Previous ಆತ್ಮನ ಅಸ್ತಿತ್ವ ಸ್ವಯಂಭು ಸ್ವರೂಪ Next

ಆತ್ಮ ಸ್ವರೂಪ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು

ಆತ್ಮ ಸ್ವರೂಪ

ದೇವರ ಸ್ವರೂಪವನ್ನು ಮೂರು ವಿಧದಿಂದ ಅರಿಯಬಹುದು, ಪಿಂಡಗತ ಆತ್ಮ(ಪ್ರತ್ಯಗಾತ್ಮ), ಬ್ರಹ್ಮಾಂಡಗತ ಆತ್ಮ (ಪರಮಾತ್ಮ), ಪಿಂಡ ಬ್ರಹ್ಮಾಂಡಕ್ಕತೀತವಾದ ಆತ್ಮ (ಸ್ವಯಂಭು), ಈಗ ನಾವು ಪ್ರತ್ಯಗಾತ್ಮನ ಸ್ವರೂಪ ಅಥವಾ ಚಿಲ್ಲಿಂಗದ ಸ್ವರೂಪವನ್ನು ನೋಡುವಾ ಶರಣರು ತಮ್ಮ ಪಿಂಡಸ್ಥಳದ ವಚನಗಳಲ್ಲಿ ಸುಂದರವಾಗಿ ಹಾಡಿಕೊಂಡಿದ್ದಾರೆ. ಅವುಗಳಲ್ಲಿ ಕೆಲವನ್ನು ನಾನು ವಿವರಿಸುವೆನು.

ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನಾರು ನಿಲವನರಿಯಬಾರದು.


ಈ ಮೇಲಿನ ವಚನದಲ್ಲಿ ಮಹಾ ಶರಣೆ ಅಕ್ಕಮಹಾದೇವಿ ಪಿಂಡಗತ ಪರಮಾತ್ಮನ ಸ್ವರೂಪವನ್ನು ಸುಂದರವಾಗಿ ಮಾರ್ಮಿಕವಾಗಿ ಕೆಲವು ಉಪಮೆಗಳಿಂದ ವರ್ಣಿಸಿದ್ದಾಳೆ.

ಮಣ್ಣಿನ ಮರೆಯಲ್ಲಿ ಹೊನ್ನು ಇದ್ದಂತೆ, ಫಲದ ಮರೆಯಲ್ಲಿ ಕಾಣದ ರುಚಿ ಇದ್ದಂತೆ, ಕಲ್ಲಿನ ಮರೆಯಲ್ಲಿ ಕನಕವಿದ್ದಂತೆ, ತಿಲದ ಮರೆಯಲ್ಲಿ ತೈಲವಿದ್ದಂತೆ, ಮರದ ಮರೆಯಲ್ಲಿ ಅಗ್ನಿ ಇದ್ದಂತೆ, ಭಾವದ ಮರೆಯಲ್ಲಿ ಬ್ರಹ್ಮನಿದ್ದಾನೆ. ಭಾವವೆಂದರೆ ಜೀವ, ಆತ್ಮನು ಅಂತಃಕರಣಾವೃತನಾದಾಗ ಜೀವಾತ್ಮವಾಗುವನು. ತಿಲದಲ್ಲಿ ಏನೋ ತೆಗೆದರೆ ತೈಲ ಉಳಿಯುವಂತೆ, ಜೀವದಲ್ಲಿ ಏನೋ (ಅಂತಃಕರಣ) ಕಳೆದರೆ ಆತ್ಮನುಳಿಯುತ್ತಾನೆಂದು ತಾತ್ಪರ್ಯವು. ಪಿಂಡದಲ್ಲಿ ಕಾಣದಂತೆ ಪಿಂಡಸ್ಥನಿದ್ದಾನೆಂದೂ, ದೇಹದಲ್ಲಿ ದೇಹಿ ಇದ್ದಾನೆಂದೂ, ಭಾವದ ಮರೆಯ ಬ್ರಹ್ಮವಾಗಿಪ್ಪನೆಂಬುದಕ್ಕೆ ವ್ಯಾಖ್ಯೆ ಮಾಡಬಹುದು. ಇಂತಹ ಹಲವಾರು ಶರಣರ ವಚನಗಳನ್ನು ಕಾಣಬಹುದು. ಅಲ್ಲಮ ಪ್ರಭುದೇವರ ವಚನ ಇಂತಿದೆ :

ನೆಲದ ಮರೆಯ ನಿಧಾನದಂತೆ,
ಮುಗಿಲ ಮರೆಯಲಡಗಿದ ಮಿಂಚಿನಂತೆ,
ಬಯಲ ಮರೆಯಲಡಗಿದ ಮರೀಚಿಯಂತೆ
ಕಂಗಳ ಮರೆಯಲಡಗಿದ ಬೆಳಗಿನಂತೆ
ಗುಹೇಶ್ವರಾ ನಿಮ್ಮ ನಿಲವು!


ಮರೀಚಿ = ಮೃಗಜಲ, ಕಿರಣ, ಬಿಸಿಲುಗುದುರೆ

ಪರಶಿವನ ಚಿದಂಶಿಕವಾದ ಆತ್ಮನು ಜಡಪಿಂಡಸಂಬಂಧಿಯಾಗಿ ತನ್ನ ನಿಜದ ನಿಲುವಪ್ಪ ಬ್ರಹ್ಮವನು ಮರೆದಿದ್ದಲ್ಲಿ, ಆ ಆತ್ಮನ ನಿಜದ ನಿಲುವಪ್ಪ ಪರಬ್ರಹ್ಮವು ಆ ಆತ್ಮಾಂತರ್ಗತವಾಗಿ ಕಾಣಿಸದೆ, ಪಿಂಡ ಸ್ವರೂಪನಾದ ಆತ್ಮನಲ್ಲಿ ಈ ಪ್ರಕಾರ ಇರುವದು. ಭೂಗತವಾಗಿದ್ದ ನಿಧಾನದಂತೆ, ಮೇಘದೊಳಗೆ ಸ್ಪುರಿಸದೆ ಇಪ್ಪ ಮಿಂಚಿನಂತೆ, ಬಯಲೊಳಡಗಿದ ಮರೀಚಿಕೆಯಂತೆ, ಕಂಗಳ ಪಟಲದೊಳಗಿಪ್ಪ ಬೆಳಗಿನಂತೆ, ವ್ಯತಿರಿಕ್ತವಾಗಿ ವಿವರಿಸಬಾರದಂತೆ ಆ ಪರಬ್ರಹ್ಮನು ಪಿಂಡಗತನಾಗಿಪ್ಪುದೆಂಬುದೀ ವಚನದ ಸಾರಾಂಶವು. ಇನ್ನೊಂದು ಅಲ್ಲಮ ಪ್ರಭುದೇವರ ವಚನವನ್ನು ವಿವರಿಸುವಾ.

ಜಲದೊಳಗಿರ್ದ ಕಿಚ್ಚು ಜಲವ ಸುಡದೆ,
ಜಲವು ತಾನಾಗಿಯೆ ಇದ್ದಿತ್ತು ನೋಡಾ,
ನೆಲೆಯನರಿದು ನೋಡಿಹೆನೆಂದಡೆ, ಅದು ಜಲವು ತಾನಲ್ಲ,
ಕುಲದೊಳಗಿರ್ದು ಕುಲವ ಬೆರಸದೆ,
ನೆಲೆಗಟ್ಟುನಿಂದುದನಾರು ಬಲ್ಲರೊ?
ಹೊರಗೊಳಗೆ ತಾನಾಗಿರ್ದು-ಮತ್ತೆ ತಲೆದೋರದಿಪ್ಪುದು,
ಗುಹೇಶ್ವರಾ ನಿಮ್ಮ ನಿಲವು ನೋಡಾ.

ಜಲದಲ್ಲಿಯ ಬಡಬಾಗ್ನಿಯು ಜಲವನ್ನು ಸುಡದೆ ಸುಪ್ತವಾಗಿರುವಂತೆ, ಪಿಂಡದಲ್ಲಿ ಶಿವಜ್ಞಾನಾಗ್ನಿಯು ಪಿಂಡವ ದಹಿಸದೆ ಗುಪ್ತವಾಗಿದೆ ನೋಡಾ. ನೆಲೆಯನರಿದು ನೋಡಿದರೆ ಅಗ್ನಿಯು ಹೇಗೆ ಜಲವಲ್ಲವೊ ಹಾಗೆ ವಿವೇಕದಿಂದ ತಿಳಿದು ನೋಡಿದರೆ ಆ ಶಿವಜ್ಞಾನಾಗ್ನಿಯು ಜಲವೆಂಬ ಪಿಂಡವಲ್ಲವು. ಆ ಪರಬ್ರಹ್ಮವು ಜಾತಿ, ವರ್ಣಾಶ್ರಮನಾಮ ಗೋತ್ರಂಗಳೊಳಗೆ ವೇಧಿಸಿ ಕೊಂಡಿರ್ದು, ಹೊದ್ದಿಯೂ ಹೊದ್ದದೆ ನಿರ್ಲಿಪ್ತವಾಗಿರುವ ಅದರ ನಿಲವನಾರು ಬಲ್ಲರು ? ಆ ಪರಬ್ರಹ್ಮನು ಅಂತರಂಗ ಬಹಿರಂಗದೊಳಗೆ ಪರಿಪೂರ್ಣವಾಗಿದ್ದು ಅನ್ಯವಾಗಿ ತೋರಿಸಿಕೊಳ್ಳಲರಿಯದೆ ಗುಪ್ತವಾಗಿ ಸುಪ್ತವಾಗಿಪ್ಪುದು.
[ಬಡಬಾಗ್ನಿ (ವಡಬಾಗ್ನಿ) = ಸಮುದ್ರದಲ್ಲಿಯ ಬೆಂಕಿ]
ಈಗ ಧರ್ಮಪಿತ ಬಸವಣ್ಣನವರ ಪಿಂಡಸ್ಥಲದ ಎರಡು ವಚನಗಳನ್ನು ವಿವರಿಸುವಾ.

ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು,
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು,
ನನೆಯೊಳಗಣ ಪರಿಮಳದಂತಿದ್ದಿತ್ತು,
ಕೂಡಲಸಂಗಮದೇವರ ನಿಲುವು
ಕನ್ನೆಯ ಸ್ನೇಹದಂತಿದ್ದಿತ್ತು.


ದೇವಾಜ್ಞೆಯಿಂದ ಸಮುದ್ರದಲ್ಲಿ ಬಡವಾಗ್ನಿಯಿರ್ದು ಆ ಸಮುದ್ರವ ಸುಡದೆ ಜಲದಲ್ಲಿ ತದಾಕಾರವಾಗಿರುವಂತೆ ಚಿದಗ್ನಿ ಸ್ವರೂಪನಾದ ಪರಮಲಿಂಗವು ಜಲವೆಂಬ ಪಿಂಡದಲ್ಲಿರ್ದು ಪಿಂಡವ ದಹಿಸದೆ ತದಾಕಾರವಾಗಿ ಇರುತ್ತದೆ. ಚಂದ್ರನೊಳಗಣ ಅಮೃತ ಕಿರಣವು ಆ ಅಮೃತದಿಂದ ಬೇರ್ಪಡಿಸಿ ತೋರದಂತೆ, ಆ ಪಿಂಡ ಮಧ್ಯದಲ್ಲಿದ್ದು ಆತ್ಮರಸವ ಬೇರ್ಪಡಿಸಿ ಚಿತ್‌ಪರಮ ಪ್ರಕಾಶ ಲಿಂಗವು ತೋರಲಾರದು. ಕುಸುಮದ ನನೆಯೊಳಗೆ ಸುವಾಸನೆ ತೋರದೆಯಿದ್ದ ಸುಗಂಧದಂತೆ, ಆ ಚಿತ್‌ಪರಮ ಲಿಂಗವು ಪಿಂಡಮಧ್ಯದಲ್ಲಿರ್ದು ತನ್ನ ಶಿವಸದ್ವಾಸನಾಜ್ಞಾ ದೋರದೆ ಆ ಪಿಂಡದಲ್ಲಿ ತದಾಕಾರವಾಗಿ ಅಡಗಿರ್ಪುದು. ವಿಷಯ ಸಂಗ ಸುಖವು ಋತುವಾಗದೆಯಿರ್ದ ಹಸುಳೆಯಲ್ಲಿ ಕಾಮ ಮೈಗಾಣಿಸದೆ ಅಡಗಿ ಇದ್ದಂತೆ, ಚಿತ್ಪರಮಲಿಂಗದ ಸುಖಾನಂದವು ಪಿಂಡಸ್ಥವಾಗಿರ್ದು ಮೈಗಾಣಿಸದೆ ಗುಪ್ತವಾಗಿರ್ಪುದೆಂದು ಅನೇಕ ದೃಷ್ಟಾಂತದಿಂದ ಸಿದ್ಧ ಮಾಡಿದ್ದಾರೆ. ಚಿತ್ಪರಮಲಿಂಗದ ಚಿದಂಶವಾದ ಆತ್ಮನು ದೇವಾಜ್ಞೆಯಿಂದ ಜಡಪಿಂಡ ಸಂಬಂಧಿಯಾಗಿ ತನ್ನ ನಿಜವ ಮರೆದಿಪ್ಪಲ್ಲಿ ಆ ಆತ್ಮನ ನಿಜದ ನಿಲವಪ್ಪ ಚಿತ್ಪರಮಲಿಂಗವು ಆ ಪಿಂಡರೂಪವಾದ ಆತ್ಮಾಂತರ್ಗವಾಗಿ ಜಡಪಿಂಡದಲ್ಲಿ ತದಾಕಾರವಾಗಿ ಗುಪ್ತವಾಗಿರ್ಪುದು ಎಂಬುದೀ ವಚನದ ಮಥಿತಾರ್ಥವು,

ಮರೀಚಿಯೊಳಡಗಿದ ಬಿಸಿಲಿನಂತೆ ಇದ್ದಿತ್ತು.
ಕ್ಷೀರದೊಳಡಗಿದ ತುಪ್ಪದಂತೆ ಇದ್ದಿತ್ತು
ಚಿತ್ರಿಕನೊಳಡಗಿದ ಚಿತ್ರದ ಪಟದಂತೆ ಇದ್ದಿತ್ತು.
ಆಲಿಯೊಳಗಣ ತೇಜದ ಗೋಪ್ಯದಂತೆ ಇದ್ದಿತ್ತು
ನುಡಿಯೊಳಡಗಿದ ಅರ್ಥದಂತಿದ್ದಿತ್ತು.
ಕೂಡಲಸಂಗಯ್ಯ ನಿಮ್ಮ ನಿಲುವು.

ಪರಿಪೂರ್ಣವಾಗಿರ್ದು ಬಿಸಿಲಿನೊಳಗೆ ಮರೀಚಿಕಾ ಜಲ ಛಾಯೆದೋರಲು ಆ ತೋರಿದ ಮರೀಚಿಕದೊಳಗೆ ಆ ಪರಿಪೂರ್ಣವಾದ ಬಿಸಿಲು ಕಾಣಿಸದೆ ಇರುವಂತೆ, ಹಾಲಿನೊಳಗೆ ತುಪ್ಪವಿರ್ದು ಪರಿಮಳದೊರದೆ ಹಾಲಿನಂತೆ ತದಾಕಾರವಾಗಿರ್ದು ಬೇರ್ಪಡಿಸಿ ಕಾಣಿಸಬಾರದ ತೆರನಂತೆ ಚಿತ್ರಿಕನ ಭಾವದಲ್ಲಿಪ್ಪ ಚಿತ್ರದ ರೂಹು ಕಾಣಿಸದೆ ಇರುವಂತೆ ಕಂಗಳ ಪಟಲದೊಳಗಿಪ್ಪ ಸೂಕ್ಷ್ಮ ಪ್ರಭೆ ಕುರುಹಿಂಗೆ ಬಾರದಂತೆ, ತತ್ವಾನುಭವದ ನುಡಿಯರ್ಥ ಎಲ್ಲರಿಗೆ ಕಾಣಿಸದೆ ಗೌಪ್ಯವಾಗಿ ಇಪ್ಪಂತೆ, ಚಿದ್ಭೋಧಾಮೂರ್ತಿಯಪ್ಪ ಚಿಲ್ಲಿಂಗವು ಪಿಂಡಸ್ಥವಾಗಿರ್ದುದು ಎಂಬುದೇ ಈ ವಚನದ ತಾತ್ಪರ್ಯವು .

ಮರದೊಳಗೆ ಮಂದಾಗ್ನಿಯನುರಿಯದಂತಿರಿಸಿದೆ.
ನೊರೆವಾಲೊಗೆ ತುಪ್ಪವ ಕಂಪಿಲ್ಲದಂತಿರಿಸಿದೆ.
ಶರೀರದೊಳಗೆ ಆತ್ಮನನಾರೂ ಕಾಣದಂತಿರಿಸಿದೆ.
ನೀ ಬೆರೆಸಿಹ ಭೇದಕ್ಕೆ ಬೆರಗಾದೆನಯ್ಯ ರಾಮನಾಥಾ |


ಇದು ಜೇಡರ ದಾಸಿಮಯ್ಯನ ಸುಂದರವಾದ ಪಿಂಡಸ್ಥಲದ ವಚನವು, ಮರದೊಳಗಿಪ್ಪ ಅಗ್ನಿಯು ಮರ ಸುಡದಿಪ್ಪಂತೆ ಶಿವನು ಜೀವಾತ್ಮನ ಕೂಡ ಜಡಕಾಷ್ಠ ರೂಪಾದ ದೇಹದಲ್ಲಿದ್ದು ತನ್ನ ಚಿದಗ್ನಿಯಿಂದ ದೇಹವ ನಷ್ಟವ ಮಾಡದೆ ನಿಶ್ಚಲವಾಗಿಪ್ಪನು. ಶಿವಾಜ್ಞೆಯಿಂ ಹಾಲೊಳಗೆ ತುಪ್ಪವಿರ್ದು ಪರಿಮಳದೋರದೆ ಇರುವಂತೆ ಶಿವನ ಸದ್ವಾಸನಾ ಜ್ಞಾನವು ಪ್ರಭಾವಿಸದೆ ದೇಹದಲ್ಲಿರುವದು. ಅಂತು ಪರಶಿವನು ತನ್ನ ತದಂಶವಾದ ಆತ್ಮಂಗೆ ದೇಹಸಂಬಂಧಮಂ ಮಾಡಿ, ಆ ದೇಹ ತಾನೆಂಬ, ತನ್ನದೆಂಬ ಅಜ್ಞಾನವನ್ನು ಹುಟ್ಟಿಸಿ, ತಾನು ಶಿವಾಂಶಿಕನಾದ ಆತ್ಮನು ತಾನೆಂಬುದನ್ನು ತನಗೆ ಕಾಣಬಾರದಂತೆ ಇರಿಸಿದನು. ಹೀಗೆ ಶಿವನು ತನ್ನ ತದಂಶವಾದ ಆತ್ಮನಲ್ಲಿ ಬೆರೆಸಿರ್ದು ನಿರ್ಲೇಪವಾದ ಪರಶಿವನ ಬೆಡಗನರಿವುದು ತುಂಬಾ ಅಗಾಧವಾದುದು.

ಶಿವಾಂಶಿಕನಾದ ಆತ್ಮಂಗೆ ಶಿವ ತಾನೇ ತನ್ನ ಸ್ವಲೀಲೆಯಿಂದ ಪಂಚವಿಂಶತಿ-ತತ್ವದೇಹವನ್ನು ಸಂಬಂಧಿಸಿ, ಆ ಸಂಬಂಧಿಸಿದ ದೇಹ ಅಹಂ ಮಮತೆಯನೆಯಪ್ಪ, ಅಜ್ಞಾನವನ್ನು ಹುಟ್ಟಿಸಲು ಆ ಅಜ್ಞಾನದಿಂದ 'ದೇಹೋಹಂ' ಎಂದು ತನ್ನ ನಿಜವ ಮರೆತು ದೇಹ ತಾನೆಂದು, ತನ್ನದೆಂದು ದೇಹಿಯಾಗಿಪ್ಪನು ಆತ್ಮನು. ಅಂತು ಶಿವಾಜ್ಞೆಯಿಂದ ಆತ್ಮನು ಪ್ರಕೃತಿಪಿಂಡ ಮಧ್ಯಸ್ಥನಾಗಿಪ್ಪಲ್ಲಿ ತಾನು ಶಿವಾಂಶಿಕನು, ಶಿವಕಲಾಸ್ವರೂಪನು ತಾನೆಂಬ ಶಿವಜ್ಞಾನ ತಲೆದೋರದೆ ತನ್ನ ನಿಜ ಪಿಂಡವಾದ ಶಿವತತ್ವವ ಮರೆತು ಪ್ರಕೃತಿ ಪಿಂಡ ಆಧಾರವಾಗಿರ್ದುದೇ ಪಿಂಡಸ್ಥಲವು. ಈ ಪಿಂಡಸ್ಥಲದ ವಚನಗಳಲ್ಲಿ ಪಿಂಡಗತ- ಪ್ರತ್ಯಗಾತ್ಮ ಸ್ವರೂಪವನ್ನು ಅಥವಾ ಚಿಲ್ಲಿಂಗದ ಸ್ವರೂಪವನ್ನು ಈಗ ನಾವು ಚೆನ್ನಾಗಿ ತಿಳಿವಂತಾಯಿತು. ಇನ್ನು ಮೇಲೆ ಬ್ರಹ್ಮಾಂಡಗತ ಪರಮಾತ್ಮನ ಅಥವಾ ಮಹಾಲಿಂಗದ ಸ್ವರೂಪವನ್ನು ನಿಲವನ್ನು ಮತ್ತು ಪಿಂಡ ಬ್ರಹ್ಮಾಂಡಗಳು ಮೈದೋರದೆ ತಾನೇ ತಾನಾಗಿ ಸ್ವಯಂಭುವಾಗಿರ್ದ ನಿಷ್ಕಲ ಲಿಂಗದ ಸ್ವರೂಪವನ್ನು ವಿಚಾರಿಸುವಾ.

ಗ್ರಂಥ ಋಣ:
೧) ದೇವರು, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು -೫೬೦ ೦೧೦.

ಪರಿವಿಡಿ (index)
Previous ಆತ್ಮನ ಅಸ್ತಿತ್ವ ಸ್ವಯಂಭು ಸ್ವರೂಪ Next