ಗುರು | ಜಂಗಮ |
ಲಿಂಗ (ಇಷ್ಟಲಿಂಗ) |
ಪರಶಿವನೆಂದರೆ ನಾಲ್ಕು ಕೈ, ಕಣ್ಣು, ಕಿವಿ, ಇತ್ಯಾದಿಗಳುಳ್ಳ, ಮಾನವಾಕಾರದ ವ್ಯಕ್ತಿಯಲ್ಲ. ಪರಶಿವನು ಅನಾದಿ ಅನಂತ ಚೈತನ್ಯ. ಅವನಿಗೆ ರೂಪವಿಲ್ಲ, ಆಕಾರವಿಲ್ಲ. ಅವನು ಸಮಸ್ತ ಜಗತ್ತಿನಲ್ಲಿ ಅಂತಸ್ಥನಾಗಿರುವಂತೆ ನಮ್ಮಲ್ಲಿಯೂ ಇದ್ದಾನೆ. ಇಷ್ಟಲಿಂಗ ಅವನ ಕುರುಹು. ಅಂಥ ಕುರುಹನ್ನು ದೀಕ್ಷೆಯ ಮೂಲಕ ಪಡೆಯುವ ಅಧಿಕಾರ ಎಲ್ಲರಿಗೂ ಇದೆ. ಅದನ್ನು ಪಡೆದು ಪೂಜಿಸುವ ಸೌಭಾಗ್ಯವನ್ನು ಎಲ್ಲರೂ ಬಯಸುತ್ತಾರೆ.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ !
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ !
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ !
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ ಕೂಡಲ ಸಂಗಮದೇವಯ್ಯ,
ನಿವೇನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ !
--ಬಸವಣ್ಣನವರು
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ,
ಎನಗಿದು ಸೋಜಿಗ, ಎನಗಿದು ಸೋಜಿಗ!
ಅಹುದೆನಲಮ್ಮೆನು, ಅಲ್ಲೆನಲಮ್ಮೆನು,
ಗುಹೇಶ್ವರಲಿಂಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ! (೨: ೬೦)
ಪರಮಾತ್ಮಾ, ನೀನು ಜಗದಗಲ, ಮುಗಿಲಗಲ, ಇನ್ನೂ ಅಗಲ-ನಿನ್ನಷ್ಟೆ ಅಗಲ ಇರುವ ವ್ಯಾಪ್ತಿಯಳ್ಳವನು, ಪಾತಾದಿಂದತ್ತತ್ತ ಊಧ್ರ್ವಭಾಗದಿಂದಲೂ ಮೇಲೆ ನಿನ್ನವ್ಯಾಪ್ತಿ. ಗಮನವಿಲ್ಲದವನು, ಇಂದ್ರಿಯಗಳಿಗೆ ಅಗೋಚರನು, ಉಪಮಾತೀತನಾದ ನೀನು ನನ್ನ ಕರಸ್ಥಳಕ್ಕೆ ವಿಶ್ವದಾಕಾರದಲ್ಲಿ ಚುಳುಕಾಗಿ ಬಂದಿರುವೆ
ಇಷ್ಟಲಿಂಗವು ಕೇವಲ ಧರ್ಮವನ್ನು ಸೂಚಿಸುವ ಗುರುತಲ್ಲ. ಇಷ್ಟಲಿಂಗವೆಂದರೆ ನಮ್ಮಲ್ಲಿ ಅಂತಸ್ಥನಾಗಿರುವ ಪರಾತ್ಪರ ಶಿವನ ಪ್ರತೀಕ ಅಥವಾ ಕುರುಹು. ನಾವು ರೂಪವಿಲ್ಲದ, ಆಕಾರವಿಲ್ಲದ, ಅನಂತವಾದ ಪರಶಿವನನ್ನು ನೇರವಾಗಿ ಪೂಜಿಸಲಾರೆವು. ಆ ಕಾರಣ, ಸಾಕಾರವಾದ ಇಷ್ಟಲಿಂಗವನ್ನಾದರೂ ಪೂಜಿಸಲಿ ಎಂದೇ ಶ್ರೀ ಗುರುವು ಭಕ್ತನಿಗೆ ಕರುಣೆಯಿಂದ ಕೊಟ್ಟಿರುವುದು. ದೀಕ್ಷೆಯ ಮೂಲಕ ಇಷ್ಟಲಿಂಗವು ಪರಶಿವನ ಕುರುಹೆಂದು ತಿಳಿದು ಸಾಧಕನು ಅದನ್ನು ಪೂಜಿಸಬೇಕು.
ಸಾಕಾರವಿಡಿದು ಅರ್ಚನೆ ಪೂಜನೆಯಂ ಮಾಡುವುದಲ್ಲದೆ
ನಿರಾಕಾರವ ನಂಬಲಾಗದು.
ಅಗ್ನಿಯಲ್ಲಿಹ ಗುಣವು ಪ್ರಕಾಶದಲುಂಟೆ?
ಶ್ರೀಗುರು ಕರಸ್ಥಲದಲ್ಲಿ ಬಿಜಯಂಗೈಸಿ ಕೊಟ್ಟ
ಇಷ್ಟಲಿಂಗವಿದ್ದ ಹಾಂಗೆ ವಜ್ರದೊಳಗೆ ಬಯಲನರಸುವರೆ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ, (೬: ೧೬೧೧)
ಪಂಚತತ್ವದಲ್ಲಿದ್ದು ಪರತತ್ವವನರಿಯಬೇಕು.
ಅದಕ್ಕೆ ದೃಷ್ಟ:
ಪಶುವಿನ ಹೊಟ್ಟೆಯಲ್ಲಿ ಕರುವಿದ್ದಡೆ ಕರೆವುದಕ್ಕೆ ಮನೋಹರವುಂಟೆ?
ಅದು ಭಿನ್ನಭಾವವಾಗಿ ಇದಿರಿಟ್ಟು ಉಂಡಲ್ಲದೆ ಮೊಲೆ ತೊರೆಯವು.
ಆ ತೆರನನರಿದಲ್ಲಿ ಅರಿವುದಕ್ಕೊಂದು ಕುರುಹು ಬೇಕು.
ಬಲ್ಲಿದ ವೀರನೆಂದಡೂ ಅಲಗಿನ ಮೊನೆಯಿಲ್ಲದೆ ಗೆಲಬಹುದೆ?
ಆ ಅರಿವ ಚಿತ್ರ ಕುರುಹಿನ ಘಟದಲ್ಲಿದ್ದು ಅರಿವುತಿದ್ದಿಹಿತಾದ ಕಾರಣ.
ಇದನರಿತು ಆತ್ಮವಾದವೆಂದು ಎನಲಿಲ್ಲ.
ಸದಾಶಿವಮೂರ್ತಿಲಿಂಗವನರಿವುದಕ್ಕೆ ಇದಿರಿಟ್ಟು ಕ(ಳೆ)ದುಳಿಯಬೇಕು. (೬: ೪೯೧)
ಇಷ್ಟಲಿಂಗ ಪ್ರಾಣಲಿಂಗವೆಂದೆಂಬಿರಿ,
ಇಷ್ಟಲಿಂಗವಾವುದು ಪ್ರಾಣಲಿಂಗವಾವುದು ಬಲ್ಲರೆ ನೀವು ಹೇಳಿರೆ?
ಇಷ್ಟಲಿಂಗವೆಂಬುದು ದರ್ಪಣ, ಪ್ರಾಣಲಿಂಗವೆಂಬುದು ಪ್ರತಿಬಿಂಬ.
ದರ್ಪಣ ಮಸುಳಿಸಿದಡೆ, ಪ್ರತಿಬಿಂಬ ಕಾಣಬಹುದೆ? ಬಾರದು.
ಇಷ್ಟಲಿಂಗಪೂಜೆ ಮಸುಳಿಸಿದಡೆ, ಪ್ರಾಣಲಿಂಗವ ಕಾಣಬಹುದು? (ಬಾರದು).
“ಇಷ್ಟಲಿಂಗಮವಿಶ್ವಸ್ಯ ಪ್ರಾಣಲಿಂಗಂ ನ ಪಶ್ಯತಿ !
ದರ್ಪಣಪ್ರತಿಬಿಂಬಸ್ತು ಯಥಾರೂಪಂ ತಥಾ ಭವೇತ್॥”
ಇದು ಕಾರಣ- ಕೂಡಲಚೆನ್ನಸಂಗಮದೇವಾ,
ಇಷ್ಟದಲ್ಲಿ ಪ್ರಾಣತೃಪ್ತಿಯಾದವರ ತೋರಿ ಬದುಕಿಸಯ್ಯಾ. (೩: ೧೦೧೧)
ಪೂಜೆ ಮಾಡುವುದೆಂದರೆ ಕೇವಲ ಔಪಚಾರಿಕ ಅಥವಾ ಯಾಂತ್ರಿಕ ಪೂಜೆಯಲ್ಲ; ಅಥವಾ ಸಾವಿರಾರು ಬಿಲ್ವಪತ್ರೆಯನ್ನು ಲಿಂಗದ ಮೇಲಿಡುವುದಲ್ಲ; ಅಥವಾ ಗಂಟೆಗಟ್ಟಲೆ ಡಾಂಭಿಕತನದ ಪೂಜೆ ಮಾಡುವುದೂ ಅಲ್ಲ; ಅಥವಾ ಪ್ರತಿಫಲಾಪೇಕ್ಷೆಯಿಂದ ಪೂಜಿಸುವುದೂ ಅಲ್ಲ; ಅಥವಾ, ಇದು ಕೇವಲ ಕಲ್ಲು ಎಂಬ ನಿರ್ಲಕ್ಷ್ಯದಿಂದ ಮಾಡುವ ಪೂಜೆಯೂ ಅಲ್ಲ. ಪೂಜೆ ಸ್ವಲ್ಪ ಹೊತ್ತೇ ಆದರೂ ಶ್ರದ್ಧೆಯಿಂದ, ಭಕ್ತಿಯಿಂದ ಕೂಡಿರಬೇಕು; ಆ ಮೂಲಕ ಶಿವಪಥವನ್ನರಿಯಲು ಅದು ಸಹಾಯಕವಾಗುವಂತಿರಬೇಕು.
ನಿಮ್ಮ ನೋಟವನಂತಸುಖ, ನಿಮ್ಮ ಕೂಟ ಪರಮಸುಖ.
ಅಷ್ಟಕೋಟಿ ರೋಮಂಗಳು ಕಂಗಳಾಗಿ ನೋಡುತ್ತಿದ್ದೆನು.
ಕೂಡಲಸಂಗಮದೇವಯ್ಯಾ, ನಿಮ್ಮ ನೋಡಿ ನೋಡಿ
ಮನದಲ್ಲಿ ರತಿಹುಟ್ಟಿ, ನಿಮಿರ್ದವನ್ನ ಕಳೆಗಳು. (೧: ೪೯೧)
ಈ ಪತ್ರೆಗೀ ಫಲ, ಈ ಪುಷ್ಪಕೀ ಫಲ,
ಈ ಪೂಜೆಗೀ ಫಲವೆಂಬ ಕೈಕೂಲಿಕಾರರೆಲ್ಲ ಕರ್ಮಿಗಳಯ್ಯಾ,
ಸ್ವರ್ಗನರಕಗಳನುಂಬ ಕರ್ಮಿಗಳಯ್ಯಾ,
ಒಡಲೊಡವೆ ಪಡೆದರ್ಥವ ಮೃಡದೇವ ಸೊಡ್ಡಳಂಗರ್ಪಿತವೆಂದಾತ
ಬೆಡಗಿನ ಶಿವಪುತ್ರ, ಉಳಿದವರಂತಿರಲಿ. (೯: ೭೩೬)
ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ,
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೆ?
ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ,
ಆ ಧಾವತಿಯಿಂದ ಮುನ್ನಿನ ವಿಧಿಯೆ) ಸಾಲದೆ?
ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ,
ನಿಮ್ಮಿಂದ ಹೊರಗಣ ಜವನೆ ಸಾಲದೆ? (೨: ೬೬)
ಕಲ್ಲ ಬಿತ್ತಿ ನೀರನೆರೆದಲ್ಲಿ
ಪಲ್ಲವಿಸುವುದೆ ದಿಟದ ಬೀಜದ ವೃಕ್ಷದಂತೆ?
ಶ್ರದ್ದೆ ಸನ್ಮಾರ್ಗ ಭಕ್ತಿ ಇಲ್ಲದಲ್ಲಿ
ಗುರುಭಕ್ತಿ, ಶಿವಲಿಂಗಪೂಜೆ ಚರಸೇವೆ
ತ್ರಿವಿಧ ಇತ್ತವೆ ಉಳಿಯಿತ್ತು .
ಮತ್ತೆ ನಿಜವಸ್ತುವಿನ ಸುದ್ದಿನಿಮಗೆತ್ತಣದೊ?
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ವಿಶ್ವಾಸಬೇಕು. (೫: ೧೧೫೩)
ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದಡೆ
ತಪ್ಪುವವು ಅಪಮೃತ್ಯು ಕಾಲ ಕರ್ಮಂಗಳಯ್ಯಾ
ದೇವ ಪೂಜೆಯ ಮಾಟ ದುರಿತ ಬಂಧನದೋಟ
ಶಂಬು ನಿಮ್ಮಯ ನೋಟ ಹೆರೆ ಹಿಂಗದ ಕಣ್ ಬೇಟ
ಸದಾ ಸನ್ನಿಹಿತನಾಗಿ ಶರಣೆಂಬುವುದು ನಂಬುವುದು
ಜಂಗಮಾರ್ಚನೆಯ ಮಾಟ ಕೂಡಲ ಸಂಗನ ಕೂಟ.
--ಬಸವಣ್ಣನವರು
ಸುಪ್ರಭಾತದಲ್ಲಿ ಭಕ್ತಿ-ಪ್ರೀತಿ-ನಿಷ್ಠೆಗಳನ್ನು ಮೈಗೂಡಿಸಿಕೊಂಡು ಇಷ್ಟಲಿಂಗವನ್ನು ಅರ್ಚಸಿದರೆಅಪಮೃತ್ಯು-ಕಾರ್ಪಣ್ಯಗಳು ತಪ್ಪುತ್ತವೆ. ದೇವಪೂಜೆಯಿಂದ ದುರಿತಗಳು ದೂರಾಗುತ್ತವೆ. ನೆಟ್ಟ ದೃಷ್ಟಿಯಿಂದ ಇಷ್ಟಲಿಂದವ ನೋಡುವುದು, ಪರಮಾತ್ಮನಲ್ಲಿ ಅನನ್ಯ ಶ್ರದ್ಧೆ ಇರಿಸುವುದು, ಜಂಗಮ ಸೇವೆ ಮಾಡುವುದು ಇವೇ ದೇವನನೊಲಿಸುವ ಸಾಧನಗಳು.
ಜಗವನೊಳಕೊಂಡ ಲಿಂಗವು
ಸೊಗಯಿಸಿರ್ದೆನ್ನ ಕರಸ್ಥಲಕ್ಕೆ ಬಂದಿರಲು
ಕಂಡು ಹಗರಣವಾಯಿತ್ತೆನಗೆ ಗುರುಲಿಂಗ
ಜಂಗಮ ಸ್ವರೂಪವಾಗಿ ಮೂರ್ತಿಗೊಂಡಿತ್ತು ನೋಡಾ !
ಅಹಾ ಎನ್ನ ಪುಣ್ಯವೇ ! ಆಹಾ ಎನ್ನ ಭ್ಯಾಗ್ಯವೇ
ಆಹಾ ಅಖಂಡೇಶ್ವರಾ ನಿಮ್ಮ ಘನವ ಕಂಡು ಎನ್ನ ಮನಕ್ಕೆ ಮಂಗಳವಾಯಿತ್ತು ನೋಡಾ.
--ಶ್ರೀ ಷಣ್ಮುಖ ಶಿವಯೋಗಿಗಳು.
ಜಗತ್ತನ್ನೆ ಗರ್ಭಧರಿಸಿಕೊಂಡ ವಿಶ್ವದಾಕಾರದ ಇಷ್ಟಲಿಂಗವು ಪೂಜೆಗೆ ನನ್ನ ಕೈ ಸೇರಿರುವುದನ್ನು ಕಂಡು ಬಹಳ ಸಂಭ್ರಮವಾಗಿದೆ. ಗುರು-ಲಿಂಗ-ಜಂಗಮದ ಒಲುಮೆ ನೀಡುವ ಸಾಧನವಿದು. ನನ್ನ ಪುಣ್ಯ, ನನ್ನ ಭಾಗ್ಯ ಎಂತಹುದು ! ಪರಮಾತ್ಮಾ ನಿನ್ನ ಸಾಕಾರ ಸ್ವರೂಪವನ್ನು ಕಂಡು ನನಗೆ ಮಂಗಳಮಯ ಆನಂದವಾಗಿದೆ.
[1] ಈ ತರಹದ ಸಂಖ್ಯೆಯ ವಿವರ: ಸವಸ-1/241 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-241 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
ಗುರು | ಜಂಗಮ |