Previous ದೇವರ ಕಲ್ಪನೆ ಆತ್ಮನ ಅಸ್ತಿತ್ವ Next

ದೇವರ ಅಸ್ತಿತ್ವ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು

ದೇವರ ಅಸ್ತಿತ್ವ

ಸಾಮಾನ್ಯವಾಗಿ ಅಪ್ರಮಾಣ ಅಗೋಚರನಾದ, ಮಾತು ಮನಂಗಳಿಂದ ಅತೀತನಾದ ದೇವರ ಅಸ್ತಿತ್ವವನ್ನು ಸಿದ್ಧ ಮಾಡಿ ತೋರಿಸುವದು ಸುಲಭಸಾಧ್ಯವಲ್ಲ. ಆದರೂ ಸಹ ದೇವನ ಅಸ್ತಿತ್ವದ ವಿಷಯವಾಗಿ ಪೌರ್ವಾತ್ಯ-ಪಾಶ್ಚಿಮಾತ್ಯರಲ್ಲಿ ಹಲವಾರು ಸಿದ್ಧಾಂತಗಳು ಬೆಳಕಿಗೆ ಬಂದಿವೆ. ಅವುಗಳಲ್ಲಿ ಹಲವನ್ನು ನಾವು ಈಗ ವಿಚಾರಿಸುವಾ.

ಪರಿಪೂರ್ಣತಾ ವಾದ (Ontological Argument)

ಇದನ್ನು ಮೊಟ್ಟಮೊದಲು ಪ್ರತಿಪಾದಿಸಿದವನು ಸೇಂಟ್ ಆನ್ಸೆಮ್ ಎಂಬಾತನು. ಡೇಕಾರ್ಟ, ಸ್ಪಿನೋಜಾ, ಲೈಬ್ನಿಜ್ ಮುಂತಾದವರು ಇದನ್ನು ದೇವರ ಅಸ್ತಿತ್ವಕ್ಕೆ ಆಧಾರವಾಗಿ ಇಟ್ಟುಕೊಂಡಿದ್ದಾರೆ. ಹೆಗೆಲ್ಲನ ತತ್ವಶಾಸ್ತ್ರದಲ್ಲಿಯೂ ಈ ವಾದ ಬೆಳಕಿಗೆ ಬಂದಿತು. ಈಗ ಇದು ಮುಖ್ಯವಾಗಿ ಚಿತ್ ಪ್ರಧಾನವಾದ (Idealism)ದ ಬೆನ್ನು ಮೂಳೆಯಾಗಿ ನಿಂತಿದೆ.

ಈ ವಾದದ ವಿಚಾರಸರಣಿ ಮುಖ್ಯವಾಗಿ ಇಂತಿದೆ ; ದೇವರು ಎಂಬ ಭಾವನೆಯಲ್ಲಿಯೇ ಅವನ ಅಸ್ತಿತ್ವವೂ ಅಡಗಿದೆ. ದೇವರು ಪರಿಪೂರ್ಣ, ಅಸ್ತಿತ್ವವಿಲ್ಲದೆ ಇರುವ ಪರಿಪೂರ್ಣತೆಯು ಪರಿಪೂರ್ಣತೆಯಲ್ಲ. ಯಾವುದಕ್ಕಿಂತಲೂ ಉತ್ತಮವಾದುದಿಲ್ಲವೋ ಅದು ಇದ್ದೇ, ಇರಬೇಕು. ಇದರ ಇರವನ್ನು ಒಳಗೊಳ್ಳದಂತೆ ಅದರ ಸ್ವರೂಪವನ್ನು ಆಲೋಚಿಸಲು ಸಾಧ್ಯವಿಲ್ಲ.

ಆದಿಕಾರಣ ವಾದ (Cosmological Argument)

ಈ ವಾದವನ್ನು ಮೊದಲು ಪ್ರಾರಂಭಿಸಿದವನು ಪ್ಲೇಟೊ; ಅದನ್ನು ಪೋಷಿಸಿ ಬೆಳೆಸಿದವನು ಅರಿಸ್ಟಾಟಲ್, ಮಧ್ಯಯುಗದಲ್ಲಿ ಇದನ್ನು ಎತ್ತಿಹಿಡಿದವನು ಥಾಮಸ್ ಆಕ್ವೇನಸ್. ಈ ವಾದವನ್ನು ಆಧುನಿಕ ತತ್ತ್ವವೇತ್ತರಾದ ಡೇಕಾರ್ಡ, ಸ್ವಿನೋಜ, ಲೈಬ್ನಿಜ್ ಮುಂತಾದವರು ಮತ್ತೆ ಎತ್ತಿ ಹಿಡಿದರು, ಈ ವಾದದ ಮುಖ್ಯ ತಿರುಳು ಹೀಗಿದೆ : ಈ ವಿಶ್ವವನ್ನು ಕಾರ್ಯ-ಕಾರಣ ಭಾವದಿಂದ ನೋಡಿದರೆ ಇದು ಒಂದು ಅವಿಚ್ಛಿನ್ನವಾದ ಕಾರ್ಯ-ಕಾರಣ ಪರಂಪರೆಯಾಗಿ ಗೋಚರಿಸುವುದು. ಇದಕ್ಕೆ ಇನ್ನೊಂದು ಕಾರಣ, ಇನ್ನೊಂದಕ್ಕೆ ಮತ್ತೊಂದು ಕಾರಣ, ಮತ್ತೊಂದಕ್ಕೆ ಮಗದೊಂದು ಕಾರಣ ಹೀಗೆ ಒಂದರ ಹಿಂದೆ ಒಂದು ಇರುತ್ತವೆ. ಆದರೆ ಈ ಸರಪಳಿಯು ಎಲ್ಲಾದರೂ ಒಂದು ಕಡೆ ಪರ‍್ಯವಸಾನ ಹೊಂದಬೇಕು. ಇಲ್ಲದಿದ್ದರೆ ಅನವಸ್ಥೆಯ ದೋಷ ಬರುವುದು, ಈ ಕಾರಣ ಪರಂಪರೆ ಯಾವುದರಲ್ಲಿ ಪರ‍್ಯವಸಾನ ಹೊಂದುವುದೋ ಆ ವಸ್ತು ಇತರ ವಸ್ತುಗಳಿಗೆಲ್ಲಾ ಕಾರಣವಾಗಬೇಕು. ಆದರೆ ಅದಕ್ಕೆ ಮಾತ್ರ ಬೇರೆ ಯಾವುದೂ ಕಾರಣವಾಗಿರಬಾರದು. ಏಕೆಂದರೆ, ಅದಕ್ಕೆ ಇನ್ನೊಂದು ಕಾರಣವಾದರೆ ಪರಂಪರೆ ಕೊನೆಯಾಗುವುದೇ ಇಲ್ಲ. ಆದುದರಿಂದ ಎಲ್ಲವನ್ನೂ ಸೃಷ್ಟಿಸಬಲ್ಲ, ಆದರೆ ತಾನು ಮಾತ್ರ ಸೃಷ್ಟಿಯಾಗದ ವಸ್ತು ಒಂದು ಇರಬೇಕು, ಆ ವಸ್ತುವೇ ದೇವರು.

ಸದುದ್ದೇಶ ವಾದ (Teleological Argument)

ಈ ವಾದವು ಸಾಮಾನ್ಯ ಜನರಿಗೆ ಹೆಚ್ಚು ಹಿಡಿಸಿದೆ. ಇದಕ್ಕೆ ನಿದರ್ಶನವಾದ ಅನುಭವಗಳು ಸಾಕಷ್ಟಿವೆ. ಈ ವಿಶ್ವದಲ್ಲಿ ಯಾವುದನ್ನು ನೋಡಿದರೂ ಅದು ಒಂದು ಉದ್ದೇಶದ ಸಾಧನವಾಗಿದೆ ಆಕಳು ಕರುವನ್ನು ಹೆತ್ತಾಗ ಅದರ ಕೆಚ್ಚಲಲ್ಲಿ ಹಾಲು ಬರುತ್ತದೆ. ತನ್ನ ಹೊಟ್ಟೆಯನ್ನು ತಾನು ತುಂಬಿಸಿಕೊಳ್ಳಲು ಅಸಮರ್ಥವಿರುವ ಕರುವಿಗೆ ಅನಾಯಾಸವಾಗಿ ಹಾಲು ಸಿಗುವುದು ಸದುದ್ದೇಶವಲ್ಲದೆ ಮತ್ತೇನು? ಮನುಷ್ಯನ ದೇಹ, ಕಣ್ಣು, ಕಿವಿ, ಮೂಗು ಇತ್ಯಾದಿ ಅವಯವಗಳನ್ನು ನೋಡಿದಾಗ ಅವುಗಳಲ್ಲಿ, ಕಾಣುವ ಹೊಂದಾಣಿಕೆ, ಸಾಮರಸ್ಯ ಯಾರಿಗೆ ತಾನೇ ಆಶ್ಚರ್ಯವನ್ನುಂಟು ಮಾಡುವುದಿಲ್ಲ? ಈ ವಿಧವಾದ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಜನರು ಈ ವಿಶ್ವದ ವೈಚಿತ್ರಕ್ಕೆಲ್ಲಾ ಅತಿಚತುರ ನಾದ ಒಬ್ಬನು ಕಾರಣವಾಗಿರಬೇಕು, ಅವನೇ ದೇವರು ಎಂಬ ಸಿದ್ಧಾಂತಕ್ಕೆ ಬಂದರು.

ಪೇಲೇನ ವಾದ : ಪೇಲೆ ಎಂಬ ತತ್ತ್ವ ಜ್ಞಾನಿಯು ಒಂದು ಸುಂದರವಾದ ನಿದರ್ಶನದಿಂದ ದೇವನನ್ನು ಸಿದ್ಧ ಮಾಡುತ್ತಾನೆ. ಒಂದು ವಿಶಾಲವಾದ ಉಸುಕಿನ ಮೈದಾನದಲ್ಲಿ ತಿರುಗಾಡುವಾಗ ಒಂದು ಗಡಿಯಾರ ಕಾಣುತ್ತೇವೆ. ಅದು ಸರಿಯಾಗಿ ಸಮಯ ತೋರಿಸುತ್ತದೆ. ಅದರ ತಾಸಿನ ಮುಳ್ಳು, ಮಿನಿಟಿನ ಮುಳ್ಳು, ಸೆಕೆಂಡಿನ ಮುಳ್ಳು ಸರಿಯಾಗಿ, ಕ್ರಮಬದ್ಧವಾಗಿ ತಿರುಗುತ್ತವೆ. ಇದನ್ನು ನೋಡಿ ನಾವು ಒಂದು ವಿಚಾರವನ್ನು ಊಹಿಸುತ್ತೇವೆ. ಈ ಗಡಿಯಾರವನ್ನು ಮಾಡಿದ ಒಬ್ಬ ಯಾಂತ್ರಿಕನಿರಬೇಕು. ಅದ ರಂತೆ ಈ ವಿಶ್ವವೆಂಬ ಗಡಿಯಾರ ಸುಂದರವಾಗಿ, ಸಾಮರಸ್ಯದಿಂದ ಕ್ರಮಬದ್ಧವಾಗಿ ನಡೆಯುತ್ತಿದೆ ಎಂಬುದನ್ನು ನಾವು ದಿನಾಲು ಕಾಣುತ್ತೇವೆ. ವಿಶ್ವದಲ್ಲಿ ಸಾಮರಸ್ಯ ಕ್ರಮಬದ್ಧತೆ ಇದೆಯೆಂದು ಎಡಿಂಗ್ಟನ್ ನಂಥ ವಿಜ್ಞಾನಿಗಳೂ ಸಹ ಒಪ್ಪಿಕೊಂಡಿದ್ದಾರೆ. ಇಂಥ ಸುಂದರ ವಿಶ್ವವೆಂಬ ಗಡಿಯಾರವನ್ನು ನಿರ್ಮಿಸಿದ ಓರ್ವ ಜಾಣ ತಾಂತ್ರಿಕನಿರಬೇಕಲ್ಲವೇ ? ಆತನೇ ಸೃಷ್ಟಿ ಕರ್ತನಾದ ದೇವರು,

ಈ ಸೃಷ್ಟಿಯು ಕ್ರಮಬದ್ದವೂ ಅರ್ಥಪೂರಿತವೂ, ಉದ್ದೇಶ ಪೂರಿತವೂ ಆಗಿದೆಯೆಂದು ಕ್ರೆಸಿ ಮಾರಿಸನ್ ಎಂಬ ವಿಜ್ಞಾನಿಯು ಕೊಡುವ ಕೆಳಗಿನ ಕಾರಣಗಳಿಂದ ನಾವು ಅರಿತುಕೊಂಡು, ಇಂಥ ಸೃಷ್ಟಿಯನ್ನು ರಚಿಸಿದ ದೇವರ ಬಗ್ಗೆ ಅಪಾರ ನಂಬಿಕೆಯನ್ನು ತಾಳಬಹುದಾಗಿದೆ.

ಭೂಮಿಯು ತನ್ನ ಅಕ್ಷದ ಸುತ್ತಲೂ ತಾಸಿಗೆ ಒಂದು ಸಾವಿರ ಮೈಲಿಯಂತೆ ತಿರುಗುತ್ತದೆ. ಅದೇ ಪೃಥ್ವಿಯು ತಾಸಿಗೆ ನೂರು ಮೈಲಿ ವೇಗದಲ್ಲಿ ತಿರುಗಿದರೆ ನಮ್ಮ ಹಗಲುರಾತ್ರಿಗಳು ಈಗಿರುವದಕ್ಕಿಂತಲೂ ಹತ್ತು ಪಟ್ಟು ದೀರ್ಘವಾಗಿರುತ್ತಿದ್ದವು. ಆಗ ಸೂರ್ಯನು ಹಗಲೆಲ್ಲ ಉರಿದು ಸಸ್ಯವರ್ಗವನ್ನೇ ದಹಿಸಿ ಬಿಡುತ್ತಿದ್ದನು : ಅಥವಾ ರಾತ್ರಿಯ ವೇಳೆ ಯಾರು ಜೀವ ಸಹಿತ ಉಳಿಯಲಾರದಷ್ಟು ಚಳಿಯಾಗಿ ಬಿಡುತ್ತಿತ್ತು,

ಪೃಥ್ವಿಯು ೨೩ ಡಿಗ್ರಿಗಳಷ್ಟು ಬಾಗಿರುವದರಿಂದ ನಿಯಮಿತವಾದ ಋತುಗಳನ್ನುಂಟು ಮಾಡುತ್ತದೆ. ಹಾಗೆ ಭೂಮಿಯು ಬಾಗಿರದಿದ್ದರೆ ಸಾಗರದಿಂದ ನೀರಿನ ಹನಿಗಳು ನುಗ್ಗಿ ಉತ್ತರ ದಕ್ಷಿಣ ದಿಕ್ಕುಗಳಲ್ಲಿ ಮಂಜುಗೆಡ್ಡೆಯ ರಾಶಿ ಹಾಕುತ್ತಿದ್ದವು, ಚಂದ್ರನು ಈಗಿರುವದಕ್ಕಿಂತ ೫೦ ಸಾವಿರ ಮೈಲಿ ಹೆಚ್ಚು ಸಮೀಪವಿದ್ದಿದ್ದರೆ ದಿನಕ್ಕೆರಡುಬಾರಿ ನಮ್ಮ ಭೂಮಿಯನ್ನೇ ಕೊಚ್ಚುವಷ್ಟು ಭಾರಿ ಪ್ರಮಾಣದ ಅಲೆಗಳು ನುಗ್ಗುತ್ತಿದ್ದವು ; ಬೆಟ್ಟಗಳೂ ಕೂಡ ಮುಳುಗಿ ಹೋಗುತ್ತಿದ್ದವು.

ಸಾಗರಗಳು ಒಂದೆರಡಡಿ ಹೆಚ್ಚು ಆಳವಾಗಿದ್ದರೆ ಇಂಗಾಲಾಮ್ಲಾನಿಲ ಮತ್ತು ಆಮ್ಲಜನಕಗಳು ಹೀರಿಕೊಳ್ಳಲ್ಪಟ್ಟು ಪ್ರಪಂಚದ ಮೇಲೆ ಯಾವ ಸಸ್ಯಗಳನ್ನೂ ಬೆಳೆಯಲು ಸಾಧ್ಯ ವಾಗುತ್ತಿರಲಿಲ್ಲ, ಅಥವಾ ನಮ್ಮ ವಾತಾವರಣದ ಒತ್ತಡವು ಕೊಂಚ ಹಗುರವಾಗಿದಿದ್ದರೆ ಪ್ರತಿ ನಿತ್ಯವೂ ಲಕ್ಷಗಟ್ಟಲೆ ಅಂತರಿಕ್ಷದಲ್ಲಿ ಸುಟ್ಟುಹೋಗುತ್ತಿರುವ ಉಲ್ಕಾಪಾತಗಳು ಭೂಮಿಯ ಎಲ್ಲಾ ಪ್ರದೇಶಗಳನ್ನು ಬಡಿಯುತ್ತಿದ್ದವು.

ನಮ್ಮ ಜೀವನಕ್ಕೆ ಮೂಲಾಧಾರವಾದ ಸೂರ್ಯನ ಶಾಖವು ಸೂರ್ಯಮಂಡಲದಲ್ಲಿ ೧೨,೦೦೦ ಡಿಗ್ರಿ ಫ್ಯಾರನ್ ಹೀಟ್ ಇದೆ. ಇಷ್ಟು ಶಾಖ ನಾವಿರುವ ದೂರದಿಂದಾಗಿ ಕೇವಲ ಮೈ ಬೆಚ್ಚಗಾಗುವಷ್ಟು ಮಾತ್ರ ತಗಲುತ್ತಿದೆ. ಸೂರ್ಯನಿಂದ ಹೊರಹೊಮ್ಮುತ್ತಿರುವ ಈಗಿನ ಶಾಖದಲ್ಲಿ ಅರ್ಧದಷ್ಟು ಕಡಿಮೆ ಯಾದರೆ ನಾವು ಶೈತ್ಯಕೃತ ಗಡ್ಡೆಗಳಾಗುತ್ತೇವೆ. ಅರ್ಧದಷ್ಟು ಹೆಚ್ಚಾದರೆ ದಹಿಸಿ ಹೋಗುತ್ತೇವೆ. ನಮ್ಮ ಜೀವನವು ಈ ಜಗತ್ತಿನಲ್ಲಿ ಉದ್ದೇಶ ರಹಿತ ಘಟನೆಯಾಗಿರಲಾರದು ; ಇವೆಲ್ಲವೂ ಹೇಗಿರಬೇಕೋ ಹಾಗೇ ಇಟ್ಟಂಥ ಓರ್ವ ಜಾಣಶಿಲ್ಪಿ ಇರ ಬೇಕಲ್ಲವೆ? ಆ ಅನಾದಿ ಶಿಲ್ಪಿಯೇ ದೇವರು.

ಈ ಸೃಷ್ಟಿಯು ಸುಂದರವಾಗಿದೆ, ಕ್ರಮಬದ್ಧವಾಗಿದೆ, ಸಮರಸವಾಗಿದೆ, ಇದರ ರಚನೆಯಲ್ಲಿ ಸಿಕ್ಕಾಪಟ್ಟೆಯಾಗಿ ಅರ್ಥವಿಹೀನವಾಗಿರದೆ, ತುಂಬಾ ಸದುದ್ದೇಶಯುಕ್ತವೂ ಅರ್ಥಪೂರಿತವೂ ಆಗಿದೆ ಎಂಬುದನ್ನು ನಾವು ಕೆಳಗಿನ ಚಿಕ್ಕ ದೃಷ್ಟಾಂತದಿಂದಲೂ ಮನಗಾಣಬಹುದು, ಮೈಸೂರಿನಂಥ ದೊಡ್ಡ ಪಟ್ಟಣದಲ್ಲಿ, ಓರ್ವ ಹಳ್ಳಿಯ ವಿದ್ಯಾರ್ಥಿಯು ಕಾಲೇಜಿನಲ್ಲಿ ಬಿ. ಎ. ಓದುತ್ತಿದ್ದನು. ಸಾಮಾನ್ಯವಾಗಿ ಇತ್ತಿತ್ತಲಾಗಿ ನಾಸ್ತಿಕತೆಯ ಬಿರುಗಾಳಿ ಕಲಿಯುವವರ ಮೇಲೆ ಬೀಸುತ್ತಿದೆಯಷ್ಟೆ ! ಆ ಬಿರುಗಾಳಿಯಲ್ಲಿ ಈತನೂ ಕೊಚ್ಚಿಕೊಂಡುಹೋಗಿದ್ದ. ಅದರಿಂದ ನಾಸ್ತಿಕತೆ ಅವನಲ್ಲಿ ಒಡಮೂಡಲು ಪ್ರಾರಂಭವಾಗಿತ್ತು.ಬೇಸಿಗೆಯ ಬಿಡುವಿನಲ್ಲಿ ತನ್ನೂರಿಗೆ ಹೊರಟಿದ್ದ. ಒಂದು ಸ್ಟೇಷನ್ನಿನಲ್ಲಿ ಇಳಿದು ಸುಮಾರು ೪-೬ಮೈಲಿಗಳವರೆಗೆ ಕಾಲ್ನಡಿಗೆಯಿಂದ ತನ್ನ ಊರಿಗೆ ಹೋಗಬೇಕಾಗಿತ್ತು, ಸರಿ ೧೨ ಗಂಟೆಗೆ ಸ್ಟೇಷನ್ನಿನಲ್ಲಿ ತನ್ನೂರಿಗೆ ಹೊರಟ, ಎರಡು ಮೈಲು ಹೋದನಂತರ ಬಿಸಿಲಿನ ಬೇಗೆಯಿಂದ ಬಳಲಿ, ಅಲ್ಲಿಯೇ ಸಮೀಪದಲ್ಲಿರುವ ಒಂದು ತೋಟದೊಳಗಿನ ಭಾವಿಗಿಳಿದು ನೀರು ಕುಡಿದು, ಪಕ್ಕದಲ್ಲಿರುವ ಆಲದಮರದ ಕೆಳಗೆ ನೆರಳಿನಲ್ಲಿ ವಿಶ್ರಮಿಸಿಕೊಂಡ, ಬಿಸಿಲು ತಗ್ಗಿದ ನಂತರ ಪ್ರಯಾಣ ಮಾಡಿದರಾಯಿತೆಂದು ಸ್ವಲ್ಪ ಮೇಲ್ಮುಖ ಮಾಡಿ ಒರಗಿದ. ಅವನ ಸಮೀಪದಲ್ಲಿಯೇ ಒಂದು ಕುಂಬಳಬಳ್ಳಿ ಹಬ್ಬಿತ್ತು. ಅದಕ್ಕೆ ದೊಡ್ಡ ದೊಡ್ಡ ಕಾಯಿ ಗಳಾಗಿದ್ದವು. ಮೇಲಿನ ಆಲದ ಮರಕ್ಕೆ ಚಿಕ್ಕ ಚಿಕ್ಕ ಕಾಯಿಗಳಾಗಿದ್ದುದನ್ನು ನೋಡಿ, ತನ್ನ ಮನಸ್ಸಿನಲ್ಲಿ ಹೀಗೆ ಆಲೋಚಿಸತೊಡಗಿದ; “ದೇವರು ಸರ್ವಜ್ಞನೆಂದು ಹೇಳುತ್ತಾರೆ, ಅವನ ಸೃಷ್ಟಿ ಕ್ರಮಬದ್ಧವೂ, ಪ್ರಮಾಣಬದ್ಧವೂ, ಉದ್ದೇಶ ಪೂರಿತವೂ ಎಂದು ಹೇಳುತ್ತಾರೆ. ಈ ಮಾತು ಸತ್ಯವಾದರೆ ದೇವರು ಚಿಕ್ಕ ಬಳ್ಳಿಗೆ ದೊಡ್ಡಾಕಾಯಿ, ದೊಡ್ಡ ಮರಕ್ಕೆ ಚಿಕ್ಕ ಕಾಯಿಯನ್ನೇಕೆ ಕೊಡುತ್ತಿದ್ದನು ? ಇದೆಂಥ ಕ್ರಮಬದ್ಧ ಉದ್ದೇಶಪೂರಿತ ಸುಂದರಸೃಷ್ಟಿ ? ಇದನ್ನು ಸೃಷ್ಟಿಸಿದವನು ಸರ್ವಜ್ಞನಂತೂ ಅಲ್ಲವೇ ಅಲ್ಲ,” ಎಂದು ದೇವರ ಸೃಷ್ಟಿಯಲ್ಲಿ ತಪ್ಪನ್ನೆಣಿಸುವ ದೀಡಪಂಡಿತ ವಿದ್ಯಾರ್ಥಿಗೆ ತಂಗಾಳಿ ಬೀಸಲು ಪ್ರಾರಂಭವಾದುದರಿಂದ ಸ್ವಲ್ಪ ಜೊಂಪು ಬರಲು ಪ್ರಾರಂಭವಾಯಿತು. ಅಷ್ಟರಲ್ಲಿ ಆಲದ ಮರದ ತುದಿಯಿಂದ ಒಂದು ಹಣ್ಣು ನೇರವಾಗಿ ಅವನ ಮೂಗಿನ ಮೇಲೆ ಬೀಳಲು, ರಕ್ತ ಸುರಿಯಲು ಪ್ರಾರಂಭಿಸಿತು. ಆಗ ಅವನಿಗೆ ಅರಿವಾಯಿತು. “ಅಬ್ಬಾ ! ನಾನೆಂಥ ಹುಚ್ಚ !! ದೇವನ ಸೃಷ್ಟಿಯಲ್ಲಿ ತಪ್ಪನ್ನೆಣಿಸಲು ಹೊರಟಿರುವೆನಲ್ಲ ; ಆಲದ ಮರಕ್ಕೆ ಕುಂಬಳಕಾಯಿಯಂಥ ದೊಡ್ಡ ಹಣ್ಣುಗಳಾಗಿ ನನ್ನ ಮೇಲೆ ಬಿದ್ದಿದ್ದರೆ ನಾನು ಹಾದಿಯ ಹೆಣವಾಗುತ್ತಿದ್ದೆನಲ್ಲಾ! ದೇವನು ಉದ್ದೇಶಪೂರಿತವಾಗಿ ದೊಡ್ಡ ಗಿಡಕ್ಕೆ ಚಿಕ್ಕಕಾಯಿ ಕೊಟ್ಟಿದ್ದಾನೆ. ಅದರ ನೆರಳಿನಲ್ಲಿ ಮಲಗಿದ ಯಾವ ಪಾಂಥಿಕರಿಗೂ ಅಪಾಯ ವಾಗಬಾರದೆಂಬುದೇ ಅವನ ಉದ್ದೇಶವಾಗಿರಬೇಕು. ದೇವರು ನಿಜವಾಗಿಯೂ ಸರ್ವಜ್ಞ.” ಎಂದು ಮನಗಂಡು ಆಸ್ತಿಕ ಭಾವನೆ ಯಿಂದ ತನ್ನ ಹಳ್ಳಿ ಸೇರಿದನು.

“ದೇವನಿಲ್ಲ" ಎಂಬ ಭಾವನೆಯಲ್ಲಿ 'ದೇವನಿದ್ದಾನೆ'

ದೇವನು 'ಇಲ್ಲ' ಎಂದಾಗ ಯಾವುದಾದರೂ ಒಂದು ವಸ್ತು ಇರಲೇಬೇಕು, ಯಾಕೆಂದರೆ 'ಸತ್' ಅನ್ನು ಬಿಟ್ಟು 'ಅಸತ್' ಎಂಬುದು ಇರಲಾರದು. ಆದ್ದರಿಂದ ದೇವನು 'ಇಲ್ಲ' ಎಂದಾಗ ಇನ್ನೊಂದು ಯಾವುದೋ 'ಇದೆ' ಎಂದು ನಂಬಲೇಬೇಕಾದರೆ ಆ 'ಇದೆ'ಯೇ ದೇವರು, ಏಕೆಂದರೆ ದೇವನು ಸತ್-ಚಿತ್- ಆನಂದಮಯನು ಇದಕ್ಕೆ ಒಂದು ಸುಂದರ ನಿದರ್ಶನ ಕೊಡ ಬಹುದು, ಚಂಡಿಯಾದ ಹೆಂಡತಿಯು ತನ್ನ ಮೊಂಡನಾದ ಗಂಡ ನೊಡನೆ ಒಂದು ದಿನ ಊಟವಾದ ಮೇಲೆ ತಾಂಬೂಲ ಅಗಿಯುತ್ತಾ ಕುಳಿತಿದ್ದಾಳೆ. ಅವರ ವಿರಸವಾದ ಸಂಸಾರದ ಮರುಭೂಮಿಯಲ್ಲಿ ಒಂದು ಸರಸವಾದ ಬುಗ್ಗೆ ಚಿಮ್ಮಿದೆ. ಹೆಂಡತಿಯು ಹೇಳುತ್ತಾಳೆ. ವಿನೋದವಾಗಿ-“ಏನ್ರಿ ! ನಾನೊಪ್ಪುವ ವಿಚಾರ ದಲ್ಲಿ ನೀವು ಒಪ್ಪುವುದಿಲ್ಲ! ನೀವು ಒಪ್ಪುವ ವಿಷಯವನ್ನು ನಾನೆಂದೂ ಒಪ್ಪಿಲ್ಲ. ಹೀಗೆ ನನಗೂ ನಿಮಗೂ ಕೂಡಿ ಒಪ್ಪುವ ವಿಚಾರವು ಈ ಪ್ರಪಂಚದಲ್ಲಿ ಒಂದೂ ಇಲ್ಲ ಅಲ್ಲವೆ ? ಎಂದಳು, ಗಂಡನ ವಿನೋದವಾಗಿ 'ಇದೆ ಕಣೆ' ಎಂದನು. ಹೆಂಡತಿಯು “ಇಲ್ಲಾ ಕಾಣ್ರಿ" ಎಂದಳು. ಗಂಡನು 'ಹಾಗಾದರೆ ತೋರಿಸಲೇ ? ಎಂದನು, ಹೆಂಡತಿಯು, ತೋರಿಸಿರಿ ನೋಡೋಣ! ನೋಡ್ರಿ, ಈ ನಮ್ಮ ಮಾತಿನಲ್ಲಿಯೇ ಕಾಣುತ್ತದೆ; ನಾನು 'ಇಲ್ಲ' ಎಂದರೆ ನೀವು 'ಇದೆ' ಎನ್ನುತ್ತೀರಿ ಇಬ್ಬರೂ ಒಪ್ಪುವ ವಿಷಯ ಜಗತ್ತಿನಲ್ಲಿ ಒಂದೂ ಇಲ್ಲವೆನ್ನುವ ನನ್ನ ಮಾತಿಗೆ ಇದೇ ನಿದರ್ಶನವಾಗಲಿಲ್ಲವೆ?” ಎಂದಳು, ಗಂಡ “ಆ' ನೋಡು, ನನಗೂ ನಿನಗೂ ಕೂಡ ಒಪ್ಪುವ ವಿಚಾರವು ಲೋಕದಲ್ಲಿ ಒಂದೂ ಇಲ್ಲಾ ಎಂದು ನೀನು ಹೇಳುವ ಮಾತು ನಿನಗೆ ಒಪ್ಪಾಗಿರುವಂತೆಯೇ ನನಗೂ ಒಪ್ಪಿಗೆಯಾಗಿದೆ. ನೀನೇ ವಿಚಾರಿಸಿ ನೋಡು !” ಎಂದು ಗೆಲುವಿನ ನಗೆಗಡಲಿನಲ್ಲಿ ಹೆಂಡತಿ ಯನ್ನು ಮೂದಲಿಸಿ ಆಕೆಯ ಪ್ರಣಯ ಕೋಪಕ್ಕೆ ಕಾರಣನಾದನು, “ಹೀಗೆ ಆ ಪದಾರ್ಥವು ಇಲ್ಲವಾಗಿದೆ' ಎಂಬ ಮಾತಿನಲ್ಲಿ ಕೂಡ 'ಇಲ್ಲ' ಎಂಬ ಅಭಾವವನ್ನು ಸಹ ಬೆಳಗಿಸುವ ಇರುವಿಕೆಗೆ ಯಾವ ಕಾಲಕ್ಕೂ ಕುಂದಿಲ್ಲ. ಈ ಇರುವಿಕೆಯೇ ಸತ್ಯ; ಅದೇ ದೇವರು, ಆದ್ದರಿಂದಲೇ ಸತ್ಯೋಪಾಸಕರಾದ ಮಹಾತ್ಮಾ ಗಾಂಧೀಜಿಯವರು ಹೀಗೆ ಹೇಳುತ್ತಾರೆ:

“ನಾನು ಅನೇಕ ಸಲ ದೇವರು ಸತ್ಯವೆಂದು ಹೇಳಿದ್ದೇನೆ. ಆದರೆ ಇತ್ತಿತ್ತಲಾಗಿ ನಾನು ನನ್ನ ಧರ್ಮವನ್ನು ಹೆಚ್ಚು ಸ್ಪಷ್ಟ ವಾಗಿ ವಿವರಿಸಲು ದೇವರು ಸತ್ಯವೆಂದು ಹೇಳುವುದರ ಹೊರ್ತಾಗಿ ಸತ್ಯವೇ ದೇವರು” ಎಂದು ಹೇಳಲು ಪ್ರಾರಂಭಿಸಿದ್ದೇನೆ. ಇತ್ತೀಚೆಗೆ 'ಸತ್ಯ' ಎನ್ನುವಷ್ಟು ಬೇರಾವುದೂ ನನ್ನ ಧರ್ಮವನ್ನು ವಿವರಿಸಲಾರದು. ಮಾನವರಲ್ಲಿ ಅತ್ಯಂತ ಅಜ್ಞಾನಿ ಪಾಮರನಲ್ಲಿಯೂ ಏನೋ ಸತ್ಯವಿದೆ. ನಾವೆಲ್ಲರೂ ಆ ಒಂದು ಸತ್ಯದ ಕಿಡಿಗಳೇ ಆಗಿದ್ದೇವೆ. ಆ ಎಲ್ಲ ಕಿಡಿಗಳ ಒಟ್ಟು ಏನಿದೆಯೋ ಅದು ಅವರ್ಣನೀಯ, ಆದರೂ ಸತ್ಯ : ಈ ಸತ್ಯದ ನಿಧಿಯೇ ದೇವರು.

ಆಗಮ ಪ್ರಮಾಣ :

ಸತ್ಯದ ಜ್ಞಾನವಾಗಬೇಕಾದರೆ ಸಾಮಾನ್ಯವಾಗಿ ಪ್ರತ್ಯಕ್ಷ, ಅನುಮಾನ, ಆಗಮ ಪ್ರಮಾಣಗಳನ್ನು ತತ್ತ್ವವೇತ್ತರು ಮನ್ನಿಸುತ್ತಾರೆ, ಇಂದ್ರಿಯ ಗೋಚರವಾಗುವುದು ಪ್ರತ್ಯಕ್ಷ ಪ್ರಮಾಣ, ಹೊಗೆಯನ್ನು ನೋಡಿ ಬೆಂಕಿಯನ್ನು ಊಹಿಸುವುದು, ಹಳ್ಳದ ರಾಡಿ ನೀರನ್ನು ನೋಡಿ ಮೇಲುಗಡೆ ಮಳೆ ಆಗಿರಬಹುದೆಂದು ಊಹಿಸುವುದು ಅನುಮಾನ ಪ್ರಮಾಣ, ವೇದ, ಉಪನಿಷತ್ತು, ಆಗಮ, ಪುರಾಣ, ಶ್ರುತಿ, ಸ್ಮೃತಿಗಳಲ್ಲಿ ಶರಣರ ಸಂತರ ಮಹಾತ್ಮರ ಆಪ್ತವಾಕ್ಯಗಳಲ್ಲಿ ನಂಬಿಗೆ ಇಡುವುದು ಆಗಮ ಪ್ರಮಾಣವು, ಈ ಆಗಮ ಪ್ರಮಾಣದಿಂದ ನಾವು ದೇವನನ್ನು ಒಪ್ಪಲೇಬೇಕಾಗುತ್ತದೆ.

ವೇದ, ಆಗಮ, ಉಪನಿಷತ್, ಪುರಾಣಗಳು ದೇವನ ಅಸ್ತಿತ್ವವನ್ನು ಮನ್ನಿಸುತ್ತವೆ. ಬಸವ, ಗಾಂಧೀಜಿ, ಏಸೂ, ಮಹಮ್ಮದ ಮುಂತಾದ ಧರ್ಮದರ್ಶಿಗಳೂ ದೇವನನ್ನು ಕಂಡು, ದೇವನ ಸ್ವರೂಪವನ್ನು ನಮಗೆ ನೀಡಿಹೋಗಿದ್ದಾರೆ. ಪ್ಲೇಟೋ, ಅರಿಸ್ಟಾಟಲ್, ಡೆಕಾರ್ಟ, ಡಾ. ವ್ಹಾಯಿಟೆಡ್‌ರಂಥ ತತ್ವ ಜ್ಞಾನಿಗಳು ದೇವನ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾರೆ. ಐನ್ಸ್ಟೀನ್, ಎಡ್ಡಿಂಗ್ಟನ್‌ರಂಥ ವಿಜ್ಞಾನಿಗಳೂ ದೇವರಲ್ಲಿ ನಂಬಿಗೆ ಯುಳ್ಳವರಾಗಿದ್ದಾರೆ, ಶಂಕರ, ಮಾಧ್ವ, ರಾಮರಾನುಜಾಚಾರರಂಥ ಭಾಷ್ಯಕಾರರು ದೇವನ ಅಸ್ತಿತ್ವವನ್ನು ಮನ್ನಿಸುತ್ತಾರೆ. ರಾಮಕೃಷ್ಣ, ವಿವೇಕಾನಂದ, ಸ್ವಾಮಿ ರಾಮತೀರ್ಥ, ಶ್ರೀರಮಣಮಹರ್ಷಿ, ಶ್ರೀ ಅರವಿಂದರಂಥ ಮಹಾಮಹಿಮರೂ ದೇವೋನ್ಮಾದದಲ್ಲಿ ನಿಲುಕಡೆ ಹೊಂದಿದವರಾಗಿದ್ದಾರೆ. ಪ್ರಭುದೇವ, ಅಕ್ಕಮಹಾದೇವಿ, ಪುರಂದರದಾಸ, ಕನಕದಾಸ, ಮೀರಾಬಾಯಿ, ಕಬೀರ, ನಾನಕ್, ಚೈತನ್ಯ, ತುಕಾರಾಮ, ಜ್ಞಾನದೇವ ಇತ್ಯಾದಿ ಇತ್ಯಾದಿ, ಶರಣ-ಸಂತರೂ ದೇವನಲ್ಲಿ ಅಪಾರ ನಂಬಿಗೆ ಯನ್ನಿಟ್ಟು ಬ್ರಹ್ಮಾನಂದದ ನಿಬ್ಬೆರಗಿನಲ್ಲಿ ನಿಲುಕಡೆ ಹೊಂದಿ ಅಮರರಾಗಿ ಹೋಗಿದ್ದಾರೆ. ಇಂಥ ಅನೇಕ ಮಹಂತರು ದೇವನ ಅಸ್ತಿತ್ವವನ್ನು ಒಪ್ಪಿ ಆತನನ್ನು ಕಂಡು ಜೀವನ ಪಾವನ ಮಾಡಿಕೊಂಡ ಉದಾಹರಣೆ ನಮ್ಮ ಮುಂದೆ ಇರುವಾಗ ದೇವನಿಲ್ಲವೆನ್ನುವುದು ಮೂರ್ಖತನದ ಪರಮಾವಧಿಯೆಂದೇ ಹೇಳಬೇಕು,

ಮಾಸ್ಕೋ ಎಂಬ ಪಟ್ಟಣ ರಶಿಯದಲ್ಲಿದೆ, ಅದು ರಶಿಯಾದ ರಾಜಧಾನಿ ಎಂದು ಭೂಗೋಳ ಶಿಕ್ಷಕ ವಿದ್ಯಾರ್ಥಿಗಳಿಗೆ ಕಲಿಸುತ್ತಾನೆ. ವಿದ್ಯಾರ್ಥಿಗಳು ಆ ಮಾತನ್ನು ಭೂಗೋಳದಲ್ಲಿ ಮತ್ತು ಗುರುವಿನಲ್ಲಿ ನಂಬಿಗೆಯನ್ನಿಟ್ಟು ಒಪ್ಪಿಕೊಳ್ಳುತ್ತಾರೆ. ಅದರಂತೆ ಧರ್ಮಗುರು 'ದೇವನೊಬ್ಬನಿದ್ದಾನೆ. ಅವನು ಸರ್ವ ವ್ಯಾಪಿಯಾಗಿದ್ದಾನೆ' ಎಂದು ಹೇಳಿದಾಗ, ಶಿಷ್ಯನು ಗುರುವಿನಲ್ಲಿ ನಂಬಿಗೆಯನ್ನಿಟ್ಟು ಒಪ್ಪಿಕೊಳ್ಳಬೇಕು, ವಿದ್ಯಾರ್ಥಿ ಮಾಸ್ಕೋ ಪಟ್ಟಣ ತೋರಿಸಬೇಕೆಂದು ಹಟಹಿಡಿದರೆ,ಸಾವಿರಾರು ರೂಪಾಯಿ ತಕ್ಕೊಂಡು ಬಾ, ವಿಮಾನಮಾರ್ಗದಿಂದ ನಿನ್ನನ್ನು ಕರೆದು- ಕೊಂಡು ಮಾಸ್ಕೋ ಪಟ್ಟಣಕ್ಕೆ ಹೋಗಿ ತೋರಿಸಿಕೊಂಡು ಬರುತ್ತೇನೆಂದು ಶಿಕ್ಷಕ ಹೇಳುತ್ತಾರೆ, ಹಾಗೆ ಅವರು ಸಾವಿರಾರು ರೂಪಾಯಿ ಖರ್ಚು ಮಾಡಿ ವಿಮಾನದಲ್ಲಿ ಕುಳಿತು ಪ್ರವಾಸ ಮಾಡಿದರೆ ಮಾಸ್ಕೋ ಪಟ್ಟಣ ಅವಶ್ಯ ಕಾಣುತ್ತದೆಂದು ಬೇರೆ ಹೇಳಬೇಕಾಗಿಲ್ಲ. ಅದರಂತೆ ಶಿಷ್ಯನು ಗುರುವಿಗೆ ದೇವನನ್ನು ತೋರಿಸೆಂದು ಹಟ ಹಿಡಿದರೆ, ಗುರು ಅನೇಕ ದಿನಗಳವರೆಗೆ ತಪಸ್ಸು ಅನುಷ್ಠಾನವೆಂಬ ರೂಪಾಯಿ ಖರ್ಚು ಮಾಡ ಹೇಳಬೇಕಾಗುತ್ತದೆ, ಅಲ್ಲದೆ ಯೋಗವೆಂಬ ವಿಮಾನದಲ್ಲಿ ಆಧ್ಯಾತ್ಮ ಪ್ರವಾಸಮಾಡಿದರೆ ಮಾಸ್ಕೋ ಪಟ್ಟಣವೆಂಬ ದೇವನನ್ನು ಅವಶ್ಯವಾಗಿ ಕಂಡೇ ತೀರುವಿಯೆಂದು ಗುರು ಶಿಷ್ಯನಿಗೆ ಮಾರ್ಮಿಕವಾಗಿ ಉತ್ತರ ಹೇಳಬಲ್ಲ!

ಶ್ರದ್ಧೆ :

ಕೆಲ ವಿಜ್ಞಾನಿಗಳು, ಭೌತಿಕವಾದಿಗಳು, ನಾಸ್ತಿಕರು ದೇವರನ್ನು ನಂಬುವುದಿಲ್ಲ. ಯಾಕೆಂದರೆ ದೇವನನ್ನು ನಾವು ಪ್ರತ್ಯಕ್ಷ ಕಾಣುವುದಿಲ್ಲ. ಆದ್ದರಿಂದ ದೇವನಿಲ್ಲವೆಂಬುದು ಅವರ ವಾದ. ಯಾವುದು ಪ್ರತ್ಯಕ್ಷ ಕಾಣುವುದಿಲ್ಲವೋ ಅದು ಇಲ್ಲವೆಂದು ಹೇಳುವ ವಾದವು ಸಾಧುವಲ್ಲ, ಪ್ರತಿಯೊಬ್ಬ ತನ್ನ ಹೆಸರು, ಅದರ ಮುಂದೆ ತನ್ನ ತಂದೆಯ ಹಸರನ್ನು ಬರೆಯುತ್ತಾನಷ್ಟೆ ! ಹಾಗಾದರೆ ಪ್ರತ್ಯಕ್ಷ ಪ್ರಮಾಣದಿಂದ ತಂದೆಯನ್ನು ತಿಳಿಯಲು ಹೇಗೆ ಸಾಧ್ಯ? ಯಾವ ವ್ಯಕ್ತಿಯ ತನ್ನ ತಂದೆಯನ್ನು ಪ್ರತ್ಯಕ್ಷವಾಗಿ ಕಾಣಲಾರ. ಯಾಕೆಂದರೆ ಪ್ರತಿಯೊಂದು ಕೂಸು ಹುಟ್ಟುವ ಪೂರ್ವದಲ್ಲಿ ಆ ಕೂಸಿಗೆ ೯ ತಿಂಗಳ ಪೂರ್ವದಲ್ಲಿಯೇ ಓರ್ವ ವ್ಯಕ್ತಿ 'ಅಪ್ಪ' ನಾಗಿ ರುತ್ತಾನೆ, ಅವನನ್ನು ಕಾಣಲು ನಮಗೆ ಸಾಧ್ಯವೇ ಇಲ್ಲ. ಆದರೂ “ಇವನೇ' ನಮ್ಮ ತಂದೆಯೆಂದು ನಂಬುತ್ತೇವೆ. ಅದು ಹೇಗೆಂದರೆ ನಾವು ಹುಟ್ಟಿದ ನಂತರ ನಮ್ಮನ್ನು ಹೆತ್ತ ತಾಯಿ “ಇವರು ನಿಮ್ಮ ತಂದೆ, ಅಪ್ಪ ಎಂದು ಮಗುವಿಗೆ ಕಲಿಸಿದಾಗ, ಮಗು ಅಂದಿನಿಂದ 'ಅಪ್ಪಾ' ಎಂದು ಕರೆಯಲು ಪ್ರಾರಂಭಿಸುತ್ತದೆ. ನಮ್ಮ ಹೆತ್ತ ತಾಯಿಯನ್ನು ಬಿಟ್ಟು ಇನ್ನಾರಿಗೂ ನಮ್ಮ ನಿಜವಾದ ತಂದೆ ಯಾರೆಂಬುದು ಗೊತ್ತಾಗಲಾರದು. ಹೀಗೆ ತಾಯಿಯಲ್ಲಿ ಶ್ರದ್ಧೆ, ನಂಬಿಗೆಯಿಟ್ಟು ತಂದೆಯನ್ನು ನಂಬುವಂತೆ ಗುರುಗಳಲ್ಲಿ, ಮಹಾತ್ಮರಲ್ಲಿ ನಂಬಿಗೆಯನ್ನಿಟ್ಟು ದೇವರನ್ನು ನಂಬಬೇಕು, ಅದಕ್ಕಾಗಿಯೇ ವಿಶ್ವಗುರು ಬಸವಣ್ಣನವರು 'ನಂಬಿ ಕರೆದರೆ ಓ ಎನ್ನನೇ ಶಿವನು' ಎಂದು ನಂಬಿಕೆಯ ಮಹತಿಯನ್ನು ಚೆಲ್ಲವರಿದಿದ್ದಾರೆ, ಸ್ವಾಮಿ ವಿವೇಕಾನಂದರು ನಂಬಿಕೆಯಲ್ಲಿ ಪರ್ವತವನ್ನು ಅಲ್ಲಾಡಿಸುವ ಅದ್ಭುತ ಶಕ್ತಿ ಇದೆಯೆಂದು ಪ್ರತಿಪಾದಿಸಿದ್ದಾರೆ.

ಆದ್ದರಿಂದ ವೇದ, ಆಗಮ, ಉಪನಿಷತ್, ಪುರಾಣ, ಶರಣರ ಸಂತರ-ಮಹಾತ್ಮರ, ವಚನಗಳಲ್ಲಿ ವಿಶ್ವಾಸವನ್ನಿಟ್ಟು ದೇವರನ್ನು ನಂಬಿ ಆತನನ್ನು ಸ್ವಾನುಭಾವದಿಂದ ಕಂಡು ಜೀವನದ ಪರಮ ಗುರಿಯನ್ನು ಸಾಧಿಸಬೇಕು,

ಹಾಡಿದೊಡೆ ಎನ್ನೊಡೆಯನ ಹಾಡುವೆ
ಬೇಡಿದೊಡೆ ಎನ್ನೊಡೆಯನ ಬೇಡುವೆ
ಒಡೆಯಂಗೊಡಲ ತೋರಿ
ಎನ್ನ ಬಡತನವ ಬಿನ್ನಿಸುವೆ
ಒಡೆಯ ಮಹಾದಾನಿ
ಕೂಡಲ ಸಂಗಮದೇವರಿಗೆ ಸೆರಗೊಡ್ಡಿ ಬೇಡುವೆ. -ವಿಶ್ವಗುರು ಬಸವಣ್ಣ

ಗ್ರಂಥ ಋಣ:
೧) ದೇವರು, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು -೫೬೦ ೦೧೦.

ಪರಿವಿಡಿ (index)
Previous ದೇವರ ಕಲ್ಪನೆ ಆತ್ಮನ ಅಸ್ತಿತ್ವ Next