ಜಂಗಮ | ರುದ್ರಾಕ್ಷಿ |
ವಿಭೂತಿ, ಭಸ್ಮ |
ಲಿಂಗದೀಕ್ಷಿತನು ಪ್ರತಿದಿನವೂ ವಿಭೂತಿಧಾರಣೆ ಮಾಡಬೇಕಷ್ಟೆ ಅಲ್ಲ, ಯಾವಾಗಲೂ ಅದು ಅವನ ಹಣೆ ಮತ್ತಿತರೆಡೆಯಲ್ಲಿ ಕಾಣಬೇಕು. ಅದು ಲಿಂಗಾಯತನ ಲಕ್ಷಣ. ಸಾಧಾರಣ ಭಕ್ತರು ದೇಹದ ಎಂಟು ಕಡೆ, ಉಪಾಧಿ ಭಕ್ತರು ದೇಹದ ಹದಿನಾರು ಸ್ಥಾನಗಳಲ್ಲಿ ಮತ್ತು ನಿರುಪಾದಿಕ ಭಕ್ತರು ದೇಹದ ೩೨ ಭಾಗಗಳಲ್ಲಿ ವಿಭೂತಿಧಾರಣೆ ಮಾಡಬೇಕೆಂಬ ನಿಯಮವಿದೆ. ಕೊನೆಯ ಪಕ್ಷ ಹಣೆ ಮತ್ತು ಕೊರಳಲ್ಲಂತೂ ಧರಿಸಿರಬೇಕು, ಎಂಬುದು ಸಾಧಾರಣ ಭಕ್ತರಿಗೆ ಅನ್ವಯಿಸುತ್ತದೆ.
ಅಯ್ಯಾ, ಶ್ರೀವಿಭೂತಿಯ ಧರಿಸುವ ಭೇದವೆಂತಂದಡೆ:
ಸಹಜಲಿಂಗಧಾರಕರು ಎಂಟು ಸ್ಥಾನದಲ್ಲಿ ಧರಿಸುವುದಯ್ಯಾ
ಕ್ರಿಯಾದೀಕ್ಷಾನ್ವಿತರಾದ ಉಪಾಧಿಭಕ್ತರು
ಹದಿನಾರು ಸ್ಥಾನದಲ್ಲಿ ಧರಿಸುವುದಯ್ಯಾ
ಕ್ರಿಯಾದೀಕ್ಷೆ, ಮಂತ್ರದೀಕ್ಷೆಯುಕ್ತರಾದ ನಿರುಪಾಧಿಭಕ್ತರು
ಮೂವತ್ತೆರಡು ಸ್ಥಾನದಲ್ಲಿ ಧರಿಸುವುದಯ್ಯಾ
ಕ್ರಿಯಾದೀಕ್ಷೆ ಮಂತ್ರದೀಕ್ಷೆ ವೇಧಾದೀಕ್ಷೆಯುಕ್ತರಾದ ಸಹಜಭಕ್ತರು
ಮೂವತ್ತಾರು ಸ್ಥಾನದಲ್ಲಿ ಧರಿಸುವುದಯ್ಯಾ.
ಕ್ರಿಯಾದೀಕ್ಷೆ ಮಂತ್ರದೀಕ್ಷೆ ವೇಧಾದೀಕ್ಷೆ ಸಚ್ಚಿದಾನಂದ ದೀಕ್ಷಾಯುಕ್ತರಾದ
ನಿರ್ವಂಚನಭಕ್ತರು ನಾಲ್ವತ್ತುನಾಲ್ಕು ಸ್ಥಾನದಲ್ಲಿ ಧರಿಸುವುದಯ್ಯಾ.
ಕ್ರಿಯಾ-ಮಂತ್ರ-ವೇಧಾ-ಸಚ್ಚಿದಾನಂದ ನಿರ್ವಾಣಪದದೀಕ್ಷಾ ಸಮನ್ವಿತರಾದ
ಸದ್ಭಕ್ತಶರಣಗಣಂಗಳು, ಆಪಾದಮಸ್ತಕ ಪರಿಯಂತರ
ಸ್ನಾನ ಧೂಳನವ ಮಾಡಿ ನಾಲ್ವತ್ತೆಂಟು ಸ್ಥಾನದಲ್ಲಿ
ಮಂತ್ರಸ್ಮರಣೆಯಿಂದ ತ್ರಿಪುಂಡ್ರವ ಧರಿಸುವುದಯ್ಯಾ ಕೂಡಲಚೆನ್ನ ಸಂಗಮದೇವಾ. (೩: ೯೩೧)
ವಿಭೂತಿಯು ಶಿವತತ್ವ (ವಾಯುತತ್ವ), ಇದಕ್ಕೆ ಪಯಾ೯ಯ ಶಬ್ದ ಭಸ್ಮ
ವಿಭೂತಿಯನ್ನು ಆಕಳ ಸೆಗಣಿಯಿಂದಲೇ ತಯಾರಿಸಬೇಕಾಗುತ್ತದೆ. ಆಕಳ ಸೆಗಣಿಯನ್ನೇ ಏಕೆ ಆಯ್ಕೆ ಮಾಡಿಕೊಂಡರು? ಅಮೆರಿಕದವರು ಆಕಳ ಸೆಗಣಿ ಹಾಗೂ ಮೂತ್ರದಲ್ಲಿ ಇರುವ ಕ್ರಮಿನಾಶಕ ಶಕ್ತಿ ಅಥವಾ ರೋಗಾಣುವನ್ನು ಕೊಲ್ಲುವಂಥ ಶಕ್ತಿ ಬೇರೆ ಯಾವ ಔಷಧದಲ್ಲಿ ಇರುವುದಿಲ್ಲವೆಂದು ಸಂಶೋಧನೆಯ ಮೂಲಕ ಕಂಡುಕೊಂಡಿದ್ದಾರೆ. ಗಬ್ಬಾದ ಆಕಳ ಅಥವಾ ಕರು ಹಾಕಿದ ಆಕಳುಗಳಾಗಿರಬೇಕೆಂದು ಸೂಚಿಸಿದ್ದಾರೆ. ಏಕೆಂದರೆ ಇಂಥ ಆಕಳಿನ ಸೆಗಣಿಯಲ್ಲಿ, 'ಲೆಕ್ಟೋಸ್' ಎಂಬ ಔಷಧಿ ಗುಣ ಹೆಚ್ಚಾಗಿರುತ್ತದೆಂದೂ (ಆದರೆ ಬರಡು ಆಕಳು ಇಲ್ಲವೆ ವಯಸ್ಸಾದ ಆಕಳ ಸೆಗಣಿಯನ್ನು ಉಪಯೋಗಿಸಬಾರದೆಂದು) ಸೂಚಿಸಿದ್ದಾರೆ. ಇಂಥ ಆಕಳ ಸೆಗಣಿಯಿಂದ ಹಾಗೂ ಮೂತ್ರದಿಂದ ತಯಾರಿಸಿದ ಬಿಭೂತಿಯನ್ನೆ ನಾವು ಪೂಜೆಯ ವೇಳೆಯಲ್ಲಿ ಹೊಟ್ಟೆ, ಎದೆ, ಬೆನ್ನು, ಕೈ ಹಾಗೂ ಮುಖಗಳಲ್ಲಿ ಲೇಪನಮಾಡುತ್ತೇವೆ ನಂತರ ಧರಿಸಕೊಳ್ಳುತ್ತೇವೆ.
ವಿಜ್ಞಾನಿಗಳ ಇತ್ತೀಚಿನ ಸಂಶೋಧನೆಯ ಪ್ರಕಾರ ಮನುಷ್ಯನ ಉಸಿರಾಟದಲ್ಲಿ ಹೊಟ್ಟೆ, ಎದೆ ಮತ್ತು ಬೆನ್ನಿನ ಚರ್ಮಗಳು ವಿಶೇಷವಾಗಿ ಉಸಿರಾಡಿಸುತ್ತವೆಂದು (ಶೇಕಡ 2%) ಆಕ್ಸಿಜನ್ ತೆಗೆದುಕೊಂಡು ಕಾರ್ಬನ್ ಡೈ ಆಕ್ಸೈಡನ್ನು ಹೊರಹಾಕುತ್ತವೆಂದು ಕಂಡುಕೊಂಡಿದ್ದಾರೆ. ಆದರೆ ನಾವು ಮೂಗಿನಿಂದ ಉಸಿರಾಡಿಸುವಾಗ ವಾತಾವರಣದಲ್ಲಿಯ ಭಯಾನಕ ರೋಗಾಣುಗಳು ಒಳಕ್ಕೆ ಹೊಗಲಾರವು. ಕಾರಣ ಮೂಗಿನಲ್ಲಿ ಕೂದಲುಗಳು ಜಿಗುಟಾದ ಪದಾರ್ಥವು ಹಾಗೂ ಶ್ವಾಸನಾಳಗಳಲ್ಲಿ ಸಣ್ಣ ಸಣ್ಣ ರೋಮಗಳಿರುವುದರಿಂದ ಅಲ್ಲಿ ರೋಗಾಣುಗಳನ್ನು ತಡೆಯುವ ಸಾಮಥ್ರ್ಯವಿದೆ. ಆದರೆ ಹೊಟ್ಟೆ, ಬೆನ್ನಿನ ಚರ್ಮಗಳು ವಿಶೇಷವಾಗಿ ಉರಿರಾಡಿಸುವುದರಿಂದ ವಾತಾವರಣದಲ್ಲಿಯ ರೋಗಾಣುಗಳು ಶರೀರವನ್ನು ಪ್ರವೇಶಿಸಬಹುದು. ಹೀಗಾಗಬಾರದೆಂದೇ ಇಂಥ ಕ್ರಿಮಿನಾಶಕ ವಿಭೂತಿಯನತನು ಧರಿಸಲು ಸೂಚಿಸಿದ್ದಾರೆ.
ವಿಭೂತಿಯನ್ನು ದೇಹದ ಅಂಗಾಂಗಗಳಿಗೆ ಧರಿಸುವ ಅಭ್ಯಾಸ ಸಾವಿರಾರು ವರ್ಷಗಳಿಂದ ಇದೆ. ಋಷಿ ಮುನಿಗಳು, ಸನ್ಯಾಸಿಗಳು, ಸಾಧು ಸಂತರು, ಧರಿಸುವುದನ್ನು ನಾವು ಕಾಣಬಹುದು. ಇದಕ್ಕೆ ಕಾರಣ ಈ ಭಸ್ಮದಲ್ಲಿ ಆಡಗಿರುವ ಔಷಧದ ಗುಣ. ವಿಭೂತಿಯಲ್ಲಿರುವ ವಿಶೇಷ ಗುಣವೆಂದರೆ, ದೇಹದ ಉಷ್ಣಾಂಶವನ್ನು ಹೊರಕ್ಕೆ ಬಿಡುವುದಿಲ್ಲ. ಅಂತೆಯೇ ಹೊರಗಿನ ತೇವಾಂಶ ದೇಹದೊಳಕ್ಕೆ ಪ್ರವೇಶದಂತೆ ತಡೆಗಟ್ಟುತ್ತದೆ. ರಕ್ತ ಹೆಪ್ಪು ಗಟ್ಟುವಂತಹ ಚಳಿಯಲ್ಲೂ ದೇಹದ ಉಷ್ಣಾಂಶವನ್ನು ಕಾಪಾಡುತ್ತದೆ. ಆದ ಕಾರಣವೇ ಚಳಿ ಪ್ರದೇಶದಲ್ಲಿ ವಾಸಿಸುವ ಸನ್ಯಾಸಿಗಳು ಅತಿ ಕಡಿಮೆ ಬಟ್ಟೆ, ಅಥವಾ ಬಟ್ಟೆಯೇ ಇಲ್ಲದಿದ್ದರೂ ಮೈಗೆಲ್ಲಾ ವಿಭೂತಿ ಲೇಪನ ಮಾಡಿರುತ್ತಾರೆ.
ವಿಭೂತಿಯನ್ನು ಹಣೆಯ ಮೇಲೆ, ಕುತ್ತಿಗೆಯಲ್ಲಿ, ಕಿವಿಯ ಹಿಂದೆ, ಭುಜಗಳು, ಮೊಳಕೈ, ಮುಂಗೈ, ಕಾಲಿನ ಮಂಡಿ, ಪಾದ ಮುತಾದ ಭಾಗಗಳಲ್ಲಿ ಧರಿಸುವುದು, ಕಾರಣವೇನೆಂದರೆ, ದೇಹದ ಈ ಭಾಗದಲ್ಲಿರುವ ಕೀಲುಗಳಲ್ಲಿ ಶೀತದಿಂದ ಕೊಬ್ಬು ಹೆಪ್ಪುಗಟ್ಟಿ ತೊಂದರೆಯಾಗದಂತೆ ದೇಹದಲ್ಲಿ ಉಷ್ಣತೆಯನ್ನು ತಡೆಗಟ್ಟಿ ಸಹಕರಿಸುತ್ತದೆ. ಹಣೆ, ಕಿವಿ, ಕುತ್ತಿಗೆಗಳಲ್ಲಿ ಧರಿಸುವುದರಿಂದ ಹೊರಗಿನ ಗಾಳಿಯಲ್ಲಿರುವ ತೇವಾಂಶ ದೇಹದೊಳಕ್ಕೆ ಪ್ರವೇಸಿಸದಂತೆ ರಕ್ಷಿಸುತ್ತದೆ.
ಮನುಷ್ಯನ ದೇಹದಲ್ಲಿನ ಉಷ್ಣತೆ ಕಡಿಮೆಯಾಗಿ ಅಂತಿಮ ಅವಸ್ಥೆ ತಲುಪಿದಾಗ ಅಂಗಾಲು ಮತ್ತು ಅಂಗೈಗಳಿಗೆ ’ವಿಭೂತಿ’ಯನ್ನು ಉಜ್ಜುವ ಕ್ರಮವಿದೆ. ವಿಭೂತಿಯನ್ನು ಕೆಲವು ಕಾಯಿಲೆಗಳಿಗೆ ಔಷಧವಾಗಿಯು ಬಳಸುತ್ತಾರೆ.
ಉತ್ತಮವಾದ ಭಸ್ಮವನ್ನು ತಯಾರಿಸಲು ಕೆಲವು ನಿಯಮಗಳಿವೆ. ಆದರೆ ಈಗಿನ ದಿನಗಳಲ್ಲಿ ಎಲ್ಲವೂ ಕಲಬೆರಕೆಯಾಗಿದೆ. ಉತ್ತಮ ವಿಭೂತಿಯನ್ನು ಕೊಂಡು ಧರಿಸಬೇಕು.
ಶ್ರೀ ವಿಭೂತಿ ರುದ್ರಾಕ್ಷಿಯೇ ಭಕ್ತಿ ಮುಕ್ತಿಗೆ ಸಾಧನವೋ ಎನ್ನ ತಂದೆ
ಶಿವಶಿವಾ ಎಂಬ ಮಂತ್ರ ಎನಗಮೃತಾರೋಗಣೇಯೋ ಎನ್ನ ತಂದೆ
ಕೂಡಲ ಸಂಗಮದೇವಾ, ನಿಮ್ಮ ನಾಮದ ರುಚಿ ತುಂಬಿತೋ ಎನ್ನ ತನುವ. -- ಬಸವಣ್ಣನವರು
ಧರ್ಮದಲ್ಲಿ ಪೂಜ್ಯ ವಸ್ತುಗಳನ್ನು ಆರಾಧಿಸಲಿಕ್ಕೆ ಪೂಜಾ ಸಾಧನಗಳಿರುತ್ತವೆ ವಿಭೂತಿ-ರುದ್ರಾಕ್ಷಿ-ಮಂತ್ರ ಅಂತಹ ಮುಕ್ತಿಯ ಸಾಧನಗಳು. "ಶಿವಶಿವಾ" ಎಂಬ ಮಂತ್ರ ಅಮೃತದಷ್ಟು ರುಚಿ ; ಪರಮಾತ್ಮಾ ನಿನ್ನ ಪವಿತ್ರ ನಾಮದ ರುಚಿ ನನ್ನ ಸರ್ವಾಂಗವನ್ನು ತುಂಬಿದೆ.
ನೀರಿಂಗೆ ನೈದಿಲೆಯೆ ಶೃಂಗಾರ ; ಸಮುದ್ರಕ್ಕೆ ತೆರೆಯೆ ಶೃಂಗಾರ ;
ನಾರಿಗೆ ಗುಣವೇ ಶೃಂಗಾರ ; ಗಗನಕ್ಕೆ ಚಂದ್ರಮನೇ ಶೃಂಗಾರ ;
ನಮ್ಮ ಕೂಡಲ ಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ. -- ಬಸವಣ್ಣನವರು
ವಿಶಾಲವಾದ ಹರವಿಕೊಂಡು ನಿಂತ ನೀರು ನೈದಿಲೆಯಿಂದ ಹೆಚ್ಚು ಸುಂದರವಾಗಿ ಕಾಣುವಂತೆ ಸಮುದ್ರವು ತೆರೆಗಳಿಂದ ಚೆಲುವಾಗಿ ಕಾಣುವಂತೆ, ಸ್ತ್ರೀಗೆ ಗುಣವೇ ಸೌಂದರ್ಯವನ್ನು ಹೆಚ್ಚಿಸುವ ಅಂಶ, ಆಕಾಶದ ಚೆಲುವು ಚಂದ್ರಮನಿಂದ ವೃದ್ಧಿಗೊಳ್ಳುವಂತೆ, ಶರಣರ ಚೆಲುವು ನೊಸಲ ವಿಭೂತಿಯಿಂದ ಹೆಚ್ಚುತ್ತದೆ. ಇಲ್ಲವಾದರೆ ಆ ಹಣೆ ಬೋಳು ಬೋಳಾಗಿ ಕಾಣುತ್ತದೆ
ಬಸವ ಬಸವಾ ಎಂದು ಭಸಿತಮಂ ಧರಿಸಿದರೆ
ಬಸವಾದಿ ಪ್ರಮಥರಿಗೆ ಪ್ರೀತಿಯಯ್ಯಾ
ಬಸವ ಷಟಸ್ಥಲ ಚನ್ನಬಸವ ಪ್ರಭು ಮುಖ್ಯರು
ಭಸಿತಮಂ ಧರಿಸಿ ಬಯಲಾದರಯ್ಯ
ಎಸೆವ ಅಂಗುಲಿತ್ರಯವು ಭಸಿತರೇಖೆಗಳೆಲ್ಲ
ಬಸವಾಕ್ಷರತ್ರಯಗಳೆಂದು ಮುದದಿ
ಭಸಿತದಿಂ ನವ ಪ್ರಣವ ಹಸನಾಗಿ ಅಂಗದಲಿ
ಬಸವ ಬಸವಾ ಎಂದು ಸಂಬಂಧಿಸುವೆನು
ದುರುಳ ಕರಣಂಗಳೆಂಬ ಬೆರಣಿಗಳನುರುಹಿದ
ಪರಮಚಿದ್ಭಸಿತವೆಂದರಿದು ನಾನು
ಹರಬಸವ ಗುರುಬಸವ ಚರಬಸವ ಎಂದೆನುತ
ಶಿರವಾದಿ ಚರಣಾಂತ್ಯದೊಳು ಧರಿಸುವೆ
ನೀನು ಧರಿಸಿದೆಯಾಗಿ ಆನು ಧರಿಸುವೆನಯ್ಯ
ಸ್ನಾನಧೂಳನ ಧಾರಣಗಳಿಂದ
ಹೀನ ಮಾನವರಿದರ ಜ್ಞಾನವಿಲ್ಲದೆ ಭವದ,
ಕಾನನದೊಳಗೆ ತಾವು ಬೀಳುತಿಹರು
ತ್ರಿನಯನ ಮಹಾಂತೇಶ ದಣಿ ಬಸವರಾಜನ
ಅಣಿಯರದಿ ಸ್ಮರಿಸುತ್ತ ಭಜಿಸುತ್ತಲಿ
ಅಣುಮಾತ್ರ ಭಸಿತವನು ಹಣೆಯೊಳಿಟ್ಟಾಕ್ಷಣವೆ
ಒಣಗುವವು ದುರಿತಂಗಳೆಂಬ ಕುಜವು. - ಬಾಲ ಲೀಲಾ ಮಹಾಂತ ಶಿವಯೋಗಿಗಳು
ವಿಭೂತಿ ಧರಿಸಲು ಹೆಣ್ಣು-ಗಂಡು ಎಂಬ ಲಿಂಗ ಭೇದವಿಲ್ಲ, ಜಾತಿ ಭೇದವಿಲ್ಲ, ವಗ೯ಭೇದವಿಲ್ಲ, ಸನ್ಯಾಸಿ-ಸಂಸಾರಿ ಆಶ್ರಮ ಭೇದವಿಲ್ಲ
ವಿಭೂತಿ ಧರಿಸಿದವರೆಲ್ಲರೂ ಸಮಾನರೂ ಎಂಬುದು 12ನೆಯ ಶತಮಾನದ ಅನುಭವ ಮಂಟಪದ ನಿಯಮ
ವಿಭೂತಿಯ ಉಪಯೋಗಗಳು (Advantages)
೧. ಸಾತ್ವಿಕ ಕಳೆ ವೃದ್ದಿಯಾಗಲು:
ಭಕ್ತಿಯಿಂದ, ಗುರು-ಲಿಂಗ-ಜಂಗಮ ಸ್ಮರಣೆ, ಮಾಡಿ ಶ್ರೀ ವಿಭೂತಿಯನ್ನು ಅಂಗ(ದೇಹ)ಕ್ಕೆ ಧರಿಸುವದರಿಂದ ಮಾಂಸಪಿಂಡ ಕಳೆದು ಕಾಯವು ಮಂತ್ರಪಿಂಡವಾಗುತ್ತದೆ.
೨. ಪ್ರಸಾದಿಕರಿಸುವದು :
ಹೂಸ ವಸ್ತುಗಳನ್ನು ಉಪಯೋಗಿಸುವ ಮೂದಲು ಅದಕ್ಕೆ ಭಕ್ತಿಯಿಂದ, ಗುರು-ಲಿಂಗ-ಜಂಗಮ ಸ್ಮರಣೆ ಮಾಡಿ ಶ್ರೀ ವಿಭೂತಿಯನ್ನು ಹಚ್ಚುವುದರಿಂದ ಅದರಲ್ಲಿರುವ ಋಣಾತ್ಮಕ ಶಕ್ತಿ ( -ve energy) ಕಳೆದು ಧನಾತ್ಮಕ ಶಕ್ತಿ (+ve Energy) ಮತ್ತು ದೇವರ ಕೃಪೆ (God Grace ) ಆವತರಣಗೊಳ್ಳುವದು
೩. ಸದಾಕಾಲ ವಿಭೂತಿಯು ಹಣೆಯ ಮೇಲೆ ಧರಿಸುವದರಿ೦ದ ಆಗುವ ಲಾಭಗಳು
೩೨ ಸ್ಥಾನಗಳು :
ಮೂರ್ಧ್ನ, ಲಲಾಟ, ಕರ್ಣದ್ವಯ, ನೇತ್ರದ್ವಯ, ಘ್ರಾಣ, ಮುಖ, ಮಣಿ ಬಂಧದ್ವಯ, ಬಾಹುದ್ವಯ, ಭುಜದ್ವಯ, ಸ್ತನದ್ವಯ, ವಕ್ಷ, ಉದರ, ಪಾರ್ಶ್ವದ್ವಯ, ನಾಭಿ, ಮೇಢ್ರ, ಪಾಯು, ಪೃಷ್ಠ, ಉರುದ್ವಯ, ಜಾನುದ್ವಯ, ಜಂಘದ್ವಯ, ಪಾದದ್ವಯ.
೧೬ ಸ್ಥಾನಗಳು :
ಮೂರ್ಧ್ನ, ಲಲಾಟ, ಕರ್ಣದ್ವಯ, ಬಾಯಿ (ಎರಡು ತುಟಿಗಳು), ಕಂಠ, ಬಾಹುದ್ವಯ, ಭುಜದ್ವಯ, ಮಣಿಬಂಧದ್ವಯ, ವಕ್ಷ (ಹೃದಯ), ಅಪರ, ನಾಭಿ.
೮ ಸ್ಥಾನಗಳು :
ಲಲಾಟ, ಅಳಿಕ, ಗ್ರೀವ, ಬಾಹುದ್ವಯ, ಹೃದಯ, ನಾಭಿ, ಪೃಷ್ಠ (ವಿಭೂತಿ ಧರಿಸಿಕೊಳ್ಳುವಾಗ ಓಂ ಶ್ರೀ ಗುರು ಬಸವಲಿಂಗಾಯನಮಃ ಎಂಬ ಮಂತ್ರವನ್ನು ಉಚ್ಚರಿಸುತ್ತಿರಬೇಕು).
ಭಸ್ಮ ಅಥವಾ ವಿಭೂತಿಯು ಮಲತ್ರಯಗಳು 'ಸುಟ್ಟಿರುವುದರ ಸಂಕೇತ. ಅಂದರೆ ಇನ್ನು ಮೇಲೆ ನನ್ನ ಮಲತ್ರಯಗಳನ್ನು ಸುಡುತ್ತೇನೆ ಎಂದು ಪ್ರತಿಜ್ಞೆ ಮಾಡುವುದು ಭಸ್ಮಧಾರಣೆಯ ಉದ್ದೇಶ.
ಉಪನಿಷತ್ತುಗಳು ಮನುಷ್ಯನ ದೇಹವನ್ನು ಪುರವೆಂದೂ ಅದರಲ್ಲಿ ಮಲಗಿರುವ ('ಶಯ) ಆತ್ಮವನ್ನು 'ಪುರುಷ' (ಆತ್ಮ) ಎಂದೂ ಪರಿಗಣಿಸುತ್ತವೆ. ಶೈವ ಮತ್ತು ಲಿಂಗಾಯತ ಸಿದ್ದಾಂತಗಳ ಪ್ರಕಾರ, ಮನುಷ್ಯನು ಸ್ಥೂಲ ಶರೀರ, ಸೂಕ್ಷ್ಮಶರೀರ ಮತ್ತು ಕಾರಣಶರೀರ (ಅಥವಾ ತ್ಯಾಗಾಂಗ, ಭೋಗಾಂಗ ಮತ್ತು ಯೋಗಾಂಗ) ಎಂಬ ಮೂರು ಪುರಗಳ ಸಂಯೋಜನೆ. ಅಥವಾ ಅವನು 'ತ್ರಿಪುರ' ಉಳ್ಳವನು. ಈ ತ್ರಿಪುರಗಳನ್ನು ಸಂಹಾರಮಾಡಿದವನೇ ಈಶ್ವರ, ತ್ರಿಪುರ ಸಂಹಾರ ಮಾಡಿದ ಮೇಲೆ ಉಳಿಯುವ ಬೂದಿಯೇ ಭಸ್ಮ ಅಥವಾ ವಿಭೂತಿ ಅಥವಾ ಐಶ್ವರ್ಯ, ಸಾಧಕನು ಧರಿಸುವ ಭಸ್ಮದ ಮೂರು ಗೆರೆಗಳು ಮೂರು ಪುರಗಳನ್ನು ಅಥವಾ ಕಾರ್ಮಿಕ, ಮಾಲೀಯ ಮತ್ತು ಆಣವ ಎಂಬ ಮೂರು ಮಲಗಳನ್ನು ಸುಟ್ಟಿರುವುದರ ಸಂಕೇತ. ಆದುದರಿಂದ ಪ್ರತಿಯೊಬ್ಬ ಲಿಂಗಾಯತನೂ ವಿಭೂತಿ ಧರಿಸಿಕೊಳ್ಳುವಾಗ ನಾನು ಪುರತ್ರಯಗಳನ್ನು ಅಥವಾ ಮಲತ್ರಯಗಳನ್ನು ಸಂಹರಿಸುವ ಈಶ್ವರನಾಗುತ್ತೇನೆಂದು ಪ್ರತಿಜ್ಞೆ ಮಾಡಬೇಕು.
ನೀರಿಂಗೆ ನೈದಿಲೆಯ ಶೃಂಗಾರ,
ಸಮುದ್ರಕ್ಕೆ ತೆರೆಯೆ ಶೃಂಗಾರ,
ನಾರಿಗೆ ಗುಣವೆ ಶೃಂಗಾರ,
ಗಗನಕ್ಕೆ ಚಂದ್ರಮನೆ ಶೃಂಗಾರ,
ನಮ್ಮ ಕೂಡಲಸಂಗನ ಶರಣರಿಗೆ
ನೊಸಲ ವಿಭೂತಿಯೆ ಶೃಂಗಾರ. (೧: ೭೪)
ಅಯ್ಯಾ ಎನಗೆ ವಿಭೂತಿಯೆ ಕುಲದೈವ;
ಅಯ್ಯಾ ಎನಗೆ ವಿಭೂತಿಯೆ ಮನೆದೈವ;
ಅಯ್ಯಾ ಎನಗೆ ವಿಭೂತಿಯೆ ಸರ್ವಕಾರಣ;
ಅಯ್ಯಾ ಎನಗೆ ವಿಭೂತಿಯೆ ಸರ್ವಸಿದ್ಧಿ;
ಅಯ್ಯಾ ಎನಗೆ ವಿಭೂತಿಯೆ ಸರ್ವವಶ್ಯ
ಅಯ್ಯಾ ಕೂಡಲಚೆನ್ನಸಂಗಮದೇವಾ
ಶ್ರೀಮಹಾಭೂತಿಯೆಂಬ ಪರಂಜ್ಯೋತಿ ನೀವಾದಿರಾಗಿ,
ಎನಗೆ ವಿಭೂತಿಯೆ ಸರ್ವಸಾಧನ. (೩: ೨೧೮)
ಕಾಲನ ಸುಟ್ಟ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ;
ಕಾಮನ ಸುಟ್ಟ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ;
ತನುತ್ರಯಂಗಳೆಂಬ ತ್ರಿಪುರವ
ಚಿತ್‌ಶಿಖಿಯೆಂಬ ಜ್ಞಾನಾಗ್ನಿಯಿಂದ ದಹಿಸಿದ
ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ;
ಸಂಚಿತ ಪ್ರಾರಬ್ಧ ಆಗಾಮಿಯೆಂಬ ಕರ್ಮತ್ರಯಂಗಳ ದಹಿಸಿದ
ಭಸ್ಮವ ಧರಿಸಿದೆನೆಯ್ಯ ಬಸವಣ್ಣಾ ನಿಮ್ಮಿಂದ.
ಸತ್ವ ರಜ ತಮಂಗಳ ಸುಟ್ಟುರುಹಿದ
ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ.
ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳ ದಹಿಸಿದ
ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ.
ಜೀವಭಾವ ಇಂದ್ರಿಯಭಾವ ವಿಷಯಭಾವ ಭೂತಭಾವ
ಜನನಭಾವ ಬೀಜಭಾವವೆಂಬ ಭವಾಶ್ರಯವ
ಜ್ಞಾತ್ರ ಜ್ಞಾನ ಜ್ಷೇಯವೆಂಬ
ತ್ರಿಪುಟಿಯೇಕಾರ್ಥವಾದ ಅಗ್ನಿಯಿಂದ ಸುಟ್ಟುರುಹಿದ
ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ.
ಸ್ವರ್ಗ ಮರ್ತ್ಯ ಪಾತಾಳಕ್ಕೆ ಆಧಾರಸ್ಥಾನವೇ ಚಿತ್ತು.
ಆ ಚಿತ್‌ಸ್ವರೂಪವೇ ಬಸವಣ್ಣ.
ಇದು ಕಾರಣ ಚಿದ್ವಿಭೂತಿಯನೆ ಸದಾಕಾಲದಲ್ಲಿ ಧರಿಸಿ,
ಶುದ್ಧ ಚಿದ್ರೂಪನಾಗಿರ್ದೆನು ನೋಡ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (೧೧: ೧೯೧)
[1] ಈ ತರಹದ ಸಂಖ್ಯೆಯ ವಿವರ: ಸವಸ-1/241 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-241 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
ಜಂಗಮ | ರುದ್ರಾಕ್ಷಿ |