Previous ಲಿಂಗಯೋಗ-ಸರ್ವಾಂಗ ಪರಿಪೂರ್ಣ ಯೋಗ ಸಂಕ್ಷಿಪ್ತ ಪೂಜಾ ವಿಧಾನ Next

ಲಿಂಗಾಯತ ಸಾಧಕನ ದಿನಚರಿ

✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

ಲಿಂಗಾಯತ ಸಾಧಕನ ದಿನಚರಿ

ಮಲಗುವ ಪದ್ಧತಿ: ಜೀವನದಲ್ಲಿ ಶ್ರೇಷ್ಠ ಮಟ್ಟದ ಗುರಿಯನ್ನಿರಿಸಿಕೊಂಡ ಸಾಧಕನ ಆಚಾರ-ವಿಚಾರ ಆಹಾರ-ವಿಹಾರ ಎಲ್ಲವೂ ಮುಖ್ಯವಾದ ಕಾರಣ ಎಲ್ಲದರಲ್ಲೂ ಸಾತ್ವಿಕ ಚಿಂತನೆಯು ಅಳವಡಬೇಕು. ಸಾಧ್ಯವಾದಷ್ಟೂ ಉಪಾಸನೆ, ಶರಣರ ಸತ್ಸಂಗ, ಸ್ವಾಧ್ಯಾಯಗಳು ಕಾಯಕದ ನಂತರದ ಕಾಲವನ್ನು ಆಕ್ರಮಿಸಿಕೊಳ್ಳಬೇಕು. ದಿನವನ್ನು ಹೀಗೆ ಕಳೆದ ಶರಣನು ಮಲಗುವಾಗ ದೇವಧ್ಯಾನ ಮಾಡುತ್ತಾ “ಓಂ ಶ್ರೀ ಗುರುಬಸವಲಿಂಗಾಯ ನಮಃ” ಎಂಬ ಗುರುಮಂತ್ರವನ್ನಾಗಲೀ, “ಓಂ ಲಿಂಗಾಯ ನಮಃ” ಎಂಬ ದೇವಮಂತ್ರವನ್ನಾಗಲೀ ಮನನಿಸುತ್ತ ಮಲಗಬೇಕು. ಮಲಗುವ ಕೋಣೆಯಲ್ಲಿ ತಪ್ಪದೇ ವಿಶ್ವಗುರು ಬಸವಣ್ಣನವರ, ಜಗನ್ಮಾತಾ ಅಕ್ಕಮಹಾದೇವಿಯ ಮತ್ತು ಇನ್ನಿತರ ಶರಣರ ಭಾವಚಿತ್ರ ಹಾಕಿಕೊಂಡು, ಮಲಗುವಾಗ ಸಾತ್ವಿಕ ಚಿತ್ರಗಳನ್ನೇ ದೃಷ್ಟಿಸುತ್ತ ಮಲಗಬೇಕು. ಮಲಗುವ ಕೋಣೆ ಮಂಗಲಮಯ ಪ್ರಶಾಂತ ವಾತಾವರಣದಿಂದ ತುಂಬಿರಬೇಕು. ನಿರ್ದೋಷ ನಿಃಸ್ವಪ್ನ ನಿದ್ರೆಯು ಧ್ಯಾನದ ಸಸಿ ಮೊಳೆಯಲು ಭೂಮಿಯಾಗಿ ಪರಿಣಮಿಸುತ್ತದೆ. ನಾವು ಹೊಲದಲ್ಲಿ ಬೀಜ ಬಿತ್ತಿ ಮಣ್ಣಿನಿಂದ ಮುಚ್ಚುತ್ತೇವೆ. ಆ ಬೀಜ ನಮಗೆ ಕಾಣದಿದ್ದರೂ ಒಳಗೆ ವಿಕಾಸ ಹೊದಿರುತ್ತದೆ. ಮೊಳಕೆಯೊಡೆದು ಹೊರಗೆ ಬಂದಾಗ ನಮಗೆ ಗೋಚರವಾಗುತ್ತದೆ. ಅದರಂತೆ ಮಲಗುವಾಗ ಯಾರು ಪ್ರಾರ್ಥನೆಯ ಬೀಜ ಬಿತ್ತಿ ಮಲಗುವರೋ ಅವರ ನಿದ್ರೆ ಮಣ್ಣಿನ ಕೆಲಸ ಮಾಡುತ್ತದೆ. ಅವರ ಪ್ರಾರ್ಥನೆಯ ಬೀಜವು ಧ್ಯಾನವಾಗಿ ವಿಕಾಸ ಹೊಂದುತ್ತಾ ಸುಷುಪ್ತಿ ಕಳೆದು ಜಾಗ್ರತಾವಸ್ಥೆಯಲ್ಲಿ ಪ್ರಸನ್ನತೆಯ ಮೊಳಕೆ ಮೂಡಿರುತ್ತದೆ. ಅದಕ್ಕಾಗಿಯೇ ಶರಣರ ನಿದ್ರೆ ಸಮಾಧಿಯೆಂದು ಹೇಳುತ್ತಾರೆ. ಆದ್ದರಿಂದ ಹಾಸುಗೆಯ ಮೇಲೆ ಕೈಜೋಡಿಸಿ ಕುಳಿತುಕೊಂಡು ಕೆಳಗಿನ ಪದ್ಯವನ್ನು ಕಣ್ಣು ಮುಚ್ಚಿ ಮನನಗೈಯಬೇಕು.

ಎಲ್ಲರನು ಒಂದೊಂದು ಬೇಡಿಕೊಂಬೆ

ಎಲ್ಲ ಶರಣರ ನೆನೆದು
ಇಲ್ಲಿ ನಾನತನಾಗಿ
ಎಲ್ಲರನು ಒಂದೊಂದು ಬೇಡಿಕೊಂಬೆ |ಪ|

ಭಕ್ತಿಯಿಲ್ಲದ ಧರ್ಮ
ವ್ಯರ್ಥವಾಗುವುದೆಂದು
ಭಕ್ತಿತ್ರಯವ ಕಲಿಸಿ ಮುಕ್ತನೆನಿಸಿ
ಮುಕ್ತಿಪದವಿಗೆ ಸಂದ
ಕರ್ತೃ ಬಸವೇಶನತಿ
ಭಕ್ತಿ ಭಿಕ್ಷೆಯ ನೀಡಿ ಸಲಹೆನ್ನು |1|

ಶಿವನೊಳಗೆ ಪ್ರಾಣವನು
ತವೆಬೆರಸಿ ಹೊರಗಳಿದು
ಶಿವ ಬೆಳಗಿನೊಳು ಪರಮ ತಪವನೈದಿ
ಶಿವನು ತಾನಾಗಿರ್ದ
ಶಿವಸಿದ್ಧರಾಮಯ್ಯ
ಶಿವಯೋಗ ಭಿಕ್ಷೆಯನು ನೀಡು ಎನಗೆ |2|

ಉರ್ವಿ ಪತಿಯಿಂ ಬಿಟ್ಟು
ನಿರ್ವಾಣಯುತೆಯಾಗಿ
ಸರ್ವ ಕರಣೇಂದ್ರಿಯ ಗುಣಗಳಳಿದು
ಪರ್ವತೇಶನ ಬೆರೆದ
ಸರ್ವಸುಖಿ ಮಹಾದೇವಿ
ನಿರ್ವಾಣಭಿಕ್ಷೆಯನು ನೀಡು ಎನಗೆ |3|

ಇಂಬುದಿದು ಶಿವನೊಳಗೆ
ಸಂಭ್ರಮದ ನುಡಿಗಲಿತು
ಕುಂಭಿನಿಯ ಜನರೊಳಗೆ ನುಡಿಗಳರಿತು
ಗಂಭೀರನಾಗಿ ಸ್ವ
ಯೆಂಭುವಹ ಅಜಗಣ್ಣ
ಗಂಭಿರಭಿಕ್ಷವನು ನೀಡು ಎನಗೆ |4|

ನಮ್ಮ ಶರಣರು ಬಹಳ
ಧರ್ಮಿಗಳು ನಿರ್ಮಳರು
ಒಮ್ಮಯು ಭಿಕ್ಷವನು ಇಲ್ಲೆನ್ನರು
ಸಮ್ಮಾನ ಸರ್ವಗುಣ
ಧರ್ಮ ಭಿಕ್ಷವನುಂಡು
ನೆಮ್ಮುವೆನು ಶಿವಷಡಕ್ಷರಿಲಿಂಗವ |5| -ಮುಪ್ಪಿನ ಷಡಕ್ಷರಿಗಳು

ಹಾಸುಗೆಯ ಮೇಲೆ ಅಡ್ಡಾಗುವ ಮೊದಲು ಧರ್ಮಗುರು ಬಸವಣ್ಣ, ಜಗದಾದಿ ಕರ್ತೃ ಮತ್ತು ಶರಣರನ್ನು ಸ್ಮರಿಸುತ್ತ, ತನ್ನ ಇಷ್ಟಲಿಂಗವನ್ನು ಕಣ್ಣಿಗೊತ್ತಿಕೊಂಡು ನಮಸ್ಕರಿಸಿ ಬಲಭುಜ ಮೇಲಾಗಿ ಮಲಗಬೇಕು. ನಿಧಾನವಾಗಿ ಉಸಿರಾಡಿಸುತ್ತ ಮಂತ್ರಮಯವಾಗಿ ಮನಸ್ಸನ್ನು ದೈವೀಕರಿಸಿ ನಿದ್ರಾವಶರಾಗಬೇಕು.

ಮುಂಜಾವಿನಲ್ಲಿ ಏಳುವುದು

ಬೇಗನೆ ಮಲಗಿ ಬೇಗನೆ ಏಳುವುದು ಆರೋಗ್ಯದ ನಿಯಮವಿದ್ದಂತೆ, ಧಾರ್ಮಿಕ ಆಚರಣೆಯೂ ಆಗಿದೆ. ಸದಾಚಾರ ಸಂಪನ್ನನಾದ ಮುಮುಕ್ಷುವು ಸೂರೋದಯದ ಮೊದಲು ಬ್ರಾಹ್ಮ ಮುಹೂರ್ತದಲ್ಲಿ ಎದ್ದು ಕುಳಿತು,

1. ಧರ್ಮಗುರು ಬಸವಣ್ಣನವರನ್ನು
2. ಸಚ್ಚಿದಾನಂದರೂಪಿ ಲಿಂಗದೇವನನ್ನು
3. ತನ್ನ ದೀಕ್ಷಾಗುರು ಮತ್ತು ಇತರ ಶರಣರನ್ನು

ಮನಮುಟ್ಟಿ ಧ್ಯಾನಿಸುತ್ತ, ಇಷ್ಟಲಿಂಗವನ್ನು ಕಣ್ಣಿಗೊತ್ತಿಕೊಂಡು, ಕೆಲವು ಕ್ಷಣಗಳವರೆಗೆ ಧ್ಯಾನಿಸಿ ಸುಪ್ರಭಾತವನ್ನು ಹಾಡಿಕೊಳ್ಳಬೇಕು.

ಹೊತ್ತಾರೆ ನಾನೆದ್ದು ಯಾರಾರ ನೆನೆಯಲಿ
ಮುಕುತಿ ಪಡೆದವರ ನೆನೆಯುವೆ
ಮುಕುತಿ ಪಡೆದವರ ನೆನೆಯುವೆ | ಗುರುದೇವಾ
ಸಚ್ಚಿದಾನಂದನ ನೆನೆಯುವೆ |

ಕರುಣೆಯ ನಿಧಿಯಾಗಿ ಮಮತೆಯ ಸುಧೆಯಾಗಿ
ಕರ್ಮವ ಹರಿಪ ಗುರುವಾಗಿ... ಧರೆಗಿಳಿದ
ವರಗುರು ಬಸವನಾ ನೆನೆಯುವೆ |

ಮೃಣ್ಮಯದ ಕಾಯವ ಚಿನುಮಯ ಮಾಡುವ
ಚೆನ್ನಾರ ಚೆಲುವ ಘನಲಿಂಗ.... ದೇವನ
ಮನಮುಟ್ಟಿ ನೆನೆದು ತಣಿಯುವ |

ತನುಮನಧನಗಳ ಘನಶಿವಗೆ ಅರ್ಪಿಸಿ
ಚಿನುಮಯಳಾದ ಮಹಾದೇವಿ.... ಯಕ್ಕನ
ನೆನೆದು ಜೀವನವ ಸವಿಗೊಳಿಪೆ |

ಯೋಗದ ತವರಾಗಿ ತ್ಯಾಗದ ಕುರುಹಾಗಿ
ಭೋಗ ಜೀವನವ ತೃಣವೆನಿಸಿ..... ಘನವಾದ
ಯೋಗಿ ಅಲ್ಲಮನ ನೆನೆಯುವೆ |

ಜ್ಞಾನದ ಸಿರಿಯಾಗಿ ಅಜ್ಞಾನದರಿಯಾಗಿ
ಕಾಮಕ್ರೋಧವನಳಿದ ಘನಮಹಿಮ..... ಗುರುವಾದ
ಚನ್ನಬಸವಣ್ಣನ ನೆನೆಯುವೆ

ಶುದ್ಧಾತ್ಮ ತಾನಾಗಿ ಕುದ್ರ ಮಾಯೆಯ ಗೆಲಿದು
ಬದ್ಧ ಜೀವನದ ಭವಗೆಲಿದು...! ಶಿವವಾದ
ಸಿದ್ಧರಾಮೇಶನ ನೆನೆಯುವೆ |

ಮಾಚಿದೇವಯ್ಯಗಳ ಹಡಪದಪ್ಪಣ್ಣಗಳ
ಮೋಚಿ ಕಾಯಕದ ಹರಳಯ್ಯ..... ಮಾರಯ್ಯ
ಬಾಚಯ್ಯನವರ ನೆನೆಯುವೆ |

ತಾಯಿ ನೀಲಮ್ಮಗಳ ಅಕ್ಕ ನಾಗಮ್ಮಗಳ
ಭಾಮೆ ಮುಕ್ತಾಯಕ್ಕ ಸತ್ಯಕ್ಕ....! ಲಿಂಗಮ್ಮ
ನಿತ್ಯ ಶರಣೆಯರಾ ನೆನೆಯುವೆ |

ಮಮಕರದ ಕಮಲಕ್ಕೆ ಲಿಂಗದೇವನನಿತ್ತು
ಚಿನ್ಮಯಗೊಳಿಸಿದ ಶ್ರೀ ಗುರು.... ಲಿಂಗಾನಂದ
ಘನಗುರುವ ನೆನೆದು ಹಾಡುವೆ |

ಘನವರಿತು ಅನುವಾಗಿ ಜೀವನವು ಶಿವವಾಗಿ
ಶರಣಸತಿಯರಾಗಿ ಶರಣಾದ... ಎಲ್ಲರ
ವರ ಸಚ್ಚಿದಾನಂದನ ನೆನೆಯುವೆ | -ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿ

ಮುಖ ಮಾರ್ಜನಾದಿಗಳನ್ನು ಮಾಡದೇ, ಸ್ನಾನ ಪೂಜೆಗಳನ್ನು ಮಾಡದೇ ತಿಂಬುದೆಲ್ಲವೂ ಕಿಲ್ಲಿಷವಾಗುವ ಕಾರಣ ಸುಪ್ರಭಾತದಲ್ಲಿ ಮಿಂದು ಪೂಜಿಸುವ ಪರಿಪಾಠ ಒಳ್ಳೆಯದು. ಹಾಸಿಗೆಯಿಂದ ಎದ್ದ ಬಳಿಕ ಪ್ರಾತರ್ವಿಧಿಗಳನ್ನು ಪೂರೈಸಿ, ಯೋಗಾಸನಾಭ್ಯಾಸ ಮಾಡುವುದು ದೇಹ-ಮನಗಳ ಆರೋಗ್ಯಕ್ಕೆ ಅತ್ಯವಶ್ಯಕ. ಆಸನಾಭ್ಯಾಸದ ಬಳಿಕ ಪ್ರಾಣಾಯಾಮವನ್ನು ಗೈಯುವುದು ಒಳ್ಳೆಯದು.

ಪ್ರಾಣಾಯಾಮ:

ಪ್ರಾಣಾಯಾಮ ಅಭ್ಯಾಸದಿಂದ ಅಂತರ್‌ ಇಂದ್ರಿಯಗಳು ಶುದ್ಧವಾಗಿ ಮೈಯಲ್ಲಿ ಉತ್ಸಾಹ ಮತ್ತು ನರಗಳಲ್ಲಿ ಚೈತನ್ಯ ಬರುವುದು. ಸಾಧಕನು ನೇರವಾಗಿ ಕುಳಿತುಕೊಳ್ಳಬೇಕು. ಎದೆ, ಕತ್ತು ಮತ್ತು ತಲೆ ಈ ಮೂರು ಒಂದೇ ಸರಳ ರೇಖೆಯಲ್ಲಿರಬೇಕು. ಬಾಗಿ ಕುಳಿತು ಧ್ಯಾನ, ಪೂಜೆ ಮಾಡಿದರೆ ಪ್ರಯೋಜನವಾಗದು. ಪ್ರಾಣಾಯಾಮದ ಸುಲಭ ಮಾರ್ಗವೆಂದರೆ ಬಲಗಡೆ ಮೂಗಿನ ಹೊರಳೆ(ಪಿಂಗಳ)ಯನ್ನು ಬಲಗೈ ಹೆಬ್ಬೆಟ್ಟಿನಿಂದ ಮುಚ್ಚಿಕೊಂಡು ಎಡಗಡೆ ಮೂಗಿ ಹೊರಳೆ (ಈಡಾ)ಯ ಮೂಲಕ ನಿಧಾನವಾಗಿ ಹವೆಯನ್ನು ಎಳೆದುಕೊಳ್ಳಬೇಕು. ನಂತರ ಮೂಗಿನ ಎರಡೂ ಹೊರಳೆಗಳನ್ನು ಬೆರಳಿನಲ್ಲಿ ಮುಚ್ಚಿ, ಆ ಶಕ್ತಿ ಪ್ರವಾಹವನ್ನು ಕೆಳಗೆ ಕಳುಹಿಸಿ, ಸುಷುಮ್ನಾ ನಾಡಿಯ ಕೆಳಗಿರುವ ಮೂಲಾಧಾರವನ್ನು ಜಾಗೃತಗೊಳಿಸುತ್ತಿದೆಯೆಂಬ ಭಾವನೆ ತಾಳಬೇಕು. ನಂತರ ಹೆಬ್ಬೆರಳನ್ನು ತೆಗೆದು ಬಲಗಡೆ ಹೊರಳೆಯ ಮೂಲಕ ಉಸಿರನ್ನು ಹೊರಗೆ ಬಿಡಬೇಕು. ನಂತರ ಎಡದ ಮೂಗಿನ ಹೊರಳೆಯನ್ನು ಮುಚ್ಚಿ ಬಲಗಡೆ ಮೂಗಿನ ಹೊರಳೆಯಿಂದ ಉಸಿರನ್ನು ಒಳಗೆ ತೆಗೆದುಕೊಳ್ಳಬೇಕು. ನಂತರ ಎರಡನ್ನೂ ಮುಚ್ಚಬೇಕು. ಮೊದಲಿನಂತೆ ಕುಂಭಕ ಮಾಡಿದ ನಂತರ ಬಲಗಡೆ ಮೂಗನ್ನು ಮುಚ್ಚಿ ಎಡದ ಮೂಗಿನಿಂದ ನಿಧಾನವಾಗಿ ಉಸಿರು ಬಿಡಬೇಕು. ಹೀಗೆ ಪ್ರಾಣಾಯಾಮ ಮಾಡುವಾಗ ಮಂತ್ರ ಪಠಿಸಿದರೆ ಉತ್ತಮ. 5 : 15 : 10 ಈ ಪ್ರಮಾಣದಲ್ಲಿ ಪೂರಕ, ಕುಂಭಕ, ರೇಚಕಗಳನ್ನು ಮಾಡಬೇಕು. ಇದು ಒಂದು ಪ್ರಾಣಾಯಾಮವಾಗುವುದು. ಪ್ರಾಣಾಯಾಮ ಅಭ್ಯಾಸವನ್ನು ಗುರುಮುಖದಿಂದ ಅರಿತು ಎಚ್ಚರಿಕೆಯಿಂದ ಆಚರಿಸಬೇಕು.

ಸ್ನಾನ :

ಪ್ರಾಣಾಯಾಮದ ನಂತರ ಕೆಲವು ನಿಮಿಷಗಳ ಕಾಲ ಸುಧಾರಿಸಿಕೊಂಡು ಸ್ನಾನಕ್ಕೆ ಅಣಿಯಾಗಬೇಕು. ಸ್ವಚ್ಛವಾಗಿ ಸ್ನಾನ ಮಾಡಬೇಕು. ನೀರನ್ನು ಮೈಮೇಲೆ ಹಾಕಿಕೊಳ್ಳುವ ಮುನ್ನ ಬಕೆಟ್ಟಿನಲ್ಲಿರುವ ನೀರಿನಲ್ಲಿ ಪಂಚಕೋನ ಪ್ರಣವವನ್ನು ಬೆರಳಿನಿಂದ ಬರೆದು “ಓಂ ಲಿಂಗಾಯ ನಮಃ” ಎಂದು ಜಪಿಸುತ್ತ ನೀರನ್ನು ಎರೆದುಕೊಳ್ಳಬೇಕು. ನಂತರ ಮಡಿಯಾದ ಅಂದರೆ ಸ್ವಚ್ಛ ಮಾಡಿದ ಬಟ್ಟೆಗಳನ್ನು ಉಟ್ಟುಕೊಂಡು ದೇವಧ್ಯಾನ ಗೈಯುತ್ತಾ ಪೂಜಾ ಮಂದಿರವನ್ನು ಪ್ರವೇಶಿಸಬೇಕು.

ಚತುರ್ವಿಧ ಸ್ವಾಯತದ ಕರ್ತೃ

ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ
ಆಯಿತ್ತು ಬಸವಾ ನಿನ್ನಿಂದ ಲಿಂಗಸ್ವಾಯತವೆನಗೆ
ಆಯಿತ್ತು ಬಸವಾ ನಿನ್ನಿಂದ ಜಂಗಮ ಸ್ವಾಯತವೆನಗೆ
ಆಯಿತ್ತು ಬಸವಾ ನಿನ್ನಿಂದ ಪ್ರಸಾದ ಸ್ವಾಯತವೆನಗೆ
ಇಂತೀ ಚತುರ್ವಿಧ ಸ್ವಾಯತವ ನೀನೇ ಮಾಡಿದೆಯಾಗಿ
ನಮ್ಮ ಗುಹೇಶ್ವರ ಲಿಂಗಕ್ಕೆ ವಿಳಾಸವಾದೆಯಲ್ಲೈ ಸಂಗನಬಸವಣ್ಣ
-ಅಲ್ಲಮಪ್ರಭು

ಗ್ರಂಥ ಋಣ:
೧) ದೇವ ಪೂಜಾ ವಿಧಾನ, ಲೇಖಕರು: ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಲಿಂಗಯೋಗ-ಸರ್ವಾಂಗ ಪರಿಪೂರ್ಣ ಯೋಗ ಸಂಕ್ಷಿಪ್ತ ಪೂಜಾ ವಿಧಾನ Next