ಅನುಭವ ಮಂಟಪ | ಇಷ್ಟಲಿಂಗ ಪೂಜೆ ಮೂರ್ತಿಪೂಜೆ ಅಲ್ಲ |
ಇಷ್ಟಲಿಂಗ-ಚರಲಿಂಗ-ಸ್ಥಾವರಲಿಂಗ |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
ಹಾಲ ಹಿಡಿದು ಬೆಣ್ಣೆಯನರಸಲುಂಟೆ ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ?
ಲಿಂಗದ ಪಾದತೀರ್ಥ ಪ್ರಸಾದವ ಕೊಂಡು
ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ ?
ಇಷ್ಟಲಿಂಗವಿದ್ದಂತೆ ಸ್ಥಾವರ ಲಿಂಗಕ್ಕೆ ಶರಣೆಂದೊಡೆ
ತಡೆಯದೆ ಹುಟ್ಟಿಸುವ ಶ್ವಾನನ ಗರ್ಭದಲ್ಲಿ
ಗುರುಕೊಟ್ಟ ಲಿಂಗದಲ್ಲಿಯೇ ಎಲ್ಲ ತೀರ್ಥಂಗಳು ಎಲ್ಲ ಕ್ಷೇತ್ರಂಗಳು
ಇಹವೆಂದು ಭಾವಿಸಿ ಮುಕ್ತರಪ್ಪುದಯ್ಯಾ.
ಇಂತಲ್ಲದೆ ಗುರುಕೊಟ್ಟ ಲಿಂಗವ ಕಿರಿದು ಮಾಡಿ
ತೀರ್ಥಲಿಂಗವ ಹಿರಿದು ಮಾಡಿ ಹೋದಾತಂಗೆ
ಅಘೋರನರಕ ತಪ್ಪದು ಕಾಣಾ ಚನ್ನಮಲ್ಲಿಕಾರ್ಜುನಾ. - ಅ.ನ. ೧೫೭
ಶರಣರು ಸ್ಥಾವರ ಲಿಂಗಕ್ಕೆರಗುವುದನ್ನು ಮನ್ನಿಸರು. ಅಂಗದ ಮೇಲೆ ಲಿಂಗದೇವನಿರ್ದಂತೆ ಇತರ ಸ್ಥಾವರಲಿಂಗಕ್ಕೆ, ಕ್ಷೇತ್ರ ಲಿಂಗಕ್ಕೆ ಎರಗುವುದನ್ನು ಸೈರಿಸರು. ಏಕೆಂದರೆ ಶರಣರ ಪ್ರಕಾರ ಕಂಕಣಪತಿ ಲಿಂಗವ ಕಿರಿದು ಮಾಡಿ, ಕೊಂಕಣಪತಿ ಲಿಂಗವ ಹಿರಿದು ಮಾಡುವುದು ಸಮಂಜಸವಲ್ಲ. ತನ್ನ ಲಿಂಗವ ಬಿಟ್ಟು ಅನ್ಯಲಿಂಗಕ್ಕೆ ಶರಣೆಂಬುವವರು ಕುನ್ನಿಗಳೇ ಸರಿ ಎಂದು ಅಕ್ಕಮಹಾದೇವಿ ನುಡಿಯುತ್ತಾಳೆ. ಉಡಿಯ ಲಿಂಗವ ಬಿಟ್ಟು ಗುಡಿಯ ಲಿಂಗಕ್ಕೆ ಶರಣೆಂಬ ಗುಡಿಹಿಗಳನ್ನು ಶರಣರು ತಿರಸ್ಕರಿಸುತ್ತಾರೆ.
ಒಟ್ಟಿದ ಮಣ್ಣಿಗೂ ನೆಟ್ಟಿದ್ದ ಕಲ್ಲಿಗೂ
ಕಟ್ಟಿದ್ದ ಲಿಂಗವಡಿಯೋಗಿ ಬೀಳುವ
ಲೊಟ್ಟೆ ಗುಡಿಹಿಗಳನೇನೆಂಬೆನಯ್ಯಾ ಕಲಿದೇವರದೇವಾ
?
ಸ್ಥಾವರಲಿಂಗಕ್ಕೆ ಬಾಗಿ ನಮಸ್ಕಾರ ಮಾಡುವಾಗ ಕಟ್ಟಿದ್ದ ಇಷ್ಟಲಿಂಗವು ಕೆಳಗಾಗುವುದು. ಆಗ ಸ್ಥಾವರವೇ ಹೆಚ್ಚಾಗಿ ಈ ಮೂಢ ಭಕ್ತನ ಭಾವನೆಯಲ್ಲಿ ಇಷ್ಟಲಿಂಗವು ಕಡಿಮೆಯೋಗುವುದು. ಗುರುವು ಇಷ್ಟಲಿಂಗವನ್ನು ಮಹಾ ಪತಿಯನ್ನಾಗಿ ಕೊಟ್ಟಿರುವನು. ಪತಿವೃತೆ ತನ್ನ ಕೈವಿಡಿದ ಪತಿಯನ್ನಲ್ಲದೇ ಮನದಲ್ಲಿ ಪರಪುರುಷನಿಗೆಳೆಸಿದರೂ ಪಾತಿವ್ರತ್ಯಕ್ಕೆ ಕುಂದು ಬರುವುದು. ಹಾಗೆಯೇ ಶರಣಸತಿಯು ಲಿಂಗಪತಿಯಲ್ಲಿ ಅಷ್ಟೇ ಪಾತಿವ್ರತ್ಯದಿಂದಿರಬೇಕು. ಗುರುದೇವನು ಲಿಂಗವನ್ನು ಅಗಲದಂತೆ ಅನವರತ ಅಂಗದಲ್ಲಿ ಸ್ಥಾಪಿಸಿರುವಾಗ ಅದರ ಮರ್ಮವನ್ನರಿಯದೆ ಭೂಮಿಯಲ್ಲಿ ಸ್ಥಾಪಿಸಿದ ಅನ್ಯದೈವಕ್ಕೆ ಎರಗಿದರೆಂತು ?
ಲಿಂಗಭಕ್ತನಾದ ಬಳಿಕ ತನ್ನಂಗದಲಿ ಧರಿಸಿರ್ಪ
ಲಿಂಗಪೂಜೆ ಒಂದನಲ್ಲದೆ ಅನ್ಯವರಿಯದಿರಬೇಕು
;
ಆ ಲಿಂಗದಲ್ಲಿ ನೈಷ್ಠಿ ಕಭಾವ ಇಂಬುಗೊಂಡಿರಬೇಕು,
ಆ ಲಿಂಗವೆ ಪತಿ, ತಾನೆ ಸತಿಯೆಂಬ ದೃಢಬುದ್ದಿ ನಿಶ್ಚಯವಾಗಿರಬೇಕು.
ಹೀಗಲ್ಲದೆ ತನ್ನ ದೇಹದ ಮೇಲೆ ಇರುತಿರ್ಪ ಲಿಂಗವ
ಸಾಮಾನ್ಯವ ಮಾಡಿ ಕಂಡಕಂಡ ದೇಗುಲದೊಳಗಣ ಕಲ್ಲ
ದೇವರೆಂದು ಭಾವಿಸಿ ಪೂಜಿಸುವ ಗಾವಿಲ ಮೂಳ
ಹೊಲೆಯರ ಮುಖವ ನೋಡಲಾಗದಯ್ಯಾ ಅಖಂಡೇಶ್ವರ ! -ಷ.ವ. ೨೯೪
ಅಂಗದ ಮೇಲಣ ಲಿಂಗವ ಹಿಂಗಿ :
ಸ್ಥಾವರಲಿಂಗಕ್ಕೆರಗುವ ಭಂಗಿತರ ಮುಖವ ನೋಡಲಾಗದು,
ಅದೆಂತೆಂದೊಡೆ ತನ್ನ ಗಂಡನ ಬಿಟ್ಟು ಅನ್ಯಗಂಡರಿಗೆರಗುವ
…… ………. …… … …... ..... ಗುಹೇಶ್ವರಾ ! -ಅ.ವ. ೯೯೨
ಮೆಟ್ಟಿದಾ ಕಲ್ಲಿಗೆ ಬುಟ್ಟಿ ಪತ್ರೆಯ ಹಾಕಿ
ಕಟ್ಟಿದಾಲಿಂಗ ವಡಿಮಾಡಿ ಶರಣೆಂಬ
ಭ್ರಷ್ಟನವ ಕಾಗೋ ಸರ್ವಜ್ಞ ||
ಈ ಮುಂತಾದ ವಚನಗಳಲ್ಲಿ ಕಟ್ಟಿದ ಲಿಂಗವನ್ನು ಉದಾಸೀನಿಸಿ ಬೆಟ್ಟದ ಲಿಂಗಕ್ಕೆ ಮನ್ನಣೆ ಕೊಡುವುದು ಲಿಂಗವಂತ ಧರ್ಮಕ್ಕೆ ದ್ರೋಹ ಎಂಬ ಭಾವ ವ್ಯಕ್ತವಾಗಿದೆ. ಅಂತೆಯೇ ಶರಣರು ಮೂರ್ತಿಪೂಜೆ, ಮಂಟಪಪೂಜೆ, ಗಣಪತಿ ಪೂಜೆ ಮುಂತಾದುವನ್ನು ತತ್ವದ್ರೋಹವೆನ್ನುತ್ತಾರೆ. ಶರಣರು ಶೈವರ ಶಿವನನ್ನು , ಗಂಗೆಗೌರಿ ವಲ್ಲಭ, ಸ್ಮಶಾನವಾಸಿಯನ್ನು ಪೂಜಿಸರು. ಅವರು ನಿರಾಕಾರ ಪರಶಿವನನ್ನು ಆರಾಧ್ಯವಾಗಿಟ್ಟುಕೊಂಡಿದ್ದಾರೆ. ಲಿಂಗಾಯತ ಧರ್ಮವು ಪೌರಾಣಿಕ ಶಿವನನ್ನು ಪೂಜಿಸಲು ಹೇಳುವುದು ಎಂದು ತಿಳಿಯುವವರಿಗೆ ಪ್ರಭುದೇವರು ಹೀಗೆ ವಿವರಣೆ ಕೊಡುತ್ತಾರೆ :
ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೀಶ್ವರನು,
ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು.
ಪೃಥ್ವಿಯೇ ಪೀಠ; ಆಕಾಶವೇ ಲಿಂಗ-ಅಂಥಾತನೊಬ್ಬ ಗಣೇಶ್ವರನು
ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು,
ಕಾಮದಹನವ ಮಾಡಿದಾತನೊಬ್ಬ ಗಣೇಶ್ವರನು.
ಬ್ರಹ್ಮ ಕಪಾಲ, ವಿಷ್ಣು ಕಂಕಾಳವನಿಕ್ಕಿ ಆಡುವಲ್ಲಿ
ನೀಲಕಂಠನೆಂಬಾತನೊಬ್ಬ ಗಣೇಶ್ವರನು: ಇವರೆಲ್ಲರು
ನಮ್ಮ ಗುಹೇಶ್ವರ ಲಿಂಗದಲ್ಲಿ ಅಡಗಿಪ್ಪರು ! -ಅ.ವ. ೫೧೨
ಶರಣರ ಕೆಲವು ವಚನಗಳನ್ನು ನೋಡಿದಾಗ ಶೈವರ ಶಿವನ ಕುರುಹಾದ ಸ್ಥಾವರಲಿಂಗವನ್ನೇ ಇವರೂ ಪೂಜಿಸಿದ್ದಾರೆಂಬ ಕಲ್ಪನೆ ಬರುವುದು. ಇದರರ್ಥ ಶರಣರು ಗಂಗಾಧರ ಶಿವನನ್ನು ದೇವರೆಂದು ಮನ್ನಿಸುತ್ತಾರೆಂದಲ್ಲ ! ಆಗ ಶೈವ ಧರ್ಮದ ಪ್ರಭಾವ ಉತ್ಕಟವಾಗಿತ್ತು, ಮಾತ್ರವಲ್ಲ ಬಸವಣ್ಣನವರು, ಅಕ್ಕಮಹಾದೇವಿ ಮುಂತಾದವರೆಲ್ಲ ಹುಟ್ಟಿದ್ದು ಶಿವೋಪಾಸಕರ ಮನೆತನಗಳಲ್ಲೇ. ಮುಂದೆ ಬಸವಣ್ಣನವರ ಸ್ವತಂತ್ರ ಕೊಡುಗೆಯಾಗಿ, ಅವರ ಸ್ವಾನುಭವ ಚಿಂತನೆಯ ಫಲವಾಗಿ ಇಷ್ಟಲಿಂಗವು ರೂಪುಗೊಂಡು, ಅದನ್ನೇ ಕೇಂದ್ರವಾಗಿಟ್ಟುಕೊಂಡು ಸಮಾಜವು ಸಂಘಟಿತವಾಯಿತು. ಅನುಭವ ಮಂಟಪದಲ್ಲಿ ರೂಪುಗೊಂಡ ವಚನ ಸಾಹಿತ್ಯ ಈ ಧರ್ಮದ ಸಂವಿಧಾನವನ್ನು ಸ್ಪಷ್ಟವಾಗಿ ಕೊಟ್ಟಿತು. ಆದರೆ ಅದಕ್ಕೆ ಮೊದಲು ಎಲ್ಲ ಶರಣರ ಸಾಧಕಾವಸ್ಥೆಯಲ್ಲಿ ಶೈವ ಉಪಾಸನೆಯ ಛಾಯೆ ಮೂಡಿರುವುದು ಕಂಡುಬರುತ್ತದೆ. ಅದಕ್ಕೆ ಸಾಕ್ಷಿಯಾಗಿಯೇ ಪ್ರಭುದೇವರ ಈ ವಚನವಿದೆ. ರುದ್ರ, ಭದ್ರ, ಶಂಕರ, ಶಶಿಧರ, ಕಾಮಾರಿ, ನೀಲಕಂಠ ಇವರೆಲ್ಲರೂ ಅನೇಕ ಗಣಾಧೀಶ್ವರರು. ದೈವಾಂಶವನ್ನು ಅಂಗದಲ್ಲಿ ಇಳಿಸಿಕೊಂಡವರು. ಆದರೆ ಅವರೇ ಪೂಜಾರ್ಹ ದೇವರಲ್ಲ; ಪರಾತ್ಪರ ವಸ್ತುವಿನ ಒಂದಂಶಜರು ಮಾತ್ರ. ಇದಕ್ಕೆ ಇನ್ನೂ ಒಂದು ವಚನದ ಸಮರ್ಥನೆ ಕೊಡಬಹುದು.
ಶೈವರು ಕಟ್ಟಿದ ಗುಡಿಯ ಹೊಗಲೇಕೆ ?
ಶೈವರು ನೆಟ್ಟ ಲಿಂಗವ ಮುಟ್ಟಿ ಪೂಜಿಸಲೇಕೆ ?....
ತನ್ನ ಗುರುವು ಕೊಟ್ಟ ಇಷ್ಟಲಿಂಗ ಕೊಡಲರಿಯದೆಂದು
ನೆಟ್ಟಿದ್ದ ಲಿಂಗ ಕೊಟ್ಟಿತೆಂಬ ಬೊಟ್ಟಿಗಳ ನೋಡಿ
ಹೊಟ್ಟೆ ಹುಣ್ಣಾಗುವಂತೆ ನಗುತಿದ್ದೆ ನಯಾ ........
ಕೈಯಲ್ಲಿ ಹಣ್ಣಿದ್ದಂತೆ ಮರವನೇರಿ ಕೊಂಬೆಯ ಬಾಗಿಸಿ
ಕಾಯ ಕೊಯ್ದ ಅರೆ ಮರುಳನಂತೆ, ಅನಾದಿ ಮೂಲದೊಡೆಯ
ತನ್ನ ಕರಸ್ಥಲ ಮನಸ್ಥಲದಲ್ಲಿಪ್ಪುದ ತಾನರಿಯದೆ,
ಬೇರೆ ಲಿಂಗ ಉಂಟು, ಬೇರೆ ಕ್ಷೇತ್ರ ಉಂಟು ಎಂದು
ಹಲವು ಲಿಂಗಕ್ಕೆ ಹರಿದು ಹಂಬಲಿಸುವ ಮೂರ್ಖರಿಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲ,
ಮುಕ್ತಿ ಎಂಬುದು ಎಂದೆಂದಿಗೂ ಇಲ್ಲ ಕಾಣಾ.
ಮಹಾಲಿಂಗ ಗುರುಶಿವ ಸಿದ್ದೇಶ್ವರ ಪ್ರಭುವೇ. -ತೊ.ಸಿ.ವ. ೨೬೭
ಹೀಗೆ ಮಹಾದಾನಿಯನ್ನು ಸಮೀಪದಲ್ಲಿಟ್ಟುಕೊಂಡು ಹಲವಕ್ಕೆ ಹಂಬಲಿಸಲಾಗದು. ಕರದೊಳಗಮೃತ ಸಮಾನವಾದ ಫಲವಿದ್ದಾಗ ತಿಂಬುವುದನ್ನು ಬಿಟ್ಟು ಮರವನ್ನೇರಿ ಕಸುಕಾಯ್ತಾಗಿ ವೃಥಾ ಕಷ್ಟಪಟ್ಟಂತೆತನ್ನೊಳಗೆ ಚಿಚೈತನ್ಯ, ಲಿಂಗಫಲ, ಮಹಾಕ್ಷೇತ್ರವಿರುವಾಗ ಬಾಹ್ಯದಲ್ಲಿ ಹಂಬಲಿಸುತ್ತಾರೆ. ಹಾಲ ಹಿಡಿದು ಬೆಣ್ಣಿಗೆ ತಿರುಗುವುದು, ಇಷ್ಟಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಬಸವಳಿಯುವುದು ಮೂರ್ಖತನವೇ ಸರಿ. "ಇಷ್ಟಲಿಂಗ - ಸ್ಥಾವರಲಿಂಗಗಳಲ್ಲಿ ವ್ಯತ್ಯಾಸವೇನಿಲ್ಲ. ಅಂಗಳದಲ್ಲಿ ಪೂಜೆಗೊಳ್ಳುತ್ತಿದ್ದ ಲಿಂಗವು ಸ್ಥಾವರವಾದರೆ, ಅದೇ ಅಂಗದ ಮೇಲೆ ಬಂದಾಗ ಇಷ್ಟಲಿಂಗವೆನಿಸುವುದು. ಅವು ಪರಸ್ಪರ ವಿರೋಧಾಭಾಸವಲ್ಲ" ಎಂದು ಹೇಳುವ ಲಿಂಗಾಯತ ಮಠಾಧೀಶರು, ವಿದ್ವಾಂಸರು ಉಂಟು. ಅವೆರಡೂ ಅರ್ಥವ್ಯಾಪ್ತಿಯಲ್ಲಿ ಪರಸ್ಪರ ವಿರುದ್ಧವಾಗಿಲ್ಲದಿದ್ದರೆ ಶರಣರು ಉಗ್ರವಾಗಿ ಖಂಡಿಸುತ್ತಿದ್ದರೇಕೆ ? ಆದ್ದರಿಂದ ಸ್ಥಾವರಲಿಂಗ, ಇಷ್ಟಲಿಂಗಗಳ ವ್ಯತ್ಯಾಸ ತಿಳಿಯುವುದು ತುಂಬ ಅವಶ್ಯಕವಿದೆ.
ಇದೇ ಸನ್ನಿವೇಶದಲ್ಲಿ ಚರಲಿಂಗದ ವಿಷಯವನ್ನೂ ಪ್ರಸ್ತಾಪಿಸುವೆ. ಬಸವ ಪ್ರತಿಪಾದಿತ ಧರ್ಮವು ಸ್ಥಾವರಲಿಂಗಪೂಜೆ, ಚರಲಿಂಗ ಪೂಜೆ ಯಾವುವನ್ನೂ ಮನ್ನಿಸದೆ ಕೇವಲ ಇಷ್ಟಲಿಂಗ ಪೂಜೆಯನ್ನು ಮಾತ್ರ ಪ್ರತಿಪಾದಿಸುತ್ತದೆ. ಶಿವದೇವಾಲಯಗಳಲ್ಲಿ ಪ್ರತಿಷ್ಟಾಪಿತವಾದುದು ಸ್ಥಾವರಲಿಂಗವೆಂದು; ಅದೇ ಆಕಾರದ ಎತ್ತಿಕೊಂಡು ಹೋಗಲಿಕ್ಕೆ ಬರುವಂತಹ, ಶೈವ ಪಂಥಗಳಲ್ಲಿ ಕೆಲವರು ಧರಿಸಿಕೊಳ್ಳುತ್ತಿದ್ದ ಸ್ಥಾವರಲಿಂಗದ ಚುಳುಕಾದ ರೂಪ ಹೊಂದಿರುವುದು ಚರಲಿಂಗವೆಂದೂ, ಗೋಳಾಕಾರದ ಕಪ್ಪುಬಣ್ಣದ ಕಂತೆಯ ಆವರಣವನ್ನು ಹೊಂದಿರುವುದು
ಇಷ್ಟಲಿಂಗವೆಂದೂ ಸರಿಯಾಗಿ ಮನದಟ್ಟು ಮಾಡಿಕೊಂಡು ಅವುಗಳ ಪರಸ್ಪರ ವ್ಯತ್ಯಾಸವನ್ನು ಅರಿಯೋಣ.
ಸ್ಥಾವರಲಿಂಗ | ಚರಲಿಂಗ | ಇಷ್ಟಲಿಂಗ |
---|---|---|
ಪೌರಾಣಿಕ ಶಿವನ ಕುರುಹು (Symbol of Shiva ) | ಪೌರಾಣಿಕ ಶಿವನ ಕುರುಹು (Symbol of Shiva ) | ಸೃಷ್ಟಿಕರ್ತನ ಕುರುಹು (ದೇವನ ಕುರುಹು) |
೧. ಶೈವರ ಉಪಾಸ್ಯ ವಸ್ತು | ೧. ಕೆಲವೇ ಶೈವ ಪಂಥೀಯರ ಉಪಾಸ್ಯ ವಸ್ತು | ೧. ಲಿಂಗಾಯತ ಧರ್ಮಿಯರ ಉಪಾಸ್ಯ ವಸ್ತು |
೨. ದೇವಾಲಯ ಮಂದಿರಗಳಲ್ಲಿ ಸ್ಥಾಪಿಸಲ್ಪಟ್ಟಿರುತ್ತದೆ. | ೨. ಒಂದು ಜಾಗದಲ್ಲಿ ಸ್ಥಾಪಿಸಲ್ಪಟ್ಟಿರುವುದಿಲ್ಲ, ಅಂಗದ ಮೇಲೆ ಧರಿಸಿಕೊಂಡೂ ಅಥವಾ ಸಾಮಗ್ರಿಗಳೊಡನೆ ಇಟ್ಟುಕೊಂಡು ಒಯ್ಯುವಂತಹದು. | ೨. ದೇಹದ ಮೇಲೆಯೇ ಧರಿಸಲ್ಪಡಬೇಕಾದ ವಸ್ತುವು, ದೀಕ್ಷಾನಂತರ ಇಷ್ಟಲಿಂಗದ ಮತ್ತು ಭಕ್ತನದು ಅಗಲಲಾರದ ಸಂಬಂಧ. |
೩. ಐತಿಹಾಸಿಕ ಮಹಾಯೋಗಿ ಶಿವನ ಸಾಕಾರ; ಮಾನವ ದೇಹದಾಕಾರದಲ್ಲಿ ಸಾಕಾರ. | ೩. ಐತಿಹಾಸಿಕ ಮಹಾಯೋಗಿ ಶಿವನ ಸಾಕಾರ; ಮಾನವ ದೇಹದಾಕಾರದಲ್ಲಿ ಸಾಕಾರ. | ೩. ನಿರಾಕಾರ ನಿರವಯನಾದ ಪರಮಾತ್ಮನ ಸಾಕಾರ; ಗೋಲಾಕಾರದ ವಿಶ್ವದ ಆಕಾರದಲ್ಲಿ ಸಾಕಾರ. |
೪. ಪ್ರತೀಕೋಪಾಸನೆ | ೪. ಪ್ರತೀಕೋಪಾಸನೆ | ೪. ಅಹಂಗ್ರಹೋಪಾಸನೆ |
೫. ಭಿನ್ನ ಭಾವನೆಯಿಂದ ಪೂಜೆ | ೫. ಭಿನ್ನ ಭಾವನೆಯಿಂದ ಪೂಜೆ | ೫. ಅಭಿನ್ನ ಭಾವನೆಯಿಂದ ಪೂಜೆ |
೬. ಯೋಗಕ್ಕೆ ಸಹಕಾರಿಯಲ್ಲ ಕೇವಲ ಭಕ್ತಿ ತೃಪ್ತಿಯ ಸಾಧನ. | ೬. ಯೋಗಕ್ಕೆ ಸಹಕಾರಿಯಲ್ಲ ಕೇವಲ ಭಕ್ತಿ ತೃಪ್ತಿಯ ಸಾಧನ. | ೬. ಲಿಂಗಾಂಗ ಯೋಗ ತ್ರಾಟಕ ಯೋಗಗಳಿಗೆ ಪ್ರಮುಖ ಸಾಧನ. |
೭. ಸಾರ್ವತ್ರಿಕ ಉಪಾಸನಾ ವಸ್ತು. | ೭. ಕೌಟುಂಬಿಕ ಉಪಾಸನಾ ವಸ್ತುವಿರಬಹುದು. ಇಲ್ಲವೇ ವೈಯುಕ್ತಿಕವೂ ಇರಬಹುದು. | ೭. ವೈಯುಕ್ತಿಕ ಉಪಾಸನಾ ವಸ್ತು. |
೮. ದೀಕ್ಷೆಯನ್ನು ಪಡೆದೇನೂ ಪೂಜಿಸುವುದಿಲ್ಲ | ೮. ಕೆಲವೊಮ್ಮೆ ಮಂತ್ರೋಪದೇಶ ಹೊಂದಿ ಪಡೆದಿರಲು ಸಾಧ್ಯ | ೮. ಗುರುವು ದೀಕ್ಷಾನಂತರ ಇಷ್ಟಲಿಂಗಕ್ಕೆ ಚಿತ್ಕಳೆ ತುಂಬಿ ದಯಪಾಲಿಸುತ್ತಾನೆ. |
೯. ಪೂಜಾರಿಯ ಮಧ್ಯಸ್ಥಿಕೆಗೆ ಅವಕಾಶವಿದೆ. ಅವನು ಪೂಜಿಸುತ್ತಾನೆ ಭಕ್ತನು ದರ್ಶನ ಪಡೆಯುತ್ತಾನೆ. | ೯. ಪೂಜಾರಿಯ ಮಧ್ಯಸ್ಥಿಕೆಗೆ ಅವಕಾಶವಿಲ್ಲ. | ೯. ಪೂಜಾರಿಯ ಮಧ್ಯಸ್ಥಿಕೆಗೆ ಅವಕಾಶ ಇಲ್ಲವೇ ಇಲ್ಲ. |
೧೦. ಅಹ್ವಾನ-ವಿಸರ್ಜನೆಗೆ ಅವಕಾಶವಿದೆ | ೧೦. ಅಹ್ವಾನ-ವಿಸರ್ಜನೆಗೆ ಅವಕಾಶವಿದೆ | ೧೦. ಅಹ್ವಾನ-ವಿಸರ್ಜನೆಗೆ ಅವಕಾಶವಿಲ್ಲ. |
೧೧. ಏಕಾಂತದಲ್ಲಿ ಕುಳಿತು ಮನ ಬಂದಷ್ಟು ಕಾಲ ಪೂಜೆ ಮಾಡಲು ಅವಕಾಶವಿಲ್ಲ. ದೇವಾಲಯಕ್ಕೆ ಹೋಗಿ ಪೂಜಿಸಬೇಕು. (ಗೋಪುರ ಗಡಿಯಾರದಂತೆ). | ೧೧. ಮನೆಯಲ್ಲಿ ಕುಳಿತು ಮನ ಬಂದಷ್ಟು ಕಾಲ ಪೂಜೆ ಪೂಜಿಸಬಹುದಾದರೂ ಯೋಗ ಸಾಧನೆಗೆ ಅನುಕೂಲವಿಲ್ಲ. (ಗೋಡೆ ಗಡಿಯಾರದಂತೆ). | ೧೧. ಮನೆಯಲ್ಲಿ ಕುಳಿತು ಏಕಾಂತವಾಗಿ ಎಷ್ಟಾದರೂ ಪೂಜಿಸಬಹುದು, ಯೋಗಾಭ್ಯಾಸಕ್ಕೂ ಸಹಕಾರಿ (ಕೈ ಗಡಿಯಾರದಂತೆ). |
೧೨. ಸಾಮಾಜಿಕ ಸಮಾನತೆಯನ್ನು ಸ್ಥಾಪಿಸಲು ಸಹಕಾರಿಯಲ್ಲ. | ೧೨. ಸಾಮಾಜಿಕ ಸಮಾನತೆಯನ್ನು ಸ್ಥಾಪಿಸಲು ಸಹಕಾರಿಯಲ್ಲ. | ೧೨. ಸಾಮಾಜಿಕ ಸಮಾನತೆಯ ಸ್ಥಾಪಿನೆಗೆ ಪ್ರಮುಖ ಕುರುಹು. |
೧. ಮೊಟ್ಟ ಮೊದಲನೆಯದಾಗಿ ಸ್ಥಾವರಲಿಂಗವು ಶೈವರ ಉಪಾಸ್ಯ ವಸ್ತು ಅಂಗದ ಮೇಲೆ ಲಿಂಗವಿಲ್ಲದವರ ಆರಾಧ್ಯ ಮೂರ್ತಿಯು. ಅದೇ ರೀತಿ ಚರಲಿಂಗವೂ ಸಹ ಕೆಲವು ಶೈವ ಪಂಥೀಯರ ಉಪಾಸ್ಯವಸ್ತು. ಇಷ್ಟಲಿಂಗವು ಲಿಂಗಾಂಗಿಗಳ ಆರಾಧ್ಯವಸ್ತು, ಉಪಾಸ್ಯ ಲಾಂಛನವು..
೨. ಲಿಂಗವಂತನ ಅಂಗದ ಮೇಲೆ ಸರ್ವಕಾಲದಲ್ಲಿ ಜಾಗ್ರತ್ ಸ್ವಪ್ನ ಸುಷುಪ್ತಿ, ಜನನ-ಮರಣ ಕಾಲದಲ್ಲೂ ಎಡವಿಡದೆ ಲಿಂಗದೇವನಿಗೆ ಸ್ಥಾನವಿದೆ. ತಾಯಿಯ ಗರ್ಭದಲ್ಲಿ ಕೂಸು ಎಂಟು ತಿಂಗಳಲ್ಲಿರುವಾಗ ಗರ್ಭಕ್ಕೆ ಲಿಂಗ ಸಂಸ್ಕಾರ ಕೊಡಲಾಗುವುದು; ಆದ್ದರಿಂದ ಹುಟ್ಟುವಾಗಲೇ ಲಿಂಗದೊಡನೆ ಮಗು ಹುಟ್ಟಿರುತ್ತದೆ. ಸಾಯುವಾಗ ಬಾಯಾಳಗೆ ಲಿಂಗವಿಕ್ಕಿ ಹುಗಿಯುವರು. ಹೀಗೆ ಲಿಂಗದಲ್ಲೇ ಹುಟ್ಟಿ, ಲಿಂಗದಲ್ಲೇ ಬೆಳೆದು, ಲಿಂಗದಲ್ಲೇ ಶರಣರು ಲಯವಾಗುವರೆಂಬ ಭಾವವಿದೆ. ಆದರೆ ಶೈವರ ಸ್ಥಾವರಲಿಂಗವು ಅಂಗದಿಂದ ಭಿನ್ನವಾಗಿ ಮಂದಿರ, ಮಠಗಳಲ್ಲಿ ಸ್ಥಾಪಿಸಲ್ಪಟ್ಟಿರುತ್ತದೆ. ಚರಲಿಂಗವು ಪೂಜಾಗೃಹದಲ್ಲಿ ಇಡಲ್ಪಟ್ಟಿರುತ್ತದೆ.
ಹೀಗಾಗಿ ಇಷ್ಟಲಿಂಗಕ್ಕೆ ಚೇತನಾತ್ಮಕವಾದ ದೇಹವೇ ದೇವಾಲಯವಾದರೆ, ಸ್ಥಾವರ ಲಿಂಗ-ಚರಲಿಂಗಗಳಿಗೆ ಅಚೇತನಾತ್ಮಕ ಗುಡಿ, ಪೂಜಾ ಗೃಹಗಳೇ ಆಲಯಗಳು.
೩. ನಿರಾಕಾರ ನಿರಂಜನನಾದ ಪರಮಾತ್ಮನ ಸಾಕಾರ ಈ ವಿಶ್ವವು. ಈ ಗೋಲಾಕಾರ ವಿಶ್ವದ ಪ್ರತೀಕವಾಗಿಯೇ ಚುಳುಕಾದ ಚಿನ್ಮಯ ಇಷ್ಟಲಿಂಗವು ಗೋಲಾಕಾರವಾಗಿರುವುದು. ಸ್ಥಾವರಲಿಂಗವು ಶಿವನ ಚಿಹ್ನೆಯಾಗಿದೆ, ಅದರಂತೆ ಚರಲಿಂಗವೂ ಸಹ. ಇಷ್ಟಲಿಂಗವು ವಿಶ್ವದ ಗೋಳಾಕಾರದಲ್ಲಿ ಸಾಕಾರಗೊಂಡಿದ್ದರೆ ಸ್ಥಾವರಲಿಂಗವು ಮಾನವದೇಹದ
ಆಕಾರದಲ್ಲಿ ಸಾಕಾರ ಗೊಂಡಿದೆ.
೪. ಇಷ್ಟಲಿಂಗ ಪೂಜೆಯು ಅಹಂಗ್ರಹೋಪಾಸನೆಯು; 'ತನ್ನ' ಪೂಜೆಯು, ಇಷ್ಟಲಿಂಗದ ಕಂಥೆಯಾಳಗಣ ಹುಟ್ಟು ಲಿಂಗವು ಆತ್ಮನ ಕುರುಹು, ಆತ್ಮನ ಕುರುಹಾದ ಇಷ್ಟಲಿಂಗವು ಪಿಂಡಾಂಡದ ಆಕಾರದಲ್ಲಿ ಸಾಕಾರವಾಗಿದೆ; ಇದು ಶಾಂಭವೀ ಮುದ್ದೆಯ ಆಕಾರದಲ್ಲಿ ಸಾಕಾರವಾಗಿದೆ. ಶಾಂಭವೀ ಮುದ್ರೆಯೆಂದರೆ ಲಿಂಗಪೂಜೆಗೆ ಕುಳಿತಾಗ ಶರಣನು ವಾಮಕರದಿ ಲಿಂಗವ ಪಿಡಿದು ಪೂಜಿಸುವ ಭಾವ. ಆ ಶರಣನ ಪದ್ಮಾಸನವೇ ಪೀಠವಾಗಿ, ಅವನ ಶಿರವೇ ಗೋಲಕವಾಗಿ, ಮುಂದೆ ಚಾಚಿದ ಲಿಂಗವ ಹಿಡಿದ ವಾಮಕರವೇ ಗೋಮುಖ (ಜಲಹರಿ) ವಾಗಿ, ಕಾಣುವುದರಿಂದ ಈ ಪಿಂಡಾಂಡದ (ಶರಣನ ಶಾಂಭವಿ ಮುದ್ರೆಯ) ಆಕಾರದಲ್ಲಿ ಪಂಚಸೂತ್ರಲಿಂಗ (ಹುಟ್ಟು ಲಿಂಗ) ವನ್ನು ರಚಿಸುತ್ತಾರೆ. ಮೇಲಿನ ಕಂಥೆಯ ಬ್ರಹ್ಮಾಂಡದ ಸಾಕಾರದಲ್ಲಿ ಇಂಬಿಟ್ಟು ಒಂದೇ ಇಷ್ಟಲಿಂಗವನ್ನಾಗಿ ರೂಪಿಸಿದ್ದಾರೆ. ದೇವನಲ್ಲಿ ಜೀವಾತ್ಮನು ಅಡಗಿರುವಂತೆ, ಬಾಹ್ಯಲಿಂಗದಲ್ಲಿ (ಗೋಲಾಕಾರದ ಕಂಥೆಯ ಕವಚ) ದಲ್ಲಿ ಅಂತರ್ಲಿಂಗ (ಪಂಚಸೂತ್ರಲಿಂಗ) ವನ್ನಿಂಬಿಟ್ಟು ಒಂದೇ ಇಷ್ಟಲಿಂಗವೆಂಬ ಸಾಕಾರ ಕಲ್ಪಿಸಿ ಕೊಂಡಿದ್ದಾರೆ.
ಎನ್ನ ಕರಸ್ಥಲದ ಮಧ್ಯದಲ್ಲಿ ಪರಮ ನಿರಂಜನದ ಕುರುಹು ತೋರಿದ;
ಆ ಕುರುಹಿನ ಮಧ್ಯದಲ್ಲಿ ಅರುಹಿನ ಕಳೆಯ ತೋರಿದ;
ಆ ಕುರ ಆ ಕಳೆಯ ಮಧ್ಯದಲ್ಲಿ ಮಹಾಜ್ಞಾನದ ಬೆಳಗೆ ತೋರಿದ
ಆ ಬೆಳಗಿನ ನಿಲುವಿನೊಳಗೆ ಎನ್ನ ತೋರಿದ
ಎನ್ನೊಳಗೆ ತನ್ನ ತೋರಿದ;
'ತನ್ನೊಳಗೆ ಎನ್ನ ನಿಂಬಿಟ್ಟು ಕೊಂಡ ಮಹಾಗುರುವಿಗೆ
ನಮೋ ನಮೋ ಎನುತಿರ್ದೆನಯ್ಯಾ ಅಖಂಡೇಶ್ವರಾ.'
-ಷ.ವ. ೫೬
ಬ್ರಹ್ಮಾಂಡ ಚೈತನ್ಯ ಶಿವನಲ್ಲಿ, ಪಿಂಡಾಂಡ ಚೈತನ್ಯ ಶರಣನು ಇಂಬಿಡಲ್ಪಟ್ಟಿರುವುದರಿಂದ ಪರಶಿವನ ಕುರುಹಾದ ಬಾಹ್ಯಲಿಂಗದಲ್ಲಿ ಶರಣನ ಕುರುಹಾದ ಪಂಚಸೂತ್ರ ಲಿಂಗವು ಇಂಬಿಡಲ್ಪಟ್ಟಿದೆ. ಅವೆರಡನ್ನೂ ಒಂದರಲ್ಲಿ ಇನ್ನೊಂದನ್ನಿಟ್ಟು ಒಂದೇ ಚಿತ್ಕಾಂತಿಯುತ ಸಾಕಾರರೂಪು ರಚಿಸಿ ಕರಕಮಲದಲ್ಲಿ, ಉರಸಜ್ಜೆಯಲ್ಲಿ ಇಷ್ಟಲಿಂಗವಾಗಿ ಧರಿಸಿ ನಾನು-ನೀನು ಒಂದೇ ಎಂಬ ಶಿವಾದ್ವತ ಭಾವನೆಯಿಂದ ಅದನ್ನು, ಶರಣನು ನಿತ್ಯವೂ ಪೂಜಿಸುತ್ತಾನೆ. ಆದ್ದರಿಂದ "ಪಿಂಡ ಬ್ರಹ್ಮಾಂಡಯಾಲೈಕ್ಯಂ" ಎಂಬ ಶುತಿ ವಾಕ್ಯವನ್ನು ವಾಸ್ತವವಾಗಿ ಹಸ್ತಗತಮಾಡಿಕೊಂಡವರು ಲಿಂಗವಂತರು. ಹೀಗೆ 'ತನ್ನ' ಪೂಜೆಯಾದ ಕಾರಣ ಲಿಂಗಪೂಜೆ ಅಹಂಗ್ರಹೋಪಾಸನೆ. ಸ್ಥಾವರ ಮತ್ತು ಚರ ಲಿಂಗೊಪಾಸನೆಗಳು ತನ್ನ ಬಿಟ್ಟು ಅನ್ಯವಾದುದೆಂದು ದೇವರನ್ನು ಭಿನ್ನ ಭಾವದಲ್ಲಿ ಪೂಜಿಸುತ್ತವೆ. ಸ್ಥಾವರಲಿಂಗದ ಆಕಾರವು ತಪಸ್ವಿ ಶಿವನ ಸಾಕಾರವಾಗಿದೆ.
೫. ಇಷ್ಟಲಿಂಗದ ಅನುಸಂಧಾನದಿಂದ ಸಾಮರಸ್ಯ, ಸಾಮರಸ್ಯದಿಂದ ತೃಪ್ತಿಯು ಸಮನಿಸುವುದು. ಸ್ವಾವರ ಮತ್ತು ಚರಲಿಂಗ ಪೂಜೆಯಲ್ಲಿ ಲಿಂಗಅಂಗ ಸಮರಸಕ್ಕೆ ಅವಕಾಶವಿಲ್ಲ; ಇಷ್ಟಲಿಂಗವು ಕರ ಕಂಜದಲ್ಲಿ ವಿರಾಜಿಸುತ್ತಿರುವಾಗ, ಪೂಜಿಸುವ ಭಕ್ತನು ಸಾಮರಸ್ಯ ಸ್ಥಿತಿಯಲ್ಲಿರುವಾಗ 'ಎನ್ನೊಳಗೆ ನೀನು ಲಿಂಗಯ್ಯಾ, ನಿನ್ನೊಳಗೇ ನಾನು' ಎಂದು ಭಿನ್ನ ಭಾವ ಮರೆತು ಹಾಡುತ್ತಾನೆ. ಸ್ಥಾವರವನ್ನು ಎದುರಿಗಿಟ್ಟುಕೊಂಡು ಕುಳಿತಾಗ ನನ್ನಿಂದ ಅದು ಭಿನ್ನ, ನೀ ದೇವ-ನಾ ಭಕ್ತ' ಎಂಬ ಭಾವವು ಅಳಿಯುವುದಿಲ್ಲ.
೬. ಶಿವಯೋಗದ ಜೀವಾಳ ತಾಟಕಯಾಗ. ಈ ದೃಷ್ಟಿಯಾಗವನ್ನು ಅಭ್ಯಾಸಮಾಡುತ್ತ ಇಷ್ಟಲಿಂಗಪಾಜಿಕನು ವಿವಿಧ ಅನುಭೂತಿಗಳನ್ನು ಪಡೆಯುವನು. ಹೀಗೆ ಇಷ್ಟಲಿಂಗವು ಕೇವಲ ಭಕ್ತಿಯ ತೃಪ್ತಿಗಾಗಿ ಅಷ್ಟೇ ಇರದೆ ಯಾಗಕ್ಕೆ ಸಹಕಾರಿ. ಸ್ಥಾವರಲಿಂಗ-ಚರಲಿಂಗಗಳಾದರೋ ಕೇವಲ ಭಕ್ತಿಭಾವವನ್ನು ಮಾತ್ರ ತೃಪ್ತಿಪಡಿಸುತ್ತವೆ.
೭. ಇಷ್ಟಲಿಂಗವು ವೈಯಕ್ತಿಕ ಉಪಾಸನಾ ವಸ್ತು. ಏಕಾಂತದಲ್ಲಿ ಪೂಜಿಸುವ ಸಾಕಾರವು; ಆದರೆ ಸ್ಥಾವರಲಿಂಗವು ಮಂದಿರದಲ್ಲಿ ಸ್ಥಾಪಿಸಿರುವ ಕಾರಣ ಸಾರ್ವತ್ರಿಕ ಉಪಾಸನಾ ವಸ್ತು. ಬಹಿರಂಗ ಪೂಜೆ ಮಾಡಲಿಕ್ಕಷ್ಟೇ ಸಾಧನವಾದದ್ದು ; ಇದು ಮಂದಿರದಲ್ಲಿರುವ ಕಾರಣ ಏಕಾಂತ ಪೂಜೆಗೆ ಅವಕಾಶವಿಲ್ಲ. - ೮. ಶಿಷ್ಯನ ಕರಕಂಜಕ್ಕೆ ದೀಕ್ಷೆಯ ಮೂಲಕ ಗುರು ನೋಟದ ಚಿತ್ಕಳೆಯಿಂದ ಪ್ರಭಾಪುಂಜರಂಜಿತವಾಗಿ ಇಷ್ಟಲಿಂಗ ಬರುತ್ತದೆ; ಆದರೆ ಸ್ಥಾವರ ಲಿಂಗವು ಹಲವರ ಪೂಜೆಗಾಗಿ ಸಾರ್ವತ್ರಿಕವಾಗಿ ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಕಾರಣ, ಪೂಜಿಸುವವನು ದೀಕ್ಷೆ ಹೊಂದಿರಬಹುದು ಅಥವಾ ಇಲ್ಲ. ಚರಲಿಂಗಗಳನ್ನು ಎಲ್ಲಿಯಾದರೂ ತೀರ್ಥಕ್ಷೇತ್ರಗಳಿಗೆ ಹೋದಾಗ, ಅಂಗಡಿಗಳಿಂದ ತಂದು ಇಟ್ಟುಕೊಳ್ಳುತ್ತಾರೆ. ಕೆಲವೊಮ್ಮೆ ಯಾರಾದರೂ ಮಹಾತ್ಮರ ಕೈಲಿ ಕೊಟ್ಟು ಶುದ್ದೀಕರಣ ಮಾಡಿಸಿ ಕೊಂಡಿರುತ್ತಾರೆಯೇ ವಿನಾ ಕಡ್ಡಾಯವಾದ ದೀಕ್ಷೆ ಏನೂ ಇರದು.
೯. ಇಷ್ಟಲಿಂಗವನ್ನು ಪೂಜಿಸುವ ಹಂಬಲವಿರುವ ಭಕ್ತನು ನೆಟ್ಟನೇ ಪೂಜಿಸುವನು. ಇಲ್ಲಿ ಅನ್ಯರ ಮೂಲಕ ಪೂಜೆಯಿಲ್ಲ. ಪಾಜಾರಿಯ ಮಧ್ಯಸ್ಥಿಕೆ ಇಲ್ಲ.
ತನುಶುದ್ದವಾಯಿತ್ತು. ಶಿವಭಕ್ತರೊಕ್ಕುದ ಕೊಂಡೆನ್ನ;
……………… ………………….. ………………
ಭಾವನೆಯೆನಗಿದು ಜೀವನವು ಕೇಳಾ ಲಿಂಗ ತಂದೆ
ನೆಟ್ಟನೆ ನಿಮ್ಮುವ ಪೂಜಿಸಿ ಭವಗೆಟ್ಟೆನು ಕಾಣಾ
ಚನ್ನಮಲ್ಲಿಕಾರ್ಜುನಾ !
ಎಂಬ ಅಕ್ಕನ ವಾಣಿಯಂತೆ ಪರಮಾತ್ಮನನ್ನು ನೆಟ್ಟನೇ ಪೂಜಿಸಿ ಭವಗೆಡಬೇಕು. ಸ್ಥಾವರಲಿಂಗ ದೇವಾಲಯದಲ್ಲಿ ಪೂಜಾರಿಯ ಮೂಲಕವೇ ಪೂಜಿಸಬೇಕು. ಶರಣರು ಈ ಪೂಜಾರಿತನವನ್ನು (Priest craft) ಬಹುವಾಗಿ ಖಂಡಿಸಿದರು.
ಸತಿಯರ ಸಂಗವನು ಅತಿಶಯದ ಗ್ರಾಸವನು,
ಪೃಥ್ವಿಗೀಶ್ವರನ ಪೂಜೆಯನು ಅರಿವುಳ್ಳಡೆ
ಹೆರರ ಕೈಯಿಂದ ಮಾಡಿಸುವರೇ ರಾಮನಾಥಾ ? -ವ.ಸಾ.ಸಂ. ೧೪೪
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ ?
ತನ್ನ ಲಿಂಗಕ್ಕೆ ಮಾಡುವ ನಿತ್ಯ ನೇಮವನು
ತಾ ಮಾಡಬೇಕಲ್ಲದೆ ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ ! -ಬ.ಷ.ವ. ೧೮೩
ಪತ್ನಿಯ ಸುಖವನ್ನೂ, ತನ್ನ ಊಟವನ್ನೂ ಬೇರೆಯವರ ಕೈಲಿ ಎಂತು ಮಾಡಿಸಿ ಆನಂದ ಪಡೆಯಲು ಬಾರದೋ ಹಾಗೆಯೇ ತನ್ನ ಲಿಂಗಕ್ಕೆ ತಾ ಮಾಡಬೇಕಾದ ನಿತ್ಯ ನೇಮವನ್ನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಲು ಬರದು. ಹೀಗೆ ದೇವ ಪೂಜೆಯನ್ನು ಪೂಜಾರಿಗಳ ಮೂಲಕ ಮಾಡಿಸಿಕೊಳ್ಳುವವರು ಕೆಮ್ಮನೆ ಉಪಚಾರಕ್ಕೆ ಮತ್ತು ಬಾಹ್ಯಾಡಂಬರಕ್ಕೆ ಮಾಡುವರಲ್ಲದೆ ದೇವನನ್ನು ಅರಿಯಲಾರರು.
ದೇವನನ್ನೊಲಿಸಿಕೊಳ್ಳಲು ಮನಬಂದ ಪರಿಯಲ್ಲಿ ಆನಂದದಿಂದ ಭಕ್ತ ಪೂಜಿಸಬೇಕಲ್ಲದೇ, ಯಾಂತ್ರಿಕವಾಗಿ ಪೂಜಿಸುವ ಪೂಜಾರಿ ಏಕೆ ? ಸಾಮಾನ್ಯವಾಗಿ ಪೂಜಾರಿ ಮನಃಪೂರ್ವಕವಾಗಿ, ಸಾಕ್ಷಾತ್ಕಾರದ ಹಂಬಲದಿಂದ ಪೂಜಿಸನು, ಸಂಬಳ, ಕಾಣಿಕೆ, ನೈವೇದ್ಯದ ಸಲುವಾಗಿ ಪೂಜಿಸುವನು. ಅದು ಕಾರಣ ಅವನ ಪೂಜೆ ಇಂತಿರುತ್ತದೆ
ಒಲವಿಲ್ಲದಾ ಪೂಜೆ, ನೇಹವಿಲ್ಲದ ಮಾಟ,
ಆ ಪೂಜೆಯು, ಆ ಮಾಟವು
ಚಿತ್ರದ ರೂಹು ಕಾಣಿರಣ್ಣಾ ! ಚಿತ್ರದ ಕಬ್ಬು ಕಾಣಿರಣ್ಣಾ !
ಅಪ್ಪಿದರೆ ಸುಖವಿಲ್ಲ ! ಮೆಲಿದರೆ ರುಚಿಯಿಲ್ಲ !
ಕೂಡಲಸಂಗಮದೇವಾ ನಿಜವಿಲ್ಲದವನ ಭಕ್ತಿ
! -ಬ.ಷ.ವ. ೧೨೬
ಇಂತಹ ಅಸಹಜಭಕ್ತಿ ಪರಮಾತ್ಮನನ್ನು ಒಲಿಸದು, ಬದಲಾಗಿ ದೇವನ ಶಿರದ ಮೇಲೆ ಹೆಡೆಗುಡಿಯನ್ನು ಹೇರಿದಂತಾಗುತ್ತದೆ.
ಊಳಿಗನೆನಿತು ಉಪಚಾರ ಮಾಡಲೇನು ?
ಒಡೆಯನುಪಚರಿಸದಿರ ಅತಿಥಿ ಮುನಿವಂತೆ,
ದೇವಂಗೆ ಭಕ್ತನ ಪ್ರೇಮ ಇನಿದಹುದಲ್ಲದೆ
ಅರ್ಚಕನ ಉಪಚಾರವಲ್ಲವಯ್ಯಾ !
ಪೂಜಾರಿಯ ಮನವಿಲ್ಲದಾ ಪೂಜೆ
ಬಿರುಗಾಳಿಯಾಳು ಸಿಕ್ಕಿದ ಜೇಡನ ಬಲೆಯಂತಯ್ಯಾ;
ಸಚ್ಚಿದಾನಂದಾ !
ಅಷ್ಟೆ ಅಲ್ಲ ಪೂಜಾರಿಯ ಪರಂಪರೆಯು ಪರಾವಲಂಬನವನ್ನೂ ಕಲಿಸಿ, ಕಾಯಕ ತತ್ವವನ್ನು ಅವನತಿಸಿ, ಜಾತೀಯತೆಯನ್ನು ಪ್ರಚೋದಿಸುತ್ತದೆ. ಪೂಜಾರಿ ಪಟ್ಟದ ಸಲುವಾಗಿ ಅದೆನಿತು ಜನ ಕೋರ್ಟಿಗೆ ನಡೆವುದೂ, ವ್ಯಾಜ್ಯ ಮಾಡುವುದನ್ನೂ ಕಾಣುವವಷ್ಟೆ ! ಬಸವ ಧರ್ಮದ ವೈಶಿಷ್ಟ್ಯವೇ ನೆಟ್ಟನೇ ಪೂಜಿಸಿ ಭವಗೆಡುವುದು. ಪೂಜಾರಿಗಳ ಕುವೃತ್ತಿ, ದುರಾಶೆ, ದುರ್ಗುಣಗಳಿಂದ ಬೇಸರಿಸಿದ ಜನರು ನಾಸ್ತಿಕರೇ ಆದಾರು ! ಇಷ್ಟಲಿಂಗ ಪೂಜೆಯಲ್ಲಿ ಪೂಜಿಸಿ ಆನಂದಿಸುವವನು ಭಕ್ತ. ಆದರೆ ಸ್ಥಾವರ ಪೂಜೆಯಲ್ಲಿ ಪೂಜಾರಿ ಪೂಜಿಸಿದರೆ ಭಕ್ತನು ಕೇವಲ ದರ್ಶನ ಪಡೆಯುವನು.
೧೦. ಇಷ್ಟಲಿಂಗದಲ್ಲಿ ಆಹ್ವಾನ ವಿಸರ್ಜನೆಯಿಲ್ಲ. ಪರಮಾತ್ಮನು ಸದಾ ಸರ್ವಾಂತರ್ಗತ, ಸರ್ವ ಸಮರಸನಾಗಿರುತ್ತಾನೆ. ಬ್ರಹ್ಮಾಂಡದ ಹೊರ ಒಳಗೆ ಅವ್ಯಾಹತವಾಗಿ ತುಂಬಿ ತುಳುಕುತ್ತಿರುವಾಗ ಪರಮಾತ್ಮನನ್ನು ಕರೆಯುವುದು ಎಲ್ಲಿಂದ ? ಕಳಿಸುವುದಾದರೂ ಎಲ್ಲಿಗೆ !
ಆಹ್ವಾನಿಸಿ ಕರೆವಲ್ಲಿ ಎಲ್ಲಿರ್ದನೋ,
ಈರೇಳು ಲೋಕ ಹದಿನಾಲ್ಕು ಭುವನಂಗಳನೊಳಗೊಂಡಿಪ್ಪ ದಿವ್ಯವಸ್ತು ?
ಮತ್ತೆ ವಿಸರ್ಜಿಸಿ ಬಿಡುವಾಗ ಎಲ್ಲಿ ಅಡಗಿರ್ದನೋ ಮುಳ್ಳೂರ
ತೆರಹಿಲ್ಲದಿರ್ಪ ಅಖಂಡ ವಸ್ತು ?
ಬರಿಯ ಮಾತಿನ ಬಳಕೆಯ ತೂತ ಜ್ಞಾನವ ಬಿಟ್ಟು, ನೆಟ್ಟನೆ ತನ್ನ
ಕರಸ್ಥಲದೊಳಗಿರುತಿರ್ಪ ಇಷ್ಟಲಿಂಗವ ದಿಟ್ಟಿಸಿ ನೋಡಲು
ಅಲ್ಲಿ ತನ್ನ ಮನಕ್ಕೆ ಮನ ಸಂಧಾನವಾದ ದಿವ್ಯ ನಿಶ್ಚಯ ಒದಗೆ
ಈ ದಿವ್ಯ ನಿಶ್ಚಯದಿಂದ ಕುಳವಡಗಿ ಆದೈತವಪ್ಪುದು !
ಇದು ಕಾರಣ, ನಮ್ಮ ಕೂಡಲಸಂಗನ ಶರಣ ಆಹ್ವಾನ
ವಿಸರ್ಜನೆಯೆಂಬುಭಯ ಜಡತೆಯ ಬಿಟ್ಟು ತಮ್ಮ ತಮ್ಮ
ಕರಸ್ಥಳದಲ್ಲಿ ನಿಶ್ಚಯಿಸಿದವರಿಗೆ ಸ್ವಯಂ ಲಿಂಗವಾದ ಕಾಣಿರೋ! -ಬ.ಷ.ವ. ೧೨೧೫
ಸರ್ವ ಲೋಕಗಳನ್ನೂ ತುಂಬಿಕೊಂಡು ಇಲ್ಲಿ ಅಲ್ಲಿ ಎಲ್ಲೆಲ್ಲೂ ಇರುವಾಗ ತೆರವು ಮಾಡಲಿಕ್ಕೆ ಮತ್ತೊಂದು ಸ್ಥಾನವಿಲ್ಲದಾಗ, ಕಳಿಸಲಿಕ್ಕೆ ಮಗುದೊಂದು ಜಾಗವಿಲ್ಲದೆ, ಮುಳ್ಳು ಮೊನೆಯಷ್ಟೂ ಠಾವನ್ನು ಉಳಿಸದೆ ಅಖಂಡವಾಗಿ ತುಂಬಿರುವಾಗ, ನೆಟ್ಟನೇ ತನ್ನ ಕರಸ್ಥಲ-ಮನಸ್ಥಲದಲ್ಲಿ ಸರ್ವಕಾಲದಲ್ಲಿ ತುಂಬಿತುಳುಕುತ್ತಿಪ್ಪ ಲಿಂಗ ಚೈತನ್ಯವನ್ನು ಶರಣನು ಕಾಂಬುವನು.
ಜಗದೊಳಹೊರಗೆಲ್ಲ ತೆರಹಿಲ್ಲದೆ ಸಂಭ್ರಮಿಸಿ ತುಂಬಿರ್ಪ
ಪರವಸ್ತುವ ಆಹ್ವಾನಿಸಿ ಕರೆದು ವಿಸರ್ಜಿಸಿ ಬಿಡುವುದಕ್ಕೆ
ಇಂಬುಂಟೇನೋ ಮರುಳೆ ? ಇಂತೀ ಅಖಂಡ ಪರಿಪೂರ್ಣವಾದ
ಪರಬ್ರಹ್ಮದ ನಿಲುವನರಿಯದೆ ಖಂಡಿತ ಬುದ್ದಿಯಿಂದ
ಕಲ್ಪಿಸಿ ಪೂಜಿಸಿ, ಕರ್ಮದ ಬಲೆಯಲ್ಲಿ ಸಿಲ್ಕಿ ಕಾಲಂಗೆ
ಗುರಿಯಾದವರ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ ! -ಷ.ವ. ೨೬೪
ಅಖಂಡವಾದ ಪರಿಪೂರ್ಣ ಪರವಸ್ತುವನ್ನು ಖಂಡಿತವಾದ ಅಪರಿಪೂರ್ಣ ಕಲಾತ್ಮಕ ಮೂರ್ತಿಯಲ್ಲಿ ಹಿಡಿದು, ಪರಿಮಿತ ಗುಡಿಯಲ್ಲಿಕ್ಕುವುದು ಮೂರ್ಖತನವೇ ಸರಿ...
ಇನ್ನೊಂದು ಮುಖ್ಯಾಂಶವೆಂದರೆ ಶರಣನ ಅಂಗವೇ ಲಿಂಗ ಚಿತ್ಕಳೆಯಿಂದ ತುಂಬಿರುವುದು. ಎಲ್ಲಿಯವರೆಗೆ ಅವನಲ್ಲಿ ಪ್ರಾಣಲಿಂಗ ಚೈತನ್ಯವಿರುವುದೋ ಅಲ್ಲಿಯವರೆಗೆ ಸದಾ ಅಸ್ತಿತ್ವವಿದ್ದೇ ಇರುವುದು.
ಆಹ್ವಾನವಿಲ್ಲ ಪ್ರಾಣಲಿಂಗವಾಗಿ
ವಿಸರ್ಜನೆಯಿಲ್ಲ ಅಂಗವ ನೆಲೆಗೊಂಡಿಪ್ಪುದಾಗಿ !
ಇದು ಕಾರಣ, ಆಹ್ವಾನ ವಿಸರ್ಜನೆಯಿಲ್ಲ
ಶರಣರ ಪರಿ ಬೇರೆ;
ಅಂಗ ಸಂಗವೇ ಲಿಂಗ, ಲಿಂಗವೇ ಮನ;
ಕೂಡಲಸಂಗನ ಶರಣ ಸುಯಿಧಾನಿ; -ಬ.ಷ.ವ. ೧೨೧೪
ಪ್ರಾಣವು ಜಡಾಂಗವನ್ನು ಸ್ಪರ್ಶಿಸಿದಾಗ ಚೈತನ್ಯ ಸಂಚಾರ; ಅದುವೇ ಲಿಂಗಚೈತನ್ಯ, ಸರ್ವಾಂಗಲಿಂಗಿಯಾದ ಶರಣನ ಮನವೂ ಲಿಂಗ. ಹೀಗೆ ತನು, ಮನ ಸರ್ವವೂ ಲಿಂಗ, ಇಂತಿರುವಾಗ ಆಹ್ವಾನ ವಿಸರ್ಜನೆ ಎತ್ತಣದು ? ಜನಿಸಿದಾಗ ಆಹ್ವಾನ, ಮೃತ್ಯುಗರ್ಭಕ್ಕೆ ಹೋದಾಗ ವಿಸರ್ಜನೆ ! ಸ್ಥಾವರಲಿಂಗ ಪೂಜೆಯಲ್ಲಾದರೋ ಆಹ್ವಾನ-ವಿಸರ್ಜನೆ ಮುಂತಾದ ಕ್ರಿಯೆಗಳುಂಟು.
೧೧. ಇಷ್ಟಲಿಂಗವೇ ಕೇಂದ್ರವಾದ ಶಿವಯೋಗವು, ರಾಜಯೋಗ, ಭಕ್ತಿಯೋಗ, ಜ್ಞಾನಯೋಗ, ಕ್ರಿಯಾಯೋಗ, ಕುಂಡಲಿನಿಯೋಗ ಮುಂತಾದ ಎಲ್ಲವುಗಳಿಂದ ಕೂಡಿದ ಸರ್ವಯೋಗ ಸಮನ್ವಯ ಸಾರವಾಗಿದೆ. ಆದರೆ ಸ್ಥಾವರಲಿಂಗ ಪೂಜೆಯಲ್ಲಿ ಕೇವಲ ಭಕ್ತಿಯೋಗವಿದೆ. ಅಂತರಂಗಾನುಸಂಧಾನಕ್ಕೆ ಅದು ಸಾಧನವಾಗಿಲ್ಲ.
ಇಷ್ಟಲಿಂಗವು ಅಂಗದೊಡನೇ ಇರುವುದರಿಂದ ನಾವು ಹೋದಲ್ಲೆಲ್ಲ ಲಿಂಗವು ಹಿಂಬಾಲಿಸುವುದು, ಎಡಬಿಡದೆ ಇರುವುದು. ಎಲ್ಲಿ ಯಾವ ಕ್ಷಣಕ್ಕಾದರೂ ಪೂಜಿಸಲು ಅವಕಾಶವಿದೆ. ಇಷ್ಟಲಿಂಗವು ಕೈಗಡಿಯಾರ ಇದ್ದಂತೆ, ಬೇಕೆನಿಸಿದಾಗ ವೇಳೆಯನ್ನು ತಿಳಿಸುವುದು. ಇದ್ದಲ್ಲಿಯೇ ನೋಡಲು ಸಾಧ್ಯವಾಗುವುದು. ಆದರೆ ಸ್ವಾವರವು ಗೋಪುರದ ಗಡಿಯಾರವಿದ್ದಂತೆ. ಅಲ್ಲಿ ಹೋಗಿಯೇ ದರ್ಶಿಸಬೇಕು. ಬೇಕೆನಿಸಿದಾಗ ಕಾಲ ತಿಳಿದುಕೊಳ್ಳಲು ಬರದು. ಸ್ಥಾವರ ಲಿಂಗವು ಒಂದೆಡೆಯಲ್ಲಿ ಸ್ಥಾಪಿಸಲ್ಪಟ್ಟಿರುವುದರಿಂದ ಹೋದೆಡೆ ಕೊಂಡೊಯ್ಯಲಾಗದು. ಅದಿದ್ದೆಡೆಯಲ್ಲಿ ನಾವು ಅರಸಿಕೊಂಡು ಹೋಗಬೇಕು, ಬೇಕೆನಿಸಿದಾಗ ಪೂಜೆ ಮಾಡಲು ಬರದು. ಬರಿಯ ಬಾಹ್ಯ ಪೂಜಾಚರಣಿ ಸ್ಕೂಲ ಕ್ರಿಯೆ. ಇದು ಆಧ್ಯಾತ್ಮದ ಮೊದಲ ಮೆಟ್ಟಿಲು; ಇದಕ್ಕೆ ಮೀರಿ ಅರಿವಿನ ಸಾಧನದಿಂದ ಪರಾತ್ಪರ ಪೂಜೆ ಮಾಡಬೇಕು. ಇದು ಸೂಕ್ಷ್ಮವಾದ ಮೇಲ್ಮಟ್ಟದ ಪೂಜೆಶರಣರು ಹೀಗೆ ಸ್ಕೂಲ-ಸೂಕ್ಷ್ಮ, ಬಾಹ್ಯ-ಅಂತರ್ ಪೂಜೆಯನ್ನು ಲಿಂಗದಲ್ಲಿ ಸಾಧಿಸಿದರು. ಮನಕ್ಕಾನಂದವಾಗುವಷ್ಟು ಕಾಲ ಇಷ್ಟಲಿಂಗವನ್ನು ಪೂಜಿಸಬಹುದು. ಆದರೆ ಸ್ಥಾವರ ಲಿಂಗ ಪೂಜೆಗೆ ಕಾಲದ ಅಡ್ಡಿ ಆತಂಕವಿದೆ. ಜಡದೇಗುಲವಾದ ಸ್ಥಾವರಲಿಂಗ ಮಂದಿರದಲ್ಲಿ ವಿಶಿಷ್ಟ ಕಾಲದಲ್ಲಿ ಪೂಜೆ ನಡೆದೀತು. ಆದರೆ ಇಷ್ಟಲಿಂಗಾಂಗಿ ಸದ್ಭಕ್ತನ ಚಿನ್ಮಂದಿರದಲ್ಲಿ ಎಡಬಿಡದೆ ಕ್ರಿಯಾಪೂಜೆ ನಡೆಯುವುದಲ್ಲದೆ ಸದಾ ಕಾಲದಲ್ಲಿ ಚೈತನ್ಯ ಸಮಾಧಿಯು ನೆಲೆಗೊಂಡಿರುವುದು. ಚರಲಿಂಗವು ಗೋಡೆ ಗಡಿಯಾರದಂತೆ: ಕುಟುಂಬ ವರ್ಗದವರೆಲ್ಲ ಪೂಜಿಸುವ ವಸ್ತು. ಅದೂ ಸಹ ಭಕ್ತನ ಜೊತೆಗಿರುವುದಿಲ್ಲ. ಕೆಲವೊಮ್ಮೆ ಪೂಜಾ ಸಾಮಗ್ರಿಗಳೊಡನೆ ತೆಗೆದುಕೊಂಡು ಹೋದರೂ ಪೂಜೆಗೆ ಉಪಯುಕ್ತವೇ ವಿನಾ ಯೋಗಭ್ಯಾಸ ಸಾಧನೆಗಲ್ಲ.
೧೨. ಇಷ್ಟಲಿಂಗ ಧಾರಣಿ ಮತ್ತು ಪೂಜೆ-ಅತ್ಯಂತ ಮಹತ್ವ ಪೂರ್ಣವಾದ ಇನ್ನೊಂದು ಸಾಧನೆಯನ್ನು ಹೊಂದಿದೆ. ಅದುವೇ ಸಾಮಾಜಿಕ ಸಮಾನತೆಯನ್ನು ಸ್ಥಾಪಿಸುವುದು. ಸ್ಥಾವರಲಿಂಗ ಪೂಜಕ ಶಿವಭಕ್ತರು ಬ್ರಾಹ್ಮಣ, ವೈಶ್ಯ, ಶೂದ್ರ ಮುಂತಾದ ಯಾವುದೇ ಸಮಾಜದಲ್ಲಿ ಇರಲಿ ಅವರ ಮಧ್ಯೆ ಉಣ್ಣುವ-ಉಡುವ ಮತ್ತು ಹೆಣ್ಣನ್ನು ಕೊಡುವ-ಕೊಳ್ಳುವ ವೈವಾಹಿಕ ಸಂಬಂಧ ನಡೆಯದು. ಅಂದರೆ ಸ್ಥಾವರ ಲಿಂಗವು ಸಾಮಾಜಿಕ ಸಮಾನತೆಯನ್ನು ತರದು. ಬಸವಣ್ಣನವರಿಗೂ ಪೂರ್ವದಲ್ಲಿ ಚರಲಿಂಗಧಾರಕರಿದ್ದರು. ಎಲ್ಲ ವರ್ಣ ಜಾತಿಗಳವರೂ ಗುರುಗಳಿಂದ ಚರಲಿಂಗ (ಶಿವಲಿಂಗ) ಗಳನ್ನು ಪಡೆದುಕೊಂಡರೂ, ಚರಲಿಂಗಧಾರಿಗಳ ಮಧ್ಯೆ ಸಾಮಾಜಿಕ, ವೈವಾಹಿಕ ಸಂಬಂಧಗಳು ಏರ್ಪಡುತ್ತಿರಲಿಲ್ಲ. ಅಷ್ಟೇಕೆ ದೀಕ್ಷೆ ನೀಡಿದ ಗುರುವೇ ದೀಕ್ಷೆ ಪಡೆದವರ ಜೊತೆಗೆ ವ್ಯವಹರಿಸುತ್ತಿರಲಿಲ್ಲ.
ಇಷ್ಟಲಿಂಗವು ರೂಪುಗೊಂಡುದೇ ಸಾಮಾಜಿಕ ಸಮಾನತೆಯನ್ನು ಸಾಧಿಸಲೋಸುಗ, ವಿಶ್ವಗುರು ಬಸವಣ್ಣನವರು ಇಷ್ಟಲಿಂಗವನ್ನು ರೂಪಿಸಿಕೊಟ್ಟು, ತನ್ಮೂಲಕ ಜಾತಿ ವೈಷಮ್ಯ, ವರ್ಗಭೇದ, ಅಸಮಾನತೆ, ಲಿಂಗಭೇದಗಳನ್ನು ತೊಡೆದು ಹಾಕಲು ಯತ್ನಿಸಿದರು. ಹೀಗೆ ಇಷ್ಟಲಿಂಗವು ಸಾಮಾಜಿಕ ಸಮಾನತೆಗೆ ಪ್ರಮುಖ ಸಾಧನ.
ಸ್ಥಾವರಲಿಂಗ ಕ್ಷೇತ್ರಗಳನ್ನು ಕುರಿತು ಹೇಳುವಾಗ ಇನ್ನೊಂದು ಮಾತನ್ನು ಹೇಳಬೇಕು. ಕೆಲವು ಕ್ಷೇತ್ರಗಳು ಸಮಾಧಿ ಲಿಂಗಗಳನ್ನು ಹೊಂದಿರುತ್ತವೆ. ಲಿಂಗಾಯತ ಧರ್ಮದಲ್ಲಿ ಮಹಾತ್ಮರಾದ ಶರಣರು ಲಿಂಗೈಕ್ಯರಾದಾಗ ಸಮಾಧಿ ಮಾಡಿ ಗದ್ದುಗೆ ಕಟ್ಟುವರು. ಎಲ್ಲ ಲಿಂಗವಂತರನ್ನೂ ಸುಡದೆ ಹುಗಿಯುವರು ತಾನೆ ? ಯೋಗಿಗಳಾದವರ ಸಮಾಧಿ ಮೇಲೆ ಗದ್ದುಗೆ ಕಟ್ಟಿ, ಅವರು ಲಿಂಗದೊಳಗಾದರು, ಲಿಂಗೈಕ್ಯರಾದರು ಎಂದು ಸಂಕೇತಿಸುವ ಸಲುವಾಗಿ ಅವರ ಸಮಾಧಿ ಮೇಲೆ ವಿಭೂತಿ ಗಟ್ಟಿಯನ್ನಿಟ್ಟು ಅದಕ್ಕೆ ಗೋಳಾಕಾರದ ಕಂಥೆ ಇಟ್ಟು ಬಿಡುವರು. ಅಂದರೆ ಈ ವಿಭೂತಿ ಪುರುಷರು ಲಿಂಗದೊಳಗಾದರು ಎಂದು ಹೇಳುವ ಅರ್ಥವನ್ನು ಇದು ಒಳಗೊಂಡಿದೆ. ಲಿಂಗಾಯತ ಧರ್ಮದ ಅನೇಕ ಶರಣರುಗಳ ಈ ಬಗೆಯ ಸಮಾಧಿಗಳುಂಟು. ಕಲಬುರ್ಗಿಯ ಶರಣ ಬಸವೇಶ್ವರ, ಸೊಲ್ಲಾಪುರದ ಸಿದ್ದರಾಮೇಶ್ವರ, ಕೊಟ್ಟೂರ ಬಸವೇಶ್ವರ, ದೇವನೂರು ಗುರುಮಲ್ಲೇಶ್ವರ, ಸಿದ್ದಗಂಗಾ ಕ್ಷೇತ್ರದ ಗುರುಗೋಸಲ ಸಿದ್ದೇಶ್ವರ, ಸುತ್ತೂರು ಶಿವರಾತ್ರೀಶ್ವರ, ಇತ್ಯಾದಿ ಗದ್ದುಗೆಗಳಲ್ಲಿರುವ ಲಿಂಗಗಳು ಆಯಾ ಮಹಾತ್ಮರ ಸಮಾಧಿಗಳ ಮೇಲೆ ಸ್ಥಾಪಿಸಿದ ಸಮಾಧಿ ಲಿಂಗಗಳಾಗಿರುತ್ತವೆ. ಭಾರತ ವರ್ಷದಲ್ಲಿ ಸುಪ್ರಸಿದ್ದವಾದ ದ್ವಾದಶ ಜ್ಯೋತಿರ್ಲಿಂಗಗಳೂ ಸಹ ಸಮಾಧಿ ಲಿಂಗಗಳೆಂದು ಕೆಲವರು ಪ್ರತಿಪಾದಿಸುತ್ತಾರೆ. ಇದು ಸ್ವಲ್ಪ ಸಾಹಸದ ಮಾತೆಂದು ಹೇಳಬಹುದು. ಈ ಬಗ್ಗೆ ನಮಗೆ ಖಚಿತವಾಗಿ ತಿಳಿದು ಬಂದಿಲ್ಲ.
"ಬಸವಾದಿ ಪ್ರಮಥರು ಸ್ಥಾವರಪೂಜಕರು; ಅದರ ವಿರೋಧಕರಲ್ಲ. ಅಂತೆಯೇ ತಮ್ಮ ವಚನ ಮುದ್ರಿಕೆಗಳಿಗೆ ಕೂಡಲ ಸಂಗಮದೇವ, ಚನ್ನ ಮಲ್ಲಿಕಾರ್ಜುನಾ ಮುಂತಾಗಿ ಸ್ಥಾವರ ಲಿಂಗದ ಹೆಸರನ್ನು ಬಳಸಿಕೊಂಡಿದ್ದಾರೆ. ಮತ್ತು ಅಕ್ಕಮಹಾದೇವಿ, ಪ್ರಭುದೇವರು ಶ್ರೀಶೈಲಕ್ಕೆ, ಬಸವಣ್ಣನವರು ಕೂಡಲಸಂಗಮಕ್ಕೆ ಲಿಂಗೈಕ್ಯರಾಗಲು ಹೋದರು" ಎಂದು ಕೆಲವರು ವಾದಿಸುತ್ತಾರೆ.
ಬಸವಣ್ಣನವರು, ಅಕ್ಕಮಹಾದೇವಿ ಮುಂತಾದವರೆಲ್ಲ ಬಾಲ್ಯದಿಂದಲೂ ಶಿವೋಪಾಸಕರು. ಮುಂದೆ ಬಸವಣ್ಣನವರು ಸ್ವತಂತ್ರ ವಿಚಾರ ಸಂಹಿತೆಯನ್ನು ಪ್ರತಿಪಾದಿಸಿ, ಇಷ್ಟಲಿಂಗವನ್ನು ರೂಪಿಸಿಕೊಟ್ಟು, ಏಕ ದೇವೋಪಾಸನೆಯನ್ನು ಎತ್ತಿಹಿಡಿದರು. ಕೂಡಲ ಸಂಗಮದೇವ ಮುದ್ರಿಕೆಯನ್ನು ಮೊದಲಿನಿಂದಲೂ ಬಳಸುತ್ತಿದ್ದರು. ಮೊದಲು ಆ ಮುದ್ರಿಕೆ 'ಹೊನ್ನ ಆವುಗೆಯ ಮೆಟ್ಟಿದವನ, ಮಿಡಿ ಮುಟ್ಟಿದ ಕೆಂಜೆಡೆಯವನ, ಬಾಣನ ಬಾಗಿಲ ಕಾಯು ಶಿವನನ್ನು ಕುರಿತು ಇದ್ದರೆ ವಿಚಾರ ಪಲ್ಲಟವಾದ ನಂತರ ಅಮೂಲ್ಯನು, ಅಪ್ರಮಾಣನು ಅಗೋಚರ ಲಿಂಗವು, ಆದಿ ಮಧ್ಯಾಂತವಿಲ್ಲದ ದೇವನಿಗೆ ಅನ್ವಯವಾಗ ತೊಡಗಿತು. ಈ ಬಗೆಯ ವಿಚಾರ ಪಲ್ಲಟವನ್ನು ನಾವು ಎಲ್ಲ ಶರಣರ ವಚನಗಳಲ್ಲಿಯೂ ಗುರುತಿಸಬಹುದು.
ಪ್ರಭುದೇವರು, ಅಕ್ಕಮಹಾದೇವಿ ಶ್ರೀಶೈಲದತ್ತ ಸಾಗಿದುದು ಸ್ಥಾವರ ಲಿಂಗ ಮಲ್ಲಿಕಾರ್ಜುನನ ಸಲುವಾಗಿ ಅಲ್ಲ. ಆ ಹೊತ್ತಿಗಾಗಲೇ ಅವರುಗಳು ಪರಮಾರ್ಥ ಸಿದ್ದಿಯ ಆತ್ಯಂತಿಕ ಹಂತವನ್ನು ತಲ್ಪಿದ್ದರು. ತಮ್ಮ ಅಂತಿಮ ದಿನಗಳನ್ನು ಪ್ರಶಾಂತವಾದ ನಿರ್ಜನ ಪ್ರದೇಶದಲ್ಲಿ ಉತ್ಕಟ ಧ್ಯಾನಾನಂದದಲ್ಲಿ ಕಳೆಯಬೇಕು ಎಂಬುದಕ್ಕಾಗಿ ಹಲವಾರು ಯಾಗಿಗಳ ಅಭಯಾಶ್ರಯವಾದ, ಶ್ರೀಶೈಲಗಿರಿಯ ಪ್ರಾಂತ್ಯದಲ್ಲಿದ್ದ ಕದಳಿಯ ಬನದಲ್ಲಿ ಇರಲು ಬಯಸಿ, ಅವರುಗಳು ಅಲ್ಲಿಗೆ ಹೋಗಿದ್ದು ದು. ಬಸವಣ್ಣನವರಾದರೂ ಕೂಡಲ ಸಂಗಮಕ್ಕೆ ಹೋದದ್ದು ಬೇರಿತರ ಕಾರಣಗಳಿಗಾಗಿ ಒಂದನೆಯದಾಗಿ ಎರಡು ನದಿಗಳ ಕೂಟವಾದ ಪ್ರಶಾಂತ ತಾಣ ಕೂಡಲಸಂಗಮ; ಎರಡನೆಯದಾಗಿ ಬಾಲ್ಯದ ದಿನಗಳನ್ನು ಕಳೆದ ಚಿರಪರಿಚಿತ ಸ್ಥಳ, ಮೂರನೆಯದಾಗಿ ಬಿಜ್ಜಳನು ಗಡಿಪಾರು ಮಾಡಲು ಗುರುತಿಸಿದ್ದ ಗಡಿಯ ಆಚೆಗೆ ಇದ್ದುದು. ನಾಲ್ಕನೆಯದಾಗಿ ಜಾತವೇದ ಮುನಿಗಳ ಉತ್ತರಾಧಿಕಾರಿ ದೇವರಾಜ ಮುನಿಪನು ಇಲ್ಲಿಗಾಗಲೇ ಬಸವ ಪ್ರತಿಪಾದಿತ ಲಿಂಗಾಯತ ಧರ್ಮವನ್ನು ಸ್ವೀಕಾರ ಮಾಡಿ, ಅನುಯಾಯಿಯಾಗಿ ಇದ್ದುದು. ಅದನ್ನು ತಮ್ಮ ವಿಚಾರಧಾರೆಯ ಪ್ರಸರಣಕ್ಕಾಗಿ ಸೂಕ್ತ ಕೇಂದ್ರವನ್ನಾಗಿ ಮಾಡಿಕೊಳ್ಳಲು ಬಯಸಿ ಅಲ್ಲಿಗೆ ಹೋದರು.
ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಅನುಭವ ಮಂಟಪ | ಇಷ್ಟಲಿಂಗ ಪೂಜೆ ಮೂರ್ತಿಪೂಜೆ ಅಲ್ಲ |