![]() | ಲಿಂಗಾಯತ ಧರ್ಮದ ಲಾಂಛನಗಳು | ಲಿಂಗಯೋಗ-ಸರ್ವಾಂಗ ಪರಿಪೂರ್ಣ ಯೋಗ | ![]() |
ಲಿಂಗಾಯತ ಧರ್ಮ ಮತ್ತು ಇಷ್ಟಲಿಂಗಪೂಜೆ |
✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
ವ್ಯಕ್ತಿ ಮತ್ತು ಸಮಾಜವನ್ನು ಸುವ್ಯವಸ್ಥಿತವಾಗಿ, ಸುಂದರವಾಗಿ, ಸಮಗ್ರವಾಗಿ ಮತ್ತು ದೈವೀಮಯವಾಗಿ ಎತ್ತಿಹಿಡಿಯುವ ತತ್ತ್ವ ವಿಶೇಷವೇ ಧರ್ಮ, ಯಾವ ವಿಚಾರ, ಆಚಾರಗಳ ಮೂಲಕ ಮಾನವನು ತನ್ನ ವೈಯಕ್ತಿಕ ಮತ್ತು ಸಾಮಾಜಿಕ ಅತ್ಯುನ್ನತ ಧೈಯಾದರ್ಶಗಳನ್ನು, ಗುರಿಗಮ್ಯಗಳನ್ನು ಮತ್ತು ಐಹಿಕ-ಆಮುಷ್ಟಿಕ ಮೌಲ್ಯಗಳನ್ನು ಸಾಧಿಸಬಲ್ಲನೋ ಆ ವಿಚಾರ-ಆಚಾರಗಳ ಸಮುಚ್ಚಯಕ್ಕೆ ಧರ್ಮವೆಂದು ಕರೆಯಬಹುದು.
ಧರ್ಮಕ್ಕೆ ಧರ್ಮಗುರು, ಸಾಹಿತ್ಯ, ಸಿದ್ಧಾಂತ, ಸಾಧನೆ, ದರ್ಶನ, ಸಂಸ್ಕಾರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ನೀತಿಶಾಸ್ತ್ರ, ಪರಂಪರೆ, ಸಂಸ್ಕೃತಿ ಎಂಬ ಏಕಾದಶ ಅಂಗಗಳುಂಟು. ಅದರಲ್ಲಿ ಸಾಧನೆಯ ವಿಭಾಗದಲ್ಲಿ ಬರುವ ಉಪಾಸನೆಯು ಧರ್ಮಪುರುಷನ ಹೃದಯ, ಈ ಉಪಾಸನೆಯು ಅರ್ಚನೆ, ಪ್ರಾರ್ಥನೆ ಮತ್ತು ಧ್ಯಾನಗಳೆಂಬ ತ್ರಿವಿಧ ಕ್ರಿಯೆಗಳ ಮೂಲಕ ಅಭಿವ್ಯಕ್ತವಾಗುತ್ತದೆ. ಮಾನವನು ತನ್ನ ಮೈ-ಮಾತು-ಮನಗಳೆಂಬ ತ್ರಿಕರಣಗಳಿಂದ ವಿಭೂತಿ ಪುರುಷರನ್ನಾಗಲೀ, ಪರಮಾತ್ಮನನ್ನಾಗಲೀ ಅರ್ಚಿಸುತ್ತಾನೆ, ಪ್ರಾರ್ಥಿಸುತ್ತಾನೆ. ಮತ್ತು ಧ್ಯಾನಿಸುತ್ತಾನೆ. ಧೂಪ- ದೀಪ, ಪತ್ರೆ-ಪುಷ್ಪ ಇತ್ಯಾದಿಗಳನ್ನು ಹಸ್ತಮುಖೇನ ಉಪಾಸ್ಯ ವಸ್ತುವಿಗೆ ಅರ್ಪಿಸಿ ಮಾಡುವುದು ಅರ್ಚನೆ. ಮಾತಿನಿಂದ ಉಪಾಸ್ಯ ವಸ್ತುವನ್ನು ಸ್ತುತಿಸುವುದು, ಬೇಡುವುದು ಮೊರೆಯಿಡುವುದು ಪ್ರಾರ್ಥನೆ; ಮನೋಮುಖದಿಂದ ಉಪಾಸ್ಯ ವಸ್ತುವಿನ ಚಿಂತನೆಗೈದು ಅನುಸಂಧಾನಗೈವುದೇ ಧ್ಯಾನ. ಇಲ್ಲಿ ಪ್ರಸ್ತಾಪಿಸಿರುವ ಮುಖ್ಯ ವಿಷಯ ದೇವ ಪೂಜೆ. ಇದನ್ನು ವೈಯಕ್ತಿಕವಾಗಿಯಾಗಲಿ ಸಾಮೂಹಿಕವಾಗಿಯಾಗಲಿ ಮಾಡಲು ಬರುವಂತೆ ಯೋಜಿಸಲಾಗಿದೆ.
ಅರ್ಚನೆ ಎಂದರೆ ಸಚ್ಚಿದಾನಂದ ಸ್ವರೂಪಿಯಾದ ಪರಮಾತ್ಮನನ್ನು ಜೀವಾತ್ಮನು ಆರಾಧನೆ ಮಾಡುವುದು. ಕೆಸರಿನಲ್ಲಿ ಸಿಕ್ಕ ಜೀವಿಯೊಂದನ್ನು ಅಲ್ಲಿಂದ ಮುಕ್ತಗೊಳಿಸಲು ಬೇರೊಂದು ಶಕ್ತಿಯ ಆಸರೆ ಬೇಕು. ಅದೇ ರೀತಿ ಮಾನವ ದೌರ್ಬಲ್ಯ, ವ್ಯಾಮೋಹದ ಪಂಕದಲ್ಲಿ ಸಿಕ್ಕಿಹ ವ್ಯಕ್ತಿಯನ್ನು ಅದರಿಂದ ಬಿಡುಗಡೆ ಮಾಡಲು ಬಂಧನರಹಿತವಾದ ಒಂದು ಶಕ್ತಿಯ ಸಹಾಯ ಹಸ್ತಬೇಕು. ಜನನ-ಮರಣಗಳ, ಸುಖ-ದುಃಖ ದ್ವಂದ್ವಗಳ ಜಂಜಡದಲ್ಲಿ ತೇಲುತ್ತ ಮುಳುಗುತ್ತ ಬಾಯ್ದಿಡುವ ಬದ್ಧಜೀವಿಯನ್ನು ಬಂಧನದಿಂದ ಬಿಡಿಸಲು ಒಂದು ದೈವೀಶಕ್ತಿಯ ಕಾರುಣ್ಯದ ನೆರವು ಬೇಕೆಂದು, ಅದನ್ನು ಪಡೆಯಲು ಮಾಡುವ ಕ್ರಿಯೆಯೇ ಅರ್ಚನೆ. ಸೃಷ್ಟಿಕರ್ತನನ್ನು ಒಪ್ಪುವ ಎಲ್ಲಾ ಸೇಶ್ವರವಾದಿ ಧರ್ಮಗಳೂ ಪರಮಾತ್ಮನ ಉಪಾಸನೆಗೆ ಆದ್ಯ ಸ್ಥಾನ ನೀಡುತ್ತವೆ. ಅರ್ಚನೆಯಲ್ಲಿ ಎರಡು ವಿಧ. ವೈಯಕ್ತಿಕ ಮತ್ತು ಸಾಮೂಹಿಕ ಎಂದು. ವ್ಯಕ್ತಿಯು ತನ್ನ ಆತ್ಮ ಕಲ್ಯಾಣಕ್ಕಾಗಿ ಏಕಾಂಗಿಯಾಗಿ ಕುಳಿತು, ದೇವನನ್ನಾಗಲೀ ವಿಭೂತಿ ಪುರುಷರನ್ನಾಗಲೀ ಅರ್ಚಿಸುವುದು ವೈಯಕ್ತಿಕ ಅರ್ಚನೆ. ಕುಟುಂಬದವರೆಲ್ಲರೂ ಅಥವಾ ಸಮಾಜ ಬಾಂಧವರು ಸಮಷ್ಟಿಯ ಉದ್ಧಾರ ಮತ್ತು ಸಮಾಜದ ಸಮುನ್ನತಿಗಾಗಿ ಒಂದೆಡೆ ಸಮಾವೇಶವಾಗಿ ದೇವನನ್ನು ಅಥವಾ ವಿಭೂತಿ ಪುರುಷರನ್ನು ಅರ್ಚಿಸುವುದು ಸಾಮೂಹಿಕ ಅರ್ಚನೆ.
1. ಒಬ್ಬನೇ ಕುಳಿತು, ತನ್ನ ಮನಸ್ಸನ್ನು ನಿಯಂತ್ರಣಕ್ಕೆ ತಂದುಕೊಂಡು ಕೆಲವು ನಿಮಿಷಗಳ ಕಾಲವಾದರೂ ಕುಳಿತುಕೊಳ್ಳಲಾರದವನು ಸಮುದಾಯದಲ್ಲಿ ಕುಳಿತಾಗ ಪರಿಸರದ ಪ್ರಭಾವದಿಂದಲಾದರೂ ಒಂದೆಡೆ ಕುಳಿತುಕೊಳ್ಳುವನು.
2. ಹಲವಾರು ಕೈಗಳು ಒಟ್ಟಾಗಿ ಸೇರಿ ಎಳೆದಾಗ ತೇರು ಮುಂದಕ್ಕೆ ಸರಿಯುವಂತೆ ಅನೇಕ ಚೇತನಗಳು ಒಂದೆಡೆ ಕುಳಿತು ಪೂಜಿಸಿದಾಗ ದೈವೀಕರುಣೆಯ ಅವತರಣ ಸುಲಭವಾಗಿ ಆಗುವುದು.
3. ಊದಿನ ಕಡ್ಡಿಯನ್ನು ಯಾರಾದರೂ ಪೂಜ್ಯರ ಸಲುವಾಗಿ ಹಚ್ಚಿಟ್ಟರೂ ಅದರ ಸುವಾಸನೆ ಸುತ್ತಲಿನವರಿಗೂ ಆನಂದವನ್ನು ನೀಡುವಂತೆ, ಒಂದು ಪವಿತ್ರಾತ್ಮ ಚೇತನದ ಕರೆಗೆ ಓಗೊಟ್ಟು ಕಾರುಣ್ಯವು (Grace) ಇಳಿದರೂ, ಅದರ ಪ್ರಭಾವ ಸುತ್ತಲಿನವರ ಮೇಲೂ ಆಗದಿರದು. ಹೀಗಾಗಿ ಅವರೂ ಸಹ ಪಾವನರಾಗುವರು - ಹೂವಿನಿಂದ ನಾರೂ ದೇವನ ಮುಡಿಯನ್ನೇರುವಂತೆ.
4. ಸಾಮೂಹಿಕ ಪೂಜೆಯು ಸಾಧಿಸಬಲ್ಲ ಮತ್ತೊಂದು ಪರಿಣಾಮವೆಂದರೆ ಸಮಾಜ ಸಂಘಟನೆ. ಒಂದೆಡೆ ಸಮಾವೇಶವಾಗುವ ಜನರಲ್ಲಿ ಜಾತಿ, ವರ್ಣ, ವರ್ಗ ಅಂತಸ್ತುಗಳ ಭೇದ ತೊಲಗಿ ನಾವುಗಳು ದೈವೀ ಕುಟುಂಬದವರು ಎಂಬ ಭಾವವು ಬಲಿಯುವುದು.
ನಮ್ಮ ಜನಾಂಗದಲ್ಲಿ ಈ ಸಮುದಾಯ ಜೀವನದ ಕೊರತೆ ಇದೆ ಎಂದೇ ಸಮಾಜದಲ್ಲಿ ಐಕ್ಯಭಾವ ಮೂಡುತ್ತಿಲ್ಲ. ವರ್ಗ-ವರ್ಣ-ಅಂತಸ್ತು ಭೇದಗಳು ಅಳಿಯುತ್ತಿಲ್ಲ. ಈ ಕೊರತೆ ಅಳಿಯಬೇಕಾದರೆ ವಾರಕ್ಕೊಮ್ಮೆಯಾದರೂ ಒಂದೆಡೆ ಸೇರುವ ಪರಿಪಾಠ ಬೆಳೆಯಬೇಕು. ಪೂಜೆ-ಪ್ರಾರ್ಥನೆಗಳಿಗಾಗಿ ಬಸವ ಮಂಟಪ ಎಂಬ ಆಧ್ಯಾತ್ಮ ಮಂದಿರಗಳ ರಚನೆಯಾಗಬೇಕು.
ಪೂಜೆಗೆ ಭಾರತೀಯ ಮತ್ತು ಶೈವ ಸಂಸ್ಕೃತಿಯ ಹಿನ್ನೆಲೆಯಲ್ಲಿ ಸೋಮವಾರವು ಒಳಿತು. ಆದರೆ ಸಾಮೂಹಿಕ ರಜಾದಿನ ಅಂದು ಇಲ್ಲದ ಕಾರಣ ಭಾನುವಾರವನ್ನು ಆರಿಸಿಕೊಳ್ಳಬಹುದು. ಆಧ್ಯಾತ್ಮ ಜೀವಿಗಳು ಸಾಮೂಹಿಕ ಪೂಜೆಯಲ್ಲಿ ಭಾಗವಹಿಸಲು ಆಗದಿದ್ದಾಗ ತಮ್ಮ ಕುಟುಂಬದ ಸದಸ್ಯರೊಡನೆಯಾದರೂ ಕುಳಿತು ಆ ವೇಳೆಗೆ ಸರಿಯಾಗಿ ಅರ್ಚನೆಗೈಯಬೇಕು. ಇದರಿಂದ ನಿಷ್ಠೆಯು ಗಟ್ಟಿಗೊಳ್ಳುತ್ತ ಹೋಗುವುದು. ಮಠ-ಮಂದಿರ-ಆಶ್ರಮಗಳಲ್ಲಿ ವಾರಕ್ಕೊಮ್ಮೆಯಾದರೂ ಸೇರಿ ಸಾಮೂಹಿಕವಾಗಿ ಅರ್ಚನೆ ಮಾಡುವ ಪರಿಪಾಠ ಬೆಳೆಯಬೇಕು.
ಸಮಾಜ ಬಾಂಧವರು ಸೇರಬಲ್ಲ ದಿನವನ್ನು ಮತ್ತು ಸೂಕ್ತವೇಳೆಯನ್ನು ನಿಶ್ಚಿತಪಡಿಸಬೇಕು. ಅದರಂತೆ ಒಂದು ಎಡೆಯಲ್ಲಿ ಸಮಾವೇಶವಾಗಬೇಕು. ಬರುವ ಮುನ್ನ ಸ್ನಾನ ಮಾಡಿ, ಶುಚಿರ್ಭೂತರಾಗಿ ಬಟ್ಟೆ ಧರಿಸಿ ಸಾಮೂಹಿಕ ಪೂಜೆಗೆ ಬರಬೇಕು. ಪೂಜೆ ಮಾಡುವ ಮಂದಿರ, ಪರಿಸರ ಸ್ವಚ್ಛವಾಗಿ ಇರಬೇಕು. ಸುವಾಸನೆಯ ಊದಿನ ಕಡ್ಡಿಗಳನ್ನು ಹಚ್ಚಿಟ್ಟಿರಬೇಕು. ವೇದಿಕೆಯ ಮೇಲೆ, ಎದುರಿಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅಥವಾ ಅಮೃತ ಶಿಲಾಪುತ್ಥಳಿ ಇರಬೇಕು.
ಪೂಜೆಯನ್ನು ಮಾಡಿ ತೋರಿಸುವ ಗುರುಮೂರ್ತಿ'ಯು ಕುಳಿತುಕೊಳ್ಳಲು ಸ್ವಲ್ಪ ಎತ್ತರದ ಆಸನ ಇರಬೇಕು. ಅವನು ಎಲ್ಲರನ್ನು ಗಮನಿಸುವ ಅಥವಾ ಸಭಿಕರು ಅವನನ್ನು ಸ್ಪಷ್ಟವಾಗಿ ನೋಡುವ ಅವಕಾಶವಿರಬೇಕು. ಪೂಜಿಸುವ ಉಳಿದ ಸಭಿಕರಿಗೆ ನೆಲದ ಮೇಲೆ ರತ್ನಗಂಬಳಿ, ಚಾಪೆ ಮುಂತಾದ ಹಾಸನ್ನು ಹಾಸಿರಬೇಕು. ನೆಲದ ಮೇಲೆ ನೇರವಾಗಿ ಕುಳಿತುಕೊಳ್ಳಬಾರದು. ವಿರಳವಾಗಿ ಕುಳಿತುಕೊಳ್ಳಬೇಕು. ಸುಖಾಸನ, ಸ್ವಸ್ತಿಕಾಸನ, ಸಿದ್ಧಾಸನ, ಪದ್ಮಾಸನಗಳನ್ನು ತಮ್ಮ ಸಾಧನೆಗೆ ತಕ್ಕಂತೆ ಬಳಸಿಕೊಳ್ಳಬಹುದು.
ಸಾಮೂಹಿಕ ಪೂಜಾ ಕಾರ್ಯಕ್ರಮವನ್ನು ಸುಶ್ರಾವ್ಯ ಕಂಠವಿರುವವರು ನಡೆಸಬೇಕು. ಮಾಡುವವರು ಮತ್ತು ಮಾಡಿಸುವವರು ಉಭಯತರೂ ಅಂತರ್ಮುಖಿಗಳಾಗಿ ಹೊರಗಿನ ವ್ಯವಹಾರಗಳ ಚಿಂತನೆಯನ್ನು ಮಾಡದೆ ಏಕಾಗ್ರಚಿತ್ತದಿಂದ ಅರ್ಚನೆಗೈಯಬೇಕು.
ಪೂಜೆಯಲ್ಲಿ ಭಾಗವಹಿಸುವ ಆಧ್ಯಾತ್ಮ ಜೀವಿಗಳು ತಾವು ಪಡೆದ ಆನಂದವನ್ನು ಅನ್ಯರಿಗೂ ಹಂಚಬೇಕೆಂಬ ಮನೀಷೆಯಿಂದ ಇತರರಿಗೂ ತಿಳಿಸಿ ಕರೆತರುವ ಪ್ರಯತ್ನ ಮಾಡಬೇಕು. ಜನರಲ್ಲಿ ದೇವರು, ಪೂಜೆಯತ್ತ ಒಲವನ್ನು ಹುಟ್ಟಿಸುವ ದಿಶೆಯಲ್ಲಿ ನಿಷ್ಠೆಯಿಂದ ಕಾರ್ಯೋನ್ಮುಖರಾಗಬೇಕು. ಇದು ಪ್ರತಿಯೋರ್ವನ ಪವಿತ್ರ ಕರ್ತವ್ಯ.
“ದೇವನಿದ್ದಾನೆ ಎಂದು ನಂಬಿದರೆ ಸಾಕು, ಪೂಜೆಯ ಆವಶ್ಯಕತೆ ಏನಿದೆ?” ಎಂದು ವಾದಿಸುವವರೂ ಉಂಟು. ಪೂಜೆಯು ಒಂದು ಕೃತಜ್ಞತಾ ಸಮರ್ಪಣೆ (Thanks giving)
ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ನಿಮ್ಮ ದಾನ
ಎಂದು ಜೇಡರ ದಾಸಿಮಯ್ಯನವರು ನುಡಿವಂತೆ ಇಳೆ ಬೆಳೆ ಸಮಸ್ತ ಸೃಷ್ಟಿಯು ಪರಮಾತ್ಮನ ದಾನ. ಆದ್ದರಿಂದ ಇಂತಹ ದಾನವನ್ನಿತ್ತ ದಾತನನ್ನು ಮರೆಯುವುದು ಉಚಿತವೇ?
ಮಹಾದಾನಿ ಕೂಡಲಸಂಗಮದೇವನ ಪೂಜಿಸಿ
ಬದುಕು ಈ ಕಾಯವ ನಿಶ್ಚಿಸದೆ! !
ಎಂದು ವಿಶ್ವಗುರು ಬಸವಣ್ಣನವರು ಹೇಳುವಂತೆ ಸೃಷ್ಟಿಯನ್ನು ಇತ್ತ ಮಹಾದಾತನಿಗೆ ನಿತ್ಯವೂ ಕೃತಜ್ಞತಾ ಸಮರ್ಪಣೆಗೈಯಬೇಕು. ಆ ನಿರೂಪಿಯಾದ, ಅನಂತನಿಗೆ ಮಾಡುವುದೆಂತು? ಬಯಲಿಗೆ ಬಟ್ಟೆ ತೊಡಿಸುವ ಸಾಹಸವಿದಲ್ಲವೇ? ಇದನ್ನರಿತು “ಅರಿಯಬಾರದ ಲಿಂಗವ, ಆಕಾರವಿಲ್ಲದ ದೇವನ” ಇಷ್ಟಲಿಂಗಾಕಾರಕ್ಕೆ ತಂದು ಪೂಜಿಸಲು ಹೇಳಿದರು ಧರ್ಮಗುರು ಬಸವಣ್ಣನವರು.
“ದೇವಾ, ಸಮಸ್ತ ಸೃಷ್ಟಿಗೆ ಕರ್ತೃವಾದ ನಿನಗೆ ನಾನು ಉದಕ ಎರೆಯಲು ಸಮರ್ಥನೆ? ಇಲ್ಲ. ಆದರೆ ಎದೆಗುಂದದೆ ಸಾಂಕೇತಿಕವಾಗಿ ಮಜ್ಜನವನ್ನೆರೆವೆ. ಉಸಿರಾಡಲು ಗಾಳಿಯನ್ನಿತ್ತ ಲೋಕದ ಪ್ರಾಣನಾದ ನಿನಗೆ ಸುಗಂಧ ಮಿಶ್ರಿತ ವಾಯುವನ್ನು ಧೂಪಾರ್ಪಣೆಯ ಮೂಲಕ ಸಲ್ಲಿಸುವೆ. ರವಿ-ಶಶಿಯರೆಂಬ ಲೋಕಾರತಿಗಳನ್ನಿತ್ತ ನಿನಗೆ ಕಿರು ಹಣತೆಯ ಹಚ್ಚುವೆ. ಸಚರಾಚರಕ್ಕೆಲ್ಲ ಜೀವಸತ್ಯ ಕೊಡುವ ನಿನಗೆ ನೈವೇದ್ಯವ ಸಲ್ಲಿಸುವೆ. ನಿನ್ನ ತೃಪ್ತಿಗಾಗಿ, ಬೃಹದೊಡಲು ತುಂಬಲು ಎಂಬ ಅಹಂಕಾರಭಾವದಿಂದಲ್ಲ. ಸಲ್ಲಿಸುವುದರಲ್ಲೇ ನನಗೆ ಆನಂದ, ನನ್ನ ಮನಃತೃಪ್ತಿಗಾಗಿ ನಿನಗೆ ಸಲ್ಲಿಸುವೆ.” ಈ ಭಾವನೆಯಿಂದ ದೇವನ ಋಣವನ್ನು ತೀರಿಸಬೇಕು, ಸ್ಮರಿಸಬೇಕು.
ಪೂಜೆಯ ಇನ್ನೊಂದು ಉದ್ದೇಶ, ಪೂಜ್ಯ ವಸ್ತುವೇ ತಾನಾಗಬೇಕೆಂದು. ಸತ್- ಚಿತ್-ಆನಂದ-ನಿತ್ಯ-ಪರಿಪೂರ್ಣನಾದ ಪರವಸ್ತುವನ್ನು ಪೂಜಿಸುವ ಉದ್ದೇಶ ತಾನೂ ಆ ಸ್ವರೂಪನಾಗಬೇಕೆಂದು. ಪೂಜೆಯ ಮತ್ತೊಂದು ಗುರಿ ಸದ್ಗುಣ ಸಂಪದವನ್ನು ಅಳವಡಿಸಿಕೊಳ್ಳುವುದು.
1. ಎನಿಸು ಕಾಲ ಕಲ್ಲು ನೀರೊಳಗಿರ್ದರೇನು ?
ನೆನೆದು ಮೃದುವಾಗಬಲ್ಲುದೇ ?
2. ಕೊಳಲ ದನಿಗೆ ಸರ್ಪ ತಲೆದೂಗಿದರೇನು ?
ಒಳಗಣ ವಿಷವ ಬಿಡದನ್ನಕ್ಕ !
3. ಎನಿಸು ಕಾಲ ಪೂಜಿಸಿ ಏವೆನಯ್ಯಾ ಮನಮುಟ್ಟದನ್ನಕ್ಕ ?
ಎಂಬ ಪರಿಯಲ್ಲಿ ಸಹಸ್ರಾರು ದಿನ ಪರ್ಯಂತರ ಪೂಜೆಗೈದರೂ ಸದಾಚಾರ ಸದ್ಭಕ್ತಿ ಇಲ್ಲದವರ ಆರಾಧನೆ ದಂಡವಾಗುವುದೇ ವಿನಾ ದೇವರನ್ನೊಲಿಸದು. ಆದ್ದರಿಂದ ದೇವರಿಗೆ ನಾವು ಅರ್ಪಿಸುವ ಪರಿಕರಗಳು ಒಂದೊಂದು ಗುಣವನ್ನು ಪ್ರತಿನಿಧಿಸುವ ಕಾರಣ ನಾವು ಆ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಅದನ್ನು ಜಗನ್ಮಾತಾ ಅಕ್ಕಮಹಾದೇವಿಯವರು ಹೀಗೆ ಹೇಳುತ್ತಾರೆ.
ತನುಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಭಾವ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಅರಿವು ಕಣ್ಣೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ಹೃದಯ ಕಮಲ ಶುದ್ಧವಿಲ್ಲದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಎನ್ನ ಕರಸ್ಥಲವ ಇಂಬುಗೊಂಡೆ ಹೇಳಾ
ಚನ್ನಮಲ್ಲಿಕಾರ್ಜುನಾ.
ಈ ರೀತಿ ಸದ್ಗುಣ ಸಮುಚ್ಚಯವನ್ನು ಅಳವಡಿಸಿಕೊಳ್ಳುವ ಗುರಿಯಿಂದ ದೈವೀ ಶ್ರದ್ಧೆ ಶರಣಾಗತಿ ಭಾವದಿಂದ ಕೃತಜ್ಞತಾಪೂರ್ವಕವಾಗಿ ನಾವು ಆರಾಧಿಸಬೇಕು.
ನಿತ್ಯ ಲಿಂಗಾರ್ಚನೆ ಒಂದು ಗಾರುಡ ವಿದ್ಯೆ. ಹೇಗೆ ಹಾವನ್ನು ಹಿಡಿಯಲಿಚ್ಛಿಸುವ, ಆಡಿಬಯಸುವವನು ವಿಷವೈರಿ ಮದ್ದನ್ನು ಸದಾ ಇರಿಸಿಕೊಳ್ಳುವನೋ ಹಾಗೆ ಸಂಸಾರವೆಂಬ ಸರ್ಪದೊಡನೆ ಆಡಬಯಸುವ ಜೀವಿಯೂ ಪೂಜೆಯೆಂಬ ಮದ್ದನ್ನು ಅಥವಾ ಗಾರುಡ ವಿದ್ಯೆಯನ್ನು ಸಂಪಾದಿಸಿಕೊಳ್ಳಬೇಕು
ಮನವೇ ಸರ್ಪ, ತನುವೇ ಹೇಳಿಗೆ
ಹಾವಿನೊಡತನ ಹುದುವಾಳಿಗೆ !
ಇನ್ನಾವಾಗ ಕೊಂದಹುದೆಂದರಿಯೆ;
ಇನ್ನಾವಾಗ ತಿಂದಹುದೆಂದರಿಯೆ !
ನಿಚ್ಚ ನಿಚ್ಚಕ್ಕೆ ಪೂಜಿಸಬಲ್ಲಡೆ
ಅದೇ ಗಾರುಡ, ಕೂಡಲಸಂಗಮದೇವಾ !
ಇಲ್ಲಿ ಪ್ರತಿಪಾದಿತವಾಗುವ ವಿಷಯ ಇಷ್ಟಲಿಂಗಾರ್ಚನಾ ಕ್ರಮ. ಬಸವ ಧರ್ಮವು ಕ್ರಾಂತಿಯನ್ನು ಗೈದುದು ಇಷ್ಟಲಿಂಗವೆಂಬ ತತ್ತ್ವದ ಮೇಲೆ. “ಎಲ್ಲರೂ ಪೂಜಿಸಬಲ್ಲರು, ಮೋಕ್ಷ ಸಂಪಾದನೆಯ ಮಾರ್ಗವು ಸರ್ವಮಾನವರ ಜನ್ಮಸಿದ್ಧಹಕ್ಕು” ಎಂಬ ಧಾರ್ಮಿಕ ಸ್ವಾತಂತ್ರ್ಯವನ್ನು; ದೇವಾಲಯಗಳು ಅಸ್ಪೃಶ್ಯರನ್ನು ಬಹಿಷ್ಕರಿಸಿದಾಗ, ಅವುಗಳನ್ನೇ ಬಹಿಷ್ಕರಿಸಿ ದೇಹದೇವಾಲಯ ಮಾಡಿಕೊಳ್ಳಲು ಬೋಧಿಸಿದ ಸಾಮಾಜಿಕ ಸ್ವಾತಂತ್ರ್ಯವನ್ನು ಕಾರ್ಯಾಚರಣೆಗೆ ತಂದ ವಿನೂತನ ಸೂತ್ರ ಇಷ್ಟಲಿಂಗ ! ಭಕ್ತಿ, ಶ್ರದ್ಧೆಗಳ ತೃಪ್ತಿಗಾಗಿ ಕಾಕುಪೋಕು ದೇವರುಗಳನ್ನು ಪೂಜಿಸುವ ಮೂಢಮತಿಗಳ ಅಂಧ ಭಕ್ತಿಯನ್ನು ತೊಡೆದು ಹಾಕಿ ದೇವರ ನಿಜವಾದ ಸ್ವರೂಪದ ತಿಳುವಳಿಕೆ ಮಾಡಿಕೊಟ್ಟು ಬಹುದೇವತೋಪಾಸನೆಯನ್ನು ವಿರೋಧಿಸಿ ಏಕದೇವೋಪಾಸನೆಯನ್ನು ಆಚರಣೆಗೆ ತಂದ ವೈಚಾರಿಕ, ತಾತ್ವಿಕ ಕುರುಹು ಇಷ್ಟಲಿಂಗ.
ಇದು ಸಾಮಾಜಿಕ, ಯೋಗಿಕ, ತಾತ್ವಿಕ, ಧಾರ್ಮಿಕ ನಾಲ್ಕೂ ಬಗೆಯ ಅರ್ಥವ್ಯಾಪ್ತಿ, ಉಪಯುಕ್ತತೆ ಒಳಗೊಂಡುದು. ಪರಮಾತ್ಮನನ್ನು ಸಾಕಾರಗೊಳಿಸಿ ಪೂಜಿಸುವ ಕಲ್ಪನೆಯಲ್ಲಿ ಅತ್ಯಂತ ವೈಚಾರಿಕವಾದುದು. ಜಗತ್ತಿನಲ್ಲಿ ಪ್ರಚಲಿತವಿರುವ ಎಲ್ಲ ಉಪಾಸ್ಯ ವಸ್ತುಗಳನ್ನು ಏಳು ಪ್ರಕಾರವಾಗಿ ವಿಂಗಡಿಸಬಹುದು ಭೂತ-ಪ್ರೇತಪೂಜೆ ದೇವತಾಪೂಜೆ, ಪಂಚಭೂತಪೂಜೆ, ಪ್ರಾಣಿಪೂಜೆ, ಪಿತೃಪೂಜೆ, ವಿಭೂತಿಪೂಜೆ ಮತ್ತು ದೇವಪೂಜೆ. ಕಾಲ್ಪನಿಕ ಚಿತ್ರ-ವಿಚಿತ್ರ ಆಕಾರಗಳುಳ್ಳ ಅಥವಾ ಹಿಂದೂ ಇಂದೂ ಮುಂದೂ ಅಸ್ತಿತ್ವದಲ್ಲಿಲ್ಲದೇ ಭಯ ಭೀತಿಯಿಂದ ಕಲ್ಪಿಸಿಕೊಂಡವು ಭೂತ-ಪ್ರೇತಗಳು, ಪುರಾಣಕರ್ತೃಗಳ ತಲೆಯಲ್ಲಿ ಮಾತ್ರ ಅಸ್ತಿತ್ವವನ್ನುಳ್ಳ ಆಕಾರಗಳೇ ದೇವತೆಗಳು. ಮೂರನೆಯದಾಗಿ ನಿಸರ್ಗದಲ್ಲಿರುವ ಸ್ಕೂಲವಸ್ತುಗಳನ್ನು ಅವುಗಳಲ್ಲಿ ಏನೋ ಶಕ್ತಿ ಇದೆಯೆಂದು ಭಾವಿಸಿ ಪೂಜಿಸುವುದು. ನಾಲ್ಕನೆಯದಾಗಿ ಪ್ರಾಣಿ ಪೂಜೆಯಲ್ಲಿ ಕೃತಜ್ಞತಾಪೂರ್ವಕ ದೃಷ್ಟಿಯಿಂದ ಉಪಯುಕ್ತ ಪ್ರಾಣಿಗಳನ್ನು ಪೂಜಿಸುವುದು ಅಥವಾ ಕೆಡುಕು ಮಾಡದಿರಲೆಂಬ ದೃಷ್ಟಿಯಿಂದ ಅಪಾಯಕಾರಿ ಪ್ರಾಣಿಗಳನ್ನು ಪೂಜಿಸುವುದು ಈ ನಾಲ್ಕೂ ಭಯಕಲ್ಪಿತ ಪೂಜೆಗಳು. ಐದನೆಯದು ಪಿತೃಪೂಜೆ. ವಿಭೂತಿ ಪೂಜೆ ಮತ್ತು ದೇವಪೂಜೆಗಳು ಜ್ಞಾನ ಪ್ರಧಾನವಾದವು. ಏನಾದರೂ ಮಹೋನ್ನತ ಸಂದೇಶವನ್ನು ಕೊಟ್ಟು ಪಥದರ್ಶಕ ದೀಪ್ತಿಗಳಾದ ವಿಭೂತಿಪುರುಷರನ್ನು ಮತ್ತು ಸೃಷ್ಟಿಯನ್ನಿತ್ತ ದೇವನನ್ನು ಪೂಜಿಸುವವು ಮೇಲ್ಮಟ್ಟದ ಪೂಜೆಗಳು, ಮಹಾತ್ಮರನ್ನು, ವಿಭೂತಿ ಪುರುಷರನ್ನೇನೋ ಮೂರ್ತಿಕರಿಸಿ ಆರಾಧಿಸಬಹುದು. ಬುದ್ಧ, ಮಹಾವೀರ, ಬಸವ, ಗಾಂಧೀಜಿ ಮುಂತಾದವರ ಆರಾಧನೆ ಸುಲಭ ಸಾಧ್ಯ. ಆದರೆ ದೇವರನ್ನೆಂತು ಸಾಕಾರಗೊಳಿಸುವುದು? ಅತ್ಯಂತ ಅಸಹಜ ರೀತಿಯಲ್ಲಿ, ಬುದ್ಧಿವಿರೋಧಿ ರೀತಿಯಲ್ಲಿ ಸ್ಥೂಲೀಕರಿಸಿದಾಗ ಬ್ರಹ್ಮ-ವಿಷ್ಣು-ರುದ್ರರಂತಹ ಪೌರಾಣಿಕ ಕಲ್ಪನೆ ಬಂದವು. ಇವು ತಾತ್ವಿಕವಾಗಿ ಉಳಿಯುವುದು ಅಸಂಭವ; ವೈಚಾರಿಕ ಮಟ್ಟದಲ್ಲಿ ಸಾಕಾರಗೊಳಿಸಿ ಪೂಜಿಸುವುದು ಅಸಾಧ್ಯವೆಂದು ದೇವರನ್ನು ನಂಬಿ ಕೇವಲ ಪ್ರಾರ್ಥಿಸಿದರು ಇಸ್ಲಾಮೀಯರು. ಈ ಸಮಸ್ಯೆಗೆ ಅತ್ಯದ್ಭುತ ರೀತಿಯಲ್ಲಿ ಪರಿಹಾರ ಕಂಡುಹಿಡಿದರು ಧರ್ಮವಿಜ್ಞಾನಿ ಬಸವಣ್ಣನವರು.
ದೇವನು ನಿರಾಕಾರ, ಯಾವ ಆಕಾರ ಕೊಟ್ಟರೂ ಅವನಿಗೆ ಅದು ಅಪಚಾರ. ಪರಾತ್ಪರ ವಸ್ತುವು ಪ್ರಕಟವಾಗುವುದು ವಿಶ್ವದ ಮೂಲಕ, ವಿಶ್ವವು ಅವನ ಆಲಯ; ಅದಿರುವುದು ಗೋಲಾಕಾರದಲ್ಲಿ, ಗೋಲಾಕಾರವು ಬ್ರಹ್ಮಾಂಡದ ಆಕಾರವಷ್ಟೇ ಅಲ್ಲ ಪರಿಪೂರ್ಣತೆಯ ಸಂಕೇತ; ಅಂದಾಗ ಪರಿಪೂರ್ಣನಾದ ಪರಮನನ್ನು ಗೋಲಾಕಾರದಲ್ಲೇಕೆ ಚಿತ್ರಿಸಬಾರದು? ಪರಮಾತ್ಮನೊಂದು ಸತ್ಯವಾದಂತೆ, ಆತ್ಮವೂ, ಇನ್ನೊಂದು ಸತ್ಯ; ಆತ್ಮನು ವ್ಯಕ್ತವಾಗುವುದು ಶರೀರದ ಮಾಧ್ಯಮದಲ್ಲಿ. ಅದನ್ನು ಯೋಗಮಗ್ನ ಶಾಂಭವೀ ಮುದ್ರೆಯಲ್ಲಿ ಚಿತ್ರಿಸಿದರೆ ಒಳಿತಲ್ಲವೇ! ಪರಮಾತ್ಮನ ಗರ್ಭದಲ್ಲಿ ಜೀವಾತ್ಮನಿದ್ದಾನೆ, ಬ್ರಹ್ಮಾಂಡದಲ್ಲಿ ಪಿಂಡಾಂಡವಿದೆ. ಅಂದಾಗ ಬ್ರಹ್ಮ ಸಾಂಕೇತಿಕ ಗೋಲಾಕಾರದ ಕಂತೆಯಲ್ಲಿ ಶಾಂಭವೀ ಮುದ್ರೆಯಾಕಾರದ ಆತ್ಮನ ಸಾಂಕೇತಿಕ ಪಂಚಸೂತ್ರಲಿಂಗ ಕೊಟ್ಟುದಲ್ಲದೇ, ಇಷ್ಟಲಿಂಗವನ್ನು ಕೇವಲ ತತ್ತ್ವಜ್ಞಾನದ ವಸ್ತುವನ್ನಾಗಿ ಮಾಡದೇ, ತ್ರಾಟಕ ಯೋಗಸಾಧನೆಗೆ ಅನುವಾಗುವ ಯೋಗಿಕ ಕುರುಹನ್ನಾಗಿ ರೂಪಿಸಿದವರು ಬಸವಣ್ಣನವರು, ಹೊಳಪುಳ್ಳ ಗೋಲಾಕಾರದ ಕಂತೆಯ ಹೊದ್ದಿಕೆ ಕಪ್ಪು ಕಣ್ಣಾಲಿಗಳನ್ನು ಆಕರ್ಷಿಸುವ, ಒಲಿಸುವ, ನಿಲ್ಲಿಸುವ, ಲಯಗೊಳಿಸುವ ಸಾಮರ್ಥ್ಯ ಪಡೆಯಿತು. ಹೀಗೆ ನಿರಾಕಾರ ದೇವನನ್ನು ಮೂರ್ತಿಯಲ್ಲದ ಸಾಕಾರದಲ್ಲಿ ಚುಳುಕೀಕರಿಸುವ ಅಸಾಮಾನ್ಯ ಪ್ರಯತ್ನದಿಂದಾಗಿ, ಇಷ್ಟಲಿಂಗ ಪೂಜೆ ಮಾತ್ರವೇ ಇಡೀ ಜಗತ್ತಿನಲ್ಲಿ ದೇವರ ಪೂಜೆ ಎಂದರೆ ಉತ್ಪ್ರೇಕ್ಷೆಯಾಗದು.
ಗ್ರಂಥ ಋಣ:
೧) ದೇವ ಪೂಜಾ ವಿಧಾನ, ಲೇಖಕರು: ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
![]() | ಲಿಂಗಾಯತ ಧರ್ಮದ ಲಾಂಛನಗಳು | ಲಿಂಗಯೋಗ-ಸರ್ವಾಂಗ ಪರಿಪೂರ್ಣ ಯೋಗ | ![]() |