ಕಾಯಕ ಸಿದ್ಧಾಂತ | ಇಷ್ಟಲಿಂಗಾರ್ಚನೆ |
ಅನುಭಾವ-ಶರಣರ ಸಂಗ-ಗಣ ಮೇಳಾಪ |
✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ
*
ಅನುಭಾವ ಪದವನ್ನು ದಿವ್ಯಾನುಭವ (Divine Experience)ಕ್ಕೆ ಮಾತ್ರವಲ್ಲದೆ ಶರಣರೊಡನೆ ಮಾಡುವ ಗೋಷ್ಠಿಯಲ್ಲಿ ನಡೆಯುವ ಪ್ರಸಂಗಕ್ಕೂ ಮಹತ್ವದ ಸ್ಥಾನಕೊಟ್ಟು ಬಳಸಲಾಗಿದೆ.
ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು
ವಸ್ತ್ರ ಮಾಸಿದಡೆ ಮಡಿವಾಳಂಗಿಕ್ಕುವುದು
ಮನದ ಮೈಲಿಗೆಯ ತೊಳೆಯ ಬೇಕಾದಡೆ
ಕೂಡಲ ಚನ್ನ ಸಂಗನ ಶರಣರ ಅನುಭಾವವ ಮಾಡುವುದು.
ತಲೆಯು ಕೊಳೆಯಾದಾಗ ಅಭ್ಯಂಗನ ಸ್ನಾನ ಮಾಡಬೇಕು. ಬಟ್ಟೆ ಕೊಳೆಯಾದಾಗ ತೊಳೆಯಲು (ಮಡಿವಾಳನಿಗೆ ಕೊಡಬೇಕು. ಮನಸ್ಸಿನ ಮೈಲಿಗೆ ತೊಳೆಯಬೇಕಾದರೆ ಶರಣರ ಸಂಗದಲ್ಲಿ ಒಡನಾಡಿ ಅನುಭಾವವನ್ನು - ಅಂದರೆ ಗಣ ಮೇಳಾಪವನ್ನು, ಚಿಂತನಗೋಷ್ಠಿಯನ್ನು ಮಾಡಬೇಕು.
ಅನಂತ ಕಾಲ ಹೋಗಿ ತರುಮರಾದಿಗಳಲ್ಲಿ
ತಪವಿರುವುದನು ಒಂದು ದಿನ ಗುರುಚರಣ ಸೇವೆ ಸಾಲದೇ ಅಯ್ಯಾ?
ಅನಂತ ಕಾಲ ಗುರುಚರಣ ಸೇವೆ ಮಾಡುವುದು.
ಒಂದು ದಿನ ಲಿಂಗಪೂಜೆ ಸಾಲದೆ ಅಯ್ಯಾ ?
ಅನಂತ ಕಾಲ ಲಿಂಗಪೂಜೆ ಮಾಡುವುದು.
ಒಂದು ದಿನ ಜಂಗಮ ತೃಪ್ತಿ ಸಾಲದೆ ಅಯ್ಯಾ ?
ಅನಂತ ಕಾಲ ಜಂಗಮ ತೃಪ್ತಿ ಮಾಡುವುದು
ಒಂದು ನಿಮಿಷ ನಿಮ್ಮ ಶರಣರ ಅನುಭವ ಸಾಲದೆ
ಕೂಡಲಸಂಗಮದೇವಾ |
ಓರ್ವ ಸಾಧಕ ಅಥವ ಮುಮುಕ್ಷು, ದಿವ್ಯಜ್ಞಾನವನ್ನು, ದಿವ್ಯಾನುಭವವನ್ನು ಪಡೆಯಬೇಕೆಂದು ಕಾಡುಮೇಡು, ಗುಡ್ಡಗವಿಗಳನ್ನು ಆಶ್ರಯಿಸಿ ತಪಸ್ಸು ಮಾಡುವುದುಂಟು. ಹೀಗೆ ಮಾಡುವ ಬದಲು ದೀಕ್ಷಾಗುರುವಿನ, ಶಿಕ್ಷಾ ಗುರುವಿನ ಸೇವೆ ಮಾಡಿ ಅವರಿಂದ ಜ್ಞಾನ- ಅನುಗ್ರಹಗಳನ್ನು ಪಡೆದುಕೊಳ್ಳುವುದು ಒಳ್ಳೆಯದು. ಅನಂತ ಕಾಲ ಹೀಗೆ ಸೇವೆ ಮಾಡುವ ಬದಲಿಗೆ ನಿಷ್ಠೆಯಿಂದ ಲಿಂಗಪೂಜೆ ಮಾಡುವುದು ಒಳ್ಳೆಯದು. ಇದಕ್ಕಿಂತಲೂ ಪವಿತ್ರಾತ್ಮರಾದ ಜಂಗಮರ ಸೇವೆ, ಸಮಾಜ ಸೇವೆ ಮಾಡುವುದು ಇನ್ನೂ ಒಳ್ಳಿತು. ಇದಕ್ಕಿಂತಲೂ ಶ್ರೇಷ್ಟವಾದುದು ಶರಣರ ಒಡನಾಡಿ, ಅನುಭಾವ ಗೋಷ್ಠಿಯನ್ನು ಮಾಡುವುದು.
ಶರಣರ ಗೋಷ್ಠಿಗೆ ಇಷ್ಟೊಂದು ಉನ್ನತ ಸ್ಥಾನವನ್ನು ಕೊಟ್ಟಿರುವುದೇಕೆ ಎಂದು ನಮಗೆ ಅಚ್ಚರಿಯುಂಟಾಗುತ್ತದೆ. ಆದರೆ ಅನ್ಯ ಧಾರ್ಮಿಕ ಸಮಾಜಗಳೊಡನೆ ತೌಲನಿಕವಾಗಿ ಅಧ್ಯಯನ ಮಾಡಿದಾಗ ಇದರ ಮಹತ್ವ ತಿಳಿದು ಬರುತ್ತದೆ.
ಜಗತ್ತಿನಲ್ಲಿ ಅತ್ಯಂತ ದೊಡ್ಡ ಮತ್ತು ಬಲಿಷ್ಠ ಸಮಾಜಗಳೆಂದರೆ ಕ್ರೈಸ್ತ ಮತ್ತು ಮುಸ್ಲಿಂ ಭಾರತೀಯ ಧರ್ಮಗಳಲ್ಲಿ ಸಿಖ್ ಸಮಾಜ. ಇದಕ್ಕೆ ಕಾರಣೆಂದರೆ ಅವರಲ್ಲಿರುವ ಸಾಮೂಹಿಕ ಪ್ರಾರ್ಥನೆಗಳು, ದಿನದ ಪ್ರಾರ್ಥನೆ ಜೊತೆಗೆ, ವಾರಕ್ಕೊಮ್ಮೆ ಉಭಯತರೂ ಅವರವರ ಧರ್ಮ ಸಂಸ್ಥೆಗಳಲ್ಲಿ ಮಾಡುವ ಪ್ರಾರ್ಥನೆಗಳು ಪರಸ್ಪರರಲ್ಲಿ ಭ್ರಾತೃತ್ವವನ್ನು ಬೆಳೆಸುತ್ತದೆ. ಜೊತೆಗೆ ತಾತ್ವಿತಿಕ ನಿಖರತೆಯನ್ನು ತಂದುಕೊಡುತ್ತವೆ.
ಒಂದು ಧರ್ಮದ ಅನುಯಾಯಿಗಳಾದ ನಾವು ಎಲ್ಲರೂ ಒಂದು, ಪರಸ್ಪರ ಸಹೋದರರು ಎಂಬ ಒಗ್ಗಟ್ಟಿಗೆ ಕಾರಣವಾಗುತ್ತದೆ. ಎರಡನೆಯದಾಗಿ ಸಾಮಾನ್ಯ ಅನುಯಾಯಿಗಳಲ್ಲೂ ತಾತ್ವಿಕ ನಿಖರತೆಯನ್ನು ಕಾಣುತ್ತೇವೆ. ಲಿಂಗಾಯತ ಸಮಾಜದಲ್ಲಿ ಇವೆರಡೂ ಇಲ್ಲ ಮತ್ತು ಈ ಬಗ್ಗೆ ಸಾಮಾಜಿಕ-ಧಾರ್ಮಿಕ ನೇತಾರರಲ್ಲಿ ಚಿಂತನೆಯೂ ಇಲ್ಲ. ಧರ್ಮಗಳು - ಅನುಯಾಯಿತ್ವವನ್ನು ಕೇವಲ ಹುಟ್ಟಿನಿಂದ ಕೊಡದೆ ಸ್ವೀಕಾರದ (acceptance) ಮೂಲಕವೂ ಕೊಡುತ್ತವೆ. ಹಾಗೆ ಸ್ವೀಕರಿಸಿ ಬಂದವರನ್ನು ಭೇದಭಾವವಿಲ್ಲದೆ ಕಾಣದಿದ್ದರೆ ಅವರಲ್ಲಿ ಆ ಧರ್ಮದ ಬಗ್ಗೆ ಅಭಿಮಾನ, ಸಮಾಜದ ಮೇಲೆ ಪ್ರೀತಿ ಮೊಳೆಯಲಾರದು. ಸಾಮಾನ್ಯವಾಗಿ ಹಿಂದೂಗಳಲ್ಲಿ ಜನರು ಅವರ ಜಾತಿ-ಪಂಗಡಗಳ ಗುಂಪುಗಳನ್ನೇ ಕಟ್ಟುವುದನ್ನು ಕಾಣುತ್ತೇವೆ. ಅದೇ ರೀತಿ ಲಿಂಗವಂತರಲ್ಲಿಯೂ ತಮ್ಮ ತಮ್ಮ ಒಳಪಂಗಡಗಳ ಗುಂಪುಗಳನ್ನು ಸಂಘಟಿಸುವ ಕೆಲಸವನ್ನೇ ಬಹುಪಾಲು ಜನರು ಮತ್ತು ಕೆಲವು ಜಾತಿ ಜಗದ್ಗುರುಗಳಾದ ಮಠಾಧೀಶರು ಮಾಡುತ್ತಿದ್ದಾರೆ. ಇದು ಶುದ್ಧ ತಪ್ಪು. ಜಾತಿ- ಒಳಪಂಗಡಗಳ ಭೇದವಿಲ್ಲದೆ ಒಂದು ತತ್ವ ಕ್ಕೆ ಬದ್ಧರಾದ ಜನರು ಒಟ್ಟುಗೂಡುವುದು ಶ್ರೇಷ್ಠವಾದುದು. ಇದನ್ನು ಗಣಮೇಳಾಪ (ಅನುಭವ ಗೋಷ್ಠಿ) ದ ಮೂಲಕ ಸಾಧಿಸಬಹುದು.
ಕ್ರೈಸ್ತ-ಇಸ್ಲಾಂ ಸಮಾಜಗಳಲ್ಲಿ ಒಬ್ಬ ಸಾಮಾನ್ಯ ವೃತ್ತಿಯ ಅನುಯಾಯಿ ತನ್ನ ಧರ್ಮದ ಬಗ್ಗೆ ತಿಳಿದಿರುವಷ್ಟು ಲಿಂಗವಂತ ಸಮಾಜದ ನೇತಾರರಿಗೆ, ಅಷ್ಟೇಕೆ ಅನುಯಾಯಿಗಳನ್ನು ಮುನ್ನಡೆಸುವ ಮಠಾಧೀಶರಿಗೆ ತಿಳಿಯದು. ಒಂದು ದೊಡ್ಡ ಮಠದಲ್ಲಿ ಒಂದು ಚೌಡಿಯ ವಿಗ್ರಹವಿದೆ. ನಿತ್ಯ ಪೂಜೆ ನಡೆಯುತ್ತಿದೆ. ಆಗ ಅಚ್ಚರಿಯಿಂದ ಓರ್ವ ಬಸವ ತತ್ವಾನುಯಾಯಿ, “ಇದೇನು ಸ್ವಾಮಿ, ವಿರಕ್ತಮಠದಲ್ಲಿ ಚೌಡಿಯ ಪೂಜೆ ?'' ಎಂದು ಕೇಳಿದರೆ, ಅವರು 'ಮಠ ಕಾಯಲು ಚೌಡಿಯು ಬೇಕಲ್ಲಪ್ಪ " ಎಂದರಂತೆ. ಅಂದರೆ ಎಲ್ಲರನ್ನು ಕಾಯುವವನು, ಕೊಲ್ಲುವವನು ಸೃಷ್ಟಿಕರ್ತನು ಎಂಬ ನಂಬಿಕೆ, ತಿಳುವಳಿಕೆ ಮಠಾಧೀಶರಲ್ಲಿಯೇ ಇಲ್ಲ ಎಂದ ಮೇಲೆ ಅವರೇನು ಇತರರಿಗೆ ಧರ್ಮವನ್ನು ಕಲಿಸಬಲ್ಲರು ? ಮತ್ತೆ ಕೆಲವು ಮಠಗಳಲ್ಲಿ ನಾಗಪೂಜೆ, ನಾಗರಕಲ್ಲು, ಬನ್ನಿ ಮಾಂಕಾಳಿ ಎಂದು ಬನ್ನಿ ಗಿಡದ ಪೂಜೆ ನಡೆಯುತ್ತದೆ. ಇಂಥ ದುಃಸ್ಥಿತಿ ಬರಲು ಏನು ಕಾರಣವೆಂದರೆ ಮಠಾಧೀಶರು ತಮ್ಮ ಧರ್ಮಶಾಸ್ತ್ರವಾದ ವಚನ ಸಾಹಿತ್ಯವನ್ನು ಓದದಿರುವುದು, ಅನುಷ್ಠಾನಿಸದಿರುವುದು ಮತ್ತು ಅನುಯಾಯಿಗಳಿಗೆ ಬೋಧಿಸದಿರುವುದು. ಇಂಥ ಸನ್ನಿವೇಶದಲ್ಲಿ ಆಸಕ್ತ ಜನರೇ ರಾಷ್ಟ್ರೀಯ ಬಸವ ದಳ ಸಂಘಟನೆ ಮಾಡಿ, ವಾರಕ್ಕೊಮ್ಮೆಯಾದರೂ ಸಾಮೂಹಿಕವಾಗಿ ಸೇರಿ, ಪ್ರಾರ್ಥನೆ ಮಾಡಿ- ತತ್ತ್ವ ಚಿಂತನೆ ಮಾಡಬೇಕು. ಇದರಿಂದ ತಾತ್ವಿಕ ನಿಖರತೆ ಬರುವುದು. ಸಾಮೂಹಿಕ ಚಿಂತನೆಯಿಂದ ಪರಸ್ಪರ ತಿಳಿದುಕೊಂಡಿದ್ದ ತಾತ್ವಿಕ ದೋಷಗಳು ಪರಿಹಾರವಾಗುತ್ತವೆ. ಇಂದು ಇಲ್ಲಿ ಪರಿಸ್ಥಿತಿ ಹೇಗೆ ಇದೆ ಎಂದರೆ “ಕುರುಡರ ರಾಜ್ಯದಲ್ಲಿ ಕಣ್ಣಿದ್ದವನೇ ಅಪರಾಧಿ'' ಎಂಬಂತೆ ಆಗಿದೆ. ಕಣ್ಣು ಕಟ್ಟಿ ಗವಿಯೊಂದರಲ್ಲಿ ಹಾಕಲ್ಪಟ್ಟ ಜನರು ಅಲ್ಪಸ್ವಲ್ಪ ಬೆಳಕಿನಲ್ಲಿ ಜನರ, ಜಾನುವಾರುಗಳ ನೆರಳನ್ನು ನೋಡಿ ಅವೇ ನಿಜ ರೂಪ ಎಂದು ತಿಳಿದಿದ್ದರಂತೆ, ಯಾರೋ ಬಂದು ಈ ಬಂಧನ ನೋಡಿ ಮರುಕದಿಂದ ಅವರನ್ನು ಬಿಡುಗಡೆ ಮಾಡಲು ಬಂದರೆ ಅವರನ್ನೇ ದೂಷಿಸತೊಡಗಿದರಂತೆ. ಹಾಗೆ ಇಂದು ಬಹುಪಾಲು ಜನರು ಏನೇನನ್ನೋ ದೇವರು ದೇವರು ಎಂದು ನಂಬಿ, ಪೂಜಿಸಿ ಅದಕ್ಕೆ ಒಗ್ಗಿಕೊಂಡುಬಿಟ್ಟಿದ್ದಾರೆ. ಈಗ ಯಾರಾದರೂ ದೇವರ ಸ್ವರೂಪ ಹೀಗಿದೆ ಎಂದರೆ ತೀವ್ರವಾಗಿ ವಿರೋಧಿಸುವರು.
ಕಳೆದ ಸಂಚಿಕೆಯಲ್ಲಿ ನಾನು ದೇವಿ ಉಪಾಸಕರನ್ನು ಕುರಿತು ಮೂಢ ಭಕ್ತರು ಎಂದು ಬರೆದುದನ್ನು ತುಮಕೂರಿನ ರೇವಣಸಿದ್ದಪ್ಪ ಎಂಬುವವರು ಉಗ್ರವಾಗಿ ಪ್ರತಿಭಟಿಸಿ, ಇನ್ನು ಮುಂದೆ ಹೀಗೆ ಬರೆಯತಕ್ಕದಲ್ಲ ಎಂದು ಎಚ್ಚರಿಕೆ ನೀಡಿ, ಇದರಿಂದ ನೀವು ಗೌರವವನ್ನು ಕಳೆದುಕೊಳ್ಳುತ್ತೀರಿ ಎಂದು ಬರೆದಿದ್ದಾರೆ. 'ದೇವರು' ಎಂದರೆ ಸೃಷ್ಟಿಕರ್ತ, ಪರಮಾತ್ಮನು ನಿರಾಕಾರ, ಆಕಾರವಿಲ್ಲದವನು, ನಿರವಯವ- ಅಂದರೆ ಅವಯವಗಳಿಲ್ಲದವನು, ಹೆಣ್ಣು- ಗಂಡೆಂಬ ಭೇದವಿಲ್ಲದವನು. ಇಂಥ ತತ್ವಕ್ಕೆ ಯಾವುದೇ ಸ್ತ್ರೀ ಪುರುಷ-ಸ್ತ್ರೀ-ಪ್ರಾಣಿಯ ಆಕಾರ ಕೊಡುವುದೇ ತಪ್ಪು. ಮನುಷ್ಕರಿಗೆ ಆಕಾರವುಂಟು, ಮಹಾತ್ಮರಿಗೆ ಉಂಟು. ದೇವಿಪುರಾಣ ಓದುವಾಗ ಒಮ್ಮೊಮ್ಮೆ ಆಕೆ ರಾಕ್ಷಸರನ್ನು ಕೊಲ್ಲುವಾಗ ತಾಳುವ ಆವೇಶ, ನಾಲಿಗೆ ಚಾಚಿ ರಕ್ತವನ್ನೇ ಕುಡಿಯುವ ಕ್ರೌರ‍್ಯ ಕಂಡಾಗ ಇದು ದೇವರ ರೂಪವೆ ? ಎನ್ನಿಸದೆ ಇರದು. ಒಮ್ಮೆ ತನ್ನ ಪತಿ ಶಿವನನ್ನೇ ನೆಲದ ಮೇಲೆ ಕೆಡವಿ ಎದೆ ಮೇಲೆ ಕಾಲಿಟ್ಟು (ಫೋಟೋದಲ್ಲಿ) ನಿಂತಿರುವುದಾಗಿ ಪುರಾಣಕಾರರು ಬಣ್ಣಿಸುವರು. ಇದನ್ನೇ ಆದರ್ಶವಾಗಿ ಇರಿಸಿಕೊಂಡು ಯಾರಾದರೂ ಮಹಿಳೆ ತನ್ನ ಗಂಡನನ್ನು ಕೆಡವಿ ಎದೆ ಮೇಲೆ ಕಾಲಿಟ್ಟು ನಿಂತರೆ ಆಕೆಯನ್ನು ದೇವಿ ಎಂದು ಪೂಜಿಸದೆ, ಬಜಾರಿ, ಗಂಡುಬೀರಿ, ಗಯ್ಯಾಳಿ ಎನ್ನುವುದೇಕೆ ? ಯಾರೇ ವ್ಯಕ್ತಿಯು ೪-೫ ಮದುವೆ ಮಾಡಿಕೊಂಡು ಹತ್ತಾರು ಮಹಿಳೆಯರೊಡನೆ ಸರಸ-ಸಲ್ಲಾಪ ಮಾಡುತ್ತಿದ್ದರೆ ಪಾತಿವ್ರತ್ಯ-ಏಕಪತ್ನಿವ್ರತಸ್ಥನ ಪರಿಕಲ್ಪನೆ ಇಟ್ಟುಕೊಂಡು ಅವನನ್ನು ಟೀಕಿಸುವುದೇಕೆ ? ಅವನನ್ನು ದೇವರ ಅವತಾರ ಎನ್ನಬಾರದೇಕೆ ? ದೇವರು ಸರ್ವಜ್ಞ ಎಂದು ವೈದಿಕರ ಶಾಸ್ತ್ರಗಳೇ ಹೇಳುತ್ತವೆ. ವ್ಯಕ್ತಿಯನ್ನು ದೇವರು ಎಂದು ಬಿಟ್ಟರೆ ಆತ ಮುಂದೇನು ಆಗುವುದು ಎಂಬ ಬಗ್ಗೆ ತಿಳಿಯಲಾರದೆ ಹೋದರೆ, ಆಗಬಹುದಾದ ಅನಾಹುತ ತಪ್ಪಿಸಲಾರರಾದರೆ ಆಗ ದೇವರ ಸರ್ವಜ್ಞತ್ವಕ್ಕೆ ಭಂಗ ಬರದೆ ? ಅಗ್ನಿಪರೀಕ್ಷೆಯಲ್ಲಿ ಪತ್ನಿ ಗೆದ್ದರೂ ತನ್ನ ಹೆಂಡತಿಯ ಶೀಲದ ಬಗ್ಗೆ ಮೂರ್ಖ ಅಗಸನೊಬ್ಬ ಹಗುರವಾಗಿ ಮಾತನಾಡಿದರೆ ದೇವರ ಅವತಾರವಿದ್ದವರಿಗೆ ತನ್ನ ಹೆಂಡತಿಯ ಉತ್ತಮಿಕೆಯ ಬಗ್ಗೆ ಗೊತ್ತಿರದೆ ? ಸಾಮಾನ್ಯ ಮನೋವಿಜ್ಞಾನ ಗೊತ್ತಿದ್ದವರಿಗೆ ಸಹ ತನ್ನ ಹೆಂಡತಿಯ ಪ್ರೇಮ ಏಕಾಗ್ರವಿದೆಯೋ ಬಹ್ವಗ್ರವಾಗಿದೆಯೋ ಎಂಬುದು ತಿಳಿದಿರುತ್ತದೆ. ಮಾನವ ಶರೀರವನ್ನು ಹೊತ್ತ ಯಾರನ್ನೇ ಆಗಲಿ ಸೃಷ್ಟಿಕರ್ತ ದೇವನಿಗೆ ಸಮಾನವಾಗಿ ನುಡಿದು ಮಾತನಾಡಿದರೆ ಅದು ಕರ್ತನಿಗೆ ಮಾಡುವ ಅಪಚಾರವೇ ಸರಿ.
ದೇವರ ನಿಜವಾದ ಸ್ವರೂಪವನ್ನು ಅರಿಯಬೇಕಾದರೆ ಅದು ಶರಣರ ಸಂಗದಲ್ಲಿ ಮಾತ್ರ ಸಾಧ್ಯ. ಏಕೆಂದರೆ ಪರಸ್ಪರರು ಅನುಭವ ಗೋಷ್ಠಿಯಲ್ಲಿ ಚರ್ಚಿಸುವುದರಿಂದ ತಪ್ಪು ಕಲ್ಪನೆ, ಸಂದೇಹ ನಿವಾರಣೆಯಾಗಿ ಸರಿಯಾದ ತತ್ತ್ವಜ್ಞಾನವು ಅಳವಡುವುದು. ಇಷ್ಟೇ ಅಲ್ಲ ಬಸವಾದಿ ಪ್ರಮಥರ ಖಚಿತ ನಿಲುವು ಏನೆಂದರೆ ಎಷ್ಟೇ ದೊಡ್ಡವನಾಗಲಿ, ಸಿರಿವಂತನಾಗಲಿ ಅವನು ಸಮಾಜದ ಮಧ್ಯೆ ಬೆರೆಯದೆ ಒಡನಾಡದೆ ಇದ್ದರೆ ಅವನ ಬಾಳು ನಿರರ್ಥಕ. ಅವನ ಗಳಿಕೆ ವ್ಯರ್ಥ ಎನ್ನುವರು.
ಬಚ್ಚಲ ನೀರು ತಿಳಿಯಾದರೇನು
ಸಲ್ಲದ ಹೊನ್ನು ಮತ್ತೆಲ್ಲಿದ್ದರೇನು
ಆಕಾಶದ ಮಾವಿನ ಫಲವೆಂದರೇನು
ಕೊಯ್ಯಲಿಲ್ಲ ಮೆಲ್ಲಲಿಲ್ಲ
ಕೂಡಲಸಂಗಮದೇವನ ಶರಣರ ಅನುಭಾವವಿಲ್ಲದವರು
ಎಲ್ಲಿದ್ದರೇನು ಎಂತಾದರೇನು ?
- ಬ.ವ.
ಶರಣರ ಸಂಗವು ತಾತ್ವಿಕ ನಿಖರತೆಯನ್ನು ಕೊಡುವುದದಷ್ಟೆ ಅಲ್ಲ ಓರೆ ಕೋರೆಗಳನ್ನು ತಿದ್ದಿ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುವುದು.
ಆರಾರ ಸಂಗವೇನೇನ ಮಾಡದಯ್ಯ?
ಕೀಡೆ ಕುಂಡಲಿಗನಾಗದೆ ಅಯ್ಯಾ?
ಚಂದನದ ಸನ್ನಿಧಿಯಲ್ಲಿ ಪರಿಮಳತಾಗಿ
ಬೇವು ಬೊಬ್ಬುಲಿ ತರೆಯ ಗಂಧಂಗಳಾಗವೇ?
ನಮ್ಮ ಕೂಡಲಸಂಗಮದೇವನ ಶರಣರ ಸನ್ನಿಧಿಯಿಂದ
ಕರ್ಮ ನಿರ್ಮಳವಾಗದಿಹುದೆ ?
-ಬ.ವ.
ಧರ್ಮಪಿತರ ನುಡಿಯಂತೆ ಯಾರಾರ ಸಂಗವು ಏನೇನ ಮಾಡದು ? ಸಂಗದಿಂದಲೇ ಸರ್ವಗುಣಗಳ ಸಮನಿಸುವಿಕೆ. ಕೀಡೆ ಭ್ರಮರದ ಸಂಗವಮಾಡಿ ಭ್ರಮರವಾಗುವುದು. ಕಾಷ್ಠಂಗಳು ಅಗ್ನಿಯ ಸಂಗ ಮಾಡಿ ಅಗ್ನಿಯೇ ತಾನಾಗುವುವು. ಅನಿತೇ ಅಲ್ಲ ಪತಂಗ ದೀಪದ ಸಂಗ ಮಾಡಿ ದಹಿಸದೇ ? ಒಳ್ಳಿತೂ ಕೆಡಕೂ ಎಲ್ಲವೂ ಸಂಗದಿಂದಲೇ ಸಾಧ್ಯ. ಸಂಗದಿಂದಲ್ಲದೆ ಅಗ್ನಿ ಹುಟ್ಟದು ; ಸಂಗದಿಂದಲ್ಲದೇ ಬೀಜ ಮೊಳೆದೋರದು, ಸಂಗದಿಂದಲ್ಲದೇ ದೇಹವಾಗದು ; ಸಂಗದಿಂದಲ್ಲದೇ ಸರ್ವಸುಖದೋರದು. ಇಷ್ಟೇ ಅಲ್ಲ ಮಹಾತ್ಮನ ಸದ್ಗುಣಗಳು ವ್ಯಕ್ತವಾಗುವುದೂ ಸಂಗದಿಂದಲೇ, ನಿಂದನೆಯ ಸಂಗದಿಂದಲೇ ಅವನ ಚಿತ್ತ ಸಮತೆ, ಹೆರರ ಉದ್ಧಟತನ ಸಂಗದಿಂದ ಅವನ ಸಹನೆ, ಮುಂತಾದವು ವ್ಯಕ್ತವಾಗುವುವು. ಶರಣರು ಸಂಘಜೀವನಕ್ಕೆ ಮಹತ್ತ್ವ ವಿತ್ತಿರುವರು. ಕೀಳುಕುಲದವರೆನ್ನಿಸಿಕೊಂಡ ಅನೇಕ ಮುಗ್ಧ ಭಕ್ತರಾದ ಒಕ್ಕಲಿಗ ಮುದ್ದಣ್ಣ, ಬಹುರೂಪಿ ಚೌಡಯ್ಯ, ಮೇದಾರ ಕೇತಯ್ಯ, ಮುಂತಾದ ಅಜ್ಞಾನದ ಕೂಪವಾಗಿದ್ದ ಅನಂತ ಮಾನವರನ್ನು, ಮರೆವಿನ ತಿಮಿರದಿಂದ ಅರಿವಿನ ಬಯಲಿಗೆ ಕರೆತಂದದ್ದೂ ಶರಣರ ಸಂಗದ ಮಹಿಮೆಯೆ ! ಕಗ್ಗಲ್ಲುಗಳಂತಿದ್ದ ಅನಂತ ಮಾನವರಿಗೆ ಒಂದು ಕಲಾತ್ಮಕ, ಸಾಹಿತ್ಯಾತ್ಮಕ ರೂಹು ಕೊಟ್ಟು; ಸರಿಯಾಗಿ ಮಾತನಾಡಲು ಬಾರದಿದ್ದವರನ್ನು ಸಾಹಿತ್ಯ ರಚನೆಯ ಸ್ಥಿತಿಗೆ ತಂದು ನಿಲ್ಲಿಸಿದ ಜಾಣೆ ಮಹಾ ರೂವಾರಿ ಬಸವಣ್ಣನವರದು. ಅವರು ಲಿಂಗಸಂಸ್ಕಾರ ಮತ್ತು "ಶರಣ ಸಂಗ"ದ ಉಳಿ ಹಿಡಿದು ಆ ಕಲ್ಲುಗಳನ್ನು ಕಟೆದು ಕಟೆದು ಮೂರ್ತಿಗಳನ್ನಾಗಿ ಮಾಡಿದರು. ಅಂತಃಶಕ್ತಿಯನ್ನು ಒರೆದು ಒರೆದು ಶಿವಾನುಭವದ ಆಭರಣ ಮಾಡಿದರು. ಕೊರೆದೂ ಕೊರೆದೂ ಕೊಳಲ ಮಾಡಿದರು ; ಜ್ಞಾನಾಗ್ನಿಯಲ್ಲಿ ಉರಿಸಿ ಉರಿಸಿ ಹರವಿಯನ್ನು ಮಾಡಿ, ಅರಿವು ಕೂಡಿದ ಭಕ್ತಿ ಸದ್ಭಕ್ತಿಯನ್ನು ತೀಡಿದರು. ಅವರ ದೋಷದೌರ್ಬಲ್ಯ, ಕುಂದುಕೊರತೆಗಳನ್ನು ಜರಿದು ಜರಿದು ತೆಗೆದರು. ಹೀಗೆ ಅನಂತ ಶರಣರನ್ನು ದೇವನಿಗಾಗಿ ಬಾಳನ್ನು ಬಾಳುವಂತೆ ಮಾಡಿ ಕರ್ನಾಟಕ ಮಾತೆಯ ಕೊರಳಿಗೆ ೭೭೦ ಮಣಿಯನ್ನುಳ್ಳ ಲಿಂಗಾಯತ ಧರ್ಮದ ರತ್ನಹಾರವನ್ನು ಹಾಕಿದರು. ಅನುಭಾವ ಸಾಹಿತ್ಯದ ಜರಿ ಸೀರೆಯನ್ನುಡಿಸಿದರು. ಇಂಥಾ ಅಪರೂಪದ ಮೂರ್ತಿಗಳನ್ನು ತಯಾರಿಸಿದ್ದು ಅನುಭವ ಮಂಟಪದ ಅಚ್ಚಿನಲ್ಲಿ, ಶರಣರ ಸಂಗದ ದಿವ್ಯಾಗ್ನಿಯಲ್ಲಿ. ಧರ್ಮಪಿತ ಬಸವಣ್ಣನವರು ಅಜ್ಞಾನಿಗಳಾಗಿದ್ದ ಅನೇಕರನ್ನು ಸುಜ್ಞಾನಿಗಳಾಗಿ, ಶರಣರನ್ನಾಗಿ ಮಾಡಿದರು. ಸಂಸ್ಕಾರವನ್ನು ಮಾತ್ರವಿತ್ತು ಅವರ ಪಾಡಿಗೆ ಅವರನ್ನು ಬಿಟ್ಟಿದ್ದರೆ, ಪರಿವರ್ತಿತರಾದ ಅವರ ಜೀವನ ಇಷ್ಟು ಶೋಭಾಯಮಾನವಾಗುತ್ತಿರಲಿಲ್ಲ. ಆದರೆ ಅವರನ್ನು ಆ ಮುಮುಕ್ಷುಗಳೆಂಬ ಕೀಡೆಗಳನ್ನು ಅನುಭವ ಮಂಟಪದ ಗೂಡಿನಲ್ಲಿಕ್ಕಿ ಶರಣರ ಸಂಗವೆಂಬ ಭ್ರಮರದೊಡನಾಡಿಸಿ ಉನ್ನತ ವ್ಯಕ್ತಿತ್ವ ರೂಪಿಸಿದರು. ಬೀಜವನ್ನು ಬಿತ್ತಿ ಸುಮ್ಮನಾದರೆ ಸಾಲದು. ಆಗಾಗ್ಗೆ ಕಳೆ ತೆಗೆಯಬೇಕು. ಆ ಸಸಿಗಳನ್ನು ಜಾಗರವಿದ್ದು ಸಲಹಬೇಕು. ಮೃಗಗಳು ಬಂದು ಬೆಳೆಯುವ ಸಸಿಯನ್ನೇ ತಿಂದುಹಾಕಬಹುದು. ಅದಕ್ಕಾಗಿ ಅನವರತ ಕಾಯಬೇಕು. ಸಸಿಗೆ ಸಲಿಲವೆರೆಯಬೇಕು. ಗೊಬ್ಬರ ಹಾಕಬೇಕು. ಸೂರ್ಯಪ್ರಕಾಶ ಚೆನ್ನಾಗಿ ಬೀಳಬೇಕು. ಆಗಲೇ ಸತ್‌ಫಲ; ಹಾಗೆಯೇ ಲಿಂಗಸಂಸ್ಕಾರವೆಂಬ ಬೀಜವನ್ನು ಬಿತ್ತಿ, ಇತ್ತ ಗುರು. ಸುಮ್ಮನಿದ್ದರೆ. ಆಚರಣೆ ಕಮರಿಹೋಗಬಹುದು. ಏಕೆಂದರೆ ಆಗಿನ್ನೂ ಪೂರ್ಣ ಪರಿಪಕ್ವವಾಗಿರದ ಕಾಲ ; ಅದಕ್ಕೆ ಬಸವಣ್ಣನವರು. ಲಿಂಗಸಂಸ್ಕಾರದ ಬೀಜವನ್ನು ಬಿತ್ತಿ, ಅವರಲ್ಲಿ ಸುಳಿಯುತ್ತಿದ್ದ ದೋಷ ದೌರ್ಬಲ್ಯದ ಕಳೆತೆಗೆದು, ಆ ಸಸಿಗಳನ್ನು ಜಾಗರವಿದ್ದು ಸಲಹುತ್ತಿದ್ದರು. ದುಷ್ಟರ ಸಂಗ, ಪೂರ್ವಾಶ್ರಯದ ಕುತ ಜನರ ಒಡನಾಟ ಮುಗ್ಧ ಸಸಿಯನ್ನು ತಿಂದು ಹಾಕಿದರೆ? ಅದಕ್ಕಾಗಿ ಅನುಭವ ಮಂಟಪದ ಎಚ್ಚರಿಕೆ ಕಾಯಕ' ದವರನ್ನು ಪಹರೆಗೆ ಕಳಿಸುತ್ತಿದ್ದರು. ಬೆಳೆವ ಸಸಿಗೆ ಭಕ್ತಿಯ ಸಲಿಲವೆರೆದರು. ತತ್ತ್ವದ ಗೊಬ್ಬರ ಹಾಕಿದರು. ಅನುಭಾವಿಗಳ ಪೂರ್ಣ ಜ್ಞಾನ ರವಿಪ್ರಕಾಶ ಆ ಸಸಿಗಳ ಮೇಲೆ ಬೀಳುವಂತೆ ಮಾಡಿದರು. ಅನುಭವ ಮಂಟಪದ ದಿವ್ಯ ವಾತಾವರಣದಲ್ಲಿ ಅನಂತ ಅನುಭಾವಿಗಳ ಸಸಿ ಬೆಳೆದು, ಸ್ವಾನುಭಾವದ ಸವಿ ಕಾಳನ್ನು ವಚನಗಳ ರೂಪದಲ್ಲಿ ಇಂದು ನಮ್ಮ ಮುಂದೆ ಇಟ್ಟಿಲ್ಲವೆ ?
ಶರಣರು ಸತ್ಸಂಗಕ್ಕೆ ಬಹು ಪ್ರಾಮುಖ್ಯತೆಯನ್ನೀಯುತ್ತಾರೆ. ಅವರಿಗೆ ಲೋಕಾಂತಕ್ಕಿಂತ ಏಕಾಂತ ಶ್ರೇಷ್ಠ, ಏಕಾಂತಕ್ಕಿಂತ ಶರಣರ ಸಂಗ ಬಹು ಶ್ರೇಷ್ಠ, ನಿರುಪಯುಕ್ತ ಮಾತಿಗಿಂತ ಮೌನ ಲೇಸು, ಮೌನಕ್ಕಿಂತ ಜ್ಯೋತಿರ್ಲಿಂಗವಾದ ಮಾತೇ ಶ್ರೇಷ್ಠ. ಹರಟೆಯಿಂದ- ನಿಂದೆಯ ಮಾತಿನಿಂದ ಇನ್ನೊಬ್ಬರಿಗೆ ಕೆಡುಕು, ಮೌನದಿಂದ ತನಗೂ ಲಾಭವಿಲ್ಲ- ಪರರಿಗೂ ಇಲ್ಲ. ಜ್ಯೋತಿರ್ಲಿಂಗವಾದ ಮಾತಿನಿಂದ ಕೇಳುಗರ ಬದುಕು ಉದ್ಧಾರವಾಗುತ್ತದೆ. ಅದಕ್ಕಾಗಿಯೇ ಆಧ್ಯಾತ್ಮ ಜೀವಿಗಳು ಅನವರತ ಹೀಗೆ ಬೇಡುವುದು.
ದೊರಕೊಂಡಂತೆ ಮನದಣಿದಿಪ್ಪವರ
ದುಃಖಕ್ಕೆ ದೂರಾಗಿಪ್ಪವರ, ಒಳಗನರಿದು ಹೊರಗೆ
ಮರೆದಿಪ್ಪವರ, ಸದಾನಂದದಲ್ಲಿ ಸುಖಿಯಾಗಿಪ್ಪವರ
ಎನಗೊಮ್ಮೆ ತೋರಾ ಸಕಳೇಶ್ವರದೇವಾ,
ಎನಗಿದೇ ವರವನೀವುದು ಕಂಡೆಯಾ ತಂದೆ !
ಶರಣನು ದೇವನಲ್ಲಿ ಏನನ್ನು ಬೇಡುವನು ? ಧನ ಕನಕ ಸ್ತ್ರೀಯನ್ನು ಬೇಡನು. ದುಃಖಕ್ಕೆ ದೂರಾದ, ತಮ್ಮಂತರಂಗವನರಿದು ಬಹಿರಂಗವ ಮರೆವ, ಸದಾನಂದ ಸುಖಿಗಳಾದ, ಸಜ್ಜನರ ಸಂಗವನ್ನೇ ಬೇಡುವನು, ಏಕೆಂದರೆ ಅವರ ಸಂಗ ಬಹು ಲೇಸಿನ ಸಂಗ.
ಸಂಗ ಲೇಸು ಸಾಧು ಸತ್ಪುರುಷರ, ಸಂಗ ಲೇಸು
ಸದ್ ಭಕ್ತ ಶರಣಜನಂಗಳ, ಸಂಗ ಲೇಸು
ಸುಜ್ಞಾನ ಸಹವಾಸಿಗಳ, ಸಂಗ ಲೇಸು
ಅಖಂಡೇಶ್ವರ ಲಿಂಗವ ಕೂಡಿದ ಸದ್ ಭೋಗಿಗಳ !
ಶರಣರ ಸಂಗ ಅಪರೂಪ, ಏನನಿತ್ತಡೆಯೂ ಸಿಕ್ಕಲಾರದು ಅನುಭಾವಿಗಳ ಸಂಗ ರಮ್ಯ ಮನೋಹರ, ಏಕೆಂದರೆ ಮಂಗಳಮಯ ಲಿಂಗದ ಮನದಲಿ ಹಿಂಗದೆ, ಸುಸ೦ಗಿಯಾಗಿ ಮಹಾಲಿಂಗಿಯಾಗಿ ಪ್ರಸ೦ಗಿಯಾಗಿರುವಾತನ ಅಂಗ ಮಂಗಳ ತರಂಗ. ಅವನು ಲಿಂಗನಯನದಲ್ಲಿ ನೋಡುತ್ತಾ, ಲಿಂಗಜಿಹ್ವೆಯಲ್ಲಿ ನುಡಿವುತ್ತಾ, ಲಿಂಗಹಸ್ತದಲ್ಲಿ ಮುಟ್ಟುತ್ತಾ ಲಿಂಗನಾಸಿಕದಲ್ಲಿ ವಾಸಿಸುತ್ತಾ, ಲಿಂಗಸ್ತೋತ್ರವ ಕೇಳುತ್ತಾ, ಲಿಂಗಪಾದದಲ್ಲಿ ನಡೆವುತ್ತಾ ಸರ್ವಾಂಗ ಲಿಂಗಮಯವಾಗಿರುತ್ತಾನೆ. ಶರಣರ ಜೀವನವೇ ಪಾವನ, ಮಾರ್ಗದರ್ಶಕ, ಸರ್ವಾದರಣೀಯ. ಅವರ ಕೂಡ ಇರ‍್ದೋಡೆ ದಿವ್ಯಾನುಭವ !
ತೆರಹಿಲ್ಲದ ನಡೆ ತೆರಹಿಲ್ಲದ ನುಡಿ
ತೆರಹಿಲ್ಲದ ಸಂಭಾಷಣೆಯ ಸುಖವು
ತೆರಹಿಲ್ಲದ ನಂಬಿದ ಸ್ವಾನುಭಾವ ಸುಖವು
ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ
ಕೂಡಲಸಂಗಮದೇವಾ, ನಿಮ್ಮ ಶರಣಂಗೆ
-ಬ.ವ.
ಶರಣರು ಮಾತನಾಡಿದರೆ ಸಾಕು ವೀಣೆಯ ನಾದದಂತೆ, ಕಬ್ಬಿನ ರಸ ಮಿಡಿದಂತೆ, ಜ್ಞಾನದ ಸ್ಪುರಣ, ದೇವಭಕ್ತಿಯಾನಂದ, ಜ್ಯೋತಿರ್ಲಿಂಗ ಪ್ರಭೆ, ಸಾಕ್ಷಾತ್ಕಾರಕ್ಕಾಗಿ ತಲೆಗೆಟ್ಟು ಅಲೆವುದೇಕೆ ? ಶರಣರ ಸಂಗಕ್ಕೆ ಬಂದರೆ ಸಾಕು.
ಕೆರೆಹಳ್ಳ ಭಾವಿಗಳು ಮೈದೆರೆದರೆ
ಗುಳ್ಳೆ ಗೊರಚೆ ಚಿಪ್ಪುಗಳು ಕಾಣಬಹುದು.
ವಾರಿಧಿ ಮೈದೆಗೆದರೆ ಮುತ್ತುರತ್ನಂಗಳು ಕಾಣಬಹುದು.
ಕೂಡಲಸಂಗಮದೇವನ ಶರಣರು ಮನದೆರೆದು ಮಾತನಾಡಿದರೆ
ಲಿಂಗವೇ ಕಾಣಬಹುದು !
-ಬ.ವ.
ಒಂದು ಕಿರುತೊರೆ ಮೈದೆಗೆದರೆ, ನಗ್ನವಾದರೆ ಅರ್ಥಾತ್ ಬತ್ತಿದರೆ, ಗುಳ್ಳೆ ಗೊರಚೆ ಚಿಪ್ಪುಗಳನ್ನು ಕಾಣಬಹುದು. ಆದರೆ ವಿಶಾಲ ಬೃಹತ್ ವಾರಿಧಿ ಬತ್ತಿದರೆ ಮುತ್ತು ರತ್ನ ಹವಳಗಳನ್ನು ಕಾಣಬಹುದು. ಹಾಗೆಯೇ ಕೂಡಲಸಂಗನ ಶರಣರು ಮನದೆರೆದರೆ, ಹೃದಯ ಬಿಚ್ಚಿ ನುಡಿ ಹೊರಹೊಮ್ಮಿದರೆ ಅಲ್ಲಿ ಲಿಂಗ ಚೈತನ್ಯ ಕಂಡು, ಲಿಂಗಸುನಾದವೇ ಕೇಳಿಬರುವುದು. ಭಕ್ತನ ಮುಖದರ್ಪಣದಲ್ಲಿ ಲಿಂಗವನೇ ಕಾಣಬಹುದು. ಏಕೆಂದರೆ ಭಕ್ತ ದೇಹಿಕ ದೇವ ಅನಿಮಿಷನಾಗಿ ಸದ್ಭಕ್ತರ ನುಡಿಗಡಣದ ನಡುವೆ ರಾಶಿಯಾಗಿ ತೋರುವನು. ತನ್ನ ತಾನರಿದ ಶರಣನು ಮಾತನಾಡಿದುದೆಲ್ಲಾ ತತ್ವ! ಏಕೆಂದರೆ ಅವರು ನುಡಿದರೆ ಮುತ್ತಿನ ಹಾರಂತಿರುತ್ತದೆ. ನುಡಿದರೆ ಮಾಣಿಕ್ಯದ ದೀಪ್ತಿಯಂತೆ. ಸ್ಪಟಿಕದ ಸಲಾಕೆಯಂತೆ ಸರಳ ಪಾರದರ್ಶಕ ನಿರ್ಮಲವಾಗಿದ್ದು, ಲಿಂಗ ಮೆಚ್ಚಿ ಅಹುದಹುದೆನ್ನುವಂತೆ ಇರುತ್ತದೆ. ಶರಣರಿಗೆ ಮಾತೆಂಬುದು ಜ್ಯೋತಿರ್ಲಿಂಗ ! ಸ್ವರವೆಂಬುದೆ ಪರತತ್ವ ! ತಾಳೋಷ್ಟ್ರ ಸಂಪುಟವೆಂಬುದೇ ನಾದಬಿಂದು ಕಳಾತೀತ ! ಶರಣರು ನುಡಿದು ಸೂತಕಿಗಳಲ್ಲ. ಅವರ ಇರುಹೇ ಆನಂದದಾಗರ, ಆದ್ದರಿಂದ ಶರಣರ ಸಂಗದ ಮಹಿಮೆ ಅಪಾರ.
ಲಿಂಗಾಗ ಸಮರಸಿಗಳ ಒಡನಾಟ : ಶಿವನ ಕೂಡಾಟ : ಭವ ಜಂಜಾಟವ ತೊಳೆವ ಪಾವನಗಂಗೆ; ಜೀವನವ ಸಜ್ಜನಿಸುವ ಮಹಾಮಜ್ಜನ ಧಾರೆ; ಅರಿವಿಗೆ, ಹೃದಯಕ್ಕೆ ತೃಪ್ತಿಯೇವ ಪರಮಸುಧೆ .
ಅಂಗಕ್ಕೆ ಆಚಾರವೆ ಚೆಲುವು, ಮನಕ್ಕೆ ಮಹಾನುಭಾವವೆ ಚೆಲುವು
ಆತ್ಮಂಗೆ ಅರುಹೆ ಚೆಲುವು, ಅಖಂಡೇಶ್ವರನೆಂಬ
ನಿಜವಿಂಬುಗೊಂಡವಂಗೆ ಶರಣರ ಸಂಗವೆ ಚೆಲುವು !
ಮಂಗಲವಾದ ಸಿಂಗಾರಯುಕ್ತ ಅಂಗಕ್ಕೆ ಯಾವುದು ಶೋಭಾಯಮಾನ ? ಆಚಾರ ; ಸಾಧನದಲ್ಲಿ ಮಾರಕ ಪೂರಕ ಎರಡೂ ಆದ ಮನಕ್ಕೆ ಮಹಾನುಭಾವವೇ ಚೆಲುವು ; ಆತ್ಮನಿಗೆ ಅರುಹೇ ಅಲಂಕಾರಪ್ರಾಯವಾಗಿರುವುದು. ಮಹತ್ತನ್ನು ಸಾಕ್ಷಾತ್ಕರಿಸಿಕೊಂಡ ನಿಜಶರಣನಿಗೆ ಅನುಭಾವಿಯ ಸಂಗವೇ ಅಲಂಕಾರ, ಲೋಕಾಂತವಲ್ಲ.
ಲೌಕಿಕ ಜನರಲ್ಲಿ ಕಾಯದ ಮದವಳಿದಿರುವದಿಲ್ಲ, ಕಾಯದ ಮದವಳಿದಲ್ಲದೇ ಮಾಯಾ ವಿಕಾರವಳಿಯದು, ಮಾಯಾ ವಿಕಾರವಳಿದಲ್ಲದೆ ದುರ್ಭಾವ ನಶಿಸದು, ದುರ್ಭಾವ ನಾಶವಾಗದೆ ಲಿಂಗ ಸಂಬಂಧವಳವಡದು, ಲಿಂಗ ಸಂಬಂಧ ಅಳವಟ್ಟಲ್ಲದೇ ಸಮರಸ ಸುಖವು ಸಾಧ್ಯವಾಗದು, ಇಂಥಾ ಪರಮ ಸುಖ ಪ್ರಾಪ್ತಿಯಾಗಲಿಕ್ಕೆ ಮಹಾನುಭಾವಿಗಳ ಸಂಗವೇ ಬೇಕು.
ಗುರುವಿನ ಮಾರ್ಗದರ್ಶನ ಕೈಮರದಂತೆ ದಾರಿ ತೋರಿಸುವುದು. ಶರಣರ ಒಡನಾಟ ಸಹ ಪಥಿಕನಂತೆ, ಸದಾ ಸಾಂಗತ್ಯ ನೀಡುವುದು. ಅದಕ್ಕೆಂದೇ ಧರ್ಮಪಿತರು ಹೀಗೆ ಹೇಳಿರುವುದು:
ಮಡಿಕೆಯ ಮಾಡುವೊಡೆ ಮಣ್ಣೆ ಮೊದಲು
ತೊಡಿಗೆಯ ಮಾಡುವೊಡೆ ಹೊನ್ನೆ ಮೊದಲು
ಶಿವಪಥವನರಿವರೆ ಗುರುಪಥವೇ ಮೊದಲು ;
ಕೂಡಲಸಂಗಮದೇವರನರಿವರೇ ಶರಣರ ಸಂಗವೇ ಮೊದಲು !
- ಬ.ವ.
ಘಟ್ಟವನ್ನು ತಯಾರಿಸಲು ಮುಖ್ಯವಾಗಿ ಮೃತ್ತಿಕೆ(ಮಣ್ಣು) ಬೇಕು. ಆಭರಣವನ್ನು ಮಾಡಲಿಕ್ಕೆ ಅವಶ್ಯವಾಗಿ ಹೊನ್ನು ಬೇಕು. ಶಿವಪಥವನ್ನು ಅರಿಯಲಿಕ್ಕೆ ಅರ್ಥಾತ್ ಆಧ್ಯಾತ್ಮ ಊರಿನ ಪಥವನ್ನು ಗುರುತಿಸಲಿಕ್ಕೆ ಗುರುವಿನ ಕಾರುಣ್ಯ, ಮಾರ್ಗದರ್ಶನ ಅವಶ್ಯವಾಗಿ ಬೇಕು. ಆದರೆ ಪರಮಾತ್ಮನ ಸಾಕ್ಷಾತ್ಕಾರ, ಮಹಾನುಭಾವ ಸಮನಿಸಬೇಕಾದರೆ ಶರಣರಗೋಷ್ಠಿ, ಜಂಗಮರ ಶುಭ ಸಂಗವೇ ಅವಶ್ಯ. ಸರ್ವಜೀವಾತ್ಮರುಗಳ ಜನ್ಮಗಳಲ್ಲಿ ನರಜನ್ಮವೇ ಬಹು ಶ್ರೇಷ್ಠ. ಸರ್ವ ಸಿರಿಸಂಪತ್ತಿನಲ್ಲಿ ಗುರುಕಾರುಣ್ಯವೇ ಶ್ರೇಷ್ಠ ಮಾಡುವ ಮಾಟಗಳಲ್ಲಿ ಲಿಂಗ ಜಂಗಮ ಸೇವೆ ಶ್ರೇಷ್ಠವಾದರೆ, ಕೂಡುವ ಕೂಟಗಳಲ್ಲಿ ಶರಣರ ಕೂಟ ಶ್ರೇಷ್ಠ.
ಅರಿಯದವರೊಡನೆ ಸಂಗವ ಮಾಡಿದರೆ ಗಾಳಿಯ ಗುದ್ದಿ - ಮೈಯ್ಯ ನೋಯ್ಸಿಕೊಂಬಂತೆ ; ಬಲ್ಲವರೊಡನೆ ಸಂಗವ ಮಾಡಿದರೆ ಮಲ್ಲಿಗೆಯ ಮಾಲೆ ಧರಿಸಿದಂತೆ ! ಶರಣರ ಸಂಗವು ಜ್ಯೋತಿಯ ಸ್ಪರ್ಶವಾದಂತೆ, ಇಡೀ ವ್ಯಕ್ತಿತ್ವವನ್ನೇ ಅನುಭಾವದಗ್ನಿಯಲ್ಲಿ ಗೊಳಿಸುತ್ತದೆ. ಅನುಭಾವ ಜ್ಯೋತಿ ಕರ್ಮಶೇಷವನ್ನಿನಿತೂ ಉಳಿಸದೆ ಪ್ರಭಾಪುಂಜವಾಗಿ ಬೆಳಗಿಸುತ್ತದೆ ಕಾಯದೇಗುಲವನ್ನು !
ಮರಮರ ಮಥನಿಸಿ ಕಿಚ್ಚು ಹುಟ್ಟಿ
ಸುತ್ತಣ ತರುಮರಾದಿಗಳ ಸುಡಲಾಯಿತ್ತು
ಆತ್ಮವಾತ್ಮ ಮಥನಿಸಿ ಅನುಭಾವ ಹುಟ್ಟಿ
ತನುಗುಣಾದಿಗಳ ಸುಡಲಾಯಿತ್ತು,
ಇದು ಕಾರಣ ನಿಮ್ಮ ಮಹಾನುಭಾವಿಗಳ
ಅನುಭಾವವ ತೋರಿ ಎನ್ನೊಡಲನುಳುಹಿಕೊಳ್ಳ
ಚೆನ್ನಮಲ್ಲಿಕಾರ್ಜುನಾ !
ಮಂದಾಗ್ನಿಯ ಅಡಗಿಸಿಕೊಂಡ ಎರಡು ಮರಗಳು ಮಥನಿಸಿದರೆ, ಕಿಚ್ಚು ಹುಟ್ಟುವುದು. ಇಂತು ಆವಿರ್ಭವಿಸಿದ ಕಿಚ್ಚು ಸುತ್ತಲೂ ಹರವಿಕೊಂಡು, ಇರುವ ತರುಮರಾದಿಗಳ ದಹಿಸುವುದು. ಅಂತೆಯೇ ಪಿಂಡಸ್ಥ ಚಿದಗ್ನಿಯನ್ನು ಅಡಗಿಸಿಕೊಂಡ ಆತ್ಮವೆರಡು ಮಥನಿಸಿದರೆ ತತ್ಪಲವಾಗಿ ಅನುಭಾವ ಹುಟ್ಟಿ ಅಂಗದೊಳಗಣ ಗುಣಗಳನ್ನು ಜ್ಞಾನಾಗ್ನಿಯಲ್ಲಿ ದಹಿಸಿ ಶುದ್ಧಿಕರಿಸುತ್ತದೆ. ಶರಣರ ಹೃದಯ ಮಥನದಿಂದ ಹೊರಹೊಮ್ಮಿದ ಅನುಭಾವ ನವನೀತ ಜೀವನವನ್ನು ಪುನೀತಗೊಳಿಸುವುದು.
ಸಾಧು ಸತ್ಪುರುಷರ ಸಂಗದಿಂದ ಪರಿಣಾಮ ಬಹಳವಾಗುವುದು ; ಜ್ಞಾನದ ಬಲದಿಂದ ಅಜ್ಞಾನ ತನ್ನ ಅಸ್ತಿತ್ವ ಕಳಕೊಂಡಂತೆ, ಜ್ಯೋತಿಯ ಸಾಮೀಪ್ಯದಿಂದ ಕತ್ತಲೆ ದೂರಸರಿದಂತೆ; ಸತ್ಯದ ಸುಳಿವಿನಿಂದ ಅಸತ್ಯವು ತಲೆ ಮರೆಸಿಕೊಂಡಂತೆ, ಪರುಷ ಸ್ಪರ್ಶದಿಂದ ಅವಲೋಹ ತನ್ನ ಗುಣವ ಕಳಕೊಂಡಂತೆ, ಕೂಡಲಸಂಗನ ಶರಣರ ಅನುಭಾವದ ಸ್ಪರ್ಶದಿಂದ ನರನ ನರತ್ವ ಅಳಿಯುವುದು. ಮನದ ಮದ ಅಡಗುವುದು. ಇಂತಹ ಶರಣರ ಅಪ್ರತಿಮ ಸಹವಾಸದಿಂದ ಮುಕ್ತಿ ಸುಲಭ ಸಾಧ್ಯವಾಗುವುದು.
ಶಮೆ, ದಯೆ, ವಿವೇಕ, ವೈರಾಗ್ಯ,
ಸಂಪೂರ್ಣ ಭಾವ, ಶಾಂತಿ, ಕಾರುಣ್ಯ,
ಶ್ರದ್ಧೆ, ಸತ್ಯ, ಸದ್ಭಕ್ತಿ, ಶಿವಜ್ಞಾನ,
ಶಿವಾನಂದ ಉದಯವಾದ ಮಹಾಭಕ್ತನ
ಹೃದಯದಲ್ಲಿ ಶಿವನಿಪ್ಪ, ಆತನ ದರ್ಶನ
ಸ್ಪರ್ಶನ ಸಂಭಾಷಣೆಯಿಂದ ಕೇವಲ
ಮುಕ್ತಿಯಪ್ಪುದು ತಪ್ಪದಯ್ಯಾ
ನಿಜ ಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.
ಸದ್ಗುಣ ಸಂಪನ್ನತೆಯ ಭಾಂಡಾರವಾಗಿರುತ್ತಾರೆ ಶರಣರು. ವಿವೇಕ ಸುಜ್ಞಾನದ ಸೆಲೆಯಾಗಿರುವರವರು, ಸ್ವತಃ ಯತ್ನಿಸಿ ಹತ್ತಾರು ವರ್ಷಗಳ ಸತತ ಪ್ರಯತ್ನಿಸಿ ಪಡೆದ ಜ್ಞಾನವನ್ನು ಶರಣರ ಹತ್ತು ನಿಮಿಷದ ಮುತ್ತಿನ ನುಡಿಗಳಲ್ಲಿ ಸಂಗ್ರಹಿಸಬಹುದು. ಅವರೊಡನೆ ದರ್ಶನ, ಸಂಭಾಷಣೆಯಿಂದ ಮುಕ್ತಿ, ತಪೋಸಾಧನೆ ಸುಲಭ ಸಾಧ್ಯವಾಗುವುದು. ವೇದಂಗಳಿಗೆ ಅಭೇಧ್ಯನಾದ ಶಿವನನ್ನು ಶರಣರು ಕಂಡರು. ಶಾಸ್ತ್ರಂಗಳಿಗೆ ಅಸಾಧ್ಯನಾದ ಶಿವನನ್ನು ಸಾಧಿಸಿ ಕಂಡರು, ಆಗಮಂಗಳಿಗೆ ಅಸಾಧ್ಯವಾದವನನ್ನು ಅರಸಿ ಕಂಡರು ಶರಣರು. ಹೀಗೆ ಅಗಮ್ಯ ಅಪ್ರಮಾಣ ಪರಶಿವನನ್ನು ಒಳ ಹೊಕ್ಕು ಬೆರಸಿದ ಶರಣರ ಸಂಗ ಸೋಹಂ ಭಾವದ ಬೆಟ್ಟವನ್ನೇ ಕೊಚ್ಚಿಕೊಂಡು ಹೋಗುತ್ತದೆ. ಅಗ್ನಿಯೊಡನಾಡಿದ ಕಾಷ್ಟಂಗಳು ರೂಹನಳಿದುಕೊಂಡು ಭಸ್ತ್ರೀಭೂತವಾದಂತೆ, ಜ್ಯೋತಿಯೊಡನಾಡಿದ ಕತ್ತಲೆ ತಲೆಮರೆಸಿಕೊಂಡಂತೆ ಜಂಗಮ ಸ್ವರೂಪಿಗಳಾದ ಶರಣರನುಭಾವ ಸಂಪರ್ಕದಿಂದ ಭವ ಬೆದರಿ ಓಡುವುದು.
ಶರಣರ ಅನುಭಾವದ ಮಹತ್ವವನ್ನು ತಿಳಿಸಲಿಕ್ಕೋಸ್ಕರ ಪ್ರಭುದೇವರು ಅನುಭವ ಗೋಷ್ಠಿ ಕುರಿತು ವಿರುದ್ದ ಭಾವದಿಂದ ಮಾತನಾಡುವರು.
ಪರಮ ಪರಿಣಾಮದೊರಕೊಂಡಾತಂಗೆ
ಬರು ಮಾತಿನವರೊಡನೆ ಗೋಷ್ಠಿ ಬಳಿಕೇಕೊ ?
ಬರಿಯ ಸಂಭ್ರಮಿಗಳೊಡತಣದನುಭಾವ ಐವತ್ತೆರಡಕ್ಷರ
ತಮ್ಮಲ್ಲಿ ತಾವು ಉಲಿದಂತೆ ಉಲಿವವು
ಗುಹೇಶ್ವರನೆಂಬ ಲಿಂಗವನರಿದಾತಂಗೆ ಬಳಿಕೇಕೋ ?
ದೇವನ ದಿವ್ಯಾನುಭವ, ಸಾಕ್ಷಾತ್ಕಾರ ಹೊಂದಿದಾತಂಗೆ ಗೋಷ್ಠಿ ಶರಣರ ಒಡನಾಟ, ಗಣ ಮೇಳಾಪ ಏಕೆ ಬೇಕು ? ಅವೇ ೫೨ ಕನ್ನಡ ವರ್ಣಮಾಲಿಕೆಯ ಅಕ್ಷರಗಳೇ ತಾನೆ ? ಅವನ್ನೇ ಪುನಃಪುನಃ ಉಚ್ಚರಿಸಲಾಗುವುದು. ಜ್ಞಾನಿಗೆ ಇದರ ಅಗತ್ಯವೇನು ?
ಕೆಲವು ಜನರು ಇಂಥ ಹಮ್ಮಿನಿಂದ ಬೀಗುತ್ತಾರೆ. ತಾವು ಎಲ್ಲರಿಗಿಂತಲೂ ಜ್ಞಾನಿಗಳೆಂದು. ಆದ್ದರಿಂದ ಸಾಮೂಹಿಕ ಪ್ರಾರ್ಥನೆಗೆ, ಇನ್ನೊಬ್ಬರ ಪ್ರವಚನ ಶ್ರವಣಕ್ಕೆ ಹೋಗುವುದು ಅಗತ್ಯವಿಲ್ಲವೆಂದು ತಿಳಿಯುತ್ತಾರೆ. ಅಂಥ ಹಮ್ಮಿದ್ದರೆ ಹೋಗುವುದನ್ನು ಬಿಡದೆ, ತಾವೂ ತಿಳಿದುದನ್ನು ಇನ್ನೊಬ್ಬರಿಗೆ ಹೇಳುವುದನ್ನಾದರೂ ಮಾಡಬೇಕು. ಜಗನ್ಮಾತಾ ಅಕ್ಕಮಹಾದೇವಿ ಹೇಳುವಂತೆ, ಆಡುವುದು-ಪಾಡುವುದು, ಹೇಳುವುದು ಕೇಳುವುದು'' ಏನೂ ಬೇಡ, ಎಲ್ಲರೊಡನೆ ಕುಳಿತು ಸಾಮೂಹಿಕವಾಗಿ ಹಾಡುವುದರಲ್ಲೇ ಒಂದು ಆನಂದವಿದೆ. ಅದನ್ನೇ ಅನುಭವಿಸಬೇಕು. ಇನ್ನೊಬ್ಬರು ಹೇಳುವುದನ್ನು ಕೇಳುವುದರಲ್ಲಿಯೇ ಆನಂದವಿದೆ ; ತನಗೆ ತಿಳಿದುದನ್ನು ಇನ್ನೊಬ್ಬರಿಗೆ ಹೇಳುವುದರಲ್ಲೆ ಆನಂದವಿದೆ.
“ಅವೇ ೫೨ ಅಕ್ಷರ, ಅವೇ ಮಾತುಗಳು ಕೇಳುವುದು. ಇನ್ನೇನಿರುತ್ತದೆ'' ಎಂಬ ಅಹಂಕಾರ ಕೆಲವರದು. ದಿನಾಲು ನಾವು ಉಣ್ಣುವ ಊಟದಲ್ಲಿ ಅದೇ ಅಕ್ಕಿ, ಅದೇ ಜೋಳ, ಅದೇ ಬೇಳೆ ಎಂದು ಉಣ್ಣುವುದನ್ನು ನಿಲ್ಲಿಸುತ್ತೇವೆಯೆ ? ಅದೇ ವಸ್ತುಗಳನ್ನು ಬಳಸಿಕೊಂಡು ಸ್ವಾದಿಷ್ಟವಾಗಿ ಮಾಡಿಕೊಂಡು ಉಣ್ಣುವುದಿಲ್ಲವೇ ? ಅದೇ ರೀತಿ ಸಾಮೂಹಿಕ ಪ್ರಾರ್ಥನೆ- ಗಣ ಮೇಳಾಪ (ಅನುಭವ ಗೋಷ್ಠಿ)ಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಬೇಕು. ಈ ನಿಷ್ಠೆಯನ್ನು ಕ್ರೈಸ್ತರು- ಮುಸಲ್ಮಾನರು-ಸಿಖ್ಯರಲ್ಲಿ ಮಾತ್ರ ಕಾಣುತ್ತೇವೆ. ಅದಕ್ಕೆ ಅವರವು ಜೀವಂತ ಸಮಾಜಗಳಾಗಿರುವುದು. ಪ್ರಭುದೇವರ ಈ ಪಾಟೀ ಸವಾಲಿಗೆ ಧರ್ಮಕರ್ತರು ಬಹಳ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
“ಅನುಭಾವವಿಲ್ಲದ ಭಕ್ತಿ ಅನುವಿಂಗೆ ಬಾರದು
ಅನುಭಾವವಿಲ್ಲದ ಲಿಂಗ ಸಮರಸ ಸುಖಕ್ಕೆ ನಿಲುಕದು
ಅನುಭಾವವಿಲ್ಲದ ಪ್ರಸಾದ ಪರಿಣಾಮವ ಕೊಡದು
ಅನುಭಾವವಿಲ್ಲದೆ ಏನನೂ ಅರಿಯಬಾರದು
ತನ್ನಲ್ಲಿ ಸನ್ನಿಹಿತವುಳ್ಳಡೆ ಶರಣರ ಸಂಗವೇತಕ್ಕೆನಲುಂಟೆ ?
ಕೂಡಲಸಂಗಮದೇವಯ್ಯಾ ನಿಮ್ಮ ಅನುಭಾವ ಮಾತಿನ ಮಥನವೆಂದು
ನುಡಿಯಬಹುದೆ ಪ್ರಭುವೆ ?
- ಬ.ವ.
ತಮ್ಮ ಧರ್ಮಶಾಸ್ತ್ರದ ಅಧ್ಯಯನ-ಪಠಣ-ಚಿಂತನ ತನ್ನ ತಿಳುವಳಿಕೆ, ಜ್ಞಾನವನ್ನು ಖಚಿತಗೊಳಿಸುವುದು, ಪರಿಪಕ್ವಗೊಳಿಸುವುದು. ಈ ಚಿಂತನೆ ಜ್ಞಾನ ಇಲ್ಲದ ಧರ್ಮ ಶ್ರದ್ಧೆ ''ಕತ್ತಲೆಯಲ್ಲಿ ಕನ್ನಡಿಯನ್ನು ನೋಡಿದಂತೆ ” ಬಹುಪಾಲು ಜನರು ಭಕ್ತಿ ಮಾಡುತ್ತಾರೆ, ಮಾಡುತ್ತಲೇ ಇರುತ್ತಾರೆ. ಮಾಡುತ್ತಲೇ ಹೋಗುತ್ತಾರೆ. ಆದರೆ ಅದು ಅವರಲ್ಲಿ ಯಾವ ಪರಿಣಾಮವನ್ನೂ ಬೀರುತ್ತಿರುವುದಿಲ್ಲ. ಏಕೆಂದರೆ ಅವರ ಭಕ್ತಿ ಜ್ಞಾನದಿಂದ ಪರಿಷ್ಕರಣಗೊಂಡಿರುವುದಿಲ್ಲ. ಭೂಮಿಯಲ್ಲಿ ಸಿಕ್ಕ ವಜ್ರದ ಹರಳಿನಂತೆ ಸಾಣೇ ಹಿಡಿಯಲ್ಪಟ್ಟಿರುವುದಿಲ್ಲ. ಭೂಮಿಯಿಂದ ತೆಗೆದ ಚಿನ್ನದ ಅದುರಿನಿಂದ ಆಭರಣವಾಗಲು ಸಾಧ್ಯವಿರದಂತೆ. ಇಂಥ ಭಕ್ತಿ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ಅನುವಿಂಗೆ, ಸಹಾಯಕ್ಕೆ ಬಾರದು. ಶರಣರ ಸಂಗ ಅಂದರೆ ಅನುಭಾವ ಗೋಷ್ಠಿ ಈ ಭಕ್ತಿ ಎಂಬ ವಜ್ರಕ್ಕೆ ಸಾಣೇ ಹಿಡಿಯುತ್ತದೆ. ನನಗೆ ನೆನಪಿರುವ ವಯಸ್ಸಿನಿಂದಲೂ ನಾನು ಶ್ರದ್ಧಾವಂತೆ, ತಪ್ಪದೆ ಮಾರಮ್ಮ, ಉಚ್ಚಂಗಿಯಲ್ಲಮ್ಮ, ನೀಲಕಂಠೇಶ್ವರ, ನವಗ್ರಹ ಎಲ್ಲ ಗುಡಿಗಳಿಗೂ ಹೋಗಿ ಬರುತ್ತಿದ್ದೆ. ಪ್ರತಿ ಶುಕ್ರವಾರ-ಮಂಗಳವಾರ-ನವರಾತ್ರಿಯಲ್ಲಿ ದೇವಿ ಪುರಾಣ, ಶ್ರಾವಣ ಶನಿವಾರ ಶನಿಪುರಾಣ ಓದುತ್ತಿದ್ದೆ. ಆದರೆ ೧೯೬೫ ರಲ್ಲಿ ಪೂಜ್ಯ ಗುರುಗಳ ಒಂದು ಭಾಷಣ, ನಂತರ ಅವರು ಬರೆದ ಸಾಹಿತ್ಯ ಓದಿದಾಗ ಕಣ್ಣು ತೆರೆಯಲಾರಂಭಿಸಿದವು. ಅಲ್ಲಿಯವರೆವಿಗೂ ಭಕ್ತಿ ನಮ್ಮ ಸಾಧನೆಗೆ ಯಾವ ರೀತಿಯಲ್ಲೂ ನೆರವಾಗಿರಲಿಲ್ಲ. ಅದು ಪರಿಷ್ಕರಣಗೊಂಡುದು ಅನುಭಾವಿಗಳ ಒಡನಾಟದಿಂದ !
“ಅನುಭಾವವಿಲ್ಲದ ಲಿಂಗ ಸಮರಸ ಸುಖಕ್ಕೆ ನಿಲುಕದು' ಬಹುಪಾಲು ಶ್ರದ್ಧಾವಂತ ಲಿಂಗಾಯತರು ತಾವೊಂದು ಜಾತಿಯಲ್ಲಿ ಹುಟ್ಟಿದ ಭಯಭಕ್ತಿಯಿಂದ ಲಿಂಗಧಾರಣೆ ಮಾಡಿಕೊಂಡಿರುವರು. ಆದರೆ ಆ ಲಿಂಗದ ಮತ್ತು ಈ ಭಕ್ತನ ಸಂಬಂಧ ಹೇಗಿರುತ್ತದೆ ಎಂದರೆ “ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ' ಅದಕ್ಕೂ ಇಷ್ಟಲಿಂಗಕ್ಕಿರಬೇಕಾದ ಲಾವಣ್ಯ-ಚಿತ್ಕಳೆಯಿರದು. ಈ ಭಕ್ತನಿಗೂ ಆ ಕುರಿತು ಪ್ರೇಮ ಇರದು. ಯಾಂತ್ರಿಕ ದಂಪತಿಗಳಂತೆ ಇವರ ಸಂಬಂಧ. ನನಗೆ ಈಗೊಂದು ಹೋಲಿಕೆ ನೆನಪಾಗುತ್ತಿದೆ. ಆಷಾಢ ಮಾಸ-ಗಾಳಿಯು ಭರ್ ಎಂದು ಬೀಸುತ್ತಿದೆ. ಕಿಟಕಿ ತೆಗೆದರೆ ಸಾಕು ಕಾಗದಗಳು ಗಾಳಿ ಪಟದಂತೆ ಹಾರಾಡುತ್ತವೆ. ಅದಕ್ಕಾಗಿ ಕಿಟಕಿ ಹಾಕುವೆ. ತಕ್ಷಣವೇ ಸೆಕೆ-ಸಂಕಟ, ಗಾಳಿಯ ಶಬ್ದ ಹೊರಗೆ ಭೋಗ್ಗರೆಯುತ್ತಿದೆ. ಆದರೆ ಅದು ನನ್ನನ್ನು ತಣಿಸಲಾರದು. ಕಿಟಕಿ ತರೆದರೆ ಮಾತ್ರ ಗಾಳಿ ಬರಬಲ್ಲುದು. ಹಾಗೆಯೇ ಒಂದು ಜಾತಿಯಲ್ಲಿ ಹುಟ್ಟಿ, ಆ ಕಾರಣಕ್ಕಾಗಿ ಲಿಂಗಧಾರಣೆ ಮಾಡಿಕೊಂಡು ಲಿಂಗನಿಷ್ಠೆ- ಲಿಂಗಭಕ್ತಿ ಎಂಬ ಪದಗಳು ಸುತ್ತಲೂ ಬೋರರೆಯುತ್ತಿದ್ದರೂ ನಿಜವಾದ ಆನಂದವಾಗದು. ಕುರುಹಿನ ಮಹತ್ವ ತಿಳಿಯದು. ಯಾವಾಗ ತಿಳಿಯುವುದು ? ಚಿಂತನೆಯ ಕಿಟಕಿ ತೆರೆದಾಗ, ಇದು ತೆರೆವುದು ಯಾವುದರಿಂದ ? ಶರಣರ ಅನುಭಾವದ ಒಡನಾಟದಿಂದ. ಈ ಇಷ್ಟಲಿಂಗವು ತ್ರಾಟಕ ಯೋಗದ ಮುಖಾಂತರ ಆನಂದ ಕೊಡುತ್ತದೆ. ಏಕಾಗ್ರತೆ, ಅನುಭೂತಿಗೆ ಸಾಧನ ಎಂಬ ತಿಳುವಳಿಕೆ ಮೂಡಿದಾಗ ಇಷ್ಟಲಿಂಗವು ಒಂದು ಕೇವಲ ಕುರುಹು ಆಗದೆ, ಜೀವಂತಿಕೆಯಿಂದ ತುಂಬಿರುವಂತೆ ಅನುಭವವಾಗುತ್ತದೆ. ನಿಜವಾದ ಸಾಮರಸ್ಯಕ್ಕೆ ಸಾಧನವಾಗುತ್ತದೆ. ಜಾತಿ ನಿಷ್ಠೆಯಿಂದ ಇಷ್ಟಲಿಂಗ ಧರಿಸಿದಾಗ ಅದು ಒಣಗಿದ ಮರದಂತೆ ಇದ್ದುದು ಪ್ರೀತಿಯಿಂದ ಅನುಭೂತಿಯಿಂದ ಧರಿಸಿದಾಗ ಫಲತಳೆದ ಮಾಮರದಂತೆ ತೋರುತ್ತದೆ. ಅದೇ ಕುರುಹು-ಮೊದಲಿಗಿಂತ ಭಿನ್ನವಾಗಿ ತೋರುತ್ತದೆ. ಇಂಥ ಜೀವಂತಿಕೆಯನ್ನು ತಂದುಕೊಡುವುದು ಶರಣರ ಅನುಭಾವ (ಗೋಷ್ಠಿ).
“ಅನುಭಾವವಿಲ್ಲದ ಪ್ರಸಾದ ಪರಿಣಾಮವ ಕೊಡದು' ಪ್ರಸಾದ-ಸಾಮಾನ್ಯ ಅರ್ಥದಲ್ಲಿ ಊಟ ಮೊದಲು ಭೌತಿಕ ತೃಪ್ತಿ ಕೊಡುತ್ತದೆ. ನಂತರ ಸಂತೃಪ್ತಿ ಕೊಡುತ್ತದೆ. ನಂತರ ಪರಮತೃಪ್ತಿ (absolute bliss) ಕೊಡುತ್ತದೆ. ಹೀಗೆ ಕೊಡಲು ಸಮರ್ಥವಾದಾಗಲೇ ಆ ಆಹಾರವು ಪ್ರಸಾದ. ಇಲ್ಲವಾದರೆ ಅದು ಊಟ ಮಾತ್ರ.
ಶರೀರಕ್ಕೆ ಆಹಾರ ಅತ್ಯಗತ್ಯ. ಹಸಿವೆ ದೇಹವನ್ನು ವ್ಯಾಪಿಸುತ್ತಲೇ ವ್ಯಕ್ತಿಯು ಬಹಳ ಯಾತನೆ ಅನುಭವಿಸುವನು, ಆಹಾರವು ಹೊಟ್ಟೆಯನ್ನು ತುಂಬುತ್ತಲೇ ಸಮಾಧಾನ, ತೃಪ್ತಿ ದೊರೆಯುತ್ತದೆ. ಇಷ್ಟನ್ನೇ ಪಡೆದು ನೆಮ್ಮದಿಯಾಗಿ ಇರುವವನು 'ಮಾನವ'ನಾಗಿಯೇ ಕೊನೆಯವರೆಗೂ ಉಳಿದು ಬಿಡುತ್ತಾನೆ. ಜೀವನದಲ್ಲಿ ಸಂತೃಪ್ತಿಯನ್ನು ಬೌದ್ಧಿಕ ಮೌಲ್ಯಗಳಿಂದ ವ್ಯಕ್ತಿಯು ಪಡೆಯುವನು. ಅದಕ್ಕಾಗಿ ಅವನು ಭೌತಿಕ ಮೌಲ್ಯ (Material values) ಗಳ ಪರಿಧಿಯನ್ನು ದಾಟಿದ ಚಿಂತನೆಯನ್ನು ಅಳವಡಿಸಿಕೊಳ್ಳುವನು. ಇದಕ್ಕೂ ಮಿಗಿಲಾದ ಪರಮ ತೃಪ್ತಿಯನ್ನು ಪಡೆದು 'ಶರಣ'ನು ಆನಂದ ಹೊಂದುವನು. ಇದಕ್ಕೆ ಸಾಧನವಾಗುವುದೂ ಪ್ರಸಾದವೇ. ಇಲ್ಲಿ ಪ್ರಸಾದವೆಂದರೆ ಕೇವಲ ಊಟವಲ್ಲ, ಪರಮಾತ್ಮನ ಕರುಣೆ (grace). ಆದ್ದರಿಂದ ಜೀವನವನ್ನು ಬರೀ ಊಟದಲ್ಲೇ ಮುಗಿಸದೆ ಪರಮ ಪರಿಣಾಮವನ್ನು ಅದು ಕೊಡುವಂತೆ ರೂಪಿಸಿಕೊಳ್ಳಬೇಕಾದರೆ ಪರಮಾತ್ಮನ ಪ್ರಸಾದ (grace ಕೃಪೆ) ಅತ್ಯಗತ್ಯ ಎಂಬುದನ್ನು ಶರಣರ ಅನುಭಾವ (ಗೋಷ್ಠಿ) ಕಲಿಸುತ್ತದೆ.
ಅನುಭಾವದ ಮಹತ್ವ ತಿಳಿಸಲು ಧರ್ಮಪಿತರು ಖಚಿತವಾಗಿ ಹೇಳುತ್ತಾರೆ. ಅನುಭಾವವಿಲ್ಲದೆ ಏನನ್ನೂ ಅರಿಯಬಾರದು''. ಹೀಗೆ ಶರಣರ ಒಡನಾಟವಿಲ್ಲದೆ ಯಾವ ಜ್ಞಾನವನ್ನೂ ಪಡೆಯಲು ಸಾಧ್ಯವಾಗದು.
"ತಾನು ದೇವರನ್ನೇ ಸಾಕ್ಷಾತ್ಕರಿಸಿಕೊಂಡವನಾದರೂ ಶರಣರ ಸಂಗದಲ್ಲಿ ಒಡನಾಡಲೇ ಬೇಕು; ಭವರೋಗಿಯಾಗಿ ಅಲ್ಲ ಶಿವಯೋಗಿಯಾಗಿ, ಇತರರ ಭವ ಕಳೆವ ವೈದ್ಯನಾಗಿ". ಇದು ಧರ್ಮಕರ್ತರ ಆದೇಶ. ಅವರು ಕೇಳುತ್ತಾರೆ. “ಅನುಭಾವಿಗಳ ಮಾತನ್ನು ಒಂದು ಮಾತಿನ ಮಥನ, ವಾಕ್ಚಾತುರ್ಯ ಎಂದು ಹಗುರವಾಗಿ ಮಾತನಾಡಬಹುದೆ ?'' ಅದು ಸಾಧಿಸದೆ ಇರುವುದು ಏನನ್ನು ? ಎಲ್ಲವನ್ನೂ ಸಾಧಿಸಬಲ್ಲುದು. ಅಜ್ಞಾನಿಯನ್ನು ಸುಜ್ಞಾನಿಯನ್ನಾಗಿ, ಮಾನವನನ್ನು ಶರಣನನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಉಳ್ಳುದು.
ಪ್ರಭುದೇವರು ಈ ಮಾತನ್ನು ಮನದುಂಬಿ ಒಪ್ಪಿಕೊಳ್ಳುವರು.
ಅನುಭಾವದಿಂದ ಹುಟ್ಟಿತ್ತು ಲಿಂಗ
ಅನುಭಾವದಿಂದ ಹುಟ್ಟಿತ್ತು ಜಂಗಮ
ಅನುಭಾವದಿಂದ ಹುಟ್ಟಿತ್ತು ಪ್ರಸಾದ
ಅನುಭಾವದನುವಿನಲ್ಲಿ ಗುಹೇಶ್ವರಾ,
ನಿಮ್ಮ ಶರಣನನುಪಮ ಸುಖಿ
- ಅ.ಪ್ರ.
ಕರ್ನಾಟಕ ವಿಶ್ವವಿದ್ಯಾಲಯದವರು ಪ್ರಕಟಿಸಿರುವ ಅಲ್ಲಮ ಪ್ರಭುದೇವರ ವಚನ ಗಳು ಪುಸ್ತಕದಲ್ಲಿ ಸಂ : ಡಾ|| ಆರ್.ಸಿ.ಹಿರೇಮಠ, ಗುಹೇಶ್ವರ ಲಿಂಗವನುಪಮಸುಖ ಎಂದು ವಚನ ಕೊನೆಗೊಳ್ಳುತ್ತದೆ. ಅಡಿ ಟಿಪ್ಪಣಿಯ ಪಾಠಾಂತರದಲ್ಲಿ (ಯ, ಪ ಷ) ಗುಹೇಶ್ವರಾ ನಿಮ್ಮ ಶರಣನುಪಮಸುಖಿ ಎಂದಿದೆ. ನಾನು ಅದನ್ನೇ ಆರಿಸಿಕೊಂಡಿದ್ದೇನೆ. ಏಕೆಂದರೇ ಲಿಂಗ- ಜಂಗಮ-ಪ್ರಸಾದ- ಅನುಭಾವ ಬೇಕಾಗಿರುವುದು ಶರಣನಿಗೇ ವಿನಾ ಲಿಂಗಕ್ಕಲ್ಲ. ಲಿಂಗದೇವನು ತಾನು ಅನುಭೂತಿಯನ್ನು ಪಡೆಯುವ ಅಗತ್ಯವಿಲ್ಲ. ಲಿಂಗವನುಪಮಸುಖ ಎಂಬುದು ಸಿದ್ಧಾಂತಕ್ಕೆ ವಿರುದ್ಧವಾದುದು. ಅದಕ್ಕೆ ಶರಣನುಪಮಸುಖಿ ಎಂಬುದೇ ಸರಿ.
ಇಲ್ಲಿ ನಾವು ಎರಡೂ ಅರ್ಥಗಳ ಹಿನ್ನೆಲೆಯಲ್ಲಿ ಅಂದರೆ ೧. ದಿವ್ಯಾನುಭವ. ೨.ಶರಣರ ಒಡನಾಟ ಈ ವಚನವನ್ನು ತಿಳಿದುಕೊಳ್ಳಬಹುದು.
೧. ಧರ್ಮಪಿತ ಬಸವಣ್ಣನವರಿಗೆ ವಿಶೇಷವಾದ ಅತೀಂದ್ರಿಯ ಅನುಭವ (ಅನುಭಾವ) ವಾದಾಗಲೇ ಲಿಂಗದ ಪರಿಕಲ್ಪನೆ ಮೂಡಿತು. ಜಂಗಮ-ಪ್ರಸಾದ ಇಂಥ ಎಲ್ಲ ಅಮೂಲ್ಯ ಪರಿಕಲ್ಪನೆಗಳು ಆ ಅನುಭಾವದ ಫಲವೆ.
೨. ಯಾವುದೇ ವ್ಯಕ್ತಿಗೆ ಅನುಭಾವ-ಅತೀಂದ್ರಿಯ ದಿವ್ಯಾನುಭವವಾದಾಗ ಲಿಂಗದ (ಪರಮಾತ್ಮನ) ಜ್ಞಾನವಾಗುವುದು. ದಿವ್ಯ ವ್ಯಕ್ತಿತ್ವ- ಜಂಗಮತ್ವವು ಅಳವಡುವುದು, ಪರಮಾತ್ಮನ ಪ್ರಸಾದ (ಕರುಣೆಯ)ದ ಸಂಪೂರ್ಣ ಪರಿಣಾಮದ ದಿವ್ಯಾನುಭವದ ಸರೋವರದಲ್ಲಿ ಶರಣನು ಅನುಪಮ ಸುಖಿಯಾಗಿ ತೇಲುವನು.
೨. ಶರಣರೊಡನೆ -ಒಡನಾಟದಿಂದ ವ್ಯಕ್ತಿಗೆ ಪ್ರಥಮತಃ ಲಿಂಗದ ಅಂದರೆ ಪರಮಾತ್ಮನ ಜ್ಞಾನವುಂಟಾಗುತ್ತದೆ. ದೇವರು ಅಂದರೇನು, ಅದರ ಸ್ವರೂಪವೇನು? ಮುಂತಾದ ಜ್ಞಾನ ಪ್ರಾಪ್ತಿಯಾಗುತ್ತದೆ. ನಂತರ ಜಂಗಮತ್ವವು ಪ್ರಾಪ್ತಿಯಾಗುತ್ತದೆ. ಮಾನವನಾಗಿ ಹುಟ್ಟಿ ಭವಿಯಾಗಿ ಬಾಳುವವನು ಗುರುಕರುಣೆಯಿಂದ ಭಕ್ತನಾಗುವನು, ನಿರಂತರವಾದ ಶರಣ ಒಡನಾಟ( ಅನುಭಾವ)ದಿಂದ ಅವನು ಅರಿವು ಹೊಂದಿ ಗುರುವಾಗಿ, ಆತ್ಮಾನುಭವದಿಂದ ಜ೦ಗಮತ್ವ ಹೊಂದುವನು. ಅವನು ಪರಮಾತ್ಮನ ಕರುಣೆಯನ್ನೇ ಬಾಳಲ್ಲಿ ಹಾಸಿಕೊಂಡು ಹೊದ್ದುಕೊಂಡು ಪ್ರಸಾದಿಯಾಗಿ ಕಡೆಗೆ ಪರಿಪೂರ್ಣ ಮಾನವನಾಗುವನು. ಶರಣರ ಅನುಭಾವ (ಒಡನಾಟವು ಲಿಫ್ಟ ಯಂತ್ರದಂತೆ ಹಂತಹಂತವಾಗಿ ಮೇಲುಮೇಲಕ್ಕೆ ವ್ಯಕ್ತಿಯನ್ನು ಏರಿಸುವುದು. ಹೀಗಾಗಿ ನಿಜಶರಣನು ಶರಣರ ಅನುಭಾವ (ಒಡನಾಟ) ದಲ್ಲಿ ಅನುಪಮ ಸುಖಿಯಾಗುವನು. ಇನ್ನೇನಾದರೂ ಬೇಕು ಎಂದು ಸಹ ಬಯಸನು. ಅದನ್ನು ಈ ಮಾತುಗಳಲ್ಲಿ ಕೇಳಿ.
ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ಳುಡಿಯ ಒಂದರಗಳಿಗೆ ಇತ್ತರೆ
ನಿಮ್ಮನಿತ್ತೆ ಕಾಣಾ ರಾಮನಾಥಾ
ಚಂದ್ರಶೈತ್ಯದಲ್ಲಿ ಬೆಳೆದ ಕಾಯಕ್ಕೆ ಬೆಳುದಿಂಗಳ ಹಂಗೇಕೆ?
ಶರಣರೊಲುಮೆ ದೊರೆಯೆ ಶಿವನ ಬಯಸುವ ಹಂಗೇಕೆ ?
೧. ಅನುಭಾವ ಪದ ದಿವ್ಯಾನುಭವ ಎಂಬರ್ಥದಲ್ಲಿ ಬಳಕೆ.
ಏನಿದ್ದಡೇನಿದ್ದಡೊಲ್ಲದು ನಿಮ್ಮನುಭಾವಕ್ಕೆನ್ನ ಮನವು ( ಬ.ವ.)
ಅನುಭಾವ ಅಕ್ಕವೆಯಾಗದೆ ಬೆಬ್ಬನೆ ಬೆರೆತೆನಯ್ಯ
ಅಯ್ಯಾ ನಿಮ್ಮ ಅನುಭಾವದಿಂದ ಎನ್ನ ತನು ಹಾಳಾಯಿತ್ತಯ್ಯ,
ಮನ ಹಾಳಾಯಿತ್ತಯ್ಯ, ಕರ್ಮ ಛೇದನವಾಯಿತ್ತಯ್ಯ
ನಿಮ್ಮ ಅನುಭಾವದಿಂದ ಎನ್ನ ಭವಂ ನಾಸ್ತಿಯಾಯಿತ್ತು.
ಸ್ವಯ ಲಿಂಗದನುಭಾವ ತನಗೆ ದೊರಕೊಂಡ ಬಳಿಕ
ದೇವಲೋಕವೆಂಬುದೇನೋ ? ಮರ್ತ್ಯಲೋಕವೆಂಬುದೇನೋ ?
ಕಾಮಸಂಗವಳಿದು ಅನುಭಾವ ಸಂದಲುಳಿದವರ ಅಗಲಲಾರೆನು
೨. ಅನುಭಾವ-ಶರಣರ ಒಡನಾಟ (ಗೋಷ್ಠಿ) ಎಂಬರ್ಥದಲ್ಲಿ
ಕೂಡಲ ಸಂಗನ ಶರಣರ ಅನುಭಾವವಿಲ್ಲದವರು ಎಲ್ಲಿದ್ದಡೇನು
ಸಂಗನ ಶರಣರ ಅನುಭಾವ ಗಜವೈದ್ಯ
ಓಡಿದೆನೆಂಬ ಭಂಗವಾದಡಾಗಲಿ : ನಮ್ಮ..... ಶರಣರ ಅನುಭಾವವಿಲ್ಲದವರ
ಹೊಲ ಮೇರೆಯ ಹೊಂದೆ, ಹೊಲನ ಬಿಟ್ಟೋಡುವೆ.
ಸಂಗನ ಶರಣರ ಅನುಭಾವ ಮಡಿವಾಳನ ಕಾಯಕದಂತೆ
ದೇವಾ, ನಿಮ್ಮ ಶರಣರ ಅನುಭಾವದಿಂದ ಆನು ಸುಖಿಯಾದೆನು
ಸಂಗನ ಶರಣರ ಅನುಭಾವದಿಂದ ಎನ್ನ ಭವದ ಕೇಡು ನೋಡಯ್ಯ
ಸಂಗನ ಶರಣರ ಅನುಭಾವ ಭವ ದುಃಖಿಗಳಿಗೆ ವೇದ್ಯವಾಗದಯ್ಯ
ಹೀಗೆ ಧರ್ಮಪಿತರು ದೇವನ ದಿವ್ಯಾನುಭವಕ್ಕೆ ಮಹತ್ವದ ಸ್ಥಾನ ಕೊಟ್ಟಂತೆ ಶರಣರ ಅನುಭಾವ (ಒಡನಾಟ-ಗೋಷ್ಠಿ)ಕ್ಕೂ ಮಹತ್ವದ ಸ್ಥಾನ ಕೊಟ್ಟಿದ್ದಾರೆ. ಶರಣರ ಅನುಭಾವ ಮಡಿವಾಳನ ಕಾಯಕದಂತೆ'' ಎಂಬ ಹೋಲಿಕೆ ಕೊಡುವುದರಲ್ಲಂತೂ ಅದ್ಭುತ ಕಲ್ಪನೆ ತಳೆದಿದ್ದಾರೆ. ಮಡಿವಾಳನ ಬಳಿಗೆ ಹೋಗಿ ಶುಭ್ರಗೊಂಡು ಮಡಿಕೆಯಾಗಿ ಬಂದ ಬಟ್ಟೆ ನೋಡಲು ಎಷ್ಟು ಸೊಗಸೋ, ಧರಿಸಲು ಎಷ್ಟು ಆಪ್ಯಾಯಮಾನಕರವೋ ಶರಣರ ಸಂಗದಲ್ಲಿ ಒಡನಾಡಿದವನ ಬದುಕೂ ಅಷ್ಟೇ ಶುಭ್ರ, ಆಪ್ಯಾಯನಕರ, ಏಕೆಂದರೆ ಜಂಗಮರೆಂಬ ಮಡಿವಾಳರು ಈ ಗಣ ಸದಸ್ಯನ ಹೃನ್ಮನಮತಿಗಳೆಂಬ ಬಟ್ಟೆಗಳನ್ನು ಭಕ್ತಿಯ ನೀರಲ್ಲಿ ತೋಯಿಸಿ, ಜ್ಞಾನದ ಸೋಪನ್ನು ತಿಕ್ಕಿ, ಸದಾಚಾರದ ಒಗೆತದಿಂದ ಶುಭ್ರಗೊಳಿಸಿ, ಚಿಂತನೆಯ ರವಿ ಕಿರಣದಲ್ಲಿ ಒಣಗಿಸಿ, ದೀಕ್ಷೆ-ಕರುಣ ಪ್ರಸಾದ ಎಂಬ ಇಸ್ತ್ರಿ ಆಡಿಸುತ್ತಲಿದ್ದರೆ ಏಕಿವು ಹಸನಾಗಬಾರದು ? ಅದಕ್ಕೆ ಧರ್ಮಪಿತರ ಶರಣರ ಅನುಭಾವವನ್ನು ಗಜವೈದ್ಯ ಅಂದರೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದಿದ್ದಾರೆ.
ಅನುಭವ-ಅನುಭಾವ-ಅನುಭೂತಿ
ಅನುಭೂತಿ ಎಂಬ ಪದವು ಸಹ ಬಳಕೆಯಾಗುತ್ತಿರುತ್ತದೆ. 'ಅನುಭೂತಿ' ಎಂಬ ಪದದ ಅರ್ಥವನ್ನು ವ್ಯಾಪ್ತಿಯನ್ನು ತಿಳಿದರೆ ಈ ಅಧ್ಯಾಯವು ಪೂರ್ತಿಯಾಗುತ್ತದೆ. ಅನುಭವ ಎಂಬ ಪದವನ್ನು ಸಾಮಾನ್ಯವಾದ, ಇಂದ್ರಿಯ ಜನ್ಯ ಅನುಭವಗಳಿಗೆ ಪ್ರಯೋಗಿಸಲಾಗತ್ತದೆ. ಬಹಿರಿಂದ್ರಿಯಗಳ ಮೂಲಕ ಪ್ರವೇಶಿಸುವ ಸ್ಪಂದನಗಳನ್ನು ಇಲ್ಲಿ ಪ್ರಧಾನವಾಗಿ ಇಟ್ಟುಕೊಳ್ಳಲಾಗುತ್ತದೆ. , ಇದಕ್ಕೆ ಅತೀತವಾದ ಅಧ್ಯಾತ್ಮಿಕ ಅನುಭವಕ್ಕೆ ಅನುಭಾವ ಎನ್ನಲಾಗುವುದು. ಅನುಭಾವವು ಅತೀಂದ್ರಿಯಾನುಭವ ಅನುಭವ ಇಂದ್ರಿಯ ಆಧಾರಿತವಾಗಿದ್ದರೆ, ಅನುಭಾವವು 'ಇಂಟ್ಯೂಯಿಷನ್' – ಅಂತ ಪ್ರಜ್ಞಾ ಪ್ರೇರಿತವಾಗಿರುತ್ತದೆ.
ಅನುಭೂತಿಯು ಒಂದು `ಸ್ಥಿತಿ'ಯನ್ನು ಕುರಿತು ಪ್ರತಿಪಾದಿಸುತ್ತದೆ. 'ಅನುಭಾವ' ದ ಸ್ಥಿತಿಯು ಅಂಗವು - ಲಿಂಗವೇ ಆದ ಭಾವಸಮರಸದ ಸ್ಥಿತಿ, ಪೂಜ್ಯ-ಪೂಜಕ-ಪೂಜೆಯ ತ್ರಿಪುಟಿಯಳಿದ ತಾದಾತ್ಮಭಾವದ ಸ್ಥಿತಿ. ಈ ಅನುಭಾವದ ಸ್ಥಿತಿ ಆಗಾಗ ಬಂದು ಹೋಗದೆ ಸ್ಥಿರವಾಗಿ ನೆಲೆಸಿದುದೇ ಅನುಭೂತಿ, ಉಂಡ ಬಳಿಕ ಒಂದು ತೃಪ್ತಿಯುಂಟಾಗುವುದು, ಬಾಯಾರಿ ನೀರು ಕುಡಿದಾಗ ಒಂದು ಬಗೆಯ ತೃಪ್ತಿಯಾಗುವುದು. ಅದೇ ರೀತಿ ದಿವ್ಯಾನುಭವಗಳಾದಾಗ ಅದರ ಪರಿಣಾಮವಾಗಿ ಒಂದು ತೃಪ್ತಿ ಉಂಟಾಗುವುದು, ಈ ತೃಪ್ತಿ ಪರಮತೃಪ್ತಿ; ಇದು ಅಳವಟ್ಟ ಮಾನಸಿಕ ಸ್ಥಿತಿಯೇ ಅನುಭೂತಿ, ಒಂದು ಜಾಮೂನು ಕರಿದು ಸಕ್ಕರೆ ಪಾಕದಲ್ಲಿ ಹಾಕುತ್ತೇವೆ. ಅದು ಸ್ವಲ್ಪ ಸ್ವಲ್ಪ ಆ ಪಾಕವನ್ನು ಕುಡಿದು, ನಂತರ ಅದನ್ನು ತನ್ನ ಸರ್ವಾ೦ಗದಲ್ಲೂ ತುಂಬಿಕೊಳ್ಳುತ್ತದೆ. ಹಾಗೆ ಶರಣನು ಸ್ವಲ್ಪ ಸ್ವಲ್ಪ ಆನಂದವನ್ನು ಪಡೆಯುತ್ತ ಅದರಲ್ಲಿಯೇ ತನ್ನಯನಾಗುವ ಸ್ಥಿತಿಯೇ ಅನುಭೂತಿ.
೧ ಅನುಭಾವದ ಸಾರವೇ ನಿಜಸಾರವಾಗಿ ನಿಂದನೆಮ್ಮ ಬಸವಣ್ಣ - ನೀಲಾಂಬಿಕೆ
೨ ಕಾಮಸಂಗ ನಿಸ್ಸಂಗವಾಗಿ ಅನುಭಾವ ಸಂಗದಲ್ಲಿ ಉಳಿದವರ ಅಗಲಲಾರೆನು. - ಬಸವಣ್ಣ
೩ ಗುಹೇಶ್ವರ ನಿಮ್ಮ ಶರಣ ಅನುಭಾವ ಅನುವಿನಲ್ಲಿ ಅನುಪಮ ಸುಖಿ. - ಅಲ್ಲಮ ಪ್ರಭು
೪ ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ - ಬಸವಣ್ಣ
ಈ ಎಲ್ಲಾ ಪದಗಳು 'ಅನುಭಾವ' ಎಂದರೆ ದಿವ್ಯವಾದ ಅತೀಂದ್ರಿಯ ಆಧ್ಯಾತ್ಮಿಕ ಅನುಭವ ಎಂದೂ, ಅದೇ ಅನುಭವವನ್ನೂ ಸರ್ವಾಂಗದಲ್ಲಿಯೂ ಅಳವಟ್ಟ ಮಾನಸಿಕ ಸ್ಥಿತಿ(state)ಯೇ ಅನುಭೂತಿ ಎಂದು ಸ್ಪಷ್ಟಪಡಿಸುತ್ತದೆ. ಇದನ್ನು ಪುಷ್ಟಿಕರಿಸಲು ಡಾ||ಆರ್. ಆರ್. ದಿವಾಕರ ಅವರ ಒಂದು ವಿವರಣೆಯನ್ನು ಉಲ್ಲೇಖಿಸಬಹುದು.
“ಭವ- ಭೂತಿ ಈ ಎರಡು ಶಬ್ದಗಳು 'ಭೂ-ಭವ್' ಎಂಬ ಕ್ರಿಯಾಪದದಿಂದಲೇ ಆದವುಗಳು. ಭವ ಎಂದರೆ ಆಗುವಿಕೆ. ಭೂತ ಅಂದರೆ ಆದುದು. ಆದದ್ದು ಭೂತಿ ಎಂದರೆ ಆಗಿ, ಹಾಗೆಯೇ ಆ ಸ್ಥಿತಿಯಲ್ಲಿ ಸ್ಥಿರವಾದುದು ಎಂದರ್ಥ. ಅನುಭೂತಿ ಎಂಬ ಶಬ್ದದ ಅರ್ಥವೇ ಸಿದ್ಧಸ್ಥಿತಿಯಲ್ಲಿ ಸ್ಥಿರತೆ ಎಂದಾಗುವುದು.'' ಎನ್ನುತ್ತಾರೆ ಡಾ|| ಆರ್.ಆರ್.ದಿವಾಕರರು. #
ಜಗನ್ಮಥ್ಯವೆಂದು ನಿಷ್ಕ್ರಿಯರಾಗುವವರ ನುಡಿಯ ಕೇಳಲಾಗದು ;
ದೇಹವಿದೇ ದೇವನನೊಲಿಸುವ ದಿವ್ಯ ಸಾಧನ ;
'ಶರೀರಮಾದ್ಯಂ ಖಲು ಧರ್ಮ ಸಾಧನಂ ಎಂದುದಾಗಿ !
ಶೋಧಿಸಬೇಕು ಅನಂತ ಅಜಾಂಡದೊಳು ಹುದುಗಿಪ್ಪ
ಸೃಷ್ಟಿ ರಹಸ್ಯ ರತ್ನಂಗಳ, ಮೂಲೆವಿಡಿದು ಕೂಡಲಾಗದು !
ಕರ್ತಾರನ ಕಮ್ಮಟ ಈ ಜಗದ್ರಂಗ
ಇದ್ದು ಜೈಸಬೇಕದನು ದೇವ ಮೆಚ್ಚುವಂತೆ
ಇಂತೆಂಬುದೇ ಪ್ರಗತಿಪರ ಧರ್ಮವಯ್ಯಾ ಸಚ್ಚಿದಾನಂದಾ ! - ಬಸವಾತ್ಮಜೆ
#: 'ಶರಣರ ಅನುಭವ ಅನುಭಾವ ಅನುಭೂತಿ'' ಡಾ|| ಆರ್.ಆರ್.ದಿವಾಕರ ೧೯೭೬, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಪುಟ ೩.
ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಕಾಯಕ ಸಿದ್ಧಾಂತ | ಇಷ್ಟಲಿಂಗಾರ್ಚನೆ |