ಇಷ್ಟಲಿಂಗ ಪೂಜೆ | ಇಷ್ಟಲಿಂಗ - ಚರಲಿಂಗ - ಸ್ಥಾವರಲಿಂಗ |
ಅನುಭವ ಮಂಟಪ |
✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ
*
ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು
ವಸ್ತ್ರ ಮಾಸಿದಡೆ ಮಡಿವಾಳಂಗಿಕ್ಕುವುದು
ಮನದ ಮೈಲಿಗೆಯ ತೊಳೆಯಬೇಕಾದರೆ
ಕೂಡಲ ಚೆನ್ನಸಂಗನ ಶರಣರ ಅನುಭಾವವ ಮಾಡುವುದು.
ಜಾತಿ ವರ್ಗ ವರ್ಣ ರಹಿತ ಆದರೆ ಧರ್ಮ ಸಹಿತವಾದ ಕಲ್ಯಾಣ ರಾಜ್ಯವನ್ನು ಕಟ್ಟಲು ಒಂದು ಸಾಧನವನ್ನಾಗಿ ಧರ್ಮಪಿತರು ಅನುಭವ ಮಂಟಪವನ್ನು ಕಟ್ಟಿದರು. ಅನುಭವ ಮಂಟಪ ದೇವಾಲಯವಲ್ಲ. ದೇವಾಲಯಗಳನ್ನು ದೇವರನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿದರೆ, ಅನುಭವ ಮಂಟಪ ನಾಲ್ಕು ಗೋಡೆಗಳ ಮಧ್ಯೆ ಇದ್ದ ದೇವರನ್ನು ಬಂಧಮುಕ್ತಗೊಳಿಸಿತು. ದೇವಾಲಯಗಳು ಕೆಲವರಿಗೆ ದರ್ಶನಾವಕಾಶ ಪೂಜಾ ಹಕ್ಕು ನೀಡಿದರೆ ಮತ್ತೆ ಕೆಲವರನ್ನು ಈ ಸೌಲಭ್ಯಗಳಿಂದ ವಂಚಿಸಿದವು. ಆದರೆ ಅನುಭವ ಮಂಟಪ ಕೆಲವರ ಕಪಿಮುಷ್ಟಿಯಲ್ಲಿದ್ದ ಧರ್ಮ ದೇವರನ್ನು ಎಲ್ಲರ ಸಂಪತ್ತನ್ನಾಗಿ ಮಾಡಲು ಹೋರಾಡಿತು.
ವಿಶ್ವಗುರು ಬಸವಣ್ಣನವರು ರೂಪಿಸಿದ ಅನುಭವ ಮಂಟಪವನ್ನು ನೆನಪಿಗೆ ತರುವ ಇನ್ನಿತರ ಸಂಸ್ಥೆಗಳೆಂದರೆ ಪ್ಲೇಟೋನ ಅಕಾಡೆಮಿ, ಮೊಗಲ್ ಚಕ್ರವರ್ತಿ ಅಕ್ಬರ ರೂಪಿಸಿದ ದಿನ್-ಇ-ಲಾಹಿ ಮತ್ತು ಆಧುನಿಕ ಪಾರ್ಲಿಮೇಂಟ್. ಆದರೆ ಅನುಭವ ಮಂಟಪ ಇವೆಲ್ಲಕ್ಕಿಂತಲೂ ಬೇರೆಯೆ.
ಪ್ಲೇಟೋನ ಅಕಾಡೆಮಿಯಲ್ಲಿ ಬಗೆಬಗೆಯ ವಿಷಯಗಳ ಚರ್ಚೆ ನಡೆಯುತ್ತಿದ್ದುದು ನಮಗೆ ಗೋಚರವಾಗುತ್ತದೆ. ಆದರೆ ಅಕಾಡೆಮಿಯಲ್ಲಿ ಸಮಾವೇಶವಾಗುತ್ತಿದ್ದವರು ಕೇವಲ ತಾರ್ಕಿಕರು (Logicians) ಮತ್ತು ತತ್ವಜ್ಞಾನಿಗಳು. ಅನುಭವ ಮಂಟಪದಲ್ಲಿ ಸಮಾವೇಶವಾಗುತ್ತಿದ್ದವರು ಅನುಭಾವಿಗಳು ಮತ್ತು ದಾರ್ಶನಿಕರು. ಅಕಾಡೆಮಿಯ ಚರ್ಚೆಯ ಉದ್ದೇಶ ಕೇವಲ ಜ್ಞಾನ. ಅನುಭವ ಮಂಟಪದ ಉದ್ದೇಶ ಅರಿವನ್ನು ಆಚರಣೆಗೆ ಇಳಿಸುವುದು. ಅಲ್ಲಿ ಚರ್ಚೆಯು ಬೌದ್ಧಿಕ ಕುಸ್ತಿ, ಇಲ್ಲಿ ಅಂತರಂಗ-ಬಹಿರಂಗ ಸುದ್ಧಿಗೆ ಸಾಧನ. ಅಲ್ಲಿ ತಾರ್ಕಿಕ, ಕೂದಲು ಸೀಳುವ ವಿಶ್ಲೇಷಣೆ, ಇಲ್ಲಿ ತತ್ವವನ್ನು ತಿಳಿದು ಆನಂದಿಸುವ ಪ್ರಯತ್ನ. ಅಲ್ಲಿ ಸಮಸ್ಯೆ ತಿಳಿಯಲು ಚರ್ಚೆ; ಇಲ್ಲಿ ಸಮಸ್ಯೆಗೆ ಪರಿಹಾರ ನೀಡಲು ಚರ್ಚೆ. ಅರಿಸ್ಟಾಟಲ್, ಸೋಕ್ರಟೀಸ್, ಪ್ಲೇಟೋ ಮುಂತಾದವರು ಬೇರೆ ಬೇರೆ ಪರಿಕಲ್ಪನೆ (Concept)ಗಳನ್ನು ತಿಳಿಸಲು ಚರ್ಚಿಸಿ ಪುಸ್ತಕ ಬರೆದು ಹೋದರು. ಶರಣರು ಒಂದು ಆದರ್ಶ ಸಮಾಜ ಕಟ್ಟಿ, ಸಾಹಿತ್ಯವನ್ನು ಬಿಟ್ಟು ಹೋದರು.
ಅಕ್ಬರನ ದೀನ್-ಇ-ಲಾಹಿಯಂತೂ ಇಂದಿನ ಸರ್ವಧರ್ಮ ಸಮ್ಮೇಳನ್ಗಳಂತೆ. ಆಯಾ ಧರ್ಮಗಳ ಪಂಡಿತರು ತಮ್ಮ ತಮ್ಮ ಧರ್ಮದ ಬಗ್ಗೆ ಹೇಳುವರು; ಇನ್ನಿತರರು ಕೇಳುವರು.
ಪ್ರಜಾಪ್ರಭುತ್ವದ ಜೀವಾಳ ಪಾರ್ಲಿಮೆಂಟು; ಇದರ ಜೀವಾಳ ವಿಚಾರ, ವಾಕ್, ಆಚಾರ ಸ್ವಾತಂತ್ರ್ಯ. ಸಮುದಾಯಿಕ ಚಿಂತನೆ ಲೋಕಸಭೆಯ ವಿಶೇಷ. ಈ ಎರಡೂ ಅಂಶಗಳಲ್ಲಿ ಅನುಭವ ಮಂಟಪ ಲೋಕಸಭೆಯನ್ನು ಹೋಲುತ್ತದೆ. ಪ್ರತಿಯೊಬ್ಬ ಶರಣ ಸದಸ್ಯನಿಗೂ ವಿಚಾರ ಸ್ವಾತಂತ್ರ್ಯವಿತ್ತು; ತನಗೆ ಸರಿಕಂಡುದನ್ನು ಪ್ರತಿಪಾದಿಸುವ ವಾಕ್ ಸ್ವಾತಂತ್ರ್ಯವಿತ್ತು ಮತ್ತು ತನಗೆ ಸಮ್ಮತವಾದ ಆಚಾರವನ್ನು ಅಳವಡಿಸಿಕೊಳ್ಳಲವಕಾಶವಿದ್ದಿತು. ಶರಣರು ಧಾರ್ಮಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳೆಲ್ಲವನ್ನು ಮುಕ್ತಮನದಿಂದ ಚರ್ಚಿಸುತ್ತಿದ್ದರು. ಆದರೆ ಲೋಕಸಭಾ ಸದಸ್ಯರಿಗೆ ಭಿನ್ನವೆಂಬಂತೆ ತಾವು ನಂಬಿದ್ದನ್ನು; ಆಡಿದ್ದನ್ನು ಬದುಕಿನಲ್ಲಿ ಆಳವಡಿಸಿಕೊಂಡಿದ್ದರು; ಸಚ್ಚಾರಿತ್ರವಂತರಾಗಿದ್ದರು. ಉತ್ತಮ ನಡೆ-ನುಡಿಗಳನ್ನು ಸಂಗಮಿಸಿಕೊಂಡು, ಅತ್ಮಾನುಭವಿಗಳಾಗಿದ್ದರು, ದಾರ್ಶನಿಕರಾಗಿದ್ದರು. ಹೀಗಾಗಿ ಅನುಭವ ಮಂಟಪವು ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಅಗಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನುಭವ ಮಂಟಪವನ್ನು ವಿಶ್ವಸಂಸ್ಥೆ (UNO)ಗೂ ಹೋಲಿಸಬಹುದು, ಲೋಕಸಭೆ ತನ್ನ ದೇಶದ ಸಮಸ್ಯೆ, ಆಗು ಹೋಗುಗಳನ್ನು ಕುರಿತು ಚಿಂತನೆ ಮಾಡಿದರೆ ವಿಶ್ವರಾಷ್ಟ್ರ ಸಂಸ್ಥೆ ಮಾನವ ಜನಾಂಗದ ಆಗು ಹೋಗು, ಸಮಸ್ಯೆಗಳನ್ನು ಚಿಂತಿಸುತ್ತದೆ. ಹಾಗೆ ಅನುಭವ ಮಂಟಪದ ಚರ್ಚೆ ಒಂದು ಜಾತಿ ಒಂದು ಮತ ಒಂದು ಪಂಥಕ್ಕೆ ಸೀಮಿತವಾಗಿ ಸಾಗದೆ ಮಾನವ ಜನಾಂಗದ ಸಮಸ್ಯೆಗಳನ್ನು ಕುರಿತು, ಚಿಂತಿಸಿದುದನ್ನು ಶೂನ್ಯ ಸಂಪಾದನೆಯಲ್ಲಿ ಕಾಣುತ್ತೇವೆ.
ಶರಣ ಸಂಕುಳವು ಗಣಮೇಳಾಪವನ್ನು ನಡೆಸುತ್ತಿದ್ದ ತಾಣವನ್ನು ಅನುಭವ ಮಂಟಪ ಎಂದು ಬಸವಣ್ಣನವರು ಕರೆದರು ; ಇದು ಬೃಹತ್ ಮಹಾಮನೆಯ ಒಂದು ಭಾಗ . ಕೆಲವು ಸಾಹಿತಿಗಳು ಅನುಭವ ಮಂಟಪ ಇದ್ದುದು ಕಲ್ಪನೆ ಎಂದೆಲ್ಲ ಅಪಸ್ವರವೆತ್ತಿದಾಗ ರೆವರೆಂಡ ಉತ್ತಂಗಿ ಚನ್ನಪ್ಪನವರು 'ಅನುಭವ ಮಂಟಪದ ಐತಿಹಾಸಿಕತೆ' ಎಂಬ ಕೃತಿಯನ್ನೇ ಆ ಪೂರ್ವಾಗ್ರಹ ಪೀಡಿತ ಸಾಹಿತಿಗಳ ಸಂದೇಹಕ್ಕೆ ಉತ್ತರವಾಗಿ ರಚಿಸಿದರು. ಅನುಭವ ಮಂಟಪವು ಒಂದು ಭೌತಿಕ ಕಟ್ಟಡವೇ ? ಅದರ ಕುರುಹು ಇಂದಿದೆಯೆ ಎಂದು ಚರ್ಚಿಸುವುದು ಅಪ್ರಸ್ತುತ. `ಅನುಭವ' ನಡೆಸಿದ್ದೇ ಅನುಭವ ಮಂಟಪ ; ಈ ಗಣಮೇಳಾಪವನ್ನು ಒಂದು ಗಿಡದ ಕೆಳಗೇ ಮಾಡಬಹುದು ; ಕೆರೆಯ ದಂಡೆಯ ಮೇಲೂ ಮಾಡಬಹುದು. 'ಮಹಾಮನೆ' ಎಂಬ ಬೃಹತ್ ಮನೆ ಇದ್ದ ಮೇಲೆ 'ಅನುಭವ ಮಂಟಪ' ಎಂಬ 'ಅಸೆಂಬ್ಲಿ ಹಾಲ್' ಇರಬಹುದಾದ ಬಗ್ಗೆ ಸಂದೇಹವೇ ಬೇಕಾಗದು.
'ಮಂಟಪ' ಎಂಬುದು ಒಂದು ಪರಿಕಲ್ಪನೆ (Concept) ಕ್ರೈಸ್ತರ ಸಂಸ್ಥೆಯಾದ ಚರ್ಚ್ ಇದ್ದ ಹಾಗೆ ; ಇದಕ್ಕೆ ಒಂದು ಕಾರ್ಯಕ್ರಮ ಇದೆ, ಗುರಿಯೂ ಇದೆ.
೧. ಮಂಟಪವು ಒಂದು ಧಾರ್ಮಿಕ ಸಿದ್ಧಾಂತದ ಸಾಕಾರ ರೂಪು
೨. ಇದು ಸಮತಾವಾದದ ಭೌತಿಕ ಪ್ರತಿ ರೂಪ. ಧಾರ್ಮಿಕ ಹಕ್ಕು, ಸಾಮಾಜಿಕ ಸಮಾನತೆ, ಸಾಂಸ್ಕೃತಿಕ- ನೈತಿಕ-ಅಧ್ಯಾತ್ಮಿಕ ತರಬೇತಿ ಹೊಂದ ಬಯಸುವ ಎಲ್ಲರನ್ನೂ ಇಂಬಿಟ್ಟುಕೊಳ್ಳುವ ಒಂದು ಸಂಸ್ಥೆ (Institution)
೩. ಇದು ಅನುಭವ ಮಂಟಪ, ಏಕೆಂದರೆ ಇಲ್ಲಿ ಕೇವಲ ಯಾಂತ್ರಿಕ ನಂಬಿಕೆ, ಶಾಸ್ತ್ರದಾಸ್ಯ, ಆದೇಶಪಾಲನೆ-ಇವಕ್ಕಷ್ಟೇ ಸ್ಥಾನವಿಲ್ಲ. ಸತ್ಯದ ಜ್ಞಾನಕ್ಕೆ ಇಲ್ಲಿ ಅನುಭವವೇ ಆಧಾರ. ತನ್ನ ಅನುಭವಕ್ಕೆ ಸಮ್ಮತವಾಗದ್ದನ್ನು ಯಾರೂ ಇಲ್ಲಿ. ಯಾಂತ್ರಿಕವಾಗಿ ಒಪ್ಪಿಕೊಳ್ಳಬೇಕಿಲ್ಲ.
೪. ಗುರುವು ತಾನೇ ಸರ್ವಜ್ಞನೆಂದು ಹೇಳುತ್ತಾ ಹೋಗುವ, ಉಳಿದವರು ಮೌನವಾಗಿ ಶ್ರದ್ಧೆಯಿಂದ ಕೇಳುವ ಪದ್ಧತಿ ಇಲ್ಲಿಲ್ಲ. ಇಲ್ಲಿ ಎಲ್ಲರಿಗೂ ವಿಚಾರ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಆಚಾರ ಸ್ವಾತಂತ್ರ್ಯ ಇದೆ. ತನ್ನ ಬುದ್ದಿ ಶಕ್ತಿಗನುಸಾರವಾಗಿ ವಿಚಾರ ಮಾಡಬಹುದು. ಸರಿ ಎನಿಸಿದ್ದನ್ನು ಹೇಳಬೇಕು. ಸಮ್ಮತವಾದಾಗ ಆಚರಿಸಬಹುದು.
ನುಲಿಯ ಚಂದಯ್ಯ ಕೆರೆಗೆ ಆಪು ಕೊಯ್ಯಲು ಹೋದಾಗ ಇಷ್ಟಲಿಂಗವು ಜಾರಿ ಬಿತ್ತು. ಅದನ್ನು ಅಲ್ಲೇ ಬಿಟ್ಟ. ತನಗೆ ಕಾಯಕವಷ್ಟೇ ಸಾಕು ಎಂದು ಬಂದು ಬಿಟ್ಟ.
ಆಗ ಓರ್ವ ವ್ಯಕ್ತಿಯು ಬಿದ್ದಿದ್ದ ಇಷ್ಟಲಿಂಗ ತೆಗೆದುಕೊಂಡು ಹಿಂದೆ ಬಂದರೂ ಚಂದಯ್ಯ ಸ್ವೀಕರಿಸಲಿಲ್ಲ ; ಆತ ಮಡಿವಾಳ ಮಾಚಿದೇವರು ಬಳಿ ಕರೆದೊಯ್ದ. ಅಲ್ಲಿಯೂ ಚಂದಯ್ಯ ವಾದದಲ್ಲಿ ಸೋಲಲಿಲ್ಲ. ಕಡೆಗೆ ಮಂಟಪಕ್ಕೆ ವಿಷಯ ತಲುಪಿ ಒಂದು ದಿನ ಇದರ ಬಗ್ಗೆಯೇ ಚರ್ಚೆಯಾಯಿತು. ಚಂದಯ್ಯನನ್ನು ಒಬ್ಬ ಸಾಮಾನ್ಯ ಅನುಯಾಯಿ ಎಂದು ನಿರ್ಲಕ್ಷಿಸಲಿಲ್ಲ. ಲಿಂಗವನ್ನು ಬಿಟ್ಟ ಭವಿ ಎಂದು ಬಹಿಷ್ಕಾರ ಹಾಕಲಿಲ್ಲ. ಆತನಿಗೆ ಮನವರಿಕೆ ಮಾಡಲು ಮಾಚಯ್ಯ, ಚನ್ನಬಸವಣ್ಣ, ಪ್ರಭುದೇವರು, ಬಸವಣ್ಣನವರು ಎಲ್ಲರೂ ಪ್ರಯತ್ನಿಸಿ ಯಶಸ್ವಿಯಾದರು. ಇದು 'ಮಂಟಪ' ದ ಘನತೆಯನ್ನು ಸಾರಿ ಸಾರಿ ಹೇಳುತ್ತದೆ. ಸಾಮಾನ್ಯ ಅನುಯಾಯಿಯ ಮಾತಿಗೂ ಬೆಲೆ ಕೊಡಬೇಕು. ಅವನು ಧರ್ಮದಲ್ಲಿ ಇದ್ದರೆಷ್ಟು ಹೋದರೆಷ್ಟು ಎಂದು ನಿರ್ಲಕ್ಷಿಸಬಾರದು. ಯಾರ ಮೇಲೂ ನಂಬಿಕೆಯನ್ನು ಹೇರಬಾರದು. ಮನವರಿಕೆ ಮಾಡಿಕೊಡಬೇಕು. ಧರ್ಮಾಚರಣೆಯ ಬಗ್ಗೆ ಸಂದೇಹ ಬಂದಾಗ ಅದನ್ನು ಪರಿಹರಿಸಬೇಕು. ನಂಬಿಕೆ ವಿಮರ್ಶೆಯ ತಳಹದಿಯ ಮೇಲೆ ಇದ್ದಾಗ ಭದ್ರವಾಗಿರುತ್ತದೆ....'' ಈ ವಾದದ ಪ್ರತೀಕವಾಗಿತ್ತು ಮಂಟಪ'. ಇಂಥ ಸಂಸ್ಥೆ ಸತತವಾಗಿ ಮುಂದುವರಿದು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂಬುದು ಧರ್ಮಪಿತರ ಆಸೆಯಾಗಿತ್ತು.
ಜಗತ್ತಿನ ಯಾವುದೇ ಪ್ರವಾದಿಯು ತಾನು ಇದ್ದ ಕಾಲದಲ್ಲಿ ಇಂಥದೊಂದು ಸಂಸ್ಥೆ (Institution) ಯನ್ನು ಮಾದರಿ (Model)ಯಾಗಿ ಕಟ್ಟಿತೋರಿಸಿದ್ದು ನಾವು ಕಾಣುವುದಿಲ್ಲ; ಮತ್ತು ಹೀಗೆ ಮುಕ್ತ ಚಿಂತನೆಯನ್ನು ಮಾಡಲು ಅವಕಾಶ ಕೊಟ್ಟುದನ್ನು ಕಾಣುವುದಿಲ್ಲ. ನಾನು ಹೇಳುತ್ತೇನೆ ನೀವು ವಿಶ್ವಾಸವಿಟ್ಟು ಕೇಳಿರಿ; ನಾನು ಹೇಳುವ ಅಧಿಕಾರವನ್ನು ದೇವರಿಂದ ಹೊಂದಿದ್ದೇನೆ. ನಿವು ಪ್ರಶ್ನಿಸದೆ ಅದನ್ನು ಕೇಳಬೇಕು.” ಎಂಬ ಧೋರಣೆಯನ್ನು ಹಲವಾರು ದಾರ್ಶನಿಕರ ಮಾತಿನಲ್ಲಿ ಗುರುತಿಸ ಬಹುದು. ಧರ್ಮಕರ್ತ ಬಸವಣ್ಣನವರು ಈ ಮನೋಭಾವ ಹೊಂದಿರಲಿಲ್ಲ. "ಅಯ್ಯಾ ನೀವೂ ವಿಚಾರ ಮಾಡಿರಿ, ದೇವರು ನಮಗೆ ಮನ ಬುದ್ಧಿಗಳನ್ನು ಕೊಟ್ಟಿರುವನು. ಸತ್ಯವನ್ನು ಕುರಿತು ಸಾಮೂಹಿಕವಾಗಿ ಚಿಂತಿಸೋಣ. ನಮ್ಮ ನಮ್ಮ ಅನುಭವಗಳನ್ನು ಹಂಚಿಕೊಳ್ಳೋಣ'' ಎನ್ನುವ ಮನೋಭಾವದವರಾಗಿದ್ದರು.
ಜಗನ್ಮಾತಾ ಅಕ್ಕಮಹಾದೇವಿ ಹೇಳುವ ಒಂದು ವಚನ ಅನುಭವ ಮಂಟಪದ ಚರ್ಚೆ ಮತ್ತು ಇರುವಿಕೆಯನ್ನು ಹೀಗೆ ಚಿತ್ರಿಸುತ್ತದೆ. “ಆಡುವುದು, ಪಾಡುವುದು, ಹೇಳುವುದು. ಕೇಳುವುದು ಸರಸ-ಸಮ್ಮೇಳನದಲ್ಲಿ ಇಪ್ಪುದು." ಇಲ್ಲಿ ಪ್ರತಿಯೊಬ್ಬರಿಗೂ ಹೇಳಲಿಕ್ಕೆ (ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು ಕೇಳಲಿಕ್ಕೆ ಅವಕಾಶವಿದ್ದಿತು.
ಧರ್ಮಪಿತ ಬಸವಣ್ಣನವರು ತಾವು ಕಟ್ಟಿದ ಸಂಸ್ಥೆಗೆ ಇಟ್ಟ ಹೆಸರು ಅನುಭವ ಮಂಟಪ, ಪಾಶ್ಚಿಮಾತ್ಯ ದೇಶಗಳಲ್ಲಿ ವಿಚಾರ-ಪಂಥಗಳನ್ನು (Schools of thought) ಕಾಣಬಹುದು. ಮಾರ್ಕ್ಸ್ ವಿಚಾರದ ಮೇಲೆ ನಿಂತುದು, ಹೆಗೆಲ್ಲನ ವಿಚಾರದ ಮೇಲೆ ನಿಂತುದು ಹೀಗೆ ಅವೆಲ್ಲವೂ ತರ್ಕ-ವಾದಗಳ ಮೇಲೆ ನಿಂತ ಪಂಥಗಳು. ಇಲ್ಲಿಯೂ ತರ್ಕ-ವಾದ-ವೈಚಾರಿಕತೆ ಇದ್ದರೂ ಗುರಿ ಮಾತ್ರ ಪರಮಾತ್ಮನ ಸಾಕ್ಷಾತ್ಕಾರ. ವಾದಕ್ಕಾಗಿ ವಾದಮಾಡುವುದು ಅನುಭವ ಮಂಟಪದ ಗುರಿಯಾಗಿರದೆ ತತ್ವ ವನ್ನು, ಸತ್ಯವನ್ನು ಅರಿತುಕೊಳ್ಳುವ ಉತ್ಕಟ ಗುರಿ ಹೊಂದಿದುದು ಅನುಭವ ಮಂಟಪ, ಮಾತುಮನಂಗಳಿಗತೀತವಾದ ಪರಂಜ್ಯೋತಿಯನ್ನು, ಅಪ್ರಮಾಣನು, ಅಗೋಚರನೂ, ತರ್ಕಕೃತೀತನಾದವನೂ ಆದ ಪರಮಾತ್ಮನನ್ನು, ವೇದ ಶಾಸ್ತ್ರ ಸ್ಮೃತಿ ಶೃತಿಗಳಿಂದ ಅರಿಯಲಾರದ ಪರಾತ್ಪರ ವಸ್ತುವನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ 'ಅನುಭವ' (Experience) ಪ್ರಮಾಣದಿಂದ ಮಾತ್ರ ಸಾಧ್ಯ ಎಂಬುದೇ ಶರಣರ ಖಚಿತ ನಿಲುವು.
ಅನುಭವ ಬಹಳ ವ್ಯಾಪ್ತಿಯುಳ್ಳ ಪದವಾಗಿ ಇಡೀ ಬದುಕನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವಂಥದು. ನಮ್ಮ ಕಣ್ಣು ಕಿವಿ ನಾಲಿಗೆ ನೀಡುವ ರೂಪ, ಶಬ್ದ ರುಚಿಗಳನ್ನು ಅಂದರೆ ಇಂದ್ರಿಯಾನುಭವವನ್ನು ಅನುಭವವೆಂದೇ ಕರೆಯುತ್ತೇವೆ. ಅದಕ್ಕಾಗಿಯೇ ಶರಣರು ಅನುಭವ ಮಂಟಪ ಎಂದು ಸಂಸ್ಥೆಯನ್ನು ಕರೆದರೂ, ದಾರ್ಶನಿಕ ಜಗತ್ತಿಗೆ ಸಂಬಂಧಪಟ್ಟ ಅನುಭವವನ್ನು ಅನುಭಾವ (Mystic experience) ಎಂದು ಕರೆದರು. ಜ್ಞಾನವನ್ನು ಪಡೆಯುವ ಸಾಧನಗಳು ನಾಲ್ಕು.
೧. ಪ್ರತ್ಯಕ್ಷ ಪ್ರಮಾಣ,
೨. ಅನುಮಾನ (ತರ್ಕ) ಪ್ರಮಾಣ.
೩. ಆಗಮಶಾಸ್ತ್ರ) ಪ್ರಮಾಣ
೪.ಅನುಭಾವ ಪ್ರಮಾಣ.
೧.ಪ್ರತ್ಯಕ್ಷ ಪ್ರಮಾಣ : ಇದಕ್ಕೆ ಇಂದ್ರಿಯ ಪ್ರಮಾಣವೆಂದು ಇನ್ನೊಂದು ಹೆಸರು. ನಮ್ಮ ಪಂಚೇಂದ್ರಿಯಗಳಿಂದ ನೇರವಾಗಿ ಪಡೆಯುವ ಇಂದ್ರಿಯಾನುಭವ (Sense perception) ಕ್ಕೆ ಪ್ರತ್ಯಕ್ಷ ಪ್ರಮಾಣ ಎನ್ನಲಾಗುವುದು. ಇದನ್ನು ಸಾಮಾನ್ಯಾರ್ಥದಲ್ಲಿ
ಅನುಭವ' ಎನ್ನಲಾಗುವುದು.
ನಮ್ಮ ನಿತ್ಯದ ಜೀವನವು ಈ ಪ್ರತ್ಯಕ್ಷ ಪ್ರಮಾಣದ ಮೇಲೆ ನಿಂತಿದೆಯಾದರೂ ಇದೇ ಜ್ಞಾನದ ಸಂಪೂರ್ಣ ಆಕರ (Source) ಅಲ್ಲ. ಏಕೆಂದರೆ ಇದು ಯಾವುದೇ ವಸ್ತುವಿನ ಪೂರ್ಣಜ್ಞಾನವನ್ನು ಮಾಡಿಕೊಡಲಾರದು. ಹನಿ ನೀರನ್ನು ಬರಿಗಣ್ಣಿನಿಂದ ನೋಡುತ್ತೇವೆ. ಅದು ಶುದ್ಧವಾಗಿದೆ ಎಂದು ಊಹಿಸುತ್ತೇವೆ. ಸೂಕ್ಷ್ಮ ದರ್ಶಕದಿಂದ ನೋಡಿದಾಗ ಅದರಲ್ಲಿರುವ ಸೂಕ್ಷ್ಮ ಜೀವಿಗಳು ಕಾಣುವವು. ಬಿಸಿಲಲ್ಲಿ ಹೋಗುವಾಗ ಮರೀಚಿಕೆ (ಬಿಸಿಲ್ಗುದುರೆ) ಗಳನ್ನು ನೋಡಿ ಅಲ್ಲಿ ನೀರು ಇರುವುದಾಗಿ ಭಾವಿಸುತ್ತೇವೆ. ನೀರು ಅಲ್ಲಿ ಇರುವುದಿಲ್ಲ. ನೀರಿನ ಒಂದು ತೊಟ್ಟಿಯಲ್ಲಿ ಕೋಲೊಂದನ್ನು ಇಡುತ್ತೇವೆ. ನಮ್ಮ ಕಣ್ಣಿಗೆ ಆ ಕೋಲು ಬಾಗಿದಂತೆ (ಮುರಿದಂತೆ) ಕಾಣುತ್ತದೆ. ಅದು ವಾಸ್ತವಿಕವಾಗಿ ಬಾಗಿರುವುದಿಲ್ಲ. ಹೀಗೆ ಕಣ್ಣು ಮೋಸ ಮಾಡುತ್ತದೆ. ನಾಲಿಗೆ ಕೆಟ್ಟಾಗ ರುಚಿಯಾದ ಹಾಲನ್ನು ಕುಡಿದರೂ ಅದು ಕಹಿ ಎನಿಸುತ್ತದೆ. ಆಗ ನಾಲಿಗೆ ಮೋಸ ಮಾಡಿರುವುದು. ಅನೇಕ ಬಾರಿ ವದಂತಿಗಳನ್ನು ಕೇಳುತ್ತೇವೆ. ಸತ್ಯ ಸಂಗತಿ ಬೇರೆಯೇ ಇರುತ್ತದೆ. ಹೀಗೆ ಕಿವಿಯು ಮೋಸ ಮಾಡಿರುತ್ತದೆ. ಪ್ರತ್ಯಕ್ಷ ಪ್ರಮಾಣವು ಜೀವನಕ್ಕೆ ಅತ್ಯಗತ್ಯವೂ ಮತ್ತು ಪ್ರಮುಖ ಮಾಧ್ಯಮವು ಆಗಿದ್ದರೂ ಅದೇ ಅಂತಿಮ ಪ್ರಮಾಣವಲ್ಲ.
೨. ಅನುಮಾನ ಪ್ರಮಾಣ : ಇದು ತರ್ಕ(Logic) ದ ಮೇಲೆ ಅವಲಂಬಿತ ವಾಗಿರುತ್ತದೆ ಮತ್ತು ಒಂದನ್ನು ಪ್ರತ್ಯಕ್ಷವಾಗಿ ಪಂಚೇಂದ್ರಿಯಗಳ ಮೂಲಕ ನೋಡಿ ಇನ್ನೊಂದನ್ನು ಊಹಿಸುವ ಪ್ರಕ್ರಿಯೆ ಹೊಂದಿರುತ್ತದೆ. ನದಿ ದಂಡೆಯ ಮೇಲೆ ನಿಂತಾಗ ಕೆಂಪಾದ, ರಾಡಿಯಾದ ನೀರು ಬರುತ್ತಿದ್ದರೆ ಮೇಲೆಲ್ಲೋ ಮಳೆಯಾಗಿದೆ ಊಹಿಸುವುದು ಅನುಮಾನ ಪ್ರಮಾಣ. ಕಣ್ಣಿಗೆ ಹೊಗೆ ಕಾಣುತ್ತದೆ. ಹೊಗೆಯ ಹಿಂದೆ ಬೆಂಕಿ ಇದೆ ಎಂದು ಊಹಿಸುತ್ತೇವೆ. ದಿನ ನಿತ್ಯ ತಾತನು ಬೆತ್ತ ಹಿಡಿದು ವಾಯುವಿಹಾರಕ್ಕೆ ಹೋಗುವುದು ರೂಢಿ. ಮೂಲೆಯಲ್ಲಿ ಬೆತ್ತ ಕಾಣದಿದ್ದರೆ ತಾತನು ವಾಯು ವಿಹಾರಕ್ಕೆ ಹೋಗಿರುವರೆಂದು ಊಹಿಸುತ್ತೇವೆ.
ಇದೇ ಆಧಾರದ ಮೇಲೆ ಪರಮಾತ್ಮನ ಅಸ್ತಿತ್ವ, ಜೀವಾತ್ಮನ ಅಸ್ತಿತ್ವವನ್ನು ಊಹಿಸಲಾಗುವುದು, ಸಮರ್ಥಿಸಲಾಗುವುದು.
ಪೇಲೆ ತತ್ತ್ವಜ್ಞಾನಿ ಹೇಳುವಂತೆ. ಈ ಜಗತ್ತೊಂದು ಗಡಿಯಾರದಂತಿದೆ. ಇದನ್ನು ಮಾಡಿದವನು ಪರಮಾತ್ಮನೆಂಬ ತಂತ್ರಜ್ಞ. ಸರ್ವಜ್ಞ ಸಹ ಹೇಳುವನು.
ಇಂಗಿನೊಳು ನಾತವನು ತೆಂಗಿನೊಳಗೆಳನೀರ
ಶೃಂಗಕೋಗಿಲೆಯ ಕಂಠದೊಳು ಗಾಯನವ
ತುಂಬಿದವರಾರೊ ಸರ್ವಜ್ಞ ?
ಚಿತ್ರವನು ನವಿಲಿನೊಳು ವಿಚಿತ್ರವನು ಗಗನದೊಳು
ಪತ್ರಪುಷ್ಪಗಳ ವಿವಿಧ ವರ್ಣಗಳಿಂದ
ಚಿತ್ರಿಸಿದವರಾರೊ ಸರ್ವಜ್ಞ ?
ಪರಮಾತ್ಮನ ಕಾರ್ಯವಾದ ಸೃಷ್ಟಿಯನ್ನು ನೋಡಿ, ಇದರ ಕರ್ತೃವನ್ನು ಊಹಿಸುವುದು ಅನುಮಾನ ಪ್ರಮಾಣವೆ. ಇದಕ್ಕೆ ತರ್ಕಪ್ರಮಾಣ ಎಂದೂ ಸಹ ಕರೆಯಲಾಗುವುದು.
ಶರೀರವು ಜಡವಾದುದು, ತನ್ನಿಂದ ತಾನೇ ಕೆಲಸ ಮಾಡಲಾರದು. ಇಂಥ ಶರೀರವು ತನ್ನಿಂದ ತಾನೇ ನಡೆಯಬೇಕಾದರೆ, ಕೇಳಬೇಕಾದರೆ, ನೋಡಬೇಕಾದರೆ, ಸುಖ ದುಃಖ ಅನುಭವಿಸಬೇಕಾದರೆ ಇದನ್ನು ಸೂತ್ರಧಾರಕ ಶಕ್ತಿಯಾಗಿ ಆಡಿಸುವ ಚೈತನ್ಯವಿರಲೇ ಬೇಕು. ಅದುವೇ ಚೈತನ್ಯಸ್ವರೂಪಿಯಾದ ಆತ್ಮ.
ಹೀಗೆ ತರ್ಕದ ಮೇಲೆ ಅವಲಂಬಿತವಾಗಿ, ಬುದ್ದಿಯು ಪ್ರಧಾನವಾಗಿ ಕೆಲಸ ಮಾಡುವುದು ಅನುಮಾನ ಪ್ರಮಾಣ. ಅನುಮಾನ ಪ್ರಮಾಣವು ಅತ್ಯಂತ ಬಲಶಾಲಿಯಾದುದಾರೂ ಇದರ ಮೇಲೆ ಪೂರ್ಣ ವಿಶ್ವಾಸವನ್ನು ಇಡಲು ಆಗುವುದಿಲ್ಲ.
೩. ಶಾಸ್ತ್ರ ಪ್ರಮಾಣ : ಸತ್ಯವನ್ನು ನಿರ್ಣಯಿಸಲು ಆಗಮ ಪ್ರಮಾಣ ಬಹಳ ಮುಖ್ಯ. ಅನೇಕ ಸತ್ಯ ಸಾಕ್ಷಾತ್ಕಾರಿಗಳು, ದಾರ್ಶನಿಕರು ತಮ್ಮ ದಿವ್ಯಾನುಭವಗಳ ಪ್ರತಿಫಲವಾಗಿ ಅನೇಕ ಉದ್ಧಂಥಗಳನ್ನು ಕೊಟ್ಟು ಹೋಗಿರುತ್ತಾರೆ. ಅವೇ ನಂತರದ ಜನಾಂಗಕ್ಕೆ ಜ್ಞಾನದ ಆಕರಗಳಾಗುತ್ತವೆ. ಪ್ರಾರಂಭಿಕ ಜ್ಞಾನವು ಬೆಳೆಯುವುದು ಈ ಶಾಸ್ತ್ರಗಳಿಂದಲೇ. ಶಾಸ್ತ್ರಾಧ್ಯಯನದ ಮೂಲದ್ರವ್ಯವಿಲ್ಲದೆ ಬುದ್ದಿಯು ವಿಚಾರ ಸಹ ಮಾಡಲಾರದು. ಹಿಂದಿನ ಅನುಭಾವಿಗಳು, ಜ್ಞಾನಿಗಳು ಪಡೆದ ದಿವ್ಯ ಜ್ಞಾನವೇ ಶಾಸ್ತ್ರವಾಗಿರುವುದರಿಂದ ದೇವರ ಸ್ವರೂಪ, ಆತ್ಮ ಸ್ವರೂಪ ಇತ್ಯಾದಿ ತಿಳಿಯಲು ಸಾಧಕರು ಇವುಗಳನ್ನು ಅವಲಂಬಿಸಬೇಕಾಗುತ್ತದೆ. ಆದರೆ ಬಸವಾದಿ ಪ್ರಮಥರು ಶಾಸ್ತ್ರಜ್ಞಾನವನ್ನು ಸಂಶಯದಿಂದಲೇ ನೋಡಿ, ಕೊಂಚದೂರದಲ್ಲೇ ಇಟ್ಟರು.
ವೇದಕ್ಕೆ ಒರೆಯಕಟ್ಟುವೆ
ಶಾಸ್ತ್ರಕ್ಕೆ ನಿಗಳವನಿಕ್ಕುವೆ
ತರ್ಕದ ಬೆನ್ನ ಬಾರನೆತ್ತುವೆ
ಆಗಮದ ಮೂಗ ಕೊಯ್ಕೆ
ಎಂದರು. ಇದರರ್ಥ ಅವರು ಹಿಂದಿನ ದಾರ್ಶನಿಕರ ದಿವ್ಯ ಜ್ಞಾನವನ್ನೇ ಅಲ್ಲಗಳೆದರು ಎಂದೆ? ಇಲ್ಲ. ದಾರ್ಶನಿಕ ಅನುಭವ, ದೇವರ ಕಾರುಣ್ಯ ಕಪಟ ಹೃದಯಗಳಿಗೆ ಎಂದೂ ಲಭ್ಯವಾಗದು. ಅವರು ನಿರ್ಮಲ ಮನಸ್ಸಿನಿಂದಲೇ ತಮ್ಮ ಅನುಭವವನ್ನು ಲೋಕಕ್ಕೆ ಕೊಡುವರು. ಆದರೆ ಸ್ವಾರ್ಥಿಗಳು, ಪಟ್ಟ ಭದ್ರ ಹಿತಾಸಕ್ತರು ದಾರ್ಶನಿಕರ ವಚನಾಮೃತ ಕ್ಷೀರಕ್ಕೆ ಅನೇಕ ದುರ್ವಿಚಾರದ ಕೊಳಕು ನೀರನ್ನು ಸೇರಿಸಿರುವ ಸಂಭವವಿರುತ್ತದೆ. ಪ್ರವಾದಿಗಳು ಕೊಡುವ ಸಾಹಿತ್ಯದೊಳಕ್ಕೆ ಪೂಜಾರಿ ಸಾಹಿತ್ಯ ಬೆರೆಯುತ್ತ ಹೋಗಿ ಮೂಲಧ್ಯೇಯ, ಪರಿಶುದ್ಧತೆ ಕಳೆದು ಹೋಗಿರುವ ಸಂಭವ ಹೆಚ್ಚಾಗಿರುತ್ತದೆ. ಅದಕ್ಕಾಗಿ ಪುರೋಹಿತ ಶಾಹಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಶಾಸ್ತ್ರಗಳ ಆಧಾರವನ್ನು ಮಂಡಿಸಿದಾಗ ಬಸವಣ್ಣನವರು ಆ ಶಾಸ್ತ್ರಗಳನ್ನು ವಿಡಂಬಿಸಿ, ಪ್ರಶ್ನಿಸುತ್ತಾರೆ. ಆಗಮವ ಇದಿರಿಂಗೆ ತೋರುವುದು ಆಚಾರವೆ ?'' ಎನ್ನುತ್ತಾರೆ. “ದೇವರು, ನಮ್ಮ ಪ್ರತ್ಯಕ್ಷ ಪ್ರಮಾಣದಿಂದ ಸತ್ಯವನ್ನು ತಿಳಿಯಲು ಪಂಚೇಂದ್ರಿಯಗಳನ್ನು ತರ್ಕಿಸಲು ಬುದ್ಧಿಯನ್ನು ಕೊಟ್ಟಿರುವಾಗ ನಾವು ಯಾಂತ್ರಿಕವಾಗಿ ಶಾಸ್ತ್ರಗಳನ್ನು ನಂಬುವುದೇಕೆ ? ಎನ್ನುವರು. ಹಾಗೆಂದು ಶಾಸ್ತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಬೇಕೆ ? ಆ ಅಹಂಕಾರ ಸಲ್ಲದು. ಶಾಸ್ತ್ರಗಳನ್ನು ನಮ್ಮ ಅನುಭವ. ತರ್ಕದ ಒರೆಗೆ ಹಚ್ಚಬೇಕು. ಸತ್ಯವಿದ್ದುದನ್ನು ನಂಬಿ ಅನುಸರಿಸಬೇಕು. ಅಸತ್ಯವಿದ್ದುದನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು.
ಅಜ್ಞಾನವೆಂಬ ತೊಟ್ಟಿಲೊಳಗೆ
ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದ ಶಾಸ್ತ್ರಂಗಳೆಂಬ ನೇಣ ಕಟ್ಟಿ
ಹಿಡಿದುತೂಗಿ ಜೋಗುಳವ ಹಾಡುತ್ತಿದ್ದಾಳೆ ನೋಡಾ
ಭ್ರಾಂತಿ ಎಂಬ ತಾಯಿ !
ತೊಟ್ಟಿಲು ಮುರಿದು, ನೇಣು ಹರಿದು,
ಜೋಗುಳ ನಿಂದಲ್ಲದೆ ಗುಹೇಶ್ವರನೆಂಬ ಲಿಂಗವ ಕಾಣಬಾರದು.
- ಅ.ಪ್ರ. ವ.
ಪ್ರತಿಯೊಬ್ಬ ಮಾನವನಲ್ಲಿಯೂ ಸ್ಪುರಣಾತ್ಮಕವಾದ ಅಂತರಾತ್ಮದ ಜ್ಞಾನ ಇರುತ್ತದೆ. ಇದು ಸ್ವಾಭಾವಿಕ ಬೆಳಕು. ಆದರೆ ಇದನ್ನು ವೇದ-ಶಾಸ್ತ್ರ-ಪುರಾಣಗಳು ಮುಚ್ಚಿಬಿಡುತ್ತವೆ. ಈ ಆಂತರ್‌ಜ್ಞಾನದ ಶಿಶುವು ಅಜ್ಞಾನದ ತೊಟ್ಟಿಲಲ್ಲಿ ಮಲಗಿ ಸುಖನಿದ್ರೆಗೆ ಒಳಗಾಗಿ ಬಿಡುತ್ತದೆ. ಭ್ರಾಂತಿ ಎಂಬ ತಾಯಿ ಮತ್ತೆ ಇದು ಎಚ್ಚರಗೊಳ್ಳದಂತೆ ಪುನಃತೂಗಿ ತೂಗಿ ಅಂಧಃಶ್ರದ್ಧೆಯ ಜೋಗುಳವನ್ನು ಹಾಡುತ್ತದೆ. ಅಜ್ಞಾನದ ತೊಟ್ಟಿಲು ಮುರಿಯಬೇಕು. ಶಾಸ್ತ್ರಾವಲಂಬನೆ ಎಂಬ ಹಗ್ಗ ಹರಿಯಬೇಕು. ತಪ್ಪು ತಪ್ಪಾಗಿ ತಿಳಿದುಕೊಳ್ಳುವ ಭ್ರಾಂತಿ ಎಂಬ ತಾಯಿ ದೂರವಾಗಬೇಕು. ಅಂಧಃಶ್ರದ್ಧೆಯ ಜೋಗುಳ ನಿಲ್ಲಬೇಕು. ಅಂತರಾತ್ಮವು ಎಚ್ಚರಗೊಳ್ಳಬೇಕು. ಆಗ ಮಾತ್ರ ಪರಮಾತ್ಮನ ಸಾಕ್ಷಾತ್ಕಾರ, ದರ್ಶನಾನುಭವ.
೪. ಅನುಭಾವ ಪ್ರಮಾಣ (ದಿವ್ಯಾನುಭವ)
ಅರುಹಿನ ತೃಪ್ತಿಗೆ ಅನುಭಾವವೇ ಆಶ್ರಯ
ಲಿಂಗಾನುಭಾವದಿಂದ ನಿಮ್ಮ ಕಂಡು
ಎನ್ನ ಮರೆದೆ ಕಾಣಾ ಕೂಡಲಸಂಗಮದೇವ |
ಈ ವಚನದಲ್ಲಿ ಅನುಭಾವದ ವ್ಯಾಖ್ಯಾನ ಸುಂದರವಾಗಿ ಮೂಡಿ ಬಂದಿದೆ. ಅರುಹು ಅಂದರೆ ಬುದ್ದಿ. ಇದು ಒಂದು ಅಂತರೀಂದ್ರಿಯ. ಇದರದು ಅನ್ವೇಷಣಾ ಪ್ರವೃತ್ತಿ. ಇದು ಸದಾ ಹುಡುಕಾಟವನ್ನು ನಡೆಸಿರುತ್ತದೆ. ಈ ಹುಡುಕಾಟದ ಗುರಿ ಸತ್ಯದ ಸಾಕ್ಷಾತ್ಕಾರ, ತೃಪ್ತಿ ಹೊಂದುವಿಕೆ, ಆನಂದಪ್ರಾಪ್ತಿ, ಸತ್ಯವನ್ನು-ತೃಪ್ತಿವನ್ನು ಹುಡುಕುತ್ತಾ ಹೊರಟ ಬುದ್ಧಿಯ ಅನ್ವೇಷಣೆಯ ಫಲವೇ ವಿಜ್ಞಾನ, ಸಾಹಿತ್ಯ ತತ್ತ್ವ ಜ್ಞಾನ, ಆಧ್ಯಾತ್ಮ. ಇಂಥ ಅರುಹು ತನ್ನ ಹುಡುಕಾಟವನ್ನು ನಿಲ್ಲಿಸಿ, ಅಪೂರ್ವವಾದ ತೃಪ್ತಿಯನ್ನು ಹೊಂದುವುದು ದಿವ್ಯಾನುಭವದಲ್ಲಿ. ಈ ದಿವ್ಯಾನುಭವದ ನೆರವಿನಿಂದಲೇ, ದೇವನನ್ನು ಕಂಡು ಜೀವಭಾವವನ್ನು, ತನ್ನತನವನ್ನು ಮರೆಯುತ್ತದೆ.
ಪರಮಾತ್ಮನೆಂಬ ಆತ್ಯಂತಿಕ ಸತ್ಯವನ್ನರಿಯಲು ಈ ಅನುಭಾವವೇ ಸಾಧನ. ಒಂದೊಂದು ಅನುಭವವನ್ನು ಪಡೆಯಲು ಒಂದೊಂದು ಇಂದ್ರಿಯವು ಸಾಧನವಾಗುವುದು. ಶಬ್ದವನ್ನು ಗ್ರಹಿಸಲು ಕಿವಿ, ಸ್ಪರ್ಶವನ್ನು ಗ್ರಹಿಸಲು ಚರ್ಮ, ರೂಪವನ್ನು ಗ್ರಹಿಸಲು ಹೃದಯವೇ ಸಾಧನವಾಗುತ್ತವೆ. ಹೀಗಾಗಿ ಅನುಭಾವವು ಹೃದಯದ ಸಂಪತ್ತು.
ಅನುಭಾವ ಎಂಬ ಪದವನ್ನು ಶರಣರು ಅನೇಕ ಅರ್ಥಗಳಲ್ಲಿ ಬಳಸುತ್ತಾರೆ.
ಅನುಭಾವವೆಂಬುದೊಂದು ಆತ್ಮವಿದ್ಯೆ
ಅನುಭಾವವೆಂಬುದು ತಾನಾರೆಂಬುದ ತೋರುವುದು
ಅನುಭಾವವೆಂಬುದು ನಿಜ ನಿವಾಸದಲ್ಲಿ ಇರಿಸುವುದು.
ಲೋಕದಲ್ಲಿ ಎರಡು ಬಗೆಯ ವಿದ್ಯೆಗಳುಂಟು ; ಕಾಯವಿದ್ಯೆ ಮತ್ತು ಆತ್ಮವಿದ್ಯೆ ಎಂಬುದಾಗಿ. ಕಾಯ ವಿದ್ಯೆ ಎಂದರೆ ಉಪಜೀವನದ ವಿದ್ಯೆ ಅಂದರೆ ಶರೀರ ಪೋಷಣೆ, ಸಂಸಾರ ನಿರ್ವಹಣೆ, ಐಹಿಕ ಜೀವನ ಸಂರಕ್ಷಣೆ ಮಾಡಲು ಸಹಾಯಕವಾಗುವ ಕಾಯಕ ಅಥವಾ ಉದ್ಯೋಗಗಳನ್ನು ಒದಗಿಸುವುದು ಕಾಯವಿದ್ಯೆ. ಶರೀರವನ್ನು ದಾಟಿದ ಆತ್ಮಚೈತನ್ಯದ ತೃಪ್ತಿ, ಪರಿಪೂರ್ಣತೆಗೆ, ಪರಮಾತ್ಮನ ಸಾಕ್ಷಾತ್ಕಾರಕ್ಕೆ ನೆರವಾಗುವುದೇ ಆತ್ಮವಿದ್ಯೆ. ಅನುಭಾವವು ಹೀಗೆ ಆತ್ಮವಿದ್ಯೆ, ಅಧ್ಯಾತ್ಮಿಕ ವಿದ್ಯೆ. ಇದು ಏನನ್ನು ಸಾಧಿಸುತ್ತದೆ ? ತಾನಾರು ಎಂಬುದನ್ನು ತೋರುತ್ತದೆ. ಸಾಮಾನ್ಯವಾಗಿ ಮಾನವರೆಲ್ಲರು ತಾವು ಉಂಡುಟ್ಟು ನಲಿಯುವ, ಇಂದ್ರಿಯಗಳ ಮೂಲಕ ಸುಖಪಡುವ ಜೀವಿಗಳು ಎಂದೇ ತಿಳಿದಿರುತ್ತಾರೆ. ಅದಕ್ಕಾಗಿಯೇ ಬೇರೊಂದು ವಿಚಾರ ಸಹ ಮಾಡದೆ ದುಡಿಯುವುದು, ಗಳಿಸುವುದು, ಸಂಗ್ರಹಿಸುವುದು, ಮದುವೆಯಾಗುವುದು, ಮಕ್ಕಳನ್ನು ಪಡೆಯುವುದು. ಹೀಗೆ ಸುಖ-ಸಂಭ್ರಮಗಳಲ್ಲಿ ತನ್ಮಯರಾಗಿರುತ್ತಾರೆ. ಆಗ ಈ ಅನುಭಾವ ಎಂಬ ಆತ್ಮವಿದ್ಯೆಯು, ನಿನ್ನ ಜೀವಿತದ ಅರ್ಥ, ಗುರಿ ಇಷ್ಟೇ ಅಲ್ಲ ನೀನು ಅಂದರೆ ಕೇವಲ ಶರೀರವಲ್ಲ. ಈ ಮಿತವಲಯವನ್ನು ದಾಟಿದ ಆತ್ಮವು ನೀವು ಎಂದು ತೋರಿಸಿ ಕೊಡುತ್ತದೆ. ಕೇವಲ ಶರೀರವನ್ನು ನೀನೆಂದು ತಿಳಿದಿದ್ದೀಯ. ಹಾಗಲ್ಲ
ಶರೀರವನ್ನು ಸೂತ್ರಧಾರಕನಾಗಿ ಆಡಿಸುವ ಆತ್ಮ ಚೈತನ್ಯವೇ ನೀನು ಎಂದು ಆತ್ಮವಿದ್ಯೆಯು ಸ್ವರೂಪ ದರ್ಶನ ಮಾಡಿಸುತ್ತದೆ.
ಅನುಭಾವವು ನಿಜ ನಿವಾಸದಲ್ಲಿ ಇರಿಸುತ್ತದೆ. ನಿಜ ನಿವಾಸವೆಂದರೆ ಪರಮಾತ್ಮ. ಆ ಮೂಲಚೈತನ್ಯದಿಂದ ಒಂದು ಕಿಡಿಯಾಗಿ ಜೀವಾತ್ಮವು ಹೊರಹೊಮ್ಮಿದ್ದು: ಇದು ಅಂತಿಮವಾಗಿ ಆ ಪರಮಾತ್ಮನನ್ನು ಸೇರುವವರೆಗೂ ಪರಪೂರ್ಣತೆ ಇರುವುದಿಲ್ಲ. 'ಜೀವನ' ಚಕ್ರವು ತನ್ನಾದಿಯಾಗಿರುವ ಚೈತನ್ಯವನ್ನು ಪುನಃ ಸೇರಿದಾಗಲೇ ಪೂರ್ಣಗೊಳ್ಳುವುದು. ರುದ್ರಾಕ್ಷಿ ಮಾಲೆಯಲ್ಲಿ ಶಿಖಾಮಣಿ ಎಂಬುದು ಇದ್ದು ಒಂದು ತಂತಿಯು ಅಲ್ಲಿಂದ ಹೊರಟು ಅನಂತ ಮಣಿಗಳನ್ನು ಪೋಣಿಸಿ, ಅಂತಿಮವಾಗಿ ಶಿಖಾಮಣಿಯಲ್ಲಿ ಸೇರಿದಾಗ ಅದು ಹೇಗೆ ಮಾಲೆಯಾಗುವುದೋ ಹಾಗೆ ಜೀವಾತ್ಮವು ತನ್ನೆಲ್ಲ ಮಾಲೀನ್ಯವನ್ನು ಕಳೆದುಕೊಂಡು ಪರಮಾತ್ಮನಲ್ಲಿ ಬೆರೆದಾಗಲೇ, ಅದರ ಚಕ್ರ (Cycle) ಪೂರ್ಣಗೊಳ್ಳುವುದು. ಅನುಭಾವವು ಹೀಗೆ ಜೀವಾತ್ಮವನ್ನು ನಿಜನಿವಾಸಕ್ಕೆ ಕೊಂಡೊಯ್ಯುತ್ತದೆ.
ಗ್ರಂಥ ಋಣ:
೧) ವಿಶ್ವಧರ್ಮ ಪ್ರವಚನ, ಲೇಖಕರು: ಪೂಜ್ಯ ಶ್ರೀ ಮಾತೆ ಮಹಾದೇವಿಯವರು, ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಇಷ್ಟಲಿಂಗ ಪೂಜೆ | ಇಷ್ಟಲಿಂಗ - ಚರಲಿಂಗ - ಸ್ಥಾವರಲಿಂಗ |