ಯಾವುದೇ ವ್ಯಕ್ತಿಗೆ ಮೋಕ್ಷ (ಲಿಂಗಾಂಗ ಸಾಮರಸ್ಯ) ಪಡೆಯುವ ಇಚ್ಛೆಯಿದ್ದರೆ, ಅವನು ಕೇವಲ ಲಿಂಗಾಯತ ಧರ್ಮದ ತಾತ್ವಿಕ ಸಿದ್ಧಾಂತಗಳನ್ನು ತಿಳಿದುಕೊಂಡಿದ್ದರೆ ಸಾಲದು. ಅವನು ಆ ಸಿದ್ಧಾಂತಗಳಿಗೆ ತಕ್ಕ ಆಚಾರಗಳನ್ನು ಪಾಲಿಸಬೇಕಾಗುತ್ತದೆ. ಸಿದ್ಧಾಂತ ಮತ್ತು ಆಚಾರ ಎರಡೂ ಆವಶ್ಯಕ ಮತ್ತು ಪರಸ್ಪರ ಪೂರಕ, ಅನೇಕ ಜನ ಬಹಳ ನಿಷ್ಠೆಯಿಂದ ಪೂಜೆ, ದಾಸೋಹ, ಮುಂತಾದ ಧಾರ್ಮಿಕ ಮತ್ತು ನೈತಿಕ ಕಾರ್ಯಗಳನ್ನು ಮಾಡಬಹುದು, ಆದರೆ ಅವುಗಳ ಹಿಂದಿರುವ ತತ್ವವನ್ನು ತಿಳಿಯದೆ ಅವುಗಳನ್ನು ಆಚರಿಸಿದರೆ ಅವು ಯಾಂತ್ರಿಕ ಅಥವಾ ಔಪಚಾರಿಕವಾಗುತ್ತವೆ.
ಮೋಕ್ಷಾರ್ಥಿಯ ಆಚಾರಗಳು ಕೇವಲ ಔಪಚಾರಿಕ ಅಥವಾ ಯಾಂತ್ರಿಕವಾಗಿರದೆ, ಅರ್ಥಪೂರ್ಣವಾಗಿರುತ್ತವೆ. ಉದಾಹರಣೆಗೆ, ಪ್ರಸಾದ ಎಂದರೆ ಕೇವಲ ಆಹಾರವಲ್ಲ, ನಾವು ಸೇವಿಸುವ ಗಾಳಿ, ಮೂಸುವ ಗಂಧ, ಕೇಳುವ ಶಬ್ದ ಮುಂತಾದ ಏನೆಲ್ಲ ಇದೆಯೋ ಅದೆಲ್ಲವೂ ಪ್ರಸಾದವೆ ಎಂಬ ವಿಷಯ ಅವನಿಗೆ ಗೊತ್ತಾದರೆ ಅವನ ಅರ್ಪಣಾಕಾರ್ಯ, ಪ್ರಸಾದಸೇವನಕ್ರಿಯೆ ಔಪಚಾರಿಕ ಅಥವಾ ಯಾಂತ್ರಿಕವಾಗಿರದೆ ಅರ್ಥಪೂರ್ಣವಾಗಿರುತ್ತವೆ. ಇಂಥ ಅರ್ಥಪೂರ್ಣ ಕ್ರಿಯೆ ಅಥವಾ ಆಚಾರಗಳಷ್ಟೇ ಸಾಧಕನನ್ನು ಶುದ್ಧ ಮಾಡಲು, ಆಧ್ಯಾತ್ಮಿಕ ಗುರಿಯತ್ತ ಕೊಂಡೊಯ್ಯಲು ಸಾಧ್ಯ.
ಇಂಥ ಆಚಾರಗಳು ಐದು ಎಂದು ಶರಣರು ನಿರ್ಧರಿಸಿದ್ದಾರೆ. ಪಂಚಾಚಾರ ಎಂಬ ಹೆಸರಿನ ಈ ಆಚಾರಗಳೆಂದರೆ: ಲಿಂಗಾಚಾರ, ಸದಾಚಾರ, ಶಿವಾಚಾರ, ಭೃತ್ಯಾಚಾರ ಮತ್ತು ಗಣಾಚಾರ.
*