Previous ಬಸವೇಶ್ವರ ಪೂಜಾವ್ರತ ಅಧ್ಯಾಯ -೧ ಬಸವೇಶ್ವರ ಪೂಜಾವ್ರತ ಅಧ್ಯಾಯ -೩ Next

ಬಸವೇಶ್ವರ ಪೂಜಾವ್ರತ , ಅಧ್ಯಾಯ -೨

✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

ಅಧ್ಯಾಯ - 2 ಕಥಾಪಠಣ

ವಿಶ್ವಗುರು ಬಸವಣ್ಣನವರ ಜೀವನ ಚರಿತ್ರೆ

ಜಂಬೂದ್ವೀಪವೆಂದು ಹೆಸರಾದ ಭಾರತ ಭೂಮಿಯ, ಕರ್ನಾಟಕದ ಉತ್ತರ ಭಾಗದಲ್ಲಿ ಇಂಗಳೇಶ್ವರದ ಸನಿಹದಲ್ಲಿರುವುದು ಬಾಗೇವಾಡಿಯೆಂಬ ಊರು. ಅದು ಶಿವಭಕ್ತಿಯ ತೌರೂರು ; ಅಲ್ಲಿಯ ಅಗ್ರಹಾರದ ಗ್ರಾಮಣೀಮಣಿ ಮಂಡಿಗೆಯ ಮಾದಿರಾಜ ; ಈ ಕಮ್ಮೆಕುಲದ ಬ್ರಾಹ್ಮಣನ ಧರ್ಮಪತ್ನಿ ವಿಮಳಾಚಾರ ವಿಖ್ಯಾತೆಯಾದ, ಉತ್ತಮ ಸತಿ ಮಾದಲಾಂಬಿಕೆ. ಆ ದಂಪತಿಗಳಿಗೆ ನಾಗಲಾಂಬಿಕೆ ಒಬ್ಬಳೇ ಮಗಳು. ಗಂಡು ಸಂತಾನವಿರಲಿಲ್ಲ. ಹೀಗಾಗಿ ತಮ್ಮ ವಂಶಪಾರಂಪರ‍್ಯದ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವ ಮಗ ಬೇಕೆಂಬುದು ಅವರ ಅದಮ್ಯ ಆಸೆ.
ಹಲವಾರು ವರ್ಷಗಳ ಜಪ ತಪಗಳ ನಂತರ ಮಾದಲಾಂಬಿಕೆ ಗರ್ಭವತಿಯಾದಳು. ಪುಳಕಿತವಾದ ಅನುಭವಗಳು ಆಗುತ್ತಿದ್ದರೂ ಗರ್ಭವು ಬಲು ಭಾರವೆನಿಸುತ್ತಿತ್ತು. ಈ ಗರ್ಭ ಭರಭಾರದಿಂದ ಏನವಸ್ಥೆಯಾಗುವುದೋ? ಎಂದು ಆತಂಕಗೊಂಡು ವೇದನೆಯನ್ನು ಸಹಿಸಲಾರದೆ ದೇವನನ್ನು ಸ್ಮರಿಸುತ್ತಾ ನಿದ್ರಾವಶಳಾದಾಗ, ಕನಸಿನಲ್ಲಿ ತೇಜಸ್ವಿಯಾದ ಯೋಗಿಯೊಬ್ಬನು ದರ್ಶನ ಕೊಡುವನು. “ತಾಯಿ, ನೀನೇನೂ ಕಳವಳ ಪಡುವ ಕಾರಣವಿಲ್ಲ, ನಿನ್ನ ಚಿದ್‌ಗರ್ಭದಲ್ಲಿ ಬೆಳೆಯುತ್ತಿರುವ ಶಿಶು ಧರ್ಮ ವೃಷಭನ ಅವತಾರ. ಹುಟ್ಟುವ ಮಗುವಿಗೆ 'ಬಸವ' ಎಂದು ಹೆಸರನ್ನಿಡು” ಎಂದು ಸೂಚಿಸುತ್ತಾನೆ. ಈ ಮಧುರ ಸ್ವಪ್ನದಿಂದ ಮಾದಲಾಂಬಿಕೆ ಪುಳಕಿತಳಾಗುತ್ತಾಳೆ. ಆನಂದನಾಮ ಸಂವತ್ಸರದ ವೈಶಾಖ ಮಾಸದ ರೋಹಿಣಿ ನಕ್ಷತ್ರದಲ್ಲಿ (30-4-1134) ಮಾದಲಾಂಬಿಕೆ ಸುಂದರವಾದ ಗಂಡು ಮಗುವಿಗೆ ಜನ್ಮವನ್ನು ಕೊಡುತ್ತಾಳೆ.

ಮಗು ನೋಡಲು ಸುಲಕ್ಷಣವಾಗಿ, ತೇಜಸ್ವಿಯಾಗಿ ಇದ್ದರೂ ಕಣ್ದೆರೆಯದೆ, ಬಾಯ್ದೆರೆಯದೆ, ಅಳದೆ, ಜಡವಾದ ಗೊಂಬೆಯಂತೆ ಇದ್ದುದು, ತಾಯಿ ತಂದೆಯರಿಗೆ ಕಳವಳವನ್ನುಂಟು ಮಾಡಿತು. ಅವರು ಕಳವಳದಿಂದ ಹಲವಾರು ಮಂತ್ರ-ತಂತ್ರಗಳನ್ನು ಮಾಡಿಸುತ್ತಾರೆ. ಅಷ್ಟರಲ್ಲಿ ಓರ್ವ ಮುನಿಯು ಈಶಾನ್ಯ ದಿಕ್ಕಿನಿಂದ ನಡೆದು ಬರುತ್ತಿದ್ದಾನೆ. ಅವನು ಜಟಾಧಾರಿಯಾಗಿದ್ದಾನೆ ; ಕಿವಿಯಲ್ಲಿ ತಾಮ್ರಕುಂಡಲ ಧರಿಸಿ, ಮೈಮೇಲೆ ರತ್ನಗಂಬಳಿ ಹೊದ್ದಿದ್ದಾನೆ ; ರುದ್ರಾಕ್ಷಿಗಳ ತೊಡುಗೆ ಧರಿಸಿದ್ದಾನೆ, ಒಂದು ಕೈಯಲ್ಲಿ ಬೆಳುಗೊಡೆ ಇನ್ನೊಂದು ಕೈಯಲ್ಲಿ ದಂಡವನ್ನು ಹಿಡಿದಿದ್ದಾನೆ. ಮೈಯ ಮೇಲೆ ಭಸ್ಮಲೇಪನ ಮಾಡಿಕೊಂಡಿರುವುದೇ ಅಲ್ಲದೆ ಹಣೆಯ ಮೇಲೆ ತ್ರಿಪುಂಡ್ರದ ರೇಖೆಗಳನ್ನು ಧರಿಸಿದ್ದಾನೆ.

ಸಂಭ್ರಮದಿಂದ ಮಾದರಸ ಸ್ವಾಗತಿಸಿ ಒಳಗೆ ಬರಮಾಡಿಕೊಳ್ಳುತ್ತಾನೆ. ನೀಳ ಜಡೆ, ಗಂಭೀರ ಮುಖಮುದ್ರೆಯ ಆ ಯೋಗಿಯು ಮಗುವಿನ ಹಣೆಗೆ ತ್ರಿಪುಂಡ್ರವನ್ನು ಧರಿಸಿ “ಓಂ ನಮಃ ಶಿವಾಯ” ಮಂತ್ರವನ್ನು ಉಚ್ಚರಿಸುತ್ತಾನೆ. “ದೇಹಕ್ಕೆ ಜನ್ಮವಿತ್ತ ತಾಯಿತಂದೆಗಳು ನಿಮಿತ್ತ ಮಾತ್ರರು. ಅವರ ದರ್ಶನವನ್ನು ಜಗತ್ತಿಗೆ ಬಂದ ತಕ್ಷಣ ಪಡೆಯುವುದು ಬೇಡ” ಎಂದು ಯೋಗ ಧ್ಯಾನದಲ್ಲಿದ್ದನೋ ಎಂಬಂತೆ ಆ ನಿರ್ಮಲಾತ್ಮಕ ಶಿಶುವು ಕಣ್ದೆರೆದು ಗುರುದರ್ಶನ ಪಡೆದು, ಎಲ್ಲರಿಗೂ ಹರ್ಷವನ್ನಿತ್ತನು. ಯೋಗಿಗಳು ನುಡಿದರು. “ಮಾದರಸಾ, ದೇವನ ಚಿತ್ಕಳೆಯೊಂದು ಇಳೆಗೆ ಇಳಿದ ಸೂಚನೆಯಾಯಿತು. ಆ ಬೆಳಕು ಇಳಿದ ದಿಕ್ಕನ್ನು ಅರಸಿ ನಾನು ಬಂದಿದ್ದೇನೆ, ನನ್ನ ನಿನ್ನ ಮಾತ್ರವಲ್ಲ ಲೋಕದ ಆಶೋತ್ತರವನ್ನು ಪೂರೈಸಲು ಬಂದ ಕಾರಣಿಕನಾದ ಶಿವನ ಶಿಶು ಇವನು. ಮಾದಲಾಂಬಿಕಾ ತಾಯಿ, ನೀವು ನಿಮಿತ್ತ ಮಾತ್ರರಾದ ಜನ್ಮದಾತರು. ಬಸವನೆಂದು ಮಗುವಿಗೆ ಹೆಸರನ್ನಿಡಿ, ಪ್ರತಿನಿತ್ಯ ಪೂಜಾ ನಂತರ ತೀರ್ಥ-ಪ್ರಸಾದಗಳನ್ನು ಕೊಟ್ಟು ಸಲಹಿರಿ, ಶಿವಾರ್ಪಿತವಲ್ಲದುದನ್ನು ಕೊಡದಿರಿ” ಎಂದು ಆಜ್ಞಾಪಿಸಿ ಅಲ್ಲಿಂದ ನಿರ್ಗಮಿಸಿದರು.

ಬಸವರಸರು ಬಿದಿಗೆಯ ಚಂದ್ರನಂತೆ ಬೆಳೆದರು ; ದಿನ ದಿನಕ್ಕೂ ವೃದ್ಧಿಯಾದರು. ಅವರು ಅಸಾಮಾನ್ಯ ಬುದ್ದಿಶಾಲಿ, ತೀಕ್ಷ್ಣಮತಿ, ಬರಹ, ಗಣಿತ, ಶಬ್ದಾರ್ಥ ರಸ ಭಾವೋಕ್ತಿ ಪ್ರವೀಣತೆ ಭರತ ಛಂದೋ ವ್ಯಾಕರಣ ಸಂಗೀತ ಸಾಹಿತ್ಯ ಆಗಮ ಪುರಾಣ ಎಲ್ಲವನ್ನೂ ಬಲು ಬೇಗನೆ ಗ್ರಹಿಸುವರು. ವಿದ್ಯೆಯಲ್ಲಿ ಪ್ರತಿಭಾವಂತರಾದಂತೆ, ಸಾಹಸದಲ್ಲಿಯೂ ಮುಂದು. ತಮ್ಮ ಸಹಪಾಠಿಯಾದ ಬೆನಕನು ಕಾಲು ಜಾರಿ ಕೊಳದಲ್ಲಿ ಬಿದ್ದಿದ್ದಾಗ ಉಳಿದವರೆಲ್ಲಾ ಗಾಬರಿಗೊಂಡು ಓಡಿಹೋದರೆ ಇವರು ಧೈರ್ಯದಿಂದ ಈಜಿ ಅವನನ್ನು ಮೇಲಕ್ಕೆತ್ತಿ ಉಳಿಸಿದರು; ಎಲ್ಲರ ಪ್ರಶಂಸೆಗೂ ಪಾತ್ರರಾದರು.

ಜನ್ಮತಃ ತೀಕ್ಷ್ಣಮತಿಯಾದ ಬಸವರಸರು ಪ್ರಚಲಿತವಿದ್ದ ಅನೇಕ ಸಂಪ್ರದಾಯ, ಆಚಾರ-ವಿಚಾರಗಳನ್ನು ದಿಟ್ಟತನದಿಂದ ಪ್ರಶ್ನಿಸುತ್ತಿದ್ದರು. ಅವರ ಚಿಕಿತ್ಸಕ ಬುದ್ಧಿಯ ಪ್ರಶ್ನೆಗೆ ಉತ್ತರಿಸಲಾರದೆ ತಾಯಿತಂದೆಗಳು ತತ್ತರಿಸುತ್ತಿದ್ದರು. ಯಜ್ಞ- ಯಾಗಾದಿಗಳ ನೆಪದಲ್ಲಿ ತುಪ್ಪ-ಪೀತಾಂಬರಗಳನ್ನು ಸುಡುವುದು, ಆಡು ಅಶ್ವಗಳನ್ನು ಬಲಿಕೊಡುವುದು ಕಂಡು ಮಮ್ಮಲ ಮರುಗಿದರು. ಒಮ್ಮೆ ಹೋತವನ್ನು ಬಲಿ ಕೊಡುವ ಪ್ರಸಂಗ ಕಂಡು ಕಂಬನಿಗರೆದರು. ಅಗ್ನಿಯ ಮೂಲಕ ದೇವರಿಗೆ ಅರ್ಪಿಸುತ್ತೇವೆ ಎಂದು ಮೇಲು ವರ್ಗದವರು, ಮಾರಿ ಮಸಣಿಗೆ ಬಲಿಕೊಟ್ಟು ದೇವಿಯನ್ನು ತೃಪ್ತಿಪಡಿಸುತ್ತೇವೆ ಎಂದು ತಾಮಸರು, ದೇವರು-ಧರ್ಮಗಳ ಹೆಸರಿನಲ್ಲಿ ಕ್ರೌರ್ಯವನ್ನು ಪ್ರದರ್ಶಿಸುವುದನ್ನು ಕಂಡು ಬಲು ನೊಂದರು.

ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಎಂಟನೆಯ ವಯಸ್ಸಿಗೆ ಉಪನಯನ ಮಾಡಿಸಿಕೊಳ್ಳಬೇಕಾಗಿ ಬಂದಾಗ ಪ್ರಶ್ನೆಗಳ ಸರಮಾಲೆಯನ್ನು ಹೆತ್ತವರ ಮುಂದಿಟ್ಟರು.

1. ನಾನು ಹುಟ್ಟಿನಿಂದಲೂ ಶಿವಭಕ್ತಿಯ ಪಥದಲ್ಲಿರುವವನು. ಇದರ ಹೊರತು ಬೇರೆ ಮಾರ್ಗಬೇಡ.

2. ನೀವು ಶೈವ ಬ್ರಾಹ್ಮಣರಿದ್ದರೂ ಶಿವನೊಬ್ಬನನ್ನೇ ಆರಾಧಿಸದೆ ಸೂರ್ಯ, ಅಗ್ನಿ, ಅಜನನ್ನು, ಹರಿಯನ್ನು, ಇಂದ್ರಾದಿಗಳನ್ನು ಹೀಗೆ ಹಲವಾರು ದೇವತೆಗಳನ್ನು ಪೂಜಿಸುವಿರಿ.

3. ಒಂದು ಮಂತ್ರವನ್ನು ಅನುಸಂಧಾನಿಸದೆ ಹಲವಾರು ಮಂತ್ರ ಜಪಿಸುವಿರಿ.

4. ಜ್ಞಾನ ಮಾರ್ಗಕ್ಕಿಂತಲೂ ಕರ್ಮಮಾರ್ಗಕ್ಕೆ ಹೆಚ್ಚಿನ ಒತ್ತು ಕೊಡುವಿರಿ.

5. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವರ್ಣಭೇದ, ಸನ್ಯಾಸಿ ಸಂಸಾರಿ ಎಂಬ ಆಶ್ರಮಭೇದ, ಹೆಣ್ಣು-ಗಂಡು ಎಂಬ ಲಿಂಗಭೇದ ಎಲ್ಲವನ್ನೂ ಪಾಲಿಸಿ ಸಮಾನತೆಯ ತತ್ತ್ವವನ್ನು ವಿರೋಧಿಸುವಿರಿ. ಆದ್ದರಿಂದ ನಾನು ಇವೆಲ್ಲವನ್ನೂ ಒಪ್ಪಿ ಆಚರಿಸಲಾರೆ.

“ಸಂಪ್ರದಾಯದಂತೆ ನಡೆಯದ ಮೇಲೆ ನನ್ನ ಮಗ ನೀನಲ್ಲ, ನಿನಗಿನ್ನು ಇಲ್ಲಿ ಠಾವಿಲ್ಲ” ಎಂದು ಮಾದರಸ ಕನಲಿ ನುಡಿದಾಗ ಬಾಲಕ ಬಸವರಸರು “ಶಿವನೇ ನನ್ನ ತಾಯಿ ತಂದೆ, ಶಿವಭಕ್ತರೇ ನನ್ನ ಬಂಧುಗಳು' ಎಂದು ಮನೆಯಿಂದ ನಿರ್ಗಮಿಸುವರು. ಸ್ವಗೃಹವನ್ನು ತೊರೆದು ಸತ್ಯಾನ್ವೇಷಕರಾಗಿ ಹೊರಟು, ಜ್ಞಾನಾಕಾಂಕ್ಷಿಯಾಗಿ ಸುಪ್ರಸಿದ್ಧ ಪಾಶುಪತ ಶೈವರ ಗುರುಕುಲವಿದ್ದ ಕೂಡಲ ಸಂಗಮಕ್ಷೇತ್ರಕ್ಕೆ ಆಗಮಿಸುವರು. ಕೃಷ್ಣಾ-ಮಲಾಪಹಾರಿಯರ ಸಂಗಮದಲ್ಲಿದ್ದ ದೇವಾಲಯವನ್ನು ಕಂಡು, ಹರ್ಷಾತಿರೇಕಗೊಂಡು, ದೇವಾಲಯವನ್ನು ಪ್ರವೇಶಿಸಿ, ಭಾವಾತಿರೇಕದಿಂದ ಹಾಡಲು ತೊಡಗುವರು. ಅನಿಮಿತ್ತ ಬಂಧುವನ್ನು, ತಾಯಿ ತಂದೆಯನ್ನು ಬಹುಕಾಲ ಕಳೆದುಕೊಂಡು ಅನಾಥವಾಗಿ ಅಲೆದಾಡಿ ಪುನಃ ಅವರನ್ನು ಪಡೆದಷ್ಟು ಸಂತೋಷವಾಯಿತು. ತಾಯಿಯ ಮಡಿಲಲ್ಲಿ ಹುದುಗಿಕೊಂಡು ಆನಂದಬಾಷ್ಪಗಳನ್ನು ಸುರಿಸುವ, ದಾರಿ ತಪ್ಪಿ ದಾರಿ ಸೇರಿದ ಮಗುವಿನಂತೆ ಸಂಗಮೇಶ್ವರನನ್ನು ಕಂಡು ಹಾಡತೊಡಗಿದರು.

ಅಕಟಕಟಾ ಶಿವಾ ನಿನಗಿನಿತು ಕರುಣೆ ಇಲ್ಲವಯ್ಯಾ ;
ಅಕಟಕಟಾ ಶಿವ ನಿನಗಿನಿತು ಕೃಪೆಯು ಇಲ್ಲವಯ್ಯಾ ;
ಏಕೆ ಹುಟ್ಟಿಸಿದೆ ತಂದೆ ಇಹಲೋಕ ದುಃಖಿಯ,
ಪರಲೋಕದೂರನ? ಕೂಡಲ ಸಂಗಮದೇವಾ
ಎನಗಾಗಿ ಒಂದು ತರು ಮರಾದಿಗಳಿದ್ದಿಲ್ಲವೇ ?

ಸಂಗಮನಾಥ ಲಿಂಗದ ಮುಂದೆ ಭಾವೋನ್ಮಾದದಲ್ಲಿ ಹಾಡುತ್ತ ಕುಳಿತ ಬಾಲಕನ ಧ್ವನಿ ಕುಲಪತಿಗಳಾದ ಜಾತವೇದ ಮುನಿಗಳನ್ನು ಸೆಳೆಯಿತು. ಮೌನವಾಗಿ ನಿಂತು ಗಮನಿಸಿದರು. “ಈತಂ ಕಾರಣಿಕನಾಗಲೇ ವೇಳ್ಕುಂ” ಎಂದು ಮನಸ್ಸು ನುಡಿಯಿತು. ಆಗ ಬಾಲಕನ ಬಳಿಸಾರಿ, “ಎಲೆ ಭಕ್ತ, ನೀನೆಲ್ಲಿಗೂ ಹೋಗಬೇಡ ; ಯಾವುದಕ್ಕೂ ಚಿಂತಿಸಬೇಡ, ತಿಳಿಯ ನೀರನ್ನು ಪತ್ರ-ಪುಷ್ಪಗಳನ್ನು ತಂದು ದಿನನಿತ್ಯ ಸಂಗಮೇಶ್ವರನನ್ನು ಅರ್ಚಿಸಿ, ಆಶ್ರಮವಾಸಿಯಾಗಿದ್ದು ವಿದ್ಯಾಭ್ಯಾಸ ಮಾಡು.” ಈ ಆಶ್ವಾಸನೆಯಿಂದ ಮಳಕಿತರಾದ ಬಸವರಸರು ಅರ್ಚಕರಾಗಿ ವೃತ್ತಿಯನ್ನು ಮಾಡುತ್ತ ವಿದ್ಯಾರ್ಜನೆಗೆ ತೊಡಗಿದರು. ಜಾತವೇದ ಮುನಿಗಳು ಜ್ಞಾನವಾತ್ಸಲ್ಯಗಳ ಧಾರೆಯನ್ನೆರೆದು ಅವರನ್ನು ಪೋಷಿಸಿದರು.

ಅತ್ಯಂತ ಭಯ-ಭಕ್ತಿ-ಶ್ರದ್ಧೆಗಳಿಂದ ಸಂಗಮನಾಥನ ಪೂಜೆ ಮಾಡುತ್ತ ಭಕ್ತಿಯೋಗಿಯಾಗಿ, ಜ್ಞಾನಯೋಗ-ಅಷ್ಟಾಂಗ ಯೋಗಗಳೆಲ್ಲವನ್ನೂ ಸಾಧನ ಮಾಡುತ್ತ ತಾರುಣ್ಯಕ್ಕೆ ಕಾಲಿರಿಸುತ್ತಾರೆ. ವೇದ -ಶಾಸ್ತ್ರ- ಪುರಾಣೋಪನಿಷತ್ತುಗಳೆಲ್ಲವನ್ನೂ ಅಧ್ಯಯಿನಿಸಿ ಪಾಂಡಿತ್ಯ ಪೂರ್ಣ ವ್ಯಕ್ತಿತ್ವವನ್ನು ಸಂಪಾದಿಸಿಕೊಂಡಿದ್ದಾರೆ. ಈ ಹೊತ್ತಿಗೆ ಅವರ ಹೃದಯದಲ್ಲಿ ಸ್ವತಂತ್ರ ವಾದೊಂದು ಧರ್ಮದ ರೂಪುರೇಷೆ ಮೂಡಿ ನಿಂತಿದೆ. ಆವರೆಗೆ ಇದ್ದ ಹಲವಾರು ಮತಪಂಥ ಧರ್ಮಗಳಲ್ಲಿ ಒಂದೊಂದು ತತ್ತ್ವ ಹಿಡಿಸಿದ್ದರೂ ಯಾವುದೂ ಸಂಪೂರ್ಣ ತೃಪ್ತಿಕೊಟ್ಟಿಲ್ಲ. ಇಂಥ ತನ್ನದೊಂದು ಅನಿಸಿಕೆಯನ್ನು ಸಂಗಮ ಗುರುಕುಲದ ಘಟಿಕೋತ್ಸವ ಸಮಾರಂಭದಲ್ಲಿ ಬಸವರಸರು ಗುರುಗಳ ಮುಂದಿಡುತ್ತಾರೆ. ಮನೆದೇವರೆಂದು ಸಂಗಮೇಶ್ವರನ ದರ್ಶನಕ್ಕೆ ಆಗಮಿಸಿದ್ದ ಬಲದೇವ ಮಂತ್ರಿಗಳು 21 ವರ್ಷ ವಯಸ್ಸಿನ ತರುಣ ಬಸವರಸರ ಪ್ರೌಢಿಮೆ, ವಿಚಾರಧಾರೆ ಕಂಡು ಬೆರಗಾಗುತ್ತಾರೆ. ವಿದ್ಯಾರ್ಜನೆಯ ಪ್ರಮುಖ ಘಟ್ಟ ಪೂರೈಸಿದ್ದ ಆತ ತಮ್ಮ ಸಹೋದರಿ ಮಾದಲಾಂಬಿಕೆಯ ಮಗನಾದ ಬಸವರಸ ಎಂಬುದನ್ನು ಅರಿತಾಗ ಇನ್ನೂ ಹರ್ಷಗೊಂಡು, ತಮ್ಮ ಒಬ್ಬಳೇ ಮಗಳು ನೀಲಗಂಗಳನ್ನು ಕೊಟ್ಟು ಮದುವೆ ಮಾಡಲು ಇಚ್ಛಿಸುತ್ತಾರೆ. ಜಾತವೇದ ಮುನಿಗಳ ಮುಂದೆ ಈ ವಿಚಾರವನ್ನಿಟ್ಟಾಗ ಅವರೂ ಸಂತೋಷಿಸಿ ಬಸವರಸರ ಬಳಿ ಮದುವೆಯ ವಿಷಯ ಪ್ರಸ್ತಾಪಿಸಿದಾಗ ಅವರು ಆಘಾತಕ್ಕೊಳಗಾಗುತ್ತಾರೆ.

ಸಂಗಮದ ಸನಿಹದ ಬ್ರಹ್ಮಪುರಿಗೆ ಮದುವೆ ಮಾಡಿಕೊಡಲಾಗಿದ್ದ ಅಕ್ಕನಾಗಮ್ಮನು ಪತಿ ಶಿವಸ್ವಾಮಿಯ ಜೊತೆಗೆ ಸಂಗಮಕ್ಕೆ ಬಂದವಳು ಸೋದರ ಮಾವನ ಈ ಆಕಾಂಕ್ಷೆಯನ್ನು ಅನುಮೋದಿಸುವಳು. ಹೀಗೆ ಎಲ್ಲರ ಅಭಿಪ್ರಾಯವು ಒಂದಾದಾಗ ಸಂಸಾರದ ಕೆಸರಿನ ಮಡುವಿನಲ್ಲಿ ಇಳಿಯ ಬಯಸದ ಬಸವರಸರು ಸಂತಾಪಪಡುತ್ತ ಶಿವಾಲಯದೊಳಕ್ಕೆ ಬಂದು ಪ್ರಾರ್ಥಿಸಲು ತೊಡಗುತ್ತಾರೆ

ಕಾಲಲ್ಲಿ ಕಟ್ಟಿದ ಗುಂಡು ಕೊರಳಲ್ಲಿ ಕಟ್ಟಿದ ಬೆಂಡು
ತೇಲಲೀಯದು ಗುಂಡು ಮುಳುಗಲೀಯದು ಬೆಂಡು
ಇಂತಪ್ಪ ಸಂಸಾರ ಶರಧಿಯ ದಾಂಟಿಸಿ
ಕಾಲಾಂತಕನೇ ಕಾಯೋ ಕೂಡಲ ಸಂಗಮದೇವಾ |

ಬಲೆಗೆ ಸಿಲ್ಕಿದ ಮೃಗದಂತೆ ನಾನಯ್ಯ ;
ಗುರಿದಪ್ಪಿದ ಹುಲ್ಲೆಯಂತೆ ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನೆ.
ನಾನಾರ ಸಾರುವೆನಯ್ಯಾ, ತಾಯಾಗಿ ತಂದೆಯಾಗಿ ನೀನೇ
ಸಕಲ ಬಂಧು ಬಳಗ ನೀನೆ ಕೂಡಲ ಸಂಗಮದೇವಾ |

ಆಗ ಬಸವರಸರಿಗೆ ಫಕ್ಕನೆ ಸಗುಣ ಸಾಕ್ಷಾತ್ಕಾರವಾಗುವುದಲ್ಲದೆ ಸಂಗಮನಾಥನ ವಾಣಿ ಹೇಳುತ್ತದೆ. “ಎಲೆ ಮಗನೆ, ಬಸವಣ್ಣ ಬಸವಿದೇವ ನಿನ್ನಂ ಮಹೀತಳದೊಳು ಮೆರೆದಪೆವು. ನೀನು ಬಿಜ್ಜಳರಾಯನಿಪ್ಪ ಮಂಗಳವಾಡಕ್ಕೆ ಹೋಗು” ಎಂದು. ಬಸವಣ್ಣನವರು ಇನ್ನಷ್ಟು ದುಃಖಿತರಾಗಿ “ತಂದೆ, ನೀನೂ ಕ್ರೂರಿಯಾಗಬೇಡ ; ಹಾಲನ್ನು ಕೇಳುವ ಮಗುವಿಗೆ ಯಾರಾದರೂ ವಿಷವನ್ನು ಕೊಡುವರೆ? ನಿನ್ನ ಕಾರುಣ್ಯದ ಹಾಲನ್ನು ಕೇಳುವ ನನಗೆ ಸಂಸಾರ ಸುಖದ ವಿಷವನ್ನು ಕುಡಿಸುವೆಯಾ? ಬೇಡ.” ಎನ್ನುತ್ತಾರೆ. ಸಂಗಮನಾಥನು ಆಶ್ವಾಸನೆ ನೀಡುತ್ತ 'ಸದಾ ನಾನು ನಿನ್ನ ಬೆನ್ನಿಗೆ ಇರುತ್ತೇನೆ. ನಡೆ ಮಗನೆ' ಎಂದು ಹೇಳುವನು. “ಇಷ್ಟು ಮಾತ್ರವಲ್ಲ, ನೀನು ಶುದ್ಧಾಂಗನಾಗಿ ಬಂದು ವೃಷಭನ ಮುಂದೆ ಕುಳ್ಳಿರು, ನಾಳೆ ನಿನಗೆ ದೇವಾನುಗ್ರಹವಾಗಲಿದೆ.” ಎನ್ನುವನು.

ಅಂದು (14-01-1155) ಬಸವಣ್ಣನವರು ಮಿಂದು ಮಡಿಯುಟ್ಟು ಶುದ್ಧಾಂಗರಾಗಿ ಬಂದು ಕುಳಿತುಕೊಳ್ಳುತ್ತಾರೆ. ಬಹಳ ವರುಷಗಳಿಂದ ಒಂದು ವಿಚಾರ ಬಸವಣ್ಣನವರ ಮನಸ್ಸನ್ನು ಕೊರೆಯುತ್ತಿತ್ತು. ಜನರಲ್ಲಿ ಬಳಕೆಯಲ್ಲಿರುವ ಉಪಾಸ್ಯ ವಸ್ತುಗಳು ವಿಚಿತ್ರ, ವಿಲಕ್ಷಣ ಆಕಾರದವು ಇದ್ದು ಅವುಗಳಿಗೆ ಸರಿಯಾದ ತಾತ್ವಿಕ ಹಿನ್ನೆಲೆಯಿರಲಿಲ್ಲ. ಯೋಗಾಭ್ಯಾಸಕ್ಕೆ ಅವು ಉಪಯುಕ್ತವಾಗಿರಲಿಲ್ಲ. ದೇವರ ಸ್ವರೂಪವನ್ನು ಸಂಕೇತಿಸುತ್ತಿರಲಿಲ್ಲ. ಹೀಗಿರುವಾಗ ಒಂದಾನೊಂದು ದಿನ ಫಕ್ಕನೆ ಒಂದು ವಿಚಾರವು ಹೊಳೆದಿತ್ತು. ಅದೆಂದರೆ, “ವಿಶ್ವದಾಕಾರಲ್ಲಿ ಲಿಂಗದೇವನನ್ನು ದೇಹದಾಕಾರದಲ್ಲಿ ಜೀವನನ್ನು ರೂಪಿಸಿ ; ಬ್ರಹ್ಮಾಂಡದಲ್ಲಿ ಪಿಂಡಾಂಡವಿದೆ. ದೇವನ ಗರ್ಭದಲ್ಲಿ ಜೀವನು ಇದ್ದಾನೆ ಎಂಬರ್ಥದಲ್ಲಿ ಗೋಲಾಕಾರದ ಬ್ರಹ್ಮಾಂಡ ಸಂಕೇತದ ಕವಚದಲ್ಲಿ ದೇಹದಾಕಾರದ ಆತ್ಮ ಸಂಕೇತದ ಕುರುಹನ್ನು ಇಟ್ಟು ಒಂದುಗೂಡಿಸಬೇಕು.” ಎಂಬುದು. ಹೊರಗಿನ ಕವಚವು ದೃಷ್ಟಿಯೋಗಕ್ಕೆ, ಏಕಾಗ್ರತೆಗೆ ಸಹಕಾರಿಯಾಗುವಂತೆ ಅದು ಕಪ್ಪಾಗಿಯೂ, ಹೊಳಪುಳ್ಳದ್ದಾಗಿಯೂ ಇರಬೇಕೆಂದು ಆಲೋಚಿಸಿ, ಕಾಂತಿಯುಕ್ತವಾಗಿರುವ ಒಂದು ಆವರಣವನ್ನು ಕಂಡು ಹಿಡಿದಿದ್ದರು. ಈ ಕಲ್ಪನೆ ಕೃತಿಗಿಳಿದು ಗೋಲಾಕಾರದ ವಸ್ತುವಾದಾಗ (ರೂಪ ತಳೆದಾಗ) ಆನಂದದ ಉನ್ಮಾದವಾಗಿತ್ತು. ಸೃಷ್ಟಿಕರ್ತ ಲಿಂಗದೇವನ ಕುರುಹಾದ ಆ ವಸ್ತುವನು ಇಷ್ಟಲಿಂಗ ಎಂದು ಕರೆದಿದ್ದರು.

ಇಂಥ ಇಷ್ಟಲಿಂಗವನ್ನು ಚಿತ್ಕಳಾಭರಿತವಾಗಿ ಮಾಡಿಕೊಳ್ಳಬೇಕು ; ಲಿಂಗದೇವನ ಅನುಗ್ರಹವನ್ನು ಅದರಲ್ಲಿ ಅವತರಣ ಮಾಡಿಕೊಳ್ಳಬೇಕು ಎಂಬ ಆಸೆ ಅದಮ್ಯವಾಗಿದ್ದು, ಇಂತಹ ಅವತರಣ ಮಾಡಿಕೊಳ್ಳಲಿಕ್ಕೆ ಸಿದ್ಧರಾಗಿ ಕುಳಿತುಕೊಳ್ಳುತ್ತಿದ್ದಾರೆ. ಅವರ ಮನಃಸ್ತಿತಿ ಹೀಗಿದೆ :

ಎನ್ನಯ್ಯಾ ನಿಮ್ಮ ಅರಸುತ್ತಿದ್ದೇನೆ, ಎನ್ನಯ್ಯಾ ನಿಮ್ಮ ಅರಸುತ್ತಿದ್ದೇನೆ ;
ಎನ್ನಯ್ಯಾ, ಕೀಟಧ್ಯಾನದಲ್ಲಿ ನಿಮ್ಮನ್ನರಸುತ್ತಿದ್ದೇನೆ ;
ಎನ್ನಯ್ಯಾ, ಕೂಡಲಸಂಗಮದೇವಾ
ಭ್ರಮರದ ಲೇಸಿನಂತೆ ಕಾರುಣ್ಯವ ಮಾಡು
ತಪ್ಪೆನ್ನದು, ತಪ್ಪೆನ್ನದು ಶಿವಧೋ ಶಿವಧೋ |

ಅರಿವಿಂದ ಅರಿದು ಏನುವ ತಟ್ಟದೆ ಮುಟ್ಟದೆ ಇದ್ದೇನಯ್ಯಾ
ಅಂತರಂಗ ಸನ್ನಿಹಿತ ಬಹಿರಂಗ ನಿಶ್ಚಿಂತನಾಗಿ ಇದ್ದೇನಯ್ಯಾ
ಸ್ವಾತಿಯ ಬಿಂದುವ ಬಯಸುವ ಚಿಪ್ಪಿನಂತೆ
ಗುರುಕಾರುಣ್ಯವ ಬಯಸುತ್ತಿಪ್ಪೆ ಕೂಡಲಸಂಗಮದೇವಾ.

ಎಂದು ಉತ್ಕಟವಾದ ಧ್ಯಾನದಲ್ಲಿರುವರು. ತಮ್ಮ ಹೃತ್ಕಮಲದೊಳು ಬೆಳೆದ ಲಿಂಗಕ್ಕೆ ಕರ ಕಮಳವನಾಂತು, ಅದನ್ನು ಸ್ನೇಹರಸಭರಿತ ಸಾತ್ಮಿಕ ದೃಷ್ಟಿಯಿಂದ ಆಲಂಗಿಸುವಂತೆ ನೋಡುತ್ತಾ ಕುಳಿತಾಗ, ಒಂದು ಅದ್ಭುತವಾದ ಬೆಳಕಿನ ಪ್ರವಾಹವು ಧಾರೈಸುವುದು. ಆಗ ಸೃಷ್ಟಿಕರ್ತ ಪರಮ ಪ್ರಭು ಲಿಂಗದೇವನು ''ಕಾರುಣ್ಯಮಂ ನೀಡಿ ಸಾಮರ್ಥ್ಯಮಂ ಹೇರುವನು.” ಈವರೆಗೆ ಭೂತಿಯಾಗಿದ್ದ ಬಸವರಸರು ಈಗ ವಿಭೂತಿ ಪುರುಷ ಬಸವಲಿಂಗರಾಗುತ್ತಾರೆ. ದೇವನ ಕೃಪೆಯನ್ನು ಹೀಗೆ ಕೊಂಡಾಡುತ್ತಾರೆ :

ಎನ್ನ ಗುರು ಪರಮಗುರು ನೀನೆ ಕಂಡಯ್ಯ ;
ಎನ್ನ ಗತಿಮತಿ ನೀನೆ ಕಂಡಯ್ಯ
ಎನ್ನ ಅಂತರಂಗದ ಜ್ಯೋತಿ ನೀನೆ ಕಂಡಯ್ಯ
ಕೂಡಲಸಂಗಮದೇವಾ, ನೀನೆ ಎನಗೆ ಗುರು, ನಾನೇ ನಿಮ್ಮ ಶಿಷ್ಯ !

ಎಂಬಂತೆ ಲಿಂಗದೇವನ ಕರುಣೆಯ ಕಂದ, ಪ್ರತಿನಿಧಿಯಾಗುತ್ತಾರೆ.

ಹೀಗೆ ಲಿಂಗದೇವನು ಕಾರುಣ್ಯವನ್ನು ನೀಡಿ, ಸಾಮರ್ಥ್ಯಮಂ ಹೇರಿ ಲೋಕದ ಸೇವೆಗೆ ತನ್ನ ಮಗನನ್ನು ಸನ್ನದ್ಧನನ್ನಾಗಿ ಮಾಡುತ್ತಾನೆ. ಇಷ್ಟಲಿಂಗದ ಈ ಕಲ್ಪನೆ ಮತ್ತು ತಾವು ದೇವ ಕಾರುಣ್ಯವನ್ನು ಅವತರಣ ಮಾಡಿಕೊಳ್ಳಲು ಸಾಧ್ಯವಾದುದು ಅಪೂರ್ವ ಆನಂದವನ್ನು ತಂದಿದ್ದು, ಹೃದಯ ತುಂಬಿ ಬಸವಣ್ಣನವರು ಹಾಡುತ್ತಾರೆ. ದೇವನ ಲೀಲೆಯನ್ನು ಕೊಂಡಾಡುತ್ತಾರೆ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ,
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ !
ಅಪ್ರಮಾಣ ಅಗಮ್ಯ ಅಗೋಚರ ಅಪ್ರತಿಮಲಿಂಗವೆ,
ಕೂಡಲಸಂಗಮದೇವಯ್ಯಾ, ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ !


ಹೀಗೆ ಬಸವಣ್ಣನವರ ಮತಿಯಲ್ಲಿ ಅರಿವಾಗಿ ಮೂಡಿ, ಸ್ವತಃ ತಾನೇ ಜ್ಞಾನ ಗುರುವಾಗಿ ಮಾರ್ಗದರ್ಶನ ಮಾಡಿ, ಸದ್ಗುರುವಾಗಿ ಕಾರುಣ್ಯ ನೀಡಿ ತಮ್ಮನ್ನು ತನ್ನ ಸಂದೇಶ ವಾಹಕರನ್ನಾಗಿ, ಪ್ರತಿನಿಧಿಯನ್ನಾಗಿ ಮಾಡಿದ ಪರಮಾತ್ಮನ ಮಹಾನ್ ಲೀಲೆಗೆ ವಿಸ್ಮಿತರಾಗಿದ್ದಾರೆ. “ನೀವು ಅರಿವಾಗಿ ಮುಂದುದೋರಿದ ಕಾರಣ ನಿಮ್ಮಿಂದಲೇ ನಿಮ್ಮನರಿದೆ.” ಎಂದು ಕೃತಜ್ಞತೆಯಿಂದ ಬಾಗುತ್ತಾರೆ.

ಶ್ರೀ ಗುರು ಕರುಣಿಸಿ [*] ಹಸ್ತಮಸ್ತಕ ಸಂಯೋಗದಿಂದ
ಪ್ರಾಣಲಿಂಗವನ್ನು ಕರತಳಾಮಳಕವಾಗಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಒಳಗೆನ್ನದೆ ಹೊರಗೆನ್ನದೆ ಆ ಲಿಂಗದಲ್ಲಿ
ನಚ್ಚಿ ಮಚ್ಚಿ ಹರುಷದೊಳೋಲಾಡಿದೆ
ಆ ಲಿಂಗವ ಪಡೆದು ಆನಂದಿಸುವೆ ಕೂಡಲಸಂಗಮದೇವಾ.


ಎಂದು ಹಾಡುತ್ತಾರೆ. ಈ ಇಷ್ಟಲಿಂಗವು ಯಾವುದೇ ದೇವತೆಯ, ವ್ಯಕ್ತಿಯ, ಪ್ರಾಣಿಯ ಕುರುಹಾಗದೆ ಪರವಸ್ತುವಿನ ಕುರುಹು ಎಂಬುದನ್ನು ಸ್ಪಷ್ಟಿಕರಿಸುತ್ತಾರೆ.

ವೇದ ವೇದಾಂತಗಳಿಗೆ ಅಸಾಧ್ಯವಾದ
ಅನುಪಮ ಲಿಂಗವ ತಂದುಕೊಟ್ಟನಯ್ಯ ಸದ್ಗುರು[*] ಎನ್ನ ಕರಸ್ಥಲಕ್ಕೆ
ನಾದ ಬಿಂದು ಕಳೆಗಳಿಗೆ ಅಭೇದ್ಯವಾದ
ಅಚಲಿತಲಿಂಗವ ತಂದು ಕೊಟ್ಟನಯ್ಯಾ ಸದ್ಗುರು ಎನ್ನ ಕರಸ್ಥಲಕ್ಕೆ
ವಾಙ್ಮಯಕ್ಕಗೋಚರವಾದ ಅಖಂಡಿತ ಲಿಂಗವ ತಂದುಕೊಟ್ಟನಯ್ಯಾ
ಸದ್ಗುರು[*] ಎನ್ನ ಕರಸ್ಥಲಕ್ಕೆ ; ಇನ್ನು ನಾನು ಬದುಕಿದೆನು
ನಾ ಬಯಸುವ ಬಯಕೆ ಕೈಸಾರಿತ್ತಿಂದು ಕೂಡಲಸಂಗಮದೇವಾ.

ಕಾರಣಿಕ ಪುರುಷ ಬಸವಣ್ಣನವರ ಅಪೂರ್ವ ಕನಸು ನನಸಾಗಿದೆ.

ಕಾಣಬಾರದ ವಸ್ತು ಕೈಗೆ ಸಾರಿತ್ತಯ್ಯಾ
ಆನಂದದಿಂದ ಆಡುವೆ ಹಾಡುವೆನಯ್ಯಾ
ಎನ್ನ ಕಣ್ಣ ತುಂಬಿ ನೋಡುವೆ
ಎನ್ನ ಮನವೊಲಿದು ಭಕ್ತಿಯ ಮಾಡುವೆ ಕೂಡಲಸಂಗಮದೇವಯ್ಯ ನಿನಗೆ

ಚಿನ್ಮಯ ಚಿತ್ಪ್ರಕಾಶದ ಪರಮಾತ್ಮನೂ, ಹೃದಯ ಕಮಲದಲ್ಲಿ ಬೆಳಗಿ ತೋರುವ ಪರಂಜ್ಯೋತಿ ಆತ್ಮವು-ಎರಡೂ ಸಾಕಾರಗೊಂಡು ಕರಸ್ಥಲಕ್ಕೆ ಬಂದಿರುವುದು ಅವರನ್ನು ಹರ್ಷಪುಳಕಿತರನ್ನಾಗಿ ಮಾಡಿದೆ :

ಚಿನ್ಮಯ ಚಿತ್ಪ್ರಕಾಶ ಚಿದಾನಂದ ಲಿಂಗವೆ,
ಎನ್ನ ಹೃದಯ ಕಮಲದಲ್ಲಿ ಬೆಳಗಿ ತೋರುವ ಪರಂಜ್ಯೋತಿ
ಎನ್ನ ಕರಸ್ಥಲಕ್ಕೆ ಅನುವಾದ ಧರ್ಮಿ
ಎನ್ನ ಕಂಗಳ ಕೊನೆಯಲ್ಲಿ ಮೂರ್ತಿಗೊಂಡಿಪ್ಪೆಯಯ್ಯಾ,
ಕೂಡಲಸಂಗಮದೇವಯ್ಯಾ,

ಎಂದು ಅಂಗೈಯಲ್ಲಿರಿಸಿ ದಿಟ್ಟಿಸಿ ನೋಡಿ ಆನಂದಿಸುತ್ತಾರೆ. ಬಸವಣ್ಣನವರ ಆಸೆ ಇಂದು ನಿನ್ನೆಯದಲ್ಲ ; ಬಾಲ್ಯದಿಂದಲೂ ರೂಪುಗೊಂಡದ್ದು. ಹನ್ನೆರಡು ವರುಷಗಳ ಹಿಂದೆ ಮೂಡಿನಿಂತದ್ದು, ಬೆಳೆದು ಸರ್ವಾಂಗವನ್ನೂ ವ್ಯಾಪಿಸಿದ್ದು, ಅದೀಗ ತೃಪ್ತಿಗೊಂಡಿದೆ.

ಎನ್ನ ಗಂಡ ಬರಬೇಕೆಂದು.........
ಎನ್ನಂತರಂಗದ ಮನೆಯ ತೆರಹು ಮಾಡಿ
ಅಷ್ಟದಳವೆಂಬ ಓವರಿಯೊಳಗೆ ನಿಜನಿವಾಸವೆಂಬ ಹಾಸುಗೆಯ ಹಾಸಿ,
ಧ್ಯಾನವೆಂಬ ಮೇಲುಕಟ್ಟಂ ಕಟ್ಟಿ, ಜ್ಞಾನವೆಂಬ ದೀಪವ ಬೆಳಗಿ
ನಿಷ್ಕ್ರಿಯವೆಂಬ ಉಪಚಾರಂಗಳ ಹರಹಿಕೊಂಡು,
ಪಶ್ಚಿಮದ್ವಾರವೆಂಬ ಬಾಗಿಲ ತೆರೆದು,
ಕಂಗಳೇ ಪ್ರಾಣವಾಗಿ ಬರವ ಹಾರುತ್ತಿರ್ದೆನಯ್ಯಾ.
ನಾನು ಬಾರೆನೆಂದು ಉಮ್ಮಳಿಸಿಹಳೆಂದು
ತಾನೇ ಬಂದು ಎನ್ನ ಹೃದಯ ಸಿಂಹಾಸನದ ಮೇಲೆ ಮೂರ್ತಗೊಂಡಡೆ
ಎನ್ನ ಬಯಕೆ ಸಯವಾಗಿತ್ತು ;
ಹಿಂದೆ ಹನ್ನೆರಡು ವರುಷದಲ್ಲಿದ್ದ ಚಿಂತೆಯಿಂದು ನಿಶ್ಚಿಂತೆಯಾಯಿತ್ತು
ಕೂಡಲಸಂಗಮದೇವರು ಕೃಪಾಮೂರ್ತಿಯಾದ ಕಾರಣ ನಾನು ಬದುಕಿದೆನು.

ಈ ಪ್ರಸಂಗ ಬಹು ಮಹತ್ವದ್ದು, ಬಸವಣ್ಣನವರಿಗೆ ಸಾಕ್ಷಾತ್ಕಾರದ ಅನುಭವ ತಂದುಕೊಟ್ಟಿತು; ಇಷ್ಟಲಿಂಗದ ಕಲ್ಪನೆಯನ್ನು ಗಟ್ಟಿಗೊಳಿಸಿತು. ಬಸವರಸರನ್ನು ಸಂಗನ ಬಸವಣ್ಣರನ್ನಾಗಿ, ಮಂತ್ರಪುರುಷ ಬಸವಲಿಂಗರನ್ನಾಗಿ ಲಿಂಗಾಯತ ಧರ್ಮ ಸಂಸ್ಥಾಪಕರನ್ನಾಗಿ ಮಾಡಿತು. ಜೊತೆಗೆ ಇದು ಬಸವಣ್ಣನವರ ಜೀವನದ ಮಹತ್ವದ ಘಟ್ಟ. ಏಕೆಂದರೆ ಇದೀಗ ದೇವನ ಕರುಣೆಯೇ ತಮಗೆ ಬೆಂಬಲವಾಗಿ, ಲಿಂಗದೇವನ ಧ್ಯಾನವೇ ತಮಗೆ ಸಂಗಡವಾಗಿ, ಕ್ರಾಂತಿಯ ಕ್ಷೇತ್ರದಲ್ಲಿ ಕಾಲಿಡಲು ಬಸವಣ್ಣನವರು ಹೊರಡುತ್ತಾರೆ. ಇದು ಮಾನಸಿಕ ಪರಿವರ್ತನೆಯ ಘಟ್ಟವೂ ಅಹುದು ; ಬಹು ದೇವತೋಪಾಸನೆಯಿಂದ ಏಕದೇವತಾ ಉಪಾಸನೆಗೆ ಮೊದಲು ನಿಂತಿದ್ದು, “ಮನಕ್ಕೆ ಮನೋಹರವಲ್ಲದ ಗಂಡರು ಮನಕ್ಕೆ ಬಾರರು ಕೇಳವ್ವಾ ಕೆಳದಿ, ಪನ್ನಗ ಭೂಷಣನಲ್ಲದ ಗಂಡನು ಇನ್ನೆನಗಾಗದ ಮೊರೆ ನೋಡವ್ವಾ: ಕನ್ನೆಯಂದಿನ ಕೂಟ, ಚಿಕ್ಕಂದಿನ ಬಾಳುವೆ, ನಿಮಾಣೆಯಯ್ಯಾ ಕೂಡಲ ಸಂಗಮದೇವಾ.” ಎಂದು ಶಿವನಲ್ಲದೆ ಅನ್ಯದೈವವನ್ನು ತಿರಸ್ಕರಿಸಿದ್ದರು. ಇದೀಗ ಏಕದೇವತಾ ಉಪಾಸನೆಯಿಂದ ವಿಶಾಲ ವ್ಯಾಪ್ತಿಯ ವೈಚಾರಿಕ ಏಕದೇವೋಪಾಸನೆಯತ್ತ ನಿರ್ಗುಣೋಪಾಸನೆಯತ್ತ ಸಾಗುತ್ತಿದ್ದಾರೆ. ದೇವನು ಕೂಡಲ ಸಂಗಮ ಕ್ಷೇತ್ರದಲ್ಲಿ ಗುಡಿಯ ನಾಲ್ಕು ಗೋಡೆಗಳಲ್ಲೇ ಸೀಮಿತನಾಗಿ ಇಲ್ಲ. ಅವನು ಸರ್ವವ್ಯಾಪಿ ಸರ್ವಶಕ್ತ!

ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು
ಆದಿ ಮಧ್ಯವಸಾನಗಳಿಲ್ಲದ ಸ್ವತಂತ್ರಲಿಂಗವು
ನಿತ್ಯ ನಿರ್ಮಳಲಿಂಗವು ;
ಅಯೋನಿ ಸಂಭವನಯ್ಯಾ ಕೂಡಲಸಂಗಮದೇವರು.

ಎಂಬುದನ್ನು ಅರಿಯುತ್ತಾರೆ. ಭುವನದ ಬೆಳಕಾಗುವಂತೆ ಕಾರ್ಯಗೈಯಲು ಕೂಡಲ ಸಂಗಮದಿಂದ ಹೊರಡುತ್ತಾರೆ.

ತಮ್ಮ ಸ್ವತಂತ್ರ ಕೊಡುಗೆಯಾದ ಇಷ್ಟಲಿಂಗದ ಸೂತ್ರವನ್ನು ಹಿಡಿದೇ ಸ್ವತಂತ್ರ ಸಂವಿಧಾನದ ಲಿಂಗಾಯತ ಧರ್ಮ ರೂಪುಗೊಳ್ಳುತ್ತದೆ. ಬಸವಣ್ಣನವರ ಸೈದ್ಧಾಂತಿಕ ಆಲೋಚನೆಗಳೆಲ್ಲ ಕಲ್ಯಾಣದ ಕಾರ್ಯಕ್ಷೇತ್ರವನ್ನು ಅವರು ಪ್ರವೇಶಿಸಿದಾಗ ಪ್ರಾಯೋಗಿಕ ರೂಪ ತಳೆಯ ತೊಡಗುತ್ತವೆ. ಮಂಗಲವೇಡೆಗೆ ಮೊದಲು ಬಂದ ಬಸವಣ್ಣನವರು ಬಲದೇವರಸರ ಪುತ್ರಿಯಾದ ನೀಲಗಂಗಳನ್ನು ಮದುವೆಯಾಗಿ ದಾಂಪತ್ಯ ಜೀವನವನ್ನು ಸ್ವೀಕರಿಸುತ್ತಾರೆ. ಕಾಯಕದಿಂದ ಆರ್ಜಿಸಿದುದನ್ನು ಮಾತ್ರ ಭುಂಜಿಸಬೇಕು ಎಂದು ಸಾರಿ ಕರಣಿಕ ಕಾಯಕವನ್ನು ಸ್ವೀಕರಿಸುತ್ತಾರೆ. ತಮ್ಮ ಅಸಾಮಾನ್ಯ ಪ್ರತಿಭೆ- ಪಾಂಡಿತ್ಯಗಳಿಂದ ದಿನದಿನಕ್ಕೂ ಮೇಲೇರುತ್ತಾರೆ. ಯಾರೂ ಓದಲಿಕ್ಕೆ ಸಾಧ್ಯವಾಗದಿದ್ದ ಪುರಾತನ ಸ್ವರ್ಣಪತ್ರವನ್ನು ಓದಿ, ಸಿಂಹಾಸನದ ಅಡಿಯಲ್ಲಿದ್ದ ಅಪಾರ ನಿಧಿಯನ್ನು ತೆಗೆಸಿಕೊಟ್ಟು ಸಿದ್ಧರಸ ಮಂತ್ರಿಯ ನಿಧನದಿಂದ ತೆರವಾಗಿದ್ದ ಅರ್ಥಮಂತ್ರಿಯ (ಭಂಡಾರಿ) ಸ್ಥಾನವನ್ನು ತುಂಬುತ್ತಾರೆ. ಬಿಜ್ಜಳನ ಆತ್ಮೀಯ ಸ್ನೇಹಿತರು, ಮಾರ್ಗದರ್ಶಕರೂ ಆಗುವ ಮಟ್ಟಕ್ಕೆ ಬಂದ ಬಸವಣ್ಣನವರು ನೀಲಗಂಗಳಲ್ಲಿ ಬಾಲಸಂಗಯ್ಯ ಎಂಬ ಮಗನನ್ನು ಪಡೆಯುತ್ತಾರೆ. ಆದರೆ ಕೆಲ ಕಾಲದಲ್ಲಿಯೇ ಅವರು ವಿರಕ್ತ ಜೀವನದಲ್ಲಿ ಕಾಲಿಟ್ಟು, ತಮ್ಮ ಪತ್ನಿಯನ್ನೂ ಆ ಸ್ತರಕ್ಕೆ ಏರಿಸುತ್ತಾರೆ. ಅದನ್ನು ಪೃಥ್ವಿಗಗ್ಗಳ ಚೆಲುವೆಯಾದ ನೀಲಮ್ಮ ಶಾಯಿಯವರು ಹೀಗೆ ಹೇಳುತ್ತಾರೆ ;

ಮಡದಿ ಎನ್ನಲಾಗದು ಬಸವಂಗೆ ಎನ್ನನು ;
ಪುರುಷನೆನ್ನಲಾಗದು ಬಸವನ ಎನಗೆ ;
ಉಭಯ ಕುಳವ ಹರಿದು ಬಸವಂಗೆ ಶಿಶುವಾನಾದನು ;
ಬಸವನನ್ನ ಶಿಶುವಾದನು ;
ಪ್ರಮಥರು ಪುರಾತರು ಸಾಕ್ಷಿಯಾಗಿ
ಸಂಗಯ್ಯನಿಕ್ಕಿದ ದಿವ್ಯವ ಮೀರಿ ಬಸವನೊಳಗಾನಡಗಿದೆ.

ಹೀಗೆ ಪತಿ-ಪತ್ನಿಯರೆಂಬ ಬಾಂಧವ್ಯ ಹರಿದು ತಂದೆ-ಮಗಳು, ತಾಯಿ- ಮಗ ಎಂಬ ಸಂಬಂಧವಳವಟ್ಟಿತ್ತು. ಅದನ್ನರಿತೇ ಅಲ್ಲಮ ಪ್ರಭುಗಳು ಬಸವಣ್ಣನವರನ್ನು ಪರಮ ವಿರಕ್ತರು ಎಂಬುದಾಗಿ ಸ್ತುತಿ ಮಾಡುತ್ತಾರೆ ;

ಸತಿಯ ಕಂಡು ವ್ರತಿಯಾದ ಬಸವಣ್ಣ;
ವ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ,
ಬ್ರಹ್ಮಚಾರಿಯಾಗಿ ಭವಗೆಟ್ಟ ಬಸವಣ್ಣ;
ಗುಹೇಶ್ವರ ಲಿಂಗದಲ್ಲಿ ಅಖಂಡ ಬ್ರಹ್ಮಚಾರಿ ಬಸವಣ್ಣನೊಬ್ಬನೆ!

ವಿಷಯಾಸಕ್ತನಾದ ಚಾಲುಕ್ಯ ತೈಲಪನು ರಾಜ್ಯ ನಿರ್ವಹಣೆಯಲ್ಲಿ ನಿರಾಸಕ್ತನಾದಾಗ ರಾಜ್ಯಭಾರವನ್ನು ವಹಿಸಿಕೊಳ್ಳಲು ರಾಜಧಾನಿ ಕಲ್ಯಾಣಕ್ಕೆ ಬಿಜ್ಜಳ ಬರುವಾಗ ಬಸವಣ್ಣನವರೂ ಮಂಗಳವೇಡೆಯಿಂದ ಕಲ್ಯಾಣಕ್ಕೆ ಬರುತ್ತಾರೆ. ಅವರ ಕಾರ್ಯಕ್ಷೇತ್ರ ವಿಸ್ತಾರವಾಗುತ್ತದೆ. ಸಮಾಜದಲ್ಲಿ ಧಾರ್ಮಿಕ, ನೈತಿಕ, ಸಾಂಸ್ಕೃತಿಕ, ಸಾಹಿತ್ಯಕ ಮೌಲ್ಯಗಳನ್ನೊಳಗೊಂಡ ಸಂವಿಧಾನವಾಗಿ ವಚನ ಸಾಹಿತ್ಯ ಆವಿರ್ಭವಿಸಿತು. ಈ ತತ್ತ್ವಗಳನ್ನು ಅನುಷ್ಠಾನಿಸಲು ಮತ್ತು ಧರ್ಮ ಪ್ರಸಾರದ ಮಹತ್ತರ ಕಾರ್ಯ ಮಾಡಲು ಅನುಭವ ಮಂಟಪವನ್ನು ನಿರ್ಮಿಸುತ್ತಾರೆ. ಜ್ಞಾನಶಕ್ತಿಯಾಗಿ ನೀಲಾಂಬಿಕೆ, ಕ್ರಿಯಾಶಕ್ತಿಯಾಗಿ ಅಕ್ಕನಾಗಲಾಂಬಿಕೆ ಬಸವಣ್ಣನವರ ಸಹಾಯಕ ಶಕ್ತಿಗಳಾಗಿ ನಿಲ್ಲುತ್ತಾರೆ. ಧರ್ಮದ ಕಡೆಗೆ ಜನ ಬರದಾಗ ಧರ್ಮವನ್ನೇ ಜನರ ಕಡೆಗೆ ಒಯ್ಯಬೇಕೆಂಬ ಆಸೆ ಹೊತ್ತು, ಬಸವಣ್ಣನವರು ಧರ್ಮಗಂಗೆಯನ್ನು ಜನ ಸಾಮಾನ್ಯರ ಮನೆ- ಮನಗಳ ಬಾಗಿಲಿಗೆ ಒಯ್ಯುತ್ತಾರೆ. ಎಲ್ಲರಿಗೂ ಧರ್ಮಸಂಸ್ಕಾರ ನೀಡುತ್ತಾರೆ. ಈ ಪರಿವರ್ತನ ಶೀಲ ಕ್ರಾಂತಿಗೆ ಆಕರ್ಷಿತರಾಗಿ ಜನರು ತಂಡೋಪತಂಡವಾಗಿ ಬರುತ್ತಾರೆ. ಜಂಬೂದ್ವೀಪದ ಶಿರೋಭಾಗದಿಂದ ಹಿಡಿದು ಪಾದದವರೆಗಿನ ಭೂಭಾಗದಲ್ಲೆಲ್ಲ ಧರ್ಮಗುರು ಬಸವಣ್ಣನವರ ಖ್ಯಾತಿ ಹರಡಿ ಸತ್ಯದ ಸಾಧಕರು, ಶೋಧಕರು ಕಲ್ಯಾಣದತ್ತ ಧಾವಿಸುತ್ತಾರೆ.

ಕಲ್ಯಾಣದ ಈ ಮಹಾನ್ ಕ್ರಾಂತಿಯಲ್ಲಿ ಹೆಗಲೆಣೆಯಾಗಿ ನಿಂತ ಮತ್ತೊರ್ವ ವ್ಯಕ್ತಿ ಅಕ್ಕನಾಗಮ್ಮನ ಮಗ ಚಿನ್ಮಯಜ್ಞಾನಿ ಚನ್ನಬಸವಣ್ಣನವರು. ವಯಸ್ಸಿಗೆ ಮೀರಿ ಜ್ಞಾನ-ಅನುಭವಗಳನ್ನು ಪಡೆದ, ಬಸವ ಧರ್ಮವನ್ನೇ ಮೈಗೂಡಿಸಿಕೊಂಡು ಬೆಳೆದ ಚೇತನ, ಧರ್ಮಗುರುವಿನ ಕರಕಮಲದಲ್ಲಿ ಜನ್ಮಸಿದ ಕಾರುಣ್ಯ ಶಿಶು. “ಇಂದೇ ಹುಟ್ಟಿದ ಕೂಸಿಗೆ ಇಂದೇ ಜವ್ವನವಾಯಿತು” ಎಂಬ ತೀವ್ರಗತಿಯ ಸಾಧನೆ ಅವರದು.

ಅನುಭವ ಮಂಟಪದ ಪ್ರಗತಿ, ಜನರ ಪರಿವರ್ತನೆ, ಬಸವಣ್ಣನವರ ಕೀರ್ತಿ ಮುಂತಾದುವನ್ನು ಸಹಿಸದ ಕೊಂಡಿ ಮಂಚಣ್ಣ, ನಾರಾಯಣ ಕ್ರಮಿತ ಮುಂತಾದವರು, ಬಸವಣ್ಣನವರು ತಮ್ಮ ಭಕ್ತರಿಗೆ ಭಂಡಾರವನ್ನು ಸೂರೆ ಮಾಡುತ್ತಿದ್ದಾರೆಂಬ ಆರೋಪ ಹೊರಿಸಿ, ಬಿಜ್ಜಳನ ಮನಸ್ಸನ್ನು ಕಲಕಿದರು. ಆದರೆ ಧರ್ಮಪಿತರು ಲೆಕ್ಕ-ಪತ್ರಗಳನ್ನು ಆಗಿಂದಾಗಲೇ ಮಂಡಿಸಿ, ಭಂಡಾರವು ದುರುಪಯೋಗವಾಗಲಿಲ್ಲ ; ಮಾತ್ರವಲ್ಲ ಹಿಂದಿನ ಎಲ್ಲ ಸಚಿವರ ಕಾಲಕ್ಕಿಂತಲೂ ಇಮ್ಮಡಿ ಮುಮ್ಮಡಿ ಆದಾಯವು ಬೊಕ್ಕಸಕ್ಕೆ ಬರುತ್ತಿದೆ ಎಂಬುದನ್ನು ತೋರಿಸಿದರು. ಬಸವ ಧರ್ಮಾನುಯಾಯಿಗಳು ಪ್ರಾಮಾಣಿಕ ಕಾಯಕ ಜೀವಿಗಳು, ಉಚಿತವಾಗಿ ಕೊಟ್ಟರೂ ತೆಗೆದುಕೊಳ್ಳುವವರಲ್ಲ. ಕಾಯಕದಿಂದ ಬಂದುದನ್ನಷ್ಟೇ ಅನುಭವಿಸುವವರು ಎಂಬುದನ್ನು ಮನಗಾಣಿಸಿದರು. ಬಿಜ್ಜಳನು ತನ್ನ ಸಂಶಯಕ್ಕೆ ಪಶ್ಚಾತ್ತಾಪ ಪಟ್ಟ: ಬಸವಣ್ಣನವರ ಕಾರ್ಯದಕ್ಷತೆ, ಯೋಜನಾ ಚತುರತೆ, ಮುತ್ಸದ್ದಿತನಕ್ಕೆ ಬೆರಗಾದ. ಇಂತಹ ನಿಸ್ವಾರ್ಥಿಯ ಕೈಯಲ್ಲಿ ರಾಜ್ಯಲಕ್ಷ್ಮಿ ಸುರಕ್ಷಿತವೆಂದು ಬಗೆದು ಬಲದೇವ ಮಂತ್ರಿಗಳ ನಿಧನದಿಂದ ತೆರವಾಗಿದ್ದ ಪ್ರಧಾನಿಯ ಸ್ಥಾನವನ್ನು ಬಸವಣ್ಣನವರಿಗೆ ವಹಿಸಿಕೊಟ್ಟನು. ಹೀಗೆ ಕೊಂಡಿ ಮಂಚಣ್ಣ ಮುಂತಾದವರು ಹೊರಿಸಿದ ಆರೋಪದ ಹಾವು, ಲಿಂಗದೇವನ ಕರುಣೆಯಿಂದ ಧರ್ಮಪಿತ ಬಸವಣ್ಣನವರಿಗೆ ಕೀರ್ತಿಯ ಹೂವಾಯಿತು.

ಹೊನ್ನಿನೊಳಗೊಂದೊರೆಯ, ವಸ್ತ್ರದೊಳಗೊಂದೆಳೆಯ, ಅನ್ನದೊಳಗೊಂದ ಗುಳ ನಾಳೆಗಿರಲಿ ಎಂದು ಸಂಗ್ರಹಿಸುವುದಿಲ್ಲ. ಹೊತ್ತಾರೆ ಎದ್ದು ಎನ್ನ ಸುಖಕ್ಕೆ, ಮಡದಿ ಮಕ್ಕಳ ಸುಖಕ್ಕೆ ಕುದಿಯದೆ, ಪ್ರಜೆಗಳ ಹಿತಚಿಂತನೆ ಮಾಡುವೆ” ಎಂಬ ಪ್ರತಿಜ್ಞೆ ಹೊತ್ತು ಬಯಸದೆ ತಾನಾಗಿ ಬಂದುದು ಪರಮಾತ್ಮನ ಪ್ರಸಾದವೆಂದು ಸೇವಾಕೈಂಕರ‍್ಯ ಭಾವದಿಂದ ಸ್ವೀಕರಿಸಿ ಮಹಾಮಂತ್ರಿಯಾದರು. ಬಿಜ್ಜಳನು ಸಂಭ್ರಮದಿಂದ ಮೆರವಣಿಗೆ ಮಾಡಿ ಸಮಸ್ತ ಪರಿವಾರ ಸಿಬ್ಬಂದಿಯೊಡನೆ ಬಸವಣ್ಣನವರನ್ನು ಮಹಾಮನೆಗೆ ಬೀಳ್ಕೊಟ್ಟಾಗ, ಜನರು ಆ ಮಹಾಪುರುಷನ ದರ್ಶನದಿಂದ ಆನಂದ ತುಂದಿಲರಾದರು. ಮಹಾಮನೆಯೊಳಕ್ಕೆ ಆರತಿ ಬೆಳಗಿ ಸ್ವಾಗತಿಸಿ ಅಕ್ಕ ನಾಗಮ್ಮ ಆನಂದದಿಂದ ಧರ್ಮಗುರುವಿನ ಪ್ರತಿಭೆ ಕೊಂಡಾಡುವಳು. ಆಗ ಬಸವಣ್ಣನವರು ವಿನಯದಿಂದ ಹೇಳುವರು ; “ಇದೆಲ್ಲ ದೇವನೊಲಿದು ಇತ್ತುದು; ಅವನ ಒಲುಮೆಯಿಂದ ಕೊರಡೂ ಕೊನರುವುದು, ಬರಡೂ ಹಯನಾಗುವುದು. ಮಾಡಿದೆ-ಪಡೆದ ಎನ್ನಲು ನಾನಾರು?” ಬಸವಣ್ಣನವರು ಒಬ್ಬ ಆದರ್ಶ ಮುತ್ಸದ್ದಿಯಾಗಿ ಬಾಳಿದರು. ಉತ್ತಮ ಸ್ಥಿತಿಗೇರಿ ಉನ್ನತ ಅಧಿಕಾರದಲ್ಲಿದ್ದಾಗ ಬಂಧು- ಬಳಗದವರು ಏನಾದರೂ ಸ್ವಾರ್ಥ ಸಾಧಿಸಲು ಬಂದರೆ, “ನೆಂಟರಿಷ್ಟರು ಬಂದರೆ ಸಮಯವಿಲ್ಲ ಎನ್ನಿ ; ಒಡೆಯರಾದ ಪ್ರಜೆಗಳು ಬಂದರೆ ಗುಡಿ ತೋರಣವ ಕಟ್ಟಿ ಸ್ವಾಗತಿಸಿ” ಎನ್ನುತ್ತಿದ್ದರು. “ಜಾತಿಯಿಂದ ಯಾರೂ ನನ್ನವರಲ್ಲ, ರಕ್ತ ಸಂಬಂಧದಿಂದಲೂ ನನ್ನವರಲ್ಲ, ಲಿಂಗಪಥದಲ್ಲಿ ನಡೆವವರಷ್ಟೇ ನನ್ನವರು” ಎನ್ನುತ್ತಿದ್ದರು, ಅನುಭಾವಿಗಳು, ಯೋಗಿಗಳು, ಪ್ರಜೆಗಳು ಅವರ ಪ್ರಾಣವಾಗಿ “ಜಂಗಮಪ್ರಾಣಿ” ಎನ್ನಿಸಿಕೊಂಡರು, ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿ ಕಾಯಕದ ಹಾಲಿನ ಹೊಳೆಯಲ್ಲಿ, ದಾಸೋಹದ ತೆಪ್ಪ ತೇಲುವಂತಹ ಸಮೃದ್ಧಿ ಸಾಧಿಸಿದರು. ಜಾತಿವರ್ಣ ವರ್ಗರಹಿತ ಧರ್ಮಸಹಿತ ಕಲ್ಯಾಣ ರಾಜ್ಯವನ್ನು ಕಟ್ಟುವುದರಲ್ಲಿ ಯಶಸ್ವಿಯಾದರು. ಬೇಡುವವರೇ ಇಲ್ಲದ, ಎಲ್ಲರೂ ನೀಡಲು ಉತ್ಸುಕರೂ ಸಮರ್ಥರೂ ಆದ ಸಮಾಜವನ್ನು ಕಟ್ಟಿದರು.

ಧಾರ್ಮಿಕ ಸಂಸ್ಕಾರವು ಎಲ್ಲ ವರ್ಗದವರಿಗೂ, ಪ೦ಚಮ ವರ್ಣದವರೆನ್ನಿಸಿಕೊಂಡ ಅಸ್ಪೃಶ್ಯರಿಗೂ, ಪತಿತರೆನ್ನಿಸಿಕೊಂಡ ವೇಶ್ಯೆಯರಿಗೂ ಲಭ್ಯವಾಗುವಂತೆ ಮಾಡಿ, ಅವರೆಲ್ಲರನ್ನು ಇಂಬಿಟ್ಟುಕೊಂಡು ಅರಿವಿನ ಮಹಾಂತರನ್ನಾಗಿ ಮಾಡಿದರು. ಹೀಗಾಗಿ ಬಸವನಾಮವು ಮಂತ್ರವಾಯಿತು. ಬಸವನ ದಿವ್ಯಮೂರ್ತಿ ಎಲ್ಲರ ಹೃದಯ ಸಿಂಹಾಸನದಲ್ಲಿ ಪ್ರತಿಷ್ಠಾಪನೆಗೊಂಡಿತು. ಬಸವಣ್ಣನವರು ನುಡಿದುದು ಶಾಸ್ತ್ರವಾಯಿತು. ನಡೆದುದು ಸತ್‌ಪಥವಾಯಿತು. ಕಲ್ಯಾಣವೆಂಬುದು ಪ್ರಣತೆಯಾಗಿ, ಭಕ್ತಿರಸವು ತೈಲವಾಗಿ, ಸದಾಚಾರವು ಬತ್ತಿಯಾಗಿ ಬಸವ ಎಂಬ ಜ್ಯೋತಿ ಮುಟ್ಟಲು ದೈವೀ ಪ್ರಕಾಶವು ತೊಳಗಿ ಬೆಳಗತೊಡಗಿತು. ಆ ಪ್ರಕಾಶದಲ್ಲಿ ತಮ್ಮ ಬಾಳಿನ ಹಣತೆಗಳನ್ನು ಹೊತ್ತಿಸಿಕೊಂಡು ಬೆಳಗಲು ಅನೇಕರು ಧಾವಿಸಿದರು.

'ಜಾತಿಯಿಂದ ಗುರುತ್ವ ಬರದು, ಆತ್ಮ ಜ್ಯೋತಿಯಿಂದ ಮಾತ್ರ'ಎಂಬುದನ್ನು ಘೋಷಿಸಿ ಬಸವಣ್ಣನವರು ಶೂನ್ಯ ಪೀಠವನ್ನು ಸ್ಥಾಪಿಸಿದರು. ವೀರ ವೈರಾಗ್ಯನಿಧಿ ಅಲ್ಲಮಪ್ರಭುಗಳು ಪ್ರಥಮ ಶೂನ್ಯಪೀಠಾಧಿಕಾರಿಯಾಗಿ ಅನುಭವ ಮಂಟಪದ ಸಚೇತಕ ಶಕ್ತಿಯಾದರು. ಲೋಹ ಚುಂಬಕದತ್ತ ಕಬ್ಬಿಣವು ಆಕರ್ಷಿಸಲ್ಪಡುವಂತೆ ವೀರ ವಿರಾಗಿಣಿ ಅಕ್ಕಮಹಾದೇವಿ, ಲಿಂಗಾಂಗಯೋಗಿ ಸಿದ್ಧರಾಮೇಶ್ವರ, ಕಾಶ್ಮೀರದ ಮಹಾರಾಜ ಮೋಳಿಗೆ ಮಾರಯ್ಯ, ತತ್ತ್ವನಿಷ್ಠುರಿ ಮಡಿವಾಳ ಮಾಚಯ್ಯ ಆಕರ್ಷಿಸಲ್ಪಟ್ಟರು. ಅನುಭವ ಮಂಟಪವು ಜ್ಞಾನನಿಧಿ ಚನ್ನಬಸವಣ್ಣ, ಕ್ರಿಯಾಶಕ್ತಿ ಅಕ್ಕನಾಗಲಾಂಬಿಕೆ, ಹಡಪದ ಅಪ್ಪಣ್ಣ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಬ್ರಾಹ್ಮಣ ಮಧುವರಸ, ಸಮಗಾರ ಹರಳಯ್ಯ, ಅಂಬಿಗರ ಚೌಡಯ್ಯ, ಒಕ್ಕಲಿಗ ಮುದ್ದಣ್ಣ, ತುರುಗಾಹಿ ರಾಮಣ್ಣ ಮುಂತಾದ ಅಸಂಖ್ಯಾತ ಜಂಗಮ ಪುಂಗವರಿಂದ ವಿಜೃಂಭಿಸಿತು.

“ಜಾತಿಗಳು ಮಾನವ ಕಲ್ಪಿತವೇ ವಿನಾ ದೇವ ನಿರ್ಮಿತವಲ್ಲ” ಎಂಬುದಾಗಿ ಘೋಷಿಸಿ, ಬಸವ ಧರ್ಮವನ್ನು ಸ್ವೀಕಾರ ಮಾಡಿದ ಬ್ರಾಹ್ಮಣ ಮಂತ್ರಿ ಮಧುವರಸರ ಮಗಳ ಮತ್ತು ಸಮಗಾರ ಹರಳಯ್ಯನ ಮಗನ ಮದುವೆಗೆ ಬಸವಣ್ಣನವರು ಪ್ರೋತ್ಸಾಹ ನೀಡಿದರು. ಬಸವಣ್ಣನವರ ಅಗಾಧ ಯೋಜನೆ, ಸಮಾಜದಲ್ಲಿ ತರುತ್ತಿದ್ದ ಅಪೂರ್ವ ಪರಿವರ್ತನೆಗಳನ್ನು ಕಂಡು ಒಳಗೇ ತಳಮಳಿಸುತ್ತಿದ್ದ ಸಂಪ್ರದಾಯವಾದಿಗಳು ಅಂತರ್ವರ್ಣೇಯ ವಿವಾಹದ ನೆಪದಲ್ಲಿ ಸಿಡಿದೆದ್ದರು. ಶಾಸ್ತ್ರ ವಿರುದ್ಧವಾದ ವರ್ಣ ಸಂಕರವಿದೆಂದು ಆರೋಪಿಸಿದರು. ಸ್ವತಂತ್ರ ವಿಚಾರವಾದಿಯಲ್ಲದ ಬಿಜ್ಜಳನನ್ನು ಪ್ರಚೋದಿಸಿ ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ವಿಧಿಸುವಂತೆ ಮಾಡಿದರು. ರಾಜಾಜ್ಞೆಯನ್ನು ಹೊತ್ತ ಬಸವಣ್ಣನವರು ಕಲ್ಯಾಣದ ಗಡಿ ತೊರೆದು ಕೂಡಲ ಸಂಗಮಕ್ಕೆ ಬಂದು, ಅಂತರ್ಮುಖಿಗಳಾಗಿ ತಪೋಮಗ್ನರಾದರು.

ಅತ್ತ ಕಲ್ಯಾಣದಲ್ಲಿ ಅಂತರ್ವರ್ಣೀಯ ವಿವಾಹದಲ್ಲಿ ಭಾಗವಹಿಸಿದ್ದಕ್ಕಾಗಿ ಮಧುವರಸ, ಶೀಲವಂತ ಮತ್ತು ಹರಳಯ್ಯನವರಿಗೆ ಕಣ್ಣು ಕೀಳಿಸುವ ಶಿಕ್ಷೆ ಮತ್ತು ಎಳೆಹೂಟ್ಟೆ ಶಿಕ್ಷೆಯಾಯಿತು. ಈ ಕ್ರಾಂತಿಗೆ ಬೆಂಬಲ ನೀಡಿದ ಸಾವಿರಾರು ಶರಣರ ವಧೆಯಾಯಿತು. ಬಿಜ್ಜಳನ ಅನ್ಯಾಯದ ವಿರುದ್ಧ ಸಿಡಿದೆದ್ದ ಚಾಲುಕ್ಯ ಸಾಮಂತರಾದ ಜಗದೇವ ಮಲ್ಲಣ್ಣ ಬೊಮ್ಮಣ್ಣರಿಂದ ಬಿಜ್ಜಳನ ವಧೆಯಾಯಿತು.

ಅಂದು ನಾಳನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿ (30-7- 1196); ಕೂಡಲ ಸಂಗಮ ಕ್ಷೇತ್ರದಲ್ಲಿ ತಮ್ಮ ಕಲ್ಲಿನ ಗವಿಯಲ್ಲಿ ಬಸವಣ್ಣನವರು ಇಷ್ಟಲಿಂಗ ಪೂಜೆ-ತ್ರಾಟಕಯೋಗದಲ್ಲಿ ತಲ್ಲೀನರಾಗಿದ್ದಾರೆ. ಆಗ ಅವರಿಗೊಂದು ದಿವ್ಯವಾಣಿ ಕೇಳಿ ಬರುತ್ತದೆ. “ಬಸವಣ್ಣಾ, ನೀನು ಮರ್ತ್ಯಕ್ಕೆ ಬಂದ ಮಣಿಹ ಪೂರೈಸಿತು. ಇನ್ನು ನೀನು ನನ್ನಲ್ಲಿ ಒಂದಾಗು.” ಈ ವಾಣಿಯನ್ನು ಕೇಳಿ ಅತ್ಯಂತ ಹರ್ಷಿತರಾಗುವರು. ತಮ್ಮ ಬದುಕಿನ ಸಿಂಹಾವಲೋಕನವನ್ನು ಮಾಡಿಕೊಂಡಾಗ ಸಂತೃಪ್ತಿಯ ಅಲೆ ಮುಖದ ಮೇಲೆ ಹಾಯುತ್ತವೆ. ಆಗ ಅವರು ತಮ್ಮ ಬಾಳೀಗ ನಿಷ್ಪತ್ತಿಯ ಹಣ್ಣು; ದೇವನಿಗೆ ಸಲ್ಲಬೇಕಾದುದು
ಎಂದು ಅರಿಯುವರು.

ಭಕ್ತಿ ಎಂಬ ಪೃಥ್ವಿಯ ಮೇಲೆ ; ಗುರುವೆಂಬ ಬೀಜವಂಕುರಿಸಿ;
ಲಿಂಗವೆಂಬ ಎಲೆಯಾಯಿತ್ತು ; ವಿಚಾರವೆಂಬ ಹೂವಾಯಿತ್ತು ;
ಆಚಾರವೆಂಬ ಕಾಯಾಯಿತ್ತು ; ನಿಷ್ಪತ್ತಿಯೆಂಬ ಹಣ್ಣಾಯಿತ್ತು.
ನಿಷ್ಪತ್ತಿಯೆಂಬ ಹಣ್ಣು ತಾನು ತೊಟ್ಟು ಕಳಚಿ ಬೀಳುವಲ್ಲಿ,
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.


ಎಂದು ಪ್ರಸನ್ನ ಭಾವದಿಂದ ಹಾಡುವರು.

“ಅಯ್ಯಾ, ಹಿಂದೆಯಾನು ಮಾಡಿದ ಮೆರಹಿಂದ ಬಂದೆನೀ ಭವದಲ್ಲಿ,
ನಿಮ್ಮ ಲೀಲೆ ನಿಮ್ಮ ವಿನೋದ ಸೂತ್ರದಿಂದ
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗೀತಂಗಳ ಆಡಿ ಹಾಡಿ
ಆ ದಾಸೋಹವೆಂಬ ಮಹಾಗಣ ಸಂಕುಳದೊಳೆನ್ನನಿರಿಸಿ
ನಿಮ್ಮ ಭಕ್ತಿಯ ಘನವ ನೀವೇ ಮೆರೆಯಲೆಂದು
ಪರವಾದಿ ಬಿಜ್ಜಳನ ತಂದೊಡ್ಡಿ, ಎನ್ನನು ಅವನೊಡನೆ ಹೋರಿ
ಮುನ್ನೂರ ಅರವತ್ತು ಸತ್ತ ಪ್ರಾಣವನೆತ್ತಿಸಿ,
ಮೂವತ್ತಾರು ಕೊಂಡೆಯವ ಗೆಲಿಸಿ,
ಎಂಬತ್ತೆಂಟು ಪವಾಡಂಗಳ ಕೊಂಡಾಡಿ,
ಮರ್ತ್ಯಲೋಕದ ಮಹಾಗಣಂಗಳ ಒಕ್ಕುದನಿಕ್ಕಿ ಎನ್ನ ಸಲಹಿದಿರಿ
ನಿಮ್ಮ ಮಹಾಗಣಂಗಳು ಮೆಚ್ಚಿ ಎನ್ನ ಸೂತಕವ ತೊಡೆದರು
ಪ್ರಭುದೇವರ ಕರುಣದಿಂದ ಪ್ರಾಣಲಿಂಗ ಸಂಬಂಧ ಸಯವಾಯಿತ್ತು
ನೀವು ಕಳಿಸಿದ ಬೆಸನು ಸಂದಿತ್ತು
ಉಘೇ ! ಇನ್ನು ಕೂಡಿಕೊಳ್ಳಾ ಕೂಡಲಸಂಗಮದೇವಾ”.

ತಮ್ಮ ಕಾರಣಿಕ ಹುಟ್ಟು, ವೈಚಾರಿಕ ಬಾಲ್ಯ, ಮನೆಯಿಂದ ನಿರ್ಗಮನ, ಕೂಡಲ ಸಂಗಮಕ್ಕೆ ಆಗಮನ, ಗುರುಕುಲ ವಾಸ, ದೇವಾನುಗ್ರಹ, ಕಲ್ಯಾಣಕ್ಕೆ ಆಗಮನ, ರಾಜಕೀಯ ಕ್ಷೇತ್ರದಲ್ಲಿ ತ್ವರಿತ ಪ್ರಗತಿ, ಧಾರ್ಮಿಕ ಆಂದೋಳನ, ದೀನದಲಿತರ ಸುಧಾರಣೆ, ಅನುಭವ ಮಂಟಪ ನಿರ್ಮಾಣ, ಶರಣ ಸಮೂಹದಲ್ಲಿ ಸಂಗಮ, ಜಾತ್ಯತೀತ ಸಮಾಜ ರಚನೆ - ಈ ಎಲ್ಲ ಚಿತ್ತಪಟಲದ ಮೇಲೆ ಹಾಯ್ದು ಸಂತೃಪ್ತಿ ಎನಿಸುವುದು. ಒಂದು ವಿಶೇಷ ಮಣಿಹ ಹೊತ್ತು, ದೈವೀ ಕಾರುಣ್ಯ ಧರಿಸಿ, ದೇವನ ಮನಸ್ಸು ಸಂತೋಷಗೊಳ್ಳುವಂತೆ, ತಮ್ಮ ಅಂತರಾತ್ಮ ಮೆಚ್ಚುವಂತೆ ಬಾಳಿಯಾಗಿದೆ. ಇನ್ನು ದೇವನ ಕರೆಯಂತೆ ಅವನಲ್ಲಿ ಲೀನವಾಗುವುದು ಎಂದು ಸಂಕಲ್ಪಿಸುವರು. ತಮ್ಮ ಕುಂಡಲಿನೀ ಶಕ್ತಿಯನ್ನು ಆಧಾರ ಚಕ್ರದಿಂದ ಮೇಲೆತ್ತುವರು. ಆತ್ಮ ಚೇತನದ ವಿಶೇಷ ಬೆಳಕು ನಾಭಿ ಚಕ್ರದಿಂದ ಮೇಲೇರುತ್ತದೆ. ಹೃದಯದ ಭಾಗದಲ್ಲಿ ಕ್ಷಣಕಾಲ ನಿಲುತ್ತದೆ. ಪುನಃ ಆರೋಹಣವಾಗುತ್ತದೆ. ಆಗ ಬಸವಣ್ಣನವರ ಮುಖವು ದೇದೀಪ್ಯಮಾನವಾಗಿ ಬೆಳಗುವುದು. ಕಾಯ-ಜೀವಗಳ ಹೊಲಿಗೆಯನ್ನು ಬಿಚ್ಚಿ ಇಚ್ಛಾಮರಣಿಗಳಾಗಿದ್ದ ಅವರು ತಮ್ಮ ದೇಹದಿಂದ ಅತ್ಮವನ್ನು ಬೇರ್ಪಡಿಸಿ ಪರಮಾತ್ಮ ಚೈತನ್ಯದಲ್ಲಿ ಲಯಗೊಳಿಸಿದರು. ಆಗ ಮೇಲಿನಿಂದ ಒಂದು ಬೃಹತ್ ಬೆಳಕು ಇಳಿದು ಈ ಚಿಕ್ಕ ಜ್ಯೋತಿಯನ್ನು ಅಡಗಿಸಿಕೊಳ್ಳುತ್ತದೆ. ಅರ್ಥಾತ್ ಪರಮಾತ್ಮ ಪರಂಜ್ಯೋತಿಯಲ್ಲಿ ಬಸವ ಚೈತನ್ಯದ ಚಿಜ್ಯೋತಿ ವಿಲೀನಗೊಳ್ಳುತ್ತದೆ. ಹೀಗೆ ಬಸವಣ್ಣನವರು ಬಯಲಿನಲ್ಲಿ ಬಯಲಾದರು. ಮರ್ತ್ಯದ ಬಾಳ್ವೆಗೆ ಮಂಗಲವನ್ನು ಹಾಡಿದರು. ಅವರು ಇಳೆಯನ್ನಗಲಿದ ನೂರಾರು ವರುಷಗಳಿಂದಲೂ ಆ ದಿನವು ಬಸವ ಪಂಚಮಿಯೆಂದು ಖ್ಯಾತಿವೆತ್ತಿದೆ. ಶಾರೀರಿಕವಾಗಿ ಬಸವಣ್ಣನವರು ಅಗಲಿದ್ದರೂ ಶರಣರ ಹೃದಯ ಕಮಲದಲ್ಲಿ ಪರಮ ಪ್ರಕಾಶವಾಗಿ ಬೆಳಗುತ್ತಲಿದ್ದಾರೆ. ಅಂತೆಯೇ ಜನಪದವು ಹೀಗೆ ಕೊಂಡಾಡುತ್ತದೆ.

ಎಲ್ಲ ಬಲ್ಲಿದನಯ್ಯಾ ಕಲ್ಯಾಣ ಬಸವಯ್ಯ
ಚೆಲ್ಲಿದನು ತಂದು ಶಿವ ಬೆಳಕ | ನಾಡೊಳಗೆ
ಸೊಲ್ಲೆತ್ತಿ ಜನವು ಹಾಡುವುದು ||

ಉತ್ತಿ ಬಿತ್ತುವ ಮಂತ್ರ ಬಿತ್ತಿ ಬೆಳೆಯುವ ಮಂತ್ರ
ಸತ್ಯ ಶಿವಮಂತ್ರ ನಿನ್ನೆಸರು | ಬಸವಯ್ಯ
ಮರ್ತ್ಯದೊಳು ಮಂತ್ರ ಜೀವನಕೆ |

ಜಯಗುರು ಬಸವೇಶ ಹರಹರ ಮಹಾದೇವ

ಎರಡನೆಯ ಪೂಜೆ

ಮೊದಲು ಹಚ್ಚಿದ ವಿಭೂತಿ ಗಂಧ ಅಳಿಸದೆ, ಹೂಗಳನ್ನು ತೆಗೆಯದೆ ಪುನಃ ಅದೇ ವಸ್ತುಗಳನ್ನು ಅರ್ಪಿಸಿ, ಹಿಂದೆ ಹೇಳಿದಂತೆಯೇ ಎರಡನೆಯ ಪೂಜೆ ಸಲ್ಲಿಸಬೇಕು.

ಕ್ರಿಯಾಮೂರ್ತಿ (ಪೂಜಾರಿ) ಗಳಿಗೆ ಸೂಚನೆ :- ಮನೆಯವರು ತಾವೇ ಸ್ವಯಂ ಪ್ರೇರಣೆಯಿಂದ ಈ ಪೂಜಾವ್ರತ ಮಾಡುವುದು ಶ್ರೇಯಸ್ಕರ. ಹಾಗೆ ಮಾಡದೇ ವಿಶೇಷ ದಿನಗಳಂದು ಪೂಜಾರಿಗಳನ್ನು ಕೇಳಿಕೊಂಡಾಗ ಅವರೇ ಮಾಡಿಸಬಹುದು. ಆಗ ಐದು ಪೂಜೆಗೆ ಐದು ತೆಂಗಿನಕಾಯಿ ಬೇಕು ಪತ್ರೆ ಪುಷ್ಪ, ನೈವೇದ್ಯ ಬಗೆಬಗೆಯ ಫಲಗಳು ಬೇಕು ಎಂದೆಲ್ಲ ಮನೆಯವರನ್ನು ಹಿಂಸಿಸಬಾರದು. ಮನೆಯವರು ಅವರ ಶಕ್ತ್ಯಾನುಸಾರ ಮಾಡಲು ಅವಕಾಶ ಕೊಡಬೇಕು. ಆ ವ್ರತ ಈ ವ್ರತ ಎಂದು ಹಣವನ್ನು ವ್ಯರ್ಥ ಮಾಡುವ, ತತ್ತ್ವ ಬಿಟ್ಟು ನಡೆಯುವ ಭಾವುಕ ಭಕ್ತರನ್ನು ತಾತ್ವಿಕ ದಾರಿಗೆ ಹಚ್ಚುವ ಪ್ರಯತ್ನ ಈ ವ್ರತದಲ್ಲಿದೆ. ಪುನಃ ಇಲ್ಲಿಗೂ ಶೋಷಣೆಯ ಮಾರ್ಗವನ್ನು ತರಬಾರದೆಂದು ಪೂಜಾರಿಗಳಿಗೆ ಸೂಚಿಸುತ್ತೇವೆ.

ಪೂಜಿಸುವಾಗ ಈ ಕೆಳಗಿನ ಹಾಡನ್ನು ಹಾಡಬೇಕು :

ಬಸವ ಸ್ತೋತ್ರ

ಮುಕ್ತಿದಾಯಕ ಶರಣರಕ್ಷಕ ನಿತ್ಯಮೂರುತಿ ಬಸವನೆ
ಭಕ್ತಿಯಿಂದಲಿ ಚರಣಕಮಲಕೆ ನಿತ್ಯ ವಂದಿಪೆ ತಂದೆಯೆ

ಅರಿವು ಇಲ್ಲದ ಮನುಜ ಜನ್ಮವು ಶಾಪವೆನ್ನುತ ನೊಂದೆನು
ಮರೆವ ಹರಿಯುವ ಗುರುವೆ ಎನುತಲಿ ನಿನ್ನ ಚರಣವ ಪಿಡಿದೆನು
ನಿನ್ನ ಕರುಣೆಯು ಎನ್ನ ಬಾಳಿನ ರಕ್ಷೆ ಎನುತಲಿ ನಂಬಿಹೆ
ಬನ್ನ ತೊಡೆಯುವ ಬೆಳಗ ಬೀರುವ ಶಕ್ತಿ ಎನ್ನುತ ಕಾದಿಹೆ l

ಮೋಹರಹಿತನೆ ಜ್ಞಾನಭರಿತನೆ ಪರಮಶಾಂತಿಯ ಧಾಮವೆ
ಕಾಹುದೆಮ್ಮನು ಕೈಯಬಿಡದೆ ಹರನ ಕರುಣೆಯ ಕಂದನೆ
ಕಾಮಕ್ರೋಧದ ಕೊಳೆಯ ಕಳೆದು ಭಕ್ತಿ ಜಲದಲಿ ಮೀಯಿಸು
ಜ್ಞಾನದುಡುಗೆಯ ಮನಕೆ ಉಡಿಸಿ ದೇವನ ಪಾದಕೆ ಏರಿಸು

ನಿನ್ನ ಚಿನ್ಮಯ ಜ್ಞಾನವೆನಗೆ ಮಾರ್ಗದರ್ಶಕ ದೀಪ್ತಿಯು
ನಿನ್ನ ಮಮತೆಯ ಹೃದಯ ಮಂದಿರ ನನಗೆ ಶಾಂತಿಯ ಹಂದರ
ನಿನ್ನ ಪಾವನ ಚರಣಯುಗವು ಭವವ ದಾಂಟಿಪ ದೋಣಿಯು
ಸನ್ನುತಾಂಗನೆ ನಿನ್ನ ನೆನಹಿದು ಬಾಳಿಗಮೃತ ಸೋನೆಯು

ನೀನು ಆಡಿದ ಬೊಂಬೆ ನಾನು ಮಿಡಿಸ ನುಡಿಯುವ ವೀಣೆಯು
ನೀನು ಊಡಿಸಿ ಉಣಿಸಿ ಸಲಹಲು ಎನ್ನ ಬಾಳೊಳು ಝೇಂಕೃತಿ
ಮಂತ್ರಪುರುಷನೆ ಶಾಂತಿಚಂದ್ರನೆ ದುರಿತ ತಿಮಿರಕೆ ಭಾನುವೆ
ಕೀರ್ತಿಸುವೆನನವರತ ನಿನ್ನನು ಸಚ್ಚಿದಾನಂದ ಕಂದನೆ

ಜಯತು ಜಯತು

ಜಯತು ಜಯತು ಬಸವಗುರೋ ಭಕ್ತ ಬಂಧು ಪಾಹಿಮಾಂ
ಕರುಣ ಹೃದಯ ತ್ಯಾಗಮಯ ಶರಣಲೋಲ ರಕ್ಷಮಾಂ

ದೇವಸುತ ಕಾರಣಿಕ ಪ್ರಣವರೂಪಿನ್ ಪಾಹಿಮಾಂ
ಭಾವಜಹರ ಭವದೂರಕ ಶಕ್ತಿಯುಕ್ತ ರಕ್ಷಮಾಂ
ಭ್ರಾಂತಿರಹಿತ ಭಕ್ತಿಸಹಿತ ಶರಣಪ್ರೀತ ಪಾಹಿಮಾಂ
ಸ್ಫೂರ್ತಿದಾತ ಕೀರ್ತಿಭರಿತ ಜ್ಞಾನಮೂರ್ತೆ ರಕ್ಷಮಾಂ

ಅಭಯ ಹಸ್ತ ಶುಭದಾಯಕ ಮಂತ್ರ ಪುರುಷ ಪಾಹಿಮಾಂ
ಸುಭಗಗಾತ್ರ ಪರಮತೃಪ್ತ ಶಾಂತಮೂರ್ತೆ ರಕ್ಷಮಾಂ
ನಿರ್ಮಲಾಂಗ ಕರ್ಮರಹಿತ ಯೋಗಿರಾಜ ಪಾಹಿಮಾಂ
ಸೌಮ್ಯಲಾಸ್ಯವದನ ಸಹಿತ ನಮ್ರಮೂರ್ತೆ ರಕ್ಷಮಾಂ

ಸಾಮ್ಯವಾದಿನ್‌ ಕ್ರಾಂತಿನಿಧೇ ದಲಿತ ಪ್ರೀತ ಪಾಹಿಮಾಂ
ಧೀಮನ್ಮತೇ ಸತ್ಯಜ್ಯೋತಿ ತತ್ತ್ವ ನಿಷ್ಠ ರಕ್ಷಮಾಂ
ಕರ್ಮಹರಣ ಚರಣಯುಕ್ತ ಶಿವನಯನ ಹೇ ಪಾಹಿಮಾಂ
ಸಚ್ಚಿದಾನಂದಸುತ ಬಸವಗುರೋ ರಕ್ಷಮಾಂ

ಗ್ರಂಥ ಋಣ: ೧) ಶ್ರೀ ಬಸವೇಶ್ವರ ಪೂಜಾವ್ರತ, ಲೇಖಕರು: ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

[*] :ಬಸವಣ್ಣನವರಿಗೆ ದೀಕ್ಷೆ ಕೊಟ್ಟ ವ್ಯಕ್ತಿಯೋರ್ವ ಇದ್ದಿದ್ದರೆ, ಈ ಸ್ಥಳಗಳಲ್ಲಿ ಉಲ್ಲೇಖಿಸಲು ಅವಕಾಶವಿತ್ತು ಎಂಬುದನ್ನು ಗಮನಿಸಬೇಕು.

ಪರಿವಿಡಿ (index)
Previous ಬಸವೇಶ್ವರ ಪೂಜಾವ್ರತ ಅಧ್ಯಾಯ -೧ ಬಸವೇಶ್ವರ ಪೂಜಾವ್ರತ ಅಧ್ಯಾಯ -೩ Next