Previous ಮಿದುಳಿನಲ್ಲಿ ದೇವರಿದ್ದಾನೆ? ಲಿಂಗಾಯತ ಧರ್ಮದ *ಗರ್ಭಲಿಂಗಧಾರಣೆ* ಸಂಸ್ಕಾರ Next

ಇಷ್ಟಲಿಂಗ ಕಂಥೆ/ಕಂತೆಯ ಆಕಾರ

*

Ishtalinga
ಚಿತ್ರದಲ್ಲಿ ತೋರಿಸಿದ ಹಾಗೆ ಲಿಂಗವು ಅಂಡಾಕಾರವಾಗಿರುತ್ತದೆ. ಲಿಂಗದ ಮೇಲ್ಮೈ ಮಧ್ಯವು ಉಬ್ಬಾಗಿರುವುದರಿಂದ (Curvature) ಅಲ್ಲಿ ಶಕ್ತಿಕಣಗಳು ಹೆಚ್ಚು ಹೆಚ್ಚಾಗಿ ಸಂಗ್ರಹವಾಗಿರುತ್ತವೆ. ಕಾರಣ ಲಿಂಗವನ್ನು ಈ ವಿಶಿಷ್ಟ ಮಾದರಿಯಲ್ಲಿ ತಯಾರಿಸಲಾಗುತ್ತದೆ. ಭೌತಶಾಸ್ತ್ರ (Physics)ದ ಪ್ರಕಾರ ಇದರ ಆಕಾರವನ್ನು ಮಾಡಲಾಗಿದೆ.

ಈ ಲಿಂಗ ಸಾಧನೆಯ ಪ್ರಯೋಜನ ಹಾಗೂ ಉಪಯೋಗಗಳು: ಈ ಲಿಂಗದ ತಳವು ರೊಟ್ಟಿ ಬೇಯಿಸುವ ಹಂಚಿನ ತಳದ ಹಾಗೆ ಉಬ್ಬಾಗಿರುತ್ತದೆ. ಅದು ಚುಳುಕದ ಪ್ರಮಾಣವಿರಬೇಕೆಂದು ಆಧಾರವಿದೆ. ಚುಳುಕ ಅಂದರೆ ಅಂಗೈಯ ತಗ್ಗು. ಈ ಅಂಗೈಯಲ್ಲಿ ಲಿಂಗವನ್ನು ಇಡಲು ಕಾರಣವೇನೆಂದರೆ:
ಭೌತರಸಾಯನ ಶಾಸ್ತ್ರದ (Physical Chemistry) ಪ್ರಕಾರ " ಯಾವುದೇ ಒಂದು ಕಪ್ಪು ವಸ್ತುವಿಗೆ ನಾವು ಉಷ್ಣತೆಯನ್ನು ಕೊಟ್ಟಾಗ ಅದು ತನ್ನ ಮೇಲ್ಮೈ ಮೇಲೆ ಬಿದ್ದ ಶಕ್ತಿ ಕಣಗಳನ್ನು ಹೀರಿಕೊಳ್ಳುತ್ತದೆ. ಹಾಗೆಯೇ ಹೊರಹಾಕುತ್ತದೆ" (Black body radiation) ನಮ್ಮ ಶರೀರದ ಉಷ್ಣತೆಯು ಅಂಗೈ ಮಧ್ಯಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುತ್ತದೆ. ಕಾರಣ ಅಲ್ಲಿ ನಾವು ಲಿಂಗವನ್ನು ಇಟ್ಟಾಗ, ನಮ್ಮ ದೇಹದ ಬಿಸಿ ಲಿಂಗಕ್ಕೆ ಬರುತ್ತದೆ. ಕಾರಣ ಅದು ಬಾಹ್ಯದಿಂದ ಬರುವ ಶಕ್ತಿಕಣಗಳನ್ನು ಹೀರಿಕೊಂಡು ತನ್ನಲ್ಲಿ ಸಂಗ್ರಹಮಾಡಿಕೊಳ್ಳುತ್ತದೆ.

ಕಾರ್ಲ್‍ಸಾಗನ್ ( Carl Sagan) ವಿಜ್ಞಾನಿ ತಂಡದವರ ಲೆಕ್ಕದ ಪ್ರಕಾರ, ಅತೀ ಪುಟ್ಟ ಜೀವಕಣಗಳು (ಅಂದರೆ ನಮ್ಮ ಕಣ್ಣಿನ ಕೂದಲಿನ ದಪ್ಪದ ಸಾವಿರದೊಂದು ಭಾಗದಷ್ಟು ಗಾತ್ರದ ಕಣಗಳು) ಉಲ್ಕೆ ಅಥವಾ ಧೂಮಕೇತುಗಳ ಸವಾರಿ ಮಾಡದೇ ಸ್ವತಂತ್ರವಾಗಿ ಭೂಮಿಯತ್ತ ತೇಲಿ ಬಂದರೆ ಅವು ವಾತಾವರಣದ ಘರ್ಷಣೆಗೆ ಉರಿಯುವುದಿಲ್ಲ ಮೆಲ್ಲಗೆ ಭೂಮಿಯನ್ನು ತಿರುಪಣಿಯ ಹಾಗೆ ಸುತ್ತುತ್ತ ನಿಧಾನವಾಗಿ ಇಳಿಯುತ್ತವೆ. ವರ್ಷಕ್ಕೆ ಅರವತ್ತು ಸಾವಿರ ಟನ್‍ಗಳಷ್ಟು ಸಾವಯ ಕಣಗಳು ಸದಾಕಾಲ ಭೂಮಿಗೆ ಬರುತ್ತಿರುತ್ತವೆ. ಇವುಗಳನ್ನೆ ನಮ್ಮ ಇಷ್ಟಲಿಂಗವು (ಕಾಂತಿ) ಅಂಗೈ ಬಿಸಿ ತಾಗಿದಾಗ ಶಕ್ತಿಕಣಗಳನ್ನು ಹೀರಿಕೊಳ್ಳುತ್ತವೆ. ಈ ಎಲ್ಲ ಕಣಗಳು ಎಲ್ಲಿಂದ ಬರುತ್ತವೆ? ಎನ್ನುವುದನ್ನು ನಾವು ವಿಚಾರಿಸಿದಾಗ ವಿಜ್ಞಾನಿಗಳು ಈ ರೀತಿ ಹೇಳಿದ್ದಾರೆ.

ಹ್ಯಾಂಬರ್ಗ್ ವಿಜ್ಞಾನ ಪತ್ರಿಕೆಯ ವರದಿ ಪ್ರಕಾರ ಸೂರ್ಯ, ಚಂದ್ರ, ಭೂಮಿಯನ್ನು ಒಳಗೊಂಡಿರುವ ಈ ಸೌರಮಂಡಲದ ಕೊನೆಯಲ್ಲಿ ಏನಿರಬಹುದು ಎಂದು ತಿಳಿಯಲು ಅಮೆರಿಕಾ ಹದಿನಾರು ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಕಳಿಸಿದ ಎರಡು ಮಾನವರಹಿತ ಗಗನ ನೌಕೆಗಳು ಈ ಬಗ್ಗೆ ಮೊದಲ ಮಾಹಿತಿ ನೀಡಿವೆ. ಅಲ್ಲಿ ಸೂರ್ಯನ ಬೆಳಕು ಕಾಣದಾದಾಗ, ಗಾತ್ರದಲ್ಲಿ ವಿಸ್ತರಣೆಗೊಳ್ಳುವ ವಿದ್ಯುತ್ ಕಾಂತೀಯ ಕಣಗಳಿಂದ ಕೂಡಿದ ಅದನ್ನು 'ಹೆಲಿಯೋ ಪಾಜ್' ( Heliopause, Heliopause) ವಲಯ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.

ಈ 'ಹೆಲಿಯೋ ಪಾಜ್' ವಲಯದಿಂದ ಬಂದಂತಹ ಪುಟ್ಟ ಪುಟ್ಟ ಕಣಗಳು ಸೊನೆಮಳೆಯ ಹಾಗೆ ಸದಾಕಾಲ ಭೂಮಿಯತ್ತ ಬರುತ್ತಿರುತ್ತವೆ. ಈ ವಿಜ್ಞಾನವನ್ನು ಶರಣರು ಮೊದಲೆ ಕಂಡುಕೊಂಡಿದ್ದರು. ಅವರ ಒಂದು ವಚನದಲ್ಲಿ ಹೀಗಿದೆ:

"ಅದ್ಭುತದಾಕಾಶದಲ್ಲಿ ಶುಭ್ರವರ್ಣದ ಅಂಗನೆ
ವಿದ್ಯುರ್ಲತೆಯ ಹಡೆದಳು ನೋಡಾ!
ವಿದ್ಯುರ್ಲತೆಯ ಬೆಳಗಿನಿಂದ ಶುದ್ಧಪ್ರಸಾದವ ಕಂಡು
ಶುದ್ಧಾಶುದ್ಧವನಳಿದು, ನಾ ನೀನೆಂಬುದ ಹೊದ್ದದೆ
ಎರಡಳಿದ ನಿರಾಳ ನೀನೇ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ." - ತೋಂಟದ ಸಿದ್ಧಲಿಂಗ ಶಿವಯೋಗಿಗಳು /೩೩೨ [#]

ವಿಜ್ಞಾನಿಗಳು ಸೂಚಿಸಿದ ಹೆಲಿಯೋ ಪಾಸ್ ವಲಯವೆಂದರೆ ಅದ್ಭುತದಾಕಾಶ. ಅಲ್ಲಿಯ ವಿದ್ಯುತ್ ಕಾಂತೀಯ ಕಣಗಳಿಗೆ "ಶುಭ್ರವರ್ಣದ ಅಂಗನೆ" ಎಂದು ಕರೆದಿದ್ದಾರೆ. ಅಲ್ಲಿಂದ ಶಕ್ತಿಕಣಗಳು ಭೂಮಿಯತ್ತ ಬರುವುದಕ್ಕೆ ವಿದ್ಯುರ್ಲತೆ ಎಂದು ಸೂಚಿಸಿದ್ದಾರೆ. ಈ ವಿದ್ಯುರ್ಲತೆಯ ಬೆಳಕಿನಿಂದ ಶುದ್ಧಪ್ರಸಾದವ ಕಂಡು ಇದರಲ್ಲಿ ಬೆಳಕು ಅನ್ನುವುದು ಪರಮಾತ್ಮ ಅಥವಾ ಪರಮಾತ್ಮನ ಚೈತನ್ಯ (ಶಕ್ತಿ)ವಾಗಿದೆ. ಶರಣರು ಸೂಚಿಸಿರುವ ಪರಮಾತ್ಮನ ಸ್ವರೂಪ ಹೇಗಿದೆ ಎಂದರೆ ಜ್ಯೋತಿ ಸ್ವರೂಪವೆಂದು ಹೇಳುತ್ತಾರೆ. ಅದನ್ನೆ ಯೇಸು ಸ್ವಾಮಿಯು ಕೂಡಾ ಪರಮಾತ್ಮನು ಬೆಳಕಿನ ಸ್ವರೂಪದಲ್ಲಿದ್ದಾನೆ (The GOD is light). ಹಾಗೆಯೆ ಮಹಾತ್ಮ ಪೈಗಂಬರರು ಕೂಡಾ ಪರಮಾತ್ಮನು ಬೆಳಕಾಗಿದ್ದಾನೆ (ಅಲ್ಲಾ ನೂರ ಹೈ) ಎಂದು ಹೇಳಿದ್ದಾರೆ. ಈ ಬೆಳಕನ್ನು (ಚೈತನ್ಯ) ಲಿಂಗದ ಮುಖಾಂತರ ನಮ್ಮ ಕಣ್ಣಿನಿಂದ ಶರೀರದ ಒಳಗೆ ತೆಗೆದುಕೊಂಡಾಗ ಅದು ಪ್ರಸಾದವೆನಿಸಿಕೊಳ್ಳುತ್ತದೆ. ಅದು ಶುದ್ಧ, ಸಿದ್ಧ, ಪ್ರಸಿದ್ಧ ಎಂದು ಮೂರು ಬಗೆಯ ಪ್ರಸಾದವಾಗಿರುತ್ತದೆ.

ಇಲ್ಲಿ ಪ್ರಸಾದವೆಂದರೆ ಪರಮಾತ್ಮನೇ, ಅಂದರೆ ಲಿಂಗದಿಂದ ಬಂದ ಪ್ರಸಾದ. ಆ ಲಿಂಗದಲ್ಲಿ ಗುರು, ಲಿಂಗ, ಜಂಗಮರಿದ್ದಾರೆ. ಆ ಗುರು, ಲಿಂಗ, ಜಂಗಮರಿಂದಲೇ ಮೇಲೆ ಸೂಚಿಸಿದ ಶುದ್ಧ-ಸಿದ್ಧ-ಪ್ರಸಿದ್ಧ ಪ್ರಸಾದಗಳೆಂದಾಗುತ್ತವೆ. ಇವು ಮೂರು ಒಂದೇ ಆಗಿವೆ. ತೋಂಟದ ಸಿದ್ಧಲಿಂಗೇಶ್ವರರು ಈ ಕೆಳಗಿನ ವಚನದಲ್ಲಿ ಇದನ್ನೆ ಸೂಚಿಸಿದ್ದಾರೆ.

ಪಶ್ಚಿಮಚಕ್ರದಲ್ಲಿ ನಿತ್ಯ ನಿರಂಜನನ ಬೆಳಗು
ತತ್ತ್ವಬ್ರಹ್ಮಾಂಡದಿಂದತ್ತತ್ತಲಾದ ಘನ ನೋಡಾ.
ಅದು ಪರಂಜ್ಯೋತಿ ಪರತತ್ವ ಪರಾಪರವಸ್ತುವೇ
ಪ್ರಸಾದ ನೋಡಾ.
ಪ್ರತಿಯಿಲ್ಲದ ಅಪ್ರತಿಮ ಪ್ರಸಾದದಲ್ಲಿ ನಿಃಪತಿಯಾಗಿ
ಮಹಾಪ್ರಸಾದಿಯಾದೆನು ನೋಡಾ,
ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ. /538 [#]

ಇಲ್ಲಿ ಪಶ್ಚಿಮ ಚಕ್ರವೆಂದರೆ, ಪೀನಿಯಲ್ ಗ್ರಂಥಿಯಾಗಿದೆ (ಶಂಕುಗ್ರಂಥಿ) ಇದನ್ನೇ ಮೂನ್ನೂರು ವರ್ಷಗಳಿಂದೀಚೆಗೆ ಡೆಕಾರ್ಟ್ ( René Descartes) ಎಂಬ ವಿಜ್ಞಾನಿಯು "ಮಿದುಳೇ ಮನಸ್ಸಿನ ವಾಸಸ್ಥಾನ" [Descartes suggested that the pineal gland is "the seat of the soul"] ಎಂದು ಸೂಚಿಸಿದ್ದಾನೆ. ಪೀನಿಯಲ್ ( Third Eye - Pineal Gland ) ಗ್ರಂಥಿಯು ಮನಸ್ಸು ಮತ್ತು ಭೌತದ್ರವ್ಯಗಳು ಸಂಧಿಸುವ ಸ್ಥಲಮಾತ್ರವಲ್ಲದೆ ಆತ್ಮದ ವಾಸಸ್ಥಾನವೆಂದು ಹೇಳಿದ್ದಾನೆ.

ಮನಸ್ಸಿನ ಹಿಂದೆ ಆತ್ಮವಿದೆ, ಅದೇ ಮನಸ್ಸಿನ ನಿಜವಾದ ಆಸ್ತಿತ್ವ. ಶರೀರ ಮತ್ತು ಮನಸ್ಸು. ಅದರ ಮೂಲ ದ್ರವ್ಯಗಳು. ಆತ್ಮವೆಂಬುದು ಶುದ್ಧವಾದ ಒಂದು ಚೈತನ್ಯ. ಮನಸ್ಸು ಆತ್ಮ ಅಲ್ಲ. ಅದರೆ ಅದು ಆತ್ಮದಿಂದ ಬೇರೆಯೆ ಆದದ್ದು.

ಆತ್ಮವು ಈ ಲೋಕದೊಂದಿಗೆ ವ್ಯವಹರಿಸಲು ಬಳಸುವ ಮನಸ್ಸೆಂಬ ಉಪಕರಣವು ನಿರಂತರವಾಗಿ ಬದಲಾವಣೆ ಹೊಂದುವ ಹಾಗೂ ಹೊಯ್ದಾಡುವ ಸ್ವಭಾವವುಳ್ಳದ್ದು, ಅದು ತನ್ನ ಈ ಚಾಂಚಲ್ಯವನ್ನು ಕಳೆದುಕೊಂಡು ಯಾವಾಗ ಸ್ಥಿರವಾಗಬಲ್ಲದೋ ಆಗ ಅದು ಆತ್ಮವನ್ನು ಪ್ರತಿಬಿಂಬಸಬಲ್ಲದು.

ಶರಣರ ವಿಚಾರದಲ್ಲಿ ಗುರು, ಲಿಂಗ, ಜಂಗಮ, ಪ್ರಸಾದ, ಆಚಾರ ಇವೆಲ್ಲವೂ ಪರಮಾತ್ಮನೇ ಆಗಿವೆ. ನಾವೆಲ್ಲರೂ ಮೃಷ್ಟಾನ್ನ ಭೋಜನಗಳನ್ನು ತಾಟಿನಲ್ಲಿ ಇಟ್ಟು ಕಲ್ಲಿನಿಂದಲೋ, ಮಣ್ಣಿನಿಂದಲೋ ಮರಗಳಿಂದಲೋ ಹಾಗೂ ಕಂಚುಗಳಿಂದಲೋ ಮುಂತಾದವುಗಳಿಂದ ತಯಾರಿಸಿದ ದೇವರುಗಳಿಗೆ ಎಡೆಹಿಡಿದು ಅದನ್ನು ಪ್ರಸಾದವೆಂದು ಸೇವಿಸುತ್ತೇವೆ. ಇದು ಶರಣರ ದೃಷ್ಟಿಯಲ್ಲಿ ತಪ್ಪಾಗಿದೆ. ಚೆನ್ನಬಸವಣ್ಣನವರು ಈ ಕೆಳಗಿನ ವಚನದಲ್ಲಿ ಹೀಗೆ ಸೂಚಿಸಿದ್ದಾರೆ.

ಪ್ರಸಾದ ಪ್ರಸಾದವೆಂದು ಹೆಸರಿಟ್ಟು ನುಡಿವವರಿಗೆ ಪ್ರಸಾದವೆಲ್ಲಿಯದೋ?
ಮನಮುಟ್ಟಿ ಕೊಂಡುದು ಪ್ರಸಾದವಲ್ಲ, ತನುಮುಟ್ಟಿ ಕೊಂಡುದು ಪ್ರಸಾದವಲ್ಲ,
ಧನಮುಟ್ಟಿ ಕೊಂಡುದು ಪ್ರಸಾದವಲ್ಲ.
ಅವು ಏಕಾಗಿ ತ್ರಿವಿಧಸಾಹಿತ್ಯದಲ್ಲಿ ಮುಟ್ಟಿ ಕೊಂಡುದು ಪ್ರಸಾದವಲ್ಲ.
ಇಕ್ಕುವವ ಶಿವದ್ರೋಹಿ, ಕೊಂಬವ ಗುರುದ್ರೋಹಿ.
ಇದು ಕಾರಣ ಕೂಡಲಚೆನ್ನಸಂಗಯ್ಯನ ಪ್ರಸಾದ
ಘನಕ್ಕೆ ಮಹಾಘನ ನಾನೇನೆಂದು ಬಣ್ಣಿಸುವೆ. 3/೨೪೧ [#]

ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಡುಂಬಿರಿ,
ಪ್ರಸಾದವಾವುದು? ಓಗರವಾವುದು? ಬಲ್ಲವರು ನೀವು ಹೇಳಿರೇ.
ಕೈಯಲಿಕ್ಕಿದವ ಶಿವದ್ರೋಹಿ, ಕೈಯಾಂತು ಕೊಂಡವ ಗುರುದ್ರೋಹಿ,
ಕಾಯವ ಕಳೆದು ಕಾಯಪ್ರಸಾದಿ, ಜೀವವ ಕಳೆದು ಜೀವಪ್ರಸಾದಿ,
ಪ್ರಾಣವ ಕಳೆದು ಪ್ರಾಣಪ್ರಸಾದಿ.
ಕಾಯ ಜೀವ ಇಂದ್ರಿಯ ವಿರೋದಿಗಲ್ಲದೆ ಮತ್ತಾರಿಗೂ ಆಗದು.
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗಲ್ಲದೆ
ಮತ್ತಾರಿಗೂ ಆಗದು. 3/೨೪೨ [#]

ಪ್ರಸಾದ ಪ್ರಸಾದವೆಂದು ಹೆಸರಿಟ್ಟು ಕೊಂಬಿರಣ್ಣಾ
ಮುಂದೆ ನೋಡಿದಡೆ ಪ್ರಸಾದವಾಯಿತ್ತು
ಹಿಂದೆ ನೋಡಿದರೆ ಮಲಮೂತ್ರವಾಯಿತ್ತು,
ಪ್ರಸಾದಕ್ಕೆ ಭಂಗ ಬಂದಿತ್ತು ನೋಡಾ !
ಇಂತಪ್ಪ ಪ್ರಸಾದಿಗಳ ನಮ್ಮ ಕೂಡಲಚೆನ್ನಸಂಗ ಮೆಚ್ಚ 3/೧೩೬೪ [#]

ಇಲ್ಲಿ ನಾವು ಸ್ವೀಕರಿಸಿದ ಪ್ರಸಾದವು ಮಲಮೂತ್ರವಾಗುವುದಿಲ್ಲ ಏಕೆಂದರೆ ಪ್ರಸಾದವೆಂದರೆ ಪರಮಾತ್ಮ ಅಥವಾ ಚೈತನ್ಯ (ಜ್ಞಾನ). ಈ ಚೈತನ್ಯವನ್ನು ತೆಗೆದುಕೊಳ್ಳಬೇಕಾದರೆ ಇಂಥಹ ಇಷ್ಟಲಿಂಗದ ಅವಶ್ಯಕತೆ ಇದೆ.

ಗ್ರಂಥ ಋಣ:
೧) ಲಿಂಗವಂತನ ಲಿಂಗಪ್ರಭೆ, ಲೇಖಕರು: ಶ್ರೀ ಬಸವರಾಜ ಗುರುಸಿದ್ದಪ್ಪ ಮೆಣಸಿನಕಾಯಿ, ಪಾರು ಪ್ರಕಾಶನ, ಗದಗ- ೨೦೦೮.
೨) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು, ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
[#] ಈ ತರಹದ ಸಂಖ್ಯೆಯ ವಿವರ: -3/1545:- ಸಮಗ್ರ ವಚನ ಸಂಪುಟ -3, ವಚನ ಸಂಖ್ಯೆ-1545 (೧೫ ಸಮಗ್ರ ವಚನ ಸಂಪುಟಗಳು, ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)

ಪರಿವಿಡಿ (index)
Previous ಮಿದುಳಿನಲ್ಲಿ ದೇವರಿದ್ದಾನೆ? ಲಿಂಗಾಯತ ಧರ್ಮದ *ಗರ್ಭಲಿಂಗಧಾರಣೆ* ಸಂಸ್ಕಾರ Next