ಶರಣ ಸ್ಥಲ | ಅಷ್ಟಾವರಣ Ashtawarana |
ಐಕ್ಯ ಸ್ಥಲ |
..... ...... ....... .......
..... ...... ....... .......
ಐಕ್ಯನೆಂತೆಂಬೆನಯ್ಯಾ? ಜನನ ಮರಣ ವಿರಹಿತವಾಗದನ್ನಕ್ಕ. [1]
..... ...... ....... .......
ಕೂಡಲಸಂಗಮದೇವಾ. --ಗುರು ಬಸವಣ್ಣನವರ ವಚನ
ಷಟಸ್ಥಲಗಳಲ್ಲಿ ಕೊನೆಯದೆ ಐಕ್ಯಸ್ಥಲ. ಐಕ್ಯಸ್ಥಲದಲ್ಲಿ ಸಾಧಕನು ತನ್ನನ್ನು ಸಂಪೂರ್ಣವಾಗಿ ಲಿಂಗತತ್ವ ಅಂದರೆ ಲಿಂಗದಲ್ಲಿ ಸಮರಸಗೊಳಿಸಿಕೊಳ್ಳುವನು. ಆತನ ತನು ಮನ ಪ್ರಾಣಗಳು ಲಿಂಗಸ್ವರೂಪವಾಗುತ್ತವೆ. ಹಾಗೆ ಸಮರಸಗೊಂಡಾಗ ಸಾಧಕನು ಜನನ ಮರಣಗಳಿಂದ ಮುಕ್ತನಾಗುವನು. ಆದರೆ ಅವನು ಜನನ ಮರಣಕ್ಕೊಳಗಾಗಿದ್ದರೆ ಅವನಿಗೆ ಐಕ್ಯಸ್ಥಲ ಸಿದ್ದಿಸಿಲ್ಲ ಎಂದೇ ಹೇಳಬೇಕು.
ಕ್ಷೀರದೊಳಗಣ ಘೃತದಂತೆ, ತಿಲದೊಳಗಣ ತೈಲದಂತೆ,[2]
ಪುಷ್ಪದೊಳಗಣ ಪರಿಮಳದಂತೆ, ಉಪ್ಪು ಉದಕವ ಕೂಡಿದಂತೆ,
ವಾರಿಕಲ್ಲು ವಾರಿಯ ಕೂಡಿದಂತೆ, ಕರ್ಪುರವು ಜ್ಯೋತಿಯ ಕೂಡಿದಂತೆ,
ಮನಲಿಂಗದಲ್ಲಿ ಲೀಯವಾಗಿಹುದೀಗ ಐಕ್ಯ ಸ್ಥಲ ನೋಡಾ;
ಅಪ್ರಮಾಣ ಕೂಡಲಸಂಗಮದೇವ. --ಬಾಲಸಂಗಯ್ಯನ ವಚನ
ಪ್ರಾಣಲಿಂಗಿಸ್ಥಲ, ಶರಣಸ್ಥಲ ಮತ್ತು ಐಕ್ಯಸ್ಥಲ, ಒಂದರ್ಥದಲ್ಲಿ ಧ್ಯಾನದ ಮೂರು ಹಂತಗಳೆನ್ನಬಹುದು. ಪ್ರಾಣಲಿಂಗಿಯು ಪ್ರಾಣವೇ ಲಿಂಗವೆಂದು ಸ್ವಂತ ಅಂತರ್ಬೋಧೆಯಿಂದ ಅರಿಯುತ್ತಾನೆ. ಅಂತಹ ಅಂತರ್ಬೋಧೆ ಆಗುವುದು ಧ್ಯಾನದಲ್ಲಿ ಮಾತ್ರ ಅಂಥ ಬೋಧೆಯನ್ನು (ಜ್ಞಾನವನ್ನು ಪಡೆದ ಶರಣನಿಗೆ ತಾನು ಲಿಂಗದ ಸತಿ, ಲಿಂಗಕ್ಕಾಗಿಯೇ ತಾನು ಜೀವಿಸಿರುವುದು ಎಂಬ ಭಾವ ಉಂಟಾಗುತ್ತದೆ; ಹಾಗೂ ಅವನಿಗೆ ಆನಂದವಿಲ್ಲದ ಕ್ಷಣವೇ ಇಲ್ಲವಾಗುತ್ತದೆ. ಇನ್ನೂ ಹೆಚ್ಚಿನ ಸಾಧನೆಯ ಮೂಲಕ ಧ್ಯಾನದಲ್ಲಿ ತಾನು ಶಿವನಲ್ಲಿ ಬೆರೆತ ಅನುಭವವಾಗುತ್ತದೆ. ಇದನ್ನೆ ಶರಣರು, ನದಿ ಸಮುದ್ರದಲ್ಲಿ ಬೆರೆತಂತೆ, ಜ್ಯೋತಿ ಮುಟ್ಟಿದ ಜ್ಯೋತಿಯಂತೆ, ಮುಂತಾಗಿ ವರ್ಣಿಸುತ್ತಾರೆ. ಇದರಿಂದಾಗಿ ಸಾಧಕನಿಗೆ, ತಾನು ಶಿವನಿಂದ ಪ್ರತ್ಯೇಕವಲ್ಲ, ಶಿವನೂ ತಾನೂ ಒಂದು, ಎಂಬ ಭಾವ ಬೆಳೆಯುತ್ತದೆ. ಇದನ್ನೆ ಐಕ್ಯಸ್ಥಲ ಎಂದು ಕರೆಯಲಾಗಿದೆ.
ಆಲಿಕಲ್ಲ ಕಡಿದು ಪುತ್ಥಳಿಯ ಕಂಡರಿಸುವಂತೆ,
ಉಪ್ಪಿನ ಪೊಟ್ಟಣವನುದಕದಲದ್ದುವಂತೆ,
ಕರ್ಪುರದ ಪ್ರಣತೆಯಲ್ಲಿ ಜ್ಯೋತಿಯ ಬೆಳಗುವಂತೆ
ಸಿದ್ಧಸೋಮನಾಥಲಿಂಗ ಗ್ರಾಹಿ ಅಗ್ರಾಹಿ ತಾ. (೬: ೩೨೦)
ಜೀವಾತ್ಮನೂ (ಅಂಗನೂ) ಪರಶಿವನೂ (ಲಿಂಗವೂ) ಚಿತ್‌ಸ್ವರೂಪ ವಾದುದರಿಂದ ಅಂಗವು ಲಿಂಗದಲ್ಲಿ ವ್ಯತ್ಯಾಸವಿಲ್ಲದಂತೆ ಬೆರೆಯಲು ಸಾಧ್ಯವಾಗುತ್ತದೆ. ಇಲ್ಲಿ ಬೆರೆಯುವುದೆಂದರೆ, ಕೇವಲ ಮುಳುಗುವುದು ಅಥವಾ ಸೇರುವುದಲ್ಲ. ಎಣ್ಣೆ ಅಥವಾ ಕಲ್ಲು ಎಷ್ಟು ವರ್ಷ ನೀರಿನಲ್ಲಿ ಬೆರೆತಿದ್ದರೂ, ಅವು ಒಂದಾಗುವುದಿಲ್ಲ. ಆದರೆ, ಮೊದಲು ಅಂಗವು ಲಿಂಗವೇ ಆಗಿತ್ತಾದುದರಿಂದ, ಅದಕ್ಕೆ ಮತ್ತೆ ಲಿಂಗವಾಗುವುದು ಅಸಾಧ್ಯವೇನಲ್ಲ. ಈ ಕಾರಣದಿಂದಲೇ ಅಂಗ- ಲಿಂಗಗಳ ಸಂಯೋಗದ ಸಂದರ್ಭದಲ್ಲಿ ಆಲಿಕಲ್ಲು ನೀರಿಗೆ ಬಿದ್ದಂತೆ, ಉಪ್ಪಿನ
ಪೊಟ್ಟಣವನ್ನು ನೀರಿಗೆ ಇಳಿಬಿಟ್ಟಂತೆ, ತುಪ್ಪಕ್ಕೆ ತುಪ್ಪವನ್ನು ಬೆರೆಸಿದಂತೆ, ಮುಂತಾದ ಉಪಮೆಗಳ ಬಳಕೆ ಯೋಗ್ಯವಾಗುವುದು. ಇದು ಲಿಂಗ ಮತ್ತು ಅಂಗಗಳ ಐಕ್ಯವೇ ಹೊರತು, ಸಾಯುಜ್ಯವಲ್ಲ.
ನದಿ ಸಮುದ್ರವ ಕೂಡಿದಂತೆ, ತುಪ್ಪ ತುಪ್ಪ ಬೆರೆಸಿದಂತೆ, ಮುಂತಾದ ಉಪಮೆಗಳನ್ನು ವಚನಕಾರರು ಬಳಸಿದರೂ, ಅಲ್ಲಿ ಕೂಟವೆಂಬ ಘಟನೆ ನಡೆಯುವುದಿಲ್ಲ. ನದಿ ಸ್ವಲ್ಪ ದೂರ ಹರಿದು ಸಮುದ್ರವನ್ನು ಕೂಡುವುದು ಒಂದು ಘಟನೆ; ತುಪ್ಪ ತುಪ್ಪವನ್ನು ಬೆರೆಯುವುದು ಒಂದು ಘಟನೆ; ಆದರೆ ಅಂಗ ಲಿಂಗದಲ್ಲಿ ಐಕ್ಯವಾಗಲು ಆ ರೀತಿಯ ಪ್ರಯಾಣ ಮಾಡಬೇಕಾಗಿಲ್ಲ. ಅಥವಾ ಅವುಗಳ ಕೂಟ ಒಂದು ಘಟನೆಯಲ್ಲ. ಅಂಗನು ತಾನು ಪ್ರತ್ಯೇಕ ವ್ಯಕ್ತಿಯಲ್ಲ, ತನ್ನ ಮತ್ತು ಲಿಂಗದ ಮಧ್ಯೆ ಯಾವುದೇ ಗೋಡೆ ಇಲ್ಲ ಎಂದು ತಿಳಿಯುವುದೇ ಅಂಗ-ಲಿಂಗ-ಸಂಗ.
ಐಕ್ಯನಾಗುವುದೆಂದರೆ, ಕೇವಲ ಚಿದ್ವಸ್ತುವಾದ ಆತ್ಮವು ಕೇವಲ ಚಿದ್ವಸ್ತುವಾದ ಪರಮಾತ್ಮನಲ್ಲಿ ಬೆರೆಯುವುದು ಎಂದರ್ಥವಲ್ಲ. ಶರಣರ ಪ್ರಕಾರ, ಪರಶಿವ ಕೇವಲ ಚಿದ್ವಸ್ತುವಲ್ಲ. ಅವನು ಶಕ್ತಿ ಎಂಬ ವಿಶೇಷಣವುಳ್ಳ ಚಿದ್ವಸ್ತು (ಶಕ್ತಿವಿಶಿಷ್ಟ ಶಿವ), ಅದೇ ರೀತಿ ಆತ್ಮವೆಂದರೆ ಭಕ್ತಿವಿಶಿಷ್ಟ ಅಂಗ. ಇಲ್ಲಿ ಭಕ್ತಿ ಎಂದರೆ 'ಶುದ್ಧವಾದ ಶಕ್ತಿ' ಎಂದರ್ಥ. ಐಕ್ಯಕ್ಕೆ ಅರ್ಹನಾದ ಸಾಧಕನಲ್ಲಿ ಪೃಥ್ವಿ, ಅಪ್ಪು ಮುಂತಾದ ಶಕ್ತಿಗಳು ಭಕ್ತಿಗಳಾಗಿ ಪರಿವರ್ತಿತವಾಗಿವೆ. ಅದುದರಿಂದ ಸಾಧಕ ಲಿಂಗೈಕ್ಯನಾಗಿದ್ದಾನೆ ಎಂದರೆ, ಭಕ್ತಿವಿಶಿಷ್ಟ ಅಂಗವು (ಆತ್ಮವು) ಶಕ್ತಿವಿಶಿಷ್ಟ ಶಿವನಲ್ಲಿ ಬೆರೆತಿದೆ ಎಂದರ್ಥ.
ಕಂಡೆನೆಂಬುದು ಕಂಗಳ ಮರವೆ, ಕಾಣೆನೆಂಬುದು ಮನದ ಮರವೆ,
ಕೂಡಿದೆನೆಂಬುದು ಅರುಹಿನ ಮರವೆ, ಅಗಲಿದೆನೆಂಬುದು ಮರಹಿನ ಮರವೆ,
ಇಂತು-ಕಂಡೆ ಕಾಣೆ ಕೂಡಿದೆ ಅಗಲಿದೆ ಎಂಬ
ಭ್ರಾಂತಿಸೂತಕವಳಿದು ನೋಡಲು
ಗುಹೇಶ್ವರಲಿಂಗವನಗಲಲೆಡೆಯಿಲ್ಲ ಕೇಳಾ, ಎಲೆ ತಾಯೆ. (೨: ೧೦೩೯)
ಕೂಡಲಿಲ್ಲದ ಅಗಲಲಿಲ್ಲದ ಘನವ,
ಕೂಡುವ ಪರಿ ಎಂತಲ್ವಾ?
ಗುಹೇಶ್ವರಲಿಂಗವ ಬೇರೆ ಮಾಡಿ
ಬೆರಸಬಾರದು ಕೇಳಾ ಕೆಳದಿ. (೨: ೧೧೨೮)
ಬೆಚ್ಚು ಬೇರಿಲ್ಲದ ಸುಖವಚ್ಚಾದ ಪರಿಯ ನೋಡಾ ಅಯ್ಯಾ
ಅಂಗವಿಲ್ಲದ ಕೂಟ, ಸಮರಸವಿಲ್ಲದ ಬೇಟ,
ಸಮರತಿಯಿಲ್ಲದಾನಂದ ಸನ್ನಿಹಿತವಾಗಿ,
ಸೌರಾಷ್ಟ್ರ ಸೋಮೇಶ್ವರಲಿಂಗದ ಸಂಗ,
ಏನೂ ಅಲ್ಲದ ನಿಸ್ಸಂಗದ ನಿಜಸುಖವನೇನೆಂಬೆನಯ್ಯಾ. (೬: ೧೦೪೦)
ಅಂಗ ಅಥವಾ ಶುದ್ಧವಾದ ಆತ್ಮನು ಭೌತವಸ್ತುವಲ್ಲ ಎಂಬುದನ್ನು ಗಮನಿಸಿದರೆ, ಅದು ಏಕೆ ಕ್ರಮಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅದೇ ರೀತಿ, ಪರಶಿವನೂ ಚಿದ್ವಸ್ತುವಾದುದರಿಂದ ಮತ್ತು ಅವನು ಆಗಲೆ ಎಲ್ಲ ಕಡೆಯೂ ವ್ಯಾಪಿಸಿಕೊಂಡಿರುವುದರಿಂದ ಅವನು ಯಾವ ಕಡೆಗೂ ಚಲಿಸಬೇಕಾಗಿಲ್ಲ.
ಐಕ್ಯನ ಅನೇಕ ವಿಶಿಷ್ಟ ಲಕ್ಷಣಗಳಲ್ಲಿ ಮನನಷ್ಟ ಅಥವಾ ಅಹಂನಷ್ಟ ಮುಖ್ಯವಾದುದು. ನಾವು ಏನನ್ನಾದರೂ
(೧) ನೋಡುತ್ತಿರುವಾಗ ಅಥವಾ ಕೇಳುತ್ತಿರುವಾಗ,
(೨) ಸುಖ ಅಥವಾ ದುಃಖವನ್ನು ಅನುಭವಿಸುತ್ತಿರುವಾಗ ಮತ್ತು
(೩) ಯಾವುದಾದರೂ ಕಾರ್ಯ ಮಾಡಲು ಅಥವಾ ಮಾಡದಿರಲು ನಿರ್ಧರಿಸುವಾಗ,
ನಮಗೆ ಗೊತ್ತಿಲ್ಲದಂತೆಯೇ 'ನಾನು' ಎಂಬ ಭಾವ ಮೂಡುತ್ತದೆ. ನಾನು ನೋಡುತ್ತಿದ್ದೇನೆ, ನಾನು ಈ ಕೆಲಸ ಮಾಡಬೇಕು, ಎಂಬಲ್ಲೆಲ್ಲಾ ನಾನು ಎಂಬುದು ವ್ಯಕ್ತವಾಗಿಯೋ ಅವ್ಯಕ್ತವಾಗಿಯೋ ಕಾಣಿಸಿಕೊಳ್ಳುವ ಅಂಶ. ನಾನು ಎಂಬುದಿಲ್ಲದ ಜಾಗ್ರತ ವ್ಯವಹಾರವೇ ಇಲ್ಲ. ಅದರೆ, ಅಂಗ ಲಿಂಗದಲ್ಲಿ ಐಕ್ಯವಾದಾಗ 'ನಾನು' ಇಲ್ಲವಾಗುತ್ತದೆ. ಇದನ್ನೆ ಅಹಂನಷ್ಟ ಅಥವಾ ಮನನಷ್ಟ ಎನ್ನುವುದು.
ಅಂಗದ ಮೇಲೆ ಲಿಂಗ, ಲಿಂಗದ ಮೇಲೆ ಅಂಗವಿದೇನೊ?
ಮನದ ಮೇಲೆ ಅರಿವು, ಅರಿವಿನ ಮೇಲೆ ಕುರುಹು ಇದೇನೊ?
ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು.
'ನೀ' 'ನಾ' ಎಂಬುದೆ? - ತೆರೆಹಿಲ್ಲ ಗುಹೇಶ್ವರಾ. (೨: ೩೧೦)
ನಿರ್ವಿಕಲ್ಪಿತವೆಂಬ ನಿಜದೊಳಗಯ್ಯಾ,
ನಿರಹಂಭಾವದಲ್ಲಿ ನಾನಿದ್ದೆನಯ್ಯಾ
ನೋಡಿಹೆನೆಂದಡೆ ನೋಡಲಿಲ್ಲ, ಕೇಳಿಹೆನೆಂದಡೆ ಕೇಳಲಿಲ್ಲ.
ಘನನಿರಂಜನದ ಬೆಳಗಿಂಬಾದುದನೇನೆಂಬೆ ಗುಹೇಶ್ವರಾ? (೨: ೬೯೨)
ಅಹಂನಷ್ಟವಾದ ಮೇಲೆ ಐಕ್ಯನಿಗೆ ಒಳಗು-ಹೊರಗುಗಳ ವ್ಯತ್ಯಾಸ ಇಲ್ಲವಾಗುವುದರಿಂದ, ತಾನು ಪರಶಿವನಲ್ಲಿ (ಲಿಂಗದಲ್ಲಿ) ಬೆರೆತಿರುವುದರ ಅರಿವು ಸಹಾ ಅವನಿಗೆ ಇರುವುದಿಲ್ಲ. ಅವನಿಗೆ ಮತ್ತಾವ ಅರಿವೂ ಇರುವುದಿಲ್ಲ. ತನಗೆ ಯಾವ ಅರಿವೂ ಇಲ್ಲ ಎಂಬ ಅರಿವು ಸಹ ಇಲ್ಲದ ಸ್ಥಿತಿ ಅದು.
ಪೃಥ್ವಿಯೊಳಗಿಲ್ಲ, ಆಕಾಶದೊಳಗಿಲ್ಲ,
ಚತುರ್ದಶ ಭುವನಾದಿ ಭುವನಂಗಳೊಳಗೆಯೂ ಇಲ್ಲ.
ಹೊರಗೆಯೂ ಇಲ್ಲ - ಏನಾಯಿತ್ತೆಂದರಿಯೆನಯ್ಯಾ
ಗುಹೇಶ್ವರ ಅಂದೂ ಇಲ್ಲ ಇಂದೂ ಇಲ್ಲ ಎಂದೂ ಇಲ್ಲ. (೨: ೬೨೧)
ನಾಮಾನಾಮವೆಂದು ನೀನು ನಾಮಕ್ಕೆ ಬಳಲುವೆ.
ನಾಮವಾವ ಸೀಮೆಯೊಳಗಿಪ್ಪುದು ಹೇಳೆಲೆ ಮರುಳೆ?
ನಾಮವೂ ಇಲ್ಲ ಸೀಮೆಯೂ ಇಲ್ಲ,
ಒಡಲೂ ಇಲ್ಲ ನೆಳಲೂ ಇಲ್ಲ,
ನಾನೂ ಇಲ್ಲ, ನೀನೂ ಇಲ್ಲ, ಏನೂ ಇಲ್ಲ,
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ, (೭:೪೮೪)
ಹೀಗೆ ನಾನು ನೀನು ಎಂಬ ದ್ವೈತ ಅಳಿಯುವುದನ್ನೆ ಐಕ್ಯ ಅಥವಾ ಅದ್ವೈತ ಎನ್ನುತ್ತಾರೆ. ಲಿಂಗೈಕ್ಯವು ಅದ್ವೈತ; ಅದ್ವೈತವು ಅಹಂನಷ್ಟ. ಅಹಂನಷ್ಟವಾಗದೆ ಅದ್ವೈತವಿಲ್ಲ. ಯಾರಾದರೂ ನನಗೆ ಅಹಂ ನಷ್ಟವಾಗಿದೆ ಅಥವಾ ನನಗೆ ಅದ್ವೈತ ಸಿದ್ಧಿಸಿದೆ ಅಥವಾ ನಾನು ಲಿಂಗದಲ್ಲಿ ಐಕ್ಯವಾಗಿದ್ದೇನೆ ಎಂದು ಹೇಳಿದರೆ, ಅದು ಶುದ್ಧ ಸುಳ್ಳು ಎನಿಸಿಕೊಳ್ಳುತ್ತದೆ. ಹಾಗೆನ್ನುವುದೂ ಒಂದೆ, ನಾನು ಸತ್ತಿದ್ದೇನೆ ಎಂದು ಹೇಳುವುದೂ ಒಂದೇ.
ಬಯಲ ಬೆರಗಿನ ಸುಖದ ಸವಿಯ ಬೆರಗಲ್ಲದೆ ಕಾಣೆ!
ಕಾಣೆನೆಂಬ ನುಡಿಗೆಡೆಯ ಕಾಣೆ!
ಕುರುಹುಗೆಟ್ಟು ಅರಿವ ನೆರೆಯರಿದು
ಬೆರಸಿದೆನೆಂಬ ಬರುನುಡಿಯ ನುಡಿಗೆ
ನಾಚಿದೆನಯ್ಯಾ ಗುಹೇಶ್ವರಾ. (೨: ೬೯೪)
'ನಾ' 'ನೀ' ಎಂಬ ಭೇದ ಅಂದೂ ಇಲ್ಲ, ಇಂದೂ ಇಲ್ಲ
ಸಾಲೋಕ್ಯನಲ್ಲ ಸಾಮೀಪ್ಯನಲ್ಲ ಶರಣ.
ಸಾರೂಪ್ಯನಲ್ಲ ಸಾಯುಜ್ಯವಲ್ಲ ಶರಣ.
ಕಾಯನಲ್ಲ ಅಕಾಯನಲ್ಲ
ಗುಹೇಶ್ವರಲಿಂಗ ತಾನೆಯಾಗಿ, (೨: ೬೮೯)
ಅಹಂನಷ್ಟವಾಗುವುದು ಅಥವಾ ನಾನಿಲ್ಲವಾಗುವುದು ಎಂದರೆ, ಅನುಭಾವಿಯು (ಐಕ್ಯನು) ಸತ್ತುಹೋಗುತ್ತಾನೆ ಎಂದರ್ಥವಲ್ಲ. ಅವನಲ್ಲಿ ನಾನೆಂಬ ಪ್ರತ್ಯೇಕತಾಭಾವ ಇಲ್ಲ ಎಂದಷ್ಟೇ ಅದರರ್ಥ. ತಾನೆಂಬ (ಜೀವ)ಭಾವ ಹೋಗಿ, ಅದರ ಬದಲು ತಾನು ಪರಶಿವನ (ಲಿಂಗದ) ಅಂಗ ಎಂಬ ಭಾವ ಬರುತ್ತದೆ. ನಮ್ಮ ದೇಹ, ಇಂದ್ರಿಯಾದಿಗಳು ಹೇಗೆ ಆತ್ಮದ ಅಂಗಗಳಾಗಿದ್ದುಕೊಂಡು, ಆತ್ಮದ ಇಷ್ಟಾರ್ಥಗಳನ್ನು ಪೊರೈಸುತ್ತವೆಯೋ ಹಾಗೆ, ಐಕ್ಯನು ತಾನು ಲಿಂಗದ ಅಂಗ ಎಂದೂ ತಾನು ಲಿಂಗದ ಇಷ್ಟದಂತೆ ನಡೆಯುತ್ತೇನೆ ಎಂದೂ ಭಾವಿಸುತ್ತಾನೆ. ಅಂದರೆ, ಐಕ್ಯನಿಗೆ ತನಗೆ ತನ್ನವೇ ಆದ ತನು, ಮನ, ಭಾವಗಳಿವೆ ಎಂಬ ಭಾವ ಹೋಗಿ, ತನುಮನಾದಿಗಳು ಲಿಂಗದವು ಎಂಬ ಭಾವ ಉಂಟಾಗುತ್ತದೆ.
ತನು ನಿಮ್ಮನಪ್ಪಿ ಮಹಾತನುವಾದ ಬಳಿಕ ತನುವೆಂಬುದು ಮತ್ತೆಲ್ಲಿಯದೊ?
ಮನ ನಿಮ್ಮನಪ್ಪಿ ಘನಮನವಾದ ಬಳಿಕ ಮನವೆಂಬುದು ಮತ್ತೆಲ್ಲಿಯದೊ?
ಭಾವ ನಿಮ್ಮ ನಪ್ಪಿ ನಿರ್ಭಾವವಾದ ಬಳಿಕ ಭಾವವೆಂಬುದು ಮತ್ತೆಲ್ಲಿಯದೊ?
ಇಂತೀ ತ್ರಿವಿಧವು ಲಿಂಗದಲ್ಲಿ ನಿರ್ಲೆಪವಾಗಿ ಮೈದೋರದಿರವ,
ಕೂಡಲಚೆನ್ನಸಂಗಯ್ಯ ತಾನೆ ಬಲ್ಲ. (೩: ೧೨೫೪)
ನಿಮ್ಮ ಪೂಜಿಸಿಹೆನೆಂದಡೆ ತನುವಿಲ್ಲವಯ್ಯಾ ಎನಗೆ.
ಅದೇನು ಕಾರಣವೆಂದೊಡೆ. ಆ ಪೂಜಿಸುವ ತನು ನೀವೆ ಆದಿರಾಗಿ,
ನಿಮ್ಮ ನೆನೆದಿಹೆನೆಂದಡೆ ಮನವಿಲ್ಲವಯ್ಯಾ ಎನಗೆ.
ಅದೇನು ಕಾರಣವೆಂದೊಡೆ, ಆ ನೆನೆವ ಮನ ನೀವೆ ಆದಿರಾಗಿ
ನಿಮ್ಮ ಅರಿದಿಹೆನೆಂದಡೆ ಅರುಹುವಿಲ್ಲವಯ್ಯಾ ಎನಗೆ.
ಅದೇನು ಕಾಣವೆಂದೊಡೆ, ಆ ಅರುಹು ನೀವೇ ಆದಿರಾಗಿ.
ಅಖಂಡೇಶ್ವರಾ, ನಿಮ್ಮೊಳಗೆ ನಾನು
ಉರಿಯುಂಡ ಕರ್ಪುರದಂತಿರ್ದೆನಯ್ಯಾ ದೇವರದೇವಾ. (೧೪: ೯೩೧)
ಐಕ್ಯನು ಲಿಂಗದೊಳಗೆ ಲೀನವಾಗಿರುವುದರಿಂದ ಹಾಗೂ ಅವನಿಗೆ ಅದೇ ಶ್ರೇಷ್ಠ ಧೈಯವಾಗಿರುವುದರಿಂದ, ಅವನಿಗೆ ಮತ್ತೇನನ್ನಾದರೂ ಪಡೆಯಬೇಕು ಎಂಬ ಬಯಕೆಯೇ ಇಲ್ಲ. ಅವನಿಗೆ ಎಲ್ಲಿಲ್ಲದ ಶಾಂತಿ, ಸಮಾಧಾನ ಸಿಕ್ಕಿವೆ. ಅಥವಾ ಅವನು ಜೀವನ್ಮುಕ್ತ.
ಮಾಡುವಂತಿರಬೇಕು ಮಾಡದಂತಿರಬೇಕು.
ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.
ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿಬೇಕು. (೧: ೧೩೧೪)
ಕಾಯಗುಣವಳಿದು ಜೀವನ್ಮುಕ್ತನಾದ ಬಳಿಕ
ಸಮ್ಯಕ್ ಜ್ಞಾನವೆಂಬ ಶಾಂತಿ ದೊರೆಕೊಂಡಿತ್ತು ನೋಡಿರೆ!
ಅಂತರಂಗ ಬಹಿರಂಗವೆಂಬುದನು ಅರಿಯನಾಗಿ
ದ್ವೈತಾದ್ವೈತವ ನೀಕರಿಸಿ, ನಿರ್ವಾಣ ನಿಷ್ಪತ್ತಿಯಾಗಿ,
ಗುಹೇಶ್ವರಾ, ನಿಮ್ಮ ಶರಣನನುಪಮ ಸುಖಿಯಾಗಿದನು. (೨: ೧೦೮೫)
ಕ್ಷೀರಸಾಗರದೊಳಗಿರ್ದ ಹಂಸೆಗೆ ಹಾಲ ಬಯಸಲುಂಟೆ?
ಪುಷ್ಪದೊಳಗಿರ್ದ ತುಂಬಿಗೆ ಪರಿಮಳವನರಸಲುಂಟೆ?
ತಾವು ಲಿಂಗದೊಳಗಿರ್ದು,
ಬೇರೆ ಇತರ ಕಾಮ್ಯಾರ್ಥದೊಳಗಿರ್ಪ
ಭ್ರಾಂತರನೇನೆಂಬೆನಯ್ಯಾ ಗುಹೇಶ್ವರಾ. (೨: ೧೧೫೧)
ಹೀಗೆ, ಲಿಂಗ ಮತ್ತು ತಾನು ಬೇರೆಯಲ್ಲ ಎಂದು ತಿಳಿದ ಐಕ್ಯನ ಸ್ಥಿತಿಗೆ ಲಿಂಗಾಂಗ ಸಾಮರಸ್ಯ ಎಂದು ಹೆಸರು. ಸಾಮರಸ್ಯವೆಂದರೆ, ಅಂಗನ ಮತ್ತು ಲಿಂಗದ ನಡುವೆ ಯಾವ ಭೇದವೂ ಇಲ್ಲ, ಲಿಂಗದ ಬಯಕೆ, ನಿರ್ಧಾರ, ಆನಂದಗಳೇ ತನ್ನ ಬಯಕೆ, ನಿರ್ಧಾರ ಮತ್ತು ಆನಂದ ಎಂದು ತಿಳಿಯುವುದು. ಎರಡು ಮನಸ್ಸುಗಳು ಒಂದಾಗುವುದು ಅದರ ಲಕ್ಷಣ.
ಮನ ಮನ ಬೆರಸಿ ಸಮರತಿಯ ಸಂಗದಲ್ಲಿ ಸುಖಿಗಳಾಗಿಪ್ಪ
ಶರಣರ ಸಂಗಸುಖವನು ಆ ಶರಣರೆ ಬಲ್ಲರಲ್ಲದೆ
ಕೆಲದಲ್ಲಿದ್ದವರಿಗೆ ಅರಿಯಬಹುದೆ?
ನಿಜಗುಣಭರಿತ ಶಿವಶರಣರ ನಿಲವ
ಕಂಡಿಹೆನೆಂದಡೆ ಕಾಣಬಹುದೆ? (೨: ೧೪೪೬)
ಮನ ಮನ ಬೆರಸಿದವರೆಂತಿಪ್ಪರಂತಿಪ್ಪರು.
ಅವರ ಪರಿಯನರಿಯಬಾರದು ಕೇಳಾ.
ಇದಿರಿಚ್ಚೆಯರಿಯದಿಪ್ಪರು.
ಒಳಗೆ ನೋಡಿದರೆ ಬಟ್ಟಬಯಲಲ್ಲಿಪ್ಪರು
ಗುಹೇಶ್ವರನ ಶರಣರು ತಾವಿಲ್ಲದ ಮಹಿಮರೆಂಬುದ
ನಿನ್ನಿಂದಲರಿದೆ ನೋಡಾ ಸಿದ್ಧರಾಮಯ್ಯಾ. (೨: ೧೪೪೫)
ದೃಷ್ಟ ನಷ್ಟಕ್ಕೇನು ದೃಷ್ಟ? ಭಾವ ನಷ್ಟವೇ ದೃಷ್ಟ
ಭಾವ ನಷ್ಟಕ್ಕೇನು ದೃಷ್ಟ? ಅನುಭಾವ ನಷ್ಟವೇ ದೃಷ್ಟ
ಅನುಭಾವ ನಷ್ಟಕ್ಕೇನು ದೃಷ್ಟ? ಸ್ವಯ ಪರವಾವುದೆಂದರಿಯದುದೆ ದೃಷ್ಟ
ಸ್ವಯ ಪರವಾವುದೆಂದರಿಯದುದಕ್ಕೇನು ದೃಷ್ಟ?
ಕೂಡಲಚೆನ್ನಸಂಗನೆಂದು ಎನ್ನದುವೆ ದೃಷ್ಟ (೩: ೮೩೪)
ಹೀಗೆ ತನ್ನ ತಾನರಿಯುವುದನ್ನು ವರ್ಣಿಸಲು ಸಾಧ್ಯವಿಲ್ಲವೆಂದು ತಿಳಿದಿದ್ದ ಶರಣರು ಅದನ್ನು ವರ್ಣಿಸುವ ಗೊಡವೆಗೇ ಹೋಗುವುದಿಲ್ಲ. ಒಂದು ವೇಳೆ ತಾವು ಅನುಭವಿಸಿದ ಘನಲಿಂಗವನ್ನು ಮಾತಿಗೊಳಪಡಿಸಿದರೆ, ಅದು ಘನವನ್ನೇ ಕಿರಿದು ಮಾಡಿದ ದೋಷಕ್ಕೊಳಗಾಗುತ್ತದೆ. 'ನಾನು ಕಂಡೆ' ಎಂಬುದೇ ಆಗ ಹುಸಿಯಾಗುತ್ತದೆ.
ಘನವ ಮನ ಕಂಡು ಅದನೊಂದು ಮಾತಿಂಗೆ ತಂದು ನುಡಿದಡೆ
ಅದಕ್ಕದೇ ಕಿರಿದು ನೋಡಾ.
ಅದೇನೂ ಇಲ್ಲದ ನಿಸ್ಸಂಗದ ಸುಖವು ಗುಹೇಶ್ವರ! (೨: ೬೫೬)
ಅದ್ವೈತವ ನೆಲೆಗೊಳಿಸಿ ಎರಡಳಿದೆನೆಂಬವರು
ಶಿಶುಕಂಡ ಕನಸಿನಂತಿರಬೇಕಲ್ಲದೆ,
ನುಡಿದು ಹೇಳುವನ್ನಕ್ಕರ ಭಿನ್ನವಲ್ಲದೇನು ಹೇಳಾ?
ಅರಿವರತು ಮರುಹು ನಷ್ಟವಾಗಿ ಗುರುವ ತೋರಿದೆನೆಂಬರು.
ಇದಿರಿಂಗೆ ಕರುಳಕಲೆಯನರುಹುವ ಪರಿಯೆಂತು ಹೇಳಾ?
ಮನದ ಕೊನೆಯ ಮೊನೆಯ ಮೇಲಣ ಅರಿವಿನ ಕಣ್ಣಮುಂದೆ
ಸ್ವಯಂಪ್ರಕಾಶ ತೋರುತ್ತಿದ್ದಡೆ ತಾನಾಗಬಲ್ಲನೆ?
ನೆರೆಯರಿತು ಮರೆಯಬಲ್ಲಡೆ
ಎನ್ನ ಅಜಗಣ್ಣನಂತೆ ಶಬ್ದಮುಗ್ಧನಾಗಿರಬೇಕಲ್ಲದೆ,
ಶಬ್ದಸಂದಣಿಯ ಮಾತು ಸಯವಲ್ಲ ನೋಡಯ್ಯಾ. (೫: ೧೧೦೨)
ಐಕ್ಯನು ಮುಕ್ತನು. ಅಂದರೆ ಬಂಧನಕ್ಕೆ ಕಾರಣವಾದ ಮರೆವು (ಅಜ್ಞಾನ), ಕರ್ಮ, ಸ್ವಾರ್ಥ ಆಸೆಗಳು, ಸಂಶಯಗಳು ಯಾವುವೂ ಅವನಲ್ಲಿಲ್ಲ.
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ;,
ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ,
ಪ್ರಸಾದವಿಕಾರಿಗೆ ಮನೋವಿಕಾರವೆಂಬುದಿಲ್ಲ.
ಇಂತೀ ತ್ರಿವಿಧ ಗುಣವನರಿದಾತನು
ಅಚ್ಚ ಲಿಂಗೈಕ್ಯನು ಕೂಡಲಸಂಗಮದೇವಾ. (೧: ೭೯೬)
ದುಃಖ ಹೋಯಿತ್ತು ತನ್ನಲ್ಲಿ ತಾನಿಲ್ಲದೇ,
ಸುಖ ನಿಂದುದು ತನ್ನಲ್ಲಿ ತಾನು ನಿಜವಾಗಿ,
ಭ್ರಾಂತುದೋರದೆ, ಸಕಳೇಶ್ವರದೇವಾ ತಾನಾಗಿ ನಿಂದವಂಗೆ. (೯: ೪೩೧)
ಐಕ್ಯನು ಮುಕ್ತನೆನ್ನುವುದೂ ಒಂದೇ, ಅವನಲ್ಲಿ ಹಳೆಯ ಕರ್ಮಗಳಾಗಲಿ ಹೊಸ ಕರ್ಮವನ್ನುಂಟು ಮಾಡುವ ಸ್ವಾರ್ಥ ಆಸೆಗಳಾಗಲೀ ಇಲ್ಲ, ಎನ್ನುವುದೂ ಒಂದೇ. ಹೀಗೆ ಕರ್ಮಗಳಿಂದ ಮುಕ್ತನಾದವನಿಗೆ ಪುನರ್ಜನ್ಮವಿಲ್ಲ. ಮುಂದಿನ ಸೃಷ್ಟಿಯಲ್ಲಿ ಅವನು ಹುಟ್ಟುವುದಿಲ್ಲ; ಆದುದರಿಂದ ಅವನಿಗೆ ಸಾವೂ ಇಲ್ಲ, ಪ್ರಳಯವೂ ಇಲ್ಲ. ಸಮುದ್ರವನ್ನು ಸೇರಿದ ನದಿಗಳು ಹೇಗೆ ಮರಳಿ ನದಿಯಾಗುವುದಿಲ್ಲವೋ ಹಾಗೆ ಲಿಂಗೈಕ್ಯನಾದವನು ಮರಳಿ ಸಂಸಾರದಲ್ಲಿ ಹುಟ್ಟುವುದಿಲ್ಲ.
ಅಂಬುಧಿಯೊಳಗಾದ ನದಿಗಳು ಮರುಳುವುದೆ?
ಉರಿಯೊಳಗಾದ ಕರ್ಪುರ ರೂಪಿಂಗೆ ಬಪ್ಪುದೆ?
ಮರುತನೊಳಗಾದ ಪರಿಮಳ ಲೇಪನಕ್ಕೆ ಬಪ್ಪುದೆ?
ಲಿಂಗವನರಿದು ಲಿಂಗೈಕ್ಯವಾದ ಶರಣ
ಮರಳಿ ಹುಟ್ಟುವನೆ ಗುಹೇಶ್ವರಾ? (೨: ೭೩೮)
[1] ಸಮಗ್ರ ವಚನ ಸಾಹಿತ್ಯ ಸಂಪುಟ - ೧, ವಚನ ಸಂಖ್ಯೆ: ೫೧೦, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ,
ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
[2] ಪುಸ್ತಕ: ಬಾಲಸಂಗಯ್ಯನ ವಚನಗಳು, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರು:
ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಶರಣ ಸ್ಥಲ | ಅಷ್ಟಾವರಣ Ashtawarana |