![]() | ಬಸವೇಶ್ವರ ಪೂಜಾವ್ರತ ಅಧ್ಯಾಯ -೩ | ಬಸವೇಶ್ವರ ಪೂಜಾವ್ರತ ಅಧ್ಯಾಯ - ೫ | ![]() |
ಬಸವೇಶ್ವರ ಪೂಜಾವ್ರತ ಅಧ್ಯಾಯ - ೪ |
✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
ಬಸವಂ ಪ್ರಣವಾಕಾರಂ
ಬಸವಂ ಶರಣಾಗತ ರಕ್ಷಕ ವರಲೋಲಂ
ಬಸವಂ ಜನ್ಮಕುಠಾರಂ
ಬಸವಂ ನಮಾಮಿ ಶ್ರೀ ಗುರು ಬಸವೇಶಂ
ಶ್ರೀ ಮಹಾಕಾರಣಿಕ ಪ್ರಣವರೂಪಿ ಬಸವಗುರು
ಕಾಮಿತಾರ್ಥ ಫಲವನೀವ ದೇವಕಂದ ಬಸವಗುರು |
ದೇವನ ಕರುಣೆ ಧರಿಸಿಕೊಂಡು ಇಳೆಗೆ ಬಂದು ಬಸವಗುರು
ಭವದ ತಿಮಿರ ಕಳೆಯುವಂಥ ಭಾನುವಾದೆ ಬಸವಗುರು |
ಈರು ಆರು ನೂರು ವರುಷ ನಡೆಯುತಿರಲು ಬಸವಗುರು
ಭರತ ಭೂಮಿಯಲ್ಲಿ ಮರೆವು ವ್ಯಾಪಿಸಿತ್ತು ಬಸವಗುರು
ವರ್ಣಭೇದ ವರ್ಗಭೇದ ತುಂಬಿ ತುಳುಕೆ ಬಸವಗುರು
ಪೂರ್ಣಜ್ಞಾನವಿರದ ಜನತೆ ಬಳಲುತ್ತಿತ್ತು ಬಸವಗುರು |
ಪಂಕದಲ್ಲಿ ಬಿದ್ದ ಮುಗ್ಧ ಪಶುವಿನಂತೆ ಬಸವಗುರು
ಶಂಕೆಯಲ್ಲಿ ಮನುಜ ಕುಲವು ತೊಳಲುತ್ತಿತ್ತು ಬಸವಗುರು || ೧೦ |||
ಮರುಕದಿಂದ ಮೇಲಕೆತ್ತಿ ಧೈರ್ಯವಿತ್ತೆ ಬಸವಗುರು
ಕರುಣಹೃದಯಿ ತ್ಯಾಗಮಯಿ ಬಿರುದ ತಾಳ್ದೆ ಬಸವಗುರು |
ಬಾಗೇವಾಡಿ ಮಾದಿರಾಜ ಮುದ್ದು ತನುಜ ಬಸವಗುರು
ಆಗ್ರಪುರುಷ ಶರಣಶ್ರೇಷ್ಠ ಅಂಘ್ರಿ ಪರುಷ ಬಸವಗುರು |
ತಾಯಿ ಮಾದಲಾಂಬೆಯುದರದಲ್ಲಿ ಬಂದೆ ಬಸವಗುರು
ತಾಯಿ, ತಂದೆ ದೇವನೆಂದು ಅವನಿಗೊಲಿದೆ ಬಸವಗುರು |
ವೇದಶಾಸ್ತ್ರ ಪುರಾಣಗಳ ಒರೆಗೆ ಇಕ್ಕಿ ಬಸವಗುರು
ಸ್ವಾದ ಸಹಿತ ವಚನ ಸುಧೆಯ ಜಗಕೆ ಇತ್ತೆ ಬಸವಗುರು |
ಕೊರಳ ಬಳಸಿ ಇದ್ದ ಜಾತಿಪಾಶ ಕಿತ್ತೆ ಬಸವಗುರು
ಅರಿವಿನಿಂದ ಬೆರೆದ ಧೀರ ನಿಲುವ ತಳೆದೆ ಬಸವಗುರು || ೨೦ ||
ಗಾಂಪನಂತೆ ಮೂಢತನದ ಬಲೆಗೆ ಸಿಗದೆ ಬಸವಗುರು
ಸಂಪ್ರದಾಯಕ್ಕಿಂತ ಸತ್ಯ ಶ್ರೇಷ್ಠವೆಂದೆ ಬಸವಗುರು |
ಹೆಕ್ತ ತಾಯಿ ತಂದೆಯರನು ತೊರೆದೆ ನೀನು ಬಸವಗುರು
ಸ್ತುತ್ಯ ಮಾರ್ಗ ಹಿಡಿದು ವಿಶ್ವಜ್ಯೋತಿಯಾದೆ ಬಸವಗುರು |
ಕೂಡಲದ ಕ್ಷೇತ್ರದಲ್ಲಿ ತಪವಗೈದೆ ಬಸವಗುರು
ಹಾಡಿ ಮೆರೆದೆ ದೇವನ ಕರುಣೆ ಧರಿಸಿಕೊಂಡು ಬಸವಗುರು |
ಜಗದ ಗುರುಗಳಾರು ನಿನಗೆ ಗುರುಗಳಲ್ಲ ಬಸವಗುರು
ಜಗದ ಒಡೆಯ ಲಿಂಗದೇವನ ಕರುಣೆ ಪಡೆದೆ ಬಸವಗುರು |
ದೇವನಾಜ್ಞೆ ಹೊತ್ತು ಕಲ್ಯಾಣ ಸೇರ‍್ದೆ ಬಸವಗುರು
ಪಾವನಿಸಿದೆ ಪಾದವಿಟ್ಟು ಪುಣ್ಯಪುರುಷ ಬಸವಗುರು || ೩೦ ||
ಮಂಗಳಾತ್ಮೆ ನೀಲಗಂಗ ಮಡದಿಯಾಗೆ ಬಸವಗುರು
ಲಿಂಗಪಥದ ಕಾರ್ಯದಲ್ಲಿ ವ್ರತವ ತೊಟ್ಟೆ ಬಸವಗುರು |
ಜ್ಞಾನನಿಧಿ ಸತಿರತ್ನವ ಕೈಯ ಪಿಡಿದು ಬಸವಗುರು
ಸನ್ನುತಾಂಗ ಶರಣನಾಗಿ ದೇವನ ನೆರೆದೆ ಬಸವಗುರು |
ಸತಿಯ ಹಿಡಿದು ಬ್ರಹ್ಮಚರ್ಯ ವ್ರತವ ತೊಟ್ಟ ಬಸವಗುರು
ಸತಿಯಳನ್ನೇ ತಾಯಿಯೆಂದ ನಿಜ ವಿರಕ್ತ ಬಸವಗುರು |
ಆತ್ಮಲೇಸು ಜಗದಲೇಸು ಮುಖ್ಯವೆಂದೆ ಬಸವಗುರು
ಆತ್ಮದರಿವು ಮೂಡದವನು ವ್ಯರ್ಥವೆಂದೆ ಬಸವಗುರು |
ಮರ್ತ್ಯದೊಳಗೆ ಮಹಾಮನೆಯ ಕಟ್ಟಿ ಮೆರೆದೆ ಬಸವಗುರು
ಸತ್ಯ ಶೀಲರನ್ನು ನಿನ್ನ ಬಳಿಗೆ ಸೆಳೆದೆ ಬಸವಗುರು || ೪೦ ||
ಅನುಭವದಾ ಮಂಟಪವನ್ನು ರಚಿಸಿ ನೀನು ಬಸವಗುರು
ಅನುಭವವೇ ದೇವನನೊಲಿಪ ಮಾರ್ಗವೆಂದೆ ಬಸವಗುರು |
ಜನ್ಮದಿಂದ ಯಾರು ಶ್ರೇಷ್ಠರಲ್ಲವೆಂದೆ ಬಸವಗುರು
ಮಾನ್ಯತೆಯು ಜ್ಞಾನದಿಂದ ಎಂದು ಸಾರಿ ಬಸವಗುರು |
ಅಪ್ಪ ಬೊಪ್ಪ ಎಂದು ಕರೆದು ಅಂತ್ಯಜರನು ಬಸವಗುರು
ಒಪ್ಪವಾದ ಬಾಳನಿತ್ತು ರೂಪವಿತ್ತೆ ಬಸವಗುರು |
ನಿರಾಕಾರ ದೇವನನ್ನು ಅರಿಯರೆಂದು ಬಸವಗುರು
ಅರುಹ ತೋಯ್ದ ಕುರುಹುವನ್ನು ಕರಕೆ ಇತ್ತೆ ಬಸವಗುರು |
ವಚನ ಶಾಸ್ತ್ರ ಸುಧೆಯನಿತ್ತ ಯುಗಪುರುಷ ನೀ ಬಸವಗುರು
ಶುಚಿತ್ವದಾ ನವಪಥವನು ರಚಿಸಿಕೊಟ್ಟ ಬಸವಗುರು || ೫೦ ||
ಶುದ್ದಿ ಬೇರೆ ಶುಚಿಯು ಬೇರೆ ಎಂದು ಸಾರಿ ಬಸವಗುರು
ಶುದ್ಧಗೈದೆ ಪತಿತ ಕುಲವ ದೀಕ್ಷೆ ನೀಡಿ ಬಸವಗುರು |
ದಯವ ತೊರೆದರದು ಧರ್ಮವಾಗದೆಂದೆ ಬಸವಗುರು
ನ್ಯಾಯ ನಿಷ್ಠೆ ದೇವನ ಎರಡು ನಯನವೆಂದೆ ಬಸವಗುರು |
ದೇವನೊಬ್ಬ ನಾಮಹಲವು ಇದುವು ಸತ್ಯ ಬಸವಗುರು
ಭಾವಶುದ್ಧಿಯಿಂದ ಬೇರೆ ಮುಕ್ತಿಯಿಲ್ಲ ಬಸವಗುರು |
ಕಾಯಕದಾ ಮಾಟದಲ್ಲಿ ಕೂಟ ಕಂಡ ಬಸವಗುರು
ಕಾಯಕವೇ ಕೈಲಾಸ ಸೂತ್ರವಿತ್ತ ಬಸವಗುರು |
ಮನುಜರಲ್ಲಿ ಜಾತಿ ಭೇದ ಸಲ್ಲದೆನುತ ಬಸವಗುರು
ಮಾನವೀಯ ಪ್ರೇಮ ತೋರ ಶಿವಾಚಾರಿ ಬಸವಗುರು || ೬೦ ||
ರೂಢಿಯೊಳಗೆ ಮೂಢತನವು ಕಾಡುತಿರಲು ಬಸವಗುರು
ದೃಢತೆಯಿಂದ ಹಿಡಿದೆ ಗಣಾಚಾರದಲಗ ಬಸವಗುರು |
ತಾನು ಭಕ್ತ ಲೋಕವೆಲ್ಲ ದೇವನೆಂದು ಬಸವಗುರು
ತಾನು ಉರಿದು ಬೆಳಕನಿತ್ತ ತ್ಯಾಗದೀಪ್ತಿ ಬಸವಗುರು |
ಕಲ್ಯಾಣದ ಬಿಜ್ಜಳನ ಮಂತ್ರಿಯಾದೆ ಬಸವಗುರು
ಚೆಲ್ಲವರಿದೆ ಪವಾಡಗಳ ಜಗದ ಹಿತಕೆ ಬಸವಗುರು |
ಪ್ರಥಮ ಗುರುವೆ ಪ್ರಮಥ ಗುರುವೆ ಆದಿಗುರು ಬಸವಗುರು
ಮುಥನಗೈದು ಲಿಂಗಾವಂತ ಧರ್ಮಕೊಟ್ಟ ಬಸವಗುರು |
ಸದ್ಗುರು ಮಹಾಗುರು ದೇವಗುರು ಬಸವಗುರು
ಚಿದ್ಗುರು ಜಗದ್ಗುರು ಪ್ರಾಣದೊಡೆಯ ಬಸವಗುರು || ೭೦ ||
ಎಮ್ಮಗಳನು ಸಲಹಲಿಕ್ಕೆ ಮಣಿಹ ಹೊತ್ತೆ ಬಸವಗುರು
ಗಮ್ಯನಯ್ಯ ನೀನು ಬಕುತಿ ಅಸ್ತ್ರವಿರಲು ಬಸವಗುರು |
ಲಕ್ಷಜನ್ಮದೊಳಗೆ ನಾನು ತಿರುಗಿ ಬಂದೆ ಬಸವಗುರು
ರಕ್ಷಿಸಯ್ಯ ಜೀಯ ಎಂದು ಪಾದ ಹಿಡಿದೆ ಬಸವಗುರು |
ಮರಳಿ ಮರಳಿ ಬರಲು ಆರೆ ಮರೆವಿನಲ್ಲಿ ಬಸವಗುರು
ಕರುಣೆ ತೋರಿ ಬೆಳಗನಿತ್ತು ಮುಂದೆ ನಡೆಸು ಬಸವಗುರು |
ಸಕಲಶಕ್ತಿ ನೀನೆ ಎಂದು ಪಾದಕ್ಕೊಲಿದೆ ಬಸವಗುರು
ಕಾಕು ಗುಣದ ಕೊಳೆಯ ಕಳೆದು ಶೋಕ ಹರಿಸು ಬಸವಗುರು |
ಹೃದಯ ಬಟ್ಟಲಲ್ಲಿ ಭಕ್ತಿರಸವ ತುಂಬು ಬಸವಗುರು
ಸ್ವಾದ ಸವಿಯಲಿಕ್ಕೆ ಒಡೆಯ ನೀನು ಬಾರೊ ಬಸವಗುರು || ೮೦ ||
ಬೆಳೆವ ಹೃದಯದೊಳಗೆ ಇರುವ ಕಳೆಯ ತೆಗೆಯೊ ಬಸವಗುರು
ಸುಳಿಯರಳಿಸಿ ಬೆಳೆಸುತದನು ಫಲವ ಕೊಡಿಸೋ ಬಸವಗುರು |
ಮನದ ಮಲಿನ ಪಾತ್ರೆಯನ್ನು ತೊಳೆಯೊ ನೀನು ಬಸವಗುರು
ಊನವಿಲ್ಲದಮಲ ಕರುಣೆ ಪೂರಯಿಸೋ ಬಸವಗುರು |
ಅತ್ತಲಿತ್ತ ಹರಿಯದಂಥ ಚಿತ್ತ ನೀಡೊ ಬಸವಗುರು
ಮುತ್ತಿನಂಥ ಮನವನಿತ್ತು ಎತ್ತಿಕೊಳ್ಳೋ ಬಸವಗುರು |
ಗುರುವು ನೀನು ನರನು ನಾನು ದೇವನ ತೋರೊ ಬಸವಗುರು
ಪರಮ ಮಣ್ಯ ಪುರುಷ ನೀನು ದಿವ್ಯಯೋಗಿ ಬಸವಗುರು |
ಎನ್ನ ಕರ್ಣದಲ್ಲಿ ತುಂಬು ನಿನ್ನ ನಾಮ ಬಸವಗುರು
ಮುನ್ನ ತೊಡೆಯುತೆನ್ನ ತಪ್ಪ ಚಿನ್ನ ಮಾಡೋ ಬಸವಗುರು || ೯೦ ||
ನಿನ್ನ ಕರುಣೆಯನ್ನು ಇತ್ತು ಎನ್ನ ಕಾಯೊ ಬಸವಗುರು
ಅನತವಾಗದಂಥ ಹಮ್ಮು ಈಯದಿರೋ ಬಸವಗುರು |
ನಿನ್ನ ನಾಮ ಪಠಿಸುತಿರಲು ಭವವು ಎಲ್ಲಿ ಬಸವಗುರು
ಬನ್ನ ಓಡಿ ಭಕ್ತಿ ತುಂಬಿ ದಿವ್ಯವೆಲ್ಲ ಬಸವಗುರು
ವಿಳಾಸವಾದ ಸರ್ವವ್ಯಾಪಿ ಪರಮನಿಗೆ ಬಸವಗುರು |
ಕಳುಹೆ ನಿನಗೆ ಬಿನ್ನಹವನು ದೇವನೊಲಿವ ಬಸವಗುರು
ಆರು ಹಂತವೇರಿ ನೀನು ಐಕ್ಯನಾದೆ ಬಸವಗುರು |
ಧಾರುಣಿಯನು ಸಲಹಲಿಕ್ಕೆ ಭಕ್ತನಾದೆ ಬಸವಗುರು
ಪಂಚಪರುಷ ಸಿದ್ದಿ ಪಡೆದ ಸಾರ್ವಭೌಮ ಬಸವಗುರು
ಮಿಂಚುತಿರುವೆ ಬೆಳಕಾಗಿ ಎಮ್ಮ ಮನದಿ ಬಸವಗುರು || ೧೦೦ ||
ಮಂತ್ರಪುರುಷ ತಂತ್ರಸಾರ ಭ್ರಾಂತಿದೂರ ಬಸವಗುರು
ಮಂಥುವನ್ನು ಹರಿವ ಪ್ರಣವ ಶಕ್ತಿ ನೀನು ಬಸವಗುರು |
ನಿತ್ಯವಾದ ವಿಶ್ವಧರ್ಮ ಲೋಕಕಿತ್ತೆ ಬಸವಗುರು
ಸತ್ತು ಚಿತ್ತಾನಂದ ಪ್ರಿಯೆ ಮಾತೆಗೊಲಿದೆ ಬಸವಗುರು |
ಬಸವ ಅರಸ ಬಸವಲಿಂಗ ಬಸವಪ್ರಭುವೆ ಪಾಹಿಮಾಂ
ಬಸವತಂದೆ ಬಸವಬಂಧು ಬಸವಗುರುವೆ ರಕ್ಷಮಾಂ |
ಬಸವಗುರುವೆ ಬಸವಗುರುವೆ ಬಸವಗುರುವೆ ಪಾಹಿಮಾಂ
ಬಸವಗುರುವೆ ಬಸವಗುರುವೆ ಬಸವಗುರುವೆ ರಕ್ಷಮಾಂ
ಬಸವ ನಾಮಾಮೃತವು ನಿತ್ಯದಿ
ವೊಸೆದು ನಾಲಿಗೆ ಮೇಲೆ ನೆಲೆಸಿರೆ
ಯಶದಿ ಹರಿವವು ಕರ್ಮಬಂಧನ ಭೀತಿ ಮೃತ್ಯುಗಳು |
ನಾಶವಪ್ಪನು ಭವದ ಶತ್ರುವು
ಈಶನೊಲಿಮೆಯು ಹರಿದು ಬಪ್ಪುದು
ಶಾಶ್ವತದ ಸುಖ: ಸಿದ್ಧಿಯಹುದ್ಯೆ ಬಸವನೆಂದೆನಲು । -ಜಗದ್ಗುರು ಮಾತೆ ಮಹಾದೇವಿ
ನಾಲ್ಕನೆಯ ಪೂಜೆ :
ಹಿಂದೆ ಸೂಚನೆ ಕೊಟ್ಟಂತೆ ನಾಲ್ಕನೆಯ ಪೂಜೆ ನಡೆಸಬೇಕು ಪೂಜಿಸುವಾಗ ಈ ಹಾಡನ್ನು ಹಾಡಬೇಕು.
ಬಲ್ಲಿರಾ ಬಲ್ಲಿದರೆ ಲೋಕ ಬಲ್ಲಿದನಾದ
ಗುರುಬಸವರಾಜನ ಚನ್ನ ನಿಲುವ ? ||ಪಲ್ಲವಿ ||
ದೇವ ಕರುಣೆಯ ಹೊತ್ತು ಈ ಭುವಿಗೆ ತಾ ಬಂದು
ದಿವ್ಯ ಮಣಿಹವ ತಾನು ಪೂರೈಸಿದ
ಭವದ ಬನ್ನವ ತೊಡೆದು ಶಿವಗುರುವು ತಾನಾದ
ಕಾವ ದೇವನೆ ಆದ ಮಂತ್ರಪುರುಷ || ೧ ||
ಮನುಜ ಜನ್ಮದ ಘನವ ಲೋಕಕ್ಕೆ ತಾನರುಹಿ
ಮನದೊಳಗೆ ಇರುವಂಥ ಭ್ರಾಂತಿ ತೊಡೆದು
ಮನುಜ ಕುಲದೊಳು ಬೆಳೆದ ಮೇಲು-ಕೀಳೆಂಬುವ
ಭಿನ್ನ ಭೇದವ ತೊಡೆದ ಕ್ರಾಂತಿ ಯೋಗಿ || ೨ ||
ಇವನಾರು ಇವನಾರು ಎಂದು ಭೇದವನೆಣಿಪ
ಭಾವ ಕುಲ್ಲಕತನವ ಜರಿದು ತಾನು,
ಎಲ್ಲ ತನ್ನವರೆಂದು ಸರ್ವರನು ಆದರಿಪ
ಭಾವ ವೈಶಾಲ್ಯದ ಮಾತೃಹೃದಯಿ || ೩ ||
ಸರ್ವಸಮತೆಯ ಸಾರಿ, ಕರುಣೆ ಪ್ರೀತಿಯ ತೋರಿ
ಶರ್ವನ ಪಾದಕ್ಕೆ ತೊಡುಗೆ ತಾನಾಗಿ
ಅವ್ವ ಅಪ್ಪನು ಆಗಿ ದೀನ ದಲಿತರಿಗೆಲ್ಲ
ಹೂವ್ವ ಸೂರಿದ ಬಸವ ವಿಶ್ವಜ್ಯೋತಿ || ೪ ||
ಬತ್ತಿಯ ಆರತಿಯನ್ನು ಮಾಡಿ ಬೆಳಗಬೇಕು, ಮಂಗಲಗೀತೆ ಹಾಡಬೇಕು.
ಶ್ರೀ ಗುರು ಬಸವನೆ
ಶ್ರೀ ಗುರು ಬಸವನೆ ಭವಭಯ ಹರಣನೆ
ಯೋಗ ವಿಭೂಷಣ ಓಂ ಓಂ ಓಂ || ಪ ||
ರಾಗದಿಂದೆಮ್ಮ ಬೇಗ ನೀ ಪೊರೆಯಯ್ಯ
ಜಗದಾದಿ ದೇಶಿಕ ಓಂ ಓಂ ಓಂ || ಅ. ಪ. ||
ಶರಣ ಹೃದಯದ ಶರಧಿ ಚಂದ್ರಮ
ಪರಮಾರ್ಥ ಪಥದೊಳು ಪ್ರಣವ ಸ್ವರೂಪಿ
ಬೆಂದಿಹ ಮನಗಳ ಚೆಂದದಿ ತಣಿಸುವ
ಜ್ಞಾನ ತುಹಿನಕರ ಓಂ ಓಂ ಓಂ || ೧ ||
ವಿಭೂತಿ ಲೇಪಿತ ಶಿವಮಣಿ ಭೂಷಿತ
ಶುಭಧವಳಾಂಬರ ಶೋಭಿತನೆ
ಯೋಗನೇತ್ರನೆ ರಾಗ ರಹಿತನೆ
ಆಗುಮಾಡೆನ್ನ ಓಂ ಓಂ ಓಂ || ೨ ||
ಶರಣಗಣಮಣಿ ಭಕ್ತ ಕಣ್ಮಣಿ
ಧರೆಗುತ್ತಮ ಗುರು ಚೂಡಾಮಣಿ
ಸತ್ಯ ದೀಪ್ತಿಯ ಎತ್ತಿ ಹಿಡಿಯುತ
ಮಿಥ್ಯವ ಹರಿಸೈ ಓಂ ಓಂ ಓಂ || ೩ ||
ಸತ್ತು ಚಿತ್ತಾನಂದದಂಶಿಕ
ಅರ್ತಿಯಿಂದ ಈ ಇಳೆಗಿಳಿಯ
ಮಾತಾಪಿತೃವು ನೀನೇ ಎನುತಲಿ
ಓತು ಒಲಿದೆವು ಓಂ ಓಂ ಓಂ || ೪ ||
ಗ್ರಂಥ ಋಣ: ೧) ಶ್ರೀ ಬಸವೇಶ್ವರ ಪೂಜಾವ್ರತ, ಲೇಖಕರು: ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
![]() | ಬಸವೇಶ್ವರ ಪೂಜಾವ್ರತ ಅಧ್ಯಾಯ -೩ | ಬಸವೇಶ್ವರ ಪೂಜಾವ್ರತ ಅಧ್ಯಾಯ - ೫ | ![]() |