Previous ಇಷ್ಟಲಿಂಗವು ಯೋಗ ಸಾಧನೆಗೆ ಸಹಾಯಕ ಇಷ್ಟಲಿಂಗದೀಕ್ಷೆ ಮತ್ತು ಧಾರ್ಮಿಕ ಸಮಾನತೆ Next

ಇಷ್ಟಲಿಂಗ ದೀಕ್ಷಾ ಸಂಸ್ಕಾರ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಇಷ್ಟಲಿಂಗ ದೀಕ್ಷಾ ಸಂಸ್ಕಾರ

ಪ್ರತಿಯಾಬ್ಬ ಮಾನವ ಜೀವಿಯೂ ಸುಖದ ಅನ್ವೇಷಣೆಯಲ್ಲಿದ್ದಾನೆ. ಸುಖದ ಮೂಲವು ಯಾವುದು ? ಎಂದು ನಿರಂತರವಾಗಿ ಜೀವಿಯು ಅರಸುತ್ತಾ ಹೋಗುವನು. ವಿವಿಧ ಸ್ತರಗಳಲ್ಲಿ ಸಿಕ್ಕಬಹುದಾದ ಸುಖ, ಸಂತೋಷ ಮತ್ತು ಆನಂದಗಳಲ್ಲಿ ಆನಂದವೇ ಪರಮಸುಖವೆಂದು ಮನುಷ್ಯನು ಅರಿಯುವನು. ನಿಜವಾದ ಸುಖವು ಪಾರಮಾರ್ಥಿಕ ಮೌಲ್ಯಗಳಲ್ಲಿದೆ ಎಂದು ಮನಗಂಡ ನಂತರ ಮಾನವನು ಅದರ ಸಾಧನೆಯಲ್ಲಿ ಆಸಕ್ತಿ ತಾಳುವನು. ಈ ಸಾಧನೆಯ ಮೊದಲನೆಯ ಮೆಟ್ಟಿಲೇ ಧರ್ಮ ಸಂಸ್ಕಾರ.

ಧರ್ಮವನ್ನು ಒಂದು ಬೃಹತ್ ಭವನಕ್ಕೆ ಹೋಲಿಸಿದರೆ, ಧರ್ಮ ಸಂಸ್ಕಾರವು ಆ ಭವನದ ಪ್ರವೇಶದ್ವಾರವಿದ್ದಂತೆ ಪ್ರತಿಯಾಂದು ಧರ್ಮವೂ ತನ್ನದೇ ಆದ ಧರ್ಮ ಸಂಸ್ಕಾರದ ಮೂಲಕ ವ್ಯಕ್ತಿಯನ್ನು ಒಳಗೆ ಇಂಬಿಟ್ಟು ಕೊಳ್ಳುತ್ತದೆ. ಲಿಂಗಾಯತ ಧರ್ಮದ ಪ್ರಮುಖ ಸಂಸ್ಕಾರವೇ ಇಷ್ಟಲಿಂಗ ದೀಕ್ಷೆ; ಪ್ರವೇಶ ಪತ್ರವೇ ಇಷ್ಟಲಿಂಗ. ಆದ್ದರಿಂದಲೇ ಬಸವ ಧರ್ಮದಲ್ಲಿ ಕಡ್ಡಾಯವಾಗಿ ಪ್ರತಿಯಾಬ್ಬರೂ ೧೪ - ೧೫ ವರ್ಷಕ್ಕೆ ದೀಕ್ಷೆಯನ್ನು ಪಡೆದುಕೊಂಡು ಗುರುಪುತ್ರರಾಗಬೇಕೆಂಬ ನಿಯಮವಿದೆ. ಲಿಂಗಧಾರಣಿ ಬೇರೆ, ಲಿಂಗದೀಕ್ಷೆ ಬೇರೆ. ಹುಟ್ಟಿದಾಗ ಇಷ್ಟಲಿಂಗವನ್ನು ಕಟ್ಟುವ ವಿಧಿಯೇ ಲಿಂಗಧಾರಣಿ; ನಂತರ ೧೪ - ೧೫ ವರ್ಷಗಳಾದಾಗ ಮಗುವು ಬಾಲ್ಯಾವಸ್ಥೆಯನ್ನು ತೊರೆದು ತಾರುಣ್ಯಕ್ಕೆ ಕಾಲಿಡುವಾಗ, ಸದ್ಗುರುವಿನಿಂದ ಲಿಂಗದೀಕ್ಷೆ ಮಾಡಿಸಬೇಕು. ಲಿಂಗಧಾರಣಿ ನಿಶ್ಚಯ ಕಾರ್ಯದಂತಿದ್ದರೆ, ಲಿಂಗದೀಕ್ಷೆಯು ಲಗ್ನ ಕಾರ್ಯವಿದ್ದಂತೆ. ಆದ್ದರಿಂದ ಪ್ರತಿಯಾಬ್ಬರೂ ದೀಕ್ಷೆಯೆಂಬ ಆಧ್ಯಾತ್ಮಿಕ ಲಗ್ನವನ್ನು ಮಾಡಿಕೊಂಡು ಲಿಂಗಪತಿಯಾಡನೆ ಶರಣ ಸತಿಯಾಗಿ ಲಿಂಗ ಭೋಗೋಪಭೋಗವೆಂಬ ಸಂಸಾರವನ್ನು ಮಾಡಿ ದೇವನನ್ನು ಸೇರಬೇಕು.

ಧರ್ಮ ಮತ್ತು ಸಂಸ್ಕಾರ

ಮನುಷ್ಯನ ಹುಟ್ಟಿನಿಂದ ಸಾಯುವವರೆಗೆ ಕೊಡುವ ಹಲವಾರು ಸಂಸ್ಕಾರಗಳಲ್ಲಿ ದೀಕ್ಷಾ ಸಂಸ್ಕಾರವು ಅತಿ ಪ್ರಾಮುಖ್ಯವಾದ ಪ್ರಸಂಗ, ಕೇವಲ ಮಾನವನಿಗಲ್ಲದೆ ಇತರ ವಸ್ತುಗಳಿಗೂ ಸಂಸ್ಕಾರವನ್ನು ಕೊಟ್ಟೇ ನಾವು ಹೇಗೆ ಬಳಸುತ್ತೇವೆ ಎಂಬುದನ್ನು ಈಗ ನೋಡೋಣ.

ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುವದು.
ಗೋವಿನ ಸಗಣಿಗೆ ಸಂಸ್ಕಾರ ಕೊಟ್ಟರೆ ಭಸಿತವಾಗುವದು,
ಕಬ್ಬಿನ ಸಿಪ್ಪೆಗೆ ಸಂಸ್ಕಾರ ಕೊಟ್ಟರೆ ಕಾಗದವಾಗುವದು.
ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುವದು.
ಗೋಧಿಗೆ ಸಂಸ್ಕಾರ ಕೊಟ್ಟರೆ ಪಾಯಸವಾಗುವದು,
ಭತ್ತಕ್ಕೆ ಸಂಸ್ಕಾರ ಕೊಟ್ಟರೆ ಪಾದೋದಕವಾಗುವದು,
ತಿನ್ನುವ ಪದಾರ್ಥಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುವದು,
ಶಬ್ದಕ್ಕೆ ಸಂಸ್ಕಾರ ಕೊಟ್ಟರೆ ಮಂತ್ರವಾಗುವದು.
ಕಲ್ಲಿಗೆ ಸಂಸ್ಕಾರ ಕೊಟ್ಟರೆ ವಿಗ್ರಹವಾಗುವದು,
ಶಿಲೆಗೆ ಸಂಸ್ಕಾರ ಕೊಟ್ಟರೆ ಲಿಂಗವಾಗುವದು,

ಅದರಂತೆ, ಭವಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಭಕ್ತನಾಗುವನು. ಜೀವನಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಶಿವರೂಪನಾಗುವನು. ನರನಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಹರರೂಪನಾಗುವನು.

ಲಿಂಗದೀಕ್ಷಾ ಸಂಸ್ಕಾರದ ಮಹತಿಯನ್ನು ಕುರಿತು ಹೇಳುವ ಅಕ್ಕಮಹಾದೇವಿಯ ಒಂದು ವಚನವನ್ನು ನೋಡುವ.

"ನರಜನ್ಮವ ತೊಡೆದು, ಹರಜನ್ಮವ ಮಾಡಿದ ಗುರುವೆ !
ಭವಬಂಧನವ ಬಿಡಿಸಿ, ಪರಮ ಸುಖವ ತೋರಿದ ಗುರುವೆ !...
* ಭವಿಯೆಂಬುದ ತೊಡೆದು ಭಕ್ತಿಯೆಂದೆನಿಸಿದ ಗುರುವೆ !
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ ಶರಣು !" *
(ಮ.ಆ.ವ. ೫೬)

ನರಜನ್ಮದಿಂದ ಹರಜನ್ನ ಮಾಡಿ, ಭವಬಂಧನದ ಈ ಕ್ಷಣಿಕ ಸುಖ ಬಿಡಿಸಿ: ಪಾರಲೌಕಿಕ ಆನಂದವ ನೀಡಿ, ಭವಿಯ ಜನ್ಮದಿಂದ ಭಕ್ತಿಯ ಜನ್ಮವ ಕೊಟ್ಟು, ಪರಾತ್ಪರ ವಸ್ತು ಪರಶಿವನನ್ನು ಚುಳುಕಾಗಿ ತಂದು ಕೈಯಲ್ಲಿ ಕೊಟ್ಟ ಸದ್ಗುರುವಿಗೆ ಭಕ್ತಿಯಾಗಿ ಅಕ್ಕ ಕೃತಜ್ಞತೆಯಿಂದ ನಮಿಸುತ್ತ, ಲಿಂಗದೀಕ್ಷೆಯ ಪ್ರತಿಫಲ, ಪರಿಣಾಮ, ಮಹತ್ವವೇನೆಂದು ಹೇಳುತ್ತಾಳೆ.

ಸಂಸಾರ ಸಾಗರದೊಳಗೆ ಇದೆ ನೋಡಾ ನಾನು,
ಸಂಸಾರ ನಿಸ್ಸಾರವೆಂದು ತೋರಿದನೆನಗೆ ಗುರು,
ಅಂಗವಿಕಾರವ ಸಂಗವ ನಿಲಿಸಿ,
ಲಿಂಗವನಂಗದ ಮೇಲೆ ಸ್ಟಾಪ್ಯವ ಮಾಡಿದನೆನ್ನ ಗುರು,
ಹಿಂದಣ ಜನ್ಮವ ತೊಡೆದು ಮುಂದಣ ಪಥವ ತೋರಿದನೆನ್ನ ತಂದೆ,
ಚನ್ನಮಲ್ಲಿಕಾರ್ಜುನನ ನಿಜವನರುಹಿದನೆನ್ನ ಗುರು. - (ಮ.ಆ.ವ, ೪೦)

ಹುಟ್ಟುವದು-ಸಾಯುವದು ಈ ಭವಚಕ್ರವೇ ಸಂಸಾರ. ಸಂಸಾರ ಸಾಗರದಲ್ಲಿ ಪಾಪ-ಪುಣ್ಯಗಳೆಂಬ ಹೆದ್ದರೆಗಳಿಂದ ಬಳಲಿ ಬೆಂಡಾಗಿ, ಬಸವಳಿದು ಮುಳುಗುತ್ತ ಏಳುತ್ತಾ ಕಂಗಾಲಾಗಿ ಕಣ್ಣೀರಿಡುವಾಗ, ಅಂಬಿಗನಂತೆ ಗುರುವು ಬಂದು ಅನುಗ್ರಹದ ಕೈ ನೀಡಿ ಇಷ್ಟಲಿಂಗವೆಂಬ ದೋಣಿಯಲ್ಲಿ ಕುಳ್ಳಿರಿಸಿಕೊಂಡು ಮುಕ್ತಿಯ ದಡಕ್ಕೆ ಮುಟ್ಟಿಸುತ್ತಾನೆ. ಹೀಗೆ ದಿವ್ಯ ಜೀವನದ ಗುರಿಯನ್ನು ತೋರಿಸಿದಾತನನ್ನು ಅಕ್ಕ ಕೃತಜ್ಞತೆಯಿಂದ ಕೊಂಡಾಡುತ್ತ, ಲಿಂಗ ದೀಕ್ಷೆಯು ಹಿಂದಣ ಜನ್ಮದ ಕೋಟಲೆಯ ಹರಿಸಿ ಮುಂದಣ ಪಥವನ್ನು ತೋರಿತೆನ್ನುತ್ತಾಳೆ.

ತ್ರಿವಿಧ ದೀಕ್ಷೆ

ಶ್ರೀತೋಂಟದ ಸಿದ್ಧಲಿಂಗೇಶ್ವರರು ಲಿಂಗದೀಕ್ಷಾ ಸಂಸ್ಕಾರದಲ್ಲಿ ನಡೆಯುವ ತ್ರಿವಿಧ ಲಿಂಗ ಸಂಬಂಧವನ್ನು ಕುರಿತು ಹೀಗೆ ಹೇಳುವರು :

ಬ್ರಹ್ಮರಂಧ್ರದಲ್ಲಿ ಇಪ್ಪನಾದ ಚೈತನ್ಯವಪ್ಪ
ಪರಮ ಚಿತ್ಕಳೆಯನೇ ಭಾವ ಮನ ಕರದಲ್ಲಿ
ಶ್ರೀಗುರು ತಂದು ಸಾಹಿತ್ಯವ ಮಾಡಿದನಾಗಿ,
ಭಾವದಲ್ಲಿ ಸತ್ತ್ವರೂಪವಪ್ಪ --ಭಾವಲಿಂಗವೆನಿಸಿ,
ಪ್ರಾಣದಲ್ಲಿ ಚಿತ್ಮರೂಪವಪ್ಪ -ಪ್ರಾಣಲಿಂಗವೆನಿಸಿ,
ಕರಸ್ಥಲದಲ್ಲಿ ಆನಂದರೂಪವಪ್ಪ-ಇಷ್ಟಲಿಂಗವೆನಿಸಿ,
ಒಂದೇ ವಸ್ತು ತನು ಮನ ಭಾವಂಗಳಲ್ಲಿ
ಇಷ್ಟ ಪ್ರಾಣ ಭಾವವಾದ ಭೇದವನರಿದು : ಇಷ್ಟಲಿಂಗವ
ದೃಷ್ಟಿಯಿಂದ ಗ್ರಹಿಸಿ, ಪ್ರಾಣಲಿಂಗವ ಮನಜ್ಞಾನದಿಂದ
ಗ್ರಹಿಸಿ, ತೃಪ್ತಿಲಿಂಗವ ಭಾವಜ್ಞಾನದಿಂದ ಗ್ರಹಿಸಿ,
ಈ ಲಿಂಗತ್ರಯವಿಡಿದು ಆಚರಿಸಿ ಲಿಂಗದೊಡನೆ ಕೂಡಿ
ಆ ಲಿಂಗವೇ ತಾನೇ ತಾನಾಗಿ ವಿರಾಜಿಸುತ್ತಿಪ್ಪುದೀಗ
ಶಿವಯೋಗ ನೋಡಾ ಮಹಾಲಿಂಗ ಗುರು ಶಿವ ಸಿದ್ದೇಶ್ವರ ಪ್ರಭುವೆ ! -ತೋ.ಸಿ.ವ. ೩೪೬

ಸದ್ಗುರುವು ವೇಧಾದೀಕ್ಷೆಯಿಂದ ತನ್ನ ಹಸ್ತವನ್ನು ಶಿಷ್ಯನ ಮಸ್ತಕದ ಮೇಲೆ ಸಂಯಾಗವ ಮಾಡಿ, ಶಿಷ್ಯನ ಕಾರಣ ತನುವಿನ ಪೂರ್ವಾಶ್ರಯವನ್ನು ಕಳೆದು ಭಾವಲಿಂಗ ಸಂಬಂಧ ಮಾಡುವನು. ಮಂತ್ರ ದೀಕ್ಷೆಯಿಂದ ಶ್ರೀ ಗುರುವು ತನ್ನ ಶಿಷ್ಯನ ಬಲಗಿವಿಯಲ್ಲಿ ಪ್ರಣವ ಪಂಚಾಕ್ಷರಿ ಮಂತ್ರವನ್ನು ಉಪದೇಶಿಸಿ, ಅವನ ಸೂಕ್ಷ್ಮ ತನುವಿನ ಪೂರ್ವಾಶ್ರಯವನ್ನು ಕಳೆದು ಪ್ರಾಣ ಲಿಂಗ ಸಂಬಂಧ ಮಾಡುವನು. ಮತ್ತು ಕ್ರಿಯಾ ದೀಕ್ಷೆಯಿಂದ ಶ್ರೀ ಗುರುವು ತನ್ನ ಶಿಷ್ಯನ ಕರಸ್ಥಲದಲ್ಲಿ ಆ ಮಂತ್ರ ಸ್ವರೂಪವನ್ನೇ ಇಷ್ಟಲಿಂಗ ಸ್ವರೂಪ ಮಾಡಿ, ಅವನ ಸ್ಕೂಲ ತನುವಿನ ಪೂರ್ವಾಶ್ರಯವ ಕಳೆದು ಇಷ್ಟಲಿಂಗ ಸಂಬಂಧ ಮಾಡುವನು. ಹೀಗೆ ಶಿಷ್ಯನು ತನುತ್ರಯದಲ್ಲಿರುವ ಮಲತ್ರಯಗಳನ್ನು ಪರಿಹರಿಸಿಕೊಂಡು ಲಿಂಗತ್ರಯವಿಡಿದು ದೇವನೊಡನೆ ಒಡಗೂಡುವುದೇ ಶಿವಯೋಗವು. ಆದ್ದರಿಂದ ಪ್ರತಿಯಾಬ್ಬರೂ ಲಿಂಗದೀಕ್ಷೆ
ಹೊಂದಬೇಕು. ದೀಕ್ಷೆಯೆಂದರೆ,

ದೀಯತೇ ಲಿಂಗ ಸಂಬಂಧಃ ಕ್ಷೀಯತೇ ಚ ಮಲತ್ರಯಂ
ದೀಯತೇ ಕ್ಷೀಯತೇ ಯಸ್ಯಾ ಸಾ ದೀಕ್ಷೇತಿ ನಿಗದ್ಯತೆ ||
"ಪಾವನಾತ್ಮಕ ಸುಪುತ್ರನ ಮಸ್ತಕದೊಳು ಗುರು
ದೇವ ಕರವಾಂತು ಸಾಸಿರದಳದ ಚಿತ್ಕಳೆಯ
ಭಾವದಿಂ ಮನ ಮನದಿಂ ನೇತ್ರ ನೇತ್ರಂಗಳಿಂ ತೆಗೆದಿಷ್ಟ ರೂಪಗೊಳಿಸಿ
ತೀವಿತಚ್ಛಿಷ್ಯನಂಗದ ಮೇಲೆ ಧರಿಸಿ ಸಂ|
ಜೀವ ಷಣ್ಮಂತ್ರ ಲಿಂಗವಿದೆಂದು ತಿಳುಹೆ ಚಿದ್
ಭಾವ ಕಳೆಯಾಳಗಿಷ್ಟ ಲಿಂಗವೇ ತಾನಾದ ಲಿಂಗ ಭಕ್ತನೇ ಶ್ರೇಷ್ಠನು ||"

ಮೈಲಾರ ಬಸವಲಿಂಗ ಶರಣರು ಶಿಷ್ಯನು ತನ್ನ ತನುತ್ರಯದಲ್ಲಿ ಲಿಂಗತ್ರಯವನ್ನು ಸದ್ದುರುವಿನಿಂದ ವೇಧಿಸಿಕೊಂಡು ಲಿಂಗಾನಂದದ ನಿಬ್ಬೆರಗಿನಲ್ಲಿರುವ ಸದ್ಭಕ್ತನೇ ಶ್ರೇಷ್ಟನು ಎಂದು ಹೇಳುವಲ್ಲಿ ದೀಕ್ಷೆಯೆಂದರೇನೆಂಬುದನ್ನು ಸ್ಪಷ್ಟ ವಾಗಿ ಈ ಪದ್ಯದಲ್ಲಿ ಹೇಳಿದ್ದಾರೆ.

ತನುತ್ರಯ ಗತನಾದಿ ಮಲತ್ರಯ ಮಸ್ ಗುರುಃ |
ದೀಕ್ಷಾತ್ರಯೇಣ ಸಂದಹ್ಯ ಲಿಂಗತ್ರಯಮುಪಾದಿಶೇತ್ ||
* 'ಕಾರಣಾಗಮ' ಕ್ರಿ. ಪಾ. ಪಂ, ಶ್ಲ. ೧೪

ದೀಕ್ಷಾತ್ರಯಗಳಿಂದ ಶಿಷ್ಯನ ತನುತ್ರಯದಲ್ಲಿರುವ ಮಲತ್ರಯಗಳನ್ನು ಮುಕ್ತಗೊಳಿಸಿ ಲಿಂಗತ್ರಯಗಳನ್ನು ಸಂಬಂಧಿಸಿ, ಲಿಂಗಾಂಗ ಸಮರಸ ಮಾರ್ಗ ದತ್ತ ನಡೆಯುವಂತೆ, ಸದ್ಗುರುವು ಮಾಡುವ ಒಂದು ಧಾರ್ಮಿಕ ಸಂಸ್ಕಾರಕ್ಕೆ ದೀಕ್ಷೆಯೆಂದು ಹೇಳಬಹುದು.

ಲಿಂಗ ದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ.

ಈ ಸಮಯದಲ್ಲಿ ಇತ್ತಿತ್ತಲಾಗಿ ಲಿಂಗದೀಕ್ಷೆ ತೆಗೆದುಕೊಳ್ಳುವ ಪದ್ಧತಿ ನಶಿಸಿ ಹೋಗುತ್ತಲಿದೆ. ಗುರು-ಭಕ್ತರಲ್ಲಿ ದೀಕ್ಷೆಯ ಸರಿಯಾದ ತಿಳುವಳಿಕೆಯ ಕೊರತೆಯೇ ಕಾರಣ. ಗುರುಗಳು ಭಕ್ತರನ್ನು ಅನಾವಶ್ಯಕ ಹೆದರಿಸುತ್ತಿದ್ದಂತೆ ಕಂಡು ಬರುತ್ತದೆ. ಆದ್ದರಿಂದಲೇ ಜನರಲ್ಲಿ ಕೆಲವು ಕಲ್ಪನೆಗಳು ರೂಢಿಯಲ್ಲಿ ಬಂದಿವೆ. 'ಲಿಂಗದೀಕ್ಷೆ ಮಾಡಿಕೊಂಡ ಮೇಲೆ ಮೂರು ಸಲವೋ, ಎರಡು ಸಲಿ, ಕನಿಷ್ಟ ಒಂದು ಸಲವಾದರೂ ಪೂಜೆ ಮಾಡಬೇಕಾಗುತ್ತದೆ. ನಾವು ಊರುಕೇರಿಗೆ ಹೋಗುವವರು: ಪ್ರವಾಸದಲ್ಲಿ ಲಿಂಗಪೂಜೆಗೆ ಅನುಕೂಲವಾಗುವುದಿಲ್ಲ. ಪೂಜೆ ತಪ್ಪಿದರೆ ದೇವನು ನಮ್ಮ ಮೇಲೆ ಮುನಿದು ನಾವು ಪಾಪಕ್ಕೆ ಗುರಿಯಾಗಬಹುದು. ಆದ್ದರಿಂದ ಲಿಂಗದೀಕ್ಷೆ ಮಾಡಿಸಿಕೊಳ್ಳದೇ ಇರುವುದೇ ಕ್ಷೇಮಕರ' ಎಂದು ತಿಳಿದಿರುತ್ತಾರೆ. ಇದು ಬಹಳ ತಪ್ಪು ಕಲ್ಪನೆಯಾಗಿದೆ. ಪೂಜೆ ಮಾಡಿದರೆ ಪುಣ್ಯವೂ ಬರಲಾರದು. ಪೂಜೆ ಬಿಟ್ಟರೆ ಪಾಪವೂ ಬರಲಾರದು. ಪುಣ್ಯ-ಪಾಪಗಳು ನೈತಿಕ ಸಮಸ್ಯೆಗಳು. ಎರಡನೆಯವರಿಗೆ ಕೇಡು ಮಾಡಿದರೆ ಪಾಪ ಬಂದೀತು: ಹಿತ ಮಾಡಿದರೆ ಪುಣ್ಯ ಬಂದೀತು. ಆದ್ದರಿಂದ ಲಿಂಗ ಪೂಜೆಯು ಪುಣ್ಯ ಗಳಿಸಲು ಅಲ್ಲ. ದೇವನನ್ನು ಗಳಿಸಲು ಎಂಬುದನ್ನು ನೆನಪಿನಲ್ಲಿಡಬೇಕು. ಆದ್ದರಿಂದ ಪೂಜೆ ಮಾಡಲು ಒಮ್ಮೊಮ್ಮೆ ಅನಿವಾರ್ಯವಾಗಿ ಸಾಧ್ಯವಾಗದಿದ್ದರೂ ಸಹ ಅಂಗದ ಮೇಲೆ ಲಿಂಗವು ಯಾವಾಗಲೂ ಇರಬೇಕು. ಅದಕ್ಕಾಗಿ ಸದ್ಗುರುವಿನಿಂದ ಲಿಂಗ ದೀಕ್ಷೆಯನ್ನು ಪಡೆದಿರಬೇಕು. ದೇಹದ ಮೇಲೆ ದೇವನಿದ್ದರೆ ದೇವನನ್ನು ಬಿಟ್ಟು ನಾನು ಕ್ಷಣ ಸಹ ಅಗಲಿ ಇಲ್ಲವೆಂಬ ಆಸ್ತಿಕ್ಯ ಭಾವನೆಯಾದರೂ ಇರುವುದಿಲ್ಲವೆ ? ಇದೇನು ಸಾಮಾನ್ಯ ಸಂಗತಿಯೇ ? ಈ ವಿಚಾರವನ್ನು ಎತ್ತಿ ಹಿಡಿಯುವ ಮಗ್ಗೆಯ ಮಾಯಿದೇವರ ಒಂದು ಪದ್ಯವನ್ನು ನೋಡಬಹುದು.

"ನೆನೆವುದರಿಂ ನಿರೀಕ್ಷಿಸುವುದತ್ಯಧಿಕಂ ನೆನಹಿಂ ನಿರೀಕ್ಷೆಯಿಂ |
ದನುದಿವಸಂ ಸಮರ್ಚಿಸುವುದಧಿಕಂ ನೆನಹಿಂ ನಿರೀಕ್ಷೆಯಿಂ |
ದನುದಿವಸಂ ಸಮರ್ಚಿಸುವುದರಿಂ ಶಿವಲಿಂಗಮನಂಗದಲ್ಲಿ ಸು ||
ಮ್ಮನೆ ಧರಿಸಿರ್ಪುದತ್ಯಧಿಕಂ ನಿರುತಂ ಶಿವಾಧವಾ |

ಪರವಸ್ತುವಾದ ಶಿವಲಿಂಗದ ಸ್ಮರಣಿಗಿಂತಲೂ ದರ್ಶನವು ಅಧಿಕವಾದುದು. ಆ ಸ್ಮರಣ-ದರ್ಶನಗಳೆರಡಕ್ಕಿಂತಲೂ ಸದಾ ಪೂಜಿಸುವುದು ಶ್ರೇಷ್ಟವು. ಆ ಸ್ಮರಣ ದರ್ಶನ ಪೂಜಾದಿಗಳಿಗಿಂತಲೂ ಆ ಮಂಗಳ ಮಯವಾದ ಇಷ್ಟಲಿಂಗವನ್ನು ದೇಹದಲ್ಲಿ ಸದಾಕಾಲದಲ್ಲಿ ಧರಿಸುವುದು ಅತ್ಯಂತ ಶ್ರೇಷ್ಟವು. ಇನ್ನೇನು ಬೇಕು ? ಲಿಂಗದೀಕ್ಷೆಯು ಜನಸಾಮಾನ್ಯರು ತಿಳಿದುಕೊಂಡಷ್ಟು ಕಠಿಣವಾದ ಆಚರಣೆಗಳಿಂದ ಕೂಡಿಲ್ಲವೆಂದು ತಿಳಿದರೆ ಸಾಕು.

ದೀಕ್ಷೆ ಇಲ್ಲದೆ ಮೋಕ್ಷವಿಲ್ಲವೆಂದು ಜನಸಾಮಾನ್ಯರಲ್ಲಿ ಒಂದು ನಾಣ್ಣುಡಿ ಬಳಕೆಯಲ್ಲಿದೆ. ಅಕ್ಕಮಹಾದೇವಿಯು ತನ್ನ ದೀಕ್ಷಾಗುರುವಾದ ಗುರುಲಿಂಗ ದೇವರಿಂದ ಲಿಂಗದೀಕ್ಷೆ ಪಡೆದುಕೊಂಡು ತನ್ನ ಅನುಭವವನ್ನು ಹೀಗೆ ಹೇಳುತ್ತಾಳೆ :

“ಶ್ರೀಗುರುಲಿಂಗದೇವರು ತಮ್ಮ ಹಸ್ತವ ತಂದು ಎನ್ನ
ಮಸ್ತಕದ ಮೇಲೆ ಇರಿಸಿದಾಗಳೆ ಎನ್ನ ಭವಂ ನಾಸ್ತಿಯಾಯಿತ್ತು.
ಎನ್ನ ತನ್ನಂತೆ ಮಾಡಿದ.
ತನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿದ
ಎನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಮನಸ್ಥಲದಲ್ಲಿ ಮೂರ್ತಿಗೊಳಿಸಿದ
ಎನ್ನ ಮನಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಭಾವಸ್ಥಲದಲ್ಲಿ ಮೂರ್ತಿಗೊಳಿಸಿದ
ಎನ್ನ ಭಾವಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಜ್ಞಾನಸ್ಥಲದಲ್ಲಿ ಮೂರ್ತಿಗೊಳಿಸಿದ
ಎನ್ನ ಜ್ಞಾನಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಸರ್ವಾಂಗದ ಒಳ ಹೊರಗೆ ತೆರಹಿಲ್ಲದೆ
ಅಳವಡಿಸಿದ ನಮ್ಮ ಶ್ರೀ ಗುರುಲಿಂಗದೇವರು
ಚನ್ನಮಲ್ಲಿಕಾರ್ಜುನ, -ಮ.ಅ.ವ, ೪೭

ಅಕ್ಕಮಹಾದೇವಿಯ ದೀಕ್ಷಾಗುರು ಶ್ರೀ ಗುರುಲಿಂಗದೇವರು (ಈ ಹೆಸರು ಮೇಲಿನ ಅಕ್ಕನ ವಚನದಲ್ಲಿ ಬಂದಿದೆ) ತಮ್ಮ ಕರಸ್ಥಲದಲ್ಲಿ ಇರಿಸಿ, ಪೂಜಿಸಿ, ಚಿತ್ಕಳೆ ತುಂಬಿದ ಇಷ್ಟಲಿಂಗವನ್ನು ಅಕ್ಕನ ಕರಸ್ಥಲಕ್ಕೆ ಕೊಟ್ಟು ಅಲ್ಲಿಂದ ಒಂದೊಂದು ಹಂತಗಳನ್ನು ಏರಿ ದಿವ್ಯಾನುಭವದ ಆರೋಹಣ ಕ್ರಮದಲ್ಲಿ ತಂದು ನಿಲ್ಲಿಸುತ್ತಾರೆ, ಕರಸ್ಥಲ, ಮನಸ್ಥಲ, ಭಾವಸ್ಥಲ, ಜ್ಞಾನಸ್ಟಲ, ಜ್ಞಾನಸ್ಥಲದಿಂದ ಸರ್ವಾಂಗಲಿಂಗ ಸಮರಸಿಯಾಗುವ ಗುಟ್ಟನ್ನು ಲಿಂಗದೀಕ್ಷೆಯ ಮೂಲಕ ಗುರುವಿನಿಂದ ತಿಳಿದು ಅಕ್ಕಮಹಾದೇವಿ ಆಚಾರವನ್ನು ಅರಿವನ್ನು ತನ್ನ ಅಂಗಕ್ಕೆ ಅಳವಡಿಸಿಕೊಂಡು ತನ್ನ ಸ್ವಾನುಭವವನ್ನು ಈ ವಚನದಲ್ಲಿ ಚೆಲ್ಲವರಿದಿದ್ದಾಳೆ.

ಶಕ್ತಿಪಾತ ಮತ್ತು ಅನುಗ್ರಹ ವಿಧಾನ

ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಂಗ ಯೋಗ ಅಥವಾ ಶಿವಯೋಗ ಸಾಧನೆಯಲ್ಲಿ ಶಕ್ತಿಪಾತ ಕ್ರಿಯೆಯು ಬಲು ಮುಖ್ಯ ತತ್ವ. ಗುರುವು ಮಧ್ಯವರ್ತಿಯಾಗಿ ದೇವಕೃಪೆಯನ್ನು ಶಿಷ್ಯನಿಗೆ ದೊರಕಿಸಿಕೊಡುತ್ತಾನೆ. ಗುರುವು ಶಿಷ್ಯನಿಗೆ ಅನುಗ್ರಹಿಸುವ ಸ್ಪರ್ಶ, ನೋಟ, ಸಂಕಲ್ಪ-ಮೂರೂ ಕ್ರಿಯೆಗಳನ್ನು ಲಿಂಗದೀಕ್ಷಾ ಸಂಸ್ಕಾರದಲ್ಲಿ ಅಳವಡಿಸಲಾಗಿದೆ.

ಹಸ್ತವನ್ನು ಶಿಷ್ಯನ ಮಸ್ತಕದ ಮೇಲೆ ಇಟ್ಟು ಸ್ಪರ್ಶ ಮುಖಾಂತರ ಅಂದರೆ ಕುಕ್ಕುಟ ನ್ಯಾಯದಂತೆ ಅನುಗ್ರಹಿಸುವನು. ತನ್ನ ದೃಷ್ಟಿಯನ್ನು ಶಿಷ್ಯನ ಮೇಲೆ ಹರಿಸಿ ದೃಷ್ಟಿಯ ಮುಖಾಂತರ ಜ್ಞಾನ, ಅನುಗ್ರಹ, ತಪಸ್ಸುಗಳನ್ನು ಕೊಡುವನು. ಇದು ಮತ್ರ್ಯ ನ್ಯಾಯ. ಇಷ್ಟಲಿಂಗಕ್ಕೆ ಚಿತ್ಕಳೆ ತುಂಬುವಾಗ, ಮಸ್ತಕದ ಮೇಲೆ ಹಸ್ತವನ್ನಿಟ್ಟು ಮಂತ್ರೋಪದೇಶ ಮಾಡುವಾಗ ಮನಸ್ಸಿನಲ್ಲಿ ಸಂಕಲ್ಪಿಸಿ ಹಾರೈಸುವನು. ಇದುವೇ ಕೂರ್ಮನ್ಯಾಯ. ಈ ಶಕ್ತಿಪಾತ ಕ್ರಿಯೆಯು ಶಿಷ್ಯನ ಸಾಧನೆಯಲ್ಲಿ ವೇಗವರ್ಧಕವಾಗಿ ಕೆಲಸ ಮಾಡುವುದು. ಮತ್ತು ಶಿವಯೋಗದ ಸಾಧನೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದಿದೆ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಇಷ್ಟಲಿಂಗವು ಯೋಗ ಸಾಧನೆಗೆ ಸಹಾಯಕ ಇಷ್ಟಲಿಂಗದೀಕ್ಷೆ ಮತ್ತು ಧಾರ್ಮಿಕ ಸಮಾನತೆ Next