Previous ಲಿಂಗಾಯತ ಸಾಧಕನ ದಿನಚರಿ ವಿವರವಾದ ಇಷ್ಟಲಿಂಗ ಪೂಜಾ ವಿಧಾನ Next

ಸಂಕ್ಷಿಪ್ತ ಇಷ್ಟಲಿಂಗ ಪೂಜಾ ವಿಧಾನ

✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

ಸಂಕ್ಷಿಪ್ತ ಇಷ್ಟಲಿಂಗ ಪೂಜಾ ವಿಧಾನ

ಪೂಜೆಯೆಂಬ ವಿಧಾನವಿರುವುದು ಕೇವಲ ವಿರಾಮವಿರುವವರು ಮಾಡಲಿಕ್ಕಷ್ಟೇ ಅಲ್ಲ ಕಾಯಕ ನಿರತರೂ ಸಹ ಮಾಡಲಿಕ್ಕೆ: ಮುಮುಕ್ಷುಗಳು ಸಾಧಕರು ಮಾಡಲಿಕ್ಕಷ್ಟೇ ಅಲ್ಲ: ಶ್ರೀ ಸಾಮಾನ್ಯ ಧರ್ಮವಂತರೂ ಮಾಡಲಿಕ್ಕೆ. ಆದ್ದರಿಂದ ನಿತ್ಯ ಕಾರ್ಯಕ್ರಮವಾದ ಪೂಜೆಯನ್ನು ವಿರಾಮವಿದ್ದಾಗ ದೀರ್ಘಕಾಲ ಮಾಡಲಿಕ್ಕೆ ಅನುಕೂಲವಾಗುವಂತೆ ವಿವರವಾಗಿಯೂ, ಅಲ್ಪ ವೇಳೆಯಿದ್ದಾಗ ಸಾಂಕೇತಿಕವಾಗಿ ಮಾಡಿಕೊಳ್ಳಲು ಸಂಕ್ಷಿಪ್ತವಾಗಿಯೂ ಕೊಡಲಾಗಿದೆ.

ಸುಪ್ರಭಾತದಲ್ಲಿ ಮಿಂದು ಮಡಿಯುಟ್ಟು ಪೂಜಾಗೃಹವನ್ನು ಪ್ರವೇಶಿಸಬೇಕು. (ಆಪತ್‌ಧರ್ಮ: ಹೆಚ್ಚಾಗಿ ಪ್ರವಾಸದಲ್ಲಿರುವ ನೌಕರದಾರರು, ಉದ್ಯಮಿಗಳು, ಮುಂಜಾನೆ ಸ್ನಾನಕ್ಕೆ ನೀರನ್ನು ಒದಗಿಸಿಕೊಳ್ಳಲು ಅಸಾಧ್ಯವೆನಿಸಿದಾಗ ಮತ್ತು ಮೈಯಲ್ಲಿ ಕಾಯಿಲೆ-ಕಸಾಯಿಲೆ ಆಗಿ ವೈದ್ಯರು ಸ್ನಾನ ಮಾಡದಿರಲು ಸೂಚಿಸಿದಾಗ, ನೀರಿನಿಂದ ಮುಖ ತೊಳೆದು ಮಂತ್ರಸಹಿತವಗಿ ವಿಭೂತಿ ಸ್ನಾನವನ್ನು ಮಾಡಿ, ಇಷ್ಟಲಿಂಗ ಪೂಜೆಯನ್ನು ಮಾಡಬಹುದು. ಜೊತೆಗೆ ಸದಾಕಾಲ ವಿಭೂತಿಗಟ್ಟಿ ಇರಿಸಿಕೊಂಡು ಪ್ರವಾಸಕ್ಕೆ ಹೋದಾಗಲೂ ತಾನಿದ್ದ ಸ್ಥಳದಲ್ಲಿಯೇ ಪೂಜೆಯನ್ನು ಪೂರೈಸಬಹುದು. ಬಹಿರಂಗದ ಆಚರಣೆಗಿಂತಲೂ ಅವಶ್ಯವಾಗಿ ಬೇಕಾದುದು ದೇವನ ಪೂಜೆ ಮತ್ತು ಧ್ಯಾನಗಳಷ್ಟೇ.) ಪೂಜೆಗೆ ಕುಳಿತುಕೊಳ್ಳುವ ಮೊದಲು ನೆಲಕ್ಕೆ ಹಾಕಿದ ಆಸನ, ಚಾಪೆ, ಮಣೆ, ಇವುಗಳ ಮೇಲೆ ಪಂಚಕೋನ ಪ್ರಣವವನ್ನು ವಿಭೂತಿಯಿಂದ ಬರೆದು ಕುಳಿತುಕೊಳ್ಳಬೇಕು. ಏಕೆಂದರೆ ಪಂಚಕೋನ ಪ್ರಣವವು ಷಡಕ್ಷರಿ ಮಂತ್ರದ ಸಂಕೇತ, ಬಸವ ಮಂತ್ರ ಸ್ಮರಣೆ ಮಾಡುತ್ತ ವಿಭೂತಿ ಸ್ನಾನ ಮತ್ತು ವಿಭೂತಿ ಧಾರಣೆ ಮಾಡಿಕೊಳ್ಳಬೇಕು. ನಂತರ ರುದ್ರಾಕ್ಷಿಯ ಕಂಠಮಾಲೆ ಧರಿಸಬೇಕು. ಧರ್ಮಗುರು ಮಂತ್ರಪುರುಷ ಬಸವಣ್ಣನವರ ನಾಮಸ್ಮರಣೆ ಮಾಡಿ, ದೀಕ್ಷಾಗುರು ಸ್ಮರಣೆ ಮಾಡಿ, ಇಷ್ಟಲಿಂಗವನ್ನು ಕರಡಿಗೆಯಿಂದ ತೆಗೆದು ಎಡಗೈಯಲ್ಲಿ ಇರಿಸಿಕೊಳ್ಳಬೇಕು.

ಜಲಶುದ್ಧಿ :

ಒಂದು ಲೋಟ (ಪಂಚಪಾತ್ರೆ)ದಲ್ಲಿ ನೀರನ್ನು ತುಂಬಿ, ಬಲಗೈ ಬೆರಳುಗಳಿಗೆ ವಿಭೂತಿ ಧರಿಸಿ, ಬೆರಳಕಂಡಿಗೆ ಒಂದರಂತೆ 12 ಬಾರಿ “ಓಂ ಲಿಂಗಾಯ ನಮಃ” ಎಣಿಸಿ, ಮಧ್ಯದ ಬೆರಳಿನಿಂದ ಪಂಚಪಾತ್ರೆಯ ನೀರೊಳಗೆ ಪಂಚಕೋನ ಪ್ರಣವ ಬರೆದು, ನಂತರ ಐದೂ ಅಂಗುಲಿಗಳನ್ನು ಅದ್ದಿ, ಮಂತ್ರ ಜಪದಿಂದ ಶುದ್ಧಿಗೊಂಡ ನೀರನ್ನು ಇಷ್ಟಲಿಂಗಕ್ಕೆ ಎರೆಯಬೇಕು.

ಒಣದಾದ ಮಡಿ ಬಟ್ಟೆಯಿಂದ ಒರೆಸಿ, ತೆಳುಬಟ್ಟೆಗೆ ಅದನ್ನು ತೀಡಿ, ಎಡಗೈ ಅಂಗೈಯಲ್ಲಿ ಪಂಚಕೋನ, ಪ್ರಣವ ಬರೆದು ಇಷ್ಟಲಿಂಗದ ಜಲಹರಿ ಹೆಬ್ಬೆರಳಿನ ಕಡೆಗೆ ಮುಖವಾಗುವಂತೆ ಪ್ರತಿಷ್ಠಾಪಿಸಬೇಕು.

1. ಅಷ್ಟವಿಧಾರ್ಚನೆ

ಮಜ್ಜನಕ್ಕೆರೆಯುವುದು ಆದ ಬಳಿಕ ಅಂಗೈಯಲ್ಲಿ ಪ್ರತಿಷ್ಠಾಪಿಸಿದ ಇಷ್ಟಲಿಂಗದ ನೆತ್ತಿಗೆ ಮೂರು ಬೆರಳಿನಿಂದ ವಿಭೂತಿಯನ್ನು ಧರಿಸಬೇಕು. ನಂತರ ರುದ್ರಾಕ್ಷಿ ಲಿಂಗಮಾಲೆ ಏರಿಸಬೇಕು. ಗಂಧಧಾರಣೆ, ಅಕ್ಷತಾಧಾರಣೆ, ಪುಷ್ಪಾಲಂಕಾರ, ಪತ್ತೆಧಾರಣೆ, ಊದುಬತ್ತಿಯ ಬೆಳಗುವಿಕೆ, ಆರತಿ ಬೆಳಗುವಿಕೆ ಇವು ಕ್ರಮವಾಗಿ ಆಗಬೇಕು.

ತನ್ನ ವೇಳೆಗೆ ಒದಗಿದ ಕಲ್ಲುಸಕ್ಕರೆ, ದ್ರಾಕ್ಷಿ ಯಾವುದಾರೊಂದು ಅಪ್ಯಾಯನ ವಸ್ತುವನ್ನು ನಿವೇದಿಸಿ ಅಂಗೈಯಲ್ಲಿ ಲಿಂಗದ ಮುಂದಿರಿಸಿ “ಇಷ್ಟಲಿಂಗಕ್ಕೆ ರೂಪವನ್ನು, ಪ್ರಾಣಲಿಂಗಕ್ಕೆ ರುಚಿಯನ್ನು, ಭಾವಲಿಂಗಕ್ಕೆ ತೃಪ್ತಿಯನ್ನು ಸಮರ್ಪಿಸುವೆ.” ಎಂಬ ಭಾವದಿಂದ ಮೂರು ಬಾರಿ ಅರ್ಥ್ಯವನ್ನು ಬಿಡಬೇಕು. ಉತ್ಪತ್ತಿಯಾದ ಓಂಕಾರ ನಾದವನ್ನು ತನು ಮನ ಭಾವಗಳಲ್ಲಿ ಅಳವಡಿಸಿಕೊಂಡು ಆತ್ಮಜಾಗೃತಿ ಗೈದುಕೊಳ್ಳುವೆನೆಂಬ ಭಾವದಿಂದ ಘಂಟಾನಾದವನ್ನು ಮಾಡಬೇಕು.

ಈ ರೀತಿ ಅಷ್ಟವಿಧಾರ್ಚನೆ ಸಲ್ಲಿಸುವಾಗ ವಿವರವಾಗಿ ವಚನಗಳನ್ನು ಹೇಳಿಕೊಳ್ಳಲು ವೇಳೆ ಇಲ್ಲದಿದ್ದರೆ ಅಥವಾ ಸ್ತೋತ್ರಗಳು ಬಾಯಿಪಾಠವಾಗದಿದ್ದರೆ ಈ ಯಾವುದಾದರೊಂದು ಗೀತೆಯನ್ನು ಹಾಡುತ್ತಾ ಇರಬಹುದು.

ಲಿಂಗದೇವಾಷ್ಟಕ

1.
ಶರಣ ಜನ ಪೂಜಿತ ಶ್ರೀ ಲಿಂಗದೇವ
ಮರಣಭಯ ದೂರಕ ಶ್ರೀ ಲಿಂಗದೇವ
ಸೃಷ್ಟಿಕರ್ತ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

2.
ಸರ್ವಕಾರಣ ಶ್ರೀ ಲಿಂಗದೇವ
ಸರ್ವಶಕ್ತ ಶ್ರೀ ಲಿಂಗದೇವ
ಸರ್ವವ್ಯಾಪಿ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

3.
ನಿರಾಕಾರ ನಿರ್ಗುಣ ಶ್ರೀ ಲಿಂಗದೇವ
ನಿರ್ಮಲ ಚೇತನ ಶ್ರೀ ಲಿಂಗದೇವ
ಪ್ರಣವ ಸ್ವರೂಪ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

4.
ವಿಶ್ವತಃ ಚಕ್ಷು ಶ್ರೀ ಲಿಂಗದೇವ
ವಿಶ್ವತೋ ಬಾಹು ಶ್ರೀ ಲಿಂಗದೇವ
ವಿಶ್ವತಃ ಪಾದ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

5.
ಮಾತಾಪಿತರಹಿತ ಶ್ರೀ ಲಿಂಗದೇವ
ಜಗದಾರಾಧ್ಯ ಶ್ರೀ ಲಿಂಗದೇವ
ಲೋಕರಕ್ಷಕ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

6.
ಜ್ಯೋತಿಸ್ವರೂಪ ಶ್ರೀ ಲಿಂಗದೇವ
ಕಾರುಣ್ಯನಿಧಿ ಶ್ರೀ ಲಿಂಗದೇವ
ಮಂಗಳರೂಪಿ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

7.
ಜನನ ಮರಣ ರಹಿತ ಶ್ರೀ ಲಿಂಗದೇವ
ಭವತಾಪಹಾರಕ ಶ್ರೀ ಲಿಂಗದೇವ
ಮುಕ್ತಿದಾತ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥

8.
ಹೃತ್ಕಮಲವಾಸಿ ಶ್ರೀ ಲಿಂಗದೇವ
ಗುರುಬಸವ ರೂಪಿತ ಶ್ರೀ ಲಿಂಗದೇವ
ಇಷ್ಟಲಿಂಗರೂಪಿ ಶ್ರೀ ಲಿಂಗದೇವ
ಪೂಜಿಪೆ ನಾ ಘನಲಿಂಗದೇವ ॥ ಓಂ ಲಿಂಗಾಯ ನಮಃ ॥ -ಪೂಜ್ಯ ಮಾತಾಜಿ

ಬಾರೊ ಬಾರೊ ಲಿಂಗ

ಬಾರೋ ಬಾರೋ ಬಾರೋ ಲಿಂಗ ಕರದ ಕಮಲಕೆ
ಹೃದಯ ತಣಿಯೆ ಪೂಜಿಸುವೆ ನಿನ್ನಯ ಮೂರುತಿಯ || ಪ ||

ಭಕ್ತಿರಸದ ಉದಕವೆರೆದು | ಮರೆವನುರುಹಿ ಭಸ್ಮಪೂಸಿ
ಶಾಂತಿ ಎಂಬ ಗಂಧವಿಟ್ಟು | ನಾನು ತಣಿವೆನು || ೧ ||

ಸದುಗುಣ ಕುಸುಮಗಳ ಪದತಲದಿ ಅರ್ಪಿಸುತ
ಚಿದ್ಭಾವ ಧೂಪದ್‌ಹೊಗೆಯ | ನಾನು ಎತ್ತುವೆ || ೨ ||

ಅರಿವಿನಾ ಆರತಿಯ ಶಿರದ ತಳಿಗೆಯಲ್ಲಿ ಇರಿಸಿ
ಮರೆವ ಹರಿಪ ಮಹಾದೇವ ನಿನಗೆ ಬೆಳಗುವೆ || ೩ ||

ತನುಮನ ನೈವೇದ್ಯ ಲೋಕದಾತ ನಿನಗೆ ಇತ್ತು
ಎನ್ನ ಶರಣು ಬಿಡದೆ ಸಲಿಸಿ ಧನ್ಯಳಾಗುವೆ || ೪ ||

ಅಂಗೈಯ ತೊಟ್ಟಲಲಿ ಲಿಂಗಯ್ಯ ನಿನ್ನ ಮಲಗಿಸಿ
ಸಂಗೀತ ಹಾಡುವೆ ಲಾಲಿ ಹೇಳಿ ಆಡಿಪೆ || ೫ ||

ಆಡಿಪಾಡಿ ನಲಿದಾಡಿ ಮಿತಿಮೀರಿ ತಣಿದಾಡಿ
ನೋಡಿ ಸವಿವೆ ಕಂಗಳಲ್ಲಿ ಸಚ್ಚಿದಾನಂದನ || ೬ || -ಜಗದ್ಗುರು ಮಾತೆ ಮಹಾದೇವಿ

ತನುಕರಗದವರಲ್ಲಿ

ತನುಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಅರಿವು ಕಣ್ಣೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ಹೃದಯ ಕಮಲಶುದ್ಧವಿಲ್ಲದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಎನ್ನ ಕರಸ್ಥಲವ
ಇಂಬುಗೊಂಡೆ ಹೇಳಾ ಚನ್ನಮಲ್ಲಿಕಾರ್ಜುನಾ? -ಜಗನ್ಮಾತಾ ಅಕ್ಕಮಹಾದೇವಿ

೨. ಲಿಂಗದೇವ ಸ್ಥವನ :

ಇಷ್ಟಲಿಂಗಪೂಜೆಯು ಕೇವಲ ಭಕ್ತಿಯ ತೃಪ್ತಿಗಾಗಿ ಅಲ್ಲ, ಅದು ಜ್ಞಾನ ಪ್ರಧಾನವೂ ಅಹುದು. ದೇವರನ್ನು ಆರಾಧಿಸಿದಷ್ಟೇ ಮುಖ್ಯವಾದುದು ಅವನ ಸ್ವರೂಪದ ಚಿಂತನೆ; ಮತ್ತು ಅವನ ಸ್ವರೂಪದ ತಿಳುವಳಿಕೆ. ಆದ್ದರಿಂದ ದೇವನ ಸ್ವರೂಪ, ಅವನ ಕರುಣೆಯ ಮಹತ್ವ ಮುಂತಾದ ಭಾವವನ್ನೊಳಗೊಂಡಿರುವ ವಚನ ಮತ್ತು ಗೀತೆಗಳನ್ನು ಹಾಡಿ, ಕಡೆಯಲ್ಲಿ ಕುರಂಗ ಮುದ್ರೆಯಿಂದ ನಮಸ್ಕರಿಸಬೇಕು.

೩. ಲಿಂಗಾನುಸಂಧಾನ :

ಭಕ್ತಿ-ಜ್ಞಾನಗಳಿಗಿರುವಷ್ಟೇ ಸ್ಥಾನ ಇಲ್ಲಿ ಯೋಗಕ್ಕಿದೆ. ಇಷ್ಟಲಿಂಗ ಯೋಗವು ಪ್ರಮುಖವಾಗಿ ತ್ರಾಟಕ ಯೋಗದ ಆಚರಣೆಯ ಮೇಲೆ ನಿಂತಿದೆ. ಮಾನವನು ಮನವನ್ನು ಏಕಾಗ್ರಗೊಳಿಸಲಿಕ್ಕಾಗಿ ದೃಷ್ಟಿ ಯೋಗವನ್ನು ಅಳವಡಿಸಿಕೊಂಬುದೇ ಇಷ್ಟಲಿಂಗ ಯೋಗದ ಮರ್ಮ. ಪೂಜೆಗೆ ಕುಳಿತುಕೊಳ್ಳುವ ನಮ್ಮ ಹಿಂದೆ ಶಾಂತವಾಗಿ ಉರಿಯುವ ಜ್ಯೋತಿ ಇರಬೇಕು. ಆ ಜ್ಯೋತಿಯ ಕಳೆಯು ಇಷ್ಟಲಿಂಗದ ಕಪ್ಪು ಕಂತೆಯಲ್ಲಿ ಪ್ರತಿಫಲಿತವಾಗಬೇಕು. ಅದರ ಮೇಲೆ ದೃಷ್ಟಿ ನಿಲ್ಲಿಸುವುದು ಬಹಳ ಫಲದಾಯಕ. ಈಗ ಪೂಜೆಗೊಂಡಿರುವ ಇಷ್ಟಲಿಂಗವನ್ನು ಎಡ ಅಂಗೈಯಲ್ಲಿರಿಸಿ, ಕೈಯನ್ನು ಮೇಲಕೆತ್ತಿ, ಭೂಮಧ್ಯ ಅಥವಾ ಹೃದಯಕಮಲಕ್ಕೆ ಸಮಾನಾಂತರವಾಗಿ, ಅಥವಾ ಮೂಗಿನ ತುದಿಗೆ ಸಮವಾಗಿ, ಸುಮಾರಾಗಿ ಹನ್ನೆರಡು ಅಂಗುಲ ದೂರದಲ್ಲಿ ನಿಲ್ಲಿಸಬೇಕು. ಕಣ್ಣು ರೆಪ್ಪೆಗಳನ್ನು ಪೂರ್ಣ ಮುಚ್ಚದೆ ಅಥವಾ ಪೂರ್ತಿ ತೆರೆಯದೆ ಅರ್ಧ ತೆರೆದಿರುವ (ಅನಿಮಿಷ) ಕಣ್ಣಿಂದ ಇಷ್ಟಲಿಂಗವನ್ನು ನಿರೀಕ್ಷಿಸಬೇಕು. ಈ ನಿರೀಕ್ಷೆಯೊಡನೆಯೇ “ಓಂ ಲಿಂಗಾಯ ನಮಃ' ಎಂಬ ಷಡಕ್ಷರಿ ಮಂತ್ರವನ್ನು ಮಾನಸಿಕವಾಗಿ ಜಪಿಸಬೇಕು. ಕನಿಷ್ಟ ಪಕ್ಷ 108 ಮಂತ್ರಗಳನ್ನು ತಪ್ಪದೇ ಜಪಿಸಬೇಕು. ಜಪಮಾಲೆ ಇದ್ದರೆ ತುಂಬಾ ಲೇಸು. ಇಲ್ಲದಿದ್ದರೆ ಬೆರಳ ಕಂಡಿಕೆಯ ಸಹಾಯದಿಂದ ಎಣಿಸಬಹುದು. ಒಂದು ಬೆರಳಿಗೆ ಮೂರರಂತೆ ನಾಲ್ಕು ಬೆರಳಿಗೆ ಹನ್ನೆರಡಾಗುವವು. ಹನ್ನೆರಡರಂತೆ ಒಂಭತ್ತು ಸಾರಿ ಎಣಿಸಿದರಾಯಿತು. ಸಾಕಷ್ಟು ವೇಳೆ ಇದ್ದರೆ, ಮಂತ್ರ ಜಪ ಮಾಡುವಾಗ ಆನಂದವಾಗುವಷ್ಟು ಎಣಿಸುತ್ತಾ ಹೋಗಬೇಕು. 108ರ ನಂತರ ಎಣಿಕೆ ಇರಬಾರದು. ಒಂದು ಸಾವಿರದಿಂದ ಹತ್ತು ಸಾವಿರದವರೆಗೆ ಜಪ ಮಾಡಬಹುದು. ಅನುಕೂಲವನ್ನನುಸರಿಸಿ.

ಉಸಿರಾಟದ ಬಗ್ಗೆ ಸರಿಯಾದ ಗಮನವಿರಬೇಕು. ಅಂದರೆ ಉಚ್ಛಾಸ- ನಿಶ್ವಾಸಗಳು ಸಮವೇಳೆಯಲ್ಲಿ ಆಡಬೇಕು. ಉಸಿರನ್ನು ಒಳಗೆ ಎಳೆದುಕೊಂಡಷ್ಟು ಕಾಲ ಹೊರಗೆ ಬಿಡಬೇಕು. ಆಗ “ಓಂ ಲಿಂಗಾಯ ನಮಃ'ವನ್ನು ನಿಧಾನವಾಗಿ ಉಸಿರಿನ ಮುಖಾಂತರ ಒಳಗೆ ಸೇರಿಸಿಕೊಂಡು, ಷಟ್ ಚಕ್ರಗಳನ್ನು ಭೇದಿಸುವೆನೆಂಬ ಭಾವದಿಂದ ಇಳಿಸಬೇಕು. ನಂತರ ಅಷ್ಟೇ ಪ್ರಮಾಣದ ವೇಳೆಯಲ್ಲಿ ಮಂತ್ರ ಸಹಿತವಾಗಿ ಹೊರಗೆ ವಿಸರ್ಜಿಸಬೇಕು. ಆಲಿ-ಗಾಳಿ-ಮನ ಈ ಮೂರು ಪರಸ್ಪರ ಸಂಬಂಧಿಗಳು, ಇವು ಒಟ್ಟಾಗಿಯೇ ಕೆಲಸ ಮಾಡುವವು.

4. ಲಿಂಗದೇವ ಧ್ಯಾನ :

ಅರೆತೆರೆದ ಅನಿಮಿಷ ನೇತ್ರದಿಂದ ಇಷ್ಟಲಿಂಗದ ಅನುಸಂಧಾನ ಮಾಡಿದ ಬಳಿಕ, ಕಣ್ಣನ್ನು ಪೂರ್ತಿ ಮುಚ್ಚಿ, ದೃಷ್ಟಿಯನ್ನು ಭೂಮಧ್ಯಕ್ಕೆ ನೆಲೆ ನಿಲ್ಲಿಸಿ, ನಾಭಿ ಸಮಾನಾಂತರಕ್ಕೆ ಕೈಗಳನ್ನು ಇರಿಸಬೇಕು. ಬಲಗೈಯನ್ನು ಕೆಳಗೆ ಎಡಗೈಯನ್ನು ಮೇಲೆ “ಓಂ ಲಿಂಗಾಯ ನಮಃ' ಮಂತ್ರವನ್ನು ಮನನಿಸಬೇಕು. ಆಗ ಮೇ ಉಸಿರಾಟದ ಬಗ್ಗೆ ಎಚ್ಚರಿಕೆ ವಹಿಸಬೇಕು. ಪರಮಾತ್ಮನನ್ನು ಅನುಸಂಧಾನಿಸಬೇಕು. ಇಷ್ಟಲಿಂಗ ಪೂಜೆಯ ಜೀವಾಳವೇ ಲಿಂಗ ಲಿಂಗಧ್ಯಾನಗಳು.

5. ಲಿಂಗತೀರ್ಥ-ಪ್ರಸಾದ

ಪೂಜಿಸಿದುದಕ್ಕೆ ಪ್ರತಿಫಲ ತೀರ್ಥ-ಪ್ರಸಾದ. ದಿನ ನಿತ್ಯ ಜೀನ ನಾಲಿಗೆಯ ಮೇಲೆ ಮೊಟ್ಟಮೊದಲು ತೀರ್ಥಪ್ರಸಾದ ಬಿದ್ದು, ನಂತರ ಉಣಿಸು ತಿನಿಸಿನ ಸ್ವೀಕಾರ. ಲಿಂಗಧ್ಯಾನದ ನಂತರ ಇಷ್ಟಲಿಂಗಕ್ಕೆ ನಮಸ್ಕಾರ ಕುರಂಗ ಮುದ್ರೆಯಿಂದ ನಮಸ್ಕರಿಸುವಾಗ ಪಂಚ ವಾಕ್ಯಗಳನ್ನು

1. ಶ್ರೀ ಗುರು ಬಸವಂಗೆ ಶರಣಾಗಿಹೆ
2. ಲಿಂಗದೇವನಿಗೆ ಶರಣಾಗಿದೆ
3. ಶರಣ ಗಣಕ್ಕೆ ಶರಣಾಗಿದೆ
4. ಕರುಣ ಪ್ರಸಾದ ಸ್ವೀಕರಿಸಿಹೆ
5. ಗಣ ಪದವಿಯನ್ನು ನಾ ಹೊಂದಿದೆ

ಈಗ ಇಷ್ಟಲಿಂಗಕ್ಕೆ ಅರ್ಪಿಸಿರುವ ಹೂವು-ಪತ್ರೆಗಳನ್ನು ಎತ್ತಿ ಕಣ್ಣಿ ಮಜ್ಜನ ಸಾಲೆಯಲ್ಲಿ ವಿಸರ್ಜಿಸಬೇಕು. ಪಂಚಪಾತ್ರೆ ಅಥವಾ ಬಟ್ಟಲಲ್ಲಿ ನೀರನ್ನು ಹಾಕಿ, ಐದು ಬೆರಳುಗಳಿಗೆ ಭಸ್ಮವನ್ನು ಧರಿಸಿ, ಹನ್ನೆರಡು ಬಾರಿ ಷಡಕ್ಷರಿ ಮಂತ್ರವನ್ನೆಣಿಸಿ, ಬೆರಳುಗಳನ್ನು ನೀರಿನಲ್ಲಿ ಅದ್ದಿ ಈ ಅಭಿಮಂತ್ರಿತ ನೀರನ್ನು ಎಡಗೈಯಲ್ಲಿ ಇಷ್ಟಲಿಂಗದ ಮೇಲೆ ಮೂರು ಬಾರಿ ಎರೆಯಬೇಕು. ಒಂದೊಂದು ಬಾರಿ ಎರೆಯುತ್ತ ಕ್ರಮವಾಗಿ ಹೀಗೆ ಹೇಳಬೇಕು.

1. ಬಸವಕರುಣೋದಕ (ಧರ್ಮಗುರು ಬಸವಣ್ಣನವರ ಕರುಣೆ)
2. ಲಿಂಗಕರುಣೋದಕ (ಜಗತ್ಕರ್ತ ಪರಮಾತ್ಮನ ಕರುಣೆ)
3. ಶರಣ ಕರುಣೋದಕ (ಸರ್ವಶರಣರ ಕರುಣೆ)


ಹೀಗೆ ಗುರು-ಲಿಂಗ-ಜಂಗಮರಾದ ಧರ್ಮಕರ್ತ ಬಸವಣ್ಣನವರು, ಸೃಷ್ಟಿಕರ್ತ ಲಿಂಗದೇವ ಮತ್ತು ಸರ್ವಶರಣರು ಗುರುವು ಕೊಟ್ಟ ಇಷ್ಟಲಿಂಗದಲ್ಲಿಯೇ ಇದ್ದಾರೆಂದು ಭಾವಿಸಿ, ಅವರನ್ನು ಅಲ್ಲಿ ಸಂಬಂಧಿಸಿಕೊಂಡು ತೀರ್ಥ-ಪ್ರಸಾದ ಸ್ವೀಕರಿಸಬೇಕು.

ಗುರು-ಲಿಂಗ-ಜಂಗಮರನ್ನು ಇಷ್ಟಲಿಂಗದಲ್ಲಿಯೇ ಭಾವಿಸಿ ತೀರ್ಥ ಪ್ರಸಾದ ಸ್ವೀಕರಿಸುವುದು ಸಂಬಂಧಾಚರಣೆ. ಅಂತಹ ವಿಶೇಷ ಮಹಿಮಾನ್ವಿತರು, ಜ್ಞಾನಿಗಳು, ಯೋಗಿಗಳು, ಮಂತ್ರಸಿದ್ದಿಯಾದವರು ಲಭ್ಯವಾದಾಗ ಅವರ ಪಾದವನ್ನು ಪೂಜಿಸಿ, ಪಾದೋದಕ ಸ್ವೀಕಾರಗೈಯುವುದು ಸಹಜಾಚಾರಣೆ, ಉತ್ತಮ. ಅಂಥವರು ಸಿಗುವುದು ದುರ್ಲಭವಾದ ಕಾರಣ, ಲಿಂಗ ತೀರ್ಥ ಪ್ರಸಾದವೇ ಸರ್ವವಿಧದಲ್ಲೂ ಶ್ರೇಯಸ್ಕರ.

೬. ಪೂಜಾ ಮಂಗಲ :

ಇಷ್ಟಲಿಂಗವನ್ನು ತೇವವಿಲ್ಲದಂತೆ ಚೆನ್ನಾಗಿ ಒರೆಸಿ, ಮೂರೆಳೆ ವಿಭೂತಿ ಧರಿಸಿ ಒಂದು ಸಣ್ಣ ಬಟ್ಟೆಗೆ ಪಂಚಕೋನ ಪ್ರಣವವ ಬರೆದು, ಆ ಪಾವುಡದಲ್ಲಿ ಇಷ್ಟಲಿಂಗವನ್ನಿರಿಸಿ ಕರಡಿಗೆಯಲ್ಲಿ ಇರಿಸಬೇಕು. ಕರಡಿಗೆಗೆ ವಿಭೂತಿ ಧರಿಸಿ ಮಂಗಲವನ್ನು ಹಾಡಿ ಪೂಜೆಯನ್ನು ಪೂರ್ಣಗೊಳಿಸಬೇಕು.

ಮಂಗಳ ಗೀತೆ
ಜಯ ಜಯ ಘನಲಿಂಗ ಹೇ ಸಚ್ಚಿದಾನಂದ
ಗಣಲಿಂಗವಾಗಿಹ ಜಯ ಲಿಂಗದೇವ ಜೈ ಜೈ || ಪಲ್ಲವಿ||

ಹುಟ್ಟು ಸಾವುಗಳಿಲ್ಲ ಮುಟ್ಟು ಮೈಲಿಗೆಯಿಲ್ಲ
ಮಾತಾಪಿತೃಗಳಿಲ್ಲ ಬಂಧು ಬಾಂಧವರಿಲ್ಲ
ಜಾತಿ ಗೋತ್ರಗಳಿಲ್ಲಿ ಮೇಲು ಕೀಳುಗಳಿಲ್ಲ
ಹೆಣ್ಣಲ್ಲ ಗಂಡಲ್ಲ ಪಶು ಪಕ್ಷಿಯಲ್ಲ ಜೈ ಜೈ || 1 ||

ಆದಿ ಅಂತ್ಯಗಳಿಲ್ಲಿ ನಾಮ ಸೀಮೆಗಳಿಲ್ಲ
ಎಡೆಯಿಲ್ಲ ಕಡೆಯಿಲ್ಲ ಜಗದೊಡೆಯ ನೀನು
ಕುಲವಿಲ್ಲ ಛಲವಿಲ್ಲ ಪತ್ನಿ - ಪುತ್ರರು ಇಲ್ಲ
ನಾಮ ರೂಪುಗಳಿರದ ಬಯಲ ಬ್ರಹ್ಮ ಜೈ ಜೈ ||2||

ಸೃಷ್ಟಿ ಸ್ಥಿತಿ ಲಯಗಳ ಕಾರಣ ಕರ್ತೃವೆ
ನಿತ್ಯ ನಿರ್ಮಲನೆ ಸತ್ಯ ಶಾಶ್ವತನೆ
ಕರುಣೆಯಿಂ ಇಳೆಗಿಳಿದ ಆನಂದ ರೂಪನೆ
ಸಾಕ್ಷಿಚೇತನವಾದ ಜಯ ಗಣಲಿಂಗ ಜೈ ಜೈ || 3 ||

ಅಮೂಲ್ಯ ಅಗಮ್ಯ ಅಪ್ರಮಾಣನೆ ದೇವಾ
ನಿನ್ನ ಸ್ತುತಿಸಲು ನಾನು ಎಷ್ಟರವಳಯ್ಯಾ
ಮಂಗಳಾರತಿ ಬೆಳಗಿ ಜಯ ಘೋಷಗೈವೆ
ಸಚ್ಚಿದಾನಂದ ನೀ ಘನ ಲಿಂಗದೇವಾ ಜೈ ಜೈ || 4 ||

ಗ್ರಂಥ ಋಣ:
೧) ದೇವ ಪೂಜಾ ವಿಧಾನ, ಲೇಖಕರು: ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಲಿಂಗಾಯತ ಸಾಧಕನ ದಿನಚರಿ ವಿವರವಾದ ಇಷ್ಟಲಿಂಗ ಪೂಜಾ ವಿಧಾನ Next