Previous ಕಾಯಕದ ಆರ್ಥಿಕ ಮತ್ತು ಸಾಮಾಜಿಕ ಮುಖ ತ್ರಿವಿಧ ದಾಸೋಹ Next

ಕಾಯಕ-ದಾಸೋಹ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಕಾಯಕ-ದಾಸೋಹ

ಕಾಯಕ ಸಿದ್ಧಾಂತದ ಪೂರ್ವಾರ್ಧ ಗಳಿಕೆಯ ಬಗೆಯನ್ನು ತಿಳಿಸಿದರೆ ಉತ್ತರಾರ್ಧವು ಬಳಕೆಯನ್ನು ಕುರಿತು ಹೇಳುತ್ತದೆ. ಅದುವೇ ದಾಸೋಹ, ದಾಸೋಹವೆಂದರೆ ಯಾರಿಗಾದರೂ ಉಣ್ಣಿಸುವುದು ಮಾತ್ರವಲ್ಲ ಅದು ಒಂದು ತಾತ್ವಿಕ ಆಚರಣೆ, ಸತ್ಯತೆ, ಶುದ್ಧತೆ, ದೈವೀಶರಣಾಗತಿಗಳಿಂದ ಕೂಡಿದ ಉದ್ಯೋಗವೇ ಕಾಯಕ ಎಂಬುದು ಒಂದು ಬಗೆಯ ವಿವರಣೆಯಾದರೆ, ಗಳಿಸಿದ ಅರ್ಥವನ್ನು ದಾಸೋಹದ ಮೂಲಕ ವಿನಿಯೋಗ ಮಾಡುತ್ತಿದ್ದರೆ ಮಾತ್ರ ಅಂಥ ವ್ಯಕ್ತಿ ಗಳಿಕೆಗಾಗಿ ಮಾಡಿದುದು ಕಾಯಕ, ದಾಸೋಹವಿಲ್ಲದೆ ಕಾಯಕ ಕಾಯಕವಾಗದು. ಕಾಯಕವಿಲ್ಲದೆ ಗಳಿಸಿದಾಗ ಮಾಡುವ ದಾನವು ದಾಸೋಹವಾಗದು. ಕಾಯಕ-ದಾಸೋಹಗಳ ಜೊತೆ ಸೇರುವ ಇನ್ನೊಂದು ತತ್ತ್ವ ಪ್ರಸಾದ-ವ್ಯಾವಹಾರಿಕ ಅರ್ಥದಲ್ಲಿ ಊಟ. ಸತ್ಯ ಶುದ್ಧ ಕಾಯಕದಿಂದ ಗಳಿಸಿ, ಮಿತವಾದ ಅಗತ್ಯಗಳನ್ನು ಇಟ್ಟುಕೊಂಡು ತನಗೆ ಬಳಸಿ, ಸಮಾಜದ ಶ್ರೇಯಸ್ಸಿಗೆ ದಾಸೋಹದ ಮೂಲಕ ಬಳಸಿದಾಗ ತಾನುಣ್ಣುವ ಊಟ ಪ್ರಸಾದ. ಕಾಯಕದಿಂದ ಗಳಿಸದೆ ಉಂಡರೂ ಅದು ಪ್ರಸಾದವಲ್ಲ, ದಾಸೋಹದ ಮೂಲಕ ಸಲ್ಲಿಸದೆ ಉಂಡರೂ ಅದು ಪ್ರಸಾದವಲ್ಲ.

ದಾನ ಮತ್ತು ದಾಸೋಹದ ಕ್ರಿಯೆಗಳಲ್ಲಿ ಕೆಲವು ವ್ಯತ್ಯಾಸಗಳಿವೆ.

೧. ದಾಸೋಹದಲ್ಲಿ ವಿಚಾರಶೀಲತೆ ಇದೆ. ಯಾರಾರಿಗೋ ಮರುಕದಿಂದ ಕೊಟ್ಟುದೆಲ್ಲ ದಾಸೋಹವಲ್ಲ. ಕೊಡುವುದಷ್ಟೆ ತನಗೆ ಸೇರಿದ್ದು, ಅದು ಏನಾದರೇನು ಎಂಬ ಧೋರಣೆ ಇರದು. ತಾನು ಕೊಟ್ಟುದು ಸತ್ಪಾತ್ರಕ್ಕೆ ಸಲ್ಲುವುದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ನಿಜದಾಸೋಹಿ.

೨. ದಾನವು ಐಚ್ಛಿಕ, ದಾಸೋಹ ಕಡ್ಡಾಯ. ಮನಸ್ಸು ಬಂದಾಗ ವ್ಯಕ್ತಿ ನೀಡುವುದು ದಾನ ; ಹಾಗಲ್ಲದೆ ತನ್ನ ಗಳಿಕೆಯ ಒಂದು ಅಂಶವನ್ನು ಕಡ್ಡಾಯವಾಗಿ ತೆಗೆದಿಟ್ಟು, ಲೋಕಹಿತಕ್ಕೆ ಸಲ್ಲಿಸುವುದು ದಾಸೋಹ.

ಬಂದುದ ಕೈಕೊಳ್ಳಬಲ್ಲರೆ ನೇಮ
ಇದ್ದುದ ವಂಚನೆ ಮಾಡದಿದ್ದರೆ ಅದು ನೇಮ
ನಡೆದು ತಪ್ಪದಿದ್ದರೆ ನೇಮ
ನುಡಿದು ಹುಸಿಯದಿದ್ದರೆ ನೇಮ
ನಮ್ಮ ಕೂಡಲಸಂಗಮದೇವನ ಶರಣರು ಬಂದರೆ
ಒಡೆಯರಿಗೆ ಒಡವೆಯ ಒಪ್ಪಿಸುವುದೇ ನೇಮ - ಬ.ವ.

೩. ದಾನದಲ್ಲಿ ಮರುಕವಿದ್ದರೆ, ದಾಸೋಹದಲ್ಲಿ ಕರ್ತವ್ಯ ಪ್ರಜ್ಞೆ ಇದೆ.

ತೊಟ್ಟು ಬಿಡದನ್ನಕ್ಕ ಮತ್ತಾ ಬುಡದಾಸೆ ಬೇಕು
ಮರ್ತ್ಯದ ಹಂಗುಳ್ಳನ್ನಕ್ಕ ಸತ್ಯ ಶರಣರ ಸಂಗ
ನಿತ್ಯ ಜಂಗಮ ಸೇವೆ ಕೃತ್ಯವಿರಬೇಕು.


ಎಲ್ಲಿಯವರೆಗೆ ಒಂದು ಹಣ್ಣು ತೊಟ್ಟಿನ ಸಹಾಯದಿಂದ ಗಿಡಕ್ಕೆ ಅಂಟಿಕೊಂಡಿದೆಯೋ ಅಲ್ಲಿಯವರೆಗೆ ಅದು ಗಿಡದ ಹಿತಚಿಂತನೆ ಮಾಡಲೇಬೇಕು. ಹಾಗೇ ವ್ಯಕ್ತಿಯು ಎಲ್ಲಿಯವರೆಗೆ ಧರ್ಮ ಎನ್ನುವ ತೊಟ್ಟಿನ ನೆರವಿನಿಂದ ಮರ್ತ್ಯ (ಸಮಾಜ) ಎನ್ನುವ ಗಿಡಕ್ಕೆ ಅಂಟಿಕೊಂಡಿರುವುದೋ ಅಲ್ಲಿಯವರೆಗೆ ಮರ್ತ್ಯದ ಹಿತಚಿಂತನೆ ಮಾಡಲೇಬೇಕು. ಸತ್ಯ ಶರಣರ ಸಂಗದಲ್ಲಿರಬೇಕು ; ಜಂಗಮ ದಾಸೋಹ ಗೈಯಬೇಕು.

೪. ದಾನದಲ್ಲಿ ತಾನು ಗಳಿಸಿದ್ದು ಎಂಬ ಹಮ್ಮಿದ್ದರೆ, ದಾಸೋಹದಲ್ಲಿ ದೇವನು ಕೊಟ್ಟದ್ದು ಎಂಬ ಕಿಂಕರತೆ ಇರುತ್ತದೆ. ''ಈ ಎಲ್ಲ ಬದುಕಿಗೆ, ಸಂಪತ್ತಿಗೆ ದೇವನೇ ಒಡೆಯ'' ಎಂಬ ಶರಣಾಗತಿ ಇರುತ್ತದೆ.

ನಾನು ಆರಂಭವ ಮಾಡುವೆನಯ್ಯ ಗುರುಪೂಜೆಗೆಂದು
ನಾನು ಬೆವಹಾರವ ಮಾಡುವೆನಯ್ಯ ಲಿಂಗಾರ್ಚನೆಗೆಂದು
ನಾನು ಪರಸೇವೆಯ ಮಾಡುವೆನಯ್ಯ ಜಂಗಮ ದಾಸೋಹಕ್ಕೆಂದು
ನಾನಾವಾವ ಕರ್ಮಂಗಳ ಮಾಡಿದಡೆಯೂ
ಆ ಕರ್ಮಫಲ ಭೋಗವ ನೀ ಕೊಡುವೆ ಎಂಬುದು ನಾನು ಬಲ್ಲೆನು
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದು ಕ್ರೀಯ ಮಾಡೆನು
ನಿಮ್ಮ ಸೊಮ್ಮಿಂಗೆ ಸಲಿಸುವೆನು ಕೂಡಲಸಂಗಮದೇವಾ.
- ಬ.ವ.

ಒಕ್ಕಲುತನವೇ ಆಗಲಿ, ವ್ಯವಹಾರವೇ ಇರಲಿ, ಇನ್ನೊಬ್ಬರ ಕೈಕೆಳಗೆ ದುಡಿಯುವ ಕೆಲಸವೇ ಆಗಲಿ ಅದು ಕಾಯಕವಾಗಬಹುದು. ಯಾವ ಬಗೆಯಲ್ಲಿ ಕಾಯಕ ಮಾಡುವನೋ ಅದಕ್ಕೆ ತಕ್ಕ ಫಲ ಸಿಕ್ಕೇ ಸಿಕ್ಕುತ್ತದೆ. ಹೀಗೆ ಸಿಕ್ಕ ಪ್ರತಿಫಲ ಪರಮಾತ್ಮನ ಪ್ರಸಾದ. ಅದನ್ನು ಸೂಕ್ತವಾದ ಕಾರ್ಯಕ್ಕೆ ಬಳಸಬೇಕೇ ವಿನಾ ಸಲ್ಲದ ಕಾರ್ಯಕ್ಕಲ್ಲ. ನೀನು ಕೊಟ್ಟುದು ನಿನ್ನ ಸೊಮ್ಮು ; ನಿನ್ನ ಕಾರ್ಯಕ್ಕೆ ಸಲ್ಲಿಸುವುದು ಕರ್ತವ್ಯ.'' ಎಂಬ ತಿಳುವಳಿಕೆ ಬಹಳ ಮುಖ್ಯ.

೫. ದಾನದಲ್ಲಿ ದಾನಿಯು ಕೊಟ್ಟಿದ್ದು ವೈಯಕ್ತಿಕ ಜೀವನ ನಿರ್ವಹಣೆಗೆ ಪ್ರಯೋಜನಕಾರಿಯಾದರೆ ದಾಸೋಹದಲ್ಲಿ ಅದು ಸಮಾಜದ ಸಂರಕ್ಷಣೆಗೆ ಸಲ್ಲುವುದು. ದಾಸೋಹದ ಉದ್ದೇಶವೇ ಸಮಷ್ಟಿಯ ಹಿತ.

೬. ದಾನದಲ್ಲಿ ಉಳ್ಳವನು ಮರುಕ ಭಾವದಿಂದ ಇಲ್ಲದವನಿಗೆ ಕೊಡುವನು. ದಾಸೋಹದಲ್ಲಿ ಮರುಕವಿಲ್ಲ: ಉಳ್ಳವನು ಇಲ್ಲದವನಿಗೆ ಕೊಡುವೆನೆಂಬ ಹಮ್ಮಿಲ್ಲ. ದಾಸೋಹ ಮಾಡಲಿಕ್ಕೆ ಕಾರಣೀಭೂತನಾಗುವವನು ಜಂಗಮ ಎಂಬ ಗೌರವ ಭಾವವಿದೆ. ಜಂಗಮನಿಗೆ ಅರ್ಥಾತ್ ತ್ಯಾಗಿಗೆ ಒಂದು ಬಗೆಯ ಹಕ್ಕಿದೆ.

ತಿರುಕರೆನ್ನದಿರಿ ಭೋ ಎನ್ನ ತಂದೆಗಳನು
ತಿರುಕರೆನ್ನದಿರಿ ಭೋ ಎನ್ನ ಬಂಧುಗಳನ್ನು
ತಿರುಕರೆನ್ನದಿರಿ ಭೋ ಎನ್ನ ಒಡೆಯರನು
ದೇಹಿ ಎಂದು ಕೇಳಬಂದವರಿಗೆ
ನಾಸ್ತಿ ಎಂಬುವವರ ಬೇಕು ನೋಡಬಂದ ಕೂಡಲಸಂಗಮದೇವ
- ಬ.ವ.

నిజ ಜಂಗಮರು ಅನುಯಾಯಿಗಳಿಗೆ ವಾತ್ಸಲ್ಯಮಯ ತಂದೆಯಿದ್ದಂತೆ, ಬಂಧುವಿದ್ದಂತೆ, ತ್ಯಾಗಿಗಳಾದ ಜಂಗಮರು ಸಮಾಜದ ಒಡೆಯರಿದ್ದಂತೆ. ಅವರು ನೈತಿಕ ದಳದ ಗುಪ್ತಚಾರರಂತೆ, ಸಮಾಜದ ಸ್ವಾಸ್ಥ್ಯದ ಮೇಲೆ ಒಂದು ಕಣ್ಣು ಇಟ್ಟವರು.

೭. ದಾನವು ಸಾಮಾನ್ಯವಾಗಿ ಪ್ರಾಯಶ್ಚಿತ್ತಕ್ಕೆಂದು, ಪಾಪ ಪರಿಹಾರಕ್ಕೆಂದಾದರೆ, ದಾಸೋಹವು ಪರಮಾತ್ಮನ ಕೃಪೆಗಾಗಿ ಮಾಡುವ ಸತ್ಕೃತಿ. ಪುಣ್ಯಾಪೇಕ್ಷೆಯಿಂದ ಮಾಡಿದ ದಾನವು ಉತ್ತಮ ಜನ್ಮವನ್ನು ನೀಡುವ ಕಾರಣ. ಫಲ-ಪದವಿಯ ಬಯಸದೆ ಶರಣನು ಕರ್ತವ್ಯ ಪ್ರಜ್ಞೆಯಿಂದ ಮಾಡುವನು. ಪಾಪ ಪರಿಹಾರ-ಪುಣ್ಯ ಸಂಪಾದನೆ ಎರಡೂ ಉದ್ದೇಶಗಳು ದಾಸೋಹದಲ್ಲಿಲ್ಲ.

೮. ದಾಸೋಹದ ಬಹಳ ಸುಂದರ ವಿವರಣೆ ಈ ಕೆಳಗಿನ ವಚನಗಳಲ್ಲಿದೆ.

ಇದ್ದುದಕ್ಕೆ ವಂಚನೆ ಮಾಡದಿಪ್ಪುದೇ ನೇಮ
ಇಲ್ಲದುದಕ್ಕೆ ಕಡನ ಮಾಡದಿಪ್ಪುದೇ ನೇಮ
ನಡೆದು ತಪ್ಪದಿಹುದೇ ನೇಮ
ನುಡಿದು ಹುಸಿಯದಿಹುದೇ ನೇಮ
ಕೂಡಲಸಂಗಮದೇವನ ಶರಣರು ಬಂದರೆ
ಒಡೆಯರಿಗೆ ಒಡವೆಯ ಒಪ್ಪಿಸುವುದೇ ನೇಮ.


ತನ್ನಲ್ಲಿರುವ ಸಂಪತ್ತನ್ನು ವಂಚನೆ ಮಾಡದೆ ಸಮಷ್ಟಿ ಕಾರ್ಯಕ್ಕೆ ಸಲ್ಲಿಸಬೇಕು. ತನ್ನಲ್ಲಿ ಕೊಡಲು ಇಲ್ಲದಾಗ ಸಾಲಮಾಡಿ ಕೊಡಬೇಕು ಎಂಬುದು ಸಲ್ಲದು. ಒಮ್ಮೆ ಒಂದು ತತ್ತ್ವವನ್ನು ಹಿಡಿದ ಬಳಿಕ ಅದನ್ನು ಕಡೆಮುಟ್ಟಿಸಬೇಕು. ಆಡಿದ ಮಾತನ್ನು, ನೀಡಿದ ವಾಗ್ದಾನವನ್ನು ಉಳಿಸಿಕೊಳ್ಳಬೇಕು. ಶರಣರು ಅಂದರೆ ತ್ಯಾಗಿಗಳು ಸಮಷ್ಟಿ ಚಿಂತಕರು, ಸಮಾಜದ ಒಡೆಯರು, ಅವರು ಬಂದಾಗ ತನ್ನ ಸಂಪತ್ತನ್ನು ಒಪ್ಪಿಸಬೇಕು.

“ಸಂಗನ ಶರಣರಿಗೆ ಒಪ್ಪಿಸಬೇಕು' ಅವರಿಗೆ ಸಲ್ಲದ ಅರ್ಥ ವ್ಯರ್ಥ.' 'ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ, ಕೂಡಲ ಸಂಗನ ಶರಣರಿಗೆ ಒಡನೆಯೇ ಸವೆಸುವುದು.' ಈ ಮಾತುಗಳಲ್ಲಿ ಬಹಳ ಅರ್ಥವಿದೆ.

ಕೆಲವೊಂದು ಆಚರಣೆಗಳಿವೆ. ಅವು ಶರಣರ ವಿಚಾರಕ್ಕೆ ವಿರುದ್ಧವಾದವು. ಅವುಗಳಿಗೆ ಹಣವನ್ನು ವ್ಯಯಿಸಬಹುದೆ ? ಉದಾಹರಣೆಗೆ, ಒಂದು ಉಗ್ರದೇವತೆಗೆ ಅಂದರೆ ಮಾರಿ-ಮಸಣಿಗೆ ಬಲಿಕೊಡುವುದು ಇರುತ್ತದೆ. ಇದಕ್ಕೆ ಚಂದಾ ಎತ್ತಲು ಬರುತ್ತಾರೆ. ಆಗ ಲಿಂಗವಂತ ಶರಣನು ಹಣ ಕೊಡಬಹುದೆ? ಕೊಡಬಾರದು. ಮಿತ್ರತ್ವದ ದಾಕ್ಷಿಣ್ಯ, ಇನ್ನೊಬ್ಬರ ಒತ್ತಡಕ್ಕೆ ಒಳಗಾಗಿಯೂ ಕೊಡಬಾರದು. ಏಕೆಂದರೆ ಅದು ಅಪ್ರತ್ಯಕ್ಷವಾಗಿ, ತಾನು ಹಿಂಸೆಯನ್ನು ಪ್ರಚೋದಿಸಲು ಕಾರಣೀಭೂತವಾಗುತ್ತದೆ. ಜನ್ನನ ಯಶೋಧರ ಚರಿತ್ರೆಯಲ್ಲಿ ಬರುವಂತೆ, ಹಿಂಸೆಯ ಕಲ್ಪನೆ-ಕೃತಿ ಪಾಪಕ್ಕೆ ಕಾರಣೀಭೂತವಾಗುತ್ತದೆ. ''ಕುರಿಸತ್ತು ಕಾವುದೇ ಹರ ಮುಳಿದವರ?' ಎಂದು ಗುರು ಬಸವಣ್ಣನವರು ನುಡಿದಿಲ್ಲವೆ? ನಮ್ಮ ಲೌಕಿಕ, ಪೋಲಿಸ್ ಕಾಯ್ದೆಯ ಪ್ರಕಾರ ಕೊಲೆ ಮಾಡಿದವನಿಗಿಂತಲೂ ಕೊಲೆಗೆ ಪ್ರೇರಕನಾದವನಿಗೇ ಉಗ್ರಶಿಕ್ಷೆ ತಾನೆ? ಹಾಗೆ ಮಾರಿಮಸಣಿಗೆ ಬಲಿ ಕೊಡುವವನಿಗಿಂತಲೂ ಹರಕೆ ಮಾಡಿಕೊಂಡು, ಚಂದಾ ನೀಡಿ ಬಲಿಕಾರ್ಯಕ್ಕೆ ನೆರವಾದವನಿಗೆ ದೇವರ ದೃಷ್ಟಿಯಲ್ಲಿ ಶಿಕ್ಷೆ ದೊರಕದೆ ಇರುವುದೇ ?
ಇನ್ನು ಯಜ್ಞಗಳ ವಿಷಯಕ್ಕೆ ಬಂದರೂ ಅಷ್ಟೆ; ಅಲ್ಲಿ, ಆಡು, ಹೋತ, ಕುದುರೆ ಮುಂತಾದವು ಬಲಿಯಾಗುವುವು. ಇದೊ ಹಿಂಸೆಯೇ ಅದನ್ನು ಗುರು ತಂದೆಯವರು ಹೀಗೆ ಖಂಡಿಸುತ್ತಾರೆ.

ಸತ್ತುದನೆಳೆವನು ಅದೆತ್ತಣ ಹೊಲೆಯ ?
ಹೋತು ತಂದು ನೀವು ಕೊಲುವಿರಿ !

ಹೋಮದ ನೆವದಲ್ಲಿ ಹೋತನ ಕೊಂದು ತಿಂಬ
ಅನಾಮಿಕರೊಡನಾಡಿ ಗೆಲುವುದೇನು ಕೂಡಲಸಂಗಮದೇವಾ


ಹಾ ಹೂ ಎಂದು ಕೂಗಾಡಿ ಉಗ್ರದೇವತೆಗೆ ಬಲಿ ಕೊಟ್ಟು ಅದನ್ನು ಪ್ರಸಾದ ಎಂದು ಹಂಚಿಕೊಂಡು ತಿಂದರೂ ಅಷ್ಟೆ, ಸುಸಂಸ್ಕೃತವಾಗಿ ಮಂತ್ರಗಳನ್ನು ಹೇಳಿ ಶಾಸ್ತ್ರೀಯವಾಗಿ ಪ್ರಾಣಿಗಳನ್ನು ಅಗ್ನಿಗೆ ಅರ್ಪಿಸಿ ಪ್ರಸಾದವೆಂದು ತಿಂದರೂ ಅಷ್ಟೆ.
ಎರಡೂ ಹಿಂಸೆಯೇ. ಆದ್ದರಿಂದ ಹಿಂಸಾತ್ಮಕ ಧಾರ್ಮಿಕ ಕ್ರಿಯೆಗಳಿಗೆ ಶರಣನು ಪ್ರೋತ್ಸಾಹಿಸಬಾರದು.

ಆಪ್ಯಾಯನ ಪ್ರಸಾದವನ್ನು ಕೆಡಿಸುವ ಕಾರ್ಯಗಳನ್ನು ಮಾಡುವುದು, ಮಾಡಿಸುವುದು, ಮಾಡಲು ಸಹಾಯ ಮಾಡುವುದೂ ಶರಣನಿಗೆ ಪಾಪಕಾರ್ಯವೆ! ತಿನ್ನುಣ್ಣುವ ತುಪ್ಪ, ಮೋದಕ (ಕಡುಬು) ಮುಂತಾದುವನ್ನು, ಉಡುವ ರೇಷ್ಮೆ ಬಟ್ಟೆ-ಸೀರೆ ಮುಂತಾದುವನ್ನು ಬೆಂಕಿಗೆ ಹಾಕಿ ಸುಡುವುದು, ಹಾಲು, ತುಪ್ಪ, ಮೊಸರು ಮುಂತಾದುವನ್ನು ಅಭಿಷೇಕ ಮಾಡಿ ಚೆಲ್ಲುವುದು ಶರಣ ಮಾರ್ಗಕ್ಕೆ ಸಲ್ಲದು. ದೇವರ ಸೃಷ್ಟಿಯ ಒಂದೊಂದು ಉಪಯುಕ್ತ ವಸ್ತುವನ್ನೂ ಮನುಷ್ಯನ ಶ್ರೇಯಸ್ಸಿಗೆ ಬಳಸಬೇಕೇ ವಿನಾ ಅದನ್ನು ನಾಶಮಾಡುವುದು ತೀವ್ರ ಅಪರಾಧ.

ಅದೇ ಯಾರಾದರೂ ಅನ್ನದಾಸೋಹ, ವಿದ್ಯಾ ದಾಸೋಹ, ನೇತ್ರದಾನ, ವೈದ್ಯಕೀಯ ನೆರವು ಮುಂತಾದ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ ಎಂದರೆ ಇವು ಬಸವ ಗುರುವಿನ ಆದೇಶಕ್ಕೆ ಅನುಸಾರವಾಗಿರುವುದರಿಂದ ಅವುಗಳಿಗೆ ನೆರವು ನೀಡುವುದು ಧರ್ಮಕ್ಕೆ ಪೂರಕ.

ಕೆಲವು ಸಾಧುಗಳು, ಅವಧೂತ ಮಾರ್ಗಿಗಳು ಇರುತ್ತಾರೆ. ಮಹಾತ್ಮರಿಗೆ ಗೌರವ ಕೊಡಬೇಕು, ಅವರಿಗೆ ಧನ ಸಹಾಯ ಮಾಡಬೇಕು ಎಂಬ ಭಾವುಕತೆಯಿಂದ ಅನೇಕ ಜನ ಭಾವುಕ ಭಕ್ತರು ಊಟ, ವಸ್ತ್ರ ಕೊಡುವುದಲ್ಲದೆ ಅವರಿಗೆ ಸೇದಲು ಗಾಂಜಾ, ಕುಡಿಯಲು ಸೆರೆ ತರಿಸಿಕೊಡುವುದುಂಟು, “ಛೇ, ಇದೇನು ಇಂಥ ಕೆಟ್ಟ ಕೆಲಸಕ್ಕೆ ಕೊಡುವಿರಲ್ಲ'' ಎಂದರೆ, “ಅವರವರ ಪಾಪ-ಪುಣ್ಯ ಅವರಿಗೆ, ಅದರ ಗೊಡುವೆ ನಮಗೇಕೆ, ಪುಣ್ಯಕಾರ್ಯ ಮಾಡುವುದಷ್ಟೆ ನಮ್ಮ ಕೆಲಸ'' ಎನ್ನುವರು. ಬಹುಷಃ ಈ ಕೃತಿ ಪುಣ್ಯ ಕಾರ್ಯಕ್ಕಿಂತಲೂ ಪಾಪ ಕಾರ್ಯವೇ ಆಗುವುದು. ಗಾಂಜಾ, ಅಫೀಮು ಸೇದಿದ ಮತ್ತಿನಲ್ಲಿ ಆತ ಏನು ಅನಾಹುತವನ್ನು ಮಾಡಿಬಿಡಬಹುದು. ಸರ್ಕಾರವು ನಿಷೇದಿಸಿರುವ ಈ ಕೃತಿ, ಕಾವಿ ಬಟ್ಟೆ ಹಾಕಿದ ಸಾಧು ಮಾಡಿದ ಮಾತ್ರಕ್ಕೆ ಪುಣ್ಯ ಕಾರ್ಯವಾಗದು.

ಹಸಿದವನಿಗೆ ಊಟ, ಬಾಯಾರಿದವನಿಗೆ ನೀರು ಕೊಡುವಾಗ ಮಾತ್ರ ನಾವು ಜಾತಿ-ಧರ್ಮ, ಅವನ ದೌರ್ಬಲ್ಯ ಕುರಿತು ಕೇಳಬಾರದು. ಬದುಕುವ ಹಕ್ಕನ್ನು ನಾವು ರಕ್ಷಿಸಬೇಕು. ಆದರೆ ಅಲ್ಲಿಗೆ ಭಾವುಕ ಭಕ್ತನ ವಿಚಾರ ಜಾಗೃತಗೊಳ್ಳಬೇಕು.

ಆಪ್ಯಾಯನಕ್ಕೆ ನೀಡುವೆ ಲಾಂಛನಕ್ಕೆ ಶರಣೆಂಬೆ
ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದರೆ
ಕೂಡಲಸಂಗಮದೇವಾ 'ನೀ' ಸಾಕ್ಷಿಯಾಗಿ ಛೀ ಎಂಬೆ
- ಬ.ವ.

ಎಂದು ಗುರುವು ಆದೇಶಿಸುವಂತೆ ಆಪ್ಯಾಯನಕ್ಕೆ ನೀಡಬೇಕು. ಅವನ ಲಾಂಛನಕ್ಕೆ ಗೌರವ ಕೊಡಬೇಕು. ಆದರೆ ವ್ಯಸನಗಳ ತೃಪ್ತಿಗೆ ನೀಡಬಾರದು. ಅದು ಸಮಾಜದ ಸ್ವಾಸ್ಥ್ಯ ಕೆಡಲು ಹಾದಿ ಮಾಡಿಕೊಡುವುದು.

೯. ದಾನವು ಒಂದು ಬಗೆಯ ಪ್ರಾಯಶ್ಚಿತ್ತ ಎಂಬ ಭಾವ ಕೆಲವು ದಾನಗಳಲ್ಲಿದ್ದರೆ, ದಾಸೋಹವು ಪ್ರಾಯಶ್ಚಿತ್ತ ದೃಷ್ಟಿಯಿಂದ ಇರದೆ ಪಾರಮಾರ್ಥಿಕ ಪ್ರಜ್ಞೆ, ಪರೋಪಕಾರ ಭಾವನೆಯಿಂದ ಕೂಡಿರುತ್ತದೆ. ಶರಣ ಧರ್ಮವು ಆತ್ಮಶುದ್ಧಿಗೆ ಪಶ್ಚಾತ್ತಾಪವನ್ನು ಹೇಳುವುದೇ ವಿನಾ ಪ್ರಾಯಶ್ಚಿತ್ತವನ್ನಲ್ಲ. ಹೊರಗಿನ ಯಾವುದೇ ವಸ್ತುಗಳನ್ನು ದಾನ ಮಾಡಿ, ಪಾಪವನ್ನು ಕಳೆದುಕೊಳ್ಳಲು ಬರದು ಎಂಬ ನಂಬಿಗೆಯನ್ನುಳ್ಳ ಶರಣ ಧರ್ಮ ದಾಸೋಹ ಕಾರ್ಯವನ್ನು ಪ್ರಾಯಶ್ಚಿತ್ತಕ್ಕೆ ಬಳಸದು.

ದಾಸೋಹದಲ್ಲಿ ಸಹಜತೆ ಅಗತ್ಯ.

ಎಂದೋ ಒಂದು ದಿನ ಆಡಂಬರದಿಂದ ಮಾಡುವ ವೈಭವದ ದಾಸೋಹಕ್ಕಿಂತ ಭಕ್ತನು ಅದನ್ನು ಸಹಜ ಮತ್ತು ಅಗತ್ಯವಾದ ಕ್ರಿಯೆಯನ್ನಾಗಿ ಮಾಡಿಕೊಳ್ಳಬೇಕು ಎಂಬುದು ಗುರು ಬಸವಣ್ಣನವರ ಇಚ್ಛೆ.

ಮನೆ ನೋಡಾ ಬಡವರು, ಮನ ನೋಡಾ ಘನ
ಸೋಂಕಿನಲ್ಲಿ ಸುಖಿ; ಸರ್ವಾಂಗ ಕಲಿಗಳು
ಪಸಾರಕ್ಕನುವಿಲ್ಲ ಬಂದ ತತ್ಕಾಲಕ್ಕುಂಟು
ಕೂಡಲಸಂಗಮದೇವನ ಶರಣರು ಸ್ವತಂತ್ರ ಧೀರರು
- ಬ.ವ.

ಶರಣರ ಮನೆ ನೋಡಿದರೆ ಅಲ್ಲಿ ಆಡಂಬರವಿರದು, ಬಡವರ ಮನೆಯಂತೆ ಕಾಣುತ್ತದೆ. ಪಸಾರಕ್ಕೆ ಅಂದರೆ ಹರಡಿಕೊಂಡು ವೈಭವ ಪ್ರದರ್ಶನ ಮಾಡಲು ಅಲ್ಲಿ ಆತುರವಿರದು. ಆದರೆ ಕಾಲಕ್ಕೆ ಸರಿಯಾಗಿ ದಾಸೋಹ, ಪರಹಿತ ಮಾಡಲು ಅಣಿಯಾಗಿ ಇರುತ್ತಾರೆ.

ವೈಭವದ ಊಟೋಪಚಾರವನ್ನು ಇಟ್ಟು ಹೆಸರು ಪಡೆದುಕೊಳ್ಳಬಯಸುವ ಕೆಲವು ಜನರು, ಉಳಿದ ಸಮಯದಲ್ಲಿ ಹಸಿದು ಕಂಗಾಲಾಗಿ ಬಂದವರಿಗೆ ಒಂದು ತುತ್ತು ಅನ್ನ ನೀಡರು ; ಇದೆಂತಹ ದಾಸೋಹಭಾವ ! ಸಮಯದ ಅಗತ್ಯವನ್ನು ಅರಿತು ಮಾಡುವುದೇ ನಿಜವಾದ ದಾಸೋಹ.

ಕಾಯಕ ತತ್ತ್ವವು ಉತ್ಪಾದನೆಯ ಸೂತ್ರವನ್ನು ಕಲಿಸಿದರೆ, ದಾಸೋಹವು ಗಳಿಕೆಯನ್ನು ಬಳಸುವ ವಿಧಾನವನ್ನು ಕಲಿಸುತ್ತದೆ. ಶರಣ ಧರ್ಮವು ಉತ್ಕಟ ಧರ್ಮವಂತಿಕೆಯನ್ನು ಕಲಿಸಿದರೂ, ವ್ಯಾವಹಾರಿಕ ಜಾಣತನ ಬಿಡಲು ಹೇಳದು. ಒಬ್ಬ ವ್ಯಕ್ತಿ ಸಾಲ ಮಾಡಿಕೊಂಡು ವೈಭವದ ಮದುವೆ, ಗಣಾರಾಧನೆ ಮುಂತಾದ್ದು ಮಾಡುವುದು ಹೇಗೆ ತಪ್ಪೋ, ಹಾಗೆ ತಾನು ನೀಗಿಸಲಾರದ ದಾನ-ದಾಸೋಹಗಳನ್ನು ಹಮ್ಮಿಕೊಳ್ಳುವುದು ಅಷ್ಟೇ ತಪ್ಪು.

೧. ಇಲ್ಲದುದಕ್ಕೆ ಕಡನ ಮಾಡದಿಪ್ಪುದೇ ನೇಮ
೨. ಓಡಲಾರದ ಮೃಗವು ಸೊಣಗಂಗೆ ಮಾಂಸ ಕೊಡುವಂತೆ.


ಕೈಲಾಗದಿದ್ದರೂ ಡಂಭಾಚಾರ ಮಾಡಲು ಹೋಗಬಾರದು. ತನಗೆ ದಾನ-ಧರ್ಮ ಮಾಡುವಷ್ಟು ಸಂಪತ್ತು ತುಂಬಿ ತುಳುಕುತ್ತಿದ್ದರೂ, ಆದಾಯವು ಇದ್ದರೂ ಇಲ್ಲದ ನಾಟಕವಾಡುವವನೂ ವಂಚಕನಾದಂತೆ, ತನಗೆ ಆ ಶಕ್ತಿ ಸಾಮರ್ಥ್ಯ ಇಲ್ಲದಿದ್ದರೆ ಯಾರದೋ ದಾಕ್ಷಿಣ್ಯ, ಒತ್ತಾಯಕ್ಕೆ ಒಳಗಾಗಿ ಶಕ್ತಿ ಮೀರಿ ಮಾಡಲು ಹೋಗುವವನು ವಂಚಕನೇ ! ಮೊದಲಿನವ ಸಮಾಜ ವಂಚಕ, ಎರಡನೆಯವನು ಆತ್ಮವಂಚಕ.

ನಿಜದಾಸೋಹಿ ಹೇಗಿರುವನು ?

“ಬಾಳತ್ವಕ್ಕೆಂದು ಮಧುವ ತಂದು,
ಕೊಡನ ತುಂಬಿದ ಜೇನುಹುಳುವಿನಂತೆ
ತಾನುಂಬುದು, ತನ್ನೆಂಜಲ ಜಗವುಂಬುದು ನೋಡಯ್ಯಾ,
ಶಿವಭಕ್ತನಾಗಿ ಶಿವಾನ್ನವನೇ ಕೊಂಡು,
ಒಕ್ಕಮಿಕ್ಕ ವಸ್ತುವ ಜಂಗಮಕ್ಕೆ ಇಕ್ಕುವಾತನೆ ಭಕ್ತ
ಕೊಂಡಾತನೆ ಜಂಗಮ
- ಬ ವ.

ಇದು ಕಾಯಕ-ದಾಸೋಹ ಸೂತ್ರ ಕಲಿಸುವ ಅದ್ಭುತ ವಚನ.

“ಶರಣನು ಸತ್ಯ ಶುದ್ಧ ಕಾಯಕವ ಮಾಡಿ, ಸಂಪತ್ತುಗಳಿಸಿ, ಶಿವಾನ್ನವನ್ನೇ ಕೊಳ್ಳುವನು. ತನ್ನ ಜೀವನಾವಶ್ಯಕತೆಗಳನ್ನೂ ತಣಿಸಿಕೊಂಡು, ಹೆಚ್ಚುವರಿಯಾಗಿ ಉಳಿದುದನ್ನು ಜಂಗಮಕ್ಕೆ ಇಡುವನು. ಜಂಗಮ ಎಂದರೆ ಮಹಾತ್ಮರು, ಹಸಿದವರು ಸಮಾಜ-ಹೀಗೆಲ್ಲ ಅರ್ಥಮಾಡಬಹುದು. ಇವನ ಜೀವನ ಹೇಗೆಂದರೆ ಜೇನುಹುಳುವಿನಂತೆ, ಜೇನುಹುಳು ಮಕರಂದವನ್ನು ಸಂಗ್ರಹಿಸಿ, ಜೇನುತುಪ್ಪವನ್ನಾಗಿ ಮಾಡುವುದು ತಾನೂ ಆ ಜೇನಿನ ಸವಿ ಸವಿದು, ಜಗತ್ತಿಗೂ ಬಿಡುವುದು. ತನಗಿಲ್ಲದಂತೇನೂ ಅದು ಮಾಡಿಕೊಳ್ಳದು.

ಹಾಗೆ ಶರಣನು ಜಿಪುಣನು ಆಗದೆ ಅತಿ ಉದಾರಿಯೂ ಅವ್ಯವಹಾರಿಕನೂ ಆಗದೆ ವಿವೇಕದಿಂದ ವರ್ತಿಸಬೇಕು.

ಜಂಗಮನ ಕರ್ತವ್ಯ

ದಾಸೋಹ ಮಾಡಿಸಿಕೊಳ್ಳುವ ಜಂಗಮನೂ ಅಷ್ಟೆ. ಕ್ರೂರಿಯೂ ಸ್ವಾರ್ಥಿಯೂ ಆಗಬಾರದು.

ಓಡಲಾಗದ ಮೃಗವು ಸೊಣಗಂಗೆ ಮಾಂಸವ ಕೊಡುವಂತೆ
ಮಾಡಲಾಗದು ಭಕ್ತ, ಕೊಳಲಾಗದು ಜಂಗಮ
ಹಿರಿಯರು ನರಮಾಂಸವ ಭುಂಜಿಸುವರೆ ?
ತನುವುಕ್ಕಿ ಮನವುಕ್ಕಿ ಮಾಡಬೇಕು ಭಕ್ತಿಯ
ಮಾಡಿಸಿಕೊಳ್ಳಬೇಕು ಜಂಗಮ, ಕೂಡಲಸಂಗಮದೇವಾ
- ಬ.ವ.

ಓಡಲಾರದೆ ದಣಿದ ಜಿಂಕೆಯು ಸೋತು, ನೆಲಕ್ಕೊರಗಿ ಬೇಟೆ ನಾಯಿಯ ಬಾಯಿಗೆ ಸಿಕ್ಕು, ಮಾಂಸದ ಮುದ್ದೆಯಾಗುವಂತೆ, ಭಕ್ತನು ಅತ್ಯುತ್ಸಾಹದಿಂದ ಅತಿ ಭಕ್ತಿಯನ್ನು ಮಾಡಲು ಹೋಗಬಾರದು. ಅದೇ ರೀತಿ (ಮೂಢ) ಭಕ್ತನು ಶ್ರದ್ಧೆಯಿಂದ ಸೇವೆ ಮಾಡುವುದನ್ನು ಜಂಗಮ ದುರುಪಯೋಗ ಮಾಡಿಕೊಳ್ಳಬಾರದು. ಹಿಂಸಿಸಿ ತೆಗೆದುಕೊಂಡದ್ದು ನರಮಾಂಸದಂತೆ, ಕೆಲವು ಜಾತೀಯ ಸಂಘಟನೆಗಳು, ಅವುಗಳಿಗೆ ಗುರುಗಳು ಇರುವರು. ಕಾರ್ಯಕ್ರಮಗಳನ್ನು ಮಾಡುವಾಗ, ಕಟ್ಟಡ ಕಟ್ಟಿಸುವಾಗ ಇಂತಿಷ್ಟನ್ನು ಭಕ್ತನು ಕೊಡಬೇಕೆಂಬ ಕಟ್ಟಪ್ಪಣೆ ವಿಧಿಸಿದರೆ, ಅದನ್ನು ಪೂರೈಸಲಾರದೆ ಸೋತು ಭಕ್ತರು ಹಣ್ಣಾಗುವರು. ಎದುರಾಡಲು ಧೈರ್ಯವಿಲ್ಲ. ಎದುರಾಡಿದರೆ ಬಹಿಷ್ಕಾರದ ಹೆದರಿಕೆ ಬೇರೆ. ಈ ರೀತಿ ವಸೂಲು ಮಾಡುವುದು ನರಮಾಂಸವನ್ನು ತಿಂದಂತೆ ಎಂದು ಬಸವಣ್ಣನವರು ಎಚ್ಚರಿಕೆ ನೀಡುವರು. ಕೆಲವು ವಿದ್ಯಾಸಂಸ್ಥೆಗಳು ಇರುವವು. ಅವುಗಳಲ್ಲಿ ಕೆಲಸ ಮಾಡುವ ಸೇವಕನಿಂದ ಹಿಡಿದು ಪ್ರಾಂಶುಪಾಲರವರೆಗೆ ಕಡ್ಡಾಯ ವಂತಿಗೆ ಜಯಂತಿ, ವರ್ಧಂತಿ, ಉತ್ಸವ, ಗಣಾರಾಧನೆ ಎಂದು ಎತ್ತುವುದು ನಡೆದೇ ಇರುತ್ತದೆ. ದೊಡ್ಡ ಉದ್ಯೋಗಿಗಳು ತಡೆದುಕೊಳ್ಳಬಲ್ಲರಾದರೂ ಚಿಕ್ಕ ಕೆಲಸಗಾರರು ಶಪಿಸುವುದನ್ನು ಕಾಣುತ್ತೇವೆ. ತನುವುಕ್ಕಿ, ಮನವುಕ್ಕಿ ಭಕ್ತನು ಕೊಟ್ಟುದನ್ನು ಜಂಗಮ ಪಡೆಯಬೇಕೇ ವಿನಾ, ಕೈಕೆಳಗಿನವರನ್ನು ಹಿಂಸಿಸಿ ಅಲ್ಲ.

“ವ್ಯಕ್ತಿಯು ಗಳಿಸಿದ್ದೆಲ್ಲವೂ ಶಿವನ ಕೊಡುಗೆ, ಅದು ಸಮಾಜದ ಆಸ್ತಿ'' ಎಂಬುದು ಬಸವಣ್ಣನವರ ಅರ್ಥನೀತಿಯ ಸಾರ ಎಂದು ಹೇಳಬಹುದು. ಅವನು ಒಲಿದು ಕೊಡದೆ ಯಾವುದೂ ಲಭ್ಯವಾಗದು. ಹಾಗೆ ಬಂದುದನ್ನು ತಾನು ಬಳಸಿಕೊಂಡು, ಜೇನು ಹುಳುವಿನಂತೆ ಜಗತ್ತಿಗೂ ವಿನಿಯೋಗಿಸಬೇಕು.

ಭಾಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ
ವಿರಹಿತ ಹೋಗಬಾರದು
ಕಳ್ಳನಾಣ್ಯ ಸಲುಗೆಗೆ ಸಲ್ಲದು,
ಕಳ್ಳನಾಣ್ಯವ ಸಲ್ಲಲೀಯರಯ್ಯಾ,
ಭಕ್ತಿ ಎಂಬ ಭಾಂಡಕ್ಕೆ ಜಂಗಮವೇ ಸುಂಕಿಗ
ಕೂಡಲಸಂಗಮದೇವಾ
-ಬ.ವ.

ಅನೇಕ ರೀತಿಯ ಪದಾರ್ಥಗಳನ್ನು ಹೊರಗೆ ಒಯ್ಯುವಾಗ, ಒಳಗೆ ತರುವಾಗ ಸುಂಕವನ್ನು ಕೊಡಲೇಬೇಕಷ್ಟೇ ? ಸುಂಕ ಕೊಡದೆ ಹೋದರೆ ಅದು ಅಪರಾಧ. ಹಾಗೆಯೇ ಭಕ್ತನಾದವನು ಪರಮಾತ್ಮನಲ್ಲಿ ಪ್ರವೇಶಿಸಬೇಕಾದರೆ ಇಲ್ಲಿ ಜಂಗಮನಿಗೆ ಸುಂಕ (ಟ್ಯಾಕ್ಸ್) ಕೊಡಲೇಬೇಕು. ದಾಸೋಹ ಎಂಬ ಸುಂಕ ಕೊಡುವುದನ್ನು ತಪ್ಪಿಸಿಕೊಂಡರೆ ಆಗ ಭಕ್ತನ ಸಂಪತ್ತು ಕಳ್ಳನಾಣ್ಯದಂತೆ ಆಗಿಬಿಡುತ್ತದೆ.
ಇನ್ನೊಂದು ವಚನವೂ ಇದನ್ನೆ ಒತ್ತಿ ಹೇಳುತ್ತದೆ.

ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ವಿರಹಿತ ಹೋಗಬಾರದು
ಲಿಂಗಸಂಬಂಧಿಯಾದಡೆ ಜಂಗಮ ಪ್ರೇಮಿ ನೀನಾಗು
ಅಲ್ಲದಿದ್ದಡೆ ಪರುಷ ದೊರಕೊಳ್ಳದಯ್ಯ
ಜಂಗಮದಲ್ಲಿ ನಿರುತ ಭರಿತ, ಕೂಡಲಸಂಗಮದೇವ
- ಬ.ವ.

ದೇವರ ಕುರುಹಾದ ಇಷ್ಟಲಿಂಗವನ್ನು ಧರಿಸಿ, ದೇವಭಕ್ತನಾದ ಮೇಲೆ ದೇವನ ಪ್ರತಿನಿಧಿಯಾದ ಜಂಗಮವನ್ನು ಪ್ರೀತಿಸಲೇಬೇಕು. ದೇವರಿಗೆ ಉಣ್ಣಿಸಲು ತಿನ್ನಿಸಲು ಬರುವುದೇ ? ಲಿಂಗಪೂಜೆಯು ವೈಯಕ್ತಿಕ ಆತ್ಮೋದ್ಧಾರಕ್ಕೆ ಜಂಗಮ ಸೇವೆಯಿಂದ ಸಮಷ್ಟಿಯ ಉದ್ಧಾರ. ಹೀಗೆ ಬಸವಣ್ಣನವರು ಕಡ್ಡಾಯವಾದ ದಾಸೋಹವನ್ನು ಬೋಧಿಸಿದ್ದಾರೆ.

ದಾಸೋಹಿಗಳಲ್ಲಿ ಹಲವು ಬಗೆ

ಅನೇಕ ಜನ ಶ್ರೀಮಂತರು ಕೆಲವರು ಕಡುಲೋಭಿಗಳಾಗಿದ್ದರೆ ಮತ್ತೆ ಕೆಲವರು ತಮ್ಮ ಸುಖಕ್ಕಾಗಿ ವಿಪರೀತ ವ್ಯಯಿಸುವರು ; ಒಳ್ಳೆಯ ಕಾರ್ಯಕ್ಕೆ ನೀಡರು. ಈ ಉಭಯತರಿಗೂ ದಾನ-ದಾಸೋಹ ಮಾಡುವುದರಿಂದ ಆಗುವ ಪ್ರಯೋಜನ, ಸಮಾಧಾನ, ಸಂತೃಪ್ತಿಗಳ ಕಲ್ಪನೆಯೇ ಇರದು. ಮೊದಲನೆಯ ವ್ಯಕ್ತಿ ಸಂಪತ್ತನ್ನು ಮುಚ್ಚಿ ಮುಚ್ಚಿ ತಾನೂ ಬಳಸದೆ ಇತರರಿಗೂ ಕೊಡದೆ ಇಟ್ಟುಕೊಳ್ಳುತ್ತಾನೆ. ಎರಡನೆಯವನು ತನಗಾಗಿ, ತನ್ನ ಮಡದಿ ಮಕ್ಕಳು ಬಂಧು-ಬಾಂಧವರಿಗಾಗಿ ಎಷ್ಟು ಬೇಕಾದರೂ ಖರ್ಚು ಮಾಡುತ್ತಾನೆ. ಆದರೆ ಇನ್ನಿತರರಿಗೆ, ಧರ್ಮಕಾರ್ಯಕ್ಕೆ, ಬಡಬಗ್ಗರು, ದೀನದಲಿತರಿಗಾಗಿ ಎಷ್ಟೂ ಖರ್ಚು ಮಾಡುವುದಿಲ್ಲ.

ಉಂಬಾಗ ಇಲ್ಲೆನ್ನ ಉಡುವಾಗ ಇಲ್ಲೆನ್ನ
ಬಂಧುಗಳು ಬಂದಾಗ ಇಲ್ಲೆನ್ನ
ಲಿಂಗಕ್ಕೆ ಇಲ್ಲೆಂಬ ಜಂಗಮಕ್ಕೆ ಇಲ್ಲೆಂಬ
ಬಂದ ಪುರಾತರಿಗೆ ಇಲ್ಲೆಂಬ
ಸಾವಾಗ ದೇಹವ ದೇಗುಲಕ್ಕೆ ಒಯ್ಯಂಬ
ದೇವರಿಗೆ ಹೆಣ ಬಿಟ್ಟಿ ಹೇಳಿತ್ತೇ ಕೂಡಲಸಂಗಮದೇವಾ
-ಬ.ವ.

ಎಂಬ ವಚನವು ತಾನು, ತನ್ನ ಮಡದಿ ಮಕ್ಕಳು ತಿನ್ನುಣ್ಣಲು, ವೈಭವದ ಜೀವನ ನಡೆಸಲು ಎಷ್ಟು ಬೇಕಾದರೂ ಖರ್ಚು ಮಾಡುವರು. ಸಮಾಜಕ್ಕೆ ಮಾತ್ರ ಇಲ್ಲವೆನ್ನುವರು ಎಂಬುದನ್ನು ಮಾರ್ಮಿಕವಾಗಿ ಬಣ್ಣಿಸುತ್ತದೆ.

ಇನ್ನೊಂದು ತರದ ದಾನಿಗಳೆಂದರೆ ಯಾವುದಾದರೂ ಒತ್ತಡಕ್ಕೊ, ದಾಕ್ಷಿಣ್ಯಕ್ಕೂ ಕಟ್ಟುಬಿದ್ದು, ಕಡೆಗೆ ಕೀರ್ತಿವಾರ್ತೆಯ ಆಸೆಗೋ ವಾಗ್ದಾನ ಮಾಡುತ್ತಾರೆ. ಆ ವಾಗ್ದಾನ ಮಾಡಲು ಪಡೆಯುವವರನ್ನು ಸುತ್ತಿಸುತ್ತಾರೆ. ವಾಗ್ದಾನ ಮಾಡಿಯಾದ ಮೇಲೆ ಹಣವನ್ನು ಕೊಡಲು ಸುತ್ತಿಸುತ್ತಾರೆ. ಸಮಾಜಕ್ಕಾಗಿ ದುಡಿಯುವ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಣ್ಣ ಮುಖ ಮಾಡಿಕೊಂಡು ಸುತ್ತಿ ಸುತ್ತಿ ಬಸವಳಿಯಬೇಕು, ಆಗ ಕೊಟ್ಟವನಿಗೆ (ಕೆಟ್ಟ) ಸಮಾಧಾನ.

ಇನ್ನು ಅತಿಶ್ರೇಷ್ಠ ದಾಸೋಹಿ ಎಂದರೆ, ತಾನು ಗಳಿಸಿದ ಆದಾಯದಲ್ಲಿ ಒಂದು ಪಾಲನ್ನು ಸ್ವಯಂ ಇಚ್ಛೆಯಿಂದ ತೆಗೆದು ಇಟ್ಟು ಬಿಡುವನು. ಅದನ್ನು ಸ್ವಯಂ ಪ್ರೇರಣೆಯಿಂದ ಒಳ್ಳೆಯ ಕಾರ್ಯಗಳಿಗೆ ಸಲ್ಲಿಸುವನು. ಕೊಡುವುದರಲ್ಲೂ ಸಂತೋಷ-ಸೌಜನ್ಯ ತುಂಬಿ ತುಳುಕುವುದು.

ಒಂದು ತೆಂಗಿನ ಗಿಡವಿದೆ. ಅದು ಕಾಯನ್ನು ಬಿಡುವುದು. ಕಾಯಿಯು ಪಕ್ವವಾಗಿ ಗಿಟುಕಾಗುವುದು. ಕಾಯಿ ಪೂರ್ಣವಾಗಿ ಮಾಗುತ್ತಿದ್ದಂತೆಯೇ ತೊಟ್ಟು ಕಳಚಿ ತಾನೇ ಬೀಳುವುದು. ಹಾಗೆ ದಾನಿಗಳು ಸ್ವಯಂ ಇಚ್ಛೆಯಿಂದ ಎಲ್ಲಿ ಒಳ್ಳೆಯ ಕಾರ್ಯ ನಡೆಯುವುದೋ ಅಲ್ಲಿಗೆ ತಾವಾಗಿ ಮುಂದಾಗಿ ಸಹಾಯ ಮಾಡುವರು. ಇವರು ಉತ್ತಮ ದರ್ಜೆಯವರು.

ಮೋಡವಿದೆ ; ಅದು ನೀರನ್ನು ತುಂಬಿಕೊಂಡಿರುತ್ತದೆ. ಆ ನೀರನ್ನು ಸುರಿಸಲೇಬೇಕು. ಆದರೆ ಹಾಗೆ ಸುರಿಸುವ ಮುನ್ನ ಸಿಡಿಸಿಡಿ ಘಡಘಡ ಎಂದು ಗುಡುಗಿ-ಮಿಂಚಿ ನೀರನ್ನು ಕೊಡುವುದು. ಹಾಗೆ ಕೆಲವು ದಾನಿಗಳು ಕೊಡುವ ಮುನ್ನ ಸಿಟ್ಟಿಗೆದ್ದು ಬೈದು ನಾಲ್ಕಾರು ಬಾರಿ ತಿರುಗಿಸಿ ಅಂತೂ ಕೊಡುವರು.

ಹಸುವಿದೆ ; ಅದರ ಕೆಚ್ಚಲಿನಲ್ಲಿ ಹಾಲು ತುಂಬಿರುತ್ತದೆ. ಯಾರಾದರೂ ಹಿಂಡಿಕೊಳ್ಳದ ಹೊರತು ಅದಕ್ಕೆ ಕೊಡಲು ಆಗುವುದಿಲ್ಲ. ಹಾಗೆ ಹಿಂಡಿಕೊಳ್ಳುವಾಗ ಅದು ಸಂತೋಷದಿಂದ ನಿಂತು ಹಾಲನ್ನು ನೀಡುತ್ತಿರುತ್ತದೆ.

ಹಲಸಿನ ಗಿಡವಿದೆ. ಅದರಲ್ಲಿ ಹಣ್ಣು ಬಿಟ್ಟು ಮಾಗಿ ಸುವಾಸನೆ ಕೊಡುವುದು. ಹಣ್ಣಿನ ವಾಸನೆ ಸುತ್ತ ಮುತ್ತ ಹರಡಿರುವುದು. ಆದರೂ ಅದು ತಾನಾಗಿ ಉದುರಿಸದು. ಯಾರಾದರೂ ಹೋಗಿ ಕಿತ್ತುಕೊಳ್ಳಲೇ ಬೇಕು. ಹಾಗೆಯೇ ಕೆಲವು ದಾನಿಗಳು ಹಸುವಿನಂತೆ, ಹಲಸಿನ ಗಿಡದಂತೆ ಬಂದು ಕೇಳುವವರೆಗೂ ದಾನ ಮಾಡುವುದಿಲ್ಲ. ಯಾರಾದರೂ ಕೇಳಿದಾಗ ಸಂತೋಷದಿಂದ ಕೊಡುವರು.
.
ಇನ್ನು ಒರೆಯಾವು ಎಂದು ಇರುತ್ತದೆ. ಅದರ ಕೆಚ್ಚಲಿನಲ್ಲಿ ಹಾಲು ಇರುತ್ತದೆ. ಹಾಲು ಹಾಗೆಯೇ ಕೆಚ್ಚಲಲ್ಲಿ ಉಳಿದರೆ ಅದಕ್ಕೆ ಬಾಧೆಯೂ ಆಗುತ್ತಿರುತ್ತದೆ. ಆದರೂ ಅದು ಹಾಲು ಕೊಡದೆ ಸತಾಯಿಸುತ್ತದೆ. ಹಿಂಡಿಕೊಳ್ಳಲು ಬಂದವರನ್ನು ಸುತ್ತಾಡಿಸಿ, ಗೋಳುಗುಟ್ಟಿಸುತ್ತದೆ. ಹಾಗೆಯೇ ಕೆಲವು ಶ್ರೀಮಂತರಿರುತ್ತಾರೆ. ಗೊಡ್ಡಾಕಳ ಬಳಿ ಯಾರೂ ಹಾಲು ಹಿಂಡಿಕೊಳ್ಳಲು ಹೇಗೆ ಹೋಗರೂ ಹಾಗೆಯೇ ಬಡವರ ಬಳಿ ಯಾರೂ ದೇಣಿಗೆ ಕೇಳಲು ಹೋಗರು, ಆದರೆ ಶ್ರೀಮಂತರನ್ನು ಅವರ ವ್ಯವಹಾರ, ಬಂಗಲೆ, ಮುಂತಾದುವನ್ನು ನೋಡಿ ಸಂಘ-ಸಂಸ್ಥೆಗಳವರು ಹೋಗುತ್ತಾರೆ. ಆ ಶ್ರೀಮಂತರೋ ಸುತ್ತಾಡಿಸಿ, ಆಸೆ ಹುಟ್ಟಿಸಿ, ಹಲವಾರು ಬಾರಿ ಬರುವಂತೆ ಮಾಡಿ, ಕಡೆಗೆ ನಿರಾಕರಿಸುವರು. ಇಂಥವರು ನಂತರ ಮಾಡುವುದು ದಂಡಕ್ಕೆ . ಅಧಿಕಾರಿಗಳಿಗೆ ಹೆದರಿ ಕೊಡುವರು ಇಲ್ಲವೇ ಕೊರ್ಟು ಕಛೇರಿಗಳಿಗೆ ದಂಡ ಕೊಡಲು ಹಣ ವ್ಯಯ ಮಾಡುವರು. ಇಂಥ ಸ್ವಾರ್ಥಿಗಳು ಸಮಾಜ ಜೀವಿಗಳೇ ಅಲ್ಲ ; ಸಿರಿವಂತಿಕೆಯ ದೌಲತ್ತು ಇರುವಾಗ ಮತಾಂಧರಾಗಿ ವರ್ತಿಸುವರು.

ಅಂಥವರನ್ನು ಕುರಿತು ಅಕ್ಕಮಹಾದೇವಿ ಹೀಗೆ ಹೇಳುವರು !

ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ?
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ ?


ಗಿಡವು ನೆಪಮಾತ್ರಕ್ಕೆ ಇದ್ದು, ಅದು ನೆರಳನ್ನು ಕೊಡದಂತಿದ್ದರೆ ಅದರಿಂದ ಪ್ರಯೋಜನ ಹೇಗಿಲ್ಲವೋ, ಹಸುವು ಮನೆಯಲ್ಲಿದೆ ಎಂಬುವಷ್ಟೇ ಸತ್ಯ ; ಅದು ಹಾಲನ್ನು ಕೊಡದಂಥದಾಗಿದ್ದರೆ ಹೇಗೆ ಉಪಯೋಗವಿಲ್ಲವೋ ಹಾಗೆ, ಶ್ರೀಮಂತಿಕೆ ಇದ್ದು ಅವನಲ್ಲಿ ದಯಾಗುಣವಿಲ್ಲದಿದ್ದರೆ, ಲೋಭಿಯೂ, ಸ್ವಾರ್ಥಿಯೂ ಆದ ಶ್ರೀಮಂತನಿಂದ ಸಮಾಜಕ್ಕಾಗಲೀ, ಧರ್ಮಕ್ಕಾಗಲೀ, ಬಡವರಿಗಾಗಲೀ ಏನೂ ಪ್ರಯೋಜನವಾಗದು.

ಯಾವ ಯಾವ ರೀತಿ ದಾಸೋಹ ಮಾಡಬಹುದು ?

ದಾಸೋಹ ಎಂದರೆ ಕೇವಲ ಅನ್ನದಾಸೋಹವೆ? ಅನ್ನದಾಸೋಹ, ವಿದ್ಯಾದಾಸೋಹ, ಜ್ಞಾನದಾಸೋಹ, ಧನದಾಸೋಹ, ಇವೆಲ್ಲವನ್ನೂ ಮಾಡಬಹುದು.

೧. ಹಸಿದವರಿಗೆ ಉಣ್ಣಿಸುವುದು, ಅನ್ನದಾಸೋಹ ನಡೆಯುವಲ್ಲಿಗೆ ಧನ ಸಹಾಯ ಮಾಡುವುದು, ಬೆಳೆದ ದವಸಧಾನ್ಯ ಕೊಡುವುದು, ಬಡ ವಿದ್ಯಾರ್ಥಿಗಳಿಗೆ ಊಟಕ್ಕೆ ಕೊಡುವುದು ಮುಂತಾದ್ದು ಅನ್ನದಾಸೋಹ .

೨. ಬಡ ವಿದ್ಯಾರ್ಥಿಗಳಿಗೆ ಶುಲ್ಕ ಕೊಟ್ಟು ನೆರವಾಗುವುದು, ಅವರಿಗೆ ಓದಲು ಪುಸ್ತಕ, ಉಡಲು ಬಟ್ಟೆ ಕೊಡಿಸುವುದು ಮುಂತಾದ್ದು ವಿದ್ಯಾದಾಸೋಹ.

೩. ಧಾರ್ಮಿಕ ಸಾಹಿತ್ಯಗಳ ಮುದ್ರಣಕ್ಕೆ ನೆರವು; ತಮ್ಮ ಮನೆಯಲ್ಲಿ ನಡೆಯುವ ವಿಶೇಷ ಧಾರ್ಮಿಕ ಸಮಾರಂಭಗಳಲ್ಲಿ ಧಾರ್ಮಿಕ ಸಾಹಿತ್ಯದ ಪುಟ್ಟ ಪುಟ್ಟ ಪುಸ್ತಕ ಮಾಡಿ ನೆನಪಿನ ಕಾಣಿಕೆಯಾಗಿ ಕೊಡುವುದು, ಧಾರ್ಮಿಕ ಸಾಹಿತ್ಯ ಪ್ರಕಟಿಸುವ ಧರ್ಮ ಸಂಸ್ಥೆಗಳಿಗೆ ಮುಕ್ತ ಮನದಿಂದ ಕೊಡುವುದು.

೪. ಧರ್ಮ ಸಂಸ್ಥೆಗಳು ಕಟ್ಟಿಸುವ ಕಟ್ಟಡಗಳಿಗೆ, ಧರ್ಮಕ್ಷೇತ್ರಗಳ ಅಭಿವೃದ್ಧಿಗೆ ಸಮಾಜ ಸೇವೆ ಮಾಡಲು ನಿಂತ ತ್ಯಾಗಿಗಳಿಗೆ, ಯೋಗಿಗಳಿಗೆ ಕೊಡುವುದೆಲ್ಲ ಧನ ಸಹಾಯ. ಒಬ್ಬ ವ್ಯಕ್ತಿ ವಿದ್ಯೆ, ಬುದ್ದಿ, ಹಣ, ಅಧಿಕಾರಗಳಲ್ಲಿ ಮೇಲೇರಿದಂತೆಲ್ಲ ತಾನು ಬೇರೆ ಯಾವುದೋ ಲೋಕದವನು ಎಂದು ಭಾವಿಸದೆ, ಪರಮಾತ್ಮನು ಒಲಿದು ಕೊಟ್ಟುದು ಇದು ಎಂಬ ಭಾವನೆಯಿಂದ ಕೃತಜ್ಞನಾಗಿ ಎಲ್ಲರೊಡನೆ ಪ್ರೀತಿಯಿಂದ ಒಡನಾಡುತ್ತ ತನ್ನ ಕೈಲಾದಷ್ಟು ನೆರವನ್ನು ಇನ್ನೊಬ್ಬರಿಗೆ ನೀಡುತ್ತ ಹೋಗಬೇಕು. ಆಗ ಮಾತ್ರ ಪರಸ್ಪರ ಪೂರಕವಾಗಿ ಸಮಾಜದಲ್ಲಿ ಜನರು ಬಾಳಲು ಸಾಧ್ಯ.

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಕಾಯಕದ ಆರ್ಥಿಕ ಮತ್ತು ಸಾಮಾಜಿಕ ಮುಖ ತ್ರಿವಿಧ ದಾಸೋಹ Next