ನಮ್ಮ ಆಚಾರಗಳು
ನಮ್ಮ ಆಚಾರಗಳು, ಅಂದರೆ ಒಳ್ಳೆಯ ನಡವಳಿಕೆಗಳು ನಮಗೆ (ಸ್ವರ್ಗ) ಸುಖ ಸಂತೋಷವನ್ನು ಕೊಡುತ್ತವೆ. ಅಂತೆಯೆ ಗುರು ಬಸವಣ್ಣನವರು "ಆಚಾರವೇ ಸ್ವರ್ಗ", " ಅಯ್ಯಾ ಎಂದಡೆ ಸ್ವರ್ಗ ಎಲವೋ ಎಂದಡೆ ನರಕ" ಎಂದು ಹೇಳಿದ್ದಾರೆ. ನಾವು ಬೇರೆಯವರೊಡನೆ ವ್ಯವಹರಿಸುವ ಕ್ರಮದಲ್ಲೇ ಸ್ವರ್ಗ ನರಕಗಳ ನಿರ್ಮಾಣವಾಗುವುದು. ನಮ್ಮ ನಾಗರಿಕ ವರ್ತನೆ ನಮ್ಮೊಳಗೆ ಸ್ವರ್ಗವನ್ನು ಸೃಷ್ಟಿಸಿದರೆ ಅನಾಗರಿಕ ವರ್ತನೆ ಮನಸ್ಸಿನಲ್ಲೇ ನರಕದ ವಾತಾವರಣ ನಿರ್ಮಾಣ ಮಾಡುವುದು.
"ಹಿರಿಯತನವಾವುದೆಂದಡೆ? ಗುಣಜ್ಞಾನ, ಆಚಾರಧರ್ಮ;
ಕೂಡಲಸಂಗನ ಶರಣರು ಸಾಧಿಸಿದ ಹಿರಿಯತನ"
ಎಂದು ಗುರು ಬಸವಣ್ಣನವರು ತಿಳಿಸಿದ್ದಾರೆ. ದುರ್ಗಣಗಳಿಂದ ಕೂಡಿರುವಂಥದ್ದು ಜ್ಞಾನವಲ್ಲ. ವಿಶ್ವವಿನಾಶ ಮಾಡುವಂಥದ್ದು ಜ್ಞಾನವಲ್ಲ. ಮಾನವೀಯತೆಯನ್ನು ಉಳಿಸಿ ಬೆಳೆಸುವ ಜ್ಞಾನವೇ ಗುಣಜ್ಞಾನ. ಇಂಥ ಜ್ಞಾನವೇ ಆಚಾರಕ್ಕೆ ನಾಂದಿ. ಸದ್ವರ್ತನೆಗೆ ಮೂಲವಾದ ಆಚಾರವೇ ಧರ್ಮ.
ತಾಮಸ, ರಾಜಸ ಮತ್ತು ಸಾತ್ವಿಕ
ತಾಮಸ, ರಾಜಸ ಮತ್ತು ಸಾತ್ವಿಕಗಳೆಂಬ ಮೂರು ಗುಣಗಳಿವೆ. ತಾಮಸ ಗುಣಕ್ಕೆ ತಮೋಗುಣ ಎಂದು ಕರೆಯುತ್ತಾರೆ.
ಅಜ್ಞಾನ,
ಮೋಹ,
ನಿದ್ರೆ,
ಚಾಪಲ್ಯ,
ಹೀನವೃತ್ತಿ,
ಪಾಪಕೃತ್ಯ,
ಪರನಿಂದೆ,
ಪರಹಿಂಸೆ
ಎಂಬ ಎಂಟು ತಮೋಗುಣಗಳಿವೆ. ತಮ ಎಂದರೆ ಅಂಧಕಾರ. ಈ ಗುಣಗಳಿಂದ ನಮ್ಮ ಮನಸ್ಸಿನಲ್ಲಿ ಅಂಧಕಾರ ಆವರಿಸುತ್ತದೆ. ಆಗ ನಮಗೆ ಬದುಕಿನ ಒಳ್ಳೆಯದರ ಅರಿವಾಗುವುದಿಲ್ಲ.
ರಾಜಸ ಗುಣಕ್ಕೆ ರಜೋಗುಣ ಎಂದೂ ಕರೆಯುತ್ತಾರೆ.
ಗರ್ವ,
ಕ್ರೋಧ,
ಅಹಂಕಾರ,
ಕಾಮನೆಗಳು,
ಅಪ್ರಿಯ,
ವಚನ,
ಮೋಸ,
ಮತ್ಸರ
ಎಂಬ ಎಂಟು ರಜೋಗುಣಗಳಿವೆ. ರಜ ಎಂದರೆ ಧೂಳು. ಈ ಗುಣಗಳು ನಮ್ಮ ಮನಸ್ಸಿನಲ್ಲಿ ಧೂಳು ಸೃಷ್ಟಿಸುತ್ತವೆ. ಆಗ ನಾವು ಬದುಕಿನ ಒಳ್ಳೆಯದನ್ನು ಕಾಣುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ.
ಸಾತ್ವಿಕ ಗುಣಗಳು
ಸತ್ಯ,
ಜ್ಞಾನ
ತಪ,
ಮೌನ,
ಹರುಷ,
ಶಮೆ (ಮನೋನಿಗ್ರಹ),
ವಿವೇಕ,
ಸಾಹಸ,
ನಿಶ್ಚಯ,
ಧೈರ್ಯ
ಎಂಬ ಗುಣಗಳು ಸಾತ್ವಿಕ ಗುಣಗಳು. ಮಾನವೀಯ ಸತ್ವದಿಂದ ಕೂಡಿದ ಗುಣವೇ ಸಾತ್ವಿಕ ಗುಣ. ದೇವರು "ಸಾತ್ವಿಕರಲ್ಲದವರನೊಲ್ಲನು" ಎಂದು ಬಸವಣ್ಣನವರು ತಿಳಿಸಿದ್ದಾರೆ.
ಬಹಿರಂಗ ಶುದ್ಧಿಗೆ ಪಂಚಾಚಾರಗಳಿವೆ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರ ಎಂಬ ಪಂಚಾಚಾರಗಳಿವೆ.
ಲಿಂಗಾಚಾರ: ದೇವರು ಒಬ್ಬನೇ ಎಂಬ ಭಾವದೊಂದಿಗೆ ಇಷ್ಟಲಿಂಗ ಪೂಜೆ ಮಾಡುವುದು ಲಿಂಗಾಚಾರ.
ಸದಾಚಾರ: ಸತ್ಯಶುದ್ಧ ಕಾಯಕ ಮಾಡುವದರ ಮೂಲಕ ಗುರು ಲಿಂಗ ಜಂಗಮಕ್ಕೆ ದಾಸೋಹಂಭಾವದಿಂದ ನೀಡಿ ಸಂತೃಪ್ತ ಜಿವನ ಸಾಗಿಸುವುದು ಸದಾಚಾರ.
ಶಿವಾಚಾರ: ಇಷ್ಟಲಿಂಗ ಧರಿಸಿದವರಲ್ಲಿ ಕುಲಗೋತ್ರಗಳನ್ನು ಹುಡುಕದೆ ದೇವನೆಂದು ಭಾವಿಸುವುದು ಶಿವಾಚಾರ.
ಗಣಾಚಾರ: ಗುರು, ಲಿಂಗ, ಜಂಗಮ ನಿಂದೆ ಕೇಳದಿರುವುದು ಗಣಾಚಾರ.
ಭೃತ್ಯಾಚಾರ: ಶರಣರ ಮುಂದೆ ತಾನು ಕಿರಿಯ ಎಂದು ಭಾವಿಸುವುದು ಭೃತ್ಯಾಚಾರ.
ಅಂತರಂಗ ಶುದ್ಧಿಯ ಸಪ್ತಾಚಾರ:
ಕ್ರಿಯಾಚಾರ: ಜ್ಞಾನವೆಂಬ ಗುರುವಿನ, ಧರ್ಮವೆಂಬ ಲಿಂಗದ ಮತ್ತು ಸಮಾಜವೆಂಬ ಜಂಗಮದ ಆರಾಧನೆ ಮಾಡುವುದೇ ಕ್ರಿಯಾಚಾರ
ಜ್ಞಾನಾಚಾರ: ವಚನಗಳನ್ನು ಅರಿತುಕೊಂಡು ಆಚರಿಸುವುದು ಜ್ಞಾನಾಚಾರ.
ಭಾವಾಚಾರ: ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹದಿಂದ ದೂರಾಗಿ ಬದುಕುವುದು ಭಾವಾಚಾರ.
ಸತ್ಯಾಚಾರ: ನುಡಿದಂತೆ ನಡೆಯುವುದು ಸತ್ಯಾಚಾರ
ನಿತ್ಯಾಚಾರ: ಪಾಲಿಗೆ ಬಂದುದು ಪಂಚಾಮೃತ ಎಂದು ಬದುಕುವುದು ನಿತ್ಯಾಚಾರ.
ಧರ್ಮಾಚಾರ: ಭಕ್ತಿಭಾವ ತಾಳುವುದು ಧರ್ಮಾಚಾರ
ಸರ್ವಾಚಾರ: ಷಟ್‌ಸ್ಥಲ ಮಾರ್ಗದಲ್ಲಿ ನಡೆಯುವುದು ಸರ್ವಾಚಾರ ಸಂಪತ್ತಿನ ಆಚಾರ.
ಎಂಬುವು ಸಪ್ತಾಚಾರಗಳು.