Previous ಇಷ್ಟಲಿಂಗ - FAQ ಇಷ್ಟಲಿಂಗ ಕುರಿತಾಗಿ ಸಮಸ್ಯೆ ? ಸಮಾಧಾನ ! Next

ಇಷ್ಟಲಿಂಗ ಪೂಜಾ ವಿಧಾನ

ಇಷ್ಟಲಿಂಗಪೂಜೆ

ಲಿಂಗದ ಕಲೆ ಅಂತರಂಗಕ್ಕೆ ವೇಧಿಸುವ
ಹಲವು ಸಾಧನಂಗಳಲ್ಲಿ
ಒಂದು ಸಾಧನವನಿಲ್ಲಿ ಹೇಳುವೆನು ಕೇಳಿರಯ್ಯಾ
ಕರದಿಷ್ಟಲಿಂಗದಿ ತೆರೆದಿಟ್ಟ ದೃಷ್ಟಿ ಎವೆ ಹಳಚದಿರ್ದಡೆ
ಆ ಲಿಂಗವು ಕಂಗಳಲ್ಲಿ ವ್ಯಾಪಿಸುತ್ತಿರ್ಪುದು
ಆ ಮಂಗಳಮಯವಾದ ಕಂಗಳಲ್ಲಿ ಮನವನಿರಿಸಿ
ಲಿಂಗನಿರೀಕ್ಷಣೆಯಿಂದ ನೆನೆಯಲು
ಆ ಲಿಂಗಮೂರ್ತಿ ಮನವನಿಂಬುಗೊಂಡು
ಪ್ರಾಣಲಿಂಗವಾಗಿ ಪರಿಣಮಿಸುತ್ತಿಪ್ಪುದು
ಬಳಿಕ ಆ ಮನೋಮಯ ಲಿಂಗವನು ಸುವಿಚಾರದಿಂದ
ಪರಿಭಾವಿಸಲು
ಆ ಲಿಂಗಮೂರ್ತಿ ಭಾವದಲ್ಲಿ ಸಮರಸಗೊಂಡು
ಭಾವಲಿಂಗವಾಗಿ ಕಂಗೊಳಿಸುತಿಪ್ಪುದು
ಆ ಭಾವಲಿಂಗವನು ಎಡವಿಡದೆ ಭಾವಿಸುತ್ತ
ನೆನಹು ನಿರೀಕ್ಷಣೆಯಿಂದ ತಪ್ಪದಾಚರಿಸಲು
ಶರಣನು ನಿತ್ಯತೃಪ್ತನಾಗಿ ವಿರಾಜಿಸುತ್ತಿಪ್ಪನು
ಇದೇ ನಮ್ಮ ಕೂಡಲಚೆನ್ನಸಂಗಯ್ಯನೊಡನೆ
ಕೂಡುವ ಪರಮೋಪಾಯವು. -ಚೆನ್ನಬಸವಣ್ಣ, ೩-೧೫೨೦

ಇಷ್ಟಲಿಂಗ ಪೂಜಾ ವಿಧಾನ

ಸದ್ಗುರುವಿನಿಂದ ಇಷ್ಟಲಿಂಗದೀಕ್ಷೆಯನ್ನು ಪಡೆದ ಪ್ರತಿಯೊಬ್ಬ ಲಿಂಗವಂತನು ಪ್ರಾತಃಕಾಲದಲ್ಲಿ ಬಸವಾದಿ ಪ್ರಮಥರನ್ನು ಇಷ್ಟಲಿಂಗವನ್ನು ಧ್ಯಾನಿಸುತ್ತಾ ಯೋಗನಿದ್ರೆಯಿಂದ ಏಳಬೇಕು. ಶರಣರ ಭಾವ ಚಿತ್ರಗಳನ್ನು ನೋಡುತ್ತಾ ಇಷ್ಟಲಿಂಗ ಪೂಜಾ ಮಹತ್ವದ ಈ ವಚನವನ್ನು ಹೇಳಿಕೊಳ್ಳಬೇಕು:

ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದಡೆ
ತಪ್ಪುವುವು ಅಪಮೃತ್ಯು ಕಾಲಕರ್ಮಂಗಳಯ್ಯಾ
ದೇವಪೂಜೆಯ ಮಾಟ ದುರಿತ ಬಂಧನದೋಟ
ಶಂಭು ನಿಮ್ಮಯ ನೋಟ ಹೆರೆಹಿಂಗದ ಕಣ್ಬೇಟ
ಸದಾ ಸನ್ನಿಹಿತನಾಗಿ ಶರಣೆಂಬುದು ನಂಬುವುದು
ಜಂಗಮಾರ್ಚನೆಯ ಮಾಟ ಕೂಡಲಸಂಗನ ಕೂಡುವ ಕೂಟ. -ಬಸವಣ್ಣನವರು, ೧-೧೭೭

ಪ್ರಾತರ್ವಿಧಿಗಳನ್ನು ಪೂರೈಸಿ ವಾಯು ವಿಹಾರ, ಯೋಗಾಸನ ಪ್ರಾಣಾಯಾಮ ಇವುಗಳನ್ನು ಮುಗಿಸಿ ಪತ್ರೆ ಪುಷ್ಪಗಳನ್ನೆತ್ತಿ ತಂದು ಪೂಜೋಪಕರಣಗಳನ್ನು ಸಿದ್ಧಪಡಿಸಿಕೊಂಡು ಸ್ನಾನಕ್ಕೆ ಹೋಗಬೇಕು. ಸ್ನಾನ ಮಾಡುವಾಗ ಈ ವಚನ ಹೇಳಿಕೊಳ್ಳಬೇಕು:

ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆ ಬಡವನಯ್ಯ
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರವೆ ಹೊನ್ನ ಕಳಸವಯ್ಯ
ಕೂಡಲಸಂಗಮದೇವ ಕೇಳಯ್ಯ
ಈ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. -ಬಸವಣ್ಣನವರು, ೧-೮೨೧

ಪಂಚಕೋನ ಪ್ರಣವ

ಈ ಚಿತ್ರವು ಜೀವಾತ್ಮ ಸೂಚಕವೂ ಅಹುದು. ಮೇಲಿನ ಶೃಂಗ ಕೋನವು ಶಿರಸ್ಸನ್ನು, ಮೇಲಿನ ಎಡ-ಬಲಬದಿಯ ಕೋನಗಳು ಎರಡು ಭುಜಗಳನ್ನು, ಮಧ್ಯದ ಕೇಂದ್ರವು ಹೃದಯವನ್ನು, ಕೆಳಗಿನ ಎಡಬಲ ಮತ್ತು ಬದಿಯ ಕೋನಗಳು ತೊಡೆಗಳನ್ನು ಸಂಕೇತಿಸಿ, ಶಾಂಭವಿ ಮುದ್ರೆಯಲ್ಲಿ ಧ್ಯಾನಕ್ಕೆ ಕುಳಿತ ವ್ಯಕ್ತಿಯ ಸೂಚಕವಾಗಿದೆ.
ಇಷ್ಟಲಿಂಗ ಸೂಚಕವಾದ ಪಂಚಕೋನ ಪ್ರಣವವನ್ನು ವಿಭೂತಿ ಶುದ್ದಿ ಮಾಡಲು, ಇಷ್ಟಲಿಂಗಕ್ಕೆ ಮಜ್ಜನವನ್ನು ಎರೆದ ನಂತರ ಅದನ್ನು ಪೂಜೆಗೆ ಅಂಗೈಯಲ್ಲಿಟ್ಟುಕೊಳ್ಳುವ ಮೊದಲು ಅಂಗೈಯಲ್ಲಿ ಹಾಗೂ ಪೂಜೆಗೆ ಕುಳಿತು ಕೊಳ್ಳುವ ಪೀಠದ ಮೇಲೆ ಬರೆಯಲು ಉಪಯೋಗಿಸಬೇಕು.

ಅಂತರಂಗ-ಬಹಿರಂಗ ಶುಚಿರ್ಭೂತವಾಗಿ ಶುಭ್ರವಾದ ಬಟ್ಟೆಯ ಉಟ್ಟು ಪೂಜೆಗೆ ಬೇಕಾದ ಪರಿಕರಗಳನ್ನು (ಜಲ ಗಂಧ ಅಕ್ಷತೆ ಪತ್ರ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲ) ತಾವೇ ಸಿದ್ಧಪಡಿಸಿಕೊಂಡು ಓಂ ಶ್ರೀಗುರುಬಸವ ಲಿಂಗಾಯ ನಮಃ ಎಂಬ ಮಂತ್ರವನ್ನು ಪಠಿಸುತ್ತಾ ಪೂಜಾಗೃಹವನ್ನು ಪ್ರವೇಶಿಸಿ ನೆಲಕ್ಕೆ ಹಾಸಿದ ಚಾಪೆ ಆಸನ ಅಥವಾ ಮಣೆಗೆ ಪಂಚಕೋನ ಪ್ರಣವವನ್ನು ವಿಭೂತಿಯಿಂದ ಬರೆದು ಪೀಠಕ್ಕೆ ನಮಸ್ಕರಿಸಿ (ಪೂಜೆಗೆ ಕುಳಿತುಕೊಳ್ಳುವ ಆಸನ) ಪದ್ಮಾಸನದಲ್ಲಿ (ಅಥವಾ ಸುಖಾಸನ, ಪಡಗಲಪಂಚಿ ಹಾಕಿ) ಕುಳಿತುಕೊಂಡು ಈ ಕೆಳಗಿನ ವಚನವನ್ನು ಹೇಳಿಕೊಳ್ಳುತ್ತಾ ಧೂಪ ದೀಪಗಳನ್ನು ಬೆಳಗಿಸಿಕೊಳ್ಳಬೇಕು.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು ನೋಡಯ್ಯಾ -ಬಸವಣ್ಣನವರು, ೧-೮೪೨

ದುರ್ಗುಣ ದುರ್ವ್ಯಸನಾದಿಗಳ ನಿವಾರಣೆಗಾಗಿ ಶಿವಭಕ್ತಿ ಶಿವಜ್ಞಾನಗಳ ಸಂಪಾದನೆ ಹಾಗೂ ಗುರು ಜಂಗಮ, ಪ್ರಸಾದ ಸಿದ್ಧಿಗಾಗಿ ಧರ್ಮಗುರುವನ್ನು ಭಕ್ತಿಯಿಂದ ಕಣ್ಮುಚ್ಚಿ ಧ್ಯಾನ ಮಾಡಬೇಕು.

ಧರ್ಮ ಗುರುವಿನ ಧ್ಯಾನ:

ಎನ್ನ ಕರಸ್ಥಲದಲ್ಲಿ ಲಿಂಗ ಸಾಹಿತ್ಯವ ಮಾಡಿದ
ಎನ್ನ ಮನಸ್ಥಲದಲ್ಲಿ ಜಂಗಮ ಸಾಹಿತ್ಯವ ಮಾಡಿದ
ಎನ್ನ ತನುಸ್ಥಲದಲ್ಲಿ ಆಚಾರ ಸಾಹಿತ್ಯವ ಮಾಡಿದ
ಇಂತೀ ತನು ಮನ ಪ್ರಾಣವನೇಕವ ಮಾಡಿ
ಕೂಡಲ ಚನ್ನಸಂಗಮದೇವಾ ನಿಮ್ಮನೆನ್ನ ವಶವ ಮಾಡಿದ
ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು. -ಚೆನ್ನಬಸವಣ್ಣ, ೩-೧೦೪೪

ಶಿವ, ಗುರುವೆಂದು ಬಲ್ಲಾತನೆ ಗುರು
ಶಿವ, ಲಿಂಗವೆಂದು ಬಲ್ಲಾತನೆ ಗುರು
ಶಿವ, ಜಂಗಮವೆಂದು ಬಲ್ಲಾತನೆ ಗುರು
ಶಿವ, ಪ್ರಸಾದವೆಂದು ಬಲ್ಲಾತನೆ ಗುರು
ಶಿವ, ಆಚಾರವೆಂದು ಬಲ್ಲಾತನೆ ಗುರು
ಇಂತೀ ಪಂಚವಿಧವೇ ಪಂಚಬ್ರಹ್ಮವೆಂದರಿದ
ಮಹಾಮಹಿಮ ಸಂಗನ ಬಸವಣ್ಣನು
ಎನಗೆಯೂ ಗುರು, ನಿನಗೆಯೂ ಗುರು
ಜಗವೆಲ್ಲಕ್ಕೆಯೂ ಗುರು ಕಾಣಾ, ಗುಹೇಶ್ವರಾ. -ಅಲ್ಲಮಪ್ರಭು, ೨-೧೫೪೩

ಒಮ್ಮೆಯೂ ಶ್ರೀಗುರುವಿನ ಚರಣವ ನೆನಯಲೊಡನೆ
ಭವಬಂಧನ ಬಿಡುವುದು
ಗುರುವೇ ಶರಣು ಗುರುಲಿಂಗವೇ ಶರಣು
ಹರಿಬ್ರಹ್ಮಾದಿಗಳಿಗಗೋಚರ ಕೂಡಲಚೆನ್ನಸಂಗನ
ತೋರಿದ ಗುರುವೇ ಶರಣು. -ಚೆನ್ನಬಸವಣ್ಣನವರು, ೩-೨೭

ದೀಕ್ಷಾ ಗುರುವಿನ ಧ್ಯಾನ:

ನಂತರ ನಮಗೆ ಇಷ್ಟಲಿಂಗದೀಕ್ಷೆಯನ್ನು ನೀಡಿದ ದೀಕ್ಷಾ ಗುರುವಿನ ಧ್ಯಾನ ಮಾಡಬೇಕು. ಈ ಕೆಳಗಿನ ವಚನವನ್ನು ಭಕ್ತಿಯಿಂದ ಹೇಳಬೇಕು.

ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೇ ನಮೋ
ಭವ ಬಂಧನವ ಬಿಡಿಸಿ ಪರಮ ಸುಖವ ತೋರಿದ ಗುರುವೇ ನಮೋ
ಭವಿ ಎಂಬುದು ತೊಡೆದು ಭಕ್ತಿ ಎಂದೆನಿಸಿದ ಗುರುವೇ ನಮೋ
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೇ ನಮೋ ನಮೋ -ಅಕ್ಕಮಹಾದೇವಿ, ೫-೨೫೧

ನಿತ್ಯವೆನ್ನ ಮನೆಗೆ ನಡೆದು ಬಂದಿತ್ತೆಂದು
ಮುಕ್ತಿ ಎನ್ನ ಮನೆಗೆ ನಡೆದು ಬಂದಿತ್ತೆಂದು
ಜಯ ಜಯ ಹರಹರಾ ಶಂಕರಾ ಶಂಕರಾ
ಗುರುವೆ ನಮೋ ಪರಮಗುರುವೆ ನಮೋ
ಚನ್ನಮಲ್ಲಿಕಾರ್ಜುನನ ತೋರಿದ ಗುರುವೇ ನಮೋ ನಮೋ. -ಅಕ್ಕಮಹಾದೇವಿ, ೫-೨೬೧

ಜಲಶುದ್ದಿ :

ತುಂಬಿದ ತಂಬಿಗೆಯಲ್ಲಿ (ಲೋಟದಲ್ಲಿ) ನೀರು ತೆಗೆದುಕೊಂಡು ಕೈ ಯಲ್ಲಿಯ ನಾಲ್ಕು ಬೆರಳುಗಳಿಗೆ ಭಸ್ಮ ಧರಿಸಿಕೊಂಡು, ಬೆರಳಿನ ಪ್ರತಿ ಗಣ್ಣುಗಳಿಗೆ ಒಂದು ಸಲ ( ಒಟ್ಟು೧೨ ಸಲ) "ಓಂ ಶ್ರೀ ಗುರು ಬಸವ ಲಿಂಗಾಯ ನಮ:" ಮಂತ್ರವನ್ನು ಪಠಿಸಿ ಬೆರಳಿನಿಂದ ಓಂಕಾರ ಪ್ರಣವವನ್ನು ನೀರಿನಲ್ಲಿ ಬರೆದು ಜಲಶುದ್ದಿ ಮಾಡಬೇಕು.

ಭಸ್ಮಧಾರಣೆ:

ಬಲಗೈ ಮಧ್ಯದ ಮೂರು ಬೆರಳುಗಳಿಗೆ ಭಸ್ಮವನ್ನು ಲೇಪಿಸಿಕೊಂಡು ಹಣೆಗೆ ಧರಿಸಬೇಕು. ನಂತರ ಕಂಠ, ಹೃದಯ, ನಾಭಿ, ಬೆನ್ನು, ತೋಳುಗಳು, ಮುಂಗೈಗಳು, ಕುತ್ತಿಗೆ, ಕಿವಿಗಳು, ಮಸ್ತಕ ಮತ್ತು ಸರ್ವಾಂಗಕ್ಕೂ ಭಸಿತವನ್ನು ಧರಿಸಿಕೊಳ್ಳುತ್ತ ಈ ವಚನವನ್ನು ಹೇಳಿಕೊಳ್ಳಬೇಕು.

ಅಯ್ಯಾ ಎನಗೆ ವಿಭೂತಿಯೆ ಕುಲದೈವ
ಅಯ್ಯಾ ಎನಗೆ ವಿಭೂತಿಯೆ ಮನೆದೈವ
ಅಯ್ಯಾ ಎನಗೆ ವಿಭೂತಿಯೆ ಸರ್ವಕಾರಣ
ಅಯ್ಯಾ ಎನಗೆ ವಿಭೂತಿಯೆ ಸರ್ವಸಿದ್ಧಿ
ಅಯ್ಯಾ ಎನಗೆ ವಿಭೂತಿಯೆ ಸರ್ವವಶ್ಯ
ಅಯ್ಯಾ ಕೂಡಲಚೆನ್ನಸಂಗಮದೇವಾ
ಶ್ರೀ ಮಹಾವಿಭೂತಿಯೆಂಬ ಪರಂಜ್ಯೋತಿ ನೀವಾದಿರಾಗಿ
ಎನಗೆ ವಿಭೂತಿಯೆ ಸರ್ವಸಾಧನ. -ಚೆನ್ನಬಸವಣ್ಣನವರು, ೩-೯೧೮

ರುದ್ರಾಕ್ಷಿ ಧಾರಣ:

ಅಷ್ಟಾವರಣಗಳಲ್ಲಿ ಒಂದಾದ ರುದ್ರಾಕ್ಷಿ ಸರ ಅಥವಾ ರುದ್ರಾಕ್ಷಿಗೆ ಜಲ, ಗಂಧ, ಪತ್ರೆ, ಪುಷ್ಪ, ಧೂಪಗಳಿಂದ ಪೂಜಿಸುತ್ತಾ ಈ ವಚನ ಹೇಳಿ ಧರಿಸಬೇಕು.

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಾಧನವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾಪಕ್ಷಯವು
ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ
ಪಂಚಮುಖದ ರುದ್ರಾಕ್ಷಿಗಳಾದುವಾಗಿ
ಅಯ್ಯಾ ಕೂಡಲಸಂಗಮದೇವಯ್ಯಾ
ಎನ್ನ ಮುಕ್ತಿ ಪಥಕ್ಕೆ ಶ್ರೀ ಮಹಾರುದ್ರಾಕ್ಷಿಯೆ ಸಾಧನವಯ್ಯಾ -ಬಸವಣ್ಣನವರು, ೧-೯೮೩

ಸಂಕಲ್ಪ : ಗುರುಧ್ಯಾನ ಮಾಡಿದ ಬಳಿಕ ಅದೇ ಭಂಗಿಯಲ್ಲಿ ಕುಳಿತು
ಇಷ್ಟಲಿಂಗ ಪೂಜಾ ಸಂಕಲ್ಪ ಮಾಡಬೇಕು.


ಜಲ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ
ತಾಂಬೂಲ ಪಂಚವರ್ಣ ಪತ್ರೆ ಪುಷ್ಪದ
ಪೂಜೆಯ ರಚನೆಯ ಮಾಡುವೆನಯ್ಯಾ
ಅಷ್ಟವಿಧಾರ್ಚನೆ ಷೋಡಶೋಪಚಾರ
ಮುಖ್ಯವಾಗಿ ಮಾಡುವೆನಯ್ಯಾ
ಸಕಲ ಕ್ಷೇಮದಿಂದ ನಡೆದು ನಿಮ್ಮಲ್ಲಿಗೆ ಸಾರುವೆನು
ಕೂಡಲಚೆನ್ನಸಂಗಯ್ಯಾ, -ಚೆನ್ನಬಸವಣ್ಣನವರು, ೩-೮೯

ಪ್ರಾರ್ಥನೆ : ಭಕ್ತಿಯಿಂದ ಕಣ್ಣು ಮುಚ್ಚಿ ಅಂತರ್ಮುಖಿಯಾಗಿ ಕೈ
ಜೋಡಿಸಿ ಈ ವಚನವನ್ನು ಹಾಡಬೇಕು.


ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು
ಮಾಡಿದ ಪೂಜೆಯ ನೋಡುವುದಯ್ಯ
ಶಿವತತ್ವಗೀತವ ಪಾಡುವುದು
ಶಿವನ ಮುಂದೆ ನಲಿದಾಡುವುದಯ್ಯ
ಭಕ್ತಿ ಸಂಭಾಷಣೆಯ ಮಾಡುವುದು
ನಮ್ಮ ಕೂಡಲಸಂಗನ ಕೂಡುವುದು. -ಬಸವಣ್ಣನವರು, ೧೭೫

ಲಿಂಗದರ್ಶನ : ಈ ಕೆಳಗಿನ ವಚನವನ್ನು ಹೇಳುತ್ತಾ ಕರಡಿಗೆಯಿಂದ
ಲಿಂಗವನ್ನು ತೆಗೆದು ದರ್ಶನ ಮಾಡಿಕೊಳ್ಳಬೇಕು.


ಗುರು ಲಿಂಗ ಉದಯದ ಉದಯವ ನೋಡಿರಯ್ಯ
ಹಿಂದೆ ಕತ್ತಲೆ ಮುಂದೆ ಬೆಳಗಾಯಿತ್ತು
ಬೆಳಗು ಬೆಳದಿಂಗಳಾಯಿತ್ತು.
ಕೂಡಲ ಚೆನ್ನಸಂಗಯ್ಯನಲ್ಲಿ
ಒಲವಿನ ಉದಯದ ದರ್ಪಣದಿಂದ. -ಚೆನ್ನಬಸವಣ್ಣನವರು, ೩-೪೬೫

ಚಕ್ರ ಬೆಸಗೈಯ್ಯಡೆ ಅಲಗಿನಾ ಹಂಗೇಕೆ?
ಮಾಣಿಕ್ಯದ ಬೆಳಗುಳ್ಳಡೆ `ದೀಪದಾ ಹಂಗೇಕೆ ?
ಪರುಷ ಕೈಯ್ಯಲುಳ್ಳಡೆ ಸಿರಿಯ ಹಂಗೇಕೆ ?
ಕಾಮಧೇನು ಕರೆವೆಡೆ ಕರುವಿನಾ ಹಂಗೇಕೆ ?
ಎನ್ನದೇವ ಚನ್ನಮಲ್ಲಿಕಾರ್ಜುನಲಿಂಗವು
ಕರಸ್ಥಳದೊಳಗುಳ್ಳಡೆ ಇನ್ನಾವ ಹಂಗೇಕೆ? -ಅಕ್ಕಮಹಾದೇವಿ, ೫-೨೦೮

ಪರುಷ ಸೋಂಕಿದ ಬಳಿಕ ಕಾರ್ಬೊನ್ನದ ಕೇಡು ನೋಡಿರಯ್ಯಾ
ಜ್ಯೋತಿ ಸೋಂಕಿದ ಬಳಿಕ ತಮಂಧದ ಕೇಡು ನೋಡಿರಯ್ಯಾ
ಅಮೃತ ಸೋಂಕಿದ ಬಳಿಕ ರೋಗದ ಕೇಡು ನೋಡಿರಯ್ಯಾ
ನಮ್ಮ ಕಪಿಲಸಿದ್ದಮಲ್ಲಿಕಾರ್ಜುನನ ಸೋಂಕಿದ ಬಳಿಕ
ಭವದ ಕೇಡು ನೋಡಯ್ಯಾ. -ಸಿದ್ಧರಾಮೇಶ್ವರರು, ೧೧೮೩

ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ
ಲಿಂಗವನರಿದ ಬಳಿಕ ಮತ್ತೇನನರಿದಡೆಯೂ ಫಲವಿಲ್ಲ
ಸರ್ವಕಾರಣ ಲಿಂಗವಾಗಿ
ಲಿಂಗವನೆ ಅರಿದರಿದು ಲಿಂಗಸಂಗವನೆ ಮಾಡುವೆ
ಸಂಗ ಸುಖದೊಳು ಓಲಾಡುವೆ ಗುಹೇಶ್ವರಾ. -ಅಲ್ಲಮಪ್ರಭು, ೧೫೦೫

ಲಿಂಗಮಜ್ಜನ : ಇಷ್ಟಲಿಂಗವನ್ನು ಎಡ ಹಸ್ತ ಮಧ್ಯಭಾಗದಲ್ಲಿರಿಸಿ ಈ ವಚನವನ್ನು ಹೇಳಿಕೊಳ್ಳುತ್ತಾ ಲಿಂಗಕ್ಕೆ ಮಜ್ಜನಕ್ಕೆರೆಯಬೇಕು.

ಸಜ್ಜನೆಯಾಗಿ ಮಜ್ಜನಕ್ಕೆರೆವೆ
ಶಾಂತಳಾಗಿ ಪೂಜೆ ಮಾಡುವೆ
ಸಮರತಿಯಿಂದ ನಿಮ್ಮ ಹಾಡುವೆ
ಚನ್ನಮಲ್ಲಿಕಾರ್ಜುನಯ್ಯಾ
ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ. -ಅಕ್ಕಮಹಾದೇವಿ, ೫-೩೮೬

ಶುಭ್ರವಾದ ವಸ್ತ್ರದಿಂದ ಇಷ್ಟಲಿಂಗವನ್ನು ಮೃದುವಾಗಿ ಒತ್ತಿ ಒರೆಸಿ ಕೈಗಳನ್ನು ಒರೆಸಿಕೊಂಡು ಎಡ ಹಸ್ತಕ್ಕೆ ಬಲಗೈ ಮಧ್ಯೆ ಬೆರಳಿನಿಂದ ವಿಭೂತಿಯಿಂದ ಪಂಚಕೋನ ಪ್ರಣವ ಬರೆದು ಇಷ್ಟಲಿಂಗವನ್ನು ಮೂರ್ತಗೊಳಿಸಬೇಕು (ಕುಳ್ಳರಿಸಬೇಕು) ಇಷ್ಟಲಿಂಗಕ್ಕೆ ವಿಭೂತಿಯನ್ನು ಧರಿಸುತ್ತ ಈ ವಚನ ಹಾಡಬೇಕು:

ಸಕಲ ಕ್ರಿಯೆಗಳಿಗಿದು ಕವಚ
ಸಕಲ ವಶ್ಯಕ್ಕಿದು ಶುಭ ತಿಲಕ
ಸಕಲ ಸಂಪದಕ್ಕೆ ತಾಣವಿದು
ಅಘಟಿತ ಘಟಿತವೆನಿಸುವ ಅನುಪಮ ತ್ರಿಪುಂಡ್ರ
ಅಣುಮಾತ್ರ ವಿಭೂತಿಯ ಪಣೆಯೊಳಿಡೆ
ಎಣಿಕೆ ಇಲ್ಲದ ಭವಪಾಶ ಹರಿವುದು
ತ್ರಿನಯ ನೀನೊಲಿದು ಧರಿಸಿದೆಯೆಂದೆನೆ
ಆನು ಧರಿಸಿ ಬದುಕಿದೆ ಕೂಡಲಸಂಗಯ್ಯಾ -ಬಸವಣ್ಣನವರು, ೧-೧೩೭೪

ಗಂಧಧಾರಣೆ : ಈ ವಚನವನ್ನು ಹೇಳಿಕೊಂಡು ಗಂಧವನ್ನು ಇಡಬೇಕು:

ಗಿರಿಗಳ ಮೇಲೆ ಹಲವು ತರುಮರಾದಿಗಳಿದ್ದು
ಶ್ರೀ ಗಂಧದ ಸನ್ನಿಧಿಯೊಳು ಪರಿಮಳವಾಗದೆ
ಲಿಂಗವಂತನ ಸನ್ನಿಧಿಯಿಂದ ಹಿಂದಣ ದುಸ್ಸಂಗ ಕೆಡುವುದು
ಕೂಡಲಸಂಗಮದೇವಾ. -ಬಸವಣ್ಣನವರು, ೧೧೫೧

ಪತ್ರೆ, ಪುಷ್ಪಾಲಂಕಾರ : ಇಷ್ಟಲಿಂಗಕ್ಕೆ ಪತ್ರೆ, ಪುಷ್ಪಗಳಿಂದ ಅಲಂಕರಿಸುತ್ತಾ ಪುಷ್ಪಗಳನ್ನು ಮೇಲ್ಮುಖವಾಗಿಯೂ ಪತ್ರೆಗಳನ್ನು ಕೆಳಮುಖವಾಗಿಯೂ ಲಿಂಗಯ್ಯನು ಕಾಣುವಂತೆ ಸುತ್ತ ಅಲಂಕರಿಸಿ ಈ ಕೆಳಗಿನ ವಚನಗಳನ್ನು ಹೇಳಿಕೊಳ್ಳುತ್ತಿರಬೇಕು:

ಹೊತ್ತಾರೆ ಎದ್ದು ಅಗ್ಗವಣಿ ಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು ?
ಹೊತ್ತು ಹೋಗದ ಮುನ್ನ ಮೃತ್ಯುವೊಯ್ಯದ ಮುನ್ನ
ತೊತ್ತುಗೆಲಸವ ಮಾಡು ನಮ್ಮ ಕೂಡಲಸಂಗಮದೇವನ. -ಬಸವಣ್ಣನವರು, ೧-೧೭೨

ಅಯ್ಯಾ ನೀ ಕೇಳಿದಡೆ ಕೇಳು ಕೇಳದಿದ್ದಡೆ ಮಾಣು;
ನಾ ನಿಮ್ಮ ಹಾಡಿದಲ್ಲದೆ ಸೈರಿಸಲಾರೆನಯ್ಯಾ
ಅಯ್ಯಾ ನೀ ನೋಡಿದಡೆ ನೋಡು ನೋಡದಿದ್ದಡೆ ಮಾಣು;
ಆನು ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯಾ
ಅಯ್ಯಾ ನೀ ಮೆಚ್ಚಿದಡೆ ಮೆಚ್ಚು ಮೆಚ್ಚದಿದ್ದಡೆ ಮಾಣು;
ಆನು ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯಾ
ಅಯ್ಯಾ ನೀನು ಒಲಿದಡೆ ಒಲಿ ಒಲಿಯದಿದ್ದಡೆ ಮಾಣು;
ಆನು ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ
ಚನ್ನಮಲ್ಲಿಕಾರ್ಜುನಯ್ಯಾ
ಆನು ನಿಮ್ಮನರ್ಚಿಸಿ ಪೂಜಿಸಿ ಹರುಷದೊಳೋಲಾಡುವೆನಯ್ಯ. - ಅಕ್ಕಮಹಾದೇವಿ, ೫-೩೩

ಶಿವ ಶಿವಾ ಶಿವ ಶಿವಾ ಶಿವ ಶಿವಾ ಎಂದೊಮ್ಮೆ
ಶಿವನಾಗಿ ಶಿವನ ಪೂಜಿಸು ಮನವೆ
ಹರ ಹರಾ ಹರ ಹರಾ ಹರ ಹರಾ ಎಂದೊಮ್ಮೆ
ಹರನಾಗಿ ಪುರ ಹರನ ಪೂಜಿಸು ಮನವೆ
ಲಿಂಗವೇ ಲಿಂಗವೇ ಎಂದೊಮ್ಮೆ
ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗವ ಪೂಜಿಸಿ ಲಿಂಗವಾಗು ಮನವೆ. -ಸಿದ್ಧರಾಮೇಶ್ವರರು, ೪-೧೮೩೦

ಶಿವ ಶಿವಾ ನೀವೆನ್ನ ನಡೆಯೊಳಗೆ ನಡೆ ರೂಪಾಗಿರ್ದು
ನಡೆ ಪರುಷವ ಕರುಣಿಸಯ್ಯ ದೇವ
ಎನ್ನ ನುಡಿಯೊಳಗೆ ನುಡಿ ರೂಪಾಗಿರ್ದು
ನುಡಿ ಪರುಷವ ಕರುಣಿಸಯ್ಯ ದೇವಾ
ಎನ್ನ ನೋಟದೊಳಗೆ ನೋಟರೂಪಾಗಿರ್ದು
ನೋಟ ಪರುಷವ ಕರುಣಿಸಯ್ಯ ದೇವಾ
ಎನ್ನ ಹಸ್ತದೊಳಗೆ ಹಸ್ತರೂಪಾಗಿರ್ದು
ಹಸ್ತ ಪರುಷವ ಕರುಣಿಸಯ್ಯ ದೇವಾ
ಎನ್ನ ಮನದೊಳಗೆ ಮನರೂಪಾಗಿರ್ದು
ಮನ ಪರುಷವ ಕರುಣಿಸಯ್ಯ ದೇವಾ
ಎನ್ನ ಭಾವಗಳಿಗೆ ಭಾವರೂಪಾಗಿರ್ದು
ಭಾವ ಪರುಷವ ಕರುಣಿಸಯ್ಯ ದೇವಾ ಅಖಂಡೇಶ್ವರಾ. - ಷಣ್ಮುಖ ಶಿವಯೋಗಿಗಳು, ೧೩-೪೦೬

ಮಾಡಬೇಕು ಮಾಡಬೇಕು ಮನವೊಲಿದು ಲಿಂಗಪೂಜೆಯ
ನೋಡಬೇಕು ನೋಡಬೇಕು ಮನವೊಲಿದು ಲಿಂಗ ಸಂಭ್ರಮವ
ಹಾಡಬೇಕು ಹಾಡಬೇಕು ಮನವೊಲಿದು ಲಿಂಗಸ್ತೋತ್ರವ
ಕೂಡಬೇಕು ಕೂಡಬೇಕು ಕಪಿಲಸಿದ್ಧ ಮಲ್ಲಿಕಾರ್ಜುನಾ
ಎನ್ನ ಗುರು ಚನ್ನಬಸವಣ್ಣ ಕೊಟ್ಟ ಇಷ್ಟಲಿಂಗದಡಿಯಲ್ಲಿ -ಸಿದ್ಧರಾಮೇಶ್ವರರು ೪-೧೪೩೨

ಧೂಪಾರತಿ : ಈ ಕೆಳಗಿನ ವಚನ ಧೂಪಾರತಿಯನ್ನು ಸಮರ್ಪಿಸಬೇಕು.

ಧೂಪ ದೀಪಾರತಿಯ ಬೆಳಗುವಡೆ ನೀನು
ಸ್ವಯಂಜ್ಯೋತಿ ಪ್ರಕಾಶನು
ಅರ್ಪಿತವ ಮಾಡುವಡೆ ನೀನು ನಿತ್ಯ ತೃಪ್ತನು
ಅಷ್ಟವಿಧಾರ್ಚನೆಯ ಮಾಡುವಡೆ ನೀನು
ಮುಟ್ಟಬಾರದ ಘನವೇದ್ಯನು
ನಿತ್ಯಮಂಗಳ ಮಾಡುವಡೆ
ನಿನಗೆ ಅನಂತ ಮಂಗಳಾದವು ಗುಹೇಶ್ವರಾ. -ಅಲ್ಲಮಪ್ರಭು, ೨-೧೨೭೪

ದೀಪದಾರತಿ : ಈ ವಚನವನ್ನು ಹೇಳಿಕೊಂಡು ದೀಪಾರತಿಯನ್ನು ಲಿಂಗಯ್ಯನಿಗೆ ಬೆಳಗಬೇಕು:

ಜ್ಯೋತಿ ಸೋಂಕಿದ ಬತ್ತಿಯೆಲ್ಲಾ ಜ್ಯೋತಿಯಪ್ಪವಯ್ಯಾ
ಸಾಗರವ ಮುಟ್ಟಿದ ಪದಾರ್ಥಂಗಳೆಲ್ಲಾ ಪ್ರಸಾದವಪ್ಪವಯ್ಯಾ
ಲಿಂಗವ ಮುಟ್ಟಿದ ಅಂಗವೆಲ್ಲ ಲಿಂಗವಪ್ಪವಯ್ಯಾ
ಸಕಲೇಶ್ವರದೇವಯ್ಯಾ ನಿಮ್ಮ ಮುಟ್ಟಿದವರೆಲ್ಲ
ನಿಮ್ಮಂತೆ ಅಪ್ಪರಯ್ಯ -ಸಕಲೇಶ ಮಾದರಸ, ೯-೪೨೭

ಕರ್ಪೂರದಾರತಿ : ಈ ವಚನ ಹೇಳಿಕೊಂಡು ಕರ್ಪೂರದ ಆರತಿಯನ್ನು ಬೆಳಗಬೇಕು:

ಪಂಚಭೂತ ಸಂಗದಿಂದ ಜ್ಯೋತಿಯಾಯಿತ್ತು
ಪಂಚಭೂತ ಸಂಗದಿಂದ ಕರ್ಪೂರವಾಯಿತ್ತು
ಈ ಎರಡರ ಸಂಗವೇನಾಯಿತ್ತು ಹೇಳಾ
ವಾಙ್ಮನಾತೀತ ಗುಹೇಶ್ವರಾ -ಅಲ್ಲಮಪ್ರಭುದೇವರು, ೨-೬೧೪

ಘಂಟಾನಾದ : ಈ ವಚನ ಹೇಳಿಕೊಂಡು ಘಂಟಾನಾದ ಮಾಡಬೇಕು:

ಕಾಲೇ ಕಂಬಗಳಾದವೆನ್ನ ದೇಹವೇ ದೇಗುಲವಾಯಿತ್ತಯ್ಯ
ಎನ್ನ ನಾಲಗೆ ಘಂಟೆ ಶಿರ ಸುವರ್ಣದ ಕಳಸವಯ್ಯ
ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯ
ಗುಹೇಶ್ವರಲಿಂಗ ನಿಮ್ಮ ಪ್ರಾಣಲಿಂಗ ಪ್ರತಿಷ್ಠೆ
ಪಲ್ಲಟವಾಗದಂತಿಪ್ಪೆನಯ್ಯಾ -ಅಲ್ಲಮಪ್ರಭುದೇವರು, ೨-೧೯೫

ಲಿಂಗಸ್ತೋತ್ರ : ಈ ಕೆಳಗಿನ ವಚನಗಳನ್ನು ಹೇಳುತ್ತಾ ಇಷ್ಟಲಿಂಗವನ್ನು ತಮ್ಮ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆ ಮೂಗಿನ ತುದಿಗೆ ಹನ್ನೆರಡು ಅಂಗುಲ ದೂರದಲ್ಲಿ ಹಿಡಿದು ರೆಪ್ಪೆಗಳನ್ನು ಅರೆಮುಚ್ಚಿ ಅನಿಮಿಷ ದೃಷ್ಟಿಯಿಂದ ಸ್ತೋತ್ರ ಮಾಡಬೇಕು.

ಅಂಗೈಯೊಳಗಣ ಲಿಂಗವ ನೋಡುತ್ತಾ
ಕಂಗಳು ಕಡೆಗೋಡಿವರಿಯುತ್ತ ಸುರಿಯುತ್ತ ಎಂದಿಪ್ಪೆನೋ
ನೋಟವೇ ಪ್ರಾಣವಾಗಿ ಎಂದಿಪ್ಪೆನೋ
ಕೂಟವೇ ಪ್ರಾಣವಾಗಿ ಎಂದಿಪ್ಪೆನೋ
ಎನ್ನ ಅಂಗವಿಕಾರ ಸಂಗವಳಿದು
ಕೂಡಲ ಸಂಗಯ್ಯ ಲಿಂಗಲಿಂಗವೆನುತ್ತ -ಬಸವಣ್ಣ, ೧-೪೮೫

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ
ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ ಲಿಂಗವೇ -ಬಸವಣ್ಣನವರು, ೧-೭೪೪

ತಂದೆ ನೀನು ತಾಯಿ ನೀನು
ಬಂಧು ನೀನು ಬಳಗ ನೀನು
ನೀನಲ್ಲದೆ ಮತ್ತಾರು ಇಲ್ಲವಯ್ಯಾ
ಕೂಡಲಸಂಗಮದೇವಾ
ಹಾಲಲದ್ದು ನೀರಲದ್ದು -ಬಸವಣ್ಣನವರು, ೧-೪೮೧

ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯಾ
ಎನ್ನ ಮಾನಾಪಮಾನವೂ ನಿಮ್ಮದಯ್ಯಾ
ಬಳ್ಳಿಗೆ ಕಾಯಿ ದಿಮ್ಮಿ ಕೂಡಲಸಂಗಮದೇವಾ -ಬಸವಣ್ಣನವರು, ೧-೬೦

ನೀನೊಲಿದರೆ ಕೊರಡು ಕೊನರುವುದಯ್ಯಾ
ನೀನೊಲಿದರೆ ಬರಡು ಹಯನಹುದಯ್ಯಾ
ನೀನೊಲಿದರೆ ವಿಷವು ಅಮೃತವಹುದಯ್ಯಾ
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿರ್ಪುವು
ಕೂಡಲಸಂಗಮದೇವಾ -ಬಸವಣ್ಣನವರು, ೧-೬೬

ಎನ್ನ ಕರಕಮಲ ಮಧ್ಯದಲ್ಲಿ ಪರಮಶಿವಲಿಂಗವ ತುಂಬಿ
ಆ ಲಿಂಗದ ಮಧ್ಯದಲ್ಲಿ ಕಂಗಳ ತುಂಬಿ
ಆ ಕಂಗಳ ಮಧ್ಯದಲಿ ಮನವ ತುಂಬಿ
ಆ ಮನದ ಮಧ್ಯದಲ್ಲಿ ಭಾವವ ತುಂಬಿ
ಪರವಶನಾಗಿರ್ದೆನಯ್ಯ ನಿಮ್ಮೊಳಗೆ ಅಖಂಡೇಶ್ವರಾ -ಷಣ್ಮುಖ ಸ್ವಾಮಿಗಳು, ೧೪-೪೮೫

ಎನ್ನ ಕರಕಮಲ ಮಧ್ಯದಲ್ಲಿ
ಪರಮ ನಿರಂಜನ ಕುರುಹು ತೋರಿದ
ಆ ಕುರುಹಿನ ಮಧ್ಯದಲ್ಲಿ ಅರುಹಿನ ಕಳೆಯ ತೋರಿದ
ಆ ಕಳೆಯ ಮಧ್ಯದಲ್ಲಿ ಮಹಾಜ್ಞಾನದ ಬೆಳಗ ತೋರಿದ
ಆ ಬೆಳಗಿನ ನಿಲುವಿನೊಳಗೆ ಎನ್ನ ತೋರಿದ
ಎನ್ನೊಳಗೆ ತನ್ನ ತೋರಿದ
ತನ್ನೊಳಗೆ ಎನ್ನನಿಂಬಿಟ್ಟುಕೊಂಡ ಮಹಾಗುರುವಿಂಗೆ
ನಮೋ ನಮೋ ಎನುತಿರ್ದೆನಯ್ಯಾ ಅಖಂಡೇಶ್ವರಾ. -ಷಣ್ಮುಖ ಸ್ವಾಮಿಗಳು, ೧೪-೨೯೯

ಚಿದ್ಘನ ಚಿತ್ಪ್ರಕಾಶ ಚಿದಾನಂದ ಲಿಂಗವೆ
ಎನ್ನ ಹೃದಯ ಕಮಲದಲ್ಲಿ ಬೆಳಗಿ ತೋರುವ ಪರಂಜ್ಯೋತಿ
ಎನ್ನ ಕರಸ್ಥಲಕ್ಕನುವಾದ ಧರ್ಮಿ
ಎನ್ನ ಕಂಗಳಾ ಕೊನೆಯಲ್ಲಿ ಮೂರ್ತಗೊಂಡಿಪ್ಪೆಯಯ್ಯಾ
ಕೂಡಲಚೆನ್ನಸಂಗಮದೇವ. -ಚೆನ್ನಬಸವಣ್ಣ, ೩-೧೨೦೮

ನೀನೊಲಿದಡೆ ಕಲ್ಲೆಲ್ಲ ಕನಕವಯ್ಯ
ನೀನೊಲಿದಡೆ ಹುಲ್ಲೆಲ್ಲ ರಾಜಾನ್ನವಯ್ಯ
ನೀನೊಲಿದಡೆ ಕೊರಡೆಲ್ಲ ಕಲ್ಪವೃಕ್ಷವಯ್ಯ
ನೀನೊಲಿದಡೆ ಬರಡು ಕಾಮಧೇನುವಯ್ಯ
ನೀನೊಲಿದಡೆ ಏನುಂಟು ಏನಿಲ್ಲವಯ್ಯ ಅಖಂಡೇಶ್ವರಾ, - ಷಣ್ಮುಖ ಸ್ವಾಮಿಗಳು, ೩-೪೦೬

ಪ್ರಾಣಲಿಂಗ ಧ್ಯಾನ : ಈ ಕೆಳಗಿನ ವಚನಗಳನ್ನು ಹೇಳಿಕೊಳ್ಳುತ್ತಾ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗವನ್ನು ಸ್ಮರಿಸಿಕೊಳ್ಳುತ್ತಾ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಣೆ ಮಾಡಬೇಕು.

ಎನ್ನ ಹೃದಯ ಕಮಲ ಮಧ್ಯದಲ್ಲಿ
ಮೂರ್ತಗೊಂಡಿಪ್ಪ ಎನ್ನ ಪ್ರಾಣೇಶ್ವರಂಗೆ
ಎನ್ನ ಕ್ಷಮೆಯೆ ಅಭಿಷೇಕ
ಎನ್ನ ಚಿದ್ರೂಪವೇ ಭಸ್ಮ
ಎನ್ನ ಸಮಾಧಿ ಸಂಪತ್ತೇ ಗಂಧ
ಎನ್ನ ನಿರಹಂಕಾರವೆ ಅಕ್ಷತೆ
ಎನ್ನ ಅರಿವು ಆಚಾರ ಅನುಭಾವಗಳೆ ತ್ರಿದಳ
ಎನ್ನ ಪರಮ ವೈರಾಗ್ಯವೇ ಪುಷ್ಪದ ಮಾಲೆ
ಎನ್ನ ಸದ್ವಿವೇಕವೇ ವಸ್ತ್ರ
ಎನ್ನ ಸತ್ಯವೇ ದಿವ್ಯಾಭರಣ
ಎನ್ನ ವಿಶ್ವಾಸವೆ ಧೂಪ
ಎನ್ನ ದಿವ್ಯ ಜ್ಞಾನವೇ ದೀಪ
ಎನ್ನ ನಿಭ್ರಾಂತಿಯೇ ನೈವೇದ್ಯ
ಎನ್ನ ನಿರ್ವಿಷಯವೇ ತಾಂಬೂಲ
ಎನ್ನ ಮೌನವೆ ಘಂಟೆ
ಎನ್ನ ನಿರ್ವಿಕಲ್ಪವೇ ಪ್ರದಕ್ಷಿಣೆ
ಎನ್ನ ಶುದ್ಧಿಯೇ ನಮಸ್ಕಾರ
ಎನ್ನ ಅಂತಃಕರಣದಿಂದ ಮಾಡುವ ಸೇವೆಯೆ ಉಪಚಾರಂಗಳು
ಈ ಪರಿಯಲ್ಲಿ ಎಮ್ಮ ಗುಹೇಶ್ವರ ಲಿಂಗಕ್ಕೆ
ಪ್ರಾಣ (ಲಿಂಗ) ಪೂಜೆಯ ಮಾಡಿ
ಬಾಹ್ಯಕೀಯ ಮರೆದೆನು ಕಾಣಾ ಸಂಗನಬಸವಣ್ಣ -ಅಲ್ಲಮಪ್ರಭುದೇವರು, ೨-೯೮೨

ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾದ
ಪ್ರಾಣಲಿಂಗಿಯ ಪ್ರಾಣಲಿಂಗಕ್ಕೆ
ಧ್ಯಾನಾಮೃತ ಪಂಚಾಕ್ಷರಂಗಳ ಪಂಚಾಮೃತದಿಂ ಮಜ್ಜನಕ್ಕೆರೆದು
ಆ ಲಿಂಗಕ್ಕೆ ಮನವೆ ಪುಷ್ಪ ಬುದ್ದಿಯೇ ಗಂಧ ಚಿತ್ತವೇ ನೈವೇದ್ಯ
ಅಹಂಕಾರವಳಿದ ನಿರಹಂಕಾರದ ಆರೋಗಣೆಯ ಮಾಡಿಸಿ
ಪರಿಣಾಮದ ವೀಳ್ಯವನಿತ್ತು ಸ್ನೇಹದಿಂದ ವಂದನೆಯಂ ಮಾಡಿ
ಆ ಪ್ರಾಣಲಿಂಗಕ್ಕೆ ಬಹಿರಂಗದ ಪೂಜೆಯಲಿ
ಅಂತರಂಗದ ಪೂಜೆಯ ಮಾಡುವುದು
ಅಂತರಂಗದ ವಸ್ತುಗಳೆಲ್ಲವನ್ನು ತಂದು
ಬಹಿರಂಗದ ವಸ್ತುವಿನಲ್ಲಿ ಕೂಡಿ
ಅಂತರ್ಬಹಿರುಭಯ ಲಿಂಗಾರ್ಚನೆಯ ಮಾಡಲು
ಅಂತರಂಗ ಬಹಿರಂಗ ಭರಿತವಾಗಿಪ್ಪನಾ ಶಿವನು
ಉರಿಲಿಂಗಪೆದ್ದಿ ಪ್ರಿಯ ವಿಶ್ವೇಶ್ವರಾ. -ಉರಿಲಿಂಗಪೆದ್ದಿಗಳು, ೬-೧೫೨೫

ಇಷ್ಟಲಿಂಗ ಮುಖದಲ್ಲಿ ಶರೀರವರ್ಪಿತ
ಪ್ರಾಣಲಿಂಗ ಮುಖದಲ್ಲಿ ಮನವರ್ಪಿತ
ಭಾವಲಿಂಗ ಮುಖದಲ್ಲಿ ಪ್ರಾಣವರ್ಪಿತ
ಇಂತೀ ತ್ರಿವಿಧಾರ್ಪಣವಾದಡೆ
ಮಹಾ ಘನಲಿಂಗದಲ್ಲಿ ಸಮರಸೈಕ್ಯ
ಕೂಡಲಚೆನ್ನಸಂಗಮದೇವಾ -ಚೆನ್ನಬಸವಣ್ಣನವರು, ೩-೧೦೧೩

ಇಷ್ಟಲಿಂಗ ಸಂಬಂಧವಾದ ಬಳಿಕ
ಕಾಯಗುಣ ಕೆಟ್ಟು ಲಿಂಗವಾಗಿತ್ತು
ಪ್ರಾಣಲಿಂಗ ಸಂಬಂಧವಾದ ಬಳಿಕ
ಕರಣ ಗುಣ ಕೆಟ್ಟು ಲಿಂಗ ಕರಣಂಗಳಾದವು
ಭಾವಲಿಂಗ ಸಂಬಂಧವಾದ ಬಳಿಕ
ಇಂದ್ರಿಯ ಗುಣ ಕೆಟ್ಟು ಲಿಂಗೇಂದ್ರಿಯಗಳಾದವು
ಇದು ಕಾರಣ ಬೇರೆ ಲಿಂಗವಿಲ್ಲ ಬೇರೆ ಅಂಗವಿಲ್ಲ
ಅರ್ಪಿತ ಅನರ್ಪಿತವೆಂಬ ಉಭಯ ಶಂಕೆ ಹಿಂಗಿತ್ತು
ಕೂಡಲಚೆನ್ನಸಂಗಯ್ಯ ನಿನ್ನೊಳಡಗಿದ ನಿಜೈಕ್ಯಂಗೆ. -ಚೆನ್ನಬಸವಣ್ಣ, ೩-೧೦೧೪

ಭಾವಲಿಂಗ ಧ್ಯಾನ:

ಜೀವನೆಂಬ ಶಿವಾಲಯದೊಳು
ಶಿವನೆಂಬ ಲಿಂಗವ ನೆಲೆಗೊಳಿಸಿ
ಅಜ್ಞಾನವೆಂಬ ನಿರ್ಮಾಲ್ಯವು ಕಳೆದು
ಸೋಹಂ ಭಾವದಲ್ಲಿ ಪೂಜಿಸುತ್ತಲಿರಲು
ಎನ್ನ ಭವರೋಗಗಳು ಬಯಲಾಗಿ
ಭವರಹಿತನಾದೆನು ಕಾಣಾ
ಅಪ್ರಮಾಣ ಕೂಡಲಸಂಗಮದೇವಾ. -ಬಾಲಸಂಗಯ್ಯ, ೧೩-೩೦೪

ಅಂಗವಿಲ್ಲದ ಮಂಗಳಾಂಗಿಯ ಮುಖದಲ್ಲಿ
ಶಿವಲಿಂಗದುದುಯವ ಕಂಗಳಿಲ್ಲದೆ ಕಂಡು
ಅಂಗವಿಲ್ಲದೆ ಸಂಗವ ಮಾಡಿ
ನಿಸ್ಸಂಗಿಯಾಗಿ ಸರ್ವಾಂಗಕ್ಕೆ ಹೊರಗಾಗಿ
ನಿರ್ವಯಲ ಬೆರೆಸಲು
ಮಂಗಳ ಮಂಗಳವೆನುತಿಪ್ಪ
ಮಹಾಗಣಂಗಳ ಸಂಗದಲ್ಲಿ ಮೈಮರೆದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. - ಸಿದ್ಧಲಿಂಗೇಶ್ವರರು, ೧೧-೬೯೩

ಮಹಾಲಿಂಗಧ್ಯಾನ:

ಇಷ್ಟಲಿಂಗ ಪೂಜೆಯದು ಅಷ್ಟೈಶ್ವರ್ಯಪ್ರದವಾಯಿತ್ತು
ಪ್ರಾಣಲಿಂಗ ಪೂಜೆಯದು ಅಖಂಡಚಿದೈಶ್ವರ್ಯಪ್ರದವಾಯಿತ್ತು
ಭಾವಲಿಂಗ ಪೂಜೆಯದು ನಿರ್ಭಾವ ನಿಜಾನಂದ
ವಸ್ತುಸ್ವರೂಪವಾಯಿತ್ತು
ಕೇಳಾ ಕಪಿಲಸಿದ್ದಮಲ್ಲಿಕಾರ್ಜುನಾ -ಸಿದ್ಧರಾಮೇಶ್ವರರು, ೪-೧೯೩೪

ಇಷ್ಟಲಿಂಗನಿರೀಕ್ಷೆ

ವೈಚಾರಿಕ ಹಾಗೂ ವೈಜ್ಞಾನಿಕವಾಗಿ ದೈಹಿಕ, ಮಾನಸಿಕ, ಆರೋಗ್ಯವನ್ನು ಸದೃಢವಾಗಿಸುವ ಹಾಗೂ ಆಧ್ಯಾತ್ಮದ ತಳಹದಿಯನ್ನು ಭದ್ರಗೊಳಿಸುವ ಈ ಲಿಂಗ ನಿರೀಕ್ಷೆಯನ್ನು ಅತ್ಯಂತ ಸಮಾಧಾನ ಚಿತ್ತದಿಂದ ಇಷ್ಟಲಿಂಗಯ್ಯನನ್ನು ನಿರೀಕ್ಷಿಸಬೇಕು.

ಕಂಗಳಾ ನೋಟ ಹೃದಯದ ಜ್ಞಾನ
ಮನದೊಳಗೆ ಮಾತನಾಡುತಿರ್ದೆನಯ್ಯಾ
ಜೇನು ಮಳೆಕರೆದವು ಅಮೃತದ ಬಿಂದುಗಳು ಸುರಿದವು
ಕೂಡಲಚೆನ್ನಸಂಗನೆಂಬ
ರಸಸಾಗರದೊಳಗೋಲಾಡುತಿರ್ದೆನಯ್ಯಾ -ಚೆನ್ನಬಸವಣ್ಣ, ೩-೧೦೮೪

ನೋಟವೇ ಕೂಟ ಕೂಟವೇ ಪ್ರಾಣ
ಪ್ರಾಣವೇ ಏಕ, ಏಕವೇ ಸಮರಸ
ಸಮರಸವೇ ಲಿಂಗ, ಲಿಂಗವೇ ಪರಿಪೂರ್ಣ
ಪರಿಪೂರ್ಣವೇ ಪರಬ್ರಹ್ಮ, ಪರಬ್ರಹ್ಮವೇ ತಾನು
ಇಂತೀ ನಿಜವ ಗುಹೇಶ್ವರ ಬಲ್ಲನಲ್ಲದೆ
ಕಣ್ಣು ಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯಾ. -ಅಲ್ಲಮಪ್ರಭು, ೨-೧೩೩೩

ಅಂತರಂಗದೊಳಗಿದ್ದ ನಿರಾಕಾರ ಲಿಂಗವನು
ಸಾಕಾರ ಲಿಂಗವ ಮಾಡಿ
ಶ್ರೀ ಗುರುಸ್ವಾಮಿ ಎನ್ನ ಕರಸ್ಥಲಕ್ಕೆ ತಂದುಕೊಟ್ಟನಯ್ಯ
ಇಂತಪ್ಪ ಲಿಂಗವು ಅಂತರಂಗವನಾವರಿಸಿ
ಅಂತರಂಗದ ಕರಣಂಗಳೇ ಕಿರಣಂಗಳಾಗಿ
ಬೆಳಗುವ ಚಿದಂಶಿಕವೇ ಪ್ರಾಣಲಿಂಗವು
ಆ ಮೂಲ ಚೈತನ್ಯವೇ ಭಾವಲಿಂಗವು
ಇದನರಿದ ನೋಡುವ ನೋಟ ಭಾವ ಪರಿಪೂರ್ಣವಾಗಿ
ತಾನು ತಾನಲ್ಲದೆ ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೇ
ಕೂಡಲಸಂಗಮದೇವಾ. -ಬಸವಣ್ಣನವರು, ೧-೯೭೧

ಮಹಾ ಘನಲಿಂಗಕ್ಕೆ ಮನವೇ ಪೀಠವಾಗಿ
ತನುವೇ ಶಿವಾಲಯವಾಗಿ ನೆನಹೇ ಪೂಜೆಯಾಗಿ
ಧ್ಯಾನವೇ ತೃಪ್ತಿಯಾಗಿ
ಅಂಬುಧಿಯೊಳಗೆ ಮುಳುಗಿರ್ದ ಪೂರ್ಣ ಕುಂಭದಂತೆ
ನಿಮ್ಮ ಅವಿರಳ ದಿವ್ಯಮಹಾಬೆಳಗಿನೊಳಗೆ ಮುಳುಗಿ
ನಾನು ನೀನೆಂಬ ಉಭಯದ ಕುರುಹ ಮೆರೆದು
ಏನೇನೂ ಅರಿಯದಿರ್ದೆನಯ್ಯಾ ಅಖಂಡೇಶ್ವರಾ. -ಷಣ್ಮುಖಸ್ವಾಮಿಗಳು, ೧೪-೮೯೪

ಅಂಗೈಯೊಳಗಣ ಲಿಂಗವ ಪೂಜಿಸುತ್ತ
ಮಂಗಳಾರತಿಗಳನ್ನು ತೊಳಗಿ ಬೆಳಗುತಿರ್ದೆ ನೋಡಯ್ಯ
ಕಂಗಳ ನೋಟ ಕುರುಹಿಟ್ಟ ಭಾವ ಹಿಂಗದ ಮೋಹ
ತೆರಹಿಲ್ಲದಿರ್ದೆ ನೋಡಯ್ಯ
ಚನ್ನಮಲ್ಲಿಕಾರ್ಜುನಯ್ಯ
ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ -ಅಕ್ಕಮಹಾದೇವಿ, ೫-೯

ಕಂಗಳು ತುಂಬಿ ನಿಮ್ಮುವ ನೋಡುತ್ತ ನೋಡುತ್ತಲಯ್ಯ
ಕಿವಿಗಳು ತುಂಬಿ ನಿಮ್ಮುವ ಕೇಳುತ್ತ ಕೇಳುತ್ತಲಯ್ಯ
ಮನವ ತುಂಬಿ ನಿಮ್ಮುವ ನೆನೆವುತ್ತ ನೆನೆವುತ್ತಲಯ್ಯ
ಮಹಾಲಿಂಗ ಕಲ್ಲೇಶ್ವರದೇವನಲ್ಲಿ ಸುಖಿಯಾಗಿರ್ದೆನಯ್ಯಾ -ಹಾವಿನಹಾಳ ಕಲ್ಲಯ್ಯ, ೯-೧೧೨೫

ಇಷ್ಟಲಿಂಗ ಧ್ಯಾನ : "ಓಂ ಲಿಂಗಾಯ ನಮ:" ಮಂತ್ರ ಹೇಳುತ್ತಾ ಬಲ ಹಸ್ತಕ್ಕೆ ಹಾಗೂ ಬೆರಳುಗಳಿಗೆ ಭಸ್ಮವನ್ನು ಲೇಪಿಸಿಕೊಂಡು ಗುರುಗಳು ಉಪದೇಶಿಸಿದ ಮಂತ್ರವನ್ನು ಕನಿಷ್ಟ ೧೦೮ ಸಾರಿ ಅಥವಾ ಸಾಧ್ಯವಿದ್ದಷ್ಟು ಕಾಲ ಜಪಮಾಡುತ್ತಾ (ಮನದಲ್ಲಿ ಧ್ಯಾನಿಸಬೇಕು.)

ನೈವೇದ್ಯ : ಧ್ಯಾನ ಮುಗಿದ ಬಳಿಕ ಇಷ್ಟಲಿಂಗಕ್ಕೆ ಸಿದ್ಧಪಡಿಸಿಕೊಂಡ ನೈವೇದ್ಯ ಸಮರ್ಪಣೆಯನ್ನು ಈ ವಚನವನ್ನು ಹೇಳುತ್ತಾ ಮಾಡಬೇಕು:

ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರನೆರೆದರೆ
ಮೇಲೆ ಪಲ್ಲವಿಸಿತ್ತು ನೋಡಾ
ಲಿಂಗದ ಬಾಯಿ ಜಂಗಮವೆಂದು
ಪಡಿ ಪದಾರ್ಥವ ನೀಡಿದಡೆ
ಮುಂದೆ ಸಕಲ ಪಡಿ ಪದಾರ್ಥವನೀವನು
ಆ ಜಂಗಮವ ಹರನೆಂದು ಕಂಡು
ನರನೆಂದು ಭಾವಿಸಿದಡೆ
ನರಕ ತಪ್ಪದು ಕಾಣಾ ಕೂಡಲಸಂಗಮದೇವಾ -ಬಸವಣ್ಣನವರು, ೧-೪೨೧

ಕರಣೋದಕ: ತನ್ನಂತರಂಗದ ಒಳಗಿರುವ ಅರಿವು ಆಚಾರ ಅನುಭಾವದ ತತ್ವ ಗುರು, ಲಿಂಗ ಜಂಗಮದ ನೆನಹಿನಲ್ಲಿ ತನ್ನ ಬಲಗೈ ಐದೂ ಬೆರಳುಗಳಿಗೆ ಭಸ್ಮವನ್ನು ಧರಿಸಿಕೊಂಡು ಆ ಬೆರಳುಗಳನ್ನು ಸಿದ್ಧಪಡಿಸಿಕೊಂಡಿರುವ ಶುದ್ಧ ಜಲದಲ್ಲಿ ಅದ್ದಿ ಓಂ ಶ್ರೀ ಗುರು ಬಸವ ಲಿಂಗಾಯ ನಮ: ಮಂತ್ರವನ್ನು ಹನ್ನೆರಡು ಬಾರಿ ಪಠಿಸಿ ತನ್ನ ಇಷ್ಟಲಿಂಗದ ಮೇಲೆ ಐದೂ ಬೆರಳುಗಳಿಂದ ಈ ಕೆಳಗಿನ ವಚನವನ್ನು ಹೇಳುತ್ತಾ ಜಲವನ್ನು ಮೂರುಬಾರಿ ಎರೆದು ಶಬ್ದ ಮಾಡದಂತೆ ಅತ್ಯಂತ ಭಕ್ತಿ ಭಾವದಿಂದ ತಲೆಬಾಗಿ ಸ್ವೀಕರಿಸಬೇಕು. ತೇವವನ್ನು ಮುಖ ಕೈಗಳಿಗೆ ಸವರಿಕೊಳ್ಳಬೇಕು. (ವಸ್ತ್ರ ಮುಂತಾದವುಗಳಿಗೆ ಒರೆಸಬಾರದು.)

ಕರುಣ ಜಲ ವಿನಯಜಲ ಸಮತಾಜಲ
ಕರುಣಾ ಜಲವೇ ಗುರುಪಾದೋದಕ
ವಿನಯ ಜಲವೇ ಲಿಂಗಪಾದೋದಕ
ಸಮತಾ ಜಲವೇ ಜಂಗಮ ಪಾದೋದಕ
ಗುರು ಪಾದೋದಕದಿಂದ ಸಂಚಿತಕರ್ಮನಾಸ್ತಿ
ಲಿಂಗ ಪಾದೋದಕದಿಂದ ಪ್ರಾರಬ್ಧಕರ್ಮನಾಸ್ತಿ
ಜಂಗಮ ಪಾದೋದಕದಿಂದ ಆಗಮಿಕರ್ಮನಾಸ್ತಿ
ಇಂತೀ ತ್ರಿವಿಧೋದಕದಿಂದ ತ್ರಿವಿಧಕರ್ಮನಾಸ್ತಿ
ಇದು ಕಾರಣ ಕೂಡಲ ಚೆನ್ನಸಂಗಮದೇವಾ
ತ್ರಿವಿಧೋದಕವ ನಿಮ್ಮ ಶರಣನೇ ಬಲ್ಲ. -ಚೆನ್ನಬಸವಣ್ಣ, ೩-೧೦೯೫

ಗುರುಪಾದೋದಕದಿಂದ ಸ್ಕೂಲದೇಹ ಶುದ್ಧಿ
ಕ್ರಿಯಾ ಪಾದೋದಕದಿಂದ ಸೂಕ್ಷ್ಮದೇಹ ಶುದ್ದಿ
ಜ್ಞಾನ ಪಾದೋದಕದಲ್ಲಿ ಕಾರಣಿಕ ದೇಹ ಶುದ್ದಿ
ಗುರುಪಾದೋದಕದಲ್ಲಿ ಇಷ್ಟಲಿಂಗ ಸಂಬಂಧ
ಕ್ರಿಯಾ ಪಾದೋದಕದಿಂದ ಪ್ರಾಣಲಿಂಗ ಸಂಬಂಧ
ಜ್ಞಾನ ಪಾದೋದಕದಿಂದ ಭಾವಲಿಂಗ ಸಂಬಂಧ
ಅದು ಕಾರಣ ಪಾದೋದಕವೆ ಪ್ರತ್ಯಕ್ಷ ಪರಬ್ರಹ್ಮ ನೋಡಾ
ಕಪಿಲಸಿದ್ಧ ಮಲ್ಲಿಕಾರ್ಜುನ. -ಸಿದ್ಧರಾಮೇಶ್ವರರು

ಉದಕ ಹೋಗಿ ಗುರುಪಾದೋದಕವೆನಿಸಿತು
ಗುರು ಪಾದೋದಕ ಹೋಗಿ ಕ್ರಿಯಾ ಪಾದೋದಕವೆನಿಸಿತು
ಕ್ರಿಯಾ ಪಾದೋದಕ ಹೋಗಿ ಜ್ಞಾನ ಪಾದೋದಕವೆನಿಸಿತು
ಜ್ಞಾನ ಪಾದೋದಕವೇ ಶರಣನಾ ಮನದ ಮನೆಯಲ್ಲಿ
ಕಪಿಲಸಿದ್ಧ ಮಲ್ಲಿಕಾರ್ಜುನನಾಗಿ ನಿಂದಿತ್ತು -ಸಿದ್ದರಾಮೇಶ್ವರರು

ಇಷ್ಟಲಿಂಗಯ್ಯನಿಗೆ ನಮಸ್ಕರಿಸುತ್ತಾ ಬಟ್ಟೆಯಲ್ಲಿಟ್ಟು ಕರಡಿಗೆಯೊಳಗೆ ಮೂರ್ತ (ಕುಳ್ಳರಿಸಿಕೊಳ್ಳಬೇಕು) ಮಾಡಿಕೊಳ್ಳಬೇಕು.

ಪ್ರಸಾದ ಸ್ವೀಕಾರ : ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವನ್ನು ಗುರು ಲಿಂಗ ಜಂಗಮದ ಕರುಣ ಪ್ರಸಾದವಾಗಿ ಸ್ವೀಕರಿಸಬೇಕು. ಎಡೆ ತಟ್ಟೆಯಲ್ಲಿ ಪ್ರಸಾದವನ್ನು 'ಎಡೆ ಮಾಡಿಕೊಂಡು ಆ ಪ್ರಸಾದವನ್ನು ಲಿಂಗಯ್ಯನಿಗೆ ಅರ್ಪಿತ ಮಾಡಿ ಕಣ್ಣಿಗೆ ಒತ್ತಿಕೊಂಡು ಈ ಕೆಳಗಿನ ವಚನವನ್ನು ಹೇಳಿ ಪ್ರಸಾದ ಸ್ವೀಕರಿಸಬೇಕು. (ಆಹಾರವನ್ನು ಕೆಳಗೆ ಚೆಲ್ಲದೆ ಭಕ್ತಿ ಭಾವದಿಂದ ಆ ಪ್ರಸಾದ ಸ್ವೀಕರಿಸಬೇಕು)

ಆಯಿತ್ತು ಬಸವಾ ನಿನ್ನಿಂದ ಗುರು ಸ್ವಾಯುತವೆನಗೆ
ಆಯಿತ್ತು ಬಸವಾ ನಿನ್ನಿಂದ ಲಿಂಗ ಸ್ವಾಯುತವೆನಗೆ
ಆಯಿತ್ತು ಬಸವಾ ನಿನ್ನಿಂದ ಜಂಗಮ ಸ್ವಾಯುತವೆನಗೆ
ಆಯಿತ್ತು ಬಸವಾ ನಿನ್ನಿಂದ ಪ್ರಸಾದ ಸ್ವಾಯುತವೆನಗೆ
ಇಂತೀ ಚತುರ್ವಿಧ ಸ್ವಾಯುತವ ನೀನೇ ಆಗುಮಾಡಿದೆಯಾಗಿ
ನಮ್ಮ ಗುಹೇಶ್ವರ ಲಿಂಗಕ್ಕೆ ವಿಳಾಸವಾದೆಯಲ್ಲೈ
ಸಂಗನ ಬಸವಣ್ಣ -ಅಲ್ಲಮಪ್ರಭುದೇವರು, ೨-೯೦೭

ಪ್ರಸಾದವೇ ಪರಮ ಜ್ಞಾನ
ಪ್ರಸಾದವೇ ಪರಾಪರ
ಪ್ರಸಾದವೇ ಪರಬ್ರಹ್ಮ
ಪ್ರಸಾದವೇ ಪರಮಾನಂದ
ಪ್ರಸಾದವೇ ಗುರು
ಪ್ರಸಾದವೇ ಲಿಂಗ
ಪ್ರಸಾದವೇ ಜಂಗಮ
ಪ್ರಸಾದವೇ ಪರಿಪೂರ್ಣ
ಸೌರಾಷ್ಟ್ರ ಸೋಮೇಶ್ವರ ಲಿಂಗದ
ಪ್ರಸನ್ನತೆಯೇ ಪ್ರಸಾದ
ಇಂತಪ್ಪ ಪ್ರಸಾದದ ಮಹಾತ್ಮಗೆ ಆನು
ನಮೋ ನಮೋಯೆನುತಿರ್ದೆನು. -ಆದಯ್ಯ, ೬-೧೦೨೬

ಅಂಗದಲ್ಲಿ ಲಿಂಗವಿರಲು ಎನ್ನ ತನು ನಿರ್ಮಲವಾಯಿತ್ತು
ಮನದಲ್ಲಿ ಅರಿವಿರಲು ಎನ್ನ ಮನ ನಿರ್ಮಲವಾಯಿತ್ತು
ಪ್ರಾಣದಲ್ಲಿ ಪ್ರಸಾದವಿರಲು ಎನ್ನ ಪ್ರಾಣ ನಿರ್ಮಲವಾಯಿತ್ತು ಪಂಚೇಂದ್ರಿಯಗಳಲ್ಲಿ ಪಂಚಲಿಂಗವೆಡೆಗೊಂಡಿರಲು
ಇಂದ್ರಿಯಂಗಳು ನಿರ್ಮಲವಾದವು
ಸೌರಾಷ್ಟ್ರ ಸೋಮೇಶ್ವರನ ಶರಣರ ಸಂಗದಿಂದ
ಶಿವಪ್ರಸಾದ ದೊರಕೊಂಡಿತ್ತಾಗಿ ಸರ್ವಾಂಗಲಿಂಗವಾಯಿತ್ತು ಆದಯ್ಯ, ೬-೭೬೬

ಮೌನದಲುಂಬುದು ಆಚಾರವಲ್ಲ
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವ ಶರಣೆನ್ನುತ್ತಿರಬೇಕು
ಕರಣ ವೃತ್ತಿಗಳಡಗುವವು
ಕೂಡಲಸಂಗನ ನೆನೆವುತ್ತ ಉಂಡಡೆ. -ಬಸವಣ್ಣನವರು, ೧-೭೮೭

ದಿವ್ಯ ಇಷ್ಟಲಿಂಗ ಪೂಜೆಯ ಪರಿಮಳ ನಿತ್ಯ ಜೀವನ ಪುಷ್ಪದಲ್ಲಿ ಪಸರಿಸಿ ಜಂಗಮ ಸೇವೆಯಲ್ಲಿ ಸಾರ್ಥಕ್ಯ ಹೊಂದಲಿ ಎಂದು ಆಶಿಸಿ ಕಾಯಕ ಮುಖಿಯಾಗಬೇಕು ಅಂಗ ಲಿಂಗಮುಖಿಯಾಗಬೇಕು.
**

ಇಷ್ಟಲಿಂಗಯೋಗ

ಪದ್ಮಾಸನದಲ್ಲಿ ಕುಳ್ಳಿರ್ದು ಆಧಾರಮಂಬಲಿದು
ವಾಯುವ ಊರ್ಧ್ವಕ್ಕೆ ತಿದ್ದಿ
ಮನಪವನ ಬಿಂದುವ ತರಹಮ ಮಾಡಿ
ಷಡಾಧಾರ ಕಮಲನೂರ್ಧ್ವ ಮುಖವಂ ಮಾಡಿ
ಮೇಲಣ ಸಹಸ್ರಕರ್ಮ ಮಧ್ಯೆದೊಳಿಪ್ಪ ಜ್ಯೋತಿರ್ಲಿಂಗದಲ್ಲಿ
ಮನ ನಿಲಿಸಿ ನೆನೆನೆನೆದು
ಕೀಟ ಭೃಂಗ ನ್ಯಾಯಾದಂತಪ್ಪುದೆ ಯೋಗ
ರೇಕಣ್ಣ ಪ್ರಿಯನಾಗಿನಾಥ -ಬಹುರೂಪಿ ಚೌಡಯ್ಯ, ೮-೧೬೨

ಆಲಿನಿಂದೊಡೆ ಸುಳಿದು ಸೂಸುವ ಗಾಳಿ ನಿಲುವುದು
ಗಾಳಿ ನಿಲೆ ಮನ ಮೇಲೆ ನಿಲುವುದು
ಮನ ಮೇಲೆ ನಿಲೆ ಬಿಂದು ನಿಂದಿಹುದು
ಬಿಂದುವಿನ ಲೀಲೆಯಿಂದ ಕಾಲಕರ್ಮವ ಗೆದ್ದು
ಮಾಯೆಯ ಹೇಳಹೆಸರಿಲ್ಲೆನಿಸಬಹುದೈ ಬಸವ ಕೇಳೆಂದ. -ಚಾಮರಸ

ಆಕಾಶವ ಮೀರಿದ ತರು ಗಿರಿಗಳುಂಟೆ ?
ನಿರಾಕಾರವ ಮೀರಿದ ಸಾಕಾರವುಂಟೆ ?
ಗುಹೇಶ್ವರಲಿಂಗವ ಮೀರಿದ ಒಡೆತನವುಂಟೆ ? -ಅಲ್ಲಮಪ್ರಭು

ಲಿಂಗಾಯತರಲ್ಲಿ ಲಿಂಗಪೂಜೆಯ ಉದ್ದೇಶ ಆತ್ಮಾನುಭವವೇ ಮುಖ್ಯವಾಗಿರುತ್ತದೆ. ಅಂದರೆ ತನ್ನನ್ನು ತಾನು ತಿಳಿದು ಕೊಳ್ಳುವುದಾಗಿರುತ್ತದೆ. ಲಿಂಗಾಯತರು ದೇವರು ಸ್ವರ್ಗ ಕೈಲಾಸ ಅಥವಾ ಆಕಾಶ ಇಂಥ ಒಂದು ವಿಶಿಷ್ಟ ಸ್ಥಾನದಲ್ಲಿ ಇದ್ದಾನೆಂದು ತಿಳಿಯುವುದಿಲ್ಲ. ಅವನು ಚರಾಚರ ವಸ್ತುವಿನಲ್ಲಿ ಸಂಪೂರ್ಣವಾಗಿ ತುಂಬಿಕೊಂಡಿರುತ್ತಾ ನೆಂದು ತಿಳಿದಿದ್ದಾರೆ. ಆತನನ್ನು ತನ್ನಲ್ಲಿ ವ್ಯಕ್ತಗೊಳಿಸುವುದೇ ಮನುಷ್ಯನ ಕರ್ತವ್ಯವು. ಈ ಉದ್ದೇಶಕ್ಕೆ ಸಹಾಯಕವಾಗಿರುವ ಕರ್ಮಗಳನ್ನು ಮಾಡುವುದೇ ಲಿಂಗಪೂಜೆಯು, -ಡಾ. ಫ.ಗು. ಹಳಕಟ್ಟಿ

[1] ಈ ತರಹದ ಸಂಖ್ಯೆಯ ವಿವರ: ಸವಸ-1/554 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-554 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಇಷ್ಟಲಿಂಗ - FAQ ಇಷ್ಟಲಿಂಗ ಕುರಿತಾಗಿ ಸಮಸ್ಯೆ ? ಸಮಾಧಾನ ! Next