ವೈಜ್ಞಾನಿಕ ಯುಗದಲ್ಲಿ ಧರ್ಮದ ಅವಶ್ಯಕತೆ | ಕಾಯಕವೇ ಕೈಲಾಸ |
ಧರ್ಮ ಎಂದರೇನು ? |
✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ
*
ಭಾರತದಲ್ಲಿ ಹೆಜ್ಜೆ ಹೆಜ್ಜೆಗೂ ಬಳಕೆಯಾಗುವ ಪದ ಧರ್ಮ. ಇದರ ಬಳಕೆ ಹಲವಾರು ಅರ್ಥದಲ್ಲಿ ಆಗುತ್ತಿದೆ. ಸುಳಿಯುವುದು ಗಾಳಿಯ ಧರ್ಮ, ಸುಡುವುದು ಬೆಂಕಿಯ ಧರ್ಮ, ಅರಳುವುದು ಹೂವಿನ ಧರ್ಮ ಎಂದಾಗ ಆಯಾ ವಸ್ತುವಿನಲ್ಲಿರುವ ಸ್ವಾಭಾವಿಕ, ನೈಸರ್ಗಿಕ ಶಕ್ತಿ, ಗುಣ ಎಂದು ಅರ್ಥವಾಗುತ್ತದೆ. ಇದು ನೈಜ ಧರ್ಮ'' ಎನಿಸಿಕೊಳ್ಳುತ್ತದೆ. ಇದನ್ನು ಮಾನವನಿಗೂ ಅನ್ವಯಿಸಬಹುದು. ಅವನು ತುಂಬಾ ಶಾಂತ ಸ್ವಭಾವಿ'', " ಅವನು ಬಹಳ ಶೀಘ್ರ ಕೋಪಿ'', “ಅದು ಅವನ ಸ್ವಭಾವ ಅಥವಾ ಸಹಜ ಧರ್ಮ'' ಎನ್ನುತ್ತೇವೆ.
ಒಬ್ಬ ಮನುಷ್ಯ ಸಾತ್ವಿಕನೂ, ಸಜ್ಜನನೂ ಆಗಿದ್ದರೆ ಅವನು ಧರ್ಮಾತ್ಮ ಎನ್ನುತ್ತೇವೆ. "ನೀನಿಷ್ಟು ಧರ್ಮ ಮಾಡಪ್ಪ: ಪುಣ್ಯ ಕಾರ್ಯ ಮಾಡಿ ಧರ್ಮ ಗಳಿಸಿಕೋ' ಎಂದಾಗ ಅದು ಲೋಕಕ್ಕೆ ಮಾಡುವ ಒಳ್ಳಿತು, ಸತ್ಕಾರ ಎಂದು ಅರ್ಥೈಸಬೇಕಾಗುತ್ತದೆ. ಇದನ್ನು 'ಮೈತ್ರಿಧರ್ಮ ಎಂಬುದಾಗಿ ಶಾಸ್ತ್ರಕಾರರು ಸಂಬೋಧಿಸುತ್ತಾರೆ. ಪ್ರಜೆಗಳ ಪಾಲನೆ-ಪೋಷಣೆ ರಾಜನ ಧರ್ಮ, ಮಕ್ಕಳ ಸಂರಕ್ಷಣೆ ತಂದೆಯ ಧರ್ಮ ಎಂದಾಗ ಆಯಾ ವ್ಯಕ್ತಿಗಳು ಮಾಡಬೇಕಾದ ಕರ್ತವ್ಯ ಎಂದಾಗುತ್ತದೆ. ಇದು ''ನ್ಯಾಯಧರ್ಮ'' ಎನ್ನಿಸಿಕೊಳ್ಳುತ್ತದೆ. ಹೀಗೆ ನೈಜ ಧರ್ಮ ಸ್ವಭಾವವನ್ನು, ನ್ಯಾಯಧರ್ಮ ಕರ್ತವ್ಯ ಪಾಲನೆಯನ್ನು, ಮೈತ್ರಿ ಧರ್ಮ ವಿಶ್ವಕುಟುಂಬತ್ವವನ್ನು ಪ್ರತಿಪಾದಿಸುತ್ತದೆ.
''ಧರ್ಮ'' ಪದವು 'ಧೃ' ಎಂಬ ಮೂಲಧಾತುವಿನಿಂದ ಹುಟ್ಟಿದೆ. 'ಧೃ' ಎಂದರೆ ಎತ್ತಿ ಹಿಡಿಯುವುದು; ಧರಿಸುವುದು ಎಂದು ಅರ್ಥ.
೧. ಧಾರಣಾತ್ ಧರ್ಮಮ್ ಇತ್ಯಾಹುಃ ಧರಿಸುವುದು ಧರ್ಮ'' ೨. ಧರ್ಮೋ ರಕ್ಷತಿ ರಕ್ಷಿತಃ'. ಅದನ್ನು ರಕ್ಷಿಸುವವನ ಧರ್ಮ ರಕ್ಷಿಸುತ್ತದೆ. ಈ ಎಲ್ಲ ಪದಪುಂಜಗಳು ಧರ್ಮದ ಮೂಲಸ್ವರೂಪವನ್ನು ಬಿತ್ತರಿಸುತ್ತವೆ. ಹೀಗೆ ಧರ್ಮದ ಗುಣ ಮತ್ತು ಧರ್ಮ(ಕರ್ತವ್ಯ) ವೆಂದರೆ ಎತ್ತಿ ಹಿಡಿಯುವುದು. ವ್ಯಷ್ಟಿ-ಸಮಷ್ಟಿಗಳನ್ನು, ವ್ಯಕ್ತಿ-ಸಮಾಜಗಳನ್ನು ಸುವ್ಯವಸ್ಥಿತವಾಗಿ ಸುಂದರವಾಗಿ ಎತ್ತಿ ಹಿಡಿಯುವ ತತ್ವ ವಿಶೇಷವೇ ಧರ್ಮ. ಯಾವ ತತ್ತ್ವ ಆಚಾರ- ವಿಚಾರ ಸಮುಚ್ಛಯಗಳಿಂದ ನಾವು ವ್ಯಕ್ತಿ ಸಮಾಜಗಳನ್ನು ಸಂಘಟಿಸಬಲ್ಲೆವೋ, ಸಂಸ್ಕರಿಸಬಲ್ಲೆವೋ, ಪೋಷಿಸಬಲ್ಲೆವೋ ಅದೇ ಧರ್ಮ!
ಪತಿತರನ್ನು, ನೊಂದವರನ್ನು, ದಲಿತರನ್ನು ಎತ್ತುವುದು ಧರ್ಮದ ಮೂಲಭೂತ ಕರ್ತವ್ಯ. ಪತಿತರೆಂದರೆ ನೈತಿಕವಾಗಿ ಬಿದ್ದವರು, ನೊಂದವರೆಂದರೆ ಮಾನಸಿಕವಾಗಿ ಬಿದ್ದು ಹತಾಶರಾದವರು, ದಲಿತರೆಂದರೆ ಸಾಮಾಜಿಕವಾಗಿ ಬಿದ್ದವರು- ಈ ಎಲ್ಲ ದೃಷ್ಟಿಯಿಂದಲೂ ಬಿದ್ದವರನ್ನು ಮೇಲೆತ್ತುವುದು ಧರ್ಮ. ಇದು ಧರ್ಮದ ಮಾನವೀಯ ಅಂಶ. ಧರ್ಮದ ಅವಿಭಾಜ್ಯ ಅಂಗ ಮಾನವೀಯತೆ. ಅಂತೆಯೇ ಪಾಪಿಯನ್ನು ದ್ವೇಷಿಸಬೇಡ ಪಾಪವನ್ನು ದ್ವೇಷಿಸು''. ಎಂದು ಏಸುಕ್ರಿಸ್ತ ನುಡಿದದ್ದು.
ಬಸವಣ್ಣನವರು ಅನುಭವ ಮಂಟಪ ಕಟ್ಟಿದ್ದರಷ್ಟೆ. ಅದರಲ್ಲಿ ಪಾಪಿಗಳು ಪತಿತರು, ದೀನರು-ದುಃಖಿತರು ಎಲ್ಲರನ್ನೂ ಪರಿವರ್ತಿಸಿ, ಪ್ರವೇಶ ನೀಡಿದರು. ಅದನ್ನು ಕಂಡು ಕುಹಕ ಕುತದ ಮಾತುಗಳನ್ನಾಡುವ ಮಡಿವಂತರು, ಮತ್ಸರಿಗರು ಕಿಡು ನುಡಿಯಾಡಿದರು. “ನಿಮ್ಮ ಅನುಭವ ಮಂಟಪದಲ್ಲಿ ವೇಶ್ಯೆಯರಿಗೂ ಕೆಲಸವುಂಟೋ?'' ಎಂದರು. ಬಸವಣ್ಣನವರಿಗೆ ಈ ಕುತ್ಸಿತ ಬುದ್ದಿಯವರ ಅಂತರಂಗ ಅರ್ಥವಾಯಿತು. 'ತಾವು ಮಾಡದ, ಮಾಡುವವರ ಮಾಡಲೀಯದ' ಜನವಿದು ಎಂಬುದನ್ನು ಅರಿತರು. ದುಶ್ಚಾರಿತ್ರ್ಯದ ಬಾಳನ್ನು ಬಾಳುವ ಕೆಲವರು ವೇಶ್ಯಾವೃತ್ತಿಯನ್ನು ಇರುಳಲ್ಲಿ ಪ್ರಚೋದಿಸಿ, ಅದಕ್ಕೆ ಪ್ರೋತ್ಸಾಹ ನೀಡಿ ಹಗಲಿನಲ್ಲಿ ಆ ಪತಿತೆಯರನ್ನು ಕಂಡು ತಿರಸ್ಕಾರದ ನುಡಿಗಳ ಬಾಣಗಳನ್ನು ಎಸೆಯುವರು. ಇನ್ನು ಕೆಲವರು ದುಷ್ಟ ಬಾಳನ್ನು ಬಾಳರು, ವೇಶ್ಯೆಯರಿಗೆ ಪ್ರಚೋದನೆಯನ್ನು ಕೊಡರು. ತಾವು ಉತ್ತಮರಾಗಿ, ಪತಿತೆಯರನ್ನು ದೂಷಿಸುತ್ತ, ತಿರಸ್ಕಾರದ ನುಡಿಗಳನ್ನಾಡುತ್ತಾ ಸಾಗುವರು. ಕೇವಲ ಮಹಾತ್ಮರು ಮಾತ್ರ ಅವರನ್ನು ಮರುಕದಿಂದ ಕಂಡು, ಪರಿವರ್ತಿಸಲೆತ್ನಿಸಿ, ಅವರ ಬದುಕನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುವರು.
ಆಗ ಬಸವಣ್ಣನವರು ಮರು ನುಡಿದರು. ರೋಗಿಷ್ಠನಿಗೆ ಚಿಕಿತ್ಸಾಲಯದ ಅವಶ್ಯಕತೆ, ಅದರಂತೆ ಪಾಪಿಗೇ ಧರ್ಮದ ಧಾರ್ಮಿಕ ಸಂಸ್ಕಾರದ ಅವಶ್ಯಕತೆ ಇದೆ. ಅನುಭವ ಮಂಟಪವೊಂದು ಅಧ್ಯಾತ್ಮ ಚಿಕಿತ್ಸಾಲಯ; ಧರ್ಮ ಸಂಸ್ಕಾರವೇ ಚಿಕಿತ್ಸೆ! ಅದನ್ನು ಕೊಡದಿದ್ದಾಗ ಧರ್ಮವು ಧರ್ಮವಾಗದೆ ಆಸುರೀ ಕರ್ಮವಾಗುತ್ತದಷ್ಟೆ. ಲಿಂಗದೇಹಿಗಿಂತಲೂ ಅಂಗದೇಹಿಗೆ ಪಾದೋದಕ ಪ್ರಸಾದದ ಅವಶ್ಯಕತೆ ಬಹಳ ಉಂಟಷ್ಟೆ? ಕಬ್ಬಿಣದ ಕತ್ತಿ ಎಷ್ಟು ಪ್ರಾಣಹರಣಗಳನ್ನು ಮಾಡಿದ್ದರೂ ಪರುಷ ಮುಟ್ಟಲು ಹೊನ್ನಾಗುತ್ತದೆ. ಹಾಗೆಯೇ ದೈವಾನುಗ್ರಹದ ಪರುಷ ಸಂಸ್ಕಾರವಾದ ಎಂಥ ಪಾಪಿಯೂ ಪಾವನನಾಗುವನು.'' ಎಂದು ಮಡಿವಂತರನ್ನು ಸಮಾಧಾನಿಸಿದರು.
ವ್ಯಕ್ತಿ ಸಮಾಜಗಳನ್ನು, ವ್ಯಷ್ಟಿ-ಸಮಷ್ಟಿಗಳನ್ನು ಸಂಘಟಿಸಲು, ಸಂಸ್ಕರಿಸಲು ಕೆಲವು ತತ್ತ್ವ ಮತ್ತು ಆಚರಣೆಗಳು ಬೇಕು. ಅವುಗಳ ಮೊತ್ತವೇ ಧರ್ಮ ಎಂದು ಆಗಲೇ ಹೇಳಿಯಾಯಿತಷ್ಟೆ. ಅವುಗಳನ್ನು ೧೧ ಲಕ್ಷಣಗಳ ಮೂಲಕ ವಿಭಾಗೀಕರಿಸಿ ಧರ್ಮವನ್ನು ಗುರುತಿಸಬಹುದು. ಅವುಗಳೇ ಸಿದ್ಧಾಂತ, ಸಾಧನೆ, ದರ್ಶನ, ಸಂಸ್ಕಾರ, ಸಮಾಜಶಾಸ್ತ್ರ ನೀತಿಶಾಸ್ತ್ರ ಅರ್ಥಶಾಸ್ತ್ರ ಸಂಸ್ಕೃತಿ, ಸಾಹಿತ್ಯ, ಪರಂಪರೆ ಮತ್ತು ಧರ್ಮಗುರು (ಪ್ರವಾದಿ). ಈ ಹನ್ನೊಂದು ಲಕ್ಷಣಗಳಿದ್ದರೆ ಮಾತ್ರ ಅದು ಧರ್ಮ ಇಲ್ಲವಾದರೆ ಅದು ಜಾತಿ ಮತ ಪಂಥ ಮಾತ್ರ.
೧. ಜೀವ-ಜಗತ್ತು-ಈಶ್ವರ ಈ ಮೂರು ತತ್ತ್ವಗಳನ್ನು ಕುರಿತು ಚಿಂತಿಸುವುದೇ ಸಿದ್ಧಾಂತ.
೨. ಚಿಂತನದಿಂದ ಸ್ಥಿರಪಡಿಸಿಕೊಂಡ ಸಾಧ್ಯವನ್ನು, ಧೈಯವನ್ನು ಪಡೆದುಕೊಳ್ಳಲು ವಿಶಿಷ್ಟವಾದ ಪಥದ ಮೂಲಕ ಸಾಗುವುದೇ ಸಾಧನೆ.
೩. ಅಂಥ ಪಥದಲ್ಲಿ ಸಾಗುವಾಗ ಕಂಡುಂಡ ಅನುಭವವನ್ನು, ಪರಮ ಸತ್ಯವನ್ನು ವಿವರಿಸುವುದೇ ದರ್ಶನ ಶಾಸ್ತ್ರ
೪. ಒಂದು ಧರ್ಮದ, ಸಮಾಜದ ಅನುಯಾಯಿಯಾಗಬೇಕೆಂಬುವವನನ್ನು ಇಂಬಿಟ್ಟುಕೊಳ್ಳುವ ಸಾಧನವೇ ಸಂಸ್ಕಾರ.
೫. ಇಂತಹ ಸಂಸ್ಕಾರ ಪಡೆದುಕೊಂಡು ಧರ್ಮದ ಅನುಯಾಯಿಗಳಾದವರು ತಮ್ಮ ತಮ್ಮಲ್ಲಿ ಯಾವ ಬಂಧುರತ್ವದಿಂದ, ಹೊಂದಾಣಿಕೆಯಿಂದ ಬಾಳಬೇಕೆಂಬುದನ್ನು ತಿಳಿಸುವುದು ಸಮಾಜಶಾಸ್ತ್ರ
೬ ತಮ್ಮ ತಮ್ಮಲ್ಲಿ ಮಾತ್ರವಲ್ಲದೇ ಇನ್ನಿತರರೊಡನೆ, ಧರ್ಮ- ಸಮಾಜ-ರಾಷ್ಟ್ರಗಳೊಡನೆ ಯಾವ ಬಾಂಧವ್ಯವನ್ನು ರೂಢಿಸಿಕೊಂಡು ಬರಬೇಕೆಂಬ ನೀತಿಶಾಸ್ತ್ರ
೭. ಅರ್ಥದ ದುಡಿಮೆ. ಗಳಿಕೆ- ಬಳಕೆ ಅತಿ ಮುಖ್ಯ ಸಾಧನಗಳು, ಅರ್ಥದ ಬಗ್ಗೆ ಅತ್ಯಂತ ಆಸಕ್ತಿಯನ್ನೇ ಬೆಳೆಸಲಿ, ಅಥವಾ ವಿರಕ್ತಿಯನ್ನೇ ಬೆಳೆಸಲಿ, ಅಥವಾ ಕರ್ತವ್ಯ ಪ್ರಜ್ಞೆಯನ್ನೇ ಬೆಳೆಸಲಿ, ಅಂತೂ ಅರ್ಥದ ಬಗ್ಗೆ ಚಿಂತನೆ ಮಾಡುವ ಅರ್ಥಶಾಸ್ತ್ರವಿರಬೇಕು.
೮. ಮನುಷ್ಯನ ಆಚಾರ-ವಿಚಾರ, ನಡವಳಿಕೆ-ವರ್ತನೆ ಉಡುಗೆ ತೊಡುಗೆ ಇವುಗಳ ಬಗ್ಗೆ ವಿವೇಚಿಸುವ ಸಂಸ್ಕೃತಿ ಇರುತ್ತದೆ.
೯. ಇವೆಲ್ಲವನ್ನು ಜನಗಳ ಮನಸ್ಸಿಗೆ ಮನದಟ್ಟು ಮಾಡಿಕೊಡಲು ಮಧ್ಯವರ್ತಿಯಾಗಿ ಕೆಲಸಮಾಡುವ, ಧರ್ಮದ ಸಂವಿಧಾನ ಎನ್ನಿಸಿಕೊಳ್ಳುವ ಸಾಹಿತ್ಯ.
೧೦. ಇಷ್ಟೇ ಅಲ್ಲದೆ ಈ ಎಲ್ಲ ಸಿದ್ದಾಂತ, ಸಾಧನೆ, ದರ್ಶನ, ಸಂಸ್ಕಾರ ಮುಂತಾದ ಲಕ್ಷಣಗಳನ್ನು ಅಳವಡಿಸಿಕೊಂಡು ಬದುಕಿದ ಒಂದು ಸಾಮಾಜಿಕ ಪರಂಪರೆ ಇರಬೇಕು. ಇಲ್ಲವಾದರೆ ಅದು ಪ್ಲೇಟೋನ ತತ್ತ್ವಜ್ಞಾನದಂತೆಯೋ, ಚಾರ್ವಾಕ ವಿಚಾರಧಾರೆಯಂತೆಯೋ ಒಂದು ವಿಚಾರಧಾರೆ ಮಾತ್ರವಾಗಿ ಉಳಿಯಬಿಡುವುದೇ ವಿನಾ ಸಮಾಜಗತವಾಗದು.
೧೧. ಮೇಲೆ ಸೂಚಿಸಿದ ಎಲ್ಲ ವಿಷಯಗಳ ಬಗ್ಗೆ ಸಮಗ್ರ ಚಿಂತನೆ ಮಾಡಿ, ಕ್ರೋಢಿಕರಿಸಿ ಧರ್ಮವನ್ನು ಕೊಟ್ಟ ಧರ್ಮ ಗುರು.
ಹೀಗೆ ಈ ಹನ್ನೊಂದು ಲಕ್ಷಣಗಳು ಧರ್ಮದ ಮೂಲಭೂತ ಸ್ವರೂಪ ಲಕ್ಷಣಗಳೆಂದು ತಿಳಿಯಬೇಕು.
'ಇವನು ಒಬ್ಬ ಮನುಷ್ಯ'' ಎಂದು ಮಾನವ ಲಕ್ಷಣಗಳನ್ನು ಗುರುತಿಸಿ ಹೇಳಿದ ಬಳಿಕ, ಈ ಮನುಷ್ಯ ಒಳ್ಳೆಯವನೇ? ಇವನು ವೈಚಾರಿಕ ಪ್ರಗತಿಪರ ವಿಚಾರಧಾರೆಯವನೆ ? ಇವನು ರಾಷ್ಟ್ರಾಭಿಮಾನಿಯೇ? ಮಾನವತಾವಾದಿಯೇ? ವಿಶ್ವಕುಟುಂಬತ್ವ ಪ್ರಜ್ಞೆಯುಳ್ಳವನೆ? ಎಂದು ನಾವು ಆಲೋಚಿಸುವಂತೆ, ಯಾವುದಾದರೊಂದು ಧರ್ಮವೆಂದು ಅದರ ಲಕ್ಷಣಗಳ ಮೂಲಕ ನಿರ್ಧರಿಸಿದ ಮೇಲೆ ಅದು ಸದ್ಧರ್ಮವೇ, ಮಾನವ ಧರ್ಮವೇ, ಪ್ರಗತಿಪರ ಧರ್ಮವೇ? ರಾಷ್ಟ್ರ ಧರ್ಮವೇ, ವಿಶ್ವಧರ್ಮವೇ ಎಂದು ಚಿಂತನೆಗೈಯಬೇಕಾಗುತ್ತದೆ.
ಮಾನವನಿಗೆ ಇರುವ ಘಟಕಗಳು ಮೂರು, ತನು-ಮನ- ಆತ್ಮ, ಎಲ್ಲರಲ್ಲೂ ಇವು ಉಂಟು. ಈ ಮೂರನ್ನು ಪೋಷಣೆ ಮಾಡಲು ಸಂಸ್ಕಾರ ನೀಡುವುದೇ ಸದ್ಧರ್ಮ; ತನುವಿಗೆ ದುಡಿಮೆಯ ಸ್ವಾತಂತ್ರ್ಯ- ಅವಕಾಶಗಳನ್ನು, ಮನಸ್ಸಿಗೆ ಸುಜ್ಞಾನ-ಲಲಿತಕಲೆಗಳನ್ನು, ಆತ್ಮನ ವಿಕಾಸಕ್ಕೆ ಧರ್ಮ- ಉಪಾಸನೆಯ ಅವಕಾಶಗಳನ್ನು ಯಾವ ಜಾತಿ, ಮತ, ಪಂಥ ಪಂಗಡಗಳ ಭೇದವಿಲ್ಲದೆ ನೀಡುವುದೇ ಸದ್ದರ್ಮ.
ಪ್ರಗತಿಪರ ಧರ್ಮ
ಧರ್ಮವು ಪ್ರಗತಿಪರ ದೃಷ್ಟಿಕೋನ ಉಳ್ಳದ್ದಾಗಿರಬೇಕು. ವೈಚಾರಿಕ ನೆಲೆಗಟ್ಟಿನ ಮೇಲೆ ರೂಪುಗೊಳ್ಳಬೇಕು. ತಯಾರಿಸಲ್ಪಟ್ಟ ಕೆಲವು ಔಷಧಿಗಳು ಒಂದಾನೊಂದು ದಿನ ತಮ್ಮ ಸತ್ವ ಕಳೆದುಕೊಂಡು ಸತ್ವಹೀನ Expire ಆಗುವುವು. ದಿನಾಂಕ ಮೀರಿದ ಮೇಲೆ ಸತ್ವಹೀನ ಔಷಧಿಗಳನ್ನು ಜನರಿಗೆ ಕೊಟ್ಟರೆ ಅದು ಬಹಳಷ್ಟು ಅಪಾಯಕಾರಿಯಷ್ಟೆ. ಹಾಗೆಯೇ ಕೆಲವು ಹಳತಾದ ಮೌಲ್ಯ ಹಾಗೂ ನಂಬಿಕೆಗಳನ್ನು ಮತ್ತೆ ಜನತೆಯಲ್ಲಿ ಬೋಧಿಸಿದರೆ ಅದು ಅಪಾಯಕಾರಿಯೆ!
ಹಳೆಯದೆಲ್ಲ ಒಳ್ಳಿತು ಎಂದು ದೃಢವಾಗಿ ನಂಬಿರುವ ಹಿರಿಯರು ಪ್ರಗತಿಪರ ದೃಷ್ಟಿಕೋನ ಅಳವಡಿಸಿಕೊಂಡು ಹೊಸತನ್ನು ಸ್ವೀಕರಿಸಲು ಕಲಿಯಬೇಕು. ಹಳೆಯದೆಲ್ಲ ಅರ್ಥಹೀನ ಎಂದು ಹೀಗಳೆದು ಮೂಗೆಳೆಯುವ ಕಿರಿಯರು ಹಳತಿನಲ್ಲೂ ಉತ್ತಮ ಮೌಲ್ಯಗಳಿವೆ. ಎಂದರಿತು ಉತ್ತಮವಾದುದನ್ನು ಆರಿಸಿಕೊಳ್ಳುವ ಸೌಜನ್ಯ ಬೌದ್ಧಿಕ ಪ್ರಾಮಾಣಿಕತೆ ಕಲಿಯಬೇಕು. ಎಂಥ ಮೂಢ ಆಚರಣೆಯೂ ತುಸು ಸತ್ವಪೂರ್ಣ ವಾಗಿರುವಂತೆ, ಅರ್ಥ ಗರ್ಭಿತವಾಗಿರುವಂತೆ ತೋರುವುದು-ಕೆಟ್ಟು ನಿಂತ ಗಡಿಯಾರವೂ ಎರಡು ಸಾರಿ ಸರಿಯಾಗಿ ವೇಳೆ ತೋರಿಸುವಂತೆ, ಧಾರ್ಮಿಕ ರಂಗದಲ್ಲಿ ತನ್ನರಿವನ್ನೇ ಗುರುವನ್ನಾಗಿ ಮಾಡಿಕೊಂಡು ಸ್ವಾವಲಂಬನೆಯಿಂದ ಮನುಷ್ಯ ಸಾಗುವುದು ಶ್ರೇಯಸ್ಕರ.
ಒಮ್ಮೆ ನಾನು ಕಾರಿನಲ್ಲಿ ಪ್ರವಚನಕ್ಕೆ ಸಾಗಿದ್ದೆ. ಆಗ ಒಂದು ಟ್ರಕ್ಕು ನಮ್ಮ ಕಾರಿನ ಮುಂಭಾಗದಲ್ಲಿ ಸಾಗಿತ್ತು. ಒಬ್ಬ ಸೈಕಲ್ ಸವಾರ ಆ ಟ್ರಕ್ಕಿನ ಹಿಂದಿನ ಸರಪಳಿಯನ್ನು ಹಿಡಿದಿದ್ದ. . ಟ್ರಕ್ಕು ಸಹಜವಾಗಿ ಇವನನ್ನೂ, ಇವನ ಸೈಕಲ್ಲನ್ನೂ ಎಳೆಯುತ್ತಿತ್ತು. ಅವನು ತುಳಿಯುವ ಕಷ್ಟವೇ ಇರಲಿಲ್ಲ. ನಿರಾಯಾಸವಾಗಿ ಸಾಗುತ್ತಿದ್ದ. ಆದರೆ, ಅಕಸ್ಮಾತ್ ಆ ಟ್ರಕ್ ಬ್ರೇಕ್ ಬಿದ್ದು ಗಕ್ಕನೆ ನಿಂತರೆ, ಇವನಿಗೆ ಅಪಾಯ ತಪ್ಪಿದ್ದಲ್ಲ. ಅದೇ ಸ್ವಾವಲಂನೆಯಿಂದ ಸೈಕಲ್ ತುಳಿಯುತ್ತಾ ಸಾಗಿದರೆ, ತನ್ನ ಓಟ ಸುರಕ್ಷಿತ. ಹಾಗೆಯೇ ಮೂಢನಂಬಿಗೆಯ ಆಧಾರದ ಮೇಲೆ ಸಾಗುವವನ ಬದುಕಾದರೂ ಹೀಗೆಯೇ! ವೈಜ್ಞಾನಿಕ ಸತ್ಯ ಅಡ್ಡ ಬಂದು, ಆ ನಂಬಿಕೆ ಗಕ್ಕನೆ ನಿಂತರೆ ನಂಬಿದವನಿಗೆ ವಿಪರೀತ ಮಾನಸಿಕ ತ್ರಾಸು. ಅದಕ್ಕಾಗಿ ಸಾಧ್ಯವಾದಷ್ಟೂ ಪ್ರಗತಿಪರ ವೈಚಾರಿಕ ವಿಮರ್ಶೆ ಧಾರ್ಮಿಕ ರಂಗದಲ್ಲಿ ಅತ್ಯಾವಶ್ಯಕ.
ಮಾನವ ಧರ್ಮ
ಧರ್ಮವು ಮಾನವೀಯ ಮೌಲ್ಯಗಳಿಂದ ಕೂಡಿರಬೇಕು. ಮಾನವೀಯತೆ ದಯೆ ಇಲ್ಲದ ಧಾರ್ಮಿಕ ಮೌಲ್ಯಗಳಿಗೆ ಅರ್ಥವೇ ಇರದು. ದೇವರಿಗೆ ಪ್ರಾಣಿ ಬಲಿಯನ್ನು ನೀಡಬೇಕು ಎಂಬ ಹಿಂಸಾಪ್ರಧಾನ ವಿಚಾರವಾಗಲೀ, ಯಜ್ಞ ಯಾಗಾದಿಗಳ ನೆಪದಲ್ಲಿ ಅಜ, ಅಶ್ವಗಳನ್ನು ಬಲಿಗೊಡುವುದಾಗಲೀ ಮಾನವೀಯತೆಯನ್ನು ಬತ್ತಿಸಿ ಬಿಡುವುದು. ದೀನ ದಲಿತರನ್ನು, ಪಾಪಿ ಪತಿತರನ್ನು ಕಂಡು ಮರುಕಭಾವ ತಾಳಿ, ಅವರನ್ನು ತಿರಸ್ಕರಿಸದೆ ಸಂಸ್ಕರಿಸಲೆತ್ನಿಸುವುದು ಮಾನವ ಧರ್ಮ, ಜಗದ ಆಗುಹೋಗು ಜನತೆಯ ಸುಖ-ದುಃಖ ವಿಚಾರಿಸದೆ ಕೇವಲ ಆತ್ಮವಾದಿತ್ವ ಆತ್ಮಾನಂದವನ್ನು ಬೋಧಿಸುವುದು ಮಾನವ ಧರ್ಮವಿನಿಸದು. ದೇವರು-ನಿರಾಕಾರ ಸಮಾಜವು-ಸಾಕಾರ, ಸಾವಯವ ಸಮಾಜದ ಸೇವೆಯ ಮುಖಾಂತರ ದೇವರಸೇವೆ ಮಾಡಲು ಸಾಧ್ಯ ಎಂಬುದು ಮಾನವಧರ್ಮ,
ಇದಕ್ಕೊಂದು ಸುಂದರ ದೃಷ್ಟಾಂತ ಕೊಡುತ್ತೇನೆ. ಒಂದು ಊರಿನಲ್ಲಿ ದೊಡ್ಡ ಸಿರಿವಂತನಿದ್ದ. ಅವನು ಬಹಳ ದರ್ಪದ ಮನುಷ್ಯ; ಅವನ ಮನೆಯಲ್ಲಿ ದಿನನಿತ್ಯ ಮಾಡುವ ಒಂದು ನೇಮವಿದ್ದಿತು. ಅದೆಂದರೆ ಅಡಿಗೆ ತಯಾರಾದೊಡನೆಯೇ ಸಿದ್ಧವಾದ ಅಡಿಗೆಯನ್ನು ಮನೆಯ ಆಳು ಮೀಸಲಾಗಿ ತೆಗೆದುಕೊಂಡು, ಊರ ಹೊರಗಿನ ನದಿಯನ್ನು ದಾಟಿ ಆ ದಂಡೆಗಿದ್ದ ಅವರ ಮನೆದೇವರಾದ ಬಸವಣ್ಣನ ದೇವಾಲಯಕ್ಕೆ ಹೋಗಿ ಎಡೆಕೊಟ್ಟು ಬರುವುದು. ಎಡೆಕೊಟ್ಟು ದೇವಾಲಯದ ಪ್ರಸಾದವನ್ನು ತಂದಾನಂತರ ಎಲ್ಲರೂ ಪ್ರಸಾದವನ್ನು ಸೇವಿಸುವುದು.
ಒಂದು ದಿನ ಮನೆಯ ಸೇವಕ ಸಿದ್ಧಪ್ಪ ಎಡೆಯನ್ನು ತೆಗೆದುಕೊಂಡು ಹೊರಟ. ಅಂದು ಅವನ ಮೈಯಲ್ಲಿ ಸ್ವಾಸ್ಥ್ಯವಿರಲಿಲ್ಲ. ತುಂಬಾ ಜ್ವರ ಬಂದಿತ್ತು. ಜೊತೆಗೆ ಮಳೆ ಧಾರಾಕಾರವಾಗಿ ಸುರಿಯಲು ಆರಂಭಿಸಿತು. ಮಾಲಿಕರ ಆಜ್ಞೆ ಪಾಲಿಸದೆ ಗತ್ಯಂತರವಿಲ್ಲ. ಚಳಿ- ಜ್ವರದಿಂದ ನಡುಗುತ್ತಲೇ ಅವನು ನದಿಯ ದಂಡೆಯತನಕ ಸಾಗಿದ. ಇನ್ನು ಮುಂದೆಸಾಗಲಾರೆ ಎನಿಸಿತು. ಅಲ್ಲೇ ಇದ್ದ ಒಂದು ನೆರಳಿನ ಆಸರೆಯಲ್ಲಿ ಸುಧಾರಿಸಿಕೊಂಡ, ಹಸಿವೆಯೂ ಬಹಳವಾಗಿತ್ತು. ಬಸವಣ್ಣನನ್ನು ಸ್ಮರಿಸಿ, ತಾನೇ ಆ ಎಡೆಯನ್ನು ಅರ್ಧ ತಿಂದು, ಬಾಕಿಯದನ್ನು ತೆಗೆದಿಟ್ಟು ವಿಶ್ರಾಂತಿ ಪಡೆದು ಮನೆಯತ್ತ ಸಾಗಿದ. ಅವನ ಎದೆ ಒಳಗೇ ಅಳುಕುತ್ತಿತ್ತು.
ಅಂದು ರಾತ್ರಿ ಮನೆಯ ಮಾಲಿಕನಿಗೆ ಒಂದು ಕನಸು ಬಿತ್ತು. ಅದರಲ್ಲಿ ಬಸವಣ್ಣ ಕಾಣಿಸಿಕೊಂಡು, ಗೌಡರೇ, ಇವತ್ತು ನಿಮ್ಮ ಎಡೆ ನನಗೆ ನಿಜಕ್ಕೂ ಸಂದಿತು. ಸ್ವೀಕರಿಸಿ ಸಂತೃಪ್ತನಾದೆ.'' ಎಂದು ನುಡಿದ. ಗೌಡರು ದಿಗ್ಗನೆ ಎದ್ದರು. ಅದೇಕೆ ದಿನನಿತ್ಯ ಸಲ್ಲುತ್ತಿರಲಿಲ್ಲವೆ? ಇಂದೇನು ವೈಶಿಷ್ಟ್ಯ ? ಆಳು ಸಿದ್ದಪ್ಪನನ್ನು ಕರೆದರು. “ಸಿದ್ಧಾ, ಇಂದು ಎಡೆಯನ್ನು ಹೇಗೆ ಸಲ್ಲಿಸಿದೆ?'' ಅವನು ಜ್ವರದ ಬೇನೆ, ಅಂತರಂಗಿಕ ಭಯ ಎರಡರಿಂದಲೂ ಗಡಗಡನೆ ನಡುಗಿ ಹೋದ.” “ಸ್ವಾಮಿ, ನನ್ನದು ತಪ್ಪಾಯಿತು!'' ಎಂದ. ನಿಜ ಹೇಳು ಸಿದ್ಧ'' ಎಂದು ಮಾಲಿಕರು ಒತ್ತಾಯಿಸಿದಾಗ ನಡೆದ ಸಂಗತಿಯನ್ನು ಸವಿಸ್ತಾರವಾಗಿ ವಿವರಿಸಿದ. ಆಗ ಗೌಡರಿಗೆ ಅಚ್ಚರಿಯಾಯಿತು. ಸಂಭ್ರಮ- ಆಶ್ಚರ್ಯಗಳಿಂದ ಮೂಕರಾಗಿ ಸಿದ್ಧನ ಕೈಹಿಡಿದು, “ಸಿದ್ಧ, ಇವತ್ತು ನನಗೆ ಬುದ್ಧಿ ಕಲಿಸಿದೆ. 'ಹಸಿದವರು ಉಂಡಾಗ ದೇವನಿಗೆ ತೃಪ್ತಿ, ಮಾನವನ ಮುಖಾಂತರವೇ ದೇವರು ಉಣ್ಣುವುದು ಎಂಬ ಸಿದ್ಧಾಂತವನ್ನು ಬಸವಣ್ಣನವರು ನಿನ್ನ ಮುಖಾಂತರ ಮನಗಾಣಿಸಿದರು. ಎಂದು ನುಡಿದರು.
ಹೀಗೆ ನಿರಾಕಾರನಾದ ದೇವನ ಮುಖವೇ ಸಮಾಜವೆಂದು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವ ಭಾವವನ್ನು ಬೆಳೆಸುವುದೇ ಮಾನವ ಧರ್ಮ.
ರಾಷ್ಟ್ರಧರ್ಮ
ಪ್ರತಿಯೊಬ್ಬ ಮಾನವನಿಗೆ ಜೀವನಾವಶ್ಯಕತೆಗಳು ಬೇಕು. ಅವೇ ಶಿವ ಪಂಚಾಯತಗಳು- ಅನ್ನ, ಅರಿವೆ, ಆಶ್ರಯ. ಔಷಧ ಮತ್ತು ಅರಿವು. ಈ ಐದು ಜೀವನಾವಶ್ಯಕತೆಗಳನ್ನು ಭೇದಭಾವವಿಲ್ಲದೆ ಎಲ್ಲ ಪ್ರಜೆಗಳಿಗೆ, ನಾಗರಿಕರಿಗೆ ಕೊಡಬೇಕು ಎನ್ನುವುದೇ ರಾಷ್ಟ್ರಧರ್ಮ, ಅರಿವು, ಲೌಕಿಕ ಮತ್ತು ಪಾರಮಾರ್ಥ ರಂಗಗಳೆರಡನ್ನೂ ಒಳಗೊಂಡಿರುತ್ತದೆ. ಉಪಜೀವನದ ಮಾರ್ಗ ಕಲ್ಪಿಸುವ ಲೌಕಿಕ ವಿದ್ಯೆಯನ್ನೇ ಆಗಲೀ ಜೀವನದ ವಿದ್ಯೆಯನ್ನೀಯುವ ಪಾರಲೌಕಿಕ ವಿದ್ಯೆಯನ್ನೇ ಆಗಲೀ ಸಮಾನಭಾವದಿಂದ ಕೊಡುವುದು ರಾಷ್ಟ್ರಧರ್ಮ.
ಕೆಲವು ತತ್ತ್ವಜ್ಞಾನಿಗಳು ರಾಷ್ಟ್ರಧರ್ಮ (National religion)ದ ವ್ಯಾಖ್ಯಾನವನ್ನು ಬೇರೊಂದು ರೀತಿಯಲ್ಲಿ ಕೊಡುವರು. ಗೆಲವೆ ಎಡ್ವರ್ಡ್ ಮುಂತಾದ ವ್ಯಾಖ್ಯಾನಕಾರರು ಮತಾಂತರಕ್ಕೆ ಅವಕಾಶವಿಲ್ಲದೆ, ವಿಶಿಷ್ಟ ಭೂ ಭಾಗದಲ್ಲಿ ಜನ್ಮಸಿದವನ್ನು ಮಾತ್ರ ತನ್ನ ಅನುಯಾಯಿಗಳೆನ್ನುವ, ಜನ್ಮದಿಂದ ಮಾತ್ರ ಆ ಧರ್ಮದ ಅನುಯಾಯಿತ್ವ ಪಡೆಯುವ ಯಹೂದಿ ಧರ್ಮ, ವೈದಿಕ ಧರ್ಮ ಮುಂತಾದುವನ್ನು ರಾಷ್ಟ್ರಧರ್ಮದ ಸಾಲಿನಲ್ಲಿ ಸೇರಿಸುತ್ತಾರೆ. ಒಂದು ನೆಲಕ್ಕೆ ಮಾತ್ರ ಸೀಮಿತವಾದ ಧರ್ಮವನ್ನು ರಾಷ್ಟ್ರಧರ್ಮವೆನ್ನದೆ, ಕೆಲವು ನಂಬಿಕೆ-ಮೌಲ್ಯಗಳನ್ನು ಹೊ೦ದಿದುದನ್ನು ರಾಷ್ಟ್ರಧರ್ಮವೆನ್ನುವ ವಿಚಾರಧಾರೆ ಹೇಳಬಯಸುತ್ತೇನೆ ನಾನು. ಧರ್ಮಪ್ರಜ್ಞೆಗೆ ರಾಷ್ಟ್ರಪ್ರಜ್ಞೆಯನ್ನು ಪೋಷಕವಾಗಿ ಮಾಡಿ, ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಂಡು ಸಮಾನ ಸೌಲಭ್ಯ ಕೊಡುವುದನ್ನು ರಾಷ್ಟ್ರಧರ್ಮವೆಂದು ಕರೆಯುವುದರೊಡನೆ, ಕೇವಲ ದೇವರು-ಧರ್ಮ- ಆತ್ಮಗಳ ಚಿಂತನೆ ಮಾತ್ರ ಮಾಡದೆ ರಾಷ್ಟ್ರದ ಹಿತಚಿಂತನೆಯನ್ನೂ ಮಾಡುವ ಧರ್ಮವನ್ನು ರಾಷ್ಟ್ರಧರ್ಮವೆನ್ನುತ್ತೇವೆ. ದೇವ ಪ್ರಜ್ಞೆಯೊಡನೆ ರಾಷ್ಟ್ರಪ್ರಜ್ಞೆಯೂ ಅತ್ಯಾವಶ್ಯಕ ಎಂದು ಬೋಧಿಸುವುದನ್ನು ರಾಷ್ಟ್ರಧರ್ಮವೆನ್ನಬಹುದು.
ವಿಶ್ವಧರ್ಮ
ಒಂದು ಧರ್ಮ ವಿಶ್ವಧರ್ಮವೆನಿಸಿಕೊಳ್ಳಬೇಕಾದರೆ ಅದರಲ್ಲಿ ಕೆಲವಾರು ಲಕ್ಷಣಗಳು ಇರಬೇಕು.
೧. ಗಣಿತಶಾಸ್ತ್ರದಲ್ಲಿ ಕೆಲವು ಸತ್ಯಗಳಿವೆ. ಅವು ಕಾಲದೇಶಕೃತೀತವಾಗಿ ಸತ್ಯವಾಗಿರುತ್ತವೆ. ೨+೨=೪; ಈ ಸತ್ಯವು ಎಲ್ಲ ದೇಶಗಳಲ್ಲಿಯೂ, ಎಲ್ಲ ಭಾಷೆಗಳಲ್ಲಿಯೂ, ಎಲ್ಲ ಜನಾಂಗಕ್ಕೂ ಸತ್ಯ.
ಮೂರು ಕೋನಗಳ ಒಟ್ಟು ಮೊತ್ತ ೧೮೦ ಡಿಗ್ರಿ ಎಂಬುದಾಗಲೀ, H೨Oಎಂಬುದು ನೀರಿನ ರಸಾಯನಿಕ ಸೂತ್ರ ಎಂಬುವಾಗಲೀ ಸತ್ಯಗಳು. ಇದೇ ರೀತಿ ಧಾರ್ಮಿಕ ಮೌಲ್ಯಗಳಲ್ಲಿಯೂ ತ್ರಿಕಾಲಿಕ ಸತ್ಯಗಳಿರುತ್ತವೆ. ಅಂಥ ಸಾರ್ವಕಾಲಿಕ ಸತ್ಯವನ್ನು ಬೋಧಿಸುವುದೇ ವಿಶ್ವಧರ್ಮ. ಅಲ್ಲಿ ಇಲ್ಲಿ ಎಲ್ಲಕಡೆ, ಅವರಿಗೆ ಇವರಿಗೆ ಎಲ್ಲರಿಗೆ, ಆಗ ಈಗ ಎಲ್ಲಾ ಕಾಲಕ್ಕೂ ಅನ್ವಯವಾಗುವ ಮೌಲ್ಯಗಳನ್ನು ಬೋಧಿಸುವುದೇ ವಿಶ್ವಧರ್ಮ.
೨. ಸ್ವತಂತ್ರವಾಗಿ ವಿಚಾರಮಾಡಲು ಕಲಿಸುವುದು; ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದು, ಎಲ್ಲರನ್ನೂ ಧರ್ಮ ಸಂಸ್ಕಾರಕೊಟ್ಟು ಇಂಬಿಟ್ಟುಕೊಳ್ಳಲು ಸಿದ್ಧವಿರುವುದು ವಿಶ್ವಧರ್ಮ, 'ಹುಟ್ಟಿನಿಂದ ಎಲ್ಲರೂ ಸಮಾನರು, ಗುಣ ನೀತಿಗಳಿಂದ ಹಿರಿಯತನ, ಕುಲತನ ಬರುತ್ತದೆ. ಆಸಕ್ತಿ ಇರುವವರೆಲ್ಲರಿಗೊ ಧರ್ಮ ಸಂಸ್ಕಾರವಿತ್ತು ಮೇಲೆತ್ತಿಕೊಳ್ಳಬೇಕು' ಎಂಬುದೇ ವಿಶ್ವಧರ್ಮ.
೩. ವಿಶ್ವಕುಟುಂಬತ್ವವನ್ನು ಕಲಿಸುವುದು ವಿಶ್ವಧರ್ಮ. ಹೆತ್ತ ತಾಯಿ ತಂದೆಯವರನ್ನು ಗೌರವಿಸಿ ತನ್ನ ಸಹೋದರ-ಸಹೋದರಿಯರನ್ನು ಸ್ನೇಹಭಾವನೆಯಿಂದ ಕಾಣುವುದು ಗೃಹಕುಟುಂಬತ್ವ ರಾಷ್ಟ್ರವನ್ನು ತಾಯಿ ಎಂದು ಭಾವಿಸಿ ರಾಷ್ಟ್ರದ ಎಲ್ಲ ಪ್ರಜೆಗಳನ್ನು ಸಮಾನಭಾವದಿಂದ, ಸಹೋದರ ಭಾವನೆಯಿಂದ ಕಾಣುವುದು ರಾಷ್ಟ್ರ ಕುಟುಂಬ ದೇವನನ್ನೇ ತಾಯಿ-ತಂದೆಯೆಂದು ಭಾವಿಸಿ ಎಲ್ಲ ಮಾನವ ಕುಲಕೋಟಿಯನ್ನು ಸಹೋದರ ಭಾವನೆಯಿಂದ ಕಾಣುವುದು ವಿಶ್ವಧರ್ಮ; ದೇವನ ಪಿತೃತ್ವ ಮತ್ತು ಮಾನವ ಭ್ರಾತೃತ್ವವನ್ನು ಸಾರುವುದು ವಿಶ್ವಧರ್ಮ
ವಿಶ್ವಧರ್ಮ ಪ್ರವಚನ ಎಂದು ಕರೆಯುವುದೇಕೆ?
"ವಿಶ್ವಧರ್ಮ ಪ್ರವಚನ'' ಎಂದು ನಾವು ಮಾಡುವ ಪ್ರವಚನಕ್ಕೆ ಕರೆಯುತ್ತೇವೆ. ಎಲ್ಲರಿಗೂ ಅನ್ವಯವಾಗುವ ತತ್ತ್ವಗಳನ್ನು ಹೇಳುವುದು; ಹುಟ್ಟಿನಿಂದ ಎಲ್ಲರೂ ಸಮಾನರೆಂದು ಸಾರಿ, ಗುಣಪ್ರಧಾನ ಸಮಾಜ ವ್ಯವಸ್ಥೆಯನ್ನು ಎತ್ತಿ ಹಿಡಿಯವುದು, ಧಾರ್ಮಿಕ ಸ್ವಾತಂತ್ರ್ಯ-ಸಮಾನತೆಗಳನ್ನು ಸಾರುವುದು ನಮ್ಮ ಪ್ರವಚನದ ಗುರಿ.
ನಮ್ಮ ಪ್ರವಚನ ಬುದ್ಧಿ-ಭಾವನೆಗಳೆರಡಕ್ಕೂ ಆಹಾರ, ಸಾಂತ್ವನ ನೀಡುವುದು. ಕೆಲವು ಆಣೆಕಟ್ಟುಗಳಲ್ಲಿ ವಿವಿಧ ಬಗೆಯ ಕಾರ್ಯಕಲಾಪ ನಡೆಯುತ್ತವೆ. ಹೇಮಾವತಿ ಮುಂತಾದವು ಕೇವಲ ನೀರಾವರಿ ಯೋಜನೆಗಳು, ಕೃಷಿಯ ಕಡೆಗೆ ಗಮನ ನೀಡುತ್ತವೆ. ಶರಾವತಿ ಮುಂತಾದವು ಕೇವಲ ವಿದ್ಯುತ್ ಯೋಜನೆಗಳು, ಇನ್ನು ಕೆಲವು ಕೃಷಿ-ವಿದ್ಯುತ್ ಉತ್ಪಾದನೆ ಎರಡಕ್ಕೂ ಸಹಕಾರಿಯಾಗಿವೆ. ಅದೇ ರೀತಿ ಕೆಲವರ ಭಾಷಣ ಪ್ರವಚನಗಳು ಕೇವಲ ವಿಚಾರದ ವಿದ್ಯುತ್ತನ್ನು ಉತ್ಪಾದಿಸುತ್ತವೆ. ಇನ್ನು ಕೆಲವರ ಪ್ರವಚನ-ಕೀರ್ತನೆಗಳು ಕೇವಲ ಭಕ್ತಿಯ ಬೆಳಕನ್ನು ಬೆಳಸುತ್ತದೆ. ನಮ್ಮ ಪ್ರವಚನದ ವೈಶಿಷ್ಟ್ಯವೆಂದರೆ ಇಲ್ಲಿ ವೈಚಾರಿಕತೆಯ ವಿದ್ಯುದುತ್ಪಾದನೆ, ಭಕ್ತಿಯ ಬೆಳಸು ಎರಡೂ ಉಂಟು. ಇದರಿಂದಾಗಿ ತಾತ್ವಿಕ ವಿಶ್ಲೇಷಣೆಯಿಂದ ಬುದ್ಧಿಜೀವಿಗಳಿಗೂ ತೃಪ್ತಿಯಾಗುತ್ತದೆ. ಭಾವಪ್ರಧಾನ ಮೌಲ್ಯಗಳಿಂದ ಭಾವಜೀವಿಗಳಿಗೂ ತೃಪ್ತಿಯಾಗುತ್ತದೆ. ಮನುಷ್ಯನ ಜೀವನದ ಬಂಡಿ ಓಡಲು ಬುದ್ದಿ-ಭಾವಗಳೆರಡರ ಹಳ್ಳಿಗಳೂ ಬೇಕು. ಇವನ ಜೀವನದ ವೃಕ್ಷಸುಳಿದೆಗೆದು ಬೆಳೆಯಲು ಭಕ್ತಿಯ ಸುಜಲ, ಸುಜ್ಞಾನದ ರವಿಕಿರಣ ಎರಡೂ ಬೇಕು.
ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ವೈಜ್ಞಾನಿಕ ಯುಗದಲ್ಲಿ ಧರ್ಮದ ಅವಶ್ಯಕತೆ | ಕಾಯಕವೇ ಕೈಲಾಸ |