ಪಾದೋದಕ | ಲಿಂಗಾಚಾರ-ಏಕದೇವನಿಷ್ಠೆ |
ಪ್ರಸಾದ |
ಪ್ರಸಾದಕ್ಕೆ ವಚನಕಾರರು ವಿಶೇಷ ಮಹತ್ವ ಕೊಡುತ್ತಾರೆ. ಬಹಳಷ್ಟು ಜನ ವಚನಕಾರರು ಗುರು-ಲಿಂಗ-ಜಂಗಮಕ್ಕೆ ಕೊಟ್ಟಷ್ಟೆ ಮಹತ್ವವನ್ನು ಪ್ರಸಾದಕ್ಕೆ ಕೊಡುತ್ತಾರೆ. ಕಾರಣವೇನೆಂದರೆ, ನಾವು ಏನನ್ನು ಪ್ರಸಾದವೆಂದು ಪರಿಗಣಿಸಬೇಕು ಎಂಬುದನ್ನು ನಮ್ಮ ವಿಶ್ವದೃಷ್ಟಿ ಮತ್ತು ಜೀವನದೃಷ್ಟಿ ನಿರ್ಧರಿಸುತ್ತವೆ. ಅಂದರೆ ಆಧ್ಯಾತ್ಮಿಕ ಗುರಿಯನ್ನು ಸಾಧಿಸಲು ಗುರುಲಿಂಗಜಂಗಮ ಹೇಗೆ ಆವಶ್ಯಕವೊ ಹಾಗೆ ಪ್ರಸಾದ ಅಥವಾ ಜೀವನದೃಷ್ಟಿ ಮತ್ತು ವಿಶ್ವದೃಷ್ಟಿಯೂ ಆವಶ್ಯಕ.
ಪ್ರಸಾದವೆಂದರೆ ಸಾಮಾನ್ಯ ಅರ್ಥದಲ್ಲಿ ನಾವು ಸೇವಿಸುವ ಆಹಾರ, ಹಾಲು, ಹಣ್ಣು, ಇತ್ಯಾದಿ. ಯಾವುದನ್ನು ಗುರು ಅಥವಾ ಲಿಂಗ ಅಥವಾ ಜಂಗಮಕ್ಕೆ ಅರ್ಪಿಸುತ್ತೇವೆಯೋ ಅದು ಪ್ರಸಾದವಾಗುತ್ತದೆ. ಆ ಪ್ರಸಾದವನ್ನು ನಾವು ಸ್ವೀಕರಿಸುವುದರಿಂದ ನಾವೂ ಶುದ್ಧರಾಗುತ್ತೇವೆ. ಪ್ರಸಾದವಲ್ಲದ ಏನನ್ನೂ ಶರಣನು ಸ್ವೀಕರಿಸಬಾರದು.
ಶರಣರು 'ಪ್ರಸಾದ' ಎಂಬ ಪದಕ್ಕೆ ವಿಶಾಲವಾದ ಅರ್ಥ ಕೊಟ್ಟಿದ್ದಾರೆ. ಅವರ ಪ್ರಕಾರ ನಾವು ಅನುಭವಿಸುವ ರೂಪರಸಗಂಧಶಬ್ದ ಸ್ಪರ್ಶಗಳನ್ನೂ ನಾವು ಲಿಂಗಕ್ಕರ್ಪಿಸಿಯೇ ಅನುಭವಿಸಬೇಕು; ನಮ್ಮ ಇಂದ್ರಿಯದೇಹಗಳನ್ನೂ, ಅಂತಃಕರಣಗಳನ್ನೂ ಲಿಂಗಕ್ಕರ್ಪಿಸಿದ ನಂತರವೇ ಉಪಯೋಗಿಸಬೇಕು. ಅಷ್ಟೇ ಅಲ್ಲ, ಪ್ರಪಂಚದಲ್ಲಿ ಲಿಂಗಪ್ರಸಾದವಲ್ಲದ ಏನೂ ಇಲ್ಲ ಎಂಬ ದೃಷ್ಟಿಯನ್ನು ಬೆಳಸಿಕೊಂಡು, ಜೀವನವನ್ನು ಅದರಂತೆ ನಡೆಸಬೇಕು (ಪ್ರಸಾದದ ವಿವಿಧ ಹಂತಗಳ ಅರ್ಥಗಳಿಗೆ, ಮುಂದೆ ನೋಡಿ: ಭಕ್ತಿಯ ವಿಕಾಸ - ಪ್ರಸಾದಿಸ್ಥಲ).
ಲಿಂಗಕ್ಕೆ ಕೊಟ್ಟು ಕೊಂಡರೆ ಪ್ರಸಾದ.
ಜಂಗಮಾರೋಗಣೆಯ ಮಾಡಿ ಮಿಕ್ಕುದು ಪ್ರಸಾದ.
ಇದೇ ಪ್ರಸಾದದಾದಿ ಕಂಡಯ್ಯಾ.
ಆದಿ ಪ್ರಸಾದವ ವೇದಿಸಬಲ್ಲರೆ ಇದೆ ಕಂಡಯ್ಯಾ.
ಲಿಂಗಕ್ಕೆ ಕೊಡದೆ, ಜಂಗಮಕ್ಕೆ ನೀಡದೆ ಕೊಂಡರೆ ಹುಳುಕುಂಡದಲಿಕ್ಕುವ
ನಮ್ಮ ಕೂಡಲಚೆನ್ನ ಸಂಗಮದೇವ. (೩: ೨೪೭)
ಆವುದಾನೊಂದು ಪದಾರ್ಥವ ಲಿಂಗಾರ್ಪಿತವ ಮಾಡಿದ ಬಳಿಕ
ಆ ಪದಾರ್ಥವ ಪೂರ್ವಾಶ್ರಯವಳಿದು ಪ್ರಸಾದವಾಯಿತ್ತು ನೋಡಾ.
ಆ ಪ್ರಸಾದವ ಮುಟ್ಟುವ ಹಸ್ತವು ಪ್ರಸಾದಹಸ್ತ.
ಆ ಪ್ರಸಾದವ ಕೊಂಬ ಜಿಹ್ವೆಯು ಪ್ರಸಾದಜಿಹ್ವೆ,
ಆ ಪ್ರಸಾದಕ್ಕೆ ಭಾಜನವಾಗಿಪ್ಪ ಸರ್ವಾಂಗವು ಪ್ರಸಾದಕಾಯ ನೋಡಾ.
ಈ ಪರಮ ಪ್ರಸಾದಗ್ರಾಹಕನಾದ ಪ್ರಸಾದಿಯು
ಬಾಹ್ಯಾಂತರವೆಲ್ಲ ಪ್ರಸಾದಮಯ ನೋಡ.
ಪ್ರಸಾದ ಸದ್ಭಾವದಲ್ಲಿ ಎಂಜಲೆಂಬ ಸಂಶಯ ಸುಳಿಯಲಾಗದು.
ಎಂಜಲೆಂಬ ಸಂಶಯ ಸುಳಿದರೆ ಅದು ಅಜ್ಞಾನ ನೋಡ.
ಅವಂಗೆ ಪ್ರಸಾದವಿಲ್ಲ ಕಾಣ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (೧೧: ೨೪೨)
ಮೌನದಲುಂಬುವುದು ಆಚಾರವಲ್ಲ
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣು ಎನ್ನುತ್ತಿರಬೇಕು
ಕರಣವೃತ್ತಿಗಳಡಗುವವು, ಕೂಡಲ ಸಂಗಮದೇವನ ನೆನೆಯತ್ತಲುಂಡಡೆ.
--ಬಸವಣ್ಣನವರು
ಸುಮ್ಮನೆ ಮೌನವಾಗಿ ಉಂಬುವುದು ಆಚಾರವಲ್ಲ. ಎಲ್ಲವೂ ಎಡೆಮಾಡಲ್ಪಟ್ಟ ಮೇಲೆ ಲಿಂಗಾರ್ಪಿತ ಮಾಡಬೇಕು. ಅನಂತರ ಉಣ್ಣುವಾಗ ತುತ್ತಿಗೆ ಒಮ್ಮೊಮ್ಮೆ 'ಶಿವ ಶರಣು' ಎನ್ನುತ್ತಿರಬೇಕು. ಹೀಗೆ ಮಂತ್ರ ಧ್ಯಾನ ಮಾಡುತ್ತ ಉಣ್ಣುವುದರಿಂದ ಇಂದ್ರಿಯ ವೃತ್ತಿಗಳು ಶಾಂತವಾಗುವುವು.
[1] ಈ ತರಹದ ಸಂಖ್ಯೆಯ ವಿವರ: ಸವಸ-1/241 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-241 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
ಪಾದೋದಕ | ಲಿಂಗಾಚಾರ-ಏಕದೇವನಿಷ್ಠೆ |