Previous ಇಷ್ಟಲಿಂಗ ಮತ್ತು ಕಂಥೆ ಇಷ್ಟಲಿಂಗ ಕಂಥೆ/ಕಂತೆಯ ಆಕಾರ Next

ಮಿದುಳಿನಲ್ಲಿ ದೇವರಿದ್ದಾನೆ?

*

GOD in Brain
ಮಿದುಳಿನಲ್ಲಿ ದೇವರಿದ್ದಾನೆ ಈ ಮಿದುಳಿಗೆ ಹೃದಯವೆಂದಿದ್ದಾರೆ, ಹೃದಯ ಮಧ್ಯದಲ್ಲಿ ಪರಮಾತ್ಮನಿರುತ್ತಾನೆ. ಆದರೆ ಇದು ರಕ್ತ ಪರಿಚಲನಯೆ ಹೃದಯ(Heart)ವಲ್ಲ. ನಾನಿಕಾಗ್ರ, ಚೌದಳ, ಭ್ರೂಮಧ್ಯ, ತ್ರಿಕೂಟ, ತ್ರಿಕೋಣ, ಕರಕಮಲ, ಬ್ರಹ್ಮರಂಧ್ರ, ಕದಳಿ, ಅಣುಚಕ್ರ, ಆಧಾರ ಸ್ಥಾನ, ಹೃದಯ ಮುಂತಾದ ಹೆಸರುಗಳಿಂದ ಶರಣರು ತಮ್ಮ ವಚನಗಳಲ್ಲಿ ಸೂಚಿಸಿದ್ದಾರೆ. ಚಿತ್ರದಲ್ಲಿ ಕಾಣಿಸಿದ ಹಾಗೆ ಕರಸ್ಥಲದ ಲಿಂಗವೂ ಕೂಡಾ ಅದೇ ಆಕಾರದ್ದಾಗಿದೆ. ಈ ಹೃದಯ ಮಧ್ಯದಲ್ಲಿರುವ ನಿರಾಕಾರ ಲಿಂಗವು ಪ್ರತಿಯೊಬ್ಬರ ಎಡಗೈ ಅಂಗುಷ್ಟದ ಆಕಾರದಷ್ಟಿರುತ್ತದೆ. ಅಂದರೆ ಎತ್ತರ ಅಗಲ ಹಾಗೂ ತಳ ಕೂಡಾ ಇರುತ್ತದೆ. ಇದನ್ನೇ ಶ್ರೀಗುರು ಬಸವಣ್ಣನವರು ಸಾಕಾರರೂಪಕ್ಕೆ ತಂದು ಇಷ್ಟಲಿಂಗ ರೂಪದಲ್ಲಿ ಜಗತ್ತಿಗೆ ಕೊಟ್ಟಿರುತ್ತಾರೆ.
Brain Thalamus pictures: Pic-1, Pic-2, Pic-3, Pic-4, Pic-5, Pic-6, Pic-7

ನಿರಾಕಾರದ ಮೂರ್ತಿಯ ಆಕಾರಕ್ಕೆ ತಂದೆಯಲ್ಲಾ ಬಸವಾ!
ಆಕಾರದ ಮೂರ್ತಿಯ ಹೃದಯಕುಂಜದಲ್ಲಿ ವಾಸಗೊಂಡು
ತೋರಿದೆಯಲ್ಲಾ ಬಸವಾ!
ಈ ಆಕಾರಕ್ಕೆ ತಂದು, ಭಕ್ತಿಯನನುಗೈದು,
ದಿಗುದಶದಲ್ಲಿ ಬೆಳೆದೆಯಲ್ಲಾ ಬಸವಾ?
ಇನ್ನಾಕಾರವ ನಿರಾಕಾರದಲ್ಲಿ ಅನುಗೊಳಿಸಬೇಕೆಂದು,
ಕಪಿಲಸಿದ್ಧಮಲ್ಲಿಕಾರ್ಜುನನ ಹೃದಯದಲ್ಲಿ
ಮರೆಯಾದೆಯಲ್ಲಾ ಬಸವಾ! /೧೮೩೯ [#]

ಕುಂಜ = ಲತಾಮಂಟಪ, (Grove Of Trees); ದಿಗುದಶ = ಎಲ್ಲಾ ದಿಕ್ಕುಗಳಲ್ಲಿ

ಪ್ರತಿಯೊಬ್ಬರ ಶರೀರದಲ್ಲಿ ಅನೇಕ ಕ್ರಿಯೆಗಳು ಜುರುಗುತ್ತಿರುತ್ತವೆ. ಉದಾ: ಮುಖ್ಯವಾಗಿ ಉಸಿರಾಟ, ಹೃದಯ ಬಡಿತ, (ರಕ್ತದ ಒತ್ತಡ), ಪಚನ ಕ್ರಿಯೆ, ನೋಡುವುದು ಮಾತನಾಡುವುದು, ಕೇಳುವುದು ಹೀಗೆ ಮುಂತಾದ ಕ್ರಿಯೆಗಳು ನಡೆದೇ ಇರುತ್ತವೆ. ಈ ಕ್ರಿಯೆಗಳು ನಡೆಯಬೇಕಾದರೆ ಶಕ್ತಿಯ ಅವಶ್ಯಕತೆ ಅಥವಾ ಮನದ ಅವಶ್ಯಕತೆ ಇದೆ. ಇಲ್ಲಿ ಮನಸ್ಸೆಂದರೆ ಮನೋವಿಜ್ಞಾನಿಗಳು ಹೇಳುವಂತೆ ಒಂದು ಶಕ್ತಿ ಅಥವಾ ಚೈತನ್ಯ ಅದು ಕಾಣಿಸದೆ ಇದ್ದರೂ ಅದು ನಮ್ಮ ದೇಹದಲ್ಲಿದೆ ಎಂದು ಒಪ್ಪಿಕೊಳ್ಳಲೇಬೇಕೆಂದು ಹೇಳಿದ್ದಾರೆ.

ಮನಸ್ಸು ಎನ್ನುವುದು ಸ್ಥೂಲ ಶರೀರದ ಒಳಗೆ ಇರುವ ಒಂದು ಸೂಕ್ಷ್ಮವಾದ ಅಂಗ. ಹಾಗೆ ನೋಡಿದರೆ ಈ ಸ್ಥೂಲ ಶರೀರವೆನ್ನುವುದು ಅದರ ಹೊರಗಿನ ಹೊದಿಕೆ ಅಥವಾ ಕವಚ ಮಾತ್ರ, ಮನಸ್ಸೆಂಬುದು ಶರೀರದ ಸೂಕ್ಷ್ಮತರ ಭಾಗವಾಗಿರುವದರಿಂದ ದೇಹ ಹಾಗೂ ಮನಸ್ಸುಗಳೆರಡೂ ಒಂದು ಮತ್ತೊಂದರ ಮೇಲೆ ಪರಿಣಾಮ ಬೀರುತ್ತವೆ. ಈ ಕಾರಣದಿಂದಲೇ ಹಲವು ವೇಳೆ ಶಾರೀರಕ ಅಸ್ವಾಸ್ಥ್ಯ ಮನಸ್ಸಿನ ಮೇಲೆ ಹಾಗೂ ಮಾನಸಿಕ ಅಸ್ವಾಸ್ಥ್ಯ ಶರೀರದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುತ್ತವೆ.
ಶರಣ ಸಂಗಣ್ಣನವರ ಒಂದು ವಚನದಲ್ಲಿ -

ಅಷ್ಟೋತ್ತರಶತವ್ಯಾಧಿಗಳ ಧರಿಸಿಕೊಂಡಿಪ್ಪುದು ಆತ್ಮನೊ, ಘಟನೊ ?
ಆತ್ಮನೆಂದಡೆ ಸಾಯದು ಚಿತ್ತ ,
ಘಟವೆಂದಡೆ ಆತ್ಮನಿಲ್ಲದೆ ಅರಿಯದು ದೇಹ.
ಇಂತೀ ಒಂದ ಕಳೆದು, ಒಂದಕ್ಕೆ ಔಷಧಿಯ ಕೊಟ್ಟಿಹನೆಂದಡೆ,
ಆ ಎರಡರ ಸಂಗದಿಂದ ರುಜೆ ಪ್ರಮಾಣು.
ಇಂತೀ ಶರೀರಾತ್ಮ ಆದಿಯಾಗಿ ಬಂದ ವ್ಯಾಧಿಗೆ
ನಾನೊಂದು ಔಷಧಿಯ ಭೇದವ ಹೇಳಿಹೆ.
ಆಧಾರದಲ್ಲಿಪ್ಪ, ಮೂಲಿಕೆಯ ಬೇರನರದು, ಐದಿಂದ್ರಿಯವ ಕೂಡಿಕೊಂಡು.
ಮೂರು ಮುಟ್ಟದ ತಟ್ಟೆಯಲ್ಲಿ ಬೇಗ ತೆಗೆದುಕೊಳ್ಳಿ.
ಆ ಮದ್ದು ವಾಂತಿಗೆ ಸಲ್ಲ, ವಿರೋಚನವಿಲ್ಲ.
ನಾನಾ ವೈದ್ಯರ ಭೇದಗಾಹಿನ ಕ್ರಮವಲ್ಲ.
ಇದು ಸಿದ್ಧಾಂತ ಮೂಲಿಕೆ, ಇದ ಸಾಧಿಸಿಕೊಳ್ಳಿ.
ಎಂದೆಂದಿಗೂ ರುಜೆಯಿಲ್ಲ, ಸಂದುಸಂಶಯವಿಲ್ಲ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿ. /೧೧೦ [#]

ಮೇಲಿನ ವಚನದಲ್ಲಿ ಸೂಚಿಸಿರುವಂತೆ ನೂರೆಂಟು ರೋಗಾದಿಗಳು ಶರೀರಕ್ಕೆ ಬರುತ್ತವೆಯೇ ಅಥವಾ ಆತ್ಮನಿಗೆ ಬರುತ್ತವೆಯೇ ಎಂದು ಪ್ರಶ್ನೆ ಹಾಕಿಕೊಂಡು, ಇಲ್ಲಿ ಆತ್ಮನಿಗೆ ರೋಗಾದಿಗಳು ಬರುತ್ತವೆ ಎಂದರೆ ಆತ್ಮನಿಗೆ ಸಾವೆ ಇಲ್ಲ ಎಂದಾಗ ರೋಗಾದಿಗಳು ಬರಲು ಸಾಧ್ಯವೇ ಇಲ್ಲ. ಇನ್ನು ದೇಹಕ್ಕೆ ರೋಗಾದಿಗಳು ಬರುತ್ತವೆ ಎಂದರೆ ಆತ್ಮನಿಲ್ಲದ ದೇಹದ ಕೆಲಸವಿಲ್ಲ. ಹೀಗೆ ಒಂದು ಬಿಟ್ಟು ಒಂದಕ್ಕೆ ರೋಗವು ಬರುತ್ತದೆ ಎಂದರೆ ಆ ಎರಡರ ಸಂಗದಿಂದ ರೋಗ ಬರುತ್ತದೆ ಎಂದು ಪ್ರಮಾಣಮಾಡಿ ತಿಳಿಸಿದ್ದಾರೆ. ಇಂತೀ ಶರೀರಾತ್ಮ ಆದಿಯಾಗಿ ಬಂದ ರೋಗಗಳಿಗೆ ಅವರೊಂದು ಔಷಧಿಯ ಭೇದವನ್ನು ಸೂಚಿಸಿದ್ದಾರೆ.

ಆಧಾರದಲ್ಲಿಪ್ಪ ಮೂಲಿಕೆಯ ಬೇರು, ಎಂದರೆ, ನಾವು ಸ್ವಾಭಾವಿಕವಾಗಿ ನೋಡಿದಾಗ ಮರದ ಬೇರುಗಳು ಭೂಮಿಯಲ್ಲಿ ಹರಡಿಕೊಂಡಿರುತ್ತವೆ. ಹಾಗೆಯೇ ಕಾಂಡ, ಕೊಂಬೆ, ಎಲೆ ಇವುಗಳು ಭೂಮಿಯ ಮೇಲ್ಗಡೆ ಬಂದಿರುತ್ತವೆ. ಆದರೆ ನಮ್ಮ ಶರೀರದಲ್ಲಿ ಮಿದುಳಿನಲ್ಲಿಯೇ ಬೇರೂರಿತ್ತವೆ. ಇಲ್ಲಿ ತಲೆ ಕೆಳಗಾಗಿ ಮರವಿರುವುದರಿಂದ ಬೇರುಗಳು ನಮ್ಮ ಮಿದುಳಿನಲ್ಲಿ ಇರುತ್ತವೆ. ಪರಮಾತ್ಮನೇ ಒಂದು ಎರಡಾಗಿ, ಅಂದರೆ ಅಂಗಸ್ಥಲ-ಲಿಂಗಸ್ಥಲವೆಂದು ಎರಡಾಗಿ, ಎರಡು ಮೂರಾಗಿ, ಮೂರು ಆರಾಗಿ, ಆರು ಮೂವತ್ತಾರಾಗಿ ಮೂವತ್ತಾರು ಎರಡನೂರಾ-ಹದಿನಾರಾಗಿ ಹೀಗೆ ಮಿದುಳಿನಲ್ಲಿ ತಕ್ಕಂತಹ ಪರಮಾತ್ಮನ ಚೈತನ್ಯವು ಬೊಡ್ಡೆಯಾಗಿ, ರೆಂಬೆಗಳಾಗಿ ಇಡೀ ಶರೀರವನ್ನೇ ಪಸರಿಸಿರುತ್ತದೆ. ಆದ್ದರಿಂದ ಇಲ್ಲಿ ಆಧಾರ (ಮಿದುಳು)ದಲ್ಲಿರುವ ಮೂಲಿಕೆಯ ಬೇರನ್ನು ತಿಳಿದುಕೊಂಡು ಐದು ಇಂದ್ರಿಯಗಳ ಸಮೇತವಾಗಿ ಮೂರು ಮುಟ್ಟದ ತಟ್ಟೆಯೆಂದರೆ ಕರಸ್ಥಲದ ಇಷ್ಟಲಿಂಗ, ಏಕೆಂದರೆ ಶರೀರಕ್ಕೂ ಮೂರು ದೋಷಗಳಿರುತ್ತವೆ, ವಾತ ಪಿತ್ತ, ಕಫ, ಆತ್ಮಕ್ಕೂ ಮೂರು ಮಲತ್ರಯಗಳಿವೆ. ಆಣವ, ಮಾಯಾ, ಕಾರ್ಮಿಕ ಮಲತ್ರಯಗಳೆಂದು. ಇವು ಇಷ್ಟಲಿಂಗಕ್ಕೆ ಇರುವುದಿಲ್ಲ ಅದಕ್ಕಾಗಿ ಮೂರು ಮುಟ್ಟಿದ ತಟ್ಟೆಯೆಂದು ಪ್ರಯೋಗಿಸಿದ್ದಾರೆ.

ಈ ಇಷ್ಟಲಿಂಗವೆ ಸಿದ್ಧಾಂತ ಮೂಲಿಕೆಯೆಂದೂ, ಇದಕ್ಕೆ ವಾಂತಿ ಭೇದಿ ಬಾಧಿಸುವುದಿಲ್ಲವೆಂದೂ ಹಾಗೂ ಅನೇಕ ವೈದ್ಯರು ಉಪಚಾರ ಮಾಡುವಂತಾ ವಿವಿಧ ಔಷಧಿಗಳ ವಿಚಾರ ಇಲ್ಲಿ ಇರುವುದಿಲ್ಲವೆಂದು ತಿಳಿಸಿ ಇದನ್ನು ಬೇಗ ಸಾಧಿಸಿಕೊಳ್ಳಿರೆಂದು ತಿಳಿಸುತ್ತಾರೆ. ಎಂದೆಂದಿಗೂ ರೋಗಾದಿಗಳು ಬರುವುದಿಲ್ಲವೆಂದೂ ಸಂದುಸಂಶಯವೇ ಇಲ್ಲವೆಂದು ಸೂಚಿಸಿದ್ದಾರೆ.

ಊರ್ಧ್ವ ಮುಖಮೂಲ ಅಧೋಶಾಖೆಯಾದ
ವೃಕ್ಷದ ಮೂಲದಲ್ಲಿ ಒಬ್ಬ ಯೋಗಿಯಿದ್ದಾನೆ.
ಆ ಯೋಗಿಯ ಕೈಯಲ್ಲೊಂದು ಅಮೃತವ ಫಲವ ನೋಡಾ.
ಆ ಫಲವ ಮೆದ್ದವರೆಲ್ಲ ಅಮರರಾದುದ ಕಂಡು
ನಾನು ಬೆರಗಾದೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ. /೧೦೦೧ [#]

ಶರೀರವೆಂಬ ವೃಕ್ಷದಲ್ಲಿ ಮೇಲ್ಗಡೆ ಮಿದುಳಿನಲ್ಲಿ ಬೇರು ಇದೆ. ಕೆಳಗಡೆ ಬಡ್ಡೆ, ಟೊಂಗೆಗಳಿದ್ದಾವೆಂದು ಹೇಳಿದ್ದಾರೆ. ವೃಕ್ಷದ ಮೂಲವಾದ ಬೇರಿನ ತುದಿಯಲ್ಲಿ ಆತ್ಮನಿದ್ದಾನೆ. (ಪೀನಿಯಲ್ ಬಾಡಿ) ಮಿದುಳಿನ ಮಧ್ಯಭಾಗದಲ್ಲಿರುವ ಈ ಪೀನಿಯಲ್ ಗ್ರಂಥಿಯಲ್ಲಿಯೇ ಶರೀರದಲ್ಲಿ ಕೇಂದ್ರ ನರಮಂಡಲವು ವ್ಯಾಪಿಸಿದೆ. ಶರಣರು ಅಷ್ಟಾವರಣವೇ ಅಂಗ, ಪಂಚಾಚಾರವೇ ಪ್ರಾಣ, ಷಟ್‍ಸ್ಥಲವೇ ಆತ್ಮವೆಂದಿದ್ದಾರೆ. ಷಟ್‍ಸ್ಥಲವೆಂದರೆ ಕೇಂದ್ರನರಮಂಡಲವಾಗಿರುತ್ತದೆ ಅಂದರೆ ಮಿದುಳಿನಲ್ಲಿರುವ ಚೈತನ್ಯವು ಚಕ್ರಗಳ (ನರಗಂಟಿನ ಸಾಲು) ಮೂಲಕ ಇಡೀ ಶರೀರವನ್ನೇ ಪಸರಿಸಿದೆ.

ಈ ಪಿನಿಯಲ್ ಬಾಡಿಯಲ್ಲಿ ಆತ್ಮನಿದ್ದಾನೆ. ಆ ಪೀನಿಯಲ್ ಗ್ರಂಥಿಯಿಂದ ಕತ್ತಲಲ್ಲಿ (ಅಂದರೆ ಮಧ್ಯರಾತ್ರಿಯಲ್ಲಿ) ಹೆಚ್ಚು ಹೆಚ್ಚಾಗಿ ಅಮೃತ (ಮೆಲಟಾನಿನ್) ಸ್ರವಿಸುತ್ತದೆ. ಇತ್ತೀಚಿನ ವಿಜ್ಞಾನಿಗಳು ಪೀನಿಯಲ್ ಗ್ರಂಥಿಯನ್ನು ಸಂಶೋಧಿಸಿ ಅದು ಕತ್ತಲಲ್ಲಿ ಸ್ರವಿಸುವ ಅಮೃತ (ಮೆಲಿಟಾನಿನ್) ಶರೀರದ ರೋಗಾದಿಗಳನ್ನು ಕಳೆದು ಆಯುಷ್ಯವನ್ನು ಹೆಚ್ಚಿಸುತ್ತದೆಂದು ಇತ್ತೀಚಿನ ವಿಜ್ಞಾನಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೇ ಸ್ವತಂತ್ರ ಸಿದ್ಧಲಿಂಗೇಶ್ವರರು ಮೇಲಿನಂತೆ ಹೇಳಿದ್ದಾರೆ.

ಕ್ವಾಂಟಮ್ ಎಂಬ ವಿಜ್ಞಾನಿ ಈ ರೀತಿ ತಿಳಿಸುತ್ತಾರೆ "ರೋಗದ ಮೂಲ ಬೇರೆ, ರೋಗದ ಸ್ವರೂಪ ಬೇರೆ ಎಂಬುದು ಈಗೀಗ ಸ್ಪಷ್ಟವಾಗತೊಡಗಿದೆ. ರೋಗದ ಮೂಲವನ್ನು ಅರ್ಥಮಾಡಿಕೊಳ್ಳದೆ ಅದರ ಸ್ವರೂಪಕ್ಕೆ ಮಾತ್ರ ಚಿಕಿತ್ಸೆ ಮಾಡಲು ಹೋದರೆ ರೋಗ ಬೇರೊಂದು ಸ್ವರೂಪದಿಂದ ಪ್ರಕಟವಾಗುತ್ತದೆ". ಎನ್ನುತ್ತಾರೆ. ಹನ್ನೆರಡನೆ ಶತಮಾನದಲ್ಲಿ ಶರಣರು ಅದನ್ನು ಕಂಡುಕೊಂಡು ಇಷ್ಟಲಿಂಗಸಾಧನೆಯ ಮೂಲಕ ತನು-ಮನಗಳಿಗೆ ಬರತಕ್ಕಂತಾ ರೋಗಾದಿಗಳನ್ನು ಹಾಗೂ ದುಷ್ಟವಿಚಾರಗಳನ್ನು ಕಳೆದುಕೊಳ್ಳುವ ವಿಧಾನವನ್ನು ತಿಳಿಸಿದ್ದಾರೆ.

ಗ್ರಂಥ ಋಣ:
೧) ಲಿಂಗವಂತನ ಲಿಂಗಪ್ರಭೆ, ಲೇಖಕರು: ಶ್ರೀ ಬಸವರಾಜ ಗುರುಸಿದ್ದಪ್ಪ ಮೆಣಸಿನಕಾಯಿ, ಪಾರು ಪ್ರಕಾಶನ, ಗದಗ- ೨೦೦೮.
೨) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು, ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
[#] ಈ ತರಹದ ಸಂಖ್ಯೆಯ ವಿವರ: -3/1545:- ಸಮಗ್ರ ವಚನ ಸಂಪುಟ -3, ವಚನ ಸಂಖ್ಯೆ-1545 (೧೫ ಸಮಗ್ರ ವಚನ ಸಂಪುಟಗಳು, ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)

ಪರಿವಿಡಿ (index)
Previous ಇಷ್ಟಲಿಂಗ ಮತ್ತು ಕಂಥೆ ಇಷ್ಟಲಿಂಗ ಕಂಥೆ/ಕಂತೆಯ ಆಕಾರ Next