Previous ಶಿವಯೋಗ ಅಥವಾ ಶಿವಪಥ (ಸಾಧನೆ) ಬಸವೇಶ್ವರ ಪೂಜಾವ್ರತ ಅಧ್ಯಾಯ -೧ Next

ಶ್ರೀ ಬಸವೇಶ್ವರ ಪೂಜಾವ್ರತ

✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

ಶ್ರೀ ಬಸವೇಶ್ವರ ಪೂಜಾವ್ರತ

ಧರ್ಮವು ಭಾವ ಪ್ರಧಾನವಾದ ಆಚರಣೆಯಿಂದ ಕೂಡಿದ್ದು, ಮಾನವನಲ್ಲಿ ಹುಟ್ಟುಗುಣವಾಗಿರುವ “ಮೊರೆಯಿಡುವ” ಸ್ವಾಭಾವಿಕ ಪ್ರವೃತ್ತಿಗೆ ಅದು ಒಂದು ಸುಸಂಸ್ಕೃತ ರೂಪವನ್ನು ಕೊಡುವುದು. ಈ ಮೊರೆಯಿಡುವಿಕೆ, ತನಗಿಂತಲೂ ಮೀರಿದ ಒಂದು ಶಕ್ತಿಯನ್ನು ಪೂಜಿಸಿ, ಪ್ರಾರ್ಥಿಸಿ, ಧ್ಯಾನಿಸುವುದರ ಮೂಲಕ ಕಾಯ, ವಚನ, ಮನಗಳನ್ನು ಸಾಧನವಾಗಿ ಮಾಡಿಕೊಂಡು ಅಭಿವ್ಯಕ್ತಗೊಳ್ಳುವುದು.

ಮಾನವರಲ್ಲಿ ಐಹಿಕ ಮತ್ತು ಆಮುಷ್ಟಿಕ, ಲೌಕಿಕ ಮತ್ತು ಪಾರಮಾರ್ಥಿಕ ಎಂದು ಎರಡು ಬಗೆಯ ಆಸೆ-ಆಕಾಂಕ್ಷೆಗಳಿಂದ ಕೂಡಿದ ಸ್ತರಗಳುಂಟು. ಒಳ್ಳೆಯ ದಾಂಪತ್ಯ ಸಂಗಾತಿ, ಸುಖ-ಜೀವನ, ಉತ್ತಮ ಸಂತಾನ, ಹಣಕಾಸು ಸಂಪಾದನೆ, ಅಧಿಕಾರ ಪ್ರಾಪ್ತಿ, ಬಂಧು-ಮಿತ್ರರ ಪ್ರೇಮ, ಆರೋಗ್ಯ ಸಂಪತ್ತು ಮುಂತಾದವು ಐಹಿಕ ಅಪೇಕ್ಷೆಗಳಾದರೆ ; ಸದ್ಗುರುವಿನ ಕೃಪೆ, ಸತ್ಸಂಗದ ಸೌಭಾಗ್ಯ, ಮಹಾತ್ಮರ ದರ್ಶನ, ದಿವ್ಯಾನಂದ ಸುಖಪ್ರಾಪ್ತಿ, ಮೋಕ್ಷಾಪೇಕ್ಷೆ ಮುಂತಾದವು ಪಾರಮಾರ್ಥಿಕ ಅಪೇಕ್ಷೆಗಳು. ಇವನ್ನೆಲ್ಲ ಹೊಂದಲಿಕ್ಕೆ ಮನುಷ್ಯ ಶರಣಾಗತ ಭಾವನೆಯಿಂದ ತನಗಿಂತ ಮಿಗಿಲಾದ ಒಂದು ಶಕ್ತಿಯನ್ನು ಆರಾಧಿಸುವನು; ಸಂಕಲ್ಪ ಕೈಗೊಂಡು ವ್ರತ ಮಾಡುವನು. ಈ ವ್ರತಾಚರಣೆ ವ್ಯಕ್ತಿಯ ಭಕ್ತಿಭಾವ ಪ್ರಕಟಗೊಳ್ಳಲು ಇರುವ ಧಾರ್ಮಿಕ ಸಾಧನೆ.

ಬಸವ ಧರ್ಮ ಅಥವಾ ಬಸವ ಪ್ರಣೀತ ಲಿಂಗಾಯತ ಧರ್ಮವು ಮೂಢನಂಬಿಕೆಗಳನ್ನು ಪ್ರೋತ್ಸಾಹಿಸದ ಧರ್ಮ, ಪ್ರಚಲಿತವಿರುವ ಏಳು ಉಪಾಸ್ಯ ವಸ್ತುಗಳು ಇವು - ಭೂತ ಪ್ರೇತಗಳು, ಪೌರಾಣಿಕ ದೇವತೆಗಳು, ಪಂಚಭೂತಗಳು, ಪ್ರಾಣಿಗಳು, ಪಿತೃಗಳು, ವಿಭೂತಿ ಪುರುಷರು ಮತ್ತು ದೇವರು. ಈ ಏಳರಲ್ಲಿ ಮೊದಲ ಐದರ ಉಪಾಸನೆಯನ್ನು ಶರಣ ಧರ್ಮವು ಒಪ್ಪದು. ಇಲ್ಲಿ ವಿಭೂತಿ-ಮಹಾತ್ಮರ ಪೂಜೆ ಮತ್ತು ದೇವಪೂಜೆಗಷ್ಟೆ ಅವಕಾಶ.

ಹಾಡಿದರೆ ಎನ್ನೊಡೆಯನ ಹಾಡುವೆ
ಬೇಡಿದರೆ ಎನ್ನೊಡೆಯನ ಬೇಡುವೆ
ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನಿಸುವೆ
ಒಡೆಯ ಮಹಾದಾನಿ ಕೂಡಲಸಂಗಮ ದೇವಂಗೆ ಸೆರಗೊಡ್ಡಿ ಬೇಡುವೆ.

ಜಗತ್ತಿನ ಕರ್ತನಾದ ಲಿಂಗ ದೇವನೆ ಆತ್ಯಂತಿಕ ಶಕ್ತಿ, ಒಡೆಯ, ವ್ಯಕ್ತಿಯು ತನ್ನ ಇಷ್ಟಾರ್ಥ ಸಿದ್ಧಿಗಾಗಿ ಆ ಒಡೆಯನನ್ನು ಕುರಿತು ಹಾಡಬೇಕು ; ಅವನನ್ನೇ ಬೇಡಬೇಕು. ತನ್ನ ಸುಖ-ದುಃಖ, ಸಂತೋಷ-ನೋವು, ಸಂತೃಪ್ತಿ-ಕೊರತೆ ಎಲ್ಲವನ್ನೂ ಅವನಲ್ಲಿಯೇ ಬಿನ್ನೈಸಬೇಕು. ಅವನಿಗೆ ಶರಣಾಗಿ, ಸೆರಗೊಡ್ಡಿ ಬೇಡಬೇಕೇ ವಿನಾ ಕಂಡ ಕಂಡದ್ದಕ್ಕೆ ಎರಗಿ ಕೈಚಾಚಬಾರದು. “ನಂಬಿದ ಹೆಂಡತಿಗೆ ಗಂಡನೊಬ್ಬ ಕಾಣಿರೋ; ನಂಬಬಲ್ಲ ಭಕ್ತಂಗೆ ದೇವನೊಬ್ಬ ಕಾಣಿರೋ” ಎಂಬ ಬಸವವಾಣಿಯಂತೆ ಸದ್‌ಭಕ್ತಿಯು ಪಾತಿವ್ರತ್ಯದಿಂದ ಕೂಡಿರಬೇಕು. ಹಣವನ್ನು ಕೊಡು ಎಂದು ಲಕ್ಷ್ಮಿಯನ್ನು, ವಿದ್ಯೆಯನ್ನು ಕೊಡೆಂದು ಸರಸ್ವತಿಯನ್ನು, ವಿಘ್ನಗಳನ್ನು ಪರಿಹರಿಸೆಂದು ಗಣಪತಿಯನ್ನು, ಮಳೆಯನ್ನು ಕೊಡು ಎಂದು ವರುಣನನ್ನು ಹೀಗೆಲ್ಲ ಭಿನ್ನಭಿನ್ನವಾಗಿ ಪೂಜಿಸಬಾರದು. ಇವೆಲ್ಲ ಕಾಲ್ಪನಿಕ ದೇವತೆಗಳು. ಸಚ್ಚಿದಾನಂದ ನಿತ್ಯ ಪರಿಪೂರ್ಣನಾದ ಕರ್ತನನ್ನು ಅವನೇ ವಿದ್ಯಾದಾತನೆಂದು, ಸಂಪತ್‌ದಾತನೆಂದು, ವಿಘ್ನನಿವಾರಕನೆಂದು ವಿಶ್ವನಿಯಾಮಕನೆಂದು, ನಂಬಿ ಆರಾಧಿಸಬೇಕು. ಆದ್ದರಿಂದ ಕರ್ತನ ಹೊರತು ಇನ್ನಾವುದನ್ನೂ ಆಶ್ರಯಿಸಬಾರದೆಂಬುದು ಬಸವಧರ್ಮದ ಕಟ್ಟಪ್ಪಣೆ.

ಇಷ್ಟಲಿಂಗವು ಸೃಷ್ಟಿಕರ್ತನ ಕುರುಹು

ದೇವನೊಬ್ಬ ಎಂದು ಸಾರಿ ಏಕೇಶ್ವರ ವಾದವನ್ನು ಬೋಧಿಸಿದ್ದು ಮಾತ್ರವಲ್ಲದೆ ಧರ್ಮಪಿತ ಬಸವಣ್ಣನವರು ಆ ಒಬ್ಬ ದೇವನನ್ನು ಪೂಜಿಸುವ ಏಕದೇವೋಪಾಸನೆಯನ್ನು ಆಚರಣೆಗೆ ತಂದರು. ಉಪಾಸನೆ ಮಾಡಲು ಉಪಾಸ್ಯ ವಸ್ತುವೊಂದು ಬೇಕು ಎಂದು ಗೋಲಾಕಾರದ ಇಷ್ಟಲಿಂಗವನ್ನು ನೀಡಿದರು. ಸೃಷ್ಟಿಕರ್ತ ಪರಮಾತ್ಮನನ್ನು ಲಿಂಗದೇವನೆಂದು ಹೆಸರಿಟ್ಟು ಕರೆದು ಆ ಲಿಂಗದೇವನನ್ನು ಮನುಷ್ಯರ, ಪಶುಪಕ್ಷಿಗಳ ಆಕಾರದಲ್ಲಿ ಪೂಜಿಸದೆ ದೇವನು ಸೃಷ್ಟಿಸಿರುವ ಬ್ರಹ್ಮಾಂಡವು ಗೋಲಾಕಾರದಲ್ಲಿದ್ದು ಆ ಆಕಾರದಲ್ಲೇ ಪೂಜಿಸಬೇಕೆಂದು ಹೇಳಿ ಇಷ್ಟಲಿಂಗವನ್ನು ರೂಪಿಸಿಕೊಟ್ಟರು. ಈ ಲಿಂಗವನ್ನು ಆಯತ ಮಾಡಿಕೊಂಡವನೇ ಲಿಂಗಾಯತ ಎಂದು ಘೋಷಿಸಿ ಲಿಂಗಾಯತ ಧರ್ಮಿಯರು ಸೃಷ್ಟಿಕರ್ತನ ಕುರುಹಾದ ಇಷ್ಟಲಿಂಗವನ್ನು ಗುರುವಿನ ಮೂಲಕ ಆಯತ-ಅಂದರೆ ಸಂಬಂಧ ಮಾಡಿಕೊಂಡು ಸದಾ ಧರಿಸಿಕೊಂಡು ನಿತ್ಯವೂ ಪೂಜಿಸಬೇಕು.

ಧರ್ಮಗುರು ಉಪಾಸನೆ

ಸಿದ್ಧಾಂತಗಳು, ಆದರ್ಶಗಳು ಎಷ್ಟೋ ಬಾರಿ ಜನ ಸಾಮಾನ್ಯರನ್ನು ನಿಯಂತ್ರಿಸದಂತೆ ಆಗುತ್ತವೆ. ಕಾರಣ, ಮನುಷ್ಯನ ಭಾವನಾ ಪ್ರಧಾನ ಹೃದಯ. ಹೀಗಾಗಿಯೇ ಬುದ್ಧನು “ನನ್ನನ್ನು ಮೂರ್ತಿಕರಿಸಿ ಪೂಜಿಸಬೇಡಿರಿ” ಎಂದು ಕಟ್ಟಪ್ಪಣೆ ವಿಧಿಸಿದರೂ ಮನುಷ್ಯ ಸ್ವಭಾವ ಬುದ್ಧನನ್ನು ಮೂರ್ತಿಕರಿಸುವುದರಲ್ಲಿ ಸಂತೋಷ ಕಂಡಿತು. ಕೇವಲ ಇಸ್ಲಾಂ ಒಂದೇ ಈವರೆಗೂ ನಿರಾಕಾರ ಕರ್ತನಲ್ಲಿ ಆತ್ಯಂತಿಕ ಶ್ರದ್ಧೆ ಉಳಿಸಿಕೊಂಡು ಬಂದಿರುವುದು. ಇದು ಇವರ ಒಂದು ಹಿರಿಮೆಯಾದರೂ, ಅನುಭಾವ ಸಾಹಿತ್ಯ (Mystic literature) ಮತ್ತು ಮಧುರಾಭಕ್ತಿ ಅಲ್ಲಿ ಅಭಿವೃದ್ಧಿಯಾಗದಿರುವುದು ಇಸ್ಲಾಮಿನ ಒಂದು ದೊಡ್ಡ ಕೊರತೆ. ಕ್ರೈಸ್ತ ಧರ್ಮವೂ ಸೈದ್ಧಾಂತಿಕವಾಗಿ ಕರ್ತನನ್ನು ಆತ್ಯಂತಿಕ ಶಕ್ತಿಯೆಂದು ಮನ್ನಿಸಿದರೂ, ಜನಮನವನ್ನು ವ್ಯಾಪಿಸಿದವ ಜೀಸಸ್, ಇದು ಒಂದು ನೈಸರ್ಗಿಕ ಪ್ರತಿಕ್ರಿಯೆ. ಸಾಕಾರ ರೂಪಿಯಾಗಿ, ತಂದೆ-ತಾಯಿ, ಬಂಧು-ಬಳಗವಾಗಿ ಕಣ್ಣೆದುರು ನಿಲ್ಲುವ ಒಂದು “ವ್ಯಕ್ತಿಯ” ಆಶ್ರಯ ಮನುಷ್ಯ ಹೃದಯಕ್ಕೆ ಬೇಕು. ಅವನಲ್ಲಿ ತನ್ನ ಸುಖದುಃಖ, ನಲಿವು- ನೋವನ್ನು ಮನುಷ್ಯ ತೋಡಿಕೊಳ್ಳುವನು. ಇದನ್ನರಿತೇ ಮಾನವ ಪ್ರವೃತ್ತಿ, ಮನೋವಿಜ್ಞಾನವನ್ನು ತಿಳಿದ ಸಿದ್ಧರಾಮೇಶ್ವರರಂತಹವರು ಮೊದಲಿಗೇ ಮಾರ್ಗ ತೋರಿಸಿಬಿಟ್ಟರು. ಅವರು ಮಾಡಿರುವ ಬಸವ ಸ್ತುತಿಗಳಲ್ಲಿ ಕೆಲವನ್ನು ನೋಡೋಣ.

೧. ಬಸವನ ಮೂರ್ತಿಯ ಧ್ಯಾನಕ್ಕೆ ಮೂಲ
ಬಸವನ ಕೀರ್ತಿಯ ಜ್ಞಾನಕ್ಕೆ ಮೂಲ
ಬಸವ ಬಸವಾ ಎಂಬುದೇ ಭಕ್ತಿಕಾಣಾ ಕಪಿಲಸಿದ್ಧ ಮಲ್ಲಿಕಾರ್ಜುನ


೩. ಬಸವೇಶನ ಬಸವರಾಜನೆ
ಬಸವಣ್ಣನೆ ಬಸವತಂದೆ ಬಸವ ಕೃಪಾನಿಧಿ
ಬಸವ ಪರಮೇಶ್ವರೀಶ್ವರ
ಬಸವ ಪ್ರಮಥಾದಿದೇವ ರಕ್ಷಿಸು ಬಸವ |

೩. ಬಸವನ ನೆನೆದು ಮಾಡುವ ಭಕ್ತಿ ನಡೆಯುವುದಯ್ಯಾ ;
ಬಸವನ ನೆನೆಯದೆ ಮಾಡುವ ಭಕ್ತಿ ಎಳತಟವಯ್ಯಾ ;
ಕಪಿಲಸಿದ್ಧ ಮಲ್ಲಿನಾಥಯ್ಯಾ,

“ಹರ ಬಸವಾಯನಮಃ” ಎಂದು ಪಾಪದೂರನಾದೆ,
“ಗುರು ಬಸವಾಯ ನಮಃ” ಎಂದು ಭವದೂರನಾದೆ,
“ಲಿಂಗ ಬಸವಾಯ ನಮಃ” ಎಂದು ಲಿಂಗಾಂಕಿತನಾದೆ,
“ಜಂಗಮ ಬಸವಾಯ ನಮಃ” ಎಂದು ನಿಮ್ಮ ಪಾದಕಮಲದಲ್ಲಿ ಭ್ರಮರನಾದೆ.

ದೈನಿಕ ಜೀವನದಲ್ಲಿ ವ್ಯಕ್ತಿಯು ಬೇಡಿದರೆ ತನ್ನ ಗಂಡನನ್ನು ಬೇಡುವಳು. ಇಲ್ಲವೇ ತಂದೆಯನ್ನು ಬೇಡುವಳು. ಹಾಗೆಯೇ ಶರಣಸತಿ-ಲಿಂಗಪತಿ ಭಾವದಿಂದ ಕರ್ತನನ್ನಾದರೂ ಬೇಡಬೇಕು ; ಇಲ್ಲವೇ ಅಪ್ಪ ಬಸವಣ್ಣನವರನ್ನು ಮಕ್ಕಳಾಗಿ ಬೇಡಬೇಕು. ಈ ಎರಡರ ಹೊರತು ಇನ್ನೊಂದು ಮಾರ್ಗ ಶರಣ ಪಥಕ್ಕೆ ಸಲ್ಲದು. ಅದನ್ನೇ ಮಡಿವಾಳ ಮಾಚಿದೇವರು ಹೀಗೆ ಹೇಳುವರು ;

ಸುಖವೊಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವುದು,
ದುಃಖವೊಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವುದು
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವುದು
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವುದು
ಬಸವಣ್ಣನ ನೆನೆದಲ್ಲದೆ ಎನಗೆ ಭಕ್ತಿಯಿಲ್ಲವೆಂದು,
ನಾನು ಬಸವಣ್ಣಾ, ಬಸವಣ್ಣಾ, ಬಸವಣ್ಣಾ ಎನುತಿರ್ದೆನು
ಕಾಣಾ ಕಲಿದೇವರ ದೇವಾ.

ಉಪಾಸ್ಯ ಗುರು ಬಸವಣ್ಣ

ನೆನವೆನಯ್ಯಾ ಬಸವಣ್ಣ
ನಿಮ್ಮ ಚರಣವೆನ್ನ ಮನದಲ್ಲಿ ಸಾಹಿತ್ಯ ವಹನ್ನಕ್ಕೆ
ನೋಡುವೆನಯ್ಯಾ ಬಸವಣ್ಣ
ನಿಮ್ಮ ಮೂರ್ತಿ ಎನ್ನಂಗವಿಸುವನ್ನಕ್ಕ
ಪೂಜಿಸುವೆನಯ್ಯಾ ಬಸವಣ್ಣ,
ನಿಮ್ಮ ಪ್ರಸಾದವನ್ನ ತನುವಹನ್ನಕ್ಕ
ನಿಮ್ಮ ಆಹ್ವಾನಿಸುವೆನಯ್ಯಾ ಬಸವಣ್ಣ
ಅನಿಮಿಷ ನಿಮಿಷ ನಿಮಿಷಗಳಿಲ್ಲವೆಂದೆನಿಸುವನ್ನಕ್ಕ
ನಿಮ್ಮ ಧ್ಯಾನಿಸುವೆನಯ್ಯಾ ಬಸವಣ್ಣ,
ಜ್ಞಾನಾಜ್ಞಾನವಿಲ್ಲವೆನಿಸುವನ್ನಕ್ಕ,
ನಿಮ್ಮ ಮೂರ್ತಿಗೊಳಿಸುವೆನಯ್ಯಾ ಬಸವಣ್ಣ,
ಅಹಂ ಸೋಹಂ ಎಂಬ ಶಬ್ದವುಳ್ಳನಕ್ಕ,
ಬಸವಣ್ಣಾ ಎಂದು ಹಾಡುವೆನಯ್ಯಾ,
ಎನ್ನ ತನುವಿನ ಗಮನ ನಿರ್ಗಮನವಹನ್ನಕ್ಕ,
ಬಸವಣ್ಣಾ ಬಸವಣ್ಣಾ ಬಸವಣ್ಣಾ ಎನುತಿರ್ದೆನಯ್ಯಾ,
ಕಲಿದೇವರದೇವನೆಂಬ ಶಬ್ದವುಳ್ಳನ್ನಕ್ಕ. - ಮಡಿವಾಳ ಮಾಚಿದೇವ

ಧರ್ಮಗುರು ಪೂಜೆಯು ಎಷ್ಟು ಅಗತ್ಯವಿದೆ ಎಂಬುದನ್ನು ಮಾರ್ಮಿಕವಾಗಿ ಹೇಳುವ ಮಡಿವಾಳ ಮಾಚಿದೇವರ ಈ ವಚನವು ಧರ್ಮಗುರುವಿನ ನೆನಹು, ತ್ರಾಟಕ, ಪೂಜೆ, ಧ್ಯಾನ, ಸ್ತುತಿ ಮುಂತಾದ ಎಲ್ಲಾ ಕ್ರಿಯೆಗಳನ್ನು ಅನುಯಾಯಿಯು ಮಾಡಬೇಕು ಎಂದು ಆದೇಶ ನೀಡುತ್ತದೆ. ನಿಮ್ಮ ಮೂರ್ತಿಗೊಳಿಸುವೆನಯ್ಯಾ ಅಹಂ ಸೋಹಂ ಎಂಬ ಶಬ್ದವುಳ್ಳನಕ್ಕ ಎಂಬ ಮಾತು ಲಿಂಗಾಯತ ಸಮಾಜಕ್ಕೆ ಸ್ಪಷ್ಟ ಆದೇಶವೇ ಆಗಿದೆ. ಎಲ್ಲಿಯವರೆಗೂ ನಾನು ಅರ್ಥಾತ್ ಜೀವಾತ್ಮ, ಸೋಹಂ ಅರ್ಥಾತ್ ಪರಮಾತ್ಮ ಎಂಬ ತತ್ತ್ವಗಳು ಉಂಟೋ ಅಂದರೆ ಅಂಗವು ಲಿಂಗದೊಳಗೊಂದಾಗಿ ಲಿಂಗವೇ ಆಗುವ ತನಕ ಧರ್ಮಗುರುವನ್ನು ಮೂರ್ತಿಕರಿಸಿ ಪೂಜಿಸಬೇಕು ಎಂಬುದೇ ವಚನ ವಾಕ್ಯದ ಅರ್ಥ. ಒಂದು ಶ್ರೇಷ್ಠವಾದ ಧರ್ಮವನ್ನು ಕೊಟ್ಟ ಧರ್ಮಪಿತ ಬಸವಣ್ಣನವರಿಗೆ ಕೃತಜ್ಞತೆ ಸಲ್ಲಿಸುವುದು ಮಾತ್ರವಲ್ಲ, ಸಮಾಜ ಸಂಘಟನೆಯ ದೃಷ್ಟಿಯಿಂದಲೂ ಧರ್ಮಗುರು ಪೂಜೆ ಅತ್ಯಗತ್ಯ.

ವೃಷಭೇಂದ್ರ ವಿಜಯದ ಕರ್ತೃ ಯಳಂದೂರು ಷಡಕ್ಷರಿಯು ಹೀಗೆ ಹೇಳುವನು ; “ಬಸವನ ನಾಮಂ ಸ್ಮರಿಸುತಂ ಬಸವೇಶನ ಕೀರ್ತನಂಗಳಂ ಪಸರಿಸಿ ಪಾಡುತಂ ಬಸವನುಜ್ವಲ ಮೂರ್ತಿಯನೊಲ್ದು ಜಾನಿಸುತ್ತೆಸೆವ ನರಂಗೆ ಜನ್ಮ ತತಿಯುಂಟೆ, ಜಡಸ್ಥಿತಿಯುಂಟೆ, ಪಾತಕ ಪ್ರಸರಮದುಂಟೆ, ಮೃತ್ಯುಭಯಮುಂಟೆ, ಮದಾಂಧತೆಯುಂಟೆ, ಧಾತ್ರಿಯೊಳ್?' ಇಷ್ಟಲಿಂಗಾರ್ಚನೆಯು ವೈಯಕ್ತಿಕವಾದ ಉಪಾಸನಾ ವಿಧಾನ. ಆದ್ದರಿಂದ ಸಾಮೂಹಿಕ ಚಟುವಟಿಕೆಗಳಲ್ಲಿ ಶ್ರೀ ಬಸವೇಶ್ವರ ಪೂಜಾವ್ರತ ವನ್ನು ಅಳವಡಿಸಬೇಕು.

ಹೊಸ ಅಂಗಡಿ, ಕಾರ್ಖಾನೆ ಮುಂತಾದವುಗಳನ್ನು ಪ್ರಾರಂಭಿಸುವಾಗ, ಗೃಹಪ್ರವೇಶ, ಕಟ್ಟಡ ಉದ್ಘಾಟನೆ ಮಾಡುವಾಗ ಈ ಪೂಜಾ(ವ್ರತ) ವಿಧಾನ ಮಾಡಬೇಕು. ಅಂಗಡಿಗಳ ವಾರ್ಷಿಕೋತ್ಸವಗಳಲ್ಲಿ ಲಕ್ಷ್ಮಿ-ಸರಸ್ವತಿ ಪೂಜೆಗಳನ್ನು ರುದ್ರಾಧ್ಯಯನ ಮತ್ತು ಮನೆಯಲ್ಲಿ ಕೆಲವು ವಿಶೇಷ ಕಾರ್ಯಕ್ರಮಗಳಿಗಾಗಿ ಸತ್ಯನಾರಾಯಣ ವ್ರತ, ವರದಾ ಶಂಕರ ವ್ರತ, ಶನಿಪುರಾಣ, ದೇವಿಪುರಾಣ, ಗಣಪತಿ ಹೋಮ ಮುಂತಾದವುಗಳನ್ನು ಮಾಡಿಸುವುದನ್ನು ಬಿಟ್ಟು ಬದಲಿಗೆ ವನ್ನು ಬಸವ ಧರ್ಮಿಯರು ಅಳವಡಿಸಿಕೊಳ್ಳಬೇಕು. ಇದು ಮೂಢನಂಬಿಕೆಗೆ ಆಸ್ಪದವೀಯದೆ ವೈಚಾರಿಕ ಪೂಜೆ ಮಾಡಲು ಆಸ್ಪದ ಕೊಡುವುದು. ಸತತವಾಗಿ ಬಸವಣ್ಣನವರ ಜೀವನ ಪಾರಾಯಣ ಮಾಡುವುದರಿಂದ ಅವರ ಕ್ರಾಂತಿಕಾರಿ ಮತ್ತು ತ್ಯಾಗಜೀವನದ ಅರಿವು ಮೂಡುವುದಷ್ಟೇ ಅಲ್ಲ ಯಾವ ಧೈಯಕ್ಕಾಗಿ ಅವರು ಬಾಳಿದರೆಂಬ ತಿಳುವಳಿಕೆಯಾದರೂ ಹುಟ್ಟುವುದು. ಇದರಿಂದ ಬಸವ ತತ್ತ್ವಕ್ಕೆ ತದ್ವಿರುದ್ಧವಾಗಿ ಅಜ್ಞಾನದಿಂದ ನಡೆಯುತ್ತಿರುವವರಿಗೆ ನಿಜ ತತ್ತ್ವದ ತಿಳುವಳಿಕೆ ಉಂಟಾಗುವುದು.

ಜಾತ್ಯತೀತ ಸಮಾಜ ರಚನೆ ಬಸವಣ್ಣನವರ ಜೀವಿತೋದ್ದೇಶ. ಅದರಂತೆ ಈ ಪೂಜೆಯನ್ನು ಮಾಡಲು ಯಾವುದೇ ಜಾತಿ ಮತ ಪಂಥದ ಅಡ್ಡಿಯಲ್ಲ; ಎಲ್ಲರೂ ಮಾಡಬಹುದು. ಇಷ್ಟಾರ್ಥ ಸಿದ್ದಿಗಾಗಿ ಹದಿನಾರು ಸೋಮವಾರ ವ್ರತ ಮಾಡುವವರು ಕೆಲವರುಂಟು. ಅದೇ ರೀತಿ ಇದನ್ನೂ ಮಾಡಬಹುದು. ವಾರಕ್ಕೊಂದು ದಿವಸ ಇದನ್ನು ಮಾಡಬೇಕು ಮತ್ತು ಶ್ರಾವಣ ಸೋಮವಾರದಂದು ತಪ್ಪದೇ ಮಾಡಬೇಕು ; ಬಸವ ಜಯಂತಿಯಂದು ಮಾಡಬೇಕು. ನವರಾತ್ರಿಯಲ್ಲಿ ಒಂಬತ್ತು ದಿವಸಗಳ ಕಾಲ ಈ ವ್ರತ ಮಾಡಬಹುದು. ಶ್ರಾವಣ ಶುದ್ಧ ಪಂಚಮಿ ಬಸವಣ್ಣನವರು ಲಿಂಗೈಕ್ಯರಾದ ದಿನ. ಆದ್ದರಿಂದ ಶ್ರಾವಣ ಪ್ರತಿಪದೆಯಂದು ಪ್ರತಿಷ್ಠಾಪಿಸಿ ಐದು ದಿವಸಗಳ ಕಾಲ ಮಾಡಿ, ಪಂಚಮಿಯಂದು ಮಂಗಲ ಮಾಡಿ, ಸಾಮೂಹಿಕ ತೀರ್ಥಪ್ರಸಾದ ವಿತರಣೆಯನ್ನು ಮಾಡಬೇಕು. ಇಷ್ಟು ಮಾತ್ರವಲ್ಲದೆ ಬಂಧು-ಮಿತ್ರರಿಗೆ ಪ್ರಸಾದವನ್ನು ಹಂಚುವಾಗ ಸಾಂಕೇತಿಕವಾಗಿ ಕಲ್ಲುಸಕ್ಕರೆ ನೀಡಿ, ಜೊತೆಗೆ ಬಸವಣ್ಣನವರ ವಚನಗಳ ಪುಸ್ತಕಗಳನ್ನು ಅಥವಾ ಶರಣರ ವಚನಗಳನ್ನು, ಧರ್ಮಪಿತ ಬಸವಣ್ಣನವರ ಫೋಟೋಗಳನ್ನು ಹಂಚಬೇಕು. ಹೆಣ್ಣು ಮಕ್ಕಳು ಗೌರಿವ್ರತ, ಮಂಗಳ ಗೌರಿವ್ರತ ಮುಂತಾದವುಗಳ ಬದಲಿಗೆ ಈ ಪೂಜೆಯನ್ನು ಮಾಡಿ, ವಚನ ಸಾಹಿತ್ಯದ ಪುಸ್ತಕಗಳ ಬಾಗಿನ ಅಥವಾ ಉಡುಗೊರೆ ಹೆಣ್ಣುಮಕ್ಕಳಿಗೆ ಕೊಡಬೇಕು. ಮದುವೆಯ ಕಾಲದಲ್ಲಿ ನವದಂಪತಿಗಳು ಈ ಪೂಜೆಯನ್ನು ಮಾಡಬೇಕು. ಮಕ್ಕಳ ನಾಮಕರಣ, ಸೀಮಂತ ಕಾರ್ಯಮಾಡುವ ದಿನದಂದು ಈ ಪೂಜಾವ್ರತವನ್ನು ಮಾಡಬೇಕು. ಈ ರೀತಿಯಾಗಿ ತಾತ್ವಿಕ ಮಾರ್ಗದಲ್ಲಿ ನಡೆಯುವ ಪರಿಪಾಠ ಜನರಲ್ಲಿ ಮೂಡಲೆಂದು ಹಾರೈಸುವೆವು.

ಗುರು ಬಸವ ಪೂಜೆ ಮತ್ತು ಇಷ್ಟಲಿಂಗ ಪೂಜೆ

ಪ್ರಪ್ರಥಮವಾಗಿ ಗಣಪತಿಯ ಪೂಜೆಯನ್ನು ಮಾಡಬೇಕೆಂಬ ನಂಬಿಕೆ ಜನರಲ್ಲಿದೆ. ನಮ್ಮ ಗಣಪತಿ ಧರ್ಮಗುರು ಬಸವಣ್ಣನವರು. ಗಣ ಎಂದರೆ ಸಮೂಹ, ಪತಿ ಎಂದರೆ ಒಡೆಯ. ನಮ್ಮ ಸಮಾಜಕ್ಕೆ ಒಡೆಯ ಧರ್ಮಪಿತ ಬಸವಣ್ಣನವರು. ಆದ್ದರಿಂದ ದಿನ ನಿತ್ಯ ಇಷ್ಟಲಿಂಗ ಪೂಜೆ ಮಾಡುವಾಗ ವಿಭೂತಿ, ರುದ್ರಾಕ್ಷಿಧಾರಣೆ ಆದ ನಂತರ ಸಂಕ್ಷಿಪ್ತವಾಗಿ ಬಸವ ಗುರು ಪೂಜೆ ಮಾಡಬೇಕು. ನಂತರ ಇಷ್ಟ ಲಿಂಗಾರ್ಚನೆ ಮಾಡಬೇಕು. ಬಸವೇಶ್ವರ ಪೂಜಾವ್ರತ ಮಾಡುವಾಗ ಲಿಂಗಾರ್ಚಕರು ಇಷ್ಟಲಿಂಗಾರ್ಚನೆ ಪೂರೈಸಿ, ಕರುಣೋದಕ- ಕರುಣ ಪ್ರಸಾದ ಪಡೆದು ನಂತರ ಪೂಜಾವ್ರತ ಆರಂಭಿಸಬೇಕು. ಲಿಂಗಾಯತೇತರರು ಇಷ್ಟಲಿಂಗ ಪೂಜೆ ಮಾಡುತ್ತಿರುವುದಿಲ್ಲವಾದ ಕಾರಣ, ಸ್ನಾನ ಮಾಡಿ ಬಂದು ವಿಭೂತಿ-ರುದ್ರಾಕ್ಷಿಧಾರಣೆ ಆದ ಮೇಲೆ ಬಸವೇಶ್ವರ ಪೂಜಾವ್ರತ ಆರಂಭಿಸಬಹುದು.

ಪಂಚಕೋನ - ಷಟ್ಕೋನ ಚಿತ್ರಗಳ ಅರ್ಥ

ಪ್ರತಿಯೊಂದು ಧರ್ಮವೂ ತನ್ನದೇ ಆದ ಕೆಲವು ಸಾಂಕೇತಿಕ ಚಿತ್ರಗಳನ್ನು ಲಾಂಛನಗಳನ್ನು ಹೊಂದಿರುತ್ತದೆ. ಲಿಂಗಾಯತ ಧರ್ಮದಲ್ಲಿ ಕಾಣಬರುವ ಅಂಥ ಎರಡು ಚಿತ್ರಗಳೆಂದರೆ 1. ಪಂಚಕೋನ ಪ್ರಣವ ಮತ್ತು 2. ಷಟ್‌ಕೋನ ಬಸವಲಿಂಗ ಮುದ್ರೆ,

ಪಂಚಕೋನ ಪ್ರಣವವು ಸೃಷ್ಟಿಕರ್ತ ಪರಮಾತ್ಮ ಲಿಂಗದೇವನ ಸಂಕೇತ
ಪಂಚಕೋನ ಪ್ರಣವದ ಚಿತ್ರ

ಪಂಚಕೋನ ಪ್ರಣವವು ಸೃಷ್ಟಿಕರ್ತ ಪರಮಾತ್ಮ ಲಿಂಗದೇವನ ಸಂಕೇತ. ಇದರ ಅರ್ಥವೇನೆಂದರೆ

1. ಓಂಕಾರ ಸ್ವರೂಪಿಯೂ, ಸಚ್ಚಿದಾನಂದ ನಿತ್ಯ ಪರಿಪೂರ್ಣನೂ ಆದ ಪರಮಾತ್ಮನೇ ಈ ಸೃಷ್ಟಿಯ ಕೇಂದ್ರಬಿಂದು.

2. ಲಿಂಗಾಯತ ಧರ್ಮದಲ್ಲಿ ದೇವಸೂಚಕವಾದ ಪವಿತ್ರ ಮಂತ್ರವೆಂದರೆ ಓಂ ಲಿಂಗಾಯ ನಮಃ ಮಧ್ಯದಲ್ಲಿ ಓಂ ಬಂದು ಐದು ಕೋನಗಳಲ್ಲಿ ಲಿಂಗಾಯ ನಮಃ ಎಂಬ ಐದಕ್ಷರಗಳು ಬರುವುದರಿಂದ ಪಂಚಕೋನ ಪ್ರಣವವು ಮಂತ್ರ ಸೂಚಕವು ಅಹುದು.

3. ಈ ಚಿತ್ರವು ಜೀವಾತ್ಮ ಸೂಚಕವೂ ಅಹುದು. ಮೇಲಿನ ಶೃಂಗ ಕೋನವು ಶಿರಸ್ಸನ್ನು, ಮೇಲಿನ ಎಡ-ಬಲಬದಿಯ ಕೋನಗಳು ಎರಡು ಭುಜಗಳನ್ನು, ಮಧ್ಯದ ಕೇಂದ್ರವು ಹೃದಯವನ್ನು, ಕೆಳಗಿನ ಎಡ ಮತ್ತು ಬಲ ಬದಿಯ ಕೋನಗಳು ತೊಡೆಗಳನ್ನು ಸಂಕೇತಿಸಿ, ಶಾಂಭವಿ ಮುದ್ರೆಯಲ್ಲಿ ಧ್ಯಾನಕ್ಕೆ ಕುಳಿತ ವ್ಯಕ್ತಿಯ ಸೂಚಕವಾಗಿದೆ.

ಲಿಂಗದೇವ ಸೂಚಕವಾದ ಪಂಚಕೋನ ಪ್ರಣವವನ್ನು ವಿಭೂತಿ ಶುದ್ಧಿ ಮಾಡಲು, ಇಷ್ಟಲಿಂಗಕ್ಕೆ ಮಜ್ಜನವನ್ನು ಎರೆದ ನಂತರ ಅದನ್ನು ಪೂಜೆಗೆ ಅಂಗೈಯಲ್ಲಿಟ್ಟುಕೊಳ್ಳುವ ಮೊದಲು ಅಂಗೈಯಲ್ಲಿ ಬರೆಯಲು ಉಪಯೋಗಿಸಬೇಕು. ಪಂಚಕೋನದ ಅರ್ಥವನ್ನು ಸಾರ ರೂಪದಲ್ಲಿ ಹೀಗೆ ಬರೆದಿದ್ದೇನೆ.

ಪಂಚ ಭೂತಾತ್ಮಕ ಬ್ರಹ್ಮಾಂಡಕಾಧಾರ
ಪಂಚಾಕ್ಷರಿ ಪ್ರಣವ ಪ್ರತ್ಯಕ್ಷರೂಪ
ಶಾಂಭವಿ ಮುದ್ರೆಯ ಪ್ರತಿರೂಪ ತಾನಾದ
ಶುಭ ಪಂಚಕೋನವ ಅಂಗೈಲಿ ಬರೆವೆ ||

ಷಟ್ಕೋನ ಸಹಿತ ಬಸವ ಧ್ವಜ ಲಾಂಛನ

ಷಟ್ಕೋನ ಸಹಿತ ಬಸವ ಧ್ವಜ ಲಾಂಛನ
ಪ್ರತಿಯೊಂದು ಧರ್ಮವೂ ತನ್ನದೇ ಆದ ಗಣಲಾಂಛನ (Community Symbol) ವನ್ನು ಹೊಂದಿದೆ. ಹಿಂದುಗಳಿಗೆ ಓಂಕಾರ, ಬೌದ್ಧರಿಗೆ ಧರ್ಮಚಕ್ರ, ಕ್ರೈಸ್ತರಿಗೆ ಶಿಲುಬೆ, ಮುಸಲೀಮರಿಗೆ ಅರ್ಧಚಂದ್ರ-ನಕ್ಷತ್ರ, ಸಿಬ್ಬರಿಗೆ ಎರಡು ಕತ್ತಿ-ಢಾಲು ಗಣಲಾಂಛನಗಳಾದ ಲಿಂಗಾಯತ ಧರ್ಮಕ್ಕೆ ಷಟ್‌ಕೋನ ಸಹಿತ ಬಸವಲಿಂಗ ಮುದ್ರೆಯೇ ಗಣಲಾಂಛನ.

ಒಂದು ಪೂರ್ಣ ವೃತ್ತ. ಅದರಲ್ಲಿ ಎರಡು ತ್ರಿಕೋನಗಳು, ಮಧ್ಯೆ ಇಷ್ಟಲಿಂಗ; ಅದರ ಮಧ್ಯೆ ಒಂದು ಬೆಳಕಿನ ಗೋಲ. ಆರು ಕೋನಗಳಲ್ಲಿ ಶ್ರೀ ಗುರುಬಸವ ಎಂಬ ಅರಕ್ಷರಗಳು. ಇದು ಲಿಂಗಾಯತ ಧರ್ಮವನ್ನು ಅತ್ಯಂತ ಸೂಕ್ತವಾಗಿ ಪ್ರತಿನಿಧಿಸುತ್ತದೆ.

೧. ವೃತ್ತ : ಬ್ರಹ್ಮಾಂಡದ ಸಂಕೇತ.

೨. ಎರಡು ತ್ರಿಕೋನಗಳು ಬರುತ್ತವೆ. ಒಂದು ಊರ್ಧ್ವಮುಖವಾಗಿದ್ದರೆ ಇನ್ನೊಂದು ಅಧೋಮುಖವಾಗಿರುತ್ತದೆ. ಊರ್ಧ್ವಮುಖವಾದ ತುದಿಯುಳ್ಳ ತ್ರಿಕೋನವು ಆಚಾರ-ಅರಿವು-ಅನುಭಾವಗಳನ್ನು ಸಂಕೇತಿಸುತ್ತದೆ.

ಅಧೋಮುಖಿಯಾದ ತುದಿಯಿರುವ ತ್ರಿಕೋನವು ಗುರು-ಲಿಂಗ- ಜಂಗಮ ತತ್ತ್ವಗಳನ್ನು ಸಂಕೇತಿಸುತ್ತದೆ. ವ್ಯಕ್ತಿಯಲ್ಲಿ ಆಚಾರ ಅಳವಡಲು ಗುರು, ಅರಿವು ಅಳವಡಲು ಲಿಂಗ, ಅನುಭಾವ ಅಳವಡಲು ಜಂಗಮ ಸಹಾಯಕ ಸಾಧನಗಳಾಗುತ್ತವೆ. ಆಚಾರ-ಅರಿವು-ಅನುಭಾವ ಅಳವಟ್ಟಂತೆಲ್ಲ ಗುರು-ಲಿಂಗ-ಜಂಗಮಗಳ ಅನುಗ್ರಹವು ಜ್ಞಾನಾತ್ಮಕವಾಗಿ ಪ್ರಾಪ್ತಿಯಾಗುತ್ತದೆ.
ಊರ್ಧ್ವಮುಖವಾದ ತುದಿಯುಳ್ಳ ತ್ರಿಕೋನವು ಆಚಾರ-ಅರಿವು-ಅನುಭಾವಗಳನ್ನು ಸಂಕೇತಿಸುತ್ತದೆ ಅಧೋಮುಖಿಯಾದ ತುದಿಯಿರುವ ತ್ರಿಕೋನವು ಗುರು-ಲಿಂಗ- ಜಂಗಮ ತತ್ತ್ವಗಳನ್ನು ಸಂಕೇತಿಸುತ್ತದೆ.

೩. ಮಧ್ಯದ ಇಷ್ಟಲಿಂಗ : ಈ ಬ್ರಹ್ಮಾಂಡದ ಕೇಂದ್ರ ಶಕ್ತಿ ಸೃಷ್ಟಿಕರ್ತ ಪರಮಾತ್ಮ, ಅವನು ಪ್ರಕಾಶ ಸ್ವರೂಪನು. ಇಂಥ ನಿರಾಕಾರ ಲಿಂಗದೇವನನ್ನು ಇಷ್ಟಲಿಂಗ ರೂಪದಲ್ಲಿ ಚುಳುಕಾಗಿಸಿಕೊಂಡು ಪೂಜಿಸುವುದೇ ಲಿಂಗಾಯತ ಧರ್ಮದ ಪ್ರಮುಖ ಆಚರಣೆ.

೪. ಆರು ಕೋನಗಳು: ಷಟ್‌ತತ್ವಗಳ ಸಂಕೇತ.

೧) ಷಡ್‌ಭೂತಗಳು : ಪೃಥ್ವಿ-ಅಪ್-ತೇಜ-ವಾಯು-ಆಕಾಶ-ಆತ್ಮ
೨) ಷಟ್‌ಸ್ಥಲಗಳು : ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯ
೩) ದೇವಮಂತ್ರ : ಓಂ ಲಿಂ ಗಾ ಯ ನ ಮಃ
೪) ಗುರುಮಂತ್ರ : ಶ್ರೀ ಗು ರು ಬ ಸ ವ
೫) ಷಡ್ವಿಧ ಭಕ್ತಿ : ಶ್ರದ್ಧಾ, ನಿಷ್ಠಾ, ಅವಧಾನ, ಅನುಭವ, ಆನಂದ, ಸಮರಸ
೬) ಷಟ್‌ಚಕ್ರಗಳು : ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ,
೭) ಷಟ್‌ಶಕ್ತಿಗಳು : ಕ್ರಿಯಾ, ಜ್ಞಾನ, ಇಚ್ಛಾ, ಆದಿ, ಪರಾ, ಚಿಚ್ಛಕ್ತಿ.
೮) ಷಟ್ಟಲೆಗಳು : ನಿವೃತ್ತಿ, ಪ್ರತಿಷ್ಠಾ, ವಿದ್ಯಾ ಶಾಂತಿ, ಶಾಂತ್ಯತೀತ, ಶಾಂತ್ಯತೀತೋತ್ತರ
೯) ಷಡ್ಲಿಂಗಗಳು : ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ
೧೦) ಷಡ್‌ ಸಾಮಾಜಿಕ- ಧ್ಯೇಯಗಳು : ಸಂವೃದ್ಧಿ, ಸಂತೃಪ್ತಿ, ಸರ್ವೋದಯ, ಸೋದರತ್ವ, ಸಮಾನತೆ, ಸಾಮರಸ್ಯ

ಆದ್ದರಿಂದ ಇಷ್ಟಲಿಂಗವೇ ಪ್ರಧಾನವಾದ ಲಾಂಛನವಾಗಿರುವ ಲಿಂಗಾಯತ ಧರ್ಮಕ್ಕೆ ಮಧ್ಯೆ ಇಷ್ಟಲಿಂಗದ ಚಿತ್ರವಿರುವ ಷಟ್‌ಕೋನ ಲಾಂಛನವು ಅತ್ಯಂತ ಸೂಕ್ತವೆನಿಸುತ್ತದೆ.

ಗ್ರಂಥ ಋಣ: ೧) ಶ್ರೀ ಬಸವೇಶ್ವರ ಪೂಜಾವ್ರತ, ಲೇಖಕರು: ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಶಿವಯೋಗ ಅಥವಾ ಶಿವಪಥ (ಸಾಧನೆ) ಬಸವೇಶ್ವರ ಪೂಜಾವ್ರತ ಅಧ್ಯಾಯ -೧ Next