ಷಟಸ್ಥಲ | ಮಹೇಶ ಸ್ಥಲ (ಮಾಹೇಶ್ವರ ಸ್ಥಲ) |
ಭಕ್ತಸ್ಥಲ |
ಭಕ್ತನೆಂತೆಂಬೆನಯ್ಯಾ? ಭವಿಯ ಸಂಗ ಬಿಡದನ್ನಕ್ಕ [1]
..... ...... ....... .......
..... ...... ....... .......
..... ...... ....... .......
ಕೂಡಲಸಂಗಮದೇವಾ. --ಗುರು ಬಸವಣ್ಣನವರ ವಚನ
ಷಟಸ್ಥಲಗಳಲ್ಲಿ ಮೊದಲನೆಯದೆ ಭಕ್ತಸ್ಥಲ. ಭಕ್ತನಾಗುವವನು ಅಹಂಕಾರ ಮಮಕಾರಗಳನ್ನು ತ್ಯಾಗ ಮಾಡಿ ವಿನಯವಂತಿಕೆಯನ್ನು ರೂಢಿಸಿಕೊಳ್ಳಬೇಕು. ಪರಮಾತ್ಮ ತತ್ವವನ್ನು ಅರಿತುಕೊಳ್ಳುವ ಮಹಾನ್ ಗುರಿಯನ್ನು ಹೊಂದಿರುವುದರಿಂದ ಭವಿಯ ಸಂಗವನ್ನು ಬಿಡಬೇಕಾದುದು ಅತ್ಯವಶ್ಯ. ಭವಿ ಎಂದರೆ ಹುಟ್ಟು ಸಾವುಗಳೆಂಬ ಭವಚಕ್ರದಲ್ಲಿ ಸಿಲುಕಿದವರು. ಅಂದರೆ ದುರ್ಗುಣ, ದುರಾಚಾರ, ದುರ್ವ್ಯಸನಗಳಿಗೆ ಬಲಿಯಾದವರು. ಆಶೆ-ಆಮಿಷಗಳಿಗೆ ದಾಸರಾದವರು. ಕಾಮ, ಕ್ರೌಧ, ಲೋಭ, ಮೋಹ, ಮದ, ಮತ್ಸರಗಳಿಂದ ವ್ಯಾಕುಲಕ್ಕೊಳಗಾಗಿ ಅನಂತ ದುಃಖವನ್ನು ಅನುಭವಿಸುವವರು. ಇಂತಹ ವ್ಯಕ್ತಿಗಳ ಸಂಗದಿಂದ ವಿಮುಖನಾಗದೆ ಯಾವನೂ ಭಕ್ತನಾಗಲಾರನು.
ಕೂಡಲಸಂಗಮದೇವರನರಿವೊಡೆ ಶರಣರ ಸಂಗವೆ ಮೊದಲು ಎಂದು ಹೇಳುವ ಮೂಲಕ ಧರ್ಮಗುರು ಬಸವಣ್ಣನವರು, ಭಕ್ತಸ್ಥಲ ಎಂದರೆ ದುರ್ಜ ನರ ಸಂಗ (ಭವಿಸಂಗ)ವನ್ನು ತೊರೆದು ಶರಣರ ಸಂಗದ ಲ್ಲಿರಬೇಕೆಂಬುದನ್ನು ತಿಳಿಸುತ್ತಾರೆ.
ಸದಾಚಾರದಲ್ಲಿ ನಡೆವುದು, ಶಿವನಲ್ಲಿ ಭಕ್ತಿಯಾಗಿರುವ[2]
ಲಿಂಗ ಜಂಗಮ ಒಂದೆ ಎಂಬ ಬುದ್ಧಿಯಾಗಿರುವ
ಲಾಂಛನಧಾರಿಗಳ ಕಂಡಡೆ ವಂದಿಸುವದೀಗ ಭಕ್ತಸ್ಥಲ ನೋಡಾ;
ಅಪ್ರಮಾಣ ಕೂಡಲಸಂಗಮದೇವ. --ಬಾಲಸಂಗಯ್ಯನ ವಚನ
ಭಕ್ತನು ಆಧ್ಯಾತ್ಮಿಕ ಕ್ಷೇತ್ರಕ್ಕೆ ಹೊಸಬನಾದುದರಿಂದ ಅವನು ಗುರು ಹೇಳಿದ ಸಿದ್ಧಾಂತಗಳನ್ನು ಮರು ಪ್ರಶ್ನಿಸದೆ ನಂಬುತ್ತಾನೆ; ಅವನು ಬೋಧಿಸಿದ ಆಚಾರಗಳನ್ನು ತಪ್ಪದೆ ಆಚರಿಸುತ್ತಾನೆ. ಆ ಸಿದ್ಧಾಂತಗಳು ಸತ್ಯವೇ ಮತ್ತು ಆಚಾರಗಳು ಫಲ ನೀಡುತ್ತವೆಯೆ ಎಂಬುದನ್ನು ಅವನು ಸಂದೇಹಿಸುವುದಿಲ್ಲ. ಲಿಂಗಾಯತ ಸಿದ್ಧಾಂತ ಮತ್ತು ಲಿಂಗಾಯತ ಆಚಾರಗಳಲ್ಲಿ ಅವನಿಗೆ ಅಷ್ಟೊಂದು ಶ್ರದ್ಧೆ ಅಥವಾ ವಿಶ್ವಾಸವಿದೆ. ಆದುದರಿಂದಲೆ ಅವನ ಭಕ್ತಿಗೆ ಶ್ರದ್ಧಾಭಕ್ತಿ ಅಥವಾ ವಿಶ್ವಾಸಭಕ್ತಿ ಎಂದು ಹೆಸರು.
(ಅ) ಸದಾಚಾರ:
ಅವನು ಸುಳ್ಳು ಹೇಳಬಾರದು. ಸತ್ಯವನ್ನು ಮಾತ್ರ ನುಡಿಯಬೇಕು. ನುಡಿಯಲ್ಲಿ ನಡೆಯಲ್ಲಿ ವಂಚನೆ ಇರಬಾರದು. ಅವನ ನಡೆನುಡಿಗಳಲ್ಲಿ ಸದಾಚಾರದ ಹೊರತು ಮತ್ತೇನೂ ಇರಬಾರದು.
ಭಕ್ತ ಶಾಂತನಾಗಿರಬೇಕು
ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು,
ಭೂತಹಿತವಹ ವಚನವ ನುಡಿಯಬೇಕು,
ಗುರುಲಿಂಗ ಜಂಗಮದಲಿ ನಿಂದೆಯಿಲ್ಲದೆ
ಸಕಲ ಪ್ರಾಣಿಗಳ ತನ್ನಂತೆ ಭಾವಿಸೊದು ಮಾಡಬೇಕು,
ತನಮನಧನವ ಗುರುಲಿಂಗ ಜಂಗಮಕ್ಕೆ ಸವೆಸಲೇಬೇಕು,
ಅಪಾತ್ರದಾನವ ಮಾಡಲಾಗದು,
ಸಕಲೇಂದ್ರಿಯಗಳ ತನ್ನ ವಶವ ಮಾಡಬೇಕು,
ಇದೇ ಮೊದಲಲ್ಲಿ ಬೇಹ ಶೌಚ ನೋಡಾ,
ಲಿಂಗ ಪೂಜಿಸಿ ಪ್ರಸಾದವ ಪಡೆವಡೆ ಎನಗಿದೇ ಸಾಧನ
ಕೂಡಲಚೆನ್ನ ಸಂಗಮದೇವಾ. (೩: ೬೪)
(ಆ) ಶರಣರ ಸಂಗ:
ಭಕ್ತನಾದವನು ಆಧ್ಯಾತ್ಮ ಸಾಧನೆಗೆ ಹೊಸಬನಾದುದರಿಂದ ಅವನು ಶರಣರ ಸಂಗ ಅಥವಾ ಸತ್ಸಂಗ ಮಾಡಬೇಕು. ಸತ್ಸಂಗವೆಂದರೆ ಆಧ್ಯಾತ್ಮಿಕ ಸಾಧಕರ ಸಂಗ” ಎಂದು. ದೈಹಿಕ ಪ್ರಗತಿ ಹೊಂದಬೇಕೆನ್ನುವವನು ಹೇಗೆ ವ್ಯಾಯಾಮ ಶಾಲೆಗೆ ಹೋಗಿ, ಅಲ್ಲಿ ಆಗಲೆ ಪ್ರಗತಿಹೊಂದಿರುವವರ ಸಂಗ ಮಾಡಬೇಕೋ ಹಾಗೆ ಆಧ್ಯಾತ್ಮಿಕ ಸಾಧನೆ ಮಾಡಬೇಕೆನ್ನುವವನು ಶರಣರ ಸಂಗ ಮಾಡಬೇಕು. ಶರಣರ ಪ್ರವಚನ ಕೇಳುವುದು, ಶರಣರ ಗೋಷ್ಠಿಗಳಿಗೆ ಹೋಗುವುದು, ಮುಂತಾದುವುಗಳಿಂದ ಮುಖ್ಯವಾದ ಎರಡು ಪ್ರಯೋಜನಗಳಿವೆ.
(೧) ನಮ್ಮ ಮನಸ್ಸು ಲೌಕಿಕ ವಿಷಯಗಳ ಕಡೆಗೆ ಹರಿಯದಂತಿರಲು, ಅರಿಷಡ್ವರ್ಗಗಳಿಗೆ ಈಡಾಗದಿರಲು, ನಾವು ಬರೀ ಪ್ರಾಪಂಚಿಕ ವಿಷಯಗಳನ್ನು ಚರ್ಚಿಸುವವರ ಅಥವಾ ದುರ್ಜನರ ಸಂಗ ಮಾಡುವುದರ ಬದಲು ಶರಣರ ಸಂಗ ಮಾಡಬೇಕು. ಅದರಿಂದಾಗಿ, ಆಧ್ಯಾತ್ಮಿಕ ವಿಷಯಗಳಲ್ಲೇ ನಮ್ಮ ಮನಸ್ಸು ಕೇಂದ್ರೀಕೃತವಾಗುತ್ತದೆ. ಅಂದರೆ, ಭವಿತನಕ್ಕೆ ಹೇಸಿ ಒಮ್ಮೆ ಭಕ್ತನಾದವನು ಮತ್ತೊಮ್ಮೆ ಭವಿತನದ ಕಡೆಗೆ ಜಾರುವುದಿಲ್ಲ.
(೨) ನಾವು ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಬೇಕಾದರೆ, ಗುರುವಿನಿಂದ ಕಲಿತುದು ಸಾಕಾಗಲಾರದು. ಕೆಲವು ವೇಳೆ ನಾವು ಆಗಲೆ ಸಾಕಷ್ಟು ಸಾಧನೆ ಮಾಡಿರುವವರ ಮಾರ್ಗದರ್ಶನ ಪಡೆಯುವುದು ಅಗತ್ಯವಾಗುತ್ತದೆ. ಇದು ಅನುಭಾವಿಗಳ ಸಂಗದಿಂದ ಸಾಧ್ಯ. ಇಂಥ ಸತ್ಸಂಗಕ್ಕೆ ಶರಣರು ಬಹಳ ಮಹತ್ವ ಕೊಟ್ಟಿದ್ದರು.
ಸಾರ: ಸಜ್ಜನರ ಸಂಗವ ಮಾಡೂದು,
ದೂರ: ದುರ್ಜನರ ಸಂಗ ಬೇಡವಯ್ಯಾ,
ಆವ ಹಾವಾದೊಡೇನು? ವಿಷವೊಂದೆ,
ಅಂತಹವರ ಸಂಗ ಬೇಡವಯ್ಯಾ
ಅಂತರಂಗ ಶುದ್ಧವಿಲ್ಲದವರ ಸಂಗವು
ಸಿಂಗಿ, ಕಾಳಕೂಟ ವಿಷವೊ, ಕೂಡಲಸಂಗಯ್ಯಾ (೧: ೧೧೯)
ದೂಷಕನವನೊಬ್ಬ ದೇಶವ ಕೊಟ್ಟಡೆ,
ಆಸೆ ಮಾಡಿ ಅವನ ಹೊರೆಯಲಿರಬೇಡ,
ಮಾದಾರ ಶಿವಭಕ್ತನಾದಡೆ,
ಆತನ ಹೊರೆಯಲು ಭೃತ್ಯನಾಗಿಪ್ಪುದು ಕರ ಲೇಸಯ್ಯಾ,
ತೊತ್ತಾಗಿಪ್ಪುದು ಕರ ಲೇಸಯ್ಯಾ,
ಕಾಡ ಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟು,
ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ. (೧: ೧೩೬)
[1] ಸಮಗ್ರ ವಚನ ಸಾಹಿತ್ಯ ಸಂಪುಟ - ೧, ವಚನ ಸಂಖ್ಯೆ: ೫೧೦, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ,
ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
[2] ಪುಸ್ತಕ: ಬಾಲಸಂಗಯ್ಯನ ವಚನಗಳು, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರು:
ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಷಟಸ್ಥಲ | ಮಹೇಶ ಸ್ಥಲ (ಮಾಹೇಶ್ವರ ಸ್ಥಲ) |