ಪ್ರಸಾದ ಸ್ಥಲ (ಪ್ರಸಾದಿ) | ಐಕ್ಯ ಸ್ಥಲ |
ಶರಣ ಸ್ಥಲ |
ಒಂದರ್ಥದಲ್ಲಿ ಲಿಂಗದೀಕ್ಷೆ ಪಡೆದವರೆಲ್ಲರೂ ಶರಣರೇ. ಮತ್ತೊಂದರ್ಥದಲ್ಲಿ ಲಿಂಗದೀಕ್ಷೆ ಪಡೆದು ಸಾಧಕನಾಗಿ ಶರಣತ್ವವನ್ನು ಪಡೆದವನು ಶರಣ. ಶರಣಸ್ಥಲ ಎಂದಾಗ, ಎರಡನೆ ಅರ್ಥದ ಶರಣನ ಭಾವ, ಎಂದರ್ಥ.
..... ...... ....... .......
..... ...... ....... .......
ಶರಣನೆಂತೆಂಬೆನಯ್ಯಾ? ಪಂಚೇಂದ್ರಿಯ ನಾಶವಾಗದನ್ನಕ್ಕ.[1]
..... ...... ....... .......
ಕೂಡಲಸಂಗಮದೇವಾ. --ಗುರು ಬಸವಣ್ಣನವರ ವಚನ
ಷಟಸ್ಥಲಗಳಲ್ಲಿ ಐದನೆಯದು ಶರಣಸ್ಥಲ. ಶರಣಸ್ಥಲದಲ್ಲಿ ತನ್ನ ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಹೊಂದಬೇಕು. ಅಷ್ಟೇ ಅಲ್ಲ ಪಂಚೇಂದ್ರಿಯ ವಿರಹಿತನಾಗಿ ಲಿಂಗತತ್ವವನ್ನು ಅಗಲದಂತಿರಬೇಕು. ದೇಹವನ್ನು ಧರಿಸಿದ್ದರೂ ನಿರ್ದೇಹಿಯಾಗಿರಬೇಕು. ನುಡಿದರೂ ನಿಶ್ಶಬ್ದವಾಗಿರಬೇಕು, ನಡೆದರೂ ನಿರ್ಗಮನಿಯಾಗಿರಬೇಕು. ಅದು ಶರಣತ್ವದ ಲಕ್ಷಣವೆನಿಸುವುದು.
ಲಿಂಗವೇ ಪತಿಯಾಗಿ, ತಾನು ಸತಿಯೆಂಬ ಭಾವದಲ್ಲಿ ಆಚರಿಸಿ, [2]
ಪಂಚೇಂದ್ರಿಯ ಸುಖಂಗಳ ಬಯಸದಿಹುದೀಗ ಶರಣಸ್ಥಲ ನೋಡಾ,
ಅಪ್ರಮಾಣ ಕೂಡಲಸಂಗಮದೇವ. --ಬಾಲಸಂಗಯ್ಯನ ವಚನ
ಪ್ರಾಣಲಿಂಗಿ ಅಥವಾ ಸರ್ವಾಂಗಲಿಂಗಿ ಎಂದರೆ ಮೈಯೆಲ್ಲ ಲಿಂಗವಾದವನು. ಶರಣ ಎಂದರೆ ಲಿಂಗಕ್ಕೆ (ಪರಶಿವನಿಗೆ ಶರಣಾದವನು. ಪ್ರಾಣಲಿಂಗಿಯು ತನ್ನ ದೇಹದಲ್ಲೆಲ್ಲಾ ಲಿಂಗವನ್ನು ಅನುಭವಿಸುವುದರಿಂದ ಅವನಿಗೆ ತಾನು, ತನ್ನದು, ಎಂಬ ಭಾವ ಇಲ್ಲವಾಗಿ, ಲಿಂಗಕ್ಕೆ ಶರಣಾಗಿ, ಅದಕ್ಕೆ ತನ್ನದೆಲ್ಲವನ್ನೂ ಅರ್ಪಿಸುತ್ತಾನೆ. ಶರಣನ ಮುಖ್ಯವಾದ ಲಕ್ಷಣಗಳು ಇವು:
(೧) ತನ್ನನ್ನು ಲಿಂಗದ ಸತಿ ಎಂದು ತಿಳಿಯುವುದು,
(೨) ಚಿದಾನಂದ ಪಡೆಯುವುದು,
(೩) ಅಜ್ಞಾನ ಮತ್ತು ಮದಗಳ ನಾಶ ಮತ್ತು
(೪) ವಿಧ್ಯುಕ್ತ ಆಚಾರಗಳ ವರ್ಜನೆ.
(೧) ಶಿವಯೋಗ ಸಾಧಕನಿಗೆ ತನ್ನ ದೇಹ, ಮನಸ್ಸುಗಳೆಲ್ಲವನ್ನೂ ಲಿಂಗಕ್ಕರ್ಪಿಸುವುದು ಒಂದು ಅನಿವಾರ್ಯ ಸಂಗತಿ. ಆಗೆಲ್ಲ ಅವನು ತಾನು ಲಿಂಗದ ಸತಿಯೆಂದು ಭಾವಿಸಲು ಇಚ್ಛಿಸುತ್ತಾನೆ. ಪತಿವ್ರತೆಯಾದವಳು ತನ್ನ ಗಂಡನ ಸುಖವೇ ತನ್ನ ಸುಖ ಎಂದು ಭಾವಿಸಿ ತನ್ನ ದೇಹೇಂದ್ರಿಯಮನಸಾದಿಗಳನ್ನು ಗಂಡನಿಗೆ ಅರ್ಪಿಸಿ ಸಂತೋಷಿಸುವಂತೆ ಶರಣನು ತನ್ನ ದೇಹೇಂದ್ರಿಯಾದಿಗಳನ್ನು ಲಿಂಗಪತಿಗೆ ಅರ್ಪಿಸಿ ಸಂತೋಷಪಡುತ್ತಾನೆ (ಈ ಸಂತೋಷಕ್ಕೆ ಆನಂದಭಕ್ತಿ ಎಂದು ಹೆಸರು). ಅಕ್ಕ ಮಹಾದೇವಿಯಂತೂ ತಾನು ಚೆನ್ನಮಲ್ಲಿಕಾರ್ಜುನನ ಸತಿ ಎಂದು ಘೋಷಿಸಿ, ಮಾನುಷ ಪತಿಯನ್ನು ಧಿಕ್ಕರಿಸಿದವಳು.
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ.
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ!
ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೊಲಿದೆ ನಾನು.
ಸೀಮೆಯಿಲ್ಲದ ನಿಸ್ಸಿಮಂಗೊಲಿದೆ ನಾನು.
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ
ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ. (೫: ೩೯೮)
ಹರನೆ ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಸ್ಸಿದ್ದೆ ನೋಡಾ.
ಹಸೆಯ ಮೇಲಣ ಮಾತ ಬೆಸಗೊಳಲಟ್ಟಿದಡೆ,
ಶಶಿಧರನ ಹತ್ತಿರಕೆ ಕಳುಹಿದರೆಮ್ಮವರು.
ಭಸ್ಮವನೆ ಹೂಸಿ, ಕಂಕಣವನೆ ಕಟ್ಟಿದರು
ಚೆನ್ನಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದು. (೫:೪೧೧)
ಆದರೆ ಲಿಂಗವೇ ಪತಿಯೆಂದು ತಿಳಿದವರು ಕೇವಲ ಅಕ್ಕ ಮಹಾದೇವಿ ಯವರಂಥ ಶರಣೆಯರಷ್ಟೇ ಅಲ್ಲ, ಶರಣರೂ ಹಾಗೇ ತಿಳಿದುಕೊಂಡಿದ್ದರು.
ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವಾ!
ಅಂಗವಿದ್ಯೆಯನೊಲ್ಲ,
ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ,
ಕೈಯ ತೊಳೆದಲ್ಲದೆ ಮುಟ್ಟಲೀಯ,
ಕಾಲ ತೊಳೆದಲ್ಲದೆ ಹೊಂದಲೀಯ.
ಇಂತೀ ಸರ್ವಾಂಗ ತಲೆದೊಳೆದ ಕಾರಣ,
ಕೂಡಲ ಸಂಗಮದೇವನನ್ನ ಕೂಡಿಕೊಂಡನವ್ವಾ. (೧: ೯೧೨)
ಎನ್ನ ಮನದ ಕೊನೆಯ ಮೊನೆಯ ಮೇಲೆ
ಅಂಗವಿಲ್ಲದ ರೂಪನ ಕಂಡು ಮರುಳಾದೆನವ್ವಾ ಆತನ ಕಂಡು ಬೆರಗಾದೆನವ್ವಾ
ಎನ್ನಂತರಂಗದ ಆತುಮನೊಳಗೆ
ಅನು(ನಿ?)ಮಿಷ ನಿಜೈಕ್ಯ ಗುಹೇಶ್ವರನ ಕಂಡು! (೨: ೨೦೫)
ಈ ನಲ್ಲನ ಬೇಟದ ಕೂಟದ ಪರಿಯನು
ಏನೆಂದು ಹೇಳುವೆ? ವಿಪರೀತ ಕೆಳದಿ.
ಪುರುಷ ಶಕ್ತಿಯಾಗಿ, ಶಕ್ತಿ ಪುರುಷನಾಗಿ
ನೆರೆದು ಸುಖಿಸುವನು ಕೇಳಾ ಕೆಳದಿ.
ಅತಿ ಕಾಮಿ ವಿಪರೀತನು ಉರಿಲಿಂಗದೇವನು,
ನೆರೆಯಲು ನೆರೆವುದು ಮನದಿಚ್ಚೆ ಕೆಳದಿ. (೬: ೧೨೨೯)
ಉರಿಲಿಂಗದೇವನಂಥವರು ಕೇವಲ ಶರಣರಷ್ಟೇ ಅಲ್ಲ, ಜಗತ್ತಿನ ಎಲ್ಲ ಮಾನವರೂ ಲಿಂಗದ ಸತಿಯರೇ, ಎಂದು ತಿಳಿಯುತ್ತಾರೆ.
(೨) ಶರಣರೇ ಆಗಲಿ ಶರಣೆಯರೇ ಆಗಲಿ ತಮ್ಮನ್ನು ಲಿಂಗದ ಸತಿಯರೆಂದು ಭಾವಿಸಲು ಮುಖ್ಯವಾದ ಎರಡು ಕಾರಣಗಳಿವೆ:
ಅ) ಪ್ರಾಣಲಿಂಗಿಯಾಗಿ ಸಾಧಕನು ಅನುಭಾವದ ಆನಂದವನ್ನು ಅನುಭವಿಸಿದ್ದಾನೆ. ಅವನ ಅಂಗ ಶಿವನಲ್ಲಿ (ಲಿಂಗದಲ್ಲಿ) ಬೆರೆತಾಗ ಆಗುವ ಅನುಭವವನ್ನು ಶಿವಾನುಭವ ಅಥವಾ ಲಿಂಗಾನುಭವ ಎಂದು ಕರೆದರೆ, ಆಗ ಉಂಟಾಗುವ ಆನಂದವನ್ನು ಲಿಂಗಾನಂದ, ಚಿದಾನಂದ, ಶಿವಾನಂದ ಮುಂತಾಗಿ ಕರೆಯುತ್ತಾನೆ. ಆದರೆ ಈ ಆನಂದವನ್ನು ಅನೇಕರು ಗಂಡ-ಹೆಂಡತಿ ಪಡುವ ಲೈಂಗಿಕ ಆನಂದಕ್ಕೆ ಹೋಲಿಸುತ್ತಾರೆ. ಆದರೆ ಇದು ಕೇವಲ ಹೋಲಿಕೆಯಷ್ಟೇ ಎಂಬುದನ್ನು ನಾವು ಮರೆಯಬಾರದು. ಈ ಅನುಭವದ ಆನಂದಕ್ಕೆ ನಮಗೆ ಗೊತ್ತಿರುವ ಯಾವ ಆನಂದವೂ ಸಮನಲ್ಲ. ಅದಕ್ಕೇ ಶರಣರು ಆ ಆನಂದವನ್ನು ಅವರ್ಣನೀಯ (ಅವಾಚ್ಯ) ಎನ್ನುತ್ತಾರೆ.
ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ ನೋಡವ್ವಾ
ಕೇಳುತ್ತ ಕೇಳುತ್ತ ಮೈಮರೆದೊರಗಿದೆ ನೋಡವ್ವಾ.
ಹಾಸಿದ ಹಾಸಿಗೆಯ ಹಂಗಿಲ್ಲದೆ ಹೋಯಿತ್ತು ಕೇಳವ್ವಾ
ಚೆನ್ನಮಲ್ಲಿಕಾರ್ಜುನದೇವರದೇವನ ಕೂಡುವ ಕೂಟವ
ನಾನೇನೆಂದರಿಯದೆ ಮರೆದೆ ಕಾಣವ್ವಾ (೫: ೧೫೬)
ಕಾಯಕ್ಕೆ ಕಾಯವಾಗಿ ಪ್ರಾಣಕ್ಕೆ ಪ್ರಾಣವಾಗಿ
ಮನಕ್ಕೆ ಮನವಾಗಿ ನೆರೆವ ನೋಡಲಗವ್ವಾ
ನಲ್ಲನ ಬೇಟದ ಕೂಟದ ಸುಖವನೇನೆಂದು ಬಣ್ಣಿಪೆ, ಮಹಾಸುಖವ!
ನಲ್ಲನ ನೋಟದ ಕೂಟದನುವನೇನೆಂದುಪಮಿಸುವೆ, ಮಹಾಘನವ!
ತಾನು ತಾನೆಂದು ವಿವರಿಸಬಾರದಂತೆ
ನೆರೆದನು ನೋಡಾ, ಉರಿಲಿಂಗದೇವನು. (೬: ೧೨೪೦)
ಇಂಬಿನ ಚುಂಬನ ಅಮೃತಾಹಾರ, ಆಲಿಂಗನವೆ ಆಭರಣ,
ಸೋಂಕೆ ವಸ್ತ್ರ; ನೋಟವೆ ಕೂಟ,
ಒಡನಾಟವೆ ಅಷ್ಟಭೋಗವೆನಗೆ.
ಉರಿಲಿಂಗದೇವನ ಕೂಟವೆ ಪರಾಪರ ವಾಹ್ಮನಾತೀತ ಪರಮಸುಖ. (೬: ೧೨೨೬)
(ಅ) ಲಿಂಗಾನುಭವದ ಸುಖ ಕೇವಲ ಅವರ್ಣನೀಯವಷ್ಟೇ ಅಲ್ಲ; ಅದೇ ಅತ್ಯಂತ ಹೆಚ್ಚಿನದು. ಅದನ್ನು ಸರಿಗಟ್ಟುವ ಮತ್ತೊಂದು ಸುಖವಿಲ್ಲ. ಆದುದರಿಂದ, ಅದನ್ನು ಅನುಭವಿಸಿದ ಸಾಧಕರಿಗೆ ಮತ್ತೇನೂ ಬೇಕಾಗುವುದಿಲ್ಲ.
ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದ ಬಳಿಕ
ಕಾಯದ ಸುಖವ ನಾನೇನೆಂದರಿಯೆನು.
ಆರು ಸೋಂಕಿದರೆಂದರಿಯೆನು.
ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚತವಾದ ಬಳಿಕ
ಹೊರಗೇನಾಯಿತ್ತೆಂದರಿಯೆನು. (೫: ೧೦೪)
ನಲ್ಲನ ರೂಪೆನ್ನ ನೇತ್ರವ ತುಂಬಿತ್ತು,
ನಲ್ಲನ ನುಡಿಯೆನ್ನ ಶ್ರೋತ್ರವ ತುಂಬಿತ್ತು,
ನಲ್ಲನ ಸುಗಂಧವನ್ನ ಪ್ರಾಣವ ತುಂಬಿತ್ತು,
ನಲ್ಲನ ಚುಂಬನವೆನ್ನ ಜಿಹ್ವೆಯ ತುಂಬಿತ್ತು,
ನಲ್ಲಿನ ಆಲಿಂಗವನ್ನ ಅಂತರಂಗ ಬಹಿರಂಗದಲ್ಲಿ,
ನಲ್ಲನ ಪ್ರೇಮವೆನ್ನ ಮನವ ತುಂಬಿತ್ತು,
ಕೂಡಿ ಸುಖಿಯಾದೆ ಉರಿಲಿಂಗದೇವನ. (೬: ೧೨೫೧)
ಶರಣಲಿಂಗಕ್ಕೆ ನೋಡುವ ಕಣ್ಣು ಒಂದಲ್ಲದೆ ಎರಡಿಲ್ಲ ಕಾಣಿರೊ.
ಶರಣಲಿಂಗಕ್ಕೆ ಕೇಳುವ ಶ್ರೋತ್ರ ಒಂದಲ್ಲದೆ ಎರಡಿಲ್ಲ ಕಾಣಿರೊ.
ಶರಣಲಿಂಗಕ್ಕೆ ವಾಸಿಸುವ ನಾಸಿಕ ಒಂದಲ್ಲದೆ ಎರಡಿಲ್ಲ ಕಾಣಿರೊ.
ಶರಣಲಿಂಗಕ್ಕೆ ರುಚಿಸುವ ಜಿಹ್ವೆ ಒಂದಲ್ಲದೆ ಎರಡಿಲ್ಲ ಕಾಣಿರೊ.
ಶರಣಲಿಂಗಕ್ಕೆ ಸೋಂಕುವ ತ್ವಕ್ಕು ಒಂದಲ್ಲದೆ ಎರಡಿಲ್ಲ ಕಾಣಿರೊ.
ಶರಣಲಿಂಗಕ್ಕೆ ನೆನೆವ ಮನ ಒಂದಲ್ಲದೆ ಎರಡಿಲ್ಲ ಕಾಣಿರೊ.
ನಮ್ಮ ಅಖಂಡೇಶ್ವರನಲ್ಲಿ ಒಡವೆರೆದ ಶರಣಲಿಂಗಕ್ಕೆ
ಅಂಗ ಪ್ರಾಣಂಗಳೊಂದಲ್ಲದೆ ಎರಡಿಲ್ಲ ಕಾಣಿರೊ. (೧೪: ೮೯)
ಇಂಥ ಅತಿ ಶ್ರೇಷ್ಠ ಆನಂದವನ್ನು ಅನುಭವಿಸಿದ ಶರಣಸತಿಯರು ಲಿಂಗಪತಿಯ ಆಗಮನ (ಅನುಭಾವ)ಕ್ಕಾಗಿ ಪರಿತಪಿಸುತ್ತಾರೆ. ಅವನು ಬಾರದಿದ್ದಾಗ ಅವರಿಗಾಗುವ ತಾಪ (ಆಧ್ಯಾತ್ಮಿಕ ವಿರಹ) ವರ್ಣಿಸಲಸದಳ,
ಒಮ್ಮೆ ಕಾಮನ ಕಾಲ ಹಿಡಿವೆ,
ಮತ್ತೊಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ.
ಸುಡಲೇ ಏರಹವ, ನಾನಾರಿಗೆ ಧೃತಿಗೆಡುವೆ?
ಚೆನ್ನಮಲ್ಲಿಕಾರ್ಜುನ ಕಾರಣ
ಎಲ್ಲರಿಗೆ ಹಂಗುಗಿತ್ತಿಯಾದೆನವ್ವಾ. (೫: ೧೨೯)
ಬಂದಹನೆಂದು ಬಟ್ಟೆಯ ನೋಡಿ,
ಬಾರದಿದ್ದಡೆ ಕರಗಿ ಕೊರಗಿದೆನವ್ವಾ
ತಡವಾದಡೆ ಬಡವಾದ ತಾಯೆ.
ಚೆನ್ನಮಲ್ಲಿಕಾರ್ಜುನನ ಒಂದಿರುಳಗಲಿದಡೆ
ತಕ್ಕೆ ಸಡಲಿದ ಜಕ್ಕವಕ್ಕಿಯಂತಾದೆನವ್ವಾ (೫: ೨೯೧)
ಬಾರನೇತಕವ್ವಾ ನಮ್ಮನೆಯಾತ?
ತೋರನೇತಕವ್ವಾ ತನ್ನೆ ದಿವ್ಯರೂಪವ?
ಬೀರನೇತಕವ್ವಾ ಅತಿ ಸ್ನೇಹವ?
ಇನ್ನೆಂತು ಸೈರಿಸುವೆನವ್ವಾ?
ಹೇಗೆ ತಾಳುವೆನವ್ವಾ?
ತನು ತಾಪಗೊಳ್ಳುತ್ತಿದೆ, ಮನ ತಲ್ಲಣವಾಗುತ್ತಿದೆ.
ಅಖಂಡೇಶ್ವರನೆಂಬ ನಲ್ಲನ ತೋರಿಸಿ
ಎನ್ನ ಪ್ರಾಣವನುಳುಹಿಕೊಳ್ಳಿರವ್ವಾ (೧೪: ೮೨೯)
(ಆ) ಈ ಆನಂದದ ಒಂದು ಅವಿಭಾಜ್ಯ ಅಂಗವೆಂದರೆ, ಸಾಧಕನ ಶರಣಾಗತಿ ಭಾವ ಅಥವಾ ತ್ಯಾಗಬುದ್ಧಿ, ಪತಿವ್ರತೆಯು ತನ್ನ ಪತಿಗಾಗಿ ಹೇಗೆ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧಳಾಗಿ, ಸದಾ ಅವನಿಗೆ ಸಂಪೂರ್ಣ ಶರಣಾಗತಿಭಾವವನ್ನು ತೋರಿಸುತ್ತಾಳೋ ಹಾಗೆ, ಶರಣಸ್ಥಲದ ಸಾಧಕನು ಶಿವನಿಗೆ ಪೂರ್ಣ ಶರಣಾಗಿ ತನ್ನೆಲ್ಲವನ್ನೂ ಅವನಿಗೆ ಅರ್ಪಿಸುತ್ತಾನೆ. ಇದು ಎಷ್ಟು ಸಂಪೂರ್ಣವಾಗಿರುತ್ತದೆಯೆಂದರೆ, ಸಾಧಕನಿಗೆ ತನ್ನ ಸುಖ, ತನ್ನ ಆಸಕ್ತಿ ಮುಂತಾದ ಯಾವ ಸ್ವಾರ್ಥ ಭಾವವೂ ಇಲ್ಲದಂತಾಗುತ್ತದೆ.
ಮನವೆ ಲಿಂಗವಾದ ಬಳಿಕ ಇನ್ನಾರ ನೆನೆವುದಯ್ಯಾ?
ಭಾವವೆ ಐಕ್ಯವಾದ ಬಳಿಕ ಬಯಸುವುದಿನ್ನಾರನು?
ಭ್ರಮೆಯಳಿದು ನಿಜವು ಸಾಧ್ಯವಾದ ಬಳಿಕ
ಅರಿವುದಿನ್ನಾರನು ಗುಹೇಶ್ವರಾ? (೨: ೪೨೧)
ಅಂಗದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಸಂಗವ ಮಾಡನಾ ಶರಣನು.
ನಯನದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಅನ್ಯವ ನೋಡನಾ ಶರಣನು.
ಶ್ರೋತ್ರದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಅನ್ಯವ ಕೇಳನಾ ಶರಣನು.
ನಾಸಿಕದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಪರಿಮಳವ ವೇಧಿಸ ಶರಣನು.
ಜಿಹ್ವೆಯ ಕೊನೆಯಲ್ಲಿ ಲಿಂಗ ಮುಂತಲ್ಲದೆ ರುಚಿಯ ನಿಶ್ಚಯಿಸ ಶರಣನು.
ಕೂಡಲಚೆನ್ನಸಂಗಾ ನಿಮ್ಮ ಶರಣ ಸರ್ವಾಂಗಲಿಂಗಿಯಾದ ಕಾರಣ. (೩: ೩೦೫)
೩. ನಮ್ಮ ಎಲ್ಲ ದುಃಖಕ್ಕೂ ನಾನು ಎಂಬ ಭಾವ (ಮದ) ಕಾರಣ. ಈ ಭಾವಕ್ಕೆ ನಾನೇ ಬೇರೆ, ಪರಶಿವನೇ (ಲಿಂಗವೇ) ಬೇರೆ, ನಾನು ಲಿಂಗದ ಅಂಗವಲ್ಲ ಎಂಬ ಅಜ್ಞಾನವೇ ಕಾರಣ. ಆದರೆ, ಶರಣನು ಶ್ರೇಷ್ಠ ಮಟ್ಟದ ತ್ಯಾಗ, ಶರಣಾಗತಿ ಭಾವ ಮತ್ತು ಧ್ಯಾನಗಳ ಮೂಲಕ ಈ ಮರವೆಯನ್ನೂ, ಅದರ ಫಲವಾದ ಮದವನ್ನೂ, ನಾಶ ಮಾಡಿದ್ದಾನೆ.
ಅಹಂಕಾರವನೆ ಮರೆದು, ದೇಹಗುಣಂಗಳನೆ ಜರೆದು,
ಇಹ ಪರವು ತಾನೆಂದರಿದ ಕಾರಣ, ಸೋಹಂ ಭಾವ ಸ್ಥಿರವಾಯಿತ್ತು.
ಸಹಜದುದಯದ ನಿಲವಿಂಗೆ,
ಮಹಾಘನಲಿಂಗದ ಬೆಳಗು ಸ್ವಾಯತವಾದ ಕಾರಣ
ಗುಹೇಶ್ವರಾ ನಿಮ್ಮ ಶರಣನು ಉಪಮಾತೀತನು. (೨: ೪೦೧)
ಲಿಂಗಮುಖವರಿದಂಗೆ ಅಂಗವೆಂಬುದಿಲ್ಲ,
ಜಂಗಮಮುಖವರಿದಂಗೆ ಸಂಸಾರವೆಂಬುದಿಲ್ಲ,
ಪ್ರಸಾದಮುಖವರಿದಂಗೆ ಇಹಪರವೆಂಬುದಿಲ್ಲ
ಈ ತ್ರಿವಿಧವೊಂದೆಂದರಿದಂಗೆ ಮುಂದೇನೂ ಇಲ್ಲ,
ಈ ತ್ರಿವಿಧದ ನೆಲೆಯ ಶ್ರುತಿಸ್ಮೃತಿಗಳರಿಯವು,
ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ. (೩: ೬೮೮)
೪. ಶರಣಸ್ಥಲದ ಸಾಧಕನು ಒಂದು ರೀತಿಯಲ್ಲಿ ಜೀವನ್ಮುಕ್ತ, ಆದುದರಿಂದ ಅವನ ರೀತಿ ಬೇರೆ, ಸಾಧಾರಣ ಭಕ್ತರ ರೀತಿ ಬೇರೆ. ಅವನು ಶಿವಯೋಗ ಸಾಧನೆಯ ಮೂಲಕ ತಾನು ಶಿವನ ಅಂಗ ಎಂಬುದನ್ನು ಸಾಕ್ಷಾತ್ಕರಿಸಿಕೊಂಡಿರುವುದರಿಂದ, ಶಿವಾನುಭವದಲ್ಲಿ ಪಡೆಯುವ ಆನಂದಕ್ಕಿಂತ ಹೆಚ್ಚಿನ ಆನಂದ ಇಲ್ಲ ಎಂಬುದನ್ನು ಅರಿತಿರುವುದರಿಂದ, ಅವನು ಸಾಧಾರಣ ಭಕ್ತರಂತೆ ವರ್ತಿಸಬೇಕಾಗಿಲ್ಲ. ಅವನು ಈ ಹಿಂದೆ ಮಾಡುತ್ತಿದ್ದ ಲಿಂಗಪೂಜೆ, ಅರ್ಪಣೆ, ಮಂತ್ರಪಠನೆ ಮುಂತಾದುವೆಲ್ಲ ಈಗ ಅವನ ಪಾಲಿಗೆ ಅನಾವಶ್ಯಕವಾಗಿವೆ. ಅಥವಾ ಅವನು ಒಂದು ವೇಳೆ ಅವುಗಳನ್ನು ಆಚರಿಸಿದರೂ, ಫಲಾಪೇಕ್ಷೆಯಿಂದ ಹಾಗೆ ಮಾಡುವುದಿಲ್ಲ. ಅವನು ಲಿಂಗವನ್ನು ಪೂಜಿಸುತ್ತಾನೆ, ನೆನೆಯುತ್ತಾನೆ, ಅದಕ್ಕೆ ಅರ್ಪಿಸುತ್ತಾನೆ, ಆದರೆ ಸಾಧಾರಣ ಭಕ್ತರಂತಲ್ಲ.
ಗಗನವೆ ಗುಂಡಿಗೆ ಆಕಾಶವೆ ಅಗ್ನವಣಿ,
ಚಂದ್ರ ಸೂರ್ಯರಿಬ್ಬರು ಪುಷ್ಪ,
ಬ್ರಹ್ಮ ಧೂಪ, ವಿಷ್ಣು ದೀಪ, ರುದ್ರನೋಗರ! - ಸಯಧಾನ ನೋಡಾ!
ಗುಹೇಶ್ವರಲಿಂಗಕ್ಕೆ ಪೂಜೆ ನೋಡಾ! (೨: ೪೧೫)
ಮಜ್ಜನಕ್ಕೆರೆವಡೆ, ನೀನು ಶುದ್ಧ ನಿರ್ಮಲದೇಹಿ.
ಪೂಜೆಯ ಮಾಡುವಡೆ, ನಿನಗೆ ಗಗನಕಮಲಕುಸುಮದ ಅಖಂಡಿತಪೂಜೆ.
ಧೂಪದೀಪಾರತಿಗಳ ಬೆಳಗುವಡೆ, ನೀನು ಸ್ವಯಂ ಜ್ಯೋತಿಪ್ರಕಾಶನು.
ಅರ್ಪಿತವ ಮಾಡುವಡೆ, ನೀನು ನಿತ್ಯತೃಪ್ತನು.
ಅಷ್ಟವಿಧಾರ್ಚನೆಗಳ ಮಾಡುವಡೆ, ನೀನು ಮುಟ್ಟಬಾರದ ಘನವೇದ್ಯನು.
ನಿತ್ಯನೇಮಗಳ ಮಾಡುವಡೆ,
ನಿನಗೆ ಅನಂತನಾಮಂಗಳಾದವು ಗುಹೇಶ್ವರಾ. (೨: ೪೨೪)
[1] ಸಮಗ್ರ ವಚನ ಸಾಹಿತ್ಯ ಸಂಪುಟ - ೧, ವಚನ ಸಂಖ್ಯೆ: ೫೧೦, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ,
ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
[2] ಪುಸ್ತಕ: ಬಾಲಸಂಗಯ್ಯನ ವಚನಗಳು, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರು:
ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಪ್ರಸಾದ ಸ್ಥಲ (ಪ್ರಸಾದಿ) | ಐಕ್ಯ ಸ್ಥಲ |