ಸಾಕ್ಷಾತ್ಕಾರ ಮತ್ತು ಚಕ್ರಭೇದನ | ಲಿಂಗಯೋಗ (ಶಿವಯೋಗ/ಲಿಂಗಾಂಗಯೋಗ) |
ಯೋಗಿಯ ಬಹಿರಂಗ ಬದುಕು |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
ಯೋಗಿಯ ಹೊರಗಿನ ಬದುಕಿನಲ್ಲಿ ಕ್ರಿಯಾತ್ಮಕ ಬದಲಾವಣೆಗಳಾಗದೆ ಬರೀ ಯಾಂತ್ರಿಕವಾಗಿ ಪವನ ಭೇದನ, ಕುಂಡಲಿನಿ ಜಾಗೃತಿ ಆದರೆ ಅದನ್ನು ಶಾರೀರಿಕ ಕಸರತ್ತು ಎಂದು ಶರಣರು ತಿಳಿಯುವರೇ ವಿನಾ ಅಧ್ಯಾತ್ಮಿಕ ಸಾಧನೆಯೆಂದಲ್ಲ. ಕಾಣಲಾಗದ, ಅಪ್ರಮಾಣ, ಅಗೋಚರ ಪರಶಿವನು ಭಕ್ತನ ಕರೆಗೆ ಓಗೊಟ್ಟು ಕರಸ್ಥಲಕ್ಕೆ ಬಂದು ಬಿಜಯಂಗೈಸಿದಾಗ ಆ ಲಿಂಗ ಭಕ್ತನು ಸದಾಚಾರ ಸಂಪನ್ನನಾಗಬೇಕು. ತನುವಿನಲ್ಲಿ ಮೋಹವಳಿಯಬೇಕು, ಮನದ ಅಹಂಕಾರವಳಿಯಬೇಕು. ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ, ವಿಷಯದಲ್ಲಿ ಉದಾಸೀನ ಅಳವಡಬೇಕು.
ಅಂಗ ಸೋಂಕಿನಲ್ಲಿ ಲಿಂಗಸಂಬಂಧಿಯಾದ ಬಳಿಕ
ಅದನ್ನು ಸರ್ವಾಂಗದ ವಿಕಾರವಳಿಯಬೇಕು.
ಅಂಗ ಸೋಂಕಿನ ಲಿಂಗಕ್ಕೆ ಸಜ್ಜೆ ಶಿವದಾರವಾವುದೆಂದರೆ,
ಅಂಗವೇ ಸಜ್ಜೆ, ಆಚಾರವೇ ಶಿವದಾರ, ತ್ರಿಕರಣಶುದ್ಧಿಯೇ ಕುಣಿಕೆ
ಈ ತ್ರಿವಿಧಗುಣವನರಿಯಬೇಕು, ತ್ರಿಗುಣಸಂಪನ್ನನಾಗಿರಬೇಕು,
ಈ ತ್ರಿವಿಧ ಮುಟ್ಟಿ ಲಿಂಗಾರ್ಚನೆಯ ಮಾಡಬೇಕು.
ಅಂಗಲಿಂಗ ಸಂಬಂಧಕ್ಕೆ ಇದೇ ಕ್ರಮವು
ಕೂಡಲ ಚನ್ನಸಂಗಮದೇವಾ. -ಚ .ವ, ೯೦೬
ಲಿಂಗವ ಧರಿಸಿದ ಭಕ್ತನ ಕಾಯವೇ ಶಿವನಿಗೆ ಸಜ್ಜೆಯೋಗಬೇಕು, ಆ ಸದಾಚಾರವೇ ಶಿವದಾರವಾಗಬೇಕು, ಅಂಗತ್ರಯದಲ್ಲಿ ಲಿಂಗತ್ರಯವನ್ನು ಒಳಗೊಂಡ ಮೇಲೆ ಸರ್ವಾಂಗವೆಲ್ಲವೂ ದೇವನು ವಾಸಿಸಲು ಯೋಗ್ಯವಾದ ದೇವಾಲಯವಾಗಬೇಕು. ಆದ್ದರಿಂದ ಲಿಂಗವ ಮುಟ್ಟಿದ ಶರಣನ ಕೈಗಳು ಮೀಸಲಾಗಬೇಕು. ಅವು ಪರಧನ, ಪರಸತಿ, ಪರದೈವಕ್ಕೆ ಎಳಸಬಾರದು. ಪರಹಿಂಸೆ ಮಾಡಕೂಡದು. ಸದಾಚಾರ ಸದ್ಗುಣ ಸಂಪನ್ನನಾಗಿರಬೇಕು, ಇದು ಲಿಂಗದಾಣತಿ; ಶರಣರ ನೀತಿ ಧರ್ಮ ! ಇಂಥ ಸದಾಚಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ, ಲಿಂಗಪೂಜಕರ ಪೂಜೆಯು ವ್ಯರ್ಥವಾಗುವುದೆಂದು ಶರಣರು ಸಾರಿ ಹೇಳಿದ್ದಾರೆ. ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ, ಪಾಪಿ ಹೂವನೇರಿಸಿದರೆ ಮಸೆದಾಯುಧದ ಗಾಯವೆಂದು ಎಚ್ಚರಿಕೆಯನ್ನಿತ್ತಿದ್ದಾರೆ. ನುಡಿಯಲ್ಲಿ ಎಚ್ಚೆತ್ತು, ನಡೆಯಲ್ಲಿ ತಪ್ಪಿದರೆ, ಹಿಡಿದಿರ್ಪ ಲಿಂಗವು ಘಟಸರ್ಪವಾದೀತಂದು ಭಯ ಭಕ್ತಿಯನ್ನು ಹುಟ್ಟಿಸಿದ್ದಾರೆ. ನುಡಿದಂತೆ ನಡೆಯಲು ಕಲಿಸಿದ್ದಾರೆ; ನಡೆದು ನುಡಿಯಲು ಉಪದೇಶಿಸಿದ್ದಾರೆ, ಆಸೆ ಹರಿಯದೆ, ರೋಷ ಬಿಡದೆ ಮಜ್ಜನಕ್ಕೆರೆದರೆ ಪ್ರಯೋಜನವಿಲ್ಲವೆಂದು ಪ್ರತಿಪಾದಿಸಿದ್ದಾರೆ. ನೂರನೋದಿ ನೂರಕೇಳಿದರೂ
ಮಾತಿನಂತೆ ಮನವಿಲ್ಲದೆ ಇರುವ ಜಾತಿ ಡೊಂಬರ ಭಕ್ತರನ್ನು ದೇವನು ಮೆಚ್ಚಲಾರನೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಜ್ಜನರಾಗಿ, ಅಂತಃಕರಣದ ದಯಾರಸದಿಂದ ಲಿಂಗಕ್ಕೆ ಮಜ್ಜನ ಮಾಡಬೇಕೆಂದು ಸಿಲಿಸಿ ಹೇಳಿದ್ದಾರೆ. ಶಾಂತರಾಗಿ ಸಮರತಿಯಿಂದ ದೇವನ ಹಾಡಿ ಹೊಗಳಿ ಪೂಜಿಸಬೇಕೆಂದು ಕಟ್ಟಾಣತಿ ಇಟ್ಟಿದ್ದಾರೆ. ದುರುಳ ಕರಣಂಗಳೆಂಬ ಬೆರಣಿಗಳ ಉರುಹಿದ ಪರಮದ್ಭಸಿತವನ್ನು ದೇವರಿಗೆ ಹಚ್ಚಬೇಕು. ಸಮ್ಯಕ್ ದೃಷ್ಟಿ ಸಮನಿಸಲೆಂದು ರುದ್ರಾಕ್ಷಿಯನ್ನು ಲಿಂಗ ದೇವರಿಗೆ ಧರಿಸಬೇಕು. ಪರಮಶಾಂತಿಯ ಚಿತ್ತವ ದಯಪಾಲಿಸಲೆಂದು ಗಂಧವನೊರೆಯಬೇಕು. ಕಾಯದ ಕರ್ಮಗಳು ಕ್ಷಯಿಸಿ ಹೋಗಲೆಂಬ ಭಾವದಿಂದ ಅಕ್ಷತೆಯನ್ನು ಅರ್ಪಿಸಬೇಕು. ಮಲತ್ರಯಗಳು ಮಾಯವಾಗಲೆಂದು ಲಿಂಗಯ್ಯಗೆ ದಲ ಪತ್ರಿಗಳನ್ನರ್ಪಿಸಬೇಕು. ಹೃದಯ ಕಮಲವೆಂಬ ಪುಷ್ಪವನರ್ಪಿಸಬೇಕು. ಒಡಲ ದುರ್ಗುಣಗಳೆಲ್ಲಾ ಸುಟ್ಟು ಬೂದಿಯೋಗಲೆಂಬ ಭಾವನೆಯಿಂದ ಧೂಪವ ಸಮರ್ಪಿಸಬೇಕು. ಭಕ್ತಿಯ ಬೆಳಗಿನಲಿ ಕಾಯದ ಕತ್ತಲೆ ಕಳೆಯಲೆಂದು ನಿರಾಂಜನ ಬೆಳಗಬೇಕು. ಶುಚಿತನವ ಕರುಣಿಸೆಂದು ನೈವೇದ್ಯವ ಸಮರ್ಪಿಸಬೇಕು. ಅಚಲ ಭಕ್ತಿಯು ಸದಾಕಾಲ ಉಳಿಯಬೇಕೆಂದು ಅಗ್ಗವಣಿಯ ಅರ್ಪಿಸಬೇಕು. ಸತ್ವರಜತಮೋಗುಣಗಳಳಿದು ಸಚ್ಚಿದಾನಂದ ಭಾವ ಬರಲೆಂದು ತಾಂಬೂಲವನರ್ಪಿಸಬೇಕು. ಶರಣರ ತತ್ವವನ್ನು ಸಾರಿ ಹೇಳುವ ಕೆಚ್ಚನ್ನು ಕೊಡಬೇಕೆಂದು ಗಂಟೆಯ ಬಾರಿಸಬೇಕು. ನಂತರ ಅರಿವಿನ ಆರತಿ ಬೆಳಗಿ, ಕೃತಜ್ಞತಾಭಾವದಿಂದ ಶರಣಾರ್ಥಿಗಳನ್ನು ಸಮರ್ಪಿಸಿ ಲಿಂಗಪೂಜೆ ಮಾಡಬೇಕೆಂದು ಶರಣರು ಲಿಂಗಪೂಜೆ ಮಾಡುವ ಉದ್ದೇಶವನ್ನು ತಿಳಿಸಿ ಹೇಳಿದ್ದಾರೆ.
ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೇನಯ್ಯಾ ?
ಅಘೋರ ತಪವ ಮಾಡಿದಡೇನು
ಅಂತರಂಗ ಆತ್ಮಶುದ್ದಿ ಇಲ್ಲದನ್ನಕ್ಕ -ಬ. ಷ.ವ, ೧೧೭
ಎಂದು ಹೇಳಿ, ಪೂಜೆಯ ಪರಿಣಾಮ ಅಂತರಂಗ ಶುದ್ದಿ ಎನ್ನುತ್ತಾರೆ. ಇದನ್ನು ಸಾಧಿಸದೆ ಎಷ್ಟು ವರ್ಷಗಳ ಕಾಲ ತಪಸ್ಸು ಮಾಡಿದರೂ ಅದು ಬಳಲಿಕೆಯೇ ವಿನಾ, ಸಾರ್ಥಕವಲ್ಲ. ಯಾವ ಯಾವ ಸದ್ಗುಣಗಳಿದ್ದರೆ ದೇವನು ನಮ್ಮಿಂದ ಯಾವ ವಸ್ತುಗಳನ್ನು ಸ್ವೀಕರಿಸುತ್ತಾನೆ ಎಂಬ ಬಗ್ಗೆ ಅಕ್ಕಮಹಾದೇವಿ "ತನುಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು" ಎಂಬ ವಚನದಲ್ಲಿ (ವ. ೧೮೭) ಬಲು ಮಾರ್ಮಿಕವಾಗಿ ಹೇಳಿದ್ದಾಳೆ. ಕೆಲವು ಸದ್ಗುಣಗಳು ಅಳವಟ್ಟಾಗಲೇ ದೇವನು ಪೂಜೆಯನ್ನು ಸ್ವೀಕರಿಸುವನಾದ ಕಾರಣ ಶರಣನ ನಡೆನುಡಿ ಆಚಾರ ವಿಚಾರ ಎಲ್ಲದರಲ್ಲಿಯೂ ಸತ್ಯ ಸದಾಚಾರ ದೈವೀಭಾವ ಅಳವಡಬೇಕು; ಹೀಗೆ ಸರ್ವಾಂಗಶುದ್ದಿ ಅತ್ಯವಶ್ಯಕ.
ಸರ್ವಾಂಗಶುದ್ದಿಯ ಮುಂದಿನ ಹಂತ ಸರ್ವಾಂಗ ಲಿಂಗತ್ವ. ಅಂದರೆ ಎಲ್ಲ ಇಂದ್ರಿಯಗಳೂ ದೈವೀಮಯವಾಗಬೇಕು.
ಪಂಚ ಜ್ಞಾನೇಂದ್ರಿಯ, ಪಂಚಕರ್ಮೇಂದ್ರಿಯ, ಪಂಚಪ್ರಾಣಗಳು, ಅಂತಃಕರಣಗಳು ಎಲ್ಲವೂ ದೇವನನ್ನೇ ತುಂಬಿಕೊಳ್ಳಬೇಕು.
ಮನೆಯ ಗಂಡನ ಮನೆವಾರ್ತೆಯನು ಏನ ಹೇಳುವೆನವ್ವ?
ಅಂಗವಿದ್ಯೆಯನೊಲ್ಲ;
ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ
ಕೈಯ ತೊಳೆದಲ್ಲದೆ ಮುಟ್ಟಲೀಯ, ಕಾಲ ತೊಳೆದಲ್ಲದೆ ಹೊದ್ದಲೀಯ,
ಇಂತೀ ಸರ್ವಾಂಗ ತಲೆದೊಳೆದ ಕಾರಣ
ಕೂಡಲ ಸಂಗಮದೇವನೆನ್ನ ಕೂಡಿಕೊಂಡಿಹನವ್ವ. ಬ.ಷ.ವ. ೯೧೧ -
ಪರಮಾತ್ಮನೆಂಬ ಮನೆ-ಮನಗಳ ಗಂಡ ಒಲಿಯುವುದು ತನ್ನ ಶರಣಸತಿ ಅತ್ಯಂತ ಪರಿಶುದ್ದ ಭೂ ಪತಿವ್ರತೆಯೂ ಆಗಿದ್ದಾಗ ಮಾತ್ರ.
ಅವನು ನಿರಂಜನ ಸ್ವರೂಪನಲ್ಲವೆ ? ಅವನಿಗೆ ಅಂಗ ವಿದ್ಯೆಗಳೊಂದೂ ಸರಿ ಬರವು. ಪಾಕೃತಿಕ ಗುಣಗಳನ್ನು ಗೆಲ್ಲದ ಹೊರತು ಅವನು ಒಲಿಯನು.
ಕೆಟ್ಟ ದೃಷ್ಟಿಯನ್ನು ಕಳೆದುಕೊಂಡು ಕಣ್ಣು ಶುದ್ಧವಾಗಬೇಕು, ಅನಿಷ್ಟ ಕೆಲಸಗಳನ್ನು ಮಾಡದೆಯೇ ಕೈ ಶುಚಿಯೋಗಬೇಕು, ಕೆಟ್ಟ ನಡತೆ ಹೊಂದಿರದೆ ಕಾಲು ಪವಿತ್ರವಾಗಿರಬೇಕು.
ಹೀಗೆ ಸರ್ವಾಂಗವೂ ಶುದ್ದವಾದಾಗ ಮಾತ್ರ ದೇವನೊಡನೆ ಅವಿರಳ ಸಮರಸ ಸಾಧ್ಯ. ಈ ಸರ್ವಾಂಗಲಿಂಗತ್ಯ ಸಾಧನೆಯೇ ಶಿವಯೋಗದ ಅಂತಿಮ ಧೈಯ.
ಇದನ್ನು ಮೂರು ಹಂತಗಳಲ್ಲಿ ಸಾಧಿಸುವುದನ್ನು ಶಿವಯೋಗವು ಪ್ರತಿಪಾದಿಸುತ್ತದೆ.
ಆ ಹಂತಗಳೇ ತ್ಯಾಗಾಂಗ, ಭೋಗಾಂಗ ಮತ್ತು ಯೋಗಾಂಗ, ಪದಾರ್ಥ ತ್ಯಾಗ, ಪ್ರಸಾದ ಭೋಗ, ಲಿಂಗಯೋಗಗಳನ್ನು ಈ ಮೂರು ಹಂತಗಳು ಪ್ರತಿಪಾದಿಸುತ್ತವೆ.
ದಿವ್ಯ ಜೀವನಕ್ಕೆ ಎಡರಾಗುವ, ಸಲ್ಲದ ಪದಾರ್ಥಗಳನ್ನು ಮೊದಲು ತ್ಯಜಿಸಬೇಕು. ಕಳೆ-ಕರಿಕೆಯುಳ್ಳ ಭೂಮಿಯಲ್ಲಿ ಬೀಜ ಬಿತ್ತುವುದು ಎಷ್ಟು ವ್ಯರ್ಥ ಸಾಹಸವೋ ಹಾಗೇ
ಪ್ರಾಕೃತಿಕ ಗುಣಗಳಿಂದ ಕೂಡಿರುವ ದೇಹ ಕ್ಷೇತ್ರದಲ್ಲಿ ದಿವ್ಯಜ್ಞಾನದ ಬೀಜ ಬಿತ್ತುವುದೂ ಕೂಡ.
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ;
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ
ಇರಿಸೋ ಕೂಡಲ ಸಂಗಮದೇವ ! -ಬ.ಷ.ವ, ೫೯
ದೇವನಿಗೆ ಸಂಬಂಧ ಪಡದ ಯಾವುದನ್ನೇ ಆದರೂ ಕೇಳಲು, ನೋಡಲು, ಮಾತಾಡಲು ಇಷ್ಟಪಡದು ಸಾಧಕನ ಮನಸ್ಸು. ಇದುವೇ ಪದಾರ್ಥ ತ್ಯಾಗದ ಸ್ಥಿತಿ.
ಇದು ಮಾನವನನ್ನು ಶುದ್ದೀಕರಿಸುವ ಸಾಧನೆ.
ಆ ರೀತಿ ಶುದ್ದೀಕರಣಗೊಂಡ, ಖಾಲಿಬಿದ್ದ ಜಾಗವನ್ನು ದಿವ್ಯ ನೆನಹಿನಿಂದ ತುಂಬಬೇಕು. ಪದಾರ್ಥವನ್ನು ನಿರಾಕರಿಸಿದವನು ಈಗ ಪ್ರಸಾದವನ್ನು ಸ್ವೀಕರಿಸಬೇಕು.
ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕೂಡಲ ಸಂಗಮದೇವಾ, ನಿಮ್ಮ
ಚರಣ ಕಮಲದಲ್ಲಿ ಆನು ದುಂಬಿ. -ಬ.ಷ.ವ, ೪೯೧
ಕೆಟ್ಟದ್ದನ್ನು ಆಡಬಾರದೆಂದು ಮೂಕಗೊಳಿಸಿದ್ದ ನಾಲಿಗೆಯನ್ನು ನಾಮಾಮೃತ ತುಂಬಲು ತೊಡಗಿಸಬೇಕು.
ಕೆಟ್ಟದ್ದನ್ನು ನೋಡಬಾರದೆಂದು ಕುರುಡಾಗಿಸಿದ್ದ ಕಣ್ಣುಗಳನ್ನು ಈಗ ದೇವನ ಸಾಕಾರವನ್ನು ನೋಡಲು ಉಪಯೋಗಿಸಬೇಕು;
ಶಿವನಿಗೆ ಸಂಬಂಧಪಡದ್ದನ್ನು ಕೇಳಬಾರದೆಂದು ಕಿವುಡಾಗಿಸಿದ್ದ ಕಿವಿಯನ್ನು ದೇವನ ಕೀರ್ತಿಯನ್ನು ಕೇಳಲು ತೊಡಗಿಸಬೇಕು.
ಅನ್ಯ ಚಿಂತನೆಯನ್ನು ಮಾಡಬಾರದೆಂದು ಬಂಧಿಸಿದ್ದ ಮನವನ್ನು ಈಗ ದೇವನ ನೆನಹಿನಲ್ಲಿ ಆನಂದಿಸಲು ಬಿಡಬೇಕು. ಹೀಗೆ ಸರ್ವಾಂಗವನ್ನೂ
ದೇವನು ವ್ಯಾಪಿಸಿಕೊಂಡಾಗ ಬದುಕೇ ಒಂದು ಯೋಗ.
ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಸಾಕ್ಷಾತ್ಕಾರ ಮತ್ತು ಚಕ್ರಭೇದನ | ಲಿಂಗಯೋಗ (ಶಿವಯೋಗ/ಲಿಂಗಾಂಗಯೋಗ) |