ಇಷ್ಟಲಿಂಗೋಪಾಸನೆ - ಒಂದು ವೈಜ್ಞಾನಿಕ ವಿಶ್ಲೇಷಣೆ. | ಲಿಂಗಾಯತ- ಏಕ ದೇವೋಪಾಸನೆ |
ಪರಮಾತ್ಮನ ಸ್ವರೂಪ ಇಷ್ಟಲಿಂಗ ರೂಪದಲ್ಲಿ |
ಆದಿ ಮಧ್ಯಾವಸಾನವಿಲ್ಲದಂದು,
ಆದಿ ಅನಾದಿ, ಬಿಂದು ಕಳೆಗಳಿಲ್ಲದಂದು,
ಸಾವಯ, ನಿರವಯವಿಲ್ಲದಂದು,
ತತ್ವ ಬ್ರಹ್ಮಾಂಡಾದಿ
ಲೋಕಾದಿ ಲೋಕಂಗಳೇನುಯೇನೂ ಇಲ್ಲದಂದು;
ನಿತ್ಯ ನಿರಂಜನ ಪರವಸ್ತು ನೀನೊರ್ಬನೆಯಿದ್ದೆಯಲ್ಲ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. - ತೋಂಟದ ಸಿದ್ಧಲಿಂಗ ಶಿವಯೋಗಿಗಳು /೧೦ [#]
ಪರಮಾತ್ಮನು ನಿರಾಕಾರ ಸ್ವರೂಪನಾಗಿದ್ದಾನೆ, ಅಷ್ಟೇ ಅಲ್ಲ ಪರಮಾತ್ಮನು ಶಕ್ತಿಯುತನಾಗಿದ್ದಾನೆ. ಪರಮಾತ್ಮ ಹಾಗೂ ಅವನಲ್ಲಿರುವಂತಹ ಚಿತ್ ಶಕ್ತಿಯು ಹೂ-ಪರಿಮಳದಂತೆ ಅವಿನಾಭಾವ ಸಂಬಂಧವುಳ್ಳದ್ದಾಗಿದೆ. ಅಂದರೆ ಹೂವು ಮತ್ತು ಅದರ ಪರಿಮಳವನ್ನು ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೋ ಹಾಗೆಯೇ ಪರಮಾತ್ಮ ಮತ್ತು ಚಿತ್‍ಶಕ್ತಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ.
ಸಕ್ಕರೆಯು ಆಕಾರ, ರುಚಿಯು ನಿರಾಕಾರ;
ಲಿಂಗವಾಕಾರ, ಜಂಗಮ ನಿರಾಕಾರ;
ಬೆಣ್ಣೆ ಆಕಾರ, ಘೃತ ನಿರಾಕಾರ.
ಆಕಾರ ಬಿಟ್ಟು ನಿರಾಕಾರವಿಲ್ಲ, ನಿರಾಕಾರ ಬಿಟ್ಟು ಆಕಾರವಿಲ್ಲ.
ಲಿಂಗ ಜಂಗಮವೆಂಬುಭಯ ಶಬ್ದ ಒಂದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ. /೧೦೬೨ [#]
ಹನ್ನೆರಡನೆಯ ಶತಮಾನದಲ್ಲಿ ಶರಣರು ಪರಬ್ರಹ್ಮವನ್ನೇ ಲಿಂಗವೆಂದು ಕರೆದರು. ಲಿಂಗವೆಂಬುದು ಶರಣರ ಹೃದಯದಲ್ಲಿ ಬೆಳಗುವ ಜ್ಯೋತಿರ್ಮಯ ಲಿಂಗವಾಗಿದೆ. ಇದನ್ನೇ ವಚನಕಾರರು ಶೂನ್ಯ, ಬಯಲು, ಸಹಜ, ಸತ್ಯ, ನಿಜ ಮತ್ತು ಸಚ್ಚಿದಾನಂದ ರೂಪವುಳ್ಳದ್ದು ಮುಂತಾದ ಶಬ್ದಗಳಿಂದ ವರ್ಣಿಸಿದ್ದಾರೆ.
ಲಿಂಗವೆಂಬುದು ಸರ್ವಕಾರಣ ಪರಮ ನಿರ್ಮಲ.
ಲಿಂಗವೆಂಬುದು ಸಚ್ಚಿದಾನಂದ ನಿತ್ಯಪರಿಪೂರ್ಣ.
ಲಿಂಗವೆಂಬುದು ಸರ್ವಲೋಕೋತ್ಪತ್ತಿಗೆ ಮೂಲಕಾರಣ.
ಲಿಂಗವೆಂಬುದು ಜನ್ಮವಾರಿಧಿಯ ದಾಂಟಿಸುವ ಭೈತ್ರವು.
ಲಿಂಗವೆಂಬುದು ಶರಣರ ಹೃದಯದಲ್ಲಿ ಬೆಳಗುವ
ಜ್ಯೋತಿರ್ಮಯ ಲಿಂಗವು.
ಇಂತೀ ಲಿಂಗದ ಮರ್ಮವನರಿದವನೇ ಅರಿದವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ. /೯೫೬ [#]
ಇಂತಹ ಪರಬ್ರಹ್ಮ ಪರಮಾತ್ಮನು ಜೀವಿಗಳ ದೇಹದಲ್ಲಿ ಅಡಗಿರುವ ಬಗೆಯನ್ನು ಶರಣರು ಈ ಕೆಳಗಿನಂತೆ ನಿರೂಪಿಸಿದ್ದಾರೆ.
ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು,
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು,
ನನೆಯೊಳಗಣ ಪರಿಮಳದಂತಿದ್ದಿತ್ತು,
ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು. -೧/೧ [#]
ಇಲ್ಲಿ ಉದಕವೆಂದರೆ ನೀರು, ಆ ನೀರಿನಲ್ಲಿಯೆ ಬೆಂಕಿ ಇದೆ. ನೀರು ಎರಡು ವಾಯುಗಳ ಸಮ್ಮಿಶ್ರಣದಿಂದಾಗಿದೆ. ಅಂದರೆ ಜಲಜನಕ ಮತ್ತು ಆಮ್ಲಜನಕಗಳಿಂದಾಗಿದೆ. (H2O) ಜಲಜನಕವು ಕಿಚ್ಚಿನ ರೂಫದಲ್ಲಿ ಉದಕದಲ್ಲಿ ಅಡಗಿದೆ. ಹಾಗೆಯೇ ನಮ್ಮ ದೇಹದಲ್ಲಿ ಪರಮಾತ್ಮನು ಮುನುಷ್ಯ ಶರೀರದಲ್ಲಿ ಹುದುಗಿದ್ದಾನೆ. ಆ ಪರಮಾತ್ಮನನ್ನು ಶ್ರೀ ಗುರು ಬಸವಣ್ಣನವರು ಇಷ್ಟಲಿಂಗ ರೂಪದಲ್ಲಿ ಕಾಣುವ ಹಾಗೆ ಕರಸ್ಥಲಕ್ಕೆ ತಂದು ಕೊಟ್ಟರು.
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ,
ಎನಗಿದು ಸೋಜಿಗ, ಎನಗಿದು ಸೋಜಿಗ !
ಅಹುದೆನಲಮ್ಮೆನು, ಅಲ್ಲೆನಲಮ್ಮೆನು,
ಗುಹೇಶ್ವರಲಿಂಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ ! -೨/೬೦ [#]
ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗವಿಲ್ಲದಲ್ಲಿಂದತ್ತ ನೋಡಾ,
ಧರೆಯು ಬ್ರಹ್ಮಾಂಡವು ಮೂರುತಿಗೊಳ್ಳದಲ್ಲಿಂದತ್ತ ನೋಡಾ!
ಘನಪ್ರಸಾದವ ಸಾಧಿಸಿ ತಂದು ಎನ್ನ ಕೈಯಲಿ ನಿಕ್ಷೇಪ[ವಾಗಿ] ಕೊಟ್ಟನಯ್ಯಾ
ಕೂಡಲಚೆನ್ನಸಂಗಾ ನಿಮ್ಮ ಶರಣನು. -೩/೨೧ [#]
ಇಲ್ಲಿ ಚೆನ್ನಬಸವಣ್ಣನವರು ಬ್ರಹ್ಮಾಂಡದಲ್ಲೆಲ್ಲಾ ಚೈತನ್ಯ ಸ್ವರೂಪವಾಗಿ ಇದ್ದಂತಹ ಪರಮಾತ್ಮನನ್ನು ಗುರುಬಸವಣ್ಣನವರು (ನಿಕ್ಷೇಪವಾಗಿ) ಲಿಂಗ ರೂಪದಲ್ಲಿ ಸಾಧಿಸಿ ತಂದು ನಮ್ಮ ಕರಸ್ಥಲಕ್ಕೆ ಕೊಟ್ಟಿದ್ದಾರೆಂದು ವಿವರಿಸಿದ್ದಾರೆ. ಈ ಕರಸ್ಥಲದ ಇಷ್ಟಲಿಂಗ(ಕಂಥೆ)ವು ಬ್ರಹ್ಮಾಂಡದಲ್ಲಿರುವ ಪರಮಾತ್ಮನ ಸ್ವರೂಪವೂ ಹೌದು ಪಿಂಡಾಂಡದಲ್ಲಿರುವ ಪರಮಾತ್ಮನ ಸ್ವರೂಪವು ಹೌದು.
ಅದೆ ರೀತಿ ಮನುಷ್ಯನ ಶರೀರದಲ್ಲಿ
ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯವಲಿಂಗವ ಮಾಡಿ,
ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಆ ಇಷ್ಟಲಿಂಗವೆ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು,
ಆ ಮೂಲಚೈತನ್ಯವೆ ಭಾವಲಿಂಗವು.
ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿ
ತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ, ಕೂಡಲಸಂಗಮದೇವ. -೧/೯೭೧ [#]
ಸರ್ವವ್ಯಾಪಿಯಾದ ಪರಮಾತ್ಮನು ಸರ್ವರ ಹೃದಯದಲ್ಲಿ ಜ್ಯೋತಿ ಸ್ವರೂಪದಲ್ಲಿ ಸತ್-ಚಿತ್ ಆನಂದ ರೂಪವಾಗಿ ನೆಲೆಸಿರುತ್ತಾನೆ. ಇಲ್ಲಿ ಹೃದಯವೆಂದರೆ ದೇಹದ ಮುಖ್ಯವಾದ ಭಾಗವೆಂದು ಅರ್ಥ. ಅದು ಮಿದುಳಿನ ಮಧ್ಯಭಾಗವಾಗಿದೆ. ಅನೇಕರು ಇದನ್ನು ರಕ್ತಪರಿಚಲನೆಯಲ್ಲಿ ಮುಖ್ಯ ಕೆಲಸಮಾಡುತ್ತಿರುವ ಹೃದಯವೆಂದು ಭಾವಿಸಿದ್ದಾರೆ. ಆದರೆ ಹೃದಯವು ಆತ್ಮನ ವಾಸ ಸ್ಥಾನವಿರುವುದರಿಂದ ಈ ಹೃದಯವನ್ನು ಅಂದರೆ ಮಿದುಳನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗುವುದಿಲ್ಲ ಆದರೆ ರಕ್ತಪರಿಚಲನೆಯಲ್ಲಿ ಮುಖ್ಯ ಪಾತ್ರವಹಿಸುವ ಹೃದಯವನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಅಲ್ಲಿ ಆತ್ಮನಿದ್ದರೆ ಈ ಕೆಲಸ ಅಸಾಧ್ಯವಾಗುತ್ತಿತ್ತು. ಕಾರಣ ಹೃದಯವೆಂದರೆ ಮಿದುಳಿನ ಮಧ್ಯಭಾಗವಾಗಿರುತ್ತದೆ. ಶರಣರ ವಚನಗಳಲ್ಲಿ ಇದಕ್ಕೆ ಊಧ್ರ್ವಹೃದಯ, ಮಧ್ಯಹೃದಯ, ಪೂರ್ವಹೃದಯವೆಂದೂ, ಹಾಗೂ ಬಯಲು, ಆಕಾಶ, ಭ್ರೂಮಧ್ಯ, ಸಾಸಿರದಳ ಕಮಲ, ಆಷ್ಟದಳಕಮಲ, ನಾಭಿಸ್ಥಾನವೆಂದೂ ಮತ್ತು ಆಧಾರವೆಂದು ಅನೇಕ ಪರ್ಯಾಯ ಪದಗಳನ್ನು ಶರಣರು ತಮ್ಮ ವಚನಗಳಲ್ಲಿ ಉಪಯೋಗಿಸುದ್ದಾರೆ.
ಹೃದಯಕಮಲದಲ್ಲಿ ವಾಸವಾಗಿರುವಾತನೊಬ್ಬನು.
ಮನದ ಕೊನೆಯಲ್ಲಿ ಇರುವಾತನೊಬ್ಬನು,
ಚಿದಾಕಾಶದಲ್ಲಿರುವಾತನೊಬ್ಬನು.
ಇವರೆಲ್ಲರಲ್ಲಿ ಇರುವಾತನೊಬ್ಬನು,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನು. -೪/೧೧೭೮ [#]
ಶ್ರೀ ಸೊನ್ನಲಾಪುರದ ಸಿದ್ಧರಾಮೇಶ್ವರರು ಈ ವಚನದಲ್ಲಿ ಒಂದೇ ಪರವಸ್ತು ಮೂರಾಗಿದೆ, ಮೂರು ಒಂದೇ ಆಗಿದೆ ಎಂದು ಹೇಳಿದ್ದಾರೆ. ಈ ಮೂವರು ಒಂದಾದ ಜ್ಯೋತಿ ಸ್ವರೂಪವಾದ ಮಹಾಘನಲಿಂಗವನ್ನು ಶ್ರೀಗುರು ಕರಸ್ಥಲಕ್ಕೆ ಇಷ್ಟಲಿಂಗ ರೂಪವಾಗಿ ಕೊಟ್ಟ ಈ ಲಿಂಗವು ಒಳಗಿರತಕ್ಕ ಪ್ರಾಣ (ಜ್ಞಾನ)ಸ್ವರೂಪವಾಗಿದೆ.
ಇಷ್ಟಲಿಂಗವೇ ಪ್ರಾಣ, ಪ್ರಾಣಲಿಂಗವೆ ಇಷ್ಟ
ದೃಷ್ಟಿ ಬಲಿಯಲು ಉಭಯ ಒಂದಾದುದು
ಇಷ್ಟವನು ನೋಡ ನೋಡಲು ಸಕಲ ಸಂಧಾನದ
ನಿಷ್ಕಲದ ಹೊನಲಯ್ಯ ಯೋಗಿನಾಥ - ಸಿದ್ಧರಾಮೇಶ್ವರ
ಇಲ್ಲಿ ಇಷ್ಟಲಿಂಗ ಮತ್ತು ಒಳಗಿರತಕ್ಕ ಪ್ರಾಣ ಎರಡೂ ಒಂದೇ ಆಗಿರುತ್ತವೆ. ಇನ್ನೂ ವಿವರವಾಗಿ ವಿಚಾರಿಸುವದಾದರೆ ಪರಮಾತ್ಮನೆ ತನ್ನ ಚಿತ್‍ಶಕ್ತಿಯ ಚಲನೆ ಮಾತ್ರದಿಂದ ಒಂದು ಅಂಗಸ್ಥಲ, ಒಂದು ಲಿಂಗಸ್ಥಲ ಎಂದು ಎರಡಾಗಿ ಒಂದು ಉಪಾಸ್ಯ ಒಂದು ಉಪಾಸಕವೆನಿಸಿತು.
ಪರಮಾತ್ಮನ ಚಿತ್‍ಶಕ್ತಿಯು ಎರಡಾಗಿ ಲಿಂಗಸ್ಥಲವನ್ನಾಶ್ರಯಿಸಿ ಶಕ್ತಿ ಎನಿಸಿತ್ತು ಅಂಗಸ್ಥಲವನ್ನಾಶ್ರಯಿಸಿ ಭಕ್ತಿ ಎನಿಸಿತ್ತು.
ಲಿಂಗಗತ ಶಕ್ತಿಯಿಂದ ಪರಮಾತ್ಮನು ಭಾವಲಿಂಗ, ಪ್ರಾಣಲಿಂಗ, ಇಷ್ಟಲಿಂಗವೆಂದು ಮೂರು ಬಗೆಯಾಯಿತ್ತು.
ಅಂಗಗತ ಭಕ್ತಿಯಿಂದ ಅಂಗನು ಯೋಗಾಂಗ ಭೋಗಾಂಗ, ತ್ಯಾಗಾಂಗವೆಂದು ಮೂರು ಬಗೆಯಾಯಿತ್ತು.
ಅದರೆಂತೆ ಲಿಂಗಸ್ಥಲವನ್ನಾಶ್ರಯಿಸಿದ ಶಕ್ತಿಯು ಸತ್ಕಲಾಶಕ್ತಿ, ಚಿತ್ಕಲಾಶಕ್ತಿ, ಆನಂದ ಕಲಾಶಕ್ತಿ ಎಂದು ಮೂರು ಬಗೆಯಾಯಿತ್ತು.
ಅಂಗಸ್ಥಲವನ್ನಾಶ್ರಯಿಸಿದ ಭಕ್ತಿಯು ಮಹಾಜ್ಞಾನ ಭಕ್ತಿ, ಜ್ಞಾನಭಕ್ತಿ, ಕ್ರಿಯಾಭಕ್ತಿ ಎಂದು ಮೂರು ಬಗೆಯಾಯಿತ್ತು.
ಅದರಂತೆ -
"ಭಾವಲಿಂಗದಿಂದ -ಪ್ರಸಾದಲಿಂದ, ಮಹಾಲಿಂಗ
ಪ್ರಾಣಲಿಂಗದಿಂದ -ಶಿವಲಿಂಗ, ಜಂಗಮಲಿಂಗ
ಇಷ್ಟಲಿಂಗದಿಂದ - ಆಚಾರಲಿಂಗ, ಗುರುಲಿಂಗ"
ಇದೇ ರೀತಿಯಾಗಿ
"ಯೋಗಾಂಗದಲ್ಲಿ -ಶರಣ ಐಕ್ಯಸ್ಥಲಗಳು
ಬೋಗಾಂಗದಲ್ಲಿ - ಪ್ರಸಾದಿ, ಪ್ರಾಣಲಿಂಗಿಸ್ಥಲಗಳು
ತ್ಯಾಗಾಂಗದಲ್ಲಿ -ಭಕ್ತ, ಮಹೇಶ್ವರ ಸ್ಥಲಗಳು"
ಹೀಗೆ ಲಿಂಗ-ಅಂಗದಲ್ಲಿ ಎರಡೆರಡಾಗಿ ಆರು ತೆರನಾದವು ಹಾಗೆಯೇ ಶಕ್ತಿ ಭಕ್ತಿಗಳಲ್ಲಿಯೂ ಎರಡೆರಡಾಗಿ ಆರು ತೆರನಾದವು.
ಸತ್ಕಲಾ ಶಕ್ತಿ -ಚಿತ್‍ಶಕ್ತಿ, ಪರಾಶಕ್ತಿ
ಚಿತ್ಕಲಾ ಶಕ್ತಿ - ಆದಿಶಕ್ತಿ, ಇಚ್ಛಾಶಕ್ತಿ
ಆನಂದಕಲಾ ಶಕ್ತಿ - ಜ್ಞಾನಶಕ್ತಿ, ಕ್ರಿಯಾಶಕ್ತಿ
ಇನ್ನು
ಮಹಾಜ್ಞಾನ ಭಕ್ತಿ -ಸಮರಸ ಭಕ್ತಿ, ಆನಂದ ಭಕ್ತಿ
ಜ್ಞಾನಭಕ್ತಿ -ಅನುಭಾವ ಭಕ್ತಿ, ಅವಧಾನ ಭಕ್ತಿ
ಕ್ರಿಯಾಭಕ್ತಿ - ನಿಷ್ಠಾಭಕ್ತಿ, ಶ್ರದ್ಧಾಭಕ್ತಿ
ಹೀಗೆ ಲಿಂಗಕ್ಕೆ ಶಕ್ತಿಯೂ ಅಂಗರೂಪಾಯಿತ್ತು ಅದೇ ಪ್ರಕಾರ ಅಂಗಕ್ಕಿ(ಶರಣ) ಭಕ್ತಿಯೂ ಕೂಡಾ ಅಂಗವಾಗಿರುತ್ತದೆ.
ಇಲ್ಲಿ ಅಂಗವೆಂದರೆ ಶರಣ, ಲಿಂಗವೆಂದರೆ ಪರಮಾತ್ಮ, ಶರಣನಿಗೆ ಯಾವಾಗಲೂ ಲಿಂಗವು ಪ್ರಾಣವಾಗಿದೆ ಇನ್ನು ಲಿಂಗಕ್ಕೆ ಯಾವಾಗಲೂ ಶರಣನು ಅಂಗನಾಗಿರುತ್ತಾನೆ. ಈ ಶರಣ ಹಾಗೂ ಲಿಂಗ ಇವು ಬೀಜ ವೃಕ್ಷದಂತೆ ಇರುತ್ತವೆ. ಆದ್ದರಿಂದ ಶರಣನೆಂದರೆ ಲಿಂಗ, ಲಿಂಗವೆಂದರೆ ಶರಣ; ಇವೆರಡಕ್ಕೂ ಭೇದವಿಲ್ಲ. ಇನ್ನು ಲಿಂಗವೆಂದರೆ ಪ್ರಾಣ ಅಥವಾ ಚೈತನ್ಯ. ಈ ಪ್ರಾಣವು ಬ್ರಹ್ಮಾಂಡ ಮತ್ತು ಪಿಂಡಾಂಡಗಳಲ್ಲಿ ಪರಮಾಣು ರೂಪದಲ್ಲಿ ಇರುತ್ತದೆ.
ಹರ ತನ್ನ ರೂಪ ತೊರಲಿಕ್ಕೆ ಶ್ರೀಗುರುವಾದ
ಆ ಗುರುವೆ ಕರಸ್ಥಲಕ್ಕೆ ಲಿಂಗವಾದ
ಮನಸ್ಥಲಕ್ಕೆ ಮಂತ್ರವಾದ, ತನುಸ್ಥಲಕ್ಕೆ ಪ್ರಸಾದವಾದ, ಪ್ರಾಣಸ್ಥಲಕ್ಕೆ ಜಂಗಮವಾದ
ಇಂತೀ ತ್ರಿವಿಧದಲ್ಲಿ ತ್ರಿವಿಧ ಸಾಹಿತ್ಯವಾದನಯ್ಯಾ
ಕೂಡಲಚೆನ್ನಸಂಗನ[ಲ್ಲಿ] ಬಸವಣ್ಣನು. /೨೨ [#]
ಈ ವಚನದಲ್ಲಿ "ಪ್ರಾಣಸ್ಥಲಕ್ಕೆ ಜಂಗಮವಾದ" ಎಂದರೆ ಜಂಗಮವೂ ಕೂಡ ಪರಮಾತ್ಮ ಚೈತನ್ಯವಾಗಿರುತ್ತದೆ. ಈ ಚೈತನ್ಯವು ಮೂರು ಸ್ಥಲಗಳಲ್ಲಿ ಅಂದರೆ ತನು, ಮನ, ಪ್ರಾಣಗಳಲ್ಲಿಯೂ ಇರುತ್ತದೆ. ಹೀಗೆ ಪರಮಾತ್ಮನು ಮೂರು ಸ್ಥಲಗಳಾಗಿ, ಆ ಮೂರು ಸ್ಥಲಗಳು ಒಂದಾಗಿ ಲಿಂಗವೆನಿಸಿಕೊಂಡಿದೆ. ಇಂಥ ಪರಮಾತ್ಮನು ನಮ್ಮ ಹೃದಯ(ಮಿದುಳು)ದಲ್ಲಿ ಮೂರು ಒಂದಾಗಿದ್ದಾನೆ. ಇಂತಹ ಪ್ರಾಣಲಿಂಗವನ್ನು ನಮ್ಮ ಕರಸ್ಥಲಕ್ಕೆ ಇಷ್ಟಲಿಂಗ (ಕಾಂತಿ-"ಕಂಥೆ") ರೂಪವಾಗಿ ಹನ್ನೆರಡನೆಯ ಶತಮಾನದಲ್ಲಿ ಶ್ರೀಗುರು ಬಸವಣ್ಣನವರು ತಂದುಕೊಟ್ಟರು.
ಮೇಲೆ ಹೇಳಿದಂತೆ ಯೋಗಾಂಗ, ಭೋಗಾಂಗ, ತ್ಯಾಗಾಂಗಗಳಲಿ ಭಾವಲಿಂಗ, ಪ್ರಾಣಲಿಂಗ, ಇಷ್ಟಲಿಂಗ ಇವುಗಳೇ ಜಂಗಮ, ಲಿಂಗ, ಗುರು ರೂಪದಲ್ಲಿಯೂ ಇರುತ್ತವೆ.
ಗುರು ಲಿಂಗ ಜಂಗಮವೇಕವಾದುದೆ ಗುರುವಲ್ಲದೆ,
ಪಿತ-ಮಾತೆ, ಸತಿ-ಸುತ, ಅತ್ತೆ-ಮಾವ ಇದಲ್ಲದೆ
ಯೋಗಿ-ಜೋಗಿ, ಶ್ರವಣ-ಸನ್ಯಾಸಿ, ಕಾಳಾಮುಖಿ-ಪಾಶುಪತಿ ಎಂಬ
ಷಡುದರ್ಶನದ ಶೈವಕರ್ಮಿಗಳ
`ಗುರುವು ಗುರುವು' ಎಂಬುದಕ್ಕೆ ನಾಚದವರನೇನೆಂಬೆನಯ್ಯಾ ?
ಆ ಮಹಾಘನ ಗುರುವಿಂಗೆ, ಇಂತಿವರನೆಲ್ಲರ ಸರಿಗಂಡಡೆ
ಒಂದೆ ಎಂದು ನುಡಿದಡೆ, ಅಘೋರ ನರಕ ತಪ್ಪದಯ್ಯಾ
ಕೂಡಲಚೆನ್ನಸಂಗಮದೇವಾ. /೧೧೭೦ [#]
ಈ ವಚನದಲ್ಲಿ ಚೆನ್ನಬಸವಣ್ಣನವರು ಗುರು, ಲಿಂಗ, ಜಂಗಮ ಇವು ಮೂರು ಕೂಡಿದ್ದೇ ಗುರು ಎಂದು ಹೇಳಿದ್ದಾರೆ. ಅರಿವೇ ಗುರು ಎಂದಾಗ ಅದೇ ಅರಿವು, ಆ ಅರಿವಿನ ಕುರುಹೇ ಕರಸ್ಥಲದ ಇಷ್ಟಲಿಂಗ (ಕಾಂತಿ) ಆದ್ದರಿಂದ ಆ ಲಿಂಗವೆ ಗುರುವಾಗಿದೆ. ಅದರಲ್ಲಿಯೂ ಕೂಡಾ ಗುರು, ಲಿಂಗ, ಜಂಗಮರು ಇದ್ದಾರೆ. ಅಂದರೆ ನಮ್ಮ ಕರಸ್ಥಲದ ಲಿಂಗವು ಚೈತನ್ಯಮಯವಾಗಿರಬೇಕು. ಮತ್ತು ಪ್ರಾಣದ ಸ್ವರೂಪವಾಗಿರಬೇಕು. ಇಂತಹ ಚೈತನ್ಯವು ಕರಸ್ಥಲದ ಲಿಂಗದಲ್ಲಿರಬೇಕಾದರೆ ಲಿಂಗವು ಹೇಗಿರಬೇಕು?
ಲಿಂಗದಲ್ಲಿ ವಿಶಿಷ್ಟ ಧಾತುಗಳನ್ನೇ ಕೂಡಿರಬೇಕೆಂದು ಮುಂದೆ ಹೇಳಲಾಗಿದೆ. ಶ್ರೀ ಅಲ್ಲಮಪ್ರಭುಗಳ ಒಂದು ವಚನದಲ್ಲಿ
ಅರಸುವ ಬಳ್ಳಿ ಕಾಲ ಸುತ್ತಿತ್ತೆಂಬಂತೆ,
ಬಯಸುವ ಬಯಕೆ ಕೈಸಾರಿದಂತೆ,
ಬಡವ ನಿಧಾನವನೆಡಹಿ ಕಂಡಂತೆ,
ನಾನರಸುತ್ತಲರಸುತ್ತ ಬಂದು
ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ.
ಎನ್ನ ಅರಿವಿನ ಹರುಹ ಕಂಡೆ ನೋಡಾ.
ಎನ್ನ ಒಳಹೊರಗೆ ಎಡೆದೆರಹಿಲ್ಲದೆ ಥಳಥಳಿಸಿ ಬೆಳಗಿ ಹೊಳೆವುತಿಪ್ಪ
ಅಖಂಡಜ್ಯೋತಿಯ ಕಂಡೆ ನೋಡಾ !
ಕರುಹಳಿದ ಕರಸ್ಥಲದ ನಿಬ್ಬೆರಗಿನ ನೋಟದ
ಎನ್ನ ಪರಮಗುರುವ ಕಂಡು ಬದುಕಿದೆನು ಕಾಣಾ ಗುಹೇಶ್ವರಾ -೨/೮೨೧ [#]
ಈ ವಚನದಲ್ಲಿ ಅಲ್ಲಮಪ್ರಭುಗಳು ಕರಸ್ಥಲದಲ್ಲಿರುವ ಲಿಂಗವೇ ಪರಮಗುರು ಎಂದು ಸೂಚಿಸಿದ್ದಾರೆ. ಕಾರಣ ಶರಣರು ಇಂಥ ಲಿಂಗ (ಕಾಂತಿಲಿಂಗ) ತಯಾರಿಸಲು ಅರಗು, ರಾಳ, ಇಂಗಳೀಕ, ಶಿಲಾರಸ, ರುಮಾಮಸ್ತಕಿ, ಅಂಜನಗಳು (ಆಕ್ಸೈಡ್ಸ್) ತುಪ್ಪದ ಕಾಡಿಗೆ, ಗೇರು ಎಣ್ಣೆ ಇವುಗಳಿಂದ ಕಾಂತಿಯನ್ನು ತಯಾರಿಸಿ ಒಳಗೆ ಕಾಂತಶಿಲೆ ಅಂದರೆ ಸೂರ್ಯಕಾಂತ ಶಿಲೆ, ಚಂದ್ರಕಾಂತ ಶಿಲೆ. ಈ ಕಾಂತಶಿಲೆಗಳಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡು ಮೇಲೆ ಕಾಂತಿಯನ್ನು ಕೂಡ್ರಿಸಬೇಕು. ಹೀಗೆ ಒಳಗಿನದು ಕಾಂತ, ಮೇಲಿನದು ಕಾಂತಿಯಾಗಿರುತ್ತದೆ.
"ಮೇಲಿನ ಶಿಲೆಗಳಲ್ಲಿ ಚಂದ್ರಕಾಂತ (ಸಿಲಿಕಾನ್) ಶಿಲೆಯೇ ಅತ್ಯುತ್ತಮವಾಗಿರುತ್ತದೆ."
ಚಂದ್ರಕಾಂತಶಿಲೆಯನೊಂದು ಹಿಳಿದಲ್ಲಿ, ಬಿಂದು ಬಂದುದುಂಟೆ ?
ಸುಗಂಧದ ನನೆಯ ತಂದು ಬಂಧಿಸಿದಲ್ಲಿ, ಆ ಸುವಾಸನೆ ಬಂದುದುಂಟೆ ?
ಆ ಕಿರಣ ಪರುಷಶಿಲೆ ಸತಿಯಾಗಿ ಬೆರಸಿದಲ್ಲಿ, ಬಿಂದು ರೂಪಾಯಿತ್ತು.
ರಿತುಕಾಲಕ್ಕೆ ಕುಸುಮ ಬಲಿಯಲಾಗಿ, ಸುವಾಸನೆಯೆಸಗಿತ್ತು.
ಇಂತೀ ಉಭಯದಿಂದ ಅರಿವಲ್ಲಿ, ಸ್ಥಲಸ್ಥಲವ ನೆಮ್ಮಿ ನಿಃಸ್ಥಲವನರಿತಲ್ಲಿ,
ದೃಷ್ಟದ ಇಷ್ಟ ಅಲ್ಲಿಯೇ ಲೇಪ, ನಿಃಕಳಂಕ ಮಲ್ಲಿಕಾರ್ಜುನಾ. /೧೭೫೪ [#]
ಚಂದ್ರಕಾಂತದ ಶಿಲೆಯಲ್ಲಿ ಬಿಂದು ಅಡಗಿಪ್ಪಂತೆ,
ಗೋವುಗಳಲ್ಲಿ ಗೋರಂಜನ ರಂಜಿಸುವಂತೆ,
ಶಿಲೆಕಾಷ್ಠಂಗಳಲ್ಲಿ ಅನಲ ಅಡಗಿಪ್ಪಂತೆ,
ಸತ್ಯರ ಹೃದಯದಲ್ಲಿ
ವಾಕ್ತಿಕದ ಉದಕದಂತೆ ಭಾವವಿಲ್ಲದೆ ಅಡಗಿದೆಯಲ್ಲಾ
ಅಮರೇಶ್ವರಲಿಂಗವೆ. /೧೧೭೬ [#]
ಚಂದ್ರಕಾಂತದ ಶಿಲೆಯಲ್ಲಿ ಬಿಂದುವಿದ್ದಡೆ
ಹಿಂಡಿ ಹಿಳಿದಡೆ ಬಂದುದುಂಟೆ ಆ ಬಿಂದು ?
ವರುಣ ಶಿಲೆಯಲ್ಲಿ ಉರುಹಿ ನೋಡಲಿಕ್ಕೆ
ಉರಿದುದುಂಟೆ ಅನಲ ?
ಅವು ತಮ್ಮ ಒಲವರದ ಸಾಮ್ಯಕ್ಕಲ್ಲದೆ ಫಲಿಸುವುದಿಲ್ಲ.
ಇಂತೀ ತೆರದಂತೆ ಕ್ರೀ ಜ್ಞಾನ ಎಲ್ಲವ ಬಲ್ಲೆನೆಂದು
ಅಡ್ಡವಾಯ್ದು ಅಲ್ಲಲ್ಲಿ ನುಡಿದಡೆ
ನಿಜವಸ್ತು ಸಲ್ಲೀಲೆಯಲ್ಲಿಪ್ಪನೆ ?
ಶ್ರದ್ಧೆ ಸನ್ಮಾರ್ಗಿಗಳಲ್ಲಿಯಲ್ಲದೆ ಗೆಲ್ಲಗೂಳಿಗಳಲ್ಲಿಯಿಲ್ಲ.
ಸಂಗನಬಸವಣ್ಣ ಸಾಕ್ಷಿಯಾಗಿ
ಬ್ರಹ್ಮೇಶ್ವರಲಿಂಗವು ಅವರಲ್ಲಿ ಇಲ್ಲವಾಗಿ /೨೭೧ [#]
ನಾವು ಲಿಂಗದಲ್ಲಿ ಚಂದ್ರಕಾಂತ ಶಿಲೆಯನ್ನೇ ಉಪಯೋಗಿಸುತ್ತೇವೆ. ಈ ಚಂದ್ರಕಾಂತ ಶಿಲೆಯನ್ನು ನಿಸ್ವತ್ವಗೊಳಿಸಿದಾಗ ಅಂದರೆ ಸಾಧನೆಯನ್ನು ಮಾಡದೇ ಇದ್ದಾಗ ಅಂದರೆ ಹೊರಗಿನ ಚೈತನ್ಯವನ್ನು ಅಥವಾ ನಮ್ಮ ಚೈತನ್ಯವನ್ನು ಕೊಡದೇ ಇದ್ದಾಗ ಅದು ಕೆಲಸ ಹೀನವಾಗುತ್ತದೆ. ಉದಾ: ಮಲ್ಲಿಗೆ ಹೂವಿನ ಮೊಗ್ಗನ್ನು ತಂದು ಅದನ್ನು ಯಾವುದೋ ಒಂದು ವಸ್ತುವಿನ ಅಥವಾ ಅರಿವೆಯಲ್ಲಿಯೋ ಮುಚ್ಚಿಟ್ಟಾಗ ಅದರಲ್ಲಿರುವ ಸುವಾಸನೆ ಹೊರಸೂಸುವುದಿಲ್ಲ. ಯಾವಾಗ ಋತುಕಾಲದಲ್ಲಿ ಮೊಗ್ಗು ಅರಳಿ ಹೂವಾದಾಗ ಹೇಗೆ ಅದರ ಸುಗಂಧವು ಹೊರಸೂಸುವುದೋ ಹಾಗೇ ನಮ್ಮ ಕರಸ್ಥಲದ ಲಿಂಗದಲ್ಲಿ ಸಾಮರಸ್ಯವನ್ನು ಹೊಂದಿದಾಗ ಒಳಗಿರುವ ಚಂದ್ರಕಾಂತ ಶಿಲೆಯ ಪರಿಣಾಮವು ನಮಗಾಗುತ್ತದೆ."
[#] ಈ ತರಹದ ಸಂಖ್ಯೆಯ ವಿವರ: -1/1 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-1 (೧೫ ಸಮಗ್ರ ವಚನ ಸಂಪುಟಗಳು, ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)
ಗ್ರಂಥ ಋಣ:
[೧] ಲಿಂಗವಂತನ ಲಿಂಗಪ್ರಭೆ, ಲೇಖಕರು: ಶ್ರೀ ಬಸವರಾಜ ಗುರುಸಿದ್ದಪ್ಪ ಮೆಣಸಿನಕಾಯಿ, ಪಾರು ಪ್ರಕಾಶನ, ಗದಗ- ೨೦೦೮.
[೨] ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು, ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಇಷ್ಟಲಿಂಗೋಪಾಸನೆ - ಒಂದು ವೈಜ್ಞಾನಿಕ ವಿಶ್ಲೇಷಣೆ. | ಲಿಂಗಾಯತ- ಏಕ ದೇವೋಪಾಸನೆ |