Previous ಇಷ್ಟಲಿಂಗ ಪೂಜೆ -ದೇವರಪೂಜೆ ಇಷ್ಟಲಿಂಗ ದೀಕ್ಷಾ ಸಂಸ್ಕಾರ Next

ಇಷ್ಟಲಿಂಗವು ಯೋಗ ಸಾಧನೆಗೆ ಸಹಾಯಕ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಇಷ್ಟಲಿಂಗವು ಯೋಗ ಸಾಧನೆಗೆ ಸಹಾಯಕ

ಲಭ್ಯವಿರುವ ಉಪಾಸ್ಯವಸ್ತುಗಳಲ್ಲಿ ಬಹುಪಾಲು ಮನುಷ್ಯನ ಭಾತ್ತಿಕ ತೃಪ್ತಿಗೆ ಸಹಾಯಕವೇ ವಿನಾ, ಯೋಗ ಸಾಧನೆಗೆ ಸಹಕಾರಿಯಾಗಿಲ್ಲ. ಗುಡಿಯ ಒಳಗಿನ ಸ್ಥಾವರಲಿಂಗವಾಗಲಿ, ತಿರುಪತಿ ವೆಂಕಟೇಶ್ವರನಾಗಲೀ, ಗಂಡಕಿ ನದಿಯಲ್ಲಿ ಲಭ್ಯವಾಗುವ ಸಾಲಿಗ್ರಾಮವಾಗಲಿ ಒಂದು ಮುಗ್ಧ ನಂಬಿಕೆಯನ್ನು ಸಂತೈಸಬಲ್ಲುವು. ಇಷ್ಟಲಿಂಗವು ಭಕ್ತಿಯ ಧೈಯ ವಸ್ತುವಷ್ಟೇ ಅಲ್ಲ ಯೋಗಾಭ್ಯಾಸಕ್ಕೆ ಸಹಕಾರಿ. ನಿಷ್ಠಾವಂತ ವೈದಿಕ ಧರ್ಮಾನುಯಾಯಿ ಲಾಂಛನವಾಗಿ ಯಭೋಪವೀತ ಹಾಕುವನು, ಕೌಟುಂಬಿಕ, ಸಾಮಾಜಿಕ ಕೆಲವು ವಿಧಿ-ವಿಧಾನಗಳನ್ನು ಮಾಡಲು ಅದು ಅವಶ್ಯಕವಾದ ಲಾಂಛನವಾದ ಕಾರಣ ಧರಿಸುವನು. ಆರಾಧಿಸುವಾಗ ವೈಷ್ಣವ ಬ್ರಾಹ್ಮಣರು ವಿಷ್ಣುವನ್ನು, ಶೈವರು ಶಿವನನ್ನು, ಶಾಕ್ತರು ಶಕ್ತಿಯನ್ನು ಧೈಯವಾಗಿಟ್ಟುಕೊಳ್ಳುವರು. ಇನ್ನು ಯಾಗಸಾಧನೆಗೆ ಇವಾವೂ ಉಪಯುಕ್ತವಾಗದ ಕಾರಣ ಅಷ್ಟಾಂಗೆಯಾಗ, ಕುಂಡಲಿನಿಯಾಗದ ಆಶ್ರಯ ಪಡೆಯುವರು. ಹೀಗೆ ಸಾಮಾಜಿಕ ಲಾಂಛನ ಬೇರೆ, ಆಧ್ಯಾತ್ಮಿಕ ಸಾಧನ ಬೇರೆ ಭಾತ್ತಿಕ ಧೈಯ ವಸ್ತು ಬೇರೆ ಆಗಿರುವವು.

ಇಷ್ಟಲಿಂಗದ ವೈಶಿಷ್ಟ್ಯವೇನೆಂದರೆ ಅದು ಎಲ್ಲ ಆವಶ್ಯಕತೆಗಳನ್ನೂ ಪೂರೈಸಬಲ್ಲುದು. ಸಾಮಾಜಿಕ ಲಾಂಛನವಾಗಿ ಎಲ್ಲರನ್ನೂ ಒಂದುಗೂಡಿಸ ಬಲ್ಲುದು; ಉಪಾಸ್ಯವಸ್ತುವಾಗಿ ಪೂಜಿಸಿಕೊಳ್ಳಬಲ್ಲುದು; ತಾಟಕ ಸಹಿತ ಶಿವಯಾಗಾಭ್ಯಾಸಕ್ಕೆ ಸಹಕಾರಿಯಾಗಿ, ಸಾಧನವಾಗಿ ದೊರಕಬಹುದಾದ ಎಲ್ಲ ಅತೀಂದ್ರಿಯಾನುಭವಗಳನ್ನು ಒದಗಿಸಿಕೊಡಬಲ್ಲುದು. ಹೀಗಾಗಿ ಇಷ್ಟಲಿಂಗವು All in One ಕುರುಹಾಗಿ ಬುದ್ದಿ ಜೀವಿ, ಭಾವಜೀವಿ, ಯೋಗಾಭ್ಯಾಸಿ, ಸಮತಾವಾದಿ ಎಲ್ಲರನ್ನೂ ತಣಿಸಬಲ್ಲ ಸಾಧನವು - ಎಂದರೆ ಉತ್ತೇಕ್ಷೆ ಏನಿಲ್ಲ. ಇದರ ಅರ್ಥ, ಮರ್ಮ ಉಪಯುಕ್ತತೆಯನ್ನು ಪ್ರತಿನಿತುಕೊಂಡರೆ ಇದು ಜಗತ್ತಿನಲ್ಲಿಯೇ ಅದ್ವಿತೀಯವಾದ ಧರ್ಮಲಾಂಛನ; ಶ್ರೇಷ್ಠ ಯಾಗಸಾಧನವಾಗಬಲ್ಲುದು. ನಮಗೆ ಇಲ್ಲಿ ಒಂದು ದೃಷ್ಟಾಂತ ನೆನಪಿಗೆ ಬರುತ್ತದೆ.

ಒಂದು ಊರಿನಲ್ಲಿ ಶಿವಯಾಗ ಸಾಧನೆಯಲ್ಲಿ ಬಲ್ಲಿದರಾದ ಓರ್ವ ಗುರುವರರಿದ್ದರು. ಅವರ ಬಳಿಗೆ ಎಷ್ಟೋ ಜನ ಮುಮುಕ್ಷುಗಳು ಮಾರ್ಗದರ್ಶನಕ್ಕಾಗಿ ಧಾವಿಸಿ ಬರುತ್ತಿದ್ದರು. ಅನುಗ್ರಹ-ಮಾರ್ಗದರ್ಶನ ಅಪೇಕ್ಷಿಸಿ ಒಬ್ಬ ಸಾಧಕ ಬಂದ. ಅವನು ತುಸು ಮಂದಮತಿ. ಅವನಿಗೆ, ತಾನು ಉಳಿದವರೆಲ್ಲರಿಗಿಂತಲೂ ವಿಶೇಷವಾದ ಸಾಧನೆ ಮಾಡಬೇಕು. ಅದಕ್ಕಾಗಿ ವಿಶೇಷವಾದ ಯಾಗವನ್ನು ಹೇಳಿಸಿಕೊಳ್ಳಬೇಕೆಂದಿತ್ತು. ಅವನ ಬೇಡಿಕೆ ಕೇಳಿಕೊಂಡ ಗುರುಗಳು ಅವನಿಗೆ ಮಂತ್ರೋಪದೇಶ ಮಾಡಿ, ಚಿತ್ಕಳೆ ತುಂಬಿ, ಇಷ್ಟಲಿಂಗವನ್ನು ಧರಿಸಿ, "ಇದೇ ನಿನ್ನ ಸರ್ವಸ್ವ ಎಂದು ತಿಳಿಸಿ ಸಾಧನೆ ಆರಂಭಿಸಲು ಹೇಳಿದರು. ಅವನು ಒಳ್ಳೆಯ ಆನಂದದಿಂದ ಏಕಾಂತದಲ್ಲಿ ಗಿಡ ಒಂದರ ಕೆಳಗೆ ಕುಳಿತು ಯಾಗಾಭ್ಯಾಸ ಮಾಡೋಣ ಎಂದುಕೊಂಡು ತೋಟಕ್ಕೆ ನಡೆದ. ಅಲ್ಲಿ ಗಿಡಗಳಿಗೆ ನೀರು ಹಾಯಿಸುವ ತೋಟಿಗನಿದ್ದ. ಅವನು ವಚನಗಳನ್ನು ಗುಣುಗುಣಿಸುತ್ತ ನೀರು ಹಾಯಿಸುತ್ತಿದ್ದ. ಅವನ ಕೊರಳಲ್ಲಿಯೂ ಇಷ್ಟಲಿಂಗ, ಆಶ್ರಮದ ಬಟ್ಟೆಗಳನ್ನು ತೊಳೆಯಲು ಎಲ್ಲ ಸಂಗ್ರಹಿಸಿಕೊಂಡು ಸೇವಕಿಯು ಬಂದಳು. ಅವಳ ಕೊರಳಲ್ಲೂ ಇಷ್ಟಲಿಂಗ. "ಅಯ್ಯಾ, ಗುರುಗಳು ಎಲ್ಲರಿಗೂ ಇದನ್ನೇ ಕೊಟ್ಟಿದ್ದಾರೆ. ಇದರಲ್ಲಿ ವಿಶೇಷವೇನು ಇದ್ದೀತು ?" ಎಂದು ನಿರುತ್ಸಾಹಿತನಾಗಿ ಬಂದ. "ಗುರುಗಳೇ ನಾನು ವಿಶೇಷ ಸಾಧನೆ ಮಾಡಿ ಅತ್ಯಂತ ವಿನೂತನ ಅನುಭವಗಳನ್ನು ಪಡೆಯಬೇಕೆಂದುಕೊಂಡು ಬಂದೆ. ನೀವಾದರೋ ತೋಟದ ಮಾಲಿ, ಮಡಿವಾಳಗಿತ್ತಿ ಮುಂತಾದವರಿಗೆ ಕೊಡುವಂಥದನ್ನೇ ನನಗೂ ಕೊಟ್ಟಿರುವಿರಿ ? ಇದರಲ್ಲಿ ಏನು ವಿಶೇಷವಿದೆ ?" ಎಂದ. ಗುರುಗಳು ಅವನ ಮಾತಿಗೆ ಮುಗುಳಕ್ಕು, "ಈ ವಸ್ತುವನ್ನು ತೆಗೆದುಕೊ. ಊರಿನ ಮಾರುಕಟ್ಟೆಯ ವಿವಿಧ ಅಂಗಡಿಗಳಿಗೆ ಹೋಗಿ ಬೆಲೆ ಕಟ್ಟಿಸಿಕೊಂಡು ಬಾ. ಯಾರಿಗೂ ಮಾರಬೇಡ." ಎಂದು ಒಂದು ಹರಳನ್ನು ಕೊಟ್ಟರು. ಅವನು ಹೋದ. ದಾರಿಯ ಬದಿಯಲ್ಲಿ ಕನ್ನಡಿ, ಪಿನ್ನು, ಗುಂಡಿ ಮುಂತಾದುವನ್ನು ಇಟ್ಟುಕೊಳ್ಳುವವನ ಬಳಿ ಹೋಗಿ ಹರಳಿನ ಬೆಲೆ ಕೇಳಿದ. ಅವನು "ಈ ಹರಳನ್ನು ನಾನು ಕೊಳ್ಳುವೆ. ಮಕ್ಕಳಿಗೆ ಆಟವಾಡಲು ಬರುತ್ತದೆ. ಇದರ ಬದಲಿಗೆ ಒಂದು ಕನ್ನಡಿ ಕೊಡುವೆ" ಎಂದನು. ಅಲ್ಲಿಂದ ಮುಂದೆ ಶಿಷ್ಯ ಸಾಗಿ, ಒಂದು ಪೆಟ್ಟಿಗೆ ಅಂಗಡಿಗೆ ಹೋದ. ಅವನು ನೂರು ರೂಪಾಯಿ ಕೊಡಲು ಸಿದ್ಧನಾದ. ಶಿಷ್ಯನು ಮುಂದೆ ಹೋದ, ಒಂದು ಬಟ್ಟೆ ಅಂಗಡಿಯು ಸಿಕ್ಕಿತು. ಆ ವ್ಯಾಪಾರಿ ಒಂದು ಸಾವಿರ ರೂಪಾಯಿ ಕೊಡಲು ಸಿದ್ಧನಾದ. ನಂತರ ಆ ಊರಿನ ಸುಪ್ರಸಿದ್ದ ರತ್ನಪಡಿ ವ್ಯಾಪಾರಿ ಬಳಿ ಹೋದ. ಅವನು ಚಕಿತನಾದ, ಈ ಹರಳನ್ನು ನೋಡಿ, "ಇದು ಅತಿ ಅಮೂಲ್ಯವಾದ ವಜ್ರ. ಇದಕ್ಕಾಗಿ ನಾನು ನನ್ನ ಅಂಗಡಿಯಲ್ಲಿರುವ ಬಂಗಾರ-ಬೆಳ್ಳಿಯನ್ನೆಲ್ಲ ಮಾರಿದರೂ ಬೆಲೆ ಕಟ್ಟಲು ಸಾಧ್ಯವಾಗದು" ಎಂದ. ಚಕಿತನಾದ ಶಿಷ್ಯನು ಆಶ್ರಮಕ್ಕೆ ಮರಳಿ, ಗುರುಗಳಿಗೆ ವರದಿ ಒಪ್ಪಿಸಿದ.

"ಮಗೂ, ನೀನು ಬೇರೆ ಬೇರೆಯವರ ಬಾಯಲ್ಲಿ ಬೆಲೆಗಳನ್ನು ಕೇಳಿದೆಯಲ್ಲಾ. ಅವರೆಲ್ಲ ಬೆಲೆ ಕಟ್ಟಿದ್ದು ಒಂದೇ ಹರಳಿಗೋ ಅಥವಾ ಬೇರೆ ಬೇರೆಯದಕ್ಕೊ ?"

“ಒಂದೇ ಹರಳಿಗೆ...

"ನೋಡು ಅವರ ಬುದ್ದಿ ಸಾಮರ್ಥ್ಯಕ್ಕನುಗುಣವಾಗಿ ಅವರು ಹೇಗೆ ಬೇರೆ ಬೇರೆ ಬೆಲೆ ಕಟ್ಟಿದರು, ಅದೇ ರೀತಿ ಗುರುವು ಎಲ್ಲರಿಗೂ ದೀಕ್ಷೆ ಮಾಡಿ ಕೊಡುವುದು ಒಂದೇ ಬಗೆಯ ಇಷ್ಟಲಿಂಗವನ್ನಾದರೂ ಅವರವರ ಯಾಗ್ಯತೆಸಾಧನೆಗೆ ಅನುಗುಣವಾಗಿ ಪರಿಣಾಮಗಳನ್ನು ಜನರು ಬೇರೆ ಬೇರೆಯಾಗಿ ಪಡೆಯುವರು. ಸಾಮಾನ್ಯ ಜನರು ಕೇವಲ ಇಷ್ಟಾರ್ಥ ಸಿದ್ದಿಯನ್ನು ಪಡೆದರೆ ಜ್ಞಾನಿಗಳು ದಿವ್ಯಾನುಭವವನ್ನು ಪಡೆಯುವರು."

ಇಷ್ಟಲಿಂಗದ ಮಹತ್ವವನ್ನು ತಿಳಿದುಕೊಂಡ ಸಾಧಕರು ಅದರಲ್ಲಿಯೇ ಆತ್ಯಂತಿಕ ಮತ್ತು ವಿಶೇಷ ಅನುಭವಗಳನ್ನು ಪಡೆಯಬಲ್ಲರು.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಇಷ್ಟಲಿಂಗ ಪೂಜೆ -ದೇವರಪೂಜೆ ಇಷ್ಟಲಿಂಗ ದೀಕ್ಷಾ ಸಂಸ್ಕಾರ Next