ಲಿಂಗಾಚಾರ | ಇಷ್ಟಲಿಂಗ ಪೂಜೆ ಜಡಪೂಜೆಯೆ? |
ಕಿರುಕುಳ ದೈವಂಗಳ ಆರಾಧನೆ |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
ದೇವರು, ದೇವತೆ, ದೈವಂಗಳು ಹೀಗೆ ಮೂರು ಬಗೆಯಾಗಿ ದೈವೀಭಕ್ತಿಯನ್ನು ವಿಂಗಡಿಸಿರುವ ಶರಣರು, ಕ್ಷುದ್ರ ದೈವಂಗಳ ಉಪಾಸನೆಯನ್ನಂತೂ ಇನ್ನೂ ಕಟುವಾಗಿ ಖಂಡಿಸಿರುವರು. ಕ್ಷುದ್ರ ದೈವಂಗಳೂ ಮಾನವನ ಕಲ್ಪನೆಯ ಕೂಸುಗಳು, ಭೀತಿಯ ಪ್ರತಿಫಲವಾಗಿ ಹುಟ್ಟಿದ ಕೆಳಮಟ್ಟದ ಆರಾಧ್ಯ ವಸ್ತುಗಳು.
ಆವಾಗಲೂ ಲೋಗರ ಮನೆಯ ಬಾಗಿಲು ಕಾಯ್ದು ಕೊಂಡಿಪ್ಪವು
ಕೆಲವು ದೈವಂಗಳು;
ಹೋಗೆಂದರೆ ಹೋಗವು ಕೆಲವು ದೈವಂಗಳು
ನಾಯಿಯಿಂದಲೂ ಕರಕಷ್ಟ ಕೆಲವು ದೈವಂಗಳು
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನು ಕೊಡುವವು, ಕೂಡಲಸಂಗಮದೇವಾ ? -ಬ..ವ. ೫೫೩
ಭಕ್ತರನ್ನು ಬೇಡಿ ಕಾಡಿ, ನೀಡಿದರೆ ಉಂಡು ತೃಪ್ತವಾಗುವ ದೈವಂಗಳು ನಿಮಗೇನು ಕೊಡಬಲ್ಲವು ? 'ಅಮ್ಮಾ ಹಸಿವೆಯಾಗಿದೆ. ಸ್ವಲ್ಪ ರೊಟ್ಟಿ ಕೊಟ್ಟರೆ ನಿಮಗೆ
ಹಸಿವೆಯಾಗದ ಔಷಧ ಕೊಡುತ್ತೇನೆಂದು ಒಬ್ಬ ಭಿಕ್ಷುಕನು ನುಡಿದರೆ, ಅವನು ಹಸಿವೆ ಆಗದ ಔಷಧ ಕೊಡುವನೆಂದು ತಿಳಿದು ಅವನಿಗೆ ಅನ್ನ ಹಾಕುವುದು ಹೆಡ್ಡತನವಲ್ಲವೆ ?
ಮನೆ ಮನೆಗಳಿಂದ ನಾಯಿಯಂತೆ ತಿರಿದು ತಿನ್ನುವ ದೈವಂಗಳು ಭಕ್ತನಿಗೆ ವರವನ್ನು ಅನುಗ್ರಹವನ್ನು ನೀಡಿ ಕಲ್ಯಾಣ ಮಾಡಲಾರವೆಂದು ಶರಣರು ಸಾರಿ ಹೇಳಿದ್ದಾರೆ.
ಶುನಿಗನ್ನ ಪಾನವ ಹಾಕಲು, ನಿನ್ನ
ಮನೆಯ ರಾತ್ರಿಯಾಳೆಲ್ಲ ಕಾಯ್ದುದು
ಶುನಿಗಿಂದ ಕರ ಕಷ್ಟ ದೈವವ ನಿನ್ನ
ಮನೆಯ ದೇವರಂದು ಭಜಿಸುವೆ
ಛೀ ಹೆಡ್ಡ ನೀ ಎಂಥ ಶಿವಭಕ್ತ, ಕ್ರಿಯಾ
ಬಾಹ್ಯ ದೈವಂಗಳಿಗೆರಗುವೆ.
ಮೇಲಿನ ಬಸವಣ್ಣನವರ ಅಭಿಪ್ರಾಯವನ್ನೇ ಶ್ರೀ ಬಸವಲಿಂಗ ಶರಣರು ಇಲ್ಲಿ ಹೇಳಿದ್ದಾರೆ. ಕ್ರಿಯಾಬಾಹಿರವಾದ, ನಾಯಿಗೂ ಕನಿಷ್ಟವಾದ ದೈವಗಳಿಗೆ ಎರಗುವ ಭಕ್ತನಿಗೆ ಛೀ, ಥ, ಎಂದು ಹೀಯಾಳಿಸುತ್ತಾರೆ. ಶುದ್ಧ ಅಹಿಂಸೆಯನ್ನು ಬೋಧಿಸುವ ಶರಣಧರ್ಮದ ಅನುಯಾಯಿಗಳಾಗಿಯೂ ಕೆಲವು ಜನ ಕುರಿ, ಕೋಳಿಗಳನ್ನು ಮಾರಿ, ದುರ್ಗಿ ಮುಂತಾದುವುಗಳಿಗೆ ಕೊಡುವುದಾಗಿ ಹರಕೆ ಮಾಡಿಕೊಂಡು, ದೇವಾಲಯಗಳಿಗೆ ಕಡಿಯಲು ಪ್ರಾಣಿಗಳನ್ನು ಕೊಡುತ್ತಾರೆ. ಯಾರೇ ಮಾಡಿದರೂ ಹಿಂಸೆಯು ಪಾಪವೆ ! ಅದರಲ್ಲಿಯೂ ಲಿಂಗಾಯತ ಧರ್ಮ, ಜೈನಧರ್ಮದ ಅನುಯಾಯಿಗಳಾಗಿ ಹೀಗೆ ಹಿಂಸೆಗೆ ಪ್ರೇರಣೆ ಕೊಡುವುದು ಇನ್ನೂ ಪಾಪ,
ಅರಗು ತಿಂದು ಕರಗುವ ದೈವವ,
ಉರಿಯ ಕಂಡರೆ ಮುರಟುವ ದೈವವ ಎಂತು ಸರಿ ಎಂಬೆನಯ್ಯ ?
ಅವಸರ ಬಂದರೆ ಮಾರುವ ದೈವವನೆಂತು ಸರಿ ಎಂಬೆನಯ್ಯ ?
ಅಂಜಿಕೆಯಾದರೆ ಹೂಳುವ ದೈವವನೆಂತು ಸರಿ ಎಂಬೆನಯ್ಯ ?
ಸಹಜಭಾವ, ನಿಜೈಕ್ಯ, ಸ್ಥಿರರೂಪ, ನಿರ್ವಿಕಾರ, ನಿರಂಜನ
ಕೂಡಲಸಂಗಮದೇವನೋರ್ವನೇ ದೇವಕಾಣಿರೋ
-ಬ.ಷ.ವ. ೫೫೬
ಕರಗುವ, ಮುರುಟುವ, ಮಾರಾಟವಾಗುವ, ಅಂಜಿಸುವ, ಕಿರುಕುಳ ತಾಮಸ ದೈವಂಗಳನ್ನು ಪೂಜಿಸುವ ಮೂಢ ಭಕ್ತರಿಗಾಗಿ ಬಸವಣ್ಣನವರು ಅನುಕಂಪ ತಾಳಿ, ಅಂಥ ದೇವರುಗಳನ್ನು ಪೂಜಿಸಬಾರದೆಂದೂ ನಿರ್ವಿಕಾರನೂ, ನಿರಂಜನನೂ, ಕಲ್ಯಾಣನಿಧಿಯೂ, ಮಂಗಲಮಯನೂ ಆದ ಪರಶಿವನನ್ನು ಮಾತ್ರ ಪೂಜಿಸಬೇಕೆಂದು ಉಪದೇಶಮಾಡಿ ಏಕ ದೇವೋಪಾಸನೆ (Monotheism) ಯನ್ನು ಈ ವಚನದಲ್ಲಿ ಚಲ್ಲವರಿದಿದ್ದಾರೆ.
ಹಾಳು ಮೊರಡಿಗಳಲ್ಲಿ, ಊರದಾರಿಗಳಲ್ಲಿ
ಕೆರೆ-ಭಾವಿ-ಹೂಗಿಡ ಮರಂಗಳಲ್ಲಿ, ಗ್ರಾಮದ ಮಧ್ಯದಲ್ಲಿ,
ಚೌಪಥ ಪಟ್ಟಣ ಪ್ರದೇಶದಲ್ಲಿ, ಹಿರಿಯಾಲದ ಮರದಲ್ಲಿ ಮನೆಮಾಡಿ
ಕರೆವೆಮ್ಮೆಯ, ಹಸುಗೂಸು, ಬಸುರಿ, ಬಾಣಂತಿ, ಕುಮಾರಿ,
ಕೊಡಗೂಸೆಂಬವರ ಹಿಡಿದುಂಬ, ತಿರಿದುಂಬ, ಬೀರಯ್ಯ,
ಖೇಚರ, ಗಾವಿಲ, ಅಂತರಬೆಂತರ, ಕಾಳಯ್ಯ, ಮಾಳಯ್ಯ
ಕೇತಯ್ಯಗಳೆಂಬ ನೂರು ಮಡಿಕೆಗೆ ನಮ್ಮ ಕೂಡಲಸಂಗಮ
ದೇವರಿಗೆ ಶರಣೆಂಬುದೊಂದು ದೊಣ್ಣಿ ಸಾಲದೆ ?
-ಬ.ಷ.ವ. ೫೫೫
ಸಮಾಜದ ಮೂಢ ಜನರ ಬಳಕೆಯ ತಾಮಸ ದೈವಗಳನ್ನು ಕಟುವಾಗಿ ಖಂಡಿಸಿದ್ದಾರೆ ಬಸವಣ್ಣನವರು.
ಮಾರಿಯ ಪೂಜಿಸಿ ಮಸಣಕ್ಕೆ ಹೋಗಿ
ಗೋರಿಗೊಳಿಸಿ, ಕುರಿಯ ಕೊರಳನೇ ಕೊಯ್ತುಂಬ,
ಕ್ರೂರ ಕರ್ಮಿಗಳನವರ ಶಿವಭಕ್ತರೆನ್ನ ಬಹುದೇ ?
ಆರಯ್ಯದೆ ಅವರ ಮನೆಯಲುಂಡ ಭಕ್ತ
ಅಘೋರ ನರಕಕ್ಕಿಳಿವ ಕಾಣಾ ರಾಮನಾಥಾ. - .ವ.ಸಾ. ಸಂ. ಪುಟ - ೨೦೮
ತಾಮಸ ದೈವಗಳಿಗೆ ಕುರಿ ಕಡಿಯುವದು, ಕೋಣ ಕಡಿಯುವುದು ಇತ್ಯಾದಿ ಹಿಂಸಾಮಯ ಮೂಢ ಆಚರಣೆಯನ್ನು ನೋಡಿ, ಜೇಡರ ದಾಸಿಮಯ್ಯನವರ ಅಂತಃಕರಣ ಮಿಡಿದಿದೆ.
ಶರಣರು ಶುದ್ಧ ಸಾತ್ವಿಕ ಅಹಿಂಸಾವಾದಿಗಳು. ಅವರ ಪ್ರಕಾರ ಮಂಗಲಮಯನಾದ ಶಿವನಿಗೆ ಪತ್ರೆ ಪುಷ್ಟವೇ ಸಾಕು. ಇಂದಿಗೂ ದೇವರ ಹೆಸರಿನಲ್ಲಿ ಕುರಿ ಕೋಣ ಕಡಿಯುವುದನ್ನು
ಕಾಣಬಹುದಾಗಿದೆ. ಇಂಥಾ ಹಿಂಸೆಯ ತಾಮಸ ಭಕ್ತರಿಗೆ ಶರಣರು ದಯಾಮಯಿಗಳಾಗಿ ಹಲವಾರು ಮಾತುಗಳ ಮೂಲಕ ಬುದ್ದಿ ಕಲಿಸುತ್ತಾರೆ.
ಮೊರನ ಗೋಟಿಗೆ ಬಪ್ಪ ಕಿರುಕುಳ ದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿದಾಡುವರು
ಕುರಿ ಸತ್ತು ಕಾವುದೆ ಹರ ಮುಳಿದವರ ?
ಕುರಿ ಬೇಡ, ಮರಿ ಬೇಡ ಬರಿಯ ಪತ್ರೆಯ ತಂದು
ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ. -ಬ.ಷ.ವ, ೫೫೯
ದೇವರ ಹೆಸರಿನಲ್ಲಿ ಕುರಿ ಕೋಣಗಳನ್ನು ಆಹುತಿಮಾಡಿ ಮಾಂಸಾಹಾರಿಗಳಾದ ತಾಮಸ ಭಕ್ತರನ್ನು ಬಸವಣ್ಣನವರು ಅಹಿಂಸಾ ತತ್ವದೆಡೆಗೆ ತರಲು ಬಹಳ ಪ್ರಯತ್ನ ಮಾಡಿದ್ದಾರೆ.
ಕಟ್ಟಾ ಶಾಕಾಹಾರವನ್ನು ತಮ್ಮ ಧರ್ಮದಲ್ಲಿ ಪ್ರತಿಪಾದಿಸುತ್ತಾರೆ. ಯಜ್ಞದಲ್ಲಿ ಪ್ರಾಣಿವಧೆಯಾಗುವುದನ್ನು ಕಂಡು ಅದನ್ನೂ ಜೀವದಯಾಪರರಾದ,
ಅಹಿಂಸಾ ತತ್ವನಿಷ್ಠರಾದ ಬಸವಣ್ಣನವರು ವಿರೋಧಿಸಿದ್ದಾರೆ. ಕುರಿಯನ್ನು ಕೊಟ್ಟು ಹರನ ಒಲಿಸುವ ಮರುಳ ಮಾನವರನ್ನು ಕಂಡು ಕನಿಕರಪಟ್ಟು
ಅಹಿಂಸಾ ತತ್ವಬೋಧೆ ಮಾಡಿ ಸದ್ಭಕ್ತರನ್ನಾಗಿ ಮಾಡಿದ್ದಾರೆ. ಅವರು ಸಕಲ ಜೀವರಾಶಿಗಳಿಗೆ ಲೇಸು ಬಯಸಿದವರಾದ ಕಾರಣ, ಪ್ರಾಣಿಹಿಂಸೆ ಮಹಾ ಪಾಪವೆಂದು ಸಾರಿ ಹೇಳಿದ್ದಾರೆ.
ಸತ್ಯ, ಅಹಿಂಸೆ, ನ್ಯಾಯ, ನೀತಿ, ಪ್ರೇಮ, ಕ್ಷಮೆ, ದಯೆ-ಶಾಂತಿ ಎಂಬ ಸದ್ಗುಣಗಳ ಮೇಲೆ ಧರ್ಮ ಕಟ್ಟಲ್ಪಡದಿದ್ದರೆ ಅದು ಧರ್ಮವೇ ಅಲ್ಲ ಎಂದು ಘಂಟಾಘೋಷವಾಗಿ ಹೇಳುತ್ತಾರೆ.
ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಲಿಂಗಾಚಾರ | ಇಷ್ಟಲಿಂಗ ಪೂಜೆ ಜಡಪೂಜೆಯೆ? |