Previous ಲಿಂಗಾಂಗಯೋಗ ಅಥವಾ ಅನುಭಾವ (ಗುರಿ) ಲಿಂಗಾಯತ ತತ್ವ-ಸಿದ್ಧಾಂತಗಳು Next

ಶಿವಯೋಗ ಅಥವಾ ಶಿವಪಥ (ಸಾಧನೆ)

ಲಿಂಗಾಂಗಯೋಗ

ಯೋಗಪದ್ಧತಿಯ ಮೂಲಕ ಭವಬಂಧನದಿಂದ ಬಿಡಿಸಿಕೊಂಡು ಮೋಕ್ಷವನ್ನು ಸಂಪಾದಿಸುವುದು ಭಾರತೀಯರಿಗೆ ಗೊತ್ತಿರುವ ಅತ್ಯಂತ ಹಳೆಯ ಸಂಪ್ರದಾಯ, ಯೋಗಮಾರ್ಗಗಳು ಪತಂಜಲಿಯ ಅಷ್ಟಾಂಗಯೋಗ, ಹಠಯೋಗ, ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ, ಬೌದ್ಧಯೋಗ (ಆರ್ಯ ಅಷ್ಟಾಂಗಿಕ ಮಾರ್ಗ) ಮುಂತಾಗಿ ಹಲವಾರು ಇವೆ. ಎಲ್ಲ ಪಂಥದವರೂ ಎಲ್ಲ ಅಂಶಗಳಿಗೂ ಒತ್ತುಕೊಡದೆ ಕೆಲವು ಅಂಶಗಳಿಗೆ ಮಾತ್ರ ಒತ್ತು ಕೊಡುತ್ತಾರೆ. ಉದಾಹರಣೆ: ಅದ್ವೈತಿಗಳು ಕರ್ಮ ಮತ್ತು ಭಕ್ತಿಗಳಿಗೆ ಕಡಿಮೆ ಒತ್ತು ಕೊಟ್ಟು ಜ್ಞಾನಕ್ಕೆ ಹೆಚ್ಚು ಪ್ರಾಧಾನ್ಯ ಕೊಡುವುದರಿಂದ ಅವರ ಪಂಥಕ್ಕೆ ಜ್ಞಾನಯೋಗ ಎಂದು ಹೆಸರು. ಕರ್ಮಯೋಗಿಗಳು ಭಕ್ತಿ ಮತ್ತು ಜ್ಞಾನಗಳಿಗೆ ಕಡಿಮೆ ಒತ್ತು ಕೊಟ್ಟು ನಿಷ್ಕಾಮ ಕರ್ಮಕ್ಕೆ ಪ್ರಾಧಾನ್ಯ ಕೊಡುವುದರಿಂದ ಅವರ ಪಂಥಕ್ಕೆ ಕರ್ಮಯೋಗ ಎಂದು ಹೆಸರು.

ಶಿವಶರಣರ ಯೋಗಪದ್ಧತಿಗೆ ಶಿವಯೋಗ ಅಥವಾ ಲಿಂಗಾಂಗಯೋಗ ಅಥವಾ ಷಟ್‌ಸ್ಥಲಯೋಗ ಎಂದು ಹೆಸರು. ಕೆಲ ಶಿವಯೋಗ ಸಾಧಕರು ಇತರ ಯೋಗಪದ್ಧತಿಗಳು ಲಿಂಗಾಂಗ ಸಾಮರಸ್ಯವನ್ನುಂಟು ಮಾಡಲಾರವು ಎಂಬ ಕಾರಣಕ್ಕೆ ಅವನ್ನು ನಿಷೇಧಿಸಿದ್ದಾರೆ.

ಆಸನಬಂಧನರು ಸುಮ್ಮನಿರರು.
ಭಸ್ಮವ ಹೂಸಿ ಸ್ವರವ ಹಿಡಿವರು ಸಾಯದಿದ್ದರೆ?
ಸತ್ಯವನೆ ಮರೆದು, ಅಸತ್ಯವನೆ ಹಿಡಿದು,
ಸತ್ತು ಹೋದರು ಗುಹೇಶ್ವರಾ. (೨: ೨೨೪)

ಲಂಬಿಕಾಯೋಗಿಗಳ ಡೊಂಬರಿಗೆ ಸರಿಯೆಂಬೆ.
ಹಟಯೋಗಿಗಳ ಅಟಮಟಗಾರರೆಂದೆಂಬೆ.
ಅಷ್ಟಾಂಗಯೋಗಿಗಳ ಕಷ್ಟಕರ್ಮಿಗಳೆಂದೆಂಬೆ.
ಪವನಯೋಗಿಗಳ ಪ್ರಪಂಚಿಗಳೆಂದೆಂಬೆ.
ಲಯಯೋಗಿಗಳ ನಾಯಿಗಿಂದ ಕಡೆ ಎಂಬೆ.
ಅದೇನು ಕಾರಣವೆಂದರೆ:
ಲಯಯೋಗವೆಂಬುವದು ನಾನಾದರುಶನದಲ್ಲಿ ವರ್ತಿಸುವುದಾಗಿ
ಅದ ಶಿವಯೋಗಿಗಳು ಬಲ್ಲರು.
ಮಂತ್ರಯೋಗವೆಂಬುವದು ಸರ್ವಸಂದೇಹಕ್ಕಿಕ್ಕಿಕೊಲುತಿಪ್ಪುದು.
ಅದೇನು ಕಾರಣವೆಂದಡೆ:
ಮಂತ್ರವೇ ಲಿಂಗ, ಲಿಂಗವೇ ಮಂತ್ರವೆಂದರಿದು
ಲಿಂಗನನಹ ಸಂಬಂಧಿಸಿಕೊಳ್ಳಲರಿಯದೆ
ಲಿಂಗವಿರಹಿತವಾಗಿ ಮಾಡುತಿಪ್ಪರಾಗಿ,
ಅದ ಅಂಗಲಿಂಗಸಂಬಂಧಿಗಳು ಮಚ್ಚರು ನೋಡಾ.
ಅದೇನು ಕಾರಣವೆಂದರೆ:
ಕೆಲವು ಶೈವರುಗಳು ಮಾಡುವರಾಗಿ
ರಾಜಯೋಗವೆಂಬುವದು ಗಾಜುಗೋಜು ನೋಡಾ.
ಅದನು ಲಿಂಗವಿರಹಿತವಾಗಿ
ಜ್ಞಾತೃ ಜ್ಞಾನ ಜ್ಞೇಯ ಒಂದಾದಲ್ಲಿಯೆ ಯೋಗವೆನುತಿಪ್ಪರಾಗಿ
ಇವು ಒಂದೂ ಲಿಂಗಾಂಗಯೋಗದ ಹಜ್ಜೆಯಲ್ಲ ನೋಡಾ.
ಅದು ಕಾರಣ, ಲಿಂಗನಿಷ್ಠರು ಮೆಚ್ಚರು.
ಅದೇನು ಕಾರಣವೆಂದಡೆ:
ಲಿಂಗವ ತೆಗೆದಡೆ ಲಿಂಗದೊಡೊನೆ ಪ್ರಾಣ ಹೋಗದಾಗಿ,
ಅದೆಲ್ಲಿಯ ಯೋಗವಯ್ಯ? ಭ್ರಾಂತುಯೋಗ.
ಇದು ಕಾರಣ, ನಿಮ್ಮ ಶರಣರು ಲಿಂಗಪ್ರಾಣಿಗಳು;
ಪ್ರಾಣಲಿಂಗಸಂಬಂಧಿಗಳು; ಪ್ರಸಾದಮುಕ್ತರು.
ಈ ಮೂರು ಪ್ರಕಾರದಲ್ಲಿ ಕೂಡುತ್ತಿ ಪ್ಪರು ಶಿವಯೋಗಿಗಳು.
ಇದು ಕಾರಣ ನಿಮ್ಮ ಶರಣರು
ಸ್ವಾನುಭಾವಜ್ಞಾನಶುದ್ಧ ಶಿವಯೋಗದಲ್ಲಿ ಸ್ವರೂಪಜ್ಞಾನಿಗಳು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೇ! (೧೧: ೩೫೮)

ಆದರೆ ಶಿವಯೋಗದ ವಿಶ್ಲೇಷಣೆಯಿಂದ, ಅದರಲ್ಲಿ ಸತ್ಯ, ಅಹಿಂಸೆ ಮುಂತಾದ ನೈತಿಕ ಅಂಶಗಳಿರುವುದೂ ಲಿಂಗನಿಷ್ಠೆ, ಪ್ರಸಾದಸೇವನೆ, ಮುಂತಾದುವನ್ನೊಳಗೊಂಡ ಭಕ್ತಿಯೋಗ, ಕರ್ಮಯೋಗ (ಕಾಯಕ- ದಾಸೋಹ), ಜ್ಞಾನಯೋಗ, ಹಠಯೋಗ ಮುಂತಾದ ಅನೇಕ ಯೋಗಗಳಿರುವುದೂ ಪಾತಂಜಲಯೋಗದ ಕೆಲವು ಅಂಶಗಳಿರುವುದೂ ತಿಳಿದು ಬರುತ್ತದೆ.

ಅಷ್ಟಾಂಗಯೋಗ:

ಲಿಂಗಾಯತರು ಅಷ್ಟಾಂಗಯೋಗದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರಗಳನ್ನು ಬಿಟ್ಟು ತಮ್ಮವೇ ಆದ ಸಂಹಿತೆಗಳನ್ನು ರೂಪಿಸಿಕೊಂಡಿದ್ದಾರೆ. ಆದರೆ ಪತಂಜಲಿಯ ಧಾರಣ, ಧ್ಯಾನ ಮತ್ತು ಸಮಾಧಿಗಳನ್ನು ಒಪ್ಪಿಕೊಳ್ಳುತ್ತಾರೆ. ಎಲ್ಲ ಆಸನಗಳನ್ನೂ ತಿರಸ್ಕರಿಸದೆ ಲಿಂಗಧ್ಯಾನಕ್ಕೆ ಅನುಕೂಲವಾಗುವಂಥ ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ, ಅರ್ಧಚಂದ್ರಾಸನ ಮತ್ತು ಪರ್ಯಂಕಾಸನಗಳನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಆರೋಗ್ಯ ಕಾಪಾಡಿಕೊಳ್ಳಲೂ, ಅಷ್ಟ ಸಿದ್ಧಿಗಳನ್ನು ಪಡೆಯಲೂ ಯೋಗಾಸನ ಮುಂತಾದುವುಗಳನ್ನು ಮಾಡಬೇಕೆಂಬ ವಾದವನ್ನು ಅವರು ತಿರಸ್ಕರಿಸುತ್ತಾರೆ.

ಸ್ವಸ್ಥಸಿದ್ಧಾಸನದಲ್ಲಿ ಕುಳ್ಳಿರ್ದು ಅತ್ತಿತ್ತ ಕಂಪಿಸದೆ
ನೆಟ್ಟೆಲುವ ನೆಟ್ಟನೆ ಮಾಡಿ
ಅಧೋಮುಖಗಮನವಾಯುವ ಊರ್ಧ್ವಮುಖವ ಮಾಡಿ,
ಆಧಾರವಂ ಬಲಿದು ಪ್ರಾಣವಾಯುವ ಪಾನವ ಮಾಡಿ
ಅರುವೆರಳಿನಿಂ ಆರುದ್ವಾರವನೊತ್ತಲು
ಶಶಿ ರವಿ ಬಿಂಬಗಳ ಮಸುಳಿಪ ನಾದ ಬಿಂದು ತೇಜವು ಕೂಡಿ
ಮೂರ್ತಿಯಾಗಿ ಥಳಥಳಿಸಿ ಹೊಳೆವ ಲಿಂಗದ ಬೆಳಗಿನೊಳಗೆ ಮನವಳಿದಾತನೆ
ಉನ್ಮನಿವನಿತೆಗೆ ವಲ್ಲಭವೆನಿಸುವ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ಪರಮಯೋಗಿ. (೧೧: ೧೦೫೭)

ಶುದ್ಧ ಸಿದ್ಧಾಸನದಲ್ಲಿ ಕುಳ್ಳಿರ್ದು ಅರ್ಧಾವಲೋಕನದಿಂದ
ನಾಸಿಕಾಗ್ರದಲ್ಲಿ ಪ್ರಸಾದವ ಕಂಡುಂಡು,
ಮುಕ್ತಿವನಿತೆಗೆ ಬೇಟವ ಮಾಡಿದಡೆ
ಬೇಟಕ್ಕೆ ಮರುಳಾಗಿ ಕೂಡಿದಳಯ್ಯಾ,
ಆರು ವನಿತೆಯರ ವಂಚಿಸಿ ಕೂಡಿದಳು, ಆರು ಒಗತನ ಕೆಟ್ಟಿತ್ತು.
ಪುರುಷ ಸ್ತ್ರೀಯೊಳಗಡಗಿ, ಸ್ತ್ರೀ ಪುರುಷನೊಳಗಡಗಿ
ಇಬ್ಬರೆನಿಸದೆ ಒಬ್ಬರಾದುದನು ಏನೆಂದುಪಮಿಸಬಹುದು
ನಿರ್ವಿಕಲ್ಪಯೋಗವನು?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ತಾನಾದ ಘನವನು. (೧೧: ೧೦೭೧)

ಲಯಯೋಗ

ಷಟ್‌ಸ್ಥಲಯೋಗವು ಲಯಯೋಗವನ್ನೂ ಒಳಗೊಳ್ಳುತ್ತದೆ. ಲಯಯೋಗವೆಂದರೆ ಪ್ರಾಣಾಯಾಮದ ಮೂಲಕ ಮನಸ್ಸಿನ ಚಾಂಚಲ್ಯವನ್ನು ನಿವಾರಿಸಿ ಮನಸ್ಸನ್ನು ಲಯ ಮಾಡುವುದು. ಒಂದರ್ಥದಲ್ಲಿ ಮನೋಲಯವೆಂದರೆ ನಾನು ಎಂಬ ಭಾವವನ್ನು ಇಲ್ಲವಾಗಿಸುವುದು.

ಮೂಲಾಧಾರಮಧ್ಯದಲ್ಲಿ ಹುಟ್ಟಿದ ಪ್ರಾಣಾಪಾನಂಗಳು
ಆವಲ್ಲಿ ಮನ ಸಹಿತ ಲಯವಾದವೋ
ಆ ಲಯ ಕಾರಣವಾದುದು ಪ್ರಾಣಲಿಂಗ,
ಆ ಪ್ರಾಣಲಿಂಗದ ನೆಲೆಯನರಿಯದೆ ಏನ ಮಾಡಿದಡೂ
ಫಲದಾಯಕ ಭಕ್ತಿಯಲ್ಲದೆ ಮುಕ್ತಿಯಿಲ್ಲ.
ಇದು ಕಾರಣ ಪ್ರಾಣಲಿಂಗವನರಿದು,
ಮನ ಶಕ್ತಿಸಂಯೋಗವ ಮಾಡಿ
ಮುಕ್ತರಹುದಯ್ಯಾ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, (೧೧: ೧೦೩೪)

ಹರಿವ ಮನ ವಾಯುವನೊಂದು ಹುರಿಯ ಮಾಡಿ
ಮನವ ಸ್ಥಿರಗೊಳಿಸಿ,
ಸಗುಣ ಧ್ಯಾನದಲ್ಲಿ ಮನ ಸವೆದು, ನಿರ್ಗುಣದಲ್ಲಿ ನಿಂದು,
ಆ ನಿರ್ಗುಣ ಧ್ಯಾನ ಬಲಿದು, ಸಗುಣ ನಿರ್ಗುಣದಲ್ಲಿ ಅಡಗಿ,
ಆ ನಿರ್ಗುಣವಾದ ನಿಜದಲ್ಲಿ ಮನೋಲಯವಾದುದೇ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಪರಮರಾಜಯೋಗವು. (೧೧: ೧೦೬೮)

ಕುಂಡಲಿನಿಯೋಗ,

ಕುಂಡಲಿನಿ ಯೋಗದ ಪ್ರಕಾರ, ಕುಂಡಲಿನಿ (ಕುಂಡಲಿ) ಶಕ್ತಿಯು ಪ್ರತಿಯೊಬ್ಬ ಮಾನವನ ಆಧಾರಚಕ್ರದಲ್ಲಿ ಕೆಳಮುಖ ಮಾಡಿಕೊಂಡು ಮಲಗಿದ ಹಾವಿನಂತೆ ಕಾಣುತ್ತದೆ. ಆಗ ಮನುಷ್ಯನು ಪ್ರವೃತ್ತಿಮಾರ್ಗಿಯಾಗಿ ಭವಸಾಗರದಲ್ಲಿ ಸುಖದುಃಖಗಳನ್ನು ಅನುಭವಿಸುತ್ತಾ ಇರುತ್ತಾನೆ. ಈ ಸ್ಥಿತಿಯ ಕುಂಡಲಿನಿಗೆ ಅಧೋಕುಂಡಲಿನಿ ಎಂದು ಹೆಸರು. ಆಸನ, ಪ್ರಾಣಾಯಾಮ, ಬಂಧ ಮುಂತಾದ ಯೌಗಿಕ ಕ್ರಿಯೆಗಳ ಮೂಲಕ ಕುಂಡಲಿನಿಯನ್ನು ಜಾಗೃತಗೊಳಿಸಿ ಊರ್ಧ್ವಮುಖವಾಗುವಂತೆ ಮಾಡಿ, ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ, ಎಂಬ ಆರು ಚಕ್ರಗಳನ್ನು ಒಂದೊಂದಾಗಿ ಭೇದಿಸಿ ಮೇಲೆ ಹೋಗುವಂತೆ ಮಾಡಿದರೆ, ಅದು ಕೊನೆಯಲ್ಲಿ ನೆತ್ತಿಯಲ್ಲಿರುವ ಸಹಸ್ರಾರ ಪದದಲ್ಲಿರುವ ಶಿವನಲ್ಲಿ ಐಕ್ಯವಾಗುತ್ತದೆ.

ಆದರೆ ಶಿವಯೋಗದಲ್ಲಿ ಕುಂಡಲಿನಿ ಯೋಗಕ್ಕೆ ಸ್ಥಾನವಿದ್ದರೂ, ಅದರ ಸಿದ್ಧಾಂತಗಳು ಇಲ್ಲಿ ಬೇರೆಯಾಗಿವೆ. ಶಿವಯೋಗದ ಪ್ರಕಾರ, ಶುದ್ಧನಾದ ಆತ್ಮ ಅಥವಾ ಅಂಗನೇ ಕುಂಡಲಿನಿ, ಪ್ರತಿ ಚಕ್ರದಲ್ಲಿರುವುದು ಶಕ್ತಿಯಲ್ಲ, ಲಿಂಗ; ಅಂದರೆ, ಆಧಾರದಲ್ಲಿ ಆಚಾರಲಿಂಗವೂ, ಸ್ವಾಧಿಷ್ಠಾನದಲ್ಲಿ ಗುರುಲಿಂಗವೂ, ಮಣಿಪೂರಕದಲ್ಲಿ ಶಿವಲಿಂಗವೂ, ಅನಾಹತದಲ್ಲಿ ಜಂಗಮಲಿಂಗವೂ, ವಿಶುದ್ಧಿಯಲ್ಲಿ ಪ್ರಸಾದಲಿಂಗವೂ, ಆಜ್ಞೆಯಲ್ಲಿ ಮಹಾಲಿಂಗವೂ ಇವೆ. ಕೆಲವು ವೇಳೆ, ಈ ಲಿಂಗಗಳಿಗೆ ಬ್ರಹ್ಮ, ವಿಷ್ಣು, ಈಶ್ವರ, ಮುಂತಾದ ಆಧಿದೇವತೆಗಳ ಹೆಸರನ್ನು ಕೊಡುವುದುಂಟು. ಪ್ರತಿಯೊಂದು ಚಕ್ರವನ್ನು ಜಾಗೃತಗೊಳಿಸುವುದೆಂದರೆ, ಅಂಗನು (ಸಾಧಕನು) ಅದರಲ್ಲಿರುವ ಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಎಂದರ್ಥ. ಕೊನೆಯಲ್ಲಿ ಅಂಗನು ಸಹಸ್ರಾರದಲ್ಲಿರುವ ಶೂನ್ಯಲಿಂಗದಲ್ಲಿ ಐಕ್ಯವಾಗುವುದೇ ಲಿಂಗಾಂಗಯೋಗ, ಇದನ್ನು ಶರಣರು ತಮ್ಮ ಭಾಷೆಯಲ್ಲಿ ಹೀಗೆನ್ನುತ್ತಾರೆ: ಕಲಾಶಕ್ತಿಗಳು ಎಲ್ಲಿಯವರೆಗೆ ಪ್ರವೃತ್ತಿಮಾರ್ಗಿಗಳಾಗಿರುತ್ತವೆಯೋ, ಅಲ್ಲಿಯವರೆಗೆ ಮನುಷ್ಯನಿಗೆ ಯಾವ ಲಿಂಗದ ಸಾಕ್ಷಾತ್ಕಾರವೂ ಆಗುವುದಿಲ್ಲ. ಆದರೆ ಶಿವಯೋಗದ ಮೂಲಕ ಅವೇ ಪ್ರವೃತ್ತಿಶಕ್ತಿಗಳನ್ನು ಭಕ್ತಿಶಕ್ತಿ(ನಿವೃತ್ತಿಶಕ್ತಿ)ಗಳನ್ನಾಗಿ ಪರಿವರ್ತಿಸಿದರೆ, ಸಾಧಕನು ಕ್ರಮವಾಗಿ ಆರು ಹಂತಗಳಲ್ಲಿ ಆರು ಲಿಂಗಗಳನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.

ಅಯ್ಯಾ ಪ್ರವೃತ್ತಿ ಮಾರ್ಗದಲ್ಲಿ ಚರಿಸುವಲ್ಲಿ ಅಧೋಕುಂಡಲಿ
ಭೇದವೆಂತೆದೊಡೆ, ದ್ವಾದಶಕಮಲಂಗಳೇ ಅಂಗವಾಗಿರ್ಪುವಯ್ಯಾ
ಷೋಡಶ ಮದಂಗಳೇ ಪ್ರಾಣವಾಗಿರ್ಪವಯ್ಯ
ಸಪ್ತವ್ಯಸನಂಗಳೇ ವಸ್ತಾಭರಣಂಗಳಾಗಿರ್ಪುವಯ್ಯ
ದುರ್ಗುಣಂಗಳೇ ವಸ್ತಾಭರಣಂಗಳಾಗಿರ್ಪವಯ್ಯ,
ಅನಾಚಾರಂಗಳೇ ನಡೆನುಡಿಯಾಗಿರ್ಸುವಯ್ಯ,
ಅಸತ್ಯವೇ ವಾಹನವಾಗಿರ್ಪುದಯ್ಯ
ಕುಭಾವಂಗಳೇ ಪಿತಮಾತೆಯಾಗಿರ್ಪುವಯ್ಯ,
ಕುಚಿತಗಳೇ ಬಂಧುಬಳಗವಾಗಿರ್ತುವಯ್ಯ,
ಕುಬುದ್ದಿಗಳೇ ಒಡಹುಟ್ಟಿದವರಾಗಿರ್ಪುವಯ್ಯ,
ದುರಹಂಕಾರಗಳೇ ನಂಟರಾಗಿರ್ಪರಯ್ಯ.
ಕುಮನವೇ ಸ್ತ್ರೀಯಳಾಗಿರ್ಪಳಯ್ಯ,
ಅಜ್ಞಾನವೇ ಮಂದಿರವಾಗಿರ್ಪುದಯ್ಯ
ದುರ್ಭಾವವೇ ಆಹಾರವಾಗಿರ್ಪುದಯ್ಯ.
ಅರಿಷಡ್ವರ್ಗವೇ ದೈವವಾಗಿರ್ಪುದಯ್ಯ
ಷಡ್ಭಾವ ವಿಕಾರಗಳೇ ಅವಯವಗಳಾಗಿರ್ಪವಯ್ಯ
ಆಶೆಯೇ ಧನಧಾನ್ಯವಾಗಿರ್ಪುದಯ್ಯ
ಇಂತು ಸಂಸಾರವೆಂಬ ಪಾಶದಲ್ಲಿ ಜನ್ಮಜರೆಮರಣಗಳಿಂದ
ತಿರುಗುವ ಜೀವನೇ ಅಧೋಕುಂಡಲಿ ಸರ್ಪನೆನಿಸುವನಯ್ಯ.
ಆ ಸರ್ಪವೇ ಮೂಲಾಹಂಕಾರವೆಂಬ ಪಟ್ಟಣವ ರಚಿಸಿ,
ಜಿಹ್ವಾಲಂಪಟ ಗುಹ್ಯಾಲಂಪಟದಲ್ಲಿ ಮುಳುಮುಳುಗಿ ತೇಲಿತಿರ್ಪುದು ನೋಡಾ,
ಸಂಗನಬಸವೇಶ್ವರಾ. (ವಚನಶಾಸ್ತ್ರಸಾರ ೧, ವ, ೨೦೬೨)

ಅಯ್ಯಾ, ನಿವೃತ್ತಿಮಾರ್ಗದಲ್ಲಿ ಚರಿಸುವ
ಊರ್ಧ್ವ ಕುಂಡಲಿ ಭೇದವೆಂತೆಂದೊಡೆ,
ಕಿಂಕುರ್ವಾಣ ಭಕ್ತಿಯೇ ಅಂಗವಾಗಿರ್ಪುದಯ್ಯ,
ಸಚ್ಚಿದಾನಂದವೇ ವಸ್ತಾಭರಣವಾಗಿರ್ಪುವಯ್ಯ,
ಸನ್ಮಾರ್ಗಾಚಾರಂಗಳೇ ನಡೆನುಡಿಯಾಗಿರ್ಪುವಯ್ಯ,
ಸುಸತ್ಯವೇ ವಾಹನವಾಗಿರ್ಪುದಯ್ಯ.
ದಯಾಂತಃಕರಣವೇ ಪಿತಮಾತೆಯಾಗಿರ್ಪುದಯ್ಯ,
ಸುಚಿತ್ತವೇ ಬಂಧುಬಳಗವಾಗಿರ್ಪುದಯ್ಯ.
ಸುಬುದ್ಧಿಗಳೇ ಒಡಹುಟ್ಟಿದವರಾಗಿರ್ಪರಯ್ಯ.
ನಿರಹಂಕಾರವೇ ನಂಟರಾಗಿರ್ಪುದಯ್ಯ
ಸುಮನವೇ ಸ್ತ್ರೀಯಾಗಿರ್ಪಳಯ್ಯ
ಸುಜ್ಞಾನವೇ ಮಂದಿರವಾಗಿರ್ಪುದಯ್ಯ
ಸದ್ಭಾವವೇ ಆಹಾರವಾಗಿರ್ಪುದಯ್ಯ,
ನಿತ್ಯ ನಿಜವೇ ದೈವವಾಗಿರ್ಸುದಯ್ಯ.
ನಿರಾಶೆಯೇ ಅವಯವಂಗಳಾಗಿರ್ಪವಯ್ಯ.
ನಿಃಕಾಮ್ಯಗಳೇ ಧನಧಾನ್ಯಗಳಾಗಿರ್ಪವಯ್ಯ
ಇಂತು ನಿಃಸಂಸಾರವೆಂಬ ಅವಿರಳಾನಂದದಿಂದ
ಸದ್ಗುರುರೂಪಾವಸ್ಥೆಯ ಮಾಡುವ ಸಜೀವವೇ
ಊರ್ಧ್ವಕುಂಡಲಿ ಸರ್ಪನಯ್ಯ,
ಆ ಸರ್ಪನೇ ಮಾಯಾಪ್ರಪಂಚವ ಹೇವರಿಸಿ,
ಅನಂತ ಮುಖದಿಂದ ನಿರ್ಮಾಯಸ್ವರೂಪವಾದ
ಮಹಾಪ್ರಮಥಗಣಂಗಳಭಿಮುಖವಾಗಿರ್ಪುದಯ್ಯ
ಈ ಸರ್ಪಂಗೆ ಬೇಕು ಬೇಡೆಂಬ ಜಿಹ್ವಾಲಂಪಟ
ಗುಹ್ಯಲಂಪಟವಿಲ್ಲ ನೋಡಾ ಸಂಗನಬಸವೇಶ್ವರಾ. (ಅದರಲ್ಲಿ, ವ. ೨೦೬೩)

ಆಧಾರದಲ್ಲಿ ಬ್ರಹ್ಮ ಸ್ವಾಯತವಾದ, ಸ್ವಾಧಿಷ್ಠಾನದಲ್ಲಿ ವಿಷ್ಣು ಸ್ವಾಯತವಾದ.
ಮಣಿಪೂರಕದಲ್ಲಿ ರುದ್ರ ಸ್ವಾಯತವಾದ, ಅನಾಹತದಲ್ಲಿ ಈಶ್ವರ ಸ್ವಾಯತವಾದ.
ವಿಶುದ್ಧಿಯಲ್ಲಿ ಸದಾಶಿವ ಸ್ವಾಯತವಾದ, ಆಜ್ಞೆಯಲ್ಲಿ ಉಪಮಾತೀತ ಸ್ವಾಯತವಾದ.
ಇವರೆಲ್ಲರು ಬಯಲಲ್ಲಿ ಹುಟ್ಟಿ ಬಯಲಲ್ಲಿ ಬೆಳೆದು,
ಬಯಲಲಿಂಗವನೆ ಧರಿಸಿಕೊಂಡು, ಬಯಲನೆ ಆರಾಧಿಸಿ
ಬಯಲಾಗಿ ಹೋಯಿತ್ತ ಕಂಡೆ ಗುಹೇಶ್ವರಾ. (೨: ೨೦೧)

ಆಧಾರದಲ್ಲಿ ಆಚಾರಲಿಂಗವ ಧರಿಸಿದನಾಗಿ
ಆಚಾರಲಿಂಗ ಭಕ್ತನಾದನಯ್ಯಾ ನಿಮ್ಮಶರಣ.
ಸ್ವಾಧಿಷ್ಠಾನದಲ್ಲಿ ಗುರುಲಿಂಗವ ಧರಿಸಿದನಾಗಿ
ಗುರುಲಿಂಗ ಭಕ್ತನಾದನಯ್ಯಾ ನಿಮ್ಮ ಶರಣ.
ಮಣಿಪೂರಕದಲ್ಲಿ ಶಿವಲಿಂಗವ ಧರಿಸಿದನಾಗಿ
ಸುರ ಶಿವಲಿಂಗಭಕ್ತನಾದನಯ್ಯಾ ನಿಮ್ಮ ಶರಣ.
ಅನಾಹತದಲ್ಲಿ ಜಂಗಮಲಿಂಗವ ಧರಿಸಿದನಾಗಿ
ಜಂಗಮಲಿಂಗ ಭಕ್ತನಾದನಯ್ಯಾ ನಿಮ್ಮ ಶರಣ.
ವಿಶುದ್ಧಿಯಲ್ಲಿ ಪ್ರಸಾದಲಿಂಗವ ಧರಿಸಿದನಾಗಿ
ಪ್ರಸಾದಲಿಂಗ ಭಕ್ತನಾದನಯ್ಯಾ ನಿಮ್ಮ ಶರಣ.
ಆಜ್ಞೆಯಲ್ಲಿ ಮಹಾಲಿಂಗವ ಧರಿಸಿದನಾಗಿ
ಮಹಾಲಿಂಗಭಕ್ತನಾದನಯ್ಯಾ ನಿಮ್ಮ ಶರಣ.
ಇಂತು ಷಡಾಧಾರದಲ್ಲಿ ಷಡ್ವಿಧ ಲಿಂಗವ ಧರಿಸಿ
ಷಡುಸ್ಥಲ ಭಕ್ತನಾದನಯ್ಯಾ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣ. (೧೧: ೮೫೭)

ಧ್ಯಾನಯೋಗ

ಶಿವಯೋಗದಲ್ಲಿ ಧ್ಯಾನಕ್ಕೂ ಸೂಕ್ತ ಸ್ಥಾನವಿದೆ ಎಂದರೆ ಸಾಲದು. ವಾಸ್ತವವಾಗಿ, ಯೋಗಿಗಳು ಧ್ಯಾನದ ಮೂಲಕವಲ್ಲದೆ ಸಮಾಧಿಸ್ಥಿತಿಯನ್ನು (ತುರೀಯಾವಸ್ಥೆ ಅಥವಾ ಲಿಂಗಾಂಗ ಯೋಗವನ್ನು) ತಲುಪಲಾರರು.

ಪಶ್ಚಿಮಪದ್ಮಾಸನದಲ್ಲಿ ಕುಳಿತ್ತು ನೆಟ್ಟಿಲುವ ಮುರಿದು
ತುಟಿ ಮಿಡುಕದೆ ಅಟ್ಟೆಯಾಡಿತ್ತಲ್ಲಾ!
ಬಿಟ್ಟ ಕಣ್ಣು ಬಿಗಿದ ಹುಬ್ಬು, ಬ್ರಹ್ಮರಂಧ್ರದಲ್ಲಿ ಕ(ಟ್ಟೆ) ಗುಡಿಯ,
ಕೂಡಲಸಂಗಮದೇವ ಹಿಡಿವಡೆದ. (೧: ೮೧೫)

ಪೂರ್ವದ್ವಾರಮಂ ಬಂಧಿಸಿ ಅಧೋದ್ವಾರವ ಬಲಿದು
ಊರ್ಧ್ವದ್ವಾರವ ತೆಗೆದು ಎವೆ ಹಳಚದೆ ಒಳಗೆ
ನಿಮ್ಮ ನೋಡುತ್ತಿದ್ದೆನಯ್ಯಾ,
ಬಂದುದ ಹೋದುದನರಿಯದೆ ನಿಮ್ಮ ನೋಡುತ್ತಿದ್ದೆನಯ್ಯಾ.
ಮನನಿಂದುದು ನಿಮ್ಮಲ್ಲಿ, ಹೆರೆಹಿಂಗದ
ಪರಮ ಸುಖ ದೊರೆಕೊಂಡಿತ್ತು.
ಇನ್ನಂಜೆನಂಜೆ ಜನನ ಮರಣವೆರಡೂ ಹೊರಗಾದವು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ
ನಿಜಸುಖ ಸಮನಿಸಿತ್ತಾಗಿ. (೧೧: ೧೦೪೨)

ಯೋಗದ ಲಾಗವರಿದು ಯೋಗಿಸಿಹೆನೆಂಬ ಯೋಗಿಗಳು ನೀವು ಕೇಳಿ.
ನೆಲೆವಾಗಿಲ ಮುಚ್ಚಿ, ಜಲವಾಗಿಲ ಮುಚ್ಚಿ, ತಲೆವಾಗಿಲ ತೆಗೆದು
ಗಗನಗಿರಿಯ ಪೂರ್ವಪಶ್ಚಿಮ ಉತ್ತರ ದಕ್ಷಿಣದ ನಡುವೆ
ಉರಿವ ಅಗ್ನಿಯ ಕಂಡು
ಆ ಅಗ್ನಿಯ ಮೇಲೆ ಸ್ವರನಾಲ್ಕರ ಕೀಲುಕೂಟದ ಸಂಚಯವ ಕಂಡು
ಆ ಸಂಚಯದಲ್ಲಿ ಅಮೃತಸ್ವರವ ಹಿಡಿದು ಕೂಡುವುದೇ
ಪರಮಶಿವಯೋಗ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಅದೇ ಪರಮನಿರ್ವಾಣ. (೧೧: ೧೦೨)

ರಾಜಯೋಗ

ಮನೋಲಯ ಮಾಡಿದನಂತರ ಪರಬ್ರಹ್ಮದ ನಿರ್ಗುಣ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಳ್ಳುವುದು ರಾಜಯೋಗ,

ಹರಿವ ಮನ ವಾಯುವನೊಂದು ಹುರಿಯ ಮಾಡಿ
ಮನವ ಸ್ಥಿರಗೊಳಿಸಿ,
ಸಗುಣ ಧ್ಯಾನದಲ್ಲಿ ಮನ ಸವೆದು, ನಿರ್ಗುಣದಲ್ಲಿ ನಿಂದು
ಆ ನಿರ್ಗುಣ ಧ್ಯಾನ ಬಲಿದು, ಸಗುಣ ನಿರ್ಗುಣದಲ್ಲಿ ಅಡಗಿ
ಆ ನಿರ್ಗುಣವಾದ ನಿಜದಲ್ಲಿ ಮನೋಲಯವಾದುದೇ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಪರಮರಾಜಯೋಗವು. (೧೧: ೧೦೬೮)

ಶಿರದೊಳಗೆ ಶಿರ, ಕರದೊಳಗೆ ಕರ
ಕರಣದೊಳಗೆ ಕರಣ, ಕಂಗಳೊಳಗೆ ಕಂಗಳು
ಕರ್ಣದೊಳಗೆ ಕರ್ಣ, ಫ್ರಾಣದೊಳಗೆ ಫ್ರಾಣ
ಜಿಹ್ವೆಯೊಳಗೆ ಜಿಹ್ವೆ, ದೇಹದೊಳಗೆ ದೇಹ
ಪಾದದೊಳಗೆ ಪಾದ ಕೂಡಿ ಶರಣರೊಡನಾಡುವ
ನಿಮ್ಮ ಬೆಡಗಿನ ಲೀಲೆಯನಾರು ಬಲ್ಲರು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣರಲ್ಲದೆ? (೧೧: ೧೦೬೫)

ನಾದ, ಬಿಂದು, ಕಳಾಭೇದವ ತಿಳಿದಲ್ಲದೆ
ಆರಕ್ಷರವಾದ ತೆರನನರಿಯಬಾರದು.
ಆರಕ್ಷರದ ಮೂಲಪ್ರಣಮವ ತಿಳಿದಲ್ಲದೆ
ನಾದ ತಲೆದೋರದು.
ನಾದಬೆಳಗಿನ ಕಳೆಯ ನೋಡಿ ಕಂಡಲ್ಲದೆ
ರಾಜಶಿವಯೋಗಿಯಾಗಬಾರದು.
ರಾಜಶಿವಯೋಗವೆಂಬುವದು
ಆದಿಯಲ್ಲಿ ಶಿವಬೀಜವಾದ ಮಹಾಮಹಿಮನಿಗೆ ಸಾಧ್ಯವಪ್ಪುದಲ್ಲದೆ
ಜಗದಲಾರಿಗೂ ಅಸಾಧ್ಯ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೇ! (೧೧: ೩೭೨)

ಮಂತ್ರಯೋಗ

ಏಕಾಗ್ರತೆಯಿಂದ ಮಂತ್ರವನ್ನು ಪಠಿಸುವುದೇ ಮಂತ್ರಯೋಗ, ಧ್ಯಾನಕ್ಕೂ, ಭಕ್ತಿಗೂ ಪೂರಕವಾದ ಮಂತ್ರವು ಶಿವಯೋಗ ಸಾಧನೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.

ಶಿವನಲ್ಲದೆ ಬೇರೆ ದೈವವಿಲ್ಲ ನೋಡಾ ಎನಗೆ!
ಶಿವಮಂತ್ರವಲ್ಲದೆ ಬೇರೆ ಮಂತ್ರವಿಲ್ಲ ನೋಡಾ ಎನಗೆ!
ಇದು ಕಾರಣ,
ಓಂ ನಮಃಶಿವಾಯ ಓಂ ನಮಃಶಿವಾಯ ಓಂ ನಮಃ ಶಿವಾಯ
ಎಂಬ ಷಡಕ್ಷರಮಂತ್ರವನೆ ಜಪಿಸುತಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೇ! (೧೧: ೨೦೪)

ಆಧಾರಚಕ್ರದಲ್ಲಿ ನಕಾರ ಸ್ವಾಯತ.
ಸ್ವಾಧಿಷ್ಠಾನಚಕ್ರದಲ್ಲಿ ಮಕಾರ ಸ್ವಾಯತ
ಮಣಿಪೂರಕಚಕ್ರದಲ್ಲಿ ಶಿಕಾರ ಸ್ವಾಯತ.
ಅನಾಹತಚಕ್ರದಲ್ಲಿ ವಕಾರ ಸ್ವಾಯತ
ವಿಶುದ್ಧಿಚಕ್ರದಲ್ಲಿ ಯಕಾರ ಸ್ವಾಯತ
ಆಜ್ಞಾಚಕ್ರದಲ್ಲಿ ಓಂಕಾರ ಸ್ವಾಯತ.
ಇದು ಕಾರಣ, ಶರಣಕಾಯವೇ ಷಡಕ್ಷರಮಂತ್ರ ಶರೀರವಾಗಿ
ಸರ್ವಾಂಗವೆಲ್ಲವು ಜ್ಞಾನಕಾಯ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೇ! (೧೧: ೨೦೨)

ಎನ್ನ ರೇಚಕ ಪೂರಕ ಕುಂಭಕಗಳೆಲ್ಲವು
ಶಿವಮಂತ್ರಮಯವಾಗಿ ಸಂಚರಿಸುತಿಪ್ಪವು.
ಎನ್ನ ಪೂರಕದಿ 'ಓಂ'ಯೆಂಬ ಪ್ರಣಮಸ್ವರೂಪವಾಗಿಪ್ಪುದು ನೋಡಾ
ಎನ್ನ ರೇಚಕದಿ ನಮಃಶಿವಾಯ ನಮಃಶಿವಾಯ
ನಮಃಶಿವಾಯಯೆನುತಿಪ್ಪುದು ನೋಡಾ.
ಎನ್ನ ಕುಂಭಕವೆ ಪರಶಕ್ತಿಮಯವಾಗಿ ಪರಂಜ್ಯೋತಿಸ್ವರೂಪವಾಗಿ
ಪರಮಚಿದ್ಧಾಂಡಸ್ಥಾನವಾಗಿಪ್ಪುದು ನೋಡಾ.
ಎನ್ನ ರೇಚಕ ಪೂರಕ ಕುಂಭಕಸ್ವರೂಪವಪ್ಪ
ಶಿವಮಂತ್ರವೆ ಶಿವಲಿಂಗಸ್ವರೂಪವಾಗಿ
ಎನ್ನ ಕರಸ್ಥಲದಲ್ಲಿ ಕರತಳಾಮಳಕವಾಗಿ ಕಾಣಲ್ಪಟ್ಟಿತು ನೋಡಾ.
ಆ ಕರಸ್ಥಲದ ಲಿಂಗವ ಕಂಗಳು ತುಂಬಿ ನೋಡಿ
ಮನಮುಟ್ಟಿ ನೆನೆದು ಸಂದಿಲ್ಲದಿಷ್ಟಲಿಂಗದಲ್ಲಿ ಭಾವವ ಬಲಿದು
ಲಿಂಗವನಪ್ಪಿ ಅಗಲದೆ ಆ ಲಿಂಗದಲ್ಲಿ ಸದಾ ಸನ್ನಹಿತನಾಗಿರ್ದು
ಶಿವಶಿವಾ ಹರಹರಾಯೆನುತಿರ್ದೆನಯ್ಯಾ
ನಿಮ್ಮ ನೆನಹಿನಿಂದ ನಿಮ್ಮುವನೆ ನೆನವುತಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೇ! (೧೧: ೨೦೮)

ಜ್ಞಾನಯೋಗ

ಮಾನವನ ಎಲ್ಲ ದುಃಖಗಳ ಮೂಲ ಅವಿದ್ಯೆ (ಅಜ್ಞಾನ) ಅಥವಾ ಮರೆವು, ನಾವು ಶಿವಾಂಶಿಕರು ಅಥವಾ ಶಿವನ ಅಂಗ ಎಂಬ ವಿಷಯವನ್ನು ಮರೆತು, ನಾವು ಸ್ವತಂತ್ರ ಅಸ್ತಿತ್ವವುಳ್ಳವರು ಎಂದೂ, ಜೀವನದ ಗುರಿ ಮತ್ತೆ ಶಿವನಲ್ಲಿ ಒಂದಾಗುವುದು ಎಂಬುದನ್ನು ಮರೆತು, ದೇಹೇಂದ್ರಿಯಾದಿಗಳ ಸುಖವೇ ಜೀವನದ ಧೈಯ ಎಂದೂ ತಪ್ಪು ತಿಳಿದಿದ್ದೇವೆ. ಹಾಗೆ ತಪ್ಪು ತಿಳಿದು ಐಂದ್ರಿಕ ಸುಖದ ಸಲುವಾಗಿ, ಅನೇಕ ರೀತಿಯ ಕರ್ಮಗಳನ್ನು ಮಾಡುತ್ತಾ, ದುಃಖವನ್ನು ಅನುಭವಿಸುತ್ತಾ ಭವಚಕ್ರದಲ್ಲಿ ಸತತವಾಗಿ ತಿರುಗುತ್ತಿದ್ದೇವೆ. ಭವಿತನಕ್ಕೆ ಹೇಸಿ ಭಕ್ತನಾದವನು ಮೊದಲು ಈ ಅಜ್ಞಾನದ ಬೇರನ್ನು ಕಿತ್ತೊಗೆಯಬೇಕು. ಆಗ ಅವನ ಕರ್ಮಗಳು ಅಕರ್ಮಗಳಾಗುತ್ತವೆ; ಅವನು ಕರ್ಮ ಮತ್ತು ಪುನರ್ಜನ್ಮದಿಂದ ಮುಕ್ತನಾಗಿ, ಶಿವನಲ್ಲಿ ಒಂದಾಗುತ್ತಾನೆ. ಈ ಅಜ್ಞಾನದ (ಮರೆವಿನ) ಬೇರನ್ನು ಕಿತ್ತೊಗೆಯಬೇಕಾದರೆ ಉಳಿದ ಯೋಗಪ್ರಕಾರಗಳೊಂದಿಗೆ ಅವನು ಜ್ಞಾನಯೋಗವನ್ನೂ ಆಚರಿಸಬೇಕಾಗುತ್ತದೆ.

ಜ್ಞಾನದ ಮೂಲಕ ಲಿಂಗದೊಡನೆ ಸಂಯೋಗವಾಗುವುದೇ ಜ್ಞಾನಯೋಗ, ಜ್ಞಾನ ವ್ಯಾವಹಾರಿಕ ಮತ್ತು ಪಾರಮಾರ್ಥಿಕ (ಅಥವಾ ಆಧ್ಯಾತ್ಮಿಕ) ಎಂದು ಎರಡು ಪ್ರಕಾರವಾಗಿದೆ. ಪರಶಿವ, ಶಕ್ತಿ, ಶಿವ-ಶಕ್ತಿ ಸಂಬಂಧ, ಜೀವಾತ್ಮ ಜೀವಾತ್ಮ-ಪರಮಾತ್ಮ ಸಂಬಂಧ, ಬಂಧ, ಮೋಕ್ಷ, ಮುಂತಾದ ಸಿದ್ಧಾಂತಗಳ ಬಗೆಗಿನ ಜ್ಞಾನ, ಲಿಂಗ ಪೂಜೆಯನ್ನು ಹೇಗೆ ಮಾಡಬೇಕು, ಅರ್ಪಣ ಹೇಗೆ ಮಾಡಬೇಕು, ಪ್ರಸಾದವನ್ನು ಯಾವ ಭಾವದಿಂದ ಸ್ವೀಕರಿಸಬೇಕು, ಗುರುಜಂಗಮ ಸೇವೆ, ದಾಸೋಹಗಳನ್ನು ಹೇಗೆ ಮಾಡಬೇಕು, ಮುಂತಾದ ಅಚರಣೆಗಳ ಬಗೆಗಿನ ಜ್ಞಾನ - ಎರಡೂ ವ್ಯಾವಹಾರಿಕ ಜ್ಞಾನವೇ. ಲಿಂಗಾಂಗ ಸಾಮರಸ್ಯಕ್ಕೆ ಇವೆರಡೂ ಆವಶ್ಯಕ. ಇಂಥ ಜ್ಞಾನವನ್ನು ನಾವು ಗುರುಗಳಿಂದ, ತಂದೆತಾಯಿಗಳಿಂದ, ಮಿತ್ರರಿಂದ, ಗ್ರಂಥಗಳಿಂದ ಸಂಪಾದಿಸಬಹುದು. ಇದು ನಮ್ಮ ಸ್ವಂತ ಅನುಭವದಿಂದ ಪಡೆದ ಜ್ಞಾನವಲ್ಲವಾದುದರಿಂದ, ಇದು ವ್ಯಾವಹಾರಿಕ ಜ್ಞಾನ.

ಪಾರಮಾರ್ಥಿಕ ಜ್ಞಾನವು ಯಾವುದೇ ವಸ್ತುವಿನ ಬಗೆಗಿನ ಜ್ಞಾನವಲ್ಲ. ಅದು ಸಮಾಧಿ ಸ್ಥಿತಿಯಲ್ಲಿ ಯೋಗಿಗೆ ಆಗುವ ಜ್ಞಾತೃ-ಜ್ಞೇಯಗಳ ದ್ವೈತವಿಲ್ಲದಂಥ ಅನುಭಾವ. ಆಗ ಯೋಗಿಗೆ, ನಾನು ಅಂಥ ಅರಿವನ್ನು ಪಡೆಯುತ್ತಿದ್ದೇನೆ ಎಂಬ ಜ್ಞಾತೃ ಭಾವವಾಗಲಿ, ನನ್ನ ಅನುಭವಕ್ಕೆ ಬಂದಿರುವ ವಸ್ತು ಪರಶಿವ ಎಂಬ ಜ್ಞೇಯ ಭಾವವಾಗಲಿ, ಇರುವುದಿಲ್ಲ. ಅಂದರೆ, ಅಂಥ ಸ್ಥಿತಿಯಲ್ಲಿ 'ನಾನೂ' ಇಲ್ಲ, 'ವಸ್ತು'ವೂ ಇಲ್ಲ. ಉಳಿದಿರುವುದು ಕೇವಲ ಅಗಮ್ಯ, ಅನಂತ, ಅಪ್ರಮಾಣ ಚಿತ್; ಅರ್ಥಾತ್, ಪರಶಿವ. ಪರಶಿವ ಜ್ಞಾನಸ್ವರೂಪ, ಚಿತ್‌ಸ್ವರೂಪ, ಸಂವಿತ್‌ಸ್ವರೂಪ ಎನ್ನುವುದು ಈ ಕಾರಣಕ್ಕಾಗಿಯೇ.

ಆಧ್ಯಾತ್ಮಿಕ ಅಥವಾ ಪಾರಮಾರ್ಥಿಕ ಜ್ಞಾನವನ್ನು ಪಡೆಯಬೇಕಾದರೆ, ವ್ಯಾವಹಾರಿಕ ಜ್ಞಾನ ಬೇಕೇ ಬೇಕು. ಪಾರಮಾರ್ಥಕ ಜ್ಞಾನವನ್ನು ಒಂದು ದೇಶವೆಂದು ಊಹಿಸಿಕೊಂಡರೆ, ವ್ಯಾವಹಾರಿಕ ಜ್ಞಾನ ಅದನ್ನು ತೋರಿಸುವ ನಕಾಶೆ.

ಎನ್ನಲ್ಲಿ ನಾನು ನಿಜವಾಗಿ ನಿಮ್ಮನರಿದೆಹೆನೆಂದಡೆ
ಅದು ನಿಮ್ಮ ಮತಕ್ಕೆ ಬಪ್ಪುದೆ?
ಎನ್ನ ನಾನು ಮರೆದು, ನಿಮ್ಮನರಿದಡೆ,
ಅದು ನಿಮ್ಮ ರೂಪೆಂಬೆ.
ಎನ್ನ ನಿನ್ನೊಳು ಮರೆದಡೆ, ಕನ್ನಡಿಯೊಳಗಣ ಪ್ರತಿಬಿಂಬದಂತೆ
ಭಿನ್ನವಿಲ್ಲದೆ ಇದ್ದೆನು ಕಾಣಾ ಗುಹೇಶ್ವರಾ. (೨: ೪೨೭)

ಆತ್ಮಪರಮಾತ್ಮಯೋಗವನರಿದೆನೆಂಬ
ಮಾತಿನ ಮೊದಲ ಜ್ಯೋತಿಯೊಳಗೆ ಆತ್ಮಜ್ಯೋತಿಯನರಿದು
ಮಾತಿನೊಳಗಣ ಪರಮಾತ್ಮನನರಿದಂಗಲ್ಲದೆ
ಆತ್ಮಪರಮಾತ್ಮಯೋಗವನರಿಯಬಾರದು.
ಆತ್ಮಪರಮಾತ್ಮಯೋಗವನರಿದಂಗಲ್ಲದೆ
ಅರಿವು ಮರವೆಗಳು ನಷ್ಟವಾಗದು.
ಹಮ್ಮು ನಷ್ಟವಾ(ದುದೇ)
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಜೀವಪರಮೈಕ್ಯವು. (೧೧: ೧೦೭೭)

ಜ್ಞಾನವು (ಪರಶಿವನು) ಕ್ಷೇಯವಸ್ತುವಲ್ಲವಾದುದರಿಂದ, ಅದರ ಬಗೆಗೆ ಏನನ್ನೂ ಹೇಳಲಾಗುವುದಿಲ್ಲ. ಅದು ಅಜೇಯ, ಅಚಿಂತ್ಯ, ಅವರ್ಣನೀಯ.

ಅರಿದೆವರಿದೆವೆಂಬಿರಿ ಅರಿದ ಪರಿಯೆಂತು ಹೇಳಿರೆ?
ಅರಿದವರು ಅರಿದೆವೆಂಬರೆ?
ಅರಿಯಬಾರದ ಘನವನರಿದು,
ಅರಿಯದಂತಿಪ್ಪರು ಗುಹೇಶ್ವರಾ. (೨: ೩೬೨)

ಜ್ಞಾನವು ಅಜ್ಞಾನ, ಸ್ವಾರ್ಥ ಆಸೆ, ಹಿಂದಿನ ಕರ್ಮ-ಎಲ್ಲವನ್ನೂ ಸುಡುತ್ತದೆ. ಈ ದೃಷ್ಟಿಯಿಂದಲೇ ಅನೇಕ ಯೋಗಿಗಳು ಜ್ಞಾನವು ಭಕ್ತಿ ಮತ್ತು ಕರ್ಮಗಳಿಗಿಂತ ಮೇಲು, ಎನ್ನುವುದು.

ಮನದೊಳಗೆ ಘನ ವೇದ್ಯವಾಗಿ, ಘನದೊಳಗೆ ಮನ ವೇದ್ಯವಾದ ಬಳಿಕ
ಪುಣ್ಯವಿಲ್ಲ ಪಾಪವಿಲ್ಲ, ಸುಖವಿಲ್ಲ ದುಃಖವಿಲ್ಲ,
ಕಾಲವಿಲ್ಲ ಕರ್ಮವಿಲ್ಲ, ಜನನವಿಲ್ಲ ಮರಣವಿಲ್ಲ.
ಗುಹೇಶ್ವರಾ ನಿಮ್ಮ ಶರಣನು ಘನಮಹಿಮ ನೋಡಯ್ಯಾ. (೨: ೪೫೩)

ಹಿಂದಿನ ಭವಸಾಗರವನ್ನು ದಾಂಟಿದೆ.
ಮುಂದಣ ಮುಕ್ತಿಪಥಕ್ಕೆ ಜ್ಞಾನವಂಕುರಿಸಿತ್ತು.
ಇನ್ನಂಜೆನಂಜೆನಯ್ಯ.
ಎನ್ನ ಮನೋಮೂರುತಿಯಪ್ಪ ಚಂದೇಶ್ವರನ ಕಾರುಣ್ಯವಾಯಿತ್ತು.
ಗೆದ್ದ ಗೆದ್ದ ಮಹಾಮಾಯೆಯ. (೭: ೧೩೨೮)

ಅಗ್ನಿರಜ್ಜುವಿನಿಂದ ಕಟ್ಟುವಡೆವುದೆ?
ಸೂರ್ಯನ ಕತ್ತಲೆ ಬಾಧಿಸಲಾಪುದೆ ಅಯ್ಯಾ?
ಆಕಾಶವು ರಜ ಧೂಮಗಳಿಂದ ಮಲಿನವಹುದೆ ಅಯ್ಯಾ?
ನಿಮ್ಮನರಿದ ಶಿವಯೋಗಿಗೆ, ಸಂಸಾರ ಬಂಧಿಸಬಲ್ಲುದೆ?
ಹೇಳಾ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ! (೧೧: ೯೨೯)

ಈ ವಿವಿಧ ರೀತಿಯ ಯೋಗಗಳನ್ನೊಳಗೊಂಡ ಶಿವಯೋಗ ಸಾಧನೆಯ ಪರಿಣಾಮವಾಗಿ ಅಂಗನು, ಅವಿದ್ಯೆ, ಕರ್ಮ, ಪುನರ್ಜನ್ಮ, ದುಃಖಗಳಿಂದ ಮುಕ್ತನಾಗಿ ಇದೇ ಜನ್ಮದಲ್ಲಿ ಶಿವನೊಂದಿಗೆ ಐಕ್ಯವಾಗುವನಲ್ಲದೆ, ಅಪರಿಮಿತ ಆನಂದವನ್ನೂ ಪಡೆಯುತ್ತಾನೆ.

ನೆಲೆಗಾಂಬನ್ನಕ್ಕರ ತೊರೆಯ ಅಂಜಿಕೆಯೆಸೆ?
ನೆಲೆಗಂಡ ಬಳಿಕ ತೊರೆ ಬರುದೊರೆಯಲ್ಲದೆ ಅಂಜಿಕೆಯಿಲ್ಲ.
ಮನವುಳ್ಳನ್ನಬರ ಕರ್ಮದ ಕೋಟಲೆಯ್ಕೆಸೆ?
ಮನವಳಿದ ಬಳಿಕ ಕರ್ಮ ನಿಕರ್ಮವಲ್ಲದೆ
ಬೇಕು ಬೇಡೆಂಬ ಸಂದೇಹವುಂಟೆ,
ಗುಹೇಶ್ವರಾ ನಿಮ್ಮ ನಿಜವನರಿದ ಶರಣಂಗೆ? (೨: ೧೩೩೩)

ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ
ತೆರಹಿಲ್ಲದ ಸಂಭಾಷಣೆ ಸುಖವು.
ತೆರಹಿಲ್ಲದೆ ನಂಬಿದೆ, ಸ್ವಾನುಭಾವ ಸುಖವು,
ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ
ಕೂಡಲಸಂಗಮದೇವಾ, ನಿಮ್ಮ ಶರಣಂಗೆ! (೧: ೯೧೯)

[1] ಸಮಗ್ರ ವಚನ ಸಾಹಿತ್ಯ ಸಂಪುಟ - ೧, ವಚನ ಸಂಖ್ಯೆ: ೫೧೦, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
Previous ಲಿಂಗಾಂಗಯೋಗ ಅಥವಾ ಅನುಭಾವ (ಗುರಿ) ಲಿಂಗಾಯತ ತತ್ವ-ಸಿದ್ಧಾಂತಗಳು Next