Previous ಲಿಂಗದ ಸ್ವರೂಪ ಇಷ್ಟಲಿಂಗದ ಆವಶ್ಯಕತೆ Next

ಇಷ್ಟಲಿಂಗ-ಚುಳುಕಾದ ದೇವ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಇಷ್ಟಲಿಂಗ-ಚುಳುಕಾದ ದೇವ

ಜಗದಗಲ ಮುಗಿಲಗಲ ಎಂಬ ವಚನದಲ್ಲಿ ಬಸವಣ್ಣನವರು ಪ್ರತಿಪಾದಿಸುವಂತೆ ಇಷ್ಟಲಿಂಗವು ಆ ಪರಾತ್ಪರ ಪರಮಾತ್ಮನ ಚುಳುಕಾದ ರೂಪ, ಅಕ್ಕಮಹಾದೇವಿಯೂ ಅದನ್ನು ತನ್ನ ವಚನದಲ್ಲಿ ಹೀಗೆ ಪ್ರತಿಪಾದಿಸಿದ್ದಾಳೆ,

ಅಯ್ಯಾ ! ಪಾತಾಳವಿತ್ತಿತ್ತ, ಶ್ರೀಪಾದವತ್ತತ್ತ
ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ,
ಅಯ್ಯಾ ! ದಶದಿಕ್ಕು ಇತ್ತಿತ್ತ, ದಶಭುಜಂಗಳತ್ತತ್ತ ಚನ್ನಮಲ್ಲಿಕಾರ್ಜುನಯ್ಯಾ,
ನೀನೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ !
-ಶ್ರೀ ಅಕ್ಕಮಹಾದೇವಿ
ಈ ಎರಡು ವಚನಗಳಲ್ಲಿ ಪರಶಿವನು ಜಗದಗಲವಾಗಿ, ಮುಗಿಲಗಲವಾಗಿ ಅರ್ಥಾತ್ ವಿಶ್ವಭರಿತನಾಗಿದ್ದು ಪಾತಾಳಕ್ಕತೀತವಾಗಿ ಅವನ ಪಾದಗಳೂ, ಬ್ರಹ್ಮಾಂಡಕ್ಕತೀತವಾಗಿ ಶ್ರೀ ಮುಕುಟವೂ, ದಶದಿಕ್ಕುಗಳಿಗತೀತವಾಗಿ ಅವನ ದಶಭುಜಂಗಳೂ ಇರುವುದಾಗಿ-ಅಂದರೆ ಪರಶಿವನು ವಿಶ್ವಾತೀತನಾಗಿರುವನು ಎಂಬುದಾಗಿ ಹೇಳಲಾಗಿದೆ. ಭೇದಿಸಲಸಾಧ್ಯವಾದ, ಪ್ರಮಾಣಗಳಿಗೆ ನಿಲುಕದಂಥ ಕಣ್ಣಿಗೆ ಕಾಣದಂಥ, ಹೇಗೂ ಉಪಮಿಸಬಾರದಂಥ ಆ ಪರವಸ್ತು ಶರಣನ ಕರಸ್ಥಲಕ್ಕೆ ಬಂದು ಚುಳುಕಾಗಿದೆ. ಅಂದರೆ ಕರಿಯು ಕನ್ನಡಿಯಲ್ಲಿ ಅಡಗುವಂತೆ (ಚುಳುಕಾಗುವಂತೆ) ಮತ್ತು ದೊಡ್ಡದಾದ ಒಂದು ಪಟ್ಟಣವು ಕ್ಯಾಮರಾದ ಚಿಕ್ಕಫಿಲ್ಮದಲ್ಲಿ ಚುಳುಕಾಗಿ ಮೂಡುವಂತೆ, ಆ ಘನವಸ್ತು ಶರಣನ ಕರಕಂಜದಲ್ಲಿ ಚುಳುಕಾಗಿ ಬಂದು ತನ್ನ ನಿಜದ ನಿಲುವನ್ನು ಅವನಿಗೆ ತೋರಿಸಿದೆ.

ಜಗವನೊಳಕೊಂಡ ಲಿಂಗವು
ಸೊಗಸಿಂದೆನ್ನ ಕರಸ್ಥಲಕ್ಕೆ ಬಂದಿರಲು
ಕಂಡು ಹಗರಣವಾಯಿತ್ತೆನಗೆ;

ಗುರುಲಿಂಗ ಜಂಗಮ ಸ್ವರೂಪವಾಗಿ ಮೂರ್ತಿಗೊಂಡಿತ್ತು ನೋಡಾ. ಆಹಾ ಎನ್ನ ಪುಣ್ಯವೆ ! ಆಹಾ ಎನ್ನ ಭಾಗ್ಯವೆ!!
ಆಹಾ ಅಖಂಡೇಶ್ವರಾ ನಿಮ್ಮ ಘನವ ಕಂಡು ಎನ್ನ ಮನಕ್ಕೆ ಮಂಗಳವಾಯಿತ್ತು ನೋಡಾ.
-ಷ.ವ, 64

ಈ ಜಗವನ್ನೆಲ್ಲ ತನ್ನಲ್ಲಿ ಗರ್ಭಿಕರಿಸಿಕೊಂಡು ಇದೆಲ್ಲದಕ್ಕೂ ಆಧಾರವಾಗಿ ಇರುವ ಆ ಪರಶಿವ ಲಿಂಗವು ಎನ್ನ ಕರಸ್ಥಲಕ್ಕೆ ಬಂದು ತನ್ನ ಘನ ಸ್ವರೂಪವನ್ನು ತೋರಿಸುವಾಗ, ಅದು ನನ್ನ ಪುಣ್ಯ ವಿಶೇಷವೆಂದೂ ಭಾಗ್ಯ ವಿಶೇಷವೆಂದೂ ಹೇಳಿ ತನ್ನ ಮನಕ್ಕೆ ಮಂಗಲವನ್ನುಂಟುಮಾಡಿದ ಆ ಲಿಂಗದ ಆನಂದದ ನಿಬ್ಬೆರಗಿನಲ್ಲಿ ನಿಂತು ನಲಿನಲಿದಾಡಿ ಲಿಂಗಾಂಗ ಸಮರಸಿಯಾಗಿದ್ದಾರೆ ಷಣ್ಮುಖ ಸ್ವಾಮಿಗಳು.

ಇಲ್ಲಿ ಒಂದು ಮಾತನ್ನು ಗಮನಿಸಬೇಕಾಗಿದೆ. ಒಂದು ಚಮಚ ಹಾಲು ಕುಡಿದರೆ ಆಗುವ ತೃಪ್ತಿಗಿಂತಲೂ ಒಂದು ಬಟ್ಟಲು ಹಾಲು ಕುಡಿದರೆ ಹೆಚ್ಚಿಗೆ ತೃಪ್ತಿಯಾಗುವದಷ್ಟೆ ! ಆದರೆ ಒಂದು ಹನಿ ಅಮೃತ ಕುಡಿದರೆ ಆಗುವ ತೃಪ್ತಿಗಿಂತ ಒಂದು ಚಮಚೆ ಅಮೃತ ಕುಡಿದರೆ ಹೆಚ್ಚಿಗೆ ತೃಪ್ತಿಯಾಗದೆ ಮೊದಲಿನಷ್ಟೇ ತೃಪ್ತಿಯಾಗುವುದು. ಏಕೆಂದರೆ ಅಮೃತವನ್ನು ಒಂದು ಹನಿ ಕುಡಿಯಲಿ, ಚಮಚೆ ಕುಡಿಯಲಿ, ತಂಬಿಗೆ ಕುಡಿಯಲಿ, ಅವನು ಅಮರನಾಗಿ ನಿಜಾನಂದವನ್ನು ಹೊಂದುವನಾಗಿ ತರತಮಕ್ಕೆ ಅಲ್ಲಿ ಅವಕಾಶವಿಲ್ಲ. ಅದರಂತೆ ಆ ಪರವಸ್ತುವನ್ನು ಶರಣನು ಕರಕಂಜದಲ್ಲಿ ಕಂಡಾಗ ಅದರ ಬೃಹತ್ ಸ್ವರೂಪವನ್ನೇ-ಘನಸ್ವರೂಪವನ್ನೇ ಕಂಡು ನಿಜಾನಂದ, ತೃಪ್ತಿಯನ್ನು ಹೊಂದುತ್ತಾನೇ ವಿನಾ ಅದರ ಅಂಶದಿಂದಲ್ಲ. ಏಕೆಂದರೆ ದೇವನು ಎಲ್ಲದರಲ್ಲಿಯೂ ಪೂರ್ಣವಾಗಿಯೇ ಇರುತ್ತಾನೆ. ಅವನು ಬೇರೆ ಬೇರೆ ವಸ್ತುಗಳಲ್ಲಿ ಖಂಡಿತ ಖಂಡಿತವಾಗಿರದೆ ಅಖಂಡ ಪರಿಪೂರ್ಣವಾಗಿಯೇ ವಿರಾಜಿಸುತ್ತಾನೆ. ಅಂತೆಯೇ ಉಪನಿಷತ್ತು ಹೀಗೆ ಹೇಳಿದೆ :

ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೆ |
ಪೂರ್ಣಸ್ಯ ಪೂರ್ಣಮಾದಾಯ, ಪೂರ್ಣಮೇವಾವಶಿಷ್ಯತೆ ||
-ಈಶಾವಾಸ್ಕೋಪನಿಷತ್ ೧ : ೧

ಅದು ಪೂರ್ಣ, ಇದು ಪೂರ್ಣ: ಪೂರ್ಣದಿಂದ ಪೂರ್ಣವು ಹೊರಹೊಮ್ಮುತ್ತದೆ, ಪೂರ್ಣದಲ್ಲಿ ಪೂರ್ಣ ಕಳೆದರೆ ಪೂರ್ಣವೇ ಉಳಿಯುತ್ತದೆ. ಇಷ್ಟಲಿಂಗವು ಆ "ಪೂರ್ಣ" ಪರಬ್ರಹ್ಮನ ಪ್ರತೀಕ.

ಅಣುವಿಂಗೆ ಅಣು ಮಹತ್ತಿಂಗೆ ಮಹತ್ತು
ಎಂದೆನಿಸುವ ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ !
ಉಪಮಾತೀತ ವಾಜನಕ್ಕಗೋಚರನು.
ಎಂದೆನಿಸುವ ಲಿಂಗದೇವನ ಕಂಡೆನಯಾ ಎನ್ನ ಕರಸ್ಥಲದಲ್ಲಿ !
ಶ್ರುತಿತತಿಯ ಶಿರದ ಮೇಲೆ ಅತ್ಯತಿಷ್ಠ ದಶಾಂಗುಲನು
ಎಂದೆನಿಸುವ ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ !
ಭಾವಭರಿತ ಜ್ಞಾನಗಮ್ಯನು
ಎಂದೆನಿಸುವ ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ !
ಅಖಂಡೇಶ್ವರನೆಂಬ
ಅನಾದಿ ಪರಶಿವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ ! !
-ಷ.ವ. 65

ಆ ಅನಾದಿ ಪರಶಿವನು ಅಣುವಿಗಿಂತಲೂ ಅಣುವಾಗಿ ಅಂದರೆ ಅತಿ ಚಿಕ್ಕದಾದ ವಸ್ತುವಿಗಿಂತಲೂ ಚಿಕ್ಕವನಾಗಿಯೂ ಅತಿ ಘನವಾದುದು ವಿಶ್ವವಾದರೆ-ಅಂಥ ವಿಶ್ವಕ್ಕಿಂತಲೂ ಘನವಾಗಿ, ಮಹತ್ತಾಗಿ, ದೊಡ್ಡವನಾಗಿಯೂ; ಉಪಮೆಗಳಿಂದ ವರ್ಣಿಸಲು ಅಸಾಧ್ಯನಾಗಿಯೂ ವಾಕ್ ಮನಸ್ಸಿಗೆ ಅಗೋಚರನಾಗಿಯೂ, ಶ್ರುತಿ-ಸ್ಕೃತಿಗಳಿಗೆ ನಿಲುಕದೆ ಅತೀತನಾಗಿಯೂ ಇರುವನು. ಜ್ಞಾನಕ್ಕೆ ತರ್ಕಕ್ಕೆ ತಿಳಿಯಲಸಾಧ್ಯವಾಗಿ ಭಾವಭರಿತನಾದ ಪರಶಿವನನ್ನು ಎನ್ನ ಕರಸ್ಥಲದಲ್ಲಿ ಕಂಡು ಲಿಂಗಾನಂದ ಸಮರಸಿಯಾದೆನೆಂದು ಶ್ರೀ ಷಣ್ಮುಖ ಸ್ವಾಮಿಗಳು ಮನವಾರ ಹಾಡಿಕೊಂಡಿದ್ದಾರೆ.

ವೇದ ವೇದಾಂತಗಳಿಗೆ ಅಸಾಧ್ಯವಾದ
ಅನುಪಮ ಲಿಂಗವ ತಂದುಕೊಟ್ಟನಯ್ಯಾ
ಸದ್ಗುರು ಎನ್ನ ಕರಸ್ಥಲಕ್ಕೆ, ನಾದಬಿಂದು ಕಳೆಗಳಿಗಭೇದ್ಯವಾದ
ಅಚಲಿತ ಲಿಂಗವ ತಂದುಕೊಟ್ಟನಯ್ಯಾ
ಸದ್ಗುರು ಎನ್ನ ಕರಸ್ಥಲಕ್ಕೆ ವಾನಕ್ಕಗೋಚರವಾದ
ಅಖಂಡಿತ ಲಿಂಗವ ತಂದು ಕೊಟ್ಟನಯ್ಯಾ
ಸದ್ಗುರು ಎನ್ನ ಕರಸ್ಥಲಕ್ಕೆ ಇನ್ನು ನಾನು ಬದುಕಿದೆನು.
ನಾ ಬಯಸುವ ಬಯಕೆ ಕೈ ಸಾರಿತಿಂದು ಕೂಡಲಸಂಗಮದೇವಾ.
-ಬ.ಷ.ಹೆ.ವ. ೧೦೨೧

ವೇದಾಂತಗಳಿಗೆ ಅಸಾಧ್ಯವಾದ, ಉಪಮೆಗೆ ನಿಲುಕದಂಥ ಅನುಪಮವಾದ, [ಬೈಂದ್ವಾತ್ಮಕ ಪಿಂಡವನ್ನೂ, ನಾದಾತ್ಮಕ ಪ್ರಾಣವನ್ನೂ ಕಲಾತ್ಮಕ ಪುರುಷನನ್ನೂ ಮೀರಿ ಶಿವನು ಮನೋಮೂರ್ತಿ ಪ್ರಣವ ಸ್ವರೂಪಿ ನಿಃಕಲನಾಗಿರುವುದರಿಂದ] ನಾದಬಿಂದು ಕಲಾತೀತನಾದ, ಎಲ್ಲವನ್ನೂ ಚಲಿಸಿ ತಾನು ಮಾತ್ರ ಚಲಿಸದ [Unmoved Mover of this universeSocrates] ಅಚಲಿತನಾದ, ವಾಕ್ ಮನಕ್ಕೆ ಅಗೋಚರನಾದ, ಅಖಂಡ ಪರಿಪೂರ್ಣನಾದ ಪರಶಿವನನ್ನು ಲಿಂಗರೂಪವಾಗಿ ಎನ್ನ ಕರಸ್ಥಲಕ್ಕೆ ಸದ್ಗುರು ಸ್ವಾಮಿ ಕೊಟ್ಟ ಬಳಿಕ, ನಾನು ಅಮರನಾಗಿ, ಮುಕ್ತಿಯೆಂಬ ಎನ್ನ ಹೆಬ್ಬಯಕೆಯನ್ನು ಕೈವಶಮಾಡಿಕೊಂಡು ಧನ್ಯನಾಗುವೆನೆಂದು ಮಹಾತ್ಮಾ ಬಸವಣ್ಣನವರು ತಮ್ಮ ಹೃದಯದಲ್ಲಿ ರೂಪುಗೊಂಡು ಕರಸ್ಥಲದಲ್ಲಿ ಕುಳಿತಿರುವ ಲಿಂಗದ ಮಹತಿಯನ್ನು ಈ ವಚನದಲ್ಲಿ ಚೆಲ್ಲವರಿದಿದ್ದಾರೆ.

"ಆನು ಕಾಮಿಸುತ್ತಿಪ್ಪ ಸಾಲೋಕ್ಯವಿದೆ, ಸಾಮೀಪ್ಯವಿದೆ,
ಸಾರೂಪ್ಯವಿದೆ, ಸಾಯುಜ್ಯವಿದೆ, ಧರ್ಮವಿದೆ, ಅರ್ಥವಿದೆ,
ಕಾಮವಿದೆ, ಮೋಕ್ಷವಿದೆ. ಎನ್ನ ಧ್ಯಾನದ ಜಪ ತಪದಿಂದಲೇ.
ಸಿದ್ದಿಯಪ್ಪ ಮಹಾಸಿದ್ದಿ ಇದೆ. ಆನೇನ ಇಚ್ಛಿಸುವ
ಇಚ್ಛೆ ಎಲ್ಲವೂ ಇದೇ ನೋಡಾ. ಶ್ರೀಗುರು ಕಾರುಣ್ಯದಿಂದ
ಮಹಾವಸ್ತು ಕರಸ್ಥಲಕ್ಕೆ ಬಂದ ಬಳಿಕ ಸರ್ವಸುಖ ಇದೆ ನೋಡಾ.
ಇನ್ನು ಬಯಲ ಭ್ರಮೆಯಾಳಗೆ ಹೊಗಿಸದಿರಯ್ಯಾ,
ನಿಮ್ಮ ಬೇಡಿಕೊಂಬೆನು, ನಿಮಗೆ ಎನ್ನಾಣಿ
ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ"
-ಉರಿಲಿಂಗಪೆದ್ದಿ

"ಸದ್ದು ರು ಎನ್ನ ಮೇಲೆ ಕರುಣಿಸಿ, ಎನ್ನ ಕರಸ್ಥಲಕ್ಕೆ ಮಹಾ ಘನವಸ್ತುವನ್ನು ಇಷ್ಟಲಿಂಗವನ್ನಾಗಿ ಸಾಕಾರಮಾಡಿ ಕೊಟ್ಟ ಬಳಿಕ, ನಾನು ಬಹು ದಿನಗಳಿಂದ ಹಾರೈಸುತ್ತಿದ್ದ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಪದವಿಗಳೂ, ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ಪುರುಷಾರ್ಥಗಳೂ, ಧ್ಯಾನ-ಜಪ-ತಪದಿಂದ ಬರುವ ಎಲ್ಲ ಮಹಾಸಿದ್ದಿಗಳೂ, ಇಚ್ಚಿಸುವ ಸರ್ವ ಸುಖಗಳೆಲ್ಲವೂ ನನಗೆ ಲಭ್ಯವಾದವು." ಎಂದು ಉರಿಲಿಂಗ ಪೆದ್ದಿಗಳು ಕರಸ್ಥಲದ ಲಿಂಗದ ಮಹಿಮೆಯನ್ನು ಬಣ್ಣಿಸಿದ್ದಾರೆ. ನಿಮ್ಮಾಣಿಗೂ ಇನ್ನು ಮೇಲೆ ಲಿಂಗವಿಲ್ಲದೆ ಇವೆಲ್ಲವುಗಳನ್ನು ಕಾಣುವೆನೆಂಬ ಬಯಲ ಭ್ರಮೆಯನ್ನು ನನ್ನ ಮುಂದೆ ತರಲಾಗದೆಂದು ದೇವನಲ್ಲಿ ಶರಣನು ಮೊರೆಯಿಟ್ಟು ಬೇಡಿಕೊಳ್ಳುತ್ತಾನೆ.

ಇಂಥ ಉದಾತ್ತ ದೇವರ ಸ್ವರೂಪದರ್ಶನವನ್ನು ಕರದಿಷ್ಟಲಿಂಗದಲ್ಲಿ ಕಂಡು ಅನುಭವಿಸಿದವರಿಗೆ ಲಿಂಗದ ಬಗ್ಗೆ ಅಲ್ಲದ ಸಲ್ಲದ ಮಾತನಾಡಿದರೆ ಹೇಗೆ ತಾನೇ ಸಹಿಸಿಕೊಂಡಾರು ? ಇಂಥ ಲಿಂಗಸ್ವರೂಪವನ್ನು ವರ್ಣಿಸುವ ವಚನಗಳನ್ನು ಓದಿದರೆ, ಎಂಥ ದೇವವಿರೋಧಿಯೂ ಸಹ ಲಿಂಗ ಕಟ್ಟಿಕೊಳ್ಳುವ ಅಭಿಲಾಷೆ ತೋರಿಯಾನು !

ಲಿಂಗವೆನ್ನಯ ತಂದೆ ! ಲಿಂಗವೆನ್ನಯ ತಾಯಿ !
ಲಿಂಗವೆನ್ನಯ ಪರಮ ಜ್ಞಾನಮೂರ್ತಿ !!...
ಲಿಂಗ ಗುರುಮೂರ್ತಿಯ ಪಾದಕ್ಕೆ ಶರಣೆಂದು
ಲಿಂಗ ನೀ ನಾನಾದೆ ಯಾಗಿನಾಥ.
ಇಂದೆನ್ನ ಕರಸ್ಥಲಕ್ಕೆ ಬಂದಿಹನು ಪರಬ್ರಹ್ಮ
ನಿಂದು ನಿಜದಾನಂದ ಬಂದನಯಾ
ಮುಂದುವರಿವಾ ಮನದ, ಅಜ್ಞಾನಹರಬಂದ
ತಂದೆಗೆ ವಂದಿಸುವೆನು ಯಾಗಿನಾಥ.
-ಸಿದ್ದರಾಮೇಶ್ವರರು

ಡಾ. ಎ. ಎನ್. ವೈಟೆಡ್‌ನಂಥ ಮಹಾ ಪ್ರತಿಭಾವಂತ ತತ್ವ ದರ್ಶಿಯ ದೇವರ ಕಲ್ಪನೆಯನ್ನು ಹೋಲಬಹುದಾದ ಲಿಂಗದ ಸ್ವರೂಪವನ್ನು ಈ ಮೇಲಿನ ವಚನದಲ್ಲಿ ಸಿದ್ದರಾಮ ಶಿವಯೋಗಿಗಳು ಪ್ರತಿಪಾದಿಸಿದ್ದಾರೆ. ಡಾ. ವೈಟೆಡ್‌ನು ತನ್ನ "Process and Reality” ಎಂಬ ಗ್ರಂಥದಲ್ಲಿ ಹೇಳುತ್ತಾನೆ : “ಆಧುನಿಕ ಮಾನವನಿಗೆ ಪ್ರಿಯವಾದ ದೇವರೆಂದರೆ ಸಹಾನುಭೂತಿ ತೋರಿಸುವವನು, ಸುಖಸಂದೇಶಗಳನ್ನು ಕೊಡುವವನು, ಸನ್ಮಾರ್ಗದರ್ಶಿ, ತಾನು ಸಂಸಾರದಲ್ಲಿ ಭಾಗಿಯಾಗಿ, ಸಂಸಾರದಲ್ಲಿ ಭಾಗಿಗಳಾದ ಮಾನವರೊಂದಿಗೆ ಸಹಾನುಭೂತಿ ತೋರಿಸಿ, ತಾನೂ ಅವರನ್ನು ಪ್ರೀತಿಸಿ, ಅವರು ತನ್ನನ್ನು ಪ್ರೀತಿಸುವಂತೆ ಮಾಡುವಂಥ ಕರುಣಾನಿಧಿ ದೇವರು ಬೇಕಾಗಿದೆ."

ಲಿಂಗವು ತಂದೆಯಾಗಿ (Creator), ತಾಯಿಯಾಗಿ (Protector), ಜ್ಞಾನಮೂರುತಿ ಗುರುವಾಗಿ, ಮನದ ಅಜ್ಞಾನವನ್ನು ಕಳೆಯುವುದಕ್ಕಾಗಿ ಕರಸ್ಥಲದಲ್ಲಿ ಬಂದಿರುವುದನ್ನು ಕಂಡು ಕೃತಜ್ಞತೆಯಿಂದ ಶರಣು ಮಾಡುತ್ತಾನೆ ವಚನಕಾರನು. ತಪ್ಪುಗಳನ್ನು ಕಂಡು, ನ್ಯಾಯಾಧೀಶನಂತೆ ತಂದೆ ಶಿಕ್ಷಿಸಿದರೆ, ತಾಯಿ ತಪ್ಪುಗಳನ್ನು ಕ್ಷಮಿಸಿ ಮಗುವನ್ನು ಸೆರಗಿನಲ್ಲಿ ಅಡಗಿಸಿಕೊಳ್ಳುವಳು. ತಂದೆ ನಿಷ್ಟುರಿಯಾದರೆ ತಾಯಿ ದಯಾಮಯಿ ! ಗುರುವು ಸನ್ಮಾರ್ಗದರ್ಶಿ, ಅದರಂತೆ ದೇವರು ತಂದೆಯೂ ಹೌದು, ತಾಯಿಯೂ ಹೌದು, ಗುರುವೂ ಹೌದು. ಏಕೆ ಪತಿಯೂ ಹೌದು, ಗೆಳೆಯನೂ ಹೌದು, ಮಗನೂ ಹೌದು. ಅಕ್ಕಮಹಾದೇವಿ ಪತಿಯ ರೂಪದಲ್ಲಿ, ಬಿಜ್ಜ ಮಹಾದೇವಿಯು ಮಗುವಿನ ಸ್ವರೂಪದಲ್ಲಿ ದೇವನನ್ನು ಕಂಡಿದ್ದಾರಷ್ಟೆ !

ಲಿಂಗಮಧ್ಯೆ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ
ಲಿಂಗಬಾಹ್ಯಾತ್ ಪರಂನಾಸ್ತಿ ತಸ್ಮಲಿಂಗಾಯ ತೇ ನಮಃ

ಸಚರಾಚರವನ್ನೊಳಗೊಂಡು ಮೂರು ಲೋಕವನ್ನು ಅರ್ಥಾತ್ ಈ ಜಗತ್ತನ್ನು ತನ್ನಲ್ಲಿಟ್ಟು ಕೊಂಡ ಲಿಂಗವು ಜಗದ್ರೂಪವಾಗಿದೆ. ಅಂದ ಮೇಲೆ ಜಗವ ಹೊರಗಿಕ್ಕಿ ತಾನಿರುವ ಯಾವ ವಸ್ತುವೂ ಈ ಪ್ರಪಂಚದಲ್ಲಿಲ್ಲ. ಅಂಥ ಬ್ರಹ್ಮಾಂಡಗತವಾದ ಲಿಂಗದ ನಿಲುವನ್ನು ಮೇಲಿನ ಶ್ಲೋಕದಿಂದ ನಾವು ಕಾಣಬಹುದಾಗಿದೆ. ಇದೇ ವಿಚಾರ ಸರಣಿಯಲ್ಲಿ ಸರ್ವಜ್ಞನು ಹಾಡಿರುವ ಒಂದು ವಚನವನ್ನು ನೋಡೋಣ.

ಲಿಂಗಕ್ಕೆ ಕಡೆಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೊಳು ಜಗವು ಅಡಗಿಹುದು, ಲಿಂಗವನು
ಹಿಂಗಿದವರುಂಟೆ ಸರ್ವಜ್ಞ ?

ಲಿಂಗಕ್ಕೆ ಕಡೆಯಿಲ್ಲ. ಯಾಕೆಂದರೆ ಅದಕ್ಕೆ ಮೊದಲಿಲ್ಲ. ಯಾವುದಕ್ಕೆ ಆದಿಯಿದೆಯಾ ಅದಕ್ಕೆ ಅಂತ್ಯವಿರಲೇಬೇಕು. ಆದಿ ಅಂತ್ಯಗಳಿಲ್ಲದ ಲಿಂಗವು ಅನಂತವು. ಲಿಂಗವಿಲ್ಲದಿರುವ ಠಾವು ಇಲ್ಲ. ಯಾಕೆಂದರೆ ಲಿಂಗವು-ಶಿವನು ಸರ್ವಾಂತರ್ಯಾಮಿ, ಸರ್ವಭರಿತನು. ವಿಶ್ವದಲ್ಲೆಲ್ಲ ಓತಪ್ರೋತವಾಗಿ ತುಂಬಿ ತುಳುಕುತ್ತಿದ್ದಾನೆ ! "ಲಿಂಗಮಧ್ಯೆ ಜಗತ್ ಸರ್ವಂ" ಎಂಬಂತೆ, ಜಗವನ್ನೆಲ್ಲ ತನ್ನಲ್ಲಿ ಇಂಬಿಟ್ಟು ಕೊಂಡು ಲಿಂಗವನು ಹಿಂಗಿದವರು ಅಂದರೆ ಬಿಟ್ಟವರು ಯಾರೂ ಇಲ್ಲವೆಂದೂ; ಲಿಂಗವು ಎಲ್ಲರಲ್ಲಿಯೂ, ಎಲ್ಲೆಡೆಯಲ್ಲಿಯೂ ಇರುವದೆಂದೂ; ಅಂತಹ ಪರಬ್ರಹ್ಮ ಲಿಂಗದ ಪ್ರತಿರೂಪವಾದ ಇಷ್ಟಲಿಂಗವನ್ನು ಧರಿಸುವವನು ಭಾಗ್ಯವಂತನೆಂದೂ ಸರ್ವಜ್ಞ ಕವಿಯು ಈ ಮೇಲಿನ ವಚನದಲ್ಲಿ ತುಂಬಾ ಮಾರ್ಮಿಕವಾಗಿ ಅರ್ಥವತ್ತಾಗಿ ಪ್ರತಿಪಾದಿಸಿದ್ದಾನೆ.

ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ,
ಲಿಂಗವನರಿದ ಬಳಿಕ ಮತ್ತೇನನರಿದಡೆಯೂ ಫಲವಿಲ್ಲ.
ಸರ್ವಕಾರಣ ಲಿಂಗವೆಂದುದಾಗಿ ಲಿಂಗವನೆ ಅರಿದೆ.
ಅರಿದರಿದು ಲಿಂಗಸಂಗವನೆ ಮಾಡುವೆ.
ಸಂಗಸುಖದೊಳಗೋಲಾಡುವೆ ಗುಹೇಶ್ವರಾ.
-ಅಲ್ಲಮಪ್ರಭು ೧೦೩೪

ಯಾವುದನ್ನು ಅರಿತರೆ ಎಲ್ಲವನ್ನೂ ಅರಿತಂತಾಗುವದೋ ಅಂಥದನ್ನು ಅರಿತ ಮೇಲೆ ಇನ್ನಾವುದನ್ನೂ ಅರಿಯುವ ಆವಶ್ಯಕತೆ ಇಲ್ಲವೆಂಬ ವಿಚಾರ ಸರಣಿ ಅಲ್ಲಮಪ್ರಭುದೇವರ ಮೇಲಿನ ವಚನದಲ್ಲಿ ಮೂಡಿ ಬಂದಂತಿದೆ. ಲಿಂಗದ ಬೆಳಗ ಕಾಣುವ ಸಮ್ಯಗ್ ಜ್ಞಾನವಿಲ್ಲದೆ ವೇದಾಗಮಂಗಳಾದಿಯಾಗಿ ಏನನರಿದಡೆಯೂ ಲಿಂಗಾಂಗ ಸಾಮರಸ್ಯ ಸಾಧ್ಯವಾಗಲಾರದುದರಿಂದ ಅದು ನಿಷ್ಟಯಾಜಕವು. ಇಂಥ ಸಮ್ಯಗ್ ಜ್ಞಾನೋದಯವಾಗಿ ಲಿಂಗದ ಬೆಳಗ ಕಂಡು ನಿಶ್ಮಿಸಿದ ಸ್ವಾನುಭಾವಿಗೆ ಮತ್ತೆ ಬೇರೆ ಏನನ್ನೂ ಅರಿಯುವ ಅವಶ್ಯಕತೆ ಇಲ್ಲ. ಈ ತೋರುವ ತೋರಿಕೆಗಳೆಲ್ಲದಕ್ಕೂ ಕಾರಣಕರ್ತೃ ಲಿಂಗವೆಂಬುದನ್ನು ಅರಿತುಕೊಂಡು ಲಿಂಗಾಂಗ ಸಂಗವಂ ಹಿಂಗದೆ ಕೂಡಿ ಲಿಂಗಾನಂದದ ನಿಬ್ಬೆರಗಿನಲ್ಲಿ ಲೋಲಾಡುವೆನೆಂದು, ಲಿಂಗಾಂಗ ಸಾಮರಸ್ಯದ ರಹಸ್ಯವನ್ನು ಪ್ರಭುದೇವರು ಬಿಚ್ಚಿಟ್ಟಿದ್ದಾರೆ.

ಕಾಣಬಾರದ ಲಿಂಗವೆನ್ನ ಕರಸ್ಥಲಕ್ಕೆ ಬಂದರೆ
ಎನಗಿದು ಸೋಜಿಗ, ಎನಗಿದು ಸೋಜಿಗ !
ಅಹುದೆನಲಮ್ಮೆನು, ಅಲ್ಲೆನಲಮ್ಮನು,
ಗುಹೇಶ್ವರ ಲಿಂಗ ನಿರಾಳ-ನಿರಾಕಾರ-ಬಯಲು.
ಸಾಕಾರವಾಗಿ ಎನ್ನ ಕರಸ್ಥಲಕ್ಕೆ ಬಂದರೆ ಹೇಳಲಮ್ಮೆ ಕೇಳಲಮ್ಮೆ !
-ಅಲ್ಲಮ ಪ್ರಭು. ೯೦

ತಿಳಿಯಬಾರದುದನ್ನು ತಿಳಿಯುವದು, ಕಾಣಲಾರದುದನ್ನು ಕಾಣುವದೇ ಅನುಭಾವವು. ನಿರಾಳ ನಿರಾಕಾರ ಲಿಂಗವು ಚರ್ಮಚಕ್ಷುವಿಗೆ ತೋರಲು ಸಾಧ್ಯವಿಲ್ಲ. ಆದರೂ ಕರಸ್ಥಲಕ್ಕೆ ನಿರಾಕಾರವಾದ ಲಿಂಗ ಸಾಕಾರವಾಗಿ ಬಂದುದನ್ನು ಅನಿಮಿಷ ದೃಷ್ಟಿಯಿಂದ ನೋಡಿ ನೋಡಿ, ಪಾತಿಭಚಕ್ಷು ಉನ್ನಿಲನವಾಗುವದು. ಆ ಮೂರನೇ ಕಣ್ಣಿನಿಂದ ಅಗೋಚರವಾದ ನಿರಾಕಾರ ಲಿಂಗವನ್ನು ಕಂಡು ಹರ್ಷಪುಲಕಿತನಾಗಿ, ಹೌದು, ಅಲ್ಲವೆಂದು ಹೇಳಲಿಕ್ಕೆ ಬಾರದ ದ್ವಂದ್ವಾತೀತ ನಿಶ್ಯಬ್ದ ಬ್ರಹ್ಮನನ್ನು ಕಂಡು, ಹಸುಳೆ ಕಂಡ ಸ್ವಪ್ನದಂತೆ ಅಚ್ಚರಿಗೊಂಡು, ಪ್ರಭುದೇವರು ಲಿಂಗಾನಂದ ಸಮರಸದ ಸವಿರುಚಿಯನ್ನು, ಶಿವಾನುಭವವನ್ನು ಮುಮುಕ್ಷುಗಳಿಗೆ ಉಣಬಡಿಸಿದ್ದಾರೆ.

ವಿಶ್ವತೋಮುಖ, ವಿಶ್ವತೋಪಾದ
ವಿಶ್ವತೋ ಬಾಹು, ವಿಶ್ವತೋ ಚಕ್ಕು
ವಿಶ್ವತೋ ವ್ಯಾಪಕನೆನಿಸಿ ಬಂದಿರಯ್ಯಾ
ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ.
-ಷಣ್ಮುಖ ಸ್ವಾಮಿಗಳು. ೭೩

ಶ್ರೀ ಷಣ್ಮುಖಸ್ಮಾಮಿಗಳು ದೇವನ ಸುಂದರ ಸ್ವರೂಪವನ್ನು ತಮ್ಮ ಕರಸ್ಥಲದಲ್ಲಿ ಕಂಡಿದ್ದಾರೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ಕೆಳಗಿನ ಇನ್ನೊಂದು ವಚನದಲ್ಲಿ ಸಚ್ಚಿದಾನಂದ ನಿತ್ಯ ಪರಿಪೂರ್ಣ ವಸ್ತು ನನ್ನ ಕರಸ್ಥಲದಲ್ಲಿರುವಾಗ ಬೇರೆ ದೈವವ ನೆನೆವ ಚಿಂತೆ ಇಲ್ಲವೆಂದು ಹೇಳಿದ್ದಾರೆ :

ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವಾದ
ಪರಮವಸ್ತುವು ಪ್ರತ್ಯಕ್ಷವಾಗಿ ಎನ್ನ ಕರಸ್ಥಲಕ್ಕೆ ಬಂದಿರಲು....... ಅಖಂಡೇಶ್ವರ ಲಿಂಗವು ಎನ್ನೊಳ ಹೊರಗೆ ತಾನಾದ ಬಳಿಕ ಇನ್ನೆಲ್ಲಿಯದಯ್ಯಾ ಎನಗೆ ಬೇರೆ ತತ್ವವನರಿವ ಚಿಂತೆ ?
-ಷ.ವ. ೭೫


ಸಮಾರೋಪ : ಲಿಂಗವೆಂದರೆ ಪರಾತ್ಪರ ವಸ್ತು, ಲಿಂಗವೆಂದರೆ ಪರಬ್ರಹ್ಮ, ಲಿಂಗವೆಂದರೆ ಪರಶಿವ, ಲಿಂಗವೆಂದರೆ ಪರಮಾತ್ಮ, ಲಿಂಗವೆಂದರೆ ಪರಂಜ್ಯೋತಿ, ಲಿಂಗವೆಂದರೆ ಚೈತನ್ಯ, ಲಿಂಗವೆಂದರೆ ನಿರಂಜನ ನಿರವಯ ನಿರ್ಗುಣ ನಿರಾಕಾರ ನಿರುಪಮ ಪರತತ್ವವು. ಲಿಂಗವೆಂದರೆ ಸಚ್ಚಿದಾನಂದ ನಿತ್ಯ ಪರಿಪೂರ್ಣವು, ಲಿಂಗವೆಂದರೆ ಆತ್ಮ. ಇಂಥ ಸಮನ್ವಯ ಸುಂದರ ಲಿಂಗ ಸ್ವರೂಪವನ್ನು ನಾವು ಈ ಅಧ್ಯಾಯದ ಪೂರ್ವಾರ್ಧದಲ್ಲಿ ನಿರೀಕ್ಷಿಸಿದೆವು.

ಅಂತಹ ಪರಾತ್ಪರ ಲಿಂಗವು ಸಾಕಾರವಾಗಿ ಶಿಷ್ಯನ ಕರಕಂಜದಲ್ಲಿ ವಿರಾಜಿಸುವುದು. ಈ ಕರದಿಷ್ಟಲಿಂಗದಲ್ಲಿಯೇ ಅವನು ಲಿಂಗ ಸ್ವರೂಪವನ್ನರಿದು ಆಚರಿಸಿ ಸರ್ವಾಂಗಲಿಂಗಿಯಾಗುತ್ತಾನೆ. ಅವನ ಪ್ರಾಣದಲ್ಲಿ ಗಂಧ ಗ್ರಾಹಕ ಶಕ್ತಿಯುಳ್ಳ ಪ್ರಾಣತ್ವವೇ ಆಚಾರಲಿಂಗವಾಗಿ, ಅವನ ಮುಖದಲ್ಲಿ ಶಬ್ದವೇ ಗುರುಲಿಂಗವಾಗಿ, ಮಾತೆಂಬುದು ಜ್ಯೋತಿರ್ಲಿಂಗವಾಗಿ ಅವನ ಕಣ್ಣಿನ ಬೆಳಗು ಶಿವಲಿಂಗ [ದಿವ್ಯ ತೇಜೋಮಯಲಿಂಗ] ವಾಗಿ, ಅವನ ತ್ವಕ್ಕಿನಲ್ಲಿ ಸ್ಪರ್ಶಶಕ್ತಿಯು ಜಂಗಮಲಿಂಗವಾಗಿ, ಅವನ ಕಿವಿಯಲ್ಲಿ ನಾದವೇ ಪ್ರಸಾದಲಿಂಗವಾಗಿ, ಅವನ ಹೃದಯದಲ್ಲಿ ತೃಪ್ತಿಯೇ ಮಹಾಲಿಂಗವಾಗಿ ಸ್ಕೂಲ ತನುವೆಲ್ಲ ಲಿಂಗಮಯವಾಗಿ, ಸಾಂಗ ಲಿಂಗಿಯಾದ ಶರಣನು ಮಾತ್ರ ಆ ಲಿಂಗದ ನಿಜಸ್ವರೂಪವನ್ನು ತಿಳಿಯಬಲ್ಲನಲ್ಲದೆ ಉಳಿದವರಿಗೆ ಹೇಗೆ ಸಾಧ್ಯವಾದೀತು ? ತಮಗೆ ತಿಳಿಯದುದನ್ನು ತಿಳಿದವರಿಂದ ಕೇಳಿ ಅರಿಯಬೇಕು. ಅದು ಸತ್ಯಾನ್ವೇಷಣೆಯ ದೃಷ್ಟಿ, ಅದನ್ನು ಬಿಟ್ಟು ತನಗೆ ಗೊತ್ತಿಲ್ಲದ ವಿಷಯವಾಗಿ ಅಲ್ಲದ ಸಲ್ಲದ ಮಾತುಗಳನ್ನಾಡುವುದು ಸಾಧುವೂ ಅಲ್ಲ, ಸಮಂಜಸವೂ ಅಲ್ಲ; ವಿವೇಕವಂತೂ ಮೊದಲೇ ಅಲ್ಲ. ಇಲ್ಲಿ ಪ್ರತಿಪಾದಿಸಿದ ಲಿಂಗದ ಸ್ವರೂಪವನ್ನು ಅವಲೋಕಿಸಿದ ಎಂಥ ಓದುಗನೂ ಸಹ ದೇವರ ಬಗ್ಗೆ ಮತ್ತು ಅವನ ಸಾಕಾರವಾದ ಇಷ್ಟಲಿಂಗದ ಬಗ್ಗೆ ಪೂಜ್ಯ ಭಾವನೆಯನ್ನು ತಾಳಿಯಾನೆಂದು ಆತ್ಮವಿಶ್ವಾಸದಿಂದ ಹೇಳಬಹುದಾಗಿದೆ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಲಿಂಗದ ಸ್ವರೂಪ ಇಷ್ಟಲಿಂಗದ ಆವಶ್ಯಕತೆ Next