ. ಚಿವುಟಿದ ಜಾಗದಿಂದಲೇ ಹಣ್ಣು ಕೊಳೆಯಲು ಆರಂಭವಾಗುತ್ತದೆ. ಆದ್ದರಿಂದ ಇಡಿಯ ತೆಂಗಿನಕಾಯಿ, ಚಿವುಟದೆ ಇಟ್ಟ ಬಾಳೇಹಣ್ಣು ನೈವೇದ್ಯ ಮಾಡಿ ಅಗತ್ಯ ಬಿದ್ದಾಗ ಪ್ರಸಾದವೆಂದು ಉಪಯೋಗಿಸಿಕೊಳ್ಳಬೇಕು. ನೈವೇದ್ಯ ಮಾಡಿ ಮೂರು ಬಾರಿ ಅರ್ಘ್ಯವನ್ನು ಬಿಡಬೇಕು. ಹಾಗೆ ಅರ್ಘ್ಯ ಬಿಡುವಾಗ ತನು ಮನ ಧನಗಳನ್ನು ಗುರು ಲಿಂಗ ಜಂಗಮಕ್ಕೆ ಸಲ್ಲಿಸಿ ತ್ರಿವಿಧ ದಾಸೋಹದಲ್ಲಿ ನಿರತನಾಗುತ್ತೇನೆ ಎಂದುಕೊಳ್ಳಬೇಕು.
ಈ ಎಲ್ಲ ಪೂಜಾ ಕ್ರಿಯೆಗಳನ್ನು ಮಾಡುವಾಗ ಕೆಳಕಂಡ ಪದ್ಯವನ್ನು ಹಾಡಬೇಕು :
ಗುರುಬಸವಾ ನಾ ನಿನ್ನ ಅನುದಿನವು ಪೂಜಿಸುವೆ
ಕರುಣಾಳು ಕೈ ವಿಡಿದು ಮುನ್ನಡೆಸು ನೀನು || ಪ ||
ಹೃತ್ಕಮಲ ಪೀಠದಲ್ಲಿ ನಿನ್ನ ಚರಣವನಿರಿಸಿ
ಚಿನ್ಮಯನೆ ನಿನ್ನನ್ನು ಅನವರತ ನೆನೆಯುವೆನು || ಅ.ಪ. ||
ಭಾವಗಂಗೆಯನೆರೆದು ಜ್ಞಾನಭಸಿತವ ಧರಿಸಿ,
ಶಾಂತಿ ಗುಣಗಂಧವನು ನಿನಗೆ ಸೂಸುವೆನು |
ಸದುಗುಣದ ಕುಸುಮಗಳ ಸಂಚಯಿಸಿ ಪೇರಿಸುತ್ತ
ಚಿದ್ಭಾವ ಧೂಪವನು ನಿನಗೆ ಸಲಿಸುವೆನು I
ಮತಿಯ ತಳಿಗೆಯ ಮಾಡಿ ಜ್ಞಾನದಾರತಿ ಹಚ್ಚಿ
ನಿತ್ಯವೂ ಬೆಳಗುವೆನು ಜ್ಯೋತಿ ರೂಪನೆ ನಿನಗೆ |
ಶರಣುಗತಿ ನೈವೇದ್ಯ ನಿನ್ನ ಚರಣಕೆ ಸಲಿಸಿ
ವಾಙ್ಮಯದ ಘಂಟೆಯ ನಾದ ನುಡಿಸುವೆನು ||
ಮಂತ್ರಪುರುಷನೆ ಬಸವ ಎನಗೆ ನೀಡು ಯಶವ
ಚಿಂತೆ ಭಯ ಭ್ರಾಂತಿಗಳ ದೂರವಿರಿಸು |
ಕಾರುಣ್ಯ ಕವಚದೊಳು ಎನ್ನ ರಕ್ಷಿಸು ತಂದೆ
ಅರಿವಿನ ದೀಪ್ತಿಯನು ಚೆಲ್ಲಿ ಮುಂದಡಿ ಇಡಿಸು ||
ಶರಣಜನ ರಕ್ಷಕನೆ ಮರಣಭಯ ದೂರಕನೆ
ಕರುಣ ಸಾಗರ ನಿಧಿ ಶ್ರೀ ಬಸವರಾಜನೆ |
ಭಕ್ತ ಜನ ಪೋಷಕನೆ ಮುಕ್ತಿದಾಯಕ ಗುರುವೆ
ಸಚ್ಚಿದಾನಂದ ಸುತ ಗುರು ಬಸವ ಪ್ರಭುವೆ ||
ಆರತಿ :
ಈಗ ಅರಳೆಯಿಂದ ಮಾಡಿದ ಬತ್ತಿ ಆರತಿಯನ್ನು ಬೆಳಗಬೇಕು.
ಓಂ ಗುರು ಬಸವಪ್ರಭು ವರಗುರು ಶರಣ ವಿಭು
ಆಶ್ರಿತ ಜನ ಸಂರಕ್ಷಕ ಸದ್ಗುರು ಬಸವ ಪ್ರಭು ವರಗುರು ಶರಣ ವಿಭು ||
ಶರಣ ಲೋಲನು ನೀ ಪರಮ ಪುರುಷನು ನೀ
ಕರುಣಾ ಸಿಂಧು ನೀ ದೀನರ ಬಂಧು ನೀ
ಸುಭಗ ಗಾತ್ರನು ನೀ ಪ್ರೇಮನೇತ್ರನು ನೀ
ಪರಮ ಚರಿತನು ನೀ ಜ್ಞಾನಭರಿತನು ನೀ ||
ಭವಭಯ ತಾರಕನೇ ನವಪಥದಾಯಕನೇ
ಹರಗಣ ತಾರೆಗಳಾ ನಡುವಿನ ಚಂದಿರನೆ
ಮಾತಾಪಿತನೂ ನೀ ಬಂಧು ಬಳಗವೂ ನೀ
ಭಕ್ತಜನ ಮನೋರಾಜಿತ ಮಂತ್ರ ಪುರುಷನು ನೀ |
ಮೋಹ ರಹಿತನು ನೀ ಮಮತಾ ಸಹಿತನು ನೀ
ಮಾಯಾದೂರಕ ನೀ ಮುಕುತಿಯ ದಾಯಕ ನೀ
ಮನುಕುಲ ಜ್ಯೋತಿಯು ನೀ ಕ್ರಾಂತಿಯ ವೀರನು ನೀ
ಶಾಂತಿಯ ಹೊನಲನು ಹರಿಸಲು ಬಂದ ಸಚ್ಚಿದಾನಂದ ಸುತ ನೀ
ಗ್ರಂಥ ಋಣ: ೧) ಶ್ರೀ ಬಸವೇಶ್ವರ ಪೂಜಾವ್ರತ, ಲೇಖಕರು: ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
![]() | ಶ್ರೀ ಬಸವೇಶ್ವರ ಪೂಜಾವ್ರತ | ಬಸವೇಶ್ವರ ಪೂಜಾವ್ರತ ಅಧ್ಯಾಯ -೨ | ![]() |