Previous ಇಷ್ಟಲಿಂಗ ದೀಕ್ಷಾ ಸಂಸ್ಕಾರ ಗುರುತ್ವವು ಅರ್ಹತೆಯಿಂದ, ಜಾತಿಯಿಂದಲ್ಲ Next

ಇಷ್ಟಲಿಂಗದೀಕ್ಷೆ ಮತ್ತು ಧಾರ್ಮಿಕ ಸಮಾನತೆ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಇಷ್ಟಲಿಂಗದೀಕ್ಷೆ ಮತ್ತು ಧಾರ್ಮಿಕ ಸಮಾನತೆ

"ಶ್ರೀ ಗುರುಲಿಂಗದೇವರು ತಮ್ಮ ಹಸ್ತವ ತಂದು ಎನ್ನ ಮಸ್ತಕದ ಮೇಲೆ ಇರಿಸಿದಾಗಲೇ ಎನ್ನ ಭವಂ ನಾಸ್ತಿಯಾಯಿತ್ತು. "ಎನ್ನ ತನ್ನಂತೆ ಮಾಡಿದ" ಎಂದು ಅಕ್ಕಮಹಾದೇವಿಯು ಹೇಳುವ ಮೇಲಿನ ವಚನದಲ್ಲಿ “ಎನ್ನ ತನ್ನಂತ ಮಾಡಿದ" ಎಂಬ ಪದಪುಂಜದಲ್ಲಿ ಅಪಾರವಾದ ಅರ್ಥವನ್ನಿಟ್ಟುದೇ ಅಲ್ಲದೆ ಧಾರ್ಮಿಕ ಸಮತೆಯ ತತ್ವವನ್ನು ಚಲ್ಲವರಿದಿದ್ದಾಳೆ. ಗುರುವು ಶಿಷ್ಯನನ್ನು ಅನುಗ್ರಹಿಸಿ ತನ್ನಂತೆ ಮಾಡಿಕೊಳ್ಳುವ ಈ ಧಾರ್ಮಿಕ ಸಮತೆಯು ಬಸವ ಧರ್ಮದ ಅಗ್ಗಳಿಕೆ. ಗುರುವು ಪರುಷವಲ್ಲ, ಜ್ಯೋತಿಯೆಂದು ಶರಣರು ಸಾರಿ ಹೇಳಿದುದರ ಮರ್ಮವೇ ಧಾರ್ಮಿಕ ಸಮತೆಯೋಗಿದೆ. ಪರುಷವು ಕಬ್ಬಿಣವನ್ನು ಬಂಗಾರವನ್ನಾಗಿ ಮಾಡಬಹುದು. ಆದರೆ ಪರುಷವನ್ನಾಗಿ ಮಾಡಲಾರದು; ಅರ್ಥಾತ್ ತನ್ನಂತೆ ಮಾಡಿಕೊಳ್ಳಲಾರದು. ಪರುಷ-ಕಬ್ಬಿಣ ಸಂಬಂಧದಲ್ಲಿ ಸಮತೆಯ ತತ್ವವಿಲ್ಲ. ಆದರೆ ಜ್ಯೋತಿ ತನ್ನಂತೆ ಮಾಡಿಕೊಳ್ಳುತ್ತದೆ. ನಿಮ್ಮ ದೇಹವೇ ಪ್ರಣತೆ. ಭಕ್ತಿಯೇ ತೈಲ, ಆಚಾರವೇ ಬತ್ತಿ, ಗುರುವಿನ ಜ್ಞಾನ ಜ್ಯೋತಿ ನಿಮ್ಮ ಪ್ರಣತೆಗೆ ಮುಟ್ಟಿದಾಗ ನಿಮ್ಮಲ್ಲಿಯೂ ಆ ಜ್ಯೋತಿ ತೊಳಗಿ ಬೆಳಗುತ್ತದೆ. ಆ ಜ್ಯೋತಿ ಈ ಜ್ಯೋತಿಗಳೆರಡೂ ಒಂದೇ ವಿಧವಾಗಿ ತೊಳಗಿ ಬೆಳಗುತ್ತವೆ. ಆಹಾ ! ಎಂಥ ಸುಂದರ ಉದಾತ್ತ ಧಾರ್ಮಿಕ ಸಮತೆಯ ಕಲ್ಪನೆಯಿದು !! ಶ್ರೀ ಮಗ್ಗೆಯ ಮಾಯಿದೇವರು ಈ ತತ್ವದ ಬೆಂಬಳಿವಿಡಿದು ತಮ್ಮ ಒಂದು ಪದ್ಯದಲ್ಲಿ ಹೀಗೆ ಹೇಳಿದ್ದಾರೆ:

ಪರುಷಮುಮ್ಮಲ ಸದ್ಗುರು ಪದಾಂಬುಜಮಂ ಸಮವೆಂದು ಕಲ್ಪಿಸ |
ಲ್ನರಕವದೆಂತೆನಲ್ ಪರುಷಮಂ ಪರುಷಂ ನೆರೆ ಮಾಡದಾಗಿ ಮ |
ದ್ಗುರು ಪದ ಮಾಗುರುತ್ವವನೆ ಮಾಡುವ ಕಾರಣಮಾಂ ನಿರಂತರಂ
ಗುರುಶರಣೆಂಬೆನಯ್ಯ ಪರಮ ಪ್ರಭುವೇ ಮಹದೈಪುರೀಶ್ವರಾ ||

ಸಿದ್ದ ರಸವನ್ನೂ, ಗುರುಪಾದ ಕಮಲವನ್ನೂ ಒಂದಕ್ಕೊಂದು ಸಮವೆಂದು ಹೇಳಿದರೆ ನರಕವಾಗದೆ ತಪ್ಪದದು. ಏಕೆಂದರೆ ಗುರುಪಾದ ಕಮಲಕ್ಕೆ ಸಿದ್ದ ರಸವು ಸಮನಲ್ಲ. ಹೇಗೆಂದರೆ ಸಿದ್ದ ರಸವು ಲೋಹವನ್ನು ಸುವರ್ಣವನ್ನಾಗಿ ಮಾಡಬಲ್ಲುದಲ್ಲದೆ ತನ್ನಂತೆ ಪರುಷವನ್ನಾಗಿ ಮಾಡಿಕೊಳ್ಳಲಾರದು. ಗುರುವಿನ ಪಾದವಾದರೋ ತನ್ನ ನುಗ್ರಹಕ್ಕೆ ಒಳಗಾದ ಇತರರನ್ನೂ ಗುರುವನ್ನಾಗಿ ಮಾಡುವುದು. ಅದು ಕಾರಣ ನಾನು ಯಾವಾಗಲೂ ಶ್ರೀ ಗುರುವನ್ನೇ ಮೊರೆಹೊಕ್ಕು ಶರಣೆಂಬೆನು.

ಧಾರ್ಮಿಕ ಸಮತೆಯನ್ನು ಸಾರುವ ಜಗದ್ಗುರು ಅಲ್ಲಮ ಪ್ರಭುದೇವರ ಒಂದು ವಚನ ಹೀಗಿದೆ. (ಅ.ವ. ೭೬೩)

"ಗುರುವಿನ ಪರಿ ವಿಪರೀತವಾಯಿತ್ತಯ್ಯಾ !
ಭ್ರಮರ ಕೀಟಕ ನ್ಯಾಯದಂತಾಯಿತ್ತು.
ಗುರು ತನ್ನ ನೆನೆವನ್ನಬರ ಎನ್ನ ನಾ
ಗುರುವ ಮಾಡಿದನು. ಇನ್ನು ಶಿಷ್ಯನಾಗಿ
ಶ್ರೀ ಗುರುವ ಪೂಜಿಸುವವರಾರು ಹೇಳಾ ಗುಹೇಶ್ವರಾ ?"


ಗುರುಶಿಷ್ಯರನ್ನು ಭ್ರಂಗಕೀಟಕಕ್ಕೆ ಹೋಲಿಸುವುದು ತುಂಬಾ ಅರ್ಥಪೂರಿತವಾಗಿದೆ. ಶೃಂಗ (ಗುರು)ವು ತನಗೆ ಬೇಕಾದ ಕೀಡೆ (ಶಿಷ್ಯ)ಯನ್ನು ತಂದು ತಾನು ಕಟ್ಟಿದರಲಿನ ಮನೆ (ಶಿವಾನುಭವಶಾಲೆ)ಯಲ್ಲಿಟ್ಟು ತನ್ನ ಬಾಯಿ ರಸದಿಂದ ಇಂಜೆಕ್ಷನ್ (ಅನುಗ್ರಹ) ಮಾಡಿ ೧೨-೧೪ ದಿನಗಳವರೆಗೆ ಇಡುವುದು. ನಂತರ ಒಳಗೆ ಹೋದ ಹಸಿರು ಬಣ್ಣದ ಕೀಡೆ ಭ್ರಂಗದ ಆಕಾರ ಧರಿಸಿ ಹೊರಗೆ ಬರುವುದು. ಆಗ ಅದನ್ನು ಕೀಡೆ ಎಂದು ಯಾರೂ ಗುರುತಿಸಲಾರರು. ಅದರಂತೆ ಶಿಷ್ಯನೂ ಸಹ ಗುರುಕಾರುಣ್ಯದಿಂದ ಗುರುವಾಗಬಲ್ಲನೆಂದು ಗುರುಶಿಷ್ಯರ ಸಮರಸಭಾವವನ್ನು ಪ್ರಭುದೇವರು ಈ ಮೇಲಿನ ವಚನದಲ್ಲಿ ಎತ್ತಿ ತೋರಿಸಿದ್ದಾರೆ.

"ಬೀಜದಿಂದ ಹುಟ್ಟಿದ ವೃಕ್ಷವು ಬೀಜವ ಹೋಲುವಂತೆ
ತಾಯಿಯಿಂದ ಹುಟ್ಟಿದ ಮಕ್ಕಳು ತಾಯಿಯ ಹೋಲುವಂತೆ
ಧಾನ್ಯಂಗಳಿಂದ ಬೆಳೆದ ಬೆಳಸು ಧಾನ್ಯಂಗಳ ಹೋಲುವಂತೆ
ಗುರುವಿನಿಂದ ಹುಟ್ಟಿದ ಶಿಷ್ಯನು ಗುರುರೂಪವಲ್ಲದೆ
ಬೇರೊಂದು ರೂಪವಲ್ಲವಯ್ಯಾ ಅಖಂಡೇಶ್ವರಾ
-ಷ.ವ. ೪೬

ಆಲದ ಬೀಜದಿಂದ ಆಲದ ಮರವೂ, ಬೇವಿನ ಬೀಜದಿಂದ ಬೇವಿನ ಮರವೂ, ಮಾವಿನ ಬೀಜದಿಂದ ಮಾವಿನ ಮರಗಳೂ ಹುಟ್ಟುವಂತೆ ಜೋಳದಿಂದ ಜೋಳದ ಬೆಳೆ, ಗೋಧಿಯಿಂದ ಗೋಧಿಯ ಬೆಳೆ, ಭತ್ತದಿಂದ ಭತ್ತದ ಬೆಳೆಗಳೇ ಬರುವಂತೆ, ತಂದೆ-ತಾಯಿಗಳನ್ನು ಮಕ್ಕಳು ಹೋಲುವಂತೆ ಸದ್ಗುರುವಿನ ಕರಕಮಲ ಸಂಜಾತನಾದ ಶಿಷ್ಯನು ಸ್ವಾಭಾವಿಕವಾಗಿ ಆಚಾರ - ವಿಚಾರ - ಅನುಭವ ಎಲ್ಲದರಲ್ಲಿಯೂ ಗುರುರೂಪವಲ್ಲದೆ ಬೇರೆಲ್ಲವೆಂದು ಈ ವಚನದಲ್ಲಿ ಪ್ರತಿಪಾದನೆ ಮಾಡಲಾಗಿದೆ.

"ಗುರುವಚನದಿಂದಲ್ಲದೆ ಭವಪಾಶ ಹರಿಯದು.
ಗುರುವಚನದಿಂದಲ್ಲದೆ ಜಾತಿಭೇದಮಾಣದು.
ಗುರುವಚನದಿಂದಲ್ಲದೆ ಸೂತಕಪಾತಕಂಗಳು ಕೆಡದಿಹವು.
ಗುರುವಚನದಿಂದಲ್ಲದೆ ಅಂಗಮನಪ್ರಾಣಂಗಳು ಶುದ್ಧವಾಗಲರಿಯವು
ಗುರುವಚನದಿಂದಲ್ಲದೆ ಅಂಗಕ್ಕೆ ಕಳೆ ವೇಧಿಸದು
ಗುರುವಚನದಿಂದಲ್ಲದೆ ಸದ್ಭಕ್ತಿ ನೆಲೆಗೊಳ್ಳದು
ಗುರುವಚನದಿಂದಲ್ಲದೆ ನಿಜಮುಕ್ತಿ ಕಾಣಬಾರದು.
ಇದು ಕಾರಣ ಗುರುಮುಟ್ಟಿ ಗುರುವಾದ ಪರಮ ಶರಣರ
ಶರಣು ಶರಣೆಂಬೆನಯ್ಯಾ ಅಖಂಡೇಶ್ವರಾ.
-ಷ.ವ. ೩೮

ಶಿಷ್ಯನು ತನ್ನ ಭವಪಾಶ ಹರಿಯಬೇಕಾದರೆ, ಜಾತಿಭೇದ ತೊಲಗಬೇಕಾದರೆ, ಸೂತಕ ಪಾತಕಂಗಳು ಕತ್ತರಿಸಬೇಕಾದರೆ, ಅಂಗಮನ ಪ್ರಾಣಗಳು ಶುದ್ಧವಾಗಬೇಕಾದರೆ ಲಿಂಗಕ್ಕೆ ಚಿತ್ಕಳೆ ತುಂಬಿಸಬೇಕಾದರೆ, ಸದ್ಭಕ್ತಿ ನೆಲೆಗೊಳ್ಳಲು; ನಿಜ ಮುಕ್ತಿ ಕಾಣಲು ಮತ್ತು ಗುರುರೂಪ ತಾನಾಗಬೇಕಾದರೆ ಸದ್ಗುರುವಿನ ವಚನಾಮೃತ ಧಾರೆಯಲ್ಲಿ ಮಿಂದು ಅನುಗ್ರಹ ಹೊಂದಬೇಕಾಗುವದೆಂದು, ಅನುಗ್ರಹವನ್ನು ಹೊಂದುವ ಪ್ರಮುಖಸಾಧನ ಇಷ್ಟಲಿಂಗದೀಕ್ಷಾ ಸಂಸ್ಕಾರವೆಂದು ಶ್ರೀ ಷಣ್ಮುಖ ಸ್ವಾಮಿಗಳು ಅಪ್ಪಣೆ ಕೊಡಿಸಿದ್ದಾರೆ.

ಬೇರೆ ಬೇರೆ ಜಾತಿಯ ಕಟ್ಟಿಗೆಗಳನ್ನು ತಂದು ಅಗ್ನಿಯಲ್ಲಿ ಹಾಕಿದಾಗ ಅವು ಮುನ್ನಿನ ಗುಣಗಳನ್ನು ಕಳೆದುಕೊಂಡು ಅಗ್ನಿ ಸ್ವರೂಪ ಹೇಗಾಗುವವೋ ಅದರಂತೆ ಬೇರೆ ಬೇರೆ ಜಾತಿಯ ಜನರು ಸದ್ಗುರುವಿನಿಂದ ಲಿಂಗದೀಕ್ಷೆ ಪಡೆದ ನಂತರ ಪೂರ್ವಾಶ್ರಯ ತೊರೆದು ಶರಣ ಸ್ವರೂಪರಾಗುವರು.

ಲಿಂಗದೀಕ್ಷಾ ಸಂಪನ್ನರಾದವರನ್ನು ಅವರು ಶೂದ್ರರು, ಇವರು ಬ್ರಾಹ್ಮಣರು, ಮುಂತಾಗಿ ಯಾರು ಭೇದವನ್ನು ಮಾಡುವರೋ ಅವರು ರೌರವ ನರಕಕ್ಕೆ ಹೋಗುತ್ತಾರೆ. ನೀರು ಗಟ್ಟಿಗೊಂಡು ಮುತ್ತಾಗುವುದಲ್ಲದೆ, ಮುತ್ತು ನೀರಾಗದು: ಹಾಲು ಗಟ್ಟಿಯೋಗಿ ತುಪ್ಪವಾಗುವುದೇ ವಿನಾ ತುಪ್ಪ ಮರಳಿ ಹಾಲಾಗಲಾರದು: ಅದರಂತೆ ಹೀನ ಜಾತಿಯಲ್ಲಿ ಜನಿಸಿದ ನರನು ಗುರುವಿನ ಕಾರುಣ್ಯದಿಂದ ಶಿವಜಾತಾಭರಣನಾದ ಬಳಿಕ ಮರಳಿ ನರನಾಗಲಾರನೆಂದು ಶರಣರು ಸಾರಿ ಹೇಳಿದ್ದಾರೆ. "ದೀಕ್ಷಾ ಪ್ರಭಾವದಿಂದ ದೇಹವೂ, ಕರ್ಮೇಂದ್ರಿಯಗಳೂ, ಜ್ಞಾನೇಂದ್ರಿಯಗಳೂ, ಅಂತಃಕರಣವೂ, ಪಂಚಪ್ರಾಣಗಳೂ, ಸಪ್ತಧಾತುಗಳೂ, ಮಂತ್ರ ಸ್ವರೂಪವಾಗುವುದರಿಂದ ಆ ದೇಹದಲ್ಲಿ ಜಾತಿಯು ನಿಲ್ಲಲಾರದು" ಎಂದು ಶ್ರೀ ಪಾವಟಿ ಸಿದ್ದರಾಮಪ್ಪನವರು ಹೇಳಿದ್ದಾರೆ.

ಅಳಿಮನದವನಿಗೆ ದೀಕ್ಷೆ ಸಲ್ಲದು .

ಶಿವಾನುಭವದ ಹಂಬಲಿಗನಾಗಿ ಮುಮುಕ್ಷು ಭಾವನೆಯಿಂದ ಅಂತಃಕರಣ ಶುದ್ದಿಯಿಂದ ಸದಾಚಾರ ಸಂಪನ್ನನಾದ ಯಾವ ಜಾತಿ ಮತದವನಾದರೂ ಆತನಿಗೆ ಲಿಂಗದೀಕ್ಷೆ ಮಾತ್ರವಲ್ಲ ಜಂಗಮ ದೀಕ್ಷೆ ಸಹ ಕೊಡಲು ಬರುವುದೆಂದು ಶರಣ ಧರ್ಮದಲ್ಲಿ ಹೇಳಲಾಗಿದೆ. ಆದರೂ ಸಹ ಅವನು ಯೋಗ್ಯ ಅಧಿಕಾರಿಯೋಗಿರಬೇಕೆಂಬುದನ್ನು ಮರೆಯಕೂಡದು.

"ಕುಂಬಳಕಾಯಿಗೆ ಕಬ್ಬುಣದ ಕಟ್ಟ ಕೊಟ್ಟರೆ
ಕೊಳೆಯುವುದಲ್ಲದೆ ಬಲವಾಗಬಲ್ಲುದೆ ?
ಅಳಿಮನದವಂಗೆ ಶಿವದೀಕ್ಷೆಯಕೊಟ್ಟರೆ
ಭಕ್ತಿಯೆಂತಹುದು ಮುನ್ನಿನಂತಲ್ಲದೆ ?
ಕೂಡಲ ಸಂಗಯ್ಯ ಮನಹೀನನ ಮೀಸಲ ಕಾಯ್ದಿರಿಸಿದಂತೆ." -ಬ.ಷ.ವ, ೯೨

ಕುಂಬಳಕಾಯಿ ಬಹುದಿನ ಬಾಳಬೇಕೆಂದು ಕಬ್ಬಿಣದ ಕಟ್ಟನ್ನು ಹಾಕಿಟ್ಟರೆ ಅದು ಕೊಳೆತು ಹೋಗುವುದೇ ವಿನಾ ಬಹುಕಾಲ ಬಾಳಲಾರದು. ಅದರಂತೆ ಅಳಿಮನದ ವಿಷಯಾಸಕ್ತನಿಗೆ ಇಷ್ಟಲಿಂಗ ದೀಕ್ಷೆ ಮಾಡಿದರೆ ಅವನು ಮುನ್ನಿನಂತೆ ದುರ್ವಿಷಯಗಳಲ್ಲಿಯೇ ತೊಳಲಿ ಬಳಲುವನಲ್ಲದೆ ಲಿಂಗದಲ್ಲಿ ಭಕ್ತಿಯುಳ್ಳವನಾಗಲಾರನು. ನಾಲಿಗೆಯ ರುಚಿಗೊಳಗಾದ ಕೀಳು ಮನಸ್ಸಿನವನನ್ನು ಗುರು-ಜಂಗಮರಿಗೆ ಮೀಸಲಾಗಿ ತೆಗೆದಿಟ್ಟ ಭೋಜ್ಯ ಪದಾರ್ಥಗಳ ರಕ್ಷಣೆಗೆ ನಿಯಮಿಸಿದರೆ, ಆ ಮೀಸಲು ವಸ್ತುವನ್ನು ತಿನ್ನಬಾರದೆಂಬ ವಿವೇಕವಿಲ್ಲದೆ, ಅವುಗಳನ್ನು ರುಚಿಯಾಸೆಗಾಗಿ, ಅಷ್ಟಷ್ಟೇ ತಿಂದುಬಿಡುತ್ತಾನೆ. ದುರ್ವಿಷಯಗಳಲ್ಲಿ ಮನಸ್ಸುಳ್ಳವನು ತನಗೆ ಲಿಂಗ ದೀಕ್ಷೆಯಿಂದ ಪ್ರಾಪ್ತವಾದ ಇಷ್ಟಲಿಂಗವನ್ನು ಪೂಜಿಸುವ ವಿಷಯದಲ್ಲಿ ಸದ್ದು ರು ಆಜ್ಞಾಪಿಸಿದ ನಿಯಮ ಕಟ್ಟಳೆಗಳನ್ನು ಮರೆತು, ವಿಷಯಾಪಭೋಗಗಳಲ್ಲಿಯೇ ಆಸಕ್ತನಾಗಿರುವುದರಿಂದ ಸದ್ಭಕ್ತನಾಗಲಾರನು ಎಂದು ಬಸವಣ್ಣನವರು ದೀಕ್ಷೆ ಎಂತಹವರಿಗೆ ಸಲ್ಲದೆಂಬ ವಿಷಯವನ್ನೂ ಹೀಗೆ ಹೇಳಿದ್ದಾರೆ.

"ಸಗಣಿಯ ಬೆನಕಂಗೆ ಸಂಪಗೆಯ ಅರಳಲ್ಲಿ ಪೂಜಿಸಿದರೆ
ರಂಜನೆಯಲ್ಲದೆ ಅದರ ಗಂಜಳ ಬಿಡದಣ್ಣಾ !
ಮಣ್ಣು ಪುತ್ಥಳಿಯ ಮಾಣದೆ ಜಲದಲ್ಲಿ ತೊಳೆದರೆ
ನಿಚ್ಚ ನಿಚ್ಚಕ್ಕೆ ಕೆಸರಹುದಲ್ಲದೆ ಅದರಚ್ಚುಗ ಬಿಡದಣ್ಣಾ !
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟರೆ
ಕೆಟ್ಟವನೇಕೆ ಸದ್ಭಕ್ತನಹನು, ಕೂಡಲ ಸಂಗಮದೇವಾ ?"
-ಬ.ಷ.ವ, ೯೩

ಸಗಣಿಯಿಂದ : ಒಂದು ಗಣಪತಿಯ ವಿಗ್ರಹಮಾಡಿ, ಅದನ್ನು ಸಂಪಿಗೆಯ ಹೂಗಳಿಂದ ಪೂಜಿಸಿದರೆ, ತೋರಲು ಅಂದವಾಗಿ ಕಂಡರೂ ಅದರ ಸಮೀಪಕ್ಕೆ ಹೋದರೆ ಸಗಣಿಯ ದುರ್ವಾಸನೆ ಬಾರದಿರದು. ಮತ್ತು ಹಸಿಯ ಮಣ್ಣಿನಿಂದ ಒಂದು ಗೊಂಬೆಯನ್ನು ಮಾಡಿ, ಅದನ್ನು ಸ್ವಚ್ಛ ಮಾಡಲೋಸುಗ ದಿನಾಲೂ ತೊಳೆದರೆ, ಅದು ಇನ್ನಷ್ಟು ಕೆಸರನ್ನೇ ಬಿಟ್ಟಿತು. ಹಾಗೆಯೇ ಪ್ರಾಪಂಚಿಕ ವಿಷಯಗಳಲ್ಲಿ ಆಸಕ್ತರಾದ ಮಾನವರಿಗೆ ಲಿಂಗದೀಕ್ಷೆಯನ್ನು ಕೊಟ್ಟರೆ ಅವರು ನಿಜಭಕ್ತರಾಗಲಾರರೆಂದು ಸುಂದರ ಉಪಮೆಗಳಿಂದ ಬಸವಣ್ಣನವರು ತಿಳಿಸಿ ಹೇಳಿದ್ದಾರೆ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಇಷ್ಟಲಿಂಗ ದೀಕ್ಷಾ ಸಂಸ್ಕಾರ ಗುರುತ್ವವು ಅರ್ಹತೆಯಿಂದ, ಜಾತಿಯಿಂದಲ್ಲ Next