Previous ಬಸವೇಶ್ವರ ಪೂಜಾವ್ರತ ಅಧ್ಯಾಯ -೨ ಬಸವೇಶ್ವರ ಪೂಜಾವ್ರತ ಅಧ್ಯಾಯ - ೪ Next

ಬಸವೇಶ್ವರ ಪೂಜಾವ್ರತ ಅಧ್ಯಾಯ -೩

✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

ಅಧ್ಯಾಯ ೩ ದ್ವಾದಶ ಸ್ತೋತ್ರ ಮಾಲಿಕೆ

೧. ಕಾರಣಿಕ

ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು,
ಕರ್ತನಟ್ಟಿದನಯ್ಯಾ ಬಸವಣ್ಣನ,
ಆ ಬಸವಣ್ಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ,
ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು,
ಅಸಂಖ್ಯಾತರೆಂಬ ಹೆಸರಿಟ್ಟು ಕರೆದು,
ಭಕ್ತಿಯ ಕುಳಸ್ಥಳವ ಶ್ರುತದೃಷ್ಟ ಪವಾಡದಿಂದ ಮೆರೆದು ತೋರಿ,
ಜಗವರಿಯಲು ಶಿವಾಚಾರದ ಧ್ವಜವನೆತ್ತಿಸಿ,
ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಣಿಕೆಯಾದನು.
ಆ ಶಿವಶರಣನ ಮನೆಯೊಳಗಿಪ್ಪ ಶಿವಗಣಂಗಳ ತಿಂಥಿಣಿಯ ಕಂಢು
ಎನ್ನ ಮನ ಉಬ್ಬಿ ಕೊಬ್ಬಿ ಓಲಾಡುತ್ತಿದ್ದೇನಯ್ಯಾ,
ನಮ್ಮ ಗುಹೇಶ್ವರನ ಶರಣ ಸಂಗನ ಬಸವಣ್ಣನ
ದಾಸೋಹದ ಘನವನೇನೆಂದೆನಬಹುದು
ನೋಡಾ ಸಿದ್ದರಾಮಯ್ಯಾ ! -ಶೂನ್ಯಪೀಠಾಧೀಶ ಅಲ್ಲಮಪ್ರಭು

೨. ಮಂತ್ರಪುರುಷ

“ಬಸವ' ಎಂಬ ಮೂರಕ್ಷರ ಹೃದಯಕಮಲದಲ್ಲಿ ನೆಲೆಗೊಂಡಡೆ
ಅಭೇದ್ಯ ಭೇದ್ಯವಾಯಿತ್ತು; ಅಸಾಧ್ಯ ಸಾಧ್ಯವಾಯಿತ್ತು
ಇಂತು ಬಸವಣ್ಣನಿಂದ ಲೋಕಲೌಕಿಕದ ಕುಭಾಷೆಯ ಕಳೆದು,
ಲೋಕಾಚರಣೆಯನತಿಗಳೆದು ಭಕ್ತಿ ಭರವಪ್ಪುದು,
ಕೂಡಲ ಚೆನ್ನಸಂಗಯ್ಯನಲ್ಲಿ ಬಸವಣ್ಣನ ಕಾರುಣ್ಯದಿಂದ. -ಚಿನ್ಮಯಜ್ಞಾನಿ ಚನ್ನಬಸವಣ್ಣ

೩. ಕಾಮಿತಾರ್ಥ ಪ್ರದಾಯಕ

ಚನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ನಿಧಾನ ದೊರಕಿತ್ತೆನಗೆ,
ಚನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ಪರುಷ ದೊರಕಿತ್ತೆನಗೆ,
ಚನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ಕಾಮಧೇನು ದೊರಕಿತ್ತೆನಗೆ,
ಚನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ಸುರತರು ದೊರಕಿತ್ತೆನಗೆ,
ಚನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ತ್ರಿವಿಧ ತ್ರಿವಿಧದ ಮೊದಲನೆ ತೋರಿದ ಬಸವಣ್ಣನೆನಗೆ.
ಚನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವಣ್ಣನಿಂದ ನೀವಾದಿರಾಗಿ ಕೂಡಲ ಚನ್ನಸಂಗಯ್ಯನಲ್ಲಿ
ಪ್ರಸಾದಿಯ ಪ್ರಸಾದಿಯಾದೆನು. - ಚಿನ್ಮಯಜ್ಞಾನಿ ಚನ್ನಬಸವಣ್ಣ (ಚ.ಬ.ವ.೬೮೫)

೪. ಪ್ರಮಥಾದಿದೇವ

ಬಸವೇಶನೆ ಬಸವರಾಜನೆ
ಬಸವಣ್ಣನೆ ಬಸವ ತಂದೆ ಬಸವಕೃಪಾನಿಧಿ
ಬಸವ ಪರಮೇಶ್ವರೀಶ್ವರ
ಬಸವ ಪ್ರಮಥಾದಿದೇವ ರಕ್ಷಿಸು ಬಸವಾ ||

೫. ಬಸವಣ್ಣನೇ ಸರ್ವಸ್ವ

ಬಸವಣ್ಣನೆ ತಾಯಿ ಬಸವಣ್ಣನೇ ತಂದೆ
ಬಸವಣ್ಣನೇ ಪರಮ ಬಂಧುವೆನಗೆ,
ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನ
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ
- ಬಸವಯೋಗಿ ಶ್ರೀ ಸಿದ್ಧರಾಮೇಶ್ವರ

೬. ಧರ್ಮದ ಆದಿಪ್ರವರ್ತಕ

ಕರುಣಿ ಬಸವಾ, ಕಾಲಹರ ಬಸವಾ, ಕರ್ಮಹರ ಬಸವಾ,
ನಿರ್ಮಳ ಬಸವಾ, ಶಿವಜ್ಞಾನಿ ಬಸವಾ
ನಿಮ್ಮ ಧರ್ಮವಯ್ಯಾ, ಈ ಭಕ್ತಿಯ ಪಥವು!
ಕರುಣಿ ಕಪಿಲ ಸಿದ್ಧಮಲ್ಲಿನಾಥಯ್ಯಾ,
ನಿಮಗೂ ಎನಗೂ ಬಸವಣ್ಣನ ಧರ್ಮವಯ್ಯಾ - ಬಸವಯೋಗಿ ಶ್ರೀ ಸಿದ್ಧರಾಮೇಶ್ವರ

೭. ಜಗದ್‌ ಹಿತಾರ್ಥಕ್ಕಾಗಿ ಅವತರಿಸಿದ ಬಸವಣ್ಣ

ಶಿವ ಶಿವಾ,
ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ,
ನಿಮ್ಮ ನಿಜವನಾರಯ್ಯಾ ಬಲ್ಲವರು ?
ವೇದಂಗಳಿಗಭೇದ್ಯನು, ಶಾಸ್ತ್ರಂಗಳಿಗಸಾಧ್ಯನು, ಪುರಾಣಕ್ಕಗಮ್ಯನು
ಆಗಮಕ್ಕೆ ಅಗೋಚರನು, ತರ್ಕಕ್ಕೆ ಅತರ್ಕ್ಯನು
ವಾಙ್ಮನಾತೀತವಾಗಿಪ್ಪ ಪರಶಿವ ಲಿಂಗವನು,
ಕೆಲಂಬರು ಸಕಲನೆಂಬರು ; ಕೆಲಂಬರು ನಿಃಕಲನೆಂಬರು ;
ಕೆಲಂಬರು ಸೂಕ್ಷ್ಮನೆಂಬರು ; ಕೆಲಂಬರು ಸ್ಥೂಲನೆಂಬರು
ಈ ಬಗೆಯ ಭಾವದಿಂದ ಹರಿಬ್ರಹ್ಮ, ಇಂದ್ರ ಚಂದ್ರ ರವಿ
ಕಾಲ ಕಾಮ ದಕ್ಷ ದೇವ ದಾನವ ಮಾನವರೆಲ್ಲರೂ
ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾದರು.

ಈ ಪರಿಯಲ್ಲಿ ಭವಭಾರಿಗಳಾಗಿ ಬಯಲಾಗಿ ಹೋಗಬಾರದೆಂದು ನಮ್ಮ ಬಸವಣ್ಣನು ಜಗದ್‌ಹಿತಾರ್ಥಕ್ಕಾಗಿ ಮರ್ತ್ಯಕ್ಕೆ ಅವತರಿಸಿ ಶರಣ ಮಾರ್ಗವನ್ನುರುಪುವುದಕ್ಕೆ ಭಾವನ್ನ ವಿವರವನ್ನೊಳಗೊಂಡು ಚರಿಸಿದನದೆಂತೆಂದಡೆ-

1) ಗುರುಕಾರುಣ್ಯವೇದ್ಯನು,
2) ವಿಭೂತಿ ರುದ್ರಾಕ್ಷಿಧಾರಕನು,
3) ಪಂಚಾಕ್ಷರೀ ಭಾಷಾ ಸಮೇತನು,
4) ಲಿಂಗಾಂಗ ಸಂಬಂಧಿ,
5) ನಿತ್ಯ ಲಿಂಗಾರ್ಚಕನು,
6) ಅರ್ಪಿತದಲ್ಲಿ ಅವಧಾನಿ,
7) ಪಾದೋದಕ ಪ್ರಸಾದ ಗ್ರಾಹಕನು,
8) ಗುರುಭಕ್ತಿ ಸಂಪನ್ನನು,
9) ಏಕಲಿಂಗ ನಿಷ್ಠೆಪರನು,
10) ಚರಲಿಂಗ ಲೋಲುಪ್ತನು,
11) ಶರಣ ಸಂಗಮೈಶ್ವರ್ಯನು,
12) ತ್ರಿವಿಧಕ್ಕಾಯತನು,
13) ತ್ರಿಕರಣ ಶುದ್ಧನು,
14) ತ್ರಿವಿಧ ಲಿಂಗಾಂಗ ಸಂಬಂಧಿ,
15) ಅನ್ಯದೈವ ಸ್ಮರಣೆಯ ಹೊದ್ದ,
16) ಭವಿಸಂಗವ ಮಾಡ,
17) ಭವಿಪಾಕವ ಕೊಳ್ಳ,
18) ಪರಸತಿಯ ಬೆರಸ,
19) ಪರಧನವನೊಲ್ಲ,
20) ಸ್ತುತಿ-ನಿಂದೆಗಳು ಹೊದ್ಧ,
21) ಆತ್ಮಸ್ತುತಿಯ ಮಾಡ ಪರನಿಂದೆಯನಾಡ,
22) ಅನೃತವ ನುಡಿಯ,
23) ಹಿಂಸೆಯ ಮಾಡ,
24) ತಾಮಸ ಭಕ್ತಯ ಸಂಗವ ಮಾಡ,
25) ಸದಾಚಾರ ಸಂಪನ್ನ,
26) ಗುರುಲಿಂಗಜಂಗಮಕ್ಕೆ ಅರ್ಥ ಪ್ರಾಣಾಭಿಮಾನ ಮುಂತಾದ ತ್ರಿವಿಧವನಪಿ೯ಸುವ ಪಾದೋದಕ-ಪ್ರಸಾದ ಮುಂತಾಗಿ ಭೋಗಿಸುವ,
27) ಜಂಗಮನಿಂದೆಯ ಸೈರಿಸ,
28) ಪ್ರಸಾದನಿಂದೆಯ ಕೇಳ,
29) ಅನ್ಯರನಾಸೆಗೆಯ್ಯ,
30) ಪಾತ್ರಪಾತ್ರವನರಿದೀವ,
31) ಚತುರ್ವಿಧ ಪದವಿಯ ಹಾರ,
32) ಅರಿಷಡ್ವರ್ಗಕ್ಕೆ ಅಳುಪ,
33) ಕುಲಾದಿ ಮದಂಗಳ ಬಗೆಗೊಳ್ಳ,
34) ಕುತ್ಸಿತ ಕುಹಕಕ್ಕೆ ಸೇರ,
35) ದ್ವೈತಾದ್ವೈತವ ನುಡಿವನಲ್ಲ,
36) ಸಂಕಲ್ಪ ವಿಕಲ್ಪವ ಮಾಡುವನಲ್ಲ,
37) ಕಾಲೋಚಿತವ ಬಲ್ಲ,
38) ಕ್ರಮಯುಕ್ತನಾಗಿ ಷಟ್‍ಸ್ಥಲ ಸಂಬಂಧಿ,
39) ಸರ್ವಾಂಗಲಿಂಗಿ,
40) ದಾಸೋಹ ಸಂಪನ್ನ,
41) ದಯಾಭರಿತ,
42) ನ್ಯಾಯನಿಷ್ಠುರ,
43) ನುಡಿದಂತೆ ನಡೆವ,
44) ಮಾಟಕೂಟಗಳನುಸಂಧಾನಿ,
45) ಮರೆವಿಲ್ಲದ ಮಹಾಜ್ಞಾನಿ,
46) ಶಿವಶರಣರನುಭಾವಿ,
47) ಕಮ೯ದ ಬಟ್ಟೆಯ ಮೆಟ್ಟ,
48) ಕಲುಷ-ಕಾಪ೯ಣ್ಯವ ಮುಟ್ಟ,
49) ಕಾಯಕಕ್ಕಲ್ಲದೆ ಸಲ್ಲ,
50) ದಾಸೋಹಭಾವ ಸಂಪನ್ನ,
51) ಕಾಯದ ಕಳವಳಕ್ಕಂಜ,
52) ಶಿವಧಮ೯ ಪುಂಜ

ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ ಮೆರೆವ ನಮ್ಮ ಬಸವಣ್ಣ ಆ ಬಸವಣ್ಣನ ಶ್ರೀ ಪಾದಕ್ಕೆ ನಾನು ಅಹೋರಾತ್ರಿಯಲ್ಲಿ ನಮೋ ನಮೋ ಎಂದು ಬದುಕಿದೆನು ಕಾಣಾ ಚನ್ನಮಲ್ಲಿಕಾರ್ಜುನಾ. -ಜಗನ್ಮಾತಾ ಅಕ್ಕಮಹಾದೇವಿ

೮. ಪರುಷ ಮೂರ್ತಿ

ಬಸವಣ್ಣ ನಡೆಪರುಷ, ನುಡಿಪರುಷ, ದೃಷ್ಟಿಪರುಷ
ಹಸ್ತಪರುಷ, ಮನಪರುಷ, ಭಾವಪರುಷ,
ತನುಮನಧನವ ಗುರುಲಿಂಗ ಜಂಗಮಕ್ಕೆ ನಿವೇದಿಸುವಾತ ಬಸವಣ್ಣನು
ಬಸವಣ್ಣನ ನೆನೆವುದೆ ಲಿಂಗಾರ್ಚನೆಯೆನಗೆ,
ಬಸವಣ್ಣನ ನೆನೆವುದೆ ಜಂಗಮಾರ್ಚನೆಯೆನಗೆ,
ಬಸವಣ್ಣನ ನೆನೆವುದೇ ಪರತತ್ವ, ಪರಮ ಕಲ್ಯಾಣವೆನಗೆ,
ಕಲಿದೇವಯ್ಯಾ, ನಿಮ್ಮ ಶರಣ ಬಸವಣ್ಣ
ನಿಂತಹ ಘನಮಹಿಮ ನೋಡಯ್ಯಾ ! -ಮಡಿವಾಳ ಮಾಚಿದೇವರು

೯. ಪ್ರಣವ ಪುರುಷ ಬಸವಣ್ಣ

'ಬ' ಎಂಬಲ್ಲಿ ಬಳಿ ಸಂದೆನು.
'ಸ” ಎಂಬಲ್ಲಿ ಸಯವಾದೆನು.
'ವ' ಎಂಬಲ್ಲಿ ನಿರವಯಲಾದೆನು.
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಬಸವಣ್ಣನ ನಿಜಪದದಲ್ಲಿ
ಸಂದಿಲ್ಲದೆ ಬೆರಸಿ, ನಮೋ ನಮೋ ಎಂಬ ಹಂಗಳಿದುಳಿದೆನು. -ಶರಣ ಮೋಳಿಗೆಯ ಮಾರಯ್ಯ

೧೦. ಮಹಾಪ್ರಸಾದಿ ಬಸವಣ್ಣ

ಎನ್ನರಿವು ಮರೆವು ಬಸವಂಗರ್ಪಿತ,
ಎನ್ನ ಆಚಾರ ವಿಚಾರ ಬಸವಂಗರ್ಪಿತ,
ಎನ್ನ ಭಾವ ನಿರ್ಭಾವ ಬಸವಂಗರ್ಪಿತ,
ನೀ ನಾನೆಂಬುದು ಬಸವಂಗರ್ಪಿತ,
ಇಂತು ಬಸವಣ್ಣಂಗೆ ಎನ್ನ ನಿವೇದಿಸಿದೆನಾಗಿ,
ಉಭಯವೆಂಬುದು ಇಲ್ಲವಾದೆ.
ನಿರಾಲಂಬದಲ್ಲಿ ನಿಜ ನಿವಾಸಿಯಾಗಿರ್ದೆನಯ್ಯಾ
ನಿಃಕಳಂಕ ಮಲ್ಲಿಕಾರ್ಜುನಾ. -ಶರಣ ಮೋಳಿಗೆಯ ಮಾರಯ್ಯ

೧೧. ಭಕ್ತ ಹೃದಯದ ಭಾಗ್ಯಜ್ಯೋತಿ

ಎಲ್ಲಾ ಪುರಾತರ ಶ್ರೀ ಚರಣಕ್ಕೆ ಇಲ್ಲಿರ್ದೆ ಶರಣೆಂದರೆ ಸಾಲದೆ
ಬಸವಾ, ಬಸವಪ್ಪಾ, ಬಸವಯ್ಯಾ ಶರಣೆಂದರೆ ಸಾಲದೆ !
ಎಲ್ಲರ ಹೃದಯದಲ್ಲಿ ಜ್ಯೋತಿಯಂತೆ ಬೆಳಗುತ್ತಿಪ್ಪ
ಮುಹಾ ಮಹಿಮನಾಗಿ, ಎನಗಿದೇ ದಿವ್ಯ ಮಂತ್ರ,
ಬಸವ ಪ್ರಿಯ ಕೂಡಲ ಚೆನ್ನಸಂಗಯ್ಯನಲ್ಲಿ,
ಬಸವಾ, ಬಸವಾ, ಬಸವಾ ಶರಣೆಂದರೆ ಸಾಲದೆ ? - ಶರಣ ಹಡಪದ ಅಪ್ಪಣ್ಣ

೧೨. ಮಂತ್ರಪುರುಷ ಬಸವೇಶ

ಪ್ರಣವದ ಬಳ್ಳಿ ಬಕಾರಂ | ಪ್ರಣವದ ನಾದಾನುಸಾರ ಸಕಾರಂ
ಪ್ರಣವದ ಬಿಂದು ವಕಾರಂ | ಪ್ರಣವಂ ಬಸವಾಕ್ಷರ ತ್ರಯಂ ಬಸವೇಶಂ॥ -ಪಾಲ್ಕುರಿಗೆ ಸೋಮನಾಥ - ಬಸವೇಶ್ವರ ರಗಳೆ

ಬಸವಂ ಭಕ್ತಿಗೆ ಮೂಲಂ | ಬಸವಂ ಕಾಲಂಗೆ ಕಾಲನನುಪಮಶೀಲಂ
ಬಸವಂ ಜಂಗಮಲೋಲಂ | ಬಸವಾ ರಕ್ಷಿಪುದೆನ್ನ ಸಂಗನ ಬಸವಾ | -ಪಾಲ್ಕುರಿಕೆ ಸೋಮನಾಥ - ಬಸವೇಶ್ವರ ಸ್ತೋತ್ರ

೧೩ ಭಜಕರ ಬಂಧು

ಭಕ್ತಿಯಿಂ ಬಸವ ಚಾರಿತ್ರ್ಯಮಂ ಕೇಳ್ವವ
ರ್ಗೆತ್ತಣದು ವಿಷ ಸರ್ಪ ನೃಪ ಚೋರ ಭೂತವಪ
ಮೃತ್ಯು ಮಾರಣ ಮೋಹನೋಚ್ಛಾಟನ ದ್ವೇಷಣ ಪ್ರೇತಪೈಶಾಚಿಕ
ಕುತ್ತ ಜಲಶಸ್ತ್ರದಾರಿದ್ರ‍್ಯ
ಸುತ್ತಿ ಮುಚ್ಚಿದ ಕಿಚ್ಚು ಭಯಗಳಿವು ಮೊದಲಾಗಿ
ವೊತ್ತವೆಂದರಿವುದಿದ ತಿಳಿದು ಬಸವೇಶ್ವರನ ಭಜಿಸಿ ಬದುಕುವುದೆಲ್ಲರು -ಸಿಂಗಿರಾಜ

೧೪. ಪರಿಶುದ್ಧ ಪರಿಪೂರ್ಣ ಚೇತನ

ಎಲೆ ಬಸವ, ಬಸವಣ್ಣ, ಬಸವಯ್ಯ, ಬಸವರಸ, ಬಸವರಾಜ, ಬಸವಿದೇವ ಕೇಳಯ್ಯ, ನಿನ್ನ ನೇಮವಿದಾರ್ಗುಂಟು? ಗುರು ಲಿಂಗದೊಳೆರಡಿಲ್ಲದಿಪ್ಪೆ, ಶರಣರಂ ಸಂಗನೆಂದೆ ಕಾಣೆ, ಬಂದ ಭಕ್ತರನತ್ಯಾದರಿಪೆ, ಬಪ್ಪಭಕ್ತರಂ ಹರುಷ ಹದುಳದೊಳಿದಿರ್ಗೊಂಬೆ, ಬೇಡಿದುದ ಶರಣರ್ಗಿಲ್ಲೆನ್ನದೀವೆ, ಬೇಡಲೊಲ್ಲದವರ್ಗೆ ಮಿಗಿಲಾಗಿ ಆರಾಧಿಪೆ. ಜಾಗ್ರಸ್ವಪ್ನ ಸುಷುಪ್ತಿಯವ ಸ್ಥಾತ್ರಯಂಗಳೊಳು ಶರಣರಂ ಸಂಗನೆಂದಲ್ಲದೆ ಕಾಣೆ. ಶಿವಲಿಂಗಾರ್ಪಿತವಲ್ಲದುದನಾಘ್ರಾಣಿಸೆ, ನೋಡೆ, ನುಡಿಯೆ, ಮುಟ್ಟೆ, ಕೇಳೆ, ಶಿವಸಮಯವನುದ್ಧರಿಸುವೆ. ಪರಸಮಯವಂ ಸಂಹರಿಸುವೆ. ಲಿಂಗದಲ್ಲಿ ಕಠಿಣಮಂ ಕೇಳೆ, ಜಂಗಮದಲ್ಲಿ ಜಾತಿಯನರಸೆ, ಪ್ರಸಾದದಲ್ಲಿ ಅಪವಿತ್ರತೆಯನರಿಯೆ, ಪರಾಂಗನೆಯರಂ ಹೆತ್ತ ತಾಯ್ಗಳೆಂಬೆ, ಪರದ್ರವ್ಯಮಂ ಕಿಲ್ಪಿಷವೆಂದು ಮುಟ್ಟೆ, ನಡೆದು ತಪ್ಪೆ, ನುಡಿದು ಹುಸಿಯೆ, ಹಿಡಿದುಬಿಡೆ, ಬಿಟ್ಟು ಹಿಂಗಲೀಯೆ, ಕೊಟ್ಟು ನೆನೆಯೆ, ನಟ್ಟು ಕೀಳೆ, ಮುಟ್ಟಿಪೆರಪಿಂಗೆ, ಕೂಡಿ ತಪ್ಪೆ, ನೊಡಿ ನಿರಾಕರಿಸೆ, ನೆನೆದು ಮರೆಯೆ, ಮನದೋಳೋವರಿಯಲ್ಲ ಬುದ್ಧಿಯೊಳು ವಿಸಂಚವಿಲ್ಲ, ಅಹಂಕಾರದೊಳು ಗರ್ವವಿಲ್ಲ. ಚಿತ್ತದೊಳು ಹೊರೆಯಿಲ್ಲ, ಕಾಮವಿಲ್ಲ, ಕೋಪದ ಮಾತೇಕೆ? ಲೋಭದ ಗಾಳಿ ತೀಡದು, ಮೋಹಕ್ಕೆ ತೆರಹಿಲ್ಲ, ಮದದ ಸೊಗಡು ಹೊದ್ದದು, ಮತ್ಸರಕ್ಕಿಂಬಿಲ್ಲ. ಬಸವರಾಜ, ನಿನ್ನ ಗುಣಂಗಳಂ ಬಣ್ಣಿಸಲೆಮ್ಮಳವಲ್ಲ. ಈಶನ ಮೀಸಲಿಪ್ಪ ಭಕ್ತ ನಿನಗೆಣೆಯಿಲ್ಲ ಪಡಿಯಿಲ್ಲ ಪಾಸಟಿ ಯಾವಂ? ಪಾಷಂಡಿಭೂಮಿಯೊಳು ಶಿವಭಕ್ತಿಯನಾರಂಭಿಸಿ ಸಾಮರ್ಥ್ಯಮಂ ಬಿತ್ತಿ ಪ್ರತ್ಯಕ್ಷಂಗಳಂ ಬೆಳೆದು ಗಣಪರ್ವಂಗಳಂ ಸುಫಲಂ ಮಾಡಲೆಂದು ಬಂದ ಕಾರಣಿಕ ಬಸವಾ, ನಿನ್ನ ದೆಸೆಯಿಂದೆಮ್ಮ ಭಕ್ತಿ ಬಣ್ಣವೇರಿತು... -ಹಂಪೆಯ ಹರಿಹರ -(ಎಂಟನೆಯ ಸ್ಥಲ ೩೪-೫೮-ಬ.ರಾ.ದೇ.ರ)

೧೫. ಮಹಾಗುರು ಬಸವಣ್ಣ

ಶ್ರೀ ಗುರುವೆ ದೀಕ್ಷಾಗುರುವೆ
ಶಿಕ್ಷಾ ಗುರುವೆ ರಕ್ಷಾ ಗುರುವೆ
ಸರ್ವಾಗಮೋಕ್ತ ಕಳಾಗುರುವೆ ಶಿವಯೋಗ ಧರ್ಮಾರ್ಥ
ಭೋಗ ಗುರುವೇ ತ್ಯಾಗ ಗುರುವೆ
ಸುಧೀ ಗುರುವೇ ವಾಚಾಗುರುವೇ ಭವ
ರೋಗಹರ ಶರಣಾಗು ಬಸವ ಮಹಾಗುರುವೆಮಗೆ |

ಬಸವ ಶರಣೆನೆ ಪಾಪವಳಿವುಗು
ಬಸವ ಶರಣೆನ ತಾಪವಾರುಗು
ಬಸವ ಶರಣೆನೆ ಪರಮ ಪಾವನ ಭಾತಿ ಸಂಧಿಸುಗು |
ಬಸವ ಶರಣೆನೆ ಭಕ್ತಿ ದೊರಕುಗು
ಬಸವ ಶರಣೆನೆ ಸಾರ್ಗು ಸುಸ್ಥಿತಿ
ಬಸವ ಶರಣೆನೆ ವಚನ ರಚನಾಸಿದ್ದಿ ವರ್ಧಿಸುಗು |

ಬಸವ ಶರಣೆನೆ ಭವವುಡುಗುವುದು
ಬಸವ ಶರಣೆನ ಕೀರ್ತಿಯೆಸೆವುದು
ಬಸವ ಶರಣೆನೆ ದುಃಸ್ಥಿತಿಗಳತ್ತತ್ತಲೋಡುವುವು |
ಬಸವ ಶರಣೆನೆ ಸೌಖ್ಯವೊಂದುಗು
ಬಸವ ಶರಣೆನೆ ಭಾಗ್ಯವಪ್ಪುಗು
ಬಸವ ಶರಣೆನೆ ಕಾಮಿತೋನ್ನತ ಸಿದ್ಧಿಸಿದ್ಧಿಸುಗು | -ಭೀಮಕವಿ

೧೬. ಬಸವ ನಾಮವೇ ಮಂತ್ರ

ಬಸವನ ನಾಮವು ಕಾಮಧೇನು ಕಾಣಿರೋ,
ಬಸವನ ನಾಮವು ಕಲ್ಪವೃಕ್ಷ ಕಾಣಿರೋ,
ಬಸವನ ನಾಮವು ಚಿಂತಾಮಣಿ ಕಾಣಿರೋ,
ಬಸವನ ನಾಮವು ಪರುಷದ ಖಣಿ ಕಾಣಿರೋ,
ಬಸವನ ನಾಮವು ಸಂಜೀವನ ಮೂಲಿಕೆ ಕಾಣಿರೋ,
ಇಂತಪ್ಪ ಬಸವ ನಾಮಾಮೃತವು ಎನ್ನ ಜಿಹ್ವೆಯ ತುಂಬಿ
ಹೊರಸೂಸಿ ಮನವ ತುಂಬಿತ್ತು;
ಆ ಮನವ ತುಂಬಿ ಹೊರಸೂಸಿ ಭಾವವ ತುಂಬಿತ್ತು;
ಆ ಭಾವ ತುಂಬಿ ಹೊರಸೂಸಿ ಸಕಲ ಕರಣೇಂದ್ರಿಯಂಗಳ ತುಂಬಿತ್ತು
ಆ ಸಕಲ ಕರಣೇಂದ್ರಿಯಂಗಳ ತುಂಬಿ ಹೊರಸೂಸಿ
ಸರ್ವಾಂಗದ ರೋಮ ಕುಳಿಗಳನ್ನೆಲ್ಲ ವೇಧಿಸಿತ್ತಾಗಿ,
ನಾನು ಬಸವಾಕ್ಷರವೆಂಬ ಹಡಗನೇರಿ ಬಸವ ಬಸವಾ
ಎಂದು ಭವಸಾಗರವ ದಾಂಟಿದೆನಯ್ಯಾ ಅಖಂಡೇಶ್ವರಾ.

ಮಂಗಲ ಪದ್ಯ

ಜಯ ಬಸವರಾಜ ಭಕ್ತಜನ ಸುರಭೂಜ
ಜಯತು ಮಹಕಾರಣಿಕ ಲಿಂಗದೇವನ ಘನತೇಜ
ಜಯತು ಕರುಣಾಸಿಂಧು ಭಜಕಜನ ಬಂಧು
ಜಯ ಇಷ್ಟದಾಯಕ ರಕ್ಷಿಸು ಶ್ರೀ ಗುರು ಬಸವಾ | -ಜಗದ್ಗುರು ಮಾತೆ ಮಹಾದೇವಿ

ಮೂರನೆಯ ಪೂಜೆ :

ಮೂರನೆಯ ಪೂಜೆಯನ್ನು ಹಿಂದೆ ತಿಳಿಸಿದಂತೆ ಮಾಡಬೇಕು. ಪೂಜಿಸುವಾಗ ಈ ಹಾಡನ್ನು ಹೇಳಬೇಕು.

ಗುರುಬಸವ ನಾ ನಿನ್ನ ಚರಣವನು ನಂಬಿರುವೆ
ನಿರುತವೂ ಕಾಯೊ ನೀ ಭಕ್ತಜನ ಬಂಧು!
ಕಾರುಣ್ಯ ನಿಧಿ ನೀನು ಭಕ್ತರಿಗೆ ಸುರಧೇನು
ವಾತ್ಸಲ್ಯ-ಮಮತೆಗಳ ಅಮೃತದ ಸಿಂಧು |

ಈ ಇಳೆಯ ಕತ್ತಲೆಯ ತೊಡೆಯಲೆಂದು ಬಂದೆ
ವಿಶ್ವಪ್ರೇಮದ ಬೆಳೆಸ ಬೆಳೆಯಲೈತಂದೆ |
ಇವನಾರು ಇವನಾರು ಎಂಬ ಭೇದವ ಜರಿದು
ಲೋಕವೆನ್ನದು ಎಂದ ವಿಶ್ವಧರ್ಮಿ |

ನಂಬಿದವರಿಗೆ ಇಂಬು ನಿನ್ನ ಹೃನ್ಮಂದಿರ
ಬಾಳ ಪಥಿಕನಿಗದುವೆ ಮಮತೆಯ ಹಂದರ |
ನಿನ್ನ ನಾಮಸ್ಮರಣೆ ಅತಿಮಧುರ ಹೆಚ್ಚೇನು
ಬನ್ನ ತೊಡೆಯುವ ನೀನು ದಿವ್ಯ ಗುರುಭಾನು |

ನಡೆವಾಗ ನುಡಿವಾಗ ಬಸವ ನಿನ್ನ ಸ್ಮರಣೆ
ಕೊಡುವಾಗ ಕೊಂಬಾಗ ತವ ನೆನಹಿನ ಪಾನ |
ಮಂತ್ರಮರುಷನೆ ನಿನ್ನ ಚರಣಾರವಿಂದ
ಸಚ್ಚಿದಾನಂದದ ನೆಲೆಯು ಮುಕ್ತಿಯ ಮನೆಯು

ಬತ್ತಿ ಆರತಿಯನ್ನು ಹಚ್ಚಿ ಮಂಗಲ ಮಾಡಬೇಕು.

ವಿಶ್ವಜ್ಯೋತಿ ಬಸವ

ಜ್ಯೋತಿ ಜಗವ ಬೆಳಗೆ ಬಸವನಾ
ಜ್ಯೋತಿ, ಜಗವ ಬೆಳಗೆ

ಧರ್ಮಾಗಸದಲಿ ನಿಶೆಯು ಕವಿದಿರಲು
ಬಾಲ ರವಿಯೊಲು ಚದುರಿಸ ಬಂದಾ

ಮೂಢ ರೂಢಿಯ ಬಂಧನ ಬಿಗಿದರೆ
ಮುಗ್ಧ ಮಾನವನು ಸಂಕಟ ಪಡುತಿರೆ
ಮರೆವಿನ ತಿಮಿರದಿ ಮುಂದಕೆ ನಡೆಸಲು
ಮಂಗಲ ಮುಂಬೆಳಕಾಗಿ ಬಂದಾ

ಹೆಣ್ಣಿಗೆ ಮಾಯೆಯ ಪಟ್ಟವ ಕಟ್ಟಿ
ಹೆತ್ತೊಡಲನ್ನೇ ಪಾಪಿ ತಾನೆನುತ
ಕೀಳ್ತನದೊರೆಯ ಬೆನ್ನಿಗೆ ಹೇರಿದ
ಪುರುಷರ ಭ್ರಾಂತಿಯ ಬಿಡಿಸುತ ಬಂದಾ

ಮರೆದೊಡೆ ಮಾನವ ಅರಿದೊಡೆ ಶರಣನು
ಮೇಲುಕೀಳೆಂಬ ಭ್ರಾಂತಿಯದೇತಕೆ ?
ಸರ್ವಸಮತೆಯ ಕ್ರಾಂತಿಯ ಸಾರಲು
ದೈವೀ ಕಹಳೆಯ ಮೊಳಗುತ ಬಂದಾ

ಭಾರತ ಜನನಿಯ ಕೀರ್ತಿಯ ಕಂದ
ವಿಶ್ವಾಗಸದ ಚಿನ್ಮಯ ಭಾನು
ಮನುಕುಲ ಸರಸಿಯ ಅಂದದ ಅಂಬುಜೆ
ಸಚ್ಚಿದಾನಂದ ಕಂದ ತಾ ಬಂದಾ.

ಗ್ರಂಥ ಋಣ: ೧) ಶ್ರೀ ಬಸವೇಶ್ವರ ಪೂಜಾವ್ರತ, ಲೇಖಕರು: ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವೇಶ್ವರ ಪೂಜಾವ್ರತ ಅಧ್ಯಾಯ -೨ ಬಸವೇಶ್ವರ ಪೂಜಾವ್ರತ ಅಧ್ಯಾಯ - ೪ Next