ಇಷ್ಟಲಿಂಗದ ಆವಶ್ಯಕತೆ | ಇಷ್ಟಲಿಂಗದ ಸಾಕಾರ ರೂಪು |
ಇಷ್ಟಲಿಂಗ ಏಕೆ ಬೇಕು? |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
ಇಷ್ಟಲಿಂಗವು ಲಿಂಗವಂತ ಧರ್ಮದ ಕೇಂದ್ರ ಬಿಂದು, ವೈಶಿಷ್ಟ್ಯ. ಭಾರತ ದೇಶದಲ್ಲಿ ಸಾಕಾರ ವಸ್ತುಗಳಿಗೆ ಕೊರತೆ ಇರಲಿಲ್ಲ; ಮೂವತ್ತೂರು ಕೋಟಿ ದೇವತೆಗಳ ಗಂಪೇ ಇತ್ತು. ಇಷ್ಟಾದರೂ ವಿಶ್ವಗುರು ಬಸವಣ್ಣನವರು 'ಇಷ್ಟಲಿಂಗ'ದಂತಹ ಒಂದು ಸಾಕಾರದ ಆವಶ್ಯಕತೆಯನ್ನರಿತು, ಕಂಡುಹಿಡಿದು ಧರ್ಮಸಮಾಜಗಳ ಕೇಂದ್ರ ಬಿಂದುವನ್ನಾಗಿ ಅದನ್ನು ಇಟ್ಟು ಕೊಂಡು, ಅದರ ಸುತ್ತಲೂ ತಮ್ಮ ಕಾಂತಿಯನ್ನು ವಿಸ್ತಾರಗೊಳಿಸಿದರು. ಇಂತಹ ಇಷ್ಟಲಿಂಗದ ಆವಶ್ಯಕತೆ ಏನು ? ಎಂಬುದನ್ನೀಗ ನೋಡೋಣ.
ಆಕಾಶದಲ್ಲಾಡುವ ಪಟಕ್ಕಾದರೂ ಮೂಲಸೂತ್ರವಿರಬೇಕು.
ಕಲಿಯಾದಡೂ ಕಜ್ಜವಿಲ್ಲದೆಯಾಗದು.
ಭೂಮಿಇಲ್ಲದೆ ಬಂಡಿ ನಡೆವುದೆ ?
ಅಂಗಕ್ಕೆ ಲಿಂಗಸಂಗವಿಲ್ಲದೆ ನಿಸ್ಸ೦ಗವಾಗಬಾರದು.
ಕೂಡಲ ಚನ್ನಸಂಗಮದೇವರಲ್ಲಿ, ಸಂಗವಿಲ್ಲದೆ
ನಿಸ್ಸಂಗಿಯೆಂದು ನುಡಿಯಬಹುದೆ ?" --ಚ.ಬ.ವ. ೧೨೫
ಗಾಳಿಪಟವು ಆಕಾಶದಲ್ಲಿ ಹಾರಾಡುತ್ತಿದ್ದರೂ ಅದರ ಸೂತ್ರವನ್ನು ಹಿಡಿದು ನೆಲದ ಮೇಲೆ ನಿಂತು ಹಾರಾಡಿಸಬೇಕಾಗುತ್ತದೆ; ಶೂರರಾದರೂ ಹೋರಾಡಲು ಖಡ್ಕ ಅವಶ್ಯ ಬೇಕಾಗುವುದು. ಪ್ರವಾಸಕ್ಕೆ ಚಕ್ಕಡಿಯಿದ್ದರೂ ಅದಕ್ಕೆ ನೆಲವೇ ಆಧಾರವು. ಅದರಂತೆ ಇಷ್ಟಲಿಂಗ ಸಂಗವಿಲ್ಲದೆ ಭವಬಂಧನ ಹಿಂಗಲು ಬಾರದು ಎಂದು ಚೆನ್ನಬಸವಣ್ಣನವರು ಸುಂದರ ಉಪಮೆಗಳ ಮೂಲಕ ಇಷ್ಟಲಿಂಗದ ಆವಶ್ಯಕತೆಯನ್ನು ಪ್ರತಿಪಾದಿಸಿದ್ದಾರೆ.
ದೇವನನ್ನು ಕಾಣಬೇಕೆಂಬ ಹಂಬಲವಿದ್ದರೆ ಸಾಲದು, ಅದಕ್ಕೆ ಸೂಕ್ತ ಸಾಧನವನ್ನೂ ಆಶ್ರಯಿಸಬೇಕು. ಪ್ರವಚನ ಕೇಳಲು ಬರಬೇಕೆಂಬ ಅಪೇಕ್ಷೆ ಇದ್ದರೆ ಸಾಕೆ ? ಬರಲು ಒಂದು ವಾಹನ ಬೇಕಷ್ಟೇ ? ಕಾರು, ಬಸ್ಸು, ಬಂಡಿ, ಸೈಕಲ್ ಕಡೆಗೆ ಕಾಲಾದರೂ ಬೇಕು. ಇಲ್ಲವಾದರೆ ಪ್ರವಚನದ ತಾಣ ತಲ್ಪಲು ಸಾಧ್ಯವಿಲ್ಲ. ಹಾಗೆ ದೇವರೆಂಬ ಧೈಯವನ್ನು ತಲ್ಪಲು ಇಷ್ಟಲಿಂಗವೊಂದು ವಾಹನ.
ಎಷ್ಟೇ ಶೂರನಾದ ವ್ಯಕ್ತಿಯೇ ಆಗಿರಲಿ, ಅವನ ಕೈಯಲ್ಲಿ ಒಂದು ಅಸ್ತವಿಲ್ಲದಿದ್ದರೆ ಅವನು ವಿರೋಧಿಯಾಡನೆ ಸೆಣಸಲಾರ. ಹಾಗೆ ಎಷ್ಟೇ ಪ್ರತಿಭಾವಂತನೂ, ಬೌದ್ದಿಕ ಪಟುವೂ ಆಗಿದ್ದರೂ ಅವನ ಕೈಯಲ್ಲಿ ಧರ್ಮ ಲಾಂಛನ ಎಂಬ ಆಯುಧವು ಬೇಕೇ ಬೇಕು; ಅಂಥ ಆಯುಧವೇ ಇಷ್ಟಲಿಂಗ.
ಮನುಷ್ಯನಿಗೆ ಮೂರು ಶರೀರಗಳಿವೆ. ಅವೇ ಸ್ಕೂಲ, ಸೂಕ್ಷ್ಮ ಮತ್ತು ಸೂಕ್ಷ್ಮಾತಿ ಸೂಕ್ಷ್ಮವಾದ ಕಾರಣಶರೀರ. ಕಾರಣಶರೀರದಲ್ಲಿ ಇರುವುದು ಭಾವಲಿಂಗ; ಅದು ನಿಸರ್ಗದತ್ತವಾಗಿ, ಅಂತರ್ಗತವಾಗಿರುತ್ತದೆ. ಅದೇ ರೀತಿ ಮನೋಶರೀರವಾದ ಸೂಕ್ಷ್ಮದೇಹದಲ್ಲಿ ಪ್ರಾಣಲಿಂಗವು ನಿಸರ್ಗದತ್ತವಾಗಿ ಇರುತ್ತದೆ. ಸ್ಕೂಲ ಶರೀರಕ್ಕೂ ಒಂದು ಬೇಕು; ಅದುವೇ ಇಷ್ಟಲಿಂಗ. ಅದನ್ನು ಗುರುವು ವೇಧಿಸುತ್ತಾನೆ. ಇದನ್ನು ಶ್ರೀ ಸಿದ್ಧಲಿಂಗೇಶ್ವರರು ಹೀಗೆ ಹೇಳುತ್ತಾರೆ
ಭಾವ ಮನಕ್ಕೆ ಲಿಂಗವ ಧರಿಸಿ
ಕಾಯಕ್ಕೆ ಲಿಂಗವಿಲ್ಲದಿರಬಹುದೆ ?
ಎರಡಂಗ ಭಕ್ತರಾಗಿ, ಒಂದಂಗ ಭವಿಯಾಗಿಪ್ಪ
ಭ್ರಾಂತರ ಮುಖವ ನೋಡಲಾಗದು.
ತನು ಮನ ಭಾವದಲ್ಲಿ ಲಿಂಗವ ಧರಿಸಿ,
ಲಿಂಗತ್ರಯಕ್ಕೆ ಅಂಗತ್ರಯಕ್ಕೆ ಅಗಲಿಕೆ ಇಲ್ಲದೆ
ಅಚಲನಾಗಿರ್ದೆನಯ್ಯ, ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ -ತೋಂಟದ ಸಿದ್ಧಲಿಂಗೇಶ್ವರರು ೧೮೨
ಅಂಗತ್ರಯವುಳ್ಳ ಮಾನವನಿಗೆ ಲಿಂಗತ್ರಯ ಸಂಬಂಧವಾಗುವದು ಅನಿವಾರ್ಯ ಮತ್ತು ಅವಶ್ಯವಾದುದೆಂದೂ, ಮನ ಭಾವಕ್ಕೆ ಲಿಂಗವ ಧರಿಸಿ ತನುವಿಗೆ ಇಷ್ಟಲಿಂಗ ಧರಿಸದೆ ಇರುವುದು ಲಿಂಗಾಚಾರವಲ್ಲವೆಂದೂ ಹೇಳಿ ತಾವು ಲಿಂಗತ್ರಯದಲ್ಲಿ ಅಚಲವಾದ ಅವಿರಳ ಪದವಿಯನ್ನು ಹೊಂದಿರುವುದಾಗಿ ಶ್ರೀ ಶಿವಯೋಗಿಗಳು ತಮ್ಮ ಅನುಭವವನ್ನು ಹೊರಚೆಲ್ಲಿದ್ದಾರೆ.
ಸಾಕಾರವಿಡಿದು ಅರ್ಚನೆ ಪೂಜನೆಯ ಮಾಡಬೇಕಲ್ಲದೆ,
ನಿರಾಕಾರವ ನಂಬಲಾಗದು. ಶ್ರೀ ಗುರು ಪ್ರಾಣಲಿಂಗವನು
ಕರಸ್ಥಲಕ್ಕೆ ಬಿಜಯಂಗೈಸಿಕೊಟ್ಟ ಬಳಿಕ,
ವಜ್ರದಲ್ಲಿ ಬಯಲನರಸಲುಂಟೆ ?
ಉರಿಲಿಂಗ ಪೆದ್ದಿ ಪ್ರಿಯ ವಿಶ್ವೇಶ್ವರಾ ?
-ಉರಿಲಿಂಗ ಪೆದ್ದಿ ೨೧೧
ಸಾಕಾರವಿಡಿದು ಉಪಾಸನೆ ಮಾಡಬೇಕಲ್ಲದೆ, ಕೇವಲ ನಿರಾಕಾರವನ್ನು ನಂಬಬಾರದು, ಪ್ರಾಣಲಿಂಗವನ್ನು ಶ್ರೀ ಗುರುವು ಕರಸ್ಥಲಕೆ ತಂದು ಕೊಟ್ಟ ನಂತರ, ಅದರಲ್ಲಿಯೇ ಘನವಸ್ತುವನ್ನು ಅರಿತು ಅಳವಡಿಸಿಕೊಳ್ಳಬೇಕೆಂದು ಉರಿಲಿಂಗ ಪೆದ್ದಿಗಳು ಹೇಳಿದ್ದಾರೆ.
ಸತಿಯ ಸಂಗವತಿ ಸುಖವೆಂದರಿದಡೇನು, ಗಣಸಾಕ್ಷಿಯಾಗಿ
ವಿವಾಹವಾಗದನ್ನಕ್ಕರ ? ಕಣ್ಣು ಕಾಂಬುದೆಂದಡೆ,
ಕತ್ತಲೆಯಲ್ಲಿ ಕಾಂಬುದೆ, ದೀಪವಿಲ್ಲದನ್ನಕ್ಕರ ?
ಸೂರ್ಯನ ಪ್ರಕಾಶದಿಂದ ಕಂಡು, ತಾನೇ ಕಂಡೆನೆಂಬ
ಜಗದ ನಾಣ್ಣುಡಿಯಂತಾಯಿತ್ತು. ಅಂಗವ ಬಿಟ್ಟು ಆತ್ಮನುಂಟೆ ?
ಶಕ್ತಿಯ ಬಿಟ್ಟು ಶಿವನುಂಟೆ ? ಇದು ಕಾರಣ
ಸ್ಕೂಲ ಸೂಕ್ಷ್ಮ ಕಾರಣವೆಂಬ ತನುತ್ರಯವಿರಲು,
ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗ ಸಂಬಂಧ
ಬೇಡವೆಂದರೆ, ಅಸಂಖ್ಯಾತ ಪ್ರಮಥ ಗಣಂಗಳೊಪ್ಪುವರೆ ?
ಇದು ಕಾರಣ ಕೂಡಲ ಚನ್ನಸಂಗಯ್ಯನಲ್ಲಿ
ಇಷ್ಟಲಿಂಗ ಸಂಬಂಧವಿಲ್ಲದವರ ಮುಖವ
ನೋಡಲಾಗದಯ್ಯಾ ಪ್ರಭುವೆ !
-ಚನ್ನಬಸವಣ್ಣ. ೧೨೭
ಸತಿಯಾಡನೆ ಗಣಸಾಕ್ಷಿಯಾಗಿ ವಿವಾಹವಾಗಿ ರತಿಸುಖವನನುಭವಿಸದೆ, ಸತಿಸಂಗವು ಸುಖವಾದುದೆಂದು ಕೇವಲ ತಿಳಿದರೆ ಏನು ಪ್ರಯಾಜನವು ? ಕತ್ತಲೆಯಲ್ಲಿ ದೀಪದ ಬೆಳಕಿನ ಸಹಾಯದಿಂದ, ಹಗಲಿನಲ್ಲಿ ಸೂರ್ಯನ ಪ್ರಕಾಶದಿಂದ ನಾವು ವಸ್ತುಗಳನ್ನು ಕಾಣುತ್ತೇವಷ್ಟೇ ? ನಾವೇ ಕಣ್ಣಿನಿಂದ ಕಂಡೆವೆಂದು ಹೇಳುವುದು ಸಾಹಸದ, ಜಂಭದ ಮಾತಲ್ಲವೇ ? ಅದರಂತೆ ಕರಸ್ಥಲದ ಜ್ಯೋತಿವಿಡಿದು ಪರವಸ್ತುವ ಕಾಣಬೇಕು. ಅಂಗವನ್ನು ಬಿಟ್ಟು ಆತ್ಮನಾಗಲಿ, ಶಕ್ತಿಯನ್ನುಳಿದು ಶಿವನಾಗಲಿ ಹೇಗೆ ಇರಲಾರರೋ ಹಾಗೆಯೇ ಇಷ್ಟಲಿಂಗವನ್ನು ಬಿಟ್ಟು ಜೀವಿ (ಭಕ್ತ) ಇರಬಾರದು. ಆದ್ದರಿಂದ ಸ್ಕೂಲ ಸೂಕ್ಷ್ಮ ಕಾರಣ ಶರೀರ ತ್ರಯಗಳಿಗೆ ಇಷ್ಟ, ಪ್ರಾಣ, ಭಾವ ಲಿಂಗತ್ರಯಗಳನ್ನು ಸಂಬಂಧಿಸಿಕೊಳ್ಳಬೇಕೆಂದು ಶರಣರ ಅಭಿಮತ. ಅದು ಕಾರಣ ಇಷ್ಟಲಿಂಗವಿಲ್ಲದೆ ಇರುವುದು ಉಚಿತವಲ್ಲವೆಂದು ಚನ್ನಬಸವಣ್ಣನವರು ಹೇಳಿದ್ದಾರೆ.
ಎಳ್ಳಿಂಗೆ ಪರಿಮಳ ಕಟ್ಟಿದಲ್ಲದೆ
ಎಣ್ಣಿಗೆ ಪರಿಮಳ ವೇಧಿಸದು.
ದೇಹದಲ್ಲಿ ಇಷ್ಟಲಿಂಗ ಸ್ಥಾಪಿಸಿದಲ್ಲದೆ,
ಪ್ರಾಣಲಿಂಗ ಸಂಬಂಧವಾಗಬಾರದು. ಇದು ಕಾರಣ,
ನಮ್ಮ ಗುಹೇಶ್ವರ ಲಿಂಗದಲ್ಲಿ ಇಷ್ಟಲಿಂಗ ಸಂಬಂಧಿಯಾದಲ್ಲದೆ
ಪ್ರಾಣಲಿಂಗ ಸಂಬಂಧಿಯಾಗಬಾರದು, ಕಾಣಾ ಸಿದ್ದರಾಮಯ್ಯಾ
ಅಲ್ಲಮ ಪ್ರಭು. ೧೧೪೬
ಎಳ್ಳಿಗೆ ಪರಿಮಳ ವೇಧಿಸಿದರೆ ತಾನೇ ಅದರೊಳಗಿನ ಎಣ್ಣಿಗೆ ಪರಿಮಳವು ವೇಧಿಸುವುದು ? ಅದರಂತೆ ದೇಹದಲ್ಲಿ ಇಷ್ಟಲಿಂಗವ ಕಟ್ಟಿಕೊಳ್ಳದೆ ಪ್ರಾಣಲಿಂಗ ಸಂಬಂಧ ಸಾಧ್ಯವಾಗದು ಎಂದು ಪ್ರಭುದೇವರು ಸಿದ್ಧರಾಮನಿಗೆ ಬೋಧಿಸಿದ್ದಾರೆ.
ಜ್ಞಾನದಲ್ಲಿ ಅರಿದರೇನಯ್ಯ, ಸಯೆಯನಾಚರಿಸದನ್ನಕ್ಕರ ?
ನೆನೆದ ಮಾತ್ರದಲ್ಲಿ ಕಾಂಬುದೆ, ಕಾರ್ಯದಲ್ಲಲ್ಲದೆ ?
ಕುರುಡ ಕಾಣ ಪಥವ; ಹೆಳವ ನಡೆಯಲರಿಯ
ಒಂದಿಲ್ಲದಿದ್ದರೆ ಒಂದಾಗದು.
ಜ್ಞಾನವಿಲ್ಲದ ಕ್ರೀ ಜಡನು, ಕ್ರೀಯಿಲ್ಲದ ಜ್ಞಾನ ಭಾಂತು.
ಇದು ಕಾರಣ ಸಿದ್ದ ಸೋಮನಾಥನಲ್ಲಿ ಎರಡೂ ಬೇಕು.
-ಅಮುಗಿದೇವ, ವ.ಸಾ.ಸಂ. ಪುಟ ೧೬೫
ಕೇವಲ ಜ್ಞಾನದಿಂದ ಅರಿತರೆ ಸಾಕಾಗದು. ಸಾಧಕನಲ್ಲಿ ಸತ್ಕ್ರಿಯಾಚರಣಿಯೂ ಬೇಕು. ಕೇವಲ ಮನದಲ್ಲಿ ಶಿವನ ನೆನೆದರೆ ಕಾಣಬಹುದೆ ? ಕುರುಡನಿಗೆ ಹಾದಿ ಕಾಣದು; ಹೆಳವನಿಗೆ ದಾರಿ ನಡೆಯಲು ಬರದು.
ಕುರುಡನ ಮೇಲೆ ಕುಂಟ ಕುಳಿತು ಹಾದಿ ತೋರಿಸಿದರೆ ಕುರುಡ ಹೊತ್ತುಕೊಂಡು ಹೋಗುವನು. ಇಬ್ಬರೂ ಕೂಡಿ ಗುರಿಯನ್ನು ತಲುಪುವರು.
ಅದರಂತೆ ಜ್ಞಾನವಿಲ್ಲದ ಕ್ರಿಯೆಯು ಜಡವಾದುದು; ಕ್ರಿಯೆಯಿಲ್ಲದ ಜ್ಞಾನ ಭ್ರಾಂತಿಯು,
ಆದ್ದರಿಂದ ಸಾಧಕನಿಗೆ ಜ್ಞಾನ (ಪ್ರಾಣಲಿಂಗ, ಕ್ರಿಯಾ (ಇಷ್ಟ) ಲಿಂಗಗಳೆರಡೂ ಬೇಕೆಂದು ಅಮುಗಿದೇವನು ಜ್ಞಾನಕ್ರಿಯಾ ಸಮನ್ವಯವನ್ನು ಹೇಳಿದ್ದಾನೆ.
ಕ್ರಿಯಾತ್ಮಕ ಇಷ್ಟಲಿಂಗಪೂಜೆಯಿಂದ ಸಾಧಕನಿಗೆ ಅಂಗದಲ್ಲಿ ಆಚಾರ ಅಳವಡುವುದು. ಜ್ಞಾನಾತ್ಮಕ ಭಾವಲಿಂಗಪೂಜೆಯಿಂದ ಭಾವದಲ್ಲಿ ಅನುಭಾವ ಕರಿಗೊಳ್ಳುವುದು.
ಆಚಾರ, ಅರಿವು, ಅನುಭಾವಗಳಿಂದ ಮಾತ್ರ ಶಿವಾನುಭವಿಯಾಗಿ, ದೇವನಲ್ಲಿ ಶರಣನು ಒಡವೆರೆದು ಒಂದಾಗಬಲ್ಲ, ಇದು ಶರಣರ ಸಿದ್ಧಾಂತ.
ಗುರುವು ತೋರಿದ ಲಿಂಗವು ಮನಸಾಹಿತ್ಯವಾಗಿರಲು,
ಪವನಭೇದನದಿಂದ ಅರಿದೆಹೆನೆಂದಡೆ ಅದೇ ದ್ರೋಹ,
ಈಡ ಪಿಂಗಳ ಸುಷುಮ್ಮ ನಾಳದಿಂದ ಅರಿತಿಹೆನೆಂದರೆ,
ಕೂಡಲ ಸಂಗಮದೇವರು ಮೂಗ ಕೊಯ್ಯದೆ ಬಿಡುವರೆ ? -ಬ.ಷ.ವ ೭೯೯
ಯೋಗಸಾಧನೆಯಲ್ಲಿ ಅತ್ಯಂತ ಕಠಿಣತಮವಾದುದು ಚಕ್ರಭೇದನ. ಇಷ್ಟಲಿಂಗವು ಕೇವಲ ಭಕ್ತಿಯ ತೃಪ್ತಿಗಷ್ಟೇ ಸಹಾಯಕವಾಗದೆ, ಯೋಗಸಾಧನೆಗೂ ಸಹಕಾರಿಯಾಗಬೇಕೆಂದೇ ಬಸವಣ್ಣನವರು ಅದನ್ನು
ಸಂಶೋಧಿಸಿದುದು. ಅದರ ಸಹಾಯದಿಂದ ಸುಷುಮ್ಮನಾಳವನ್ನು ಭೇದಿಸಬಹುದು; ಕುಂಡಲಿನಿ ಜಾಗೃತಿ ಮಾಡಿಕೊಳ್ಳಬಹುದು;
ವಿಶೇಷವಾದ ಅನುಭವಗಳನ್ನೆಲ್ಲ ಪಡೆಯಬಹುದು. ಹೀಗಿರುವಾಗ ಕೇವಲ ಹಠಯೋಗವನ್ನಾಶ್ರಯಿಸಲು ಹೋಗಬಾರದೆಂದು ಬಸವಣ್ಣನವರು ಇಲ್ಲಿ ಎಚ್ಚರಿಸಿದ್ದಾರೆ. ಹಠಯೋಗದಿಂದ ಹಲವಾರು ಸಿದ್ದಿ ಗಳು ದೊರೆಯಬಹುದು.
ಪ್ರಾಣಾಯಾಮದಿಂದ ಶರೀರ ಸೌಷ್ಟವ ಕಾಯ್ದು ಕೊಳ್ಳಬಹುದಲ್ಲದೆ ಆತ್ಮ ಸಾಕ್ಷಾತ್ಕಾರ ಸಾಧ್ಯವಿಲ್ಲವೆಂದೂ, ಗುರುವು ಕೊಟ್ಟ ಇಷ್ಟಲಿಂಗದಿಂದಲೇ ಪ್ರಾಣಲಿಂಗವನರಿದು ಲಿಂಗಾಂಗ ಸೌಖ್ಯವನ್ನು ಪಡೆಯಬೇಕೆಂದು ಬಸವಣ್ಣನವರು ಹೇಳಿ, ಸಿದ್ದರಾಮೇಶ್ವರರಿಗೆ ಲಿಂಗಧಾರಣೆ ಮಾಡಿಕೊಂಡು ಶಿವಯೋಗಿಯಾಗಬೇಕೆಂಬ ಭಾವವನ್ನು ವ್ಯಕ್ತಗೊಳಿಸಿದ್ದಾರೆ.
ಶ್ರುತಿಯ ನಂಬದಿರೊ, ಶ್ರುತಿಯ ನಂಬದಿರೊ.
ಶ್ರುತಿತತಿಗಳು ಮುನ್ನವೆ ಶಿವನಡಿಯ ಕಾಣದೆ,
'ಶ್ರುತಿಚಕಿತಮಭಿದತ್ತೆ' ಎನ್ನುತ್ತ ಮುನ್ನ ವೆ ಅರಸಿ
ತೊಳಲಿ ಬಳಲುತ್ತೈದಾವೆ. ಶ್ರುತಿ ಹೇಳಿದತ್ತ
ಹರಿಹರಿದು ಬಳಲದಿರೊ, ಶೂನ್ಯಕ್ಕೆ ತಲೆವಾರನಿಕ್ಕದಿರೋ.
ವಸ್ತು ಹೃದಯದಲ್ಲುಂಟೆಂದು ನೆನೆಯದಿರೋ.
ವಸ್ತು ಭೂಮಧ್ಯದಲ್ಲಿ ಉಂಟೆಂದು ಹೊಲಬುಗೆಡದಿರೋ.
ವಸ್ತು ನಿಶ್ಚಯಕಾಬಡೆ, ಎನ್ನ ಸದ್ಗುರು ಅನಿಮಿಷದೇವನಂತೆ
ನಿನ್ನ ಕರಸ್ಥಲದಲ್ಲಿ ನಿಶ್ಚಯಿಸಿ, ವಸ್ತು ನಿಶ್ಚಯವ ಕಂಡು
ನಮ್ಮ ಗುಹೇಶ್ವರ ಲಿಂಗದಲ್ಲಿ ನಿಬ್ಬೆರಗಾಗೊ ಮರುಳೆ ! -ಅಲ್ಲಮ ಪ್ರಭು ೧೦೮೫
ವೇದೋಪನಿಷತ್ತುಗಳ ಅಭ್ಯಾಸದಿಂದ ದೇವನನ್ನು ಕಾಣಬೇಕೆಂದರೆ ಸಾಧ್ಯವಿಲ್ಲ. ಬೌದ್ದರ ಹಾಗೆ ಶೂನ್ಯಕ್ಕೆ ಶರಣಾಗತರಾಗಿ ಹುಡುಕಿದರೂ ದೇವನು ಸಿಗಲಾರನು. ಮತ್ತು ಹೃದಯದ ಅನಾಹತ ಚಕ್ರದಲ್ಲಿಯಾಗಲಿ, ಭೂಮಧ್ಯದ ಆಜ್ಞಾಚಕ್ರದಲ್ಲಾಗಲಿ, ಬ್ರಹ್ಮರಂಧ್ರದ ಸಹಸ್ರಾರಚಕ್ರದಲ್ಲಾಗಲೀ ದೇವನ ಕಾಣುವ ತೊಳಲಿಕೆ ಬೇಡ. ಈ ದೇವನನ್ನು ನಿಶ್ಚಯವಾಗಿ ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾದರೆ, ಎನ್ನ ಗುರು ಅನಿಮಿಷದೇವನಂತೆ, ನಿನ್ನ ಕರಸ್ಥಲದಲ್ಲಿ ಇಷ್ಟಲಿಂಗವ ಅನುಗ್ರಹಿಸಿಕೊಂಡು ನೆಟ್ಟ ದೃಷ್ಟಿಯಿಂದ, ಅನಿಮಿಷ ದೃಷ್ಟಿಯಿಂದ ಲಿಂಗಾನುಸಂಧಾನಗೈದು ದೇವೋನ್ಮಾದದ ನಿಬ್ಬೆರಗಿನಲ್ಲಿ ನಿಲುಕಡೆ ಹೊಂದಬೇಕೆಂದು ಸಿದ್ದರಾಮನಿಗೆ ಪ್ರಭುದೇವರು ಉಪದೇಶಿಸಿದ್ದಾರೆ.
ರತ್ನ ದೀಪ್ತಿಯಾದಡೇನು ?
ಬಂಧಿಸಿ ಕುಂದಣದಲ್ಲಿಯೆ ಸಂದಿರಬೇಕು.
ಸ್ವಾದುರಸದ ರುಚಿಯನೀವ ಫಲವಾದಡೇನು, ವೃಕ್ಷವಿಲ್ಲದನ್ನಕ್ಕರ ?
ಚಿತ್ರಸೌಂದರ್ಯ ನೋಟಕ್ಕೆ ಸುಖವೆಂದಡೇನು,
ಭಿತ್ತಿಯಪಟ ಮುಖ್ಯಸ್ಥಾನವಿಲ್ಲದನ್ನಕ್ಕರ ?
ಅಂಜನಸಿದ್ದಿಯಿಂದ ನಿಧಾನವ ಕಂಡಡೇನು,
ಸಾಧನಕ್ರೀಯಿಂದ ಸಾಧ್ಯವಾದ ಮಾಡಿಕೊಳ್ಳದನ್ನಕ್ಕರ ?
ಇದು ಕಾರಣ ಕಾಯದ ಕರಸ್ಥಲಕ್ಕೆ ಇಷ್ಟಲಿಂಗ ಸಾಧ್ಯವಿಲ್ಲದಿದ್ದರೆ,
ನಿರವಯವಾದ ಜ್ಞಾನಯೋಗ ಕೂಟ ಸಾಧ್ಯವಾಗದು.
ಇದು ಕಾರಣ ಕ್ರಿಯಾಲಿಂಗ ಸಂಬಂಧವೇ ಭಕ್ತಂಗೆ ಮತವು.
ಇದೇ ದೇಹಶೌಚವು. ನಮ್ಮ ಗುಹೇಶ್ವರನ ಶರಣರ
ಮನ ಒಪ್ಪುವಂತೆ ಸಿದ್ದರಾಮಯ್ಯಂಗೆ ಲಿಂಗಸಾಹಿತ್ಯವ
ಮಾಡಾ ಚನ್ನಬಸವಣ್ಣ ! -ಅಲ್ಲಮ ಪ್ರಭು ೭೭೫
ರತ್ನದ ಪ್ರಕಾಶವಿದ್ದಡೇನು ಫಲ ? ಆ ರತ್ನವು ಚಿನ್ನದ ಪಡಿಯಚ್ಚಿನಲ್ಲಿ ಸ್ಥಾನವನ್ನು ಪಡೆದುಕೊಳ್ಳಬೇಕು. ಒಳ್ಳೆ ರುಚಿಕರವಾದ ಫಲವಿದ್ದರೇನು ? ಅದು ವೃಕ್ಷದ ಆಧಾರದಲ್ಲಿ ಬೆಳೆಯಬೇಕಷ್ಟೆ. ಸುಂದರ ತೈಲ ಚಿತ್ರವಾದರೇನು ? ಅದರ ಪ್ರದರ್ಶನಕ್ಕೆ ಗೋಡೆಯ ಆಶ್ರಯ ಸಿಕ್ಕಿ ಪ್ರದರ್ಶಿತವಾದಾಗ ಮಾತ್ರ ಅದರ ಸೌಂದರ್ಯವು ಆನಂದವನ್ನು ನೀಡಬಲ್ಲದು. ಕೇವಲ ಅಂಜನಸಿದ್ದಿಯ ನೆರವಿನಿಂದ ನನ್ನೊಳಗಿನ ಹೊನ್ನನ್ನು ಗುರುತಿಸಿದರೇನು ಪ್ರಯೋಜನ ? ಗುದ್ದಲಿ ಸಣಿಕೆಗಳ ಸಾಧನಗಳಿಂದ ಕೈವಶಮಾಡಿಕೊಳ್ಳಬೇಕಷ್ಟೆ. ಇಲ್ಲವಾದರೆ ನಿಲುಕದ ಗಿಡದಲ್ಲಿರುವ ದ್ರಾಕ್ಷಿಯನ್ನು ನೋಡಿ ನರಿ ಮರುಗಿದಂತೆ ನಿರುಪಯೋಗವಾದೀತು. ಅದರಂತೆ ತನುವಿನ ಕರಸ್ಥಲದಲ್ಲಿ ಇಷ್ಟಲಿಂಗವನ್ನು ಇಟ್ಟು ಪೂಜಿಸದೆ ನಿರವಯವಾದ ಜ್ಞಾನಯೋಗದ ಕೂಟ-ಅಂದರೆ ಪರಬ್ರಹ್ಮನ ಅಪರೋಕ್ಷ ಜ್ಞಾನವಾಗದು ! ಆದ್ದರಿಂದ ಶರಣರ ಮನಕ್ಕೆ ಒಪ್ಪಿಗೆಯಾಗುವಂತೆ ಸಿದ್ದರಾಮನಿಗೆ ಇಷ್ಟಲಿಂಗವನ್ನು ಅನುಗ್ರಹಿಸೆಂದು ವಿರಕ್ತ ಸಾಮಾಟ ಅಲ್ಲಮಪ್ರಭುದೇವರು ಚನ್ನಬಸವಣ್ಣನಿಗೆ ಸೂಚನೆ ಕೊಡುತ್ತಾರೆ.
ಈ ವಚನದಲ್ಲಿ ಗ್ರಹಿಸತಕ್ಕೆ ಕೆಲವು ವಿಚಾರಗಳಿವೆ :
1. ಕೇವಲ ಅಂಜನದ ನೆರವಿನಿಂದ ಮಣ್ಣಿನೊಳಗಿನ ಹೊನ್ನನ್ನು ಕಂಡರೂ ಪ್ರಯಾಜನವಿಲ್ಲ. ಅದರಿಂದ ಒಬ್ಬ ಸಿರಿವಂತನಾಗನು. ಅದನ್ನು ಗುದ್ದಲಿಯಿಂದ ಅಗೆದು ಕರಗತ ಮಾಡಿಕೊಳ್ಳಬೇಕಷ್ಟೆ. ಅದರಂತೆ ಕೇವಲ ಶಾಸ್ತ್ರಜ್ಞಾನದಿಂದ ನಾನೇ ಬ್ರಹ್ಮ - (ಅಹಂಬ್ರಹ್ಮಾಸ್ಮಿ) ನೆಂದರೆ ಪ್ರಯಾಜನವಾಗಲಾರದು. ಭಕ್ತಿ - ಜ್ಞಾನ - ವೈರಾಗ್ಯ - ಕ್ರಿಯೆ ಇತ್ಯಾದಿ ಸಾಧನಗಳಿಂದ ಆ ಬ್ರಹ್ಮವೆಂಬ ಹೊನ್ನನ್ನು ಪಡೆಯಬೇಕು. ಇಂದು ಅನೇಕ ವಾಗತಿಗಳು ಹಾಗೆ ಯಾವ ಸಾಧನವನ್ನೂ ಮಾಡದೆ ನಾವು 'ಅಹಂ ಬ್ರಹ್ಮಾಸ್ಮಿ'ಗಳೆಂದು ಹೇಳುವುದು ಹಾಸ್ಯಾಸ್ಪದವಾದುದು. ಎಂಟುಹತ್ತು ವರುಷದ ಓರ್ವ ಕನ್ಯಯು 'ನಾನು ತಾಯಿ ಇದ್ದೇನೆ' ಎಂದು ಹೇಳುವಳು ಎಂದುಕೊಳ್ಳೋಣ. ಅದನ್ನು ನಂಬಲಾದೀತೆ ? ಅವಳಿಗೇನೋ ತಾಯಿಯಾಗುವ ಶಕ್ತಿ ಸುಪ್ತವಾಗಿ ಇದೆ ನಿಜ. ಆದರೆ ಅವಳು ದೊಡ್ಡವಳಾಗಿ, ಗಂಡನೊಡನೆ ಸಂಸಾರಮಾಡಿ ಮಕ್ಕಳನ್ನು ಹೆತ್ತಾಗ ನಿಜವಾಗಿಯೂ ಅವಳು ತಾಯಿಯಾಗುವಳು. ಅದು ಬಿಟ್ಟು ಎಂಟುಹತ್ತು ವಯಸ್ಸಿನಲ್ಲಿ ನಾನು ತಾಯಿಯೆಂದು ಹೇಳಿದರೆ ಹೇಗೆ ನಗೆಗೇಡೋ, ಅದರಂತೆ ಈ "ಅಹಂ ಬ್ರಹ್ಮಾಸ್ಮಿ"ಗಳ ಮಾತೂ ನಗೆಗೇಡಲ್ಲವೆ ? ಹೌದು ನಾವೆಲ್ಲರೂ ಮೂಲತಃ ಶಿವಸ್ವರೂಪಿಗಳೇ. ಆದರೆ ನಾವು ಶಿವಸ್ವರೂಪಿಗಳೇ ಆಗಬೇಕು. ಮುಮುಕ್ಷು ಭಾವನೆಯೆಂಬ ಋತುಮತಿತ್ವ ಒದಗಿ ದೀಕ್ಷೆಯೆಂಬ ಲಗ್ನದ ಮುಖಾಂತರ ಗುರುವಿನ ಸಹಾಯದಿಂದ ಲಿಂಗಪತಿಯನ್ನು ಪಡೆದು ಆ ಲಿಂಗಪತಿಯಾಡನೆ ಲಿಂಗಭೋಗೋಪಭೋಗವೆಂಬು ಸಂಸಾರಗೈದು, ಸ್ವಾನುಭಾವವೆಂಬ ಮಗನನ್ನು ಹೆತ್ತಾಗ ಮಾತ್ರ ನಾವು ಶಿವಸ್ವರೂಪಿಗಳೆಂಬ ತಾಯಂದಿರಾಗುತ್ತೇವೆ.
2. ಶರಣ ತತ್ವದ ಪ್ರಕಾರ ನಮ್ಮಲ್ಲಿ ಬ್ರಹ್ಮನಿದ್ದಾನೆ, ದೇವನಿದ್ದಾನೆಯೇ ವಿನಾ ನಾನೇ ಬ್ರಹ್ಮನಲ್ಲ, ದೇವನಲ್ಲ. ನೆಲದ ಮರೆಯ ನಿಧಾನದಂತೆ ಹುದುಗಿರುವ ದೇಹಾಂತರ್ಗತ ಆತ್ಮವನ್ನು, ದೇವನ ಒಂದಂಶವನ್ನು ಸಾಧನೆಯಿಂದ ಕರಗತ ಮಾಡಿಕೊಳ್ಳಬೇಕು. ಬಿಂದು ಸಿಂಧುವನ್ನು ಬೆರೆತಂತೆ ಜೀವನು ದೇವನೊಡನೆ ಬೆರೆತು ದಿವ್ಯ (Divine)ನೇ ಆಗಬಲ್ಲ.
3. ಶೌಚ ಮುಂತಾದ ಅಷ್ಟಾಂಗಯೋಗಾಂತರ್ಗತ ಯಾವುದೇ ಸಾಧನೆಯನ್ನೇ ಆಗಲೀ ಇಷ್ಟಲಿಂಗದ ಮುಖಾಂತರವೇ ಮಾಡಬೇಕೇ ವಿನಾ, ಅದನ್ನು ಬಿಟ್ಟು ಅಲ್ಲ.
4. ಶರಣರ ಮನಸ್ಸು ಒಪ್ಪಿ ಸಿದ್ದರಾಮೇಶ್ವರನನ್ನು ಇಂಬಿಟ್ಟು ಕೊಳ್ಳಬೇಕಾದರೆ, ಲಿಂಗ ಸಾಹಿತ್ಯವಾಗಲೇ ಬೇಕು. ..
ಈ ಎಲ್ಲ ಉದ್ದೇಶಗಳಿಂದಲೇ ಹದಿನೆಂಟು ದಿವಸಗಳ ಕಾಲ ವಾದಮಾಡಿ, ಬಸವಾದಿ ಪ್ರಮಥರು ಲಿಂಗದ ಮಹತ್ವ, ಅದರ ಅವಶ್ಯಕತೆಯನ್ನು ಕುರಿತು ಸಿದ್ದರಾಮನಿಗೆ ಮನಗಾಣಿಸಿಕೊಡುತ್ತಾರೆ. ಪ್ರಭುದೇವರ ಆದೇಶದಂತೆ - ಚನ್ನಬಸವಣ್ಣನವರು ಸಿದ್ದರಾಮನಿಗೆ ಲಿಂಗದೀಕ್ಷೆಯನ್ನು ಮಾಡುತ್ತಾರೆ. ಆಗ ಸಿದ್ದರಾಮದೇವರು ಶಿವಯೋಗಿಗಳಾಗಿ ತಮ್ಮ ಅನುಗ್ರಹದ ಬಗೆಯನ್ನು ಹೀಗೆ ಬಿತ್ತರಿಸಿದ್ದಾರೆ :
ಅಧ್ಯಾತ್ಮ ಅಧ್ಯಾತ್ಮವೆಂಬಿರಿ ಅಧ್ಯಾತ್ಮವಾರಿಗೆ ?
ಶ್ರೀ ಗುರುಸ್ವಾಮಿ ಬಹಳವಪ್ಪ ಶಿವಲಿಂಗವ ಸೂಕ್ಷ್ಮವ ಮಾಡಿ
ಕರಸ್ಥಲಕ್ಕೆ ಕೊಟ್ಟ ಬಳಿಕ, ಬೇರೆ ಯೋಗ ಉಂಟೆ ?
ತನ್ನ ಹಸ್ತವ ಮಸ್ತಕದಲ್ಲಿಟ್ಟು, ವಾಯುಪ್ರಾಣಿಯಾಗಿದ್ದು ದ ಕೊಂದು
ಲಿಂಗಪಾಣಿಯ ಮಾಡಿದಬಳಿಕ, ಅಕ್ಷರ ಐದರಲ್ಲಿ ಮುಕ್ತನ ಮಾಡಿದಬಳಿಕ
ಮರಳಿಯೋಗವುಂಟೆ ? ಶಿವಯೋಗವಲ್ಲದೆ ?
ಲಿಂಗಾರ್ಚನೆಯಂ ಮಾಡಿ, ಜಂಗಮ ಪ್ರಸಾದವ ಕೊಂಡ ಬಳಿಕ,
ಮರಳಿ ಬರಿಯ ಯೋಗಕ್ಕೆ ಒಡಂಬಡುವದೆ ಅರಿವು ?
ಎಂಬ ಇಂತಪ್ಪವನತಿಗಳೆದು ಶುದ್ಧ ಶಿವಯೋಗಿಯ
ಮಾಡಿದಾತ ಚನ್ನಬಸವಣ್ಣ......
ಎನ್ನ ತನ್ನಂತೆಮಾಡಿದ ಗುರು ಚನ್ನಬಸವಣ್ಣ,
ಆನು ಚನ್ನಬಸವಣ್ಣನ ಕರುಣದಿಂದ ಅಭ್ಯಾಸಯೋಗವನತಿಗಳೆದು,
ಶಿವಯೋಗದಲ್ಲಿ ನಿತ್ಯನಾಗಿ, ಭಕ್ತ ಮಹೇಶ ಪ್ರಸಾದಿ
ಪ್ರಾಣಲಿಂಗಿ ಶರಣ ಐಕ್ಯನೆಂಬ ಷಟುಸ್ಸಲಕ್ಕಧಿಕಾರಿಯಾದ.
ನಿನ್ನವರ ಸಲುಗೆಗೆ ಸಂದ ಚೆನ್ನಬಸವಣ್ಣನ ಕೃಪೆ ಎನ್ನ ನಿಂತು
ಮಾಡಿತ್ತು ಕಾಣಾ ಗುರುವೆ ಕಪಿಲಸಿದ್ಧ ಮಲ್ಲಿಕಾರ್ಜುನಾ. -ಸಿದ್ದರಾಮೇಶ್ವರ
ಸಿದ್ದರಾಮ ಶಿವಯೋಗಿಯ ಮೇಲಿನ ವಚನದಲ್ಲಿ ಒಂದು ಮಾತು ನಿಚ್ಚಳವಾಗಿ ಎದ್ದು ಕಾಣುತ್ತಿದೆ. ಎಲ್ಲ ಯೋಗಗಳಿಗಿಂತಲೂ ಶಿವಯೋಗ ಶ್ರೇಷ್ಠವೆಂಬುದು ಅವನ ಅಭಿಪ್ರಾಯ.
ಮೊದಲು ಸಿದ್ದರಾಮನು ಹಠಯೋಗರಾಜಯೋಗ- ಕರ್ಮಯೋಗಗಳನ್ನು ಆಚರಿಸಿ, ಅಂದರೆ ಅನೇಕ ಅಭ್ಯಾಸ ಯೋಗಗಳನ್ನು ಮಾಡಿ ಹಲವಾರು ಅದ್ಭುತ ಸಿದ್ದಿ (Occult Powers) ಗಳನ್ನು ಪಡೆದವನಾಗಿದ್ದನು. ಉರಿನೇತ್ರವನ್ನು ಗಳಿಸಿಕೊಂಡಿದ್ದನು. ಆದರೆ ಸಿದ್ಧಯೋಗಿ ಶಿವಯೋಗಿಗೆ ಮಣಿಯಬೇಕಾಯಿತು. ಸಿದ್ದರಾಮನು ಪ್ರಭುದೇವನಿಗೆ ಶರಣುಹೊಕ್ಕನು. ಚನ್ನಬಸವಣ್ಣನಿಂದ ಇಷ್ಟಲಿಂಗವ ಪಡೆದು ಷಟ್‌ಸ್ಥಲಕ್ಕೆ ಅಧಿಕಾರಿಯಾದ. ಗುರುಲಿಂಗ ಜಂಗಮ ಪ್ರಸಾದದಿಂದ ಪಾವನನಾದ. ಪ್ರಣವ ಪಂಚಾಕ್ಷರಿಯಲ್ಲಿ ಮುಕ್ತನಾದ. ಗುರುವು ಮುಟ್ಟಿ ಗುರುವಾದ. ಶಿವಯೋಗಿಯೋಗಿ ತನ್ನ ಮೊದಲಿನ ಯೋಗಗಳ ಕೊರತೆಯನ್ನು ಕಂಡುಕೊಂಡ. ಶಿವಯೋಗವೊಂದೇ ಪರಿಪೂರ್ಣ ಯೋಗವೆಂದು ಮನಗಂಡನು. ಒಂದು ಆಶ್ಚರ್ಯಕರ ಸಂಗತಿಯೆಂದರೆ ಸಿದ್ದರಾಮ ಸಿದ್ಧ ಯೋಗಿಯಲ್ಲಿ ನಿಜವಾಗಿಯೂ ಅಧ್ಯಾತ್ಮದ ಹಂಬಲವಿತ್ತು; ಸತ್ಯವನ್ನೊಪ್ಪುವ ಸದಸದ್ ವಿವೇಕವಿತ್ತು ; . ಶ್ರೇಷ್ಠತೆಯನ್ನು ಕಂಡು ಹರ್ಷಿಸುವ ಸಮ್ಯಗ್ ದೃಷ್ಟಿಯಿತ್ತು. ಒಳ್ಳೆತಾದುದನ್ನೊಪ್ಪುವ ನಿರ್ಮಲನಿರ್ವಂಚಕ ಹೃದಯವಿತ್ತು, ಅತ್ಯಂತ ಕೀರ್ತಿಶಾಲಿಯಾದ ವ್ಯಕ್ತಿಯಾಗಿದ್ದರೂ ಲಿಂಗವನ್ನು ಕಟ್ಟಿಕೊಂಡು ಲಿಂಗವಂತನಾದ-ಶಿವಯೋಗಿಯಾದ. ಇಂತಹ ಪ್ರಾಂಜಲ ಮನಸ್ಸು ಎಲ್ಲರಿಗೂ ಇರದು. ವ್ಯಕ್ತಿ ಪ್ರತಿಷ್ಠೆಯ ಹಮ್ಮು ಬೆಳೆಸಿಕೊಂಡ ಅನೇಕರು ಉತ್ತಮವಾದುದೊಂದನ್ನು ಕಂಡರೂ ಮೆಚ್ಚಿಕೊಳ್ಳರು, ಮನ್ನಿ ಸರು, ಸ್ವೀಕರಿಸರು.
ಇಷ್ಟಲಿಂಗವೇಕೆ ಬೇಕು ? ಎಂದು ವಾದಿಸುವವರ ಸಂಖ್ಯೆ ಕಾಲಮಾನದ ಪ್ರಭಾವದಿಂದ ಜಾಸ್ತಿಯಾಗುತ್ತಿದೆ. ಸ್ನಾನ-ಪೂಜೆ, ಜಪ-ತಪ ಮಾಡಲಾರದ ಆಲಸಿಗಳು, ತಾವು ಬಹಳಷ್ಟು ವಿಚಾರವಾದಿಗಳೆಂದು ತಿಳಿದುಕೊಂಡವರು. ಜೊತೆಗೆ ಒಳಗಿನ ಆತ್ಮಲಿಂಗಪೂಜೆ ಮಾಡುವ ಸಾಮರ್ಥ ಬಂದ ಮೇಲೆ ಇಷ್ಟಲಿಂಗ ಪೂಜೆ ಏತಕ್ಕೆ ಎನ್ನುವ ವಾಕ್‌ಬ್ರಹಿಗಳು ಇವರುಗಳೆಲ್ಲ ಇಷ್ಟಲಿಂಗದ ಆವಶ್ಯಕತೆ ಕುರಿತು ಸಂದೇಹವೆತ್ತುವರು. ಹೀಗೆ, ಈ ಇಷ್ಟಲಿಂಗ ಕಟ್ಟಿಕೊಂಡರೇನು ಪ್ರಯೋಜನವೆಂದು ಲಘುವಾಗಿ ಮಾತನಾಡುವವರ ಸಂಖ್ಯೆ ಇಂದು ವಿಶೇಷವಾಗಿ ಕಲಿತವರಲ್ಲಿ ಹೆಚ್ಚುತ್ತಲಿದೆ. ನಾಸ್ತಿಕತೆಯು ಹಬ್ಬುತ್ತಿರುವ ಇಂದಿನ ಕಾಲದಲ್ಲಿ ಅದು ಸ್ವಾಭಾವಿಕ. ಒಳಗೇನೋ ಆತ್ಮಲಿಂಗವಿದೆ ನಿಜ. ಆದರೆ ಅದು ಭವರೋಗವನ್ನು ಕಳೆಯಲಾರದು. ಉದಾ : ಒಂದು ಆಕಳಿದೆ. ಅದು ಬಿದ್ದು ಅದರ ಚಪ್ಪೆಗೆ (ತೊಡೆಗೆ) ಗಾಯವಾಗಿದೆ, ಬಾವು ಬಂದಿದೆ, ನೋವಾಗಿದೆ. ಡಾಕ್ಟರರು, ಅದಕ್ಕೆ ತುಪ್ಪ ಹಚ್ಚಿ ತಿಕ್ಕಿದರೆ ವಾಸಿಯಾಗುತ್ತದೆ' ಎಂದು ಹೇಳುವರು. ಆಗ ಈ ಭೂಪನು 'ಆಕಳ ಕೆಚ್ಚಲಿನಲ್ಲಿ ಹಾಲಿದೆ, ಹಾಲಿನಲ್ಲಿ ಮೊಸರಿದೆ, ಮೊಸರಿನಲ್ಲಿ ಬೆಣ್ಣಿಯಿದೆ, ಬೆಣ್ಣೆಯಲ್ಲಿ ತುಪ್ಪವಿದೆ. ಆದ್ದರಿಂದ ತಾನಾಗಿಯೇ ಆ ಆಕಳ ಕಾಲುನೋವು ವಾಸಿಯಾಗಲಿ' ಅಂದರೆ ಗುಣವಾಗಬಹುದೆ ? ಸಾಧ್ಯವಿಲ್ಲ. ಆ ಹಸುವನ್ನು ಕರೆದು-ಹಿಂಡಿಕೊಂಡು, ಆ ಹಾಲನ್ನು ಕಾಸಿ, ಹೆಪ್ಪು ಹಾಕಿ, ಮೊಸರು ಮಾಡಿ, ಬೆಣ್ಣೆ ತೆಗೆದು ತುಪ್ಪ ಕಾಸಿ ನಂತರ ಆಕಳ ಕಾಲಿಗೆ ಹಚ್ಚಿ ತಿಕ್ಕಿದರೆ ಆ ನೋವು ಗುಣಮುಖವಾಗುವುದು. ಒಳಗಿರುವ ಆತ್ಮಲಿಂಗವು ನಮ್ಮ ಭವರೋಗವನ್ನು ನಾಶಗೊಳಿಸದು. ಆ ಆತ್ಮಲಿಂಗವು ಸದ್ದುರುವಿನಿಂದ ಸಾಕಾರಗೊಂಡು ಕರಸ್ಥಲಕ್ಕೆ ಬಂದು, ಅದನ್ನು ಅನುಸಂಧಾನಗೈದರೆ ನಮ್ಮ ಭವರೋಗ ದೂರವಾಗುವುದರಲ್ಲಿ ಸಂಶಯವಿಲ್ಲ. ಇದೇ ವಿಚಾರವನ್ನು ಬಿಂಬಿಸುವ ಚನ್ನಬಸವಣ್ಣನವರ ಒಂದು ವಚನ ನೋಡಬಹುದು :
ಗೋವಿನ ಹೊಟ್ಟೆಯಲ್ಲಿ ಮೃತವಿದ್ದಡೇನೊ,
ಆ ಗೋವು ದಿನದಿನಕ್ಕೆ ಪುಷ್ಟಿಯಾಗಬಲ್ಲುದೇ ?
ಅದು ಕಾರಣ, ಆ ಗೋವ ಪೋಷಿಸಿ ಕರೆದು,
ಕಾಸಿ ಮೃತವ ಮಾಡಿ,
ಆ ಗೋವಿಂಗೆ ಕುಡಿಯಲೆರೆದಡೆ
ಆ ಗೋವು ದಿನದಿನಕ್ಕೆ ಪುಷ್ಟವಹುದು.
ಹಾಗೆ, ತನ್ನಲ್ಲಿ ವಸ್ತುವಿದ್ದಡೇನೋ ?
ಆ ವಸ್ತುವ ಗುರುಮುಖದಿಂದ ಕರಸ್ಥಲಕ್ಕೆ ಪಡೆದು
ಸರಿಯೆಯಿಂದ ಪ್ರಾಣಕ್ಕೆ ವೇಧಿಸಿಲ್ಲದೆ ಪ್ರಾಣಲಿಂಗವಾಗದು.
ಕೂಡಲಚನ್ನಸಂಗಯ್ಯನಲ್ಲಿ ಇಷ್ಟಲಿಂಗವ ಸಯೆಯಿಂದ
ಪ್ರಾಣಕ್ಕೆ ವೇಧಿಸಿ, ತಾನೆಂಬ ಅನಿಷ್ಟವ ತೋಲಗಿಸಿದಲ್ಲದೆ
ಪ್ರಾಣಲಿಂಗ ಸಂಬಂಧವಾಗಬಾರದು. -ಚನ್ನಬಸವಣ್ಣ ೮೭೨
ಗುರುಮುಖದಿಂದ ಕರಸ್ಥಲಕ್ಕೆ ಇಷ್ಟಲಿಂಗವನ್ನು ಪಡೆದೇ ಪ್ರಾಣ (ಆತ್ಮ) ಲಿಂಗವನ್ನು ಕಾಣಬೇಕೆಂದು ಇಲ್ಲಿ ಹೇಳಲಾಗಿದೆ.
ಭಕ್ತಿಯ ಅಭಿವ್ಯಕ್ತಿಗೆ, ಉಪಾಸನೆಗೆ ಒಂದು ವಸ್ತು ಬೇಕು. ಅಂತರಂಗದಲ್ಲಿಹ ಆತ್ಮನನ್ನಾಗಲೀ, ಬ್ರಹ್ಮಾಂಡಗತ ನಿರಾಕಾರ ದೇವನನ್ನಾಗಲೀ ಪೂಜಿಸಲು ಬರುವುದಿಲ್ಲ. ಓರ್ವ ಗರ್ಭಿಣಿಯ ಹೊಟ್ಟೆಯಲ್ಲಿ ಕೂಸಿರುತ್ತದೆ. ಆಗ ಆಕೆ ತನ್ನ ಹೊಟ್ಟೆಯನ್ನೇ ತಟ್ಟಿಕೊಳ್ಳುತ್ತ ಲಾಲಿ ಹಾಡಿಕೊಂಡರೆ, ಎಷ್ಟು ಹಾಸ್ಯಾಸ್ಪದವಾಗಿ ತೋರುವುದಲ್ಲವೆ ? ಅದೇ ಮಗು ಗರ್ಭದಿಂದ ಹೊರ ಬಂದು ಸ್ನಾನಮಾಡಿಸಿಕೊಂಡು ತೊಟ್ಟಿಲಲ್ಲಿ ಮಲಗಿದಾಗ ತಾಯಿ ಜೋಗುಳ ಹಾಡಿದರೆ ಅದು ಬಲು ಸೊಗಸಾಗಿ ತೋರೀತಷ್ಟೆ ?
ಪ್ರಾಣಲಿಂಗವ ಪರಲಿಂಗವ ಮಾಡಿ,
ಇಷ್ಟಲಿಂಗದ ಪೂಜೆಯ ದೃಷ್ಟವ ನೋಡಾ !
ತೊಟ್ಟಿಲ ಶಿಶುವಿಂಗೆ ಜೋಗುಳವಲ್ಲದೆ
ಹೊಟ್ಟೆಯ ಶಿಶುವಿಂಗೆ ಜೋಗುಳವುಂಟೆ ?
ಬಯಲಾಸೆ ಹಾಸ್ಯವಾಯಿತ್ತು ಚಿಕ್ಕಯ್ಯಪ್ರಿಯ
ಸಿದ್ದಲಿಂಗವಿಲ್ಲದ ಕಾರಣ ! - ಘ.ವ.ಸಾ.ಸಂ.ಪು ೪೦೯
ಹೊಟ್ಟೆಯೋಳಗಿರ್ದ, ಕಾಣಿಸಬಾರದ ಶಿಶು ಹೆತ್ತನಂತರ ಹೊರಗೆ ಬಂದ ಬಳಿಕ ತಾಯಿಗೆ ಮುದ್ದಿನ ಮೋಹದಪ್ಪಿನ ಸುಖವ ಕೊಟ್ಟು, ಜೋಗುಳ ಹಾಡಿಸಿಕೊಳ್ಳಬಲ್ಲುದು.
ಅದರಂತೆ ಅಂಗದೊಳಗಿರ್ದ ಪ್ರಾಣ ಚೈತನ್ಯವೆ ಪರಶಿವ ಲಿಂಗವೆಂದರಿಯದೆ ಬರಿಯ ವಾಗದೈತವ ನುಡಿದು, ಬಯಲನೆ ಭಾವಿಸಿದಲ್ಲಿ ದೇಹವಾಸನೆಯಳಿಯದಾಗಿ ಹಾಸ್ಯಕ್ಕೊಳಗಾಗಿ ಹೋದರು ಅದೈತಿಗಳು.
ಅದು ಕಾರಣ ಅಂಗದೊಳಗಿರ್ದ ಪ್ರಾಣಲಿಂಗವು ಗುರು ಮುಖದಿಂದ ಬಹಿಷ್ಕರಿಸಿ ಕರಸ್ಥಲಕ್ಕೆ ಬಂದ ಇಷ್ಟಲಿಂಗದ ಕಲಾಸ್ವರೂಪವ ಕಂಡು, ತನ್ನ ನಿಜವೆಂದರಿದು ಮೋಹಿಸಿ, ಸರ್ವ ಕ್ರಿಯಾಪಚಾರವ ಮಾಡುವ ಶರಣನು ದೇಹವಾಸನೆಯಳಿದು ಲಿಂಗಾನಂದದಲ್ಲಿ ನಿಲುಕಡೆ ಹೊಂದುವನೆಂದು ಈ ವಚನದಲ್ಲಿ ಘಟ್ಟಿವಾಳಯ್ಯ ಶರಣರು ಪ್ರತಿಪಾದಿಸಿದ್ದಾರೆ.
ಪಿಂಡದಲ್ಲಿ ಪರಮಾತ್ಮನಿದ್ದರೂ, ಪರಮಾನಂದವಾಗಲಾರದು; ದೇಹದಲ್ಲಿ ದೇಹಿಯಿದ್ದರೂ ದಿವ್ಯಾನಂದವಾಗಲಾರದು; - ತನುವಿನಲ್ಲಿ ಆತ್ಮನಿದ್ದರೂ ಆತ್ಮಾನಂದವಾಗಲಾರದು;
ಯಾಕೆಂದರೆ ಅವನು ಒಳಗೆ ಸುಪ್ತವಾಗಿ ಅವ್ಯಕ್ತನಾಗಿರುವ ಕಾರಣ ಅದು ಹೇಗೆಂದರೆ ತಾಯಿಯ ಗರ್ಭದಲ್ಲಿರುವ ಶಿಶು ತಾಯಿಯ ಮುಖವ ನೋಡಲಾರದು. ಆ ತಾಯಿ ತನ್ನ ಗರ್ಭದಲ್ಲಿರುವ ಶಿಶುವಿನ ಸ್ವರೂಪವನ್ನರಿಯಳು. ಅದರಂತೆ ನಮ್ಮ ಪಿಂಡದಲ್ಲಿರುವ ಪರಮಾತ್ಮನ ಸ್ವರೂಪವನ್ನು ನಾವು ಕಾಣಿವು: ನಮ್ಮ ಮೇಲೆ ಪರಮಾತ್ಮನ ಕೃಪಾದೃಷ್ಟಿ ಬೀಳಲಾರದು. ಗರ್ಭದ ಶಿಶುವನ್ನು ತಾಯಿ ಹೆತ್ತು, ತೊಟ್ಟಿಲಲ್ಲಿ ಮಲಗಿಸಿ ಆಗಾಗ ಮುದ್ದಾಡಿ, . ಜೋಗುಳವ ಹಾಡಿದಾಗ ಆ ತಾಯಿಗೆ ಆಗುವ ಆನಂದವನ್ನು ಅಳೆಯಲೆಂತು ಸಾಧ್ಯ ? ಅದೇ ರೀತಿ ಅಂತರಂಗದಲ್ಲಿಹ ಪ್ರಾಣಲಿಂಗ ಶಿಶುವನ್ನು ಇಷ್ಟಲಿಂಗರೂಪದಲ್ಲಿ ಸಾಕಾರಗೊಳಿಸಿಕೊಂಡು ಕರಸ್ಥಲದ ತೊಟ್ಟಿಲಲ್ಲಿ ಇಟ್ಟು ಕೊಂಡು, ಮಂಗಲಗೀತೆ ಎಂಬ ಜೋಗುಳ ಹಾಡುವಾಗ ಶರಣಮಾತೆಗೆ ಆಗುವ ಆನಂದವನ್ನು ನಾಸ್ತಿಕರು ಬಲ್ಲರೆ ? ಬಂಜೆ ಹೇಗೆ ಮಗುವಿನ ಮಮತೆ ಬಿಸುಪುಗಳನ್ನು ಅರಿಯಳೋ ಹಾಗೆ ನಾಸ್ತಿಕನೂ ಆ ಆನಂದವನ್ನು ಅನುಭವಿಸಲಾರ. ಅದಕ್ಕಾಗಿ ನಾವು ಹೆತ್ತತಾಯಿ (ಭಕ್ತರಾಗಿ)ಯಾಗಿ ಆ ಲಿಂಗಾನಂದವನ್ನು ಹೊಂದಬೇಕಲ್ಲದೆ, ಬಂಜೆ (ಭವಿ)ಯಾಗಿ ಆ ಅವರ್ಣನೀಯ ಸುಖವನ್ನು ಅನುಭವಿಸಲಾರೆವು. ಇದೇ ವಿಚಾರದ ಬೆಂಬಳಿವಿಡಿದು ಷಣ್ಮುಖಸ್ವಾಮಿಗಳು ಹಾಡಿರುವ ಕೆಳಗಿನ ವಚನವನ್ನು ನಿರೀಕ್ಷಿಸುವಾ.
ನೋಡಿರೆ ನೋಡಿರೇ, ಒಂದು ವಿಚಿತ್ರವ,
ಶಿಷ್ಯನೆಂಬ ಹೆಂಡತಿಯ ಶ್ರೀ ಗುರುವೆಂಬ ಗಂಡನು ..
ಹಸ್ತಮಸ್ತಕ ಸಂಯೋಗವೆಂಬ ಕೂಟವ ಕೂಡಲು,
ಷಡಕ್ಷರ ಮಂತ್ರವೆಂಬ ವೀರ್ಯವು ಚಲನೆಯಾಗಿ
ಆ ಶಿಷ್ಯನೆಂಬ ಹೆಂಡತಿಯ ಕರ್ಣವೆಂಬ ಗರ್ಭ ಪ್ರವೇಶವಾಗಲು
ಮನ ಬಸುರಾಗಿ, ಕಂಗಳೆಂಬ ಯಾನಿಯಲ್ಲಿ
ಲಿಂಗವೆಂಬ ಮಗನ ಹಡೆದು, ಅಂಗೈಯೆಂಬ ತೊಟ್ಟಿಲಲ್ಲಿಕ್ಕಿ
ಮಂಗಳಸೂತ್ರವೆಂಬ ಜೋಗುಳ ಹಾಡಿ
ಅಖಂಡೇಶ್ವರನೆಂಬ ಹೆಸರಿಟ್ಟರು ನೋಡಾ !
ಇದು ಕಾರಣ ನೀವೀಗ ಮಗನಾದಿರಿ
ನಾ ನಿಮಗೆ ತಾಯಿಯಾದೆನಯ್ಯಾ ಅಖಂಡೇಶ್ವರಾ. -ಷ.ವ. ೫೬೩
ಷಣ್ಮುಖಸ್ಮಾಮಿಯ ಅತಿಮಾರ್ಮಿಕವಾದ ಈ ವಚನಸುಧೆಯನ್ನು ಆಸ್ವಾದಿಸಲು ಓದುಗರೇ ಮತ್ತೆ ಮತ್ತೆ ಹಾಡಿ, ಆನಂದಿಸಲೆಂದು ನಾವು ಈ ವಚನವನ್ನು ವಿವರಿಸಿ ರಸಭಂಗಮಾಡುವ ಹುಚ್ಚು ಸಾಹಸವನ್ನು ಗೈಯಲಾರೆವು. ಓದಿ, ಹಾಡಿ ವಚನಾಮೃತವನೀಂಟಬೇಕು !
ಕಾಷ್ಠದೊಳಿರ್ದ ವಡ್ನಿ ಮಥನೋದ್ಭವದಿಂದ ತಲೆದೋರಿದಲ್ಲಿ ತ||
ತ್ಯಾಷ್ಠದ ಭಾವಮುಂಟೆ ಬಳಿಕಾತ್ಮದೊಳಿರ್ದ ಪರಾಣು ಲಕ್ಷಣಾ.
ಧಿಷ್ಠಿತ ಲಿಂಗಮಾದಿಗುರು ಸಂಸ್ಕೃತಿಯಿಂ ತಲೆದೋರಿದಲ್ಲಿ ತ |
ನ್ನಿಷ್ಟುರಮಾತ್ಮಲೇಪ ಪಶುಭಾವಮದುಂಟೆ ಬಿಡಾ ಶಿವಾಧವಾ|| -ಮಗ್ಗೆಯ ಮಾಯಿದೇವ
ಶ್ರೀ ಮಗ್ಗೆ ಮಾಯಿದೇವ ಪ್ರಭುಗಳು - ಮೇಲಿನ ಪದ್ಯದಲ್ಲಿ ಲಿಂಗಧಾರಣದಿಂದ ಮಾನವ ಸಹಜ ಪಾಶವಿಕ ಗುಣಗಳು ಅಳಿಯುವುವೆಂಬುದನ್ನು ನಿರೂಪಿಸಿದ್ದಾರೆ. ಕಟ್ಟಿಗೆಯಾಳಗಿರುವ ಬೆಂಕಿಯನ್ನು ಹೊತ್ತಿಸಿ ಹೊರಗಡೆ ಹೊರಡಿಸಿಬಿಟ್ಟ ಬಳಿಕ ಆ ಕಟ್ಟಿಗೆಯೂ ಬೆಂಕಿಯೇ ಆಗುವುದು; ಮತ್ತು ಅದು ಕಟ್ಟಿಗೆಯೆಂಬ ಭಾವನೆಯು ಹೇಗಿರುವುದಿಲ್ಲವೋ, ಅದರಂತೆಯೇ ತನ್ನಲ್ಲಿರ್ಪ ಪರಮಸೂಕ್ಷ್ಮವಾದ ಪ್ರಾಣಲಿಂಗವನ್ನು ಗುರುವು ಸಂಸ್ಕಾರ ವಿಶೇಷದಿಂದ ಹೊರಕ್ಕೆ ತೆಗೆದು ಇಷ್ಟಲಿಂಗವನ್ನಾಗಿಸಿ ತೋರಿಸಿದ ಬಳಿಕ ತತ್ಸಂಬಂಧವನ್ನೈದಿದವನಲ್ಲಿ ಇನ್ನು ಪಶುತ್ವವೆಲ್ಲಿರುವುದು ?
ಕಾಷ್ಠದೊಳಗೆ ಅಡಗಿದ ಅಗ್ನಿ ಕಾಷ್ಠದ ರೂಪವನ್ನು ಸುಡಲಾರದು; ಅದರಂತೆ ದೇಹದಲ್ಲಿರುವ ದೇಹಿ ಆ ದೇಹದ ಜಡಭಾವವನ್ನು, ತನುವಿನ ತಮಂಧತೆಯನ್ನು ತೊಡೆದು ಹಾಕಲಾರ. ಆ ಮರದಲ್ಲಿ ಅಡಗಿದ ಮಂದಾಗ್ನಿಯನ್ನು ಮಥನಿಸಿ ಬಹಿಷ್ಕರಿಸಿದಾಗ ಆ ಕಾಷ್ಠದ ಗುಣಗಳನ್ನು ಸುಡುವಂತೆ, ದೇಹದಲ್ಲಿರುವ ದೇಹಿ (ಆತ್ಮ)ಯನ್ನು ಸದ್ದು ರುಸ್ವಾಮಿ ತನ್ನ ಕ್ರಿಯಾಶಕ್ತಿಯ ಮಥನದಿಂದ ಹಸ್ತಮಸ್ತಕ ಸಂಯೋಗದಿಂದ, ಬಹಿಷ್ಕರಿಸಿ ಶಿಷ್ಯನ ಕರದಲ್ಲಿ ಇಷ್ಟಲಿಂಗವಾಗಿ ಸ್ಥಾಪನೆಗೊಳಿಸಲು, ಆ ಲಿಂಗದ ಚಿತ್ಕಳೆಯು ತನ್ನ ಗುಣಂಗಳೆಲ್ಲವ ದಹಿಸಿ, ಅಂತರಂಗ ಬಹಿರಂಗವೆಲ್ಲ ಒಂದೇಯಾಗಿ ಆ ಶರಣನು ಶಿವರೂಪ ತಾನಾಗುವನು.
ಅಂತರಂಗದೊಳಿರ್ದ ನಿರಾಕಾರಲಿಂಗವನು
ಸಾಕಾರಲಿಂಗವಮಾಡಿ, ಶ್ರೀ ಗುರುಸ್ವಾಮಿ
ಎನ್ನ ಕರಸ್ಥಲಕ್ಕೆ ತಂದುಕೊಟ್ಟನಯ್ಯಾ,
ಇಂತಪ್ಪಲಿಂಗವು ಅಂತರಂಗವನಾವರಿಸಿ,
ಅಂತರಂಗದ ಕರಣಂಗಳೇ ಕಿರಣಂಗಳಾಗಿ,
ಆ ಬೆಳಗುವ ಚಿದಂಶಿಕವೆ ಪ್ರಾಣಲಿಂಗವು.
ಆ ಮೂಲ ಚೈತನ್ಯವೇ ಭಾವಲಿಂಗವು.
ಇದನರಿದು ನೋಡುವ ನೋಟ ಭಾವಪರಿಪೂರ್ಣವಾಗಿ
ತಾನು ತಾನಾದಲ್ಲದೆ ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡಪರಿಪೂರ್ಣವಪ್ಪ ನಿಜವು ತಾನೆ ಕೂಡಲಸಂಗಮದೇವಾ ! -ಬ.ಷ.ವ. ೧೩೬೦
ವಿಶ್ವಗುರು ಬಸವಣ್ಣನವರ ಈ ವಚನವು ತುಂಬಾ ತಾತ್ವಿಕವೂ, ಮಾರ್ಮಿಕವೂ ಆಗಿದೆ. ಅದಲ್ಲದೆ ಕ್ಲಿಷ್ಟವೂ ಆಗಿದೆ. ಒಳಗಿರುವ (ಪ್ರಾಣ) ಲಿಂಗವು ಹೊರಗೆ ಕರಸ್ಥಲಕ್ಕೆ ಇಷ್ಟಲಿಂಗವಾಗಿ ಬಂದುದೂ, ಅದೇ ಪುನಃ ಅಂತರಂಗವನ್ನಾವರಿಸಿದುದು ಮತ್ತು ಅದರಿಂದ ಆ ಚಿದ್ಭಳಗಿನಿಂದ ತನ್ನನ್ನು ತಾನು ಕಂಡು, ತಾನೇತಾನಾಗುವ ವಿಧಾನ ಹೇಳಲ್ಪಟ್ಟಿದೆ. ಇಲ್ಲಿ ಒಂದು ಸಂಗತಿ ಸ್ಮರಣಿಗೆ ಬರುತ್ತದೆ. ಚರ್ಮರೋಗದಿಂದ ರೋಗಿ ಬಳಲುತ್ತಿದ್ದರೆ, ಯಾವ ಔಷಧದಿಂದಲೂ ಗುಣವಾಗದಿದ್ದರೆ, ಕೊನೆಗೆ ಡಾಕ್ಟರು ಅವನ ದೇಹದೊಳಗಿನ ರಕ್ತವನ್ನು ಹೊರಗೆ ತಕ್ಕೊಂಡು ಮತ್ತೆ ಒಳಗೆ ಸೇರಿಸಿದಾಗ ಅವನ ಚರ್ಮ ವ್ಯಾಧಿ ವಾಸಿಯಾಗುತ್ತದೆ. ಇದಕ್ಕೆ 'Autoblood injection' ಎಂದು ಹೇಳುತ್ತಾರೆ. ಒಳಗೆ ರಕ್ತವಿದೆ, ಅದುವೇ ನನ್ನ ಚರ್ಮರೋಗವನ್ನು ವಾಸಿಮಾಡಲಿ ಎಂದು ಹಠ ಹಿಡಿದರೆ', ಆ ರೋಗಿಗೆ .ಎಂದೂ ಗುಣವಾಗಲಾರದು. ಒಳಗಿರುವ ರಕ್ತ ಹೊರಗೆ ಬಂದು, ಅದೇ ತಿರುಗಿ ಒಳಗೆ ಹೋದಾಗಲೇ ಅವನ ರೋಗವು ವಾಸಿಯಾಗುವುದು. ಇನ್ನೊಂದು ಅತ್ಯುತ್ತಮ ಉದಾಹರಣೆ ಇದೆ. ನಿಸರ್ಗ ಚಿಕಿತ್ಸೆಯಲ್ಲಿ ಸ್ವಮೂತ್ರ ಪ್ರಯಾಗ ಚಿಕಿತ್ಸೆ ಎಂದು ಉಂಟು. ಚರ್ಮರೋಗ, ನೇತ್ರರೋಗ ಮುಂತಾದುವಕ್ಕೆ ಇದು ಬಲು ಪರಿಣಾಮಕಾರಿ ಚಿಕಿತ್ಸೆ. ತಾಜಾ ಮೂತ್ರದ ಹನಿಗಳನ್ನು ಕಣ್ಣುಗಳಲ್ಲಿ ಬಿಟ್ಟು ಕೊಳ್ಳುವುದು ನೇತ್ರರೋಗಕ್ಕೆ ಉತ್ತಮ ಪರಿಹಾರ. ಮೂತ್ರವನ್ನು ವಾಯುರಹಿತ ಶೀಷೆಗಳಲ್ಲಿ ಏಳು ದಿನಗಳ ಕಾಲ ಕಳಿಸಿ (Fermentation), ಮೈಗೆ ತಿಕ್ಕುತ್ತ ಹೋದರೆ ಚರ್ಮರೋಗಗಳು ಖಂಡಿತಾ ವಾಸಿಯಾಗುವವು. "ದೇಹದಲ್ಲಿಯೇ ಮೂತ್ರವಿದೆ; ವಾಸಿಯಾಗಲಿ" ಎಂದರೆ ಹಾಗೆ ಆಗದು, ಅದು ಹೊರಬಂದು, ಕಳಿತು ಪಕ್ವವಾಗಿ ಪುನಃ ದೇಹದಲ್ಲಿ ಸೇರಬೇಕು. ಅದರಂತೆ ಭವರೋಗಿಯು 'ಒಳಗೇ ದೇವರಿದ್ದಾನೆ, ನನ್ನ ಭವರೋಗ ಗುಣವಾಗಲಿ' ಎಂದರೆ ಆಗದು. ಸದ್ಗುರು ಎಂಬ ಅಧ್ಯಾತ್ಮಿಕ ಡಾಕ್ಟರನು ಒಳಗಿನ ಆತ್ಮಶಕ್ತಿಯನ್ನು ಜಾಗೃತಿಸಿ, ಇಷ್ಟಲಿಂಗ ರೂಪದಲ್ಲಿ ಹೊರತಂದು, ಪುನಃ ಇಷ್ಟಲಿಂಗದ ಚಿತ್ಕಳೆಯು ಒಳಸೇರಿ, ಒಳಗೆ ಸಂಸ್ಕಾರವಾದಾಗ ಮಾತ್ರ ಭವರೋಗವೆಂಬ ವ್ಯಾಧಿಯು ನಾಶವಾಗುವದು.
ಕಲ್ಲಿದ್ದಲಿನಲ್ಲಿ ಅವ್ಯಕ್ತವಾದ ಸುಪ್ತವಾದ ಪ್ರಕಾಶ ಶಕ್ತಿಯಿದ್ದರೂ ಅದಕ್ಕೆ ಹೊರಗಿನಿಂದ ಕಿಡಿಯನ್ನು ಹೊತ್ತಿಸಬೇಕಾಗುತ್ತದೆ. ಆಗ ಅದು ಪ್ರಜ್ವಲಿಸಿ ಉಗಿಯನ್ನು ಉತ್ಪತ್ತಿಮಾಡಿ ಉಗಿಬಂಡಿಯನ್ನು ಎಳೆದುಕೊಂಡು ಹೋಗುವದು. ಈ ಪಿಂಡದಲ್ಲಿ ಅಪಾರವಾದ ಅಧ್ಯಾತ್ಮಶಕ್ತಿಯಿದ್ದರೂ ಅದು ಸುಪ್ತವಾಗಿರುತ್ತದೆ. ಅದಕ್ಕೆ ಗುರುವಾದವನು ಇಷ್ಟಲಿಂಗ ದೀಕ್ಷಾ ಸಂಸ್ಕಾರವೆಂಬ ಕಿಡಿಯನ್ನು ಮುಟ್ಟಿಸಿದಾಗ ಒಳಗಿನ ಅಂತರಂಗ ಜ್ಯೋತಿಯೆಂಬ ಉಗಿಯು ಪ್ರಜ್ವಲಿಸಿ ಮನಸ್ಸೆಂಬ ಉಗಿಬಂಡಿಯನ್ನು ದೇವನೆಂಬ ಗುರಿಯತ್ತ ಎಳೆದುಕೊಂಡು ಹೋಗುವದು.
"ಕಣ್ಣ ಬೆಳಗು ಸೂರ್ಯನ ಬೆಳಗು ಕೂಡಿ ವಸ್ತುವ ಕಾಂಬಂತೆ ನನ್ನ ನಿನ್ನ ಬೆಳಗಿನಲ್ಲಿ ಲಿಂಗವು ಕಾಣಬಂದಿತ್ತು." ಎಂಬ ಶರಣರ ವಾಣಿಯಲ್ಲಿ ಅದೆಷ್ಟು ಗಹನವಾದ ತತ್ವವಡಗಿದೆಯೆಂಬುದನ್ನು ನಾವು ಸ್ವಲ್ಪ ವಿಚಾರಿಸೋಣ. ಈಗ ನಮಗೆ ಒಂದು ವಸ್ತುವು ಕಾಣಬೇಕಾದರೆ ನಮ್ಮ ಕಣ್ಣಿನ ಬೆಳಗು ಸೂರ್ಯನ ಬೆಳಗು ಅವಶ್ಯಕವೇ. ಕುರುಡಿದ್ದರೆ ಸೂರ್ಯನ ಬೆಳಕಿದ್ದರೂ ವಸ್ತುವು ಕಾಣಲಾರದು. ಕಣ್ಣಿದ್ದರೂ ಸೂರ್ಯನ ಬೆಳಗು ಇಲ್ಲದಿದ್ದರೆ ವಸ್ತುವು ಕಾಣಲಾರದು. ಅಂತೂ ವಸ್ತುವನ್ನು ನೋಡಲು ಎರಡರ ಅವಶ್ಯಕತೆ ಇದೆ ಎಂದಂತಾಯಿತು. ಇಷ್ಟು ಮಾತ್ರವಲ್ಲ, ಆ ರವಿಯನ್ನೇ ನೋಡಬೇಕಾದರೂ ಅವನ ರಶ್ಮಿ ಮತ್ತು ನಮ್ಮ ಕಣ್ಣುಗಳು ಬೇಕಾಗುತ್ತವೆಯಷ್ಟೆ. ಅದರಂತೆ ದೀಪವನ್ನು ನೋಡಬೇಕಾದರೆ ದೀಪ್ತಿ ಮತ್ತು ಕಣ್ಣುಗಳು ಬೇಕೇಬೇಕು. ನನ್ನ ನಿನ್ನ ಬೆಳಗಿನಲ್ಲಿ ಲಿಂಗವು ಕಾಣಬಂದಿತ್ತೆಂದರೆ, ನನ್ನ ಅಂತರಂಗ ಜ್ಯೋತಿ [ಚಿದಂಶಿಕವೆಂಬ ಪ್ರಾಣಲಿಂಗ] ಯೆಂಬ ದೀಪ್ತಿಯೂ, ನೀ ಕೊಟ್ಟ ಕರಸ್ಥಲದ ಜ್ಯೋತಿ [ಇಷ್ಟಲಿಂಗ] ಯೆಂಬ ಕನ್ಸ್ಳಗೂ ಕೂಡಿ, ಪರಶಿವಲಿಂಗ (ದೇವ) ವೆಂಬ ದೀಪವನ್ನು ಕಾಣಲು ಸಾಧ್ಯವಾಯಿತು. ನನ್ನ ಅರುಹಿನ ಬೆಳಗು ದೀಪ್ತಿಯಾಗಿಯೂ, ನಿನ್ನ ಕುರುಹಿನ ಬೆಳಗು ಕಣ್ಣಾಗಿಯೂ ಪರಿಣಮಿಸಿ, ಇರುಹಿನ-ಲಿಂಗವೆಂಬ ದೀಪವನ್ನು ಕಾಣಲು ಸಹಾಯಕವಾದವೆಂಬುದನ್ನು ಇಲ್ಲಿ ಹೇಳಲಾಗಿದೆ. ಅಂದಮೇಲೆ ಇಷ್ಟಲಿಂಗವೆಂಬ ಕಣ್ಣು ಇಲ್ಲದೆ ಕುರುಡನಾಗಿ (ಭವಿಯಾಗಿ) ದೇವನೆಂಬ ಪರವಸ್ತುವನ್ನು ಕಾಣಲು ಸಾಧ್ಯವಿಲ್ಲವೆಂಬುದು ಸಿದ್ಧಾಂತವು.
ರಶ್ಮಿಯಿಂದ ರವಿಯನ್ನು ನಿರೀಕ್ಷಿಸುವಂತೆ, ಚಂದ್ರಿಕೆಯಿಂದ ಚಂದ್ರನನ್ನು ಕಾಣುವಂತೆ, ದೀಪ್ತಿಯಿಂದ ದೀಪವನ್ನು ನೋಡುವಂತೆ ಚಿಜ್ಯೋತಿ [ಚಿದಂಶಿಕವಾದ ಪ್ರಾಣಲಿಂಗ] ಯಿಂದ ಪರಂಜ್ಯೋತಿ [ಮೂಲಚೈತನ್ಯವಾದ ಭಾವಲಿಂಗ] ಯನ್ನು ಸಂದರ್ಶಿಸಬೇಕು. ಆಗ ಮಾತ್ರ ತಾನೇ (ಪ್ರತ್ಯಗಾತ್ಮನು] ತಾನಾ (ಪರಮಾತ್ಮ | ಗುವನು: ಅಖಂಡ ಪರಿಪೂರ್ಣವಪ್ಪ ನಿಜಲಿಂಗದಲ್ಲಿ ಒಡವೆರೆದು ಒಂದಾಗುವನು.
ಇಲ್ಲಿ ಒಂದು ಮಾತನ್ನು ನೆನಪಿನಲ್ಲಿಡಬೇಕಾಗುತ್ತದೆ. ರವಿ-ರಶ್ಮಿ; ಚಂದ್ರಚಂದ್ರಿಕೆ; ದೀಪ-ದೀಪ್ತಿ ಇವುಗಳ ಸಂಬಂಧವು ಬಿಚ್ಚಿ ಬೇರಾಗದ ಬೆರಸಿ ಒಂದಾಗದ ಅವಿನಾಭಾವ ಸಂಬಂಧವು. ಅದರಂತೆ ಸತ್ ಸ್ವರೂಪದ ಭಾವಲಿಂಗ ಚಿತ್ ಸ್ವರೂಪದ ಪ್ರಾಣಲಿಂಗಗಳ ನಡುವೆ ಈ ಅವಿನಾಭಾವ ಸಂಬಂಧವಿದೆ. ತೋರಿಕೆಯಲ್ಲಿ ಭಿನ್ನವಾಗಿ ಕಾಣುವ ಈ ಸತ್ ಸ್ವರೂಪದ ಪರಮಾತ್ಮ ಮತ್ತು ಚಿತ್ ಸ್ವರೂಪದ ಪ್ರತ್ಯಗಾತ್ಮರನ್ನು, ಆನಂದರೂಪವಾದ ಇಷ್ಟಲಿಂಗವು ಒಂದುಗೂಡಿಸುತ್ತದೆ. ಪ್ರಾಣಲಿಂಗ (ಆತ್ಮ) ಮತ್ತು ಭಾವಲಿಂಗ (ಪರಮಾತ್ಮ) ಬೇರೆ ಬೇರೆ ಎಂಬ ಭಾಮಕ ಕಲ್ಪನೆಯನ್ನು ಕಳೆದು ಅವರಿಬ್ಬರೂ ತಾನೇ ತಾನಾಗುವಂತೆ ಮಾಡುತ್ತದೆ. ಆಹಾ! ನೋಡಿದಿರಾ ಇಷ್ಟಲಿಂಗದ ಆವಶ್ಯಕತೆಯನ್ನು !
ಸಮಾಜದಲ್ಲಿ ಇನ್ನೊಂದು ಬಗೆಯ ಜನರಿರುತ್ತಾರೆ. ಅವರಲ್ಲಿ ಆಸ್ತಿಕ ಭಾವನೆ-ಧಾರ್ಮಿಕ ಭಾವನೆ-ಲಿಂಗ ಕಟ್ಟಿಕೊಳ್ಳಬೇಕೆಂಬ ಆಸಕ್ತಿ ಇರುತ್ತದೆ. ಆದರೆ ಅವರಲ್ಲಿ ಕೆಲವು ತಪ್ಪು ಕಲ್ಪನೆಗಳಿರುತ್ತವೆ. "ಲಿಂಗವನ್ನು ಕಟ್ಟಿಕೊಂಡ ಮೇಲೆ ಮೂರು ಸಲವೋ, ಎರಡು ಸಲವೋ ಕನಿಷ್ಟ ಒಂದು ಸಲವಾದರೂ ಪೂಜೆ ಮಾಡಬೇಕಾಗುತ್ತದೆ. ನಾವು ಊರು-ಕೇರಿಗೆ ಹೋಗುವವರು. ಪ್ರವಾಸದಲ್ಲಿ ನಮಗೆ ಪೂಜೆಗೆ ಅನುಕೂಲವಾಗುವುದಿಲ್ಲ. ಪೂಜೆ ತಪ್ಪಿದರೆ ದೇವನು ನಮ್ಮ ಮೇಲೆ ಮುನಿದು, ನಾವು ಪಾಪಕ್ಕೆ ಗುರಿಯಾಗಬಹುದು. ಆದ್ದರಿಂದ ಲಿಂಗಕಟ್ಟಿ ಕೊಳ್ಳದೆ ಇರುವುದೇ ಕ್ಷೇಮಕರ" ಎಂದು ಮುಂತಾಗಿ ತಿಳಿದಿರುತ್ತಾರೆ. ಇದು ಬಹಳ ತಪ್ಪು ಕಲ್ಪನೆಯಾಗಿದೆ. ನಾಲ್ಕು ಜನರಿದ್ದರೆ ಅದರಲ್ಲಿ ಇಬ್ಬರು ಗಿರಣಿ ಕೆಲಸಕ್ಕೆ ದಿನಾಲು ಹತ್ತು ರೂಪಾಯಿ ಕೂಲಿಯಂತೆ ದುಡಿಯಲಿಕ್ಕೆ ಹೋಗುತ್ತಾರೆ ಎಂದುಕೊಳ್ಳೋಣ. ಉಳಿದಿಬ್ಬರು ಮನೆಯಲ್ಲಿ ನಿರುದ್ಯೋಗಿಗಳಾಗಿ ಕುಳಿತಿದ್ದಾರೆ. ಅವರು ಗಿರಣಿ ಕೆಲಸಕ್ಕೆ ಹೋಗುತ್ತಲಿಲ್ಲ. ಯಾಕೆಂದರೆ, "ಗಿರಣಿಯಲ್ಲಿ ನೌಕರಿ ಹಿಡಿದರೆ ಅಕಸ್ಮಾತ್ ನಮಗೆ ಅನು ಆಪತ್ತುಗಳು ಬಂದರೆ ದುಡಿಯಲಿಕ್ಕೆ ಹೋಗಲು ಸಾಧ್ಯವಾಗಲಿಕ್ಕಿಲ್ಲ; ತಪ್ಪಿಸಿದರೆ ಗಿರಣಿ ಮಾಲಿಕರು ನಮ್ಮ ಮೇಲೆ ಸಿಟ್ಟಾಗಿ ಶಿಕ್ಷೆಗೆ ಗುರಿ ಮಾಡಬಹುದು. ಅಷ್ಟು ದಿವಸಗಳ ಸಂಬಳ ಹಿಡಿಯಬಹುದು." ಎಂಬ ಹುಚ್ಚು ಕಲ್ಪನೆ ಅವರದಾಗಿದೆ. ಪಾಪ ! ಅವರಿಗೆ ಗಿರಣಿ ಮಾಲಿಕರು ಕಾಯಿಲೆಯಾದಾಗ, ಆಪತ್ತಿನಲ್ಲಿದ್ದರೆ ರಜೆ ಕೊಡುತ್ತಾರೆಂಬುದು ಗೊತ್ತಿಲ್ಲದೆ ತಿಂಗಳಿಗೆ ೩೦೦ ರೂಪಾಯಿಗಳ ಹಾನಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚೆಂದರೆ ತಪ್ಪಿಸಿದ ದಿನ ಹತ್ತು ರೂಪಾಯಿ ಕಡಿಮೆ ಕೂಲಿ ಸಿಗಬಹುದು. ಉಳಿದ ೨೯೦ ರೂ.ಗಳಾದರೂ ಸಿಗುತ್ತವೆಯಷ್ಟೆ ? ಹೀಗೆ ಅಜ್ಞಾನದಿಂದ ಅವರು ಕೂಲಿ ಕಳೆದುಕೊಂಡರೆ ಇನ್ನಿಬ್ಬರು ಪ್ರತಿ ತಿಂಗಳು, ೩೦೦ ರೂ.ಗಳನ್ನು ಗಳಿಸಿಯೇ ಗಳಿಸುತ್ತಾರೆ. ಅದರಂತೆ ಲಿಂಗ ಕಟ್ಟಿಕೊಂಡು ಪೂಜಿಸುವವರಿಗೆ ಲಾಭ ಎಷ್ಟಾದರೂ ಇದ್ದೇ ಇರುತ್ತದೆ. ಈ ಲಿಂಗ ಕಟ್ಟದೇ ಇರುವ ಅಲಿಂಗಿಗಳು ಆ ಹುಚ್ಚು ನಿರುದ್ಯೋಗಿಗಳಂತೆ ಹಾನಿಗೊಳಗಾಗುತ್ತ ಇದ್ದಾರೆ. ಅಕಸ್ಮಾತ್ತಾಗಿ ಏನಾದರೂ ತೊಂದರೆ ಬಂದಾಗ ಪೂಜೆ ಮಾಡದೆ ಹೋದರೆ ದೇವರು ಕ್ಷಮಿಸು (ರಜಾ ಕೊಡು) ತಾನೆ ಎಂಬುದನ್ನು ಮರೆಯಬಾರದು. ಅಲ್ಲದೆ ಪೂಜೆ ಮಾಡದಿದ್ದರೆ ಪಾಪವಂತೂ ಬರಲಾರದು; ಪೂಜೆ ಮಾಡಿದರೆ ಪುಣ್ಯವೂ ಬರಲಾರದು. ಪಾಪ-ಪುಣ್ಯಗಳು ನೈತಿಕ ಸಮಸ್ಯೆ (Ethical Problems) ಗಳು, ಎರಡನೆಯವರಿಗೆ ಕೇಡು ಮಾಡಿದರೆ ಪಾಪ ಬಂದೀತು; ಎರಡನೆಯವರಿಗೆ ಕಲ್ಯಾಣ ಮಾಡಿದರೆ ಪುಣ್ಯ ಬಂದೀತು, ಇಷ್ಟಲಿಂಗೋಪಾಸನೆಯು ಪುಣ್ಯ ಗಳಿಸಲು ಅಲ್ಲ, ದೇವನನ್ನು ಗಣಿಸಲು ಎಂಬುದನ್ನು ನೆನಪಿನಲ್ಲಿಡಬೇಕು. ಇಷ್ಟು ಮಾತ್ರ ನಿಜ, ಲಿಂಗಪೂಜೆ ಮಾಡುವುದರಿಂದ, ಪೂಜಕನಿಗೆ ಪುಣ್ಯ ಮಾಡುವಂಥ ಸದ್ಯಾವ-ಶಕ್ತಿ ಒಡಮೂಡುವುದು. ಪೂಜೆ ಮಾಡದವನಲ್ಲಿ ಪಾಪ ಮಾಡುವ ದುರ್ಭಾವ-ಶಕ್ತಿ ಒಳನುಗ್ಗಿತು ! ಆದರೆ ಪೂಜೆ ಮಾಡದವರೂ ಸಹ ಪುಣ್ಯ ಕಾರ್ಯ ಮಾಡಬಹುದು. ಅದು ಮಾನವೀಯತೆ, ನಾಸ್ತಿಕನೂ ಸಹ ನೀತಿವಂತನಾಗಿರಬಲ್ಲ ! ಪುಣ್ಯಕಾರ್ಯವನ್ನೂ ಮಾಡಬಲ್ಲ ! ಅನೀತಿವಂತರೂ ಸಹ ಧಾರ್ಮಿಕ-ಆಸ್ತಿಕ ಭಾವನೆಯುಳ್ಳವರಿರಬಹುದು. ವೇಶ್ಯ ಅನೀತಿ ವಂತಳಾಗಿದ್ದರೂ ಭಕ್ತಳಾಗಿರಬಹುದು, ಪೂಜಾಸಕ್ತಳೂ ಆಗಿರಬಹುದು. ನೀತಿ ವ್ಯಕ್ತಿ-ವ್ಯಕ್ತಿಗಳಲ್ಲಿರುವ ಮಧುರ ಸಂಬಂಧವನ್ನು ಪ್ರತಿಪಾದಿಸಿದರೆ, ಧರ್ಮ ವ್ಯಕ್ತಿ ಮತ್ತು ದೇವರ ಮಧುರ ಸಂಬಂಧವನ್ನು ಸೂಚಿಸುತ್ತದೆ. ಆದರೂ ಸಹ ನೀತಿಯ ತಳಹದಿಯ ಮೇಲಿರುವ ಧರ್ಮವೇ ಶ್ರೇಷ್ಟವಾದುದೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ನೀತಿವಂತಿಕೆಯಿಲ್ಲದ ಧರ್ಮವಂತಿಕೆ ಅರ್ಥರಹಿತ. ಆದ್ದರಿಂದ ಪೂಜೆ ಮಾಡಲಿಕ್ಕೆ ಸಾಧ್ಯವಿಲ್ಲದಿದ್ದರೂ ಸಹ ಅಂಗದ ಮೇಲೆ ಲಿಂಗವು ಯಾವಾಗಲೂ ಇರಬೇಕು. ದೇಹದ ಮೇಲೆ ದೇವನಿದ್ದರೆ, ದೇವನನ್ನು ಬಿಟ್ಟು ನಾನು ಕ್ಷಣ ಸಹ, ಅಗಲಿ ಇಲ್ಲವೆಂಬ ಆಸ್ತಿಕ್ಯ ಭಾವನೆಯಾದರೂ ಇರುವುದಿಲ್ಲವೆ ? ಅದೇನು ಸಾಮಾನ್ಯ ಮಾತೇ ? ಒಂದು ಕೋಣಿಯಲ್ಲಿ ಬಾಲಕನೋರ್ವನು ಓದುತ್ತ ಕುಳಿತುಕೊಂಡಿದ್ದಾನೆ ಎಂದುಕೊಳ್ಳೋಣ. ಅದರ ಪಕ್ಕದ ಕೋಣಿಯಲ್ಲಿ ಅವರ ತಂದೆ ಇರುತ್ತಾನೆ. "ನಮ್ಮ ತಂದೆ ಇಲ್ಲೇ ಇದ್ದಾನೆ. ನನ್ನನ್ನು ನೋಡುತ್ತಿದ್ದಾನೆ." ಎಂಬ ಭಯವು ಅವನನ್ನು ಓದುವಂತೆ ಪ್ರೇರೇಪಿಸುತ್ತದೆ; ಹಾಗೆ ಅಂಗದ ಮೇಲಿನ ಲಿಂಗವೂ ವ್ಯಕ್ತಿಯು ಒಳ್ಳೆಯವನಾಗಿರಲು ಸತ್ಕಾರ ಮಾಡಲು ಪ್ರೇರೇಪಿಸುತ್ತದೆ.
ಓರ್ವ ತರುಣಿಯು ಯಾರ ಜೊತೆಯೂ ಇಲ್ಲದೆ ಒಂಟಿಯಾಗಿ ಎರಡನೆ ಷೋ ಸಿನೆಮಾಕ್ಕೆ ಹೋಗಿರುತ್ತಾಳೆ. . ಬರುವಾಗ ತುಂಬಾ ಭಯಆತಂಕಕ್ಕೊಳಗಾಗಿರುತ್ತಾಳೆ. ಅದೇ ಮತ್ತೋರ್ವ ಸ್ತ್ರೀ ತನ್ನ ಪತಿಯಾಡನೆ ಹೋಗಿರುತ್ತಾಳೆ. ಅವನು ಕಡ್ಡಿ ಪೈಲ್ವಾನನೇ ಇದ್ದರೂ ಜೊತೆಗೆ ಪತಿ ಇದ್ದಾನೆ ಎಂಬ ಧೈರ್ಯವಿದೆ. ಅವನು ಮುಂದೆ ಮುಂದೆ ಬಂದರೆ ಆಕೆ ಧೈರ್ಯವಾಗಿ ಹಿಂದೆ ಹಿಂದೆ ಬರುತ್ತಾಳೆ. ಹಾಗೆ ಮೈಮೇಲೆ ಲಿಂಗವಿದ್ದಾಗ, 'ದೇವರು ನನ್ನ ಮುಂದಿದ್ದಾನೆ; ರಕ್ಷಕ' ಎಂಬ ಧೈರ್ಯವಿರುತ್ತದೆ. ಈ ವಿಚಾರವನ್ನು ಪುಷ್ಟಿಕರಿಸುವ ಮಗ್ಗೆಯ ಮಾಯಿದೇವರ ಒಂದು ಪದ್ಯವನ್ನು ನೋಡಿಬಿಡುವಾ :
ನೆನೆವುದರಿಂ ನಿರೀಕ್ಷಿಸುವುದತ್ಯಧಿಕಂ ನೆನಹಿಂ ನಿರೀಕ್ಷೆಯಿಂ ||
ದನು ದಿವಸಂ ಸಮರ್ಚಿಸುವುದತ್ಯಧಿಕಂ ನೆನಹಿಂ ನಿರೀಕ್ಷೆಯಿಂ ||
ದನು ದಿವಸಂ ಸಮರ್ಚಿಸುವುದರಿಂ ಶಿವಲಿಂಗಮನಂಗದಲ್ಲಿ ಸು |
ಮ್ಮನೆ ಧರಿಸಿರ್ಪುದತ್ಯಧಿಕಮತ್ಯಧಿಕಂ ನಿರುತಂ ಶಿವಾಧವಾ || -ಮಗ್ಗೆಯ ಮಾಯಿದೇವ
ಪರವಸ್ತುವಾದ ಶಿವಲಿಂಗದ ಸ್ಮರಣಿಗಿಂತಲೂ ಇಡಿ ದರ್ಶನವು ಅಧಿಕವಾದುದು, ಆ ಸ್ಮರಣ-ದರ್ಶನಗಳೆರಡಕ್ಕಿಂತಲೂ ಸದಾ ಪೂಜಿಸುವುದು ಶ್ರೇಷ್ಟವು. ಆ ಸ್ಮರಣ - ದರ್ಶನ - ಪೂಜಾದಿಗಳಿಗಿಂತಲೂ ಆ ಮಂಗಳ ಮಯವಾದ ಇಷ್ಟಲಿಂಗವನ್ನು ದೇಹದಲ್ಲಿ ನಿಸ್ಸಂಶಯವಾಗಿ ಧರಿಸುವದು ಅತ್ಯಂತ ಶ್ರೇಷ್ಟವು. ಇನ್ನೇನು ಬೇಕು ? ಇಷ್ಟು ಸುಲಭವಾಗಿದೆ, ಲಿಂಗವಂತ ಧರ್ಮವು !
ಅಧ್ಯಾತ್ಮ ದೃಷ್ಟಿಯಿಂದ, ಉಪಾಸನೆಯ ದೃಷ್ಟಿಯಿಂದ ಇಷ್ಟಲಿಂಗದ ಆವಶ್ಯಕತೆ ಎಷ್ಟಿದೆಯೆಂಬುದನ್ನು ನಾವು ನೋಡಿದಂತಾಯಿತು. ಇದಲ್ಲದೆ ಲಿಂಗ ಪೂಜೆಯಿಂದ ಲೌಕಿಕ ಲಾಭವೂ ಇದೆ ಎಂಬುದನ್ನೂ ವಿಚಾರಿಸುವಾ. ಲಿಂಗಪೂಜಕನು ಅಷ್ಟವಿಧಾರ್ಚನೆಗಳಿಂದ ತನ್ನ ಅಷ್ಟಾಂಗಗಳನ್ನೆಲ್ಲ ಪುಷ್ಟಿ ಮಾಡಿಕೊಳ್ಳುತ್ತಾನೆ. ಲಿಂಗಪೂಜೆಯ ನಂತರ ಲಿಂಗಕ್ಕೆ ಧರಿಸಿದ ಐದು ಬಿಲ್ವದಳವನ್ನಾದರೂ ಸೇವಿಸಬೇಕು. ಬಿಲ್ವದಳದಲ್ಲಿ ಅಪಾರವಾದ ಔಷಧೀಯ ಶಕ್ತಿಯಿದೆಯೆಂಬುದನ್ನು ಪಂಡಿತರು ಕಂಡುಹಿಡಿದಿದ್ದಾರೆ. ಅದರಿಂದ ತನುವು ನಿರೋಗಿಯಾಗುತ್ತದೆ. ಇಷ್ಟಲಿಂಗಕ್ಕೆ ತೋರಿಸಿದ ನೈವೇದ್ಯ ಸ್ವೀಕರಿಸುವದರಿಂದ ಕಾಯ ಪ್ರಸಾದಕಾಯವಾಗುತ್ತದೆ. ಅದರಿಂದ ಸರ್ವಾಂಗವೆಲ್ಲ ನಿರೋಗಿ ಆಗುತ್ತದೆ. ನಿತ್ಯನಿಯಮಿತ ವೇಳೆಗೆ ಲಿಂಗಾರ್ಚನೆಯನ್ನು ಮಾಡಿ, ತದನಂತರ ಲಿಂಗದ ಮೇಲೆ ಮೂರು ಸಲ ಶುದ್ಧ ಜಲವನ್ನೆರೆದು, ಗುರು ಲಿಂಗ ಜಂಗಮ ಪಾದೋದಕವೆಂದು ಸ್ವೀಕರಿಸಿದರೆ ಅದು ದಿವೌಷಧಿಯಾಗಿ ಪರಿಣಮಿಸಿ ದೈಹಿಕ-ಮಾನಸಿಕ ರೋಗಗಳೆಲ್ಲ ನಾಶವಾಗುತ್ತವೆ. ಜೀರ್ಣಶಕ್ತಿ ವೃದ್ಧಿಯಾಗಿ ಆಯುಷ್ಯವು ಅಭಿವೃದ್ಧಿಗೊಳ್ಳು ವುದು. ಆದ್ದರಿಂದ ಇಷ್ಟಲಿಂಗ ಪೂಜೆಯು ಒಂದು ದಿವೌಷಧಿಯಾಗಿದೆಈ ವಿಚಾರವನ್ನು ಪುಷ್ಟಿಕರಿಸುವ ವೈದ್ಯ ಸಂಗಣ್ಣನೆಂಬ ಶರಣನ ಕೆಳಗಿನ ವಚನವನ್ನು ನೋಡಬಹುದು :
ನಾನಾ ರೋಗಂಗಳು ಬಂದು ದೇಹವ ಹಿಡಿದಲ್ಲಿ
ಶಿವಾರ್ಚನೆಯ ಬೇರ ಕೊಳ್ಳಿ !
ಸಕಲ ಪುಷ್ಪಗಳಿಂದ ಪೂಜೆಯ ಮಾಡಿಕೊಳ್ಳಿ!
ಪಂಚಾಕ್ಷರಿಯ ಪ್ರಣವವ ತಪ್ಪದೆ ತ್ರಿಸಂಧಿಯಲ್ಲಿ ನೆನಹುಗೊಳ್ಳಿ !
ಇದರಿಂದ ರುಜೆದರ್ಪಂಗೆಡಗು ;
ಮರುಳ ಶಂಕರಪ್ರಿಯ ಸಿದ್ದರಾಮೇಶ್ವರಲಿಂಗ ಸಾಕ್ಷಿಯಾಗಿ.
ಇಷ್ಟಲಿಂಗಾರ್ಚನೆಯಿಂದ - ಪತ್ರಪುಷ್ಪಗಳಿಂದ ಬೇರುಗಳಿಂದ ತನು ರೋಗವೂ, ಪ್ರಣವ ಪಂಚಾಕ್ಷರಿ ಜಪದಿಂದ ಭವರೋಗವೂ ನಾಶವಾಗುವವೆಂಬ ವಿಷಯವನ್ನು ಈ ವಚನದಲ್ಲಿ ಕಾಣಬಹುದಾಗಿದೆ. ಇಂತು ಲೌಕಿಕ, ಪಾರಲೌಕಿಕವಾಗಿ ಇಷ್ಟಲಿಂಗವು ಸಾಧಕನಿಗೆ ಅವಶ್ಯವಾಗಿದೆ ಎಂಬುದನ್ನು ಮನಗಂಡರೆ ಸಾಕು ! ಕೆಲವು ಜನರು ಇನ್ನೊಂದು ವಾದ ಮಾಡುವುದುಂಟು. "ಸಾಧನೆಯ ಪ್ರಾರಂಭಿಕ ಅವಸ್ಥೆಯಲ್ಲಿ ಇಷ್ಟಲಿಂಗವು ಬೇಕಾಗಬಹುದು. ನಂತರ ವ್ಯಕ್ತಿಯು ಜ್ಞಾನಿಯಾದಾಗ ಇಷ್ಟಲಿಂಗವು ಬೇಕಾಗದು; ಅವನು ಅದನ್ನು ತೊರೆಯಬಹುದು. ಇದರ ಸಮರ್ಥನೆಗೆ ಅವರು ಒಂದು ಉದಾಹರಣಿ ಸಹ ಕೊಡುವರು. ಚಿಕ್ಕ ಮಕ್ಕಳು ಕಟ್ಟಿಗೆಯ ಕುದುರೆಯ ಮೇಲೆ ಕುಳಿತು ತೂಗಿಕೊಳ್ಳುವರು. ಅದೇ ನಿಜವಾದ ಕುದುರೆ ಎಂದು ಸಂತೋಷಪಟ್ಟು ಆಟದಲ್ಲಿ ತಲ್ಲೀನರಾಗುವರು. ಮುಂದೆ ದೊಡ್ಡವರಾದಾಗ ಜ್ಞಾನವು ಬಂದಂತೆಲ್ಲ ನಿಜವಾದ ಕುದುರೆಯ ಬಗ್ಗೆ ತಿಳಿಯುವರು; ಅದನ್ನು ಹತ್ತಲೂ ಕಲಿಯುವರು. ನಿಜವಾದ ಕುದುರೆಯನ್ನು ಹತ್ತಿ ಸವಾರಿ ಮಾಡಲು ಕಲಿತಾಗ ಕಟ್ಟಿಗೆಯ ಕುದುರೆಯನ್ನು ಹತ್ತರು."
ಕೆಲವು ವಾಗದ್ವೈತಿಗಳು, ವಾಕ್‌ಬ್ರಹ್ಮಿಗಳು ಅಧ್ಯಾತ್ಮವೆಂದರೆ ಕೇವಲ ಶಾಸ್ತ್ರಗ್ರಂಥಗಳನ್ನು ಓದುವುದು, ಕೇಳುವುದು, ತರ್ಕಿಸುವುದು, ಎಂದೇ ತಿಳಿದಿದ್ದಾರೆ. ಅವರಿಗೆ ಭಾವುಕತೆಯ ಸಂಪತ್ತಿರುವುದಿಲ್ಲ, ದಿವ್ಯಾನುಭೂತಿ (Mystic Experience) ಯ ಅರಿವೂ ಇರುವುದಿಲ್ಲ; ಯೋಗಮಾರ್ಗದಲ್ಲಿ ಸಾಗುವವನಿಗೆ ಎಂತೆಂತಹ ಅನುಭವಗಳ ನಿಧಿ ಕರಗತವಾಗುತ್ತದೆ ಎಂಬ ಬಗ್ಗೆ ಕೊಂಚವೂ ತಿಳಿದಿರುವುದಿಲ್ಲ. ಕರ್ಮಕಾಂಡಿಗಳದು ಒಂದು ಬಗೆಯ ಒಣ ಆಚರಣಿ (Dry Practices) ಯಾಗಿದ್ದರೆ ಈ ಜ್ಞಾನಿಕಾಂಡಿಗಳದು ಒಂದು ಬಗೆಯ ಒಣ ಜ್ಞಾನ (Dry Philosophy) ವಾಗಿರುತ್ತದೆ. ಗಿಳಿಯಾದಿನಂತೆ ಗುರು "ನೀನು ಬ್ರಹ್ಮನಿದ್ದೀಯೆ" ಎನ್ನುತ್ತಾನೆ, ಈ ಶಿಷ್ಯನೂ ಬಾಯಿಪಾಠ ಮಾಡಿ "ನಾನು ಬ್ರಹ್ಮನಿದ್ದೇನೆ" ಎನ್ನುತ್ತಾನೆ.
ಅಧ್ಯಾತ್ಮಿಕ ಜೀವನದ ಸಾರಸರಸ್ವವೆಂದರೆ ಕೆಲವು ದಿವ್ಯಾನುಭವಗಳು, ಅಂಥ ಅನುಭವಗಳನ್ನು ಪಡೆದುಕೊಳ್ಳಲಿಕ್ಕೆ ಇಷ್ಟಲಿಂಗವು ಪರಮಸಾಧನ. ಆದ್ದರಿಂದ ಕೆಲವರು ಕೊಡುವ ನಿಜವಾದ ಕುದುರೆ-ಕಟ್ಟಿಗೆಯ ಕುದುರೆಯ ಉದಾಹರಣೆ ಇಲ್ಲಿ ಸರಿಯಾಗದು. ತಾಯಿಯು ತನ್ನ ಮಗುವು ದೂರದಲ್ಲಿದ್ದಾಗ ಅದರ ಭಾವಚಿತ್ರಕ್ಕೆ ಮುದ್ದಿಕ್ಕಿ ನಲಿಯುವಳು; ನಿಜವಾದ ಮಗುವೇ ಇದ್ದಾಗ ಮಗುವಿಗೇ - ಮುದ್ದಿ ಕ್ಕುವಳು, ಕಟ್ಟಿಗೆಯ ಕುದುರೆಯಾಗಲೀ, ಮಗುವಿನ ಭಾವಚಿತ್ರವಾಗಲಿ ಸಾವಯವ ವಸ್ತುವಿನ ಸಾಕಾರಗಳು. ಆ ಸಾವಯವ ವಸ್ತು ಸಿಕ್ಕಾಗ, ಅದರ ಜಡವಾದ ಸಾಕಾರ ಬೇಕಾಗದು. ದೇವರು, ದಿವ್ಯಾನುಭವ ಹಾಗಲ್ಲ, ಅವು ಸಾವಯವಗಳಲ್ಲ; ನಿರವಯವವಾದ ತತ್ವಗಳು. ಅಂಥ ನಿರವಯವದ ಸಾಕಾರವೇ ಇಷ್ಟಲಿಂಗ. ದಿವ್ಯಾನುಭವ ಬೇಕೆಂದಾಗಲೆಲ್ಲ ಇಷ್ಟಲಿಂಗ ಬೇಕೇ ಬೇಕು. ಒಂದು ರೇಡಿಯಾ ಇದೆ. ಇಂದು ವಾರ್ತೆ, ಸಂಗೀತ ಕೇಳಿದೆವು. ಅದು ಇನ್ನೇಕೆ ಬೇಕು ? ಎಂದು ಎಸೆದು ಬಿಡುತ್ತೇವೆಯೆ ? ಇಲ್ಲ: ಪುನಃ ಕೇಳ ಬೇಕೆನಿಸಿದಾಗಲೆಲ್ಲ ಕೇಳಲು ಬೇಕೇ ಬೇಕು. ದೂರದರ್ಶನ ಪೆಟ್ಟಿಗೆ ಇದೆ, ಅದರಲ್ಲಿ ಗಣರಾಜ್ಯೋತ್ಸವದ ಕಾರ್ಯಕ್ರಮ ನೋಡಿದೆವು, ಅದು ಇನ್ನೇಕೆ ಬೇಕು ಎಂದು ದೂರದರ್ಶನ ಪೆಟ್ಟಿಗೆಯನ್ನು ಎಸೆದುಬಿಡುತ್ತೇವೆಯೆ ? ಇಲ್ಲ; ಪುನಃ ಬೇರೆ ಬೇರೆ ಕಾರ್ಯಕ್ರಮ ವಿಕ್ಷಿಸಲು ದೂರದರ್ಶನ ಪೆಟ್ಟಿಗೆ ಬೇಕೇ ಬೇಕು. ಇಷ್ಟಲಿಂಗವಾದರೂ ಹಾಗೆಯೇ ಸುಲಭವಾಗಿ ದೃಷ್ಟಿಯನ್ನು ನಿಲ್ಲಿಸುವ, ಮನಸ್ಸನ್ನು ಏಕಾಗ್ರಗೊಳಿಸುವ, ಅನೇಕ ಅನುಭವಗಳನ್ನು ನೀಡುವ ಅಧ್ಯಾತ್ಮಿಕ ದೂರದರ್ಶನ ಪೆಟ್ಟಿಗೆ ಇದ್ದಂತೆ ಅದು. ತನಗೆ ಏಕಾಗ್ರತೆ, ತನ್ಮಯತೆ, ಆನಂದಾನುಭೂತಿ, ಭಾವಪುಳಕಿತತೆ ಬೇಕಾದ ಸಮಯದಲ್ಲಿ ಯೋಗಸಾಧಕನು ಅದನ್ನು ವಾಮಕರದಲ್ಲಿಟ್ಟು ಕೊಂಡು ಆನಂದ ಹೊಂದಬಹುದು.
ಇಷ್ಟಲಿಂಗವನ್ನು ಹತ್ತೂರ್ವಕವಾಗಿ ಪ್ರೀತಿಸುತ್ತ ಹೆಚ್ಚು ಹೆಚ್ಚು ಸಾಧನೆಯಲ್ಲಿ ತೊಡಗಿದವನಿಗೆ ಅದು ಅವನ ಪ್ರಾಣವೇ ಆಗುತ್ತದೆ; ಜೀವಕೇಂದ್ರ (Life - centre) ಆಗುತ್ತದೆ. ಉದಾಹರಣಿಗೆ, ಕೆಲವರು ಗಾಂಧಿ ಪ್ರಾಣಿಯಾಗಿದ್ದರು. ಅವರ ಸರ್ವಸ್ವವೂ ಗಾಂಧೀಜಿ; ಗಾಂಧೀಜಿಯನ್ನು ಅಕ್ಷರಶಃ ತಮ್ಮಲ್ಲಿ ತುಂಬಿಕೊಂಡಿದ್ದರು. ಗಾಂಧೀಜಿ ಸತ್ತರೆಂಬ ಸುದ್ದಿ ಕೇಳಿ, ಗಾಂಧಿ ಪ್ರಾಣಿಗಳ ಪ್ರಾಣವೂ ಹೋಯಿತು. ಕೆಲವರು ಪತಿ ಪ್ರಾಣಿಗಳಾಗಿರುತ್ತಾರೆ. ಗಂಡ-ಹೆಂಡತಿ ಪರಸ್ಪರ ಎಷ್ಟು ಪ್ರೀತಿಸುತ್ತಿರುತ್ತಾರೆಂದರೆ, ಗಂಡಭೇರುಂಡದಂತೆ ದೇಹವೆರಡಾದರೂ ಪ್ರಾಣವೊಂದೆ ಎಂಬಂತಿರುತ್ತಾರೆ. ಗಂಡನ ಸಾವಿನ ಸುದ್ದಿ ಕೇಳಿದ ತಕ್ಷಣವೇ ಹೆಂಡತಿಯೂ ಸಾಯುತ್ತಾಳೆ. ಹಾಗೆಯೇ ಕೆಲವರು ಲಿಂಗಪ್ರಾಣಿಗಳಾಗಿ ಇರುತ್ತಾರೆ. ಉದಾಹರಣೆಗೆ ಅನಿಮಿಷಯ್ಯ. ಇಷ್ಟಲಿಂಗದಲ್ಲೇ ದೃಷ್ಟಿ -ಮನಪಾಣ ನೆಟ್ಟು ಕುಳಿತಿದ್ದಾಗ ಪ್ರಭುದೇವರು ಆ ಇಷ್ಟಲಿಂಗವನ್ನು ತೆಗೆದುಕೊಳ್ಳುತ್ತಲೇ ಅನಿಮಿಷಯ್ಯನ ಪ್ರಾಣವಿಸರ್ಜನೆಯಾಯಿತು. ಹೀಗೆ ನಿಜವಾದ ಜ್ಞಾನಿಯು ಪ್ರಾಣಲಿಂಗಿಯು, ಲಿಂಗ ಪ್ರಾಣಿಯೂ ಆಗಿರುವ ಕಾರಣ ಅವನ ಪ್ರಾಣ ಸ್ವರೂಪವಾದ ಇಷ್ಟಲಿಂಗವನ್ನು ತೆಗೆಯುವುದಿಲ್ಲ, ತೆಗೆಯಲಾರ. ತೆಗೆಯಲೂ ಬರದು, ತೆಗೆದರೆ ಬದುಕನು. ತೆಗೆದು ಸಹ ಬದುಕಿದ್ದರೆ ಅವನಿಗೆ ಲಿಂಗಾಂಗ ಸಾಮರಸ್ಯದ ಅನುಭೂತಿ ಆಗಿಲ್ಲವೆಂದೇ ಅರ್ಥ.
ಇಷ್ಟಲಿಂಗದ ಆವಶ್ಯಕತೆಯನ್ನು ತಾತ್ವಿಕ ದೃಷ್ಟಿಯಿಂದ ನೋಡಿ, ನಿರಾಕಾರವನ್ನು ಅರಿಯಲು ಸಾಕಾರವು, ಅರುಹನ್ನು ಪಡೆಯಲು ಕುರುಹು ಬೇಕು ಎಂಬುದನ್ನು ಅರಿತೆವು.
ಅಧ್ಯಾತ್ಮಿಕ ಸಾಧನೆಯ ದೃಷ್ಟಿಯಿಂದ ನೋಡಿ ನಮ್ಮೊಳಗೊಂದು ಆತ್ಮನಿಧಿ ಇದೆ ಎಂದರಿತರೆ ಸಾಲದು. ಆ ನಿಧಿಯನ್ನು ಕರಗತ ಮಾಡಿಕೊಳ್ಳಲು ಸಾಧನಗಳು ಬೇಕು.
ಅಂಥ ಸಾಧನವೇ ಇಷ್ಟಲಿಂಗ ಎಂದೂ ಅರಿತೆವು : ಅಲ್ಲದೆ ಭಕ್ತನು ಮಾಡುವ ಉಪಾಸನೆಗೆ ಸಾಕಾರವೊಂದು ಬೇಕು; ನಿರಾಕಾರವನ್ನು ಪೂಜಿಸಲು ಸಾಧ್ಯವಾಗದು.
ಅಂಥ ಸಾಕಾರವಾಗಿ ಇಷ್ಟಲಿಂಗವು ನೆರವಾಗುತ್ತದೆ ಎಂಬುದನ್ನೂ ಮನವರಿಗೆ ಮಾಡಿಕೊಂಡೆವು.
ದೀಕ್ಷೆಯ ಮುಖಾಂತರ ಇಷ್ಟಲಿಂಗವನ್ನು ಪಡೆದು (ಅಥವಾ ಪ್ರಾರಂಭದಲ್ಲಿ ಹಾಗೆಯಾದರೂ ಧಾರಣ ಮಾಡಿಕೊಂಡು ಸ್ನಾನ-ಪೂಜೆಗಳಿಲ್ಲದೆ ಏನನ್ನೂ ತಿನ್ನುವುದಿಲ್ಲ
ಎಂದು ಪೂಜೆಯ ನೇಮವನ್ನು ಹಾಕಿಕೊಂಡರೆ ವ್ಯಕ್ತಿಗೆ ಸಂಕಲ್ಪಶಕ್ತಿ, ಆತ್ಮಬಲ, ಸಂಯಮ ಎಲ್ಲ ಬೆಳೆಯುವುವು.
ಕಂಡಕಂಡಲ್ಲಿ ಹೋಗಿ, ಕಂಡದ್ದನ್ನೆಲ್ಲಾ ತಿಂದು, ನಾಲಿಗೆಯ ಚಪಲತೆಯಿಂದ ಆರೋಗ್ಯ ಕೆಡಿಸಿಕೊಳ್ಳುವುದೂ ತಪ್ಪುತ್ತದೆ.
ಅಂಗದ ಮೇಲೆ ಲಿಂಗಧಾರಣಿ ಇಲ್ಲದವರನ್ನು ಆದಿ ಶರಣರು, ಅಂದರೆ ಬಸವಣ್ಣನವರು ಮತ್ತು ಅವರ ಸಮಕಾಲೀನರು ಅನುಭವ ಮಂಟಪದಲ್ಲಿ ಇಂಬಿಟ್ಟು ಕೊಳ್ಳಲಿಲ್ಲ.
ಇದು ಮತಾಂಧತೆಯಲ್ಲವೆ ? ಎಂದು ಕೆಲವರು ಕೇಳಬಹುದು. ಮತಾಂಧತೆಯಲ್ಲ. ವೈಶಾಲ್ಯಭಾವವದು. ಜಾತಿವರ್ಣ ವರ್ಗರಹಿತವಾದ ಸಮಾಜವನ್ನು ಕಟ್ಟಬೇಕೆನ್ನುವ ಮನೀಷೆಯಿಂದ ಬಸವಣ್ಣನವರು ವಿಶ್ವದಾಕಾರದಲ್ಲಿ ವಿಶ್ವಾತ್ಮನನ್ನು ಚುಳುಕಾಗಿಸಿ, ಅದನ್ನು ಸಮಾನತೆಯ ಕುರುಹನ್ನಾಗಿ ಘೋಷಿಸಿ "ಇದನ್ನು ಧರಿಸಿಕೊಂಡು ಬಂದವರೆಲ್ಲ ಕೆಲವು ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿರಬೇಕು' ಎಂದರು. ಹೀಗಾಗಿ ಇಷ್ಟಲಿಂಗಧಾರಣಿ ಸಮಾನತೆಯಿಂದ ಕೂಡಿದ ಜಾತಿವರ್ಣ ವರ್ಗರಹಿತ ಸಮಾಜ ಕಟ್ಟುತ್ತೇನೆಂಬ ವಿಶ್ವಾಸವನ್ನು ದೃಢೀಕರಿಸುವ ಸಾಧನೆಯಾಗಿತ್ತು. ಅದನ್ನು ಒಪ್ಪದವನು ಜಾತಿವಾದಿ, ವರ್ಣವಾದಿ, ಬಹುದೇವತಾ ಉಪಾಸಕ, ವರ್ಗವಾದಿ ಎಂದು ನೂತನ ಸಮಾಜದಲ್ಲಿ ಸೇರ್ಪಡೆ ಮಾಡಿಕೊಳ್ಳುತ್ತಿರಲಿಲ್ಲ. ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಮಂದಿರದ ಹೆಬ್ಬಾಗಿಲೇ ಇಷ್ಟಲಿಂಗಧಾರಣಿ. ಅದರ ಮೂಲಕವೇ ಒಳಬರಬೇಕು. ಅದಿದ್ದವರೊಡನೆಯೇ ವ್ಯವಹಾರ, ಇಂಥದೊಂದು ಉದಾತ್ತ ಲಾಂಛನ, Emblem ಇವತ್ತು ಜಾತಿಸೂಚಕವಾಗಿ ಮಡುಗಟ್ಟಿ ನಿಂತಿರುವುದು ಒಂದು ದುರಂತವೇ ಸರಿ. ತಿದ್ದಿಕೊಳ್ಳಲು, ಅಳವಡಿಸಿಕೊಳ್ಳಲು ಇನ್ನೂ ಕಾಲ ಮಿಂಚಿಲ್ಲ.
ಪೂರ್ವಾಗ್ರಹ ಪೀಡಿತವಲ್ಲದ ನಿರ್ಮಲ ಹೃದಯದ ಯಾವುದೇ ಪಂಗಡದವರಾದರೂ ಲಿಂಗತತ್ವವನ್ನರಿತರೆ ಇಷ್ಟಲಿಂಗವ ಕಟ್ಟಿಕೊಂಡು ಶಿವಯೋಗಿಯಾಗಲು ಇಚ್ಛಿಸುವರು.
ಅಂಥ ಜನಗಳು ಇಂದು ಎಷ್ಟು ಜನ ಸಿಕ್ಕಾರು ? ಸಾಲದ್ದಕ್ಕೆ ಇಷ್ಟಲಿಂಗವನ್ನು ಕಟ್ಟಿಕೊಳ್ಳುವುದು ಒಂದು ಜಾತಿಯ ಚಿಹ್ನವೆಂದೂ ತಿಳಿಯುವ ಲಿಂಗಾಯತೇತರ ಕಲಿತ ಭೂಪರೂ ಉಂಟು.
ಕೆಲವು ಲಿಂಗವಂತರೂ ಲಿಂಗವನ್ನು ಕಟ್ಟಿಕೊಳ್ಳುವುದು ಜಾತಿಯ ಚಿಹ್ನವೆಂದು ತಿಳಿದಂತೆ ತೋರುತ್ತದೆ. ಇದಂತೂ ಅವಿವೇಕ ರಮಣೀಯ.
ಯಾವ ಶಾಸ್ತ್ರದಲ್ಲಿ ಲಿಂಗವು ಜಾತಿಯ ಕುರುಹೆಂದು ಹೇಳಿದೆಯಾ ನಮಗಂತೂ ತಿಳಿಯದಾಗಿದೆ. ಇಷ್ಟಲಿಂಗವು ಜಾತಿಯ ಕುರುಹಾಗದೆ,
"ಪ್ರಪಂಚದಲ್ಲಿ ಜಾತಿ, ವಿಜಾತಿಗಳಿಲ್ಲವೆಂದು ಸಾರಿ ಹೇಳಿ, ಮಾನವರೆಲ್ಲರೂ ದೇವನ ಮಕ್ಕಳು, ಪರಸ್ಪರ ಸಹೋದರರು, ಹುಟ್ಟು ಉದ್ಯೋಗ ಮುಂತಾದ ಯಾವುದೇ ಕಾರಣಕ್ಕಾಗಿ ಮಾನವರನ್ನು
ಧರ್ಮಸಂಸ್ಕಾರದಿಂದ ವಂಚಿಸಬಾರದು" ಎಂಬ ತತ್ವವನ್ನು ಸಾರಿ ವಿಶ್ವ ಕುಟುಂಬವನ್ನೆಲ್ಲ ಶಿವಾನುಭವ ಸೂತ್ರದಲ್ಲಿ ಪೋಣಿಸುವ ಉದಾತ್ತ ಮತ್ತು ಉದಾರ ತತ್ವದ ಕುರುಹು ಇಷ್ಟಲಿಂಗ,
ಅದನ್ನು ಇಂಥವರು ಕಟ್ಟಿಕೊಳ್ಳಬೇಕು; ಇಂಥವರು ಕಟ್ಟಿಕೊಳ್ಳಬಾರದೆಂಬ ನಿಯಮವಂತೂ ಇಲ್ಲವೇ ಇಲ್ಲ.
ಗಡಿಯಾರವನ್ನು ಕಟ್ಟಿಕೊಳ್ಳಲು ಹೇಗೆ ಜಾತಿ ಅಡ್ಡ ಬರದೋ, ಸಮಯವನ್ನು ತಿಳಿದುಕೊಳ್ಳಬೇಕೆಂಬ ಆಸೆಯಿಂದ ಯಾರೇ ಹಣವುಳ್ಳವರು ಕಟ್ಟಿಕೊಳ್ಳಲುಬಹುದೋ ಹಾಗೆ
ಇಷ್ಟಲಿಂಗವನ್ನು ಕಟ್ಟಿಕೊಳ್ಳಲು ಜಾತಿ ಅಡ್ಡಬರದು. ಭಕ್ತಿಯೆಂಬ ಹಣವಿದ್ದು ದೇವರನ್ನು ಕರಗತ ಮಾಡಿಕೊಂಬ ಆಸೆ ಇದ್ದರೆ ಸಾಕು.
ಅದೊಂದು ಮುಕ್ತಿಯ ಸಾಧನ; ಯಾವ ಜಾತಿಯ ಮುಮುಕ್ಷು ವೂ ನಿಸ್ಸಂಕೋಚವಾಗಿ ಕಟ್ಟಿಕೊಳ್ಳಬಹುದು.
ಭೌತಿಕ ಮೌಲ್ಯಗಳ ತಳಹದಿಯಮೇಲೆ ಜಾತ್ಯತೀತ, ವರ್ಗರಹಿತ ಸಮಾಜ ಕಟ್ಟಬೇಕೆನ್ನುವವರು ಕುಡುಗೋಲು ಸುತ್ತಿಗೆ ಲಾಂಛನವನ್ನು ನಂಬುವರಷ್ಟೆ ?
ಆಧ್ಯಾತ್ಮದ ತಳಹದಿಯ ಮೇಲೆ ಜಾತಿ ವರ್ಗ ವರ್ಣರಹಿತ ಸಮಾಜದ ಕನಸು ನನಸಾಗಬೇಕಾದರೆ ಲಿಂಗವನ್ನು ಧರಿಸಬೇಕಾದೀತು ! ಈ ಮಾತು ಕೆಲವರಿಗೆ ವಿಚಿತ್ರವೆನಿಸಬಹುದು.
ಆದರೆ ಅದು ತ್ರಿಕಾಲ ಸತ್ಯ. ವಿಶ್ವಗುರು ಬಸವಣ್ಣನವರು ಈ ತತ್ವದ ಆಧಾರದ ಮೇಲೆ ಅಂಥ ಸುಂದರವಾದ ಕಲ್ಯಾಣರಾಜ್ಯ (Welfare State) ವನ್ನು ಕಟ್ಟಿ ತೋರಿಸಿದುದೇ ಸಾಕ್ಷಿ.
ಸ್ವಾರ್ಥಿಗಳು ಸಮಾಜದಿಂದ ಸರಿದು, ಶರಣರು ಸೇರುವೆಗೊಂಡರೆ ಅಂಥ ಒಂದು ಕನಸಿನ ಕಲ್ಪನೆಯ ಕಲ್ಯಾಣರಾಜ್ಯ ಇಂದೂ ನನಸಾದೀತು !
ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಇಷ್ಟಲಿಂಗದ ಆವಶ್ಯಕತೆ | ಇಷ್ಟಲಿಂಗದ ಸಾಕಾರ ರೂಪು |