Previous ಸಂಕ್ಷಿಪ್ತ ಪೂಜಾ ವಿಧಾನ ದೇವರ ಕಲ್ಪನೆ Next

ವಿವರವಾದ ಇಷ್ಟಲಿಂಗ ಪೂಜಾ ವಿಧಾನ

✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

ಇಷ್ಟಲಿಂಗ ಪೂಜಾ ವಿಧಾನ

ಪೂಜಾಗೃಹ ಪ್ರವೇಶ :

ಲಿಂಗಪೂಜಾ ಗೃಹ ಪ್ರವೇಶಿಸುವಾಗ ಅಕ್ಕಮಹಾದೇವಿಯ ಕೆಳಗಿನ ವಚನವನ್ನು ಹಾಡುತ್ತಾ ಒಳಗೆ ಹೋಗಬೇಕು. ಕಲ್ಯಾಣವನ್ನು ಪ್ರವೇಶಿಸಬೇಕಾದರೆ ಇಂಥ ಸದ್ಗುಣಗಳು ಇರಬೇಕೆಂದು ಅಕ್ಕನ ಅಭಿಮತ. ಕಲ್ಯಾಣರಾಜ್ಯವೆಂದರೆ ದೇವನ ರಾಜ್ಯ ; ಅಲ್ಲಿಗೆ ಅಥವಾ ದೇವನ ಪೂಜಾಮಂದಿರದಲ್ಲಿ ಹೋಗಬೇಕಾದರೂ ಈ ಸದ್ಗುಣಗಳಿರಬೇಕು. ಈ ವಚನದಂತೆ ಅಂತರಂಗ ಬಹಿರಂಗ ಶುದ್ದಿಗಳು ಪೂಜಾಗೃಹವನ್ನು ಪ್ರವೇಶಿಸುವಾಗ ಅಳವಡಬೇಕು.

ಕಲ್ಯಾಣವೆಂದುದಿನ್ನಾರಿಗೂ ಹೋಗಬಾರದು ಅಸಾಧ್ಯವಯ್ಯ!
ಆಸೆ ಆಮಿಷವನಳಿದವರಿಗಲ್ಲದೆ
ಕಲ್ಯಾಣದತ್ತಲಡಿಯಿಡಬಾರದು.
ಒಳಹೊರಗು ಶುದ್ಧವಾದವರಿಗಲ್ಲದೇ ಕಲ್ಯಾಣವ
ಹೊಗಬಾರದು. ನಾನೆಂಬುದ ಹರಿದವರಿಗಲ್ಲದೆ
ಕಲ್ಯಾಣವ ಹೊಗಬಾರದು. ಒಳಗೆ ತಿಳಿದು
ಚನ್ನಮಲ್ಲಿಕಾರ್ಜುನಂಗೊಲಿದು ಉಭಯಲಜ್ಜೆಯಳಿದೆನಾಗಿ
ಕಲ್ಯಾಣವ ಕಂಡು ನಮೋ ನಮೋ ಎನುತಿರ್ದೆನು. -ಅಕ್ಕಮಹಾದೇವಿ

ಆಸನ ಸ್ವೀಕಾರ :

ಬಿಳಿ ಕಂಬಳಿಯ ಗದ್ದುಗೆಯನ್ನು ಹಾಸಿ ಅಥವಾ ಯಾವುದೇ ಶುಭ್ರ ಆಸನ ಹಾಕಿ ಪೂಜಾ ಸಾಹಿತ್ಯವನ್ನೆಲ್ಲಾ ಅಣಿ ಮಾಡಿಕೊಂಡು ನಾಲ್ಕೂ ದಿಕ್ಕುಗಳಿಗೂ ಶುದ್ಧೋದಕವನ್ನು ಸಿಂಪಡಿಸಿ, ಮಧ್ಯದಲ್ಲಿ ವಿಭೂತಿಯಿಂದ ಪಂಚಕೋನ ಪ್ರಣವವ ಬರೆದು ಗದ್ದುಗೆಯ ಮೇಲೆ ಲಿಂಗಧ್ಯಾನಾಸಕ್ತನಾಗಿ ಕುಳಿತುಕೊಳ್ಳಬೇಕು.

ಹಾಗೆ ಕುಳಿತುಕೊಳ್ಳುವಾಗ ಈ ಪದ್ಯವನ್ನು ಹೇಳಬೇಕು :

ಲಿಂಗಾಂಗ ಯೋಗವದು ಎನಗೆ ಸಿದ್ಧಿಸಲಿ
ಲಿಂಗದೇವನ ಒಲುಮೆ ತಾ ಹರಿದು ಬರಲಿ
ಪಂಚಕೋನ ಪ್ರಣವ ಆಸನದಿ ಬರೆದು
ಆಸನವ ಸ್ವೀಕರಿಪೆ ಗುರು ಬಸವನ ನೆನೆದು ||

ಸುಖಾಸನ, ಸ್ವಸ್ತಿಕಾಸನ, ಸಿದ್ಧಾಸನ ಮತ್ತು ಪದ್ಮಾಸನ - ಈ ನಾಲ್ಕರಲ್ಲಿ ಯಾವುದಾದರೊಂದನ್ನು ಉಪಯೋಗಿಸಿಕೊಂಡು ಪೂಜೆ-ಧ್ಯಾನಗಳನ್ನು ಮಾಡಬಹುದು.

ಕುಳಿತುಕೊಂಡ ನಂತರ ದೀಪವನ್ನು ಹಚ್ಚಿಕೊಳ್ಳಬೇಕು

ಬ್ರಹ್ಮಾಂಡದೊಳಗಣ ತಿಮಿರವು ಹರಿವಂತೆ
ಪಿಂಡಾಂಡದೊಳಗಣ ಮರೆವೆ ತಾ ಹರಿಯಲಿ
ಅರಿವಿನ ಸಂಕೇತವಾಗಿ ತಾ ಉರಿಯಲಿ
ಎಂದೆನುತ ದೀಪವನು ನಾನು ಹೊತ್ತಿಸುವೆ ||

ದಿಕ್ ಬಂಧನ :

ದೇವಪೂಜಾ ಅನುಸಂಧಾನದ ಕಾಲದಲ್ಲಿ ಹೊರಗಿನ ಅಡ್ಡಿ ಆತಂಕಗಳಿಗಿಂತ ಮನಸ್ಸಿನ ವೃತ್ತಿಗಳನ್ನು ಅಡಗಿಸುವುದು ಮಹತ್ವದ್ದಾಗಿರುವುದರಿಂದ ಕೆಳಗಿನ ವಚನಗಳನ್ನು ಹಾಡುತ್ತಾ ಅವುಗಳ ಭಾವವನ್ನು ಅಳವಡಿಸಿಕೊಂಡರೆ ಸಾಕು.

ಸಕಲೇಂದ್ರಿಯಂಗಳಲ್ಲಿ ವಿಕಾರಿಸುವ ಮನವ
ಸೆಳೆದು ನಿಂದಾತನೇ ಸುಖಿ
ಪಂಚೇಂದ್ರಿಯಂಗಳಿಚ್ಚೆಯಲ್ಲಿ ಕೀಳು ಮನಂಗೊಂಡು
ಸುಳಿವಾತನೇ ದುಃಖ
ಮನವು ಬಹಿರ್ಮುಖವಾಗಲು ಮಾಯಾ ಪ್ರಪಂಚಿ
ಮನವು ಅಂತಮ್ಮುಖವಾದೊಡೆ ಅವಿರಳ ಜ್ಞಾನಿ;
ಮನವು ಮಹದಲ್ಲಿ ನಿಂದಿರಲಾತ ಮುಕ್ತನು.
ಮನೋರ್ಲಯವಾದಡೆ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಅಭೇದ್ಯನು -ಶರಣ ಆದಯ್ಯ

ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ
ಇಂದ್ರಿಯಗಳೆಂಬ ಶಾಖೆ ಶಾಖೆಗೆ ಹಾರಿ
ವಿಷಯಂಗಳೆಂಬ ಹಣ್ಣು ಫಲಂಗಳ ಗ್ರಹಿಸಿ
ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ.
ಈ ಮನವೆಂಬ ಮರ್ಕಟನ
ನಿಮ್ಮ ನೆನಹೆಂಬ ಪಾಶದಲ್ಲಿ ಕಟ್ಟಿ
ಎನ್ನನುಳುಹಿಕೊಳ್ಳಯ್ಯಾ ಅಖಂಡೇಶ್ವರ ! - ಷಣ್ಮುಖ ಸ್ವಾಮಿಗಳು

ಸೃಷ್ಟಿಕರ್ತನ ಸ್ಮರಣೆ :

ನಾವು ವಾಸಿಸುತ್ತಿರುವ ಸುಂದರವಾದ ಈ ಸೃಷ್ಟಿಯನ್ನು ರಚಿಸಿಕೊಟ್ಟಿರುವ ಪರಮ ದಯಾಳುವಾದ ಸೃಷ್ಟಿಕರ್ತನಿಗೆ ಮೊಟ್ಟಮೊದಲು ಶರಣು ಸಲ್ಲಿಸಬೇಕು.

ಈ ಮಹತ್ ಸೃಷ್ಟಿಯನು ರಚಿಸಿಹ ಮಹದೇವ
ನೀ ಮಹಾದಾತನು ಜಗದಾದಿ ಮೂಲ
ಪ್ರೇಮನಿಧಿ, ಸರ್ವಜ್ಞ ಸರ್ವಶಕ್ತನೆ ನಿನಗೆ
ನೇಮದಲಿ ಪ್ರಥಮತಃ ಶರಣು ಸಲ್ಲಿಸುವೆ.
ಎಂದು ಹೇಳುತ್ತಾ ಕೈ ಮುಗಿಯಬೇಕು. -ಮಾತಾಜಿ

ಧರ್ಮಗುರು ಸ್ಮರಣೆ :

ನಮಗೆ ಧರ್ಮವನ್ನು ಸಂಸ್ಕಾರವನ್ನು ಸುಜ್ಞಾನವನ್ನು ನೀಡಿ ಉದ್ಧರಿಸಿದ ವಿಶ್ವಗುರು ಬಸವಣ್ಣನವರ ಸ್ಮರಣೆ ಮಾಡಬೇಕು.

ಧರ್ಮಪಿತ ಬಸವ ಗುರು ಕರ್ಮಹರ ಶ್ರೀ ಗುರು
ಮರ್ಮವನು ತಿಳಿಸಿ ಈ ನರಜನ್ಮದಾ
ಧರ್ಮ ಪಥವನು ತೋರಿ ಎಮ್ಮನುದ್ಧರಿಸಿದ
ಧರ್ಮಗುರು ಬಸವಂಗೆ ಶರಣು ಸಲ್ಲಿಸುವೆ. -ಮಾತಾಜಿ

ಶರಣರ ಸ್ಮರಣೆ :

ಧರ್ಮಗುರು ಬಸವಣ್ಣನವರು ಕೊಟ್ಟ ದಿವ್ಯ ಪಥದಲ್ಲಿ ನಡೆದ ಎಲ್ಲ ಶರಣರನ್ನು ಒಟ್ಟಾಗಿಯೇ ಸ್ಮರಿಸಿ ಶರಣು ಗೈಯಬೇಕು.

ಆದಿಗುರು ಬಸವಣ್ಣ ಕರುಣೆಯಿಂದಮಗಿತ್ತ
ಸ್ವಾದದ ಲಿಂಗಾಯತ ಘನ ಧರ್ಮವ
ಮೋದದಿಂ ಅಳವಡಿಸಿ ಲಿಂಗಾಂಗಯೋಗವನು
ವೇಧಿಸಿದ ಶರಣರಿಗೆ ಶರಣು ಸಲ್ಲಿಸುವೆ. - ಮಾತಾಜಿ

ದೀಕ್ಷಾಗುರು ಸ್ಮರಣೆ :

ಶಿಷ್ಯನ ಅಂಗತ್ರಯದಲ್ಲಿದ್ದ ಮಲತ್ರಯಗಳನ್ನು ಕಳೆದು ಲಿಂಗತ್ರಯಗಳನ್ನು ವೇಧಿಸಿ, ಅವನ ಮಾಂಸಪಿಂಡವನ್ನು ಮಂತ್ರಪಿಂಡವನ್ನಾಗಿ ಮಾಡಿ ನರಜನ್ಮವ ಹರಜನ್ಮವನ್ನಾಗಿ ಮಾಡಿದ ಸದ್ಗುರುವಿನ ಸ್ತೋತ್ರವನ್ನು ಕೃತಜ್ಞತೆಯಿಂದ ಮಾಡಬೇಕು.

ಕರ್ಮವಂ ಪರಿಹರಿಸಿ ಧರ್ಮ ಮಾರ್ಗದಿ ನಡೆಸಿ
ಕೂರ್ಮೆಯಿಂ ಎಮಗಿತ್ತು ದೀಕ್ಷೆ ಸಂಪದವ
ಧರ್ಮ ರಕ್ಷೆಯ ಹೊದಿಸಿ ಅಷ್ಟ ಆವರಣದ
ಮರ್ಮವರುಹಿದ ಗುರುವೆ ಶರಣು ಸಲ್ಲಿಸುವೆ. -ಮಾತಾಜಿ

ದೇವಪೂಜಾ ಸಂಕಲ್ಪ :

ನನ್ನ ತ್ರಿಕರಣಗಳಿಂದ ತಿಳಿದೋ ತಿಳಿಯದೆಯೋ ಮಾಡಿದ ಸಕಲ ಪಾಪ ಪರಿಹಾರಕ್ಕಾಗಿ, ಸದ್ಭಕ್ತಿ, ಸುಜ್ಞಾನ ಸಂಪತ್‌ ಸಿದ್ದಿಗಾಗಿ, ಶ್ರೀಗುರುಲಿಂಗ ಜಂಗಮ ಪ್ರಸಾದಕ್ಕಾಗಿ ಇಷ್ಟಲಿಂಗ ಪೂಜೆಯನ್ನು ಮಾಡುತ್ತೇನೆಂದು ಸಂಕಲ್ಪ ಮಾಡಿ ಅರ್ಘ್ಯವನ್ನು
ಬಿಡಬೇಕು.

ಮನವೇ ಸರ್ಪ ತನುವೇ ಹೇಳಿಗೆ
ಹಾವಿನೊಡತನ ಹುದುವಾಳಿಗೆ
ಇನ್ನಾವಾಗ ಕೊಂದಹುದೆಂದರಿಯೆ
ಇನ್ನಾವಾಗ ತಿಂದಹುದೆಂದರಿಯೆ
ನಿಚ್ಚ ನಿಚ್ಚಕ್ಕೆ ಪೂಜಿಸಬಲ್ಲೊಡೆ
ಅದೇ ಗಾರುಡ ಕೂಡಲಸಂಗಮದೇವಾ. -ಧರ್ಮಗುರು ಬಸವಣ್ಣ

ಪಂಚಭೂತಾತ್ಮಕ ಪ್ರಪಂಚವನು ಇತ್ತುದಕೆ
ಪಂಚವಿಂಶತಿಯ ಘನ ಪಿಂಡಾಂಡವ
ಋಣಭಾರ ಸಲ್ಲಿಸಿ ಧನ್ಯತೆಯ ಹೊಂದಲು
ಮನ ತುಂಬಿ ಅರ್ಚನೆಯ ನಾ ಮಾಡುವೆ.

ಅರ್ಚಿಸುವ ವಸ್ತುವಿನ ಸಾರೂಪ್ಯ ಹೊಂದಲು
ಉರಿಯುಂಡ ಕರ್ಪೂರದಂತೆ ನಾ ಬೆರೆಯಲು
ಸಲ್ಲಿಸುವ ಪರಿಕರಕೆ ಸಮನಾದ ಸದ್ಗುಣವ
ಚೆಲ್ವಿನಿಂ ಹೊಂದಲು ನಾ ಪೂಜಿಪೆ -ಮಾತಾಜಿ

ವಿಭೂತಿ ಧಾರಣ :

ಸದ್ಗುರುವಿನಿಂದ ಪರಿಶುದ್ಧಗೊಳಿಸಿ ಇಟ್ಟುಕೊಂಡಿರುವ ಕ್ರಿಯಾಭಸ್ಮವನ್ನು ಪ್ರತಿನಿತ್ಯ ಪೂಜಿಸುವಾಗಲೂ ಶುದ್ದೀಕರಿಸಬೇಕು. ಭಸ್ಮದ ಗಟ್ಟಿಯ ಮೇಲೆ ಬಲಗೈಯ ನಡುಬೆರಳಿನಿಂದ ಪಂಚಕೋನ ಪ್ರಣವವನ್ನು ಬರೆಯಬೇಕು. ಅನಂತರ ದೇವಪೂಜಕನು ತನ್ನ ಎರಡು ಹಸ್ತಗಳಿಗೆ ಭಸ್ಮವನ್ನು ಲೇಪಿಸಿಕೊಂಡು ಭಸ್ಮಸ್ನಾನವನ್ನು ಮಾಡಬೇಕು. ನಂತರ ಬಲಗೈಯ (ಹೆಬ್ಬೆರಳು ಕಿರುಬೆರಳುಗಳನ್ನು ಬಿಟ್ಟು) ನಡುವಿನ ಮೂರು ಬೆರಳುಗಳಿಂದ ಕೆಳಗಿನ ಮಂತ್ರವನ್ನು ಉಚ್ಚರಿಸುತ್ತ ಹಣೆ, ಕಿವಿಗಳು, ಕಂಠ, ಎದೆ, ಭುಜಗಳು, ನಾಭಿ, ಬೆನ್ನು, ಮೊಳಕೈಗಳು, ಪಕ್ಕೆಗಳು, ಮೊಳಕಾಲುಗಳು, ಪಾದ ಇತ್ಯಾದಿ ಸರ್ವಾಂಗಕ್ಕೂ ಧರಿಸಬೇಕು. ಇದು ಭಸ್ಮಧಾರಣ ಎನಿಸಿಕೊಳ್ಳುವುದು.

ಬಸವ ಬಸವಾ ಎಂದು ಭಸಿತಮಂ ಧರಿಸಿದರೆ
ಬಸವಾದಿ ಪ್ರಮಥರಿಗೆ ಪ್ರೀತಿಯಯ್ಯಾ |

ಬಸವ ಷಟಸ್ಥಲ ಚನ್ನ | ಬಸವ ಪ್ರಭು ಮುಖ್ಯರು
ಭಸಿತಮಂ ಧರಿಸಿ ಬಯಲಾದರಯ್ಯ

ಎಸೆವ ಅಂಗುಲಿತ್ರಯವು | ಭಸಿತ ರೇಖೆಗಳೆಲ್ಲ
ಬಸವಾಕ್ಷರ ತ್ರಯಗಳೆಂದು ಮುದದಿ |

ಭಸಿತದಿಂದ ನವ ಪ್ರಣವ | ಹಸನಾಗಿ ಅಂಗದಲಿ
ಬಸವ ಬಸವಾ ಎಂದು ಸಂಬಂಧಿಸುವೆನು

ದುರುಳ ಕರಣಂಗಳೆಂಬ | ಬೆರಣಿಗಳನುರುಹಿದ
ಪರಮ ಚಿದ್ ಭಸಿತವೆಂದರಿದು ನಾನು |

ಹರ ಬಸವ ಗುರು ಬಸವ | ಚರ ಬಸವ ಎಂದೆನುತ
ಶಿರವಾದಿ ಚರಣಾಂತ್ಯದೊಳು ಧರಿಸುವೆ

ನೀನು ಧರಿಸಿದೆಯಾಗಿ | ಆನು ಧರಿಸುವೆನಯ್ಯ
ಸ್ನಾನ ಧೂಳನ ಚಿದ್ದಾರಣಗಳಿಂದೆ |

ಹೀನ ಮಾನವರಿದರ ಜ್ಞಾನವಿಲ್ಲದೆ ಭವದ
ಕಾನನದೊಳಗೆ ತಾವ್ ಬೀಳುತಿಹರು

ತ್ರಿನಯನ ಮಹಂತೇಶ | ಧಣಿ ಬಸವರಾಜನ
ಅಣಿಯರದಿ ಸ್ಮರಿಸುತ್ತ ಭಜಿಸುತ್ತಲಿ |

ಅಣು ಮಾತ್ರ ಭಸಿತಮಂ | ಹಣೆಯೊಳಗಿಟ್ಟಾಕ್ಷಣವೇ
ಒಣಗುವವು ದುರಿತಂಗಳೆಂಬ ಕುಜವು.
-ಮುಳುಗುಂದ ಶ್ರೀ ಮಹಾಂತ ಶಿವಯೋಗಿಗಳು

ರುದ್ರಾಕ್ಷ ಧಾರಣ :

ರುದ್ರಾಕ್ಷಿ ಮಾಲೆಗೆ ನಮಸ್ಕರಿಸಿ, ಮಂತ್ರಧ್ಯಾನದಿಂದ ಶುದ್ದೀಕರಿಸಿ 33 ರುದ್ರಾಕ್ಷಿ (ಶಿಖಾಮಣಿ ಸೇರಿ)ಗಳಿರುವ ಕಂಠಮಾಲೆಯನ್ನು ಧರಿಸಬೇಕು.

ಅಯ್ಯಾ ಎನಗೆ ರುದ್ರಾಕ್ಷವೇ ಸರ್ವ ಸಾಧನವಯ್ಯಾ.
ಅಯ್ಯಾ ಎನಗೆ ರುದ್ರಾಕ್ಷವೇ ಸರ್ವ ಸಿದ್ಧಿಯಯ್ಯಾ,
ಅಯ್ಯಾ ನಿಮ್ಮ ಪಂಚವಕ್ಕಂಗಳೇ ಪಂಚಮುಖ
ರುದ್ರಾಕ್ಷಂಗಳಾದುವಾಗಿ, ಅಯ್ಯಾ ಕೂಡಲಸಂಗಮದೇವಯ್ಯಾ
ಎನ್ನ ಮುಕ್ತಿ ಪಥಕ್ಕೆ ಶ್ರೀ ರುದ್ರಾಕ್ಷವೇ ಸಾಧನವಯ್ಯಾ, - ಧರ್ಮಗುರು ಬಸವಣ್ಣನವರು

ವಿಭೂತಿ-ರುದ್ರಾಕ್ಷಿ ಧಾರಣೆ ಆದ ಮೇಲೆ ಬಸವ ಗುರುವಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಆಗ ಹೇಳಬೇಕಾದ ಹಾಡು.

ಬಸವ ಸ್ತೋತ್ರ

ಮುಕ್ತಿದಾಯಕ ಶರಣರಕ್ಷಕ ನಿತ್ಯ ಮೂರುತಿ ಬಸವನೆ
ಭಕ್ತಿಯಿಂದಲಿ ಚರಣ ಕಮಲಕೆ ನಿತ್ಯ ವಂದಿಪೆ ತಂದೆಯ | ಪ |

ಅರಿವು ಇಲ್ಲದ ಮನುಜ ಜನ್ಮವು ಶಾಪವೆನ್ನುತ ನೊಂದೆನು
ಮರೆವ ಹರಿಯುವ ಗುರುವೆ ಎನುತಲಿ ನಿನ್ನ ಚರಣವ ಪಿಡಿದನು
ನಿನ್ನ ಕರುಣೆಯು ಎನ್ನ ಬಾಳಿನ ರಕ್ಷೆ ಎನುತಲಿ ನಂಬಿಹೆ
ಬನ್ನ ತೊಡೆಯುವ ಬೆಳಗ ಬೀರುವ ಶಕ್ತಿ ಎನ್ನುತ ಕಾದಿಹೆ | 1 |

ಮೋಹರಹಿತನೆ ಜ್ಞಾನ ಭರಿತನೆ ಪರಮ ಶಾಂತಿಯ ಧಾಮವೆ
ಕಾಹುದೆಮ್ಮನು ಕೈಯಬಿಡದೆ ಹರನ ಕರುಣೆಯ ಕಂದನೆ
ಕಾಮಕ್ರೋಧದ ಕೊಳೆಯ ಕಳೆದು ಭಕ್ತಿ ಜಲದಲಿ ಮೀಯಿಸು
ಜ್ಞಾನದುಡುಗೆಯ ಮನಕೆ ಉಡಿಸಿ ಮೃಡನ ಪಾದಕೆ ಏರಿಸು | 2 |

ನಿನ್ನ ಚಿನ್ನಯ ಜ್ಞಾನವೆನಗೆ ಮಾರ್ಗದರ್ಶಕ ದೀಪ್ತಿಯು
ನಿನ್ನ ಮಮತೆಯ ಹೃದಯ ಮಂದಿರ ನನಗೆ ಶಾಂತಿಯ ಹಂದರ
ನಿನ್ನ ಪಾವನ ಚರಣಯುಗವು ಭವವ ದಾಂಟಿಪ ದೋಣಿಯು
ಸನ್ನುತಾಂಗನೆ ನಿನ್ನ ನೆನಹಿದು ಬಾಳಿಗಮೃತ ಸೋನೆಯು | 3 |

ನೀನು ಆಡಿಪ ಬೊಂಬೆ ನಾನು ಮಿಡಿಸ ನುಡಿಯುವ ವೀಣೆಯು
ನೀನು ಊಡಿಸಿ ಉಣಿಸಿ ಸಲಹಲು ಎನ್ನ ಬಾಳೂಳು ಝಂಕೃತಿ
ಮಂತ್ರ ಪುರುಷನೆ ಶಾಂತಿ ಚಂದ್ರನೆ ದುರಿತ ತಿಮಿರಕೆ ಭಾನುವೆ
ಕೀರ್ತಿಸುವೆನನವರತ ನಿನ್ನನು ಸಚ್ಚಿದಾನಂದ ಕಂದನೆ | 4 |


ಕರಕಮಲದಲ್ಲಿ ಇಷ್ಟಲಿಂಗ ದೇವನನ್ನು ಇರಿಸಿಕೊಳ್ಳುವುದು.

ವಿಶ್ವಚೇತನ ಪ್ರಭುವೆ ಸರ್ವಶಕ್ತ ವಿಭುವೆ
ಬಸವ ಗುರು ದಯದಿಂದ ಆಕಾರ ತಾಳ್ದು
ಶಾಶ್ವತದಿ ಮಮಕಾಯ ಮನ ಭಾವದಲ್ಲಿರುವ
ಇಷ್ಟಲಿಂಗವೇ ನಿನ್ನ ಕರಕೆ ಸ್ವಾಗತಿಸೆ.

ಕೈಯಲ್ಲಿ ಇಟ್ಟುಕೊಂಡ ಬಳಿಕ ಶರಣು ಸಲ್ಲಿಸಬೇಕು.

ಇಷ್ಟಲಿಂಗಕ್ಕೆ ಶರಣು :

ಕರಕಮಲ ಪೀಠದಲಿ ಕರದಿಷ್ಟಲಿಂಗವನು
ಪರಮರತಿಯಿಂದಿರಿಸಿ ಭರದಿ ದಿಟ್ಟಿಸುತ
ಪರಬ್ರಹ್ಮ ಚೇತನವೇ ಚುಳುಕಾಗಿ ಬಂದಿರಲು
ಪರಮ ಹರುಷದಿ ಶರಣು ನಾ ಸಲಿಸುವೆ

ಜಲಶುದ್ಧಿ :

ಬಸವ ಬಸವಾ ಎಂದು ಮಜ್ಜನಕ್ಕೆರೆಯದವನ
ಹುಸಿಯಾದ ಭಕ್ತಿಯದು ಗುರಿ ಮುಟ್ಟದೆಂದು
ಬಸವ ಮಂತ್ರವ ಸ್ಮರಿಸಿ ಐದು ಅಂಗುಲಿಗಳಿಂ
ಕುಶಲದಿ ಬೆರಳದ್ದಿ ಜಲ ಶುದ್ಧಿಗೈವೆ -ಮಾತಾಜಿ

ಒಂದು ಬಟ್ಟಲಲ್ಲಿ ಜಲವನ್ನು ತೆಗೆದುಕೊಳ್ಳಬೇಕು. ಐದು ಅಂಗುಲಿಗಳಿಗೆ ವಿಭೂತಿ ಲೇಪಿಸಿಕೊಂಡು ಓಂ ಶ್ರೀ ಗುರು ಬಸವಲಿಂಗಾಯ ನಮಃ ಎಂಬ ಮಂತ್ರವನ್ನು 12 ಬಾರಿ ಪಠಿಸಿ ಎಲ್ಲ ಕಂಡಿಕೆಗಳನ್ನು ಹೆಬ್ಬೆರಳಿನಿಂದ ಸ್ಪರ್ಶಿಸಿ ನಂತರ ಜಲದಲ್ಲಿ ಮಹಾಗುರು ಬಸವನ ನೆನಹಿನಿಂದ ಅದ್ದಿ ಪಂಚಕೋನ ಪ್ರಣವವನ್ನು ಬರೆಯಬೇಕು. ಅದು ಜಲಶುದ್ಧಿಯಾಗುವುದು. ಅದನ್ನೇ ಪೂಜಾದ್ರವ್ಯಗಳಿಗೆ ಸಿಂಪಡಿಸಿ ಪೂಜಾದ್ರವ್ಯ ಶುದ್ದಿ ಮಾಡಬೇಕು.

ಬಸವಂ ಪ್ರಣವಾಕಾರಂ
ಬಸವಂ ಶರಣಾಗತ ರಕ್ಷಕ ವರಲೋಲಂ
ಬಸವಂ ಜನ್ಮ ಕುಠಾರಂ
ಬಸವಂ ನಮಾಮಿ ಶ್ರೀ ಗುರು ಬಸವೇಶಂ | -ಮಾತಾಜಿ

ಈ ಶ್ಲೋಕವನ್ನು ಬೆರಳುಗಳನ್ನು ನೀರಿನಲ್ಲಿ ಅದ್ದುವಾಗ ಹೇಳಬೇಕು.

1. ಅಷ್ಟವಿಧಾರ್ಚನೆ

ಲಿಂಗಮಜ್ಜನ:

ಲಿಂಗಪೂಜಾ ಸಾಧಕನು ತನ್ನ ಎಡಗೈ ಅಂಗೈಯನ್ನು ಶುದ್ಧೋದಕದಿಂದ ತೊಳೆದು, ಒರೆಸಿ ಭಸ್ಮದಿಂದ ಪ್ರಣವ ಮತ್ತು ಪಂಚಕೋನ ಬರೆದು, ಅದರ ಮಧ್ಯಭಾಗದಲ್ಲಿ ತನ್ನ ಇಷ್ಟಲಿಂಗವನ್ನು ಕರಪೀಠದ ಮೇಲೆ ಎಡಕ್ಕೆ ಅಂದರೆ ಹೆಬ್ಬೆರಳಿನ ಕಡೆಗೆ ಗೋಮುಖವಾಗಿ ಇಟ್ಟುಕೊಳ್ಳಬೇಕು. ನಂತರ ಲಿಂಗಪತಿಗೆ ಶರಣ ಸತಿಯಾಗಿ, ಸಜ್ಜನನಾಗಿ ಅಂತಃಕರಣ ದಯಾರಸದಿಂದ ಲಿಂಗಮಜ್ಜನಗೈಯಬೇಕು.

ನೀನು ಕೊಟ್ಟಿಹ ಜಲಕೆ ಎನ್ನ ಭಕ್ತಿಯ ಬೆರಸಿ
ಚಿನ್ಮಯನೆ ನಾನೀಗ ಮಜ್ಜನಕ್ಕೆರೆವೆ
ಎನ್ನ ಅಂತಃಕರಣ ಕಾರುಣ್ಯ ರಸವನು
ನಾನೆಲ್ಲ ಜೀವರ ಲೇಸ ಬಯಸಿ ನಿನಗೆರೆಯುವೆ -ಮಾತಾಜಿ

ಮಜ್ಜನಕ್ಕೆರೆಯುತ್ತ ಶ್ರೀ ಗುರುಬಸವನ ನಾಮಸ್ಮರಣೆ ಗೈಯಬೇಕು.

ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ
ಎತ್ತಿ ನೋಡಿದರೆ ಲಿಂಗವೆಂಬ ಗೊಂಚಲು,
ಒತ್ತಿ ಹಿಂಡಿದರೆ ಭಕ್ತಿಯೆಂಬ ರಸವಯ್ಯ,
ಗುರುವು ಬಸವಣ್ಣನಿಂದ,
ಲಿಂಗವು ಬಸವಣ್ಣನಿಂದ
ಜಂಗಮವು ಬಸವಣ್ಣನಿಂದ,
ಪಾದೋದಕ ಪ್ರಸಾದ ಇಂತಿವೆಲ್ಲವೂ ಬಸವಣ್ಣನಿಂದ.
ಆಯತವು ಬಸವಣ್ಣನಿಂದ,
ಸ್ವಾಯತವು ಬಸವಣ್ಣನಿಂದ.
ಸನ್ನಿಹಿತವು ಬಸವಣ್ಣನಿಂದ,
ಅತ್ತ ಬಲ್ಲಡೆ ನೀವು ಹೇಳಿರೋ ಇತ್ತ ಬಲ್ಲಡೆ ನೀವು ಕೇಳಿರೊ;
ಬಸವ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ ಶೂನ್ಯ ಕಾಣಾ
ಕಲಿದೇವರ ದೇವಾ. -ಮಡಿವಾಳ ಮಾಚಿದೇವ

ತೇವವನ್ನು ಒರೆಸುವುದು :

ರೇಷ್ಮೆ, ಉಣ್ಣೆ, ಅಥವಾ ಅರಳೆ ಬಟ್ಟೆಯಿಂದ ಇಷ್ಟಲಿಂಗವನ್ನು ಮೃದುವಾಗಿ ತೀಡಬೇಕು.

ಒಳಗೆ ತುಂಬಿರುವಂಥ ಮೋಹ ಮಮಕಾರಗಳ
ಜಲ ಬಿಂದುಗಳನ್ನೆಲ್ಲ ಒರೆಸುವಂತೆ
ಮಡಿಯಾದ ಅರಿವೆಯಿಂ ನೀರ ಕಣಗಳನ್ನೆಲ್ಲ
ಸಡಗರದಿ ಒರೆಸುವೆನು ಲಿಂಗದೇವಾ. -ಮಾತಾಜಿ

ಪಂಚಕೋನ ರಚನೆ:

ಅಂಗೈಯಲ್ಲಿ ಪಂಚಕೋನ, ಓಂಕಾರವನ್ನು ಬರೆಯಬೇಕು

ಪಂಚಭೂತಾತ್ಮಕ ಬ್ರಹ್ಮಾಂಡಕಾಧಾರ
ಪಂಚಾಕ್ಷರಿ ಪ್ರಣವ ಪ್ರತ್ಯಕ್ಷ ರೂಪ
ಶಾಂಭವೀ ಮುದ್ರೆಯ ಪ್ರತಿರೂಪ ತಾನಾದ
ಶುಭ ಪಂಚಕೋನದ ಅಂಗೈಲಿ ಬರೆವೆ. -ಮಾತಾಜಿ

ಅಂಗೈಯಲ್ಲಿ ಪಂಚಕೋನದ ಚಿತ್ರದ ಮೇಲೆ ಇಷ್ಟಲಿಂಗವನ್ನು ಇಡುವಾಗ ಈ ಪದ್ಯ ಹೇಳಬೇಕು.

ಜಗದಾದಿ ಕರ್ತನ ಪೂಜೆ ಗೈಯುವ ಪುಣ್ಯ
ಒದಗಿ ಬಂದಿಹುದೆಂಬ ಸಂಭ್ರಮದಲ್ಲಿ
ಗೋಮುಖದ ಕುರುಹನು ಹೆಬ್ಬೆರಳ ಮುಖ ಮಾಡಿ
ಪಂಚಕೋನದ ಮೇಲೆ ಇಷ್ಟಲಿಂಗವನಿಡುವೆ | -ಮಾತಾಜಿ

ವಿಭೂತಿ ಧಾರಣೆ :

ಕೆಳಗಿನ ಮಂತ್ರವನ್ನುಚ್ಚರಿಸುತ್ತ ಬಲಗೈ ನಡುವಿನ ಮೂರು ಬೆರಳುಗಳಿಂದ ಎಡಗೈ ಹೆಬ್ಬೆರಳಿನಿಂದ ಇಷ್ಟಲಿಂಗದ ನೆತ್ತಿಯ ಮೇಲೆ ವಿಭೂತಿ ಧರಿಸಬೇಕು.

ಆರು ಅರಿಗಳ ಆದ ಕಾಮ ಮೋಹಾದಿಗಳ
ಆರು ಬೆರಣಿಗಳುರುಹಿ ಅರಿವಿನಗ್ನಿಯಲಿ
ಪ್ರಣವದ ಸಂಕೇತ ಮೂರು ಎಳೆ ಭಸಿತವ
ಕರದಿಷ್ಟ ಲಿಂಗದ ಮಸ್ತಕದಿ ಧರಿಪೆ. -ಮಾತಾಜಿ

ರುದ್ರಾಕ್ಷಿ ಧಾರಣೆ :

ಶಿಖಾಮಣಿ ಸೇರಿ 13 ರುದ್ರಾಕ್ಷಿಗಳಿರುವ ಮಾಲೆಯನ್ನು ಲಿಂಗದೇವರಿಗೆ ಸಮ್ಯಕ್ ದೃಷ್ಟಿಯ ಕುರುಹಾಗಿ ಧರಿಸಬೇಕು. ಶಿಖಾಮಣಿ ಹೆಬ್ಬೆರಳಿನ ಕಡೆ ಇರಬೇಕು.

ಚಿನ್ಮಯನೆ ನಿನ್ನಿರವು ಘನವಾದ ನಿನ್ನರಿವು
ಎನ್ನ ದೃಷ್ಟಿಗೆ ತಾನು ಚೆನ್ನಾಗಿ ನಿಲುಕಲಿ
ಅಂಥ ಸಮ್ಯಕ್ ನೋಟ ಪ್ರಾಪ್ತಿಯಾಗಲಿ ಎಂದು
ಪ್ರಾರ್ಥಿಸುತ ರುದ್ರಾಕ್ಷಿ ಮಾಲೆಯನ್ನಿಡುವೆ. -ಮಾತಾಜಿ

ಗಂಧ ಧಾರಣೆ :

ಶ್ರೀಗಂಧದ ಶೀತಲ ಗುಣವು ಸಾಧಕನಿಗೆ ಪರಮಶಾಂತಿಯನ್ನು ತಂದು ಕೊಡುವುದೆಂಬ ಭಾವನೆಯಿಂದ ಗಂಧವನ್ನು ಲಿಂಗಕ್ಕೆ ಲೇಪಿಸಬೇಕು.

ಎನ್ನಂತರಂಗವು ಹೊಯ್ದಾಟ-ಉದ್ವೇಗ
ಚೆನ್ನಾಗಿ ಕಳಕೊಂಡು ನಿಶ್ಚಿಂತಗೊಳಲಿ
ಕರುಣಿ ಮಂಗಲ ರೂಪಿ ಲಿಂಗದೇವನೇ ನಿನಗೆ
ಪರಮ ಶಾಂತಿಯ ಗಂಧ ನಾ ನೀಡುವೆ. -ಮಾತಾಜಿ

ಅಕ್ಷತೆ ಧಾರಣೆ :

ಲಿಂಗದೇವರಿಗೆ ಮುಕ್ಕಾಗದ ಅಕ್ಷಯವಾದ ಅಕ್ಷತೆ ಧರಿಸಬೇಕು.

ಕರ್ಮಕಧ್ಯಕ್ಷನಾಗಿರುವ ಚಿನ್ಮಯ ಮೂರ್ತಿ
ತ್ರೈ ಕರ್ಮ ಸಂಚಿತ ಪ್ರಾರಬ್ಧ-ಆಗಾಮಿ
ಕರ್ಮ ತ್ರಯಗಳನ್ನೆಲ್ಲ ಇನ್ನು ಪರಿಹರಿಸಲಿಕೆ
ಪೆರೆಯಿಂ ಅಕ್ಷತೆಯ ನಾ ಸಲಿಸುವೆ. -ಮಾತಾಜಿ

ಬಿಲ್ವ ಧಾರಣೆ :

ಹುಳು ಹತ್ತದ, ಹರಿಯದ, ತುಂಬು ತೆಗೆದ ಮೂರು ದಳಗಳುಳ್ಳ ಉತ್ತಮ ಪತ್ರೆಗಳನ್ನು ಕೆಳಮುಖವಾಗಿ ಧರಿಸಬೇಕು.

ಸದ್ಭಕ್ತಿ ಸುಜ್ಞಾನ ಸತ್ನಿಯೆಗಳೆಂಬುವ
ಮೂರ‍್ದಳದ ಬಿಲ್ವದ ಪತ್ರೆಯನ್ನು ತಂದು
ಮೂರು ಮಲಗಳು ಅಳಿದು ಮೂಲಿಂಗವಳವಡಲಿ
ಹಾರೈಸಿ ತ್ರಿದಳದ ಬಿಲ್ವವನ್ನೇರಿಸುವೆ. -ಮಾತಾಜಿ

ಪುಷ್ಪಧಾರಣೆ :

ನಾನಾ ಬಗೆಯ ಹೂಗಳನ್ನು ಮೇಲು ಮುಖ ಮಾಡಿ ಹೃದಯ ಪುಷ್ಪಗಳನ್ನು ಅರ್ಪಿಸುವೆನೆಂಬ ಭಾವದಿಂದ ಧರಿಸಬೇಕು.

ಸದಮಲಂತಃಕರಣ ಭಕ್ತಿಯ ಬನದಲ್ಲಿ
ಸದುಭಾವ ಸೌರಭವ ಬೀರುತ್ತಲರಳಿರುವ
ಸದುಗುಣದ ಕುಸುಮಗಳ ಪ್ರೇಮದಿಂದಲಿ ಈಗ
ಚಿದ್ರೂಪಿ ಲಿಂಗಕ್ಕೆ ನಾ ಸೂಡುವೆ. -ಮಾತಾಜಿ

ಕೆಲವರು ಲಿಂಗದ ನೆತ್ತಿಯ ಮೇಲೆ, ಸುತ್ತಮುತ್ತ ಕವುಚಿ, ಲಿಂಗದರ್ಪಣ ಕಾಣದ ರೀತಿಯಲ್ಲಿ ಹೂ ಏರಿಸುವರು. ಇಷ್ಟಲಿಂಗದ ಮುಂಭಾಗ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಹಿಂಬದಿಯಲ್ಲೆಲ್ಲ ಪುಷ್ಪವನ್ನು ಅಲಂಕಾರಿಕವಾಗಿ ಜೋಡಿಸಬೇಕು.

ಧೂಪಾರ್ಪಣೆ :

ದುರ್ಗುಣಗಳಳಿದು ಸದ್ಗುಣಗಳ ಸುವಾಸನೆ ಸೂಸುವಂತೆ ಧೂಪದ ಧೂಮವನ್ನು ಸಮರ್ಪಿಸಬೇಕು.

ಜೀವವು ಬದುಕಲು ಪ್ರಾಣವಾಯುವ ಕೊಟ್ಟ
ಕಾವ ದೇವನಿಗೆಂತು ಋಣವ ಸಲ್ಲಿಸಲಿ?
ದೇವನು ಇತ್ತಿರುವ ವಾಯುವಿಗೆ ಧೂಪದ
ಸುವಾಸಿತ ಧೂಮವ ಬೆರೆಸಿ ಸಲ್ಲಿಸುವೆ. -ಮಾತಾಜಿ

ದುರ್ವಿಚಾರದ ಭಾವ ನೆಲೆ ನಿಲ್ಲದಿರಲಿ
ಸುವಿಮಲ ಹೃದಯದಿ ಚದುರನು ನೆಲೆಸಲಿ
ಎಂಬ ಹಂಬಲ ತುಂಬಿ ಶರಣ ಸತಿಯಾಗೀಗ
ತುಂಬು ಹೃದಯದಿ ಧೂಪ ನಾ ನೀಡುವೆ. -ಮಾತಾಜಿ

ಆರತಿಯ ಅರ್ಪಣೆ :

ಜ್ಞಾನದ ಬೆಳಕಿನಿಂದ ಮನದ ಕತ್ತಲೆ ಹರಿಯುವುದಕ್ಕಾಗಿ ಕರ್ಪೂರ ಬೆಳಗಬೇಕು.

ಲೋಕವು ಬದುಕಲು ರವಿ, ಚಂದ್ರ, ಅನಲನ
ಜೋಕೆಯಿಂ ಒಲಿದಿತ್ತ ಪರಮ ದೇವನಿಗೆ
ಬೆಳಕನಿತ್ತುದಕಾಗಿ ಆರತಿಯ ಬೆಳಗುತ್ತ
ಪುಳಕಿತ ಭಾವದಿಂ ಆನಂದಿಪೆ.

ಎನ್ನ ಮತಿ ಮನದೊಳಿಹ ಅಜ್ಞಾನ ಕತ್ತಲೆಯ
ಚಿನ್ಮಯನೆ ಅರಿವಿನಿಂ ಹೆರೆ ತೊಲಗಿಸಿ
ಎನ್ನ ಅರಿವಿನ ಕಣ್ಣು ಚೆನ್ನಾಗಿ ಅರಳಲೆಂ
ದುನ್ನತದ ಆಸೆಯಿಂ ನಾ ಬೆಳಗುವೆ. -ಮಾತಾಜಿ

2. ಎತ್ತುವೆ ನಾ... ಕರ್ಪೂರದಾರತಿಯ
ಚಿತ್ತದ ಚಿನ್ನಯ ಪರಶಿವಗೆ
ಆರು ಪೀಠವನೇರಿ ಕಾಯದರಸನಾಗಿ
ಮೀರಿದ ಚಿನ್ಮಯ ಚಿಣ್ಣನಿಗೆ
ಗುರುವಿನ ಮೂಲಕ ಕರಕಮಲದಿ ಬಂದು | ಅ.ಪ|

ಹೊರ ಒಳಗೆಂಬೆರಡು ಭಾವವನತಿಗಳೆದು
ಚಿನ್ಮಯ ಚಿದ್ರಸವ ಹೊನ್ನಿನ ದೇಗುಲದಿ
ಧಾರೈಸಿ ಅನುಗೊಳಿಸಿ ಘನವ ಮಾಡಿದಾ

ಹೃದಯ ದೇಗುಲದೊಳಗೆ ಚದುರನಾಗಿ ನಿಂದು
ಒದವಿದ ಸುಧೆಯ ಸ್ವಾದವ ಸವಿದು
ಉಸಿರೊಳಗೆ ಒಂದಾಗಿ ಬಸಿರೊಳಗೆ ಬೆಳಕಾಗಿ
ಬೆರಸಿ ಬೇರಾಗದಿಹ ಪ್ರಾಣಲಿಂಗ ರೂಪನಿಗೆ

ಬ್ರಹ್ಮಾಂಡದ್ದೆಳಕಾಗಿ ಪಿಂಡಾಂಡದಣ್ಣಾಗಿ
ಅಹಮ್ಮಿನೊಳು ತಾನಿಂದು ಎಮ್ಮನಾಡಿಸುತ
ಸ್ಫುಲ್ಲಿಂಗ ರೂಪಾಗಿ ಚಿಲ್ಲಿಂಗ ಘನವಾಗಿ
ಚೇತನ ನೀಡುವ ಭಾವಲಿಂಗನಿಗೆ

ಕರ್ಪುರವು ಆನೆಂದು ದೀಪ್ತಿಯು ನೀನೆಂದು
ನಿನ್ನ ಘನ ಅಪ್ಪುಗೆಯೆ ಎನ್ನಯ ಗುರಿಯೆಂದು
ಕರ್ಪೂರದಾರತಿಯ ಸಮರಸದ ಕುರುಹೆಂದು
ಒಪ್ಪಿ ಬೆಳಗುವ ಸಚ್ಚಿದಾನಂದ.... -ಮಾತೆ ಮಹಾದೇವಿ

ನೈವೇದ್ಯ :

ಕೆಳಗಿನ ವಚನ ಪಠಿಸುತ್ತ ಕೊಬ್ಬರಿ, ಉತ್ತುತ್ತಿ, ದ್ರಾಕ್ಷಿ, ಕಲ್ಲುಸಕ್ಕರೆ ಇವುಗಳಲ್ಲಿ ಅನುಕೂಲವಾದ ಯಾವುದಾದರೂ ಒಂದನ್ನು ಲಿಂಗಕ್ಕೆ ನೈವೇದ್ಯವಾಗಿ ಇಡಬೇಕು.

ಅಂದಂದಿನಾಹಾರ ತಂದೆಯಂದದಿ ನೀಡಿ
ಎಂದೆಂದು ಎಮ್ಮೆಗಳ ಸಲಹುತ್ತಲಿರುವ
ಇಂಬೀವ ಜಗದೊಡೆಯ ನನ್ನ ನಾನರ್ಪಿಸುವೆ
ಎಂಬ ಶರಣಾಗತಿಯಿಂದ ನೈವೇದ್ಯವಿಡುವೆ -ಮಾತಾಜಿ

ಅಗ್ಘವಣಿ :

ಅಂತಃಕರಣದ ಪರಮಾನಂದದ ಸಂಕೇತವಾಗಿ ಅಗ್ಘವಣಿಯನ್ನು ಲಿಂಗದೇವರಿಗೆ ಮೂರು ಸಲ ತೋರಿಸಿ, ಮಜ್ಜನ ಸಾಲೆಯಲ್ಲಿ ಹಾಕಬೇಕು.

ಶರೀರ ಮನ ಧನವೆಂಬ ಮೂರು ಸಂಪದವನ್ನು
ಗುರು ಲಿಂಗ ಜಂಗಮಕೆ ಸಲ್ಲಿಸುವೆನೆನುತ
ಮೂರು ಸಲ ನಾನೀಗ ಅಗ್ಘವಣಿಯನ್ನು ಹಾಕಿ
ಮೂರು ವಿಧ ದಾಸೋಹ ಭಾವದಲಿ ನಿಲುವೆ - ಮಾತಾಜಿ

ಮೂರು ಬಾರಿ ಹಾಕುವಾಗ ಇಷ್ಟಲಿಂಗಕ್ಕೆ ರೂಪವನ್ನು, ಪ್ರಾಣಲಿಂಗಕ್ಕೆ ರುಚಿಯನ್ನು, ಭಾವಲಿಂಗಕ್ಕೆ ತೃಪ್ತಿಯನ್ನು ಅರ್ಪಿಸುವೆ ಎಂದು ಹೇಳಬೇಕು.

ಘಂಟಾನಾದ :

ನಾಲಿಗೆಯು ಘಂಟೆಯಾಗಿ ಸ್ವರವೇ ಘಂಟಾನಾದವಾಗುವಂತೆ ಲಿಂಗಕ್ಕೆ ಘಂಟಾನಾದವನ್ನು ಕೇಳಿಸಬೇಕು.

ಸೃಷ್ಟಿಯ ಮುಕುಟದೊಲು ಮನುಜನ ಹುಟ್ಟಿಸಿ
ಶ್ರೇಷ್ಠವಹ ಮಾತಿನ ಇಂಚರವ ನೀಡಿ
ಮಾನವನ ಘನತೆಯನು ಏರಿಸಿದ ಋಣಕಾಗಿ
ಪ್ರಣವ ನಾದದ ಘಂಟೆ ನಾ ತಾಡಿಪೆ. -ಮಾತಾಜಿ

ಶರಣು ಸಲ್ಲಿಸುವಿಕೆ :

ಸಚ್ಚಿದಾನಂದ ಪರವಸ್ತುವಿನ ಕುರುಹಾದ ಇಷ್ಟಲಿಂಗಕ್ಕೆ ಶಿರಬಾಗಿ ಕುರಂಗಮುದ್ರೆಯಿಂದ ಶರಣು ಶರಣಾರ್ಥಿಗಳನ್ನು ಸಲ್ಲಿಸಬೇಕು.

ನನ್ನೆಲ್ಲು ಅಲೆಸದೆ ಅಳಲಿಸದೆ ಬಳಲಿಸದೆ
ನೀನಾಗಿ ಬಂದೆನ್ನ ಅಂಗದಲ್ಲಿ ನೆಲೆಸಿ
ಹಿಂದಿನ ಜನ್ಮದ ಸುಕೃತವೋ ಎಂಬಂತೆ
ಚೆಂದದಿಂ ಪೂಜೆಯನ್ನು ಕೊಂಡುದಕೆ ಶರಣಾರ್ಥಿ. -ಮಾತಾಜಿ

ಸುಖ ಒಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ ...
ದುಃಖ ಒಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ
ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ, ಇದು ಕಾರಣ
ಬಸವಣ್ಣ ಬಸವಣ್ಣ ಎನುತಿರ್ದೆನು ಕಾಣಾ, ಕಲಿದೇವಯ್ಯ -ಮಡಿವಾಳ ಮಾಚಿದೇವರು

2. ಲಿಂಗಸ್ತವನ

ಅಷ್ಟವಿಧ ಪೂಜೆಗೊಂಡ ಇಷ್ಟಲಿಂಗವನ್ನು ಮೂಗಿನ ತುದಿಗೆ ನೇರವಾಗಿ ಹನ್ನೆರಡು ಅಂಗುಲದಂತರದಲ್ಲಿ ಎತ್ತಿ ಹಿಡಿದು ಅನಿಮಿಷ ದೃಷ್ಟಿಯಿಂದ ನೋಡುತ್ತ ಕೆಳಗಿನ ಲಿಂಗಾಂಗ ಸಾಮರಸ್ಯದ ವಚನಗಳನ್ನು ಹೇಳಬೇಕು.

1. ದೇವನಿಗೆ ಆಹ್ವಾನ :

ಬಾ ಬಾ ಬಾರೆಲೆ ದೇವಾ ನೀನು
ಬಾರದಿದ್ದರೆ ನಿನಗೆ ಎನ್ನಾಣೆ || ಪ ||

ಹೃದಯದರಮನೆಯ ಹಸನಾಗಿ ಮಾಡಿ
ಕಾಯ್ದು ಕುಳಿತಿಹ ಎನ್ನ ಪರಿಯ ನೀ ಕಾಣೆಯಾ
ಭಕ್ತಿ-ಪ್ರೇಮಗಳ ಹಣ್ಣು ಹಾಲನು ಇಟ್ಟು
ನೀನೆನ್ನ ಪ್ರಾಣವೆಂದು ಅರಿದು ನಾ ನಂಬಿರೆ || ೧ ||

ಜ್ಞಾನ ಜಲದಲಿ ಮಿಂದು ಘನಮನದ ಮಡಿಯುಟ್ಟು
ಕಾಯಕರಣೇಂದ್ರಿಯದ ಬಾಧೆಗಳ ಗೆಲಿದು
ಕಾಮಕ್ರೋಧವನೆಲ್ಲ ಗಾಳಿಗೆ ತೂರಿಟ್ಟು
ಪ್ರೇಮ ಭಾಮಿನಿಯಾಗಿ ನಿನಗೆ ನಾ ಕಾದಿರುವೆ || ೨ ||

ಸದ್ಭಾವ ಮೊಲ್ಲೆಗಳ ಎನ್ನ ಹೃದಯದಿ ಇರಿಸಿ
ಶುದ್ಧಾಂತರಂಗದಿಂ ದೇವ ನಿನ್ನನು ಭಜಿಸಿ
ಮನದ ಕೋಗಿಲೆಯು ಕುಹುದನಿಯ ಪಾಡುತಿರೆ
ಇದನರಿದು ಬರದಿರೆ ನಿನಗೆ ಎನ್ನಾಣೆ || ೩ ||

ಪ್ರಿಯ ಸಚ್ಚಿದಾನಂದ ಪರಂಜ್ಯೋತಿ ರೂಪನೆ
ಎನ್ನಯ ಕರೆಗೆ ಓಗೊಡು ದೇವನೆ
ಚಿನ್ಮಯ ಚೆಲುವ ನೀ ಬಳಿಗೈತರಲು
ಕಪ್ಪುರ ಗಿರಿಯೊಲು ನಾನಿನ್ನ ಬೆರೆವೆ || ೪ || -ಮಾತೆ ಮಹಾದೇವಿ

3. ಅಯ್ಯಾ, ನೀನೆನಗೆ ಶ್ರೀ ಗುರುವಪ್ಪೊಡೆ,
ನಾ ನಿನಗೆ ಶಿಷ್ಯನಪ್ಪೊಡೆ
ಎನ್ನ ಕಾಯದ ಕರ್ಮವ ತೊಡೆದು,
ಎನ್ನ ಕರಣಾದಿ ಗುಣಗಳ ಕಳೆದು,
ಎನ್ನ ಪ್ರಾಣದ ಧರ್ಮವ ನಿಲಿಸಿ,
ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ
ನೀನೆನ್ನ ಕರಸ್ಥಲಕ್ಕೆ ಬಂದು
ಕಾರುಣ್ಯವ ಮಾಡಾ ಗುಹೇಶ್ವರ. -ಅಲ್ಲಮ ಪ್ರಭುದೇವರು

4. ಶ್ರೀ ಗುರುಲಿಂಗದೇವರು ತಮ್ಮ ಹಸ್ತವ ತಂದು
ಎನ್ನ ಮಸ್ತಕದ ಮೇಲೆ ಇರಿಸಿದಾಗಳೇ
ಎನ್ನ ಭವಂ ನಾಸ್ತಿಯಾಯಿತ್ತು;
ಎನ್ನ ತನ್ನಂತೆ ಮಾಡಿದ !
ತನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಕರಸ್ಥಲದಲಿ ಮೂರ್ತಿಗೊಳಿಸಿದ
ಎನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಮನಸ್ಥಲದಲಿ ಮೂರ್ತಿಗೊಳಿಸಿದ
ಎನ್ನ ಮನಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಭಾವಸ್ಥಲದಲಿ ಮೂರ್ತಿಗೊಳಿಸಿದ
ಎನ್ನ ಭಾವಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಸರ್ವಾಂಗದ ಒಳಹೊರಗೆ ತೆರಹಿಲ್ಲದಳವಡಿಸಿದ
ನಮ್ಮ ಶ್ರೀ ಗುರುಲಿಂಗದೇವರು ಚೆನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ

5. ಬ್ರಹ್ಮರಂಧ್ರದಲ್ಲಿ ಇಪ್ಪನಾದ
ಚೈತನ್ಯವಪ್ಪ ಪರಮ ಚಿತ್ಕಳೆಯನೆ
ಭಾವ-ಮನ-ಕರದಲ್ಲಿ ಶ್ರೀ ಗುರು ತಂದು
ಸಾಹಿತ್ಯವ ಮಾಡಿದನಾಗಿ,
ಭಾವದಲಿ ಸತ್ಸ್ವರೂಪವಪ್ಪ ಭಾವಲಿಂಗವೆನಿಸಿ,
ಪ್ರಾಣದಲಿ ಚಿತ್ಸ್ವರೂಪವಪ್ಪ ಪ್ರಾಣಲಿಂಗವೆನಿಸಿ,
ಕರಸ್ಥಲದಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ,
ಒಂದೇ ವಸ್ತು ತನುಮನಭಾವಂಗಳಲ್ಲಿ
ಇಷ್ಟಪ್ರಾಣ ಭಾವವಾದ ಭೇದವನರಿದು,
ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ,
ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ
, ಭಾವಲಿಂಗವ ತೃಪ್ತಿಜ್ಞಾನದಿಂದ ಗ್ರಹಿಸಿ,
ಈ ಲಿಂಗತ್ರಯವಿಡಿದು ಆಚರಿಸಿ,
ಲಿಂಗದೊಡನೆ ಕೂಡಿ ಆ ಲಿಂಗವೇ ತಾನು ತಾನಾಗಿ
ವಿರಾಜಿಸುತ್ತಿಪ್ಪುದೀಗ ಲಿಂಗಯೋಗ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ -ಎಡೆಯೂರು ಶ್ರೀ ಸಿದ್ದಲಿಂಗೇಶ್ವರರು

6. ಅಂಗೈಯೊಳಗಣ ಲಿಂಗವ ನೋಡುತ್ತ
ಕಂಗಳು ಕಡೆಗೋಡಿವರಿಯುತ್ತ ಸುರಿಯುತ್ತ ಎಂದಿಪ್ಪೆನೋ
ನೋಟವೇ ಪ್ರಾಣವಾಗಿ ಎಂದಿಪ್ಪೆನೋ
ಕೂಟವೇ ಪ್ರಾಣವಾಗಿ ಎಂದಿಪ್ಪೆನೋ
ಎನ್ನಂಗ ವಿಕಾರದ ಸಂಗವಳಿದು
ಕೂಡಲಸಂಗಮದೇವಯ್ಯಾ, ಲಿಂಗಯ್ಯಾ
ಲಿಂಗ ಲಿಂಗ ಲಿಂಗವೆನ್ನುತ್ತ ! -ಧರ್ಮಪಿತ ಬಸವಣ್ಣನವರು

7. ಅಣುವಿಂಗೆ ಅಣು ಮಹತ್ತಿಂಗೆ ಮಹತ್ತೆನಿಸುವ
ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ
ಉಪಮಾತೀತ ವಾಙ್ಮನಕ್ಕಗೋಚರನು ಎನಿಸುವ
ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ
ಶ್ರುತಿತತಿಯ ಶಿರದ ಮೇಲೆ ದಶಾಂಗುಲನು
ಎನಿಸುವ ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ
ಭಾವಭರಿತನು ಜ್ಞಾನಗಮ್ಯನು
ಎನಿಸುವ ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ
ಅಖಂಡೇಶ್ವರನೆಂಬ
ಅನಾದಿ ಪರಶಿವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ -ಷಣ್ಮುಖ ಸ್ವಾಮಿಗಳು.


8. ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಪ್ರಮಾಣ ಅಗೋಚರ ಅಪ್ರತಿಮ ಲಿಂಗವೇ
ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ -ಧರ್ಮಪಿತ ಬಸವಣ್ಣನವರು

9. ಅಯ್ಯಾ ! ಪಾತಾಳವಿತ್ತಿತ್ತ, ಶ್ರೀ ಪಾದವತ್ತತ್ತ
ಬ್ರಹ್ಮಾಂಡವಿತ್ತಿತ್ತ ಮಣಿಮುಕುಟವತ್ತತ್ತ !
ಅಯ್ಯಾ ! ದಶದಿಕ್ಕು ಇತ್ತಿತ್ತ ದಶಭುಜಂಗಳತ್ತತ್ತ
ಚನ್ನಮಲ್ಲಿಕಾರ್ಜುನಯ್ಯ,
ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ -ಅಕ್ಕಮಹಾದೇವಿ

10. ಜಗವನೊಳಕೊಂಡ ಲಿಂಗವು
ಸೊಗಯಿಸಿರ್ದೆನ್ನ ಕರಸ್ಥಲಕ್ಕೆ ಬಂದಿರಲು
ಕಂಡು ಹಗರಣವಾಯಿತ್ತೆನಗೆ !
ಗುರುಲಿಂಗ ಜಂಗಮ ಸ್ವರೂಪವಾಗಿ
ಮೂರ್ತಿಗೊಂಡಿತ್ತು ನೋಡಾ !
ಆಹಾ ಎನ್ನ ಪುಣ್ಯವೇ ! ಆಹಾ ಎನ್ನ ಭಾಗ್ಯವೇ !!
ಆಹಾ ಅಖಂಡೇಶ್ವರಾ;
ನಿಮ್ಮ ಘನವ ಕಂಡು ಎನ್ನ ಮನಕ್ಕೆ
ಮಂಗಳವಾಯಿತ್ತು ನೋಡಾ -ಷಣ್ಮುಖ ಸ್ವಾಮಿಗಳು

11. ಲಿಂಗಮಧ್ಯದೊಳಗೆ ಜಗವಿರ್ದಡೇನೋ ?
ಜಗವ ಹೊರಗಿಕ್ಕಿ ಲಿಂಗವನೊಳಗಿಟ್ಟುಕೊಂಡ
ಶರಣರ ಘನಕ್ಕೆ ಶರಣೆಂಬೆ,
ಆ ಮಹಾಘನವಾಯತಕ್ಕೊಳಗು,
ಪ್ರಳಯಕ್ಕೆ ಹೊರಗು ಕೂಡಲ ಚನ್ನಸಂಗಯ್ಯಾ -ಚೆನ್ನಬಸವಣ್ಣ

12. ತುಂಬಿಯೊಂದು ಬಂದಿತಲ್ಲಾ ವಾಮಕರದ ಕಮಲದೊಳಗೆ
ತುಂಬಿ ನಾನು ನಿಂದಿತಲ್ಲಾ ತನುಮನ ಭಾವತ್ರಯವ
ಲಿಂಗದೇವ ತುಂಬಿ ಬಂದು ಕರಕಮಲ ತುಂಬಿ ನಿಂತು
ಕಣ್ಣು ನೋಟ ತುಂಬಿಕೊಂಡು ಸವಿವ ಮನವ ತುಂಬಿತಲ್ಲಾ
ನೋಡ್ವ ಕಣ್ಣು ತುಂಬಿಕೊಂಡು ಭಾವ ತುಂಬಿ ಭಕ್ತಿ ತುಂಬಿ
ಹೊರ ಒಳಗೆ ತಾನು ತುಂಬಿ, ತುಂಬಿ ತುಂಬಿ ಮನಾಂಬುಜೆಯ
ತುಂಬಿಯಂತೆ ಮಾಡಿತಲ್ಲಾ ಎನ್ನಿರವ ಕೊಂಡೊಯ್ದು
ಝೇಂಕಾರ ನುಡಿಸುವ ತುಂಬಿ ವಿಜೃಂಭಣೆ
ಸಚ್ಚಿದಾನಂದಾ ಹೊನಲನು ತುಂಬಿತ್ತು. -ಮಾತೆ ಮಹಾದೇವಿ

13. ಅಂತರಂಗದೊಳಗಿದ್ದ ನಿರಾಕಾರ ಲಿಂಗವನು
ಸಾಕಾರಲಿಂಗವ ಮಾಡಿ, ಶ್ರೀ ಗುರುಸ್ವಾಮಿ
ಎನ್ನ ಕರಸ್ಥಲಕ್ಕೆ ತಂದುಕೊಟ್ಟನಯ್ಯಾ,
ಇಂತಪ್ಪ ಲಿಂಗವು ಅಂತರಂಗವನ್ನಾವರಿಸಿ,
ಅಂತರಂಗದ ಕರಣಂಗಳೇ ಕಿರಣಂಗಳಾಗಿ
ಆ ಬೆಳಗುವ ಚಿದಂಶಿಕವೇ ಪ್ರಾಣಲಿಂಗವು
ಆ ಮೂಲ ಚೈತನ್ಯವೇ ಭಾವಲಿಂಗವು.
ಇದನರಿದು ನೋಡುವ ನೋಟ
ಭಾವಪರಿಪೂರ್ಣವಾಗಿ, ತಾನು ತಾನಾದಲ್ಲದೇ
ಇದಿರಿಟ್ಟು ತೋರುವುದಿಲ್ಲವಾಗಿ,
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ ಕೂಡಲಸಂಗಮದೇವ, -ಧರ್ಮಪಿತ ಬಸವಣ್ಣನವರು

14. ಪ್ರಾಣಲಿಂಗದ ಪ್ರಸನ್ನ ಮುಖವ ಪರಿಣಾಮಿಸಲೋಸುಗ,
ಕರತೇಜವೆಂಬ ದರ್ಪಣವ ಹಿಡಿದಿರ್ಪನು ನೋಡಾ
ಗುಹೇಶ್ವರ ಲಿಂಗದಲ್ಲಿ
ನಿಜವನೈದಿಹೆನೆಂದರೆ, ಕುರುಹುವಿಡಿದು
ಕುರುಹುಗೆಡಬೇಕು ಕಾಣಾ ಸಿದ್ದರಾಮಯ್ಯ -ಅಲ್ಲಮ ಪ್ರಭುದೇವರು

15. ಮುಕುರವನೀಕ್ಷಿಪಂಗನೆಯ ಬುದ್ಧಿಯದೇಂ ವರರೂಪಹಾವಭಾವ
ಕಲ್ಪಿತ ವಿಭ್ರಮಾಪ್ತ ನಿಜಮೂರ್ತಿಯನೀಕ್ಷಿಪಲ್ಲಿಯೋ
ಮುಕುರವನೇ ನಿರೀಕ್ಷಿಪೆಡೆಯಲ್ಲಿಯೋ ತನ್ನನೇನೋಸೆ ಲೈಂ ।
ಗಿಕ ನಿಯಮಾರ್ಚನಾನುಭವ ದಕ್ಷಣದೊಳ್ ಶರಣಂ ಶಿವಾಧವಾ ||

ನೋಡದ ಮುನ್ನ ದರ್ಪಣದ ಭಾವಮು ದುಂಟು ವಿಭ್ರಮಂ |
ಗೂಡಿ ವಿರಾಜಿಸುತ್ತಭಿಮುಖಾಸ್ಪದಮಾದ ನಿಜಸ್ವರೂಪಮಂ ।
ನೋಡಿದನಂತರಂ ಮರಳಿದರ್ಪಣದ ಭಾವಮದುಂಟೆ ತತ್ತ್ವಮಂ |
ನೋಡದ ಮುನ್ನ ಮಾಯೆ ಬಳಿಕೆಲ್ಲಿಯ ಮಾಯೆ ಬಿಡಾ ಶಿವಾಧವಾ | -ಮಗ್ಗೆಯ ಮಾಯಿದೇವರು

16. ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬುವ ಚಿಂತೆ
ಎನಗೆ ನಮ್ಮ ಕೂಡಲಸಂಗಮದೇವನ ನೆನೆವುದೇ ಚಿಂತೆ -ಧರ್ಮಪಿತ ಬಸವಣ್ಣನವರು

17. ಎದೆ ಬಿರಿವನ್ನಕ್ಕೆ ಮನ ದಣಿವನ್ನಕ್ಕ
ನಾಲಿಗೆ ನಲಿನಲಿದಾಡುವನ್ನಕ್ಕ
ನಿಮ್ಮ ನಾಮಾಮೃತವ ತಂದೆರಸು ಕಂಡಯ್ಯಾ
ಎನಗೆನ್ನ ತಂದೆ ! ಬಿರಿಮುಗಳಂದದಿ ಎನ್ನಯ ಹೃದಯ
ನಿಮ್ಮ ಶ್ರೀ ಚರಣದ ಮೇಲೆ ಬಿದ್ದರಳುಗೆ ಕೂಡಲಸಂಗಮದೇವಾ. -ಧರ್ಮಗುರು ಬಸವಣ್ಣ

18. ಆಡಿ ಆಡಿ ಕಾಲು ದಣಿಯವು
ನೋಡಿ ನೋಡಿ ಕಣ್ಣು ದಣಿಯವು
ಹಾಡಿ ಹಾಡಿ ನಾಲಿಗೆ ದಣಿಯದು, ಇನ್ನೇವೆ ಇನ್ನೇವೆ ?
ನಾ ನಿಮ್ಮ ಕೈಯಾರೆ ಪೂಜಿಸಿ ಮನದಣಿಯಲೊಲ್ಲದಿನ್ನೇವೆನಿನ್ನೇವೆ ?
ಕೂಡಲಸಂಗಮದೇವ ಕೇಳಯ್ಯಾ
ನಿಮ್ಮುದರವ ಬಗಿದಾನು ಹೊಗುವ ಭರವೆನಗೆ. -ಧರ್ಮಗುರು ಬಸವಣ್ಣ

19. ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕೂಡಲಸಂಗಮದೇವಾ, ನಿಮ್ಮ ಚರಣ ಕಮಲದೊಳಗಾನು ತುಂಬಿ, -ಧರ್ಮಗುರು ಬಸವಣ್ಣ

20. ನೀನೊಲಿದರೆ ಕೊರಡು ಕೊನರುವುದಯ್ಯಾ,
ನೀನೊಲಿದರೆ ಬರಡು ಹಯನಹುದಯ್ಯಾ,
ನೀನೊಲಿದರೆ ವಿಷವು ಅಮೃತವಹುದಯ್ಯಾ,
ನೀನೊಲಿದರೆ ಸಕಲ ಪಡಿಪದಾರ್ಥಗಳು ಇದಿರಲಿರ್ಪುವು ಕೂಡಲಸಂಗಮದೇವಾ. -ಧರ್ಮಗುರು ಬಸವಣ್ಣ

21. ಎನ್ನ ಕರಸ್ಥಲದ ಮಧ್ಯದಲ್ಲಿ
ಪರಮ ನಿರಂಜನನ ಕುರುಹು ತೋರಿದ
ಆ ಕುರುಹಿನ ಮಧ್ಯದಲ್ಲಿ ಅರುಹಿನ ಕಳೆಯ ತೋರಿದ
ಆ ಕಳೆಯ ಮಧ್ಯದಲ್ಲಿ ಮಹಾಜ್ಞಾನದ ಬೆಳಗ ತೋರಿದ
ಆ ಬೆಳಗಿನ ನಿಲುವಿನೊಳಗೆ ಎನ್ನ ತೋರಿದ,
ಎನ್ನೊಳಗೆ ತನ್ನ ತೋರಿದ, ತನ್ನೊಳಗೆ ಎನ್ನನಿಂಬಿಟ್ಟುಕೊಂಡ
ಮಹಾಗುರುವಿಂಗೆ ನಮೋ ನಮೋ
ಎನ್ನುತಿರ್ದೆನಯ್ಯಾ ಅಖಂಡೇಶ್ವರಾ. - ಷಣ್ಮುಖ ಸ್ವಾಮಿಗಳು.

ಹೀಗೆ ಲಿಂಗಸ್ತವನ ತತ್ತ್ವದಲ್ಲಿ ದೇವರ ಸ್ವರೂಪ, ಅವನ ಕರುಣೆಯ ಮಹತ್ವ ಮುಂತಾದ ಭಾವವನ್ನೊಳಗೊಂಡಿರುವ ವಚನ ಮತ್ತು ಗೀತೆಗಳನ್ನು ಹಾಡಿ, ಕಡೆಯಲ್ಲಿ ಕುರಂಗ ಮುದ್ರೆಯಿಂದ ನಮಸ್ಕರಿಸಬೇಕು.

ಆಚಾರವೇ ಸ್ವರ್ಗ, ಅನಾಚಾರವೇ ನರಕ

3. ಲಿಂಗಾನುಸಂಧಾನ

ಭಕ್ತಿ-ಜ್ಞಾನಗಳಿಗಿರುವಷ್ಟೇ ಸ್ಥಾನ ಇಲ್ಲಿ ಯೋಗಕ್ಕಿದೆ. ಇಷ್ಟಲಿಂಗ ಯೋಗವು ಪ್ರಮುಖವಾಗಿ ತಾಟಕ ಯೋಗದ ಆಚರಣೆಯ ಮೇಲೆ ನಿಂತಿದೆ. ಮಾನವನು ಮನವನ್ನು ಏಕಾಗ್ರಗೊಳಿಸಲಿಕ್ಕಾಗಿ ದೃಷ್ಟಿಯೋಗವನ್ನು ಅಳವಡಿಸಿಕೊಂಬುದೇ ಇಷ್ಟಲಿಂಗಯೋಗದ ಮರ್ಮ.

ಪೂಜೆಗೆ ಕುಳಿತುಕೊಳ್ಳುವ ನಮ್ಮ ಬದಿಗೆ ಶಾಂತವಾಗಿ ಉರಿಯುವ ಜ್ಯೋತಿ ಇರಬೇಕು. ಆ ಜ್ಯೋತಿಯ ಕಳೆಯು ಇಷ್ಟಲಿಂಗದ ಕಂಥೆಯಲ್ಲಿ ಪ್ರತಿಫಲಿತವಾಗಬೇಕು. ಅದರ ಮೇಲೆ ದೃಷ್ಟಿ ನಿಲ್ಲಿಸುವುದು ಬಹಳ ಫಲದಾಯಕ. ಈಗ ಪೂಜೆಗೊಂಡಿರುವ ಇಷ್ಟಲಿಂಗವನ್ನು ಎಡ ಅಂಗೈಯಲ್ಲಿರಿಸಿ, ಕೈಯನ್ನು ಮೇಲಕ್ಕೆತ್ತಿ ಭೂಮಧ್ಯ ಅಥವಾ ಹೃದಯ ಕಮಲಕ್ಕೆ ಸಮಾನಾಂತರವಾಗಿ ಅಥವಾ ಮೂಗಿನ ತುದಿಗೆ ಸಮನಾಗಿ, ಸುಮಾರಾಗಿ ಹನ್ನೆರಡು ಅಂಗುಲ ದೂರದಲ್ಲಿ ನಿಲ್ಲಿಸಬೇಕು. ಕಣ್ಣು ರೆಪ್ಪೆಗಳನ್ನು ಪೂರ್ತಿ ಮುಚ್ಚದೆ ಅಥವಾ ಪೂರ್ತಿ ತೆರೆದಿರಿಸದೆ, ಅರೆತೆರೆದ (ಅನಿಮಿಷ) ಕಣ್ಣಿಂದ ಇಷ್ಟಲಿಂಗವನ್ನು ನಿರೀಕ್ಷಿಸಬೇಕು. ಈ ನಿರೀಕ್ಷೆಯೊಡನೆಯೇ “ಓಂ ಲಿಂಗಾಯ ನಮಃ” ಎಂಬ ಷಡಕ್ಷರಿ ಮಂತ್ರವನ್ನು ಮಾನಸಿಕವಾಗಿ ಜಪಿಸಬೇಕು. ಕನಿಷ್ಠ ಪಕ್ಷ 108 ಸಲ ತಪ್ಪದೇ ಜಪಿಸಬೇಕು.

ಜಪಮಾಲೆ ಇದ್ದರೆ ತುಂಬಾ ಲೇಸು. ಇಲ್ಲದಿದ್ದರೆ ಬೆರಳು ಕಂಡಿಕೆಯ ಸಹಾಯದಿಂದ ಎಣಿಸಬಹುದು. ಒಂದು ಬೆರಳಿಗೆ ಮೂರರಂತೆ ನಾಲ್ಕು ಬೆರಳಿಗೆ ಹನ್ನೆರಡಾಗುವವು. ಹನ್ನೆರಡರಂತೆ ಒಂಬತ್ತು ಬಾರಿ ಎಣಿಸಿದರಾಯ್ತು. ಬಹಳ ವೇಳೆ ಇದ್ದರೆ, ಮಂತ್ರ ಜಪ ಮಾಡುವಾಗ ಆನಂದವಾಗುವಷ್ಟು ಎಣಿಸುತ್ತಾ ಹೋಗಬೇಕು. 108 ರ ನಂತರ ಎಣಿಕೆ ಇರಬಾರದು. ಒಂದು ಸಾವಿರದಿಂದ ಹತ್ತು ಸಾವಿರದವರೆಗೆ ಜಪ ಮಾಡಬಹದು ಅನುಕೂಲಕ್ಕನುಸರಿಸಿ.

ಉಸಿರಾಟದ ಬಗ್ಗೆ ಸರಿಯಾದ ಗಮನವಿರಬೇಕು. ಅಂದರೆ ಉಚ್ಚಾಸ ನಿಶ್ವಾಸಗಳು ಸಮವೇಳೆಯಲ್ಲಿ ಆಡಬೇಕು. ಉಸಿರನ್ನು ಒಳಗೆ ಎಳೆದುಕೊಂಡಷ್ಟು ಕಾಲ ಹೊರಗೆ ಬಿಡಬೇಕು. ಆಗ “ಓಂ ಲಿಂಗಾಯ ನಮಃ'ವನ್ನು ನಿಧಾನವಾಗಿ ಉಸಿರಿನ ಮುಖಾಂತರ ಒಳಗೆ ಸೇರಿಸಿಕೊಂಡು ಷಟ್ಟಕ್ರಗಳನ್ನು ಭೇದಿಸುವೆನೆಂಬ ಭಾವದಿಂದ ಇಳಿಸಬೇಕು. ನಂತರ ಅಷ್ಟೇ ಪ್ರಮಾಣದ ವೇಳೆಯಲ್ಲಿ ಮಂತ್ರಸಹಿತವಾಗಿ ಹೊರಗೆ ವಿಸರ್ಜಿಸಬೇಕು. ಆಲಿ-ಗಾಳಿ-ಮನ ಈ ಮೂರೂ ಪರಸ್ಪರ ಸಂಬಂಧಿಗಳು. ಇವು ಒಟ್ಟಾಗಿಯೇ ಕೆಲಸ ಮಾಡುವವು.

4. ಲಿಂಗ ಧ್ಯಾನ

ಅರೆತೆರೆದ ಅನಿಮಿಷ ನೇತ್ರದಿಂದ ಇಷ್ಟಲಿಂಗದ ಅನುಸಂಧಾನ ಮಾಡಿದ ಬಳಿಕ ಕಣ್ಣನ್ನು ಪೂರ್ತಿಮುಚ್ಚಿ ದೃಷ್ಟಿಯನ್ನು ಭ್ರೂಮಧ್ಯಕ್ಕೆ ನೆಲೆನಿಲ್ಲಿಸಿ, ನಾಭಿಸಮಾನಾಂತರಕ್ಕೆ ಕೈಗಳನ್ನು ಇರಿಸಬೇಕು. ಬಲಗೈಯನ್ನು ಕೆಳಗೆ ಎಡಗೈಯನ್ನು ಮೇಲೆ ಇರಿಸಿ ಮನಸ್ಸಿನಲ್ಲಿ “ಓಂ ಲಿಂಗಾಯ ನಮಃ” ಮಂತ್ರವನ್ನು ಮನನಿಸಬೇಕು. ಆಗ ಮೇಲೆ ತಿಳಿಸಿದಂತೆ ಉಸಿರಾಟದ ಬಗ್ಗೆ ಎಚ್ಚರಿಕೆ ವಹಿಸಬೇಕು. ಪರಮಾತ್ಮನನ್ನು ಆಂತರಿಕವಾಗಿ ಅನುಸಂಧಾನಿಸಬೇಕು. ಇಷ್ಟಲಿಂಗಪೂಜೆಯ ಜೀವಾಳವೇ ಲಿಂಗಾನುಸಂಧಾನ, ಲಿಂಗ ಧ್ಯಾನಗಳು.

5.ಲಿಂಗ ಕರುಣೋದಕ - ಕರುಣಪ್ರಸಾದ

ಪೂಜಿಸಿದುದಕ್ಕೆ ಪ್ರತಿಫಲ ಕರುಣೋದಕ – ಕರುಣಪ್ರಸಾದ. ದಿನನಿತ್ಯ ಜೀವನದಲ್ಲಿ ನಮ್ಮ ನಾಲಿಗೆಯ ಮೇಲೆ ಮೊಟ್ಟ ಮೊದಲು ಕರುಣೋದಕ-ಕರುಣಪ್ರಸಾದ ಬಿದ್ದು ನಂತರ ಉಣಿಸು-ತಿನಿಸುಗಳ ಸ್ವೀಕಾರ, ಲಿಂಗಧ್ಯಾನದ ನಂತರ ಇಷ್ಟಲಿಂಗಕ್ಕೆ ನಮಸ್ಕಾರ ಕುರಂಗ ಮುದ್ರೆಯಿಂದ ನಮಸ್ಕರಿಸುತ್ತ ಪಂಚಮಂತ್ರಗಳನ್ನು ಹೇಳಬೇಕು.

1. ಶ್ರೀ ಗುರು ಬಸವಲಿಂಗ ಶರಣಾಗಿದೆ
2. ಲಿಂಗದೇವನಿಗೆ ಶರಣಾಗಿದೆ
3. ಶರಣ ಗಣಕ್ಕೆ ಶರಣಾಗಿದೆ
4. ಕರುಣ ಪ್ರಸಾದ ಸ್ವೀಕರಿಸಿಹೆ
5. ಗಣ ಪದವಿಯನ್ನು ನಾ ಹೊಂದಿದೆ

ನಮಸ್ಕಾರದ ನಂತರ ಈಗ ಇಷ್ಟಲಿಂಗಕ್ಕೆ ಅರ್ಪಿಸಿರುವ ಹೂವು-ಪತ್ರೆಗಳನ್ನು ಎತ್ತಿ ಕಣ್ಣಿಗೊತ್ತಿಕೊಂಡು ಮಜ್ಜನ ಸಾಲೆಯಲ್ಲಿ ವಿಸರ್ಜಿಸಬೇಕು. ಪಂಚಪಾತ್ರೆ ಅಥವಾ ಬಟ್ಟಲಲ್ಲಿ ನೀರನ್ನು ಹಾಕಿ, ಐದು ಬೆರಳುಗಳಿಗೆ ಭಸ್ಮವನ್ನು ಧರಿಸಿ ಹನ್ನೆರಡು ಬಾರಿ ಓಂ ಶ್ರೀ ಗುರುಬಸವಲಿಂಗಾಯ ನಮಃ ಮಂತ್ರವನ್ನೆಣಿಸಿ, ಅವುಗಳನ್ನು ನೀರಿನಲ್ಲಿ ಎದ್ದಿ ಈ ಅಭಿಮಂತ್ರಿತ ನೀರನ್ನು ಎಡಗೈಯಲ್ಲಿನ ಇಷ್ಟಲಿಂಗದ ಮೇಲೆ ಮೂರು ಬಾರಿ ಎರೆಯಬೇಕು. ಒಂದೊಂದು ಬಾರಿ ಎರೆಯುವಾಗ ಕ್ರಮವಾಗಿ ಹೀಗೆ ಹೇಳಬೇಕು.

1. ಬಸವ ಕರುಣೋದಕ (ಧರ್ಮಗುರು ಬಸವಣ್ಣನ ಕರುಣೆ)
2. ಲಿಂಗ ಕರುಣೋದಕ (ಜಗತ್ಕರ್ತ ಲಿಂಗದೇವನ ಕರುಣೆ)
3. ಶರಣ ಕರುಣೋದಕ (ಸರ್ವ ಶರಣರ ಕರುಣೆ)


ಹೀಗೆ ಗುರು-ಲಿಂಗ-ಜಂಗಮರಾದ ಧರ್ಮಗುರು ಬಸವಣ್ಣನವರು, ಸೃಷ್ಟಿಕರ್ತ ಲಿಂಗದೇವ ಮತ್ತು ಸರ್ವ ಶರಣರು ಗುರುಕೊಟ್ಟ ಇಷ್ಟಲಿಂಗದಲ್ಲಿಯೇ ಇದ್ದಾರೆಂದು ಭಾವಿಸಿ, ಅವರನ್ನು ಇಲ್ಲಿ ಸಂಬಂಧಿಸಿಕೊಂಡು ತೀರ್ಥ ಪ್ರಸಾದ ಸ್ವೀಕರಿಸಬೇಕು. ಗುರು-ಲಿಂಗ-ಜಂಗಮರನ್ನು ಇಷ್ಟಲಿಂಗದಲ್ಲಿಯೇ ಭಾವಿಸಿ ತೀರ್ಥ-ಪ್ರಸಾದ ಸ್ವೀಕರಿಸುವುದು ಸಂಬಂಧಾಚರಣೆ. ಅಂತಹ ವಿಶೇಷ ಮಹಿಮಾನ್ವಿತರು, ಜ್ಞಾನಿಗಳು, ಯೋಗಿಗಳು, ಮಂತ್ರಸಿದ್ಧಿಯಾದವರು ಲಭ್ಯವಾದಾಗ ಅವರ ಪಾದವನ್ನು ಪೂಜಿಸಿ, ಪಾದೋದಕ ಸ್ವೀಕಾರ ಮಾಡುವ ಸಹಜಾಚರಣೆ ಉತ್ತಮ. ಅಂಥವರು ಸಿಗುವುದು ದುರ್ಲಭವಾದ ಕಾರಣ ಲಿಂಗ ತೀರ್ಥ ಪ್ರಸಾದವೇ ಸರ್ವವಿಧದಲ್ಲೂ ಶ್ರೇಯಸ್ಕರ.

ಈಗ ಲಿಂಗದೇವ ಮಂಗಲವನ್ನು ಮಾಡಬೇಕು.

ಜಯ ಜಯ ಘನಲಿಂಗ ಹೇ ಸಚ್ಚಿದಾನಂದ
ಜಯ ಜಯ ಘನಲಿಂಗ ಹೇ ಸಚ್ಚಿದಾನಂದ
ಗಣಲಿಂಗವಾಗಿಹ ಜಯ ಲಿಂಗದೇವ ಜೈ ಜೈ || ಪಲ್ಲವಿ||

ಹುಟ್ಟು ಸಾವುಗಳಿಲ್ಲ ಮುಟ್ಟು ಮೈಲಿಗೆಯಿಲ್ಲ
ಮಾತಾಪಿತೃಗಳಿಲ್ಲ ಬಂಧು ಬಾಂಧವರಿಲ್ಲ
ಜಾತಿ ಗೋತ್ರಗಳಿಲ್ಲಿ ಮೇಲು ಕೀಳುಗಳಿಲ್ಲ
ಹೆಣ್ಣಲ್ಲ ಗಂಡಲ್ಲ ಪಶು ಪಕ್ಷಿಯಲ್ಲ ಜೈ ಜೈ || 1 ||

ಆದಿ ಅಂತ್ಯಗಳಿಲ್ಲಿ ನಾಮ ಸೀಮೆಗಳಿಲ್ಲ
ಎಡೆಯಿಲ್ಲ ಕಡೆಯಿಲ್ಲ ಜಗದೊಡೆಯ ನೀನು
ಕುಲವಿಲ್ಲ ಛಲವಿಲ್ಲ ಪತ್ನಿ - ಪುತ್ರರು ಇಲ್ಲ
ನಾಮ ರೂಪುಗಳಿರದ ಬಯಲ ಬ್ರಹ್ಮ ಜೈ ಜೈ ||2||

ಸೃಷ್ಟಿ ಸ್ಥಿತಿ ಲಯಗಳ ಕಾರಣ ಕರ್ತೃವೆ
ನಿತ್ಯ ನಿರ್ಮಲನೆ ಸತ್ಯ ಶಾಶ್ವತನೆ
ಕರುಣೆಯಿಂ ಇಳೆಗಿಳಿದ ಆನಂದ ರೂಪನೆ
ಸಾಕ್ಷಿಚೇತನವಾದ ಜಯ ಗಣಲಿಂಗ ಜೈ ಜೈ || 3 ||

ಅಮೂಲ್ಯ ಅಗಮ್ಯ ಅಪ್ರಮಾಣನೆ ದೇವಾ
ನಿನ್ನ ಸ್ತುತಿಸಲು ನಾನು ಎಷ್ಟರವಳಯ್ಯಾ
ಮಂಗಳಾರತಿ ಬೆಳಗಿ ಜಯ ಘೋಷಗೈವೆ
ಸಚ್ಚಿದಾನಂದ ನೀ ಘನ ಲಿಂಗದೇವಾ ಜೈ ಜೈ || 4 ||

ಜಯಜಯ ಘನಲಿಂಗ ಜಯ ಜಯ ಮಂಗಳಾಂಗ
ಜಯತು ಜಯ ಬಸವಗುರು ಪ್ರಾಣೇಶ ಲಿಂಗ
ಜಯ ಭಕ್ತವತ್ಸಲ ಇಷ್ಟಪ್ರದಾಯಕ
ಜಯ ಸಚ್ಚಿದಾನಂದ ಜಯ ಲಿಂಗದೇವ ಓಂ ಓಂ ಓಂ

ಇಷ್ಟಲಿಂಗವನ್ನು ತೇವವಿಲ್ಲದಂತೆ ಚೆನ್ನಾಗಿ ಒರೆಸಿ, ಮೂರೆಳೆ ವಿಭೂತಿ ಧರಿಸಿ, ಸಣ್ಣ ಬಟ್ಟೆಗೆ ಪಂಚಕೋನ-ಪ್ರಣವವ ಬರೆದು, ಆ ಪಾವುಡದಲ್ಲಿ ಇಷ್ಟಲಿಂಗವನ್ನಿರಿಸಿ, ಕರಡಿಗೆಯಲ್ಲಿ ಇರಿಸಬೇಕು. ಕರಡಿಗೆಯೊಳಗೆ ಇಟ್ಟುಕೊಂಡ ಬಳಿಕ ಬಸವ ಗುರು ಮಂಗಲವನ್ನು ಹಾಡಿ ಪೂಜೆಯನ್ನು ಪೂರ್ಣಗೊಳಿಸಬೇಕು.

ಮಂಗಲ
ಓಂ ಗುರು ಬಸವಪ್ರಭು ವರಗುರು ಶರಣವಿಭು
ಆಶ್ರಿತಜನ ಸಂರಕ್ಷಕ ಸದ್ಗುರು ಬಸವ ಪ್ರಭು | ವರಗುರು ಶರಣವಿಭು ||ಪ||

ಶರಣಲೋಲನು ನೀ ಪರಮ ಪುರುಷನು ನೀ
ಕರುಣಾ ಸಿಂಧೂ ನೀ ದೀನರ ಬಂಧು ನೀ ||
ಸುಭಗಗಾತ್ರನು ನೀ ಪ್ರೇಮ ನೇತ್ರನು ನೀ
ಪರಮ ಚರಿತನು ನೀ ಜ್ಞಾನಭರಿತನು ನೀ || 1 ||

ಭವಭಯ ತಾರಕನೇ ನವಪಥದಾಯಕನೇ
ಹರಗಣ ತಾರೆಗಳ ನಡುವಿನ ಚಂದಿರನೇ ||
ಮಾತಾಪಿತನೂ ನೀ ಬಂಧು ಬಳಗವು ನೀ
ಭಕ್ತಜನ ಮನೋರಾಜಿತ ಮಂತ್ರಪುರುಷನು ನೀ || 2 ||

ಮೋಹರಹಿತನು ನೀ ಮಮತಾ ಸಹಿತನು ನೀ
ಮಾಯಾದೂರಕ ನೀ ಮುಕುತಿಯದಾಯಕ ನೀ ||
ಮನುಕುಲ ಜ್ಯೋತಿಯು ನೀ ಕ್ರಾಂತಿಯ ವೀರನು ನೀ
ಶಾಂತಿಯ ಹೊನಲು ಹರಿಸಲು ಬಂದ ಸಚ್ಚಿದಾನಂದ ಸುತ ನೀ ||3||

ಮಂಗಲಗೀತೆಯನ್ನು ಹಾಡಿದ ನಂತರ ಮಂಗಲ ಘೋಷ ಮತ್ತು ಜಯಕಾರಗಳನ್ನು ಮಾಡಬೇಕು.

ಜಯ ಬಸವರಾಜ ಭಕ್ತಜನ ಸುರಭೂಜ
ಜಯತು ಮಹಾಕಾರಣಿಕ ಲಿಂಗದೇವನ ಘನತೇಜ
ಜಯತು ಕರುಣಾಸಿಂಧು ಭಜಕ ಜನ ಬಂಧು
ಜಯ ಇಷ್ಟದಾಯಕ ರಕ್ಷಿಸು ಶ್ರೀ ಗುರು ಬಸವಾ
ಜಯಗುರು ಬಸವೇಶ ಹರ ಹರ ಮಹಾದೇವ
ವಿಶ್ವಗುರು ಬಸವೇಶ್ವರ ಮಹಾತ್ಮಾ ಕೀ ಜೈ ಸಕಲ ಶರಣ ಸಂತೋಂಕಿ ಜೈ.......

ಗ್ರಂಥ ಋಣ:
೧) ದೇವ ಪೂಜಾ ವಿಧಾನ, ಲೇಖಕರು: ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಸಂಕ್ಷಿಪ್ತ ಪೂಜಾ ವಿಧಾನ ದೇವರ ಕಲ್ಪನೆ Next