Previous ವಿವರವಾದ ಇಷ್ಟಲಿಂಗ ಪೂಜಾ ವಿಧಾನ ದೇವರ ಅಸ್ತಿತ್ವ Next

ದೇವರ ಕಲ್ಪನೆ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು

ದೇವರ ಕಲ್ಪನೆ

ಆರಾಧನೆಯು ಆದಿಮಾನವನಿಂದ ಹಿಡಿದು ಇಂದಿನ ವೈಜ್ಞಾನಿಕ ಮಾನವನ ಜೀವನದೊಡನೆ ಹಾಸುಹೊಕ್ಕಾಗಿ ಅವನ ಬದುಕನ್ನು ಬಳಸಿಕೊಂಡು ನೆರಳಿನಂತೆ ಅವ್ಯಾಹತವಾಗಿ ಸಾಗಿಬಂದಿದೆ. ಆರಾಧನೆಯ ವಿಧಿ-ವಿಧಾನದಲ್ಲಿ ಕಾಲಾನುಕ್ರಮದಲ್ಲಿ ವೈವಿಧ್ಯತೆಯನ್ನು ಕಾಣಬಹುದು. ಅದರಂತೆ ಉಪಾಸ್ಯ ವಸ್ತುಗಳಲ್ಲಿಯೂ ಮಾನವನ ವಿಕಾಸ ಕಾಲದಲ್ಲಿ ಅಂತರವನ್ನು ಗಮನಿಸಬಹುದು. ಆದರೆ ಆರಾಧನೆಯು ಮಾತ್ರ ಮಾನವನಷ್ಟೆ ಪುರಾತನವಾದದು. ಉಪಾಸನೆಯು ಧರ್ಮದ ಜೀವಾಳವಷ್ಟೆ! ಈ ಧಾರ್ಮಿಕ ಭಾವನೆಯು ಅಥವಾ ದೇವರ ಕಲ್ಪನೆಯು ಮಾನವನ ಬುದ್ಧಿ ವಿಕಾಸದೊಡನೆ ಅಧಿಭೌತಿಕ, ಅಧಿದೈವಿಕ, ಆಧ್ಯಾತ್ಮಿಕ ಎಂಬ ರೂಪು ತೊಟ್ಟು ಬೆಳೆದು ಬಂದಂತಿದೆ.

ಆದಿಮಾನವನು ನಿಸರ್ಗದ ಅದ್ಭುತ ಅಚ್ಚರಿ, ಭಯಾನಕ ವಸ್ತುಗಳಾದ ಸೂರ್ಯ, ಚಂದ್ರ, ಸಿಡಿಲು, ಅಗ್ನಿ, ಗುಡುಗು, ಮಿಂಚು, ಗಾಳಿ, ಮಳೆ ಇತ್ಯಾದಿಗಳನ್ನು ಕಂಡು ಅಚ್ಚರಿಗೊಂಡು ಭಯಭೀತನಾಗಿ ಅವುಗಳಲ್ಲಿ ಯಾವುದೋ ದೈವೀಶಕ್ತಿ ಇರಬಹು ದೆಂದು ಊಹಿಸಿ ಅವುಗಳಿಗೆ ದೇವತ್ವದ ಸ್ವರೂಪವನ್ನು ಕೊಟ್ಟು ಆರಾಧಿಸಲು ಪ್ರಾರಂಭ ಮಾಡಿದನು, ಪ್ರಾಯಶಃ ಈ ಅನುಭವ ದಿಂದಲೇ ಆದಿಮಾನವನಿಗೆ ಸೃಷ್ಟಿಯ ಪ್ರತಿಯೊಂದು ವಸ್ತುವಿನಲ್ಲಿ ಜೀವವಿದೆಯೆಂಬ (animism) ಕಲ್ಪನೆಯು ಬಂದಿರಲು ಸಾಕು. ತನ್ನ ನಿತ್ಯ ಬಾಳುವೆಯಲ್ಲಿ ಸಹಾಯ ಸೌಕರ್ಯಗಳನ್ನು ಕೊಡುವಂಥ ಚರಾಚರ ವಸ್ತುಗಳನ್ನು ಪೂಜಿಸುತ್ತಾ ಬಂದಿದ್ದಾನೆ. ಹಣ್ಣಿನ ಮರ, ಕಲ್ಲು, ನದಿ, ಬುಗ್ಗೆ ಇತ್ಯಾದಿ ನಿರ್ಜಿವ ವಸ್ತುಗಳನ್ನೂ ಎತ್ತು, ಆಕಳು, ಕುದುರೆ ಇತ್ಯಾದಿ ಸಜೀವ ಪ್ರಾಣಿ ಗಳನ್ನೂ ಪೂಜೆ ಮಾಡುವುದು ಅವುಗಳ ಉಪಕಾರ ಸ್ಮರಣೆಗಾಗಿರಬಹುದು. ಇನ್ನೊಂದು ರೀತಿಯಲ್ಲಿ ಮಾನವನಿಗೆ ಅಪಾಯವನುಂಟು ಮಾಡಬಹುದಾದ ಭಯ ಹುಟ್ಟಿಸಬಹುದಾದ ಕ್ರೂರ ಪ್ರಾಣಿ, ಜಂತುಗಳನ್ನು ಪೂಜೆಮಾಡುತ್ತಾ ಬಂದಿದ್ದಾನೆ. ಪ್ರಾಯಶಃ ಇಂಥ ಪ್ರಾಣಿಗಳು ತನಗೆ ಅನಿಷ್ಟ ಮಾಡದಿರಲೆಂಬ ದೈನ್ಯಭಾವನೆಯೂ ಇರಬಹುದು. ಉದಾ : ನಾಗಪೂಜೆಯು (Serpent Worship) ಜಗತ್ತಿನ ಎಲ್ಲಾ ಕಡೆಯಲ್ಲಿಯ ಕಂಡುಬಂದರೂ, ಭಾರತ ಮತ್ತು ಅಮೆರಿಕಾದಲ್ಲಿ ಅಧಿಕ ಪ್ರಮಾಣದಲ್ಲಿ ಕಾಣಬಹುದಾಗಿದೆ; ನಿಗ್ರೋ ಜನರು ಹೆಬ್ಬಾವು (Python)ಗಳನ್ನು ಪೂಜಿಸುವುದು ತಿಳಿದು ಬರುತ್ತದೆ. ಈಜೆಪ್ಪಿನವರು ಭಯಾನಕ ಪ್ರಾಣಿಯಾದ ಮೊಸಳೆಯನ್ನೂ, ಮಲಯಾದವರು ಕ್ರೂರಪ್ರಾಣಿಯಾದ ಹುಲಿಯನ್ನೂ ಪೂಜಿಸುತ್ತಿದ್ದರೆಂದು ಐತಿಹ್ಯವಿದೆ. ಇದನ್ನು ಅಜ್ಞಾನದ, ಮೂಢ ನಂಬಿಗೆಯ ಕೆಳ ಮಟ್ಟದ ದೇವರ ಕಲ್ಪನೆಯೆಂದು ಹೇಳಬಹುದು.

ಕಾಲಾನುಕ್ರಮದಲ್ಲಿ ಮಾನವನ ಬುದ್ಧಿ ವಿಕಾಸವಾದಂತೆ ಅಧಿ ಭೌತಿಕ ಕಲ್ಪನೆಯನ್ನು ಮೀರಿ ಅಧಿದೈವಿಕ ಕಲ್ಪನೆಯ ಜಾಡುವಿಡಿದು, ನಿಸರ್ಗದ ಒಂದೊಂದು ಸುಪ್ತ ಶಕ್ತಿಗಳಿಗೆ ಒಂದೊಂದು ದೇವತೆಗಳನ್ನು ಕಲ್ಪಿಸಿಕೊಂಡು ಇಂದ್ರ, ವರುಣ, ವಾಯು, ಸೋಮ, ಬೃಹಸ್ಪತಿ, ಅಗ್ನಿ, ಸೂರ್ಯ, ಬುಧ ಇತ್ಯಾದಿ ದೇವತೆಗಳನ್ನು ಪೂಜೆ ಮಾಡಲು ಮಾನವನು ಪ್ರಾರಂಭಿಸಿದನು. ಈ ಕಲ್ಪನೆಯಲ್ಲಿ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ದೇವತೆಗಳನ್ನು ಪೂಜಿಸುವದು ಕಂಡುಬರುತ್ತದೆ. ಸಾಲದ್ದಕ್ಕೆ ಶೈವರು ಶಿವನ ಅವತಾರಗಳನ್ನೂ, ವೈಷ್ಣವರು ವಿಷ್ಣುವಿನ ದಶಾವತಾರಗಳನ್ನೂ, ಜೈನರು ತೀರ್ಥಂಕರರನ್ನು, ಬೌದ್ಧರು ಬುದ್ಧನನ್ನೂ, ಕ್ರಿಶ್ಚನ್ನರು ಏಸುವನ್ನೂ, ತಮ್ಮ ತಮ್ಮ ಮತದ ಆರಾಧ್ಯ ದೇವತೆಗಳೆಂದು ಪೂಜಿಸುವದನ್ನು ನಾವು ಅಂದಿನಿಂದ ಇಂದಿನವರೆಗೂ ಕಾಣಬಹುದಾಗಿದೆ.

ಮಾನವನ ಬುದ್ಧಿ ಇನ್ನಷ್ಟು ವಿಕಾಸಗೊಂಡಾಗ ಹೊರಗೆ ಮೇಲೆ ದೇವನನ್ನು ಕಾಣದೆ ಮಾನವನು ತನ್ನಲ್ಲಿಯೇ ದೇವನನ್ನು ಕಾಣಲು ಪ್ರಯತ್ನಿಸಿದ, ಪಿಂಡ ಬ್ರಹ್ಮಾಂಡದಲ್ಲಿ ಓತಪ್ರೋತವಾಗಿ ತುಂಬಿ ತುಳುಕುವ ವಿಶ್ವ ಚೈತನ್ಯವು ತನ್ನಲ್ಲಿದೆಯೆಂದು ನಿಶ್ಚಯಿಸಿ ಅದರ ನಿಲುವನ್ನರಿತು ನಲಿಯುವುದೇ ಆಧ್ಯಾತ್ಮವು. ಉಪನಿಷತ್ತಿನ ಕಾಲದಲ್ಲಿ ಈ ಸುಂದರ ಆಧ್ಯಾತ್ಮಿಕ ಕಲ್ಪನೆಯು ಮೈದೋರಿದಂತೆ ಕಾಣುತ್ತದೆ. ಈ ಆಧ್ಯಾತ್ಮ ಕಲ್ಪನೆಯು ಪರಿಪುಷ್ಟವಾಗಿ ಪರಿಪಾಕಗೊಂಡು ಉನ್ನತ ಮಧುರ ಫಲಗಳನ್ನು ನೀಡಿದುದು ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ ಕಾಲದಲ್ಲಿ ಎಂಬುದನ್ನು ನಿಸ್ಸಂಶಯವಾಗಿ ಹೇಳ ಬಹುದು, ಅದಕ್ಕೆ ಈ ಹೊತ್ತಿಗೆಯಲ್ಲಿ ಬಳಸಿರುವ ಅಮೃತವಚನಗಳೇ ಸಾಕ್ಷಿ; ಇಂಥ ದೇವರ ಕಲ್ಪನೆಗೆ ಮಾನವನಷ್ಟೇ ಪುರಾತನವಾದ, ತನ್ನದೇ ಆದ ಇತಿಹಾಸವಿರುವಾಗ ದೇವರನ್ನು ಅಲ್ಲಗಳೆಯುವದು ಸುಲಭ ಸಾಧ್ಯವೂ ಅಲ್ಲ, ಸಾಧುವೂ ಅಲ್ಲ, ವಿವೇಕವೂ ಅಲ್ಲ. ಆದ್ದರಿಂದ ದೇವನ ಅಸ್ತಿತ್ವದ ವಿಷಯವಾಗಿ ಮೊದಲು ನಾವು ಆಲೋಚಿಸಿ, ನಂತರ ಅವನ ನಿಜಸ್ವರೂಪದ ನಿಬ್ಬೆರಗಿನಲ್ಲಿ ನಿಲುಕಡೆ ಹೊಂದುವಾ !

ಪ್ರಣವಾರೂಢನು ಪ್ರಣವ ಸ್ವರೂಪನು
ಪ್ರಣವ ಪ್ರಕೃತಿ ಸೌಂಜ್ಞನು
ಪ್ರಣವ ಷಡಂಗ ಸಮರಸ
ನಮ್ಮ ಕೂಡಲ ಸಂಗಮದೇವರು
- ಧರ್ಮಪಿತ ಬಸವಣ್ಣನವರು

ಗ್ರಂಥ ಋಣ:
೧) ದೇವರು, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು -೫೬೦ ೦೧೦.

ಪರಿವಿಡಿ (index)
Previous ವಿವರವಾದ ಇಷ್ಟಲಿಂಗ ಪೂಜಾ ವಿಧಾನ ದೇವರ ಅಸ್ತಿತ್ವ Next