|| ಓ೦ ಶ್ರೀಗುರು ಬಸವಲಿಂಗಾಯ ನಮಃ ||
ಕೊಳಲ ದನಿಗೆ ಸರ್ಪ ತಲೆದೂಗಿದಡೇನು?
|
|
*
ಕೊಳಲ ದನಿಗೆ ಸರ್ಪ ತಲೆದೂಗಿದಡೇನು?
ಕೊಳಲ ದನಿಗೆ ಸರ್ಪ ತಲೆದೂಗಿದಡೇನು?
ಒಳಗಣ ವಿಷದ ಬಯಕೆ ಬಿಡದನ್ನಕ್ಕ?
ಹಾಡಿದಡೇನು? ಕೇಳಿದಡೇನು?
ತನ್ನಲುಳ್ಳ ಅವಗುಣ ಬಿಡದನ್ನಕ್ಕ?
ಒಳಗನರಿದು ಹೊರಗೆ ಮರೆದವರ
ನೀ ಎನಗೆ ತೋರಯ್ಯ ಚೆನ್ನಮಲ್ಲಿಕಾರ್ಜುನಾ. - ಅಕ್ಕಮಹಾದೇವಿ
ಭಾವಾರ್ಥ = ಅಕ್ಕಮಹಾದೇವಿಯವರು ತಮ್ಮ ಈವೊಂದು ವಚನದಲ್ಲಿ ತಮ್ಮ ಆರಾಧ್ಯ ದೈವನಾದ ಚೆನ್ನಮಲ್ಲಿಕಾರ್ಜುನನಲ್ಲಿ ಆತ್ಮನಿವೇದನೆ ಮಾಡಿಕೊಂಡಿದ್ದಾರೆ. ಇಲ್ಲಿ ಅವರು ಪ್ರಶ್ನೆಗಳನ್ನ ಮಾಡುವುದರ ಸಮೇತವಾಗಿ ಉದಾಹರಿಸಿ ಹೇಳುವ ಮುಖಾಂತರ ತಮ್ಮ ಮನದ ಬಯಕೆಯನ್ನ ತಿಳಿಸಿದ್ದಾರೆ ಅವರಿಲ್ಲಿ.
ಕೊಳಲ ದನಿಗೆ ಸರ್ಪ ತಲೆದೂಗಿದಡೇನು, ಒಳಗಣ ವಿಷದ ಬಯಕೆ ಬಿಡದನ್ನಕ್ಕ?
ಸರ್ಪವು ಕೊಳಲು ಅಥವಾ ಪುಂಗಿಯ ನಾದವನ್ನು ಕೇಳುತ ಅದು ತನ್ನ ಹೆಡೆಯನ್ನ ಎತ್ತಿ ಆಡಲು ಪ್ರಾರಂಭಿಸುತ್ತದೆ. ಆವೊಂದು ಸಮಯದಲ್ಲಿ ಸರ್ಪವು ಪುಂಗಿನಾದಕ್ಕೆ ತನ್ನ ಹೆಡೆ ಆಡಿಸುವಲ್ಲಿ ತಲ್ಲಿನಗೊಂಡರು ಸಹ ಅದು ತನ್ನೊಳಗಿನ ವಿಷವು ಬಿಟ್ಟಿರುವುದಿಲ್ಲ. ಹಾಗಾಗಿ ಇಲ್ಲಿ ಅಕ್ಕನವರು ಕೊಳಲಿನ ಧ್ವನಿಗೆ ಹಾವು ತನ್ನ ತಲೆಯ ದೂಗಿದರೇನು ಬಂತು, ಅದು ತನ್ನೊಳಗಿನ ನಂಜನ್ನು ಬಿಡದಿದ್ದರೆ? ಎಂಬುದಾಗಿ ಪ್ರಶ್ನೆ ಮಾಡಿದ್ದಾರೆ. ಅಂದರೆ ಆ ಸರ್ಪದ ಒಳಗಿನ ವಿಷವು ಕೇವಲ ಕೊಳಲ ಧ್ವನಿಗೆ ಹೋಗುವುದಿಲ್ಲ. ಹಾವಾಡಿಗನು ಅದರ ಹಲ್ಲು ಕೀಳಿದಾಗ ಮಾತ್ರ ಹೋಗುತ್ತದೆ ಎಂಬ ತಮ್ಮ ಮಾತನ್ನು ಹೇಳಿದ್ದಾರೆ ಅವರಿಲ್ಲಿ. ಇದರಂತೆ ಲಿಂಗಭಕ್ತನಾದವನು ತನ್ನ ವಿಷಯ ವಾಸನೆಯೆಂಬ ಹಲ್ಲುಗಳನ್ನು ತನ್ನ ಆಧ್ಯಾತ್ಮ ಸಾಧನೆಯ ಮೂಲಕ ಕಿತ್ತುಕೊಂಡಿರಬೇಕು ಎಂಬ ತಮ್ಮ ಅನುಭವವನ್ನ ಈವೊಂದು ಹಿನ್ನೆಲೆಯೊಳಗೆ ಅವರಿಲ್ಲಿ ಹೇಳಿದ್ದಾರೆ.
ಹಾಡಿದಡೇನು ಕೇಳಿದಡೇನು ತನ್ನಲುಳ್ಳು ಅವಗುಣ ಬಿಡದನ್ನಕ್ಕ?
ಗಾಯಕನು ನಾನಾ ಭಕ್ತಿ ಗೀತೆಗಳನ್ನ ತತ್ವಪದಗಳನ್ನ ಭಜನೆ ಪದಗಳನ್ನ ಹಾಡಿ ಕೇಳುಗನ ಕಿವಿಯನ್ನು ತಂಪಾಗಿಸುವ ಮೂಲಕ ಹಿಡಿದಿಟ್ಟುಕೊಳ್ಳುತ್ತಾನೆ. ಇಲ್ಲಿ ಹಾಡಿದಾತನಾಗಲಿ ಮತ್ತು ಕೇಳಿದತನಾಗಲಿ ಅವರ ಒಳಗಿರುವ ಕೆಟ್ಟ ಗುಣಗಳು ಮಾತ್ರ ಹೋಗಿರವುದಿಲ್ಲ. ಅವು ಯತವತ್ತಾಗಿ ಹಾಗೆಯೆ ಉಳಿದುಕೊಂಡಿರುತ್ತವೆ. ಹಾಗಾಗಿ ಇಲ್ಲಿ ಅಕ್ಕನವರು ಹಾಡುವಾತ ಹಾಡಿದರೇನು ಬಂತು, ಕೇಳುವಾತನಿಗೆ ಕೇಳಿದರೇನು ಬಂತು, ಅವರಿಬ್ಬರು ತಮ್ಮ ಒಳಗಿರುವ ದುರ್ಗುಣಗಳನ್ನು ಕಳಚಿಕೊಂಡರೇ? ಎಂಬುದಾಗಿ ಪ್ರಶ್ನಿಸಿದ್ದಾರೆ. ಅಂದರೆ ಈ ಹಾಡಿದವನಿಗಾಗಲಿ ಮತ್ತು ಹಾಡನ್ನು ಕೇಳಿದವನಿಗಾಗಲಿ ಅವರೊಳಗಿನ ದುರ್ಗುಣಗಳು ನಾಶವಾಗಿರುವುದಿಲ್ಲ. ಈ ಹಾಡುವುದು ಈ ಕೇಳುವುದು ಒಂದು ಮನೋರಂಜನೆ ಮಾತ್ರವಾಗಿರುತ್ತದೆ ವಿನಹ ಅದೆ ಆಧ್ಯಾತ್ಮ ಸಾಧನೆಯಲ್ಲ ಎನ್ನುವುದು ಅಕ್ಕನವರ ಸ್ಪಷ್ಟ ನುಡಿಯಾಗಿದೆ ಇಲ್ಲಿ.
ಒಳಗನರಿದು ಹೊರಗೆ ಮರೆದವರ ನೀ ಎನಗೆ ತೋರಯ್ಯ ಚೆನ್ನಮಲ್ಲಿಕಾರ್ಜುನಾ.
ಅಕ್ಕಮಹಾದೇವಿಯವರು ಈ ವಚನದ ಕೊನೆಯ ಸಾಲಿನಲ್ಲಿ ತಮ್ಮ ಅಭಿಪ್ರಾಯವನ್ನ ಸ್ಪಷ್ಟವಾಗಿ ಮಂಡಿಸಿದ್ದಾರೆ, ಅದೇನಂದರೆ ತಮ್ಮೊಳಗೆ ತಾವರಿದು ಹೊರಗೆ ಮರೆದಿರುವ ಶರಣರನ್ನು ನೀನು ನನಗೆ ತೋರಿಸು ಚೆನ್ನಮಲ್ಲಿಕಾರ್ಜುನಾ ಎಂಬುದಾಗಿ. ಅಂದರೆ ತನ್ನನ್ನು ತಾನೆ ಅರಿದು ಹೊರಗಿನ ಮಾಯಪ್ರಪಂಚವನ್ನು ಮರೆತು ಭವಬಂಧನದಿಂದ ಬಿಡುಗಡೆಯಾಗಿ ತಮ್ಮಲ್ಲಿಯೆ ತಾವಾಗಿರುವ ಅಚ್ಚ ಶರಣರ ನಿತ್ಯ ದರುಶನ ಮಾಡಿಸು ಎಂಬುದು ಈ ತಾಯಿಯ ಬೇಡಿಕೆಯಾಗಿದೆ ಇಲ್ಲಿ. ಒಟ್ಟಾರೆ ಈ ವಚನವು ಅಕ್ಕಮಹಾದೇವಿಯವರ ತಮ್ಮ ಮನದ ಹಿಂಗಿತವನ್ನು ಹೇಳಿಕೊಳ್ಳುವುದಾಗಿದೆ. ಶರಣರ ಸಂಗವನ್ನೆ ಬಯಸಿದ ಅಕ್ಕ ಇಲ್ಲಿಯು ಸಹ ಅದೆ ಬಯಕೆಯನ್ನ ವ್ಯಕ್ತಪಡಿಸಿದ್ದಾರೆ.
*